ಆವತ್ತು ಕಲ್ಯಾಣಿ ಹಾಡೋದೇ ಆನಂದ! ಈವತ್ತು ಹೀಗೆ ಕೊಕ್ಕೊಕ್ಕೋ ಅಂತ ಹಾಡೋದೇ ಆನಂದ!
ಆತ ಒಬ್ಬ ಸುಪ್ರಸಿದ್ಧ ಸಂಗೀತಗಾರ. ಅರಮನೆಯ ಆಸ್ಥಾನವಿದ್ವಾಂಸ. ಕಲ್ಯಾಣಿರಾಗವನ್ನು ಹಾಡುವುದರಲ್ಲಿ ಅವನನ್ನು ಬಿಟ್ಟರಿಲ್ಲ! ಮಧುರಕಂಠ. ಸೊಗಸಾದ ಸಾಧನೆ. ಮಹಾರಾಜನಿಗೆ ಅವನೆಂದರೆ ಬಹಳ ಮೆಚ್ಚುಗೆ. ವಾಸಿಸಲು ಭವ್ಯ ಭವನ, ಅಪಾರ ಐಶ್ವರ್ಯ ಎಲ್ಲವನ್ನೂ ಬೇಕಾದ ಹಾಗೆ ಕಲ್ಪಿಸಿಕೊಟ್ಟಿದ್ದ.
ಇನ್ನೇನುತಾನೇ ಬೇಕು? ಆನಂದವಾಗಿ ರಾಜನ ಮುಂದೆ ಕೊರಳೆತ್ತಿ ಹಾಡೋದು; ಮನೆಗೆ ಬಂದು ಕೇಸರಿಭಾತು ತಿಂದು ಬಾದಾಮಿಹಾಲು ಕುಡಿಯೋದು! ಗಾಯಕ ಸುಖವಾಗಿದ್ದ.
ಇವನಿಗೆ ಜ್ಯೋತಿಷ್ಯ ಕೂಡ ತುಂಬ ಚೆನ್ನಾಗಿ ತಿಳಿದಿತ್ತು. ಆದರೆ ಯಾರಿಗೂ ಇದರ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಭವಿಷ್ಯ ಹೇಳೆಂದು ರಾಜನಾದಿಯಾಗಿ ಎಲ್ಲರೂ ಪೀಡಿಸಿದರೆ ಕಷ್ಟವಲ್ಲವೇ?
ಹೀಗಿರುವಾಗ ಅವನಿಗೆ ತೊಂಬತ್ತು ವರ್ಷ ತುಂಬಿತು. ತನ್ನ ಮರಣಕಾಲ ಸಮೀಪಿಸುತ್ತಿದೆಯೆಂದು ಅವನಿಗೇ ಗೊತ್ತಾಯಿತು. ಮುಂದಿನ ಜನ್ಮದಲ್ಲಿ ತಾನು ಏನಾಗಿ ಹುಟ್ಟುತ್ತೇನೆಂಬುದನ್ನು ತಿಳಿಯುವ ಕುತೂಹಲ ಹೆಚ್ಚಾಗಿ, ಅಟ್ಟದ ಮೇಲಿದ್ದ ಕಡತಗಳನ್ನೆಲ್ಲ ತೆಗೆದು ಪರಿಶೀಲಿಸಿದ. ಅದರ ಪ್ರಕಾರ ಮುಂದಿನ ಜನ್ಮದಲ್ಲಿ ಅವನು ಒಂದು ಹೆಣ್ಣುಕೋಳಿಯಾಗಿ ಹುಟ್ಟಲಿದ್ದ! ಕೂಡಲೇ ತನ್ನ ಪ್ರೀತಿಪಾತ್ರ ಮೊಮ್ಮಗನನ್ನು ಕರೆದು ಹೇಳಿದ – ಮಗುವೇ, ನಾನು ಸತ್ತಮೇಲೆ ಊರಾಚೆಯ ಕೊಂಪೆಯಲ್ಲಿ ಕೋಳಿಯಾಗಿ ಹುಟ್ತೀನಿ. ನೀನು ಬಂದು ನನ್ನ ಕೊಂದು ಬಿಡು.
ಕೆಲಸಮಯದ ಬಳಿಕ ಗಾಯಕ ಸತ್ತ. ಮೊಮ್ಮಗ ಊರಾಚೆ ಹೋಗಿ ನೋಡಿದ. ಕೋಳಿ ತನ್ನ ಮರಿಗಳ ಜತೆ ಆನಂದದಿಂದ ಆಟವಾಡುತ್ತಿತ್ತು. ಮೊಮ್ಮಗ ಅದನ್ನು ಕೊಲ್ಲಲು ಹೋದ. ಕೋಳಿಗೆ ಹಿಂದಿನ ಜನ್ಮ ನೆನಪಿತ್ತು. ಅದು ಮೊಮ್ಮಗನನ್ನು ಬೇಡಿಕೊಂಡಿತು – ದಮ್ಮಯ್ಯ, ಕೊಲ್ಲಬೇಡವಯ್ಯಾ…….. ಆವತ್ತು ಕಲ್ಯಾಣಿ ಹಾಡೋದೇ ಆನಂದ! ಈವತ್ತು ಹೀಗೆ ಕೊಕ್ಕೊಕ್ಕೋ ಅಂತ ಹಾಡೋದೇ ಆನಂದ! ಕಸದಲ್ಲಿ ಹುಳಕೆದರಿ ತಿನ್ನೋದಂತೂ ಎಷ್ಟು ಮಜಾ! ಬೇಕಾದ್ರೆ ನೀನೂ ಬಾ, ಒಟ್ಟಿಗೇ ತಿನ್ನೋಣ. ಇನ್ನೊಂದು ಮಾತು ತಿಳಿದುಕೋ. ಕೋಳಿಜನ್ಮ ಅತ್ಯಂತ ಶ್ರೇಷ್ಠ! ಹೀನ ಜನ್ಮ ಅಂದ್ರೆ ಮನುಷ್ಯಜನ್ಮಾನೇ! ಇಷ್ಟು ಹೇಳಿ ಕೋಳಿ ಸಂಭ್ರಮದಿಂದ ಹೊಸ ಕಸ ತುಂಬಿದ್ದ ತಿಪ್ಪೆಗುಂಡಿ ಕಡೆ ಓಡಿಹೋಯ್ತು. ಸೇವಂತಿಗೆ ಚೆಂಡಿನಂಥ ಅದರ ಮುದ್ದುಮರಿಗಳೂ ಅಮ್ಮನ ಹಿಂದೆಯೇ ಉಲ್ಲಾಸದಿಂದ ಬುಡುಬುಡು ಓಡಿದವು.?