“ಹೂವಹಳ್ಳಿಗೆ ದಾರಿ…..” ಕೈಫಲಕವನ್ನು ಕಾಣುತ್ತಿದ್ದಂತೆ ಸುಬ್ಬಪ್ಪನ ಮನಸ್ಸೇ ಹೂವಾಗಿ ಅರಳಿಬಿಟ್ಟಿತು. ತನ್ನ ಕಂದ ವನಜಾ ವಾಸಿಸುವುದು ಇಲ್ಲೇ….. ಕಳೆದ ವರ್ಷ ತಾನೇ ಮದುವೆ ಮಾಡಿ ಕಳುಹಿಸಿಕೊಟ್ಟದ್ದು. ಆಮೇಲೆ ಈಗಲೇ ತಾನು ಈ ಊರಿಗೆ ಕಾಲಿಡುತ್ತಿರುವುದು.
“ಬೈರಾ….. ಬೇಗನೆ ಗಾಡಿ ಹೊಡಿಯೋ…..” ಸುಬ್ಬಪ್ಪನ ಕಾತರವನ್ನು ತಾನೂ ತೆಗೆದುಕೊಂಡವನಂತೆ ಆ ಸಾರಥಿ “ರಾಮಾ, ಲಕ್ಷ್ಮಣಾ, ಹೂಡ್ರೋ ಒಂದೋಟವ ಬಿರಬಿರನೆ ಅಮ್ಮವ್ವಾರ ಮನೆತಾಕೆ …..” ಎತ್ತುಗಳ ಹೆಗಲು ಚಪ್ಪರಿಸಿದ. ಅವ್ವ ಅನ್ನುತ್ತಿದ್ದಂತೆ ಬೆಳಗಾಗೆದ್ದು ಹಸಿರು ಹುಲ್ಲು ತಿನ್ನಿಸಿ ಅಪ್ಪಿ ಮುದ್ದು ಮಾಡುತ್ತಿದ್ದ ವನಜೆ ರಾಮ-ಲಕ್ಷ್ಮಣರಿಗೂ ನೆನಪಾದಳೋ? ಕುತ್ತಿಗೆ ಕುಣಿಸುತ್ತಾ ಬಿಳಿಮೈ ಹೊಳೆಸುತ್ತಾ ಒಂದೇ ಸಮ ಓಡಿದವು ಅವೂ!
ಜಗುಲೀಲಿ ಕೂತು ತೂಕಡಿಸುತ್ತಿದ್ದ ರಾಮಪ್ಪ ಬೀಗನನ್ನು ಕಂಡು ವ್ಯಂಗ್ಯವಾಗಿ “ಓಹೋಹೋ……” ಎಂದ. ಆಮೇಲೆ ಆ ದೊಡ್ಡ ಬಂಡಿಯಿಂದ ಬೈರ ದವಸಗಳಮೂಟೆ, ತಿಂಡಿಬುಟ್ಟಿಗಳು, ಹಲಸು-ಬಾಳೆಗೊನೆಗಳು ಇವೆಲ್ಲವನ್ನೂ ಇಳಿಸಿಳಿಸಿ ಒಳಗೆ ಸಾಗಿಸುವುದನ್ನು ಕಂಡು ಸಂತೋಷದಿಂದ ನಗುತ್ತಾ “ಬನ್ನಿ ಬನ್ನಿ ಪ್ರಯಾಣ ಸುಖವಾಗಿತ್ತೇ” ಎಂದೆಲ್ಲ ಉಪಚರಿಸಿದ.
ಅಪ್ಪನನ್ನು ಕಾಣುತ್ತಲೇ ಜಿಂಕೆಯಂತೆ ಓಡಿ ಬಂದಳು ಮಗಳು. ಬಿಸಿನೀರಿನಿಂದ ಪಾದ ತೊಳೆದು ಸೆರಗಿನಿಂದ ಒರೆಸಿದಳು. ಕಣ್ತುಂಬ ಮಗಳ ತುಂಬಿಕೊಂಡ ಸುಬ್ಬಪ್ಪ ಎರಡೂ ಕೈಲಿ ಅವಳ ತಲೆ ನೇವರಿಸಿದ.
ಮಧ್ಯಾಹ್ನ ಊಟದ ಸಂಭ್ರಮ ಜೋರಾಗೇ ಇತ್ತು. ಬೀಗರು ಬಂಡಿಭರ್ತಿ ಸಾಮಾನು ತಂದು ತುಂಬಿದ್ದರಿಂದಲೋ ಏನೋ, ಬೀಗಿತ್ತಿಯ ಸ್ವಹಸ್ತದಿಂದ ಒಂದಷ್ಟು ರವೆ ಪಾಯಸವೂ ಸುಬ್ಬಪ್ಪನ ಎಲೆಮೇಲೆ ಹರಿಯಿತು.
ಉಂಡ ಕೂಡಲೇ ಹೊರಟು ನಿಂತ ಸುಬ್ಬಪ್ಪ. “ಯಾಕೆ ಅವಸರ? ಜಗುಲೀಲಿ ಚಣಹೊತ್ತು ಒರಗಬಹುದಲ್ಲ?” ಯಾವಾಗಲೂ ಅದನ್ನೇ ಮಾಡುವ ರಾಮಪ್ಪ ಉಪಚರಿಸಿದ. “ಇಲ್ಲ ದೇವರು….. ಕತ್ತಲಾಗಿ ಬಿಡುತ್ತದೆ…. ರಾಮದೇವರ ಬೆಟ್ಟ ಹಾದು ಹೋಗಬೇಕಲ್ವೇ…. ಹೊರಟುಬಿಡ್ತೀನಿ…….”
ಸುಬ್ಬಪ್ಪ ಬಂಡಿ ಬಳಿ ಬಂದಾಗ ಪಾತ್ರೆ ಬೆಳಗುತ್ತಾ ಕುಳಿತಿದ್ದ ಮಗಳು ಹಾಗೇ ಕೈ ಸೀಚಿಕೊಂಡು ಅಪ್ಪನ ಬಳಿ ಓಡೋಡಿ ಬಂದಳು. ತುಂಬಿದ ಬಸುರಿ….. ಹಣೆತುಂಬ ಚೆದುರಿದ ಮುಂಗುರುಳು…. ಬೆವರು… ಏದುಸಿರು!
“ಬಾತಾಯಿ ಇಲ್ಲಿ….” ಮಗಳ ಭುಜಸವರಿ, ತಲೆಸವರಿ ತೃಪ್ತನಾದ ಅಪ್ಪ… “ಅಂದ್ಹಾಗೆ, ಕಂದಾ, ನೀನಿಲ್ಲಿ ಸುಖವಾಗಿದ್ದೀ ತಾನೇ?” ಮಗಳು ಮೆಲ್ಲಗೆ ನಕ್ಕಳು. “ಬಾಗಿಲ ಅಗುಳಿ ಮೊಣಕೈಗೆ ಬಡಿದರೆ ಎಷ್ಟು ಸುಖವೋ ಅಷ್ಟೇ ಸುಖವಾಗಿದ್ದೀನಿ ಅಪ್ಪ.”
ಮಗಳ ಒಗಟುಮಾತು ಸುಬ್ಬಪ್ಪಗೆ ಅರ್ಥವಾಗಲಿಲ್ಲ. “ಹ್ಯಾಗೋ….. ಅಳಿಯ ವಿದ್ಯಾವಂತ….. ಬುದ್ಧಿವಂತ! ಹಿರೀಕರಾಗಿ ಅತ್ತೆ-ಮಾವ…. ಇನ್ನೇನು? ಮಗಳು ಸುಖವಾಗೇ ಇರ್ತಾಳೆ…..” ಅಂದುಕೊಂಡ. ಬಂಡಿಯೇರಿ ಹೊರಟ. “ಹುಷಾರು ಕಂದ…..” ಅಂದ ಪದೇಪದೇ.
ಹಲವಾರು ದಿನಗಳ ಬಳಿಕ ಸುಬ್ಬಪ್ಪ ಮನೇಲಿ ಬಾಗಿಲ ಬಳಿಯ ಬೆಳಕಲ್ಲಿ ಕೂತು ಹಳೇ ಕಡತಗಳನ್ನೆಲ್ಲ ಪರಿಶೀಲಿಸುತ್ತಿದ್ದ. ತುಂಬ ಬಾಯಾರಿಕೆಯಾಯ್ತು. “ಲಕ್ಷ್ಮೀ ಒಂದ್ಲೋಟ ನೀರು ಕೊಡು…..” ಮಡದಿಯನ್ನು ಕೂಗಿದ. ಆಕೆಗದು ಕೇಳಲಿಲ್ಲ. “ಎಲ್ಲಿ ಹೋದಳೋ ಮಹರಾಯ್ತಿ?” ಮಿಡುಕಿಕೊಳ್ಳುತ್ತಾ ಪಟ್ಟನೆ ತಾನೇ ಮೇಲೆದ್ದ. ಬಾಗಿಲ ಚಿಲಕ ಎಡಮೊಣಕೈ ಮೂಳೆಗೆ ಬಲವಾಗಿ ಬಡಿಯಿತು. ಆ ಯಮನೋವಿಗೆ ತಲೆಯೇ ಸುತ್ತಿ ಬಂದಂತಾಯ್ತು. ಸುಬ್ಬಪ್ಪ ಸಂಕಟದಿಂದ ಚೀರಿದ –
“ಹಾ! ಮಗಳೇ…..”