ಒಂದು ಊರಿನಲ್ಲಿ ಒಬ್ಬ ಅತ್ತೆ ಇದ್ದಳು. ಆ ಬಗ್ಗೆ ಅವಳಿಗೆ ತುಂಬ ಜಂಭವೂ ಇತ್ತು. ಠೀವಿಯಿಂದ ಕತ್ತೆತ್ತಿ ಹಿತ್ತಲಲ್ಲಿ, ಅಂಗಳದಲ್ಲಿ ಸುಳಿದಾಡುತ್ತಿದ್ದಳು. ಆಕೆ ಉಡುತ್ತಿದ್ದುದು ಭಾರಿಭಾರಿ ಕಂಚಿ ಸೀರೆಗಳನ್ನೇ…. ಇನ್ನು ಒಡವೆಗಳೋ…. ಮಣಭಾರದ ನಿಲವಾಭರಣ! ಆಕೆಯ ಬಾಯಲ್ಲಿ ಸದಾ ಒಂದೇ ಮಂತ್ರ….. “ಏನು ಜೀವನವೋ….. ಏನೋ…..! ಇರಬೇಕು ಅಂತ ಇರಬೇಕು ಅಷ್ಟೇ….. ಇನ್ನೂ ಆ ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕ ನನ್ನ ಕರೆಸಿಕೊಳ್ಳಲಿಲ್ವೇ…..” ಆಗಲೇ ಸೊಸೆ ಬಾಳೆಯೆಲೆಯ ಭರ್ತಿ ಹಸನಾದ ತುಪ್ಪದಲ್ಲೇ ತಯಾರಿಸಿದ ಉಪ್ಪಿಟ್ಟು ರಾಶಿ, ಸಜ್ಜಿಗೆ-ಬಜ್ಜಿಗಳನ್ನು ತಂದು ಭಕ್ತಿಯಿಂದ ಅತ್ತೆಯ ಮುಂದಿಡುವಳು. ಕೂಡಲೇ ಅತ್ತೆಮ್ಮನು ಸುಸಂಬ್ರಮದಿಂದ ಬಲಗೈಯ ಡಜನು ಬಂಗಾರದ ಬಳೆಗಳನ್ನು ವೈಯ್ಯಾರವಾಗಿ ಹಿಂದಕ್ಕೆ ಒಸರಿಸಿ ಆ ದೊಡ್ಡ ಫಳಾರವನ್ನು ತೃಪ್ತಳಾಗಿ ತಿಂದು ತೇಗುವಳು. ಆಮೇಲೆ “ಎಲ್ಲಿದ್ಯೋ…..ಸೋಮಾರಿ ಸೊಸೆ, ಬಾ…. ಈ ಎಲೆ ಎತ್ಕೊಂಡು ಹೋಗಿ ಹಿತ್ತಲಲ್ಲಿ ಬಿಸಾಡಿ ಬಾ….. ಕೈ ತೊಳಿಯೋಕೆ ಬಿಸಿನೀರು ತಾ….” ಗಂಟಲೆತ್ತಿ ಕೂಗುವಳು.
ಸೊಸೆ ಪಾಪದ ಹುಡುಗಿ. ಸಮಾಜ ವಿಧಿಸಿದ್ದ “ಅತ್ತೆಮಾವರಿಗಂಜಿ….. ಸುತ್ತೇಳು ನೆರೆಗಂಜಿ…..” ವಿಧೇಯತೆಯಿಂದ ಬಾಳುವಾಕೆ. ಬೆಳಗಿನಿಂದ ರಾತ್ರಿಯವರೆಗೆ ಸತತ ದುಡಿಮೆ. ಕೊಟ್ಟಗೆಯ ಕೆಲಸ, ಅಡುಗೆ-ತಿಂಡಿ, ಮನೆಯ ಉಡುಗಣೆ-ಸಾರಣೆ….. ಎಲ್ಲ ಅವಳದೆ. ಒಂದೇ ಒಂದು ಘಳಿಗೆ ಜಗುಲಿಯಲ್ಲಿ ಉಸ್ಸಂತ ಬೆವರು ತೀಡುತ್ತಾ ಕಂಬಕ್ಕೊರಗಿ ಕೂತಳೇ….. ಅತ್ತೆಮ್ಮ ಅಲ್ಲಿ ಹಾಜರು….. ಕೂಗುವಳು “ಸುಮ್ನೆ ಯಾಕೇ ಕುಂತಿದ್ದೀ?….. ಕಂಬನಾದ್ರೂ ಸುತ್ಹಾಕು!”
ಹೀಗಿರಲು ಒಂದು ದಿನ ತನ್ನ ಕಲಾಪತ್ತಿನ ಸೀರೆಗಳನ್ನು ತೊಳಕೊಂಡು ಬರಲು – ಈ ವಿಷಯವಾಗಿ ಮಾತ್ರ ಆಕೆ ಸೊಸೆಯನ್ನು ನಂಬುತ್ತಿರಲಿಲ್ಲವಾಗಿ – ನದಿಗೆ ಹೋದಳು. ಗೂಡೆಯನ್ನು ಕಂಕುಳಿನಲ್ಲಿಟ್ಟು ಹೊರಡುವ ಮುನ್ನ ಉಗ್ರಾಣಕ್ಕೆ ಹೋದಳು. ದವಸ-ಧಾನ್ಯ ತುಂಬಿದ್ದ ಕೊಳಗಗಳ ಬಳಿ ಹೋಗಿ, ಆ ಧಾನ್ಯಗಳ ಮೇಲೆ ಹುಷಾರಾಗಿ ತನ್ನ ಹಸ್ತದ ಗುರುತುಗಳನ್ನು ಒತ್ತಿದಳು. “ತಾನಿಲ್ಲದ ಸಮಯ ಸಾಧಿಸಿ ಬಿನ್ನಾಣಿ ಸೊಸೆ ಕದ್ದು ಮುಚ್ಚಿ ತವರಿಗೆ ಸಾಗಿಸಿಬಿಟ್ಟರೆ…..?”
ಅತ್ತೆ ನದಿಗೆ ಹೋದ ಮೇಲೆ ಮನೆಮುಂದೆ ಒಬ್ಬ ಭಿಕ್ಷುಕ ಬಂದ…. “ಏನಾದ್ರೂ ಕೊಡಿ ತಾಯೀ…..” ಆರ್ತನಾಗಿ ಕೂಗಿದ. ಸೊಸೆ ಕಿಟಕಿಯಿಂದಲೇ ಇಣುಕಿ ನೋಡಿದಳು. ಪಾಪ ವಯಸ್ಸಿನಿಂದ ಹಣ್ಣಾಗಿ ಹೋಗಿದ್ದಾನೆ. ನಿಶ್ಶಕ್ತಿ….. ಹೊಟ್ಟೆಯಂತು ಬೆನ್ನಿಗೇ ಅಂಟಿಕೊಂಡಿದೆ!
ಸೊಸೆಗೆ ಏನಾದರೂ ಕೊಡುವ ಆಸೆ….. ಆದರೆ, ಅತ್ತೆಗೆ ತಿಳಿಯಂತೆ ಒಂದೇ ಒಂದು ಹುಲ್ಲುಕಡ್ಡಿಯೂ, ಹೊರಗೆ ಹೋಗುವಂತಿಲ್ಲ! ಸಂಕಟದಿಂದಲೇ “ಮುಂದೆ ಹೋಗಪ್ಪ” ಅಂದಳು. “ಸರಿ ತಾಯಿ” ಅಂತ ಅವನು ಹೆಬ್ಬಾಗಿಲು ದಾಟಿ ಬೀದಿಗೆ ಬರುವುದಕ್ಕೂ ಅತ್ತೆಮ್ಮ ಗತ್ತಿನಿಂದ ಎದುರಾಗುವುದಕ್ಕೂ ಸರಿ ಹೋಯ್ತು.
“ನಮ್ಮನೇಗೆ ಹೋಗಿದ್ಯಾ?” ಶ್ರೀಮಂತಕಂಠದಿಂದ ಕೇಳಿದಳು. “ಹೌದು ತಾಯಿ…..” ಅಂದ ಆತ. “ಏನಂದಳು ಸೊಸೆ?” ಅತ್ತೆಯ ತನಿಖೆ! “ಮುಂದೆ ಹೋಗು ಅಂದ್ರು ಅಷ್ಟೇ…..” “ಓಹೋ….. ಎಷ್ಟು ಧಿಮಾಕು ಅವಳ್ಗೆ!…… ಬಾ ನನ್ನ ಜತೆ…..” ಬಡಪಾಯಿ ಮತ್ತೆ ಅತ್ತೆಯ ಹಿಂದೆ ಮನೆಗೆ ಹಿಂಬಾಲಿಸಿದ.
ಅತ್ತೆ ಹಜಾರದಲ್ಲಿ ನಿಲುಗನ್ನಡಿ ಮುಂದೆ ನಿಂತು ಮುಂದಲೆ ಸರಿಪಡಿಸಿಕೊಂಡಳು. ನಿರಿಗೆಗಳನ್ನೂ ನೀಟು ಮಾಡಿಕೊಂಡಳು. ಆಮೇಲೆ ತಲೆ ಬಾಗಿಲಿಗೆ ಬಂದು ಸೊಂಟದ ಮೇಲೆ ಕೈಯಿಟ್ಟು ನಿಂತು….. “ಮುಂದೆ ಹೋಗೋ…. ಭಿಕ್ಷುಕಾ!” – ಗರ್ಜಿಸಿದಳು.
“ಅಯ್ಯೋ, ಸೊಸೆ ಹೀಗಂದ್ರು ಅಂದಿದ್ದಕ್ಕೆ ನನ್ನ ಜೊತೆ ಬಾ ಅಂತ ನೀವೇ ಕರೆದುಕೊಂಡು ಬಂದ್ರಲ್ಲಮ್ಮ?”
“ಅವಳು ಯಾರೋ ಹೇಳೋಕೆ? ಈ ಮನೆ ಯಜಮಾನತಿ ನಾನು! ನಾನೇ ಹೇಳ್ಬೇಕು….. ಅತ್ತೆ ಅಂದ್ರೆ ಏನಂತ ತಿಳ್ಕೊಂಡಿದ್ದೀರಿ?”
ಅವಳ ಮಾತು ಮುಗಿಯುವ ಮುನ್ನವೇ ಆ ಬಡಪಾಯಿ ಅಲ್ಲಿಂದ ಪರಾರಿಯಾಗಿದ್ದ.