೧
ಎಂದಿನಂತೆ ಆ ಸಾಧು ಧ್ಯಾನಾಸಕ್ತನಾಗಿ ಕೂತಿದ್ದ. ಒಬ್ಬ ಮನುಷ್ಯ ಬಂದು ಆತನ ಪಾದಮುಟ್ಟಿ ನಮಸ್ಕರಿಸಿದ. ಮೆಲ್ಲಗೆ ಕಣ್ಣುಬಿಟ್ಟು ಎದುರಿಗಿದ್ದವನನ್ನು ನೋಡಿದ ಸಾಧು.
“ಏನು ಮಗು ಬಂದದ್ದು? ನೋಡಿದರೆ ತುಂಬ ದುಃಖದಲ್ಲಿರುವಂತಿದೆ? ಕರುಣೆಯಿಂದ ಕೇಳಿದ.
“ಹೌದು ಸ್ವಾಮಿ. ನೋವುಗಳಿಂದ ತತ್ತರಿಸಿ ಹೋಗಿದ್ದೇನೆ. ವ್ಯಕ್ತಿ ಕಂಬನಿದುಂಬಿ ಉತ್ತರಿಸಿದ.
“ಮಗು, ನಿನ್ನ ನೋವು ಏನೆಂದು ನನಗೆ ಗೊತ್ತಿಲ್ಲ. ಆದರೆ ಎಷ್ಟು ಎಂಬುದು ಮುಖದ ಮೇಲೆ ಕಾಣುತ್ತಿದೆ. ಸಂತೈಸಿಕೋ ಮಗೂ.
“ಅದೇ ನನಗೆ ತಿಳಿಯುತ್ತಿಲ್ಲ ಸ್ವಾಮಿ… ಹಾಗಾಗಿಯೇ ನಿಮ್ಮ ಬಳಿ ಬಂದೆ. ನೋವನ್ನು ನಿವಾರಿಸಿಕೊಳ್ಳಲು ಏನು ಮಾಡಲಿ?”
“ಅದನ್ನು ಅವರವರೇ ತಿಳಿದುಕೊಳ್ಳಬೇಕು. ನಿನ್ನ ನೋವನ್ನಂತು ನಾನು ಕಿತ್ತುಕೊಳ್ಳಲಾರೆ ಅಲ್ಲವೇ? ನೋಡು ಮಗು, ಜೀವನದಲ್ಲಿ ದುಃಖ ಎಲ್ಲರಿಗೂ ಬರುತ್ತದೆ. ಅವರವರು ತೆಗೆದುಕೊಳ್ಳುವ ರೀತಿ, ತಡೆದುಕೊಳ್ಳುವ ರೀತಿ, ಬೇರೆ ಬೇರೆ. ನನಗೆ ತಿಳಿದದ್ದನ್ನು ಹೇಳುತ್ತೇನೆ. ನಿನಗೆ ಏನಾದರೂ ಉಪಯೋಗವಾದೀತೋ ನೋಡೋಣ.
“ದಯಮಾಡಿ ಹೇಳಿ ಸ್ವಾಮಿ ಆತ ಕೈ ಮುಗಿದ.
“ನೋಡು ಮಗೂ, ಕೆಲವರಿಗೆ ಈ ದುಃಖವೆಂಬುದು ಕಲ್ಲಿನ ಮೇಲೆ ಗೆರೆ ಕೊರೆದ ಹಾಗೆ; ಉಳಿದುಬಿಡುತ್ತದೆ. ಮರೆಯುವುದೇ ಇಲ್ಲ. ಬೇರೆ ಕೆಲವರಿಗೆ ನೋವುಗಳು ಸಮುದ್ರತೀರದ ಮರಳಿನ ಮೇಲೆ ಗೆರೆ ಎಳೆದಂತೆ; ಸ್ವಲ್ಪ ಹೊತ್ತು ಮಾತ್ರ ಇರುತ್ತದೆ. ಅಲೆತೇಲಿ ಬಂದು ಅದನ್ನು ಒರೆಸಿಕೊಂಡು ಹೋಗುವವರೆಗೆ! ಕೆಲವರಿಗಂತು ಅದು ನೀರಿನ ಮೇಲೆ ಗೆರೆ ಬರೆದಂತೆ; ಬರೆಯುವಾಗಷ್ಟೇ ಕಾಣುತ್ತದೆ… ಮರುಕ್ಷಣ ಇಲ್ಲ! ಯೋಗಿಗಳಿಗಾದರೋ, ಅದು ಗಾಳಿಯಲ್ಲಿ ಎಳೆ ಎಳೆದಂತೆ! ಗೋಚರವಾಗೋದೇ ಇಲ್ಲ! ಅರ್ಥವಾಯಿತೇ ಮಗು?”
ಸಾಧು ಪ್ರೀತಿಯಿಂದ ಆ ವ್ಯಕ್ತಿಯ ತಲೆಯನ್ನು ನೇವರಿಸಿದ. ಮಾತಿನ ಅರ್ಥಕ್ಕೋ, ಆ ಮಾತೃಸ್ಪರ್ಶಕ್ಕೋ ಆ ಮನುಷ್ಯನ ಮನಸ್ಸು ಒಯ್ಯನೊಯ್ಯನೆ ಸಮಾಧಾನಿಯಾಯಿತು. ಮತ್ತೊಮ್ಮೆ ಭಕ್ತಿಯಿಂದ ಆ ಯೋಗಿಯ ಪಾದಗಳಿಗೆ ನಮಸ್ಕರಿಸಿ ತನ್ನ ದಾರಿ ಹಿಡಿದು ಹೊರಟುಹೋದ.?