ಅದು ಗಂಗಾನದಿ ತೀರ. ಯಾತ್ರಿಕನೊಬ್ಬ ಅಲ್ಲಿ ಕೂತು ಉಲ್ಲಾಸದಿಂದ ಹಾಡುತ್ತಿದ್ದ. ಆಗ ಅಲ್ಲಿಗೊಬ್ಬ ಬಾಬಾ ಬಂದ.
ಬನ್ನಿ ಬನ್ನಿ ಬಾಬಾಜೀ…. ಇಗೋ, ದಯವಿಟ್ಟು ಈ ಸಿಹಿತಿಂಡಿ ತೆಗೆದುಕೊಳ್ಳಿ. ನನಗಿವತ್ತು ಬಹಳ ಆನಂದವಾಗಿದೆ! ಎಂದು ಹೇಳಿ ಬಾಬಾಗೆ ಸಿಹಿತಿಂಡಿಯ ಪೊಟ್ಟಣವನ್ನೂ ಒಂದಷ್ಟು ಹಣ್ಣುಗಳನ್ನೂ ನೀಡಿದ.
ನಗುನಗುತ್ತಾ ಅವುಗಳನ್ನು ಸ್ವೀಕರಿಸಿದ ಬಾಬಾ, ಏನು ಮಗೂ, ಅಷ್ಟೊಂದು ಆನಂದ ನಿನಗೆ?” ಯಾತ್ರಿಕನನ್ನು ಪ್ರಶ್ನಿಸಿದ.
ಯಾತ್ರಿಕ ಸಾರ್ಥಕಭಾವದಿಂದ ಮುಗುಳ್ನಕ್ಕ.
ನನ್ನ ಜೀವನದ ಉದ್ದೇಶ ಇವತ್ತು ಈಡೇರಿತು ಬಾಬಾ. ಸಾವಿರಾರು ಮೈಲಿ ದೂರದಿಂದ ತಿಂಗಳುಗಟ್ಟಲೆ ನಡೆದು ಈ ಊರಿಗೆ ಬಂದೆ. ಗಂಗೆಯಲ್ಲಿ ಸ್ನಾನ ಮಾಡಿದೆ. ಬಹಳ ಪಳಕಿತನಾಗಿದ್ದೇನೆ ಈ ಗಂಗಾಸ್ನಾನದಿಂದ!
ಏನಪ್ಪಾ, ಅಂಥ ವಿಶೇಷ ಗಂಗಾಸ್ನಾನದಲ್ಲಿ?
ಇದೇನು ಬಾಬಾ ಹೀಗೆ ಕೇಳ್ತೀರಿ? ಪವಿತ್ರ ಗಂಗೆಯಲ್ಲಿ ಒಂದೇ ಒಂದು ಸಾರಿ ಮುಳುಗು ಹಾಕಿದ್ರೂ ಪಾಪವಿನಾಶ ಅಲ್ವೇ? ಸ್ವರ್ಗಪ್ರಾಪ್ತಿ ಅಲ್ವೇ?”
ಸ್ವಲ್ಪ ಬಾ ಮಗೂ ಇಲ್ಲಿ ಬಾಬಾ ಯಾತ್ರಿಕನನ್ನು ನದಿಯ ಬದಿಯಲ್ಲಿ ಮೀನುಗಳು ಆಟವಾಡುವಲ್ಲಿಗೆ ಕರೆದೊಯ್ದ. ಮುದ್ದು ಮೀನುಗಳು ಪಳಕ್ ಪಳಕ್ ಎಂದು ನೀರಿನಿಂದ ಮೇಲೆ ನೆಗೆಯುವುದು, ಅಷ್ಟೇ ಉಲ್ಲಾಸದಿಂದ ಮತ್ತೆ ನೀರಿಗೆ ಬೀಳುವುದು, ಈ ಕ್ರೀಡೆ ಅವಿರತವಾಗಿ ಸಾಗಿತ್ತ್ತು.
ಈ ಮೀನುಗಳನ್ನು ಯಾತ್ರಿಕನಿಗೆ ತೋರಿಸಿ ಬಾಬಾ ಹೇಳಿದ –
ನೋಡಿಲ್ಲಿ ಮಗು, ಈ ಮೀನುಗಳು ಪ್ರತಿದಿನ ಅದೆಷ್ಟು ಬಾರಿ ಗಂಗೆಯಲ್ಲಿ ಮುಳುಗೇಳುತ್ತಿವೆ? ಹಾಗಾದರೆ ಅಷ್ಟಷ್ಟೂ ಬಾರಿ ಅವು ಸ್ವರ್ಗಕ್ಕೆ ಹೋಗಿಬರುತ್ತವೇನು? ?