ಇಂದು ಹಸ್ತಿನಾವತಿಯಲ್ಲಿ ಆಡಳಿತದ ಲೋಪ ಮಾತ್ರವಲ್ಲ, ದುರಾಚಾರದ ತಾಂಡವ ನಡೆಯುತ್ತಿದೆ. ಯಾರೋ ಬಲಿಷ್ಠನೊಬ್ಬ ಅನ್ಯಾಯವನ್ನೆಸಗಿದರೆ, ಅವನನ್ನು ಶಿಕ್ಷಿಸುವುದಿರಲಿ, ಪ್ರಭುತ್ವವು ಅವನಿಗೇ ಬೆಂಬಲ ಕೊಡುತ್ತಿದೆ. ನಮ್ಮಂತಹ ನಿಷ್ಪಾಪಿಗಳ ಗೋಳಿಗೆ ಕಿವಿಗೊಡುವವರು ಯಾರು?
ಚನ್ನನ ಮಾತು ಕೇಳಿ ನನಗೆ ಒಂದು ಕ್ಷಣ ಅಚ್ಚರಿಯಾಯಿತು. ಚನ್ನ ಹೀಗೂ ಆಲೋಚಿಸಬಲ್ಲನೆ? ಎಷ್ಟು ಮುಗ್ಧನಾಗಿದ್ದ ಮೊನ್ನೆಯವರೆಗೆ. ಇಂದು ಹೀಗೆ ಯೋಚಿಸುತ್ತಾನೆಂದರೆ? ನಡೆದ ಘಟನೆ ಅವನ ಮೇಲೆ ಮಾಡಿದ ಪರಿಣಾಮವಿದು. ನೆತ್ತರೆಂದರೆ ತಲೆ ತಿರುಗಿ ಬೀಳುತ್ತಿದ್ದವನು ಅವರನ್ನು ಕತ್ತರಿಸಿ ಹಾಕುವುದಕ್ಕೂ ಹಿಂಜರಿಯುವುದಿಲ್ಲ ಎನ್ನುತ್ತಾನಲ್ಲ! ಅವನೆಂದಂತೆ ಮಾಡಿಬಿಡೋಣವೆ ಎಂದು ಒಮ್ಮೆ ಚಿಂತಿಸಿದೆ. ಏನಾದೀತು ಅದರ ಪರಿಣಾಮ? ಚಿತ್ರಕ ಮತ್ತವನ ಕುಟುಂಬ ರಾಜಪರಿವಾರದ ಆಪ್ತವಲಯದಲ್ಲಿದೆ. ನಾವು ಅವರ ವಿರೋಧವಾಗಿ ಏನೇ ಮಾಡಿದರೂ ಅದು ಅರಸರ ಕ್ರೋಧಕ್ಕೆ ಕಾರಣವಾಗುತ್ತದೆ. ನಮ್ಮನ್ನು ರಾಜದ್ರೋಹಿಗಳೆಂದು ಘೋಷಿಸಿದರೆ ಆಶ್ಚರ್ಯವೇನಿಲ್ಲ. ಅಪರಾಧ ಮಾಡಿ, ಬಿಗಿಯಾದ ಕಾವಲಿನ ನಡುವೆ ತಪ್ಪಿಸಿಕೊಂಡು ಹೋಗಲು ನಮ್ಮಿಂದಾದೀತೆ? ಸಿಕ್ಕಿಬಿದ್ದರೆ ನಮಗೆ ಮತ್ತೆ ಉಳಿಗಾಲವಿಲ್ಲ. ಇದಕ್ಕೂ ಮೀರಿ ಹೇಗೋ ಪಾರಾದೆವು ಎಂದೇ ಭಾವಿಸಿದರೂ ನಮಗೆ ಆಶ್ರಯ ಕೊಡುವವರು ಯಾರು? ಅಲ್ಲದೆ ಮಥುರೆಯಾಗಲಿ, ಪಾಂಚಾಲವಾಗಲಿ ಹಸ್ತಿನಾವತಿಗೆ ಮಿತ್ರರಾಜ್ಯಗಳು. ಅಲ್ಲಿ ಆಶ್ರಯ ದೊರೆತೀತೆ? ದೊರೆತರೂ ಇಷ್ಟು ವರ್ಷ ಬಾಳಿ ಬದುಕಿದ ನಾಡನ್ನು ತೊರೆದು ಯಾವುದೋ ಅಪರಿಚಿತ ನಾಡಿನಲ್ಲಿ ಹೊಸ ಬದುಕು ಕಟ್ಟಿಕೊಳ್ಳುವುದು ಸುಲಭವೆ? ನನ್ನ ಮನಸ್ಸಿನ ಯೋಚನೆಯನ್ನೇ ಚನ್ನನಿಗೆ ಹೇಳಿದೆ. “ಅಂದರೆ ಈ ಪ್ರಕರಣವನ್ನು ಮರೆತು ಏನೂ ಆಗದವರಂತೆ ನರಸತ್ತ ಬಾಳು ಬಾಳಬೇಕೇ ನಾವು?” ಅವನ ಮಾತಿನ ಕಾವು ನನಗೆ ತಟ್ಟಿತು. ಆದರೆ ನಾನೇನು ಹೇಳಲಿ? ಅಯ್ಯೋ ನಮ್ಮ ದರಿದ್ರ ಜೀವನವೇ! ಒಂದು ಕಾಲದಲ್ಲಿ ಹಸ್ತಿನಾವತಿಯ ಪ್ರಜೆಯಾದುದಕ್ಕೆ ಎಷ್ಟೊಂದು ಹೆಮ್ಮೆಪಡುತ್ತಿದ್ದೆ ನಾನು. ಇಂದು ಅದೇ ಹಸ್ತಿನಾವತಿ ಉರಿಯುವ ಕುಲುಮೆಯಂತೆ ತೋರುತ್ತಿದೆ. ಒಳಗೊಳಗೆ ಬೇಯಲಾರದ, ಹೊರಬರಲೂ ಆರದ ನರಕಯಾತನೆಯಿದು. ಬಾಲ್ಯದ ನೆನಪಾಯಿತು. ಹೊಲದಲ್ಲಿ ಹೆಗ್ಗಣಗಳ ಕಾಟ ಹೆಚ್ಚಾದಾಗ ಅದನ್ನು ನಿವಾರಿಸುವುದಕ್ಕೆ ನಾವು ಒಂದು ಉಪಾಯ ಮಾಡುತ್ತಿದ್ದೆವು. ಅವು ತೋಡಿದ ಬಿಲಗಳ ಬಾಯಿಗೆ ಬೆಂಕಿ ಹಚ್ಚುತ್ತಿದ್ದೆವು. ಹೊರಗೆ ಹೋಗುವ ಯಾವ ದಾರಿಯನ್ನೂ ಉಳಿಸುತ್ತಿರಲಿಲ್ಲ. ಒಳಗಿದ್ದ ಹೆಗ್ಗಣಗಳೆಲ್ಲ ಬಿಸಿಹೊಗೆಯಲ್ಲಿ ಸಿಲುಕಿ, ಉಸಿರುಗಟ್ಟಿ ಒದ್ದಾಡಿ ಸಾಯುತ್ತಿದ್ದವು. ಈಗ ನಮ್ಮದೂ ಅದೇ ಸ್ಥಿತಿಯಾಗಿಹೋಯಿತು. ಹೇಗೆ ಹೊರಗೆ ಬರುವುದು?
ನಾನು ಉತ್ತರಿಸದೇ ಇದ್ದುದನ್ನು ಕಂಡು ಚನ್ನ ಸುಮ್ಮನೇ ನಿಂತಿದ್ದವನು ಕೊಂಚಕಾಲ ಕಾದು ಹೊರಗೆಹೋದ. ನಾನು ಮತ್ತೆ ಯೋಚನೆಯಲ್ಲಿ ಮುಳುಗಿದೆ. ಹಿಂದೆಲ್ಲ ಎಷ್ಟು ಉತ್ತಮ ಆಡಳಿತವಿತ್ತು ಹಸ್ತಿನಾವತಿಯಲ್ಲಿ. ನನಗೆ ಬುದ್ಧಿಬಲಿಯುವ ಹೊತ್ತಿಗೆ ವಿಚಿತ್ರವೀರ್ಯ ಪ್ರಭುಗಳ ಕಾಲ ಆಗಿಹೋಗಿತ್ತು. ಆಚಾರ್ಯ ಭೀಷ್ಮರು ರಾಜಪ್ರತಿನಿಧಿಯಾಗಿ ಆಳ್ವಿಕೆ ನಡೆಸುತ್ತಿದ್ದರು. ಆ ಬಳಿಕ ಪಾಂಡು ಚಕ್ರವರ್ತಿಯ ರಾಜ್ಯಭಾರ. ಪಾಂಡು ವನವಾಸಕ್ಕೆ ಹೋದ ಮೇಲೆ ಅಂಧಭೂಪತಿ ಪಟ್ಟಕ್ಕೆ ಬಂದದ್ದು. ಯಾರೇ ಆಡಳಿತ ನಡೆಸಿದರೂ ನಮ್ಮಂತಹ ಸಾಮಾನ್ಯ ಪ್ರಜೆಗಳ ಜೀವನದ ನೆಮ್ಮದಿಗೆ ಭಂಗವಾಗಿರಲಿಲ್ಲ. ಅದರಲ್ಲೂ ಪಾಂಡುವಿನ ಜ್ಯೇಷ್ಠಪುತ್ರ ಯುಧಿಷ್ಠಿರ ಯುವರಾಜನಾಗಿದ್ದ ಅವಧಿ ಪ್ರಜೆಗಳಿಗೆಲ್ಲ ಸುಖದ ದಿನಗಳು. ಪ್ರಜೆಗಳ ಪ್ರತಿಯೊಂದು ಸಮಸ್ಯೆಯನ್ನೂ ರಾಜನೇ ನಿವಾರಿಸಲಾರ, ನಿಜ. ಆದರೆ ತನ್ನ ಆಳ್ವಿಕೆಯಲ್ಲಿ ದುರಾಚಾರ, ದಬ್ಬಾಳಿಕೆ, ಅನ್ಯಾಯಗಳು ನಡೆಯದಂತೆ ಎಚ್ಚರ ವಹಿಸಬೇಕಾದ್ದು ಅವನ ಕರ್ತವ್ಯ. ದುರ್ಬಲನಿಗೆ ರಾಜನೇ ಬಲವಷ್ಟೆ? ನೊಂದವನ ಗೋಳನ್ನು ಕೇಳುವುದಕ್ಕೂ ಪ್ರಭುತ್ವ ಸಿದ್ಧವಿಲ್ಲವಾದರೆ ಅದೆಂತಹ ಪ್ರಭುತ್ವ? ಆದರೆ ಯುಧಿಷ್ಠಿರ ಆಳುತ್ತಿದ್ದಷ್ಟು ಕಾಲ ಇಂತಹ ಅನ್ಯಾಯ ನಡೆದದ್ದು ನನ್ನ ಸ್ಮರಣೆಯಲ್ಲಿಲ್ಲ. ಕೊನೆಗೂ ಅವನ ಆಳ್ವಿಕೆ ಅಂತ್ಯ ಕಂಡಿತು. ಪಾಂಡುಪುತ್ರರಿಗೂ ಕೌರವರಿಗೂ ರಾಜ್ಯ ವಿಭಾಗವಾಗಿ ಪಾಂಡವರು ಇಂದ್ರಪ್ರಸ್ಥವೆಂಬ ಪ್ರದೇಶಕ್ಕೆ ಹೊರಟುಹೋದರು. ಆಗ ನಮಗೆಲ್ಲ ಬಹಳ ಭಯವಾಗಿತ್ತು. ಯಾಕೆಂದರೆ ಇದಕ್ಕೆ ಪೂರ್ವದಲ್ಲೊಮ್ಮೆ ಪಾಂಡವರನ್ನು ಅರಮನೆಯಿಂದ ಅಟ್ಟಲಾಗಿತ್ತು. ಪಾಂಡವರ ಕುರಿತು ಪ್ರಜೆಗಳಿಗಿದ್ದ ಪ್ರೀತಿಯಿಂದ ಅಸಮಾಧಾನ ಹೊಂದಿದ್ದ ದುರ್ಯೋಧನ. ಅವನ ಮಾತಿಗೆ ಕುರುಡಾದ ಅಧಿರಾಜ ಪಾಂಡವರನ್ನು ವಾರಣಾವತಕ್ಕೆ ಕಳುಹಿಸಿಬಿಟ್ಟ. ಅದರ ಹಿಂದೆ ಇದ್ದ ಷಡ್ಯಂತ್ರ ಅರ್ಥವಾದದ್ದು ಪುರೋಚನ ಅರಗಿನ ಮನೆಯಲ್ಲಿ ಸುಟ್ಟು ಹೋಗಿ ಬಹು ಕಾಲ ಕಳೆದ ಬಳಿಕ. ಇಂದ್ರಪ್ರಸ್ಥದಲ್ಲೂ ಹಾಗೇನಾದರೂ ಸಂಭವಿಸುತ್ತದೆಂದು ನಾವೆಲ್ಲ ಹೆದರಿದ್ದೆವು. ಆದರೆ ಪಾಂಡವರು ಅಲ್ಲಿ ಅಭಿವೃದ್ಧಿ ಕಂಡರು. ದೊಡ್ಡ ಯಾಗವನ್ನು ಮಾಡಿದರು. ಅಂದು ಅವರನ್ನು ಹಿಂಬಾಲಿಸಿ ಅನೇಕ ಪ್ರಜೆಗಳು ಇಂದ್ರಪ್ರಸ್ಥಕ್ಕೆ ಹೋಗಿಬಿಟ್ಟಿದ್ದರು. ನಾವೂ ಹೋಗಬೇಕಿತ್ತೆಂದು ಈಗ ತೋರುತ್ತದೆ. ಯಾಕೆಂದರೆ ಇಂದು ಹಸ್ತಿನಾವತಿಯಲ್ಲಿ ಆಡಳಿತದ ಲೋಪ ಮಾತ್ರವಲ್ಲ, ದುರಾಚಾರದ ತಾಂಡವ ನಡೆಯುತ್ತಿದೆ. ಯಾರೋ ಬಲಿಷ್ಠನೊಬ್ಬ ಅನ್ಯಾಯವನ್ನೆಸಗಿದರೆ, ಅವನನ್ನು ಶಿಕ್ಷಿಸುವುದಿರಲಿ, ಪ್ರಭುತ್ವವು ಅವನಿಗೇ ಬೆಂಬಲ ಕೊಡುತ್ತಿದೆ. ನಮ್ಮಂತಹ ನಿಷ್ಪಾಪಿಗಳ ಗೋಳಿಗೆ ಕಿವಿಗೊಡುವವರು ಯಾರು?
ಒಳ ಓವರಿಯಲ್ಲಿ ಬಿದ್ದುಕೊಂಡು ಹೀಗೆಲ್ಲ ಯೋಚಿಸುತ್ತಿದ್ದ ನನಗೆ ಯಾವಾಗ ನಿದ್ರೆಯಾವರಿಸಿತೊ ತಿಳಿಯದು. ಹೊರಗೆ ನಾಯಿಗಳು ಬೊಗಳುವ ಸದ್ದು ಕನಸಿನಲ್ಲಿ ಕೇಳಿದಂತೆ ಕೇಳುತ್ತಿತ್ತು. ಕುದುರೆಗಳ ಖುರಪುಟದ ಸದ್ದು ನಿಧಾನಕ್ಕೆ ಮನೆಯ ಸಮೀಪ ಬಂದಂತೆ ಭಾಸವಾಯಿತು. ಅಷ್ಟರಲ್ಲಿ ಯಾರೋ ಗಟ್ಟಿದನಿಯಲ್ಲಿ ಮಾತನಾಡಿದಂತೆ ಕೇಳಿಸಿತು. ಮಂಪರಿನಲ್ಲಿದ್ದವನಿಗೆ ಈಗ ನಿಚ್ಚಳವಾಗಿ ಎಚ್ಚರವಾಯಿತು. ಹೊರಗೆ ಯಾರೋ ಬಂದಂತಿತ್ತು. ಯಾರು? ಫಕ್ಕನೆ ನಮ್ಮ ಸ್ಥಿತಿ ನೆನಪಿಗೆ ಬಂತು. ಭಗವಂತ, ರಾಜಭಟರೇನಾದರೂ ಬಂದರೇ? ನಾನು ಮಲಗಿದ್ದ ಹೊತ್ತಿನಲ್ಲಿ ಮಕ್ಕಳು ದುಡುಕಿ ಏನಾದರೂ ಘಾತ ಮಾಡಿದರೇ? ಅವರನ್ನು ಹುಡುಕಿ ಬಂದರೇ ಭಟರು? ಕೇಳುವುದಾದರೂ ಯಾರಲ್ಲಿ! ಮನೆಯೊಳಗೆ ಯಾರೂ ಕಾಣಿಸುತ್ತಿಲ್ಲ. ಹೊರಗೆ ಹೋಗಿ ನೋಡುವುದಕ್ಕೆ ನನಗೆ ಭಯ! ಹಾಗೆಯೇ ಕೂತಿದ್ದೆ. ಕೊಂಚ ಹೊತ್ತು ಅಸ್ಪಷ್ಟ ಮಾತುಕಥೆ ಕೇಳುತ್ತಿತ್ತು. ಅದು ಚನ್ನನ ಧ್ವನಿಯೆಂದು ಗುರುತಿಸಿದೆ. ಸ್ವಲ್ಪ ಸಮಾಧಾನವೆನಿಸಿತು. ಸದ್ಯಃ ಅನಾಹುತವೇನೂ ಆದಂತಿಲ್ಲ. ನಾನು ಹೊರಗೆ ಹೋಗಲೋ ಬೇಡವೋ ಎಂಬ ಸಂದಿಗ್ಧದಲ್ಲಿಯೇ ಇದ್ದೆ. ಅಷ್ಟರಲ್ಲಿ ಚನ್ನ ಒಳಗೆ ಬಂದ. “ಅಪ್ಪಾ, ನಿಮ್ಮನ್ನು ಕಾಣುವುದಕ್ಕೆ ಭಟನಾಯಕನೊಬ್ಬ ಬಂದಿದ್ದಾನೆ. ಏನೋ ಮಾತನಾಡುವುದಿದೆಯಂತೆ. ಅದೂ ನಿಮ್ಮಲ್ಲೇ ಆಗಬೇಕಿದೆಯಂತೆ.” ಮಗನ ಮಾತು ಕೇಳಿ ಆಶ್ಚರ್ಯವಾಯಿತು. ಕೊಂಚ ಸಮಾಧಾನವೂ ಕೂಡ. ಸದ್ಯಃ, ಆಪತ್ತೇನೂ ಒದಗಿದ ಹಾಗಿಲ್ಲ. ಹಾಗೆಂದು ಬಂದವನಲ್ಲಿ ಮಾತನಾಡುವ ತಾಳ್ಮೆ ನನಗಿರಲಿಲ್ಲ. “ನೋಡು ಚನ್ನ, ಅವನು ಯಾಕಾದರೂ ಬಂದಿರಲಿ, ನನಗವನಲ್ಲಿ ಮಾತನಾಡುವ ಅಪೇಕ್ಷೆಯಿಲ್ಲ. ರಥದ ಕೆಲಸಕ್ಕೇನಾದರೂ ಬಂದವನಾದರೆ, ನಾವು ಸದ್ಯಃ ಕೆಲಸ ನಿಲ್ಲಿಸಿದ್ದೇವೆಂದು ಹೇಳು. ಅವನು ಚಿತ್ರಕನ ಬಳಿ ಹೋಗಲಿ. ಅರಮನೆಗೆ ಬೇಕಾದವನು ತಾನೇ? ನಮ್ಮ ಸ್ಥಿತಿ ಈಗಾಗಲೇ ಬುದ್ಧಿಭ್ರಮಣೆಯಾದವರಂತಿದೆ. ಇನ್ನೊಂದು ಚಿಂತೆ ಹಚ್ಚಿಕೊಳ್ಳುವ ಪ್ರಮೇಯ ಬೇಡ. ಅವನಲ್ಲಿ ನನಗೇನು ಮಾತು? ಅವನು ಹಿಂದೆ ಹೋಗಲಿ.” ಚನ್ನ ನಿಂತಲ್ಲಿಂದ ಕದಲಲಿಲ್ಲ. “ಅಪ್ಪಾ, ಅವನು ಬಡಪೆಟ್ಟಿಗೆ ಒಪ್ಪುವವನಂತೆ ತೋರುವುದಿಲ್ಲ. ಸುಮ್ಮನೆ ಬಲಿಷ್ಠರಿಗೆ ಕೋಪ ಉಂಟಾಗುವಂತೆ ಯಾಕೆ ಮಾಡಬೇಕು? ನೀವು ನನ್ನಲ್ಲಿ ಹೇಳಿದ್ದನ್ನೇ ಅವನಿಗೆ ಹೇಳಿಬಿಡಿ. ನಾನು ಒಂದು ಹೇಳಿ ಅದು ಇನ್ನೊಂದಾಗುವುದು ಬೇಡ. ಆಗದೆ?” ಅವನಾಡಿದ ಮಾತಿನಲ್ಲಿದ್ದ ವಿವೇಕ ನನಗರ್ಥವಾಯಿತು. ಎದ್ದು ಹೊರಗೆ ಬಂದೆ. “ಓ ರಥಕಾರ, ಹೇಗಿದ್ದೀಯ? ನಿನಗೇನೋ ಅಸ್ವಾಸ್ಥ್ಯವೆಂದು ನಿನ್ನ ಮಗ ಹೇಳಿದ. ಏನಾಗಿದೆ?” ಮೂವರು ರಾಜಭಟರ ನೇತಾರನಂತಿದ್ದವನು ಕೇಳಿದ. “ಹೂಂ. ಈಗ ವಿಶ್ರಾಂತಿಯಲ್ಲಿದ್ದೆ. ಏನಾಗಬೇಕು ನನ್ನಿಂದ?” ನನ್ನ ಮಾತಿನ ನೀರಸಭಾವ ಭಟನಾಯಕನನ್ನೂ ತಟ್ಟಿರಬೇಕು. ಮುಖವನ್ನು ಪರಿಶೀಲಿಸುವಂತೆ ನೋಡಿ ಮತ್ತೆ ಹೇಳಿದ, “ರಥಕಾರ, ನನ್ನ ಪರಿಚಯವಾಗಲಿಲ್ಲವೇ?” ಅವನ ಮುಖದಲ್ಲಿ ಈಗ ಮಂದಹಾಸವಿತ್ತು. ನಾನು ಒಂದು ಕ್ಷಣ ಆವನನ್ನು ದೃಷ್ಟಿಸಿದೆ. ಎತ್ತರವಾದ ಆಳು, ದಪ್ಪ ಮೀಸೆ, ಒರಟುತನ ತುಂಬಿದ ಅವಯವಗಳು. ತಲೆಗೂದಲು ಒಂದೊಂದು ಬಿಳಿಯಾಗಿದೆ. ಅವನ ಕಣ್ಣುಗಳಲ್ಲಿ ತುಂಟತನದ ನಗು. “ನಾಯಕ ಕ್ಷಮಿಸಬೇಕು. ನಿನ್ನನ್ನು ನಾನು ನೋಡಿದ ನೆನಪು ಬರುತ್ತಿಲ್ಲ. ನನಗೂ ವಯಸ್ಸಾಯಿತು. ವೃದ್ಧಾಪ್ಯ ಎಲ್ಲವನ್ನೂ ಮರೆಸಿಬಿಡುತ್ತದೆ ಅಲ್ಲವೇ?”
“ನಿಜ ನಿಜ. ಮುದಿತನ ಹಾಗೆಯೇ” ನಾಯಕ ನನ್ನ ಮಾತನ್ನು ಸಮ್ಮತಿಸಿದ. “ಆದರೂ ರಥಕಾರ, ನೀನು ನನ್ನನ್ನು ಇಷ್ಟು ಬೇಗ ಮರೆಯಬಾರದಿತ್ತು. ಕೆಲವು ದಿನಗಳು ನಮಗೆ ಒಡನಾಟವಿತ್ತಲ್ಲ, ಅದನ್ನೂ ಮರೆತೆಯ? ನಾನು ಭದ್ರ. ಆಚಾರ್ಯರ ಚಕ್ರ ರಕ್ಷಕ. ಕೆಲವು ವರ್ಷಗಳ ಹಿಂದೆ ನಿನ್ನ ಮನೆಯಲ್ಲಿ ನಾಲ್ಕಾರು ದಿನ ಉಳಿದಿದ್ದೆ. ನೆನಪಾಯಿತೆ?”
ತತ್ಕ್ಷಣ ನೆನಪಿಗೆ ಬಂತು. ಭದ್ರ…. ಭದ್ರ…. “ಅಯ್ಯೋ ಕ್ಷಮಿಸು ಭದ್ರ. ಅಪರಾಧವಾಯಿತು. ನಿನ್ನನ್ನು ಮರೆಯಬಾರದಿತ್ತು. ಹೇಗಿದ್ದೀಯ? ಈಗಲೂ ಆಚಾರ್ಯರೊಂದಿಗೇ ಇರುವೆಯೇನು? ಇದೇನು ಇಷ್ಟು ಕಾಲದ ಬಳಿಕ ನನ್ನ ಮನೆಯವರೆಗೆ ಬಂದಿದ್ದೀಯ?” ನಾನು ಗುರುತಿಸಿದ್ದು ಭದ್ರನಿಗೆ ಸಮಾಧಾನ ತಂದಿತೆಂದು ಅವನ ಮುಖಭಾವದಿಂದ ನನಗರ್ಥವಾಯಿತು. ಅವನೆಂದ “ನಾನು ಚೆನ್ನಾಗಿದ್ದೇನೆ ರಥಕಾರ, ಒಂದು ಅತ್ಯಗತ್ಯ ಕಾರ್ಯನಿಮಿತ್ತ ನಿನ್ನನ್ನೇ ಕಾಣುವುದಕ್ಕೆ ಬಂದೆ. ಯುದ್ಧ ಸಮೀಪಿಸುತ್ತಿದೆ. ಆಚಾರ್ಯರು ಯುದ್ಧದಲ್ಲಿ ಪಾಲ್ಗೊಳ್ಳಬೇಕಾಗಿ ಬಂದರೆ ಒಂದು ಹೊಸ ರಥ ನಿರ್ಮಿಸಿಕೊಡಬಹುದೆ ಎಂದು ಕೇಳುವುದಕ್ಕೆ ನಾನೀಗ ಬಂದಿರುವುದು. ನಿನಗೆ ನೆನಪಿರಬೇಕು, ಹಿಂದೊಮ್ಮೆ ಆಚಾರ್ಯರಿಗೆ ರಥವೊಂದನ್ನು ನಿರ್ಮಿಸಿಕೊಟ್ಟಿದ್ದೆ. ನಿನ್ನ ಕೌಶಲವನ್ನು ಆಚಾರ್ಯರು ಬಹುವಾಗಿ ಮೆಚ್ಚಿಕೊಂಡಿದ್ದರು. ಆ ರಥವೀಗ ಹಳತಾಗಿದೆ.” “ನಿಜ, ನಾನು ಆಚಾರ್ಯ ಭೀಷ್ಮ ಪಿತಾಮಹರಿಗೆ ಒಂದು ಯುದ್ಧರಥ ನಿರ್ಮಿಸಿ ಕೊಟ್ಟಿದ್ದೆ. ಅವರಿಗೆ ಅನುಕೂಲಿಸುವಂತೆ ಆಸನಕ್ಕೆ ಮೃದು ಹಾಸು, ಬಾಣಪ್ರಯೋಗಕ್ಕೆ ತೊಡಕಾಗದಂತೆ ಸಪೂರ ಕಂಬಗಳು, ಕೆತ್ತನೆಯ ಕುಸುರಿಯ ಧ್ವಜದಂಡ? ಹೀಗೆ ನನ್ನೆಲ್ಲ ಕೌಶಲವನ್ನು ಉಪಯೋಗಿಸಿ ಕೆಲವೇ ದಿನಗಳಲ್ಲಿ ಸುಂದರವಾದ ರಥವೊಂದನ್ನು ಕಟ್ಟಿಕೊಟ್ಟಿದ್ದೆ. ಅದು ಆಚಾರ್ಯರಿಗೆ ಮೆಚ್ಚುಗೆಯಾಗಿತ್ತೆಂದು ಇದೇ ಭದ್ರ ಹೇಳಿದ್ದ. ಆ ಕಾಲದಲ್ಲಿ ನನಗೂ ಭದ್ರನಿಗೂ ಕೊಂಚ ಸಲುಗೆ ಬೆಳೆದಿತ್ತು. ಅವನ ಮಾತನ್ನು ತಳ್ಳಿಹಾಕುವ ಹಾಗಿರಲಿಲ್ಲ. ಅಲ್ಲದೆ ಪಿತಾಮಹರಿಗೆ ರಥ ನಿರ್ಮಿಸಿಕೊಡುವುದು ಯಾವ ರಥಕಾರನಿಗೂ ಪ್ರತಿಷ್ಠೆಯ ವಿಚಾರವಾಗಿತ್ತು. ಆದರೆ…. ನನ್ನ ದುಃಖದ ದಿನಗಳಲ್ಲಿ ಅಂತಹ ಹೊಣೆಯೊಂದನ್ನು ಹೊರಲು ನಾನು ಸಿದ್ಧನಿರಲಿಲ್ಲ. ಮಗ ಗುಹನ ಬದುಕು ನುಚ್ಚು ನೂರಾಗಿರುವ ಹೊತ್ತಿನಲ್ಲಿ ನನಗೆ ಬೇರೇನೂ ಬೇಕಾಗಿರಲಿಲ್ಲ. ನನ್ನ ಸೊಸೆ ಚಿತ್ರಕನ ಮನೆಯಲ್ಲಿ ಕಣ್ಣೀರಿಡುತ್ತಿದ್ದಾಳೆ. ಇಲ್ಲಿ ಗುಹ ಹುಚ್ಚನ ಹಾಗಾಗಿದ್ದಾನೆ. ನಾನೀಗ ಹೊಸ ರಥ ಕಟ್ಟುವುದು ಸಾಧ್ಯವೇ ಇರಲಿಲ್ಲ. ಆದರೆ ಇದನ್ನೆಲ್ಲ ಭದ್ರನಲ್ಲಿ ಹೇಳುವುದು ಹೇಗೆ? ಎಷ್ಟೇ ವಿಶ್ವಾಸ ಪಾತ್ರನಾದರೂ ಅವನು ಅರಮನೆಯ ಜನ. ನಾನು ಹೊರಗಿನವ. ಇದೀಗ ಯುದ್ಧಕಾಲ ಬೇರೆ. ಯಾರ ಸ್ವಭಾವ ಹೇಗೆ ಬದಲಾಗಿದೆಯೋ ಯಾರು ಬಲ್ಲರು? ಚಿತ್ರಕ ಸಾಮಾನ್ಯನಲ್ಲ. ಈಗಾಗಲೇ ತನ್ನ ಕುಕೃತ್ಯಕ್ಕೆ ಧಾರ್ತರಾಷ್ಟ್ರರ ಸಮ್ಮತಿ ಪಡೆದಿರಬಹುದು. ಇಲ್ಲದಿದ್ದಲ್ಲಿ ರಾಜಭಟರ ರಕ್ಷಣೆ ಸಿಗುತ್ತಿತ್ತೇ ಅವನಿಗೆ? ಒಂದು ವೇಳೆ ಭದ್ರ, ಚಿತ್ರಕನ ಸಹಕಾರಿಯಲ್ಲದಿದ್ದರೂ ದುರ್ಯೋಧನಾದಿಗಳನ್ನು ಎದುರಿಸಲು ಶಕ್ತನಲ್ಲವೆಂದು ನಾನು ಭಾವಿಸಿದೆ. ನಾನಂತೂ ಅರಮನೆಯ ಪರಿಸರದ ಹೊಕ್ಕು ಬಳಕೆಯಿದ್ದವನಲ್ಲ. ಅಲ್ಲಿನ ಒಳಸುಳಿಗಳನ್ನು ತಿಳಿಯದೆ ಇವನಲ್ಲಿ ಪ್ರಕರಣವನ್ನು ಹೇಳುವುದರಿಂದ ರಾಜಕುಟುಂಬವನ್ನು ಕೆರಳಿಸಿದಂತಾದರೆ…. ಈಗ ಒದಗಿದ ಸಂಕಟದ ಜತೆ ಮತ್ತಷ್ಟು ಆಪತ್ತನ್ನು ತಂದುಕೊಳ್ಳುವುದು ಬುದ್ಧಿವಂತಿಕೆಯಲ್ಲ. ಆದುದರಿಂದ ಭದ್ರನಲ್ಲಿ ಸತ್ಯವನ್ನು ಮುಚ್ಚಿಡಲು ನಿರ್ಧರಿಸಿದೆ. “ದಯವಿಟ್ಟು ಮನ್ನಿಸು ಭದ್ರ. ನಾನೀಗ ಯಾವ ಕೆಲಸವನ್ನೂ ವಹಿಸಿಕೊಳ್ಳುತ್ತಿಲ್ಲ. ಅದರಲ್ಲೂ ಹೊಸರಥ ಕಟ್ಟುವುದು ಎಷ್ಟು ಶ್ರಮದಾಯಕವೆಂದು ನೀನೂ ಬಲ್ಲೆಯಷ್ಟೆ? ಅಲ್ಲದೆ ನಾನು ಮುದುಕನಾಗಿದ್ದೇನೆ. ಹಿಂದಿನಷ್ಟು ಕೌಶಲವಿಲ್ಲ. ದೈಹಿಕ ಅನಾರೋಗ್ಯ ಬೇರೆ ಕಾಡುತ್ತಿದೆ. ನನ್ನ ಮಕ್ಕಳೂ ಚತುರ ರಥಕಾರರಲ್ಲ. ದುಡಿಯುವುದಕ್ಕೆ ಯೋಗ್ಯ ಸಹಾಯಕರೂ ನನ್ನೊಂದಿಗಿಲ್ಲ. ಇದ್ದವರೂ ಚಿತ್ರಕನ ಕರ್ಮಶಾಲೆಯಲ್ಲಿದ್ದಾರೆ. ಹಾಗಾಗಿ ಇದು ನನ್ನಿಂದಾಗದು. ಆಚಾರ್ಯರು ನನ್ನ ಮೇಲಿಟ್ಟ ವಿಶ್ವಾಸಕ್ಕೆ ಕೃತಜ್ಞ ನಾನು. ಅವರು ಅಸಮಾಧಾನಗೊಳ್ಳದಂತೆ ಇದನ್ನು ನಿವೇದಿಸುವ ಹೊಣೆ ನಿನ್ನದು.”
ನನ್ನ ಮಾತಿಗೆ ಭದ್ರ ಉತ್ತರಿಸಲಿಲ್ಲ. ನನ್ನನ್ನು ಒಮ್ಮೆ ಆಪಾದಮಸ್ತಕ ನಿರುಕಿಸಿದ. “ರಥಕಾರ, ಏನಾಗಿದೆ ನಿನಗೆ? ಒಂದು ರಥ ಕಟ್ಟಲಾರದಷ್ಟು ಮುದುಕನಾದೆಯೇನು? ನಿನ್ನ ಕೌಶಲವನ್ನು ಮೆಚ್ಚಿ ಆಚಾರ್ಯರು ಈ ಹೊಣೆಯನ್ನು ನಿನಗೆ ವಹಿಸಲೆಂದು ನನ್ನನ್ನು ಕಳುಹಿಸಿದ್ದಾರೆಂದರೆ, ನೀನು ಚಿತ್ರಕನ ಹೆಸರು ಸೂಚಿಸುತ್ತಿದ್ದಿ. ದುರ್ಯೋಧನನ ಹಾಗೂ ತಮ್ಮಂದಿರ ರಥಗಳನ್ನು ನಿರ್ಮಿಸುವ ಕೆಲಸ ಚಿತ್ರಕನಿಗೆ ಒಪ್ಪಿಸಲಾಗಿದೆಯೆಂದು ನಾನು ಬಲ್ಲೆ. ಆಚಾರ್ಯರು ತಮ್ಮ ರಥವನ್ನು ಚಿತ್ರಕ ಕಟ್ಟುವುದು ಬೇಡವೆಂದಿದ್ದಾರೆ. ನೀನು ನಿರಾಕರಿಸಿದರೆ ಆಚಾರ್ಯರಿಗೂ ಬೇಸರವಾದೀತು. ಯೋಚನೆ ಮಾಡು.” ನಾನು ಮೌನವಾಗಿದ್ದೆ. ನನ್ನ ಮನಃಸ್ಥಿತಿಯಲ್ಲಿ ನಾನು ಈ ಕೆಲಸ ಒಪ್ಪಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ನನ್ನ ಮಕ್ಕಳೂ ದುಡಿಯುವ ಸ್ಥಿತಿಯಲ್ಲಿಲ್ಲ. ಏನು ಮಾಡಲಿ? ನನಗೆ ಬಹು ಪ್ರಿಯವಾದ ರಥ ನಿರ್ಮಾಣಕಾರ್ಯವನ್ನು ನಿರಾಕರಿಸಬೇಕಾಗಿ ಬಂದುದು ದುಃಖವನ್ನುಂಟು ಮಾಡಿತ್ತು. “ನನ್ನನ್ನು ಕ್ಷಮಿಸು ಭದ್ರ….” ನನಗೆ ಅಷ್ಟನ್ನು ಮಾತ್ರ ಹೇಳಲು ಸಾಧ್ಯವಾಯಿತು. ಅವನ ಮುಖವನ್ನು ನೋಡುವುದೂ ನನಗೆ ಶಕ್ಯವಿರಲಿಲ್ಲ. ಕಣ್ಣಿನಿಂದ ಕಂಬನಿ ಚಿಮ್ಮುವ ಮುನ್ನವೇ ನಾನು ಮನೆಯೊಳಗೆ ಧಾವಿಸಿದೆ. ಒಬ್ಬ ಕುಶಲ ರಥಕಾರನಾಗಿ ನಾನು ಹೀಗೆ ಮಾಡಬಾರದಿತ್ತು, ನಿಜ. ಆದರೆ? ಹೊರಗೆ ಸಣ್ಣ ದನಿಯಲ್ಲಿ ಚನ್ನನೊಂದಿಗೆ ಭದ್ರ ಏನೋ ಮಾತನಾಡುವುದು ಕೇಳುತ್ತಿತ್ತು. ಸ್ವಲ್ಪ ಹೊತ್ತಿನ ಬಳಿಕ ಕುದುರೆಗಳ ಖುರಪುಟದ ಸದ್ದು. ಕ್ರಮೇಣ ಅದೂ ಕ್ಷೀಣವಾಗಿ ನಿಂತುಹೋಯಿತು. ಒಳಗಿನ ಕೋಣೆಯಲ್ಲಿ ಹೆಂಗಸರ ಬಿಕ್ಕಳಿಕೆಯ ದನಿ. ಗುಹನ ನಿಟ್ಟುಸಿರು. ನನ್ನೊಳಗೆ ತಳಮಳ. ಎಷ್ಟೋ ಹೊತ್ತು ಸರಿಯಿತು. ಭದ್ರನ ಬೇಡಿಕೆಯನ್ನು ನಿರಾಕರಿಸಿ ತಪ್ಪು ಮಾಡಿದೆನೆ ನಾನು? ಆಚಾರ್ಯರಿಗೆ ಇದು ಅಪಚಾರವಾಗಿ ಕಾಣಿಸೀತೆ? ಇದರ ಪರಿಣಾಮ ಏನಾದೀತು? ಹತ್ತಾರು ಪ್ರಶ್ನೆಗಳು ಮನಸ್ಸನ್ನು ಮುತ್ತಿದವು. ಎಷ್ಟು ಚಿಂತಿಸಿದರೂ ಉತ್ತರ ಮಾತ್ರ ಶೂನ್ಯವೇ. ಮತ್ತೆ ಮತ್ತೆ ನಿಟ್ಟುಸಿರು ಬಿಡುತ್ತ ಬಿದ್ದುಕೊಂಡಿದ್ದೆ. ಚಿತ್ರಕನ ಸೆರೆಯಲ್ಲಿರುವ ಸೊಸೆಯ ನೆನಪಾದೊಡನೆ ಕಣ್ಣುಕತ್ತಲಾದಂತೆ ಭಾಸವಾಗುತ್ತಿತ್ತು. ಇಷ್ಟು ಎಳೆಯ ವಯಸ್ಸಿಗೆ ಎಂತಹ ಕಷ್ಟವನ್ನು ಉಣ್ಣಬೇಕಾಗಿ ಬಂತು. ನನ್ನಂತಹ ಪಾಪಿಯ ಮಗನನ್ನು ಮದುವೆಯಾಗದಿರುತ್ತಿದ್ದರೆ ಬೇರೆಲ್ಲಾದರೂ ಸುಖವಾಗಿರುತ್ತಿದ್ದಳೇನೊ. ಅಯ್ಯೋ ವಿಧಿಯೇ! ಅಷ್ಟರಲ್ಲಿ ಚನ್ನ ಮೆಲುದನಿಯಿಂದ ನನ್ನನ್ನು ಕರೆದ, ನಾನು ಕಣ್ಣುತೆರೆದೆ. “ಅಪ್ಪಾ, ಭಟನಾಯಕನಿಗೆ ನಾವು ಏನೋ ಮುಚ್ಚಿಟ್ಟಿದ್ದೇವೆಂಬ ಸಂಶಯ ಬಂದ ಹಾಗಿದೆ. ನನ್ನನ್ನು ಪರಿಪರಿಯಾಗಿ ಪ್ರಶ್ನಿಸಿದ. ನಿಮ್ಮ ಅನುಮತಿಯಿಲ್ಲವಾದ್ದರಿಂದ ನಾನು ಏನೂ ಹೇಳಲಿಲ್ಲ. ತಂದೆಯವರ ಆರೋಗ್ಯ ಹದಗೆಟ್ಟಿದೆಯೆಂದು ಮಾತ್ರ ಹೇಳಿದೆ. ನಂಬಿದ ಹಾಗಿಲ್ಲ ಅವನು. ಆದರೆ ತೋರಿಸಿಕೊಳ್ಳಲಿಲ್ಲ; ನಂಬಿದಂತೆ ನಟಿಸಿದ.” ಕೊಂಚಕಾಲ ತಡೆದು, ಚನ್ನ ಮತ್ತೆ ಹೇಳಿದ, “ಭಟನಾಯಕ ಇಲ್ಲಿಂದ ಹೊರಟವನು ಕೇರಿಯ ಬೇರೆ ಮನೆಗಳಲ್ಲಿ ಏನೋ ವಿಚಾರಿಸುತ್ತಿದ್ದ ಹಾಗಿತ್ತು. ಯಾರಾದರೂ ಈ ಪ್ರಕರಣವನ್ನು ಅವನಿಗೆ ಖಂಡಿತ ತಿಳಿಸುತ್ತಾರೆ. ಮುಂದೇನಾಗುವುದೋ” ಚನ್ನನ ಮಾತಿನಲ್ಲಿ ಭಯ ಒಡೆದು ಕಾಣುತ್ತಿತ್ತು. “ನಾವೇನು ಮಾಡುವುದಕ್ಕೆ ಬಂದೀತು ಮಗು ಈಗ? ನಮ್ಮ ಹಣೆಯ ಬರಹವಿದ್ದಂತಾಗುತ್ತದೆ. ಈ ಕಡೆ ಹುಲಿ, ಆ ಕಡೆ ತೋಳ ಎಂಬಂತಾಯಿತು ನಮ್ಮ ಅವಸ್ಥೆ. ಇಂತಹ ಹೀನಾಯವಾದ ಬದುಕಿಗಿಂತ ಸಾಯುವುದೇ ಒಳ್ಳೆಯದೆಂದು ತೋರುತ್ತದೆ ನನಗೆ” ನನ್ನಲ್ಲಿ ನಿಜಕ್ಕೂ ಹತಾಶಭಾವ ಕಾಣಿಸತೊಡಗಿತ್ತು. ಹಠಾತ್ತನೆ ಒಳಗೆ ಬಂದ ಗುಹ ಆರ್ಭಟಿಸಿದ, “ನಿಜ ಅಪ್ಪಾ, ಸಾಯೋಣ. ಎಲ್ಲರೂ ಒಟ್ಟಿಗೇ ಸಾಯೋಣ. ಆದರೆ ಅದಕ್ಕೆ ಮೊದಲು ನಾನು ಆ ಚಿತ್ರಕನನ್ನೂ, ಅವನ ಮಕ್ಕಳನ್ನೂ ಕತ್ತರಿಸಿ ಹಾಕಬೇಕು. ಆಗಲೇ ನನಗೆ ನೆಮ್ಮದಿ.” ನಾನು ಸಾಂತ್ವನಕ್ಕೆಂಬಂತೆ ಗುಹನ ಬೆನ್ನು ತಡವಿದೆ. ದಾರಿಗಾಣದ ತಬ್ಬಲಿಗಳಂತೆ ನಾವು ನಿಂತೇ ಇದ್ದೆವು, ಬಹಳ ಹೊತ್ತು. ಆಗ ಕೇಳಿಸಿತು ಖುರಪುಟದ ಸದ್ದು. ಇದೇನೆಂದು ಗಲಿಬಿಲಿಗೊಂಡು ಮೂವರೂ ಹೊರಬಂದರೆ, ಭಟನಾಯಕ ಭದ್ರ! ತನ್ನ ಸಹಚರರೊಂದಿಗೆ ಮತ್ತೆ ಬಂದಿದ್ದ. ನನ್ನನ್ನು ಕಾಣುತ್ತಿದ್ದಂತೆಯೇ ಅಂಗಳದಿಂದಲೇ ದೊಡ್ಡದನಿಯಲ್ಲಿ ಕೂಗಿದ, “ರಥಕಾರ, ಏನೋ ಇದು? ನಿನಗೆ ಅಸ್ವಾಸ್ಥ್ಯವೆಂದು ಸುಳ್ಳು ಹೇಳಿದೆಯಲ್ಲವೆ? ನಿನ್ನ ಕೇರಿಯ ಮಂದಿಯನ್ನು ವಿಚಾರಿಸಿದೆ. ಬೇರೇನೋ ಇರಬೇಕೆಂದು ನನಗೆ ಆಗಲೇ ಸಂಶಯ ಬಂದಿತ್ತು. ಅದೀಗ ನಿಜವಾಯಿತು. ನಿನ್ನ ಸೊಸೆಯನ್ನು ಚಿತ್ರಕ ಅಪಹರಿಸಿದ್ದಾನಂತೆ. ಅವನ ಕುಟುಂಬದ್ರೋಹಕ್ಕೆ ಧೃತರಾಷ್ಟ್ರಪುತ್ರರ ಒತ್ತಾಸೆಯಂತೆ. ನಿಜವೇನು? ಹಸ್ತಿನಾಪುರದಲ್ಲಿ ನ್ಯಾಯ ಸತ್ತಿದೆಯೆಂದು ಭಾವಿಸಿದೆಯಾ? ಇದನ್ನು ಕೇಳಿ ನಾನಾದರೂ ಸಹಿಸಿಕೊಳ್ಳುವವನೆಂದು ತಿಳಿದೆಯೇನು? ನನ್ನೊಂದಿಗೆ ಬಾ. ನಿನ್ನ ಮಕ್ಕಳೂ ಬರಲಿ. ಚಿತ್ರಕ ಏನು ಮಾಡುತ್ತಾನೆಂದು ನೋಡಬೇಕಿದೆ ನನಗೆ. ಹೂಂ. ಹೊರಡಿ” ಉರಿಯುಗುಳುತ್ತಿದ್ದ ಭದ್ರನ ಮಾತುಕೇಳಿ ಮಕ್ಕಳಿಬ್ಬರ ಮುಖದಲ್ಲಿ ಕೊಂಚ ಗೆಲವು ಕಾಣಿಸಿತು. “ಅದು ಹಾಗಲ್ಲ ಭದ್ರ….” ನಾನು ಏನೋ ಹೇಳ ಹೊರಟವನನ್ನು ಭದ್ರ ಕೈಯೆತ್ತಿ ತಡೆದ. “ಸಾಕು. ಏನೂ ಹೇಳಬೇಡ. ಅನ್ಯಾಯವನ್ನು ಸಹಿಸುವುದೂ ಇನ್ನೊಂದು ಅನ್ಯಾಯವನ್ನೆಸಗಿದಂತೆ. ಇದು ನನ್ನ ಆಜ್ಞೆ. ಈಗ ನನ್ನೊಂದಿಗೆ ಬರುತ್ತೀರೋ ಇಲ್ಲವೋ?” ಅವನ ಮಾತು ಮುಗಿಯುವಷ್ಟರಲ್ಲಿ ಗುಹ ಹಾಗೂ ಚನ್ನ ಅಂಗಳಕ್ಕಿಳಿದಿದ್ದರು. ನಿರುಪಾಯನಾಗಿ ನಾನೂ ಅವರೊಂದಿಗೆ ಹೊರಟೆ. ಕೇರಿಯ ಕೆಲವರು ನಮಗೆ ಜತೆಯಾದರು. ಎಲ್ಲರೂ ಚಿತ್ರಕನ ಮನೆಯತ್ತ ಸಾಗಿದೆವು. (…..ಮುಂದುವರಿಯುವುದು) .
ರಥಕಾರ
Month : May-2015 Episode : ರಥಕಾರ 2 Author : ರಾಧಾಕೃಷ್ಣ ಕಲ್ಚಾರ್