ಇದೊಂದು ಹಳೆಯ ಗಾದೆ. ಚಾಡಿ ಮಾತುಗಳಿಂದ ನಾವು ಪ್ರಭಾವಿತರಾಗಬಾರದು ಎಂಬ ಎಚ್ಚರಿಕೆಯ ಸೂಚನೆ ಬಿಟ್ಟರೆ ಈ ಗಾದೆಯಲ್ಲಿ ಹೆಚ್ಚಿನ ಸ್ವಾರಸ್ಯವಿಲ್ಲ. ‘ಚಾಡಿ’ ಮತ್ತು ‘ಚಾವಡಿ’ ಪದಗಳ ಅನುಪ್ರಾಸ ಬಿಟ್ಟರೆ ಗಾದೆಯ ರಚನೆಯಲ್ಲೂ ಹೆಚ್ಚಿನ ಚಮತ್ಕಾರವಿಲ್ಲ. ಬೇರೆ ಗಾದೆಗಳಿಗೆ ಹೋಲಿಸಿದರೆ ಇದು ಬೋಳುಬೋಳಾಗಿ ಕಾಣುತ್ತದೆ.
‘ಚಾವಡಿ’ ಎಂದರೆ ಹಳ್ಳಿಯ ಹಿರಿಯರು ಒಂದು ಕಡೆ ಸೇರುವ ಜಗಲಿ. ಅದು ಗ್ರಾಮ ಕಚೇರಿಯಾಗಬಹುದು ಅಥವಾ ಗ್ರ್ರಾಮದ ಮುಖ್ಯ ಅರಳೀಮರದ ಕಟ್ಟೆಯಾಗಬಹುದು. ಇದು ಸಂತೋಷ ಸಮಾರಂಭದ ಸ್ಥಳವಲ್ಲ. ಹಳ್ಳಿಯ ಸಮಸ್ಯೆಗಳ ಚರ್ಚೆ ಮತ್ತು ತೀರ್ಮಾನವಾಗುವ ಸ್ಥಳ. ವೈಯಕ್ತಿಕ ಲೋಪದೋಷಗಳಿಂದ ಸಮಾಜಕ್ಕೆ, ಸಮಾಜದ ಧರ್ಮಕ್ಕೆ ಧಕ್ಕೆ ಬರುವಂತಹ ಸಂದರ್ಭ ಬಂದಾಗ, ಸಂಬಂಧಪಟ್ಟ ವ್ಯಕ್ತಿಗಳನ್ನು ಕರೆಸಿ ಬಹಿರಂಗವಾಗಿ ವಿಚಾರಣೆ ಮಾಡಿ ತಪ್ಪಿತಸ್ಥರಿಗೆ ಹಿರಿಯರ ಸಮ್ಮತದ ಪ್ರಕಾರ ಶಿಕ್ಷೆ ವಿಧಿಸಲಾಗುತ್ತಿತ್ತು. ಇದನ್ನು ಯಾರೂ ವಿರೋಧಿಸುತ್ತಿರಲಿಲ್ಲ. ಇದು ನ್ಯಾಯ ಎಂದು ಎಲ್ಲರೂ ಒಪ್ಪಿಕೊಂಡು ಕೇಸು ಬೇಗ ಖುಲಾಸೆಯಾಗಿ ಬಿಡುತ್ತಿತ್ತು. ಇಲ್ಲಿಗೆ ಬರುವ ಸಮಸ್ಯೆಗಳು ಹೆಚ್ಚಾಗಿ ಕಳ್ಳತನಕ್ಕೆ ಅಥವಾ ಹೆಣ್ಣು-ಗಂಡಿನ ಅನೈತಿಕ ಸಂಬಂಧಕ್ಕೆ ಸೇರಿದವಾಗಿರುತ್ತಿದ್ದುವು. ಇದನ್ನು ನಾನು ಕಣ್ಣಾರೆ ಕಾಣದಿದ್ದರೂ ಕೆಲವೊಂದು ಸಿನಿಮಾಗಳಲ್ಲಿ ನೋಡಿರುವ ಸಾಧ್ಯತೆ ಇದೆ.
ಆಧುನಿಕತೆಯ ಪರಿಣಾಮದಿಂದಾಗಿ ಚಾವಡಿಗಳು ಮಾಯವಾಗಿ ಅವುಗಳ ಜಾಗದಲ್ಲಿ ಪೆಲೀಸ್ ಠಾಣೆಗಳು, ಕೋರ್ಟು ಕಚೇರಿಗಳು ಬಂದಿವೆ. ವಕೀಲರ ನ್ಯಾಯಾಧೀಶರ ಮರ್ಜಿಗೆ ನಾವು ಒಳಗಾಗಿದ್ದೇವೆ. ಸತ್ಯಕ್ಕಿಂತ ವಾದ ಪ್ರತಿವಾದದಲ್ಲಿನ ಚಾಣಾಕ್ಷತೆಗೆ ಇಲ್ಲಿ ಜಯ ಲಭಿಸುತ್ತದೆ. ಸಾಕ್ಷ್ಯಾಧಾರಗಳು ಸರಿಯಿಲ್ಲ ಎಂದು ನಿಜವಾದ ತಪ್ಪಿತಸ್ಥ ಶಿಕ್ಷೆಯಿಂದ ಪಾರಾಗುವ ಸಾಧ್ಯತೆಗಳಿವೆ. ಇದಕ್ಕಿಂತ ಹೆಚ್ಚಾಗಿ ವಿಚಾರಣೆಗಳನ್ನು ಮುಂದೂಡುವ ಕೋರ್ಟುಗಳ ಕೆಟ್ಟಚಾಳಿಯಿಂದಾಗಿ ತೀಪ ಹೊರಬರಲು ವರ್ಷಗಟ್ಟಲೆ ವಿಳಂಬವಾಗುತ್ತಿದೆ. ಸಕಾಲದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗದಿದ್ದರೆ ಇದ್ಯಾವ ರೀತಿ ನ್ಯಾಯ? ದುಡ್ಡಿದ್ದವನು ಬೇಯ್ಲು (ಜಾಮೀನು), ಈ ಕೋರ್ಟು, ಆ ಕೋರ್ಟು, ಹೈಕೋರ್ಟು, ಸುಪ್ರೀಂ ಕೋರ್ಟು ಎಂದು ಆಟವಾಡುತ್ತಾ ಶಿಕ್ಷೆಗೆ ಒಳಗಾಗದಿರುವ ಸಾಧ್ಯತೆಗಳು ಹೆಚ್ಚಾಗಿವೆ. ಸಾಧಕಕ್ಕಿಂತ ಬಾಧಕತೆವೇ ಹೆಚ್ಚಾಗಿ ಚಾವಡಿ ಪದ್ಧತಿ ಹೋಯಿತು. ಇವತ್ತಿನ ನ್ಯಾಯಾಲಯಗಳು ಹೋಗುತ್ತಿರುವ ದಿಕ್ಕನ್ನು ನೋಡಿದರೆ, ಬೇರೊಂದು ರೀತಿಯ ನ್ಯಾಯವ್ಯವಸ್ಥೆ ರೂಪಿಸಿಕೊಳ್ಳಬೇಕಾದ ಜರೂರತ್ತು ನಮಗೆ ಕಂಡು ಬರುತ್ತದೆ!
ಈಗ ನಾವು ಚಾಡಿಗೆ ಬರೋಣ. ಬೇರೆಯವರ ಬಳಿ ಹೋಗಿ, ನಮಗೆ ಆಗದೆ ಇರುವವನ ಮೇಲೆ ಅಲ್ಲಸಲ್ಲದ ಆರೋಪಗಳನ್ನು ಹೊರಿಸಿ, ಕುಹಕತನದಿಂದ, ಅವನ ಮೇಲಿರುವ ಒಳೆಯ ಅಭಿಪ್ರಾಯವನ್ನು ಹಾಳುಮಾಡಲು ನಾವು ಪ್ರಯತ್ನಿಸಿದರೆ ಅವು ಚಾಡಿಮಾತುಗಳು ಎಂದೆನಿಸಿಕೊಳ್ಳುತ್ತವೆ. ಬಾಲ್ಯದಲ್ಲಿ ಚಾಡಿ ಹೇಳುವುದು ಒಂದು ಹುಡುಗಾಟ. ಶಾಲೆಯಲ್ಲಿ ಮಕ್ಕಳು ಶಿಕ್ಷಕರ ಮುಂದೆ ಹೋಗಿ ಚಾಡಿ ಹೇಳುವುದು ಸರ್ವೇಸಾಧಾರಣ. ಒಳ್ಳೆಯ ಶಿಕ್ಷಕರು ಚಾಡಿಮಾತುಗಳಿಂದ ಪ್ರಭಾವಿತರಾಗುವುದಿಲ್ಲ. ಚಾಡಿ ಹೇಳಿದವನಿಗೇ ಹೆದರಿಸಿ ಹಾಗೆಲ್ಲ ಚಾಡಿ ಹೇಳಬಾರದು ಎಂದು ಬೋಧಿಸುತ್ತಾರೆ. ಶಾಲೆಯಲ್ಲಿ ಮಾತ್ರವಲ್ಲ ಮನೆಯಲ್ಲಿ ಚಾಡಿಯ ಹಾವಳಿ ಕಾಣಿಸಿಕೊಳ್ಳಬಹುದು. ಅತ್ತೆ ಸೊಸೆಯ ಮೇಲಿನ ಚಾಡಿ ತನ್ನ ಮಗನ ಮುಂದೆ ಹೇಳಿಕೊಳ್ಳಬಹುದು. ಸೊಸೆ ಅತ್ತೆ ಮೇಲಿನ ಚಾಡಿ ಗಂಡನ ಬಳಿ ಹೇಳಿಕೊಳ್ಳಬಹುದು. ಇದರಿಂದ ಮನೆಯ ವಾತಾವರಣ ಹದಗೆಡುತ್ತದೆ. ಚಾಡಿಯಿಂದಾಗಿ ನಾವು ಕೆಲಸ ಮಾಡುವ ಆಫೀಸಿನ ವಾತಾವರಣ ಕೆಡಬಹುದು.
ಹಾಗಾಗಿ ಚಾಡಿ ಕೇವಲ ಚಾವಡಿಗೆ ಮಾತ್ರ ಅನ್ವಯಿಸುವಂತಹ ಮಾತು ಇಲ್ಲಿಲ್ಲ. `ಚಾವಡಿ’ಯು ನಾಲ್ಕು ಜನ ಸೇರಿರುವ ಎಲ್ಲಾ ಸಂಸ್ಥೆಗಳಿಗೂ ಅನ್ವಯವಾಗುತ್ತದೆ ಎನ್ನುವುದನ್ನು ನಾವು ಗಮನಿಸಬೇಕು.