ಎತ್ತು ಮತ್ತು ಕೋಣ ವ್ಯವಸಾಯಕ್ಕೆ ಮತ್ತು ಸಾಗಾಟಕ್ಕೆ ತುಂಬ ಉಪಯುಕ್ತ ಪ್ರಾಣಿಗಳಾಗಿದ್ದುವು. ಈಗ ಯಂತ್ರಗಳು ಬಂದಿರುವುದರಿಂದ ಇವುಗಳ ಬಳಕೆ ಕಡಮೆಯಾಗಿದೆ. ಇವುಗಳ ಪ್ರಾಮುಖ್ಯತೆಯೂ ಕಡಮೆಯಾಗಿದೆ.
ಎತ್ತುಗಳನ್ನು ಚೆನ್ನಾಗಿ ಸಾಕುವುದು, ಬೆಳೆಸುವುದು, ಹಬ್ಬಹರಿದಿನಗಳಲ್ಲಿ ಪಜಿಸುವುದು ರೈತರಿಗೆ ಹೆಮ್ಮೆಯ ವಿಷಯವಾಗಿತ್ತು. ಜಾತ್ರೆಯ ಸಮಯದಲ್ಲಿ ಇವುಗಳ ಮೇಳ ಇರುತ್ತಿತ್ತು. ಇವುಗಳ ಮಾರಾಟವಾಗುತ್ತಿತ್ತು. ಮಾರಾಟದ ಸಮಯದಲ್ಲಿ ಬೆಲೆ ಗುಟ್ಟಾಗಿಡಲು ಮಾರವವರು ಮತ್ತು ಕೊಳ್ಳುವವರು ತಮ್ಮ ಕೈಬೆರಳುಗಳನ್ನು ತಾವು ಉಟ್ಟ ಪಂಚೆಯಲ್ಲಿ ಸಾಂಕೇತಿಕವಾಗಿ ಬಳಸುತ್ತಿದ್ದರು. ಇದರಲ್ಲಿ ಗೂಢಾರ್ಥವಿದ್ದಿರಬಹುದು. ಪ್ರಾಣಿಗಳ ಮಾರಾಟ ಪದಾರ್ಥಗಳ ಮಾರಾಟದ ಮಟ್ಟಕ್ಕೆ ಇಳಿಸಬಾರದು; ಅವು ಅಮೂಲ್ಯ ಹಾಗೂ ಪಜ್ಯ ಎಂಬ ಇಂಗಿತ ಇತ್ತೇನೋ.
ಕೋಣಗಳ ಮಾರಾಟಕ್ಕೆ ಇಷ್ಟೊಂದು ಪ್ರಾಧಾನ್ಯತೆ ಇದ್ದಿರಲಿಲ್ಲ. ಇವುಗಳನ್ನು ರೈತರು ಬಳಸುತ್ತಿದ್ದುದು ಕಡಮೆಯೇ. ಕಬ್ಬಿನಗಾಣದಲ್ಲಿ ಇವುಗಳನ್ನು ಹೆಚ್ಚಾಗಿ ಕಾಣಬಹುದಿತ್ತು. ಹೆಚ್ಚು ಪ್ರಯಾಸವಿಲ್ಲದೆ ಇವು ಕಬ್ಬಿಂದ ರಸ ಹಿಂಡುವ ಯಂತ್ರದ ಚಾಲನೆಗಾಗಿ ಸುತ್ತಿದ ಜಾಗದಲ್ಲೇ ಸುತ್ತಬಹುದಿತ್ತು. ಬಂಡಿ ಎಳೆಯಲು ಕೋಣಗಳನ್ನು ಬಳಸುತ್ತಿದ್ದುದು ತೀರಾ ವಿರಳ. ಅಂಥ ಬಂಡಿಯಲ್ಲಿ ಕುಳಿತು ಪ್ರಯಾಣ ಮಾಡುವುದು ಅಗೌರವ ಎಂದು ಜನರು ಭಾವಿಸುತ್ತಿದ್ದಿರಬಹುದು.
ಎತ್ತು ಮತ್ತು ಕೋಣ ಇವುಗಳ ನಡುವೆ ಅಷ್ಟೇಕೆ ತಾರತಮ್ಯ ಎಂಬುದನ್ನು ಸ್ವಲ್ಪ ಪರಿಶೀಲಿಸಿ ನೋಡೋಣ. ಎತ್ತು ಬೆಳ್ಳಗಿರುತ್ತದೆ, ಕೋಣ ಕಪ್ಪಗಿರುತ್ತದೆ. ಬೆಳ್ಳಗಿರುವುದು ಮೇಲು, ಕಪ್ಪಗಿರುವುದು ಕೀಳು ಎಂಬ ಮನೋಭಾವನೆ ಮೊದಲಿಂದ ಬಂದಿದೆ. ಅದಕ್ಕಿಂತ ಮುಖ್ಯವಾದುದು ಕೋಣನ ಗುಣ. ಅದು ಚೆನ್ನಾಗಿ ಉಂಡು ತಿಂದು ಮೈ ಬೆಳೆಸಿಕೊಳ್ಳುತ್ತದೆ. ಆದರೆ ಅದು ತುಂಬಾ ಸೋಮಾರಿ. ಭೋಗಪ್ರಿಯ ಪ್ರಾಣಿ. ತಾಸುಗಟ್ಟಲೆ ಆದರೂ ನೀರಲ್ಲಿ ಬಿದ್ದುಕೊಂಡು ಇರುತ್ತದೆ. ಕೊಚ್ಚೆ ನೀರು ಸಿಕ್ಕರಂತೂ ಅದಕ್ಕೆ ಪಂಚಪ್ರಾಣ. ಹೀಗಾಗಿ ಇದು ಸೋಮಾರಿತನಕ್ಕೆ, ನಿಷ್ಪ್ರಯೋಜತೆಗೆ ಸಾಂಕೇತಿಕವಾಗಿದೆ. ಅಭ್ಯಾಸದಲ್ಲಿ ತೀರಾ ಹಿಂದೆ ಬೀಳುವ ಶಾಲಾ ಬಾಲಕನನ್ನು ಮೇಷ್ಟ್ರು, ಕೋಣನ ಹಾಗೆ ಬೆಳೆದಿದ್ದೀಯ ಅಷ್ಟೆ, ಎಂದು ಹೀಯಾಳಿಸುತ್ತಿದ್ದುದನ್ನು ನಾವು ಕೇಳಿದ್ದೇವೆ. ಕೋಣ ಬಣ್ಣದಲ್ಲಿ ಮಾತ್ರವಲ್ಲ ಗುಣದಲ್ಲಿ ಕೂಡಾ ಎತ್ತಿಗಿಂತ ಕೀಳು ಎಂಬುದು ಸ್ಥಾಪಿತವಾಗಿಬಿಟ್ಟಿದೆ.
ಎತ್ತು ಕೋಣನಂತಲ್ಲ. ಅದಕ್ಕೆ ಹುರುಪ ಜಾಸ್ತಿ. ಜೋರಾಗಿ ಓಡಬಲ್ಲದು, ಸರಾಗವಾಗಿ ಗುಡ್ಡ ಏರಬಲ್ಲದು. ಇಂಥ ಎತ್ತನ್ನು ನೊಗದ ಒಂದು ಕಡೆ ಕಟ್ಟಿ, ಇನ್ನೊಂದು ಕಡೆ ಕೋಣನನ್ನು ಕಟ್ಟಿದರೆ ಅಂಥ ಬಂಡಿಯ ಗತಿ ಏನಾದೀತು ಎಂಬ ಚಿತ್ರಣ ಈ ಗಾದೆಯಲ್ಲಿದೆ. ಕ್ರಿಯಾಶೀಲತ್ವ ಉಳ್ಳವನು, ಹಗುರ ಪ್ರವೃತ್ತಿಯುಳ್ಳವನ ಜೊತೆಗೂಡಿ ಕಾರ್ಯಸಾಧಿಸಲು ಹೊರಟರೆ ಕಾರ್ಯಭಂಗವಾಗುವುದರಲ್ಲಿ ಸಂಶಯವಿಲ್ಲ ಎಂಬುದನ್ನು ಈ ಗಾದೆ ಒತ್ತಿ ಹೇಳುತ್ತದೆ. ಪಾರ್ಟ್ನರ್ಷಿಪ್ಗೆ ಸಂಬಂಧಪಟ್ಟ ಈ ಗಾದೆಯ ಸೂತ್ರವನ್ನು ಎಲ್ಲಾ ಬಗೆಯ ತಾಳಮೇಳವಿಲ್ಲದ ಸಂಬಂಧ, ಸ್ನೇಹ, ಮದುವೆ, ಸಂಘಟನೆಗಳಿಗೂ ಅನ್ವಯಿಸಬಹುದು. ಹೆಣ್ಣಿಗೆ ಗಂಡು ಹುಡುಕುವಾಗ ಇಬ್ಬರ ಜಾತಕದ ಮೇಳಾಮೇಳಿ ಹೇಗಿದೆ ಎಂಬುದನ್ನು ಜ್ಯೋತಿಷಿಗೆ ತೋರಿಸಿ ತಿಳಿದುಕೊಳ್ಳುವ ಕ್ರಮ ನಮ್ಮಲ್ಲಿತ್ತು. ಅದು ಬಾಲ್ಯವಿವಾಹದ ಕಾಲದಿಂದ ಬಂದದ್ದು. ಈಗ ಮದುವೆಯಾಗುವವರು ಪ್ರಬುದ್ಧರಾಗಿರುತ್ತಾರೆ, ಒಬ್ಬರನ್ನೊಬ್ಬರು ಕಂಡು ಮಾತನಾಡಿಸಿ ತಮ್ಮಲ್ಲಿ ಸಮಾನಗುಣಗಳಿವೆಯೇ ಎಂಬುದನ್ನು ಪರಿಶೀಲಿಸಿ ಅನಂತರ ಮದುವೆಯಾಗುತ್ತಾರೆ.
ಇವತ್ತಿನ ಪ್ರಜಾಪ್ರಭುತ್ವದ ಕಾಲದಲ್ಲಿ, ಚುನಾವಣೆಯ ಅನಂತರ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕದಿದ್ದಾಗ, ಎರಡು ಪಕ್ಷಗಳು ಒಂದಾಗಿ ಅಧಿಕಾರಕ್ಕೆ ಬರುವ ಪ್ರಸಂಗ ಬರುತ್ತದೆ. ಜೋಡಿ ಸರಿಯಿಲ್ಲದೆ ಸರ್ಕಾರ ತನ್ನ ಪರ್ತಿ ಅವಧಿ ಮುಗಿಯುವುದರೊಳಗೇ ಬಿದ್ದುಹೋಗುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಹಾಗಾಗಿ ಎತ್ತು, ಕೋಣಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡರೂ ಇವೆರಡೂ ಭಿನ್ನಗುಣಗಳ ಹಾಗೂ ಜೋಡಿಯಾಗಲು ಅರ್ಹರಲ್ಲದವರ ಸಜೀವ ಸಂಕೇತಗಳಾಗಿ ಈ ಗಾದೆಯಲ್ಲಿ ಸಂಭ್ರಮಿಸುತ್ತವೆ.?