ಕಡಲೆ ಒಂದು ಗಟ್ಟಿಯಾದ ದ್ವಿದಳ ಧಾನ್ಯ. ಅದನ್ನು ತಿನ್ನಲು ಹಲ್ಲುಗಳು ಚೆನ್ನಾಗಿರಬೇಕು. ಇಲ್ಲದಿದ್ದರೆ ತಿನ್ನುವುದು ಕಷ್ಟ; ಜೀರ್ಣಿಸಿಕೊಳ್ಳುವುದೂ ಕಷ್ಟ. ತಿನ್ನುವ ಹಪಾಪಿತನ ನಮಗಿರುವುದು ಬಾಲ್ಯದಲ್ಲಿ. ಎರಡು ಹೊತ್ತು ಊಟ ಸಿಕ್ಕರೆ ಸಾಲದು. ಏನಾದರೂ ತಿನ್ನಬೇಕೆಂದಾಗ ಹಿಂದಿನ ಕಾಲದಲ್ಲಿ ಸುಲಭವಾಗಿ ಸಿಗುತ್ತಿದ್ದುದು ಕಡಲೆ. ಅದು ಹುರಿಗಡಲೆ ಆಗಿರಬಹುದು ಅಥವಾ ನೆಲಗಡಲೆಯಾಗಿರಬಹುದು. ಹಿರಿಯರು ಸಂತೆಗೆ ಹೋದಾಗ ಮಕ್ಕಳಿಗಾಗಿ ತಾವು ಉಟ್ಟ ಪಂಚೆಯ ಅಂಚಿನಲ್ಲಿ ಕಡಲೆ ಕಟ್ಟಿಕೊಂಡು ಹಿಂತಿರುಗುತ್ತಿದ್ದರು. ಮಕ್ಕಳು ಕುಣಿದಾಡಿ ತಿನ್ನುತ್ತಿದ್ದರು. ಮನೆಯಲ್ಲಿರುವ ವೃದ್ಧರಿಗೆ ಈ ಕಡಲೆ ತಿನ್ನುವ ಸೌಲಭ್ಯ ಇರುತ್ತಿರಲಿಲ್ಲ. ಕಡಲೆ ತಿನ್ನಲು ಗಟ್ಟಿಯಾದ ಹಲ್ಲಿದ್ದರೂ ಬಡಮಕ್ಕಳಿಗೆ ಬಾಯಿಚಪಲ ತೀರಿಸಿ ಕೊಳ್ಳಲು ಕಡಲೆ ಸಿಗುವುದಿಲ್ಲ. ಎರಡು ಹೊತ್ತು ಗಂಜಿ ಉಣ್ಣಲು ಸಿಕ್ಕರೆ ಅವರಿಗೆ ಸಾಕು, ಎನ್ನುವಂತಾಗುತ್ತದೆ.
ಭಾಗ್ಯ ಎಲ್ಲರಿಗೂ ಒಂದೇ ಸಮನಾಗಿರುವುದಿಲ್ಲ. ಒಂದು ಇದ್ದರೆ ಇನ್ನೊಂದು ಇರುವುದಿಲ್ಲ ಎನ್ನುವುದಕ್ಕೆ ಕಡಲೆಯ ಭಾಗ್ಯ ಹಾಗೂ ಹಲ್ಲಿನ ಭಾಗ್ಯವನ್ನು ಈ ಗಾದೆಯಲ್ಲಿ ಎತ್ತಿಕೊಳ್ಳಲಾಗಿದೆ. ಇದಕ್ಕೆ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ.
ಹಣವಿದ್ದವರಲ್ಲಿ ಕೆಲವರಿಗೆ ವಿದ್ಯೆ ಇರುವುದಿಲ್ಲ; ವಿದ್ಯೆ ಇದ್ದವರಲ್ಲಿ ಬಹಳಷ್ಟು ಜನ ಬಡವರಾಗಿರುತ್ತಾರೆ. ಸರಸ್ವತಿ ಮತ್ತು ಲಕ್ಷ್ಮಿಯ ಕಟ್ಟಾಕ್ಷ ಸಮವಾಗಿ ಲಭಿಸುವುದು ಅತಿ ವಿರಳ.
ಬಂಡವಾಳ ಇದ್ದವರಲ್ಲಿ ಉತ್ಪಾದಿಸುವ ಉತ್ಸಾಹವಾಗಲೀ, ಚಾಣಾಕ್ಷತೆಯಾಗಲೀ ಇರುವುದಿಲ್ಲ. ಉತ್ಸಾಹ, ಪ್ರತಿಭೆ ಇರುವರಲ್ಲಿ, ಬಂಡವಾಳವಿರುವುದಿಲ್ಲ. ಹಾಗಾಗಿ ದೇಶದಲ್ಲಿ ನಾವು ಬಯಸುವಷ್ಟು ಪ್ರಗತಿಯಾಗುವುದಿಲ್ಲ. ಟಾಟಾ ಅಂಥವರು ಸಿಗುವುದು ಅತಿ ವಿರಳ.
ಅನೇಕರಿಗೆ ಮದುವೆಗಾಗಿ ಹೆಣ್ಣು ಹುಡುಕಲು ಹೊರಟಾಗ ಒಂದು ದೊಡ್ಡ ಸಮಸ್ಯೆ, ಹುಡುಗಿ ಸುಂದರಿಯಾಗಿರಬಹುದು. ಅದೇ ಅವಳ ಅಹಂಕಾರಕ್ಕೆ ಕಾರಣವಾಗಬಹುದು. ಅಂಥವಳನ್ನು ಸೊಸೆಯಾಗಿ ಮನೆಗೆ ತಂದುಕೊಂಡರೆ ಕುಟುಂಬ ಒಡೆದು ಹೋಗಬಹುದು. ಗುಣವಂತ ಹುಡುಗಿಯರು ಸಿಕ್ಕಾರು ಆದರೆ ಅವರಿಗೆ ರೂಪ ಚೆನ್ನಾಗಿಲ್ಲದಿದ್ದರೆ ನೆಂಟಸ್ತಿಕೆ ಸಿಗುವುದು ಕಷ್ಟ. ರೂಪ ಮತ್ತು ಗುಣ ಒಂದೇ ಹುಡುಗಿಯಲ್ಲಿ ಕಾಣಸಿಗುವುದು ಅತಿ ವಿರಳ.
ಅಧಿಕಾರಕ್ಕೆ ಬರುವವರಲ್ಲಿ ದಕ್ಷತೆಯಿಲ್ಲದಿರಬಹುದು; ದಕ್ಷತೆ ಇರುವವರಿಗೆ ಅಧಿಕಾರದ ಅವಕಾಶ ಸಿಗದಿರಬಹುದು. ಇಂಥ ವಿಪರ್ಯಾಸವನ್ನು ನಾವು ನಮ್ಮ ಸರ್ಕಾರೀ ಸಂಸ್ಥೆಗಳಲ್ಲಿ ದಿನಬೆಳಗಾದರೆ ನೋಡುತ್ತಿರುತ್ತೇವೆ. ಅಧಿಕಾರವನ್ನು ವಂಶಪಾರಂಪರ್ಯವಾಗಿ ಮುಂದುವರಿಸಿಕೊಂಡು ಹೋಗಲು ಈವತ್ತಿನ ಜನಾಭಿಪ್ರಾಯ ವಿರೋಧಿಸುತ್ತದೆ. ಹಣದ ಬಲದಿಂದ ಅಯೋಗ್ಯರು ಪದವಿಗೇರುವುದು ಈವತ್ತಿನ ದೌರ್ಭಾಗ್ಯ.
ಹಸಿವಿರುವ ಕಡೆ ಅನ್ನವಿಲ್ಲ; ಅನ್ನ ಇರುವ ಕಡೆ ಹಸಿವಿಲ್ಲ. ಶ್ರೀಮಂತಿಕೆ ಸೊಕ್ಕಿದ ಕಡೆ ನಡೆಯುವ ಪಾರ್ಟಿಗಳಲ್ಲಿ ತಿನ್ನುವವರು ಕಡಮೆ, ಬಿಸಾಕುವವರೇ ಹೆಚ್ಚು. ಇನ್ನೊಂದು ಕಡೆ ಬಿಸಾಕಿದ ಎಂಜಲೆಲೆಗಳಿಗೆ ಮುತ್ತಿಗೆಹಾಕುವ ಅನಾಥಮಕ್ಕಳು ಇದ್ದಾರೆ.
ಅನೇಕ ಪುಸ್ತಕಪ್ರೇಮಿಗಳಿಗೆ ತಾವು ಓದಬಯಸುವ ಪುಸ್ತಕಗಳನ್ನು ಕೊಂಡು ಸಂಗ್ರಹಿಸುವ ಶಕ್ತಿ ಇರುವುದಿಲ್ಲ. ಅನೇಕ ಶ್ರೀಮಂತರು ತಮ್ಮ ವರ್ಚಸ್ಸಿನ ಪ್ರದರ್ಶನಕ್ಕಾಗಿ ಎಂತಹ ದುಬಾರಿಯ ಪುಸ್ತಕವನ್ನಾದರೂ ಕೊಂಡು ಗಾಜಿನ ಕಪಾಟುಗಳಲ್ಲಿ ಇಟ್ಟುಕೊಂಡಿರುತ್ತಾರೆ. ಅವರಿಗೆ ಓದುವ ಆಸಕ್ತಿಯೇ ಇರುವುದಿಲ್ಲ. ಬರಿಯ ಷೋಕಿ.
ಇಲ್ಲದವರ ಬಗ್ಗೆ ಸಂತಾಪಪಡುವುದಕ್ಕಿಂತ, ಇದ್ದರೂ ಅದರ ಪ್ರಯೋಜನ ಪಡೆಯದವರ ಬಗ್ಗೆ ಸಂತಾಪ ವ್ಯಕ್ತಪಡಿಸುವ ಸಂದರ್ಭ ಬಂದಾಗ ನಾವು ಈ ಗಾದೆಯನ್ನು ಧಾರಾಳವಾಗಿ ಬಳಸಬಹುದು.
Comments are closed.