ಇದರಲ್ಲೇನು ಮಹತ್ತ್ವವಿದೆ ಎಂದು ಗೇಲಿ ಮಾಡುವಷ್ಟು ಕೆಲವು ಗಾದೆಗಳು ಸರಳವಾಗಿರುತ್ತವೆ. ತಾಯಿಗಿಂತ ಹೆಚ್ಚಾಗಿ ಪ್ರೀತಿಸುವವರು ಯಾರೂ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಉಪ್ಪು ಹಾಕಲು ಮರೆತಾಗ ಅಂತಹ ಅಡುಗೆಯನ್ನು ಉಣ್ಣಲು ಯಾರಿಗೂ ಸಾಧ್ಯವಿಲ್ಲ ಎನ್ನುವುದು ಕೂಡಾ ಎಲ್ಲರಿಗೂ ಗೊತ್ತು. ಗಾದೆಗಳೆಂದರೆ ಯಾವನೋ ಒಬ್ಬ ಕವಿತೆಗಳನ್ನು ಬರೆದಂತೆ ಬರೆದವುಗಳಲ್ಲ. ಯವುದೋ ಒಂದು ಸಂದರ್ಭದಲ್ಲಿ, ಸಂದರ್ಭಕ್ಕೆ ಅನುಗುಣವಾಗಿ ಯಾವನದೋ ಬಾಯಿಯಿಂದ ಜನರ ಹಿತಕ್ಕಾಗಿ ಉದುರಿದ ನುಡಿಮುತ್ತುಗಳಿವು. ಗಾದೆಗಳ ಮಹತ್ತ್ವ ನಮಗೆ ಅರಿವಾಗುವುದು ಅವು ಹುಟ್ಟಿಕೊಂಡ ಸಂದರ್ಭಗಳನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಾದಾಗ ಮಾತ್ರ. ಗಾದೆಯ ಪೂರ್ವಾರ್ಧವನ್ನು ಓದುವಾಗ ಅನಿರೀಕ್ಷಿತವಾಗಿ ತುಂಬ ಪ್ರೀತಿಸುವ ತಾಯಿಯನ್ನು ಕಳೆದುಕೊಂಡವನ ಅಥವಾ ಹೆಂಡತಿಯ ಮಾತುಕೇಳಿ ತಾಯಿಯನ್ನು ತೊರೆದವನ ಮಾನಸಿಕಸ್ಥಿತಿಯನ್ನು ಚೆನ್ನಾಗಿ ಕಲ್ಪಿಸಿಕೊಳ್ಳಬೇಕು. ಪಶ್ಚಾತ್ತಾಪದ ಸಮಯದಲ್ಲಿ ಹುಟ್ಟಿದ ಮಾತಿದು.
ಗಾದೆಯ ಉತ್ತರಾರ್ಧವನ್ನು ಓದುವಾಗ ರಕ್ತದೊತ್ತಡದ ದೋಷವಿದ್ದು ವೈದ್ಯರ ಸಲಹೆಯಂತೆ ಉಪ್ಪನ್ನು ವರ್ಜಿಸಿ ರುಚಿ ಇಲ್ಲದ ಪಥ್ಯದ ಅಡುಗೆ ಉಣ್ಣುವವನ ಸ್ಥಿತಿಯನ್ನು ಕಲ್ಪಿಸಿಕೊಳ್ಳಬೇಕು. ಯಾವುದೇ ಒಂದು ವಸ್ತು ಇದ್ದಾಗ, ಸುಲಭವಾಗಿ ಸಿಗುವಾಗ ನಮಗೆ ಅದರ ಮಹತ್ತ್ವ ಗೊತ್ತಾಗುವುದಿಲ್ಲ. ಇಲ್ಲವಾದಾಗಲೇ ಗೊತ್ತಾಗುವುದು. ತಾಯಿಯ ಮಹತ್ತ್ವವನ್ನು ಅಳೆಯುವಾಗ ಗಾದೆಗಾರನಿಗೆ ಉಪ್ಪಿನ ಮಹತ್ತ್ವದ ನೆನಪು ಏಕಾಯಿತೋ ಏನೋ. ಬಹುಶಃ ಮಾತೃಪ್ರೇಮ ಮತ್ತು ಉಪ್ಪು ದಿನಬಳಕೆಯಲ್ಲಿ ಸದಾ ಸಿಗುವಂತಾಗಿ, ಅಗ್ಗವಾಗಿ, ಸಸಾರವಾಗಿ ಆತನಿಗೆ ಕಂಡಿರಬಹುದು. ಅಗ್ಗವೆಂದೆನಿಸಿದರೂ ಎರಡೂ ಆವಶ್ಯಕ ಎಂಬ ಸತ್ಯ ಇಲ್ಲಿ ಕಾಣಿಸಲಾಗಿದೆ.
ನಮ್ಮ ಸಂಪ್ರದಾಯದಲ್ಲಿ, ಊಟ ಬಡಿಸುವಾಗ ಬಾಳೆಎಲೆಯ ಎಡಪಕ್ಕದಲ್ಲಿ ಒಂದು ಚಿಟಿಕೆ ಉಪ್ಪನ್ನು ಬಡಿಸಿ ಅನಂತರ ಪಲ್ಯ, ಅನ್ನ, ಹುಳಿ, ಸಾರು, ಮೊಸರು ಬಡಿಸುವುದಿದೆ. ಉಪ್ಪಿಗೆ ಪ್ರಥಮಸ್ಥಾನ ನೀಡಲಾಗಿದೆ. ಅದೇ ರೀತಿ ಮಂಗಳ ಕಾರ್ಯಗಳಲ್ಲಿ ತಾಯಿಗೆ ನಮಸ್ಕರಿಸುವ ಆದ್ಯತೆ ಇದೆ.
ಹಾಗೆಂದು ಉಪ್ಪನ್ನೇ ತಿನ್ನಲು ಸಾಧ್ಯವಿಲ್ಲ. ಉಪ್ಪು ತಿಂದವನು ನೀರು ಕುಡಿಯಲೇಬೇಕು” ಎನ್ನುವ ಗಾದೆಯನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಉಪ್ಪು ಅತಿಯಾದಾಗ ಅದು ಅಪರಾಧವಾಗುತ್ತದೆ. ಅವನು ಪರಿಹಾರಕ್ಕಾಗಿ ನೀರು ಕುಡಿಯಬೇಕಾಗುತ್ತದೆ. ತಾಯಿ ದೇವರಿಗೆ ಸಮಾನ ನಿಜ. ಹಾಗೆಂದು ಮದುವೆಯಾದವನು ತಾಯಿಯ ಸೆರಗಿಗೆ ಅಂಟಿಕೊಂಡು ಹೆಂಡತಿಗೆ ಕಾಟಕೊಟ್ಟರೆ ಅದು ಅಪರಾಧವಾಗುತ್ತದೆ. ಹೆಂಡತಿಯೂ ಒಂದು ದಿನ ತಾಯಿಯಾಗುವವಳೇ ಅಲ್ಲವೆ? ಅದೇ ರೀತಿ ಸೊಸೆಯಾದವಳು ಒಂದು ದಿನ ಅತ್ತೆಯಾಗಬಹುದಲ್ಲವೇ? ಮಾತೆಗಿಂತ ಮಾತೃತ್ವ ದೊಡ್ಡದು.
ಜನ್ಮ ನೀಡಲು ತಂದೆ ತಾಯಿ ಇಬ್ಬರೂ ಬೇಕು ನಿಜ. ಆದರೆ ತಾಯಿಯ ಹೊಟ್ಟೆಯಲ್ಲಿ ಮಗು ಒಂಬತ್ತು ತಿಂಗಳು ಆಶ್ರಯ ಪಡೆದಿರುತ್ತದೆ. ಜನಿಸಿದ ನಂತರವೂ ಮೊಲೆಹಾಲು ಕೊಡುವುದು ತಾಯಿ. ತನಗಿಲ್ಲದಿದ್ದರೂ ಮಗುವಿಗೆ ಉಣಿಸಿ ಲಾಲನೆ-ಪಾಲನೆ ಮಾಡುವವಳು ತಾಯಿ. ಆದುದರಿಂದ ವಿವಾಹ ವಿಚ್ಛೇದನದ ಪ್ರಸಂಗ ಬಂದಾಗ ನ್ಯಾಯಾಲಯ ಮಗುವನ್ನು ತಾಯಿಗೆ ಒಪ್ಪಿಸಿಬಿಡುತ್ತದೆ. ತಾಯಿ ತ್ಯಾಗಮಯಿ, ಸ್ನೇಹಮಯಿ. ಹಾಗಾಗಿ ಅವಳಿಗಿಂತ ಹೆಚ್ಚಿನ ಬಂಧುವಿಲ್ಲ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ. ತಾಯಂದಿರನ್ನು ಕೆಲಸಕ್ಕಾಗಿ ದೂರ ದೇಶಕ್ಕೆ ತೆರಳಿದ ಅವರ ಮಕ್ಕಳು ತಮ್ಮೊಡನೆ ಕರೆದುಕೊಂಡು ಹೋಗಲಾಗದೆ ವೃದ್ಧಾಶ್ರಮದಲ್ಲಿ ಬಿಡುವ ಅನಿವಾರ್ಯತೆ ಈಗ ಬಂದೆರಗಿದೆ. ಇದು ತುಂಬಾ ಶೋಚನೀಯ.