ಹಳೆಯ ಕಾಲದ ಅಜ್ಜಿ ಎಂದರೆ ನಮ್ಮ ಕಣ್ಣು ಮುಂದೆ ಒಬ್ಬ ಬೊಚ್ಚು ಬಾಯಿಯ, ಸರಿಯಾಗಿ ಕಣ್ಣು ಕಾಣದ, ಕಿವಿ ಕೇಳದ, ಕೋಲನ್ನು ಊರಿಕೊಂಡು, ಸೊಂಟ ಬಗ್ಗಿಸಿಕೊಂಡು ನಡೆಯುವ ಮುದುಕಿ ಬಂದು ನಿಲ್ಲುತ್ತಾಳೆ. ಆದರೆ ಎಲ್ಲಾ ಅಜ್ಜಿಯವರೂ ಇದೇ ಸ್ಥಿತಿಯಲ್ಲಿ ಇರಬೇಕೆಂದಿಲ್ಲ. ತಾಯಿಯ ತಾಯಿ, ತಂದೆಯ ತಾಯಿ ಕೂಡಾ ಅಜ್ಜಿಯೆನಿಸಿಕೊಳ್ಳುತ್ತಾಳೆ. ಹಿರಿಯವಳೆಂದು ಅಜ್ಜಿಯನ್ನು ಮನೆಯಲ್ಲಿ ಗೌರವಿಸುವುದು ಒಂದು ಬಗೆಯಾದರೆ, ಮನೆಯಲ್ಲಿರುವವರಿಗೆಲ್ಲ ಅವಳು ಬೇಕಾದವಳು ಎಂದು ಅವಳನ್ನು ಗೌರವಿಸುವುದು ಇನ್ನೊಂದು ಬಗೆ.
ಹಳ್ಳಿಯ ಕಡೆ ಗಂಡಸರಂತೆ ಹೆಂಗಸರು ಹೊಲಗದ್ದೆಗಳಲ್ಲಿ ಕೆಲಸಮಾಡಲು ಹೋಗುತ್ತಾರೆ. ಆಗ ಅಡುಗೆಮಾಡುವ ಕೆಲಸ, ಮನೆಯಲ್ಲಿ ದನಕರುಗಳಿದ್ದರೆ, ಮಕ್ಕಳಿದ್ದರೆ ಅವುಗಳನ್ನು ನೋಡಿಕೊಳ್ಳುವ ಕೆಲಸ ಅಜ್ಜಿಯ ಮೇಲೆ ಬೀಳುತ್ತದೆ. ಅವಳ ಕೆಲಸದ ಪಟ್ಟಿ ತುಂಬ ಉದ್ದ, ಹರಿದ ಬಟ್ಟೆ ಹೊಲಿದಿಡುವುದು, ಹಿಂದಿನಿಂದ ಪಾಲಿಸಿಕೊಂಡು ಬಂದ ಸಂಪ್ರದಾಯಗಳನ್ನು ಲೋಪವಿಲ್ಲದಂತೆ ನಡೆಸಿಕೊಂಡು ಹೋಗುವುದು, ಮನೆಯಲ್ಲಿ, ನೆರೆಹೊರೆಯಲ್ಲಿ ಜಗಳವಾದರೆ ಮಧ್ಯೆಪ್ರವೇಶಿಸಿ ಸಮಾಧಾನ ಹೇಳಿ ಶಾಂತತೆಯನ್ನು ಕಾಪಾಡುವುದು. ಎಲ್ಲದಕ್ಕಿಂತ ಮುಖ್ಯವಾದದ್ದೆಂದರೆ ಪುಟ್ಟ ಮಕ್ಕಳನ್ನು ಮುದ್ದುಮಾಡುವುದು, ಮಲಗಿಸುವುದು ಮತ್ತು ಅವರಿಗೆ ಮನರಂಜಕ ಕಥೆ ಹೇಳುವುದು. ಅಜ್ಜಿಗೆ ಯಾವ ಪ್ರಾಶಸ್ತ್ಯವನ್ನು ಕೊಡದೆ ಮೂಲೆಗಟ್ಟುವುದು, ಅಡುಗೂಲಜ್ಜಿ ಕಥೆ ಎಂದು ಅವಳು ಹೇಳುವ ರಾಜಕುಮಾರ, ರಾಜಕುಮಾರಿಯ ಕಥೆಗಳನ್ನು ಹಳಿಯುವುದು ಅಲ್ಲಲ್ಲಿ ಕೇಳಿ ಬರುತ್ತದೆ. ಆದರೆ ಅನಾದರವನ್ನು ಲೆಕ್ಕಿಸದೆ ಎಲ್ಲರ ಒಳಿತಿಗಾಗಿ ಆಕೆ ದುಡಿಯುತ್ತಾಳೆ. ಆದುದರಿಂದಲೇ ಅಜ್ಜಿ ಇಲ್ಲದ ಮನೆ, ಮನೆಯಲ್ಲ ಎಂದು ಹೇಳುವುದು.
ಈ ಆಧುನಿಕ ಕಾಲದಲ್ಲಿ ಮನೆಯಲ್ಲಿ ಅಜ್ಜಿಯರು ನೋಡಲು ಸಿಗುವುದಿಲ್ಲ. ವಯಸ್ಸಾದವರನ್ನು ನೋಡಿಕೊಳ್ಳುವುದು, ಅವರೊಡನೆ ಹೊಂದಿಕೊಂಡಿರುವುದು ಮಹಾ ಕಿರಿಕಿರಿ ಎಂದುಕೊಂಡು ಅವರನ್ನು ಹೊರಹಾಕುವವರೇ ಹೆಚ್ಚು ಮಂದಿ. ದುಡ್ಡಿದ್ದವರು, ಸುಸಂಸೃತರು ಒಳ್ಳೆಯ ವ್ಯವಸ್ಥಿತ ವೃದ್ಧಾಶ್ರಮದಲ್ಲಿ ಅಜ್ಜಿಯರನ್ನು ಸೇರಿಸಿದರೆ, ಬಡವರು, ಹೃದಯಹೀನರು ಅವರನ್ನು ಸಂಪೂರ್ಣವಾಗಿ ಕೈಬಿಡುತ್ತಾರೆ. ಹೀಗಾಗಿ ವೃದ್ಧಾಶ್ರಮಗಳು, ಅನಾಥಾಶ್ರಮಗಳು ಹೆಚ್ಚಾಗುತ್ತಿವೆ. ಹೆರಿಗೆ ಬಂತೆಂದರೆ ಆಸ್ಪತ್ರೆ, ಮಕ್ಕಳಿದ್ದರೆ ಅವುಗಳನ್ನು ನೋಡಿಕೊಳ್ಳಲು ಶಿಶುಪಾಲನಾ ಕೇಂದ್ರ, ಓದುವ ಮಕ್ಕಳಿದ್ದರೆ ಹಾಸ್ಟೆಲ್ ಹೀಗಾಗಿ ಈಗೀಗ ಅಜ್ಜಿಯರಿಲ್ಲದ ಮನೆಗಳೇ ಹೆಚ್ಚಾಗಿ ಕಂಡುಬರುತ್ತವೆ. ಅವುಗಳನ್ನು ವಾಸಸ್ಥಳ ಎಂದು ಕರೆಯಬಹುದಷ್ಟೆ. ಮನೆ ಎಂದೊಡನೆ ಅದರಲ್ಲಿ ತಿನ್ನಲು ಮಲಗಲು ಸೌಕರ್ಯವಿದ್ದರಷ್ಟೇ ಸಾಲದು. ಅದರಲ್ಲಿ ಮಮತೆ ತಾಂಡವಾಡಬೇಕು.
ಊಟದ ವಿಷಯಕ್ಕೆ ಬಂದಾಗ ಮಜ್ಜಿಗೆಗೂ ಅಜ್ಜಿಯ ಸ್ಥಿತಿಗತಿಯೇ ಬಂದಿದೆ. ಇವತ್ತು ಹಾಲಿಗೆ ಹೆಪ್ಪು ಹಾಕಿ ಮೊಸರು ಮಾಡುವುದು, ಮೊಸರು ಕಡೆದು ಬೆಣ್ಣೆ ಮಾಡುವುದು, ಮಜ್ಜಿಗೆಯನ್ನು ಊಟದಲ್ಲಿ ಬಳಸುವುದು ನಿಂತು ಹೋಗಿದೆ. ಮಜ್ಜಿಗೆಯ ಬದಲಾಗಿ ರೆಡಿಮೇಡ್ ಸಿಗುವ ಮೊಸರಿಗೆ ನೀರು ಬೆರೆಸಿ ಸೇವಿಸುವುದು ಪ್ರಾರಂಭವಾಗಿದೆ. ಮೊಸರು ಗಟ್ಟಿಯಾಗಿರುತ್ತದೆ. ಮಜ್ಜಿಗೆ ತೆಳ್ಳಗಿರುತ್ತದೆ. ಅಜ್ಜಿಯಂತೆ ಕ್ಷೀಣಿಸಿರುತ್ತದೆ, ತಂಪಾಗಿರುತ್ತದೆ. ಅಜ್ಜಿಯಂತೆ ಇದೂ ಆಡಂಬರವಿಲ್ಲದ ಆಹಾರ ಪದಾರ್ಥ. ಖಾರ ಊಟ ಸೇವಿಸಿದ ನಂತರ ದಾಹ ಅಡಗಿಸಲು ಮಜ್ಜಿಗೆ ತುಂಬಾ ಉಪಯುಕ್ತ. ಆದುದರಿಂದ ಮಜ್ಜಿಗೆಯಲ್ಲಿ ಅಂತ್ಯವಾಗದ ಊಟ ನಿಜವಾದ ಊಟವಲ್ಲವೆಂದೇ ಹೇಳಬಹುದು.
ಹಳ್ಳಿಯ ಕಡೆ ಮಧ್ಯಾಹ್ನದ ಬಿಸಿಲಲ್ಲಿ ನಡೆದು ಸುಸ್ತಾಗಿ ಯಾವುದೋ ಮನೆಯ ನೆರಳು ಕಂಡವರು ಆಸರಕ್ಕೇನಾದರೂ ಕೊಡಿ, ಅಮ್ಮಾ ಎಂದು ಬೇಡುತ್ತಿದ್ದರು. ಕೆಲವರು ಬೆಲ್ಲದ ಜೊತೆಗೆ ಬಾವಿಯ ತಣ್ಣೀರಿನ ಚೆಂಬು ಮುಂದಿಡುತ್ತಿದ್ದರು. ಇನ್ನೂ ಹೆಚ್ಚಿನ ಆತಿಥ್ಯ ನೀಡಬೇಕೆಂದುಕೊಂಡವರು ದೊಡ್ಡ ಗಿಂಡಿಯಲ್ಲಿ ಮಜ್ಜಿಗೆಯನ್ನು ನೀಡುತ್ತಿದ್ದರು. ದಾಹ ಅಡಗಿಸಲು ಮಜ್ಜಿಗೆಗಿಂತ ಹೆಚ್ಚಿನ ಪಾನೀಯ ಯಾವುದೂ ಇಲ್ಲ. ಈಗಿನವರು ಮಜ್ಜಿಗೆಗೆ ಬದಲಾಗಿ ಫ್ರಿಜ್ನಲ್ಲಿಟ್ಟ ಜ್ಯೂಸ್ ಬಾಟಲಿಯೊಂದನ್ನು ಮುಂದೆ ಚಾಚುವುದುಂಟು.
ಈಗ ಕಾಲ ಬದಲಾಗಿದೆ, ‘ಮನೆ’ ಎನ್ನುವ ಕಾನ್ಸೆಪ್ಟ್ ಬದಲಾದಂತೆ, ‘ದಾಹ’ದ ಕಾನ್ಸೆಪ್ಟೂ ಬದಲಾಗಿದೆ.