ಈ ಗಾದೆಯು ಅರ್ಥವಾಗಬೇಕಾದರೆ ನಾವು ಮಾರಮ್ಮನ ಬಗ್ಗೆ ಸ್ವಲ್ಪ ತಿಳಿದುಕೊಂಡಿರಬೇಕಾಗುತ್ತದೆ. ನಮ್ಮಲ್ಲಿ ದುಷ್ಟರು, ಶಿಷ್ಟರು ಇರುವಂತೆ ದೇವತೆಗಳಲ್ಲಿಯೂ ಈ ಬಗೆಯ ವರ್ಗವನ್ನು ನಮ್ಮ ಹಿರಿಯರು ಸೃಷ್ಟಿಸಿಕೊಂಡು ಬಂದಿದ್ದಾರೆ. ಮಾರಿ, ದುರ್ಗಿ, ಚಂಡಿ, ಚಾಮುಂಡಿ, ಕಾಳಿ – ಈ ಬಗೆಯ ದೇವತೆಗಳು ರುದ್ರರೂಪಿಗಳು, ಸಂಹಾರಪ್ರಿಯರು, ರಕ್ತದಾಹವುಳ್ಳವರು. ಇವರಿಗೆ ಕೋಪ ಬಂದಾಗಲೇ ಊರಿಗೆ ಸಿಡುಬು, ಕಾಲರಾ ಮುಂತಾದ ಮಾರಣಾಂತಿಕ ರೋಗಗಳು ವಕ್ಕರಿಸುತ್ತವೆ ಎಂಬ ಮೂಢನಂಬಿಕೆ ಬಲವಾಗಿತ್ತು. ಈ ದೇವತೆಗಳ ಕೋಪ ತಣಿಸಲು ಕೋಳಿ, ಕುರಿ ಬಲಿ ಕೊಡುತ್ತಿದ್ದರು; ಜಾತ್ರೆಗಳು ಜರುಗುತ್ತಿದ್ದವು.
ಒಂದು ಊರಲ್ಲಿ ದೊಡ್ಡ ರೋಗ ಬಂದರೆ ಸಾಕು, ಮಾರಮ್ಮನ ಜಾತ್ರೆ ನಡೆಯುತ್ತಿತ್ತು. ಅನಂತರ ಆ ಊರಿನಿಂದ ಪಕ್ಕದ ಊರಿಗೆ ಮಾರಮ್ಮನ ಮೂರ್ತಿಯನ್ನು ಮೆರವಣಿಗೆ ಮಾಡಿ ದಾಟಿಸುತ್ತಿದ್ದರು. ಆ ಊರಿನವರು ಪೂಜೆ ಮಾಡಿ ಅದೇ ರೀತಿ ತಮ್ಮ ಪಕ್ಕದ ಊರಿಗೆ ದಾಟಿಸುತ್ತಿದ್ದರು. ಅವರು ಮಾರಮ್ಮನಿಗೆ ಸಲ್ಲಿಸುತ್ತಿದ್ದ ಪೂಜೆ ಭಕ್ತಿಯಿಂದಲ್ಲ; ಭಯದಿಂದ. ಆರತಿಯಿಂದಲ್ಲ, ಆಹುತಿಯಿಂದ. ಮಾರಮ್ಮ ಯಾರಿಗೂ ಆಹ್ವಾನಿಸುವ ದೇವತೆಯಾಗಿರಲಿಲ್ಲ, ರವಾನಿಸುವ ಕ್ಷುದ್ರದೇವತೆಯಾಗಿದ್ದಳು. ಕೇಡಿನ ಸಂಕೇತವಾಗಿದ್ದಳು.
ಈಗ ಈ ಮೂಢನಂಬಿಕೆ ಕ್ಷೀಣವಾಗಿದೆ. ರೋಗಗಳ ಕಾರಣವೇ ಬೇರೆ ಎಂದು ವಿಜ್ಞಾನ ತೋರಿಸಿಕೊಟ್ಟಿದೆ. ಪ್ರಾಣಿಬಲಿಯನ್ನು ನಿಷೇಧಿಸಲಾಗಿದೆ. ಆದರೂ ಕೆಲವು ಕಡೆ ಮಾರಮ್ಮನ ಗುಡಿಗಳಿವೆ, ಮಾರಮ್ಮನ ಜಾತ್ರೆ ನಡೆಯುತ್ತದೆ.
ಈಗ ಯಾವ ಸಂದರ್ಭದಲ್ಲಿ ಈ ಗಾದೆಯನ್ನು ಬಳಸಬಹುದು, ಯಾವ ಸಂದೇಶವನ್ನು ಈ ಗಾದೆ ನೀಡುತ್ತದೆ ಎಂಬುದನ್ನು ಪರಿಶೀಲಿಸೋಣ.
ಒಬ್ಬ ಅನಾಥ ಹುಡುಗನನ್ನು ಮನೆಗೆ ಕರೆದುಕೊಂಡು ಬಂದು ಆತನ ಭವಿಷ್ಯ ರೂಪಿಸುವ ಸದುದ್ದೇಶದ ಮಹಾನುಭಾವನನ್ನು ಅದೇ ಹುಡುಗ ಸ್ವಲ್ಪಕಾಲ ನಂಬಿಕಸ್ಥನಂತೆ ನಟಿಸಿ ಅನಂತರ ಕೊಂದು ಪರಾರಿಯಾದ ಪ್ರಕರಣವನ್ನು ನಾವು ಕೇಳಿದ್ದೇವೆ.
ಉಪಕಾರ ಮಾಡಲು ಹೋಗಿ ಅಪಕಾರಕ್ಕೆ ತುತ್ತಾದವರ ಅನೇಕ ಬಗೆಯ ಪ್ರಕರಣಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಅಂಥವರನ್ನು ಹುಷಾರಾಗಿರಿ ಎಂದು ಎಚ್ಚರಿಸುವ ಗಾದೆ ಇದು.
ಹಾಗಾದರೆ ಸಹಾಯ ಮಾಡುವುದೇ ಒಂದು ದೊಡ್ಡ ತಪ್ಪೇ ಎಂಬ ಪ್ರಶ್ನೆ ಉದ್ಭವಿಸುವುದರಲ್ಲಿ ಸಂಶಯವಿಲ್ಲ. ಸಹಾಯ ಕೇಳುವವರಲ್ಲಿ ಸಜ್ಜನರು ಯಾರು, ದುರ್ಜನರು ಯಾರು ಎಂದು ಗೊತ್ತಾಗದಿರುವುದರಿಂದ ಸಹಾಯ ಮಾಡುವುದನ್ನೇ ನಿಲ್ಲಿಸುವುದು ಹೆಚ್ಚು ಕ್ಷೇಮವೇ? ದುರ್ಜನರಿಂದ ದೂರ ಇರುವುದು ಒಳಿತು ಎನ್ನುವುದರಲ್ಲಿ ಸಂಶಯವಿಲ್ಲ. ತೊಂದರೆ ಅನುಭವಿಸಿಯಾದರೂ ಸಹಾಯಕ್ಕೆ ಮುಂದಾಗುವ ಮಹಾನುಭಾವರನ್ನು ಮೂರ್ಖರೆಂದು ಪರಿಭಾವಿಸುವುದು ಎಷ್ಟರಮಟ್ಟಿಗೆ ಸರಿ? ಆದುದರಿಂದಲೇ ಈ ಗಾದೆ ಹೃದಯಹೀನರಾಗಿರಲು ಪ್ರೇರೇಪಿಸುತ್ತದೆ ಎಂದು ತಿಳಿದುಕೊಳ್ಳುವುದರ ಬದಲಾಗಿ ಇದು ಕೇವಲ ವಿವೇಚನೆಯನ್ನು ಬಯಸುತ್ತದೆ ಎಂದು ತಿಳಿದುಕೊಂಡರೆ ಸಾಕೆಂದು ಕಾಣುತ್ತದೆ.