ಹಿರಿಯರ ತೂಕದ ಮಾತುಗಳು ಚಾಲ್ತಿಗೆ ಬಂದು ಗಾದೆಗಳೆನಿಸಿಕೊಂಡವು. ಮಾತಲ್ಲಿ ಮಾತ್ರವಲ್ಲ, ಮಾತಿನ ರಚನೆಯಲ್ಲಿ ಕೂಡ ತೂಕ ಇರುತ್ತಿತ್ತು. ಚಿಕ್ಕದ್ದನ್ನು ಸಾಧಿಸಲಾರದವನು ಮಹತ್ತ್ವದ್ದನ್ನು ಸಾಧಿಸಿಯಾನೇ ಎಂಬ ಪರಿಹಾಸ್ಯದ ಧ್ವನಿ ಈ ಗಾದೆಯಲ್ಲಿದೆ. ರಚನೆಯ ಕಡೆ ಗಮನ ಕೊಟ್ಟಾಗ ನಮ್ಮ ಕಣ್ಮುಂದೆ ಒಂದು ತಕ್ಕಡಿ ತೂಗಾಡುವಂತೆ ಕಾಣುತ್ತದೆ. ಮೂರು ಪದಗಳಿಂದ ಕೂಡಿದ ಗಾದೆಯ ಪೂರ್ವಾರ್ಧ ತಕ್ಕಡಿಯ ಒಂದು ಕಡೆ. ಎರಡು ಪದಗಳಿಂದ ಕೂಡಿದ ಉತ್ತರಾರ್ಧ ಇನ್ನೊಂದು ಕಡೆ. ಸರಿಸಮಾನತೆಯಿಲ್ಲ. ಅಟ್ಟ ಒಂದು ಕಡೆ, ಬೆಟ್ಟ ಇನ್ನೊಂದು ಕಡೆ. ಪ್ರಾಸಬದ್ಧ ಪದಗಳು. ಇವುಗಳನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ಗುಬ್ಬಿಯ ಲೇವಡಿ ಇಲ್ಲಿ ಮಾಡಲಾಗಿದೆ.
ಹಳ್ಳಿಗಳಲ್ಲಿ ಹೆಚ್ಚಾಗಿ ಗುಡಿಸಲುಗಳು ಇರುತ್ತಿದ್ದುವು. ಅಲ್ಲಿಯ ಸಿರಿವಂತರು ಮಾತ್ರ ಹೆಂಚಿನ ಮನೆಗಳಲ್ಲಿ ವಾಸಿಸುತ್ತಿದ್ದರು. ಅಂಥವರ ಮನೆಗೆ ಮಹಡಿ ಇರುತ್ತಿತ್ತು. ಆ ಮಹಡಿಗೆ `ಅಟ್ಟ’ ಎನ್ನುತ್ತಿದ್ದರು. ಅದಕ್ಕೂ ಇವತ್ತಿನ ಫಸ್ಟ್ಫ್ಲೋರಿಗೂ ತುಂಬಾ ವ್ಯತ್ಯಾಸವಿದೆ. ಅಟ್ಟದ ವಿಸ್ತಾರ ಕಡಮೆ ಇರುತ್ತಿತ್ತು. ಅದರ ಪ್ರಯೋಜನದಲ್ಲಿ ಮಿತಿ ಇತ್ತು. ನಾನು ಚಿಕ್ಕವನಿರುವಾಗ ಅಟ್ಟದ ಮೇಲೆ ಬೆಲ್ಲದ ಮಡಿಕೆಗಳನ್ನು ಶೇಖರಿಸಿಡುತ್ತಿದ್ದರು. `ಅಟ್ಟ’ ಎಂದ ಕೂಡಲೇ ನನಗೆ ನೆನಪಾಗುವುದು ನಾನು ಮೆಟ್ಟಿಲೇರಿ ಮೇಲೆ ಹೋಗಿ ಬೆಲ್ಲದ ಮಡಕೆಯ ಬಾಯಿ ತೆರೆದು ನನ್ನ ಪುಟ್ಟ ಬೆರಳುಗಳನ್ನು ಜೋನಿ ಬೆಲ್ಲದಲ್ಲಿ ಅದ್ದಿ ಚೀಪುತ್ತಿದ್ದ ಜಾಗದ ನೆನಪಾಗುತ್ತದೆ. ತಮ್ಮ ಗೆಳೆಯರೊಡನೆ ರಾತ್ರಿ ಗ್ಯಾಸ್ಲೈಟ್ ದೀಪದಲ್ಲಿ ನನ್ನ ತಂದೆಯವರು ಇಸ್ಪೀಟು ಆಡುವಾಗ ನಾನು ಮೆಲ್ಲಗೆ ಮೆಟ್ಟಿಲೇರಿ ಕದ್ದು ನೋಡಿದ ಜಾಗದ ನೆನಪಾಗುತ್ತದೆ. ಒಮ್ಮೆ ಹಾಗೆ ಹತ್ತುವಾಗ ಕಾಲು ಜಾರಿ ನಾನು ಕೆಳಗೆ ಬಿದ್ದು ನೋವಾಗಿ ಗೋಳಾಡಿದ ನೆನಪಾಗುತ್ತದೆ. ಅಟ್ಟದ ಎತ್ತರ ಕಡಮೆಯಾದ್ದರಿಂದ ನನ್ನ ಮೂಳೆ ಮುರಿದುಹೋಗಲಿಲ್ಲ.
`ಬೆಟ್ಟ’ ಎಂದ ಕೂಡಲೇ ನನಗೆ ನೆನಪಾಗುವುದು ಆಗುಂಬೆ ಘಟ್ಟ, ಚಾಮುಂಡಿ ಬೆಟ್ಟ, ಬಿಳಿರಂಗನ ಬೆಟ್ಟ. ಎಷ್ಟು ಅಟ್ಟಗಳು ಬೇಕು ಒಂದು ಬೆಟ್ಟವಾಗಲು! ನಮ್ಮ ಅಲ್ಪತೆಯ ಅರಿವು ನಮಗಾಗುವುದು ನೆಲದ ಮಟ್ಟದಲ್ಲಿ ನಿಂತು ನಾವು ಬೆಟ್ಟದ ತುದಿಯನ್ನು ಬೆರಗುಗಣ್ಣುಗಳಿಂದ ನೋಡುವಾಗ. ಅಟ್ಟ ಕನಿಷ್ಠ ಎತ್ತರದ ರೂಪಕವಾದರೆ, ಬೆಟ್ಟ ಗರಿಷ್ಠ ಎತ್ತರದ ರೂಪಕವಾಗಿ ಈ ಗಾದೆಯಲ್ಲಿ ಬಳಸಲಾಗಿದೆ.
ಈಗ ಗುಬ್ಬಿಗೆ ಬರೋಣ. ಎಂಥ ಪುಟ್ಟ ಹಕ್ಕಿ ಅದು! ಅಮ್ಮ ಮನೆಯ ಅಂಗಳದಲ್ಲಿ ಕುಳಿತು ಮೊರದಲ್ಲಿನ ಅಕ್ಕಿ ಆರಿಸುವಾಗ ಅದರಲ್ಲಿ ಸಿಕ್ಕ ಭತ್ತ ಎಸೆದೊಡನೆ ಎಷ್ಟೊಂದು ಗುಬ್ಬಿಗಳು ಮುತ್ತಿಗೆ ಹಾಕುತ್ತಿದ್ದವು! ನಾನು ಅವುಗಳನ್ನು ಹಿಡಿಯಲು ಹೋದಾಗ ಅವು ಪುರ್ರೆಂದು ಸ್ವಲ್ಪ ದೂರ ಹಾರಿ ಮತ್ತೆ ಭತ್ತಕ್ಕೆ ಹಿಂತಿರುಗುತ್ತಿದ್ದವು. ಗುಬ್ಬಿಗಳು ಹದ್ದಿನಷ್ಟು, ಕಾಗೆಯಷ್ಟು ಕೂಡಾ ಬಲಿಷ್ಠವಾದ ಹಕ್ಕಿಗಳಲ್ಲ. ಅವು ಅಟ್ಟದಷ್ಟು ಕೂಡಾ ಎತ್ತರ ಹಾರಲಾರದವು. ಬೆಟ್ಟದಷ್ಟು ಎತ್ತರ ಹೇಗೆ ಹಾರಬಲ್ಲವು? ಆದರೆ ಈ ಗಾದೆಯಲ್ಲಿ ಕನಿಕರದ ಧ್ವನಿಯಿಲ್ಲ, ಅಪಹಾಸ್ಯದ ಧ್ವನಿ ಇದೆ. ಚಿಕ್ಕದನ್ನು ಕೂಡಾ ಸಾಧಿಸಲು ಸಾಧ್ಯವಾಗದ ಒಬ್ಬ ಅಪ್ರಯೋಜಕ ತನ್ನಿಂದಾಗದ ದೊಡ್ಡದನ್ನು ಮಾಡಲು ಹೋಗಿ ಜನರ ಅಪಹಾಸ್ಯಕ್ಕೆ ಗುರಿಯಾದವನಿಗೆ ಇಲ್ಲಿ ಗುಬ್ಬಿ ರೂಪಕವಾಗಿರುವುದು ಅದರ ದುರ್ದೈವ.
ಹಳೆಯ ಗಾದೆಯಾದರೂ ಈ ಗಾದೆ ಅಪ್ರಸ್ತುತವಾಗಿ ಕಂಡುಬರುವುದಿಲ್ಲ. ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಗೆಲ್ಲಲಾರದವನು, ದೇಶದ ಪ್ರಧಾನಿಯಾಗಲು ಬಯಸಿದರೆ ಹೇಗೆ? ಗುಣಮಟ್ಟವಿಲ್ಲದ ಕೆಲವು ವಸ್ತುಗಳು ನಮ್ಮ ದೇಶದಲ್ಲೇ ಅಸ್ವೀಕೃತವಾಗಿರುವಲ್ಲಿ, ಅವುಗಳನ್ನು ಹೊರದೇಶಗಳಿಗೆ ರಫ್ತು ಮಾಡಲು ಪ್ರಯತ್ನಿಸಿದರೆ ಹೇಗೆ? ಎಸ್.ಎಸ್.ಎಲ್.ಸಿಯಲ್ಲಿ ನಾಲ್ಕು ಬಾರಿ ಡುಮ್ಕಿ ಹೊಡೆದವನು ಇಂಜಿನಿಯರ್ ಆಗುವ ಅಥವಾ ಡಾಕ್ಟರ್ ಆಗುವ ಕನಸು ಕಂಡರೆ ಹೇಗೆ?
ನಮ್ಮ ನಮ್ಮ ಯೋಗ್ಯತೆಗೆ ಅನುಗುಣವಾಗಿ ನಾವು ನಮ್ಮ ಆಶೋತ್ತರಗಳನ್ನು ಬೆಳೆಸಿ ಸಾಧಿಸುವುದು ಜಾಣತನ ಎಂಬ ಎಚ್ಚರಿಕೆ ಈ ಗಾದೆಯಲ್ಲಿ ಸುಂದರವಾಗಿ ಮೈಗೂಡಿದೆ.