ಕಾಲಾತೀತವಾದ ಸತ್ಯವನ್ನು ಜನಪ್ರಿಯವಾದ ರಾಮಾಯಣ, ಮಹಾಭಾರತದಂಥ ಪುರಾಣಗಳ ಘಟನೆಗಳಲ್ಲಿ ಕಂಡುಕೊಂಡು ಅದನ್ನು ಪುಟ್ಟ ಗಾದೆಗಳ ಮೂಲಕ ಸಾರ್ವಜನಿಕರಿಗೆ ಮುಟ್ಟಿಸುವ ಹಿಂದಿನವರ ಸೇವೆ ಅದ್ಭುತವಾದದ್ದು. ರಾಮಾಯಣದ ಒಂದು ಸನ್ನಿವೇಶವನ್ನು ಎತ್ತಿಕೊಂಡು ಸದ್ಭಾವನೆಯಿಂದ ಮಾಡುವ ಯಾರ ಭಕ್ತಿಯೂ ಕಿರಿದಾದದ್ದಲ್ಲ, ಯಾವ ಸೇವೆಯೂ ಕಿರಿದಾದದ್ದಲ್ಲ ಎಂದು ಈ ಗಾದೆ ಸಾರಿ ಹೇಳುತ್ತದೆ.
ರಾವಣನೆಂಬ ದುಷ್ಟನ ಸಂಹಾರಕ್ಕಾಗಿ ಲಂಕೆಗೆ ಹೋಗಲು ಶ್ರೀರಾಮನು ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸಬೇಕೆಂದು ಸಂಕಲ್ಪಿಸಿಕೊಂಡಾಗ, ರಾಮನ ಪರಮಭಕ್ತನಾದ ಆಂಜನೇಯ ತನ್ನ ಕಪಿಸೇನೆಯನ್ನು ಬಳಸಿ ಸಮುದ್ರದ ದಂಡೆಯ ಮೇಲಿರುವ ಕಲ್ಲು ಬಂಡೆಗಳನ್ನು ಹೊತ್ತು ತಂದು ಒಂದು ಸೇತುವೆಯನ್ನು ನಿರ್ಮಿಸುತ್ತಾನೆ. ಅದನ್ನು ಕಂಡ ಅಳಿಲೊಂದು ಬಂಡೆಯಷ್ಟು ಭಾರ ತನ್ನಿಂದ ಹೊತ್ತು ತರಲಾಗುವುದಿಲ್ಲ ಎಂಬ ಕಾರಣದಿಂದಾಗಿ ಸುಮ್ಮನೆ ಕುಳಿತು ನೋಡುತ್ತಾ ಕಾಲಹರಣ ಮಾಡುವುದಿಲ್ಲ. ತನ್ನಿಂದ ಹೊತ್ತು ತರಲು ಸಾಧ್ಯವಾಗಬಹುದಾದ ಮರಳನ್ನು ಸೇತುವೆಯ ನಿರ್ಮಾಣಕ್ಕೆ ಪೂರಕವಾಗಿ ಅದು ಜಮಾಯಿಸುತ್ತದೆ. ಹಾಗೆ ಜಮಾಯಿಸುವ ಆ ಅಳಿಲಿನ ರೀತಿ ಕೂಡಾ ವಿಚಿತ್ರ. ಮೈಯನ್ನು ನೀರಲ್ಲಿ ಒದ್ದೆಮಾಡಿಕೊಂಡು, ದಡದ ಮರಳಲ್ಲಿ ಹೊರಳಾಡಿ, ಸೇತುವೆ ಕಟ್ಟುವ ಸ್ಥಳಕ್ಕೆ ಹೋಗಿ ಅಳಿಲು ತನ್ನ ಮೈಯನ್ನು ಒದರಿ ಮೈಗೆ ಅಂಟಿಕೊಂಡ ಮರಳನ್ನು ಬೀಳಿಸುತ್ತದೆ. ಅದನ್ನು ನೋಡಿದ ರಾಮನಿಗೆ ಸಶಕ್ತನಾದ ಆಂಜನೇಯ ಮತ್ತು ಆತನ ಬಂಟರ ಭಕ್ತಿ ಮತ್ತು ಸೇವೆಗಿಂತ ಅಶಕ್ತವಾದ ಆ ಪುಟ್ಟ ಅಳಿಲಿನ ಭಕ್ತಿ ಮತ್ತು ಸೇವೆ ಹಿರಿದಾಗಿ ಕಾಣುತ್ತದೆ. ರಾಮನು ಪ್ರೀತಿಯಿಂದ ಅಳಿಲಿನ ಮೈಸವರಿ ತನ್ನ ಕೃತಜ್ಞತೆಯನ್ನು ಸಲ್ಲಿಸಿದನಂತೆ. ಅಂದಿನಿಂದ ರಾಮನ ಬೆರಳಿನ ಗುರುತು ಅಳಿಲುಗಳ ಬೆನ್ನಮೇಲೆ ಶಾಶ್ವತವಾಗಿ ಉಳಿದವಂತೆ. ಮಹತ್ತರವಾದ ಕಾರ್ಯ ಸಾಧಿಸುವಾಗ ಚಿಕ್ಕವರ ಸೇವೆಯೂ ಮುಖ್ಯ ಎಂಬುದನ್ನು ಈ ಗಾದೆ ಎತ್ತಿ ತೋರಿಸುತ್ತದೆ.
ಗಾಂಧಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ಅವರ ಬೆಂಬಲಕ್ಕೆ ನಿಂತ ನೆಹರು ಮತ್ತು ವಲ್ಲಭಭಾಯಿ ಪಟೇಲರ ದೇಣಿಗೆ ಮಾತ್ರ ಅವರಿಗೆ ಮುಖ್ಯವಾಗಿರಲಿಲ್ಲ. ಹಳ್ಳಿಹಳ್ಳಿಗಳಿಂದ ಹರಿದು ಬರುತ್ತಿದ್ದ ಸಹಸ್ರಾರು ಸಾಮಾನ್ಯರ ತ್ಯಾಗವೂ ಅವರಿಗೆ ಮುಖ್ಯವಾಗಿತ್ತು. ಭಕ್ತರ ವಿಷಯದಲ್ಲಿ ದೇವರಿಗೆ ಹೇಗೆ ಭೇದಭಾವ ಇರುವುದಿಲ್ಲವೋ ಅದೇ ರೀತಿ ಜನನಾಯಕನಿಗೆ ಪ್ರಜೆಗಳ ವಿಷಯದಲ್ಲಿ ಭೇದಭಾವ ಇರಬಾರದು. ಸೇವೆಯ ವಿಷಯ ಬಂದಾಗ ತನ್ನಿಂದ ಏನು ಮಹಾ ಆದೀತು ಎಂದು ಯಾವ ಪ್ರಜೆಯೂ ಹಿಂದೆಸರಿದು ಅದು ತನಗೇನೂ ಸಂಬಂಧಿಸಿದ್ದಲ್ಲ ಎನ್ನುವಂತೆ ಹೊರಗಾಗಬಾರದು ಎನ್ನುವ ಸಂದೇಶಕ್ಕೆ ಪ್ರಸ್ತುತ ಗಾದೆ ಹೇಳಿಮಾಡಿಸಿದಂತಿದೆ.
ಬೆನ್ನಿನ ಮೇಲೆ ಮೂರು ಬಿಳಿಯ ಪಟ್ಟೆಯನ್ನು ಪಡೆದಿರುವ ಪುಟ್ಟ ಅಳಿಲು ಅಪಾರ ದೇಶಭಕ್ತಿಯ, ದೇಶಸೇವೆಯ ನಿಃಸ್ವಾರ್ಥ ಕಾಯಕದ ಪ್ರತಿನಿಧಿಯಾಗಿ ನಮ್ಮ ಮುಂದೆ ನಿಲ್ಲುವಂತೆ ಮಾಡಿರುವುದು ಸುಂದರವಾಗಿದೆ. ದುಡಿಯಲು ಪ್ರಾರಂಭ ಮಾಡದ ಶಾಲಾಮಕ್ಕಳು, ಈ ಗಾದೆಯ ಪ್ರೇರಣೆಯಿಂದಾಗಿ, ಭೂಕಂಪದಿಂದ, ಜಲಪ್ರಳಯದಿಂದ ಮನೆಮಠ ಕಳೆದುಕೊಂಡವರ ಸಹಾಯಕ್ಕಾಗಿ, ಮನೆಮನೆಗೆ ಗುಂಪಲ್ಲಿ ಹೋಗಿ ನಿಧಿ ಸಂಗ್ರಹ ಮಾಡುವ ಸತ್ಕಾರ್ಯವನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
ಈ ಗಾದೆ ಸಾಂಕೇತಿಕವಾಗಿ (ಸಿಂಬಾಲಿಕ್) ಹಾಗೂ ಅಡಕವಾಗಿ (ಕ್ರಿಪ್ಟಿಕ್) ರಚನೆಗೊಂಡಿರುವುದರಿಂದ ಬಳಸಲು ಸುಲಭವಾಗಿದೆ; ಅಷ್ಟೇ ಪ್ರಭಾವಶಾಲಿಯೂ ಆಗಿದೆ.?