ಗಾದೆಗಳು ಹುಟ್ಟಿಕೊಂಡಿದ್ದು ಹೆಚ್ಚಾಗಿ ಗ್ರಾಮೀಣ ಹಿನ್ನೆಲೆಯಲ್ಲಿ; ಜನಸಾಮಾನ್ಯರನ್ನು ಎಚ್ಚರಿಸುವ ಉದ್ದೇಶದಿಂದಾಗಿ.
ಹಳ್ಳಿಯಕಡೆ ಹೆಚ್ಚಾಗಿ ಹುಲ್ಲಿನ ಮನೆಗಳು. ಮಳೆಗಾಲ ಪ್ರಾರಂಭವಾಗುವ ಮೊದಲೇ ಪ್ರತಿವರ್ಷ ಮಾಡಿಗೆ ಹೊದಿಸಿದ ಹುಲ್ಲನ್ನು ಬದಲಾಯಿಸಬೇಕು. ಆದರೆ ಒಬ್ಬ ಸೋಮಾರಿ ನಾಳೆ ಮಾಡಿದರಾಯ್ತು ಎಂದು ಮುಂದೂಡುತ್ತಲೇ ಬರುತ್ತಾನೆ. ಮಳೆ ಪ್ರಾರಂಭವಾಗಿ ಬಿಡುತ್ತದೆ. ಮನೆಯೊಳಗೆಲ್ಲ ಸೋರುವ ನೀರು. ಮೈ ಒದ್ದೆಯಾಗಿ ಗಂಡ ನಡುಗುತ್ತಾ ಕೂತಿದ್ದನ್ನು ನೋಡಿದ ಅವನ ಹೆಂಡತಿ `ನಾಳೆ ಎಂದವನ ಮನೆ ಹಾಳು’ ಎಂದು ಬಯ್ಯುತ್ತಾಳೆ. ಯಾವುದೇ ಕಾರ್ಯವಿರಲಿ, ಅದನ್ನು ಸಕಾಲದಲ್ಲಿ ಮಾಡಿ ಮುಗಿಸದಿದ್ದರೆ ನಷ್ಟ ಸಂಭವಿಸುತ್ತದೆ ಎನ್ನುವ ಎಚ್ಚರಿಕೆಯ ಮಾತಿದು.
ಬಹಳಕಾಲದ ಹಿಂದೆ ನಾನೊಂದು ಹಳ್ಳಿಗೆ ಹೋದಾಗ ಕೆಲವರ ಮನೆಯ ಬಾಗಿಲ ಮೇಲೆ, ಗೋಡೆ ಮೇಲೆ `ನಾಳೆ ಬಾ’ ಎಂದು ಬರೆದಿರುವುದನ್ನು ನೋಡಿ ಬೆರಗಾಗಿ `ಹೀಗೇಕೆ?’ ಎಂದು ಕೇಳಿದ್ದಕ್ಕೆ ಅಲ್ಲಿಯ ಒಬ್ಬ ಮುದುಕ ಕೊಟ್ಟ ಉತ್ತರ ವಿಚಿತ್ರವಾಗಿತ್ತು. ಹಾಗೆ ಬರೆದಿರುವುದು ಭೂತ ಪ್ರೇತಗಳ ನಿವಾರಣೆಗಾಗಿಯಂತೆ. ಹೊತ್ತು ಗೊತ್ತಿಲ್ಲದೆ ಪೀಡಿಸಲು ಬರುವ ಈ ದುಷ್ಟ ದೆವ್ವಗಳಿಗೆ `ಬರಬೇಡಿ’ ಎಂದು ಸೂಚಿಸಿದರೆ ಅವು ಸಿಟ್ಟಾಗುತ್ತವಂತೆ. `ನಾಳೆ ಬಾ’ ಎಂದು ಸೌಜನ್ಯಕರವಾಗಿ ಸೂಚಿಸುವುದು ಕ್ಷೇಮಕರವಂತೆ. ದೆವ್ವ ಮನೆಯ ಮುಂದೆ ಬರೆದಿರುವ `ನಾಳೆ ಬಾ’ ಎನ್ನುವ ಆಹ್ವಾನ ಓದಿ ಕೋಪಿಸಿಕೊಳ್ಳದೆ ಹಿಂತಿರುಗುತ್ತದಂತೆ. ಇವತ್ತಿನ ಸಂದರ್ಭದಲ್ಲಿ ಸಾಲಗಾರ ಮನೆಗೆ ಬಂದಾಗ ‘ಇಲ್ಲ’ ಎಂದು ಹೇಳುವ ಬದಲು `ನಾಳೆ ಬನ್ನಿ’ ಎಂದು ಹೇಳಿಕಳುಹಿಸುವುದು ಸಾಮಾನ್ಯವಾಗಿದೆ. ‘ನಾಳೆ’ ಎನ್ನುವ ಪದಕ್ಕೆ ಇಲ್ಲಿ ಸೀಮಿತ ಅರ್ಥವಿಲ್ಲ. ಮರುದಿನವೇ ಎಂಬ ಖಚಿತತೆ ಇಲ್ಲ. ಭವಿಷ್ಯತ್ಕಾಲಲ್ಲಿ ಅದು ಯಾವಾಗಲಾದರೂ ಆಗಬಹುದು. ಆ ಕಾಲ ಬರದೆಯೂ ಹೋಗಬಹುದು. ‘ನಾಳೆ’ ಎನ್ನುವ ಪದದಲ್ಲಿ ಅನಿಶ್ಚಿತತೆ ಅಡಗಿದೆ. ಅದರಲ್ಲಿ ಕಮಿಟ್‌ಮೆಂಟಿಲ್ಲ. ಹಾಗಾಗಿ ರಾಜಕಾರಣಿಗಳಿಗೆ ಇದು ಹೇಳಿ ಮಾಡಿಸಿದ ಪದ. ಕಾಟದಿಂದ ತಪ್ಪಿಸಿಕೊಳ್ಳಲು ನೆರವಾಗುವ ಪದ.
‘ನಾಳೆ’ ಎನ್ನುವ ಪದದಲ್ಲೇ ನಕಾರಾತ್ಮಕ ಸೂಚನೆ. ‘ನಾಡಿದ್ದು’ ಎನ್ನುವ ಪದದಲ್ಲಿ ಇರುವಷ್ಟು ಖಚಿತತೆ ‘ನಾಳೆ’ ಎನ್ನುವ ಪದದಲ್ಲಿ ಇಲ್ಲ. `ಇವತ್ತು’ ಎನ್ನುವ ಪದದಲ್ಲಿ ಈಗಲೇ ಎನ್ನುವುದಕ್ಕೆ ಒತ್ತು ಇದೆ.
ದೈನಂದಿನ ಪಾಠಗಳನ್ನು ಅವತ್ತವತ್ತೇ ಓದಿ ಮುಗಿಸಿ, ಕ್ರಮವಾಗಿ ಕಲಿಯಿರಿ ಎಂದು ಗುರುಗಳು ಎಷ್ಟೇ ಬುದ್ಧಿವಾದ ಹೇಳಿದರೂ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ದೂರವಿದೆ ನಾಳೆ ಓದಿದರಾಯ್ತು ಎಂದು ಮುಂದೂಡುತ್ತಲೇ ಬರುತ್ತಾರೆ. ಪರೀಕ್ಷೆ ಹತ್ತಿರ ಬಂದಾಗ ಹಗಲಿರುಳೆನ್ನದೆ ಓದುತ್ತಾರೆ. ಆತಂಕದಿಂದ ಓದಿದ್ದು ತಲೆಗೆ ಹತ್ತುವುದಿಲ್ಲ. ಪರೀಕ್ಷೆಯಲ್ಲಿ ಫೇಲಾಗುತ್ತಾರೆ. ಒಂದು ವರ್ಷವೇ ಹಾಳಾಗಿಹೋಗುತ್ತದೆ. ಸಾಧನೆಯ ಎಲ್ಲ ಕ್ಷೇತ್ರಕ್ಕೂ ಈ ಗಾದೆ ಅನ್ವಯವಾಗುತ್ತದೆ.
ಕೆಲವರು ಕೆಲವು ದಿನಗಳು ಅಶುಭವೆಂದು ಮಾಡಬೇಕಾದ ಕೆಲಸವನ್ನು ಮುಂದಕ್ಕೆ ತಳ್ಳುವುದುಂಟು. ಇದು ಸರಿಯಲ್ಲ. ಕೆಲಸಮಾಡುವವನಿಗೆ ಎಲ್ಲ ದಿನಗಳೂ ಶುಭ ದಿನಗಳೇ. `ಶುಭಸ್ಯ ಶೀಘ್ರಂ’ ಎನ್ನುವುದು ಇದಕ್ಕಾಗಿಯೇ.” Hit the nail when it’s hot” ಎನ್ನುವ ಆಂಗ್ಲೋಕ್ತಿಯಿದೆ. ವಿಳಂಬದಿಂದ ವಿನಾಶ ಎನ್ನುವ ಮಾತು ಎಲ್ಲ ಭಾಷೆಯಲ್ಲೂ ಇದೆ.