ಪರಸ್ಪರ ಸಹಕಾರವಿಲ್ಲದೆ ಯಾರೂ ತಮ್ಮ ಜೀವನವನ್ನು ಉಜ್ಜ್ವಲಗೊಳಿಸಲಾಗುವುದಿಲ್ಲ. ಸಹಕಾರವಿಲ್ಲದೆ ಬದುಕಿಲ್ಲ, ಸಹಕಾರವಿಲ್ಲದೆ ಪ್ರಗತಿ ಇಲ್ಲ, ಸಹಕಾರವಿಲ್ಲದೆ ನೆಮ್ಮದಿಯೂ ಇಲ್ಲ.
ಮನುಷ್ಯನೊಬ್ಬ ಸಂಘಜೀವಿ. ಪರಸ್ಪರ ಸಹಕಾರದಿಂದ ಜೀವಿಸಿದರೆ ಆತನ ಬದುಕು ಹಸನಾಗುತ್ತದೆ; ಅಸಹಕಾರದಿಂದ ಜೀವಿಸಿದರೆ ಪತನವಾಗುತ್ತದೆ. ಈ ಜಗತ್ತಿನಲ್ಲಿ ಎಲ್ಲ ಜೀವಜಂತುಗಳೂ ಪರಸ್ಪರ ಸಹಕಾರದಿಂದ ಬದುಕುತ್ತವೆ. ಕಾಡಿನಲ್ಲಿ ಬದುಕುತ್ತಿರುವ ಕ್ರೂರಪ್ರಾಣಿಗಳಾಗಲಿ, ಸಾಧುಪ್ರಾಣಿಗಳಾಗಲಿ ಯಾವಾಗಲೂ ಒಟ್ಟಾಗಿ ಬದುಕುತ್ತವೆ. ಏಕಾಂಗಿಯಾಗಿ ಬದುಕಿದರೆ ತಮ್ಮ ಜೀವಕ್ಕೆ ಅಪಾಯವಿದೆ ಎಂಬ ಅರಿವು ಆ ಪ್ರಾಣಿಗಳಲ್ಲಿದೆ.
ಇರುವೆಗಳು ಕೂಡ ಪರಸ್ಪರ ಸಹಕಾರದಿಂದ ಗುಂಪಾಗಿ ಬದುಕುತ್ತವೆ. ಇರುವೆಗಳಲ್ಲೂ ಆಹಾರ ಸಂಗ್ರಹಣೆ, ಮರಿಗಳ ರಕ್ಷಣೆ, ತಮ್ಮ ಗುಂಪಿನ ಹಿತಾಸಕ್ತಿಯನ್ನು ಕಾಪಾಡಲು ಕಾದಾಟ – ಹೀಗೆ ಅವು ತಮ್ಮದೇ ರೀತಿಯಲ್ಲಿ ಪರಸ್ಪರ ಸಹಕಾರದಿಂದ, ಸಾಮರಸ್ಯದಿಂದ ಬದುಕುತ್ತವೆ. ಇಂತಹ ಸಂಘಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದರೆ ಮಾತ್ರ ಸಹಕಾರತತ್ತ್ವ ಸಾರ್ಥಕವಾಗುತ್ತದೆ. ಯಾರಾದರೂ ಕರ್ತವ್ಯಲೋಪವೆಸಗಿದಲ್ಲಿ ಸಹಕಾರದ ಕೊಂಡಿ ದುರ್ಬಲವಾಗುತ್ತದೆ.
ಕೇವಲ ಜೀವಜಂತುಗಳಷ್ಟೆ ಸಹಕಾರದಿಂದ ಬದುಕಿದರೆ ಸಾಕಾಗದು, ಸೃಷ್ಟಿಯಲ್ಲಿ ಎಲ್ಲವೂ ಪರಸ್ಪರ ಸಹಕಾರದಿಂದಿರಬೇಕಾಗುತ್ತದೆ. ಸೃಷ್ಟಿಯಲ್ಲಿ ಸಹಕಾರ ಇಲ್ಲದಿದ್ದರೆ ನಾವು ಒಂದು ಹೆಜ್ಜೆಯೂ ಮುಂದುವರಿಯಲಿಕ್ಕಾಗುವುದಿಲ್ಲ. ಗ್ರಹಗಳು ಸೂರ್ಯನನ್ನು ಸುತ್ತುವಾಗ ಪರಸ್ಪರ ಸಹಕಾರದಿಂದ ಸುತ್ತಬೇಕು. ಒಂದೇ ಒಂದು ಗ್ರಹ ಸಹಕಾರತತ್ತ್ವದಿಂದ ಹೊರಬಂದರೂ ಉಳಿದ ಗ್ರಹಗಳು ಪರಸ್ಪರ ಡಿಕ್ಕಿ ಹೊಡೆದು ಸರ್ವನಾಶವಾಗುವ ಸಾಧ್ಯತೆ ಇದೆ. ಭೂಮಿಗೂ, ಸೂರ್ಯನಿಗೂ ಇರುವ ಅಂತರ ನಿರಂತರವಾಗಿ ಕಾಪಾಡಬೇಕಾಗುತ್ತದೆ. ಭೂಮಿಯಲ್ಲಾಗಲಿ, ಸೂರ್ಯನಲ್ಲಾಗಲಿ ಸಾಮರಸ್ಯದ ಕೊರತೆಯಾದರೆ ಭೂಮಿಯಲ್ಲಿರುವ ಎಲ್ಲ ಜೀವಸಂಕುಲಗಳೂ ನಾಶವಾಗುವುದರಲ್ಲಿ ಸಂಶಯವಿಲ್ಲ. ಮಳೆ, ಚಳಿ, ಬಿಸಿಲು ಆಯಾಯಾ ಕಾಲದಲ್ಲಿಯೇ ಬರಬೇಕು. ಅದೇನಾದರೂ ಅದಲು ಬದಲಾದರೆ ನಮ್ಮ ಬದುಕಿನ ಬವಣೆ ಹೇಳತೀರದು.
ಒಬ್ಬ ಕುಂಬಾರನಿದ್ದ. ಆತನಿಗೆ ಇಬ್ಬರು ಪುತ್ರಿಯರು. ಒಬ್ಬಳನ್ನು ರೈತನಿಗೆ ಕೊಟ್ಟು ಮದುವೆ ಮಾಡಿದ್ದರೆ, ಇನ್ನೊಬ್ಬಳನ್ನು ಕುಂಬಾರನ ಮನೆಗೆ ಕೊಡಲಾಗಿತ್ತು. ಒಮ್ಮೆ ತಂದೆ ಮೊದಲ ಮಗಳ ಮನೆಗೆ ಹೋದ. “ಮಗಳೇ, ನೀನು ಹೇಗಿದ್ದೀಯಾ? ಎಲ್ಲರೂ ಆರೋಗ್ಯ ತಾನೇ?” ರೈತನ ಪತ್ನಿ ಹೇಳಿದಳು – “ಎಲ್ಲಾ ಸರಿಯಾಗಿದೆ ಅಪ್ಪ, ಆದರೆ ಮಳೆಯಿಲ್ಲದೆ ಗದ್ದೆಯೆಲ್ಲ ಸುಟ್ಟುಹೋಗುತ್ತಿದೆ. ಆದ್ದರಿಂದ ದೇವರಿಗೆ ಬೇಗನೆ ಮಳೆ ಸುರಿಸುವಂತೆ ಪ್ರಾರ್ಥನೆ ಮಾಡಪ್ಪ” ಎಂದಳು.
ಮತ್ತೆ ತಂದೆ ಎರಡನೇ ಮಗಳ ಮನೆಗೆ ಹೋದ. ಅವಳೋ ಕುಂಬಾರನ ಪತ್ನಿ. “ಅಪ್ಪಾ, ಎಲ್ಲಾ ಚೆನ್ನಾಗಿದೆ. ಆದರೆ ಹಸಿಮಣ್ಣಿನ ಮಡಕೆಗಳನ್ನು ಸುಡಲೆಂದು ಭಟ್ಟಿಗೆ ಹಾಕಿದ್ದೇವೆ. ಆದ್ದರಿಂದ ದೇವರಿಗೆ ಮಳೆ ಸುರಿಸಬಾರದೆಂದು ಪ್ರಾರ್ಥನೆ ಮಾಡಪ್ಪ” ಎಂದು ವಿನಂತಿಸಿದಳು.
ತಂದೆಗೆ ಫಜೀತಿಗಿಟ್ಟುಕೊಂಡಿತು. ಮಳೆ ಬರಲಿ ಎಂದರೆ ಕುಂಬಾರನ ಪತ್ನಿಗೆ ತೊಂದರೆ. ಮಳೆ ಹೋಗಲಿ ಎಂದರೆ ರೈತನ ಪತ್ನಿಗೆ ಕಷ್ಟ. ಆದ್ದರಿಂದ ಆತ ಇಬ್ಬರು ಪುತ್ರಿಯರನ್ನೂ ಹತ್ತಿರ ಕರೆದು ಹೇಳಿದ – “ಈಗ ಒಳ್ಳೆಯ ಮಳೆಯಾದರೆ ಗದ್ದೆಯಲ್ಲಿ ಒಳ್ಳೆಯ ಫಸಲು ಬರುತ್ತದೆ. ಅಕ್ಕ ತನ್ನ ತಂಗಿಗೆ ಫಸಲಿನ ಅರ್ಧ ಭಾಗ ನೀಡಬೇಕು. ಮಳೆ ಬರಲಿಲ್ಲವೆಂದಾದರೆ ಮಡಕೆಗಳು ಚೆನ್ನಾಗಿ ಬೇಯುತ್ತವೆ. ಅದರ ಅರ್ಧ ಲಾಭಾಂಶವನ್ನು ತಂಗಿ ಅಕ್ಕನಿಗೆ ಕೊಡಬೇಕು. ದೇವರ ವ್ಯವಸ್ಥೆ ಏನೇ ಇರಲಿ, ಇಬ್ಬರೂ ಒಬ್ಬರಿಗೊಬ್ಬರು ನೆರವಾದರೆ ಬದುಕು ಸಹನೀಯವಾಗುತ್ತದೆ” ಎಂದು ಇಬ್ಬರನ್ನೂ ಸಮಾಧಾನಪಡಿಸಿದಾಗ, ಅವರು ಒಪ್ಪಿಕೊಂಡರು.
ಜೀವಶಕ್ತಿ
ಪರಸ್ಪರ ನೆರವಾಗುವಂಥ ಮನೋಭಾವ ನಮ್ಮ ಸಾಮಾಜಿಕ ಜೀವನದಲ್ಲಿ ಹಾಸುಹೊಕ್ಕಾಗಿ ವ್ಯಾಪಿಸಿದರೆ, ಎಂಥ ಘನಸಮಸ್ಯೆಯೇ ಬಂದರೂ ಅದನ್ನು ಎದುರಿಸಲು ಸಾಧ್ಯ. ನೀರಿನ ಅಭಾವ, ಆರ್ಥಿಕ ಸಂಕಷ್ಟ, ಸಾಂಕ್ರಾಮಿಕ ರೋಗಗಳ ಬಾಧೆ, ಹಸುಗಳಿಗೆ ಮೇವಿನ ಕೊರತೆ ಇತ್ಯಾದಿಯಾಗಿ ಯಾವುದೇ ಸಮಸ್ಯೆ ಬಂದರೂ ಪರಸ್ಪರ ಸಹಯೋಗದಿಂದ ಅವುಗಳ ನಿವಾರಣೆ ಸಾಧ್ಯ.
ಪ್ರಕೃತಿಯ ಹೊಂದಾಣಿಕೆಯ ಬಗ್ಗೆ ಡಿ.ವಿ.ಜಿ. ತಮ್ಮ ಕಗ್ಗದಲ್ಲಿ ಬಹಳ ಸೊಗಸಾಗಿ ಹೇಳುತ್ತಾರೆ –
ರವಿಮಾತ್ರದಿಂದಲ್ಲ ಭುವಿಮಾತ್ರದಿಂದಲ್ಲ |
ಭುವನ ಪೋಷಣೆಯುಭಯ ಸಹಕಾರದಿಂದ ||
ವಿವಿಧ ಶಕ್ತಿ ರಸಂಗಳೇಕೀಭವಿಸೆ ಜೀವ |
ಅವಿತರ್ಕ್ಯ ಸೂಕ್ಷ್ಮವದು – ಮಂಕುತಿಮ್ಮ ||
ಸೂರ್ಯನೊಬ್ಬನಿಂದಲೇ ಅಥವಾ ಭೂಮಿಯೊಂದರಿಂದಲೇ ಈ ಪ್ರಪಂಚ ನಡೆಯುತ್ತಿಲ್ಲ. ಇದರ ಪಾಲನೆ ಈ ಇಬ್ಬರ ಸಹಕಾರದಿಂದ. ವಿಧವಿಧವಾದ ಶಕ್ತಿ ಮತ್ತು ಸಾರಗಳು ಒಂದಾದರೆ ಜೀವಶಕ್ತಿ ಆಗುತ್ತದೆ. ಈ ಸೂಕ್ಷ್ಮವು ತರ್ಕಕ್ಕೆ ಸಿಗುವುದಿಲ್ಲ.
ನಿಸರ್ಗದಲ್ಲಿ ಪರಸ್ಪರ ಹೊಂದಾಣಿಕೆಯ ಮನೋಭಾವವನ್ನು ನಾವು ಕಾಣುತ್ತೇವೆ. ಒಂದು ಮರದ ಬುಡಕ್ಕೆ ಒಂದು ಕೊಡ ನೀರು ಎರೆದರೆ ಆ ಮರದ ಪಕ್ಕದಲ್ಲಿರುವ ಗಿಡವೊಂದರ ಬೇರುಗಳೂ ಆ ನೀರನ್ನು ಸ್ವೀಕರಿಸಿದರೆ ಆ ಮರ ಬೇಡವೆನ್ನುವುದಿಲ್ಲ. ಕಾಗೆಯೊಂದು ಆಗಸದಲ್ಲಿ ಹಾರಾಡುತ್ತಾ, ಎಲ್ಲಾದರೂ ಬಯಲಲ್ಲಿ ಒಂದು ರೊಟ್ಟಿ ಅಥವಾ ಮಾಂಸದ ಚೂರನ್ನು ಕಂಡರೆ ತನ್ನ ಬಳಗದವರನ್ನೆಲ್ಲ `ಕಾ…ಕಾ…’ ಎಂದು ಕೂಗಿ ಕರೆಯುತ್ತದೆ.
ಪಶು-ಪಕ್ಷಿಗಳಲ್ಲಿ, ಮರಗಿಡಗಳಲ್ಲಿರುವ ಈ ತೆರನಾದ ಸಹಕಾರಮನೋವೃತ್ತಿ ಮಾನವಸಮುದಾಯದಲ್ಲೂ ಏಕೆ ಗೋಚರಿಸಬಾರದು? ಇಡೀ ಪ್ರಕೃತಿಯೇ ಪರಸ್ಪರ ಸಹಕಾರದಿಂದ, ಸಾಮರಸ್ಯದಿಂದ ಬದುಕುತ್ತಿರುವಾಗ ಪ್ರಕೃತಿಯ ಕೂಸಾದ ಮನುಷ್ಯನು ಇದಕ್ಕೆ ಹೊರತಾಗಿರಲು ಸಾಧ್ಯವಿಲ್ಲ. ಮನುಷ್ಯ-ಮನುಷ್ಯರ ನಡುವೆ ಮಾತ್ರ ಸಹಕಾರ ಇರಬೇಕಾದದ್ದಲ್ಲ. ಪ್ರತಿಯೊಬ್ಬ ಮನುಷ್ಯನ ದೇಹದಲ್ಲೂ ಸಹಕಾರ, ಸಾಮರಸ್ಯ ಬೇಕು. ಮನುಷ್ಯನ ಪ್ರತಿಯೊಂದು ಅಂಗಕ್ಕೂ ತನ್ನದೇ ಆದ ಜವಾಬ್ದಾರಿ, ಕರ್ತವ್ಯಗಳು ಇರುತ್ತವೆ. ಆ ಅಂಗಗಳು ತಮ್ಮ ತಮ್ಮ ಕರ್ತವ್ಯದಿಂದ ವಿಮುಖವಾದರೆ, ನಿಷ್ಕ್ರಿಯವಾದರೆ, ಜೀವವ್ಯಾಪಾರ ಮುಂದುವರಿಯುವುದೇ ಕಷ್ಟ.
ಅಸಮಂಜಸ ಧೋರಣೆ
ಸಾಂವಿಧಾನಿಕವಾಗಿ ನಾವು ಸಮಾಜವಾದೀಯ ಸಮಾಜರಚನೆಯ ಧ್ಯೇಯವನ್ನು ಒಪ್ಪಿಕೊಂಡಿದ್ದೇವೆ. ಸಮಾಜವಾದವೆಂದರೆ ಕೇವಲ ಎಲ್ಲರೂ ಸಮಾನರು ಎಂಬರ್ಥಕ್ಕೆ ಸೀಮಿತವಾಗಿಲ್ಲ. ಲಿಂಗ, ಧರ್ಮ, ಜಾತಿ, ಭಾಷೆ, ಪ್ರದೇಶದ ಆಧಾರದಲ್ಲಿ ಜನರಲ್ಲಿ ಭೇದಭಾವ ಮಾಡಬಾರದು ಎಂಬುದೇ ಸಮಾಜವಾದದ ನಿಜವಾದ ಅರ್ಥ. ಆದರೆ ವ್ಯಕ್ತಿಯ ಶಕ್ತಿ, ಸಾಮರ್ಥ್ಯ, ಅಭಿರುಚಿ, ಪ್ರತಿಭೆ ಇವೆಲ್ಲವನ್ನು ಪರಿಗಣಿಸಿದರೆ ಎಲ್ಲರೂ ಸಮಾನರು ಎಂಬ ತತ್ತ್ವ ಅನ್ವಯವಾಗುವುದಿಲ್ಲ. ಸಮಾಜವಾದದ ದೃಷ್ಟಿಯಲ್ಲಿ ದುರ್ಬಲನೂ, ಶಕ್ತಿವಂತನೂ ಒಂದೇ; ಸಾಕ್ಷರನೂ, ರಾಕ್ಷಸನೂ ಒಂದೇ; ಬುದ್ಧಿಮಾಂದ್ಯನೂ, ಪ್ರತಿಭಾವಂತನೂ ಒಂದೇ; ಸದೃಢನೂ, ಅಂಗವಿಕಲನೂ ಒಂದೇ. ಆದ್ದರಿಂದ ಸಮಾಜವಾದದ ಅಡಿಪಾಯದಲ್ಲಿ ಬೆಳೆದ ಪ್ರಜಾಪ್ರಭುತ್ವದಲ್ಲಿ ಇವರೆಲ್ಲರಿಗೂ ಸಮಾನವಾದ ಹಕ್ಕು ಹಾಗೂ ಕರ್ತವ್ಯವನ್ನು ದಯಪಾಲಿಸಲಾಗಿದೆ.
ಹೊರನೋಟದಿಂದ ಮನುಷ್ಯನನ್ನು ನೋಡಿದಾಗ ಸಮಾಜವಾದದ ಈ ಧೋರಣೆ ಸ್ವಲ್ಪಮಟ್ಟಿಗೆ ಸರಿ. ಆದರೆ ಒಳನೋಟದಿಂದ ನೋಡಿದರೆ ಇದು ಅಷ್ಟೊಂದು ಸಮಂಜಸವಲ್ಲ. ಉದಾಹರಣೆಗೆ ಊಟಕ್ಕೆ ಕೂತಾಗ ವ್ಯಕ್ತಿಭೇದ, ಪಂಕ್ತಿಭೇದ ಮಾಡಬಾರದು ಎಂದು, ಎಲ್ಲರಿಗೂ ಸಮಾನವಾಗಿ ಬಡಿಸು ಎಂದರೆ ಪಾಯಸವನ್ನು ನರಪೇತಲನಿಗೂ ನಾಲ್ಕು ಸೌಟು, ಪೈಲ್ವಾನನಿಗೂ ನಾಲ್ಕು ಸೌಟು ಬಡಿಸು ಎಂದರ್ಥವಲ್ಲ. ರೋಗಿಗೂ, ಆರೋಗ್ಯವಂತನಿಗೂ ಸಮಾನವಾಗಿ ಬಡಿಸು ಎಂದರ್ಥವಲ್ಲ. ಅವರವರ ಜೀರ್ಣಶಕ್ತಿಗೆ ಸರಿಯಾಗಿ, ಅವರವರ ಅಭಿರುಚಿಗೆ ತಕ್ಕಂತೆ ಬಡಿಸು ಎಂದರ್ಥ. ಒಬ್ಬನಿಗೆ ಸಾಂಬಾರು ಇಷ್ಟವಾದರೆ ಆತನಿಗೆ ಸಾಂಬಾರನ್ನು ಎರಡು ಸೌಟು ಜಾಸ್ತಿ ಬಡಿಸಿ, ಪಾಯಸ ಇಷ್ಟವಾದವನಿಗೆ ಎರಡು ಸೌಟು ಪಾಯಸ ಜಾಸ್ತಿ ಬಡಿಸಿದರೆ ಅದು ತಾರತಮ್ಯವಲ್ಲ. ಬದಲಿಗೆ ಅದು ಸಮತತ್ತ್ವ.
ಪಾಂಡವರು ವನವಾಸದಲ್ಲಿದ್ದಾಗ ಎಲ್ಲರೂ ಭಿಕ್ಷೆ ಬೇಡಿ ಆಹಾರವನ್ನು ಮನೆಗೆ ತಂದು ತಾಯಿಯಾದ ಕುಂತಿಯ ಹತ್ತಿರ ಕೊಡುತ್ತಿದ್ದರು. ಕುಂತಿ ಅದನ್ನು ಸರಿಯಾಗಿ ಎರಡು ಪಾಲು ಮಾಡಿ ಅರ್ಧವನ್ನು ಭೀಮನಿಗೆ ಕೊಟ್ಟು, ಉಳಿದರ್ಧವನ್ನು ಮಿಕ್ಕವರೆಲ್ಲರೂ ಹಂಚಿ ತಿನ್ನುತ್ತಿದ್ದರು. ಇಂತಹ ಸಮದೃಷ್ಟಿಯಿಂದ, ಸಹಕಾರದಿಂದ ಪಾಂಡವರು ಬದುಕಿದ್ದರಿಂದಲೇ ಭೀಮನಿಗೆ ಬಕಾಸುರನನ್ನು ಕೊಲ್ಲಲು ಸಾಧ್ಯವಾಯಿತು. ಹೀಗೆ ಸಮಾಜವಾದದ ತಿರುಳಾದ `ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬುದನ್ನು ಸಮಾನತೆಯಿಂದ ಸಾಧಿಸಲಾಗುವುದಿಲ್ಲ. ಬದಲಿಗೆ ಸಹಕಾರದಿಂದ, ಸಾಮರಸ್ಯದಿಂದ ಸಾಧ್ಯವಾಗುತ್ತದೆ.
ಕರ್ತವ್ಯ ಬಾಧ್ಯತೆ
ಪ್ರೊ. ಮಹಮ್ಮದ್ ಯುನುಸ್
ನಮ್ಮ ದೇಶದಲ್ಲಿ ಪ್ರಾಚೀನಕಾಲದಿಂದಲೂ ಆಡಳಿತ ವ್ಯವಸ್ಥೆ ಯಾವುದೇ ಇರಲಿ, ಜನರು ಮಾತ್ರ ಪರಸ್ಪರ ಸಹಕಾರದಿಂದ ಬದುಕುತ್ತಿದ್ದರು. ಇಲ್ಲಿ ಪುರಾತನಕಾಲದಿಂದಲೂ – ವ್ಯಾಪಾರ ಕೂಡ – ಹಣಕ್ಕಿಂತಲೂ ಪರಸ್ಪರ ಸಹಕಾರದಿಂದ ನಡೆಯುತ್ತಿತ್ತು. ತಮ್ಮಲ್ಲಿದ್ದ ವಸ್ತುವನ್ನು ಇತರರಿಗೆ ಕೊಟ್ಟು ಅವರಲ್ಲಿದ್ದ ವಸ್ತುವನ್ನು ತಾವು ಪಡೆಯುತ್ತಿದ್ದರು. ಮನೆಯಲ್ಲಿ ಬೆಳೆದ ಹೆಣ್ಣುಮಕ್ಕಳ ಮದುವೆಯ ಜವಾಬ್ದಾರಿ ಆಯಾಯಾ ಮನೆಯವರದ್ದು ಮಾತ್ರ ಆಗಿರಲಿಲ್ಲ, ಬದಲಿಗೆ ಅದು ಊರಿನವರೆಲ್ಲರ ಕರ್ತವ್ಯವೂ ಆಗಿತ್ತು. ಯಾರಿಗಾದರೂ ಅನಾರೋಗ್ಯವಾದರೆ ಪಕ್ಕದ ಮನೆಯವರು ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು. ಹಿಂದೆ ಮನೆಯಲ್ಲೆ ಆಗುತ್ತಿದ್ದ ಹೆರಿಗೆಗೆ ಅಕ್ಕಪಕ್ಕದ ಸ್ತ್ರೀಯರೆಲ್ಲರೂ ಸಹಕರಿಸುತ್ತಿದ್ದರು.
ವಿನೋಬಾ ಭಾವೆ ನಮ್ಮ ದೇಶದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು. ಗಾಂಧಿಜೀಯವರಿಂದ ಸ್ಫೂರ್ತಿಗೊಂಡು ಸ್ವಾತಂತ್ರ್ಯಸಂಗ್ರಾಮದಲ್ಲಿ ಪಾಲ್ಗೊಂಡವರು. ಭೂದಾನ ಚಳವಳಿಯ ಮೂಲಕ ಸಹಸ್ರಾರು ಎಕರೆ ಭೂಮಿಯನ್ನು ದಾನವಾಗಿ ಪಡೆದು ಅದನ್ನು ಅವಶ್ಯವಿರುವವರಿಗೆ ನೀಡಿ ಸರ್ವೋದಯ ಚಳವಳಿಯ ಮೂಲಕ ಜನರ ಪರಿಸ್ಥಿತಿ ಸುಧಾರಿಸಲು ಶ್ರಮಿಸಿದವರು. ವಿನೋಬಾ ಅವರ ಬಾಲ್ಯದಲ್ಲಿ ನಡೆದ ಘಟನೆಯಿದು. ಅವರ ಮನೆಯ ಪಕ್ಕದಲ್ಲಿ ಒಂದು ಕುಟುಂಬ ಇತ್ತು. ಆ ಕುಟುಂಬದ ಗೃಹಿಣಿ ಅನಾರೋಗ್ಯ ನಿಮಿತ್ತ ಹಾಸಿಗೆ ಹಿಡಿದಾಗ ಅದನ್ನು ನೋಡಿ ವಿನೋಬಾರ ತಾಯಿ ರುಕ್ಮಿಣಿ ಸಹಾಯ ಮಾಡಲು ನಿರ್ಧರಿಸಿ, ಮೊದಲು ತಮ್ಮ ಮನೆಯ ಅಡುಗೆಯನ್ನು ಮಾಡಿಟ್ಟು ಅನಂತರ ಅಸ್ವಸ್ಥ ಗೃಹಿಣಿಯ ಮನೆಗೆ ಹೋಗಲು ಸಿದ್ಧರಾದರು. ಇದನ್ನೆ ಬಾಲಕ ವಿನೋಬಾ ಗಮನಿಸುತ್ತಿದ್ದ. ಅವನು ತಾಯಿಯನ್ನು ಈ ರೀತಿ ಪ್ರಶ್ನಿಸಿದ: “ಅಮ್ಮಾ, ನೀನೆಷ್ಟು ಸ್ವಾರ್ಥಿ! ಮೊದಲು ನಮ್ಮ ಮನೆಯ ಅಡುಗೆಯನ್ನು ಮಾಡಿ ಅನಂತರ ಅವರ ಮನೆಗೆ ಹೋಗಿ ಅಡುಗೆ ಮಾಡುತ್ತೀಯಲ್ಲಾ? ಇದು ನನಗೆ ಸರಿಕಾಣುತ್ತಿಲ್ಲ. ಅವರಿಗೆ ಮೊದಲು ಆಹಾರದ ಆವಶ್ಯಕತೆ ಇದೆಯಲ್ಲವೆ?” ಅದನ್ನು ಕೇಳಿದ ತಾಯಿ ಹೀಗೆ ಉತ್ತರಿಸಿದಳು: “ಮಗು, ನೀನು ಹೇಳುತ್ತಿರುವುದು ಸರಿ. ಆದರೆ ನೀನೆಷ್ಟು ಮೂರ್ಖನಿದ್ದೀಯ! ನಾನು ಬೆಳಗ್ಗೆಯೇ ಹೋಗಿ ಅಡುಗೆಯನ್ನು ಸಿದ್ಧಗೊಳಿಸಿದರೆ ಅವರು ಊಟ ಮಾಡುವ ವೇಳೆ ಅದು ಆರಿಹೋಗುವುದಿಲ್ಲವೆ? ಆದ್ದರಿಂದ ನಾನು ಮನೆಯ ಅಡುಗೆಯನ್ನು ಮೊದಲು ಸಿದ್ಧಗೊಳಿಸಿ, ಅನಂತರ ಅವರ ಮನೆಯ ಅಡುಗೆಯನ್ನು ಸಿದ್ಧಗೊಳಿಸಿದರೆ ಅವರು ಬಿಸಿಬಿಸಿಯಾಗಿ ಊಟಮಾಡಬಹುದಲ್ಲ.” ಈ ಮಾತನ್ನು ಕೇಳಿ ವಿನೋಬಾಗೆ ತನ್ನ ಸಣ್ಣತನಕ್ಕಾಗಿ ನಾಚಿಕೆಯಾಯಿತು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಆ ತಾಯಿಯ ಗುಣವೇ ವಿನೋಬಾರಿಗೆ ಭೂದಾನ ಚಳವಳಿ ನಡೆಸಲು ಪ್ರೇರಣೆ ಕೊಟ್ಟಿತು.
ನಮ್ಮಲ್ಲಿ `All is one’ ಎಂದು ಹೇಳಲಾಗಿದೆಯೇ ಹೊರತು `All are one’ ಎಂದು ಹೇಳಿಲ್ಲ. `ಎಲ್ಲವೂ ಒಂದೇ’ ಎನ್ನುವುದಕ್ಕೂ `ಎಲ್ಲರೂ ಒಂದೇ’ ಎನ್ನುವುದಕ್ಕೂ ವ್ಯತ್ಯಾಸ ಇದೆ. ಎಲ್ಲವೂ ಒಂದೇ ಎಂದರೆ ಏಕಾತ್ಮತೆಯ ಭಾವ. ವಿಶ್ವದ ಒಂದು ಅಂಗ ಮಾನವಸಮಾಜ. ಮಾನವ ಸಮಾಜದ ಅಂಗ ರಾಷ್ಟ್ರ. ಇವುಗಳ ಅಂಗಗಳು ಒಬ್ಬೊಬ್ಬ ವ್ಯಕ್ತಿ. ಏಕಾತ್ಮತೆಯ ಭಾವ ಜಾಗೃತವಾದಾಗ ವ್ಯಕ್ತಿ ಮೂಲಭೂತವೋ (Basic) ಅಥವಾ ಸಮಾಜ ಮೂಲಭೂತವೋ (Basic) ಎಂಬ ಪ್ರಶ್ನೆಯೇ ಉತ್ಪನ್ನವಾಗುವುದಿಲ್ಲ.
ಈ ಜಗತ್ತಿನಲ್ಲಿ ನಾನು ಯಾರದೇ ಸಹಾಯವಿಲ್ಲದೆ ಸ್ವತಂತ್ರವಾಗಿ ಬದುಕುತ್ತೇನೆ ಎಂದು ಯಾರೂ ಎದೆತಟ್ಟಿ ಹೇಳಲಾಗುವುದಿಲ್ಲ. ಯಾಕೆಂದರೆ ಆತ ಹುಟ್ಟಿದ ಕೂಡಲೇ ತಾಯಿಯ ಎದೆಯ ಹಾಲು ಕುಡಿದೇ ಬೆಳೆಯುತ್ತಾನೆ. ದೊಡ್ಡವರಾದ ಮೇಲೂ ನಾವು ತಿನ್ನುವ ಆಹಾರ, ತೊಡುವ ಬಟ್ಟೆ, ವಾಸಿಸುವ ಮನೆ ಎಲ್ಲವೂ ಇನ್ನೊಬ್ಬರ ಸಹಕಾರದಿಂದ ನಮಗೆ ದೊರೆತದ್ದು. ಈ ಸಮಾಜವೇ ನಮಗೆ ರಕ್ಷಣೆ ಕೊಡುತ್ತಿರುವುದು.
ದೈವಿಕ ಸತ್ಯ
ಸರ್ ಅಲೆಕ್ಸಾಂಡರ್ ಫ್ಲೆಮಿಂಗ್
ನಾವು ಸಾಮಾನ್ಯವಾಗಿ ಎರಡು ಪದಗಳನ್ನು ಕೇಳುತ್ತಿರುತ್ತೇವೆ: ಒಂದು `ಅವಲಂಬನೆ’, ಇನ್ನೊಂದು `ಸ್ವಾವಲಂಬನೆ’. ಆದರೆ ಇವೆರಡೂ ಸಹಜವಾದುದಲ್ಲ. ಸಹಜವಾದುದು `ಪರಸ್ಪರಾವಲಂಬನೆ’ ಮಾತ್ರ. ನಾವೂ ಸಹ ಪರಸ್ಪರ ಒಬ್ಬರನ್ನೊಬ್ಬರು ಅವಲಂಬಿಸಿರುವವರೇ. ಇದು ಮನುಷ್ಯ-ಮನುಷ್ಯನ ನಡುವೆ ಮಾತ್ರವೇ ಅಲ್ಲ, ದೇಶ-ದೇಶಗಳ ನಡುವೆ ಮಾತ್ರ ಅಲ್ಲ, ಜೊತೆಗೆ ಮನುಷ್ಯ ಮತ್ತು ಪ್ರಾಣಿಗಳ ನಡುವೆ, ಪ್ರಾಣಿ ಮತ್ತು ವೃಕ್ಷದ ನಡುವೆ ಭೂಮಿ ಮತ್ತು ಸೂರ್ಯನ ನಡುವೆ, ಚಂದ್ರ ಮತ್ತು ಸಾಗರದ ನಡುವೆ ಹೀಗೆ ಪರಸ್ಪರ ಅವಲಂಬನೆಯೆಂಬುದು ಬೆಸೆಯಲ್ಪಟ್ಟಿದೆ. ಅವಲಂಬನೆ ಹಾಗೂ ಸ್ವಾವಲಂಬನೆ ಎರಡೂ ಕೃತಕ. ಪರಸ್ಪರಾವಲಂಬನೆ ಮಾತ್ರ ಸಹಜ. ಅದುವೇ ದೈವಿಕ. ದೈವಿಕ ಮಾತ್ರವೇ ಸತ್ಯ.
ಸಹಕಾರ ಎಂಬ ಸೌಧ `ಕೊಡು-ಕೊಳ್ಳು’ ಎಂಬ ಸಿದ್ಧಾಂತದ ಅಡಿಪಾಯದ ಮೇಲೆ ನಿಂತಿದೆ. ಮನುಷ್ಯನ ಅಭಿವೃದ್ಧಿ ಆತನ ಆರ್ಥಿಕ ಸಬಲತೆಯಿಂದ ಸಾಧಿಸಬಹುದು. ನುಚ್ಚುನೂರಾಗಿದ್ದ ಆರ್ಥಿಕ ವ್ಯವಸ್ಥೆಯನ್ನು ಸಹಕಾರ ಕ್ಷೇತ್ರದಿಂದ ಸರಿದೂಗಿಸಬಹುದು.
ಈ ದೃಷ್ಟಿಯಲ್ಲಿಯೇ ಜುಸ್ಯವ ಎಂಬ ಜ್ಯೂವಿಷ್ ಸಾಧಕ ಹೇಳುತ್ತಾನೆ – ಆತ ಪ್ರತಿದಿನ ತನ್ನ ಪ್ರಾರ್ಥನೆಯಲ್ಲಿ, ದೇವರನ್ನು ಪ್ರಾರ್ಥಿಸುವಾಗ, “ನಾನು ನಿನ್ನ ಮೇಲೆ ಅವಲಂಬಿತನಾಗಿದ್ದೇನೆ ಎಂದು ನನಗೆ ತಿಳಿದಿದೆ. ಆದರೆ ನೀನೂ ಸಹ ನನ್ನ ಮೇಲೆ ಅವಲಂಬಿತನಾಗಿರುವೆಯೆಂದು ನಿನಗೆ ತಿಳಿದಿರಲಿ. ನೀನು ಇಲ್ಲದೆ ನಾನು ಇರಲಾಗುವುದಿಲ್ಲ. ನಾನು ಇಲ್ಲದೆ ನೀನೂ ಸಹ ಇರಲಾಗುವುದಿಲ್ಲವೆಂದು ನಾನು ನಿನಗೆ ನೆನಪಿಸುತ್ತಿದ್ದೇನೆ.” ಹೀಗೆ ವ್ಯಷ್ಟಿ, ಸಮಷ್ಟಿ, ಸೃಷ್ಟಿ ಇವೆಲ್ಲವೂ ಒಂದಕ್ಕೊಂದು ಪೂರಕವಾದದ್ದು. ಅದರಲ್ಲಿ ಒಂದು ಬಿಟ್ಟು ಇನ್ನೊಂದಿರಲು ಸಾಧ್ಯವಿಲ್ಲ. ವ್ಯಷ್ಟಿ, ಸಮಷ್ಟಿ, ಸೃಷ್ಟಿಯಲ್ಲಿ ಸಂಪೂರ್ಣ ಸಾಮರಸ್ಯವಿದ್ದಾಗ ಮನುಷ್ಯ ಪರಮೇಷ್ಠಿಯನ್ನು ಪಡೆಯಬಹುದು.
ಇಡೀ ಸಮಾಜವೇ ಅಸ್ವಸ್ಥವಾದಾಗ ವ್ಯಕ್ತಿಯೊಬ್ಬ ಸ್ವಸ್ಥನಾಗಿರಲು ಸಾಧ್ಯವಿಲ್ಲ. ಎಪಿಕ್ಟೆಟಸ್ ಎಂಬ ಗ್ರೀಕ್ ತತ್ತ್ವಜ್ಞಾನಿಯು ಹೇಳುವಂತೆ, “ಇತರರ ಒಳಿತನ್ನು ಉಂಟುಮಾಡದೆಯೇ ಯಾವನೂ ತನ್ನ ಒಳಿತನ್ನು ಮಾತ್ರ ಸಾಧಿಸಲಾರ.”
ನಾವು ಇನ್ನೊಬ್ಬರ ಕಷ್ಟವನ್ನು ನಿವಾರಿಸಲು ಸಹಕರಿಸಿದರೆ ಅದು ಬ್ಯಾಂಕಿನಲ್ಲಿಟ್ಟ ದುಡ್ಡಿನಂತೆ ಬಡ್ಡಿಸಮೇತ ನಮಗೆ ದೊರಕುತ್ತದೆ. ಫ್ಲೆಮಿಂಗ್ ಎನ್ನುವ ಸ್ಕಾಟ್ಲೆಂಡ್ನ ಬಡರೈತನೊಬ್ಬ ಒಂದು ದಿನ ಸಹಾಯಕ್ಕಾಗಿ ಕೂಗುತ್ತಿರುವ ಒಂದು ಕರೆಯನ್ನು ಕೇಳಿದ. ಕೆಸರಿನೊಳಗೆ ಸೊಂಟದವರೆಗೆ ಇಳಿದುಹೋಗಿದ್ದ ಹುಡುಗನೊಬ್ಬ ಅದರಿಂದ ಬಿಡುಗಡೆ ಹೊಂದಲು ಹೋರಾಡುತ್ತಿದ್ದ. ಫ್ಲೆಮಿಂಗ್ ಕೂಡಲೇ ಆ ಹುಡುಗನನ್ನು ಕಾಪಾಡಿದ.
ಮರುದಿವಸ, ಸೊಗಸಾಗಿ ಒಪ್ಪುವ ಉಡುಪುಗಳನ್ನು ಧರಿಸಿಕೊಂಡಿದ್ದ ಒಬ್ಬ ಶ್ರೀಮಂತ ಫ್ಲೆಮಿಂಗ್ನಲ್ಲಿಗೆ ಬಂದು ಹೇಳಿದ, “ನೀನು ನನ್ನ ಮಗನನ್ನು ಕಾಪಾಡಿದ್ದೀಯ. ನಿನ್ನ ಈ ಒಳ್ಳೆಯ ಕೆಲಸಕ್ಕಾಗಿ ನಾನು ನಿನಗೆ ಬಹುಮಾನ ಕೊಡಲು ಬಯಸುತ್ತೇನೆ!”
“ಇಲ್ಲ ಇಲ್ಲ, ನನ್ನ ಈ ಕಾರ್ಯಕ್ಕಾಗಿ ನಾನು ಯಾವ ಬಹುಮಾನವನ್ನೂ ಸ್ವೀಕರಿಸುವುದಿಲ್ಲ. ಅದು ನನ್ನ ಕರ್ತವ್ಯ ಆಗಿತ್ತು” ಫ್ಲೆಮಿಂಗ್ ಅದಕ್ಕೆ ಉತ್ತರಿಸಿದ.
ಅಲ್ಲೇ ನಿಂತಿದ್ದ ಒಬ್ಬ ಹುಡುಗನನ್ನು ನೋಡಿ ಆ ಶ್ರೀಮಂತ ಕೇಳಿದ, “ಈ ಹುಡುಗ ನಿನ್ನ ಮಗನೇ?” ಹೌದೆಂಬಂತೆ ಫ್ಲೆಮಿಂಗ್ ತಲೆಯಾಡಿಸಿದ. ಉಪಕಾರಕ್ಕೆ ಪ್ರತ್ಯುಪಕಾರ ಎಂಬಂತೆ ಶ್ರೀಮಂತ, ಫ್ಲೆಮಿಂಗ್ನ ಆ ಮಗನನ್ನು ವಿದ್ಯಾವಂತನನ್ನಾಗಿ ಮಾಡಲು ಬಯಸಿದ.
ವರ್ಷಗಳು ಕಳೆದವು. ಫ್ಲೆಮಿಂಗ್ನ ಮಗ ಚೆನ್ನಾಗಿ ಓದಿ, ಪದವಿಗಳನ್ನು ಗಳಿಸಿ, ಸಂಶೋಧನೆಗಳನ್ನು ಮಾಡಿ, ಕೊನೆಗೆ ಪೆನಿಸಿಲಿನ್ ಎನ್ನುವ ವೈದ್ಯಬಾಣವನ್ನು ಕಂಡುಹಿಡಿದು, ಸರ್ ಅಲೆಕ್ಸಾಂಡರ್ ಫ್ಲೆಮಿಂಗ್ ಎಂದು ಹೆಸರುವಾಸಿಯಾದ. ಮುಂದಿನ ಕೆಲವು ವರ್ಷಗಳಲ್ಲಿ ಆ ಶ್ರೀಮಂತನ ಅದೇ ಮಗನಿಗೆ ಮಾರಕ ಕಾಯಿಲೆ ನ್ಯೂಮೋನಿಯಾ ಅಂಟಿಕೊಂಡಿತು. ಅವನನ್ನು ಆಗ ಉಳಿಸಿದ್ದು ಅದೇ ಪೆನಿಸಿಲಿನ್ ದಿವ್ಯೌಷಧಿ.
ಆ ಶ್ರೀಮಂತನೇ – ಲಾರ್ಡ್ ರುಡಾಲ್ಫ್ ಚರ್ಚಿಲ್. ನ್ಯೂಮೋನಿಯಾ ಪೀಡಿತ ಅವರ ಮಗ, ಮುಂದೆ ಬ್ರಿಟಿಷ್ ಪ್ರಧಾನಿಯಾಗಿ ಸುಪ್ರಸಿದ್ಧನಾದ ಸರ್ ವಿನ್ಸ್ಟನ್ ಚರ್ಚಿಲ್!
ಫ್ಲೆಮಿಂಗ್ನ ಸಹಾಯದಿಂದ ಬಾಲಕ ಚರ್ಚಿಲ್ ಒಮ್ಮೆ ಬದುಕಿದ. ಆತನ ಶ್ರೀಮಂತ ತಂದೆಯ ಸಹಕಾರದಿಂದ ಅಲೆಗ್ಸಾಂಡರ್ ಫ್ಲೆಮಿಂಗ್ ಪ್ರಸಿದ್ಧ ವಿಜ್ಞಾನಿಯಾದ. ಆತನ ಸಂಶೋಧನೆಯಿಂದ ಚರ್ಚಿಲ್ ಎರಡನೇ ಬಾರಿ ಬದುಕುಳಿದ. ಹೀಗೆ ಪರಸ್ಪರ ಸಹಕಾರ ಇದ್ದಾಗಲೆ ಮನುಷ್ಯನ ಜೀವನಚಕ್ರ ಸುಸೂತ್ರವಾಗಿ ಮುಂದೆ ಸಾಗುತ್ತದೆ.
ಈ ಜಗತ್ತಿನಲ್ಲಿ ನಾನು ಯಾರದೇ ಸಹಾಯವಿಲ್ಲದೆ ಸ್ವತಂತ್ರವಾಗಿ ಬದುಕುತ್ತೇನೆ ಎಂದು ಯಾರೂ ಎದೆತಟ್ಟಿ ಹೇಳಲಾಗುವುದಿಲ್ಲ. ಯಾಕೆಂದರೆ ಆತ ಹುಟ್ಟಿದ ಕೂಡಲೇ ತಾಯಿಯ ಎದೆಯ ಹಾಲು ಕುಡಿದೇ ಬೆಳೆಯುತ್ತಾನೆ. ದೊಡ್ಡವರಾದ ಮೇಲೂ ನಾವು ತಿನ್ನುವ ಆಹಾರ, ತೊಡುವ ಬಟ್ಟೆ, ವಾಸಿಸುವ ಮನೆ ಎಲ್ಲವೂ ಇನ್ನೊಬ್ಬರ ಸಹಕಾರದಿಂದ ನಮಗೆ ದೊರೆತದ್ದು. ಈ ಸಮಾಜವೇ ನಮಗೆ ರಕ್ಷಣೆ ಕೊಡುತ್ತಿರುವುದು.
ಮಹಾಭಾರತದ ಉದ್ಯೋಗಪರ್ವದಲ್ಲಿ ಒಂದು ಶ್ಲೋಕ ಬರುತ್ತದೆ –
ನಿರ್ವನೋ ಛಿದ್ಯತೇ ವ್ಯಾಘ್ರೋ ನಿರ್ವ್ಯಾಘ್ರಂ ಛಿಧ್ಯತೇ ವನಂ |
ತಸ್ಮಾದ್ವ್ಯಾಘ್ರೋ ವನಂ ರಕ್ಷೇತ್ ವನಂ ವ್ಯಾಘ್ರಂ ಚ ಪಾಲಯೇತ್ ||
ಅಂದರೆ ವನವಿಲ್ಲದಿದ್ದರೆ ಹುಲಿ ಹತ್ಯೆಗೆ ಒಳಗಾಗುತ್ತದೆ. ಹುಲಿಯಿಲ್ಲದಿದ್ದರೆ ಕಾಡು ನಾಶವಾಗುತ್ತದೆ. ಹುಲಿ ವನವನ್ನೂ, ವನ ಹುಲಿಯನ್ನೂ ರಕ್ಷಿಸಬೇಕು ಎಂಬುದೇ ಇದರರ್ಥ.
ಜೀವನದ ಜೀವಾಳ
ಆಧುನಿಕ ಯುಗದಲ್ಲಿ ಸ್ಪರ್ಧೆಯೇ ನಮ್ಮ ಜೀವನದ ಜೀವಾಳ ಎನ್ನುವುದು ಪಾಶ್ಚಾತ್ಯರ ಕಲ್ಪನೆ. ನಮ್ಮ ಸ್ವಸಾಮರ್ಥ್ಯದಿಂದಲೇ ನಾವು ಮೇಲೆ ಬರಬೇಕು ಎಂಬುದು ಸತ್ಯ. ಆದರೆ ನಮ್ಮ ಸಾಮರ್ಥ್ಯವನ್ನು ಪ್ರಕಟಿಸಲು, ಅದಕ್ಕೊಂದು ಅವಕಾಶ ಸಿಗಲು ಇನ್ನೊಬ್ಬರ ಸಹಕಾರ ಬೇಕು ಎಂಬುದೂ ಅಷ್ಟೇ ಸತ್ಯ.
ವಿಕಾಸವಾದಿಗಳು ಸ್ಪರ್ಧೆಯೇ ವಿಕಾಸದ ಮುಖ್ಯತತ್ತ್ವ ಎನ್ನುತ್ತಾರೆ. ಇದಕ್ಕೆ ವಿರುದ್ಧವಾಗಿ ಸ್ವಾಮಿ ವಿವೇಕಾನಂದರು ಪ್ರೀತಿ, ಪರಸ್ಪರ ಸಹಕಾರ ಇವುಗಳು ಪ್ರಗತಿಯ ಹಿನ್ನೆಲೆ ಎಂದು ಹೇಳುತ್ತಾರೆ. ಸ್ಪರ್ಧೆಯು ವಿನಾಶಕ್ಕೆ ಹಾದಿ; ಪರಸ್ಪರ ಸಹಕಾರ ಮುನ್ನಡೆಗೆ ದಾರಿ.
ಕೂಡುಕುಟುಂಬ ಇಂದು ಸಣ್ಣ ಸಣ್ಣ ಕುಟುಂಬಗಳಾಗಿ ವಿಭಾಜಿತವಾಗಿದೆ. ಪುಟ್ಟ ಪುಟ್ಟ ಸಂಸಾರದ ಹೆಸರಿನಲ್ಲಿ ಬದುಕೆಲ್ಲ ಒಂಟಿಯಾಗುತ್ತಿದೆ. ಸಮಾಜವೆಂಬ ಮಹಾಮಂದಿರವನ್ನು ಬಿಟ್ಟು ಅಕ್ಕಪಕ್ಕದವರನ್ನು ಬದಿಗಿಟ್ಟು ನಾನು-ನನ್ನದು ಎಂಬ ಸೀಮಿತ, ಸಂಕುಚಿತ ಮನಃಸ್ಥಿತಿಯಿಂದ ಬೆಂದುಹೋದ ಜೀವನಕ್ಕೆ ಸಹಕಾರತತ್ತ್ವ ಹೊಸ ಆಶಾವಾದವನ್ನು, ಹೊಂಬೆಳಕನ್ನು ಕೊಡುತ್ತದೆ.
ಸಹಕಾರ ಎಂಬ ಸೌಧ `ಕೊಡು-ಕೊಳ್ಳು’ ಎಂಬ ಸಿದ್ಧಾಂತದ ಅಡಿಪಾಯದ ಮೇಲೆ ನಿಂತಿದೆ. ಮನುಷ್ಯನ ಅಭಿವೃದ್ಧಿ ಆತನ ಆರ್ಥಿಕ ಸಬಲತೆಯಿಂದ ಸಾಧಿಸಬಹುದು. ನುಚ್ಚುನೂರಾಗಿದ್ದ ಆರ್ಥಿಕ ವ್ಯವಸ್ಥೆಯನ್ನು ಸಹಕಾರ ಕ್ಷೇತ್ರದಿಂದ ಸರಿದೂಗಿಸಬಹುದು.
ಬಂಗ್ಲಾದೇಶದ ಚಿತ್ತಗಾಂಗ್ ವಿಶ್ವವಿದ್ಯಾಲಯದ ಸಾಂಪತ್ತಿಕ ಶಾಸ್ತ್ರದ ಪ್ರೊಫೆಸರ್ ಮಹಮದ್ ಯುನುಸ್, ಜನರ ಬರ ಹಾಗೂ ದೇಶದ ಬಡತನ ಇವುಗಳನ್ನು ಕುರಿತು ಪಾಠ ಹೇಳುತ್ತಿದ್ದರು. ಹೊರಗೆ ಸಂಚಾರ ಹೊರಟಾಗ, ದೇಶದ ತುಂಬೆಲ್ಲ ಬಡತನ ಕಾಲುಮುರಿದುಕೊಂಡು ಬಿದ್ದಿರುವುದನ್ನು ಅವರು ಕಂಡಿದ್ದರು. ಬಡತನವನ್ನು ನಿವಾರಿಸುವ ಶಕ್ತಿ ತಮಗೆ ಇಲ್ಲವಲ್ಲ ಎಂದು ಅವರು ಮಿಡುಕುತ್ತಿದ್ದರು. ಕಡುಬಡವರಿಗೋಸುಗ ಒಂದು ಸಹಕಾರಿ ಬ್ಯಾಂಕನ್ನು ಕಟ್ಟಬೇಕೆನ್ನುವ ಆಲೋಚನೆ ಅವರ ಮನಸ್ಸಿನಲ್ಲಿ ಮೂಡಿತು. ಆದರೆ ಅವರ ಸಂಕಲ್ಪಕ್ಕೆ ಮೊದಮೊದಲು ಯಾರೂ ಸಹಕರಿಸಲಿಲ್ಲ. `ಈ ಬ್ಯಾಂಕು ಅದೇಕೆ ಆಗುವುದಿಲ್ಲವೋ ನೋಡುತ್ತೇನೆ’ ಎಂದು ಅವರು ನಿರ್ಧಾರ ತೊಟ್ಟರು. ಅವರು ತೊಟ್ಟ ನಿರ್ಧಾರದ ಫಲವೇ ಅಲ್ಲಿಯ ಗ್ರಾಮೀಣ ಬ್ಯಾಂಕು.
ಅವರು ಸ್ಥಾಪಿಸಿದ ಸಹಕಾರಿ ಗ್ರಾಮೀಣ ಬ್ಯಾಂಕು ಲಕ್ಷಾಂತರ ಜನ ಕಡುಬಡವರಿಗೆ ಸಾಲ ಸೌಕರ್ಯವನ್ನು ಒದಗಿಸಿದೆ. ತುತ್ತು ಕೂಳಿಗಾಗಿ ಮನೆಮನೆಯ ಬಾಗಿಲು ಬಡಿಯುತ್ತಿದ್ದ ಜನರು ಈಗ ತಮ್ಮ ದುಡಿಮೆಯ ಅನ್ನವನ್ನು ಸುಖವಾಗಿ ಉಣ್ಣುತ್ತಿದ್ದಾರೆ; ತಲೆಯ ಮೇಲೆ ಒಂದು ಸೂರನ್ನು ಕೂಡ ಕಟ್ಟಿಕೊಂಡಿದ್ದಾರೆ.
ಪ್ರೊ|| ಯುನುಸ್ರು ಸಹಕಾರತತ್ತ್ವದಿಂದ ಕಟ್ಟಿದ ಗ್ರಾಮೀಣ ಬ್ಯಾಂಕ್ನಿಂದ ಬಂಗ್ಲಾದ ಲಕ್ಷಾಂತರ ಬಡಕುಟುಂಬಗಳಿಗೆ ಸಹಾಯವಾದುದನ್ನು ಪರಿಗಣಿಸಿ ಅವರಿಗೆ ೨೦೦೬ರಲ್ಲಿ ನೊಬೆಲ್ ಪ್ರಶಸ್ತಿ ಕೊಡಲಾಯಿತು.
ಪರಸ್ಪರ ಸಹಕಾರವಿಲ್ಲದೆ ಯಾರೂ ತಮ್ಮ ಜೀವನವನ್ನು ಉಜ್ಜ್ವಲಗೊಳಿಸಲಾಗುವುದಿಲ್ಲ. ಸಹಕಾರವಿಲ್ಲದೆ ಬದುಕಿಲ್ಲ, ಸಹಕಾರವಿಲ್ಲದೆ ಪ್ರಗತಿ ಇಲ್ಲ, ಸಹಕಾರವಿಲ್ಲದೆ ನೆಮ್ಮದಿಯೂ ಇಲ್ಲ.
ಪ್ರಭು ಶ್ರೀರಾಮಚಂದ್ರ ಕಪಿಗಳ ಸಹಕಾರದಿಂದ ಸೈನ್ಯವನ್ನು ಕಟ್ಟಿಕೊಂಡು ಲಂಕಾಧೀಶ ರಾವಣನನ್ನು ವಧಿಸಿದ. ಮಾವಳಿಗರ ಸಹಕಾರದಿಂದ ಶಿವಾಜಿ ಹಿಂದವೀ ಸ್ವರಾಜ್ಯವನ್ನು ಕಟ್ಟಿದ. ಸಾಮಾನ್ಯ ಭಾರತೀಯರ ಸಹಕಾರದಿಂದ ಸತ್ಯಾಗ್ರಹ ನಡೆಸಿ ಗಾಂಧಿಯವರು ಬ್ರಿಟಿಷರನ್ನು ಈ ದೇಶದಿಂದ ಓಡಿಸಿದರು. ಪರಸ್ಪರ ಸಹಕಾರದಿಂದ ಸಹಬಾಳ್ವೆ ನಡೆಸಿದರೆ ಎಂತಹ ಸಮಸ್ಯೆಯನ್ನೂ ಶತ್ರುವನ್ನೂ ಎದುರಿಸಿ ನಿವಾರಿಸಬಹುದು. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಸದೃಢರಾಗಿ ಸಮೃದ್ಧಿಯಿಂದ, ನೆಮ್ಮದಿಯಿಂದ ಬದುಕಬಹುದು.