ವಿಶಾಲವಾಗಿ ಹಬ್ಬಿ ಬೆಳೆಯುವ ಆಲದಮರದ ಕೆಳಗೆ ಬೇರೆ ಏನೂ ಬೆಳೆಯುವುದಿಲ್ಲ ಎಂಬುದೊಂದು ಪ್ರತೀತಿ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ, ಮುಖ್ಯವಾಗಿ ಕೊಳಲುವಾದಕರಲ್ಲಿ ಅದಕ್ಕೊಂದು ಅಪವಾದವಿದೆ. ಅಪರೂಪಕ್ಕೊಮ್ಮೆ ಮಾತ್ರ ಹುಟ್ಟಿಬರುವ ಮಹಾನ್ ಪ್ರತಿಭೆ ಟಿ.ಆರ್. ಮಹಾಲಿಂಗಮ್ ಅವರು. ಅವರ ಪ್ರತಿಭೆ ಎಂತಹ ಉಜ್ಜ್ವಲವಾದುದೆಂದರೆ ಆ ಕಾಲದ ಕರ್ನಾಟಕ ಸಂಗೀತಕ್ಷೇತ್ರದ ಇತರ ವಿಭಾಗಗಳವರು ಕೂಡ ಮಂಕಾಗುವ?. ಅಂತಹ ಸ್ಥಿತಿಯಲ್ಲಿ ಮಹಾಲಿಂಗಮ್ ಅವರ ಶಿಷ್ಯ ಎನ್. ರಮಣಿ ಗುರುವಿಗೇನೂ ಕಡಮೆಯಿಲ್ಲ ಎನ್ನುವ ಮಟ್ಟಕ್ಕೆ ಬೆಳೆದರು (ನಿಧನ – ಅಕ್ಟೋಬರ್ 2015). ನುಡಿಸುವ ವಿಧಾನ ಮತ್ತು ವಾದ್ಯದಲ್ಲೂ ಕೂಡ ಕೆಲವು ಬದಲಾವಣೆಗಳನ್ನು ತಂದರು. ತಾವೇ ರೂಪಿಸಿಕೊಂಡ ಒಂದು ಶೈಲಿಯನ್ನು ‘ರಮಣಿ ಬಾನಿ’ ಎನ್ನುವ ಮಟ್ಟಕ್ಕೆ ಬೆಳೆಸಿದರು. ಆದರ್ಶ ಗುರುವಾಗಿ ಅಪಾರ ಶಿಷ್ಯಸಂಪತ್ತನ್ನು ಭವಿಷ್ಯದ ಯುಗಕ್ಕೆ ನೀಡಿದರು. ಮಾಲಿ ಅವರಂತೆಯೇ ರಮಣಿ ಕೂಡ ಒಂದು ಶೈಲಿಯನ್ನು ಸ್ಥಾಪಿಸಿದ್ದು, ಇಂದು ಬಹಳಷ್ಟು ಜನ ಅದನ್ನೇ ಅನುಸರಿಸುತ್ತಾರೆ.
ಶ್ರೀಕೃಷ್ಣನ ಕೈಯಲ್ಲೂ ಇದ್ದ ಕೊಳಲು ಕೆಲವು ತೂತು(ರಂಧ್ರ)ಗಳಿರುವ ಬಿದಿರಿನ ಓಟೆ ಮಾತ್ರ. ಅದಕ್ಕೆ ಜೀವ ತುಂಬುವುದು ವಿಶೇ?ವಾಗಿ ನುಡಿಸುವಾತನ ಸಾಮರ್ಥ್ಯವನ್ನು ಅವಲಂಬಿಸಿದೆ. ಶ್ರೀಕೃಷ್ಣನಾದರೋ ದೇವರು. ಅವನು ಕೊಳಲು ನುಡಿಸುತ್ತಲೇ ಯಮುನಾನದಿ ಹರಿಯುವುದನ್ನೇ ನಿಲ್ಲಿಸಿದಳಂತೆ. ಗೋವುಗಳು ಮೇಯುವುದನ್ನು ನಿಲ್ಲಿಸಿ ಇತ್ತ ಕಿವಿಗೊಟ್ಟು ನಿಂತರೆ, ಗೋಪಿಕೆಯರು ಮನೆಗಳಲ್ಲಿ ಮಾಡುತ್ತಿದ್ದ ಕೆಲಸಗಳನ್ನು ಅಲ್ಲೇ ಒಗೆದು ಉಟ್ಟಬಟ್ಟೆಯಲ್ಲೇ ಧಾವಿಸಿ ಬಂದರು. ಆದರೆ, ಮನು?ರಾಗಿರುವ ಮಹಾಲಿಂಗಮ್ ಅಥವಾ ರಮಣಿ ಅವರಿಗೆ ಅದೆಲ್ಲ ಕೂಡಿ ಬರುವುದಿಲ್ಲವಲ್ಲಾ! ಇವರು ಏನಿದ್ದರೂ ಸ್ವಸಾಮರ್ಥ್ಯದಿಂದ ಅಂತಹ ವಾತಾವರಣವನ್ನು ಕಟ್ಟಬೇಕು. ಇವರು ಕಟ್ಟಿದರು ಎಂಬುದೇ ವಿಶೇಷ. ರಮಣಿ ಅವರಂತೂ ಮಹಾಗುರುವಿನ ಪ್ರತಿಭೆಯಿಂದ ಕಂಗೆಟ್ಟು ಅವರ ನೊಣಪ್ರತಿಯೋ ಅಥವಾ ಅಡ್ಡದಾರಿ ಹಿಡಿಯುವ ‘ಪಂಡಿತಪುತ್ರ’ನೋ ಆಗುವ ಬದಲು ಬಹುಬೇಗ ತಮ್ಮ ದಾರಿಯನ್ನು ಕಂಡುಕೊಂಡರು. ಕರ್ನಾಟಕ ಸಂಗೀತದ ಕೊಳಲುವಾದನಕ್ಕೆ ತನ್ನ ಕೊಡುಗೆಗಳನ್ನು ನೀಡಿ ಅದನ್ನು ಶ್ರೀಮಂತಗೊಳಿಸಿದರು. ಇದನ್ನು ಭಾರತದ ಗಡಿಯಾಚೆಗೆ ಒಯ್ದು, ಪಾಶ್ಚಾತ್ಯ ದೇಶಗಳಲ್ಲಿ ಕರ್ನಾಟಕ ಸಂಗೀತದ ಶ್ರೋತೃಗಳನ್ನು ಬೆಳೆಸಿದರು; ಹಿಂದೂಸ್ತಾನಿ ಸಂಗೀತಕ್ಕೆ ಪಂಡಿತ್ ರವಿಶಂಕರ್ ಆದಂತೆ ಇದಕ್ಕೆ ಇವರೇ ಆದ್ಯಪ್ರವರ್ತಕರಾದರೆಂದರೆ ಅತಿಶಯೋಕ್ತಿಯಲ್ಲ.
ಜನನ, ಬಾಲ್ಯ
ಕರ್ನಾಟಕ ಸಂಗೀತ ತ್ರಿಮೂರ್ತಿಗಳಾದ ಶ್ರೀ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಶಾಸ್ತ್ರಿಗಳು ಜನಿಸಿದ ಇಂದಿನ ತಮಿಳುನಾಡಿನ ತಿರುವಾರೂರು ಜಿಲ್ಲೆಯಲ್ಲೇ ರಮಣಿ ಅವರ ಜನನವಾಯಿತು (1934). ಸಂಗೀತದ ಮನೆತನ. ಅಜ್ಜ (ತಂದೆಯ ತಂದೆ) ಆಳಿಯೂರ್ ನಾರಾಯಣಸ್ವಾಮಿ ಅಯ್ಯರ್ ಕೊಳಲುವಾದಕರು; ಇತರ ಕೆಲವು ವಾದ್ಯಗಳನ್ನೂ ನುಡಿಸುತ್ತಿದ್ದರು; ಮತ್ತು ಗಾಯಕರು ಕೂಡ ಆಗಿದ್ದರು. ಅವರಿಂದ ತಾನು ಸಂಗೀತವನ್ನು ಕಲಿತಿರುವುದಾಗಿ ಪ್ರಸಿದ್ಧ ಗಾಯಕ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರು ಹೇಳಿದ್ದಿದೆ. ಸಿಕ್ಕಿಲ್ ಸಹೋದರಿಯರಾದ ನೀಲಾ ಮತ್ತು ಕುಂಜುಮಣಿ ಅವರ ಶಿ?ರು. ಅವರೇ ರಮಣಿಯ ಮೊದಲ ಗುರು. ಐದನೇ ವರ್ಷಕ್ಕೇ ಸಂಗೀತಾಭ್ಯಾಸ ಆರಂಭಗೊಂಡಿತು. ಆದರೆ ಅವರಿಗೆ ಎಂಟುವರ್ಷವಾಗುವಾಗ ಅಜ್ಜ ತೀರಿಕೊಂಡರು. ತಂದೆ ನಟೇಶ ಅಯ್ಯರ್ ಮೃದಂಗವಾದಕರು. ತಾಯಿ ವಯೊಲಿನ್ ವಾದಕಿ. ಅವರ ಮನೆಗೆ ಅಜ್ಜನನ್ನು ನೋಡಲು ಪ್ರಸಿದ್ಧ ಸಂಗೀತಗಾರರು ಬರುತ್ತಿದ್ದರು. ಬಂದವರು ಮಾತುಕತೆಯ ನಡುವೆ ಹಾಡುವುದೂ ಇತ್ತು. ಅದನ್ನು ಕೇಳುತ್ತಾ ಬಾಲಕ ರಮಣಿ ಬೆಳೆದ. ಅಜ್ಜ ಮೊದಲಿಗೆ ವರ್ಣ ಇತ್ಯಾದಿ ಹಾಡುವುದನ್ನು ಕಲಿಸಿದರು. ಇತರ ಮಕ್ಕಳಿಗೆ ಕಲಿಸುವುದಕ್ಕೂ ಹೇಳುತ್ತಿದ್ದರು. ಅದರಿಂದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅನುಕೂಲವಾಯಿತೆಂದು ರಮಣಿ ಹೇಳಿದ್ದಾರೆ.
1942ರಲ್ಲಿ ಕೇವಲ ಎಂಟು ವರ್ಷ ಆಗುವಾಗ ಚಿಕ್ಕಿಲ್ ಸಿಂಗಾರ ವೇಲನ್ ಪ್ರಸಿದ್ಧ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬಾಲಕ ರಮಣಿಯ ಮೊದಲ ಕೊಳಲುವಾದನ ಕಚೇರಿ ನಡೆಯಿತು. ಅಂದಿನ ಪ್ರಸಿದ್ಧ ಕಲಾವಿದರಾದ ವೇದಾರಣ್ಯಮ್ ಕೃಷ್ಣಮೂರ್ತಿ ಅಯ್ಯರ್ ವಯೊಲಿನ್ನಲ್ಲಿ ಹಾಗೂ ತಿರುವಾರೂರ್ ಕುಂಜು ಅಯ್ಯರ್ ಮೃದಂಗದಲ್ಲಿ ಸಹಕರಿಸಿದ್ದರು. ಶ್ರೋತೃಗಳಲ್ಲಿ ಹಲವು ಹಿರಿಯ ಸಂಗೀತಗಾರರೂ ಇದ್ದು ಯಶಸ್ವಿಯಾದ ಈ ಕಾರ್ಯಕ್ರಮವನ್ನು ಅವರು ಮೆಚ್ಚಿಕೊಂಡರು. ಬಾಲಕನ ಪ್ರತಿಭೆಯನ್ನು ಮತ್ತು ಆಗಲೇ ಲಯದ ಮೇಲಿದ್ದ ಹಿಡಿತವನ್ನು ಹೊಗಳಿ ಇವನಿಗೆ ಉತ್ತಮ ಭವಿಷ್ಯವಿದೆ ಎಂದರು. ‘ಹಾಡುವುದಕ್ಕೆ ಭಯ ಆಗಲಿಲ್ಲವೆ?’ ಎಂದು ಮುಂದೊಮ್ಮೆ ಕೇಳಿದ ಪ್ರಶ್ನೆಗೆ ರಮಣಿ, “ಭಯವಾಗುವುದು ಜ್ಞಾನವಿದ್ದಾಗ. ಆಗ ಹೇಳಿದಂತೆ ಮಾಡಿದೆ ಅ?. ಸಂಗೀತದಲ್ಲಿ ನನಗೆ ವಿಪರೀತ ಆಸಕ್ತಿ ಇದ್ದುದು ನಿಜ. ಸ್ಥಳೀಯವಾಗಿ ಜಿ.ಎನ್. ಬಾಲಸುಬ್ರಹ್ಮಣ್ಯಮ್, ಚೆಂಬೈ ವೈದ್ಯನಾಥ ಭಾಗವತರ್ ಮುಂತಾದವರ ಕಚೇರಿ ನಡೆದಾಗ ಹೋಗಿ ಕೇಳುತ್ತಿದ್ದೆ” ಎಂದು ಉತ್ತರಿಸಿದ್ದರು. ಪ್ರಸಿದ್ಧ ವಿದ್ವಾನ್ಗಳಾದ ಪಲ್ಲಡಂ ಸಂಜೀವ ರಾವ್, ತಿರುಪ್ಪಾಂಪುರಮ್ ಸ್ವಾಮಿನಾಥ ಪಿಳ್ಳೆ (ಇಬ್ಬರೂ ಕೊಳಲುವಾದಕರು), ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಆಲತ್ತೂರು ಸಹೋದರರು, ಮಧುರೆ ಮಣಿ ಅಯ್ಯರ್, ಚೆಂಬೈ ಇವರೆಲ್ಲ ಬಾಲಕ ರಮಣಿಯ ಕೊಳಲುವಾದನವನ್ನು ಕೇಳಿ ಹರಸಿದ್ದರು.
ಅಜ್ಜ ತೀರಿಹೋದ ಕಾರಣ ಈ ಬಾಲಪ್ರತಿಭೆಗೆ ಮುಂದಿನ ಗುರುಗಳು ಯಾರು ಎನ್ನುವ ಪ್ರಶ್ನೆ ಎದುರಾಯಿತು. ಆಗ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ಸಿಲುಕಿ ಎಡವಿದಂತಾಯಿತು ಎಂಬಂತಹ ಒಂದು ಸಂದರ್ಭ ಸೃಷ್ಟಿಯಾಯಿತು. ಒಮ್ಮೆ ತಿರುವಾರೂರಿನಲ್ಲಿ ಟಿ.ಆರ್. ಮಹಾಲಿಂಗಮ್ ಅವರ ಕಚೇರಿಯಿತ್ತು. ಮಹಾಲಿಂಗಮ್ ಇವರ ಬಂಧು. ವಾವೆಯಲ್ಲಿ ಮಾವ ಆಗಬೇಕು. ರಮಣಿಗೆ 9 ವರ್ಷವಾದರೆ, ಮಾಲಿಗೆ 17. ಕಚೇರಿಯನ್ನು ಕೇಳಿದ ರಮಣಿ ಆ ನಾದವೈಭವಕ್ಕೆ ಮಾರುಹೋದ. ಅದೇ ಅವನ ಸ್ಫೂರ್ತಿಯಾಯಿತು. ಮನೆಗೆ ಬಂದ ಮಾಲಿ ಎದುರು ಕಚೇರಿಯಲ್ಲಿ ತಾನು ಕೇಳಿದ್ದನ್ನು ಮರುಸೃಷ್ಟಿ ಮಾಡಿ ಒಪ್ಪಿಸಿದ. ಅಲ್ಲಿ ಕಂಡ ಲಯ-ಶಬ್ದಗಳ ನಿಯಂತ್ರಣದಿಂದ ಯುವಕ ಮಾಲಿಗೆ ಖುಷಿಯಾಯಿತು. ‘ಇವನಿಗೆ ನಾನೇ ಕೊಳಲು ಕಲಿಸುತ್ತೇನೆ’ ಎಂದರು. ಆದರೆ ಮಾಲಿ ಆಗ ಮದ್ರಾಸ್ನಲ್ಲಿ ಇರುತ್ತಿದ್ದ ಕಾರಣ ಅಲ್ಲಿಗೆ ಹೋಗಿ ಕಲಿಯಬೇಕಿತ್ತು. ರಜಾದಿನಗಳನ್ನು ಅಲ್ಲಿ ಕಳೆಯುವುದನ್ನು ರೂಢಿಸಿಕೊಂಡ ರಮಣಿ ತೀವ್ರ ತರಬೇತಿಯನ್ನು ಪಡೆದ.
ಅನೌಪಚಾರಿಕ ಪಾಠ
ಮಹಾಲಿಂಗಮ್ ಅವರ ಪಾಠ ಬಹುತೇಕ ಅನೌಪಚಾರಿಕ. “ಹೆಚ್ಚು ಕಲಿತದ್ದು ಅವರು ನುಡಿಸುವುದನ್ನು ಕೇಳಿ ಮತ್ತು ಅವರು ಕರೆದ ಕಚೇರಿಗಳಿಗೆ ಹೋಗಿ ಸಹವಾದನ ಮಾಡುವ ಮೂಲಕ. ಒಂದು ನಿರ್ದಿಷ್ಟ ಕೃತಿಯನ್ನು ಕಲಿಸಿ ಎಂದರೆ ಮೊದಲಿಗೆ ಆ ಹಾಡಿಗೆ ನೋಟ್ (ಸ್ವರಶ್ರೇಣಿ) ಹಾಕುವರು. ಶಂಕರಾಭರಣ ರಾಗದಲ್ಲಿ ‘ಸರೋಜದಳ ನೇತ್ರಿ’ ಕೃತಿಗೆ ಅವರು ಶ್ರಮಪಟ್ಟು ನೊಟೇಶನ್ ಹಾಕಿದ್ದು ನನಗೆ ಚೆನ್ನಾಗಿ ನೆನಪಿದೆ. ಈ ರೀತಿ ಔಪಚಾರಿಕ ತರಬೇತಿಯಲ್ಲಿ ನಾನು ಅವರಿಂದ ಸುಮಾರು 50 ಹಾಡುಗಳನ್ನು ಕಲಿತಿರಬಹುದು ಅಷ್ಟೆ. ಉಳಿದದ್ದು ಮೇಲೆ ಹೇಳಿದಂತೆ ಅನೌಪಚಾರಿಕ. ಅವರ ತರಬೇತಿಯಲ್ಲಿ ತುಂಬ ಸ್ವಾತಂತ್ರ್ಯವಿತ್ತು; ಜೊತೆಗೆ ಸಂಗೀತದ ಸೂಕ್ಷ್ಮಗಳ ಬಗ್ಗೆ ಹುಡುಕಬೇಕಿತ್ತು.
“ಅರಿಯಾಕುಡಿ, ಜಿಎನ್ಬಿ, ರಾಮಕೃಷ್ಣಯ್ಯ ಪಂತುಲು, ಆಲತ್ತೂರ್ ಸಹೋದರರು, ಮಹಾರಾಜಪುರಂ ವಿಶ್ವನಾಥ ಅಯ್ಯರ್ – ಹೀಗೆ ಅನ್ಯಾನ್ಯ ಸಂಗೀತಗಾರರ ಕಚೇರಿ ಕೇಳಲು ಹೇಳುತ್ತಿದ್ದರು. ಪ್ರತಿಯೊಬ್ಬರಲ್ಲೂ ಏನಾದರೊಂದು ವಿಶೇಷ ಇರುತ್ತದೆ; ಮಧುರೆ ಮಣಿ ಅವರ ಸ್ವರಪ್ರಸ್ತಾರ, ಜಿಎನ್ಬಿ ಮತ್ತು ಮಹಾರಾಜಪುರಂ ಅವರ ರಾಗ ಆಲಾಪನೆ, ಆಲತ್ತೂರ್ ಸಹೋದರರ ಲಯಜ್ಞಾನ ಮತ್ತು ಪಲ್ಲವಿ ಪ್ರಸ್ತುತಿ, ಪಂತುಲು ಅವರ ಭಾವನಿರ್ಭರತೆ – ಹೀಗೆ. ಇವುಗಳನ್ನು ನಾನು ನನ್ನಲ್ಲಿ ಸೇರಿಸಿಕೊಂಡೆ. ಜೊತೆಗೆ ಮಾಲಿ ಅವರ ವಿಧಾನವನ್ನು ಅಳವಡಿಸಿದೆ. ಅದೇ ಒಂದು ಉತ್ತಮ ಶೈಲಿಯಾಯಿತು.
“ಜೊತೆಗೆ ಮಾಲಿ ಅವರು ಇದ್ದಕ್ಕಿದ್ದಂತೆ ವೇದಿಕೆಯಮೇಲೆ ಸವಾಲು ಹಾಕಿಬಿಡುತ್ತಿದ್ದರು. ಒಮ್ಮೆ ಭೈರವಿಯ ಕಲ್ಪನಾಸ್ವರವನ್ನು ತಿಸ್ರ ನಡೆಯಲ್ಲಿ ಮಾಡುವಾಗ ಮಧ್ಯಕಾಲದ ಹೊತ್ತಿಗೆ ನನ್ನತ್ತ ತಿರುಗಿ ಮುಂದೆ ಕಲ್ಪನಾಸ್ವರವನ್ನು ನುಡಿಸಲು ಹೇಳಿಬಿಟ್ಟರು. ಅವರ ಜೊತೆ ಇದ್ದಾಗ ಅಂತಹ ಸವಾಲಿಗೆ ಸಿದ್ಧನಿರಬೇಕಿತ್ತು” ಎಂದು ರಮಣಿ ನೆನಪಿಸಿಕೊಂಡಿದ್ದರು. “ಒಬ್ಬ ಒಳ್ಳೆಯ ಗುರು ತನ್ನ ವಿದ್ಯಾರ್ಥಿಗಳಿಂದಲೂ ಕಲಿಯಲು ಸಿದ್ಧನಿರಬೇಕು. ಆಹಿರಿ ರಾಗವನ್ನು ಮಾಲಿ ನನ್ನಿಂದ ಕಲಿತರು. ನಾನದನ್ನು ಖ್ಯಾತ ನೃತ್ಯಕಲಾವಿದೆ ಟಿ. ಬಾಲಸರಸ್ವತಿ ಅವರ ಸಹೋದರ ಟಿ. ವಿಶ್ವನಾಥನ್ ಅವರಿಂದ ಕಲಿತಿದ್ದೆ. ವೇದಿಕೆಯಲ್ಲೇ ಶಿ?ರಿಗೆ ಸವಾಲೆಸೆಯುವ ಮಾಲಿಯವರ ಕ್ರಮದಿಂದ ಪ್ರತಿಭೆ ಹೊರಬರಲು ಅವಕಾಶ ಆಗುತ್ತಿತ್ತು. ಶಿಷ್ಯರಿಂದ ಅವರು ಆಶುಪಲ್ಲವಿಯನ್ನೂ ಕೂಡ ಕೇಳುತ್ತಿದ್ದರು” ಎಂದು ತಿಳಿಸಿದ್ದಾರೆ. ರಮಣಿ ಮಾಲಿಯವರಿಂದ ಅವರ ಪ್ರಸಿದ್ಧ ತಂತ್ರವಾದ ‘ಬೆರಳು ಬದಲಿಸುವುದನ್ನು (ಕ್ರಾಸ್ ಫಿಂಗರಿಂಗ್) ಕಲಿತರು. ಅದರಲ್ಲಿ ಇನ್ನಷ್ಟು ಬದಲಾವಣೆ, ಸುಧಾರಣೆಗಳನ್ನು ಮಾಡಿದರು. ಉದ್ದ ಕೊಳಲನ್ನು ಇವರು ವೇದಿಕೆಗೆ ತಂದಾಗ ಬೆರಳುಗಾರಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾದವು. ವೇಗದ ಗಮಕವನ್ನು ಸೃಷ್ಟಿಸಿದರು. ಪಾಶ್ಚಾತ್ಯ ಅಥವಾ ಲೋಹದ ಕೊಳಲಿಗೆ ಹೋಲಿಸಿದರೆ ಗಮಕಸೃಷ್ಟಿಗೆ ಭಾರತದ ಬಿದಿರಿನ ಕೊಳಲೇ ಉತ್ತಮ ಎನ್ನುವ ತೀರ್ಮಾನಕ್ಕೆ ಬಂದರು.
ಸಂಗೀತಜ್ಞಾನ ಮುಖ್ಯ
“ವಾದನದಲ್ಲಿ ತಂತ್ರಗಾರಿಕೆಯು ಮುಖ್ಯ ನಿಜ. ಆದರೆ ಸಂಗೀತಜ್ಞಾನವು ಅದಕ್ಕಿಂತ ಮುಖ್ಯವಾದದ್ದು. ಮಾಮೂಲಿ ಸಂಗೀತಗಾರ ಮತ್ತು ದೊಡ್ಡ ಸಂಗೀತಗಾರರ ನಡುವಣ ವ್ಯತ್ಯಾಸ ಅದೇ” ಎಂದ ಎನ್. ರಮಣಿ, ಶಿಕ್ಷಕ ನಿಮಗೆ ತಂತ್ರಗಾರಿಕೆಯನ್ನು ಕಲಿಸುತ್ತಾನೆ. ಮುಂದೆ ಜ್ಞಾನವನ್ನು ವಿದ್ಯಾರ್ಥಿಯೇ ಗಳಿಸಿಕೊಳ್ಳಬೇಕು. ತುಂಬ ಕಲಾವಿದರ ಸಂಗೀತವನ್ನು ಕೇಳಬೇಕು; ಸಂದೇಹವಿದ್ದರೆ ಅವರಲ್ಲಿ ವಿಚಾರಿಸಿ ತಿಳಿದುಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಂದು ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ, “ಎಲ್ಲರೂ ತಿಳಿದಿರುವಂತೆ ಮಾಲಿ ಲಹರಿಯ ಮನುಷ್ಯ(ಮೂಡಿ). ಒಂದು ಕಾಲದಲ್ಲಿ ನಾನು, ಎಸ್.ಪಿ. ನಟರಾಜನ್, ಬೇರೆ ಕೆಲವರು ಅವರಲ್ಲಿ ಕಲಿಯುತ್ತಿದ್ದೆವು. ನಾವು ವಿದ್ಯಾರ್ಥಿಗಳಾಗಿದ್ದರೂ ಅವರ ತರಗತಿಯೇನೂ ಇರಲಿಲ್ಲ. ಕೆಲವು ಸಲ ಅವರಿಲ್ಲದಾಗ ನಾವೇನಾದರೂ ಅಭ್ಯಾಸ (ಪ್ರಾಕ್ಟೀಸ್) ಮಾಡುತ್ತಿದ್ದೆವು. ಆ ಹೊತ್ತಿಗೆ ಅವರು ಬಂದರೆ ಕೇಳಿ ಏನಾದರೂ ಸಲಹೆ ಕೊಡುತ್ತಿದ್ದರು. ಅವರ ಸಂಗೀತವನ್ನು ಕೇಳಿ ಬಹಳಷ್ಟು ಕಲಿತೆವು. ಅವರ ಇಷ್ಟದ ಕೀರ್ತನೆಗಳನ್ನು ನನಗೆ ಕಲಿಸಿದ್ದಾರೆ (ಉದಾ: ‘ಚಿನ್ನ ನಾಟೇನಾ’ , ‘ನಿನ್ನುವಿನಾ ನಾಮದೆಂದು’ – ಇತ್ಯಾದಿ)” ಎಂದು ರಮಣಿ ಹೇಳಿದ್ದಾರೆ. “ಮಹಾಲಿಂಗಮ್ ಅವರಿಗಿಂತ ಭಿನ್ನ ಶೈಲಿಯನ್ನು ರೂಪಿಸಿದಿರಾ?” – ಎನ್ನುವ ಪ್ರಶ್ನೆಗೆ ಉತ್ತರವಾಗಿ, “ ಒಂದೆಂದರೆ ಮಾಲಿಯವರನ್ನು ರಿಪೀಟ್ ಮಾಡಲು ಅಸಾಧ್ಯ. ಎರಡನೆಯದಾಗಿ ನಾನು ಮಾಲಿಯವರ ತಳಪಾಯದ ಮೇಲೆ ನನ್ನದೇ ಶೈಲಿಯನ್ನು ರೂಪಿಸಲು ಯತ್ನಿಸಿದೆ” ಎಂದಿದ್ದರು.
ಶಾಲಾಶಿಕ್ಷಣವು ಮುಗಿದ ಅನಂತರ 1951ರಲ್ಲಿ ರಮಣಿ ಮದ್ರಾಸಿಗೆ (ಚೆನ್ನೈ) ಬಂದು ನೆಲೆಸಿದರು. ಅಲ್ಲಿ ಹೆಚ್ಚು ಸಂಗೀತಗಾರರ ಸಂಪರ್ಕವಾಯಿತು. ಬಹಳಷ್ಟು ಸಂಗೀತ ಕೇಳಲು ಸಾಧ್ಯವಾಯಿತು. ೧೯೬೧-೬೨ರ ಹೊತ್ತಿಗೆ ರಮಣಿ ಮಾಲಿ ಅವರ ಶೈಲಿಯಲ್ಲೇ ಕೊಳಲು ನುಡಿಸುತ್ತಿದ್ದರು. 11 ವರ್ಷವಿದ್ದಾಗಲೇ ಮಾಲಿ ರಮಣಿಗೆ ಸಹವಾದನಕ್ಕೆ ಅವಕಾಶ ನೀಡಿದ್ದರು. ಆಗ ಮದ್ರಾಸಿನಲ್ಲಿ ನಡೆದ ಕಚೇರಿಯಲ್ಲಿ ಟಿ.ಎನ್. ಕೃಷ್ಣನ್ (ವಯೊಲಿನ್) ಮತ್ತು ಮುರುಗ ಭೂಪತಿ (ಮೃದಂಗ) ಪಕ್ಕವಾದ್ಯದಲ್ಲಿ ಸಹಕರಿಸಿದರು. ಮತ್ತೆ ಒಂದು ದಶಕಕ್ಕೂ ಹೆಚ್ಚು ಕಾಲ ದೇಶಾದ್ಯಂತ ವಿವಿಧ ನಗರಗಳಲ್ಲಿ ಜರಗಿದ ಮಾಲಿ ಕಚೇರಿಗಳಲ್ಲಿ ರಮಣಿ ಸಹವಾದಕರಾಗಿದ್ದರು.
೧೯೪೫ರಲ್ಲಿ ಆಕಾಶವಾಣಿ ತಿರುವನಂತಪುರ ಕೇಂದ್ರದಿಂದ ರಮಣಿ ಅವರ ಮೊದಲ ಕಚೇರಿ ಪ್ರಸಾರವಾಯಿತು. ಮುಂದೆ ಆ ಸಂಬಂಧ ನಿರಂತರವಾಗಿ ಮುಂದುವರಿಯಿತು. ೧೯೬೮ರಿಂದ ಅವರು ಪ್ರತಿಷ್ಠಿತ ರೇಡಿಯೋ ಸಂಗೀತ ಸಮ್ಮೇಳನ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಪ್ರತಿಷ್ಠಿತ ಸಂಸ್ಥೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ರಮಣಿ ಅವರ ಮೊದಲ ಕಚೇರಿ ೧೯೫೬ರಲ್ಲಿ ಜರಗಿತು. ಮುಂದೆ ಅದು ಮಾಮೂಲಾಯಿತು. ಅವರು ಅಕಾಡೆಮಿಯ ತಜ್ಞರ ಸಮಿತಿಯಲ್ಲಿದ್ದರು. ಆ ವ? ಮದ್ರಾಸಿನ ಪ್ರಸಿದ್ಧ ಸಂಗೀತಸಭಾಗಳಲ್ಲಿ ರಮಣಿ ಅವರ ಪ್ರಮುಖ ಕಚೇರಿಗಳು ನಡೆದವು. ಪ್ರಮುಖ ಎಂದರೆ ಅದರಲ್ಲಿ ಲಾಲ್ಗುಡಿ ಜಿ. ಜಯರಾಮನ್, ಟಿ.ಎನ್. ಕೃಷ್ಣನ್, ಎಂ.ಎಸ್. ಗೋಪಾಲಕೃಷ್ಣನ್ (ವಯೊಲಿನ್ ತ್ರಿಮೂರ್ತಿಗಳು) ಹಾಗೂ ಪಾಲ್ಘಾಟ್ ಟಿ.ಎಸ್. ಮಣಿ ಅಯ್ಯರ್ (ಮೃದಂಗ) ಅಂಥವರು ಪಕ್ಕವಾದ್ಯ ನುಡಿಸಿದ್ದರು.
ಜುಗಲ್ಬಂದಿ ಸರಣಿ
ಸಂಗೀತ ಪ್ರಪಂಚದಲ್ಲಿ ಎನ್. ರಮಣಿ ಅವರ ಜನಪ್ರಿಯತೆ ಹೆಚ್ಚಿದಂತೆ ಅಂತಾರಾಷ್ಟ್ರೀಯ ಮಟ್ಟಕ್ಕೂ ಅವರು ಲಗ್ಗೆ ಇಟ್ಟರು. ಒಂದು ಅನಿರೀಕ್ಷಿತವಾದ ರೀತಿಯಲ್ಲಿ ಅದು ಆರಂಭವಾಯಿತು. ೧೯೬೦ರ ದಶಕದ ಮಧ್ಯಭಾಗದಲ್ಲೊಮ್ಮೆ ವಿಶ್ವವಿಖ್ಯಾತ ಸಿತಾರ್ವಾದಕ ಪಂಡಿತ್ ರವಿಶಂಕರ್ ಕಚೇರಿ ನೀಡಲು ಭಾರತಕ್ಕೆ ಬಂದಿದ್ದರು. ವಿಮಾನನಿಲ್ದಾಣದಲ್ಲಿ ತಂಗಿದ್ದಾಗ ಆಕಾಶವಾಣಿಯಲ್ಲಿ ಪ್ರಸಾರಗೊಂಡ ರಮಣಿಯವರ ಕೊಳಲುವಾದನವನ್ನು ಕೇಳಿದರು. ಅದರಿಂದ ವಿಶೇ?ವಾಗಿ ಆಕರ್ಷಿತರಾದ ಅವರು ರಮಣಿಯವರ ಬಗ್ಗೆ ವಿಚಾರಿಸಿದರು. ಮರುದಿನ ಸೀದಾ ಮದರಾಸಿಗೆ ಹೋಗಿ ರಮಣಿಯವರ ಮನೆಬಾಗಿಲು ಬಡಿದರು. ರೇಡಿಯೋದಲ್ಲಿ ಬಿತ್ತರಗೊಂಡ ಸಂಗೀತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, “ಅಮೆರಿಕಕ್ಕೆ ಬನ್ನಿ; ಜುಗಲ್ಬಂದಿ ಮಾಡೋಣ” ಎಂದು ಕರೆದರು. ಅದೊಂದು ಅಪೂರ್ವ ಸಂದರ್ಭವಾಗಿತ್ತು. ಆಗ ರಮಣಿಯವರಿಗೆ ಅಮೆರಿಕ ಪ್ರವಾಸ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಪಂಡಿತ್ ರವಿಶಂಕರ್ ಅವರ ಇನ್ನೊಂದು ಸಲಹೆಯನ್ನು ನೆರವೇರಿಸಿದರು; ಅದು ಪ್ರಸಿದ್ಧ ಹಿಂದೂಸ್ತಾನಿ ಕೊಳಲು (ಬಾನ್ಸುರಿ) ವಾದಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರೊಂದಿಗೆ ಜುಗಲ್ಬಂದಿ ನಡೆಸಬೇಕೆಂಬುದು. ೧೯೭೦ರಲ್ಲಿ ಚೆನ್ನೈನಲ್ಲಿ ಜರಗಿದ ಜುಗಲ್ಬಂದಿ ವೇಳೆ ಪಂಡಿತ್ ರವಿಶಂಕರ್ ಕೂಡ ಹಾಜರಿದ್ದು ಮೆಚ್ಚುಗೆ ವ್ಯಕ್ತಪಡಿಸಿದರು. ಅದು ಕರ್ನಾಟಕ ಮತ್ತು ಹಿಂದುಸ್ತಾನಿ ಕೊಳಲುಗಳ ಮೊತ್ತಮೊದಲ ಜುಗಲ್ಬಂದಿಯಾಗಿತ್ತು.
ಅದು ಗಳಿಸಿದ ಜನಪ್ರಿಯತೆಯಿಂದಾಗಿ ದೇಶದ ಒಳಗೆ ಮಾತ್ರವಲ್ಲದೆ ವಿದೇಶಗಳಲ್ಲೂ ಈ ಜುಗಲ್ಬಂದಿಗಳು ನಡೆದವು. ಪಾಶ್ಚಾತ್ಯ ಸಂಗೀತದವರೊಂದಿಗೆ ಕೂಡ ರಮಣಿ ಜುಗಲ್ಬಂದಿ ನಡೆಸಿದರು. ರಮಣಿಯವರು ಒಟ್ಟು ನಡೆಸಿದ ನೂರಕ್ಕೂ ಮಿಕ್ಕಿ ಜುಗಲ್ಬಂದಿಗಳಲ್ಲಿ ಸುಮಾರು ೪೦ ಚೌರಾಸಿಯಾ ಅವರೊಂದಿಗೇನೇ ಇದ್ದವು. ಉಸ್ತಾದ್ ವಿಲಾಯತ್ ಖಾನ್, ಕುಮಾರ ಗಂಧರ್ವ ಅವರಂತಹ ಹಿಂದೂಸ್ತಾನಿ ಸಂಗೀತ ದಿಗ್ಗಜರು ರಮಣಿ ಅವರ ಪ್ರತಿಭೆ ಅಪರೂಪದ ಮೇಲ್ದರ್ಜೆ(rare class)ಯದೆಂದು ಕೊಂಡಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಜುಗಲ್ಬಂದಿಗಳು ನಡೆದು, (ಪಾಶ್ಚಾತ್ಯ ಸಹಿತ) ಈ ಅನುಭವದಿಂದ ರಮಣಿಯವರ ಸಂಗೀತವು ಕರ್ನಾಟಕ ಸಂಗೀತದ ಜುಗಲ್ಬಂದಿ ಕಚೇರಿಗಳ ಶಿಖರವನ್ನು ತಲಪಿತು.
ಜುಗಲ್ಬಂದಿಗಳು ರಮಣಿಯವರ ವೃತ್ತಿಜೀವನದ ಮುಖ್ಯಭಾಗ ಆಗಿರುವಂತೆಯೇ ಶ್ರೋತೃಗಳಿಂದ ಕರ್ನಾಟಕ ಸಂಗೀತಕ್ಕೆ ಸಾಕಷ್ಟು ಸಮಯ ಸಿಗುತ್ತಿಲ್ಲ; ಅದು ಸವಿಸ್ತಾರವಾಗಿ ಇರಬೇಕು ಎನ್ನುವ ಒಂದು ಅಭಿಪ್ರಾಯ ಬಂದಿತ್ತು. ಅದಕ್ಕೆ ರಮಣಿಯವರು, “ಜುಗಲ್ಬಂದಿಯಲ್ಲಿ ಎಲ್ಲದಕ್ಕೆ ಅವಕಾಶವೆಂದರೆ ಅದು ನಾಲ್ಕು ತಾಸಿನ ಕಚೇರಿ ಆದೀತು. ಚೆನ್ನೈನಲ್ಲಿ ಜುಗಲ್ಬಂದಿ ಎಂದರೆ ಎರಡು ತಾಸು ಮಾತ್ರ. ಇದರಿಂದಲೂ ಲಾಭವಿದೆ. ಹೆಚ್ಚು ಆಸಕ್ತಿದಾಯಕವಾಗಿರುತ್ತದೆ. ಕರ್ನಾಟಕ ಹಿಂದೂಸ್ತಾನಿ ಎರಡನ್ನೂ ಕೇಳಬಹುದು. ಆ ರೀತಿಯಲ್ಲಿ ಸಂಯೋಜಿಸಬೇಕು; ಆಗ ತುಂಬ ಜನ ಬರುತ್ತಾರೆ ಎಂದಿದ್ದರು. ಹಿಂದೂಸ್ತಾನಿ ವಯೊಲಿನ್ನ ಟಿ.ಎನ್. ರಾಜಮ್ ಅವರೊಂದಿಗೆ, ಸಾರಂಗಿಯ ರಾಂನಾರಾಯಣ್ ಮತ್ತು ಮೋಹನವೀಣೆ ಜೊತೆಗೂ ಅವರು ಜುಗಲ್ಬಂದಿ ಮಾಡಿದ್ದರು. ಗಾಯಕರೊಂದಿಗೆ ಕಡಮೆ ಆದರೂ ಡಾ| ಬಾಲಮುರಳೀಕೃಷ್ಣ ಮತ್ತು ಕೆ.ವಿ. ನಾರಾಯಣಸ್ವಾಮಿ ಅವರೊಂದಿಗೆ ರಮಣಿ ಜುಗಲ್ಬಂದಿ ಕಾರ್ಯಕ್ರಮ ನೀಡಿದ್ದರು.
“ಇದರಲ್ಲಿ ನುಡಿಸುವ ತಂತ್ರ ಮುಖ್ಯ. ಮಾಲಿ ಅದನ್ನು ಸ್ವೀಕರಿಸಿ ಚೆನ್ನಾಗಿ ಮಾಡಿದರು. ನಾವು ಪ್ರಾಕ್ಟೀಸ್ ಮಾಡುವಾಗ ಹಾಡುವ ಶೈಲಿಗೆ ಹೊಂದುವಂತೆ ನುಡಿಸಬೇಕಿತ್ತು. ಬಾಲಮುರಳಿಯವರ ಶೈಲಿ ಬೇರೆ. ಬೇರೆಬೇರೆ ಗಾಯನಶೈಲಿಗೆ ನುಡಿಸಬೇಕಾಗುತ್ತದೆ. ನಾನು ಯಾವುದೇ ಹಾಡನ್ನು ನುಡಿಸಬಲ್ಲೆ. ಏಕೆಂದರೆ ನಾನು ಸಂಗತಿಗಳನ್ನು ತುಂಬ ಪ್ರಾಕ್ಟೀಸ್ ಮಾಡಿದ್ದೇನೆ; ಅದಕ್ಕೆ ತುಂಬ ಶ್ರಮಹಾಕಿದ್ದೇನೆ” ಎಂದು ರಮಣಿ ಹೇಳಿದ್ದರು.
ವಿದೇಶ ಸಂಗೀತಯಾತ್ರೆ
ಹಾಗೆ ನೋಡಿದರೆ ವಿದೇಶ ಸಂಗೀತಯಾತ್ರೆ ಎನ್. ರಮಣಿಯವರಿಗೆ ಬಹುಬೇಗ ಒಲಿದು ಬಂದಿತ್ತು. ೧೯೬೨ರಲ್ಲಿ ಕೇವಲ ೨೮ ವರ್ಷವಿದ್ದಾಗಲೇ ಅವರ ವೃತ್ತಿಜೀವನದ ಈ ಹಂತ ಶುರುವಾಗಿತ್ತು. ಅಮೆರಿಕದ ನ್ಯೂಯಾರ್ಕ್ನ ಏಷ್ಯಾ ಸೊಸೈಟಿ ಅವರನ್ನು ಅಂತಾರಾಷ್ಟ್ರೀಯ ಸಂಗೀತ ಯಾತ್ರೆಗೆ ಆಹ್ವಾನಿಸಿತ್ತು. ಐತಿಹಾಸಿಕವಾಗಿ ಇದೇ ಕರ್ನಾಟಕ ಸಂಗೀತದ ಕೊಳಲುವಾದಕರೊಬ್ಬರ ಮೊದಲ ವಿದೇಶಪ್ರವಾಸವಾಗಿದೆ. ಆ ಪ್ರವಾಸದಲ್ಲಿ ವೀಣಾವಾದಕ ಎಸ್. ಬಾಲಚಂದರ್ ಅವರ ಜೊತೆಗಿದ್ದರು.
೧೯೬೨ರಲ್ಲಿ ಪ್ರಸಿದ್ಧ ‘ವರ್ಲ್ಡ್ ಪೆಸಿಫಿಕ್’ ಎಲ್.ಪಿ. ರೆಕಾರ್ಡ್ಸ್ ಆಲ್ಬಂ ಬಂತು. ಅದರಲ್ಲಿ ಪ್ರಮುಖವಾಗಿ ಪಂಡಿತ್ ರವಿಶಂಕರ್ ಮತ್ತು ರಮಣಿಯವರ ಎಲ್.ಪಿ. ರೆಕಾರ್ಡ್ಗಳು ಬಂದವು. ಅಮೆರಿಕ ಮತ್ತಿತರ ಕಡೆ ರಮಣಿಯವರ ಹಲವು ರೆಕಾರ್ಡ್ಗಳು, ಆಡಿಯೋ ಕ್ಯಾಸೆಟ್ಗಳು, ಸಿಡಿಗಳು ಬಂದವು. ಭಾರತ ಸರ್ಕಾರದ ಆಮಂತ್ರಣದ ಮೇರೆಗೆ ೧೯೭೨ರ ಮ್ಯೂನಿಚ್ ಒಲಿಂಪಿಕ್ಸ್ನಲ್ಲಿ ರಮಣಿ ಭಾಗವಹಿಸಿಸದರು. ಅದು ಕರ್ನಾಟಕ ಸಂಗೀತಗಾರರೊಬ್ಬರಿಗೆ ದೊರೆತ ದೊಡ್ಡ ಗೌರವ ಎನಿಸಿತು. ಮುಂದೆ ಅಮೆರಿಕ, ಕೆನಡ, ಬ್ರಿಟನ್, ಯೂರೋಪ್, ಸಿಂಗಾಪುರ, ಕೊಲ್ಲಿ ರಾ?ಗಳು, ಆಸ್ಟ್ರೇಲಿಯ – ಮುಂತಾಗಿ ಅವರ ಸಂಗೀತಯಾತ್ರೆಗಳು ವ್ಯಾಪಕವಾಗಿ ನಡೆದವು.
ವಿದೇಶಯಾತ್ರೆ ಕೈಗೊಂಡಾಗ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸಂಗೀತಕೇಂದ್ರಗಳಲ್ಲಿ ರಮಣಿ ಸೋದಾಹರಣ ಉಪನ್ಯಾಸ(ಲೆಕ್-ಡೆಮ್) ಗಳನ್ನು ನೀಡುತ್ತಿದ್ದರು; ಹೀಗೆ ಜಾಗತಿಕಮಟ್ಟದಲ್ಲಿ ಕರ್ನಾಟಕ ಸಂಗೀತವನ್ನು ಎತ್ತಿಹಿಡಿಯುವಲ್ಲಿ ಅವರು ತಮ್ಮ ಕೊಡುಗೆ ನೀಡಿದರು. ಅಮೆರಿಕದ ಕ್ಲೀವ್ಲ್ಯಾಂಡಿನ ಭೈರವಿ ಸಂಸ್ಥೆ ೧೯೯೮ರಲ್ಲಿ ತ್ಯಾಗರಾಜ ಸಂಗೀತೊತ್ಸವವನ್ನು ಹಮ್ಮಿಕೊಂಡು ಅದಕ್ಕೆ ರಮಣಿಯವರನ್ನು ಆಮಂತ್ರಿಸಿತು. ಮುಂದೆ ಆ ಸಂಸ್ಥೆ ಕೆಲವು ಕಾಲ ಪ್ರತಿ ವ? ಅವರನ್ನು ಕರೆಯಿತು. ಜೊತೆಗೆ ಅದು ಇನ್ನ? ದೇಶಗಳ ಸಂಗೀತಯಾತ್ರೆಗೆ ಕಾರಣವಾಯಿತು.
ಮಂದ್ರಸ್ಥಾಯಿ ಕೊಳಲು
“ಒಟ್ಟಿನಲ್ಲಿ ಬಿದಿರಿನ ಕೊಳಲಿಗೆ ಜಾಗತಿಕ ಗೌರವವನ್ನು ತಂದುಕೊಟ್ಟಿರಿ” ಎಂದೊಬ್ಬರು ಸಂದರ್ಶಕರು ಹೇಳಿದಾಗ ರಮಣಿ, “ನನ್ನ ದೃಷ್ಟಿ ಕರ್ನಾಟಕ ಸಂಗೀತದತ್ತ. ಸುಮ್ಮನೆ ಪ್ರಾಸಂಗಿಕವಾಗಿ ಕೇಳಿದವರಿಗೂ ಕರ್ನಾಟಕ ಸಂಗೀತವು ತಾಗುತ್ತದೆ. ಆದ್ದರಿಂದ ಜನರಿಗೆ ತಾಗಬೇಕೆಂದು (ಅಪೀಲ್ ಆಗಬೇಕೆಂದು) ಇದನ್ನು ತಿದ್ದುವ ಅಗತ್ಯವಿಲ್ಲ. ನನಗೆ ಕಲಿಸಿದ್ದನ್ನು ದುರ್ಬಲಗೊಳಿಸದೆ (ಡೈಲ್ಯೂಟ್ ಮಾಡದೆ) ಹಾಗೇ ಕಲಿಸುವುದೇ ನನ್ನ ಮುಂದಿರುವ ಸವಾಲು” ಎಂದಿದ್ದಾರೆ. ಮುಂದುವರಿದು, “ವಾದ್ಯದಲ್ಲಿ ಪ್ರಾವೀಣ್ಯ ಮತ್ತು ಸೃಷ್ಟಿಶೀಲತೆ ಎರಡೂ ಬೇಕು. ಕೊಳಲಿನಲ್ಲಿ ಸಾವೇರಿ ರಾಗವನ್ನು ನುಡಿಸಲು ಸಾಧ್ಯವಾಗುವುದಿಲ್ಲವೆಂದು ಟಿ. ವಿಶ್ವನಾಥನ್ ಒಮ್ಮೆ ಹೇಳಿದರು. ನನ್ನ ಹೊಸ ಫಿಂಗರಿಂಗ್ನಿಂದಾಗಿ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಬೇಕಾಯಿತು. ಈಗ ಅದು ಸ್ವೀಕೃತವಾಗಿದೆ. ಯುವ ಕಲಾವಿದರು ಅದೇ ವಿಧಾನವನ್ನು ಅನುಸರಿಸಿ ಹಿಂದೆ ಕ?ವೆನಿಸಿದ್ದ ರಾಗಗಳನ್ನು ನುಡಿಸುತ್ತಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
ಮಂದ್ರ ಸ್ಥಾಯಿಯ ಉದ್ದ ಕೊಳಲು ಕಚೇರಿಯ ಕೊನೆಯ ಭಾಗದಲ್ಲಿ ವಿಶೇಷವಾಗಿ ರಂಜಿಸುತ್ತದೆ. ಭಕ್ತಿಗೀತೆಗಳು, ಜಯದೇವನ ಅಷ್ಟಪದಿ, ಶ್ರೀ ನಾರಾಯಣತೀರ್ಥರ ತರಂಗ, ಪುರಂದರದಾಸರ ಭಜನೆ, ಸದಾಶಿವ ಬ್ರಹ್ಮೇಂದ್ರರ ರಚನೆ, ಮೀರಾ ಭಜನ್ಗಳಿಗೆ ಇದು ಉತ್ತಮ. ಈ ಕೊಳಲಿನಿಂದ ಬರುವ ಮಂದ್ರ ಸ್ವರ ಭಕ್ತಿಗೆ ಪೂರಕವಾಗಿದ್ದು ಶ್ರೋತೃಗಳಿಗೆ ಮೋಡಿಮಾಡುತ್ತದೆ ಎಂಬುದು ಸ್ಪಷ್ಟವಾಯಿತು. ಉದ್ದ ಕೊಳಲಿನಲ್ಲಿ ವೇಗದ ಓಘವನ್ನು ತರುವ ಬಗ್ಗೆಯೂ ಅವರು ಸಂಶೋಧನೆಯನ್ನು ನಡೆಸಿದರು; ಕೊಳಲಿನ ಗಾತ್ರವನ್ನು ಹಿಗ್ಗಿಸಿದಂತೆಯೇ ರಂದ್ರಗಳ ಸ್ಥಳಗಳಲ್ಲೂ ವ್ಯತ್ಯಾಸ ಮಾಡಿದರು. ರಮಣಿಯವರು ಒಮ್ಮೆ ಪಿವಿಸಿ ಪೈಪ್ ತೆಗೆದುಕೊಂಡು ತೂತು ಕೊರೆದು ಚೆನ್ನಾಗಿ ನುಡಿಸಿದರು ಎಂದು ಪತ್ರಕರ್ತೆ ರೂಪಾ ಗೋಪಾಲ್ ದಾಖಲಿಸಿದ್ದಾರೆ.
“ಸಾಹಿತ್ಯದ ಆಧ್ಯಾತ್ಮಿಕ ಅಂಶವು ಶ್ರೋತೃಗಳ ಅನುಭವಕ್ಕೆ ಬಂದಾಗಲೇ ವಾದ್ಯಸಂಗೀತವು ಪೂರ್ಣವೆನಿಸುತ್ತದೆ” ಎಂಬುದು ರಮಣಿಯವರ ನಿಲವು. “ಹಿಂದಿನ ಕೊಳಲುವಾದಕರ ಬಗ್ಗೆ ಮಾತನಾಡುವಾಗ ಮಹಾಲಿಂಗಮ್ ಕೇಂದ್ರದಲ್ಲಿರುತ್ತಿದ್ದರು. ವರ್ತಮಾನಕ್ಕೆ ಬರುವುದಾದರೆ ಅಂತಹ ಮಾತುಕತೆ ರಮಣಿಯವರ ಸುತ್ತ ಬೆಳೆಯುತ್ತದೆ. ಅವರ ಬಗ್ಗೆ ಚರ್ಚಿಸದಿದ್ದರೆ ಈ ವಾದ್ಯದ ಬಗೆಗಿನ ಮಾತು ಅಪೂರ್ಣವೆನಿಸುತ್ತದೆ” ಎನ್ನುವ ಮಟ್ಟಕ್ಕೆ ರಮಣಿ ಬೆಳೆದರು.
ರಮಣಿ ಬಾನಿ
ರಮಣಿಯವರ ಶೈಲಿ ‘ರಮಣಿ ಬಾನಿ’ ಎಂದು ಪರಿಚಿತವಾಗಿದೆ. ಅದು ಶಕ್ತಿಶಾಲಿಯಾದ, ಸಂತೋಷ ಕೊಡುವ ಶೈಲಿ. ಮೃದುವಾದ ಸ್ವರ, ಸೂಕ್ಷ್ಮ ಏರಿಳಿತ, ಮಾಧುರ್ಯ, ಸಹಜವೂ ಅಂತರ್ನಿಹಿತವೂ ಆದ ಪ್ರತಿಭೆ, ಕೊರತೆಯಿಲ್ಲದ ಕೌಶಲ – ಅದರ ಹೆಗ್ಗುರುತುಗಳು. ಉಸಿರನ್ನು ಊದುವುದು ಮತ್ತು ಬೆರಳುಗಾರಿಕೆಗಳು ಅಜ್ಜನಿಂದಲೇ ಬಂದಿದ್ದವು. ಗುರು ಮಾಲಿ ಅದನ್ನು ಪೋಷಿಸಿದರು. ಸ್ವಂತ ಸಂಶೋಧನೆಯಿಂದ ಪುಷ್ಟಿಗೊಂಡಿತು.
ಕೆಳಗಿನ ಸ್ಥಾಯಿಯಲ್ಲಿ ಕೊಳಲಿನ ಎಂಟನೇ ರಂಧ್ರದ ಪ್ರಯೋಜನವನ್ನು ಮೊದಲು ಪಡೆದವರು ಮಾಲಿ. ರಮಣಿ ಅದನ್ನು ಮುಂದುವರಿಸಿದರು; ರೇಂಜನ್ನು ವಿಸ್ತರಿಸಿದರು. ದೊಡ್ಡದೊಡ್ಡ ಕೊಳಲು ಬಳಸಿ ಇನ್ನಷ್ಟು ಮಂದ್ರಕ್ಕೆ ಹೋದರು. ಹೊಸಬಗೆಯ ಬೆರಳುಗಾರಿಕೆ (ಫಿಂಗರಿಂಗ್), ಊದುವಿಕೆಗಳನ್ನು ತಂದರು. ಅವು ಸಂಕೀರ್ಣವಾದರೂ ಪರಿಣಾಮಕಾರಿಯಾಗಿದ್ದವು. ರಾಗ ಭಾವ, ಮಾಧುರ್ಯ, ಸ್ವರಗಳ ನಿಖರತೆ, ಲಯದ ಮೇಲಿನ ಹಿಡಿತ ಇವೆಲ್ಲ ಅವರಿಗೆ ಸಹಜವಾಗಿ ಬಂದಿತ್ತು. ಮಾಧುರ್ಯ ಮತ್ತು ಸ್ವರದ ನಿಖರತೆಗೆ ತೊಂದರೆ ಉಂಟುಮಾಡದೇನೇ ಸಂಕೀರ್ಣಲಯದ ಕಸರತ್ತುಗಳನ್ನು ನಡೆಸುತ್ತಿದ್ದರು; ಅದು ಸಹಜವೆಂಬಂತಿತ್ತು.
ಕೊಳಲುವಾದನವು ಗಾಯನದಂತಿರಬೇಕು (ಗಾಯಕಿ ಶೈಲಿ) ಎಂಬುದವರ ಆದರ್ಶ. “ಕರ್ನಾಟಕ ಸಂಗೀತದ ಭಾವನೆಯು ಕೇವಲ ಸಂಗೀತಶೈಲಿಯಲ್ಲಿರುವಂಥದ್ದಲ್ಲ; ಅದು ಸಾಹಿತ್ಯದಲ್ಲೂ ಇದೆ. ವಾಗ್ಗೇಯಕಾರರ ಆಧ್ಯಾತ್ಮಿಕ ತುಡಿತ ಮತ್ತು ಅನುಭಾವಗಳು ಅವರ ರಚನೆಯಲ್ಲಿವೆ. ನನ್ನ ಭಾವನೆಯು ಸಾಹಿತ್ಯದ ಮೂಲಕ ವ್ಯಕ್ತವಾಗಬೇಕು. ಅದರಲ್ಲಿ ಅಧ್ಯಾತ್ಮವು ಅಡಗಿದೆ” ಎಂದಿದ್ದಾರೆ ರಮಣಿ. “ಟಿ. ಬೃಂದಾ ಮತ್ತು ಮಧುರೆ ಮಣಿ ಅಯ್ಯರ್ ನನ್ನ ನುಡಿಸಾಣಿಕೆಯ ಮೇಲೆ ತುಂಬ ಪ್ರಭಾವ ಬೀರಿದ್ದಾರೆ. ಚೆನ್ನೈಗೆ ಬಂದ ಮೇಲೆ (ತಿರುವಾರೂರಿನಿಂದ) ಬಗೆಬಗೆಯ ಕಲಾವಿದರ ಭೇಟಿಯಾಯಿತು; ನಾನು ವಿನೀತನಾದೆ. ಅವರಂತಾಗಲು ದಾರಿ ಬಹಳ ದೂರ ಇದೆ ಎನಿಸಿತು. ಅವರಲ್ಲಿ ಹಲವರು ತುಂಬ ಜನಪ್ರಿಯರಾದರೆ ಇನ್ನ? ಜನ ಜನಪ್ರಿಯರಲ್ಲದಿದ್ದರೂ ಗೌರವಕ್ಕೆ ಅರ್ಹರು; ಅವರ ಮಾರ್ಗದರ್ಶನದಿಂz ಬೆಳೆದೆ” ಎಂದು ರಮಣಿ ನಿವೇದಿಸಿಕೊಂಡಿದ್ದಾರೆ.
ರಮಣಿಯವರ ಅಜ್ಜನಿಂದ ಬಂದ ಸಂಗೀತ ಪರಂಪರೆ ಈಗಲೂ ಮುಂದುವರಿಯುತ್ತಿದೆ. ಅವರ ಪುತ್ರ ಹಾಗೂ ಶಿಷ್ಯ ಆರ್. ತ್ಯಾಗರಾಜನ್ ಪ್ರಸಿದ್ಧ ಕೊಳಲುವಾದಕರು. ಜಗತ್ತಿನಾದ್ಯಂತ ಅವರ ಸಂಗೀತ ಕಚೇರಿಗಳು ನಡೆಯುತ್ತಿವೆ. ಅವರು ತಂದೆಯೊಂದಿಗೆ ವಿದೇಶ ಪ್ರವಾಸ ಮಾಡಿದ್ದಾರೆ; ಸ್ವಂತ ಸೋಲೋ ಕಚೇರಿಗಳನ್ನು ನಡೆಸುತ್ತಾರೆ. ರಮಣಿಯವರ ಮೊಮ್ಮಗ ಹಾಗೂ ಶಿ? ಅತುಲ್ಕುಮಾರ್ ಕೂಡ ಭರವಸೆ ಮೂಡಿಸಿರುವ ಸಂಗೀತಗಾರ. ೧೯೯೫ರಿಂದ ಈತ ಕೆಲವು ಸಲ ಅಜ್ಜನೊಂದಿಗೆ ವಿದೇಶ ಪ್ರವಾಸವನ್ನು ಕೈಗೊಂಡಿದ್ದರು.
‘ರಮಣಿ ಅಕಾಡೆಮಿ ಆಫ್ ಫ್ಲೂಟ್’
ಇನ್ನು ರಮಣಿಯವರ ಪರಂಪರೆಯನ್ನು ಮುಂದುವರಿಸುವಲ್ಲಿ ೧೯೮೩ರಲ್ಲಿ ಅವರು ಸ್ಥಾಪಿಸಿದ ‘ರಮಣಿ ಅಕಾಡೆಮಿ ಆಫ್ ಫ್ಲೂಟ್’ (ಆರ್ಎಎಫ್) ಕೂಡ ಗಮನಸೆಳೆದಿದೆ. ದೇಶವಿದೇಶದ ಯುವ ಪ್ರತಿಭೆಗೆ ತರಬೇತಿ ನೀಡುವುದು, ಕೊಳಲುವಾದನ ಕ್ಷೇತ್ರದಲ್ಲಿ ಸಿದ್ಧಿ ಇದ್ದೂ ಪ್ರಸಿದ್ಧಿ ಇಲ್ಲದವರನ್ನು ಗುರುತಿಸಿ ಗೌರವಿಸುವುದು ಇದರ ಪ್ರಮುಖ ಧ್ಯೇಯಗಳು. ಇದು ಪ್ರತಿವ? ಓರ್ವ ಕೊಳಲುವಾದಕನನ್ನು ಸಂಮಾನಿಸುತ್ತದೆ. ರಮಣಿಯವರಿಗೆ ಒಂದು ಕಾಲದಲ್ಲಿ ಜಗತ್ತಿನಾದ್ಯಂತ ಸುಮಾರು ೫೦೦ ಮಂದಿ ಶಿ?ರಿದ್ದು, ಆರ್ಎಎಫ್ ಅವರನ್ನು ಒಂದೆಡೆ ಸೇರಿಸುತ್ತದೆ. ಅವರ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಕೆಲಸವನ್ನೂ ಆರ್ಎಎಫ್ ಮಾಡುತ್ತದೆ. ಈಗ ‘ರಮಣಿ ಕೊಳಲು ಅಕಾಡೆಮಿ’ಯನ್ನು ಆರ್. ತ್ಯಾಗರಾಜನ್ ನಡೆಸುತ್ತಾರೆ. ಶಿ?ರ ಪ್ರತಿಭೆಯನ್ನು ಗುರುತಿಸುವಲ್ಲಿ ಚಾಣಾಕ್ಷರಾಗಿದ್ದ ರಮಣಿ ಅವರ ಗುಣಮಟ್ಟವನ್ನು ಎತ್ತರಿಸಲು ವಿವಿಧ ಕ್ರಮಗಳನ್ನು ಅನುಸರಿಸುತ್ತಿದ್ದರು. ಜಗತ್ತಿನ ಎಲ್ಲೆಡೆ ಅವರ ಶಿ?ರಿದ್ದು ಅವರಲ್ಲಿ ಹಲವರು ಸಂಗೀತಗಾರರಾಗಿಯೂ ಪ್ರಸಿದ್ಧರು. ರಮಣಿಯವರೊಳಗಿದ್ದ ಆದರ್ಶ ಗುರುವನ್ನು ಗುರುತಿಸಿದ ಅಮೆರಿಕದ ವಾಸರ್ (Wಚಿseಡಿ) ಕಾಲೇಜ್ ಅವರಿಗೆ ‘ಸಂಗೀತ ಆಚಾರ್ಯ’ ಎಂಬ ಬಿರುದನ್ನು ನೀಡಿತ್ತು (೧೯೭೮).
ತಮ್ಮ ಸಂಸ್ಥೆಯ ಬೋಧನೆಗೆ ಸಂಬಂಧಿಸಿ ಅವರು ಒಮ್ಮೆ, “ನಾವು ಸರ್ಟಿಫಿಕೇಟ್ ನೀಡುವುದಿಲ್ಲ. ನೀವು ಚೆನ್ನಾಗಿ ನುಡಿಸುತ್ತೀರಾದರೆ ಸರ್ಟಿಫಿಕೇಟ್ ಅಪ್ರಯೋಜಕ. ಪರೀಕ್ಷೆ ಪಾಸುಮಾಡಲು ನಮ್ಮ ಬೋಧನೆ ಧಾರಾಳ ಸಾಕು. ಕಚೇರಿ ಮಾಡಲು ಕೇವಲ ಸರ್ಟಿಫಿಕೇಟ್ ಪಡೆದರೆ ಸಾಲದು. ನಮ್ಮ ಅಕಾಡೆಮಿಗೆ ಸೇರಿಕೊಂಡವರಿಗೆ ಕಚೇರಿ ಕಲಾವಿದರಾಗಲು ವಿಪುಲ ಅವಕಾಶಗಳಿವೆ. ನಮ್ಮ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಲು ಏನೂ ತೊಂದರೆಯಿಲ್ಲ” ಎಂದು ಹೇಳಿದ್ದರು.
ಪ್ರಮುಖ ಪ್ರಶಸ್ತಿಗಳು
ಬಹುಬೇಗ ಪ್ರತಿಭೆ ಬೆಳಕಿಗೆ ಬಂದ ಎನ್. ರಮಣಿಯವರಿಗೆ ಪ್ರಶಸ್ತಿಗಳು ಕೂಡ ಬೇಗ ಬಂದವು. ಸಂಗೀತ ಚೂಡಾಮಣಿ – ೧೯೭೧, ಕಲೈಮಾಮಣಿ – ೧೯೭೩, ಗೌರವ ಡಾಕ್ಟರೇಟ್ – ೧೯೮೦, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ – ೧೯೮೪-೮೫, ಪದ್ಮಶ್ರೀ – ೧೯೮೭, ಅಮೆರಿಕದ ವಿವಿಧೆಡೆಯ ಗೌರವ ನಾಗರಿಕತ್ವ ಪ್ರಶಸ್ತಿ, ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ – ೧೯೯೭, ಆಕಾಶವಾಣಿಯ ಸುವರ್ಣೋತ್ಸವ ಪ್ರಶಸ್ತಿ – ೨೦೦೪ (ದೇಶದ ೨೫ ಜನರಲ್ಲಿ ಒಬ್ಬರು), ಸಂಗೀತ ನಾಟಕ ಅಕಾಡೆಮಿಯ ಟಾಗೋರ್ರತ್ನ ಪ್ರಶಸ್ತಿ – ೨೦೧೨ ಅವುಗಳಲ್ಲಿ ಪ್ರಮುಖವಾದವು. ಇನ್ನು ವಿಶೇಷವಾದ ಒಂದು ಪ್ರಶಸ್ತಿಯೆಂದರೆ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರು ಸ್ವತಃ ನೀಡಿದ ತಮ್ಮ ಹೆಸರಿನ ಪ್ರಶಸ್ತಿ – ೨೦೧೩. ಇದು ತಮ್ಮ ಜುಗಲ್ಬಂದಿ ಸಂಗಾತಿಗೆ ಅವರು ಕೃತಜ್ಞತೆ, ಅಭಿನಂದನೆ ಸಲ್ಲಿಸಿದ ಕ್ರಮವೂ ಆಗಿತ್ತು. ೨೦೧೦ರಲ್ಲಿ ಚೆನ್ನೈಯಲ್ಲಿ ಜಿಎನ್ಬಿ ಜನ್ಮಶತಮಾನೋತ್ಸವ ನಡೆದಾಗಲೂ ಆ ಸಮಿತಿ ರಮಣಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿತು.
ಕಲಾವಿದರಾಗಿ ರಮಣಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೊಂದಿದ್ದರೂ ವ್ಯಕ್ತಿಯಾಗಿ ತುಂಬ ಸರಳರು, ವಿನಯಶೀಲರು. ಇತರ ಸಂಗೀತಗಾರರಿಗೆ ತಾನು ಋಣಿ ಎಂದು ಬಹಿರಂಗವಾಗಿ ಹೇಳುವ ಸಜ್ಜನರು. ಹೊಸ ವಿ?ಯವನ್ನು ಒಬ್ಬ ಯುವಕನಲ್ಲಿ ಕಂಡರೂ ಕಲಿಯುವ ವಿನಯವಂತರು, ಉದಾರಿಗಳು. ಧಾರ್ಮಿಕ ಶ್ರದ್ಧೆಯುಳ್ಳವರು. ಉನ್ನತಮಟ್ಟದ ಕಲಾವಿದರಾಗಿದ್ದು, ಸಂಪತ್ತು-ಸಮೃದ್ಧಿಗಳಿದ್ದರೂ ಆಡಂಬರದ ಜೀವನಕ್ಕೆ ಮನಸ್ಸುಮಾಡಿದವರಲ್ಲ. ಅಶಕ್ತರು, ಅನಾಥರು, ಕ್ಯಾನ್ಸರ್ನಂತಹ ತೀವ್ರಸ್ವರೂಪದ ರೋಗಗಳಿಂದ ಬಳಲುತ್ತಿದ್ದವರ ಸಹಾಯಾರ್ಥ ಅವರು ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸಿ ನೆರವು ನೀಡಿದ್ದರು. ಕೊನೆಯ ಒಂದೆರಡು ವರ್ಷ ತೀವ್ರಸ್ವರೂಪದ ಅನಾರೋಗ್ಯ ಅವರನ್ನು ಬಾಧಿಸಿತು. ಅದನ್ನು ವೀರೋಚಿತವಾಗಿಯೇ ಅನುಭವಿಸಿ ತಮ್ಮ ಸುಮಾರು ಏಳು ದಶಕಗಳ ಸಂಗೀತ ಕೈಂಕರ್ಯಕ್ಕೆ ವಿದಾಯ ಹೇಳಿದರು.
ವಯೋಲಿನ್ ವೇಣು-ವೀಣಾ
ವಯೊಲಿನ್, ವೇಣು ಮತ್ತು ವೀಣಾ ತ್ರಿವಳಿ ಕಚೇರಿ ಎನ್. ರಮಣಿ ಅವರ ವೃತ್ತಿಜೀವನದೊಂದು ಮೈಲಿಗಲ್ಲೆನಿಸಿದೆ. ಅದರಲ್ಲಿ ಇವರೊಂದಿಗೆ ವಯೊಲಿನ್ ವಾದಕರಾಗಿ ಲಾಲ್ಗುಡಿ ಜಯರಾಮನ್ ಮತ್ತು ವೀಣಾವಾದಕರಾಗಿ ಆರ್. ವೆಂಕಟರಾಮನ್ ಇದ್ದರು. ೧೯೬೬ರ ಹೊತ್ತಿಗೆ ಈ ತಂಡವನ್ನು ಸಿದ್ಧಪಡಿಸಿದ್ದು, ಈ ಕಚೇರಿಗಳು ಬಹುಬೇಗ ಜನಪ್ರಿಯವಾದವು. ಲಾಲ್ಗುಡಿ ಅಥವಾ ಎಂ.ಎಸ್. ಗೋಪಾಲಕೃ?ನ್ ಅವರೊಂದಿಗೆ ರಮಣಿ ಜುಗಲ್ಬಂದಿಗಳನ್ನು ಕೂಡ ನಡೆಸಿದರು. ಕರ್ನಾಟಕ ಸಂಗೀತದ ಎರಡು ಕೊಳಲುಗಳು ಮತ್ತು ಎರಡು ಮೃದಂಗಗಳನ್ನು ಇರಿಸಿಕೊಂಡು ರಮಣಿ ಕೊಯಮತ್ತೂರಿನಲ್ಲೊಂದು ಕಚೇರಿ ನಡೆಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟಿ.ಆರ್. ಮಹಾಲಿಂಗಮ್ ಅದನ್ನು ಹೊಗಳಿ ಇಂಥದ್ದು ಎಲ್ಲ ಕಡೆ ಆಗಬೇಕೆಂದು ಸಲಹೆ ನೀಡಿ ತಾನೂ ಅದರಲ್ಲಿ ಭಾಗಿಯಾದರು. ೧೯೭೪ರ ಹೊತ್ತಿಗೆ ಮಾಲಿ ಮತ್ತು ರಮಣಿ ಅವರ ಎರಡು ಕೊಳಲು, ಎರಡು ಮೃದಂಗಗಳ ೧೦-೧೨ ಕಚೇರಿಗಳು ಮದ್ರಾಸ್, ದೆಹಲಿ, ಮುಂಬಯಿ, ಹೈದರಾಬಾದ್, ನಾಗಪುರ ಮುಂತಾದ ಕಡೆ ನಡೆದು ಶ್ರೋತೃಗಳ ಮೆಚ್ಚುಗೆ ಗಳಿಸಿದವು. ಶಿ?ರೊಂದಿಗೆ ಐದು ಕೊಳಲುಗಳಿದ್ದ ಕಚೇರಿಯ ಪ್ರಯೋಗ ಕೂಡ ರಮಣಿ ನಡೆಸಿದರು