ಭಗವದ್ಗೀತೆಯು ಸುಶ್ರೇಷ್ಠ ಗ್ರಂಥ, ಭಾರತದ ಎಲ್ಲ ಭಾಷೆಗಳಲ್ಲಿ ಭಾಷಾಂತರಗೊಂಡಿದೆ. ಕ್ರೈಸ್ತರು ಬೈಬಲ್ಲಿಗೆ, ಮುಸ್ಲಿಮರು ಖುರಾನಿಗೆ, ಬೌದ್ಧರು ತ್ರಿಪಿಟಕೆಗೆ ಯಾವ ಮಹತ್ತ್ವ ಕೊಡುವರೋ ಅದಕ್ಕಿಂತಲೂ ಹೆಚ್ಚಿನ ಮಹತ್ತ್ವವನ್ನು ಭಾರತೀಯರು ಭಗವದ್ಗೀತೆಗೆ ಕೊಟ್ಟಿರುವರು. ಮಾನವನ ಬದುಕನ್ನು ಸುಂದರಗೊಳಿಸುವ ಅತ್ಯಂತ ಪವಿತ್ರಗ್ರಂಥ ಇದಾಗಿದೆ.
ಗೀತೆಯನ್ನು ಓದದ ಒಬ್ಬ ಸಂತನೂ ಭಾರತದಲ್ಲಿಲ್ಲ. ಯಾವುದೇ ನಿರ್ದಿಷ್ಟ ಮತಪಂಥಗಳಿಗೆ ಅಂಟಿಕೊಳ್ಳದಿರುವುದೇ ಗೀತೆಯ ವೈಶಿಷ್ಟ್ಯ. ಆದಕಾರಣ ಗೀತೆಯು ಯಾರದು ಎಂಬ ಪ್ರಶ್ನೆಗೆ ಗೀತೆಯು ಎಲ್ಲರದು ಎಂಬುದೇ ಸಮಂಜಸ ಉತ್ತರವಾಗುತ್ತದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಗೀತೆಯನ್ನು ಬಹು ಗೌರವ, ಭಕ್ತಿಯಿಂದ ಕಾಣುತ್ತಿದ್ದರು. ಗಾಂಧಿಯವರ ರಾಜಕೀಯ, ಸಾಮಾಜಿಕ, ಧಾರ್ಮಿಕ ಜೀವನದಲ್ಲಿ ಏನೇ ಕಷ್ಟನಷ್ಟಗಳು ಬಂದರೂ ಅವರು ಗೀತೆಗೆ ಮೊರೆಹೊಗುತ್ತಿದ್ದರು. ಸಂತ ವಿನೋಬಾಭಾವೆಯವರಂತೂ ಭಗವದ್ಗೀತೆಗೆ ‘ಗೀ ತಾಯಿ’ ಎಂದರು. ಇದರ ಯಾವುದೇ ಪಟ ಅಷ್ಟು ಶಾಂತಿಪರ್ಣ, ವಾತ್ಸಲ್ಯಮಯ.
ಇದರಲ್ಲಿ ಲೌಕಿಕ ಹಾಗೂ ಅಲೌಕಿಕ ಬದುಕಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಅಂತೆಯೇ ಆಚಾರ್ಯರುಗಳು ಗೀತೆಯನ್ನು ಪ್ರಮಾಣಗ್ರಂಥವೆಂದರು. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಯಾವುದೇ ಸಮಸ್ಯೆ ಇರಲಿ ಅದಕ್ಕೆ ಗೀತೆಯಲ್ಲಿ ಸಮಾಧಾನವಿದೆ. ಪ್ರಾಪಂಚಕ ಸಮಸ್ಯೆಗಳಿಗಂತೂ ಇದು ಸಿದ್ಧೌಷಧ!
ಗೀತೆಯು ಬದುಕುವ ಕಲೆಯನ್ನು ಸೊಗಸಾಗಿ ಕಲಿಸುತ್ತದೆ. ಆಗ ಜೀವನದಲ್ಲಿ ಎಷ್ಟೇ ವಿಷಾದವಿದ್ದರೂ ಅದು ವಿಷಾದಯೋಗವಾಗುತ್ತದೆ. ಬಡವರು ಬಲ್ಲಿದರು ಪಂಡಿತರು ಪಾಮರರು ಯಾರಿಗೂ ಈ ವಿಷಾದ ಬಿಟ್ಟಿದ್ದಲ್ಲ. ಆದರೆ ಗೀತಾಯಿಯು ಆ ವಿಷಾದವನ್ನೇ ಯೋಗವನ್ನಾಗಿ ಆನಂದಸಾಧನವನ್ನಾಗಿಸುತ್ತಾಳೆ!
ಚಿಂತೆಯನ್ನು ನೀಗಿ ನಿಶ್ಚಿಂತ ನಿರಾಮಯನಾಗಲು ಇದರಲ್ಲಿ ೧೭ ಉಪಾಯಗಳನ್ನು ಹೇಳಲಾಗಿದೆ. ಯಾರಿಗೆ ಯಾವುದಿಷ್ಟವೋ ಅದನ್ನವರು ಆಯ್ದುಕೊಳ್ಳಬಹುದು. ಎಲ್ಲರಿಗೂ ಬೇಕಾದುದು ಚಿಂತೆಯಲ್ಲ, ಶಾಂತಿ. ಯಾವುದೇ ಮತಪಂಥದವರಿಗೂ ಇದರಲ್ಲಿ ಸಮಾಧಾನವಿದೆ, ಶಾಂತಿಯಿದೆ.
ದೂರದಲ್ಲಿ ಸುಂದರ ನದಿಯು ಹರಿಯುತ್ತಿದೆ. ಅದನ್ನು ಕಂಡ ಮಹಾಕವಿ ಗಂಗೆಯ ಮೇಲೆ ಕಾವ್ಯ ಬರೆಯತೊಡಗಿದ. ತಪಸ್ವಿಯು ಧ್ಯಾನಾಸಕ್ತನಾದ. ರೈತನಾದರೋ ನೇರವಾಗಿ ಹೊಳೆಗಿಳಿದು ನೀರು ಕುಡಿದು ಬಾಯಾರಿಕೆ ಕಳೆದುಕೊಂಡು ಆನಂದದಿಂದ ವಿಶ್ರಮಿಸಿದ.
ಗಂಗೆಯು ಪ್ರತ್ಯಕ್ಷಳಾಗಿ ಕವಿಗೆ ಹೇಳಿದಳಂತೆ, ‘ನೀನು ಹಾಡಿದರೆ ನಿನ್ನ ತೃಪ್ತಿ ಹಿಂಗದು, ನನ್ನನ್ನು ಸ್ವೀಕರಿಸು. ಓ ತಪಸ್ವಿ, ಕಣ್ಣೆದುರಲ್ಲೇ ಇರುವ ನನಗಾಗಿ ಮತ್ತೇಕೆ ಧ್ಯಾನಿಸುವೆ? ಅನುಭವಿಸಿ ಆನಂದಿಸು’ ಎಂದು ಆಶೀರ್ವದಿಸಿದಳಂತೆ.
ಹಾಗೆ ಕೆಲವು ಜನರು ಗೀತೆಯನ್ನು ಹಾಡಿ ಹೊಗಳಿದರು. ಇನ್ನು ಕೆಲವರು ಪಜಿಸಿ ಪಾರಾಯಣ ಮಾಡಿದರು. ಆದರೆ ಮೂರನೆಯವರು ಭಕ್ತರು, ಅವರು ಶ್ರದ್ಧೆಯಿಂದ ಗೀತಾಮೃತ ಪಾನಮಾಡಿ ಅಮರರಾದರು, ಆನಂದಿತರಾದರು.
ಹಾಗೆ ನಾವೆಲ್ಲ ಗೀತೆಯನ್ನು ಅರಿಯಬೇಕು. ಅರಿತು ಆಚರಿಸಿ ಆನಂದಿಸಬೇಕು. ಅದೇ ಗೀತಾಯಿಯ ಕರುಣೆ.
– [ಪೂಜ್ಯ ಸ್ವಾಮಿಗಳ ಪ್ರವಚನದಿಂದ.
ಸಂಪಾದನ: ಡಾ|| ಶ್ರದ್ಧಾನಂದ ಸ್ವಾಮಿಗಳು. ಕೃಪೆ: ಜ್ಞಾನಯೋಗ ಫೌಂಡೇಶನ್, ವಿಜಾಪುರ.]