ಒಟ್ಟಿನಲ್ಲಿ ಅಲ್ಲಿಯವರೆಗೂ `ಉಪಾಧ್ಯಾಯ’ ಸಂಸ್ಕೃತ ಶಬ್ದಕ್ಕೆ ಪ್ರತಿಯಾಗಿ `ಓವಜ, ಓಜ’ ಎಂದು ಬಳಸಲ್ಪಡುತ್ತಿದ್ದ ಪದಕ್ಕೆ ಇಲ್ಲಿ `ನಾಡು’ ಪದವನ್ನು ಜೊತೆಮಾಡಿ ನಾಡು+ಓಜ=ನಾಡೋಜ ಎಂದರೆ, ನಾಡಿನ ಗುರು, ನಾಡಿನ ಶ್ರೇಷ್ಠ ಎಂಬರ್ಥದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಯೋಗಿಸಿ ಒಂದು ಸುಂದರವಾದ, ಅರ್ಥಗರ್ಭಿತವಾದ ಶಬ್ದವನ್ನು ಸೃಷ್ಟಿಸಿ ಶಬ್ದಬ್ರಹ್ಮನಾಗುತ್ತಾನೆ, ಮಹಾಕವಿ ಪಂಪ.
ಉಪಾಧ್ಯಾಯ-ಓಜ
ಸನಾತನಧರ್ಮದ ಭಾಷೆಯಾದ ಸಂಸ್ಕೃತದಿಂದ ಮೊದಲು ವಿಕಾಸಗೊಂಡಿದ್ದು ಪಾಳಿ ಭಾಷೆ. ಇದನ್ನು ಬೌದ್ಧಮತದ ಪ್ರಚಾರಕ್ಕೆ ಬಳಸಿಕೊಳ್ಳಲಾಯಿತು. ಅನಂತರ ವಿಕಾಸಗೊಂಡಿದ್ದು ಪ್ರಾಕೃತ ಭಾಷೆ. ಇದನ್ನು ಜೈನಮತಪ್ರಚಾರಕ್ಕೆ ಬಳಸಿಕೊಳ್ಳಲಾಯಿತು. ಮತಪ್ರಚಾರಕ್ಕೆ ಬಳಸಲ್ಪಟ್ಟ ಭಾಷೆಗಳು ಹೆಚ್ಚು ಮನ್ನಣೆ ಪಡೆದು, ಆ ಭಾಷೆಗಳಲ್ಲಿ ಸಾಹಿತ್ಯಿಕ ಗ್ರಂಥಗಳ ರಚನೆಯೂ ಸಾಧ್ಯವಾಯಿತು.
ಸಂಸ್ಕೃತದಿಂದ ಪ್ರಾಕೃತವಾಗಿ ಬದಲಾವಣೆಯಾಗುತ್ತಾ ಹೊಸ ಶಬ್ದಭಂಡಾರ ರೂಪುಗೊಂಡಿತು.
ಆಕಾಶಃ->ಆಕಾಶೋ, ರಾಮಃ->ರಾಮೋ, ವೈದ್ಯ->ಬೆಜ್ಜ, ಋಣ->ರಿಣ, ನಮೋ->ಣಮೋ…. ಹೀಗೆ…. ಹಾಗೆಯೇ ಸಂಸ್ಕೃತದ ಉಪಾಧ್ಯಾಯ ಶಬ್ದ ಪಾಳಿಯಲ್ಲಿ ಉಪಜ್ಝಾ ಆಯಿತು. ಪಾಳಿಯಿಂದ ಉಪಜ್ಝಾ ಶಬ್ದ ಪ್ರಾಕೃತಭಾಷೆಯಲ್ಲಿ ಉವಜ್ಝಾಯ ಆಯಿತು.
ಜೈನರ ಪ್ರಸಿದ್ಧ ಪಂಚಪರಮೇಷ್ಠಿ `ಣಮೋಕಾರ ಮಂತ್ರ’ದಲ್ಲಿ ಉವಜ್ಝಾಯ ಶಬ್ದವನ್ನು ಗಮನಿಸಬಹುದು.
ಣಮೋ ಅರಿಹಂತಾಣಂ (ಅರಿಹಂತನಿಗೆ ನಮೋ)
ಣಮೋ ಸಿದ್ಧಾಣಂ (ಸಿದ್ಧರಿಗೆ ನಮೋ)
ಣಮೋ ಆಯರಿಯಾಣಂ (ಆಚಾರ್ಯರಿಗೆ ನಮೋ)
ಣಮೋ ಉವಜ್ಝಾಯಾಣಂ (ಉಪಾಧ್ಯಾಯರಿಗೆ ನಮೋ)
ಣಮೋ ಲೋಯೇ ಸವ್ವ ಸಾಹೂಣಂ (ಲೋಕದ ಸರ್ವ ಸಾಧುಗಳಿಗೆ ನಮೋ)
ಕನ್ನಡ ಸಾಹಿತ್ಯಚರಿತ್ರೆಯ ಆರಂಭಕಾಲದಲ್ಲಿ ಜೈನಪಂಡಿತರದ್ದೇ ಹೆಚ್ಚು ಕೊಡುಗೆ ಇದ್ದದ್ದು ಸುವಿದಿತ. ನಮ್ಮ ಆದಿಕಾವ್ಯಗಳು ಬಹುತೇಕ ಜೈನಕವಿಗಳ ಕೃತಿಗಳೇ. ಹೀಗಾಗಿ ಜೈನರು ಬಳಸುವ ಪ್ರಾಕೃತಭಾಷೆಯ ಪ್ರಭಾವ ಹಳಗನ್ನಡದ ಮೇಲೆ ಗಣನೀಯವಾಗಿತ್ತು. ಸಂಸ್ಕೃತದ ಉಪಾಧ್ಯಾಯ, ಪ್ರಾಕೃತದಲ್ಲಿ ಉವಜ್ಝಯ, ಉವಜ್ಝಾಯ, ಕನ್ನಡದಲ್ಲಿ ಒವಝ, ಓವಜ, ಒವಜ ಎಂದಾಯಿತು. ಉಪಾಧ್ಯಾಯ, ಗುರು, ಆಚಾರ್ಯ, ಶಿಲ್ಪಿ – ಈ ಅರ್ಥಗಳಲ್ಲಿ ಒವಜ/ಓವಜ ಶಬ್ದದ ಬಳಕೆ ನಮ್ಮ ಅನೇಕ ಕಾವ್ಯಗಳಲ್ಲಿ ಕಾಣುತ್ತೇವೆ.
ರಾಷ್ಟ್ರಕೂಟ ರಾಜವಂಶಕ್ಕೆ ಸೇರಿದ ಅಮೋಘವರ್ಷ ನೃಪತುಂಗನ ಕಾಲದಲ್ಲಿ (ಕ್ರಿ.ಶ. ೮೧೪-೮೭೮) ಸಂಸ್ಕೃತಭೂಯಿಷ್ಠವಾದ ಕನ್ನಡ ಕಾವ್ಯಗಳೇ ಹೊರಹೊಮ್ಮುತ್ತಿದ್ದವು. ಈ ಪರಿಸ್ಥಿತಿಯನ್ನು ನೋಡಿ ವ್ಯಸನಪಟ್ಟ ನೃಪತುಂಗನು, ಕನ್ನಡದಲ್ಲಿ ಎಷ್ಟರಮಟ್ಟಿಗೆ ಸಂಸ್ಕೃತವನ್ನು ಮೇಳನ ಮಾಡಬಹುದು, ಬೆರೆಸುವಾಗ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ವಿಶದಪಡಿಸುತ್ತ ಶ್ರೀವಿಜಯನಿಂದ ರಚನೆಮಾಡಿಸಿದ ಲಕ್ಷಣಗ್ರಂಥವೇ `ಕವಿರಾಜಮಾರ್ಗ’. ನಮಗೆ ದೊರೆತಿರುವ ಕನ್ನಡ ಕಾವ್ಯಗ್ರಂಥಗಳಲ್ಲಿ ಪ್ರಾಚೀನತಮವಾದ (ಕ್ರಿ.ಶ. ಸುಮಾರು ೮೫೦) ಕನ್ನಡ ಕಾವ್ಯ ಲಕ್ಷ್ಯ-ಲಕ್ಷಣ ಗ್ರಂಥವಾದ `ಕವಿರಾಜಮಾರ್ಗ’ದಲ್ಲಿ ಪ್ರಥಮ ಪರಿಚ್ಛೇದದ ಕನ್ನಡನಾಡವರ ಪೆರ್ಮೆ ವಿಭಾಗದಲ್ಲಿ ಕೃತಿಕಾರನು
ಚದುರರ್ ನಿಜದಿಂ, ಕುಱತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್ (ಕನ್ನಡದವರು ಸ್ವಭಾವತಃ ಚತುರರು, ಉದ್ದೇಶಪೂರ್ವಕವಾಗಿ ಅಧ್ಯಯನ ಮಾಡದಿದ್ದರೂ ಕಾವ್ಯಪ್ರಯೋಗದಲ್ಲಿ ಪರಿಣತಬುದ್ಧಿಯುಳ್ಳವರು) ಎಂದು ಕನ್ನಡನಾಡಜನರ ಪ್ರಶಂಸೆಯನ್ನು ಪರಿಪರಿಯಾಗಿ ಮಾಡುತ್ತಾ ೪೨ನೆಯ ಪದ್ಯದಲ್ಲಿ ಮೊದಲ ಸಲ `ಒವಜ’ ಎಂಬ ಪ್ರಯೋಗ ಮಾಡಿದ್ದನ್ನು ಕಾಣುತ್ತೇವೆ.
ಅರಿದಾದಂ ಕನ್ನಡದೊಳ್
ತಿರಿಕೊಱೆ ಗೊಂಡಱಯೆ ಪೇೞ್ವೆನೆಂಬುದಿದಾರ್ಗ್ಗಂ|
ಪರಮಾಚಾರ್ಯರವೋಲ್ ಸೈ
ತಿರಲಱಯರ್ ಕನ್ನಡಕ್ಕೆ ನಾಡವರೊವಜರ್
ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಲ್ಲಿ ಲಕ್ಷ್ಯ-ಲಕ್ಷಣಗಳು ನಿರ್ದಿಷ್ಟವಾಗಿ ಮೊದಲೇ ಲಭ್ಯವಿರುವುದರಿಂದ ಯಥೇಚ್ಛವಾಗಿ, ಸೊಗಸಾಗಿ ಕಾವ್ಯರಚನೆ ಸುಲಭಸಾಧ್ಯ. ಆದರೆ, ಕನ್ನಡನಾಡಿನ ಜನಕ್ಕೆ ಇಂತಹ ಸೌಲಭ್ಯವಿಲ್ಲದ್ದರಿಂದ (ಪ್ರಾಚೀನ ಭಾಷೆಗಳಿಂದ) ಪದಗಳನ್ನು ರೂಪಿಸಿ ಅವುಗಳನ್ನು ಜೋಡಿಸಿ ಅರಿತಮೇಲೆ, (ಹಿಂದಿನ ಭಾಷೆಗಳ) ಶ್ರೇಷ್ಠ ಆಚಾರ್ಯರಂತೆ ಕಾವ್ಯರಚನೆ ಮಾಡಲು ಯಾರಿಗಾದರೂ ಕಷ್ಟಸಾಧ್ಯ. ಆದಾಗ್ಯೂ ಕನ್ನಡಕ್ಕೆ ನಾಡಿನವರು ಗುರುಗಳು (ನಾಡವರ್ + ಒವಜರ್).
ಶಿವಕೋಟ್ಯಾಚಾರ್ಯನದೆಂದು ಹೇಳಲ್ಪಟ್ಟಿರುವ `ವಡ್ಡಾರಾಧನೆ’ ನಮಗೆ ದೊರೆತಿರುವ ಗದ್ಯಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು (ಸು. ೯೦೦-೯೨೦). ಜೈನ ಧಾರ್ಮಿಕ ಕಥೆಗಳ ಸಂಗ್ರಹವಾದ ಈ ಗ್ರಂಥದಲ್ಲಿ ಸಂಸ್ಕೃತವನ್ನೂ ಪ್ರಾಕೃತವನ್ನೂ ಬಳಸಿಕೊಂಡಿದ್ದರೂ ಅಚ್ಚಗನ್ನಡ ಪದಗಳ ಕಡೆಗೆ ಗ್ರಂಥಕರ್ತೃ ನಿಚ್ಚಳವಾದ ಒಲವನ್ನು ಹೊಂದಿದ್ದಾನೆ. ಇದರಲ್ಲಿ ಕನ್ನಡ ದೇಸಿಗೆ ವಿಶೇಷ ಪ್ರಾಧಾನ್ಯವನ್ನು ಕೊಟ್ಟಿದ್ದಾನೆ. ಅದರಲ್ಲಿನ ೧೯ ಕಥೆಗಳಲ್ಲಿ ಮೊದಲನೆಯದಾದ `ಸುಕುಮಾರಸ್ವಾಮಿಯ ಕಥೆ’ಯ ಆರಂಭದಲ್ಲ್ಲಿ ಒಳ್ಳಿತಪ್ಪ ದಿವಸ ವಾರ ವಿದ್ಯಾನಕ್ಷತ್ರದಂದು ತಮ್ಮನುಕೂಲದೊಳೋಜರ್ಗ್ಗೆಱಗಿ ಪೊಡೆವಟ್ಟು ವಿದ್ಯಾಪ್ರಾರಂಭಂಗೆಯ್ದರ್ (ಒಳ್ಳೆಯ ದಿನ ವಿದ್ಯಾರಂಭಕ್ಕೆ ಯೋಗ್ಯವಾದ ನಕ್ಷತ್ರದಂದು ತಮಗೆ ಅನುಕೂಲವೆನಿಸಿದಂದು ಉಪಾಧ್ಯಾಯರಿಗೆ ನಮಸ್ಕರಿಸಿ, ಸಾಷ್ಟಾಂಗ ವಂದಿಸಿ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದರು) ಎಂದು `ಓಜ’ ಎಂಬ ಪದಪ್ರಯೋಗ ಮಾಡಿದ್ದಾನೆ.
ಅನಂತರ ಕನ್ನಡದ ಆದಿಕವಿ, `ಕವಿತಾಗುಣಾರ್ಣವ’ ಪಂಪನು (ಕ್ರಿ.ಶ. ಸುಮಾರು ೯೪೧) ಬರೆದ `ವಿಕ್ರಮಾರ್ಜುನ ವಿಜಯಂ’ (ಪಂಪಭಾರತ) ಗ್ರಂಥದ ದ್ವಿತೀಯಾಶ್ವಾಸದ ೩೪ನೆಯ ಪದ್ಯದಲ್ಲಿ ಪಾಂಡವರು ಕೃಪಾಚಾರ್ಯರ ಬಳಿ ವಿದ್ಯಾಭ್ಯಾಸ ಮಾಡುವಾಗ ಅರ್ಜುನನ (ತನ್ಮೂಲಕ ತನ್ನ ರಾಜ ಅರಿಕೇಸರಿಯ) ಪ್ರಶಂಸೆ ಮಾಡುವ ಪ್ರಸಂಗದಲ್ಲಿ ಮತ್ತುೞದ ವಿದ್ಯೆಗಳೋಜರೆ ಚಟ್ಟರೆಂಬಿನಂ ನೆರೆವುದು ತನ್ನೊಳ್ (ಉಳಿದ ಅನೇಕ ವಿದ್ಯೆಗಳು ಉಪಾಧ್ಯಾಯರೇ ಶಿಷ್ಯರಾದಂತೆ ಅವನಲ್ಲಿ ಸೇರಿಕೊಂಡವು) ಎಂದು `ಓಜ’ ಶಬ್ದದ ಬಳಕೆ ಮಾಡಿದ್ದಾನೆ. ಅದೇ ಆಶ್ವಾಸದ ೫೩ನೆಯ ಪದ್ಯದಲ್ಲಿ, ಕೌರವಪಾಂಡವರನ್ನೆಲ್ಲ ದ್ರೋಣನಿಗೆ ಒಪ್ಪಿಸುತ್ತಾ, ಈ ಕೂಸುಗಳ್ ಯೋಗ್ಯರಪ್ಪುದ ನಿನ್ನೊಲ್ವೊಡೆ ಶಸ್ತ್ರವಿದ್ಯೆಗೊವಜಂ ನೀನಾಗು ಕುಂಭೋದ್ಭವಾ ಎನ್ನುವಲ್ಲಿ ಒವಜಂ(ಉಪಾಧ್ಯಾಯನು) ಶಬ್ದವನ್ನು ಬಳಸಿದ್ದಾನೆ.
ಮುಂದೆ ಸುಮಾರು ೧೩ನೆಯ ಶತಮಾನದಲ್ಲಿ ಚೌಂಡ ರಾಜನು, ಸಂಸ್ಕೃತಕವಿ ದಂಡಿಯ ‘ದಶಕುಮಾರ ಚರಿತ್ರಂ’ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ `ಅಭಿನವ ದಶಕುಮಾರ ಚರಿತೆ’ಯ ದ್ವಿತೀಯಾಶ್ವಾಸದ ೨೫ನೆಯ ಪದ್ಯದಲ್ಲಿ ಮಗಧರಾಜ ಮತ್ತು ಮಾಳವರಾಜನ ನಡುವೆ ನಡೆದ ಯುದ್ಧದ ವರ್ಣನೆಯ ಸಂದರ್ಭದಲ್ಲಿ, ಪಿಂದಲ ಸೋಲಮಂ ಮಱೆದು ಲಜ್ಜೆಯನೊಲ್ಲದೆ ಮತ್ತೆ ಬಂದನೇ ಪಂದೆಗಳೋಜನೆಂದು -‘`ಹಿಂದೆ ಆದ ಸೋಲನ್ನು ಮರೆತು, ನಾಚಿಕೆಯನ್ನು ತೊರೆದು ಮತ್ತೆ ಹೇಡಿಗಳ ಗುರುವಾದ ಇವನು ಯುದ್ಧಕ್ಕೆ ಬಂದಿದ್ದಾನೆಯೇ!” ಎಂದು ಮೂದಲಿಸುವಲ್ಲಿ ‘ಓಜ’ ಶಬ್ದವನ್ನು ಗುರು ಎಂಬರ್ಥದಲ್ಲಿ ಬಳಸಿದ್ದಾನೆ.
ಓಜ-ನಾಡೋಜ
ತನ್ನ ಭಾರತರಚನೆಯಲ್ಲಿ ಅರ್ಜುನನನ್ನು ಕುರಿತು ಹೊಗಳುವಾಗ, ಚಿತ್ರಿಸುವಾಗ ಪಂಪನ ಕಣ್ಮುಂದೆ ಬರುವುದು ತನ್ನೊಡೆಯ ಅರಿಕೇಸರಿಯ ಅವಕ್ರವಿಕ್ರಮ ವೀರಪ್ರತಾಪವೇ! ಈ ಅರಿಕೇಸರಿ ಆ ಸಾಹಸಾರ್ಜುನನ ಅಪರಾವತಾರವೇ! ಅರ್ಜುನನಲ್ಲಿ ಅರಿಕೇಸರಿಯನ್ನು, ಅರಿಕೇಸರಿಯಲ್ಲಿ ಅರ್ಜುನನನ್ನು ಕಾಣುವ ಅಭೇದಭಾವನೆಯ ರಾಜಭಕ್ತಿ ಆತನದು. ಅರಿಕೇಸರಿಯ ಕೀರ್ತಿಯನ್ನು ಸ್ಥಿರಪಡಿಸುವುದಕ್ಕಾಗಿ `ವಿಕ್ರಮಾರ್ಜುನವಿಜಯ’ ಗ್ರಂಥವನ್ನು ಕನ್ನಡದೇವಿಗೆ ಕಂಠೀಹಾರವನ್ನಾಗಿ ಸಮರ್ಪಿಸುತ್ತಾನೆ. ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ತೊಡೆಮುರಿದು ಬಿದ್ದ ದುರ್ಯೋಧನನಿಗೆ, ಅಶ್ವತ್ಥಾಮನು ಪಾಂಡವರದೆಂದು ಕಡಿದು ತಂದ ಐದು ತಲೆಗಳನ್ನು ತೋರಿಸಿದಾಗ, ಅವು ಉಪಪಾಂಡವರ ತಲೆಗಳೆಂದು ಗುರುತಿಸಿದ ದುರ್ಯೋಧನನು, ಅಶ್ವತ್ಥಾಮನಿಗೆ ಬಾಲವಧೆಯ ದೋಷಕ್ಕಾಗಿ ಹಿಮವತ್ಪರ್ವತದಲ್ಲಿ ತಪಸ್ಸುಮಾಡಿರೆಂದು ಹೇಳಿ ಅಸುನೀಗುತ್ತಾನೆ. ಇನ್ನು ಈ ಸಂದರ್ಭದಲ್ಲಿ ರಾಜ್ಯಲಕ್ಷ್ಮಿಯ ದಾರಿ ಏನು?
ತ್ರಯೋದಶಾಶ್ವಾಸದ ಕೊನೆಯ (೧೩ನೆಯ ಆಶ್ವಾಸದ ೧೦೮ನೆಯ) ಪದ್ಯದಲ್ಲಿ ಭಾರತದ ಕಥೆಯ ಜೊತೆಗೆ ತನ್ನ ಪ್ರಭುವಿನ ಕಥೆಯನ್ನು ಸಮನ್ವಯಗೊಳಿಸಿ ಕಥಾರಚನೆ ಮಾಡುವ ಮನೋಭಾವದಿಂದಲೇ ಯುದ್ಧದಲ್ಲಿ ದಿಗ್ವಿಜಯಿಯಾದಾಗ ರಾಜ್ಯಲಕ್ಷ್ಮಿ ಅರಿಕೇಸರಿಯನ್ನು ಸೇರಿದ ದೃಶ್ಯವನ್ನು ಮನಗಾಣುತ್ತ ಅದನ್ನು ಲೋಕದಲ್ಲಿ ಸ್ಥಿರಗೊಳಿಸುವ ಉದ್ದೇಶದಿಂದ
ಬಿಳಿಯ ತಾವರೆಯೆಸೞೊಳ್ ಮಾಡಿದ ಬೆಳ್ಗೊಡೆ ರಯ್ಯಮಾಗೆಡದ ಕೆಯ್ಯೊಳ್
ಪೊಳೆವ ಚೆಂಬೊನ್ನಕಾವಿನ ಚಾಮರಮಮರ್ದಿರೆ ಭೇರಿ ಸಿಂಹಾಸನಮುಂ
ಬೞಯೊಳ್ ಜಮ ಮಿಳಿರೆ ರಾಜ್ಯಚಿಹ್ನಂಗಳ್ವೆರಸಿಂತು ನಡೆತಂದು ರಾಜ್ಯಲಕ್ಷ್ಮಿ
ಬಳೆದ ಸಂತೋಷದಂತಮನೆಯ್ದೆ ಪತ್ತಿದಳ್ ಸಹಜ ಮನೋಜನಂ ನಾಡೋಜನಂ ||
– ಈ ಪದ್ಯದ ಚಿತ್ರಣ ಮಾಡಿದ್ದಾನೆ.
ಬಿಳಿಯ ತಾವರೆಯ ದಳದಲ್ಲಿ ಮಾಡಿದ ಕೊಡೆಯು ಬಲದ ಕೈಯಲ್ಲಿ ರಮ್ಯವಾಗಿರಲು, ಹೊಳೆದ ಹೊಂಬಣ್ಣದ ಚಿನ್ನದಕಾವುಳ್ಳ ಚಾಮರವು ಎಡಗೈಯಲ್ಲಿ ಸೇರಿಕೊಂಡಿರಲು, ಭೇರಿ ಸಿಂಹಾಸನಾದಿಗಳು ಪಕ್ಕದಲ್ಲಿ ವೇಗವಾಗಿ ಚಲಿಸುತ್ತಿರಲು, ರಾಜ್ಯಚಿಹ್ನೆಗಳೊಡಗೂಡಿ ವೃದ್ಧಿಸುತ್ತಿರುವ ಸಂತೋಷವು ಸಂಪೂರ್ಣವಾಗಲು ರಾಜ್ಯಲಕ್ಷ್ಮಿಯು ಸಹಜ ಮನೋಜನನ್ನು, ನಾಡೋಜನನ್ನು ಸೇರಿದಳು.
ಈ ಪದ್ಯದಲ್ಲಿ ಎಲ್ಲಿಯೂ ಅರ್ಜುನನ ಹೆಸರನ್ನು ಹೇಳದೆ, ರಾಜ್ಯಲಕ್ಷ್ಮಿಯು ನಾಡೋಜ ಎಂದರೆ ನಾಡಿನ ಶ್ರೇಷ್ಠನಾದ ಅರ್ಜುನನನ್ನು ಸೇರಿದಳು ಎನ್ನುವ ಅರ್ಥ ಕಾಣುವಂತಿರಬೇಕು, ಹಾಗೆಯೇ ಅರ್ಜುನನ ಪ್ರತಿರೂಪವಾದ ನಾಡಿನ ಶ್ರೇಷ್ಠನಾದ ತನ್ನ ಒಡೆಯ ಅರಿಕೇಸರಿಯನ್ನು ಸೇರಿದಳು ಎನ್ನುವಂತೆಯೂ ಇರಬೇಕು ಎನ್ನುವ ಎರಡೂ ಅರ್ಥಗಳ ಸಮೀಕರಣವನ್ನು ಮಾಡಿ ಸಂದರ್ಭೋಚಿತವಾಗಿ ತನ್ನ ಸ್ವಾಮಿಭಕ್ತಿಯನ್ನು ಮೆರೆದಿದ್ದಾನೆ! ಒಟ್ಟಿನಲ್ಲಿ ಅಲ್ಲಿಯವರೆಗೂ `ಉಪಾಧ್ಯಾಯ’ ಸಂಸ್ಕೃತ ಶಬ್ದಕ್ಕೆ ಪ್ರತಿಯಾಗಿ `ಓವಜ, ಓಜ’ ಎಂದು ಬಳಸಲ್ಪಡುತ್ತಿದ್ದ ಪದಕ್ಕೆ ಇಲ್ಲಿ `ನಾಡು’ ಪದವನ್ನು ಜೊತೆಮಾಡಿ ನಾಡು+ಓಜ=ನಾಡೋಜ ಎಂದರೆ, ನಾಡಿನ ಗುರು, ನಾಡಿನ ಶ್ರೇಷ್ಠ ಎಂಬರ್ಥದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಯೋಗಿಸಿ ಒಂದು ಸುಂದರವಾದ, ಅರ್ಥಗರ್ಭಿತವಾದ ಶಬ್ದವನ್ನು ಸೃಷ್ಟಿಸಿ ಶಬ್ದಬ್ರಹ್ಮನಾಗುತ್ತಾನೆ, ಮಹಾಕವಿ ಪಂಪ.
ತನ್ನ ನೆಚ್ಚಿನ ರಾಜನನ್ನು ಬಹುವಿಧವಾಗಿ ಪ್ರಶಂಸೆ ಮಾಡುವ ಪಂಪನು, ಮುಂದೆ ತನ್ನ ಪೂರ್ವಜರ ಪ್ರಾಂತ ಮತ್ತು ಶ್ರೇಷ್ಠತೆಗಳನ್ನು ಬಣ್ಣಿಸಿ, ಕೊನೆಗೆ ತನ್ನ ಶೌರ್ಯ, ಕವಿತಾಚಾತುರ್ಯ, ತಾನು ಪಡೆದ ಸತ್ಕಾರಗಳು, ತನ್ನ ಗುಣಗಳ ವರ್ಣನೆಗಳಿಂದ ಬಗೆಬಗೆಯಲ್ಲ್ಲಿ ಪ್ರಶಂಸೆಯನ್ನು ಮಾಡಿಕೊಳ್ಳುತ್ತಾನೆ. ಕೊಟ್ಟಕೊನೆಯಲ್ಲಿ, ಎಂದರೆ (೧೪ನೆಯ ಆಶ್ವಾಸದ ಒಟ್ಟು ೬೫ ಪದ್ಯಗಳಲಿ) ೬೨ನೆಯ ಪದ್ಯದಲ್ಲಿ ನಾಡೊವಜ ಎಂಬ ಪದವನ್ನು ತನಗೆ ಅನ್ವಯಿಸಿ ಹೇಳಿಕೊಳ್ಳುವುದೇ ಒಂದು ಸೊಗಸು.
ವ್ಯಾಸಮುನಿ ಪ್ರಣೀತ ಕೃತಿಯಂ ಸಲೆ ಪೇೞ್ದು ಪೊದೞ್ದ ಸತ್ಕವಿ
ವ್ಯಾಸ ಸಮಾಗಮಾನ್ವಿತಮನಾದಿಪುರಾಣಮನೆಯ್ದೆ
ಪೇೞ್ದು ವಾ- |
ಕ್ರೀ ಸುಭಗಂ ಪುರಾಣ ಕವಿಯುಂ
ಧರೆಗಾಗಿರೆಯುಣ್ಮಿ ಪೊಣ್ಮುವೀ
ದೇಸಿಗಳುಂತೆ ನಾಡೊವಜನಾದನೊ ಪೇೞ್ ಕವಿತಾಗುಣಾರ್ಣವಂ||
ವ್ಯಾಸಮಹರ್ಷಿಗಳಿಂದ ಹೊಗಳಲ್ಪಟ್ಟ ಕೃತಿಯಾದ ಭಾರತವನ್ನು ಚೆನ್ನಾಗಿ ಹೇಳಿಯೂ, ಪ್ರಸಿದ್ಧರಾದ ಸತ್ಕವಿಗಳ ವ್ಯಾಖ್ಯಾನ ಮತ್ತು ಸಹವಾಸಗಳಿಂದ ಕೂಡಿರುವ ಆದಿಪುರಾಣವನ್ನು ಚೆನ್ನಾಗಿ ಹೇಳಿಯೂ, ಪಂಪನು ವಾಕ್ಸಂಪತ್ತಿನ ಸೌಂದರ್ಯವುಳ್ಳವನೂ ಪುರಾಣರಚನೆ ಮಾಡಿದ ಕವಿಯೂ ಭೂಮಿಗೆ ಆಗಿರಲು ಹಾಗೆಯೇ ದೇಸಿಗುಣಗಳೂ ಉನ್ನತವಾಗಿ ಅಭಿವೃದ್ಧಿಯಾಗುತ್ತಿರಲು ಕವಿತಾಗುಣಾರ್ಣವನು ‘ನಾಡ ಒವಜ’ – ನಾಡಿನ ಓಜ ಎಂದರೆ ನಾಡಿಗೇ ಆಚಾರ್ಯನೂ ಆದನು.
`ನಾಡೋಜ ಪಂಪ’ ಎಂಬ ಅಪರೂಪದ ಸಂಶೋಧನಾಗ್ರಂಥ ಬರೆದಿರುವ ಮುಳಿಯ ತಿಮ್ಮಪ್ಪಯ್ಯ (೧೮೮೮-೧೯೫೦) ಹೇಳುವಂತೆ, ಪಂಪನು ರಚಿಸಿದ ಆದಿಪುರಾಣದ ಕಾಲದಲ್ಲಿ ರಾಜಸಭೆಯ ಪಂಡಿತರು ಆತನ ಕಾವ್ಯಗಳನ್ನು ತೆಗಳಿಕೆಯ ಭಾವದಿಂದ ಕಾಣುತ್ತಿದ್ದರು. ಅದರಿಂದ ಉದ್ವೇಗಗೊಂಡಿದ್ದರೂ ಎದೆಗುಂದದ ಪಂಪನು ಧಾರ್ಮಿಕ-ಸಾತ್ತ್ವಿಕಮಾರ್ಗದಲ್ಲಿ ನಡೆದು ರಚಿಸಿದ ‘ವಿಕ್ರಮಾರ್ಜುನವಿಜಯ’ ಕಾಲದಲ್ಲಿ ವಾತಾವರಣ ಬದಲಾಗಿ, ಪಂಡಿತಪಾಮರರೆಲ್ಲರೂ ಕವಿಯ ಯೋಗ್ಯತೆಯನ್ನು ಬಹುವಾಗಿ ಪ್ರಶಂಸಿಸುತ್ತಿದ್ದರು. ಹೀಗಾಗಿ ಹಿಂದಿನ ಸಂದರ್ಭದಲ್ಲಿ ಇಲ್ಲದ `ನಾಡೊವಜ’ (ನಾಡಿನ ಉಪಾಧ್ಯಾಯ, ದೇಶದ ಉಪಾಧ್ಯಾಯ) ಎಂಬ ಬಿರುದು ಅವನಿಗೆ ಅಂದು ಪ್ರಾಪ್ತವಾಗಿತ್ತು. ಸಾರ್ಥಕವಾದ ಬಿರುದಿಗೆ ತಕ್ಕಂತೆ, ಗಂಭೀರವಾದ ಬೋಧನಾಸಾರವು ಅವನ ಮೆದುನುಡಿಗಳಲ್ಲಿ ಅಡಕವಾಗಿತ್ತು. ಆದಿಪುರಾಣ ಕಾಲದ ಪಂಪನು ‘ಚತುರಂಗ ಬಲಭಯಂಕರ’ನಾದ ಯೋಧನು; ‘ವಿಕ್ರಮಾರ್ಜುನವಿಜಯ’ ಕಾಲದಲ್ಲಿ ವಾಙ್ಮಯ ಸಾಮ್ರಾಜ್ಯವನ್ನಾಳುವ ಚಕ್ರವರ್ತಿ. ಆದರೂ ‘ಕವಿ ವ್ಯಾಸನೆನೆಂಬ ಗರ್ವಮೆನಗಿಲ್ಲ’ ಎಂದು ಆರಂಭದಲ್ಲೇ ಹೇಳಿ ಅರಿಕೇಸರಿ ಗುಣಾರ್ಣವನ ಸತ್ಸ್ವಭಾವವು ಹೊಂದಿ ಈ ಕಾವ್ಯ ಹೇಳುತ್ತಿದ್ದೇನೆಂಬ ನಿರ್ಲಿಪ್ತಭಾವವು ಅವನನ್ನು ಲೋಕಮಾನ್ಯತೆಯ ಎತ್ತರಕ್ಕೇರಿಸಿ `ನಾಡೋಜ’ನನ್ನಾಗಿಸುತ್ತದೆ. ಅಲ್ಪಾವಧಿಯಲ್ಲೇ ಪೂರ್ತಿಮಾಡಿದ ಕಾವ್ಯವನ್ನು ತುಂಬಿದ ಸಭೆಯಲ್ಲಿ ತನ್ನ ಅರಸನಿಗೆ ಒಪ್ಪಿಸಿದ ಮಹಾಕವಿ ಪಂಪನಿಗೆ, ಆನಂದಪರವಶನಾದ ಅರಿಕೇಸರಿಯು ಅನರ್ಘ್ಯ ವಸ್ತುಗಳನ್ನು ಅರ್ಪಿಸಿ, ಶಾಸನದೊಡನೆ ಧರ್ಮವುರ ಅಗ್ರಹಾರವನ್ನು ಕೊಟ್ಟು ಗೌರವಿಸುತ್ತಾನೆ. ಆ ಧರ್ಮವುರದ ಧರ್ಮಾಧಿಕಾರಿಯನ್ನಾಗಿ ಮಾಡಿ, ಕಾವ್ಯಕ್ಕುಚಿತವಾಗಿ ಕವಿತಾಗುಣಾರ್ಣವನಿಗೆ `ನಾಡೋಜ’ನೆಂಬ ಬಿರುದಾಧಿಕಾರಗಳನ್ನಿತ್ತು ಪೂಜಿಸುತ್ತಾನೆ.
ಹೀಗೆ, ಉಪ+ಅಧ್ಯಾಯ ಎಂದರೆ, ಅಧ್ಯಯನ ಮಾಡಲು ಉಪಕರಿಸುವವನು, ಅಧ್ಯಯನ ಮಾಡಲು ಪ್ರೇರೇಪಿಸುವವನು, ಹತ್ತಿರವಿದ್ದು ತಾನು ಚಿಂತನೆಮಾಡುತ್ತ ಬೋಧಿಸುವವನು – ಎಂಬರ್ಥ ಉಳ್ಳ ಸಂಸ್ಕೃತದ `ಉಪಾಧ್ಯಾಯ’ ಶಬ್ದವು, ಪಾಳಿಯಲ್ಲಿ ‘ಉಪಜ್ಝಾ’ ಆಗಿ, ಪ್ರಾಕೃತದಲ್ಲಿ ‘ಉವಜ್ಝಾಯ’ ಆಗಿ, ಕನ್ನಡದಲ್ಲಿ ‘ಒವಜ, ಓವಜ, ಓಜ’ನಾಗಿ, ಪಂಪನ ‘ಸಮಸ್ತಭಾರತ’ ಕೃತಿಯ ರಚನೆಯು ಮುಗಿಯುವ ಹೊತ್ತಿಗೆ ಭಾರತದ ನೆಚ್ಚಿನ ನಾಯಕ ಅರ್ಜುನನನ್ನೂ, ತನ್ಮೂಲಕ
ಚಾಳುಕ್ಯ ಅರಸ – ತನ್ನ ಪ್ರೀತಿಯ ಮಿತ್ರ ಅರಿಕೇಸರಿಯನ್ನೂ ನಾಡಿನ ಜನರ ಮನ್ನಣೆಗೆ ಪಾತ್ರನಾದ `ನಾಡೋಜ’
ಎನಿಸಿ, ಕೊನೆಗೆ ಕನ್ನಡ ಸಾರಸ್ವತಲೋಕಕ್ಕೆ ಮಹಾಕಾವ್ಯವನ್ನು ಸಮರ್ಪಿಸಿದ ಕನ್ನಡದ ಆದಿಕವಿಯನ್ನು ನಾಡೊವಜ, ನಾಡೋಜನನ್ನಾಗಿಸಿ, ಕರ್ನಾಟಕದ ಕನ್ನಡ ವಿಶ್ವವಿದ್ಯಾಲಯವು ನಾಡ ಶ್ರೇಷ್ಠರಿಗೆ, ಲೋಕಮಾನ್ಯರಿಗೆ, ಬೋಧಿಸುವವರನ್ನೂ – ತಮ್ಮ ಬದುಕೇ ಬೋಧನೆಯಾಗಿರುವವರನ್ನೂ ಗುರುತಿಸಿ, ಸಮ್ಮಾನಪೂರ್ವಕವಾಗಿ ಕೊಡಮಾಡುವ ನಾಡೋಜ ಪ್ರಶಸ್ತಿಯಾಗಿ ರೂಪುಗೊಂಡು ನಮ್ಮ ನಾಡಿನ ಜನರ ಮನೆಮಾತಾಗಿದೆ.
ಅದ್ಬುತ ಅತ್ಯದ್ಭುತ ಉಪಯುಕ್ತ ಮಾಹಿತಿ..