ಒಡಲೊಳು ಭರಿಸಿದ ಮಾನವತೆ ಜೊತೆ–
ಗೂಡಿಹ ಸತ್ಕಾರವೆ ನಿಜತಿರುಳಾಗಿರಲು |
ಒಡವೆಯಂತಿಕ್ಕಲ್ಲಿ ಪ್ರೇಮ ಶಾಂತಿಯಿನಿತು
ಕೆಡದೆ ನ್ಯಾಯ ಮುಕ್ತತೆ ಸ್ವತಂತ್ರ ನೆರೆದು – ತಮ್ಮ ||
ಸತ್ಕಾರ, ಆತಿಥ್ಯ, ಸ್ನೇಹೋಪಚಾರಗುಣಗಳುಳ್ಳ ಒಂದು ಆತ್ಮ ಮತ್ತು ಮಾನವೀಯತೆಯುಳ್ಳ ಒಂದು ಹೃದಯ ಸದಾ ಪ್ರೀತಿ-ಪ್ರೇಮ, ಶಾಂತಿ-ಸೌಹಾರ್ದ, ಸ್ವಾತಂತ್ರ್ಯ, ಮುಕ್ತತೆ ಮತ್ತು ನ್ಯಾಯದ ಆಲಯವಾಗಿರುತ್ತದೆ.
ಜನರು ತಾವು ಹೇಳಿದ್ದನ್ನು ಸುಲಭವಾಗಿ ಮರೆತುಬಿಡುತ್ತಾರೆ. ನಾವು ಏನಾದರೂ ಮಾಡಿದರೂ ಅದನ್ನು ಅವರು ಕಾಲಾಂತರದಲ್ಲಿ ಮರೆತುಬಿಡುತ್ತಾರೆ. ಆದರೆ ನಾವು ಅವರ ಹೃದಯವನ್ನು ತಟ್ಟುವಂತೆ, ಅವರ ಮನಸ್ಸನ್ನು ಗೆಲ್ಲುವಂತೆ ಏನಾದರೂ ಮಾಡಿದಾಗ ಅದನ್ನು ಅವರು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಸತ್ಕಾರ, ಆತಿಥ್ಯ, ಸ್ನೇಹೋಪಚಾರ – ಇವುಗಳು ಜನರ ಮನಸ್ಸನ್ನು ಹೃದಯವನ್ನು ಗೆಲ್ಲಲು ಒದಗುವ ಸುಲಭಶ್ರೇಷ್ಠ ಸಾಧನಗಳು. ನಮ್ಮ ಹಿರಿಯರು ಅದಕ್ಕೆಂದೇ ‘ಅತಿಥಿದೇವೋ ಭವ’ ಎಂದು ಅತಿಥಿ-ಅಭ್ಯಾಗತರನ್ನು ಪೂಜ್ಯಭಾವದಿಂದ ಸತ್ಕರಿಸುವ ಸತ್ಸಂಸ್ಕಾರವನ್ನು ನಮಗೆ ನೀಡಿದರು.
ಅಯಂ ನಿಜಃ ಪರೋ ವೇತಿ ಗಣನಾ
ಲಘುಚೇತಸಾಮ್ |
ಉದಾರಚರಿತಾನಾಂ ತು ವಸುಧೈವ
ಕುಟುಂಬಕಮ್ ||
(ಹಿತೋಪದೇಶ)
ಇವನು ನಮ್ಮವನು, ಅವನು ಬೇರೆಯವನು ಎಂದೆಲ್ಲ ಲೆಕ್ಕಾಚಾರ ಮಾಡುವವರು ಸಂಕುಚಿತ ಮನಸ್ಸುಳ್ಳವರು. ಉದಾರ ಮನಸ್ಸುಳ್ಳವರಿಗಾದರೋ ಯಾವತ್ತೂ ಇಡೀ ಭೂಮಂಡಲವೇ ಒಂದು ಕುಟುಂಬ; ಎಲ್ಲರೂ ನಮ್ಮವರೇ.
ಮನೆಯ ಸಂಪತ್ತು
ಆತಿಥ್ಯ, ಸತ್ಕಾರ – ಇವನ್ನು ಮನಃಪೂರ್ವಕವಾಗಿ ಆಚರಿಸಬೇಕಾದರೆ ಆ ಕಡೆಗೆ ಇರುವವರು ‘ಇವರು ನಮ್ಮವರೇ’ ಎಂದು ನಮ್ಮ ಹೃದಯಕ್ಕೆ ಹತ್ತಿರವಾದಾಗಲಷ್ಟೆ ಸಾಧ್ಯವಾಗುತ್ತದೆ. ಒಂದು ಮನೆಯ ನಿಜವಾದ ಸಂಪತ್ತು ಎಂದರೆ ಆ ಮನೆಯನ್ನು ಪ್ರವೇಶಿಸುವ ಪ್ರತಿ ವ್ಯಕ್ತಿಯಲ್ಲೂ ‘ನಾನು ಮತ್ತೆ ಮತ್ತೆ ಈ ಮನೆಗೆ ಬರಬೇಕು, ಇಲ್ಲಿಯವರೊಡನೆ ನನ್ನ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತ ಆನಂದವನ್ನು ಹೊಂದಬೇಕು, ಇಲ್ಲಿ ವಾಸವಿರುವವರೆಲ್ಲ ನನ್ನ ನಿಜವಾದ ಬಂಧುಗಳೇ ಆಗಿದ್ದಾರೆ’ – ಎಂದು ಮೂಡುವ ಹೃದಯಸಂತೋಷವಾಗಿದೆ. ಆದ್ದರಿಂದ ಆತಿಥ್ಯ, ಸತ್ಕಾರ ಎಂಬುದು ನಮ್ಮ ಬದುಕಿನಲ್ಲಿ ನಮಗೆ ಪ್ರೀತಿ, ವಿಶ್ವಾಸ, ವಾತ್ಸಲ್ಯಗಳನ್ನು ತೋರಲು ಅಯಾಚಿತವಾಗಿ ಒದಗಿಬರುವ ಅದೃಷ್ಟವಾಗಿದೆ.
ನಾವು ನಮ್ಮ ಮನೆಯಲ್ಲಿ ಬಂದಂಥ ಅತಿಥಿಗಳಿಗೆ ಎಷ್ಟರಮಟ್ಟಿನ ಗೌರವಾದರಗಳನ್ನು ಅರ್ಪಿಸುತ್ತೇವೋ, ಅಷ್ಟರಮಟ್ಟಿಗೆ ನಮ್ಮ ಮನೆಗೆ ಬಂದು ಹೋಗುವವರ ಸಂಖ್ಯೆ ವೃದ್ಧಿಸುತ್ತದೆ. ಒಂದು ಶುಭಾಷಿತ ಹೀಗೆ ಹೇಳಿದೆ –
ಏಹ್ಯಾಗಚ್ಛ ಸಮಾಶ್ರಯಾಸನಮಿದಂ ಕಸ್ಮಾತ್
ಚಿರಾತ್ ದೃಶ್ಯಸೇ
ಕಾ ವಾರ್ತಾ ಹ್ಯತಿದುರ್ಬಲೋsಸಿ ಕುಶಲಂ
ಪ್ರೀತೋsಸ್ಮಿ ತೇ ದರ್ಶನಾತ್ |
ಏವಂ ಯೇ ಸಮುಪಾಗತಾನ್ ಪ್ರಣಯಿನಃ
ಪ್ರಹ್ಲಾದಯಂತ್ಯಾದರಾತ್
ತೇಷಾಂ ಯುಕ್ತಮಶಂಕಿತೇನ ಮನಸಾ
ಹಮ್ರ್ಯಾಣಿ ಗಂತುಂ ಸದಾ ||
(ಪಂಚತಂತ್ರ)
‘ಒಳಗೆ ಬನ್ನಿ, ಕುಳಿತುಕೊಳ್ಳಿ, ತಮ್ಮ ದರ್ಶನಭಾಗ್ಯವಾಗಿ ಬಹಳ ದಿನಗಳಾದವು, ಏನು ಸಮಾಚಾರ, ಹುಷಾರಾಗಿಲ್ಲವೇ? ಆರೋಗ್ಯವಾಗಿದ್ದೀರಲ್ಲವೇ? ನಿಮ್ಮನ್ನು ನೋಡಿ ಬಹಳ ಸಂತೋಷವಾಯಿತು’- ಎಂದು ಬಂದಂಥ ಅತಿಥಿಗಳನ್ನು ಯಾರು ಹೃದಯಪೂರ್ವಕವಾಗಿ ಗೌರವಿಸುತ್ತಾರೋ, ಅಂಥ ಮನೆಗಳಿಗೆ ಯಾವಾಗ ಬೇಕಾದರೂ ಯಾವುದೇ ಅಂಜಿಕೆ, ಸಂಕೋಚಗಳಿಲ್ಲದೆ ಹೋಗಬಹುದು.
ಯಾರ ಮನೆಯಲ್ಲಿ ಸತ್ಕಾರ, ಆತಿಥ್ಯ, ಸ್ನೇಹೋಪಚಾರಗಳು ಮನಃಪೂರ್ವಕವಾಗಿ ಕೊರತೆಯಿಲ್ಲದೆ ನಡೆಯುತ್ತವೋ ಅವು ಆ ಗೃಹಸ್ಥರ ಗೌರವವನ್ನು ಹೆಚ್ಚಿಸುತ್ತವೆ. ನಾವು ನೀಡುವಂಥ ಸತ್ಕಾರ ಹೇಗಿರಬೇಕೆಂದರೆ ಅದರಿಂದ ನಮಗೂ, ಅತಿಥಿಗೂ ಅವನು ತನ್ನ ಸ್ವಂತ ಮನೆಯಲ್ಲೇ ಇದ್ದಾನೆ ಎಂದೆನಿಸಬೇಕು.
‘ಪ್ರಯೋಜನಮನುದ್ದಿಶ್ಯ ನ ಮಂದೋsಪಿ ಪ್ರವರ್ತತೇ’ – ಪ್ರಯೋಜನವಿಲ್ಲದೆ ಒಬ್ಬ ಮೂರ್ಖನೂ ಕೂಡ ಯಾವ ಕಾರ್ಯವನ್ನೂ ಮಾಡುವುದಿಲ್ಲ. ನಮ್ಮ ಮನೆಗೆ ಯಾರಾದರೂ ಬಂದಿದ್ದಾರೆ ಎಂದರೆ ಅದರ ಅರ್ಥ ಅವರು ಯಾವುದೋ ಕಾರ್ಯಾರ್ಥವೇ ಬಂದಿರುತ್ತಾರೆ. ಅದು ಭೌತಿಕಪ್ರಯೋಜನಕರವಾದದ್ದೇ ಆಗಬೇಕೆಂದೇನಿಲ್ಲ. ಕಷ್ಟ-ಸುಖಗಳನ್ನು ಹಂಚಿಕೊಳ್ಳುವುದಕ್ಕಾಗಿ, ಸಂತೋಷಕ್ಕಾಗಿಯೂ ಮನೆಗೆ ಆಗಮಿಸುವವರು ಇರುತ್ತಾರೆ. ಆದ್ದರಿಂದ ಮನೆಗೆ ಬಂದವರನ್ನು ಯಾವತ್ತೂ ಏಕೆ ಬಂದಿರಿ? ಬಂದ ಉದ್ದೇಶ ಏನು? – ಎಂದೆಲ್ಲ ಕೇಳಬಾರದು.
ಉತ್ತರಕನ್ನಡದ ಹವ್ಯಕರು ಆತಿಥ್ಯಕ್ಕೆ ಬಹಳ ಪ್ರಸಿದ್ಧರು. ತಮ್ಮ ಮನೆಗೆ ಬಂದ ಅತಿಥಿಗಳಿಗೆ ಏನೂ ಕೊರತೆಯಾಗದಂತೆ ಕಾಳಜಿವಹಿಸುತ್ತಾರೆ. ಅತಿಥಿಗಳಿಗೆ ತಾವು ತಮ್ಮ ಮನೆಯಲ್ಲೇ ಇದ್ದೇವೆ ಎಂದು ಅನ್ನಿಸಬೇಕು. ಅಂತಹ ಪ್ರೀತ್ಯಾದರದ ಉಪಚಾರ ಅಲ್ಲಿ ಇರುತ್ತದೆ.
ಒಮ್ಮೆ ಒಬ್ಬರು ಸಂಪ್ರದಾಯಸ್ಥ ಮಾಧ್ವಬ್ರಾಹ್ಮಣರಿಗೆ ಕಾರ್ಯನಿಮಿತ್ತ ಕುಮಟ ಬಳಿಯ ತಮ್ಮ ಹವ್ಯಕ ಸ್ನೇಹಿತನ ಮನೆಯಲ್ಲಿ ವಾರದ ಕಾಲ ತಂಗಬೇಕಾಗಿ ಬಂತು. ಸ್ನೇಹಿತನ ಸ್ನೇಹೋಪಚಾರಗಳನ್ನು ಪಡೆಯುತ್ತ ಅವರಿಗೆ ಒಂದುವಾರ ಕಳೆದದ್ದೇ ಗೊತ್ತಾಗಲಿಲ್ಲ. ಇನ್ನೇನು ಅವರು ಅಲ್ಲಿಂದ ಹೊರಡಬೇಕು, ಆಗ ಸ್ನೇಹಿತನ ತಾಯಿ ಹೇಳಿದರು – “ಇನ್ನೂ ಒಂದೆರಡು ದಿನ ಇದ್ದು ಹೋಗಬಹುದಲ್ಲ; ಇದು ನಿಮ್ಮದೇ ಮನೆ ಎಂದು ತಿಳಿದುಕೊಳ್ಳಿ….”
ಆ ತಾಯಿಯ ಆತ್ಮೀಯ ಕೋರಿಕೆಗೆ ಅವರು ನಗುತ್ತ ಉತ್ತರಿಸಿದ್ದು ಹೀಗೆ – “ಇರಬಹುದಿತ್ತು ತಾಯಿ; ಆದರೆ ಏನು ಮಾಡಲಿ, ಇಲ್ಲಿದ್ದರೆ ನಾನು ಮಾಧ್ವ ಎಂಬುದೇ ಮರೆತು ಹವ್ಯಕನಾಗಿಬಿಡುತ್ತೇನೆ!”
ಒಂದು ಮನೆ ಮನೆಯಾಗಿ ಬೆಳಗಬೇಕಾದರೆ ಅದು ಮನೆಯವರಷ್ಟೇ ತಿಂದುಂಡು ವಾಸಮಾಡುವ ಒಂದು ಕಲ್ಲು ಮಣ್ಣು ಸಿಮೆಂಟಿನ ಕಟ್ಟಡವಾಗಬಾರದು. ಅಲ್ಲಿಗೆ ಬಂಧು-ಬಾಂಧವರು, ಅತಿಥಿ-ಅಭ್ಯಾಗತರು, ಇಷ್ಟಮಿತ್ರರು ಸದಾ ಬಂದು ಸುಖ-ದುಃಖಗಳನ್ನು ಹಂಚಿಕೊಳ್ಳುತ್ತಿರಬೇಕು.
ಸತ್ಕಾರ, ಆತಿಥ್ಯ, ಸ್ನೇಹೋಪಚಾರ ಸ್ವಭಾವವನ್ನು ಕಲಿಸಿಕೊಡುವುದಕ್ಕೆ ಬರುವುದಿಲ್ಲ; ಅದು ಹೃದಯದಿಂದ ಸ್ಫುರಿಸಬೇಕು. ಪರಿಶುದ್ಧ ಹೃದಯದಲ್ಲಿ ಅದು ಯಾವತ್ತೂ ನೆಲಸಿರುತ್ತದೆ. ಪ್ರೇಮಪೂರಿತ ಮನವೇ ಸತ್ಕಾರದ ನೆಲೆ.