ಗಾಂಧಿಯವರು ತಮ್ಮನ್ನು ಒಬ್ಬ ಶ್ರಮಿಕ, ಕಾರ್ಮಿಕ ಎಂದು ಸಂತೋಷದಿಂದ ಕರೆದುಕೊಂಡಿದ್ದಾರೆ. ಇದು ಶ್ರಮಿಕರ ಬಗ್ಗೆ ಅವರಿಗಿರುವ ಪ್ರೇಮ, ಗೌರವಾದರಗಳನ್ನು ತಿಳಿಸುತ್ತದೆ. ಅವರು ಹೇಳುತ್ತಾರೆ – “ನಾನು ಒಬ್ಬ ಕಾರ್ಮಿಕ, ನಾನು ನನ್ನನ್ನು ಒಬ್ಬ ಭಂಗಿ, ನೇಯುವವ, ನೂಲುವವ, ಮತ್ತು ಒಬ್ಬ ರೈತ ಎಂದು ಕರೆದುಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ. ಶ್ರಮಿಕವರ್ಗದ ಜೊತೆಗೆ ನನ್ನನ್ನು ಗುರುತಿಸಿಕೊಳ್ಳಲು ನನಗೆ ಹರ್ಷವಾಗುತ್ತದೆ. ಏಕೆಂದರೆ ಶ್ರಮವಿಲ್ಲದೆ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ.” ಅನ್ನಕಾಯಕದ ಬಗ್ಗೆ ಹಾಗೂ ಯಂತ್ರಗಳ ಬಳಕೆಯ ಬಗ್ಗೆ ಗಾಂಧಿಯವರಿಗಿದ್ದ ಅಭಿಪ್ರಾಯಗಳನ್ನು ಅರ್ಥಮಾಡಿಕೊಂಡರೆ ಶ್ರಮಿಕರ ಸಮಸ್ಯೆಗಳ ಬಗ್ಗೆ ಅವರಿಗಿದ್ದ ಕಳಕಳಿಯನ್ನು ತಿಳಿದುಕೊಳ್ಳಬಹುದು. ಶ್ರಮಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅವರ ಚಿಂತನೆಗಳು ಮಹತ್ತ್ವದ ಪಾತ್ರ ವಹಿಸುತ್ತವೆ. ಆರಂಭದಿಂದಲೂ ಗಾಂಧಿಯವರು ಶ್ರಮಿಕರು ಕೆಲಸ ಮಾಡುವ ಕಾರ್ಖಾನೆಗಳಲ್ಲಿರುವ ಸ್ಥಿತಿಗತಿಗಳು, ಅಲ್ಲಿನ ಕೆಲಸದ ವಾತಾವರಣ, ಅವರ ಕೆಲಸದ ಅವಧಿ, ವೇತನದ ಪ್ರಮಾಣ ಮತ್ತು ಕಾರ್ಮಿಕರ ಶೋಷಣೆಯ ಹತ್ತಾರು ಮುಖಗಳು ಇತ್ಯಾದಿಗಳ ಬಗ್ಗೆ ಆಳವಾದ ಅಭ್ಯಾಸ ಮಾಡಿ ಅವರ ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನ ಮಾಡಿದರು. ಅವರ ಸುಧಾರಣಾ ಮಾರ್ಗಗಳು ಮತ್ತು ವಿಚಾರಗಳು ಕಾರ್ಮಿಕ ಸಂಘಟನೆಗಳ ಅಭಿಪ್ರಾಯಕ್ಕಿಂತ ವಿಭಿನ್ನವಾಗಿವೆ. ಮೂಲಭೂತವಾಗಿ ಕಾರ್ಮಿಕ ಸಂಘಟನೆಗಳು ವರ್ಗಸಂಘರ್ಷ ಹಾಗೂ ಚಳವಳಿಗಳನ್ನು ನಂಬುತ್ತವೆ. ಆದರೆ ಗಾಂಧಿಯವರ ಚಿಂತನಕ್ರಮ ಹಾಗೂ ಮಾರ್ಗಗಳು ಭಿನ್ನವಾಗಿದ್ದು, ಶ್ರಮಿಕರ ಹಾಗೂ ಬಂಡವಾಳಗಾರರ ನಡುವಿನ ಸಮಸ್ಯೆಯನ್ನು ‘ಅಹಿಂಸಾತ್ಮಕ’ ರೀತಿಯಲ್ಲಿ ಬಗೆಹರಿಸಬೇಕೆಂಬುದಾಗಿತ್ತು. ಗಾಂಧಿಯವರು ತಮ್ಮ ಶ್ರಮಿಕ ಮಿತ್ರರಿಗೆ ಈ ರೀತಿ ಹೇಳುತ್ತಿದ್ದರು – “ನಿಮ್ಮ ಸಹಾಯವಿಲ್ಲದೆ ಬಂಡವಾಳಗಾರರು ಸಂಪೂರ್ಣವಾಗಿ ಅಸಹಾಯಕರು. ಇದನ್ನು ನೀವು ಎಂದು ಅರ್ಥಮಾಡಿಕೊಳ್ಳುವಿರೋ ಅಂದು ನೀವು ಯಾರ ಸಹಾಯವೂ ಇಲ್ಲದೆ ಮೇಲೆ ಬರಬಲ್ಲಿರಿ. ನೀವೇ ನಿಜವಾದ ಬಂಡವಾಳ. ‘ಬದುಕಿರುವ ಬಂಡವಾಳ’ ಹಣರೂಪಿ ಬಂಡವಾಳದಂತೆ ಎಂದೂ ಬರಿದಾಗದ ಬಂಡವಾಳ” ಎಂದು.
ಶ್ರಮಿಕರ ದೌರ್ಬಲ್ಯಕ್ಕೆ ಸಂಬಂಧಪಟ್ಟ ಗಾಂಧಿಯವರ ವಿಶ್ಲೇಷಣೆ ಸ್ವೋಪಜ್ಞವಾಗಿತ್ತು. ಶ್ರಮಿಕರ ದೌರ್ಬಲ್ಯಕ್ಕೆ ಪ್ರಮುಖ ಕಾರಣವೆಂದರೆ ಬಂಡವಾಳವನ್ನು ನಿಶ್ಚಲಗೊಳಿಸುವುದರ ಬದಲು ಅದನ್ನು ತಮ್ಮ ಕೈವಶಪಡಿಸಿಕೊಂಡು ತಾವೇ ಬಂಡವಾಳಗಾರರಾಗಲು ಯತ್ನಿಸುವುದು. ಬಂಡವಾಳಗಾರರು ತಮ್ಮ ಬಲಹೀನತೆಯನ್ನು ಅರ್ಥಮಾಡಿಕೊಂಡು ಶ್ರಮಿಕರ ಆಕ್ರಮಣಕಾರಿ ಪ್ರವೃತ್ತಿಯನ್ನು ಹತ್ತಿಕ್ಕಲು ಕೆಲವು ಶ್ರಮಿಕರ ಮೇಲೆ ಒತ್ತಡಹಾಕುವ ಪ್ರಯತ್ನವನ್ನು ಮಾಡುತ್ತಾರೆ. ಹೀಗಾಗುವುದರ ಬದಲಿಗೆ, ಗಾಂಧಿಯವರು ಇಬ್ಬರ ನಡುವೆ ಸಮರಸತೆ ಇರಬೇಕೆಂದು ಹೇಳಿದರು. ಗಾಂಧಿಯವರು ಹೇಳುತ್ತಾರೆ – “ಶ್ರಮವು ಸಮಾಜದಲ್ಲಿನ ಭೇದಭಾವಗಳನ್ನು ತೆಗೆದುಹಾಕುವ ವಿಶೇಷ ಲಕ್ಷಣಗಳನ್ನು ಪಡೆದಿದೆ. ಈ ಸತ್ಯವನ್ನು ಅವರು ಅರ್ಥಮಾಡಿಕೊಂಡರೆ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬಹುದು. ಶ್ರಮಿಕರು ತಾವು ಬಂಡವಾಳಗಾರರಷ್ಟು ಬುದ್ಧಿವಂತರಲ್ಲ ಎನ್ನುವ ಭಾವದಿಂದ ಅಥವಾ ತಾವು ಅವರ ಅಡಿಯಾಳಾಗಿರುವುದರಿಂದ ಅವರ ವಸ್ತುಗಳಿಗೆ ಅಥವಾ ಯಂತ್ರಗಳಿಗೆ ಹಾನಿ ಮಾಡಬಹುದು ಎಂಬ ಮನೋಭಾವನೆ ಹೊಂದಿರುವುದು ತಪ್ಪು. ಏಕೆಂದರೆ ಅದು ಚಿನ್ನದ ಮೊಟ್ಟೆಯನ್ನು ಇಡುವ ಕೋಳಿಯನ್ನು ಕೊಂದ ಹಾಗೆ. ಶ್ರಮಿಕರು ಮೊದಲು ತಮ್ಮಲ್ಲಿ ಸಹಕಾರಿ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಆನಂತರ ಬಂಡವಾಳಗಾರರ ಜೊತೆಗೆ ಗೌರವಯುತವಾಗಿ ಹಾಗೂ ಸಮಾನತೆಯಿಂದ ಸಹಕರಿಸಬೇಕು. ಬಂಡವಾಳವು ಶ್ರಮವನ್ನು ನಿಯಂತ್ರಿಸುತ್ತದೆ. ಏಕೆಂದರೆ ಅದಕ್ಕೆ ಗೊತ್ತಿದೆ ಯಾವ ಯಾವ ಸಂಯೋಗದಿಂದ ಈ ಕೆಲಸ ಮಾಡಬಹುದೆಂದು.”
ಗಾಂಧಿಯವರು ಬಂಡವಾಳ ಮತ್ತು ಶ್ರಮದ ನಡುವೆ ಬದಲಾವಣೆಯನ್ನು ಅಹಿಂಸಾತ್ಮಕ ಮಾರ್ಗದಲ್ಲಿ ಧರ್ಮದರ್ಶಿ ತತ್ತ್ವದ ಆಧಾರದ ಮೇಲೆ ತರುವ ಪ್ರಯತ್ನ ಮಾಡಿದರು. ಧರ್ಮದರ್ಶಿ ತತ್ತ್ವವನ್ನು ಜಾರಿಗೆ ತರಲು ಅವರು ಬಳಸಿದ ಸಾಧನಗಳೆಂದರೆ ಮನಸ್ಸಿನ ಓಲೈಕೆ, ಕಾನೂನಾತ್ಮಕ ಕ್ರಮಗಳು ಹಾಗೂ ಅಹಿಂಸಾತ್ಮಕ ಅಸಹಕಾರ.
“ಅಹಿಂಸಾತ್ಮಕ ಪದ್ಧತಿಗಳಿಂದ ನಾವು ಬಂಡವಾಳಗಾರರನ್ನು ನಾಶಮಾಡದೆ, ಬಂಡವಾಳಶಾಹಿ ವ್ಯವಸ್ಥೆಯನ್ನು ನಾಶಪಡಿಸಬೇಕು. ಬಂಡವಾಳಗಾರರು ತಮ್ಮ ಬಂಡವಾಳವನ್ನು ಉಳಿಸಿ, ಬೆಳೆಸಿಕೊಳ್ಳಲು ಯಾರ ಸಹಾಯವನ್ನು ಅಪೇಕ್ಷಿಸಿ ಅವಲಂಬಿಸುತ್ತಾರೋ ಅಂತಹ ಕಾರ್ಮಿಕರ ಧರ್ಮದರ್ಶಿಯಾಗಿ ಕಾರ್ಯನಿರ್ವಹಿಸುವಂತೆ ನಾನು ಅವರಿಗೆ ಆಹ್ವಾನ ನೀಡುತ್ತೇನೆ” (R.K. Prabhu and U.R. Rao, The Mind of Mahatma, p.137).
ಪೌರ ಅವಿಧೇಯತೆ ಮತ್ತು ಅಸಹಕಾರವನ್ನು ಜನಗಳ ಕೈಯಲ್ಲಿ ಅಧಿಕಾರ ಇಲ್ಲದಾಗ ಉಪಯೋಗ ಮಾಡಬೇಕು. ಎಂದು ಅವರಿಗೆ ರಾಜಕೀಯ ಅಧಿಕಾರ ಸಿಗುವುದೋ ಆಗ ಅವರ ನಡವಳಿಕೆ ಕಾನೂನಾತ್ಮಕ ಮಾರ್ಗದಲ್ಲಿ ಇರಬೇಕಾಗುತ್ತದೆ (D.G. Tendulkar, Mahatma, Vol.VI, p.366). ಕೇವಲ ಮಾತುಗಳ ಮೂಲಕವಲ್ಲದೆ ನಾನು ನನ್ನ ಸಾಧನವಾದ ಅಸಹಕಾರವನ್ನು ಉಪಯೋಗಿಸುವೆನು. ಯಾವ ಬಂಡವಾಳಗಾರನೂ ಶ್ರಮಿಕರ ಸ್ವಯಂಪ್ರೇರಿತ ಅಥವಾ ಒತ್ತಾಯಪೂರ್ವಕ ಸಹಕಾರವಿಲ್ಲದೆ ಹೆಚ್ಚಿನ ಸಂಪತ್ತನ್ನು ಸಂಗ್ರಹ ಮಾಡಬಾರದು (Rajagopalachari & J.C. Kumarappa – The Nation’s Voice, pp.171-172).
ಗಾಂಧಿಯವರು ಪೌರಸ್ತ್ಯ ಪರಂಪರೆಯ ವರ್ಣಾಶ್ರಮಧರ್ಮದ ಮಾಧ್ಯಮದ ಮೂಲಕ ಶ್ರಮಕ್ಕೂ ಮತ್ತು ಬಂಡವಾಳಕ್ಕೂ ನಡುವೆ ಸಮರಸತೆಯನ್ನು ಬೆಸೆಯುವ ಪ್ರಯತ್ನ ಮಾಡಿದರು. ಅವರ ಅಭಿಪ್ರಾಯದಂತೆ ಪಾಶ್ಚಾತ್ಯ ದೇಶಗಳಿಂದ ಎರವಲು ಪಡೆದ ಮತ್ತು ಗಮನ ಸೆಳೆಯುವ ಆಕರ್ಷಕ ಘೋಷಣೆಗಳ ಕಡೆಗೆ ನಮ್ಮ ಗಮನ ಹರಿಸಬೇಕಿಲ್ಲ. ನಮ್ಮ ಪುರಾತನ ಪರಂಪರೆಯ ಮಾರ್ಗಗಳನ್ನು ಅನುಸರಿಸುವುದರಿಂದ ಶ್ರಮ ಮತ್ತು ಬಂಡವಾಳದ ನಡುವೆ ಎದ್ದಿರುವ ಸಮಸ್ಯೆಗಳನ್ನು ಸೂಕ್ತರೀತಿಯಲ್ಲಿ ಬಗೆಹರಿಸಿಕೊಳ್ಳಲು ಸಾಧ್ಯ. ನಮ್ಮ ವರ್ಣಾಶ್ರಮಧರ್ಮವು ಸಮಾಜದಲ್ಲಿ ಬೆಳೆದುಬಂದಿರುವ ವಿವಿಧ ರೀತಿಯ ಭೇದಭಾವಗಳನ್ನು ಮೇಲು-ಕೀಳು, ಹಿರಿದು-ಕಿರಿದು, ಶ್ರಮ-ಬಂಡವಾಳ ಇವುಗಳ ನಡುವೆ ಸಾಮರಸ್ಯವನ್ನು ಬೆಸೆಯುವ ಸಾಧನ. ಈ ಸಂಬಂಧವಾಗಿ ಪಾಶ್ಚಾತ್ಯ ದೇಶಗಳಿಂದ ಬಂದಂತಹ ಚಿಂತನೆಗಳು ಹಿಂಸಾತ್ಮಕ ರೂಪವನ್ನು ಪಡೆದಿದೆ. ಅದರ ಉಪಯೋಗದ ಬಗ್ಗೆ ನನ್ನ ಆಕ್ಷೇಪವಿದೆ. ಈ ಮಾರ್ಗದಲ್ಲಿ ನಡೆದರೆ ಆಗುವ ಹಾನಿಯ ಬಗ್ಗೆಯೂ ನನಗೆ ಅರಿವಿದೆ. ಪಾಶ್ಚಾತ್ಯ ಚಿಂತನೆಯ ಆಳಕ್ಕೆ ಇಳಿದಷ್ಟು ನಮಗೆ ದಿಗ್ಭ್ರಮೆ ಹುಟ್ಟಿಸುವಷ್ಟರಮಟ್ಟಿಗೆ ಅದು ಅಧೋಗತಿಯನ್ನು ತಲಪಿದೆ. ಆದಕಾರಣ, ಪಾಶ್ಚಾತ್ಯ ಚಿಂತನೆಯ ಪ್ರಭಾವ ನನ್ನ ಮೇಲೆ ಇದ್ದರೂ, ಹಿಂಸಾತ್ಮಕ ಮತ್ತು ಶೋಷಣೆಯಿಂದ ಕೂಡಿದ ವಿಷವರ್ತುಲದಿಂದ ಹೊರಬಂದು ಈ ಸಮಸ್ಯೆಯ ಪರಿಹಾರಕ್ಕೆ ಉತ್ತರ ಹುಡುಕಬೇಕಾಗಿದೆ (N.K. Bose, Selections from Mahatma Gandhi, p.93).
ಶ್ರಮದ ಶೋಷಣೆ
ಶ್ರಮದ ಶೋಷಣೆ ಅನೇಕ ಶತಮಾನಗಳ ಕಾಲದಿಂದ ನಡೆದು ಬಂದಿದೆ. ಜಗತ್ತಿನ ಆರ್ಥಿಕ ಇತಿಹಾಸವೇ ಇದಕ್ಕೆ ಸಾಕ್ಷಿ. ಔದ್ಯೋಗಿಕ ಕ್ರಾಂತಿಯ ಸಮಯದಲ್ಲಿ ಹಾಗೂ ತದನಂತರ ಈ ಶೋಷಣೆಯ ಪ್ರಮಾಣ ಇನ್ನೂ ಹೆಚ್ಚಾಗಿರುವುದು ಎಲ್ಲರ ಅನುಭವ. ಎಲ್ಲ ರೀತಿಯ ಆರ್ಥಿಕ ವ್ಯವಸ್ಥೆಯಲ್ಲಿ ಇದು ಸರ್ವೇಸಾಮಾನ್ಯ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಂಡವಾಳಗಾರರು ಶ್ರಮಿಕರ ಶೋಷಣೆ ಮಾಡಿದರೆ, ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಸರ್ಕಾರವು ಈ ಕೆಲಸವನ್ನು ಮಾಡುತ್ತಿದೆ. ಒಟ್ಟಿನಲ್ಲಿ ಕಾರ್ಮಿಕರ ಶೋಷಣೆಗೆ ಕೊನೆಯಿಲ್ಲದಂತಾಗಿದೆ. ಈ ಸಮಸ್ಯೆಗೆ ಇನ್ನೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಗಾಂಧಿಯವರು ಶ್ರಮದ ಶೋಷಣೆಯನ್ನು ಬಂಡವಾಳಶಾಹಿ ವ್ಯವಸ್ಥೆಯ ಬಹುದೊಡ್ಡ ದೋಷ ಎಂದು ಕರೆದಿದ್ದಾರೆ. ಶೋಷಣೆಯು ಅಶಾಂತಿಯನ್ನು ಮೂಡಿಸುತ್ತದೆ ಮತ್ತು ಅವ್ಯಾಹತವಾಗಿದ್ದರೆ ವ್ಯವಸ್ಥೆಯ ವಿರುದ್ಧ ಕ್ರಾಂತಿಗೆ ಕಾರಣವಾಗುತ್ತದೆ. ಶ್ರಮದ ಶೋಷಣೆಯ ಪ್ರಮಾಣವನ್ನು ಅಳೆಯಬೇಕಾದರೆ ನಾವು ಈ ಸೂತ್ರವನ್ನು ಉಪಯೋಗಿಸಬೇಕು:
ಶ್ರಮದ ಶೋಷಣೆ = ಶ್ರಮಕ್ಕೆ ನಿಜವಾಗಿ ಸಿಗಬೇಕಾದ ಪ್ರತಿಫಲ – ವಾಸ್ತವವಾಗಿ ಸಿಗುವ ಪ್ರತಿಫಲ
ಸರಳ ಉದಾಹರಣೆಯ ಮೂಲಕ ಸ್ಪಷ್ಟಪಡಿಸುವುದಾದರೆ –
ಶ್ರಮದ ಶೋಷಣೆ ರೂ. 15,000-00 = {ಶ್ರಮಕ್ಕೆ ನಿಜವಾಗಿ ಸಿಗಬೇಕಾದ ಪ್ರತಿಫಲ ತಿಂಗಳಿಗೆ ರೂ. 25,000-00} – ವಾಸ್ತವವಾಗಿ ಸಿಗುವ ಪ್ರತಿಫಲ ತಿಂಗಳಿಗೆ ರೂ. 10,000-00.}
ಗಾಂಧಿಯವರ ಪ್ರಕಾರ ಕನಿಷ್ಠ ಬದುಕುವ ದರಕ್ಕಿಂತ ಕಡಮೆ ಕೂಲಿ ನೀಡಿದರೆ ಅದು ಶೋಷಣೆ ಎಂದೇ ಅರ್ಥ. ಉದಾಹರಣೆಗೆ –
ಶೋಷಣೆ = ರೂ. 5000-00 = {ಕನಿಷ್ಠ ಬದುಕುವ ಕೂಲಿದರ ತಿಂಗಳಿಗೆ ರೂ. 15,000-00 – ವಾಸ್ತವವಾಗಿ ತಿಂಗಳಿಗೆ ಸಿಗುವ ಕೂಲಿದರ ರೂ. 10,000-00.}
ಬಂಡವಾಳಶಾಹಿಗಳು ತಮ್ಮ ಲಾಭದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಕೂಲಿಯ ದರವನ್ನು ಆದಷ್ಟು ಕಡಮೆ ಮಾಡುತ್ತಾರೆ ಎಂದು ಅವರು ಅಭಿಪ್ರಾಯಪಡುತ್ತಾರೆ. ಇದರಿಂದ ನಿಶ್ಚಿತವಾಗಿ ಕಾರ್ಮಿಕರ ಶೋಷಣೆಯುಂಟಾಗುತ್ತದೆ. ಒಂದು ನಿರ್ದಿಷ್ಟ ಕೂಲಿಯನ್ನು ನಿಗದಿಗೊಳಿಸುವುದರ ಮೂಲಕ ಶೋಷಣೆಯನ್ನು ಕಡಮೆ ಮಾಡಬಹುದು ಎಂದು ಅವರು ಹೇಳಿದರು. ಬಂಡವಾಳಶಾಹಿಗಳ ಮತ್ತು ಕಾರ್ಮಿಕರ ನಡುವಿನ ಅಂತರವನ್ನು ಹೋಗಲಾಡಿಸುವುದು ಶೋಷಣೆಯ ಸಮಸ್ಯೆಗೆ ಅಂತಿಮ ಪರಿಹಾರ ಎಂದು ಅವರು ಹೇಳಿದ್ದಾರೆ. ಕಾರ್ಮಿಕರ ಶೋಷಣೆಯು ನಿಲ್ಲದೆ ಮುಂದುವರಿಸಿದ್ದೇ ಆದರೆ ಆಗ ಮುಷ್ಕರಗಳು ಅನಿವಾರ್ಯವಾಗುತ್ತವೆ ಎಂಬುದು ಗಾಂಧಿಯವರ ನಿಲವಾಗಿತ್ತು.
ಮುಷ್ಕರಗಳು ಮತ್ತು ಅವುಗಳ ಉದ್ದೇಶ
ಶ್ರಮಿಕರು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಕಾರ್ಮಿಕ ಸಂಘಗಳನ್ನು ಕಟ್ಟಿದರು. ಈ ಸಂಘಟನೆಗಳ ಮೂಲಕ ತಮ್ಮ ಮೂಲಭೂತ ಹಕ್ಕುಗಳನ್ನು ಪಡೆಯುವ ಸಲುವಾಗಿ ಮುಷ್ಕರಗಳನ್ನು ಪ್ರಾರಂಭಿಸಿದರು. ಹೀಗೆ ಮುಷ್ಕರಗಳು ಕಾರ್ಮಿಕರ ಉದ್ದೇಶಗಳನ್ನು ಪೂರ್ಣಗೊಳಿಸುವ ಪರಿಣಾಮಕಾರಿ ಸಾಧನವಾಗಿ ಬೆಳೆಯಿತು. ಸುಸಂಘಟಿತ ಕಾರ್ಮಿಕ ಸಂಘಗಳ ಮೂಲಕ ನಡೆಯುವ ಮುಷ್ಕರಗಳು ಬಹಳಷ್ಟುಮಟ್ಟಿಗೆ ತಮ್ಮ ಗುರಿಯನ್ನು ಮುಟ್ಟಲು ಸಫಲವಾದವು.
ಗಾಂಧಿಯವರ ದೃಷ್ಟಿಯಲ್ಲಿ ನ್ಯಾಯಸಮ್ಮತವಲ್ಲದ ಮುಷ್ಕರಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಮುಷ್ಕರದ ಗುರಿ ಕಾರ್ಮಿಕರ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವುದು ಆಗಿರಬೇಕು. ಅದರಲ್ಲಿ ಯಾವುದೇ ರಾಜಕೀಯ ಉದ್ದೇಶಗಳನ್ನು ಸೇರಿಸಬಾರದು. ಒಂದು ವೇಳೆ ಈ ಎರಡು ಉದ್ದೇಶಗಳನ್ನು ಒಟ್ಟಿಗೆ ಸೇರಿಸಿದ್ದೇ ಆದರೆ ಆಗ ಮುಷ್ಕರ ಖಂಡಿತ ಸಫಲವಾಗುವುದಿಲ್ಲ.
ಮುಷ್ಕರಗಳು ಆದಷ್ಟು ಸ್ವಯಂಪ್ರೇರಿತವಾಗಿರಬೇಕು. ಮುಷ್ಕರದ ಮೂಲಕ ಒಂದು ವರ್ಗ ಇನ್ನೊಂದು ವರ್ಗವನ್ನು ತನ್ನ ಅಧೀನದಲ್ಲಿ ಇರಿಸಿಕೊಳ್ಳಬೇಕೆಂಬ ಉದ್ದೇಶವಿರಬಾರದು. ಅವುಗಳು ಒತ್ತಾಯಪೂರ್ವಕವಾಗಿ ಸಂಘಟಿತವಾಗಿರಬಾರದು. ಕಾರ್ಮಿಕ ಸಂಘಗಳು ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಗಳಾಗಿರಬಾರದು. ಕಾರ್ಮಿಕರ ಹಿತಸಾಧನೆಯೇ ಅವುಗಳ ಮುಖ್ಯ ಗುರಿ ಆಗಿರಬೇಕು.
ಮುಷ್ಕರಗಳು ಕಾರ್ಮಿಕರ ಗುರಿಮುಟ್ಟಲು ಇರುವ ಪರಿಣಾಮಕಾರಿ ಸಾಧನ. ಆದಕಾರಣ ಯಾವುದೇ ಕಾರಣಕ್ಕೂ ಅದು ಹಿಂಸಾತ್ಮಕವಾಗಬಾರದು. ಅಲ್ಲಿ ಗೂಂಡಾಗಿರಿ ಮತ್ತು ಪುಂಡುತನಕ್ಕೆ ಅವಕಾಶವಿರಬಾರದು. ಕಾರ್ಖಾನೆ/ಸಂಸ್ಥೆಗಳಲ್ಲಿ ಯಾವುದೇ ರೀತಿಯ ಆಸ್ತಿಪಾಸ್ತಿಗಳಿಗೆ ಹಾನಿಯಾಗಬಾರದು. ಯಂತ್ರಗಳಿಗೆ ನಷ್ಟವಾಗಬಾರದು. ಪೀಠೋಪಕರಣಗಳ ಧ್ವಂಸವಾಗಬಾರದು. ಅದೇ ರೀತಿ ಸಂಸ್ಥೆಯ/ಕಾರ್ಖಾನೆಯ ಹೊರಗೆ ಕಲ್ಲೆಸೆತ, ದೊಂಬಿ, ಹೊಡೆದಾಟ, ಲೂಟಿ, ಬೆಂಕಿಹಚ್ಚುವಿಕೆ, ಸಾರ್ವಜನಿಕ ಆಸ್ತಿನಾಶ, ಸಾರ್ವಜನಿಕರಿಗೆ ತೊಂದರೆ
ಇತ್ಯಾದಿಗಳಿಗೆ ಅವಕಾಶವಿರಬಾರದು. ಎಲ್ಲ ರೀತಿಯಲ್ಲೂ ಮುಷ್ಕರ ಶಾಂತಿಯುತವಾಗಿರಬೇಕು ಮತ್ತು ಅಹಿಂಸಾತ್ಮಕವಾಗಿರಬೇಕು. ಸಾರ್ವಜನಿಕರ ಗಮನ ಸೆಳೆದು ಅವರ ಮೆಚ್ಚುಗೆಗೆ ಪಾತ್ರವಾಗಬೇಕು. ಸಾರ್ವಜನಿಕರು ತಮ್ಮ ಸಹಾನುಭೂತಿಯನ್ನು ತೋರುವಂತಿರಬೇಕು. ಇದೇ ಮುಷ್ಕರದ ಯಶಸ್ಸಿನ ಮಾರ್ಗ, ಗಾಂಧಿಮಾರ್ಗ (ಹರಿಜನ, 2-6-1946).
ಸಾರ್ವಜನಿಕ ಅಗತ್ಯವಸ್ತುಗಳ ಮತ್ತು ಸೇವೆಗಳನ್ನು ಕೊಡುವ ಸಂಸ್ಥೆ ಕೈಗಾರಿಕೆಗಳಲ್ಲಿ ಮುಷ್ಕರ ಮಾಡಲೇಬೇಕಾದ ಅನಿವಾರ್ಯತೆ ಬಂದಾಗ ಬೇರೆ ಎಲ್ಲ ರೀತಿಯ ನ್ಯಾಯಸಮ್ಮತ ಮಾರ್ಗಗಳನ್ನು ಉಪಯೋಗಿಸಿ ಅದರಲ್ಲಿ ಸಫಲರಾಗದೆ ಹೋದಾಗ ಮಾತ್ರ ಕಾರ್ಮಿಕರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಮುಷ್ಕರ ಮಾಡಬೇಕು. ಕಾರಣವೆಂದರೆ ಶ್ರಮಿಕ-ಸರ್ಕಾರದ ನಡುವಣ ಸಂಘರ್ಷದಿಂದ ಜನಸಾಮಾನ್ಯರಿಗೆ ಯಾವ ರೀತಿಯ ಅನಾನುಕೂಲಗಳೂ ಆಗಬಾರದು (ಹರಿಜನ, 11-8-1946, ಪು.ಸಂ. 256, 2-6-1946, ಪು.ಸಂ. 158, 28-7-1946, ಪು.ಸಂ. 237 ಮತ್ತು ಯಂಗ್ ಇಂಡಿಯಾ, 18-11-1926, ಪು.ಸಂ. 400).
ಶ್ರಮಿಕರ ಮುಂದಿರುವ ಆಯ್ಕೆಗಳು
ಭಾರತದ ಶ್ರಮಿಕರ ಮುಂದೆ ಎರಡು ಆಯ್ಕೆಗಳಿವೆ. ಮೊದಲನೆಯದು ಪಾಶ್ಚಾತ್ಯರು ಬೋಧಿಸುವ ‘ಬಲಿಷ್ಠರದೇ ಬಾಳು’ ಅಥವಾ ‘ಬಲಶಾಲಿಯೇ ಬದುಕಲು ಅರ್ಹ’ ಹಾಗೂ ‘ದಂಡವೇ ದೊರೆ’ ಎನ್ನುವ ವಾದ. ಎರಡನೆಯದು ಪೌರಸ್ತ್ಯದೇಶಗಳ ಚಿಂತನೆಯಾದ ಸತ್ಯ ಒಂದೇ ಕೊನೆಯಲ್ಲಿ ಎಲ್ಲವನ್ನೂ ಗೆಲ್ಲುವುದು, ಉಳಿದದ್ದೆಲ್ಲ ಮಿಥ್ಯೆ ಎನ್ನುವ ವಾದ. ಮೊದಲನೆಯ ವಾದದಲ್ಲಿ ಬಲಿಷ್ಠರಿಗೆ ಮಾತ್ರ ನ್ಯಾಯ ಪಡೆಯುವ ಹಕ್ಕು ಇರುವುದು ಎಂದಾದರೆ ಎರಡನೇ ವಾದದಲ್ಲಿ ‘ಶಕ್ತಿಶಾಲಿ’ ಹಾಗೂ ‘ಶಕ್ತಿಹೀನ’ ಈ ಇಬ್ಬರಿಗೂ ತಮ್ಮ ನ್ಯಾಯವನ್ನು ಪಡೆಯುವ ಸಮಾನ ಹಕ್ಕುಗಳಿವೆ ಎಂದು ಹೇಳುವ ಸಮಾನತೆಯ ಮಾತು. ಗಾಂಧಿಯವರ ದೃಷ್ಟಿಯಲ್ಲಿ ಈ ಎರಡರ ನಡುವಿನ ಆಯ್ಕೆ ಕಾರ್ಮಿಕರಿಂದಲೇ ನಡೆಯಬೇಕು. ಹಿಂಸೆಯ ಮೂಲಕ ಶ್ರಮಿಕರು ತಮ್ಮ ವೇತನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದ್ದರೂ ಆ ಮಾರ್ಗದ ಮೂಲಕ ಪಡೆಯುವುದು ಎಷ್ಟರಮಟ್ಟಿಗೆ ಸರಿ? ಅವರ ಬೇಡಿಕೆಗಳು ಎಷ್ಟೇ ನ್ಯಾಯೋಚಿತವಾಗಿದ್ದರೂ ಹಿಂಸೆಯ ಮೂಲಕ ಪಡೆಯುವುದು ಉಚಿತವೆ? ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇಲ್ಲ ಎಂದೇ ಹಿಂಸೆಯ ಮೂಲಕ ತಮ್ಮ ಹಕ್ಕುಗಳನ್ನು ಬಹಳ ಸುಲಭವಾಗಿ ಪಡೆಯಬಹುದು ಎಂದು ಶ್ರಮಿಕರಿಗೆ ಅನ್ನಿಸಬಹುದು. ಆದರೆ ದೀರ್ಘಾವಧಿಯಲ್ಲಿ ಅದು ಅವರಿಗೆ ಶಾಪವಾಗಿ ಪರಿಣಮಿಸುತ್ತದೆ ಎಂಬುದನ್ನು ಅವರು ಅರಿಯಬೇಕು. ‘ಯಾರು ಕತ್ತಿ ತೆಗೆದುಕೊಳ್ಳುವರೋ ಅವರು ಕೊನೆಯಲ್ಲಿ ಆ ಕತ್ತಿಯಿಂದಲೇ ಹತರಾಗುವರು’ ಎಂದು ಆಡಿನ್ ಬಾಲೋ ಎಚ್ಚರಿಸಿದ್ದಾನೆ. ಯಾರು ಪ್ರೀತಿಯಿಂದ ಗಳಿಸುವರೋ ಅವರಿಗೆ ಸದಾಕಾಲ ಪ್ರೀತಿ ಸಿಗುವುದು. ಈಜುಗಾರ ಅನೇಕ ವೇಳೆ ನೀರಿನಲ್ಲಿ ಮುಳುಗಿ ಸಾಯುವುದನ್ನು ನಾವು ನೋಡಿದ್ದೇವೆ. ಗಾಂಧಿಯವರು ಮುಂದುವರಿದು ಹೀಗೆ ಹೇಳುತ್ತಾರೆ –“ಯೂರೋಪಿನ ದೇಶಗಳನ್ನು ನೋಡಿ. ಅಲ್ಲಿ ಯಾರೂ ಸಂತೋಷದಿಂದ ಜೀವಿಸುತ್ತಿಲ್ಲ. ಯಾರೂ ಸಂತೃಪ್ತರಲ್ಲ. ಶ್ರಮಿಕರು ಬಂಡವಾಳಗಾರರನ್ನು, ಬಂಡವಾಳಗಾರರು ಶ್ರಮಿಕರನ್ನು ನಂಬುತ್ತಿಲ್ಲ. ಇಬ್ಬರೂ ಗೂಳಿಗಳಂತೆ ಬೆಳೆದು ಶಕ್ತಿ ಸಂಪಾದಿಸಿದ್ದಾರೆ. ಇಬ್ಬರೂ ಸಹ ತಮ್ಮ ತಮ್ಮ ಗುರಿ ಮುಟ್ಟಲು ತಮ್ಮದೇ ಆದ ಹೋರಾಟ ಮಾಡುತ್ತಿದ್ದಾರೆ.”
ಎಲ್ಲ ರೀತಿಯ ಚಲನೆಗಳು ಪ್ರಗತಿಯ ಪ್ರತೀಕವಲ್ಲ. ಯೂರೋಪಿನ ಜನರು ಪ್ರಗತಿಯ ಪಥದಲ್ಲಿ
ನಡೆಯುತ್ತಿದ್ದಾರೆ ಎಂದು ನಾವೇನು ನಂಬಬೇಕಿಲ್ಲ. ಆರ್ಥಿಕಸಂಪತ್ತಿನ ಗಳಿಕೆಯ ಜೊತೆಗೆ ನೈತಿಕ ಹಾಗೂ ಆಧ್ಯಾತ್ಮಿಕ ಗುಣಗಳ ಸಂವರ್ಧನೆ ಅಲ್ಲಿ ಆಗಿಲ್ಲ. ದುರ್ಯೋಧನ ಅಷ್ಟೈಶ್ವರ್ಯ ಹಾಗೂ ವಿಪುಲ ಸಂಪತ್ತನ್ನು ಗಳಿಸಿದ್ದರೂ, ವಿದುರ ಮತ್ತು ಸುಧಾಮನ ಮುಂದೆ ನಿರ್ಧನಿಕನಾಗಿದ್ದ. ಪ್ರಪಂಚವಿಂದು ಸುಧಾಮ ಮತ್ತು ವಿದುರರನ್ನು ಪೂಜಿಸುತ್ತದೆ. ಆದರೆ ದುರ್ಯೋಧನನನ್ನು ವಿನಾಶಕಾರಿ ಗುಣಗಳ ಪ್ರತೀಕವೆಂದು ಪರಿಗಣಿಸುತ್ತದೆ. ಯಾವ ದಾರಿ ಸೂಕ್ತ ಮತ್ತು ಸರಿ ಎಂಬುದನ್ನು ನಾವೇ ನಿರ್ಧರಿಸಬೇಕು.
ಕಾರ್ಮಿಕರ ಶಕ್ತಿ
ಕಾರ್ಮಿಕರು ಹಾಗೂ ಬಂಡವಾಳಗಾರರ ನಡುವಿನ ಸಂಘರ್ಷದಲ್ಲಿ ಬಂಡವಾಳಗಾರರು ತಪ್ಪುಹಾದಿಯನ್ನು ತುಳಿದಿರುವುದನ್ನು ಗಮನಿಸಬಹುದು. ಶ್ರಮಿಕರ ಮೇಲೆ ತಮ್ಮ ಹತೋಟಿಯನ್ನು ಸಾಧಿಸಲು ಅವರು ಎಲ್ಲ ರೀತಿಯ ಮಾರ್ಗಗಳನ್ನು ಅನುಸರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಕಾರ್ಮಿಕರು ತಮ್ಮ ಸಂಪೂರ್ಣ ಶಕ್ತಿ ಮತ್ತು ಅದರ ಮಹತ್ತ್ವವನ್ನು ತಿಳಿದುಕೊಳ್ಳುವಷ್ಟರಲ್ಲಿ ಅವರು ಬಂಡವಾಳಗಾರರಿಗಿಂತಲೂ ಕ್ರೌರ್ಯವಂತರಾಗಬಹುದು. ತಮ್ಮ ನಿಷೇಧಾತ್ಮಕ ಕಾರ್ಯಕ್ರಮ ಹಾಗೂ ನಡವಳಿಕೆಗಳಿಂದ ಶ್ರಮಿಕರು ಬಂಡವಾಳಗಾರರಿಗಿಂತ ಹೆಚ್ಚಿನ ಮಟ್ಟದ ಬುದ್ಧಿವಂತರಾದಾಗ ಗಿರಣಿ ಮಾಲೀಕರು ಅವರು ಹೇಳುವ ನಿಯಮ ಮತ್ತು ಷರತ್ತುಗಳಿಗೆ ಅನುಗುಣವಾಗಿ ಕಾರ್ಯ ಮಾಡಬೇಕಾದೀತು. ಆದರೆ ಶ್ರಮಿಕರು ನಿಜವಾಗಿ ಆ ಮಟ್ಟವನ್ನು ತಲಪುವುದು ಕಷ್ಟಸಾಧ್ಯ. ಒಂದು ವೇಳೆ ಆ ಮಟ್ಟವನ್ನು ತಲಪಿದರೆ ಆಗ ಶ್ರಮಿಕರೇ ಮಾಲೀಕರಾಗಿಬಿಡುತ್ತಾರೆ. ಬಂಡವಾಳಗಾರರು ಕೇವಲ ತಮ್ಮ ಹಣಬಲದಿಂದ ಮಾತ್ರ ಹೋರಾಡದೆ ಬುದ್ಧಿಬಲ ಹಾಗೂ ಚಾತುರ್ಯಗಳಿಂದ ಹೋರಾಡುತ್ತಾರೆ ಎಂಬ ಅಂಶವನ್ನು ಕಾರ್ಮಿಕರು ತಿಳಿದುಕೊಳ್ಳಬೇಕಾಗುತ್ತದೆ.
ಶ್ರಮಿಕರನ್ನು ಕೇವಲ ದಾಳಗಳಾಗಿ ಉಪಯೋಗ ಮಾಡಿಕೊಳ್ಳುತ್ತಿರುವುದನ್ನು ಎಲ್ಲರೂ ಗಮನಿಸಬೇಕಾಗಿದೆ. ರಾಜಕೀಯ ನಾಯಕರು ತಮ್ಮ ರಾಜಕೀಯ ಉದ್ದೇಶಪೂರ್ತಿಗಾಗಿ ಶ್ರಮಿಕರನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಇಂದು ಎಲ್ಲೆಡೆ ಕಂಡುಬರುತ್ತಿದೆ. ಇದನ್ನು ಕಾರ್ಮಿಕರು ಅರ್ಥಮಾಡಿಕೊಳ್ಳಬೇಕು. ರಾಜಕೀಯದಲ್ಲಿ ಪ್ರವೇಶ ಮಾಡಿದವರು ತಮ್ಮ ಸ್ವಂತ ಹಿತಾಸಕ್ತಿಗಳನ್ನೋ, ಕಾರ್ಮಿಕರ ಹಿತಾಸಕ್ತಿಗಳನ್ನೋ ಅಥವಾ ದೇಶದ ಒಟ್ಟು ಹಿತಾಸಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೋ ಎಂಬುದನ್ನು ಕಾರ್ಮಿಕರು ಗಮನಿಸಬೇಕಾಗಿದೆ. ಶ್ರಮಿಕರು ತಮ್ಮ ನಿಜವಾದ ಹಿತಚಿಂತಕರು ಯಾರು ಎಂಬುದನ್ನು ಅರಿಯಬೇಕಿದೆ. ಯಾವುದೇ ಕೆಲಸ ನೇತೃತ್ವವಿಲ್ಲದೆ ಮುಂದುವರಿಯಲಾರದು. ಎಂತಹ ವ್ಯಕ್ತಿಗಳು ನೇತೃತ್ವ ವಹಿಸಿದ್ದಾರೆ ಎಂಬುದರ ಮೇಲೆ ಶ್ರಮಿಕರ ಹಿತಸಾಧನೆ ಅಡಗಿದೆ ಎಂಬುದರ ಮನವರಿಕೆ ಆಗಬೇಕಿದೆ.
ಮುಷ್ಕರಗಳು, ಹರತಾಳ, ಕೆಲಸ ಸ್ಥಗಿತಗೊಳಿಸುವುದು ಇತ್ಯಾದಿಗಳನ್ನು ಕೇಳಲು ಬಹಳ ಚಂದ. ಅದನ್ನು ದುರುಪಯೋಗ ಮಾಡಿಕೊಳ್ಳುವವರೂ ಇರುತ್ತಾರೆ ಎನ್ನುವುದರ ಅರಿವು ಇರಬೇಕಾಗುತ್ತದೆ. ಆದ್ದರಿಂದ ಶ್ರಮಿಕರು ಹೆಚ್ಚು ಶಕ್ತಿಯುತವಾದ ಕಾರ್ಮಿಕ ಸಂಘಗಳನ್ನು ಕಟ್ಟಿಕೊಳ್ಳುವುದು ಅತ್ಯಂತ ಅವಶ್ಯ. ಈ ಸಂಘಟನೆಯ ಅನುಮತಿ ಇಲ್ಲದೆ ಯಾವುದೇ ರೀತಿಯ ಮುಷ್ಕರಗಳನ್ನು ಅವರು ಮಾಡಬಾರದು. ಕಾರ್ಖಾನೆಗಳ ಒಡೆಯರೊಡನೆ ಮೊದಲು ಸಂಧಾನ ಮಾಡದೆ ಮುಷ್ಕರಗಳನ್ನು ಪ್ರಾರಂಭ ಮಾಡಬಾರದು.
ಮುಷ್ಕರಗಳು ಪ್ರಾರಂಭವಾದ ನಂತರ ಗಿರಣಿ ಮಾಲೀಕರ ಜೊತೆಗೆ ಒಪ್ಪಂದಕ್ಕೆ ಬರುವಂತಹ ಸಾಧ್ಯತೆಗಳನ್ನು ನೋಡಬೇಕು. ಗಿರಣಿ ಮಾಲೀಕರು ಮಧ್ಯಸ್ಥಿಕೆಗೆ ಒಪ್ಪಿದರೆ ಆಗ ಪಂಚಾಯಿತಿಸೂತ್ರವನ್ನು ಒಪ್ಪಬೇಕು. ಒಂದು ಬಾರಿ ಮಧ್ಯಸ್ಥಗಾರರನ್ನು ನೇಮಿಸಿದ ನಂತರ ಅವರು ಕೊಡುವ ತೀರ್ಪನ್ನು ಎರಡೂ ಕಡೆಯವರು ತನಗೆ ಅನುಕೂಲವಾಗಲಿ ಅಥವಾ ಬಿಡಲಿ ಅದನ್ನು ಒಪ್ಪಬೇಕು (ಯಂಗ್ ಇಂಡಿಯ, 11-2-1920, ಪು.ಸಂ. 7, 8). ಕಾರ್ಮಿಕರ ಸ್ಥಿತಿ-ಗತಿಗಳನ್ನು ಪ್ರಾಮಾಣಿಕವಾಗಿ ಸುಧಾರಿಸಿ ಶ್ರಮಿಕ-ಒಡೆಯರ ಸುಮಧುರ ಸಂಬಂಧವನ್ನು ಸೃಷ್ಟಿಸಬೇಕಾದರೆ ಅವರ ನಡುವೆ ಕೌಟುಂಬಿಕ ಬಾಂಧವ್ಯವನ್ನು ಕಲ್ಪಿಸುವುದೊಂದೇ ಉಳಿದಿರುವ ಸೂಕ್ತಮಾರ್ಗ. ಈ ಗುರಿಸಾಧನೆಗೆ ಸತ್ಯ-ಅಹಿಂಸೆಯ ಪಥ ಬಿಟ್ಟು ಬೇರೊಂದಿಲ್ಲ.
ಎಲ್ಲ ರೀತಿಯ ನ್ಯಾಯಯುತ ಮಾರ್ಗಗಳನ್ನು ಅನುಸರಿಸಿದ ನಂತರವೂ ಕಾರ್ಮಿಕರಿಗೆ ನ್ಯಾಯ ಸಿಗದಿದ್ದರೆ ಮಾತ್ರ ಮುಷ್ಕರ ಸಮರ್ಥನೀಯ. ಆದರೆ ಗಾಂಧಿಯವರು ಸಹಾನುಭೂತಿಪರವಾದ ಮುಷ್ಕರಗಳನ್ನು ವಿರೋಧಿಸುತ್ತಿದ್ದರು. ಶ್ರಮಿಕರನ್ನು ಉದ್ದೇಶಿಸಿ ಮಾತನಾಡುತ್ತ ಒಂದು ಬಾರಿ ಅವರು ಈ ರೀತಿ ಹೇಳಿದರು – “ನಾನು ನಾಯಕರನ್ನು ಎರಡು ರೀತಿಯಲ್ಲಿ ವಿಭಾಗಿಸುತ್ತೇನೆ. ಮೊದಲನೆಯದು ಶ್ರಮಿಕರ ಮಧ್ಯದಿಂದಲೇ ಮೇಲೆದ್ದು ಬಂದಂತಹ ನಾಯಕರು. ಆದರೆ ಅವರು ಶ್ರಮಿಕರಲ್ಲದೆ ಹೊರಕ್ಷೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಮಾತನ್ನು ಕೇಳುವಂತಹವರು. ಎರಡನೆಯದು ಶ್ರಮಿಕರ ಬಗ್ಗೆ ನಿಜವಾದ ಕಾಳಜಿ ಇರುವಂತಹ ನಾಯಕರು. ಈ ಮೂರೂ ಗುಂಪುಗಳ ನಡುವೆ ನಿರಂತರ ಮಾತುಕತೆ ನಡೆಯದಿದ್ದರೆ ಎಲ್ಲ ಕೆಲಸಗಳು ವಿಫಲವಾಗುತ್ತವೆ.”
ಯಶಸ್ವಿ ಮುಷ್ಕರದ ಷರತ್ತುಗಳು
ಒಂದು ಯಶಸ್ವಿ ಮುಷ್ಕರ ಕೆಲವು ಸರಳ ಷರತ್ತುಗಳನ್ನು ಪೂರೈಸಬೇಕೆಂದು ಗಾಂಧಿಯವರು ಬಯಸಿದ್ದರು. ಈ ಷರತ್ತುಗಳು ಪೂರೈಸಿದಾಗ ಮುಷ್ಕರ ವಿಫಲವಾಗಲು ಸಾಧ್ಯವಿಲ್ಲ ಎನ್ನುವುದು ಅವರ ನಂಬಿಕೆ. ಗಾಂಧಿಯವರ ಪ್ರಕಾರ ಯಶಸ್ವಿ ಮುಷ್ಕರದ ಷರತ್ತುಗಳು ಹೀಗಿವೆ –
1) ಮುಷ್ಕರದ ಕಾರಣವು ನ್ಯಾಯಸಮ್ಮತವಾಗಿರಬೇಕು.
2) ಮುಷ್ಕರ ಹೂಡುವವರಲ್ಲಿ ಏಕಾಭಿಪ್ರಾಯವಿರಬೇಕು.
3) ಮುಷ್ಕರ ಹೂಡದಿರುವವರ ವಿರುದ್ಧ ಹಿಂಸೆಯನ್ನು ಬಳಸಬಾರದು.
4)ಚಳವಳಿಗಾರರು ಮುಷ್ಕರದ ಸಂದರ್ಭದಲ್ಲಿ ಕಾರ್ಮಿಕ ಸಂಘಗಳ ನಿಧಿಯನ್ನು ಅವಲಂಬಿಸದೆ ತಮ್ಮ ಗಳಿಕೆಯಲ್ಲಿ ಜೀವನ ನಿರ್ವಹಿಸುವಂತೆ ಇರಬೇಕು. ಆ ಕಾರಣಕ್ಕಾಗಿ ಅವರು ತಾತ್ಕಾಲಿಕವಾಗಿ ಯಾವುದಾದರೂ ಒಂದು ಉದ್ಯೋಗ ಹಿಡಿಯಬೇಕು.
5) ಚಳವಳಿಗಾರರ ಬದಲಿಗೆ ಬಳಸಲು ಸಾಕಷ್ಟು ಹೆಚ್ಚುವರಿ ಶ್ರಮ ಲಭ್ಯವಿರುವಾಗ ಮುಷ್ಕರ ಒಂದು ಪರಿಹಾರವಾಗಲಾರದು. ಅನ್ಯಾಯ ವರ್ತನೆ ಅಥವಾ ಕಡಮೆ ಕೂಲಿ ಕೊಡುವಂತಹ ಸಂದರ್ಭಗಳಲ್ಲಿ, ಮುಷ್ಕರದ ಬದಲು ರಾಜೀನಾಮೆ ಕೊಡುವುದು ಸೂಕ್ತ ಪರಿಹಾರ.
6) ಮೇಲಿನ ಷರತ್ತುಗಳು ಇಲ್ಲದೆಯೂ ಮುಷ್ಕರ ಯಶಸ್ವಿಯಾದರೆ ಅದಕ್ಕೆ ಉದ್ಯೋಗದಾತರ ದೌರ್ಬಲ್ಯ ಅಥವಾ ಅಪರಾಧಿ ಭಾವನೆ ಕಾರಣವಾಗುತ್ತದೆ. ತಪ್ಪು ಉದಾಹರಣೆಗಳ ಅನುಸರಣೆ ಮಾಡಿದಾಗ ನಾವು ಅನೇಕ ಬಾರಿ ದೊಡ್ಡ ತಪ್ಪುಗಳನ್ನು ಮಾಡುತ್ತೇವೆ. ಯಾವ ದೃಷ್ಟಾಂತಗಳ ಬಗ್ಗೆ ನಮಗೆ ಸಮಗ್ರ ಮಾಹಿತಿ ಮತ್ತು ಸಂಪೂರ್ಣ ಜ್ಞಾನ ಇರುವುದಿಲ್ಲವೋ, ಆಗ ಅವುಗಳ ಅನುಸರಣೆ ಮಾಡದಿರುವುದೇ ಹೆಚ್ಚು ಸೂಕ್ತ. ನಮಗೆ ತಿಳಿದಿರುವಂತಹ ಷರತ್ತುಗಳನ್ನು ಪಾಲಿಸಿ, ಅದರ ಮೂಲಕ ಯಶಸ್ಸನ್ನು ಗಳಿಸುವ ಪ್ರಯತ್ನ ನಾವು ಮಾಡಬೇಕು (ಯಂಗ್ ಇಂಡಿಯಾ, 16-2-1921, ಪು.ಸಂ. 52, 53).
ಮುಷ್ಕರಗಳು ಮತ್ತು ರಾಜಕೀಯ
ಇಂದು ಮುಷ್ಕರಗಳು ದಿನನಿತ್ಯದ ಮಾತಾಗಿದೆ. ದೇಶದಾದ್ಯಂತ ಒಂದಲ್ಲ ಒಂದು ಕಾರಣಕ್ಕೆ ಒಂದಲ್ಲ ಒಂದು ಕಾರ್ಖಾನೆಯಲ್ಲಿ ಮುಷ್ಕರಗಳು ನಡೆಯುತ್ತಿರುತ್ತವೆ. ಮುಷ್ಕರಗಳು ನಿಜವಾಗಿ ಅಶಾಂತ ಪ್ರವೃತ್ತಿಯ ಗುರುತುಗಳು. ಕಾರ್ಮಿಕರಲ್ಲಿ ಬಹುಕಾಲದಿಂದ ತಡೆಹಿಡಿದ, ಅದುಮಲ್ಪಟ್ಟ ಭಾವನೆಗಳ ವ್ಯಕ್ತರೂಪವೇ ಈ ಮುಷ್ಕರಗಳು. ಅಸಹನೆಯ ಮೂರ್ತಸ್ವರೂಪವದು. ಕಾರ್ಮಿಕರ ಮುಂದೆ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳು ಸ್ಪಷ್ಟರೂಪ ತಳೆದಾಗ ಮುಷ್ಕರಗಳಲ್ಲಿ ಪರ್ಯವಸಾನವಾಗುತ್ತವೆ. ಭಾರತದಲ್ಲಿ ಮತ್ತು ಜಗತ್ತಿನ ಇನ್ನಿತರ ಭಾಗಗಳಲ್ಲಿ ಶ್ರಮಿಕವರ್ಗ ಇಂದು ಕಾರ್ಮಿಕರಿಗೆ ಮಾರ್ಗದರ್ಶನ ಮಾಡುವ ಮತ್ತು ಸಲಹೆಗಳನ್ನು ಕೊಡುವಂತಹ ನಿಪುಣರ ಕೃಪಾಕಟಾಕ್ಷದಲ್ಲಿದೆ. ಈ ನಿಪುಣರು ಯಾವಾಗಲೂ ಬುದ್ಧಿವಂತಿಕೆಯಿಂದ ಮತ್ತು ಎಚ್ಚರಿಕೆಯಿಂದ ಮಾರ್ಗದರ್ಶನ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಶ್ರಮಿಕವರ್ಗ ಇಂತಹ ನಿಪುಣ ಸಲಹೆಗಾರರಿಂದ ಬಹಳ ನೊಂದಿದ್ದಾರೆ. ಅವರ ಕಾರ್ಯನಿರ್ವಹಣೆಯ ರೀತಿಗೆ ಅಸಂತೋಷಪಡಲು ಕಾರಣಗಳು ಇಲ್ಲದಿಲ್ಲ. ಮುಖ್ಯವಾಗಿ ಈ ನಿಪುಣರು ಹೇಳುವ ಮಾತುಗಳೆಂದರೆ ಶಕ್ತಿಶಾಲಿಗಳಾದ ಬಂಡವಾಳಗಾರರ ವಿರುದ್ಧ ಹೋರಾಡಿ ಗೆಲ್ಲಲು ಶ್ರಮಿಕರಿಗೆ ಸಾಧ್ಯವಿಲ್ಲ. ಶ್ರಮಿಕರು ಕೇವಲ ನೌಕರರು. ಬಂಡವಾಳಗಾರರ ಕೈಕೆಳಗೆ ಕೆಲಸಮಾಡಬೇಕಾಗಿರುವುದರಿಂದ ನಿಮ್ಮ ಚೌಕಾಶಿಶಕ್ತಿ ಕಡಮೆ ಹಾಗೂ ನೀವು ಅವರ ವಿರುದ್ಧ ಹೋರಾಡಲು ಶಕ್ತರಲ್ಲ. ನೀವು ಇರುವುದು ಕೇವಲ ಉದ್ಯೋಗಪತಿಗಳ ಸಂಪತ್ತನ್ನು ಹೆಚ್ಚಿಸಲು ಇರುವ ಸಾಧನವಾಗಿ ಮಾತ್ರ ಎನ್ನುವ ಭ್ರಮೆ ಮತ್ತು ನಂಬಿಕೆಯನ್ನು ಸೃಷ್ಟಿಮಾಡಿದ್ದಾರೆ. ಆದಕಾರಣ ಸಣ್ಣ ಕಾರಣ ಸಿಕ್ಕಿದರೂ ಶ್ರಮಿಕರು ತಮ್ಮ ಉಪಕರಣಗಳನ್ನು ಕೆಳಗಿಟ್ಟು ಕೆಲಸವನ್ನು ಸ್ಥಗಿತಗೊಳಿಸಲು ಸಾಧ್ಯ ಎನ್ನುತ್ತಾರೆ. ಬಂಡವಾಳಗಾರರ ಕುತಂತ್ರಗಳಿಂದ ಈ ನಿಪುಣರು ಶ್ರಮಿಕರ ಸಂಘಟನಾ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಬದಲು ಅವರ ಆತ್ಮಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ಎಲ್ಲೆಡೆ ನಡೆಸುತ್ತಿದ್ದಾರೆ. ಇದು ಅತ್ಯಂತ ದೌರ್ಭಾಗ್ಯದ ಸಂಗತಿ.
ಕಾರ್ಮಿಕಕ್ಷೇತ್ರದಲ್ಲಿ ರಾಜಕೀಯ ಪ್ರವೇಶಿಸಿ ಅನೇಕ ದಶಕಗಳೇ ಕಳೆದಿವೆ. ರಾಜಕೀಯಪ್ರಭಾವವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಶ್ರಮಿಕರ ಮೇಲೂ ಶ್ರಮಿಕರ ಸಂಘಟನೆಗಳ ಮೇಲೂ ತನ್ನದೇ ರೀತಿಯಲ್ಲಿ ಬೀರಲಾರಂಭಿಸಿದೆ. ರಾಜಕೀಯ ಕಾರಣಗಳಿಗೋಸ್ಕರ ಶ್ರಮಿಕರು ಮುಷ್ಕರ ಮಾಡಲು ಪ್ರೇರಣೆಕೊಡುವಂತಹ ನಾಯಕರಿಗೇನೂ ಕೊರತೆಯಿಲ್ಲ.
ರಾಜಕೀಯ ಕಾರಣಗಳಿಗಾಗಿ ಶ್ರಮಿಕರ ಮುಷ್ಕರಗಳನ್ನು ಉಪಯೋಗಮಾಡಿಕೊಳ್ಳುವುದು ಬಹಳ ದೊಡ್ಡ ತಪ್ಪು ಎಂಬುದು ಗಾಂಧಿಯವರ ಅನಿಸಿಕೆ. ಅಂತಹ ಮುಷ್ಕರಗಳು ಫಲವನ್ನು ಕೊಡುವುದಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಅಂತಹ ಮುಷ್ಕರಗಳು ನಾನು ಪ್ರತಿಪಾದಿಸುವ ಅಹಿಂಸಾತ್ಮಕ ಹಾಗೂ ಅಸಹಕಾರ ಯೋಜನೆಯ ಪರಿಧಿಯಲ್ಲಿ ಬರುವುದಿಲ್ಲ. ಅನೇಕರು ರಾಜಕೀಯ ಲಾಭಕ್ಕಾಗಿ ಕಾರ್ಮಿಕರ ಮುಷ್ಕರಗಳನ್ನು ದುರುಪಯೋಗಮಾಡಿಕೊಳ್ಳುತ್ತಿರುವುದು ಇಂದು ಸರ್ವೇಸಾಮಾನ್ಯವಾಗಿದೆ. ಆದ್ದರಿಂದ ಶ್ರಮಿಕರು ಇಂದಿನ ರಾಜಕೀಯ ಪರಿಸ್ಥಿತಿಯನ್ನು ಅರಿತು ಅದರಂತೆ ಬುದ್ಧಿವಂತಿಕೆಯಿಂದ ತಮ್ಮ ಕಾರ್ಯ ನಿರ್ವಹಿಸಬೇಕಾಗಿದೆ. ಈ ದೃಷ್ಟಿಯಿಂದ ಕಾರ್ಮಿಕರು ತಮ್ಮ ಆರ್ಥಿಕ ಸ್ಥಿತಿಗತಿಗಳನ್ನು ಎಚ್ಚರದಿಂದ ಉತ್ತಮಗೊಳಿಸಿಕೊಂಡು ತಮ್ಮ ಶರೀರ ಮತ್ತು ಆತ್ಮವನ್ನು ಏಕೀಕೃತಗೊಳಿಸಿಕೊಳ್ಳಬೇಕಾಗಿದೆ. ರಾಜಕೀಯ ಪ್ರಜ್ಞೆಯ ಜಾಗೃತಿಯಿಂದ ಶ್ರಮಿಕರು ತಮ್ಮ ಇಂದಿನ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಿಕೊಳ್ಳುವಂತೆ ಮಾಡುವುದು, ಹೆಚ್ಚಿನ ಮಾಹಿತಿ ಸಂಗ್ರಹ ಮಾಡುವುದು, ತಮ್ಮ ಹಕ್ಕುಗಳಿಗಾಗಿ ಹೆಚ್ಚು ಒತ್ತಾಯ ಮಾಡುವುದು, ಶ್ರಮಿಕರ ಶ್ರಮವನ್ನು ಸರಿಯಾಗಿ ಉಪಯೋಗ ಮಾಡಿಕೊಂಡು ಉದ್ಯೋಗಪತಿಗಳು ವಿವಿಧ ವಸ್ತು ಹಾಗೂ ಸೇವೆಗಳನ್ನು ಉತ್ಪಾದನೆಮಾಡುವಂತೆ ಮಾಡುವುದು, ಸೂಕ್ತ ಬೆಲೆ ನಿಗದಿಪಡಿಸುವಂತೆ ಮಾಡುವುದು ಇತ್ಯಾದಿಗಳಲ್ಲಿ ಸಫಲವಾಗಬೇಕು.
ಮಾಲೀಕರ ಮುಂದಿರುವ ಆಯ್ಕೆಗಳು
ಕಾರ್ಮಿಕರು ಮುಷ್ಕರ ಹೂಡಿದಾಗ ಬಂಡವಾಳವರ್ಗ ಅದನ್ನು ಬಗೆಹರಿಸಲು ಎರಡು ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಆಸ್ಪದವಿದೆ. ಮೊದಲನೆಯದು, ಮುಷ್ಕರ ಸರಿಯೋ, ತಪ್ಪೋ ಎಂದು ವಿಶ್ಲೇಷಿಸಿ ತೀರ್ಮಾನ ತೆಗೆದುಕೊಳ್ಳುವ ಮೊದಲೇ ಅದನ್ನು ಸಂಘಟಿತ ಗೂಂಡಾಗಿರಿಯಿಂದ ಹತ್ತಿಕ್ಕುವುದು; ತನ್ಮೂಲಕ ಮಾಲೀಕರ ಶಕ್ತಿಯೇನು ಎಂದು ಕಾರ್ಮಿಕರಿಗೆ ಮನವರಿಕೆ ಮಾಡಿಕೊಡುವುದು. ಈ ಮಾರ್ಗ ತಪ್ಪು, ಅವೈಜ್ಞಾನಿಕ ಹಾಗೂ ವಿನಾಶಕಾರಿ. ಎರಡನೆಯದು ಸರಿಯಾದ ಗೌರವಾನ್ವಿತ ಮಾರ್ಗ. ಕಾರ್ಮಿಕರಿಗೆ ನ್ಯಾಯವಾಗಿ ಏನು ಸಲ್ಲಬೇಕಾಗಿದೆಯೋ ಅದನ್ನು ಸಲ್ಲಿಸುವುದು. ಜೊತೆಗೆ ಕಾರ್ಮಿಕರಿಂದ ನ್ಯಾಯೋಚಿತವಾಗಿ ಏನು ಪಡೆಯಬೇಕಾಗಿದೆಯೋ ಅದನ್ನು ಮಾಲೀಕರು ಪಡೆಯುವುದು. ಇದು ಎರಡು ವರ್ಗಗಳಿಗೂ ಲಾಭದಾಯಕ.
ಮಾಲೀಕರು ಮತ್ತು ಶ್ರಮಿಕರ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಅವರ ನಡುವೆ ಸಮಸ್ಯೆಗಳು ಏಳುವುದೂ ಸಹಜ. ಅಂತಹ ಸಂದರ್ಭಗಳಲ್ಲಿ ಎರಡೂ ವರ್ಗದವರು ಶಾಂತಚಿತ್ತದಿಂದ ವಿಚಾರವಿನಿಮಯ ಮತ್ತು ವಿಮರ್ಶೆ ಮಾಡಿ ತಾವೇ ಕುಳಿತು ಅದನ್ನು ಪರಿಹರಿಸಲು ಮುಂದಾಗುವುದು ಒಳಿತು.
(ಮುಂದುವರಿಯುವುದು)