ಅರ್ಥಶಾಸ್ತ್ರ ಒಂದು ಬೆಳೆಯುತ್ತಿರುವ ವಿಜ್ಞಾನ. ವಿವಿಧ ಆರ್ಥಿಕತಜ್ಞರು ವಿವಿಧ ಕಾಲಖಂಡದಲ್ಲಿ ವಿವಿಧ ರೀತಿಯ ಹೊಸ ಹೊಸ ವಿಭಾಗಗಳನ್ನು ಈ ವಿಷಯಕ್ಕೆ ಸೇರಿಸಿದ್ದಾರೆ. 20ನೇ ಶತಮಾನದ ಪೂರ್ವಾರ್ಧದಲ್ಲಿ ಇನ್ನೊಂದು ಹೊಸ ವಿಭಾಗವಾದ ಆರ್ಥಿಕ ಬೆಳವಣಿಗೆ ಅಥವಾ ಆರ್ಥಿಕ ಅಭಿವೃದ್ಧಿಯನ್ನು ಈ ವಿಜ್ಞಾನಕ್ಕೆ ಸೇರ್ಪಡೆ ಮಾಡಿದ್ದಾರೆ. ಈ ಹೊಸ ವಿಭಾಗ ಆರ್ಥಿಕ ಬೆಳವಣಿಗೆಯ ವಿಷಯ ಮತ್ತು ಅದರ ಸಮಸ್ಯೆಗಳ ಬಗೆಗೆ ವಿಸ್ತಾರವಾದ ವಿಶ್ಲೇಷಣೆ ಮತ್ತು ವಿವರಗಳನ್ನು ನೀಡುತ್ತದೆ.
ಆರ್ಥಿಕ ಬೆಳವಣಿಗೆ (Economic Growth) ಮತ್ತು ಆರ್ಥಿಕ ಅಭಿವೃದ್ಧಿ (Economic Development) ಈ ಎರಡು ಪದಗಳನ್ನು ಸಾಮಾನ್ಯವಾಗಿ ಅದಲುಬದಲು ಶಬ್ದಗಳಾಗಿ ಉಪಯೋಗಿಸಿದರೂ ವಾಸ್ತವವಾಗಿ ಈ ಎರಡು ಶಬ್ದಗಳಿಗೆ ಬೇರೆ ಬೇರೆ ಅರ್ಥಗಳಿವೆ. ಅರ್ಥಶಾಸ್ತ್ರದಲ್ಲಿ ಆರ್ಥಿಕ ಬೆಳವಣಿಗೆಗೆ ಸಂಕುಚಿತ ಅರ್ಥವಿದ್ದರೆ, ಆರ್ಥಿಕ ಅಭಿವೃದ್ಧಿಗೆ ವಿಶಾಲವಾದ ಅರ್ಥವಿದೆ.
ಆರ್ಥಿಕ ಬೆಳವಣಿಗೆ ಎಂದರೆ ಒಂದು ದೇಶದ ದೀರ್ಘಕಾಲಿಕ ಅವಧಿಯಲ್ಲಿ ಒಟ್ಟು ಉತ್ಪಾದಿಸಿದ ಸರಕು ಮತ್ತು ಸೇವೆಗಳ ಪ್ರಮಾಣ ಅಥವಾ ಒಟ್ಟು ಉತ್ಪಾದಿಸಿದ ರಾಷ್ಟ್ರೀಯ ಆದಾಯದ ಮೊತ್ತವಾಗಿದೆ. ಅದರಿಂದ ಪ್ರತಿಯೊಬ್ಬ ಪ್ರಜೆಗೆ ಎಷ್ಟು ಪ್ರಮಾಣದ ಸರಕು ಮತ್ತು ಸೇವೆಗಳು ಅಥವಾ ಆದಾಯದ ಮೊತ್ತ ಹೆಚ್ಚಾಗಿದೆ ಎಂದು ತಿಳಿಯುತ್ತದೆ. ಹೀಗೆ ಆರ್ಥಿಕ ಬೆಳವಣಿಗೆ ರಾಷ್ಟ್ರೀಯ ಸಿದ್ಧವಸ್ತುಗಳ (National Output) ಉತ್ಪಾದನಾ ಪ್ರಮಾಣ ಅಥವಾ ರಾಷ್ಟ್ರೀಯ ಆದಾಯದ (National Income) ಪ್ರಮಾಣದ ಹೆಚ್ಚಳವನ್ನು ನಮಗೆ ತಿಳಿಸುತ್ತದೆ.
ಆರ್ಥಿಕ ಅಭಿವೃದ್ಧಿ ಎಂದರೆ ಒಂದು ದೇಶದಲ್ಲಿ ಕಾರ್ಯನಿರತವಾಗಿರುವ ವಿವಿಧ ಸಾಂಸ್ಥಿಕ ವ್ಯವಸ್ಥೆಗಳಲ್ಲಿ, ಹೂಡುವಳಿಗಳ (Inputs) ಹಂಚಿಕೆಯಲ್ಲಿ, ಸಾಮಾಜಿಕ ತಾಂತ್ರಿಕ ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಮಾಡಿ ಅವುಗಳ ಮೂಲಕ ಸಿದ್ಧಪಡಿಸಿದ ವಸ್ತುಗಳ (Output) ಉತ್ಪಾದನೆಯ ರಚನಾಕ್ರಮದಲ್ಲಿ ಆದ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ತಿಳಿಸುವುದು. ಯಾವಾಗ ಹೆಚ್ಚಿನ ಪ್ರಮಾಣದ ಸರಕು-ಸೇವೆಗಳು ದೇಶದ ಜನತೆಯ ಭೌತಿಕ ಸುಖ-ಸಂತೋಷಗಳನ್ನು ತೃಪ್ತಿಪಡಿಸಲು ಕಡಮೆ ಪ್ರಮಾಣದ ತ್ಯಾಗ ಮತ್ತು ಪರಿಶ್ರಮಗಳ ಮೂಲಕ ದೊರಕುವುದೋ ಮತ್ತು ಅವುಗಳನ್ನು ಉತ್ಪಾದಿಸುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಂಸ್ಥಿಕ ವ್ಯವಸ್ಥೆಗಳಲ್ಲಿ ಮೂಲಭೂತ ಪರಿವರ್ತನೆಗಳನ್ನು ಮತ್ತು ಸುಧಾರಣೆಗಳನ್ನು ಮಾಡಲು ಸಾಧ್ಯವಾಗುವುದೋ ಆಗ ಆ ದೇಶದ ಆರ್ಥಿಕ ಅಭಿವೃದ್ಧಿ ಆಗಿದೆ ಎಂದು ಅರ್ಥ. ಆದ್ದರಿಂದ ಆರ್ಥಿಕ ಅಭಿವೃದ್ಧಿ ಎಂದರೆ ಆರ್ಥಿಕ ಬೆಳವಣಿಗೆ + ವ್ಯವಸ್ಥೆಗಳಲ್ಲಿ ಆಗುವ ಮೂಲಭೂತ ಬದಲಾವಣೆಗಳು.
ಈಗ ಗಾಂಧಿಯವರ ಕಲ್ಪನೆಯಲ್ಲಿ ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಮತ್ತು ಅದು ಹೇಗೆ ಪಾಶ್ಚಾತ್ಯರ ಕಲ್ಪನೆಗಿಂತ ಭಿನ್ನವಾಗಿದೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡೋಣ.
ಗಾಂಧಿಯವರ ದೃಷ್ಟಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ಧಿ
ಆರ್ಥಿಕ ಅಭಿವೃದ್ಧಿ ಎಂದರೆ ಮಾನವನ ಸಮಗ್ರ ಪ್ರಗತಿಯ ಸಮನ್ವಯ ಸೂತ್ರ. ಆದ್ದರಿಂದ ನಾವು ಅದನ್ನು ಬಿಡಿಬಿಡಿಯಾಗಿ ಯಾವ ಸಂಬಂಧವೂ ಇಲ್ಲದಂತಹ ಭಾಗಗಳಾಗಿ ವಿಭಜಿಸಲು ಸಾಧ್ಯವಿಲ್ಲ. ಗಾಂಧಿಯವರ ಸರ್ವೋದಯವೂ ಸಹ ಸರ್ವರ ಸರ್ವತೋಮುಖ ಬೆಳವಣಿಗೆಗೆ ಪ್ರಾಮುಖ್ಯತೆ ನೀಡುತ್ತದೆ. ಅದು ಜೀವನದ ಸರ್ವಕ್ಷೇತ್ರಗಳ – ಆರ್ಥಿಕ, ಸಾಮಾಜಿಕ, ಧಾರ್ಮಿಕ, ನೈತಿಕ ಬೆಳವಣಿಗೆಯನ್ನು ಒಳಗೊಂಡು ಸರ್ವಸ್ಪರ್ಶಿಯಾಗಿದೆ.
ಗಾಂಧಿಯವರ ಅಭಿವೃದ್ಧಿ ಮತ್ತು ಬೆಳವಣಿಗೆಯ ಕಲ್ಪನೆಗೆ ಒಂದು ನಿಶ್ಚಿತ ಗುರಿ ಇದೆ. ಅದೆಂದರೆ ಮನುಷ್ಯನ ವ್ಯಕ್ತಿತ್ವದ ಸಂಪೂರ್ಣ ಹಾಗೂ ಸರ್ವತೋಮುಖ ಬೆಳವಣಿಗೆಯ ಮೂಲಕ ಒಂದು ಸದೃಢ, ಸಂಪದ್ಭರಿತ ಹೊಸ ಸಮಾಜ, ದೇಶ ಹಾಗೂ ಜಗತ್ತನ್ನು ಪರಸ್ಪರ ಮಧುರ ಸಂಬಂಧ, ನಂಬಿಕೆ, ಶಾಂತಿಯುತ ಮಾರ್ಗಗಳಿಂದ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವ ಹಾಗೂ ಶೋಷಣಾಮುಕ್ತ ತತ್ತ್ವಗಳ ಆಧಾರದ ಮೇಲೆ ಸ್ಥಾಪಿಸುವುದು (J.S. Mathur, Gandhiji on Growth and Development – Some Issues – Journal on Gandhi Studies,Vol. 17, 25-10 -1979).
ಗಾಂಧಿಯವರು ವಾಸ್ತವಿಕ ಪ್ರಗತಿ (Economic Progress) ಮತ್ತು ಆರ್ಥಿಕ ಪ್ರಗತಿಯ (Economic Progress) ನಡುವಣ ವ್ಯತ್ಯಾಸವನ್ನು ತಿಳಿಸಿದ್ದಾರೆ. ವಾಸ್ತವಿಕ ಪ್ರಗತಿ ಎಂದರೆ ಮನುಷ್ಯನ ನೈತಿಕ ಪ್ರಗತಿ ಅಥವಾ ಅಹಿಂಸೆಯ ಮೂಲಕ ಸತ್ಯಶೋಧನೆ ಮಾಡುವ ತವಕ. ಆರ್ಥಿಕಪ್ರಗತಿ ಎಂದರೆ ಭೌತಿಕ ಸುಖ-ಸಂತೋಷಗಳ ಸುಧಾರಣೆ ಹಾಗೂ ವೃದ್ಧಿಮಾಡುವುದು. ಇವೆರಡರ ಸುಮಧುರ ಸಮನ್ವಯ ಅಗತ್ಯ. ಆದ್ದರಿಂದ ಮನುಷ್ಯನ ನೈತಿಕ ಪ್ರಗತಿಗೆ ಸ್ವಲ್ಪಮಟ್ಟಿನ ಭೌತಿಕಪ್ರಗತಿಯ ಅಗತ್ಯವಿದೆ ಎಂದು ಹೇಳಿದ್ದಾರೆ (D.G. Tendulkar, Mahatma Gandhi, Vol. I, pp. 193-197).
ಭಾರತದ ಅಥವಾ ಇನ್ನಾವುದೇ ದೇಶದ ಆರ್ಥಿಕ ಸಂವಿಧಾನ ಯಾವ ರೀತಿ ಇರಬೇಕೆಂದರೆ ಪ್ರತಿಯೊಬ್ಬ ಪ್ರಜೆಗೂ ಅಗತ್ಯ ಪ್ರಮಾಣದ ಸರಕು-ಸೇವೆಗಳು
ದೊರೆತು ಅವನನ್ನು ಹಸಿವಿನಿಂದ ಮುಕ್ತನನ್ನಾಗಿ ಮಾಡುವ ಹಾಗೆ ಇರಬೇಕು ಎಂದು ಅವರು ತಿಳಿಸಿದ್ದಾರೆ (ಯಂಗ್ ಇಂಡಿಯಾ, 15-11-1928). ಬಡವರಿಗೆ ಅನ್ನವೇ ಆಧ್ಯಾತ್ಮಿಕತೆ. ಆದ್ದರಿಂದ ಅವರ ಅಭ್ಯುದಯದ ಕಲ್ಪನೆಯಲ್ಲಿ ಮೊದಲು ಹಿಂದುಳಿದವರ, ದೀನದಲಿತರ, ದುರ್ಬಲರ ಬಡತನವನ್ನು ದೂರಮಾಡುವುದಾಗಿದೆ. ಹೀಗಾಗಿ ಅವರು ತಮ್ಮ ಕಾರ್ಯಕ್ರಮಗಳಲ್ಲಿ ಇದಕ್ಕೆ ಹೆಚ್ಚಿನ ಮಹತ್ತ್ವ ನೀಡಿದ್ದಾರೆ. ಜನಸಾಮಾನ್ಯರ ಆರ್ಥಿಕ ಶೋಷಣೆಯನ್ನು ನಿರ್ಮೂಲಮಾಡಬೇಕಾದರೆ ರಾಜಕೀಯಸ್ವಾತಂತ್ರ್ಯ ನಿಜವಾದ ಆರ್ಥಿಕಸ್ವಾತಂತ್ರ್ಯವನ್ನು ಒಳಗೊಂಡಿರಬೇಕು. ಅವರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಜೀವನಾವಶ್ಯಕಗಳು ದೊರೆಯಬೇಕು. “ಪ್ರತಿಯೊಬ್ಬರಿಗೂ ಸಮತೋಲನದ ಆಹಾರ, ವಾಸಕ್ಕೆ ಯೋಗ್ಯವಾದ ಮನೆ, ಮಕ್ಕಳಿಗೆ ಬೇಕಾದ ಅಗತ್ಯ ಶಿಕ್ಷಣ ಮತ್ತು ಅಗತ್ಯ ವೈದ್ಯಕೀಯ ಸೇವೆಗಳು ದೊರಕಬೇಕು” (ಹರಿಜನ, 31-3-1946). ಈ ಎಲ್ಲ ಜೀವನೋಪಾಯಗಳು ಎಲ್ಲರಿಗೂ ದೊರೆತ ನಂತರ ಅವರು ಇತರ ವಸ್ತುಗಳ ದೊರಕುವಿಕೆ ಅಗತ್ಯವೆಂದು ಕಂಡುಬಂದಲ್ಲಿ ಅವುಗಳ ಉತ್ಪಾದನೆಯ ಪಟ್ಟಿಯನ್ನು ಹೆಚ್ಚಿಸಬಹುದು. ಆದರೆ ಅದು ಒಂದು ಮಟ್ಟದವರೆಗೆ ಮಾತ್ರ. ಅಪರಿಮಿತ ಪ್ರಮಾಣದವರೆಗೆ ಅಲ್ಲ (Vide page 147, No. 5-1. 5). ಗಾಂಧಿಯವರ ದೃಷ್ಟಿಯಲ್ಲಿ ಭೌತಿಕಪ್ರಗತಿ ಒಂದು ಹಂತದ ನಂತರ ಮನುಷ್ಯನ ನೈತಿಕಪ್ರಗತಿಗೆ ಅಡ್ಡಿಯಾಗುತ್ತದೆ.
ಭೌತಿಕಪ್ರಗತಿ ಎಲ್ಲಿಯವರೆಗೆ ಬಡತನವನ್ನು ನಿರ್ಮೂಲ ಮಾಡುತ್ತದೆಯೋ ಅಲ್ಲಿಯವರೆಗೆ ಅದು ನಿಜವಾದ ಪ್ರಗತಿಯಾಗುತ್ತದೆ. ಅದರ ನಂತರದ ಹಂತದಿಂದ ಅದು ಕೆಟ್ಟದ್ದಾಗುತ್ತದೆ, ವಿನಾಶಕಾರಿಯಾಗುತ್ತದೆ ಮತ್ತು ನೈತಿಕಪ್ರಗತಿಗೆ ಅಥವಾ ವಾಸ್ತವಿಕ ಪ್ರಗತಿಗೆ ಅಡ್ಡಬರುತ್ತದೆ, ಸಂಘರ್ಷಕ್ಕೆ ದಾರಿಯಾಗುತ್ತದೆ. ಗಾಂಧಿಯವರು ಮನುಷ್ಯನ ಆತ್ಮೋದ್ಧಾರಕ್ಕೆ ಮಹತ್ತ್ವ ನೀಡಿದ ಕಾರಣ ಸರಳ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ಅವರು ಹೇಳುತ್ತಾರೆ – “ನಾನು ಅಭಿವೃದ್ಧಿಯನ್ನು ಇಚ್ಛಿಸುತ್ತೇನೆ. ನಾನು ಪ್ರತಿ ವ್ಯಕ್ತಿಯೂ ತನ್ನತನವನ್ನು ಬೆಳೆಸಿಕೊಳ್ಳಬೇಕೆಂದು ಹೇಳುತ್ತೇನೆ. ನಾನು ಸ್ವಾತಂತ್ರ್ಯವನ್ನು ಆಶಿಸುತ್ತೇನೆ; ಆದರೆ ಇವೆಲ್ಲವೂ ಮನುಷ್ಯನ ಆತ್ಮೋದ್ಧಾರಕ್ಕಾಗಿರಬೇಕು” (ಯಂಗ್ ಇಂಡಿಯಾ, 13-10-1921). ಈ ರೀತಿ ಗಾಂಧಿಯವರು ಅರ್ಥಶಾಸ್ತ್ರವನ್ನು ಆಧ್ಯಾತ್ಮಿಕವನ್ನಾಗಿ ಮಾಡಲು ಯತ್ನಿಸಿದರು ಎಂದು ಹೇಳಬಹುದು.
ಅವರು ಪ್ರತಿಯೊಂದು ದೃಷ್ಟಿಕೋನದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ವಿಶ್ಲೇಷಣೆ ಮಾಡುವಾಗ ಪ್ರತಿಯೊಂದಕ್ಕೂ ಆಧ್ಯಾತ್ಮದ ಸ್ಪರ್ಶ ನೀಡಿದ್ದಾರೆ.
ಜೀವನದ ಪ್ರತಿಯೊಂದು ಸಮಸ್ಯೆಗೂ ಆರ್ಥಿಕ ದೃಷ್ಟಿಕೋನ ಒಂದೇ ಇದ್ದರೆ ನಿಜವಾದ ಸಲಹೆಗಳನ್ನು ಕೊಡಲು ವಿಫಲವಾಗುತ್ತದೆ. ಆದ್ದರಿಂದ ಅವರು ಸಮಾಜ ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ಸಂಘಟಿತವಾದಾಗ ಈ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದರು.
ಗಾಂಧಿಯವರ ಆರ್ಥಿಕ ಅಭಿವೃದ್ಧಿಯ ದೃಷ್ಟಿಕೋನ ವಿಶಾಲ ಅರ್ಥವನ್ನು ಹೊಂದಿದೆ. ಅವರು ಮಾನವನು ಮೂಲಭೂತ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯ ಗುರಿಯ ಜೊತೆಗೆ ಸ್ವ-ಇಚ್ಛೆಯಿಂದ ತನ್ನ ಆಸೆಗಳನ್ನು ಕಡಿತಗೊಳಿಸಿಕೊಂಡು, ಸ್ವ-ನಿಯಂತ್ರಣಗಳನ್ನು ಹಾಕಿಕೊಂಡು, ಭೌತಿಕ ಸುಖ-ಸಂತೋಷಗಳಿಂದ ಮುಕ್ತಿ ಪಡೆದು ಜೀವನದ ಅತ್ಯಂತ ಮುಖ್ಯ ಉದ್ದೇಶವಾದ ಆತ್ಮಸಾಕ್ಷಾತ್ಕಾರ ಮತ್ತು ಪರಮೇಶ್ವರನ ಸಾಕ್ಷಾತ್ಕಾರವನ್ನು ಪಡೆಯುವ ಪಯಣಕ್ಕೆ ಹೆಚ್ಚಿನ ಒತ್ತುನೀಡಿದ್ದಾರೆ. ಹೀಗೆ ಗಾಂಧಿಯವರ ಆರ್ಥಿಕ ದೃಷ್ಟಿಕೋನ ಕೇವಲ ಆರ್ಥಿಕ ಹಾಗೂ ಸಾಮಾಜಿಕ ಸಮೃದ್ಧಿ ಮತ್ತು ಮೌಲ್ಯಗಳನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದ ಜೊತೆಗೆ ಅಧಿಕಾಂಶ ಆಧ್ಯಾತ್ಮಿಕ, ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಒತ್ತು ನೀಡುತ್ತದೆ. ಅಭಿವೃದ್ಧಿ ವಿಶಾಲಾರ್ಥದಲ್ಲಿ ಜೀವನದ ಗುಣಮಟ್ಟವನ್ನು (Quality of Life) ಹೆಚ್ಚಿಸುವುದೇ ಆಗಿದೆ. ಆದರೆ
ಜೀವನಮಟ್ಟವನ್ನು ಸ್ಪಷ್ಟವಾಗಿ ನಿರ್ಧರಿಸಲು ಅನೇಕ ವಾಸ್ತವಿಕ ಅಡಚಣೆಗಳಿವೆ. ಇಷ್ಟಾದರೂ ಎಲ್ಲ ವ್ಯಕ್ತಿಗಳಿಗೂ ಲಾಭದಾಯಕ ಉದ್ಯೋಗಸೃಷ್ಟಿ, ಕೆಲಸ ಮತ್ತು ವಿಶ್ರಾಂತಿಯ ನಡುವೆ ನಿರೀಕ್ಷಿತ ಸಮತೋಲನ, ಉತ್ತಮ ಹಾಗೂ ವೈವಿಧ್ಯಮಯ ಅನುಭೋಗ, ವಿವಿಧ ರೀತಿಯ ಮಾಲಿನ್ಯ ನಿಯಂತ್ರಣ ಮತ್ತು ಸಾಂಸ್ಕೃತಿಕ ಮಟ್ಟವನ್ನು ಹೆಚ್ಚಿಸುವ ಪ್ರಯತ್ನವಾದಾಗ ಜೀವನದ ಗುಣಮಟ್ಟ ಹೆಚ್ಚಲು ಸಾಧ್ಯವಾಗುವುದು. ಯಾವುದೇ ದೇಶದ ಪ್ರಗತಿಯನ್ನು ಕೇವಲ ಅದು ಉತ್ಪಾದಿಸುವ ಭೌತಿಕ ಸುಖ-ಸಾಧನಗಳ ಪ್ರಮಾಣದ ಮೇಲೆ ಅಳೆಯದೆ ಆ ದೇಶದ ಜನರ ನೈತಿಕ ಮೌಲ್ಯಗಳ ಮಟ್ಟದಿಂದ ಅಳೆಯಬೇಕಾಗುತ್ತದೆ.
ಎರಡನೇ ಮಹಾಯುದ್ಧದ ನಂತರದ ದಶಕಗಳಲ್ಲಿ ಅಭಿವೃದ್ಧಿಯ ಪರಿಕಲ್ಪನೆಗೆ ಹೆಚ್ಚಿನ ಮಹತ್ತ್ವ ದೊರೆತರೂ ಸಹ ಅದಕ್ಕೆ ಸ್ಪಷ್ಟವಾದ ಅರ್ಥವನ್ನು ನೀಡಿರುವುದು ಈಚಿನ ದಿನಗಳಲ್ಲಿ ಮಾತ್ರ. ಆರಂಭದ ದಿನಗಳಲ್ಲಿ ಅಭಿವೃದ್ಧಿ ಪದಕ್ಕೆ ಅರ್ಥ ಕೇವಲ ಆರ್ಥಿಕ ಅಭಿವೃದ್ಧಿಯಾಗಿತ್ತು. ಇತ್ತೀಚಿನ ಅರ್ಥಶಾಸ್ತ್ರಜ್ಞರು ಆರ್ಥಿಕ ಅಭಿವೃದ್ಧಿಗೆ ಅನೇಕ ಮುಖಗಳಿರುವುದನ್ನು ಮನಗಂಡು ಆರ್ಥಿಕ ಹಾಗೂ ಆರ್ಥಿಕೇತರ ಅಂಶಗಳ ಸಮನ್ವಯ ಮಾಡಿ ವಿಶಾಲಾರ್ಥವನ್ನು ನೀಡಿದ್ದಾರೆ.
ಇತ್ತೀಚೆಗೆ ಅಭಿವೃದ್ಧಿ ಎನ್ನುವ ಪದ ಸಾಮಾಜಿಕ, ರಾಜಕೀಯ, ವೇದಾಂತ, ಆರ್ಥಿಕ ಹಾಗೂ ಸಾಂಸ್ಕೃತಿಕ ಅರ್ಥಗಳನ್ನು ಒಳಗೊಂಡು ವಿಶಾಲವಾದ ಅರ್ಥವನ್ನು ಪಡೆದುಕೊಂಡಿದೆ. ಆದ್ದರಿಂದ ಅಭಿವೃದ್ಧಿ ಪದಕ್ಕೆ ಈ ವ್ಯಾಖ್ಯೆಯನ್ನು ನೀಡಬಹುದಾಗಿದೆ: “ಅಭಿವೃದ್ಧಿಯು ಒಂದು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳ ಹಾಗೂ ಮೌಲ್ಯ ಪದ್ಧತಿಯ ಸಾಮಥ್ರ್ಯವನ್ನು ಬದಲಾಗುತ್ತಿರುವ ವಿವಿಧ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಸುಧಾರಿಸುವ ಒಂದು ಕಾರ್ಯವಿಧಾನವಾಗಿದೆ” (United Nations Symposium Social Policy and Planning in International Social Development 1971, p.21).
ಗಾಂಧಿಯವರ ಸರ್ವೋದಯ ಪರಿಕಲ್ಪನೆಯ ಪ್ರಕಾರ ಮಾನವನ ವಿವಿಧ ಕ್ಷೇತ್ರಗಳಾದ ಶಾರೀರಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿ ಆದಾಗ ಮಾತ್ರ ಸರ್ವೋದಯವಾಗುವುದು. ಆದಕಾರಣ ಮೇಲೆ ಕೊಟ್ಟಿರುವ ಅಭಿವೃದ್ಧಿ ಪದದ ವ್ಯಾಖ್ಯೆಯನ್ನು ಗಾಂಧಿಯವರ ಸರ್ವೋದಯ ಸಮರ್ಥನೆ ಮಾಡುತ್ತದೆ. ಪ್ರಸಿದ್ಧ ಅಭಿವೃದ್ಧಿ ಅರ್ಥಶಾಸ್ತ್ರಜ್ಞರಾದ ಗುನ್ನಾರ್ ಮಿರಾಲ್ಡ್, ಬೆಂಜಮಿನ್ ಹಿಗ್ಗಿನ್ಸ್, ಮೈರ್ ಮುಂತಾದವರ ಅಭಿಪ್ರಾಯದಲ್ಲಿ ‘ಆರ್ಥಿಕ ಅಭಿವೃದ್ಧಿ’, ‘ಸಾಮಾಜಿಕ ಅಭಿವೃದ್ಧಿ’ಗಳ ನಡುವಿನ ವ್ಯತ್ಯಾಸವನ್ನು ತೆಗೆದು ಆರ್ಥಿಕ ಅಭಿವೃದ್ಧಿಯ ಎಲ್ಲ ಅಂಶಗಳನ್ನು ಸೇರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ. ಮನುಷ್ಯನ ಸರ್ವಾಂಗೀಣ ಉನ್ನತಿ ಆಗಬೇಕೆಂದು ತಿಳಿಸಿದ ಗಾಂಧಿಯವರ ಅಭಿಪ್ರಾಯವನ್ನು ಪ್ರಪಂಚದ ಇನ್ನಿತರ ಅರ್ಥಶಾಸ್ತ್ರಜ್ಞರು ಸಮರ್ಥನೆ ಮಾಡುತ್ತಿರುವುದು ಸಂತೋಷದ ಸಂಗತಿ (Gunnar Myrdal-Asian Drama, Benjamin Higgins. Planning Allocation for Social Development in International Social Development Review and Meier – Leading Issues in Economic Development 1971, p.21).
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಅಭಿವೃದ್ಧಿ ಗುರಿಯ ಆವಶ್ಯಕತೆಯನ್ನು ಬ್ರಹ್ಮಾನಂದ ಈ ರೀತಿ ವಿವರಿಸುತ್ತಾರೆ: “ಇಂದಿನ ಜನಾಂಗ ಮುಂದಿನ ಜನಾಂಗದ ಹಿತವನ್ನು ಕಾಪಾಡುವ ಸಲುವಾಗಿ, ಇಂದಿನ ಜನಾಂಗದ ಬಹಳಷ್ಟು ಜನರು ಸಭ್ಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲವಾದ ಕಾರಣ, ಈಗಿರುವ ಉತ್ಪಾದನಾ ನೆಲೆಯನ್ನು ವಿಸ್ತರಿಸಿ ಆರ್ಥಿಕ ಹೂಡುವಳಿಗಳ (Inputs) ಭೌತಿಕ ಉತ್ಪಾದನಾ ಶಕ್ತಿಯನ್ನು ಹೆಚ್ಚಿಸದ ಹೊರತು ಎಲ್ಲರಿಗೂ ಕನಿಷ್ಠ ಮಟ್ಟದ ನೈಜಆದಾಯ(Real Income)ವನ್ನು ನೋಡಲು ಸಾಧ್ಯವಿಲ್ಲ. ಹೀಗೆ ಅವರ ದೃಷ್ಟಿಯಲ್ಲಿ ಬಡತನವನ್ನು ನಿವಾರಿಸಿ ಜನರಿಗೆ ಕನಿಷ್ಠ ಅಗತ್ಯಗಳನ್ನು ಕಲ್ಪಿಸಿಕೊಡಲು ಆರ್ಥಿಕ ಅಭಿವೃದ್ಧಿ ಅತ್ಯಂತ ಅಗತ್ಯ ಎಂದು ಹೇಳಿದ್ದಾರೆ (P.R. Brahmananda, Integrated Gandhian Society and Total Revolution).
ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದರ ಜೊತೆಗೆ ಅಭಿವೃದ್ಧಿಕಾರ್ಯ ಪದ್ಧತಿ ಸಾಮಾಜಿಕ ಕಾರ್ಯ ಸುಲಲಿತವಾಗಿ ನಡೆಯಲು ಅಗತ್ಯವಾದ ಅನೇಕ ರೀತಿಯ ಸಮತೋಲನವನ್ನು ಭಂಗಗೊಳಿಸದೆ ಸಮರಸತೆಯನ್ನು ಸಾಧಿಸಲು ನೆರವಾಗಬೇಕು. ತಾತ್ತ್ವಿಕ ಸಮತೋಲನ (Philosophical balance ) ಸಾಧಿಸುವ ಸಲುವಾಗಿ ಬೌದ್ಧಿಕ ಮತ್ತು ನೈತಿಕ ಪ್ರಗತಿಯ ಸಮತೋಲನ ಸಾಧಿಸಬೇಕು. ರಚನಾತ್ಮಕ ಸಮತೋಲನ (Structural balance) ಸಾಧಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ನಗರಾಭಿವೃದ್ಧಿಗಳ ಸಮತೋಲನ ಸಾಧಿಸಬೇಕು. ಪರಿಸರ ಸಮತೋಲನ ಸಾಧಿಸಲು (Ecological Balance ) ಮಾನವ ಮತ್ತು ಪರಿಸರದ ನಡುವೆ ಸಮತೋಲನ ಸಾಧಿಸಬೇಕು. ತಾಂತ್ರಿಕ ಸಮತೋಲನ ಸಾಧಿಸಲು (Technological balance) ಬೃಹತ್ ಪ್ರಮಾಣದ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಮನ್ವಯ ಮಾಡಬೇಕು. ವಿತರಣಾ ಸಮತೋಲನ ಸಾಧಿಸಲು (Balance in Income and Wealth Distrubution) ಧರ್ಮದರ್ಶಿ ತತ್ತ್ವದ ಅನುಸರಣೆ ಮಾಡುವುದರ ಮೂಲಕ ಖಾಸಗಿ ಬಂಡವಾಳಶಾಹಿಗಳಿಂದ ಆಗುವ ಶೋಷಣೆ ಮತ್ತು ಆರ್ಥಿಕ ಸಮಾನತೆಯನ್ನು ತೊಲಗಿಸಬಹುದು ಮತ್ತು ಹಿಂಸೆಯನ್ನು ಪ್ರತಿಪಾದಿಸುವ ಮತ್ತು ಸ್ವಾತಂತ್ರ್ಯವನ್ನು ಹರಣಮಾಡುವ ಸಮತಾವಾದಿ ತತ್ತ್ವದಿಂದ ದೂರವಿರಲು ಸಾಧ್ಯವಾಗುವುದು. ಪ್ರೊ. ಎ.ಎಂ. ಹಕ್ ಅವರ ಪ್ರಕಾರ ಮೇಲೆ ತಿಳಿಸಿದ ಸಮತೋಲನಗಳನ್ನು ಸಾಧಿಸುವುದರ ಮೂಲಕ ಗಾಂಧಿಯವರು ಪ್ರತಿಪಾದಿಸಿದ ಚಲನಶೀಲ ಸಮತೋಲನ ಸ್ಥಿತಿ(Dynamic Equilibrium Condition)ಯನ್ನು ಸಾಧಿಸಲು ಸಾಧ್ಯವಾಗುವುದು (A.M. Haque, Economics of Growth and Employment 1981, pp. 572-78). ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಇವೆರಡೂ ಪರಸ್ಪರ ಅವಲಂಬಿಗಳಾಗಿವೆ. ಗಾಂಧಿಯವರು ವಿಶೇಷವಾಗಿ ನಿರುದ್ಯೋಗ ಮತ್ತು ಅಪೂರ್ಣ ಉದ್ಯೋಗವನ್ನು ನಿವಾರಿಸುವಂತಹ ಆರ್ಥಿಕ ಬೆಳವಣಿಗೆಯ ಮಾದರಿಯನ್ನು ಇಚ್ಛಿಸಿದ್ದರು. ಗಾಂಧಿಯವರು ಉದ್ಯೋಗವನ್ನು ಕೇವಲ ಒಂದು ಆರ್ಥಿಕ ಪರಿಕಲ್ಪನೆ ಎಂದು ಭಾವಿಸದೆ, ಅದನ್ನು ಒಂದು ನೈತಿಕ ಪರಿಕಲ್ಪನೆ ಎಂದೂ ಪರಿಗಣಿಸಿದ್ದರು. ಉದ್ಯೋಗ ಶೋಷಣಾಮುಕ್ತ ಆದಾಯದ ಮೂಲ ಮತ್ತು ಸ್ವಂತಿಕೆಯನ್ನು ಮನವರಿಕೆಮಾಡುವ ಒಂದು ಪರಿಣಾಮಕಾರಿ ಸಾಧನ ಎಂದು ಭಾವಿಸಿದ್ದರು. ಹೀಗೆ ಗಾಂಧಿಯವರು ಆರ್ಥಿಕ ಅಭಿವೃದ್ಧಿ ಎಂದರೆ ಮಾನವರ ಸರ್ವಾಂಗೀಣ ಬೆಳವಣಿಗೆ ಎಂದು ಸಾರಿ ಹೇಳಿದರು.
1950ರ ದಶಕಗಳ ಮೊದಲು ಅಭಿವೃದ್ಧಿ ಕಲ್ಪನೆ ದೇಶದ ಬಡತನವನ್ನು ನಿವಾರಿಸಲು ಇರುವ ಬಹುಮುಖ್ಯ ಸಾಧನ ಎಂದು ಪರಿಗಣಿಸಲಾಗಿತ್ತು. ಆರ್ಥಿಕ ಬೆಳವಣಿಗೆ ಈ ಕೆಳಕಂಡ ಮೂರು ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ನೀಡುವುದು ಎನ್ನುವ ನಂಬಿಕೆ ಬಲವಾಗಿತ್ತು. ಅವುಗಳೆಂದರೆ:
1. ಆರ್ಥಿಕ ಬೆಳವಣಿಗೆಯ ಲಾಭ ಬಡಜನತೆಗೆ ಮುಕ್ತಮಾರುಕಟ್ಟೆಯ ಮೂಲಕ ತಲಪುವುದು. ತನ್ಮೂಲಕ ಶ್ರಮಿಕರಿಗೆ ಬೇಡಿಕೆ ಹೆಚ್ಚಿ ಅವರ ಉತ್ಪಾದನಾ ಶಕ್ತಿ ಏರಿಕೆಯಾಗಿ ಕೂಲಿಯ ದರದ ಪ್ರಮಾಣ ಹೆಚ್ಚಲು ಸಹಕಾರಿಯಾಗುವುದು.
2. ಸರ್ಕಾರಗಳು ಬಡತನ ನಿವಾರಣೆಗೆ ತನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದರ ಮೂಲಕ ಆರ್ಥಿಕ ಬೆಳವಣಿಗೆಯ ಲಾಭವನ್ನು ಖಜಾನೆನೀತಿ
(Fiscal Policy) ಮತ್ತು ಸಾಮಾಜಿಕ ಸೇವೆಗಳ ಮೂಲಕ ತಲಪಿಸುವ ಪ್ರಯತ್ನ ಮಾಡುವುದು.
3. ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಬಡತನದ ಸ್ಥಿತಿ ಒಂದು ಪ್ರಮುಖ ಸಮಸ್ಯೆ ಆಗಲಾರದು.
ಆದರೆ ಅನುಭವದ ಪ್ರಕಾರ ಈ ಮೂರೂ ನಂಬಿಕೆಗಳು ಸುಳ್ಳಾದವು. ಹೆಚ್ಚಿನ ಆದಾಯ ಬಡವರಿಗೆ ತಲಪಲು ಸಾಧ್ಯವಾಗಲಿಲ್ಲ ಮತ್ತು ಸರ್ಕಾರಗಳು ಬಡತನ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದವು. ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ಕಡಮೆ ಮಾಡಲು ಸಾಧ್ಯವಾಗದೆ ಹೋಯಿತು. ಆರ್ಥಿಕ ಸಮಾನತೆಯ ಮೂಲಕ ಆರ್ಥಿಕ ಪ್ರಗತಿ ಸಾಧ್ಯ ಎನ್ನುವ ಕಲ್ಪನೆ ಸುಳ್ಳಾಯಿತು. ಬಡತನ ನಿವಾರಣೆಯ ಪ್ರಮಾಣವನ್ನು ಗಮನಿಸಿದಾಗ ಕಳೆದ 25 ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆ ತನ್ನ ಉದ್ದೇಶದಲ್ಲಿ ವಿಫಲವಾಗಿರುವುದು ಕಂಡುಬರುತ್ತಿದೆ. ಬದಲಿಗೆ ಅದು ಇಬ್ಬಗೆಯನ್ನು (Dualism) ನಿರ್ಮಿಸಿತು. ಆಧುನಿಕ ಮತ್ತು ನಗರ ಪ್ರದೇಶಗಳಲ್ಲಿರುವ ಬೃಹತ್ ಪ್ರಮಾಣದ ಕೈಗಾರಿಕೆಗಳ ವ್ಯಾಪಕ ವಿಸ್ತಾರವಾಗಿ ಗ್ರಾಮೀಣ ಪ್ರದೇಶಗಳ ಆರ್ಥಿಕ ಪ್ರಗತಿ ಜಡವಾಗಲು ಕಾರಣವಾಯಿತು.
ಗುನ್ನಾರ್ ಮಿರ್ಡಾಲ್ ಮತ್ತು ಇತರರು ಇಂದಿನ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಯ ದೃಷ್ಟಿಕೋನಗಳ ಬಗ್ಗೆ ತಮ್ಮ ಅಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಕಾರಣ ಅದು ಉತ್ಪಾದಕತೆ, ಆದಾಯ ಮತ್ತು ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಪಾಲ್ ಸ್ಟ್ರೀಟನ್ ಹೀಗೆ ಹೇಳುತ್ತಾರೆ – “ಬಡ ರೈತರ ಉತ್ಪಾದಕಶಕ್ತಿಯನ್ನು ಹೆಚ್ಚಿಸುವುದರ ಮೂಲಕ ಅವರ ಆದಾಯ ಹೆಚ್ಚಿಸಲು ಸಾಧ್ಯವಾಗದು. ಬದಲಿಗೆ ಅದು ಆಹಾರಪದಾರ್ಥಗಳ ಬೆಲೆಯನ್ನು ಕಡಮೆ ಮಾಡಿ ನಗರ ಪ್ರದೇಶಗಳಲ್ಲಿ ವಾಸಿಸುವ ಅನುಭೋಗಿಗಳಿಗೆ ಹೆಚ್ಚಿನ ಸಹಾಯವಾಗುವುದು.” ಪೂರ್ಣ ಪ್ರಮಾಣದಲ್ಲಿ ಆದಾಯ ಹೆಚ್ಚಿದರೂ ಈ ಬೆಳವಣಿಗೆಯ ದೃಷ್ಟಿಕೋನದಲ್ಲಿ ಅನೇಕ ನ್ಯೂನತೆಗಳನ್ನು ಗುರುತಿಸಬಹುದು. ಉದ್ಯೋಗದಲ್ಲಿ ನಿರತನಾದ ಒಬ್ಬ ಕಾರ್ಮಿಕ ಸಂಪಾದಿಸಿದ,
ಸ್ವಯಂ ಉದ್ಯೋಗದಲ್ಲಿ ನಿರತರಾದ ರೈತನ ಆದಾಯ ಅಥವಾ ಒಬ್ಬ ಕರಕುಶಲಕರ್ಮಿಯ ತಲಾದಾಯದ ಹೆಚ್ಚಳ ಅವನ ಜೀವನಾವಶ್ಯಕಗಳನ್ನು ಪೂರೈಸಲು ಅದಕ್ಷ ಮಾನದಂಡವಾಗುತ್ತದೆ ಅಥವಾ ಅವನು ಖರ್ಚುಮಾಡುವ ಹಣದ ಪ್ರಮಾಣ ಅವುಗಳ ಮೇಲೆ ಕಡಮೆ ಆದರೂ ಆಗಬಹುದು.
ಹಣದ ಆದಾಯವನ್ನು ಹೆಚ್ಚುಮಾಡುವ ದೃಷ್ಟಿಕೋನಕ್ಕೆ ಇನ್ನೊಂದು ಟೀಕೆ ಎಂದರೆ ಅಗತ್ಯಪ್ರಮಾಣದ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಸಾಕಷ್ಟು ಆದಾಯವಿದ್ದರೂ ಕೆಲವು ಜೀವನಾವಶ್ಯಕಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಅಥವಾ ಖಾಸಗಿ ಮಾರುಕಟ್ಟೆಯಲ್ಲಿ ಪೂರ್ಣಪ್ರಮಾಣದಲ್ಲಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಆರೋಗ್ಯ, ಶಿಕ್ಷಣ, ಶುದ್ಧ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಇತ್ಯಾದಿಗಳನ್ನು ಕೇವಲ ಸರ್ಕಾರೀ ಸೇವಾಸಂಸ್ಥೆಗಳ ಮೂಲಕ ಮಾತ್ರ ಕೊಡಲು ಸಾಧ್ಯ. ಇದರ ಜೊತೆಗೆ ಈ ದೃಷ್ಟಿಕೋನ ಉದ್ಯೋಗ ಪಡೆಯಲು ಸಾಧ್ಯವಿಲ್ಲದಂಥವರ ಆದಾಯದ ಬಗ್ಗೆ ಹಾಗೂ ಭೌತಿಕವಲ್ಲದ ಅಗತ್ಯಗಳ ಬಗ್ಗೆ ಯಾವ ವಿವರಣೆಯನ್ನೂ ನೀಡಿಲ್ಲ. ಆದ್ದರಿಂದ ಆದಾಯ ಹೆಚ್ಚಿಸುವ ದೃಷ್ಟಿಕೋನಕ್ಕಿಂತ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವ ದೃಷ್ಟಿಕೋನ ಹೆಚ್ಚು ವ್ಯಾವಹಾರಿಕ ಹಾಗೂ ಮಹತ್ತ್ವಪೂರ್ಣವಾಗಿದೆ. ಯಾವ ಆರ್ಥಿಕ ವ್ಯವಸ್ಥೆಯಲ್ಲಿ ಬಹುಜನರ ಜೀವನಮಟ್ಟ ಕೆಳಗಿದೆಯೋ ಅಲ್ಲಿ ಅವರಿಗೆ ಜೀವನೋಪಾಯಗಳನ್ನು ಒದಗಿಸುವ ದೃಷ್ಟಿಕೋನ ಹೆಚ್ಚು ಪರಿಣಾಮಕಾರಿಯಾಗುವುದು. ಮಾನವರ ಮೂಲಭೂತ ಅಗತ್ಯಗಳ ಪೂರೈಕೆಗೆ ಇಂದು ಹೆಚ್ಚು ಗಮನ ನೀಡುತ್ತಿರುವುದು ತಾರ್ಕಿಕವಾಗಿ ಅಭಿವೃದ್ಧಿ ಬೆಳವಣಿಗೆಯ ಚಿಂತನೆಯಲ್ಲಿ ಒಂದು ಹೊಸ ಮೈಲಿಗಲ್ಲು ಎಂದೇ ಹೇಳಬೇಕು. ಈ ದೃಷ್ಟಿಕೋನ ಅಮೂರ್ತತೆಯಿಂದ ಮೂರ್ತತೆ ಮತ್ತು ಅಸ್ಪಷ್ಟತೆಯಿಂದ ಸ್ಪಷ್ಟತೆಯ ಕಡೆಗೆ ಹೆಜ್ಜೆ ಇಡುತ್ತಿದೆ. ಗಾಂಧಿ ತೋರಿದ ಮಾರ್ಗದ ಕಡೆ ಇಂದು ಇಡೀ ಜಗತ್ತು ತನ್ನ ಮುಖ ಮಾಡುತ್ತಿರುವುದು ಶುಭಸೂಚನೆ.
ಜೀವನದ ಮೂಲಭೂತ ಅಗತ್ಯಗಳಾದ ವೈದ್ಯಕೀಯ ಸೇವೆ, ಅಗತ್ಯ ಶಿಕ್ಷಣ, ಸಂತುಲಿತ ಸಮತೋಲಿತ ಆಹಾರ ಇತ್ಯಾದಿಗಳನ್ನು ಸುಧಾರಿತ ಮತ್ತು ಪುನರ್ನಿರ್ದೇಶಿಸಿದ ಸಾರ್ವಜನಿಕ ಸೇವೆಗಳಾದ ಗ್ರಾಮೀಣ ನೀರಿನ ಪೂರೈಕೆ, ನೈರ್ಮಲ್ಯದ ವ್ಯವಸ್ಥೆ, ಪ್ರಾಥಮಿಕ ಶಾಲೆಗಳ ಮೂಲಕ ಕೊಡುವುದಕ್ಕೆ ಹೆಚ್ಚಿನ ಪ್ರಾಮುಖ್ಯವನ್ನು ಈ ದೃಷ್ಟಿಕೋನಕ್ಕೆ ನೀಡಲಾಗಿದೆ. ಈ ರೀತಿ ನೇರವಾಗಿ ಸರಕು ಮತ್ತು ಸೇವೆಗಳನ್ನು ಕೊಡುವುದರ ಮೂಲಕ ಬಡತನವನ್ನು ಬಹಳ ಶೀಘ್ರದಲ್ಲಿ ಪರಿಹರಿಸಲು ಸಾಧ್ಯವಾಗುತ್ತದೆ. ಎನ್.ಎಲ್. ಹಿಕ್ಸ್ ಅವರು ಹೇಳುವಂತೆ, “ಮೂಲಭೂತ ಜೀವನೋಪಯೋಗಿ ದೃಷ್ಟಿಕೋನದ ಅಭಿವೃದ್ಧಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವಲ್ಲಿ ಮಹತ್ತ್ವದ ಪಾತ್ರ ವಹಿಸುತ್ತದೆ (N.L. Hicks. ‘Is there a trade off between both Growth and Basic Needs’, 1980, Vol. 26).
ಪಾಲ್ ಸ್ಟ್ರೀಟನ್ (Paul Streeten) ಹೇಳುವಂತೆ, “ಮೂಲಭೂತ ಅಗತ್ಯಗಳ ಪೂರೈಕೆಯ ದೃಷ್ಟಿಕೋನ ವಿಶಾಲವಾದ ರಾಜಕೀಯ ಹಾಗೂ ಬೌದ್ಧಿಕ appeal ಹೊಂದಿರುತ್ತದೆ. ರಾಜಕೀಯ appeal ಇರುವ ಕಾರಣ ಅಸ್ಪಷ್ಟ ಚಿತ್ರಣವಾದ ರಾಷ್ಟ್ರೀಯ ಉತ್ಪನ್ನವನ್ನು ಹೆಚ್ಚಿಸುತ್ತೇವೆ ಎಂದು ಹೇಳುವುದಕ್ಕಿಂತ ಬಹಳ ಸುಲಭವಾಗಿ ಇವುಗಳನ್ನು ಒದಗಿಸಲು ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಸಾಧ್ಯವಾಗುತ್ತದೆ. ಬೌದ್ಧಿಕವಾಗಿ ಅದು ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ನಗರೀಕರಣ, ಪರಿಸರ ಸಂರಕ್ಷಣೆ, ಸಮಾನತೆ, ಹಿಂದುಳಿದ ದೇಶಗಳ ನಡುವೆ ವ್ಯಾಪಾರ, ಅಗತ್ಯ ತಂತ್ರಜ್ಞಾನದ ಬಳಕೆ, ಎಂಎನ್ಸಿಗಳ ಪಾತ್ರ, ಗ್ರಾಮೀಣಾಭಿವೃದ್ಧಿ, ಕೈಗಾರಿಕೀಕರಣ, ಗ್ರಾಮೀಣ ವಲಸೆ, ಪ್ರಭಾವ ಮತ್ತು ಪರಾವಲಂಬನೆ ಇತ್ಯಾದಿ ಸಮಸ್ಯೆಗಳೆಲ್ಲವನ್ನು ಹೊಸ ದೃಷ್ಟಿಕೋನದಿಂದ ಚಿಂತನೆ ಮಾಡಿ ಅವುಗಳ ಪರಸ್ಪರ ಸಂಬಂಧಗಳನ್ನು ಅರ್ಥಮಾಡಿಕೊಂಡು ಒಂದು ಬಾರಿ ಎಲ್ಲ ಪುರುಷರ ಮತ್ತು ಮಹಿಳೆಯರ ಅಗತ್ಯಗಳನ್ನು ಪೂರೈಸುವಂತಾದರೆ ಆಗ ನಮ್ಮ ಗಮನಕ್ಕೆ ಈ ಚಿಂತನೆ ಕೇಂದ್ರಬಿಂದುವಾಗಿ ಕಂಡುಬರುತ್ತದೆ (Paul Streeten o.p. cit).
ಬೆಳವಣಿಗೆಗೆ ಮಿತಿಗಳು
ಆರ್ಥಿಕ ಬೆಳವಣಿಗೆ ಸಾಧಿಸುವ ಸಲುವಾಗಿ ಎಲ್ಲ ವ್ಯಕ್ತಿಗಳಿಗೆ ಮೂಲಭೂತ ಅಗತ್ಯಗಳಾದ ಆಹಾರ, ವಸ್ತ್ರ, ವಸತಿ, ವೈದ್ಯಕೀಯ ಸೇವೆಗಳು, ಶಿಕ್ಷಣ, ನೈರ್ಮಲ್ಯ, ಶುದ್ಧ ಕುಡಿಯುವ ನೀರು, ವಾಹನ ಸೌಲಭ್ಯ, ನಿತ್ಯಬಳಕೆಯ ಗೃಹೋಪಯೋಗಿ ವಸ್ತುಗಳು ಮತ್ತು ಪೀಠೋಪಕರಣಗಳು ಇತ್ಯಾದಿಗಳನ್ನು ಆವಶ್ಯಕ ಪ್ರಮಾಣದಲ್ಲಿ ಪೂರೈಕೆ ಮಾಡಬೇಕಾಗುತ್ತದೆ. ಯಾವ ವ್ಯಕ್ತಿಯೂ ತನ್ನ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಸರಕುಸೇವೆಗಳನ್ನು ನಿರೀಕ್ಷೆ ಮಾಡಬಾರದು ಹಾಗೂ ಉಪಯೋಗಿಸಬಾರದು ಎಂಬ ಸಂದೇಶವನ್ನೂ ಗಾಂಧಿ ನೀಡಿದ್ದಾರೆ. ಪ್ರತಿಯೊಬ್ಬರೂ ‘ಸರಳ ಜೀವನ, ಉನ್ನತ ಚಿಂತನೆ’ಯ ಧ್ಯೇಯವಾಕ್ಯದ ಹಾದಿಯಲ್ಲಿ ಜೀವನ ನಡೆಸಬೇಕೆಂಬುದು ಅವರ ಚಿಂತನೆ. ಇದರ ಅರ್ಥ ಸರ್ವಸಂಗ ಪರಿತ್ಯಾಗಿಯಾದ ಸಂನ್ಯಾಸಿಯ ಜೀವನ ಮಾದರಿ ಅಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಇತ್ತೀಚಿನ ತಮ್ಮ ಕಟು ಅನುಭವದಿಂದ ಇದೇ ರೀತಿಯ ತೀರ್ಮಾನಕ್ಕೆ ಬರುತ್ತಿದ್ದಾರೆ. ಜಗತ್ತಿನ ಅನೇಕ ಆರ್ಥಿಕತಜ್ಞರು ಹಾಗೂ ವಿಜ್ಞಾನಿಗಳನ್ನು ಒಳಗೊಂಡ ‘The Club of Rome’ ’ ತನ್ನ ಹೊಸ ವಿವೇಚನಾಪೂರ್ಣ ಪ್ರೌಢಪ್ರಬಂಧದಲ್ಲಿ ಆರ್ಥಿಕ ಬೆಳವಣಿಗೆಗೆ ಒಂದು ಮಿತಿಯನ್ನು ಹಾಕಬೇಕು. ಇಲ್ಲದಿದ್ದರೆ ‘ಬೆಳವಣಿಗೆಯ ಭೀತಿ’ ನಮ್ಮನ್ನು ಇನ್ನೂ ಹೆಚ್ಚಿನ ಸಮಸ್ಯೆಗಳಿಗೆ ತಳ್ಳಬಹುದು ಎಂದಿದ್ದಾರೆ. ಭೌತಿಕ ಹಾಗೂ ಪ್ರಾಕೃತಿಕ ಸಂಪತ್ತು ಮಿತಪ್ರಮಾಣದಲ್ಲಿ ದೊರೆಯುವ ಕಾರಣ ಅವುಗಳ ವಿವೇಚನೆಯಿಲ್ಲದ ಉಪಯೋಗವನ್ನು ಭೋಗವಸ್ತುಗಳ ಉತ್ಪಾದನೆಗೆ ಉಪಯೋಗಿಸಿದರೆ ಮತ್ತು ಮಿತಿ ಇಲ್ಲದ ಸಂಪತ್ತನ್ನು ಉಳಿತಾಯ ಮಾಡದೆ ಖರ್ಚು ಮಾಡುವುದರಿಂದ ಅನೇಕ ರೀತಿಯ ಕಂಡು ಕೇಳರಿಯದ ಸಮಸ್ಯೆಗಳ ಸುಳಿಯಲ್ಲಿ ಮಾನವಜನಾಂಗ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ (Shriman Narayan – ‘India Needs Gandhi’, 1976, p. 2).
ಇ.ಎಫ್. ಷೂಮ್ಯಾಕರ್ ಅವರ ಪ್ರಕಾರ ಅಪರಿಮಿತ ಬೆಳವಣಿಗೆ ಅಪಾಯಕಾರಿ. ಭೌತಿಕ ವಸ್ತುಗಳ ಅಗತ್ಯ ಒಬ್ಬ ಮನುಷ್ಯನಿಗೆ ಒಂದು ಕುಟುಂಬಕ್ಕೆ ಮತ್ತು ಒಂದು ದೇಶಕ್ಕೆ ಕೇವಲ ಒಂದು ಹಂತದವರೆಗೆ ಮಾತ್ರ ಬೇಕು. ನಾವು ಮೂರು ರೀತಿಯ ಆರ್ಥಿಕ ಸ್ಥಿತಿಯನ್ನು ಕಲ್ಪಿಸಿಕೊಳ್ಳಬಹುದು. ದಯನೀಯ ಸ್ಥಿತಿ, ಅಧಿಕ ಸ್ಥಿತಿ ಹಾಗೂ ಪರ್ಯಾಪ್ತ ಸ್ಥಿತಿ. ಮೊದಲೆರಡು ಸ್ಥಿತಿಗಳು ಅನಗತ್ಯ ಮತ್ತು ಕೆಡುಕಿನಿಂದ ಕೂಡಿದ್ದಾಗಿದೆ. ಹಾಗಾಗಿ ಮೂರನೇ ಸ್ಥಿತಿ ಸಮರ್ಥನೀಯವಾಗಿದೆ. ಆರ್ಥಿಕ ಬೆಳವಣಿಗೆ ಪರ್ಯಾಪ್ತ ಸ್ಥಿತಿಯವರೆಗೆ ಅಪೇಕ್ಷಿತ. ಆನಂತರ ಅದು ದುಷ್ಟ, ವಿನಾಶಕ ಹಾಗೂ ನಷ್ಟಕರವಾಗುತ್ತದೆ [E.F. Schumacher (Quote in J.P. Narain ‘Reconstruction of Indian Polity’, p.87)].
ಪ್ರಪಂಚದಲ್ಲಿ ಕಳೆದ 2 ಸಾವಿರ ವರ್ಷಗಳಿಗಿಂತ ಹೆಚ್ಚಿನ ಪ್ರಮಾಣದ ಉತ್ಪಾದನೆಯನ್ನು ಈ ಮೂರು ದಶಕಗಳಲ್ಲಿ ಮಾಡಲಾಗಿದೆ. ಇದಕ್ಕಾಗಿ ಸಂಪನ್ಮೂಲಗಳ ದುರುಪಯೋಗವೂ ಆಗಿದೆ. ಆದರೆ ಪ್ರಪಂಚದಲ್ಲಿ ಬಡತನದ ರೇಖೆಗಿಂತ ಕೆಳಮಟ್ಟದಲ್ಲಿರುವವರ ಸಂಖ್ಯೆ ಕಡಮೆ ಆಗುವ ಬದಲು ಹೆಚ್ಚಾಗಿದೆ. ಇದು ಗಾಂಧಿಯವರ ರೀತಿ ಅನೇಕ ಜಾಗತಿಕ ಚಿಂತಕರನ್ನು ಯೋಚನೆಗೀಡುಮಾಡಿದೆ. ಅದಕ್ಕಾಗಿ ಅಭಿವೃದ್ಧಿಗೆ ಒಂದು ಮಿತಿಯನ್ನು ಹಾಕುವ ಕ್ರಮ ಒಂದು ಪ್ರಮುಖ ಸಲಹೆಯಾಗಿದೆ. ಆದರೆ ಭಾರತದಂತಹ ಬೆಳವಣಿಗೆ ಹೊಂದುತ್ತಿರುವ ದೇಶದಲ್ಲಿ ಬಡತನದ ರೇಖೆಗಿಂತ ಕೆಳಗಿರುವವರ ಸಂಖ್ಯೆ ಹೆಚ್ಚಿರುವ ಕಾರಣ ಆರ್ಥಿಕ ಅಭಿವೃದ್ಧಿಗೆ ಮಿತಿಯನ್ನು ಹಾಕಬೇಕೆನ್ನುವ ಚಿಂತನೆಗೆ ಯಾವುದೇ ರೀತಿಯ ಸಮರ್ಥನೆ ಇಲ್ಲ. ಈ ಕಾರಣದಿಂದಾಗಿಯೇ ಅನೇಕರು ಗಾಂಧಿಯವರ ಆರ್ಥಿಕ ಚಿಂತನೆ ಹೆಚ್ಚು ಪ್ರಸ್ತುತ ಎನ್ನಲು ಕಾರಣವಾಗಿದೆ (J.D. Sethi, ‘Gandhi Today’, 1978, p.116). ಆದಕಾರಣ ನಾವು ಆರ್ಥಿಕ ಪ್ರಗತಿ ಮತ್ತು ನೈತಿಕ
ಪ್ರಗತಿಯನ್ನು ಜೊತೆಜೊತೆಯಾಗಿ ಸಾಧಿಸಿ ಭಾರತ ಮತ್ತು ಇಡೀ ಪ್ರಪಂಚವನ್ನು ಬಡತನದಿಂದ ಮುಕ್ತಮಾಡಬೇಕಾಗಿದೆ. (ಮುಂದುವರಿಯುವುದು)