‘ಸರ್ವೋದಯ ಎಂಬುದು ಕೇವಲ ಮಾನಸಿಕ ಕಲ್ಪನೆ, ಆದರ್ಶದ ಉನ್ನತ ಸ್ಥಿತಿ ಮಾತ್ರ; ಸರ್ವೋದಯ ತತ್ತ್ವ ಒಂದು ಉದ್ಧತ ತತ್ತ್ವ (Dogmatic), ಇದು ಎಂದೂ ವ್ಯಾವವಹಾರಿಕ ತತ್ತ್ವ (Pragmatic) ಆಗಲು ಸಾಧ್ಯವಿಲ್ಲ; ಇದು ಕೇವಲ ‘ಕಾರ್ಯಸಾಧುವಲ್ಲದ ಆದರ್ಶ ಕಲ್ಪನೆ’ (Utopian concept) ಮಾತ್ರ. ಇದು ಒಂದು ಅವ್ಯವಹಾರಿಕ ತತ್ತ್ವ, ಗಗನಕುಸುಮ ಹಾಗೂ ಸುಂದರ ಕಲ್ಪನೆ ಮಾತ್ರ. ಪ್ರತ್ಯಕ್ಷದಲ್ಲಿ ಗಾಂಧಿಯವರು ಚಿತ್ರಿಸಿದಂತಹ ಸಮಾಜರಚನೆ ಸಾಧ್ಯವಿಲ್ಲ. ಕಾರಣ ಕೆಲವರ ಕಲ್ಯಾಣ ಮಾಡಬಹುದು.
ಬಹುಸಂಖ್ಯಾತರ ಹಿತಸಾಧನೆ ಮಾಡಬಹುದು. ಆದರೆ ಗಾಂಧಿಯವರು ಕನಸುಕಂಡ ಸರ್ವರ ಕಲ್ಯಾಣದ ಮಾತು ನಮ್ಮ ಗಂಟಲೊಳಗೇ ಇಳಿಯಲಾರದು. ಸರ್ವರ ಕಲ್ಯಾಣ ಎಲ್ಲೂ ಆಗದ ಮಾತು. ಆದ್ದರಿಂದ ಇದು ಅಸಂಭವ’ – ಎಂದು ಬಹಳ ಜನ ಮೂದಲಿಸಿ ಮಾತನಾಡುತ್ತಾರೆ. ಒಂದು ದೃಷ್ಟಿಯಿಂದ ವಿಶ್ಲೇಷಣೆ ಮಾಡಿದರೆ ಈ ಮಾತಿನಲ್ಲಿ ಸ್ವಲ್ಪಮಟ್ಟಿನ ಸತ್ಯವಿದ್ದೀತು. ಕಾರಣವೆಂದರೆ ಗಾಂಧಿಯವರು ರೂಪಿಸಿದ ಈ ಆರ್ಥಿಕ ಮಾದರಿ ಕೇವಲ ತಾತ್ತ್ವಿಕ ಮಟ್ಟದಲ್ಲಿ (theoretical level) ಮಾತ್ರ ಉಳಿದುಬಿಟ್ಟಿತು. ಈ ತತ್ತ್ವದ ಹಿಂದೆ ಯಾವುದೇ ರೀತಿಯ ‘ಅನುಭವ ಬಲ’ ಮತ್ತು ‘ಪ್ರಯೋಗ ಬಲ’ ಇರಲಿಲ್ಲ. ಈ ಆರ್ಥಿಕ ಮಾದರಿಯನ್ನು ಪ್ರಪಂಚದಲ್ಲಿ ಪ್ರಸ್ತುತವಿರುವ ಇತರ ಆರ್ಥಿಕ ಮಾದರಿಗಳ ರೀತಿಯಲ್ಲಿ ಭಾರತವು ಸೇರಿದಂತೆ ಯಾವುದೇ ದೇಶಗಳು ಪ್ರಯೋಗ ಮಾಡಿಲ್ಲ ಹಾಗೂ ಕಾರ್ಯರೂಪಕ್ಕೆ ತಂದಿಲ್ಲ. ಆದಕಾರಣ ಈ ಆರ್ಥಿಕ ಮಾದರಿಯ ಪ್ರತ್ಯಕ್ಷ ಅನುಕೂಲ-ಅನಾನುಕೂಲಗಳ ಅರಿವು ಯಾರಿಗೂ ಇಲ್ಲ. ಗಾಂಧಿಯವರು ತಮ್ಮನ್ನು ಸಂಪೂರ್ಣವಾಗಿ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರ ಕಾರಣದಿಂದಾಗಿ ಸರ್ವೋದಯದ ಸಂಪೂರ್ಣ ಸ್ಪಷ್ಟ ಚಿತ್ರಣವನ್ನು ಅವರ ಕೊನೆಯ ಕಾಲದವರೆಗೂ ಕೊಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ಆರ್ಥಿಕ ಮಾದರಿಯ ಪ್ರಯೋಗ ಮಾಡಲು ಅವರಿಗೆ ಕಾಲಾವಕಾಶವಿರಲಿಲ್ಲ. ಗಾಂಧಿಯವರ ಈ ಆದರ್ಶ ಮಾದರಿಯನ್ನು ಸಂಪೂರ್ಣವಾಗಿ ಯಥಾವತ್ತಾಗಿ ಅರ್ಥಮಾಡಿಕೊಳ್ಳಲು ಯಾವ ಆರ್ಥಿಕ ತಜ್ಞರಿಗೂ ಹಾಗೂ ಇತರರಿಗೂ ಸಾಧ್ಯವಾಗಲಿಲ್ಲ. ಆದಕಾರಣ ನಾವು ಕೇವಲ ತಾತ್ತ್ವಿಕ ನೆಲೆಯಲ್ಲಿ ಮಾತ್ರ ಅದರ ಸಾಧಕ-ಬಾಧಕಗಳನ್ನು ವಿಶ್ಲೇಷಣೆ ಮಾಡಬಹುದು ಅಷ್ಟೇ.
ಇನ್ನೊಂದು ದೃಷ್ಟಿಕೋನದಿಂದ ಯೋಚಿಸಿದಾಗ ಸರ್ವೋದಯ ಆರ್ಥಿಕ ಮಾದರಿ ಕೇವಲ ಆದರ್ಶ ಮಾದರಿಯಾಗಿ ಉಳಿಯದೆ ಪ್ರತ್ಯಕ್ಷವಾಗಿ ಕಾರ್ಯರೂಪಕ್ಕೆ ತರುವಂತಹ ಮಾದರಿಯೂ ಆದೀತು. ಗಾಂಧಿಯವರು ಅತ್ಯಂತ ಸ್ಪಷ್ಟವಾಗಿ ಹೇಳುತ್ತಾರೆ – ಸರ್ವೋದಯ ಕೇವಲ ತಾತ್ತ್ವಿಕವಾದ, ಆದರ್ಶಮಯವಾದ ಗಗನಕುಸುಮ ಹಾಗೂ ಸುಂದರ ಕಲ್ಪನೆ ಅಲ್ಲ; ಬದಲಿಗೆ ಅದು ಕಾರ್ಯಸಾಧುವಾದ ಕಲ್ಪನೆ. ಕಾರಣ ಗಾಂಧಿಯವರಿಗೆ ಮಾನವನ ಒಳ್ಳೆಯತನ ಹಾಗೂ ಸದ್ಗುಣಗಳ ಬಗ್ಗೆ ಮತ್ತು ಅವುಗಳನ್ನು ಕಾರ್ಯಗತಗೊಳಿಸುವುದರ ಬಗ್ಗೆ ಅಪಾರವಾದ ನಂಬಿಕೆ ಇತ್ತು.
ಗಾಂಧಿ ಹೇಳುತ್ತಾರೆ – ಮೂಲತಃ ಮಾನವ ಸತ್ಪ್ರವೃತ್ತಿಯವನು. ಒಳ್ಳೆಯತನ ಹಾಗೂ ಅನೇಕ ಸದ್ಗುಣಗಳು ಅವನಲ್ಲಿವೆ. ಆದುದರಿಂದ ಅವನಲ್ಲಿ ಪರಿವರ್ತನೆ ಸಾಧ್ಯ. ಮಾನವಜನಾಂಗದ ವಿಕಾಸದ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ನಮಗೆ ಕಂಡುಬರುವ ಸತ್ಯ ಎಂದರೆ ಮಾನವನ ವಿಕಾಸಕ್ಕೆ ಸರಿಯಾದ ಪಥದರ್ಶನ ದೊರೆತದ್ದರ ಫಲವಾಗಿ ಅವನ ಸಂಸ್ಕೃತಿ, ಸಂಸ್ಕಾರ, ಸಭ್ಯತೆ ಮತ್ತು ನಾಗರಿಕತೆಗಳು ಸರಿಯಾದ ಹಾದಿಯಲ್ಲಿ ಮುಂದೆ ಸಾಗಿವೆ. ಮಾನವನು ವಿವಿಧ ಹಂತಗಳಲ್ಲಿ ಸೂಕ್ತ ಪರಿವರ್ತನೆ ಹೊಂದಿ ಇಂದಿನ ಅತ್ಯಂತ ಉತ್ಕೃಷ್ಟ ಮಟ್ಟವನ್ನು ತಲಪಿದ್ದಾನೆ. ಕೆಟ್ಟತನದಿಂದ ಒಳ್ಳೆಯತನದ ಕಡೆಗೆ, ಹಿಂಸೆಯಿಂದ ಅಹಿಂಸೆಯ ಕಡೆಗೆ, ದಾನವತ್ವದಿಂದ ಮಾನವತ್ವದ ಕಡೆಗೆ ಹಾಗೂ ಮಾನವತ್ವದಿಂದ ದೈವತ್ವದ ಕಡೆಗೆ ಅವನು ಸಾಗುತ್ತಾ ಆತ್ಮವಿಕಾಸ ಮಾಡಿಕೊಳ್ಳುತ್ತಾ ಬಂದಿರುವುದು ಕಂಡುಬಂದಿದೆ.
ಪರಿವರ್ತನೆಯ ಹಂತಗಳು
ಪರಿವರ್ತನೆಯ ಮೊದಲ ಹಂತದಲ್ಲಿ ಮಾನವನು ಮಂಗನಾಗಿದ್ದನೆಂದು ವಿಕಸಶಾಸ್ತ್ರ ಹೇಳುತ್ತದೆ. ಮಂಗನ ಸಹಜ ಚೇಷ್ಟೆಗಳ ಆಗರವಾಗಿದ್ದ ಅವನು ವಿಕಾಸದ ಹಾದಿಯಲ್ಲಿ ಸಂಸ್ಕಾರ ಹಾಗೂ ಬುದ್ಧಿಯ ಬಲದಿಂದ ಮುಂದೆ ಮನುಷ್ಯನಾದ.
ಎರಡನೆಯ ಹಂತದಲ್ಲಿ ಮಾನವನ ಸ್ವರೂಪ ಪಡೆದಿದ್ದರೂ ದಾನವ ಗುಣಗಳ ಮೂರ್ತಸ್ವರೂಪನಾಗಿದ್ದ. ಆದಿಮಾನವನು ಅತ್ಯಂತ ಅನಾಗರಿಕನೂ ಕ್ರೂರಿಯೂ ಆಗಿದ್ದ. ತನ್ನ ಸ್ವಂತ ಅಸ್ತಿತ್ವಕ್ಕಾಗಿ ಇತರರನ್ನು ಹಿಂಸಿಸಿ, ದ್ವೇಷಿಸಿ, ಸಂಹರಿಸಿ ತಾನು ಬದುಕುತ್ತಿದ್ದ. ಕಾದಾಟ ಹೊಡೆದಾಟ ಸಹಜ ಸಂಸ್ಕೃತಿಯಾಗಿತ್ತು. ಡಾರ್ವಿನ್ ಪ್ರತಿಪಾದಿಸಿದ ‘Survival of the Fitest’ ಮತ್ತು `Might is right’ – ‘ಶಕ್ತಿವಂತನೇ ಬದುಕಲು ಅರ್ಹ, ಶಕ್ತಿಹೀನರು ಬದುಕಲು ಅನರ್ಹರು, ಬಲಿಷ್ಠರದೇ ಬಾಳು’ ಎನ್ನುವುದನ್ನು ಸಾಬೀತುಪಡಿಸಿದ.
ಮೂರನೆಯ ಹಂತದಲ್ಲಿ ಹಕ್ಸ್ಲೀ ಅವರು ಹೇಳುವ ‘Live and let Live’ ನಾನು ಬದುಕಬೇಕು ಇತರರನ್ನೂ ಬದುಕಲು ಬಿಡಬೇಕು ಎನ್ನುವ ಘಟ್ಟವನ್ನು ತಲಪಿದ. ನನ್ನಂತೆಯೇ ಪರರು ಎನ್ನುವ ಚಿಂತನೆ ಬೆಳೆಸಿಕೊಳ್ಳತೊಡಗಿದ.
ನಾಲ್ಕನೆಯ ಹಂತದಲ್ಲಿ ಇಡೀ ಸಮಾಜದ ಏಳಿಗೆಗಾಗಿ, ಸಮಾಜದ ಇತರ ಬಂಧುಗಳ ಒಳಿತಿಗಾಗಿ ತನ್ನ ವೈಯಕ್ತಿಕ ಸ್ವಾರ್ಥವನ್ನು ಬದಿಗಿರಿಸಿ ಸರ್ವಸ್ವವನ್ನು ತ್ಯಾಗ ಮಾಡಲೂ ಸಿದ್ಧನಾದ ಹಾಗೂ ತನ್ನ ಜೀವನ ಸಮರ್ಪಣೆ ಮಾಡುವ ಹಂತವನ್ನು ತಲಪಿದ. ಇನ್ನೊಬ್ಬರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಾಣುವಂತಹ ಉದಾತ್ತ ಗುಣಗಳನ್ನು ಬೆಳೆಸಿಕೊಂಡು ಇತರರಿಗೆ ಮೇಲ್ಪಂಕ್ತಿ ಹಾಕುವ ಆದರ್ಶದ ಮೌಲ್ಯಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಇತರರ ಹಿತಕ್ಕಾಗಿ, ಸಮಾಜದ ಒಳಿತಿಗಾಗಿ ಮಾನವ ಮನಸ್ಸು ಮಾಡಿದರೆ ಎಷ್ಟು ಉನ್ನತ ಮಟ್ಟಕ್ಕೂ ಏರಬಲ್ಲ ಎಂಬುದಕ್ಕೆ ಎಲ್ಲ ಸಮಾಜಗಳಲ್ಲೂ ಉದಾಹರಣೆಗಳನ್ನು ಕಾಣಬಹುದು.
ಐದನೆಯ ಹಂತದಲ್ಲಿ ಮಾನವತ್ವದಿಂದ ದೈವತ್ವಕ್ಕೆ ಏರುವ ಪ್ರಯತ್ನದ ಹಾದಿಯಲ್ಲಿ ಪಯಣ ಮಾಡುತ್ತಿದ್ದಾನೆ. ಹೀಗೆ ವಿವಿಧ ಹಂತಗಳಲ್ಲಿ ಮಾನವ ವಿನಯವಂತ, ಮಾನವಂತ ಹಾಗೂ ಸುಸಂಸ್ಕೃತನಾಗಿ ಪರಿವರ್ತನೆಗೊಂಡಿದ್ದಾನೆ.
ಇದರ ತಾತ್ಪರ್ಯ: ಮಾನವನು ಮೂಲತಃ ಒಳ್ಳೆಯವನು. ಮನುಷ್ಯನಲ್ಲಿ ಸುಪ್ತವಾಗಿರುವ ಈ ಸದ್ಗುಣಗಳನ್ನು ಜಾಗೃತ ಮಾಡಿದರೆ ಅವನು ಮೈಕೊಡವಿ ಮೇಲೇಳುತ್ತಾನೆ. ಸಂಸ್ಕಾರಗಳಿಂದ ಬೂದಿಮುಚ್ಚಿದ ಕೆಂಡವನ್ನು ಮತ್ತೊಮ್ಮೆ ಪ್ರಜ್ವಲಗೊಳಿಸಬಹುದು. ಪ್ರಜ್ವಲಗೊಂಡ ಬೆಳಕನ್ನು ಯಾರೂ ತಡೆಹಿಡಿಯಲಾರರು. ಆದ್ದರಿಂದ ಈ ಒಳ್ಳೆಯತನವನ್ನು ಜಗ್ಗಿದಷ್ಟೂ ಹಿಗ್ಗುತ್ತದೆ. ಅದು ಆಕಾಶದ ಎತ್ತರಕ್ಕೆ ಏರಬಲ್ಲದು, ಸಾಗರದಾಳಕ್ಕೆ ಇಳಿಯಬಲ್ಲದು ಹಾಗೂ ವಿಶ್ವವ್ಯಾಪಿಯಾಗಿ ಹರಡಬಲ್ಲದು. ಇದಕ್ಕೆ ಮಾನವನ ಕೃತಿಗಳೇ ಸಾಕ್ಷಿ. ಇತಿಹಾಸದಲ್ಲಿ ಇಂತಹ ಘಟನೆಗಳಿಗೆ ಏನೂ ಕೊರತೆ ಇಲ್ಲ. ಈ ದಿಸೆಯಲ್ಲಿ ಕೆಲವು ಪ್ರಮುಖ ಘಟನೆಗಳ ಮನನ ಅಗತ್ಯ.
ಆಂಧ್ರಪ್ರದೇಶದ ಶಿವರಾಂಪಲ್ಲಿಯಲ್ಲಿ ಆಯೋಜಿಸಿದ್ದ ಸರ್ವೋದಯ ಸಮ್ಮೇಳನಕ್ಕೆ ಗಾಂಧಿಯವರ ನಿಕಟವರ್ತಿಗಳಾದ ವಿನೋಬಾ ಭಾವೆಯವರಿಗೆ ಆಹ್ವಾನ ಬಂದಿತು. 300 ಮೈಲುಗಳ ಕಾಲುನಡಿಗೆಯಲ್ಲಿ ಪ್ರಯಾಣಮಾಡಿ ಸಮ್ಮೇಳನದಲ್ಲಿ ಅವರು ಭಾಗವಹಿಸಿದರು. ಆನಂತರ ಮಾವೋವಾದಿಗಳ ಪ್ರಭಾವವಿದ್ದ ತೆಲಂಗಾಣದಲ್ಲಿ ಅವರ ಪಾದಯಾತ್ರೆ ನಡೆಯಿತು. 1951 ಏಪ್ರಿಲ್ 18ರಂದು ಅವರು ಪೆÇೀಚಂಪಲ್ಲಿ ಗ್ರಾಮ ತಲಪಿದರು. ಗ್ರಾಮ ಪ್ರದಕ್ಷಿಣೆಯ ಭಾಗವಾಗಿ ಹರಿಜನಕೇರಿಗೆ ಭೇಟಿ ನೀಡಿದರು. 40 ಮನೆಗಳಲ್ಲಿ ವಾಸಿಸುವ ಅವರ ಕಷ್ಟ ಸುಖಗಳನ್ನು ವಿಚಾರಿಸಿದರು. ಅವರ ದಯನೀಯ ಸ್ಥಿತಿಯನ್ನು ಪ್ರತ್ಯಕ್ಷ ಪರಿಚಯ ಮಾಡಿಕೊಂಡರು. ಈ ದಯನೀಯ ಸ್ಥಿತಿಯಿಂದ ಹೊರಬರಲು ನಾನು ನಿಮಗೆ ಏನು ಮಾಡಬಹುದು ಎಂದು ವಿನೋಬಾರವರು ಕೇಳಿದಾಗ ಅವರು ನಮಗೆ 80 ಎಕರೆ ಜಮೀನನ್ನು ಕೊಡಿಸಿದರೆ ನಾವು ನಮ್ಮ ಜೀವನವನ್ನು ಕಟ್ಟಿಕೊಳ್ಳಬಹುದು ಎಂದರು. ಆಗ ವಿನೋಬಾ ಅವರ ಜೊತೆಯಲ್ಲಿ ಪ್ರವಾಸದಲ್ಲಿದ್ದ ರಾಮಚಂದ್ರರೆಡ್ಡಿ ಎನ್ನುವ ಶ್ರೀಮಂತರು ಸ್ವಯಂಸ್ಫೂರ್ತಿಯಿಂದ ಮುಂದೆ ಬಂದು ತಮ್ಮ 300 ಎಕರೆ ಜಮೀನಿನಲ್ಲಿ ನೂರು ಎಕರೆ ಜಮೀನನ್ನು ಆ 40 ಕುಟುಂಬಗಳಿಗೆ ದಾನ ಮಾಡುತ್ತೇನೆ ಎಂದು ಘೋಷಿಸಿ ಅದರಂತೆ ಅವರಿಗೆ ದಾನಪತ್ರ ವಿತರಿಸಿದರು. ಹೀಗೆ ಭಾರತದ ಆರ್ಥಿಕ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ‘ಭೂದಾನ’ ಯುಗದ ಪ್ರಾರಂಭವಾಯಿತು. ಮುಂದಿನ ಕೆಲವು ವರ್ಷಗಳಲ್ಲಿ ಭೂದಾನದ ಅಂಗವಾಗಿ ಸುಮಾರು 40 ಲಕ್ಷ ಎಕರೆ ಜಮೀನನ್ನು ಸಂಗ್ರಹಿಸಿ ಬಡರೈತರಿಗೆ ಹಂಚಲಾಯಿತು.
ಭೂದಾನದ ಕಾರ್ಯಕ್ರಮದ ಭಾಗವಾಗಿ ಮುಂದೆ ಗ್ರಾಮದಾನ ಚಳುವಳಿ ಪ್ರಾರಂಭವಾಯಿತು. 1952ರಲ್ಲಿ ಉತ್ತರಪ್ರದೇಶದ ಮಂಗ್ರೋಠ ಎಂಬ ಗ್ರಾಮದ ಎಲ್ಲ ನಿವಾಸಿಗಳು ತಮ್ಮ ಸಮಸ್ತ ಭೂಮಿಯನ್ನು ವಿನೋಬಾ ಅವರಿಗೆ ದಾನ ನೀಡಿ ದೇಶದಲ್ಲಿ ಮೊಟ್ಟಮೊದಲ ‘ಗ್ರಾಮದಾನ’ಕ್ಕೆ ನಾಂದಿ ಹಾಡಿದರು. ನಂತರದ ದಿನಗಳಲ್ಲಿ ಸುಮಾರು 500-600 ಗ್ರಾಮದಾನಗಳು ವಿನೋಬಾ ಅವರ ನೇತೃತ್ವದಲ್ಲಿ ನಡೆಯಿತು.
ಇತ್ತೀಚಿನ ಉದಾಹರಣೆಯನ್ನು ಕೊಡುವುದಾದರೆ 2014ರಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಒಂದು ಮನವಿಯನ್ನು ಮಾಡಿದರು. ಯಾರ ಬಳಿ ಸಹಾಯಧನವಿರುವ ಎರಡು ಗ್ಯಾಸ್ ಸಿಲಿಂಡರುಗಳು ಇವೆಯೋ ಅಂತಹ ನಾಗರಿಕರು ಸ್ವಇಚ್ಛೆಯಿಂದ ಅದರಲ್ಲಿ ಒಂದನ್ನು ಕೇಂದ್ರಸರ್ಕಾರಕ್ಕೆ ಹಿಂತಿರುಗಿಸಬೇಕು. ಎರಡನೇ ಗ್ಯಾಸ್ ಸಿಲಿಂಡರನ್ನು ಸಹಾಯಧನದ ಅಗತ್ಯವಿಲ್ಲದೆ ಮಾರುಕಟ್ಟೆಯ ಬೆಲೆಯಲ್ಲಿ ಕೊಳ್ಳಲು ಆರ್ಥಿಕಶಕ್ತಿ ಇರುವವರು ಮುಂದೆ ಬಂದದ್ದೇ ಆದರೆ ಮರಳಿ ಬಂದ ಗ್ಯಾಸ್ ಸಿಲಿಂಡರುಗಳನ್ನು ಹಳ್ಳಿಗಳಲ್ಲಿ ವಾಸಿಸುವ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ವಿತರಣೆ ಮಾಡಲು ಸಾಧ್ಯವಾಗುವುದು ಎಂದರು. ಅವರ ಮನವಿಗೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತು ಲಕ್ಷಾಂತರ ಭಾರತೀಯರು ಸ್ವ-ಇಚ್ಛೆಯಿಂದ ಸರ್ಕಾರಕ್ಕೆ ಹಿಂತಿರುಗಿಸಿ ಅದರ ಸದ್ವಿನಿಯೋಗಕ್ಕೆ ಸಹಕರಿಸಿರುವುದು ನಮ್ಮೆಲ್ಲರ ಮನದಲ್ಲಿ ಇನ್ನೂ ಹಸಿರಾಗಿ ಉಳಿದಿದೆ. ಜನಸಾಮಾನ್ಯರ ಒಳ್ಳೆಯತನವನ್ನು ಜಾಗೃತಗೊಳಿಸಿದರೆ ಎಂತಹ ಮಹಾನ್ ಕಾರ್ಯಗಳೂ ಬಹಳ ಸುಲಭವಾಗಿ ನಡೆಯಲು ಸಾಧ್ಯ ಎಂಬುದಕ್ಕೆ ಇವೆಲ್ಲ ಜ್ವಲಂತ ಉದಾಹರಣೆಗಳು.
ಇಂತಹ ಉದಾತ್ತ ಗುಣಗಳ ಗಣಿಯಾದ ಮಾನವನೇ ಸರ್ವೋದಯದಲ್ಲಿ ಕೇಂದ್ರಬಿಂದು. ಇದು ‘ರಾಜ್ಯಕೇಂದ್ರಿತ’ ವ್ಯವಸ್ಥೆಯ ವಿರುದ್ಧವಾದ ‘ಮಾನವಕೇಂದ್ರಿತ’ ಅಥವಾ ‘ವ್ಯಕ್ತಿಕೇಂದ್ರಿತ’ ವ್ಯವಸ್ಥೆ. ಗಾಂಧಿಯವರು ‘ವ್ಯಕ್ತಿಯ’ ಪಾರಮ್ಯವನ್ನು ಎತ್ತಿಹಿಡಿದು ಅವನಿಗೆ ಅತ್ಯಂತ ಮಹತ್ತ್ವದ ಸ್ಥಾನವನ್ನು ನೀಡಿದ್ದಾರೆ. ಕಾರಣವೆಂದರೆ ವ್ಯಕ್ತಿಯೇ ಸಮಾಜದ, ದೇಶದ ಮೂಲಭೂತ ಘಟಕ. ಅವನೇ ಸಮಸ್ತ ರಚನೆಗಳ ಮಧ್ಯಬಿಂದು. ಅನೇಕ ವ್ಯಕ್ತಿಗಳು ಸೇರಿದಾಗ ಒಂದು ಸಮಾಜ, ದೇಶ ಹಾಗೂ ಪ್ರಪಂಚದ ನಿರ್ಮಾಣವಾಗುವುದು. ವ್ಯಕ್ತಿಯೇ ಸಮಾಜದ ಮೂಲ. ಪ್ರತಿ ವ್ಯಕ್ತಿಯ ಉನ್ನತಿ ಹಾಗೂ ಉತ್ಕರ್ಷವಾದರೆ ಇಡೀ ದೇಶದ ಉತ್ಕರ್ಷವಾಗುತ್ತದೆ ಎನ್ನುವುದು ಸರ್ವೋದಯದ ನಂಬಿಕೆ. ಸುಸಂಸ್ಕೃತ, ಸಚ್ಚಾರಿತ್ರ್ಯವುಳ್ಳ ವ್ಯಕ್ತಿಗಳ ನಿರ್ಮಾಣದಿಂದ ಸಾತ್ತ್ವಿಕ ಸಮಾಜದ ನಿರ್ಮಾಣ ಸಾಧ್ಯ. ಆದಕಾರಣ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯೇ ಸರ್ವೋದಯದ ಸಾರ, ಸತ್ತ್ವ ಹಾಗೂ ಪರಮಗುರಿ. ಅದಕ್ಕೆ
ನೆರವಾಗುವಂತಹ ಸಮಾಜದ ರಚನೆ, ಆರ್ಥಿಕ ಹಾಗೂ ರಾಜಕೀಯ ರಚನೆ ಆಗಬೇಕು. ಇದು ಸುಲಭದ ಮಾತಲ್ಲ. ಇಂದಿನ ವ್ಯವಸ್ಥೆಗಳನ್ನು ಆಮೂಲಾಗ್ರವಾಗಿ ಬದಲಾಯಿಸಿದ ಹೊರತು ಅದರ ಸ್ಥಾನದಲ್ಲಿ ಹೊಸ ವ್ಯವಸ್ಥೆ ಬರಲಾರದು. ಹಾಗೆ ಮಾಡಲು ಹೊರಟಾಗ ಇಂದಿನ ವ್ಯವಸ್ಥೆಯಿಂದ ಯಾರಿಗೆ ಲಾಭವಾಗುತ್ತಿದೆಯೋ ಅವರೆಲ್ಲರಿಂದಲೂ ವಿರೋಧ ಬಂದೀತು. ಬದಲಾವಣೆಗೆ ಹೊಂದಿಕೊಳ್ಳದ, ಜಡತೆ ಆಲಸ್ಯಗಳಲ್ಲಿ ಮುಳುಗಿರುವವರಿಂದಲೂ ಅಡ್ಡಿ ಆತಂಕಗಳು ಬಂದೀತು. ಆ ಎಲ್ಲ ವಿರೋಧಗಳನ್ನು ಎದುರಿಸಿ ಗೆಲ್ಲಬೇಕಾದೀತು. ಇಂತಹ ಸಂದರ್ಭಗಳಲ್ಲಿ ಸಂಘರ್ಷ ಅನಿವಾರ್ಯ. ಅಂತಹ ಸಂಘರ್ಷಗಳನ್ನು ಅಹಿಂಸಾತ್ಮಕ ಮಾರ್ಗದಿಂದ ಎದುರಿಸಬೇಕಾದೀತು. ಇಷ್ಟೆಲ್ಲ ಗುರುತರ ಹೊಣೆ ಹೊತ್ತು ಸರ್ವೋದಯ ವಿಚಾರಕ್ಕೆ ಅನುರೂಪದ ಸಮಾಜ ರಚನೆಯಂತೂ ಆಗಲೇಬೇಕಾಗಿದೆ. ಇದು ಅನಿವಾರ್ಯ ಮತ್ತು ಜರೂರಾಗಿ ನಡೆಯಬೇಕಾದ ಕಾರ್ಯ.
ವ್ಯಕ್ತಿಯನ್ನೂ ಸಮಾಜವನ್ನೂ ಏಕಕಾಲದಲ್ಲಿ ಬದಲಾಯಿಸಿ ನಿಜವಾದ ವಿಕಾಸದ ಕಡೆಗೆ ಅಹಿಂಸಾ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬ ಕಲ್ಪನೆಯ ವಿಚಾರ ಸರ್ವೋದಯದ್ದು. ಅಂತ್ಯೋದಯದಿಂದ ಸರ್ವೋದಯ ಪ್ರಾರಂಭವಾಗಿ ಸರ್ವರ ಪ್ರೀತಿ, ಸಮತೆ-ಸ್ವಾತಂತ್ರ್ಯಗಳಲ್ಲಿ ಪರ್ಯವಸಾನವಾಗುತ್ತದೆ. ಸಮಾಜ ಒಂದು ಸರಪಣಿ ಇದ್ದಂತೆ. ಸರಪಣಿಯ ಶಕ್ತಿ ಅದರ ಅತ್ಯಂತ ದುರ್ಬಲವಾದ ಕೊಂಡಿಯಲ್ಲಿರುತ್ತದೆ. ಹಾಗೆಯೇ ಒಂದು ಕೋಟೆಯ ಶಕ್ತಿ ಅದರ ಶಿಥಿಲವಾದ ಭಾಗದಲ್ಲಿರುತ್ತದೆ. ಆ ದುರ್ಬಲ ಕೊಂಡಿಯನ್ನು ಹಾಗೂ ಶಿಥಿಲವಾದ ಜಾಗವನ್ನು ಬಲಪಡಿಸಿದರೆ ಸರಪಣಿ ಶಕ್ತವಾಗುತ್ತದೆ, ಕೋಟೆ ಅಭೇದ್ಯವಾಗುತ್ತದೆ. ಹಾಗೆಯೇ ಸಮಾಜಕ್ಕೂ. ದೀನದಲಿತರು, ದುರ್ಬಲರು ಇರುವವರೆಗೂ ಅಂತಹ ಸಮಾಜವೂ ಸುಖೀಸಮಾಜ, ಸರ್ವಜನ ಹಿತ ಸಮಾಜವಾಗಲಾರದು. ದೀನದಲಿತರ, ದುರ್ಬಲರ ಅಭಿವೃದ್ಧಿಯನ್ನು ಎಲ್ಲರೂ ಸೇರಿ ಸಾಧಿಸಿ ಸರ್ವೋದಯ ಸಮಾಜ ರೂಪುಗೊಳ್ಳುತ್ತದೆ. ಈ ಕೆಲಸ ಸತ್ಯ, ಪ್ರೇಮ ಹಾಗೂ ಪ್ರೀತಿಯಿಂದ ಆಗಬೇಕೇ ಹೊರತು ದ್ವೇಷ, ಅಸೂಯೆ, ಅತೃಪ್ತಿಗಳಿಂದ ಆಗದು. ಒಬ್ಬ ತಾಯಿ ತನ್ನ ಮಕ್ಕಳಲ್ಲಿ ಅಶಕ್ತ-ದುರ್ಬಲವಾಗಿರುವ ಮಗುವಿಗೆ ಮೊದಲ ಗಮನಹರಿಸಿ ಹೆಚ್ಚಿನ ಪಾಲನೆ ಪೆÇೀಷಣೆ ಮಾಡುತ್ತಾಳೆ. ಆ ಕಾರಣದಿಂದ ಉಳಿದ ಮಕ್ಕಳಲ್ಲಿ ಅಸೂಯೆ ಅತೃಪ್ತಿ ದ್ವೇಷ ಹುಟ್ಟುವುದಿಲ್ಲ. ಅದೇ ರೀತಿ ಸರ್ವೋದಯ ಸಮಾಜದ ವಿಚಾರದಲ್ಲಿ ಆಗುತ್ತದೆ. ದೀನ-ದಲಿತರ, ಬಡವ-ಅಜ್ಞಾನಿಗಳ ಉನ್ನತಿ ಸಾಧಿಸುವಾಗಲೂ ಇತರರಲ್ಲಿ ದ್ವೇಷ ಅಸೂಯೆಗಳಿಗೆ ಬದಲಾಗಿ ಪ್ರೇಮ-ಕರುಣೆ ಬೆಳೆಯಬೇಕು. ಹೀಗಾದಾಗ ಸಮಾಜದಲ್ಲಿ ಎಲ್ಲರ ಅಭಿವೃದ್ಧಿ ಸಾಧಿತವಾಗಿ ಸರ್ವೋದಯ ಸಮಾಜ ಸ್ಥಾಪನೆ ಆಗುತ್ತದೆ.
ಗಾಂಧಿಯವರು ಕಲ್ಪಿಸಿದ ಸುಂದರ ಆದರ್ಶಮಯ ಸರ್ವೋದಯ ಕೇವಲ ಕನಸಿನ ಮಾತೆಂದೂ ಭಾವಿಸಬೇಕಾದ್ದಿಲ್ಲ. ಅಂತಹ ಶ್ರೇಷ್ಠ ಮಾದರಿ ‘ರಾಮರಾಜ್ಯ’ವನ್ನು ಪುರುಷೋತ್ತಮನಾದ ಶ್ರೀರಾಮಚಂದ್ರ ನಮ್ಮ ದೇಶದಲ್ಲಿ ಸ್ಥಾಪಿಸಿದ್ದುದು ನಮ್ಮೆಲ್ಲರಿಗೂ ತಿಳಿದ ವಿಷಯವೇ. ಅದನ್ನು ‘Kingdom of God on Earth’ ಎಂದೇ ಕರೆಯುತ್ತಿದ್ದರು. ಐತಿಹಾಸಿಕವಾಗಿ ನಮ್ಮ ದೇಶದ ಚರಿತ್ರೆಯ ಪುಟಗಳನ್ನು ತಿರುಗಿಸಿ ನೋಡಿದಾಗ 5ನೇ ಶತಮಾನದಲ್ಲಿದ್ದ ‘ಗುಪ್ತರ ಸುವರ್ಣ ಯುಗ’ (Golden Age of the Guptas)
ಹಾಗೂ 15ನೇ ಶತಮಾನದಲ್ಲಿದ್ದ ಜಗದ್ವಿಖ್ಯಾತ ಹಾಗೂ ಸಂಪದ್ಭರಿತ ವಿಜಯನಗರ ಸಾಮ್ರಾಜ್ಯದ ವಿವರಗಳು ಭಾರತೀಯರಾದ ನಮಗೆ ಪರಿಚಿತವಲ್ಲವೇ? ಇವೆಲ್ಲ ಕೇವಲ ಕಟ್ಟುಕತೆಗಳಾಗದೆ ವಾಸ್ತವವಾಗಿ ಭಾರತದಲ್ಲಿದ್ದ ಆದರ್ಶರಾಜ್ಯಗಳ ಸುಂದರ ಚಿತ್ರಣವೇ ಆಗಿದೆ.
ಆದ್ದರಿಂದ ಸರ್ವೋದಯ ಮಾದರಿಯ ಆದರ್ಶ ರಾಜ್ಯದ ನಿರ್ಮಾಣ ನಿರಾಧಾರವೂ ಅಲ್ಲ, ಅಸಾಧ್ಯವಾದದ್ದೂ ಅಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ಸಾಮೂಹಿಕವಾಗಿ ನಾವೆಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಪಟ್ಟಿದ್ದೇ ಆದರೆ ಭಾರತದಲ್ಲಿ ಮತ್ತೊಮ್ಮೆ ಅಂತಹದೇ ಒಂದು ಮಾದರಿ ರಾಜ್ಯವನ್ನು ನಿರ್ಮಿಸಲು ಸಾಧ್ಯ ಎಂಬುದು ಗಾಂಧಿಯವರ ನಂಬಿಕೆ ಆಗಿತ್ತು. ಅದನ್ನು ಕಾರ್ಯಗತ ಮಾಡಬೇಕಾದುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯವಾಗಿದೆ.
ಸರ್ವೋದಯದ ಮೂಲಸೂತ್ರಗಳು
ಗಾಂಧಿಯವರ ಸರ್ವೋಚ್ಚ ಹಾಗೂ ಅಂತಿಮಗುರಿ ಸರ್ವೋದಯ ಸಮಾಜದ ನಿರ್ಮಾಣ. ಇದಕ್ಕೆ ಧರ್ಮದರ್ಶಿ ತತ್ತ್ವವು ತಾತ್ತ್ವಿಕ ನೆಲೆಯನ್ನು ಒದಗಿಸಿದರೆ ಸರ್ವೋದಯವು ಆದರ್ಶ ಆರ್ಥಿಕ ಮಾದರಿ ಆಯಿತು. ಈ ನೂತನ ಆರ್ಥಿಕ ಮಾದರಿಯ ಮೂಲ ಸೂತ್ರಗಳ ಬಗ್ಗೆ ಗಾಂಧಿಯವರ ಚಿಂತನೆ ಏನು ಎಂಬುದನ್ನು ವಿಶ್ಲೇಷಣೆ ಮಾಡುವುದು ಅವಶ್ಯ.
ಆಧ್ಯಾತ್ಮಿಕ ಹಾಗೂ ನೈತಿಕ ನೆಲೆಗಳು
ಗಾಂಧಿಯವರ ದೃಷ್ಟಿಯಲ್ಲಿ ಮಾನವನ ಪರಮ ಗುರಿ ಆತ್ಮಸಾಕ್ಷಾತ್ಕಾರ. ಈ ಉದ್ದೇಶಸಾಧನೆಗೆ ಮಾನವನು ಅನೇಕ ಹಂತಗಳನ್ನು ದಾಟಿ ಮುಂದೆ ಹೋಗಬೇಕಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳ ಅನುಷ್ಠಾನ ಮಾಡಬೇಕಾಗುತ್ತದೆ. ತನ್ಮೂಲಕ ಜೀವನದ ಉಚ್ಚ ಹಂತವನ್ನು ತಲಪಲು ಸಾಧ್ಯ. ಸರ್ವೋದಯ ತತ್ತ್ವ ಈ ಕಾರಣದಿಂದಾಗಿ ಸತ್ಯ, ಅಹಿಂಸೆ, ಪ್ರೀತಿ, ಪ್ರೇಮ, ಅಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ, ಅಭಯ, ಶರೀರಶ್ರಮ, ಸ್ವದೇಶೀ, ಸರ್ವಧರ್ಮ ಸಮಭಾವ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಹಾಗೂ ಸಮಾನತೆ ಇತ್ಯಾದಿ ಮೌಲ್ಯಗಳನ್ನು ಒಳಗೊಂಡಿದೆ. ಇವು ವ್ಯಕ್ತಿ ಮೌಲ್ಯಗಳೂ ಹೌದು, ಸಾಮಾಜಿಕ ಮೌಲ್ಯಗಳೂ ಹೌದು. ಪ್ರತಿಯೊಬ್ಬ ವ್ಯಕ್ತಿಯೂ ಈ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ವ್ಯಕ್ತಿಯ ಜೀವನ ಹಸನಾಗುವುದು. ಅವನು ಸಭ್ಯ, ಸುಸಂಸ್ಕೃತ ವ್ಯಕ್ತಿಯಾಗುವನು. ಸಮಾಜ ಇಂತಹ ವ್ಯಕ್ತಿಗಳಿಂದ ತುಂಬಿದ್ದರೆ ಸ್ವಚ್ಛ ಹಾಗೂ ಶುಭ್ರವಾದ ಸಮಾಜವಾಗುತ್ತದೆ. ಅಸ್ತೇಯ, ಅಪರಿಗ್ರಹ ಮತ್ತು ಶರೀರಶ್ರಮ ಮೌಲ್ಯಗಳ ಸಮಾಜೀಕರಣವಾದಾಗ ವ್ಯಕ್ತಿಗತ ಸ್ವಾರ್ಥಕ್ಕೆ ಬದಲಾಗಿ ಸಾಮಾಜಿಕ ಹಿತವು ಪ್ರಧಾನವಾಗಿ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಬೆಳಗುತ್ತದೆ. ಆಧ್ಯಾತ್ಮಿಕ, ಧಾರ್ಮಿಕ ಮತ್ತು ನೈತಿಕ ಮೌಲ್ಯಗಳ ಅನುಷ್ಠಾನದಿಂದ ಮಾನವನು ದಾನವತ್ವದಿಂದ ಮಾನವತ್ವ ಹಾಗೂ ದೈವತ್ವದ ಕಡೆಗೆ ತನ್ನ ಪಯಣ ಬೆಳೆಸಿ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳುವ ಪ್ರಯತ್ನದಲ್ಲಿ ಸಾಫಲ್ಯತೆ ಪಡೆಯಬಹುದು.
ಸರ್ವೋದಯದ ಅಡಿಪಾಯ ಧರ್ಮದರ್ಶಿ ತತ್ತ್ವ. ಇದರ ಬೆನ್ನೆಲುಬು ಅಪರಿಗ್ರಹ. ಅಪರಿಗ್ರಹ ತತ್ತ್ವದ ಪ್ರಕಾರ ಮನುಷ್ಯನು ತಾನು ಸಂಪಾದಿಸಿದ ಸಂಪತ್ತಿನಲ್ಲಿ ತನ್ನ ಸಭ್ಯಜೀವನ ನಡೆಸುವ ಸಲುವಾಗಿ ಕೇವಲ ಅವಶ್ಯವಾದಷ್ಟನ್ನು ಮಾತ್ರ ತನ್ನ ಸ್ವಂತಕ್ಕೆ ಬಳಸಬೇಕು. ಉಳಿದ ಹೆಚ್ಚುವರಿ ಸಂಪತ್ತಿಗೆ ತಾನು ಧರ್ಮದರ್ಶಿ ಎಂದು ಭಾವಿಸಿ ಸ್ವಇಚ್ಛೆಯಿಂದ, ಯಾರ ಒತ್ತಾಯವೂ ಇಲ್ಲದೆ ಅದನ್ನು ಸಮಾಜದ ಇತರ ಬಂಧುಗಳ ಒಳಿತಿಗಾಗಿ ವಿನಿಯೋಗಿಸಬೇಕು. ಆರ್ಥಿಕವಾಗಿ ಹಿಂದುಳಿದವರ ಏಳಿಗೆ ಹಾಗೂ ಆರ್ಥಿಕ ಸಮಾನತೆಯನ್ನು ಏಕಕಾಲದಲ್ಲಿ ಸಾಧಿಸಲು ಗಾಂಧಿಯವರು ಇಂತಹ ಅದ್ಭುತ ಕಲ್ಪನೆಯನ್ನು ಜನರ ಮುಂದೆ ಇಟ್ಟರು. ‘ನಿನ್ನಲ್ಲಿರುವುದನ್ನು ನಿರ್ವಂಚನೆಯಿಂದ ಬೇರೆಯವರಿಗೆ ಕೊಡು. ಆದರೆ ಬೇರೆಯವರಿಂದ ಏನನ್ನೂ ಆಶಿಸಬೇಡ. ಬೇರೆಯವರಿಗಾಗಿ ನೀನು ಬದುಕುವುದನ್ನು ಕಲಿ.’ ಇವು ಆದರ್ಶದ ಮಾತುಗಳು. ‘ನೀವು ನನಗಾಗಿ ಬದುಕಿ, ನಾನು ನಿಮಗಾಗಿ ಬದುಕುತ್ತೇನೆ – ಎನ್ನುವ ಸರಳ ವಿಚಾರ ನಮ್ಮ ಜೀವನದಲ್ಲಿ ಇಳಿದಾಗ ಎಲ್ಲರ ಜೀವನ ಸಂಪನ್ನಗೊಂಡೀತು’ ಎಂದಿದ್ದಾರೆ ಗಾಂಧಿ.
ಸಾಮಾಜಿಕ ವ್ಯವಸ್ಥೆ
ಸರ್ವೋದಯ ಸಮಾಜ ವ್ಯವಸ್ಥೆಯಲ್ಲಿ ವ್ಯಷ್ಟಿ ಸಮಷ್ಟಿ ಹಿತ ಸಂಬಂಧಗಳ ಸುಮಧುರ ಮೇಳವಿರುತ್ತದೆ. ವ್ಯಕ್ತಿಯ ಬದುಕಿಗೂ ಸಮಷ್ಟಿಯ ಬದುಕಿಗೂ ಸಾಮರಸ್ಯವನ್ನು ಹೆಣೆಯುವ ದಿಕ್ಕಿನಲ್ಲಿ ಪ್ರತಿವ್ಯಕ್ತಿಗೂ ಸಮಾನ ಅವಕಾಶ, ಸಮಾನ ಜವಾಬ್ದಾರಿ ಹಾಗೂ ಸಮಾನ ಮಾನ್ಯತೆಯನ್ನು ನೀಡಿದೆ. ವ್ಯಕ್ತಿಸ್ವಾತಂತ್ರ್ಯವು ಸಮಾಜದಲ್ಲಿ ಇತರರ ಸ್ವಾತಂತ್ರ್ಯಕ್ಕೆ ಮಾರಕವಾಗುವ ಅತಿರೇಕ ಸ್ವಾತಂತ್ರ್ಯವಾಗುವುದಿಲ್ಲ. ವ್ಯಕ್ತಿಸ್ವಾತಂತ್ರ್ಯವು ಸಾಮಾಜಿಕ ಸಂಯಮ ಸೂತ್ರಕ್ಕೆ ಬದ್ಧವಾಗಿ ವ್ಯಕ್ತಿ ಮತ್ತು ಸಮಾಜದ ಪರಸ್ಪರ ಸಂಬಂಧದಲ್ಲಿ ಹಿತಕರ ಮೇಳವಿರುತ್ತದೆ.
ಸಾಮಾಜಿಕ ಸಮತೆ
ಸರ್ವೋದಯ ಸಮಾಜದ ನೆಲೆಗಟ್ಟು ಸಮಾನತೆ ಇಂದು ನಮ್ಮ ಸಮಾಜ ಜಾತಿ, ಮತ, ಪಂಥ, ಸಂಪ್ರದಾಯ, ಧರ್ಮ, ವರ್ಣ, ಲಿಂಗ, ಭಾಷೆ, ಅಂತಸ್ತು ಇತ್ಯಾದಿಗಳ ಹೆಸರಿನಲ್ಲಿ ಛಿದ್ರವಾಗಿದೆ. ಈ ಒಂದೊಂದು ಭೇದ-ಭಾವಗಳೂ ಅಶಾಂತಿ, ದ್ವೇಷ, ಕಲಹ, ವರ್ಗಸಂಘರ್ಷ ಹಾಗೂ ಸಂಹಾರಗಳಿಗೆ ಕಾರಣವಾಗಿವೆ. ಈ ಭೇದ-ಭಾವಗಳ ಗೋಡೆಗಳನ್ನು ಒಡೆದು ಸಮಾನತೆಯ ಆಧಾರದ ಮೇಲೆ ಸಮಾಜದಲ್ಲಿ ಒಗ್ಗಟ್ಟನ್ನು ಬೆಳೆಸಬೇಕು. ಮನುಷ್ಯ ಈ ಸಂಕೀರ್ಣ ಭೇದಗಳಿಂದ ಮೇಲೆದ್ದು ವಿಶ್ವನಾಗರಿಕನಾದಾಗಲೇ ಶಾಂತಿ ಸಮೃದ್ಧಿಗಳು ಸ್ಥಿರವಾಗಿ ನೆಲಸಲು ಸಾಧ್ಯ. ಆದ್ದರಿಂದ ಸರ್ವೋದಯ ಇಂಥ ಸಂಕೀರ್ಣ ಭೇದಗಳನ್ನು ನಿವಾರಿಸಿ ಪ್ರತಿಯೊಬ್ಬನೂ ವಿಶ್ವವಿಶಾಲ ಭಾವನೆ, ವಿಶ್ವದೃಷ್ಟಿಯನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ.
ಸರ್ವಧರ್ಮ ಸಮಭಾವ
ಧರ್ಮವು ವಿಶಾಲ ಅರ್ಥವುಳ್ಳದ್ದು ಎಂದರು ಗಾಂಧಿ. ಅದು ಜಾತಿ ಮತ ಮುಂತಾದ ಸಂಕುಚಿತ ಮನೋಭಾವವನ್ನು ತಿರಸ್ಕರಿಸುತ್ತದೆ. ವ್ಯಕ್ತಿಯನ್ನು ಸತ್ಯಕ್ಕೆ ಬದ್ಧನನ್ನಾಗಿ ಮಾಡುವ ತತ್ತ್ವವೇ ಧರ್ಮ. ಮನುಷ್ಯನು ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮತ್ತು ಮೋಕ್ಷವನ್ನು ಪಡೆಯಲು ಧರ್ಮವು ಸಹಾಯಕವಾಗುವುದು. ಎಲ್ಲ ಧರ್ಮಗಳ ಗುರಿಯೂ ಒಂದೇ: ಸತ್ಯಶೋಧನೆ ಮತ್ತು ಸತ್ಯದ ಸಾಕ್ಷಾತ್ಕಾರ. ವಿವಿಧ ಧರ್ಮಗಳು ಒಂದೇ ಮರದ ವಿವಿಧ ಕೊಂಬೆಗಳು. ಆದ ಕಾರಣ ವಿವಿಧ ಧರ್ಮಗಳ ನಡುವೆ ವಿರಸಕ್ಕೆ ಕಾರಣವಿಲ್ಲ. ಒಬ್ಬ ವ್ಯಕ್ತಿಯು ಯಾವ ಧರ್ಮಕ್ಕೆ ಸೇರಿರುತ್ತಾನೋ ಆ ಧರ್ಮದ ಉದಾತ್ತ ತತ್ತ್ವಗಳನ್ನು ಅನುಷ್ಠಾನ ಮಾಡಿ ತನ್ನ ಜೀವನವನ್ನು ಹಸನು ಮಾಡಿಕೊಳ್ಳಬೇಕು. ಹಿಂದು ಆದವನು ಶ್ರೇಷ್ಠ ಹಿಂದುವಾಗಬೇಕು. ಕ್ರೈಸ್ತನಾದವನು ಒಳ್ಳೆಯ ಕ್ರೈಸ್ತನಾಗಬೇಕು. ಹಾಗೆಯೇ ಮುಸಲ್ಮಾನನಾದವನು ಉತ್ತಮ ಮುಸ್ಲಿಮನಾಗಬೇಕು. ಎಲ್ಲ ಧರ್ಮಗಳೂ ಈ ಗುರಿಯನ್ನು ಸಾರಿ ಸಾರಿ ಹೇಳುತ್ತವೆ. ಆದ್ದರಿಂದ ಎಲ್ಲ ಧರ್ಮಗಳೂ ಗೌರವಾರ್ಹ. ಪ್ರತಿಯೊಬ್ಬರೂ ಸರ್ವಧರ್ಮ ಸಮಭಾವವನ್ನು ಬೆಳೆಸಿಕೊಂಡರೆ ಜಗತ್ತಿನೆಲ್ಲೆಡೆ ಸಾಮರಸ್ಯ ಹಾಗೂ ಶಾಂತಿ ನೆಲಸಲು ಸಾಧ್ಯ. ಸರ್ವೋದಯ ಈ ಚಿಂತನೆಯನ್ನು ತನ್ನದಾಗಿಸಿಕೊಂಡಿದೆ.
ಸರ್ವೋದಯದ ಮಾರ್ಗ
ಗಾಂಧಿಯವರು ಸರ್ವೋದಯ ಸಮಾಜ ರಚನೆಗೆ ಆಯ್ಕೆ ಮಾಡಿದ ಮಾರ್ಗ ಅಹಿಂಸಾತ್ಮಕ ಹೋರಾಟ. ಅಹಿಂಸೆಯೇ ಧರ್ಮ, ಈ ಮಾರ್ಗವೇ ಸರ್ವಶ್ರೇಷ್ಠ ಎಂಬುದು ಅವರ ಸ್ಪಷ್ಟ ನಿಲವು. ಅವರ ದೃಷ್ಟಿಯಲ್ಲಿ ಅಹಿಂಸೆಗೆ ಎರಡು ಮುಖಗಳಿವೆ. ಮೊದಲನೆಯದು ಹಿಂಸಾನಿರೋಧಕ. ಅಂದರೆ ಹಿಂಸಾಮಾರ್ಗವನ್ನು ಸರ್ವತಾ ತ್ಯಜಿಸುವುದು. ಎರಡನೆಯದು ಪ್ರೇಮಸಂಸ್ಥಾಪಕ; ಅಂದರೆ ಪ್ರೀತಿ ಪ್ರೇಮ ಮಾರ್ಗದ ಆಯ್ಕೆ. ಇವೆರಡೂ ಪರಸ್ಪರ ಪೂರಕ. ಮೊದಲ ಮಾರ್ಗ ತ್ಯಜಿಸಿದಾಗ ಸಹಜವಾಗಿ ಎರಡನೆಯದರ ಆಯ್ಕೆ ಸಾಧ್ಯ. ಎರಡನೆಯ ಮಾರ್ಗದಲ್ಲಿ ಕ್ರಮಿಸಿದರೆ ಮೊದಲ ಮಾರ್ಗದ ಗುರಿ ತಲಪಲು ಸಾಧ್ಯ. ಆದ್ದರಿಂದ ಇವೆರಡೂ ಜೊತೆಜೊತೆಯಾಗಿ ನಡೆದಾಗ ಮಾತ್ರ ಅಹಿಂಸಾಪಥದಲ್ಲಿ ಮುನ್ನಡೆ ಸಾಧ್ಯ. ಪ್ರೇಮಮಯ ಹೃದಯಕ್ಕೆ ಮಾತ್ರ ಹಿಂಸಾಮಾರ್ಗದ ತಿಲಾಂಜಲಿ ಸಾಧ್ಯ. ಪ್ರೇಮಗಂಗೆ ಹರಿದಾಗಲೇ ಅಹಿಂಸೆಯ ಉಗಮ. ಅಹಿಂಸಾ ಮಾರ್ಗವೇ ಸರ್ವೋದಯದ ದಾರಿದೀಪ.
ಶ್ರೇಷ್ಠ ಸಾಧನದ ಆಯ್ಕೆ
ಸರ್ವರ ಸರ್ವತೋಮುಖ ಅಭಿವೃದ್ಧಿ ಸರ್ವೋದಯದ ಸರ್ವೋತ್ಕೃಷ್ಟ ಗುರಿ. ಈ ಶ್ರೇಷ್ಠ ಆದರ್ಶದ ಗುರಿಯನ್ನು ಸಾಧಿಸಲು ಅವರು ಆರಿಸಿದ ಸಾಧನಗಳು ಅಷ್ಟೇ ಉತ್ಕೃಷ್ಟವಾದವು. ‘ಗುರಿಗಳು ಮತ್ತು ಸಾಧನಗಳು’ (ಒeಚಿಟಿs ಚಿಟಿಜ ಇಟಿಜs) ಎಂಬ ಪುಸ್ತಕದಲ್ಲಿ ಂಟಜous ಊuxಟeಥಿ ಅವರು ಈ ವಿಷಯಗಳಿಗೆ ಸಂಬಂಧಪಟ್ಟ ಚರ್ಚೆ ಮಾಡಿದ್ದಾರೆ. ವಿವರಗಳನ್ನು ನೀಡುತ್ತಾ ಗ್ರಂಥಕರ್ತರು
“ಗುರಿಯು ಸಾಧನವನ್ನು ಸಮರ್ಥಿಸುತ್ತದೆ” (Ends Justify the Means) ಎನ್ನುತ್ತಾರೆ. ಗುರಿ ಪವಿತ್ರವಾಗಿದ್ದರೆ ಸಾಕು, ಸಾಧನ ಯಾವುದಾದರೂ ಸರಿಯೆ ಎನ್ನುವ ವಾದವನ್ನು ಮಂಡಿಸಿದ್ದಾರೆ. ಅವರ ಸಮರ್ಥನೆ ಏನೆಂದರೆ ಸಮಾಜದ ಹಿತವನ್ನು ಸಾಧಿಸುವ ಉದ್ದೇಶ ಹೊಂದಿದಾಗ ಆ ಗುರಿಯನ್ನು ಮುಟ್ಟಲು ಯಾವ ಸಾಧನಗಳನ್ನಾದರೂ ಬಳಕೆ ಮಾಡಬಹುದು. ನಾವು ಸಾಧನಗಳ ಬಗ್ಗೆ ಹೆಚ್ಚು ಚಿಂತೆ ಮಾಡಬಾರದು. ಕಮ್ಯೂನಿಸಂ ಸಿದ್ಧಾಂತವನ್ನು ರಷ್ಯಾದಲ್ಲಿ ಜಾರಿಗೊಳಿಸುವ ಸಂದರ್ಭದಲ್ಲಿ ಲೆನಿನ್ ಈ ಮಾತುಗಳನ್ನು ಹೇಳುತ್ತಾನೆ – “ನಾವು ನಮ್ಮ ಗುರಿಯನ್ನು ತಲಪಲು ಯಾವುದೇ ರೀತಿಯ ಕುಯುಕ್ತಿ, ಮೋಸ, ಕಪಟ, ನ್ಯಾಯೋಚಿತವಲ್ಲದ, ನುಣುಚಿಕೊಳ್ಳುವಂತಹ ಮತ್ತು ಸತ್ಯವನ್ನು ಮುಚ್ಚಿಡುವಂತಹ ಪ್ರಯತ್ನ ಮಾಡಬೇಕಾಗುತ್ತದೆ.”
ಗಾಂಧಿಯವರು ಈ ವಿಚಾರವನ್ನು ಸ್ಪಷ್ಟವಾಗಿ ಮತ್ತು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ. ಬದಲಿಗೆ ಅವರು ಈ ರೀತಿ ಹೇಳುತ್ತಾರೆ: “ಸಾಧನಗಳು ಕೇವಲ ಸಾಧನಗಳಷ್ಟೇ ಎಂದು ಬಹಳ ಮಂದಿ ಹೇಳುತ್ತಾರೆ. ಆದರೆ ನನ್ನ ದೃಷ್ಟಿಯಲ್ಲಿ ಸಾಧನಗಳೇ ಬಹಳ ಮುಖ್ಯ; ಸಾಧನಗಳೇ ಎಲ್ಲವೂ ಆಗಿವೆ.” ಸಾಧನಗಳಿದ್ದಂತೆ ಗುರಿಯು ಸಹ. ಇವೆರಡರ ನಡುವೆ ಯಾವ ತಡೆಗೋಡೆಗಳೂ ಇಲ್ಲ. ಗುರಿಮುಟ್ಟಲು ಸಾಧನದ ಪ್ರಮಾಣವೂ ಸರಿಸಮಾನವಾಗಿರಬೇಕು. ಇದಕ್ಕೆ ಯಾವರೀತಿಯ ರಿಯಾಯತಿಯೂ ಇಲ್ಲ (ಯಂಗ್ ಇಂಡಿಯಾ, 17-7-1924).
ಒಳ್ಳೆಯ ಉದ್ದೇಶಗಳ ಬಗ್ಗೆ ನನ್ನ ಶ್ಲಾಘನೆ ಮತ್ತು ಸಹಾನುಭೂತಿ ಎಷ್ಟೇ ಇದ್ದರೂ ಸಹ ಅದನ್ನು ಪೂರ್ತಿಗೊಳಿಸಲು ಹಿಂಸಾತ್ಮಕ ಮಾರ್ಗವನ್ನು ಒಪ್ಪಲಾರೆ ಮತ್ತು ಆ ಮಾರ್ಗದ ಬಗ್ಗೆ ನಾನು ಯಾವ ಹೊಂದಾಣಿಕೆಯನ್ನೂ ಮಾಡಿಕೊಳ್ಳಲಾರೆ. ಶಾಶ್ವತವಾದ ಸತ್ಯವನ್ನು ಎಂದೂ ಸಹ ಹಿಂಸೆ ಮತ್ತು ಅಸತ್ಯಗಳಿಂದ ಗಳಿಸಲು ಸಾಧ್ಯವಿಲ್ಲ ಎಂದು ನನ್ನ ಅನುಭವ ತಿಳಿಸುತ್ತದೆ (ಯಂಗ್ ಇಂಡಿಯಾ, 11-12-1924. ಪು.ಸಂ. -406).
‘ನಿನ್ನ ಕರ್ಮವನ್ನು ನೀನು ಮಾಡು. ಅದರ ಫಲವನ್ನು ಭಗವಂತನ ಮೇಲೆ ಬಿಡು’ ಎನ್ನುವುದು ಭಗವದ್ಗೀತೆಯ ಚಿನ್ನದ ನುಡಿ (ಹರಿಜನ, 18.8. 1940. ಪು.ಸಂ. – 254).
ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳುವಾಗ ಪ್ರತಿಯೊಂದು ಹಂತದಲ್ಲೂ ನಿಶ್ಚಿತವಾದ ಕೆಲಸವನ್ನು ನಿರ್ಧರಿಸಿರುತ್ತಾರೆ. ಅದರಂತೆ ನಾವು ಕರ್ತವ್ಯಪ್ರವೃತ್ತರಾಗಬಹುದು. ಆದರೆ ಪ್ರತಿಫಲ ನಮ್ಮ ಕೈಯಲ್ಲಿ ಇರುವುದಿಲ್ಲ. ಅದು ಭಗವಂತನ ಇಚ್ಛೆಗೆ ಬಿಟ್ಟದ್ದು (ಹರಿಜನ, 6.5.1939, ಪು.ಸಂ. – 112).
ಸಾಮಾಜಿಕ ಹಾಗೂ ಮಾನವೀಯ ಆದರ್ಶಗಳನ್ನು ಮುಟ್ಟುವ ಸಲುವಾಗಿ ಮನುಷ್ಯ ‘ಪ್ರತೀಕಾರ’ ಭಾವನೆಯನ್ನು ತ್ಯಜಿಸಿ ಸಂಯಮವನ್ನು ತೋರಬೇಕು. ಪ್ರತೀಕಾರ ತೀರಿಸಿಕೊಳ್ಳುವುದೇ ನಮ್ಮ ಧರ್ಮ ಎನ್ನುವ ಭಾವನೆಯನ್ನು ಬಹಳ ಮಂದಿ ಬೆಳೆಸಿಕೊಂಡಿದ್ದಾರೆ. ಅದೇ ಪ್ರಕೃತಿಯ ನಿಯಮ ಎಂದೂ ಹೇಳುತ್ತಾರೆ. ಆದರೆ ಯಾವುದೇ ಪವಿತ್ರ ಗ್ರಂಥಗಳಲ್ಲಿ ಪ್ರತೀಕಾರ ಮಾಡುವುದು ‘ಅನಿವಾರ್ಯ’ ಎಂದು ಹೇಳಿಲ್ಲ. ಬದಲಿಗೆ ಅದನ್ನು ಉಪಯೋಗಿಸುವ ಅನುಮತಿ ಮಾತ್ರ ಇದೆ ಎಂದು ಹೇಳಿದೆ. ಸಂಯಮವೇ ನಮ್ಮ ಕಟ್ಟುಪಾಡು. ಅದೇ ನಮ್ಮ ನಿಯಮವಾಗಬೇಕು. ಅತ್ಯಂತ ಮಹತ್ತ್ವಪೂರ್ಣವಾದ ಕೆಲಸವನ್ನು ಹೆಚ್ಚಿನ ಸಂಯಮ ಇಲ್ಲದೆ ಸಾಧಿಸುವುದು ಅಸಾಧ್ಯ (Ibiಜ, 9.3.1920).
ಆತ್ಮಸಂಯಮದ ಮೇಲೆ ನಾವು ನಮ್ಮ ನಿಯಂತ್ರಣವನ್ನು ಇರಿಸಿಕೊಳ್ಳಬೇಕು. ಭಾವೋದ್ರಿಕ್ತ ಮನಸ್ಸು, ಹಠಾತ್ ಪ್ರವೃತ್ತಿ ಇತ್ಯಾದಿಗಳು ನಾವು ನಮ್ಮ ಗುರಿಯನ್ನು ಮುಟ್ಟಲು ಯಾವುದೇ ರೀತಿಯ ಸಾಧನಗಳನ್ನಾದರೂ ಬಳಸುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. ಗುರಿಗಿಂತ ಸಾಧನಗಳ ಮೇಲೆ ನಮಗೆ ಹೆಚ್ಚಿನ ನಿಯಂತ್ರಣ ಇರುವ ಕಾರಣ ಆತ್ಮಸಂಯಮದ ಮೇಲೆ ಹಿಡಿತ ಅಗತ್ಯವಾಗುತ್ತದೆ. 1909ರಿಂದಲೂ ನಾನು ಗುರಿ ಮತ್ತು ಸಾಧನಗಳು ಪರಿವರ್ತಿತ ಪದಗಳು ಎಂದು ಹೇಳುತ್ತಾ ಬಂದಿದ್ದೇನೆ. ಎಲ್ಲಿ ಸಾಧನಗಳು ಹಲವಾರು ಆಗಿ ಪರಸ್ಪರ ವಿರುದ್ಧವಾಗಿರುತ್ತದೆಯೋ ಆಗ ಗುರಿಗಳು ಸಹ ಹಲವಾರು ಆಗಿ ಪರಸ್ಪರ ವಿರುದ್ಧವಾಗಿರಬೇಕು. ನಮಗೆ ಸಾಧನಗಳ ಮೇಲೆ ಹೆಚ್ಚಿನ ನಿಯಂತ್ರಣವಿದೆಯೇ ಹೊರತು ಗುರಿಗಳ ಮೇಲಲ್ಲ (Mahatma, by B.G. Tendulkar, Vol III, p-299).
ಈ ಎಲ್ಲ ಕಾರಣಗಳಿಂದಾಗಿ ನಾವು ನಮ್ಮ ನಿಶ್ಚಿತವಾದ ವೈಯಕ್ತಿಕ ಹಾಗೂ ಸಾಮಾಜಿಕ ಗುರಿ ಮುಟ್ಟಲು ನಮಗೆ ತಿಳಿದಿರುವ ಸಾಧನಗಳಿಗೆ ಮತ್ತು ವಾಸ್ತವಾಂಶಗಳಿಗೆ ಮಹತ್ತ್ವ ನೀಡಲೇಬೇಕಾಗುತ್ತದೆ. ಗುರಿ ಮತ್ತು ಸಾಧನಗಳ ನಡುವೆ ನಾವು ಭೇದ ಮಾಡಬಹುದಾದರೂ ಸಂಪೂರ್ಣವಾಗಿ ಅವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಸಾಧನಗಳು ಗುರಿಯನ್ನು ಹೇಗೆ ಮುಟ್ಟಲು ಸಾಧ್ಯ ಎಂಬುದನ್ನು ತಿಳಿಸುತ್ತವೆ. ಆದ್ದರಿಂದ ಗಾಂಧಿಯವರು ‘ಸಾಧನಗಳನ್ನು ಬೀಜಕ್ಕೂ, ಗುರಿಯನ್ನು ಮರಕ್ಕೂ ಹೋಲಿಸಬಹುದು. ಬೀಜ ಮತ್ತು ಮರಕ್ಕೆ ಇರುವ ಸಂಬಂಧ ಗುರಿ ಮತ್ತು ಸಾಧನಗಳಿಗೆ ಇರುವ ಅವಿನಾಭಾವ ಸಂಬಂಧ’ ಎಂದರು (ಹಿಂದ್ ಸ್ವರಾಜ್, 1962, ಪು.ಸಂ. 71).
ಸಾಧನಗಳ ಬಗ್ಗೆ ಗಾಂಧಿಯವರು ಹೆಚ್ಚಿನ ಮಹತ್ತ್ವ ನೀಡಿರುವ ಕಾರಣ ಗುರಿಯನ್ನು ಕಡೆಗಣಿಸಿದ್ದಾರೆ ಎಂದು ಅರ್ಥವಲ್ಲ. ಕೇವಲ ಅಂತಿಮ ಉದ್ದೇಶಗಳ ಬಗ್ಗೆ ಹೆಚ್ಚು ಚರ್ಚೆ ಮಾಡುವುದರ ಬದಲು ಅವುಗಳನ್ನು ಹೇಗೆ ಕಾರ್ಯಗತ ಮಾಡಬೇಕು ಎನ್ನುವುದರ ಕಡೆಗೆ ಗಮನ ನೀಡಬೇಕು. ಒಮ್ಮೆ ಗುರಿ ಸ್ಪಷ್ಟವಾದರೆ ಮತ್ತೆ ಮತ್ತೆ ಅದನ್ನು ಪುನರುಚ್ಚರಿಸುವ ಆವಶ್ಯಕತೆ ಇಲ್ಲ. ಎಷ್ಟೇ ಉದಾತ್ತವಾದ ಗುರಿಯನ್ನು ಇಟ್ಟುಕೊಂಡರೂ ಶುದ್ಧ ಸಾಧನವನ್ನು ಉಪಯೋಗಿಸುವ ಮಾರ್ಗವನ್ನು ಅರಿಯದೆಹೋದರೆ ಗುರಿ ಮುಟ್ಟಲು ಅಸಾಧ್ಯ.
ಆದ್ದರಿಂದ ನನ್ನ ಲಕ್ಷ್ಯವೆಲ್ಲ ಮುಖ್ಯವಾಗಿ ಯೋಗ್ಯ ಸಾಧನ ಮತ್ತು ಅದರ ನಿರಂತರ ಅನುಷ್ಠಾನದತ್ತಲೇ ಇರುತ್ತದೆ. ಸಾಧನಗಳ ಬಗ್ಗೆ ನಾವು ಎಚ್ಚರ ವಹಿಸಿದರೆ ಗುರಿ ಮುಟ್ಟುವುದು ಖಚಿತ. (ಅಮೃತ ಬಾಜಾರ್ ಪತ್ರಿಕಾ, 17.9.1933).
ಈ ಮಾರ್ಗ ದೀರ್ಘಕಾಲಿಕ ಎಂದು ಬಹಳ ಜನರಿಗೆ ಅನಿಸಬಹುದು. ಆದರೆ ಅದೇ ಹತ್ತಿರದ ಮಾರ್ಗ ಎನ್ನುವುದು ನನ್ನ ಅಚಲ ನಂಬಿಕೆ. ಸಮತಾವಾದಕ್ಕೂ ಸರ್ವೋದಯಕ್ಕೂ ಇರುವ ಮುಖ್ಯ ಅಂತರವಿರುವುದು ಈ ಅಂಶದ ಬಗ್ಗೆಯೇ. ಹಿಂಸಾತ್ಮಕ ಕ್ರಾಂತಿ ಮಾಡಿ ಕಮ್ಯೂನಿಸ್ಟರು ರಷ್ಯಾದಲ್ಲಿ ಕಮ್ಯೂನಿಸಂ ಸ್ಥಾಪಿಸಿದರು. ‘ಮುಯ್ಯಿಗೆ ಮುಯ್ಯಿ’ ಇದು ಕಾರ್ಲ್ಮಾಕ್ರ್ಸ್ ಮತ್ತು ಆತನ ಅನುಯಾಯಿಗಳ ಮಾರ್ಗವಾಗಿತ್ತು. ಆದರೆ ಗಾಂಧಿಯವರ ಸರ್ವೋದಯದ ದಾರಿ ಅಹಿಂಸಾತ್ಮಕವಾದದ್ದು. ಹಿಂಸೆ, ಕ್ರಾಂತಿ, ರಕ್ತಪಾತದ ಬದಲಾಗಿ ಅಹಿಂಸೆ, ಸತ್ಯಾಗ್ರಹ, ಉಪವಾಸ, ಅಸಹಕಾರ, ಮೌನ ಇತ್ಯಾದಿಗಳು ಗಾಂಧಿಯವರ ಹೊಸ ಅಸ್ತ್ರಗಳು ಮತ್ತು ಸಾಧನಗಳಾಗಿದ್ದವು.
ಸರ್ವೋದಯ ಸಮಾಜದ ನಿರ್ಮಿತಿಗೆ ಸತ್ಯಾಗ್ರಹ ಅತ್ಯಂತ ಪರಿಣಾಮಕಾರಿ ಸಾಧನವಾಯಿತು. ಸತ್ಯ ಮತ್ತು ಧರ್ಮಪಾಲನೆಯೇ ಸತ್ಯಾಗ್ರಹದ ಉದ್ದೇಶವಾದ ಕಾರಣ ಸಮಾಜದಲ್ಲಿ ತಲೆದೋರುವ ಅನ್ಯಾಯ, ಅಧರ್ಮಗಳನ್ನು ಮೂಲೋತ್ಪಾಟನೆ ಮಾಡಲು ಸತ್ಯಾಗ್ರಹ ಒಳ್ಳೆಯ ಸಾಧನವಾಯಿತು.
(ಮುಂದುವರಿಯುವುದು)