“ಗಾಂಧಿಯವರು ತಮ್ಮ ಆರ್ಥಿಕ ನಿಲವುಗಳನ್ನು ಶೈಕ್ಷಣಿಕತಜ್ಞರ ಭಾಷೆಯಲ್ಲಿ ತಿಳಿಸದೆ , ಸಾಮಾನ್ಯಜನರ ಭಾಷೆಯಲ್ಲಿ ಹೇಳಿದರು. ಆದ್ದರಿಂದ ಇತರ ಆರ್ಥಿಕತಜ್ಞರು ಗಾಂಧಿಯವರನ್ನು ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ ಎಂದು ಪರಿಗಣಿಸಲು ಸಾಧ್ಯವಾಗದೆ ಹೋಯಿತು.”
– ಇ.ಎಫ್. ಶುಮಾಕರ್, ಖ್ಯಾತ ಜರ್ಮನ್ ಅರ್ಥಶಾಸ್ತ್ರಜ್ಞ
ಗಾಂಧಿಯವರು ಯಂತ್ರಗಳ ಬಳಕೆಯ ಬಗ್ಗೆ ಹಾಗೂ ಪಾಶ್ಚಿಮಾತ್ಯ ಮಾದರಿಯ ಕೈಗಾರಿಕೀಕರಣದ ಬಗ್ಗೆ ತಮ್ಮದೇ ಆದ ಸ್ಪಷ್ಟ ನಿಲವನ್ನು ಹೊಂದಿದ್ದರು. ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಕೈಗಾರಿಕೀಕರಣದ ಪಾತ್ರವನ್ನು ಅವರು ತಮ್ಮದೇ ಆದ ಶೈಲಿಯಲ್ಲಿ ಮನೋಜ್ಞವಾಗಿ ವಿಶ್ಲೇಷಿಸಿದ್ದಾರೆ.
ಕೈಗಾರಿಕೀಕರಣ
ಯಾವುದೇ ಒಂದು ವ್ಯವಸಾಯಪ್ರಧಾನ ಸಮಾಜ ಕಾಲಕ್ರಮೇಣ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳಿಂದ ಔದ್ಯೋಗೀಕರಣಗೊಂಡು ಪುನಃಸಂಘಟಿತವಾಗಿ, ಕೈಗಾರಿಕಾವಸ್ತುಗಳ ಉತ್ಪಾದನೆ ಮಾಡುವ ಆರ್ಥಿಕತೆ ಹಾಗೂ ಸಾಮಾಜಿಕವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಗೆ ಕೈಗಾರಿಕೀಕರಣ ಎಂದು ಕರೆಯುತ್ತಾರೆ. ಅಂತಹ ವ್ಯವಸ್ಥೆಯಲ್ಲಿ ದೈಹಿಕಶ್ರಮದಿಂದ ದುಡಿಯುವ ಶ್ರಮಿಕರ ಸ್ಥಾನವನ್ನು ಯಂತ್ರಗಳು ಆಕ್ರಮಿಸಿಕೊಂಡು ಉತ್ಪಾದನಾ ಪ್ರಕ್ರಿಯೆಯಲ್ಲಿ ತಮ್ಮ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತವೆ. ಹೀಗೆ ಕೃಷಿಪ್ರಧಾನ ದೇಶವು ಕೈಗಾರಿಕಾಪ್ರಧಾನ ದೇಶವಾಗಿ ಪರಿವರ್ತಿತವಾಗುತ್ತದೆ. ಈ ಪರಿವರ್ತನೆಯ ಸಂದರ್ಭದಲ್ಲಿಅನೇಕ ರೀತಿಯ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳು ಅಲ್ಲಿ ಆಗುತ್ತವೆ. ಅವುಗಳಲ್ಲಿ ಕೆಲವು ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಕಾರಣೀಭೂತವಾದರೆ, ಇನ್ನು ಕೆಲವು ಬೆಳವಣಿಗೆಗೆ ಮಾರಕವಾಗುತ್ತವೆ. ಹೀಗೆ ಕೈಗಾರಿಕೀಕರಣಗೊಂಡ ದೇಶಗಳಲ್ಲಿ ಮಿಶ್ರಫಲಗಳನ್ನು ಕಾಣುತ್ತೇವೆ.
ಭಾರತಕ್ಕೆ ಪಾಶ್ಚಿಮಾತ್ಯ ರೀತಿಯ ಕೈಗಾರಿಕೀಕರಣ ಬೇಕೇ ಬೇಡವೇ ಎಂಬುದರ ಬಗ್ಗೆ ಗಾಂಧಿಯವರು ತಮ್ಮ ಸ್ಪಷ್ಟನಿಲವುಗಳನ್ನು ಅನೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. ಸಮಗ್ರಭಾರತದ ಆರ್ಥಿಕ ಹಿನ್ನೆಲೆಯ ಪರಿಚಯವಿದ್ದ ಅವರು, ಅದರ ಸಾಧಕ-ಬಾಧಕಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಆರ್ಥಿಕತಜ್ಞರು, ಸಮಾಜವಿಜ್ಞಾನಿಗಳು ಹಾಗೂ ಸಾಮಾನ್ಯಜನರು ಕೈಗಾರಿಕೀಕರಣದಿಂದ ಅತ್ಯಲ್ಪ ಕಾಲದಲ್ಲಿ ಆದ ಕ್ಷಿಪ್ರ ಆರ್ಥಿಕಪ್ರಗತಿ ಮತ್ತು ಉತ್ಕಷ್ಟ, ರಾಷ್ಟ್ರೀಯ ಮತ್ತು ತಲಾ ಆದಾಯದ ಹೆಚ್ಚಳ, ಅನುಭೋಗಪ್ರಮಾಣ ಹಾಗೂ ಜೀವನಮಟ್ಟದಲ್ಲಿ ಸುಧಾರಣೆ ಆಗಿದೆ ಎಂದು ಭಾವಿಸಿದ ಸಂದರ್ಭದಲ್ಲಿ, ಗಾಂಧಿಯವರು ಹೇಗೆ ಪಾಶ್ಚಿಮಾತ್ಯ ಮಾದರಿಯ ಔದ್ಯೋಗೀಕರಣವು ಭಾರತದ ಆರ್ಥಿಕವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಅತ್ಯಂತ ವಿಶದವಾಗಿ ಜನಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಕೈಗಾರಿಕೀಕರಣದ ಆವಶ್ಯಕತೆ ಇದೆಯೋ ಇಲ್ಲವೋ ಎಂಬುದರ ವಿಶ್ಲೇಷಣೆ ಮಾಡುತ್ತ ಅವರು, “ಕೈಗಾರಿಕಾ ನಾಗರಿಕತೆ ಒಂದು ಕಾಯಿಲೆ. ಏಕೆಂದರೆ ಅದು ಎಲ್ಲ ರೀತಿಯ ಕೆಡುಕುಗಳಿಂದ ತುಂಬಿದೆ. ನಾವು ಆಕ?ಕವಾದ ಬಣ್ಣದ ಮಾತುಗಳಿಗೆ ಹಾಗೂ ವಾಕ್ಸರಣಿಗಳಿಗೆ ಮರುಳಾಗಬಾರದು. ನಮ್ಮ ಉದ್ದೇಶ ಯಾವುದೇ ಬೆಲೆ ತೆತ್ತಾದರೂ ಕೈಗಾರಿಕೀಕರಣವನ್ನು ನಾಶಪಡಿಸಬೇಕು” ಎಂದು ನುಡಿದರು (ಯಂಗ್ ಇಂಡಿಯಾ, ೭.೧೦. ೧೯೨೬).
ಔದ್ಯೋಗೀಕರಣ ಒಂದು ಶಾಪ
ಭಾರತ ಯಾವುದೇ ಕಾರಣಕ್ಕೂ ಪಾಶ್ಚಿಮಾತ್ಯ ಮಾದರಿಯ ಕೈಗಾರಿಕೀಕರಣ ಮಾಡಬಾರದು ಎಂದು ಗಾಂಧಿಯವರು ಸದಾ ಆಗ್ರಹಿಸುತ್ತಿದ್ದರು. “ಪಾಶ್ಚಿಮಾತ್ಯ ನಾಗರಿಕತೆ ನಗರಪ್ರಧಾನವಾದುದು. ಚಿಕ್ಕದೇಶಗಳಾದ ಇಂಗ್ಲೆಂಡ್ ಹಾಗೂ ಇಟಲಿಗಳು ಸುಲಭವಾಗಿ ತಮ್ಮ ವ್ಯವಸ್ಥೆಯನ್ನು ನಗರೀಕರಣಗೊಳಿಸಲು ಸಾಧ್ಯ. ಜನಸಂಖ್ಯೆ ಹರಡಿಕೊಂಡಿರುವ ದೊಡ್ಡ ದೇಶವಾದ ಅಮೆರಿಕಕ್ಕೂ ಬಹುಶಃ ಬೇರೆ ದಾರಿ ಇರದು. ನಿಜವಾಗಿಯೂ ಯೋಚಿಸಬೇಕಾದ ಸಂಗತಿ ಎಂದರೆ ಜನಸಂಖ್ಯಾ ಬಾಹುಳ್ಯವಿರುವ ಮತ್ತು ಪುರಾತನ ಗ್ರಾಮೀಣಪರಂಪರೆಯನ್ನು ಹೊಂದಿರುವ ಭಾರತದಂತಹ ದೇಶವು ಪಾಶ್ಚಿಮಾತ್ಯ ಮಾದರಿಯನ್ನು ನಕಲು ಮಾಡುವ ಅಗತ್ಯವಿಲ್ಲ. ಅದರ ಅನಿವಾರ್ಯತೆಯೂ ಇಲ್ಲ. ಒಂದು ದೇಶ ಒಂದು ಪರಿಸ್ಥಿತಿಯಲ್ಲಿ ಯಾವುದನ್ನು ಸರಿ ಎಂದು ಹೇಳಬಹುದೋ, ಅದೇ ಬೇರೊಂದು ಪರಿಸ್ಥಿತಿಯಲ್ಲಿ ಇರುವ ಇನ್ನೊಂದು ದೇಶ ಸರಿ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬನಿಗೆ ಅಮೃತವಾದದ್ದು ಎಷ್ಟು ವೇಳೆ ಇನ್ನೊಬ್ಬನಿಗೆ ವಿಷವಾಗುತ್ತದೆ. ಭೌತಿಕ ಭೂಗೋಳವೂ ಆ ದೇಶದ ಸಂಸ್ಕೃತಿಯ ಸ್ವರೂಪವನ್ನು ನಿರ್ಧರಿಸಲು ತನ್ನ ಕೊಡುಗೆಯನ್ನು ನೀಡುತ್ತದೆ. ಉದಾಹರಣೆಗೆ ಚಳಿಪ್ರದೇಶದಲ್ಲಿ ಓಡಾಡುವ ಜನರಿಗೆ ಉಣ್ಣೆಬಟ್ಟೆ ಅತಿ ಅವಶ್ಯ. ಆದರೆ ಅದೇ ಬಟ್ಟೆ ಉಷ್ಣಪ್ರದೇಶದಲ್ಲಿ ಓಡಾಡುವ ಜನರ ಉಸಿರು ಕಟ್ಟಿಸೀತು ಅಷ್ಟೇ. ಆದಕಾರಣ ಭಾರತ ತನ್ನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತನ್ನದೇ ಆದ ಆರ್ಥಿಕವ್ಯವಸ್ಥೆ, ಆರ್ಥಿಕನೀತಿಗಳು ಮತ್ತು ತನ್ನ ದೇಶಕ್ಕೆ ಹೊಂದುವಂತಹ ಕೈಗಾರಿಕಾ ಬೆಳವಣಿಗೆಯ ಮಾದರಿಗಳನ್ನು ಸಿದ್ಧಗೊಳಿಸುವುದು ಅತ್ಯಂತ ಅವಶ್ಯ” (Ibid. p. xiviii).
“ಕೈಗಾರಿಕೀಕರಣ ಯಾವ ದೇಶಕ್ಕೂ ಅಗತ್ಯವಿಲ್ಲ. ಭಾರತಕ್ಕಂತೂ ಇಲ್ಲವೇ ಇಲ್ಲ. ಸಂಕಷ್ಟಗಳಿಂದ ನರಳುತ್ತಿರುವ ಈ ಪ್ರಪಂಚದಲ್ಲಿ ಸರಳ, ಉದಾತ್ತ ಮತ್ತು ಶಾಂತಿಯುತ ಜೀವನ ನಡೆಸಲು ಭಾರತ ತನ್ನ ಲಕ್ಷಾಂತರ ಗೃಹಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ತನ್ನ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ. ಧನಪಿಶಾಚಿಯನ್ನು ಪೂಜೆಮಾಡುವ ಜಟಿಲ ಭೌತಿಕಜೀವನ ಮತ್ತು ಉನ್ನತವಿಚಾರ ಪರಸ್ಪರ ವಿರೋಧಾಭಾಸಗಳಿಂದ ಕೂಡಿವೆ. ನಾವು ಉದಾತ್ತ ಜೀವನ ನಡೆಸಿದಾಗ ಮಾತ್ರ ಜೀವನದ ಸೊಬಗನ್ನು ಸವಿಯಲು ಸಾಧ್ಯ” (ಹರಿಜನ, ೧.೯. ೧೯೧೪).
“ಭೌಗೋಳಿಕವಾಗಿ ಎಷ್ಟು ದೊಡ್ಡದಿದ್ದರೂ, ಸಂಖ್ಯಾಬಾಹುಳ್ಯದಿಂದ ಭಾರಿ ಇದ್ದರೂ, ನಖಶಿಖಾಂತ ಶಸ್ತ್ರಸನ್ನದ್ಧವಾದ ಜಗತ್ತಿನ ಎದುರು ತನ್ನ ವೈಭವೋಪೇತ ಜೀವನದ ನಡುವೆ ಒಂದು ರಾಷ್ಟ್ರ ಈ ರೀತಿಯ ಸಾಮಾನ್ಯಜೀವನ ನಡೆಸುವುದು ಸಾಧ್ಯವೆ? – ಎಂಬ ಪ್ರಶ್ನೆಗೆ ನೇರ ಮತ್ತು ಸರಳ ಉತ್ತರ ಗಾಂಧಿಯವರದು. “ಸರಳ ಜೀವನವನ್ನು ಯೋಗ್ಯ ಜೀವನವೆಂದು ಪರಿಗಣಿಸುವುದಾದರೆ, ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ಆ ಪ್ರಯತ್ನಮಾಡುವುದು ಸರಿ” ಎಂದು ಅವರು ಹೇಳಿದ್ದಾರೆ.
“ಆರ್ಥಿಕ ಬೆಳವಣಿಗೆಗೆ ಕೆಲವು ಬಹುಮುಖ್ಯ ಕೈಗಾರಿಕೆಗಳು ಅಗತ್ಯವೆಂದು ನನ್ನ ನಂಬಿಕೆ. ಸುಖಾಸೀನ ಅಥವಾ ಶಸ್ತ್ರಸನ್ನದ್ಧ ಸಮಾಜವಾದದಲ್ಲಿ ನನಗೆ ನಂಬಿಕೆ ಇಲ್ಲ. ಸಾಮೂಹಿಕ ಪರಿವರ್ತನೆಯನ್ನು ನಿರೀಕ್ಷೆ ಮಾಡದೆ, ನನ್ನ ನಂಬಿಕೆಗೆ ತಕ್ಕಂತೆ ಕೆಲಸ ಮಾಡುವವ ನಾನು. ಆದ್ದರಿಂದ ಪ್ರಮುಖ ಕೈಗಾರಿಕೆಗಳು ಯಾವುದೆಂದು ಹೆಸರಿಸದೆ, ಸಾವಿರಾರು ಕಾರ್ಮಿಕರು ಸಾಮೂಹಿಕವಾಗಿ ಕೆಲಸ ಮಾಡುವ ಕಡೆಯಲ್ಲೆಲ್ಲ ಸರ್ಕಾರದ ಒಡೆತನವಿರಬೇಕು. ಕೌಶಲಪೂರಿತ ಅಥವಾ ತರಬೇತಿ ಇಲ್ಲದ ಶ್ರಮಿಕರ ಶ್ರಮದ ಫಲ ಅವರ ಕೈಯಲ್ಲೇ ಇರಬೇಕು. ಅಂತಹ ಕೈಗಾರಿಕೆಗಳು ಖಾಸಗಿ ಒಡೆತನದಲ್ಲಿದ್ದರೆ, ಶ್ರೀಮಂತರ ಒಡೆತನವನ್ನು ಸರ್ಕಾರ ಬಲಪ್ರಯೋಗದ ಮೂಲಕ ಪಡೆದುಕೊಳ್ಳಬಾರದು. ಬದಲಿಗೆ, ಮಾನಸಿಕ ಪರಿವರ್ತನೆಯೊಂದಿಗೆ ಹಾಗೂ ಅವರ ಸಂಪೂರ್ಣ ಸಹಕಾರದೊಂದಿಗೆ ಒಡೆತನ ಸರ್ಕಾರಕ್ಕೆ ಹಸ್ತಾಂತರವಾಗಬೇಕು. ಸಮಾಜದಲ್ಲಿ ಕೀಳುಜಾತಿಗೆ ಸೇರಿದವರು ಯಾರೂ ಇಲ್ಲ. ಕೆಲವರು ಶ್ರೀಮಂತರಿರಬಹುದು ಮತ್ತೆ ಕೆಲವರು ಬಡವರಿರಬಹುದು. ಇದು ಒಂದೇ ಕಾಯಿಲೆಯ ಎರಡು ಭಯಂಕರ ಮುಖಗಳಷ್ಟೇ. ನಮ್ಮ ದೇಶದಲ್ಲಿ ನಾವು ಈಗಾಗಲೇ ಕಂಡಿರುವ ಹಾಗೂ ಮುಂದೆ ಕಾಣಬೇಕಾದಂತಹ ಅಮಾನುಷತೆಗಳ ಎದಿರಿನಲ್ಲೂ ನಾನು ಈ ಶ್ರದ್ಧೆಯನ್ನು ಹೊಂದಿದ್ದೇನೆ. ಅಪಾಯದ ಎದುರು ನಿಂತು ನಾವು ಬದುಕುವುದನ್ನು ಕಲಿಯೋಣ” ಎಂಬ ಸಮಯೋಚಿತ ಎಚ್ಚರಿಕೆಯನ್ನು ಗಾಂಧಿಯವರು ಕೊಟ್ಟಿದ್ದಾರೆ.
‘ನಗರಗಳ ಕರ್ತವ್ಯವೆಂದರೆ ಹಳ್ಳಿಗಳು ಉತ್ಪಾದನೆ ಮಾಡಿದ ವಸ್ತುಗಳನ್ನು ’ತೆರವುಗೊಳಿಸುವ ಕೇಂದ್ರ’ಗಳಾಗಿ ಕಾರ್ಯನಿರ್ವಹಿಸಬೇಕು. ಒಮ್ಮೆ ಹಳ್ಳಿಗಳು ನಗರಗಳ ಮೇಲೆ ಆಶ್ರಿತವಾಗಿತ್ತು. ಇನ್ನು ಮುಂದೆ ನಗರಗಳು ಹಳ್ಳಿಗಳನ್ನು ಅವಲಂಬಸುವಂತಾಗಬೇಕು’ (ಹರಿಜನ, ೧.೯. ೧೯೪೬).
“ಔದ್ಯೋಗೀಕರಣ ಎಂದರೆ ಬಹುಸಂಖ್ಯೆಯ ಜನರ ಮೇಲೆ ಹಿಡಿಯ? ಜನ ಹಿಡಿತ ಸಾಧಿಸುವುದು. ಅದರಲ್ಲಿ ಆಕ?ಕವಾದುದು ಮತ್ತು ಅನಿವಾರ್ಯವಾದದ್ದು ಯಾವುದೂ ಇಲ್ಲ. ಆದಕಾರಣ ಔದ್ಯೋಗೀಕರಣ ಮಾನವನಿಗೆ ಒಂದು ಶಾಪವಾಗಿ ಕಾಡಲಿದೆ. ಒಂದು ದೇಶ ಇನ್ನೊಂದು ದೇಶವನ್ನು ನಿರಂತರವಾಗಿ ಶೋ?ಣೆ ಮಾಡಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಮುಕ್ತವಾಗಿ, ದೇಶೀಯ ಮಾರುಕಟ್ಟೆಗಳಲ್ಲಿ ಪ್ರತಿಸ್ಪರ್ಧಿಗಳು ಇಲ್ಲವಾದಾಗ ಕೈಗಾರಿಕಾಪದ್ಧತಿ ಮಾಡುವ ಶೋಷಣೆ ನಿಮ್ಮ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಇಂಗ್ಲೆಂಡ್ ದೇಶದಲ್ಲಿ ಈ ಅಂಶಗಳು ದಿನೇದಿನೇ ಕಡಮೆ ಆಗುತ್ತಿರುವ ಕಾರಣ ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ವಿದೇಶೀವಸ್ತುಗಳ ಬಹಿಷ್ಕಾರ ಕೇವಲ ಅಲ್ಪವಾದದ್ದು. ನಿಜವಾಗಿಯೂ ಭಾರತ ಕೈಗಾರಿಕೀಕರಣಗೊಂಡು ಇತರ ದೇಶಗಳನ್ನು ಶೋಷಣೆ ಮಾಡತೊಡಗಿದರೆ, ಪ್ರಪಂಚದ ಇತರ ದೇಶಗಳಿಗೆ ಕುತ್ತಾಗಿ ಶಾಪವಾಗುತ್ತದೆ. ಇದು ಪ್ರಪಂಚಕ್ಕೆ ಕೇಡುಗಾಲದ ಸೂಚನೆ. ಪ್ರಪಂಚದ ಇತರ ದೇಶಗಳ ಶೋಷಣೆಮಾಡುವ ಸಲುವಾಗಿ ಭಾರತ ಏಕೆ ಕೈಗಾರಿಕಾ ದೇಶವಾಗಿ ಮಾರ್ಪಾಟಾಗಬೇಕು?” ಎಂದು ಗಾಂಧಿಯವರು ಪ್ರಶ್ನಿಸುತ್ತಾರೆ. ಭಾರತದಲ್ಲಿ ಮೂರುಕೋಟಿ ನಿರುದ್ಯೋಗಿಗಳಿದ್ದಾರೆ ಎನ್ನುವ ದುರಂತ ಕತೆ ಗೊತ್ತಿಲ್ಲವೆ? ಇಂಗ್ಲೆಂಡಿನಲ್ಲಿ ೩೦ ಲಕ್ಷ ನಿರುದ್ಯೋಗಿಗಳಿದ್ದಾರೆ ಎನ್ನುವ ಸಂಗತಿ ಅಲ್ಲಿನ ಬುದ್ಧಿವಾದಿಗಳಿಗೆ ಬಹಳ ಆತಂಕಕಾರಿ ಆಗಿದೆ ಮತ್ತು ಅದಕ್ಕೆ ಪರಿಹಾರವನ್ನು ಸೂಚಿಸಲು ಸೋತಿದ್ದಾರೆ. ಅಂಥಾದ್ದರಲ್ಲಿ ಭಾರತ ತನ್ನ ೩ ಕೋಟಿ ಜನರಿಗೆ ಉದ್ಯೋಗ ಕೊಡಲಾದೀತೆ?
ಔದ್ಯೋಗೀಕರಣದ ಭವಿಷ್ಯ
“ಔದ್ಯೋಗೀಕರಣದ ಭವಿಷ್ಯ ಕರಾಳವಾಗಿದೆ. ಇಂಗ್ಲೆಂಡಿಗೆ ಅಮೆರಿಕ, ಫ್ರಾನ್ಸ್, ಜಪಾನ್ ಮತ್ತು ಜರ್ಮನಿಗಳು ಯಶಸ್ವಿ ಪ್ರತಿಸ್ಪರ್ಧಿಗಳಾಗುತ್ತಿದ್ದಾರೆ. ಅವರ ಕೈಗಾರಿಕೆಗಳಿಗೆ ನಮ್ಮ ದೇಶದಲ್ಲಿರುವ ಕೆಲವರು ಮಾತ್ರ ಪ್ರತಿಸ್ಪರ್ಧಿಗಳಾಗಿದ್ದಾರೆ. ಭಾರತದಲ್ಲಿ ಜಾಗೃತಿ ಉಂಟಾಗಿರುವಂತೆಯೇ, ಇನ್ನೂ ಹೆಚ್ಚು ನೈಸರ್ಗಿಕ, ಖನಿಜದ ಹಾಗೂ ಮಾನವಬಲದ ಸಂಪನ್ಮೂಲಗಳಿರುವ ದಕ್ಷಿಣ ಆಫ್ರಿಕಾದಲ್ಲೂ ಮುಂದೆ ಒಂದು ದಿನ ಜಾಗೃತಿ ಉಂಟಾದೀತು. ಇಂಗ್ಲೆಂಡಿನ ದೈತ್ಯಶಕ್ತಿ ಆಫ್ರಿಕಾದ ದೈತ್ಯಶಕ್ತಿಯ ಮುಂದೆ ಕುಬ್ಜವಾಗಿ ಕಾಣುತ್ತದೆ. ನೀವು ಹೇಳುವ ಹಾಗೆ ಆಫ್ರಿಕನ್ನರು ಉದಾತ್ತ ಅನಾಗರಿಕರು. ಅವರು ನಿಜಕ್ಕೂ ಉದಾತ್ತರು. ಆದರೆ ಅನಾಗರಿಕ ಕಾಡುಜನರಲ್ಲ. ಮುಂಬರುವ ಕೆಲವು ವರ್ಷಗಳಲ್ಲಿ ಪಾಶ್ಚಿಮಾತ್ಯದೇಶಗಳು ತಮ್ಮ ದೇಶದ ವಸ್ತುಗಳನ್ನು ಆಫ್ರಿಕಾದೇಶಗಳ ಮಾರುಕಟ್ಟೆಯಲ್ಲಿ ಡಂಪ್ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಪಾಶ್ಚಾತ್ಯದೇಶಗಳಿಗೆ ಕೈಗಾರಿಕಾಪದ್ಧತಿ ಭವಿ?ದಲ್ಲಿ ಕತ್ತಲಾಗಿ ಕಾಣುವಾಗ ಭಾರತಕ್ಕೆ ಇನ್ನೂ ಹೆಚ್ಚು ಕತ್ತಲೆಯಾಗುವುದಿಲ್ಲವೆ?” ಎಂದು ಗಾಂಧಿಯವರು ಕೇಳುತ್ತಾರೆ (ಯಂಗ್ ಇಂಡಿಯಾ, ೧೨.೧೧. ೧೯೩೧, ಪು. ೩೫೫).
ಯಾಂತ್ರೀಕೃತ ದೇಶಗಳು ಕಚ್ಚಾವಸ್ತುಗಳ ಹಸಿವನ್ನು ಹಿಂಗಿಸಲು ಮಾಡುತ್ತಿರುವ ಪ್ರಯತ್ನಗಳನ್ನು ನೋಡಿ ಗಾಂಧಿಯವರು ಈ ರೀತಿ ಹೇಳುತ್ತಾರೆ: “ಮೂರು ಕೋಟಿ ಜನಸಂಖ್ಯೆ ಇರುವ ಒಂದು ಚಿಕ್ಕ ದೇಶ ಆರ್ಥಿಕ ಶೋಷಣೆ ಮಾಡಲು ಪ್ರಾರಂಭಿಸಿದರೆ, ಮಿಡತೆಗಳ ರೀತಿ ಇಡೀ ಪ್ರಪಂಚವನ್ನೇ ಬತ್ತಲೆ ಮಾಡಿದಂತಾಗುತ್ತದೆ. ಆದ್ದರಿಂದ ಕೈಗಾರಿಕೀಕರಣ ಎಂಬ ರೋಗದ ಸೋಂಕಿನಿಂದ ಭಾರತದ ಹಳ್ಳಿಗರನ್ನು ಬಿಡುಗಡೆ ಮಾಡುವ ಅನಿವಾರ್ಯತೆ ಇದೆ.”
ಪಾಶ್ಚಿಮಾತ್ಯರು ಕೈಗಾರಿಕೀಕರಣಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಂತೆ ಭಾರತ ಯಾವ ಕಾರಣಕ್ಕೂ ತೊಡಗಿಕೊಳ್ಳಬಾರದು ಎಂದು ಅವರು ಹೇಳುತ್ತಿದ್ದರು. “ಬಹು ಚಿಕ್ಕ ದೇಶವಾದ ಇಂಗ್ಲೆಂಡ್ ತನ್ನ ಆರ್ಥಿಕ ಸಾಮ್ರಾಜ್ಯಶಾಹಿಯ ಕಪಿಮುಷ್ಟಿಯಲ್ಲಿ ಜಗತ್ತನ್ನು ಹಿಡಿದುಕೊಂಡಿರುವುದು ಎಲ್ಲರಿಗೂ ತಿಳಿದ ವಿ?ಯ. ೩೦ ಕೋಟಿ ಜನಸಂಖ್ಯೆ ಇರುವ ಭಾರತವೇನಾದರೂ ಈ ರೀತಿಯ ಆರ್ಥಿಕಶೋ?ಣೆಗೆ ಮುಂದಾದರೆ ವಿಧ್ವಂಸಕ ಮಿಡತೆಗಳ ದಾಳಿಗೆ ಸಿಕ್ಕಿದಂತಾಗುತ್ತದೆ. ಈ ದುರಂತವನ್ನು ತಪ್ಪಿಸಲು ಭಾರತದ ಬಂಡವಾಳಶಾಹಿಗಳು ಎಲ್ಲಿಯವರೆಗೆ ತಮ್ಮ ಸ್ವಂತ ಪರಿಶ್ರಮ ಮತ್ತು ಪರಿಣತಿಗಳಿಂದ ಗಳಿಸಿದ ಸಂಪತ್ತನ್ನು ಕೇವಲ ತಮ್ಮ ಸ್ವಂತಕ್ಕೆ ಉಪಯೋಗಿಸದೆ ಹೆಚ್ಚುವರಿಯನ್ನು ಸಾರ್ವಜನಿಕ ಕಲ್ಯಾಣಕ್ಕೆ ನಿಜಾರ್ಥದಲ್ಲಿ ಉಪಯೋಗಿಸಿ ಸಾರ್ವಜನಿಕ ಧರ್ಮದರ್ಶಿಗಳಾಗುವುದಿಲ್ಲವೋ, ಅಲ್ಲಿಯವರೆಗೆ ತಾವೇ ಜನಸಾಮಾನ್ಯರನ್ನು ನಾಶಮಾಡಿದಂತೆ ಅಥವಾ ಅವರಿಂದ ತಾವೇ ನಾಶವಾದ ರೀತಿ ಆಗುತ್ತದೆ” ಎಂದರು ಗಾಂಧಿ (ಯಂಗ್ ಇಂಡಿಯಾ, ೨೦.೧೨. ೧೯೨೮).
“ಮಾನವಸ್ವಭಾವದಲ್ಲಿ ನಂಬಿಕೆ ಇರಿಸಿಕೊಳ್ಳುವುದು ಒಳ್ಳೆಯದು. ಆ ರೀತಿಯ ಶ್ರದ್ಧೆಯಿಂದಲೇ ನಾನು ಬದುಕಿದ್ದೇನೆ. ಕೊನೆಯಲ್ಲಿ ಎಲ್ಲವೂ ಒಳ್ಳೆಯದೇ ಆದರೂ, ಅನೇಕ ವ್ಯಕ್ತಿಗಳು, ಸಮಾಜಗಳು ಮತ್ತು ದೇಶಗಳು ತಮ್ಮ ತಪ್ಪಿನ ಕಾರಣದಿಂದ ನಾಶವಾಗಿವೆ ಎಂಬ ಇತಿಹಾಸದ ಸತ್ಯಕ್ಕೆ ನನ್ನ ಶ್ರದ್ಧೆ ಎಂದೂ ನನ್ನನ್ನು ಕುರುಡಾಗಿಸಿಲ್ಲ. ಉದಾಹರಣೆಗೆ ರೋಮ್, ಗ್ರೀಸ್, ಬ್ಯಾಬಿಲೋನ್, ಈಜಿಪ್ಟ್, ಮೆಸಪೊಟೇಮಿಯಾಗಳು ಶಾಶ್ವತ ಸಾಕ್ಷಿಗಳು. ಯೂರೋಪ್ ತನ್ನ ಉತ್ತಮ ವೈಜ್ಞಾನಿಕ ವಿಚಾರಶಕ್ತಿಯ ಕಾರಣದಿಂದಾಗಿ ಔದ್ಯೋಗೀಕರಣದ ವಿರುದ್ಧ ಪರಿಣಾಮಗಳ ಮಾನಸಿಕ ಅಂತಃಶಕ್ತಿಯ ಕುಸಿತದಿಂದ ಪಾರಾಗುವ ದಾರಿಯನ್ನು ಹುಡುಕಬಹುದು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಬಹುದು” (ಯಂಗ್ ಇಂಡಿಯಾ, ೬.೮. ೧೯೨೫, ಪು. ೨೭೩).
ಗ್ರಾಮೀಣ ಸ್ವಯಂಪೂರ್ಣತೆ – ಒಂದು ಪರ್ಯಾಯ ವ್ಯವಸ್ಥೆ
ಗಾಂಧಿಯವರ ದೃಷ್ಟಿಯಲ್ಲಿ ಕೈಗಾರಿಕೀಕರಣಕ್ಕೆ ಪರ್ಯಾಯ ವ್ಯವಸ್ಥೆ ಎಂದರೆ ಹಳ್ಳಿಗಳನ್ನು ಸ್ವಯಂಪೂರ್ಣಗೊಳಿಸುವುದು. ಆದರೆ ಅದು ಮತ್ತೆ ಹಳೆಯ ಮಾದರಿಯ ಸರಳತೆಗೆ ಹಿಂದಿರುಗುವುದಲ್ಲ. ಅದು ನಿಜವಾಗಿಯೂ ಪುನಃಸಂಘಟಿತವಾಗಬೇಕು. ಅಲ್ಲಿ ಗ್ರಾಮೀಣ ಬದುಕು ಪ್ರಭಾವಶಾಲಿಯಾಗಿ ಭೌತಿಕಶಕ್ತಿ ಹಾಗೂ ರಾಕ್ಷಸೀಶಕ್ತಿಗಳು ಆಧ್ಯಾತ್ಮಿಕಶಕ್ತಿಗೆ ಅಧೀನವಾಗಿರಬೇಕು. ಹಾಗೆಂದರೆ – ಪ್ರತಿಯೊಂದು ಹಳ್ಳಿಯೂ ತನಗೆ ಬೇಕಾದ ಎಲ್ಲ ಅಗತ್ಯವಸ್ತುಗಳನ್ನು ತಾನೇ ಉತ್ಪಾದಿಸಿ ಉಪಯೋಗಿಸಬೇಕು. ಜೊತೆಗೆ ನಗರವಾಸಿಗಳ ಅಗತ್ಯವನ್ನು ಪೂರೈಸಲು ಇನ್ನೂ ಸ್ವಲ್ಪ ಅಧಿಕಪ್ರಮಾಣದ ಉತ್ಪಾದನೆ ಮಾಡಬೇಕು (M.K. Gandhi, Economic and Industrial Life and Relations, Vol. I p. liv).
ನಗರಗಳ ಕರ್ತವ್ಯವೆಂದರೆ ಹಳ್ಳಿಗಳು ಉತ್ಪಾದನೆ ಮಾಡಿದ ವಸ್ತುಗಳನ್ನು ’ತೆರವುಗೊಳಿಸುವ ಕೇಂದ್ರ’ಗಳಾಗಿ ಕಾರ್ಯನಿರ್ವಹಿಸಬೇಕು. ಒಮ್ಮೆ ಹಳ್ಳಿಗಳು ನಗರಗಳ ಮೇಲೆ ಆಶ್ರಿತವಾಗಿದ್ದವು. ಇನ್ನು ಮುಂದೆ ನಗರಗಳು ಹಳ್ಳಿಗಳನ್ನು ಅವಲಂಭಿಸುವಂತಾಗಬೇಕು (Ibid p. liv)
‘ಹಳ್ಳಿಗಳ ಸ್ವಯಂಪೂರ್ಣತೆ ಕೈಗಾರಿಕೀಕರಣಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವೇ?’ ಎನ್ನುವ ಪ್ರಶ್ನೆಗೆ ಗಾಂಧಿಯವರು ಈ ರೀತಿ ಹೇಳುತ್ತಾರೆ: “ನಿಜ. ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ನಾನು ರೈಲುಗಳನ್ನು ಬೇಡ ಎನ್ನುವುದಿಲ್ಲ. ಮೋಟಾರ್ ಕಾರುಗಳೆಂದರೆ ನನಗಾಗುವುದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಅವುಗಳ ಉಪಯೋಗವನ್ನು ಇಷ್ಟವಿಲ್ಲದಿದ್ದರೂ ಮಾಡಬೇಕಾಗುತ್ತದೆ. ಫೌಂಟನ್ಪೆನ್ನನ್ನು ಇಷ್ಟವಿಲ್ಲದಿದ್ದರೂ ಕೆಲವು ಬಾರಿ ಉಪಯೋಗಿಸುತ್ತೇನೆ. ಆಗ ಪೆನ್ಬಾಕ್ಸ್ನಲ್ಲಿರುವ ನನ್ನ ರೀಡ್ ಲೇಖನಿಯನ್ನು ಉಪಯೋಗಿಸದೆ ನಿರ್ಲಕ್ಷ್ಯ ಮಾಡುತ್ತಿದ್ದೇನೆ ಎಂದು ದುಃಖವಾಗುತ್ತದೆ. ಬಿದಿರಿನ ಲೆಖ್ಖಣಿಕೆ ಪೆಟ್ಟಿಗೆಯಲ್ಲಿ ಇದ್ದರೂ, ಪೆನ್ನನ್ನು ಬಳಸುವಾಗಲೆಲ್ಲ ನನಗೆ ನೋವಾಗುತ್ತದೆ. ಮನುಷ್ಯ ಪ್ರತಿಹಂತದಲ್ಲೂ ಹೊಂದಾಣಿಕೆ ಮಾಡಿಕೊಳ್ಳ ಬೇಕಾಗುತ್ತದೆ. ಆದರೆ ಅದು ಕೇವಲ ತಾತ್ಕಾಲಿಕ ಹೊಂದಾಣಿಕೆ ಎಂಬ ಭಾವನೆ ಇರಬೇಕು. ನಮ್ಮ ಅಂತಿಮ ಉದ್ದೇಶ ಗ್ರಾಮ ಸ್ವಾವಲಂಬನೆ. ಸದಾ ಅದು ನಮ್ಮ ಕಣ್ಣ ಮುಂದೆ ಇರಬೇಕು.
ಗ್ರಾಮಗಳು ಸ್ವಯಂಪೂರ್ಣವಾಗಬೇಕು. ಅದು ಪ್ರತಿಯೊಬ್ಬ ಭಾರತೀಯನೂ ಸುಸಂಸ್ಕೃತರಾದಾಗ ಮಾತ್ರ ಸಾಧ್ಯ. ಇದು ಅಹಿಂಸೆಯ ಮೂಲಕವಲ್ಲದೆ ಬೇರೆ ಇನ್ನಾವುದರಿಂದಲೂ ಸಾಧ್ಯವಿಲ್ಲ ಎಂಬ ನಂಬಿಕೆ ನನ್ನದು. ಕೈಗಾರಿಕೀಕರಣವನ್ನು ನಂಬುವ ಬಹಳ? ಜನರಿರುವರು. ಆದರೆ ನಾನು ನನ್ನ ಆತ್ಮವಿಶ್ವಾಸಕ್ಕೋಸ್ಕರ ಕೆಲಸ ಮಾಡುತ್ತೇನೆ. ಹೊಂದಾಣಿಕೆಯ ಪ್ರಕ್ರಿಯೆ ಸದಾ ನಡೆಯುತ್ತಿರುತ್ತದೆ. ಅದರ ಫಲಿತಾಂಶ ಏನೆಂದು ನಾನರಿಯೆ. ಆದರೆ ಅದು ಒಳ್ಳೆಯದನ್ನು ಮಾಡುತ್ತದೆ ಎಂಬ ನಂಬಿಕೆ ನನ್ನದು” (D.G. Tendulkar, Mahatma, vol. v, p. 11).
ತಪ್ಪು ಉದಾಹರಣೆ
ಇಂದು ಯಾವುದೇ ದೇಶ ಪಾಶ್ಚಿಮಾತ್ಯ ಮಾದರಿಯ ಕೈಗಾರಿಕೀಕರಣದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಬಹಳಷ್ಟು ಜನರ ಅಭಿಪ್ರಾಯ. ನೆಹರೂ ಕೂಡ ಅನೇಕ ಸಂದರ್ಭಗಳಲ್ಲಿ ಈ ಅಭಿಪ್ರಾಯವನ್ನು ದೃಢವಾಗಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಿಯಂತ್ರಿತ ಬಂಡವಾಳಶಾಹಿ ಪದ್ಧತಿಯೇ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎನ್ನುತ್ತಾರೆ. ಈ ವಿಷಯದ ಬಗ್ಗೆ ಗಾಂಧಿಯವರನ್ನು ಕೇಳಿದಾಗ ಅವರು ಹೇಳಿದರು: “ನೆಹರೂ ಕೈಗಾರಿಕೀಕರಣವನ್ನು ಸಮರ್ಥಿಸುತ್ತಾರೆ. ಆದರೆ ನನಗೆ ಅದರ ಉಪಯುಕ್ತತೆಯ ಬಗ್ಗೆ ನನ್ನದೇ ಆದ ಅನುಮಾನಗಳಿವೆ. ಕೈಗಾರಿಕೀಕರಣದ ವಾದವನ್ನು ಮಂಡಿಸುವವರು ಯೂರೋಪಿನ ಉದಾಹರಣೆಯನ್ನು ಕೊಡುತ್ತಾರೆ. ಭಾರತ ಎಂದೂ ತಪ್ಪು ಉದಾಹರಣೆಯ ಪ್ರಭಾವಕ್ಕೆ ಒಳಗಾಗಬಾರದು. ಯೂರೋಪಿನ ಲೇಖಕರಿಗೆ ಮತ್ತು ಬರಹಗಾರ ಚಿಂತಕರಿಗೆ ಸತ್ಯಾಸತ್ಯಗಳ ನಡುವಿನ ವಿಶ್ಲೇಷಣೆಯ ಕೊರತೆಯುಂಟು. ಒಂದು ಮಿತಿಯಿಂದಾಚೆಗೆ ಅವರು ಭಾರತಕ್ಕೆ ದಾರಿತೋರಲು ಅಶಕ್ತರು. ಯೂರೋಪಿನ ಉದಾಹರಣೆ ಭಾರತದ ಪರಿಸರಕ್ಕೆ ಹೊಂದಾಣಿಕೆ ಆಗಲಾರದು. ರ?ವನ್ನು ಬಿಟ್ಟು ಯೂರೋಪಿನ ಮತ್ತಾವ ದೇಶಗಳಲ್ಲೂ ಭಾರತದಲ್ಲಿರುವಂತಹ ಸ್ಥಿತಿಗತಿಗಳಿಲ್ಲ. ಆದಕಾರಣ ಯೂರೋಪಿಗೆ ನಿಜವಾದದ್ದು ಭಾರತಕ್ಕೆ ಖಂಡಿತವಾಗಿಯೂ ನಿಜವಾಗಬೇಕಿಲ್ಲ. ಪ್ರತಿಯೊಂದು ದೇಶಕ್ಕೂ ತನ್ನದೇ ಆದ ವಿಶೇ? ಸ್ವಭಾವಲಕ್ಷಣಗಳು ಇರುತ್ತವೆ. ಭಾರತಕ್ಕೂ ತನ್ನದೇ ಆದ ಅನೇಕ ವೈಶಿಷ್ಟ್ಯಗಳಿವೆ. ಭಾರತದ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾದರೆ ಅಲ್ಲಿನ ವಿಶೇ?ತೆಗಳನ್ನು ಹಾಗೂ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಪರಿಹಾರ ಸೂಚಿಸಬೇಕಾದೀತು. ಯೂರೋಪಿನ ಅರ್ಥದಲ್ಲಿ ಭಾರತದ ಔದ್ಯೋಗೀಕರಣ ಅಸಾಧ್ಯಕ್ಕೆ ಕೈಹಾಕಿದಂತೆಯೇ ಸರಿ. ಭಾರತ ಇಲ್ಲಿಯವರೆಗೆ ಎಷ್ಟು ಬಿರುಗಾಳಿಗಳನ್ನು ಎದುರಿಸಿದೆ. ಅವುಗಳ ಒಂದೊಂದೂ ತನ್ನ ಮುದ್ರೆಯನ್ನು ಅಳಿಸಲಾಗದಂತೆ ಬಿಟ್ಟುಹೋಗಿದೆ. ವಿಶೇಷವೆಂದರೆ ಇವುಗಳ ಮಧ್ಯೆಯೂ ಭಾರತ ತನ್ನ ವೈಶಿ?ವನ್ನು ಕಾಪಾಡಿಕೊಂಡಿದೆ. ಅನೇಕ ನಾಗರಿಕತೆಗಳ ಅವನತಿಗೆ ಸಾಕ್ಷಿಯಾಗಿ ನಿಂತು ತಾನು ಮಾತ್ರ ಅಲಿಪ್ತವಾಗಿ ಉಳಿದ ಕೆಲವೇ ರಾ?ಗಳಲ್ಲಿ ಭಾರತವೂ ಒಂದು. ಎಷ್ಟು ಕುರುಡು ನಂಬಿಕೆ, ತಪ್ಪುಗಳಿಂದ ತುಂಬಿದ್ದರೂ ತನ್ನ ಪ್ರಾಚೀನ ಸಂಸ್ಥೆಗಳನ್ನು ಉಳಿಸಿಕೊಂಡಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಜೊತೆಗೆ ತನ್ನ ಅಂಧವಿಶ್ವಾಸಗಳನ್ನು ತೊಳೆದುಕೊಳ್ಳುವ ಆಂತರಿಕ ಸಾಮರ್ಥ್ಯವನ್ನು ಪಡೆದ ದೇಶ ಇದು. ತನ್ನ ಕೋಟಿಗಟ್ಟಳೆ ಜನರ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಅದರ ಸಾಮರ್ಥ್ಯದ ಬಗ್ಗೆ ನನ್ನ ವಿಶ್ವಾಸ ಇಂದಿನ? ಉಜ್ಜ್ವಲವಾಗಿ ಎಂದೂ ಇರಲಿಲ್ಲ” (ಯಂಗ್ ಇಂಡಿಯಾ, ೬.೮. ೧೯೨೫).
ಗ್ರಾಮೀಣ ವ್ಯವಸ್ಥೆಯ ಪತನ
ಭಾರತದಲ್ಲಿ ಊಳಿಗಮಾನ್ಯಪದ್ಧತಿ ಕ್ಷೀಣಿಸುತ್ತಿರುವ ಕಾಲಮಾನದಲ್ಲಿ ಕೈಗಾರಿಕೀಕರಣ ಅದರ ಜಾಗವನ್ನು ಆಕ್ರಮಿಸಿತು. ಯಾವುದೇ ಹೊಸತನವನ್ನು ಹುಟ್ಟುಹಾಕದೆ, ಹಳ್ಳಿಗಳನ್ನು ಬಡತನಕ್ಕೆ ತಳ್ಳಿ, ಹೊಸ ವಾಣಿಜ್ಯ ಹಾಗೂ ಕೈಗಾರಿಕೆಗಳಿಂದ ನಿರ್ಮಿತವಾದ ಆರ್ಥಿಕಸಮೃದ್ಧಿಯನ್ನು ಹಂಚಿಕೊಳ್ಳಲು ಕೆಲವೇ ಕೆಲವು ನಗರಗಳ ಉದಯವಾಯಿತು. ಇದು ನಮ್ಮ ಪುರಾತನ ಕೈಗಾರಿಕೆಗಳ, ಹಳೆಯ ಉದಾತ್ತ ಧ್ಯೇಯಗಳ ಹಾಗೂ ಹಳೆಯ ಸಾಮಾಜಿಕ ಪದ್ಧತಿಗಳ ಪತನಕ್ಕೆ ಕಾರಣವಾಯಿತು. ಭೂಹಿಡುವಳಿಗಳ ಮೇಲೆ ಜನಸಂಖ್ಯೆಯ ಒತ್ತಡ ತೀವ್ರವಾಗಿ, ಮಿತವ್ಯಯವಲ್ಲದ ಕೃಷಿ ಸಾಗುವಳಿ ಹೆಚ್ಚಿ, ಜನರು ಹಸಿವಿನಿಂದ ಸಾಯುವಂತಾದರು. ಸಹಾಯಕ ಗೃಹಕೈಗಾರಿಕೆಗಳು ಯಂತ್ರನಿರ್ಮಿತ, ಅಗ್ಗದ ವಿದೇಶೀವಸ್ತುಗಳ ಸ್ಪರ್ಧೆಯಿಂದ ನಾಶವಾಗತೊಡಗಿದುವು. ಈ ಕಾರಣದಿಂದ ಹಳ್ಳಿಗಳನ್ನು ಪುನರುಜ್ಜೀವನಗೊಳಿಸಲು ಗಾಂಧಿಯವರು ಹಳ್ಳಿಗಳು ಜೀವನಾವಶ್ಯಕ ವಸ್ತುಗಳಾದ ಆಹಾರ ಮತ್ತು ವಸ್ತ್ರಗಳ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆ ಗಳಿಸಿಕೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ವಸಾಹತುಶಾಹಿ, ಸಾಮ್ರಾಜ್ಯಶಾಹಿ ಹಾಗೂ ವ್ಯಾಪಾರೀಕರಣದ ದಾರಿಗೆ ನಮ್ಮನ್ನು ಕರೆದುಕೊಂಡು ಹೋಗಬಹುದು ಎನ್ನುವ ಕಾರಣಕ್ಕಾಗಿ ಅವರು ಜನರ ಜೀವನಮಟ್ಟವನ್ನು ಹೆಚ್ಚಿಸುವುದರ ಕಡೆ ಗಮನಹರಿಸಲಿಲ್ಲ. ಬದಲಿಗೆ ಅವರು ಸರಳಜೀವನ ಮತ್ತು ಉನ್ನತವಿಚಾರವನ್ನು ಬೋಧಿಸಿದರು. ಆಧ್ಯಾತ್ಮಿಕ ಬೆಳವಣಿಗೆಯ ಮೂಲಕ ಮೋಕ್ಷಸಂಪಾದನೆ ಆಗಬೇಕು. ಕೈಗಾರಿಕೀಕರಣದಿಂದ ಮಾನವನಿಗೆ ಆತ್ಮತೃಪ್ತಿ ಖಂಡಿತ ಸಿಗುವುದಿಲ್ಲ. ಔದ್ಯೋಗೀಕರಣ ನಿಸರ್ಗನಿಯಮವಿದ್ದಂತೆ. ಇ?ಪಡಲಿ ಬಿಡಲಿ ಜಗತ್ತನ್ನು ಕೊಚ್ಚಿಕೊಂಡು ಹೋಗುವ ಶಕ್ತಿ ಅದಕ್ಕೆ ಇದೆ. ನಿಸರ್ಗವನ್ನು ನಿಯಂತ್ರಿಸಲು ಮತ್ತು ಅದರ ನಿಯಮಗಳನ್ನು ಗೆಲ್ಲಲು ಮಾನವನಿಗೆ ಸಾಧ್ಯವಿದೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಅಗತ್ಯ. ಔದ್ಯೋಗೀಕರಣದ ದೋ?ಗಳನ್ನು ನಿವಾರಿಸಲು ಪ್ರತಿಯೊಂದು ದೇಶವೂ ತನ್ನದೇ ಆದ ಪರಿಹಾರವನ್ನು ಹುಡುಕಬೇಕು ಅಷ್ಟೆ. ಸ್ವಯಂಪೂರ್ಣ ಗ್ರಾಮನಿರ್ಮಾಣ ಅವರ ಅಂತಿಮ ಗುರಿಯಾಗಿತ್ತು.
“ಕೈಗಾರಿಕೀಕರಣಕ್ಕೆ ದೈವತ್ವ ಪದವಿಯನ್ನು ಕಲ್ಪಿಸಿರುವ ರಷ್ಯಾದ ಜನಜೀವನ ಆಕರ್ಷಕ ಹಾಗೂ ಸಂತೋಷವಾಗಿದೆ ಎಂದು ನನಗೆ ಅನ್ನಿಸುತ್ತಿಲ್ಲ’ ಎಂದರು ಗಾಂಧಿ. ’ಬೈಬಲ್ಲಿನಲ್ಲಿ ಹೇಳಿದಂತೆ ಮನುಷ್ಯ ಪ್ರಪಂಚದಲ್ಲಿ ಎಲ್ಲವನ್ನೂ ಗೆದ್ದು ಅದನ್ನು ಪಡೆದುಕೊಂಡು ತನ್ನ ಆತ್ಮವನ್ನು ಕಳೆದುಕೊಂಡರೆ ಏನು ಪ್ರಯೋಜನ? ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಮನುಷ್ಯ ತನ್ನ ಸ್ವಂತ ವ್ಯಕ್ತಿತ್ವವನ್ನು ಕಳೆದುಕೊಂಡು ಯಂತ್ರದ ಒಂದು ಭಾಗವಾದರೆ, ಆಗ ಅವನ ಘನತೆ, ಗೌರವ ಕಡಮೆ ಆದಂತೆ. ಈ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಂಡ ವಿಕಸಿತ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂಬುದು ನನ್ನ ಅಪೇಕ್ಷೆ” (Ibid Vol. V p-11).
ಶೋಷಣೆಗೆ ವಿರೋಧ
“ಭಾರತದ ಪ್ರಗತಿ ಹಾಗೂ ಉನ್ನತಿಗೋಸ್ಕರ ನಾನು ಶೋಷಣೆಯನ್ನು ವಿರೋಧಿಸುವೆ. ಕಾರಣ ಕೈಗಾರಿಕೀಕರಣ ಸಂಪೂರ್ಣವಾಗಿ ಮಾನವನ ಶೋಷಣೆಯ ಮೇಲೆ ನಿಂತಿದೆ. ಶೋಷಣೆಯು ಮೊದಲು ಮಾರುಕಟ್ಟೆಯ ಬೆಳವಣಿಗೆಗೆ, ತದನಂತರ ಯುದ್ಧಕ್ಕೆ ಆಹ್ವಾನ ನೀಡುತ್ತದೆ. ಕೈಗಾರಿಕೀಕರಣದ ಭ್ರಾಂತಿಯನ್ನು ನಾವು ತೊಡೆದುಹಾಕಬೇಕಾಗಿದೆ. ಇದು ಗೃಹಕೈಗಾರಿಕೆಗಳ ಬೆಳವಣಿಗೆಯಿಂದ ಮಾತ್ರ ಸಾಧ್ಯ. ಅವು ಜನಗಳ ಅಗತ್ಯಗಳನ್ನು ಪೂರೈಸಿ ನಮ್ಮ ಸ್ವಂತ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಹಕಾರಿ. ಭಾರತವನ್ನು ಕೈಗಾರಿಕೀಕರಣಗೊಳಿಸಲು ಎಂದೂ ಸಾಧ್ಯವಿಲ್ಲ. ಅದು ಸಾಧ್ಯವಾಗಬೇಕಾದರೆ ನಾವು ನಮ್ಮ ಜನಸಂಖ್ಯೆಯನ್ನು ೩೫೦ ಮಿಲಿಯನ್ನಿಂದ ೩೫ ಮಿಲಿಯನ್ಗೆ ಕಡಮೆ ಮಾಡಬೇಕು ಅಥವಾ ಈಗಿರುವ ನಮ್ಮ ಮಾರುಕಟ್ಟೆಯ ವ್ಯಾಪಾರದ ಮೌಲ್ಯವನ್ನು ಇನ್ನೂ ಹೆಚ್ಚಿಸಬೇಕು. ನಾವು ಈಗ ತಿಳಿದುಕೊಳ್ಳಬೇಕಾಗಿರುವುದೇನೆಂದರೆ ಎಲ್ಲಿ ಅಪಾರ ಪ್ರಮಾಣದ ಮಾನವಶಕ್ತಿ ಇರುವುದೋ ಅಲ್ಲಿ ಜಟಿಲವಾದ ಬೃಹತ್ ಯಂತ್ರಗಳಿಗೆ ಅವಕಾಶ ಇರಬಾರದು” (ಹರಿಜನ, ೧೪.೯.೧೯೩೪).
ಭಾರತವನ್ನು ಇಂಗ್ಲೆಂಡ್ ಮತ್ತು ಅಮೆರಿಕದ ರೀತಿ ಮಾಡುವುದೆಂದರೆ ಶೋಷಣೆಗಾಗಿ ಜನಾಂಗಗಳನ್ನು ಹಾಗೂ ಸ್ಥಳಗಳನ್ನು ಹುಡುಕಬೇಕು ಎಂದೇ ಅರ್ಥ. ಈವರೆಗೆ ಪಾಶ್ಚಾತ್ಯರಾಷ್ಟ್ರಗಳು ಯೂರೋಪಿನ ಹೊರಗೆ ತಮಗೆ ಗೊತ್ತಿರುವ ಎಲ್ಲ ಜನಾಂಗಗಳನ್ನು ಶೋಷಣೆಗೆ ತಮ್ಮತಮ್ಮಲ್ಲಿ ಹಂಚಿಕೊಂಡುಬಿಟ್ಟಿವೆ. ಹೊಸದಾಗಿ ಕಂಡುಹಿಡಿಯಲು ಯಾವ ನೂತನ ಜಗತ್ತೂ ಇಲ್ಲ. ಶೋಷಿತರ ಪಂಕ್ತಿಯಲ್ಲಿ ಭಾರತವೇ ಅತಿದೊಡ್ಡ ಬಲಿಪಶು. ಜಪಾನ್ ಸಹ ಈ ಲೂಟಿಯಲ್ಲಿ ತನ್ನ ಪಾಲು ಪಡೆಯುತ್ತಿದೆ; ನಿಸ್ಸಂಶಯ. ಆದರೆ ಭಾರತ ಮತ್ತು ಚೀನಾದ ನಿರಾಕರಣೆಯಿಂದಾಗಿ ಪಾಶ್ಚಾತ್ಯರಾಷ್ಟ್ರಗಳೂ ಮತ್ತು ಜಪಾನ್ ಸಹ ಗತಿಗೆಡುವುದಾದರೆ, ಪಾಶ್ಚಾತ್ಯರನ್ನು ಅನುಕರಿಸತೊಡಗುವ ಭಾರತದ ಗತಿಯಾದರೂ ಏನಾದೀತು? ನಿಜಕ್ಕೂ ಪಶ್ಚಿಮ ರಾಷ್ಟ್ರಗಳ ಔದ್ಯೋಗೀಕರಣ ಮತ್ತು ಶೋಷಣೆಗಳು ಮಿತಿಮೀರಿಹೋಗಿವೆ. ರೋಗಪೀಡಿತರಾದ ಅವರಿಗೆ ಆ ಪೀಡೆಯ ಪರಿಹಾರಕ್ರಮ ತೋರದಿರುವಾಗ, ನಮ್ಮಂತಹ ಪ್ರಾರಂಭಿಕರು ಹೇಗೆ ತಾನೆ ಆ ದೋಷಗಳಿಂದ ಪಾರಾದೇವು? ನಿಜಕ್ಕೂ ಈ ಔದ್ಯೋಗಿಕ ನಾಗರಿಕತೆ ಒಂದು ರೋಗ. ಅದು ಸಂಪೂರ್ಣ ದು?ವಾದದ್ದು. ಘೋಷಣೆಗಳಿಗೆ, ಆಡಂಬರದ ಮಾತುಗಳಿಗೆ ಮಾರುಹೋಗುವುದು ಬೇಡ. ಉಗಿಯಿಂದ ನಡೆಯುವ ಹಡಗುಗಳೊಡನೆಯಾಗಲಿ, ತಂತಿ (ಟೆಲಿಗ್ರಾಫ್) ಸೌಕರ್ಯದೊಡನೆಯಾಗಲಿ ನನಗೆ ಹಗೆ ಇಲ್ಲ. ಅವು ಔದ್ಯೋಗೀಕರಣದ, ಅದರ ಸರ್ವಪ್ರಕಾರಗಳ ಸಮರ್ಥನೆ ಇಲ್ಲದೆಯೂ ಉಳಿದಾವು. ಆದರೆ ಅವೇ ಗುರಿಗಳಲ್ಲ. ಹಡಗುಗಳಿಗಾಗಿ, ತಂತಿ ಸೌಕರ್ಯಕ್ಕಾಗಿ ನಾವು ಶೋಷಣೆಗೆ ತುತ್ತಾಗಬಾರದು.
ಮಾನವಕುಲದ ಶಾಶ್ವತ ಸೌಖ್ಯಕ್ಕೆ ಅವು ಅನಿವಾರ್ಯವೂ ಅಲ್ಲ. ಉಗಿ ಹಾಗೂ ವಿದ್ಯುತ್ತಿನ ಬಳಕೆಯನ್ನು ನಾವು ಅರಿತಿರುವುದರಿಂದ ಈಗ ಸಮಯ ಬಂದಾಗ ಅವನ್ನು ಔದ್ಯೋಗೀಕರಣ ತಪ್ಪಿಸಿಕೊಂಡ ಬಳಿಕ ಉಪಯೋಗಿಸಿಕೊಳ್ಳಬೇಕು. ಆದುದರಿಂದ ಏನೇ ಆದರೂ ಔದ್ಯೋಗೀಕರಣವನ್ನು ನಾಶಮಾಡುವುದೇ ನಮ್ಮ ಗುರಿ.
ಭಾರತ ತನ್ನ ನೆಲಕ್ಕೆ ಕಚ್ಚಿಕುಳಿತ ಕಾರಣ ಇತರ ನಾಗರಿಕತೆಗಳ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದೆ. ನಮ್ಮಲ್ಲಿ ಮಹತ್ತ್ವಪೂರಿತ ಪರಿವರ್ತನೆಗಳಾಗಿವೆ. ಆ ಎಲ್ಲ ಪರಿವರ್ತನೆಗಳು ನಮ್ಮ ವಿಕಾಸಕ್ಕೆ ಸಾಧನಗಳಾಗಿವೆ. ಔದ್ಯೋಗೀಕರಣ ಎಂದರೆ ವಿನಾಶವನ್ನು ಆಹ್ವಾನಿಸಿದಂತೆ. ನಮ್ಮಲ್ಲಿರುವ ಅಸಹನೀಯ ಸಂಕಟಗಳು ಮತ್ತು ದಿವಾಳಿತನ ತೊಲಗಲೇಬೇಕು. ಆದರೆ ಔದ್ಯೋಗೀಕರಣ ಅದಕ್ಕೆ ಪರಿಹಾರವಲ್ಲ. ಎತ್ತಿನಬಂಡಿಗಳ ಉಪಯೋಗದಲ್ಲಿ ದೋಷವಿಲ್ಲ. ಅದಿರುವುದು ನಮ್ಮ ಸ್ವಾರ್ಥಲಾಲಸೆಯಲ್ಲಿ. ನಮ್ಮ ಇತರ ಬಂಧುಮಿತ್ರರ ಬಗ್ಗೆ ನಮಗೆ ಪ್ರೀತಿ, ಪ್ರೇಮ ಇಲ್ಲದಿದ್ದಲ್ಲಿ ಯಾವ ಕ್ರಾಂತಿಕಾರಿ ಪರಿವರ್ತನೆಯೂ ನಮಗೇನೂ ಒಳ್ಳೆಯದನ್ನು ಮಾಡುವುದಿಲ್ಲ. ಬಡ ಭಾರತೀಯರನ್ನು ಪ್ರೀತಿಸುವುದೆಂದರೆ ಅವರು ಉತ್ಪಾದನೆ ಮಾಡುವ ವಸ್ತುಗಳನ್ನು ಕೊಂಡು ಬಳಸುವುದರ ಮೂಲಕ. ಅವರ ಕಲ್ಯಾಣಕ್ಕಾಗಿ ಮತ್ತು ಹಿತರಕ್ಷಣೆಗಾಗಿ ವಿದೇಶೀಯರು ಉತ್ಪಾದಿಸುವ ವಸ್ತುಗಳ ಉಪಯೋಗ ಮಾಡಬಾರದು ಮತ್ತು ಹಳ್ಳಿಗಳಿಗೆ ಅವುಗಳ ಪರಿಚಯಮಾಡಬಾರದು.
ಭಾರತದಲ್ಲಿ ಅನಿವಾರ್ಯವಾಗಿ ಆಗಬೇಕಾದ ಪರಿವರ್ತನೆ ಎಂದರೆ ವಿದೇಶೀ ವಸ್ತುಗಳ ಪರಿತ್ಯಾಗ ಹಾಗೂ ನೂಲುವ ಪುರಾತನ ಕುಟೀರ ಉದ್ಯೋಗಗಳ ಪುನಃಪ್ರತಿಷ್ಠಾಪನೆ, ಔದ್ಯೋಗೀಕರಣದ ವಿರುದ್ಧ ನಮ್ಮ ಹೋರಾಟ ಎಂದರೆ ನಮ್ಮ ಪ್ರಾಚೀನ ಹಾಗೂ ಆರೋಗ್ಯಕರವಾದ ಉದ್ಯೋಗಗಳ ಸೃಷ್ಟಿ ಮಾಡುವುದು.
(ಮುಂದುವರಿಯುವುದು)