“ಸಾಹಿತ್ಯವಿಲ್ಲದೆ ಜೀವನವಿಲ್ಲ, ಜನಜೀವನವಿಲ್ಲದೆ ಸಾಹಿತ್ಯವಿಲ್ಲ” ಎನ್ನುವ ಮಾತಿನಂತೆ ಸಮಾಜದ ಸ್ವಾಸ್ಥ್ಯಕ್ಕೆ ಸಂಸ್ಕೃತಿಯುಕ್ತ ಸಾತ್ತ್ವಿಕ ಸಾಹಿತ್ಯಬೇಕು. ಸೌಹಾರ್ದಯುತ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಇಂತಹ ಸಾಹಿತ್ಯದ ಪಾತ್ರ ಮಹತ್ತರವಾದುದು.”
ಸರ್ವರ ಹಿತವನ್ನು ಬಯಸುವುದು ಸಾಹಿತ್ಯ – ಎನ್ನುವುದು ಎಲ್ಲರ ಆಶಯ ಮತ್ತು ಹಂಬಲ ಕೂಡ. ರಾಮಾಯಣ, ಮಹಾಭಾರತಗಳಿಂದ ಹಿಡಿದು ಆಧುನಿಕ ಸಾಹಿತ್ಯದ ತನಕ ಸಂಸ್ಕಾರಭರಿತ ಸ್ವಸ್ಥಸಮಾಜ ನಿರ್ಮಾಣದಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾದದ್ದು. ಭಾರತೀಯ ಸಾಹಿತ್ಯ ಈ ದೇಶದ ಸಂಸ್ಕೃತಿಯ ಪ್ರತಿರೂಪವೇ ಆಗಿದ್ದು, ಸಂಸ್ಕೃತಿಯನ್ನು ಬಿಟ್ಟು ಸಾಹಿತ್ಯವಿಲ್ಲ ಎನ್ನುವಷ್ಟರಮಟ್ಟಿಗೆ ಸಂಸ್ಕೃತಿಯು ತನ್ನ ಪ್ರಭಾವವನ್ನು ಬೀರಿದೆ. ಅಮೃತ ಸೋಮೇಶ್ವರರು ಒಂದೆಡೆ ಹೇಳಿರುವಂತೆ – “ಸಾಹಿತ್ಯವನ್ನು ಸಂಸ್ಕೃತಿಯಿಂದ ಪ್ರತ್ಯೇಕಿಸುವುದಾಗಲಿ, ಸಂಸ್ಕೃತಿರಹಿತವಾದ ಸಾಹಿತ್ಯವನ್ನು ಊಹಿಸುವುದಾಗಲಿ ಕ?ಸಾಧ್ಯ.” ಸಾಹಿತ್ಯ ಎಂಬ ಶಬ್ದದ ವ್ಯಾಖ್ಯೆ ಇಂದು ಭಾಷೆ ಮತ್ತು ಅಕ್ಷರಗಳಿಗಷ್ಟೇ ಸೀಮಿತವಾಗಿಲ್ಲ. ಕಲೆ, ಸಂಸ್ಕೃತಿ, ಜಾನಪದ, ನೆಲ, ಜಲ, ಕೃಷಿ ಇತ್ಯಾದಿ ಎಲ್ಲ ವಿಷಯಗಳು ಸಾಹಿತ್ಯದ ವ್ಯಾಪ್ತಿಯೊಳಗೆ ಸೇರುತ್ತವೆ.
ಸಂಸ್ಕೃತಿಯೆಂಬುದು ಬದುಕಿನಿಂದ ಭಿನ್ನವಾದ ಚಟುವಟಿಕೆಗಳ ಮೊತ್ತವಲ್ಲ; ಬದುಕನ್ನು ಇನ್ನಷ್ಟು ಸ್ಪಷ್ಟಗೊಳಿಸುವ ಪ್ರಕ್ರಿಯೆ. ಅದು ಬದುಕಿನ ಪರಿಣಾಮವೂ ಹೌದು, ಬದುಕಿಗೆ ಸಾಧನವೂ ಹೌದು. ಸೇಡಿಯಾಪು ಕೃ?ಭಟ್ಟರು ’ಸಾಹಿತ್ಯದ ಉದ್ದೇಶ’ ಎಂಬ ತಮ್ಮ ಲೇಖನದಲ್ಲಿ ಸಂಸ್ಕೃತಿ ಎಂದು ಕರೆಯಿಸಿಕೊಳ್ಳುವ ಸಮಷ್ಟಿಯಲ್ಲಿ ಇದು ಸಂಸ್ಕಾರ ಫಲವಾದ ’ಸಂಸ್ಕೃತಿ’ ಇದು ‘ವಿಕೃತಿ’ ಎಂದು ಸ್ಪ?ವಾಗಿ ಗುರುತಿಸಬಹುದಾದ ಎರಡೂ ಅಡಕವಾಗಿರುತ್ತವೆ ಎಂದು ಹೇಳುವ ಮಾತು ಸಂಸ್ಕೃತಿಯು ಜೀವನದ ಸಭ್ಯತೆಗೆ ಸಂಬಂಧಿಸಿದ್ದು ಎಂಬುದನ್ನು ಧ್ವನಿಸುತ್ತದೆ. ಸಂಸ್ಕೃತಿ ಎಂದರೆ ಒಳ್ಳೆಯ, ಸಭ್ಯ, ಸೌಹಾರ್ದಮಯ, ಆರೋಗ್ಯಕರ, ಅನುದ್ವೇಗಕರ ಶಾಂತಿ-ಸಹಕಾರಗಳಿಂದ ಕೂಡಿದ ಸಮಷ್ಟಿಹಿತಕ್ಕೆ ಸಂಬಂಧಿಸಿದ್ದು ಎಂಬ ವ್ಯಾಪಕಾರ್ಥದಲ್ಲಿ ನಮಗೆ ಸ್ವೀಕಾರವಾದರೆ ಭಾರತೀಯ ಸಂಸ್ಕೃತಿ-ಪಾಶ್ಚಿಮಾತ್ಯ ಸಂಸ್ಕೃತಿ ಎಂಬ ವಿಂಗಡಣೆ ಅವಶ್ಯವಿರುವುದಿಲ್ಲ. ಸಂಸ್ಕೃತಿಯು ಸಂಸ್ಕಾರ, ಸಾಧನೆಗಳಿಗೆ ಸಂಬಂಧಿಸಿದ್ದು ಎಂಬ ಸಮಾಧಾನ ನಮಗಾಗುವುದು ಸಾಧ್ಯ.
ಸಾಹಿತ್ಯದ ಲಕ್ಷಣ
ಸಾಹಿತ್ಯವು ಭಾಷೆಯನ್ನು ಹೊಂದಿಕೊಂಡಂತಹ ಒಂದು ಕಲೆ. ಇಲ್ಲಿ ಮೊದಲು ನಮ್ಮ ನುಡಿಗೆ ವಿಶೇಷ ಪ್ರಾಧಾನ್ಯವಿದ್ದ ಆನಂತರ ಅದೇ ನುಡಿಯು ಬರಹಕ್ಕೆ ಬಂದಿಳಿದಾಗ ಅದು ಸಾಹಿತ್ಯದ ರೂಪವನ್ನು ತಳೆಯುತ್ತದೆ. ನಮ್ಮ ಬುದ್ಧಿ-ಮನಸ್ಸುಗಳನ್ನು ಸೆರೆಹಿಡಿದು ನಮ್ಮನ್ನು ಮುದಗೊಳಿಸುವ ಶಕ್ತಿ ಮಾತಿಗಿರುವಂತೆ ಸಾಹಿತ್ಯಕ್ಕೂ ಇರುತ್ತದೆ. ಹೃದಯದಿಂದ ಸಹಜವಾಗಿ ಹೊರಬರುವ ಭಾವನೆಗಳ ಸಾಮೂಹಿಕ ಅಭಿವ್ಯಕ್ತಿಯೇ ಉತ್ತಮ ಸಾಹಿತ್ಯವೆನಿಸಿಕೊಳ್ಳುತ್ತದೆ. ಒಂದು ಪಂಥ ಅಥವಾ ಇಸಂಗೆ ಬದ್ಧರಾಗಿ ಸಿದ್ಧಪಡಿಸುವ ಪದಸಮೂಹವು ಒಳ್ಳೆಯ ಸಾಹಿತ್ಯವಾಗಲಾರದು. ಸ್ವಾಭಾವಿಕತೆಯಿಂದ ಕೂಡಿದ ಮತ್ತು ರಸಸಹಿತವಾಗಿ ರೂಪುಗೊಳ್ಳುವ ವಾಕ್ಯರಚನೆಗಳೇ ಸಾಹಿತ್ಯವಾಗುತ್ತದೆ.
ಸಾಹಿತ್ಯವು ಮನಸ್ಸಿಗೆ ಮುದವನ್ನು ನೀಡುವ ಒಂದು ಅಮೂಲ್ಯ ಸಾಧನವಾಗಿದ್ದು, ಅದು ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವಂತಿದ್ದಾಗಲೇ ಅದಕ್ಕೊಂದು ಒಳ್ಳೆಯ ಮೌಲ್ಯ ಲಭಿಸಬಲ್ಲದು. ಮನಸ್ಸಿನ ಮೇಲೆ ಸತ್ಪರಿಣಾಮ ಬೀರುವ ಸಾಹಿತ್ಯವು ಎಲ್ಲ ಕಾಲಕ್ಕೂ ಉಳಿಯಬಲ್ಲದು. ಬಾಲ್ಯದಲ್ಲಿ ನಾವು ಕೇಳಿದ, ಓದಿದ ರಾಮಾಯಣ, ಮಹಾಭಾರತ, ಪುರಾಣಕಥೆಗಳು, ನೀತಿಕಥೆಗಳು, ಸದಾಕಾಲಕ್ಕೂ ಮರೆಯದೆ ಮನದಲ್ಲಿ ಉಳಿಯುವ ಪುಣ್ಯಕೋಟಿ ಗೋವಿನ ಹಾಡು, ಮತ್ತಿತರ ಶಿಶುಗೀತೆಗಳು ಮಕ್ಕಳ ಮೇಲೆ ಬೀರಿದ ಪ್ರಭಾವವಂತೂ ಅದ್ಭುತವಾದವು. ಮನುಷ್ಯನು ಸನ್ಮಾರ್ಗದಲ್ಲಿ ನಡೆಯುವಂತಾಗಬೇಕೆನ್ನುವುದೇ ಸಾಹಿತ್ಯದ ಮೂ ಲೋದ್ದೇಶವಾಗಿರುವುದರಿಂದಲೇ ಹಿಂದೆ ಇಂತಹ ಸಾಹಿತ್ಯಕೃತಿಗಳೇ ಮಕ್ಕಳಿಗೆ ದಾರಿದೀಪವಾಗಿದ್ದವು. ಸಾಹಿತ್ಯದಲ್ಲಿ ಮಾತ್ರವಲ್ಲದೆ ಜೀವನದ ಎಲ್ಲ ಹಂತಗಳಲ್ಲೂ, ವ್ಯವಹಾರಗಳಲ್ಲೂ ಧರ್ಮವಿರಬೇಕೆಂದು ನಾವು ಆಶಿಸುವುದು ಈ ಸದುದ್ದೇಶದಿಂದಲೇ. ಜೀವನಾದರ್ಶ, ನೈತಿಕತೆ, ಮೌಲ್ಯಗಳೆಲ್ಲವೂ ಧರ್ಮ ಮತ್ತು ಸಂಸ್ಕೃತಿಯ ಪರಿಧಿಯೊಳಗೆ ಬರುವುದರಿಂದ ಇದರ ಕೈಹಿಡಿದುಕೊಂಡು ಸಾಹಿತ್ಯ ಸಾಗಿದರೆ ಅದು ನೇರವಾಗಿ ಜನರೆಡೆಗೆ, ಜನರೆದೆಗೆ ತಲಪಬಲ್ಲದು. ಇಂತಹ ಮೌಲ್ಯಾಧಾರಿತ ಸಾಹಿತ್ಯದ ಓದು ಮನು?ನ ಜ್ಞಾನದ ಜೊತೆಗೆ ಆತನ ವ್ಯಕ್ತಿತ್ವದ ಮೌಲ್ಯಗಳನ್ನು ಕೂಡಾ ವೃದ್ಧಿಸುತ್ತದೆ.
ಆತಂಕದ ಸನ್ನಿವೇಶಗಳು
ಅಪಾರ ಸಾಹಿತ್ಯಸಂಪತ್ತು ಹೊಂದಿರುವ ದೇಶ ನಮ್ಮದು. ನಮ್ಮ ದೇಶದ ಭವ್ಯ ಇತಿಹಾಸ, ಪರಂಪರೆ, ಕಲೆ, ಸಂಸ್ಕೃತಿ, ಅನೇಕತೆಯಲ್ಲಿ ಏಕತೆಯ ಪರಿಚಯ ನಮಗೆ ಸಾಹಿತ್ಯದಿಂದಾಗುತ್ತದೆ. ಇಂತಹ ಸಾಹಿತ್ಯದ ಉದಾತ್ತಮೌಲ್ಯಗಳೇ ಹಿಂದೆ ಶಿಕ್ಷಣದಲ್ಲಿ ದೊರಕುತ್ತಿದ್ದುದರಿಂದ, ಆಗಿನ ಮಕ್ಕಳು ಇಂದಿಗಿಂತ ಹೆಚ್ಚು ಸುಸಂಸ್ಕೃತರೆನಿಸಿಕೊಂಡಿದ್ದರು. ಆದರೆ ಆಧುನಿಕ ವಿದ್ಯಾಭ್ಯಾಸವು ಅಂಕಗಳಿಕೆಗೆ ಮಾತ್ರ ಪ್ರಾಶಸ್ತ್ಯವನ್ನು ನೀಡುತ್ತಿದೆಯೇ ವಿನಾ ಮನುಷ್ಯತ್ವಕ್ಕಲ್ಲ. ಇದರಿಂದಾಗಿಯೇ ಇಂದು ಸುಶಿಕ್ಷಿತರೇ ರಾಕ್ಷಸರಾಗುತ್ತಿದ್ದಾರೆ. ಒಬ್ಬರು ಹಿರಿಯರು ಹೇಳುವ ಹಾಗೆ ಕನ್ನಡಮಾಧ್ಯಮ ಶಾಲೆಯಿಂದ ಬಂದ ಮಕ್ಕಳೇ ಆಂಗ್ಲಮಾಧ್ಯಮದಿಂದ ಬಂದ ಮಕ್ಕಳಿಗಿಂತ ಹೆಚ್ಚು ಸುಸಂಸ್ಕೃತರಾಗಿರುತ್ತಾರೆ ಮತ್ತು ಅವರು ಯಾವುದೇ ಕ್ಷೇತ್ರಕ್ಕೆ ಹೋದರೂ ಮಾನವೀಯತೆಯನ್ನು, ಸಂಸ್ಕೃತಿಯನ್ನು ಉಳಿಸಿಕೊಂಡಿರುತ್ತಾರೆ ಎಂಬುದನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿ ಮನಗಾಣಬಹುದು. ಇನ್ನು ಕನ್ನಡಮಾಧ್ಯಮ ಶಾಲೆಗಳು ಸಾಹಿತ್ಯಸೃಷ್ಟಿಗೆ ಮೂಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡವೇ ಬೆಳೆಯದಿದ್ದರೆ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿಯುವುದಾದರೂ ಹೇಗೆ ಸಾಧ್ಯ? ಆದರೆ ಇಂದು ಸರಕಾರದ ನೀತಿಯಿಂದಾಗಿ ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಪ್ರತಿ ವರ್ಷ ನೂರಾರು ಕನ್ನಡ ಶಾಲೆಗಳು ’ಮುಚ್ಚುಗಡೆ ಭಾಗ್ಯ’ವನ್ನು ಪಡೆಯುತ್ತಿವೆ. ಈ ಬಗ್ಗೆ ಸರಕಾರವನ್ನು ಆಗ್ರಹಿಸಿದರೆ, ಅದು ಜನರೇ ನಿರ್ಮಿಸಿಕೊಂಡ ಸಮಸ್ಯೆ ಎಂಬಂತೆ ಬಿಂಬಿಸಲಾಗುತ್ತಿದೆ. ಮಕ್ಕಳ ಸಂಖ್ಯೆ ಕಡಮೆಯಾದ ಶಾಲೆಗಳನ್ನು ಮುಚ್ಚುವ ಬಗ್ಗೆ ಮಾತ್ರ ಸರಕಾರಕ್ಕೆ ಆಸಕ್ತಿಯೇ ವಿನಾ, ಕನ್ನಡಶಾಲೆಗಳ ಕಲಿಕಾಮಟ್ಟವನ್ನು ಉಳಿಸಿಕೊಂಡು, ಉತ್ತಮಶಿಕ್ಷಣ ನೀಡುವಲ್ಲಿ ಸರಕಾರಕ್ಕೆ ಆಸಕ್ತಿಯಿದ್ದಂತಿಲ್ಲ. ಇ?ದರೂ ಎಸ್ಸೆಸ್ಸೆಲ್ಸಿ, ಪಿ.ಯು.ಸಿ ಪರೀಕ್ಷೆಗಳಲ್ಲಿ ಕನ್ನಡಮಾಧ್ಯಮ ಶಾಲೆಗಳ ಫಲಿತಾಂಶ ಹೆಚ್ಚು ತೃಪ್ತಿಕರವಾಗಿರುತ್ತದೆ ಎಂಬುದು ಗಮನಾರ್ಹ. ಇಂದು ಶಿಕ್ಷಣಪದ್ಧತಿ ಪೂರ್ತಿ ಬದಲಾಗಿದೆ. ’ಧರ್ಮನಿರಪೇಕ್ಷ ರಾ?’ ಎಂಬುದನ್ನು ಮುಂದಿಟ್ಟುಕೊಂಡು ಧರ್ಮದ ಜೊತೆಗಿರುವ ಸಂಸ್ಕಾರ, ಸಂಸ್ಕೃತಿ, ಜೀವನಮೌಲ್ಯಗಳೆಲ್ಲವೂ ಪಾಠ್ಯದಲ್ಲಿ ಕಾಣೆಯಾಗಿವೆ. ಆಧುನಿಕಶಿಕ್ಷಣವು ಮನು?ತ್ವವೇ ಇಲ್ಲದ ವಿದ್ಯಾವಂತರನ್ನು ಸೃಷ್ಟಿಸುತ್ತಿದೆ. ಇದರಿಂದಾಗಿಯೇ ಇಂದು ಎಲ್ಲ ವಿಧದ ಅಕ್ರಮಗಳು, ಸಮಾಜಘಾತುಕ ಮತ್ತು ದೇಶವಿರೋಧಿ ಕೃತ್ಯಗಳಲ್ಲೂ ಇಂತಹ ’ವಿದ್ಯಾವಂತ’ರನ್ನು ನಾವು ಕಾಣಬಹುದಾಗಿದೆ. ಮೌಲ್ಯಾಧಾರಿತ ಶಿಕ್ಷಣವೂ ಸಂಸ್ಕೃತಿಯ ಬಹುಮುಖ್ಯ ಭಾಗವೇ ಆಗಿರುವುದರಿಂದ ಅದನ್ನು ಕಡೆಗಣಿಸಿರುವುದೇ ಈ ಅನಾಹುತಗಳಿಗೆ ಕಾರಣವಾಗಿದೆ.
ಸಂದಿಗ್ಧ ಪರಿಸ್ಥಿತಿ
ಹಿಂದಿನಕಾಲದಲ್ಲಿ ಸಾಹಿತ್ಯ ಕಲೆಗಳಿಗಿದ್ದ ರಾಜಾಶ್ರಯವು ಇಂದಿಲ್ಲದಿದ್ದರೂ, ಅದನ್ನು ಪಡೆದುಕೊಂಡು ಮೆರೆಯಲೆಂದೇ ಒಂದು ವರ್ಗದ ಸಾಹಿತಿಗಳು ಸೃಷ್ಟಿಯಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಸರಕಾರದ ಕೃಪಾಕಟಾಕ್ಷವನ್ನು ಗಳಿಸುವುದರೊಂದಿಗೆ, ತಮ್ಮ ಸ್ವಾರ್ಥವನ್ನು ಸಾಧಿಸಲೋಸುಗ ಎಂತಹ ಹೀನಮಟ್ಟಕ್ಕೂ ಇಳಿಯಬಲ್ಲಂತಹ ಸಾಕಷ್ಟು ಪ್ರಗತಿಶೀಲರು, ಬುದ್ಧಿಜೀವಿಗಳು, ಚಿಂತಕರು ನಮ್ಮಲ್ಲಿದ್ದಾರೆ. ಇದನ್ನು ಮನಗಂಡೇ ಇಪ್ಪತ್ತು ವರ್ಷಗಳ ಹಿಂದೆಯೇ ಬೆಳ್ಮಣ್ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ದಿ. ಕೆ.ಜೆ.ಶೆಟ್ಟಿ ಕಡಂದಲೆಯವರು ಹೇಳಿದ ಮಾತು ನೆನಪಾಗುತ್ತದೆ: “ಇಂದು ಕುತಂತ್ರಿಗಳು, ವಂಚಕರು, ಸ್ವಾರ್ಥಿಗಳೆಲ್ಲ ರಾಜಾಶ್ರಯ ಪಡೆದು ಮೆರೆಯುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಹಿತಿಗಳು ಎಚ್ಚರಿಕೆಯಿಂದ ಯಾರ ಹಂಗು, ಮುಲಾಜಿಗೂ ಒಳಗಾಗದೆ ಸದಭಿರುಚಿಯ ಸಾಹಿತ್ಯನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಜನಹಿತವನ್ನು ಗುರುತಿಸಿ, ಸ್ವೀಕಾರಾರ್ಹ ಮೌಲ್ಯಗಳನ್ನು ಎತ್ತಿಹಿಡಿಯುವಂತಹ ಸಾಹಿತ್ಯದ ರಚನೆಯಾಗಬೇಕು.” ಅವರ ಮಾತುಗಳು ಈಗಿನ ಕಾಲಕ್ಕೂ ಪ್ರಸ್ತುತವಾಗುತ್ತಿರುವುದು ದುರದೃ?ಕರವೆಂದೇ ಹೇಳಬಹುದು. ಸಾಮರಸ್ಯ, ಅನನ್ಯತೆ, ಏಕತೆ ಮತ್ತು ರಾಷ್ಟ್ರಪ್ರೇಮಕ್ಕೆ ದಾರಿ ಮಾಡಿಕೊಡಬಲ್ಲ ಮತ್ತು ಒಡೆದುಹೋಗಿರುವ ಮನಸ್ಸುಗಳನ್ನು ಜೋಡಿಸಿ ಸನ್ಮಾರ್ಗಕ್ಕೆ ತರುವ ಕೆಲಸವನ್ನು ಮಾಡಬೇಕಾದ ಸಾಹಿತ್ಯರಂಗವಿಂದು ಪಂಥಗಳ ಎಡೆಯಲ್ಲಿ ಸಿಲುಕಿ ನಲುಗುತ್ತಿದೆ. ಒತ್ತಡ, ಆಮಿಷ, ಸ್ವಾರ್ಥಕ್ಕೆ ಬಲಿಯಾಗುವ ಸಾಹಿತಿಗಳು ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ. ಜಾತಿ, ಧರ್ಮ, ವರ್ಣ, ಲಿಂಗ ಇತ್ಯಾದಿಯಾಗಿ ವರ್ಗೀಕರಣಗೊಳಿಸದೆ ಸಾಹಿತ್ಯವನ್ನು ಅದರ ಮೌಲ್ಯದೊಂದಿಗೆ ತುಲನೆ ಮಾಡುವುದೇ ಅತ್ಯಂತ ಉಚಿತವಾದುದು. ಆತ್ಮಸಾಕ್ಷಿಗೆ ವಿರುದ್ಧವಾಗಿ ಸಾಹಿತ್ಯ ರಚಿಸುವುದು ಉತ್ತಮ ಸಾಹಿತಿಯ ಲಕ್ಷಣವಂತೂ ಅಲ್ಲ. ಅಂತಹ ಸಾಹಿತ್ಯವು ದೀರ್ಘಕಾಲ ಬಾಳುವುದೂ ಇಲ್ಲ. ಕೇವಲ ಮನರಂಜನೆ ಮತ್ತು ಅನ್ಯರನ್ನು ನೋಯಿಸುವುದಷ್ಟು ಸಾಹಿತ್ಯದ ಉದ್ದೇಶವಲ್ಲ. ತಮ್ಮ ಸಿದ್ಧಾಂತವೇ ಸರ್ವಶ್ರೇಷ್ಠ ಎಂದು ಮಿಕ್ಕವರನ್ನು ಹೀಯಾಳಿಸುವುದೂ ಅಲ್ಲ. ಓದುಗರ ಮನಸ್ಸಿಗೆ ಹಿತವನ್ನುಂಟುಮಾಡುತ್ತಾ, ಅವರಲ್ಲಿ ಮೌಲ್ಯಗಳನ್ನು ಬಿತ್ತಿ ಪ್ರೇರಣೆಯನ್ನು ಒದಗಿಸುವ ಸಾಹಿತ್ಯವೇ ನಿರ್ಮಲವಾದ ಮತ್ತು ನಿಜವಾದ ಸಾಹಿತ್ಯವೆನಿಸಿಕೊಳ್ಳುತ್ತದೆ.
ಯಾವುದೇ ಪ್ರಕಾರದ ಸಾಹಿತಿ, ಕಲಾವಿದ ತನ್ನ ಸರ್ಜನಶೀಲತೆ ಮತ್ತು ಸಾಂಸ್ಕೃತಿಕ ರೇಖೆಯನ್ನು ಸಂಪೂರ್ಣ ಮುರಿದು ವಿಸ್ತರಿಸುವ ಮತ್ತು ಅದನ್ನೊಂದು ಸಾಹಿತ್ಯಿಕ, ಕಲಾತ್ಮಕ ಶಕ್ತಿಯಾಗಿ ಪರಿವರ್ತಿಸಿಕೊಂಡಲ್ಲಿ ಮಾತ್ರ, ಆ ಸಾಹಿತ್ಯಕೃತಿಯು ಒಂದು ಜನಾಂಗದ ಕಣ್ಣು ತೆರೆಸುವ ಧ್ವನಿಪೂರ್ಣ ಕೃತಿಯಾದೀತು. ಜಾತಿ ಧರ್ಮದ ಗಡಿ ಮೀರಿ, ರಾಜಕೀಯದ ಸೋಂಕಿಗೆ ಒಳಗಾಗದೆ, ಕಾಲದೇಶಗಳನ್ನು ಮೀರಿ, ಸಾಂಸ್ಕೃತಿಕ ಜೀವಂತಿಕೆಗೆ ಸಾಧನವೂ ಆಗುತ್ತ, ಸಂಸ್ಕೃತಿ ಎಂದರೆ ಇದೇ ಎಂಬ ಅರಿವಿನ ಮಟ್ಟಕ್ಕೆ ಸಹೃದಯ ಓದುಗರನ್ನು ಕೊಂಡೊಯ್ಯಲು ಸಾಧ್ಯ. ಕೇವಲ ಸ್ವಾರ್ಥ, ಸ್ವಾಭಿಮಾನ, ಪಂಥಪ್ರೀತಿಗೆ ಒಳಗಾಗಿ ಸಾಹಿತ್ಯಕೃತಿಯನ್ನು ಅರ್ಥೈಸಲು ಹೊರಟರೆ ಅಂತಹ ಕೃತಿಗೆ ವ್ಯಾಪಕತೆ ಸಿಗಲಾರದು. ಈ ಮಣ್ಣಿನಲ್ಲಿ ಬೆಳೆದುಬಂದ ಆಚಾರ-ವಿಚಾರ, ನಡೆ-ನುಡಿ, ನಂಬಿಕೆ, ಪದ್ಧತಿ, ಸಂಬಂಧ ಮತ್ತು ಸಂಘ?ಗಳನ್ನೇ ಪರಂಪರಾಗತವಾದ ಶಕ್ತಿಯಾಗಿಸಿ, ವರ್ತಮಾನದ ಜೀವನಾನುಭವ ನೀಡುವ ಸಾಹಿತ್ಯ ಕೃತಿಗಳ ರಚನೆಯಾಗಬೇಕಾಗಿದೆ. ಇದು ಸಂಸ್ಕೃತಿಯನ್ನು ಪ್ರೀತಿಸುವ ಸಾಹಿತಿಗಳ ಜವಾಬ್ದಾರಿಯೂ ಹೌದು. ಇಂದಿನ ಸನ್ನಿವೇಶದಲ್ಲಿ ಇದು ಸವಾಲು ಕೂಡಾ ಆಗಿರುವುದರಿಂದ ಅದನ್ನೆದುರಿಸಿ ಸಾಂಸ್ಕೃತಿಕ ಹಿರಿಮೆ ಸಾರುವ ಸಾಹಿತ್ಯಕೃತಿಗಳ ರಚನೆಯಾಗಬೇಕಾಗಿದೆ.
ಮಹತ್ತ್ವದ ಹೊಣೆಗಾರಿಕೆ
ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಮತ್ತು ಮಿತಿಮೀರಿದ ತಂತ್ರಜ್ಞಾನಗಳ ಬಳಕೆಯಿಂದಾಗಿಯೂ ನಶಿಸುತ್ತಿರುವ ಪರಂಪರೆ ಮತ್ತು ಸಂಸ್ಕೃತಿಯ ರಕ್ಷಣೆಯ ಮಹತ್ತ್ವದ ಹೊಣೆಗಾರಿಕೆ ಇಂದು ಸಾಹಿತಿಗಳ ಮೇಲಿದೆ. ಸಾಹಿತ್ಯವೂ ಈ ಪ್ರಭಾವಕ್ಕೆ ಒಳಗಾಗುತ್ತಿದ್ದರೂ ಕೂಡಾ, ಈ ಮಣ್ಣಿನ ಮೂಲ ಸಾಂಸ್ಕೃತಿಕಸ್ವರೂಪವನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿಯ ಬಗ್ಗೆಯೂ ಸಾಹಿತಿಗಳು ಹಾಗೂ ಪ್ರಜ್ಞಾವಂತರು ಚಿಂತನೆ ನಡೆಸಬೇಕಾದ ಅನಿವಾರ್ಯತೆಯಿದೆ. ಸಮಾಜದ ಹಿತಕ್ಕೆ ಪೂರಕವಾಗಿ ಮಾರ್ಗದರ್ಶಕಸ್ಥಾನದಲ್ಲಿಯೂ ಇರಬೇಕಾದ ಸಾಹಿತ್ಯವು, ನಮ್ಮ ದೇಶದ ವಿಶ್ವಶ್ರೇ? ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಧನವಾದರೆ, ಅದು ಇನ್ನ? ಮೌಲ್ಯಯುತವಾಗುತ್ತದೆ.
ಅರ್ಥಶಾಸ್ತ್ರಜ್ಞ ವೆಬ್ಲನ್ (Veblen) ಹೇಳಿದಂತೆ “A scholar’s books are like his children.” ನಮ್ಮ ಹೊಣೆಗಾರಿಕೆ ಇರುವುದು ನಮ್ಮ ಸರ್ಜನಶೀಲತೆಯ ಮೂಲಕ ಮಕ್ಕಳನ್ನು ಉಳಿಸಿ ಬೆಳೆಸುವುದರಲ್ಲಿಯೇ ವಿನಾ, ಅದರ ಕತ್ತುಹಿಸುಕುವುದರಲ್ಲಿ ಅಲ್ಲ. ಆಗ ಸಂಸ್ಕೃತಿ ನಿಂತ ನೀರಾಗುವುದಿಲ್ಲ. ಜಗತ್ತಿನ ಚರಿತ್ರೆಯಲ್ಲಿ ಈ ನೆಲದ ಸಂಸ್ಕೃತಿ ಬೀರಿದ ವ್ಯಾಪಕ ಪ್ರಭಾವಕ್ಕಿಂತ ಮಿಗಿಲಾದುದು ಬೇರಿಲ್ಲ ಎಂದು ಚರಿತ್ರಕಾರರೇ ಹೇಳುತ್ತಿದ್ದರೂ, ಸಂಸ್ಕೃತಿಯನ್ನು ಅರ್ಥೈಸಿಕೊಳ್ಳದವರಿಂದ ಅಂದಿನಿಂದ ಇಂದಿನ ತನಕವೂ ಹೊಡೆತ ಬೀಳುತ್ತಲೇ ಇದೆ. ಇದೆಲ್ಲವನ್ನು ಸಹಿಸಿಕೊಂಡು ಸಂಸ್ಕೃತಿ ಪ್ರೀತಿಯನ್ನು ಉಳಿಸಿಕೊಂಡಿರುವವರ ಹೊಣೆಗಾರಿಕೆ ಇಂದು ಮತ್ತ? ಹೆಚ್ಚಿದೆ. ಈ ಹೊಣೆಗಾರಿಕೆಯ ಅರಿವು ಸಾಹಿತಿಗಳಿಗಾದಾಗ ಸರ್ಜನಶೀಲ ಸಾಹಿತ್ಯವೂ ರಚನೆಯಾದೀತು.
“ಸಾಹಿತ್ಯವಿಲ್ಲದೆ ಜೀವನವಿಲ್ಲ, ಜನಜೀವನವಿಲ್ಲದೆ ಸಾಹಿತ್ಯವಿಲ್ಲ” ಎನ್ನುವ ಮಾತಿನಂತೆ ಸಮಾಜದ ಸ್ವಾಸ್ಥ್ಯಕ್ಕೆ ಸಂಸ್ಕೃತಿಯುಕ್ತ ಸಾತ್ತ್ವಿಕ ಸಾಹಿತ್ಯಬೇಕು. ಸೌಹಾರ್ದಯುತ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಇಂತಹ ಸಾಹಿತ್ಯದ ಪಾತ್ರ ಮಹತ್ತರವಾದುದು. ಧರ್ಮ, ಸಂಸ್ಕೃತಿಯ ಸಂಪೂರ್ಣ ಅರಿವಿರುವ ಸಾಹಿತಿಯಿಂದ ಪಕ್ಷಪಾತವಿಲ್ಲದ ಯಾವುದೇ ಒಂದು ಪಂಥ, ಪಂಗಡಕ್ಕೆ ಅನುಕೂಲವಾಗುವ ಸಾಹಿತ್ಯ ರಚನೆಯಾಗದೆ ಎಲ್ಲರ ಧ್ವನಿಯಾಗಿ ಸಮಷ್ಟಿಹಿತದ ಸಾಹಿತ್ಯ ರಚನೆಯಾಗುತ್ತದೆ. ಇಂತಹ ಸಾಹಿತ್ಯವೇ ಸಾರ್ವಕಾಲಿಕವಾಗಿ ಉಳಿಯಲಿದೆ. ಸಾಹಿತ್ಯವು ಸಂಸ್ಕೃತಿಯೊಂದಿಗೆ ಮಿಳಿತವಾದಾಗ ಅದು ಪ್ರೀತಿಯನ್ನು ಹುಟ್ಟಿಸುತ್ತದೆಯೇ ವಿನಾ ದ್ವೇಷವನ್ನಲ್ಲ. ಒಂದು ಪಂಥಕ್ಕೆ ಜೋತುಬಿದ್ದವರ ಸಾಹಿತ್ಯವು ಟೀಕೆ, ಅವಹೇಳನ, ಅಸತ್ಯ, ದ್ವೇಷಗಳಿಂದ ಕೂಡಿರುವ ಸಂಭವವೇ ಹೆಚ್ಚಿರುವುದರಿಂದ, ಇಂತಹ ಸಾಹಿತ್ಯವು ಸಮಾಜಕ್ಕೆ ಅಪಾಯಕಾರಿಯಾಗಿಯೂ ಸಂಭವಿಸಬಹುದು. ಮನುಷ್ಯನ ಅಂತರಂಗವನ್ನು ತಟ್ಟಿ, ಮನಸ್ಸನ್ನು ಉದಾತ್ತ ಭಾವನೆಗಳಿಂದ ಜಾಗೃತಗೊಳಿಸಿ, ಮಾನವೀಯ ಮೌಲ್ಯಗಳೊಂದಿಗೆ ಸರ್ವರ ಹಿತವನ್ನು ಬಯಸುವ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯವೆನಿಸಿಕೊಳ್ಳುತ್ತದೆ.