‘ಬಂಡವಾಳವನ್ನು ಕಂಡರೆ ನನಗೇನೂ ಸಂಕೋಚವಿಲ್ಲ. ಬಂಡವಾಳವಾದದೊಡನೆ ನಾನು ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ಜನಾಂಗ, ಜನಾಂಗಗಳ ನಡುವೆ ಭಾರಿ ಯುದ್ಧವನ್ನು ತಡೆಗಟ್ಟುವ ಸಲುವಾಗಿ ಬಂಡವಾಳದ ಕ್ರೋಢೀಕರಣ ಕೆಲವೇ ವ್ಯಕ್ತಿಗಳಲ್ಲಿ ಆಗಬಾರದೆಂದು ಎಲ್ಲರೂ ಹೇಳುತ್ತಾರೆ. ನಿಜಾರ್ಥದಲ್ಲಿ ಬಂಡವಾಳ ಹಾಗೂ ಶ್ರಮ ಪರಸ್ಪರ ವಿರೋಧಿಗಳಲ್ಲ. ಒಬ್ಬ ಇನ್ನೊಬ್ಬನಿಂದ ಸಿರಿವಂತನಾಗಿದ್ದಾನೆ ನಿಜ. ಆದರೆ ಮುಂದೊಂದು ದಿನ ಶ್ರೀಮಂತರು ಬಡವರ ಶೋಷಣೆ ಮಾಡದೆ ಸಿರಿವಂತರಾಗುವ ಹಾಗೂ ಬಡವರು ಸಿರಿವಂತರನ್ನು ನೋಡಿ ಹೊಟ್ಟೆ ಉರಿಪಡದಿರುವ ಕಾಲ ಬರಲಿದೆ ಎಂದು ನನ್ನ ಮನ ನುಡಿಯುತ್ತಿದೆ. ಅತ್ಯಂತ ಪರಿಪೂರ್ಣಸ್ಥಿತಿಯಲ್ಲಿನ ಪ್ರಪಂಚದಲ್ಲೂ ಸಹ ಸಂಪೂರ್ಣ ಆರ್ಥಿಕಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ. ಆರ್ಥಿಕವಿಷಮತೆ ಇಲ್ಲದ ಸಮಾಜರಚನೆ ಅಸಾಧ್ಯ. ಆದರೆ ಸೂಕ್ತ ಆರ್ಥಿಕ ಹಾಗೂ ಸಾಮಾಜಿಕ ನೀತಿ ಮತ್ತು ಕಾರ್ಯಕ್ರಮಗಳ ಮೂಲಕ ಅಸಮಾನತೆಯ ಕಂದಕವನ್ನು ಕಡಿತಗೊಳಿಸಬಹುದು, ವರ್ಗಸಂಘ?ಗಳನ್ನು ತಡೆಯಬಹುದು. ಎಲ್ಲರ ಹಿತದೃಷ್ಟಿಯಿಂದ ಬಡವರು ಮತ್ತು ಶ್ರೀಮಂತರ ನಡುವಣ ಸೌಹಾರ್ದವನ್ನು ಹೆಚ್ಚಿಸುವ ನಿರಂತರ ಪ್ರಯತ್ನ ನಡೆಯಬೇಕು’ ಎಂಬುದು ಗಾಂಧಿಯವರ ಆಗ್ರಹ.
ಆತ್ಮೋದ್ಧಾರದ ಮಾರ್ಗ
“ಭವ್ಯ ಭಾರತದ ಬುನಾದಿಗೆ ಪಶ್ಚಿಮದ ರಕ್ತಸಿಕ್ತ ಮಾರ್ಗ ಸರಿಯಲ್ಲ. ಈ ಮಾರ್ಗದ ಯಶಸ್ಸಿನ ಬಗ್ಗೆ ಅವರೂ ಸಹ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಬದಲಾಗಿ ಉದಾತ್ತ ಮೌಲ್ಯಗಳ ಆಧಾರಿತ ರಕ್ತರಹಿತ ಶಾಂತಿಮಾರ್ಗವೇ ದಾರಿದೀಪ. ಯಾವುದೇ ಕಾರಣಕ್ಕೂ ಭಾರತ ತನ್ನ ’ಆತ್ಮ’ವನ್ನು ಕಳೆದುಕೊಂಡು ಜೀವಿಸಿರಲಾರದು. ’ಪಶ್ಚಿಮರಾಷ್ಟ್ರಗಳ ಆಘಾತಗಳನ್ನು ನಾನು ತಡೆದುಕೊಳ್ಳಲಾರೆ’ ಎನ್ನುವ ಅಸಹಾಯಕ ಚಿಂತನೆ ಮತ್ತು ಅಪಸ್ವರ ನಮ್ಮ ಮನದಲ್ಲಿ ಎಂದೂ ಸುಳಿಯಬಾರದು. ಭಾರತ ತನ್ನ ಅಸ್ತಿತ್ವಕ್ಕಾಗಿ ಮತ್ತು ಪ್ರಪಂಚದ ಒಳಿತಿಗಾಗಿ ಈ ಹೊಡೆತಗಳನ್ನು ಸಂಪೂರ್ಣವಾಗಿ ಎದುರಿಸುವಷ್ಟು ಸಶಕ್ತ ರಾಷ್ಟ್ರವಾಗಬೇಕು” ಎಂಬುದು ಗಾಂಧಿಯವರ ಆಶಯ (ಹರಿಜನ, ೮.೨. ೧೯೩೫).
ಸ್ವಯಂಪೂರ್ಣತೆಯ ದಾರಿ
ಗಾಂಧಿಯವರು ಮತ್ತೆ ಮತ್ತೆ ಹೇಳುವ ಮಾತೆಂದರೆ ಶೋ?ಣೆ ನಿಂತಾಗ ಮಾತ್ರ ಹಳ್ಳಿಗಳ ಪುನರುಜ್ಜೀವ ಮಾರಾಟ ಮತ್ತು ಸ್ಪರ್ಧೆಗಳ ಸಮಸ್ಯೆ ಬಂದಾಗ ದೊಡ್ಡ ಪ್ರಮಾಣದ ಕೈಗಾರಿಕೀಕರಣ ಹಳ್ಳಿಗರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಶೋಷಣೆ ಮಾಡುತ್ತದೆ. ಆದಕಾರಣ ನಾವು ಹಳ್ಳಿಗಳು ಸ್ವಯಂಪೂರ್ಣವಾಗುವಂತೆ ನಮ್ಮ ಗಮನ ಹರಿಸಬೇಕು. ಭಾರತದ ಹಳ್ಳಿಗಳು ತಮ್ಮ ದಿನನಿತ್ಯದ ಉಪಯೋಗಕ್ಕೆ ಬೇಕಾದ ವಸ್ತುಗಳನ್ನು ತಾವೇ ಉತ್ಪಾದನೆ ಮಾಡತೊಡಗಿದಾಗ ಇದು ಸಾಧ್ಯ.
“ದಿನೋಪಯೋಗಿ ವಸ್ತುಗಳನ್ನು ಉತ್ಪಾದಿಸುವ ಗ್ರಾಮಕೈಗಾರಿಕೆಗಳ ಮೂಲಸ್ವರೂಪವನ್ನು ಉಳಿಸಿಕೊಂಡರೆ ಆಗ ಅತ್ಯಾಧುನಿಕ ಯಂತ್ರಗಳು ಹಾಗೂ ಉಪಕರಣಗಳನ್ನು ಉಪಯೋಗ ಮಾಡುವುದರಲ್ಲಿ ಯಾವುದೇ ರೀತಿಯ ವಿರೋಧವೂ ಇರುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ಅವುಗಳನ್ನು ಇನ್ನೊಬ್ಬರ ಶೋಷಣೆಗಾಗಿ ಉಪಯೋಗಿಸತಕ್ಕದ್ದಲ್ಲ” ಎಂಬ ಎಚ್ಚರಿಕೆಯನ್ನು ಗಾಂಧಿಯವರು ನೀಡಿದ್ದಾರೆ (ಹರಿಜನ, ೨೮-೯-೧೯೪೬ ಪು. ೨೨೬).
ಔದ್ಯೋಗೀಕರಣದ ಮಾದರಿ
“ಭಾರತವನ್ನು ನೀವು ಔದ್ಯೋಗೀಕರಣಗೊಳಿಸುವುದಿಲ್ಲವೆ” – ಎಂಬ ಪ್ರಶ್ನೆಗೆ ಗಾಂಧಿಯವರು ನೀಡಿದ ಉತ್ತರವಿದು: “ಖಂಡಿತವಾಗಿಯೂ ಔದ್ಯೋಗೀಕರಣಗೊಳಿಸುವೆ. ಆದರೆ ಅದು ಪಾಶ್ಚಿಮಾತ್ಯ ಮಾದರಿಯಲ್ಲಿ ಇರದೆ, ನನ್ನ ಕಲ್ಪನೆಯ ರೀತಿಯಲ್ಲಿರುತ್ತದೆ. ಗ್ರಾಮೀಣ ಸಮಾಜವನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಈ ಹಿಂದೆ ಭಾರತದ ಹಳ್ಳಿಗಳು ನಗರ ಹಾಗೂ ಪಟ್ಟಣಗಳ ಅಗತ್ಯಗಳನ್ನು ಪೂರೈಸಲು ದಿನನಿತ್ಯದ ವಸ್ತುಗಳನ್ನು ಉತ್ಪಾದಿಸುತ್ತಿದ್ದವು. ಎಂದು ನಮ್ಮ ನಗರಗಳು ವಿದೇಶೀ ಮಾರುಕಟ್ಟೆಗಳಾಗಿ ಪರಿವರ್ತನೆಗೊಂಡು ವಿದೇಶದಿಂದ ಬಂದಂತಹ ಕಳಪೆ ಹಾಗೂ ಕಡಮೆ ಬೆಲೆಯ ಮಾಲುಗಳನ್ನು ನಮ್ಮ ಹಳ್ಳಿಗಳಲ್ಲಿ ಮಾರಲು ಪ್ರಾರಂಭ ಮಾಡಿದವೊ ಆಗ ಭಾರತ ಬಡವಾಯಿತು” (M.K. Gandhi, Economic and Industrial Life and Relations – vol. I, p. 1).
“ನನಗೆ ಒಂದು ದೊಡ್ಡ ಉದ್ಯಮವನ್ನು ಪ್ರಾರಂಭಿಸಿ ಅದನ್ನು ನಡೆಸುವ ಶಕ್ತಿ ಇದೆ. ಆದರೆ ನನ್ನ ಹೃದಯ ಇದರ ವಿರುದ್ಧ ಬಂಡಾಯ ಮಾಡುತ್ತಿರುವ ಕಾರಣ ನಾನು ಉದ್ದೇಶಪೂರ್ವಕವಾಗಿ ಅದನ್ನು ತೊರೆಯುತ್ತಿದ್ದೇನೆ. ಇದು ತ್ಯಾಗವಲ್ಲ. ದೇಶದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಲೂಟಿಯಲ್ಲಿ ನನಗೆ ಪಾಲು ಬೇಡವೆಂದು. ಆದ್ದರಿಂದ ನಾನು ಬೇರೆ ರೀತಿಯಲ್ಲಿಯೇ ನಮ್ಮ ಗ್ರಾಮಗಳ ಔದ್ಯೋಗೀಕರಣ ಮಾಡಬಯಸುತ್ತೇನೆ” (ಹರಿಜನ, ೨೭-೯-೧೯೩೭, ಪು. ೧೮).
ಅನಗತ್ಯ ಯಂತ್ರಕೌಶಲದ ಆಮದಿಗೆ ವಿರೋಧ
“ಯಂತ್ರ-ತಂತ್ರ-ಕೌಶಲದಲ್ಲಿ ನಾವು ಅಜ್ಞರು ನಿಜ. ಯಂತ್ರಕೌಶಲದ ವಿ?ಯದಲ್ಲಿ ಟಾಟಾ ಮನೆತನ ಮಾಡುತ್ತಿರುವುದನ್ನು ನಾನು ಸಮರ್ಥಿಸಲಾರೆ. ತಿಂಗಳಿಗೆ ೨೦ ಸಾವಿರ ಸಂಬಳ ಕೊಟ್ಟು ಒಬ್ಬ ಅಮೆರಿಕನ್ ತಜ್ಞನನ್ನು ಕರೆಸಿಕೊಳ್ಳುವುದು ಅವರಿಗೆ ಸಾಧ್ಯ. ಸಾಹಸಪ್ರವೃತ್ತಿಗೇನೋ ಅವರು ಸಂಕೇತ. ಆದರೆ ಅವರು ಬಡಭಾರತದ ಪ್ರತಿನಿಧಿಯಲ್ಲ. ಭಾರತದ ೯೦ ಪಾಲಿನ ಜನಸಂಖ್ಯೆಯುಳ್ಳ ೭ ಲಕ್ಷ ಹಳ್ಳಿಗಳಿವೆ. ತಂತ್ರಜ್ಞಾನ ಕೌಶಲದಲ್ಲಿ ಅಜ್ಞ ದೇಶಕ್ಕೆ ನಮ್ಮ ಕುಶಲತೆಯ ನೆರವನ್ನು ಅವರ ಒಳಿತಿಗಾಗಿ ಯಾವ ಪ್ರತಿಫಲವನ್ನೂ ಬೇಡದೆ ಕೊಡೋಣ ಎಂದಾದರೆ ನಿಮ್ಮ ಔದಾರ್ಯ ಅಕಲಂಕಿತವಾಗಿರುತ್ತದೆ. ಅಮೆರಿಕ ನಿಜವಾಗಿ ಭಾರತಕ್ಕೆ ನೆರವಾಗಲು ಬಯಸುವುದಾದರೆ ತನ್ನ ಪ್ರತ್ಯುತ್ಪನ್ನ ಶಕ್ತಿಯನ್ನು ಈ ದಿಕ್ಕಿನಲ್ಲಿ ಹರಿಸಬೇಕು. ಅದಕ್ಕಾಗಿ ದುಡಿಯಬೇಕಾದರೆ ಅಗ್ರಗಾಮಿ ರಫ್ತುರಾಷ್ಟ್ರವಾಗಿರುವ ಗುಣವನ್ನು ಅಮೆರಿಕ ಕಳೆದುಕೊಳ್ಳಬೇಕಾದೀತು. ನನ್ನ ಅಭಿಪ್ರಾಯವು ಪ್ರಚಲಿತ ಅಭಿಪ್ರಾಯಗಳಿಗಿಂತ ತೀರ ವಿಭಿನ್ನವಾಗಿದೆ. ಅದು ಔದ್ಯೋಗೀಕರಣದ ಸೂತ್ರಗಳಂತೆ ನಡೆಯತಕ್ಕದ್ದಲ್ಲ. ಭಾರತದ ಹಳ್ಳಿಗಳಿಗೆ ಔದ್ಯೋಗೀಕರಣದ ಸೋಂಕು ಹತ್ತದಂತೆ ಇಡಬೇಕೆಂದು ನನ್ನ ಇಚ್ಛೆ.
ಅಮೆರಿಕನ್ನರು ಎಸಗಿರುವ ಶೋಷಣೆಯಿಂದ ಶೋಷಿತ ದೇಶಗಳಾಗಲಿ, ಶೋಷಕ ರಾಷ್ಟ್ರದ್ದಾಗಲಿ ಘನತೆ- ಗೌರವಗಳು ಹೆಚ್ಚಾಗಿಲ್ಲ. ತದ್ವಿರುದ್ಧ ಅದು ಅವರ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗಿದೆ. ಅಮೆರಿಕೆಯು ನಿಜವಾದ ಆಧ್ಯಾತ್ಮಿಕ ಔದಾರ್ಯವನ್ನು ಸಾಯಬಡಿದಿದೆ. ಅಮೆರಿಕದ ದಾರಿಯನ್ನು ಭಾರತ ತುಳಿಯದು. ಸಮೃದ್ಧಿಯ ಹೆಸರಿನಲ್ಲಿ ಟನ್ನುಗಟ್ಟಳೆ ಗೋಧಿ, ಸಕ್ಕರೆ ಮತ್ತು ಇತರೆ ಬೇಸಾಯದ ಉತ್ಪನ್ನಗಳನ್ನು ನಾಶಮಾಡುತ್ತಿದ್ದೀರಿ. ಇದು ಬಂಡವಾಳವಾದದ ಪಾಪದ ಫಲ ಮತ್ತು ಪ್ರಾಯಶ್ಚಿತ್ತ. ಇತರ ದೇಶಗಳಿಗೆ ಆ ಸಕ್ಕರೆ, ಗೋಧಿ ಕೊಡಬಹುದಿತ್ತು ಅಥವಾ ಅಮೆರಿಕೆಯ ನಿರುದ್ಯೋಗಿಗಳಿಗೇ ಉಣಿಸಬಹುದಿತ್ತು. ಆದರೆ ನೀವು ಹಾಗೆ ಮಾಡಲಿಲ್ಲ” (ಹರಿಜನ, ೧೨-೨-೧೯೩೮).
ಸಮ್ಮಿಶ್ರ ಕೈಗಾರಿಕಾ ಬೆಳವಣಿಗೆ ಮಾದರಿ
ಗಾಂಧಿಯವರು ಸಮ್ಮಿಶ್ರ ರೀತಿಯ ಕೈಗಾರಿಕಾ ಬೆಳವಣಿಗೆಯನ್ನು ಆಶಿಸಿದ್ದರು. ಹೇಗೆಂದರೆ ಹಳ್ಳಿಗಳಲ್ಲಿ ವಿಶಾಲ ಪ್ರಮಾಣದ ಚಿಕ್ಕ ಚಿಕ್ಕ ಉತ್ಪಾದನಾ ಘಟಕಗಳಿದ್ದು, ನಗರಗಳಲ್ಲಿ ಕೇವಲ ಕೆಲವು ಪ್ರಮುಖ ಕೈಗಾರಿಕೆಗಳು ಸಮುದಾಯದ ಅಥವಾ ಸರ್ಕಾರದ ಅಧೀನದಲ್ಲಿ ಕಾರ್ಯ ನಡೆಸುವಂತಿರಬೇಕು. ನಗರಕೈಗಾರಿಕೆಗಳು ಅನಿವಾರ್ಯ ಪಿಡುಗು ಆಗಿದ್ದು, ಗ್ರಾಮೀಣ ಕೈಗಾರಿಕೆಗಳು ಸಾಮಾನ್ಯಜನರ ದಿನನಿತ್ಯದ ಆವಶ್ಯಕತೆಗಳನ್ನು ಪೂರೈಸುವಂತಿರಬೇಕು. ಹಳ್ಳಿಗಳ ಪುನರುತ್ಥಾನ ಜೀವ ಅಳಿದ ಕರಕುಶಲ ವಸ್ತುಗಳ ಕೈಗಾರಿಕಾ ಅಭಿವೃದ್ಧಿ ಮಾಡದೆ ಸಾಧ್ಯವಿಲ್ಲ ಎನ್ನುವ ಸ್ಪ? ನಿಲವಿಗೆ ಗಾಂಧಿ ಬಂದಿದ್ದರು. ಕೈಗಾರಿಕೀಕರಣ ಮೃತಪ್ರಾಯವಾದ ಹಳ್ಳಿಗಳಿಗೆ ಜೀವ ತುಂಬಲು ಸಾಧ್ಯವಿಲ್ಲ. ರೈತರು ತಮ್ಮ ಕರಕುಶಲತೆಗಳನ್ನು ಪುನರುಜ್ಜೀವನಗೊಳಿಸಿ ಅದರ ಮೇಲೆ ಅವಲಂಬಿಯಾಗಿ ಜನರ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಹಳ್ಳಿಗಳಲ್ಲೇ ಭದ್ರವಾಗಿ ನಿಂತಾಗ ಮಾತ್ರ ನಮ್ಮ ಗುರಿ ಕೈಗಾರಿಕೆಗಳ ಪುನಶ್ಚೇತನಗೊಳಿಸಲು ಸಾಧ್ಯ. ರೈತರು ಮತ್ತೊಮ್ಮೆ ಈಗಿನ ಹಳ್ಳಿ-ನಗರಗಳ ಸಂಬಂಧವನ್ನು ತಲೆಕೆಳಗು ಮಾಡಿ ನಗರ ಪ್ರದೇಶಗಳು ಹಳ್ಳಿಯಲ್ಲಿ ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆಯನ್ನು ಕಲ್ಪಿಸುವ ಹಾಗೆ ಮಾಡಬೇಕು.
ಹಳ್ಳಿಗಳಲ್ಲಿ ವಾಸಮಾಡುತ್ತಿರುವವರಿಗೆ ಎಲ್ಲ ರೀತಿಯ ಅನುಕೂಲ ಹಾಗೂ ಸೌಲಭ್ಯಗಳು ದೊರಕುವಂತೆ ಆರ್ಥಿಕ ಯೋಜನೆಗಳನ್ನು ಮಾಡಿದಾಗ ಗುಡಿಕೈಗಾರಿಕೆಗಳ ಮತ್ತು ಬೃಹತ್ ಕೈಗಾರಿಕೆಗಳ ಸಾಮರಸ್ಯವನ್ನು ಸಾಧಿಸಬಹುದು ಎಂದು ಗಾಂಧಿಯವರು ಸ್ಪಷ್ಟವಾಗಿ ನುಡಿದರು. “ನನ್ನ ಪ್ರಕಾರ ವಿದ್ಯುಚ್ಛಕ್ತಿ ತಯಾರಿಕಾ ಘಟಕಗಳು, ಹಡಗು ನಿರ್ಮಾಣ, ಕಬ್ಬಿಣ ಉತ್ಪಾದಿಸುವ ಘಟಕಗಳು ಮತ್ತು ಯಂತ್ರಗಳನ್ನು ನಿರ್ಮಿಸುವ ಕಾರ್ಖಾನೆಗಳು ಗುಡಿಕೈಗಾರಿಕೆಗಳ ಜೊತೆಜೊತೆಯಲ್ಲಿ ಕಾರ್ಯ ನಿರ್ವಹಿಸುವಂತಿರಬೇಕು. ಆದರೆ ಅಧೀನತೆ ತಲೆಕೆಳಗಾಗಬೇಕು. ಇಲ್ಲಿಯವರೆಗೆ ಹಳ್ಳಿಗರ ಮತ್ತು ಹಳ್ಳಿಗಳ ಕರಕುಶಲತೆಗಳನ್ನು ನಾಶಮಾಡುವ ರೀತಿ ಕೈಗಾರಿಕೀಕರಣವನ್ನು ಯೋಜನಾಬದ್ಧವಾಗಿ ಮಾಡಿದರು. ಇನ್ನುಮುಂದೆ ಕೈಗಾರಿಕೀಕರಣ ಹಳ್ಳಿಗಳ ಮತ್ತು ಹಳ್ಳಿಗರ ಕರಕುಶಲತೆಗಳ ಅಭಿವೃದ್ಧಿಯನ್ನು ಮಾಡಲು ಅದರ ಅಧೀನವಾಗಿ ಕೆಲಸ ಮಾಡುವಂತಿರಬೇಕು.”
ಈ ಉದ್ದೇಶ ಪೂರೈಸಲು ಪ್ರಮುಖ ಕೈಗಾರಿಕೆಗಳನ್ನು ರಾಷ್ಟ್ರೀಕರಿಸಲು ಗಾಂಧಿಯವರು ಬಯಸಿದ್ದರು. ಯಾವ ಕೈಗಾರಿಕೆಗಳನ್ನು ರಾಷ್ಟ್ರೀಕರಿಸಬೇಕು ಎಂಬುದರ ಬಗ್ಗೆ ಎಚ್ಚರಿಕೆಯನ್ನೂ ಸಹ ಅವರು ನೀಡಿದ್ದರು. “ಹಳ್ಳಿಗರು ಸ್ವಲ್ಪಮಟ್ಟಿಗೆ ಕುಶಲತೆಯಿಂದ ಯಾವ ಕೈಗಾರಿಕೆಗಳನ್ನು ಸಂಘಟಿಸಲು ಸಾಧ್ಯವೋ ಅಂತಹ ಕೈಗಾರಿಕೆಗಳನ್ನು ರಾಷ್ಟ್ರೀಕರಿಸಲು ಆಯ್ಕೆ ಮಾಡುವ ಅಗತ್ಯವಿಲ್ಲ. ಉದಾಹರಣೆಗೆ, ನಾನು ಮೊದಲು ಕೈಗಳ ಸಹಾಯದಿಂದ ಕಾಗದವನ್ನು ತಯಾರಿಸಲು ಸಾಧ್ಯ ಎಂದು ನಂಬಿರಲಿಲ್ಲ. ಆದರೆ ಈಗ ನಾನು ಪ್ರತಿಯೊಂದು ಹಳ್ಳಿಯೂ ಸಹ ದಿನಪತ್ರಿಕೆ ಮಾಡಲು ಬೇಕಾದ ಕಾಗದವಲ್ಲದೆ ಉಳಿದ ರೀತಿಯ ಎಲ್ಲ ಕಾಗದವನ್ನು ತಾನೇ ತಯಾರಿಸಿಕೊಳ್ಳಬಹುದು ಎಂದು ನಂಬಿದ್ದೇನೆ. ಕಾಗದ ತಯಾರಿಕೆಯ ಮೇಲೆ ಸರ್ಕಾರ ತನ್ನ ಹಿಡಿತವನ್ನು ಸಾಧಿಸಿದರೆ, ಆಗ ಹಳ್ಳಿಗಳಲ್ಲಿ ಕಾಗದ ತಯಾರಿಕೆ ಮಾಡುವವರಿಗೆ ಆರ್ಥಿಕ ರಕ್ಷಣೆಯನ್ನು ಕೊಡಬೇಕಾದೀತು.” ಇದನ್ನು ಜಾರಿಗೆ ತರಲು ಒಂದು ಸಾಮಾನ್ಯ ಸೂತ್ರವನ್ನು ಅವರು ಪ್ರಸ್ತುತ ಪಡಿಸಿದರು. ಅದರ ಪ್ರಕಾರ ನಗರ ಪ್ರದೇಶಗಳು ಹಳ್ಳಿಯಲ್ಲಿ ಉತ್ಪಾದಿಸುವ ವಸ್ತುಗಳನ್ನು ಮಾರಾಟ ಮಾಡುವ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಬೇಕು.
ಕೈಗಾರಿಕೆಗಳ ರಾಷ್ಟ್ರೀಕರಣಕ್ಕೆ ವಿರೋಧ
ಕೈಗಾರಿಕೆಗಳನ್ನು ರಾಷ್ಟ್ರೀಕರಿಸಿದರೆ ಅವುಗಳು ದೋಷ ಮುಕ್ತವಾಗುತ್ತದೆ ಎನ್ನುವ ಅಭಿಪ್ರಾಯ ಬಹಳ ಮಂದಿಯದು. ಆದರೆ ಗಾಂಧಿಯವರು ಈ ವಾದವನ್ನು ಒಪ್ಪುವುದಿಲ್ಲ. ’ಪ್ರತಿಯೊಬ್ಬರೂ ನನ್ನ ಹಾಗೆ ಯೋಚನೆ ಮಾಡುವುದಿಲ್ಲ. ಉದಾಹರಣೆಗೆ ನೆಹರೂರವರು ಕೈಗಾರಿಕೀಕರಣ ದೇಶದ ಪ್ರಗತಿಗೆ ಅವಶ್ಯ ಎಂದರು. ಕಾರಣ ಅವುಗಳನ್ನು ರಾಷ್ಟ್ರೀಕರಣ ಮಾಡಿದರೆ ಬಂಡವಾಳಶಾಹೀ ಪದ್ಧತಿಯಿಂದ ಆಗುವ ಕೆಡಕುಗಳಿಂದ ಮುಕ್ತವಾಗುತ್ತದೆ ಎಂಬುದು ಅವರ ನಂಬಿಕೆ. ನನ್ನ ಸ್ವಂತ ಅಭಿಪ್ರಾಯವೆಂದರೆ ಈ ಎಲ್ಲ ಕೆಡುಕುಗಳು ಕೈಗಾರಿಕೀಕರಣದ ಅಂತರ್ಗತದಲ್ಲೇ ಇದೆ. ಆದಕಾರಣ ಎ? ಪ್ರಮಾಣದಲ್ಲಿ ನಾವು ಅವುಗಳನ್ನು ರಾಷ್ಟ್ರೀಕರಿಸಿದರೂ ಆ ಕೆಡುಕುಗಳಿಂದ ಮುಕ್ತವಾಗುವುದಿಲ್ಲ’ (Ibid).
“ಸರ್ಕಾರದ ಕಾರ್ಯನೀತಿಗಳು ಮೂಲಭೂತವಾಗಿ ವಿರೋಧಾಭಾಸವಾಗಿರುವ ಕಾರಣ ದೊಡ್ಡ ದೊಡ್ಡ ಉತ್ಪಾದನಾ ಘಟಕಗಳ ಒಡೆತನ ಸಾಮುದಾಯಿಕವಾಗಿರಬೇಕು. ಯಂತ್ರಗಳ ಉಪಯೋಗಕ್ಕೆ ಬೇಕಾದ ಇಂಧನ ಮತ್ತು ವಿವಿಧ ಸಲಕರಣೆಗಳು ಸಮುದಾಯದ ಒಡೆತನದಲ್ಲಿದ್ದು ಶೋಷಣಾಮುಕ್ತವಾಗಿರಬೇಕು. ಒಂದು ಸಮುದಾಯ ಇನ್ನೊಂದು ಸಮುದಾಯವನ್ನು ಶೋಷಣೆ ಮಾಡಬಾರದು. ಸ್ವಾವಲಂಬನೆಯ ದೃಷ್ಟಿಯಿಂದ ಸಮುದಾಯದ ರಚನೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿರಬೇಕು ಹಾಗೂ ಎಲ್ಲರೂ ಪರಸ್ಪರ ಪರಿಚಿತರಾಗಲು ಸಣ್ಣ ಪ್ರಮಾಣದ್ದಾಗಿರಬೇಕು” ಎಂದು ಅವರು ಹೇಳಿದರು.
ಗಾಂಧಿಯವರ ಸ್ಪಷ್ಟ ಅಭಿಪ್ರಾಯದ ಪ್ರಕಾರ ಕೇಂದ್ರೀಕೃತ ಕೈಗಾರಿಕೆಗಳ ಮೇಲೆ ಸರ್ಕಾರದ ಒಡೆತನ ಮತ್ತು ನಿರ್ಬಂಧಗಳು ಇರಬಾರದು: ’ಕೇಂದ್ರೀಕೃತ ಕೈಗಾರಿಕೆಗಳು ಸರ್ಕಾರಿ ಒಡೆತನದಲ್ಲಿದ್ದು ಸರ್ಕಾರದ ಆರ್ಥಿಕ ಯೋಜನೆಗಳ ಪ್ರಕಾರ ಅಗತ್ಯ ವಸ್ತುಗಳ ಉತ್ಪಾದನೆ ಮಾಡಿ ಸಾಮಾನ್ಯಜನರ ಕಲ್ಯಾಣ ಮಾಡುತ್ತವೆ ಎನ್ನುವ ಸಮಾಜವಾದವನ್ನು ನಾನು ಒಪ್ಪುವುದಿಲ್ಲ’ (D.G. Tendulkar. Mahatma vol. v, p. 277) .
ಅದಕ್ಕೆ ಅವರು ಕೊಡುವ ಕಾರಣ: ’ಸರ್ಕಾರೀ ಒಡೆತನದಲ್ಲಿರುವ ಕೈಗಾರಿಕೆಗಳಲ್ಲಿ ಆಡಳಿತಶಕ್ತಿಯ ಪ್ರಭಾವ ವೃದ್ಧಿಯಾಗುತ್ತದೆ. ಅದರಿಂದ ಎಲ್ಲ ರೀತಿಯ ಮೂಲಭೂತ ಪ್ರಗತಿಗೆ ಬಹುಮುಖ್ಯ ಕಾರಣವಾದ ’ವ್ಯಕ್ತಿಸ್ವಾತಂತ್ರ್ಯದ’ ಅಪಹರಣವಾಗುತ್ತದೆ. ನನಗೆ ಇನ್ನೂ ಹೆಚ್ಚಿನ ಭಯವೆಂದರೆ ಶೋ?ಣೆಯನ್ನು ಕಡಮೆ ಮಾಡುವ ನೆಪದಲ್ಲಿ ಮನು?ನ ವ್ಯಕ್ತಿತ್ವದ ನಾಶಮಾಡುವ ಬಹುದೊಡ್ಡ ಸಂಕಟವನ್ನು ಅದು ತಂದೊಡ್ಡುತ್ತದೆ’ (Ibid, vol. v, p.15).
ಕೈಗಾರಿಕೀಕರಣದ ದೋಷಗಳು
ಕೈಗಾರಿಕೀಕರಣ ಎಷ್ಟು ಮಹತ್ತ್ವದ್ದಾದರೂ, ಅದು ಅನೇಕ ದೋ?ಗಳಿಂದ ಕೂಡಿದೆ. ಅವುಗಳೆಂದರೆ –
- ಕೇವಲ ಕೆಲವು ಮಂದಿಯ ಕೈಗಳಲ್ಲಿ ಬಂಡವಾಳ ಮತ್ತು ಆರ್ಥಿಕಶಕ್ತಿಯ ಕ್ರೋಡೀಕರಣ.
- ಪರಾವಲಂಬಿ ಜೀವಿಗಳ ಉದಯ – ಶ್ರಮಿಕರ ಶ್ರಮಶಕ್ತಿಯ ಮೇಲೆ ಶ್ರೀಮಂತ ಹಾಗೂ ಮಧ್ಯಮ ವರ್ಗಗಳವರು, ಹಳ್ಳಿಗಳ ಮೇಲೆ ನಗರವಾಸಿಗಳು, ಕೈಗಾರಿಕಾ ದೇಶಗಳು ಕೃಷಿಪ್ರಧಾನ ದೇಶಗಳ ಮೇಲೆ ಪರಾವಲಂಬಿಗಳಾಗುತ್ತಾರೆ.
- ಬಂಡವಾಳ ಮತ್ತು ಶ್ರಮದ ನಡುವೆ ಸಂಘರ್ಷ.
- ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಿ ಆರ್ಥಿಕ ಅಸಮಾನತೆಯ ವೃದ್ಧಿ.
- ಆಕ್ರಮಣಕಾರಿ ವಾಣಿಜ್ಯೀಕರಣದ ವಿಸ್ತರಣೆಯಿಂದ ತಣಿಸಲಾಗದ ಭೌತಿಕ ಸಂತೋಷಗಳ ಗುರಿ ಒಂದು ಕಡೆಯಾದರೆ ಅದರ ಪರಿಣಾಮದಿಂದ ಯುದ್ಧದ ಪರಿಸ್ಥಿತಿಯ ನಿರ್ಮಾಣ ಇನ್ನೊಂದೆಡೆ.
ನಿರುದ್ಯೋಗ ಸಮಸ್ಯೆಗೆ ಉತ್ತರ
ಔದ್ಯೋಗೀಕರಣ ಎಷ್ಟು ಹೊಸತಿರಲಿ ಒಂದು ಸಂಗತಿಯಂತೂ ಸ್ಪಷ್ಟ. ಅದು ಪೂರ್ಣ ಉದ್ಯೋಗವನ್ನು ಸೃಷ್ಟಿ ಮಾಡುತ್ತದೆ ಎಂಬುದು ಶಂಕಾಸ್ಪದ. ನೆಹರು ಒಂದು ಬಾರಿ ಈ ರೀತಿ ಹೇಳುತ್ತಾರೆ. ’ನಾವು ಎಷ್ಟು ಕ್ಷಿಪ್ರವಾಗಿ ಕೈಗಾರಿಕೀಕರಣ ಮಾಡಿದರೂ ಸಹ, ನಾವು ನಮ್ಮ ದೇಶದಲ್ಲಿರುವ ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗವನ್ನು ದೊರಕಿಸಿಕೊಡುತ್ತೇವೆಯೋ ಗೊತ್ತಿಲ್ಲ. ಲಕ್ಷಾಂತರ ಮಂದಿ ಒಂದು ಕೈಗಾರಿಕೆಯಲ್ಲಿ ಉದ್ಯೋಗ ಪಡೆದುಕೊಳ್ಳಬಹುದು. ಆದರೆ ಉಳಿದ ನಿರುದ್ಯೋಗಿಗಳ ಕತೆ ಏನು? ಉಳಿದವರು ನಮ್ಮ ಗೃಹಕೈಗಾರಿಕೆ, ಸಣ್ಣಕೈಗಾರಿಕೆ ಹಾಗೂ ಸಹಕಾರಿ ಕ್ಷೇತ್ರದಲ್ಲಿರುವ ಕೈಗಾರಿಕೆಗಳಲ್ಲಿ ಉದ್ಯೋಗ ಗಳಿಸುವಂತಾಗದಿದ್ದರೆ ಅವುಗಳಿಂದ ಏನನ್ನೂ ಪಡೆದಂತಾಗುವುದಿಲ್ಲ, ಅಥವಾ ಅವುಗಳಿಂದ ಎಷ್ಟು ಪಡೆಯಬೇಕೋ ಅಷ್ಟನ್ನು ಪಡೆದಂತಾಗುವುದಿಲ್ಲ’ (ಎಂ.ಕೆ. ಗಾಂಧಿ -ಸರ್ವೊದಯ, ಪು. ೪೧).
ಕೈಗಾರಿಕೀಕರಣದ ಮೂಲಕ ಎಲ್ಲ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲು ಸಾಧ್ಯವಿಲ್ಲ. ಈ ಮುಖ್ಯ ಕಾರಣಕ್ಕಾಗಿ ಗಾಂಧಿಯವರು ಹೆಚ್ಚಿನ ಪ್ರಮಾಣದ ಮತ್ತು ತಾರತಮ್ಯವಿರುವ ಯಂತ್ರಗಳ ಬಳಕೆ ಮತ್ತು ಕೈಗಾರಿಕೀಕರಣವನ್ನು ಕಟುವಾಗಿ ವಿರೋಧಿಸಿದರು.
ಗಾಂಧಿಯವರ ಆದರ್ಶಗಳಾದ ಪರಿತ್ಯಜಿಸುವಿಕೆ ಮತ್ತು ಸಂತೃಪ್ತಿ ಭಾವದ ಮೂಲಕ ಸಿಗುವ ಶಾಶ್ವತ ಶಾಂತಿಯನ್ನು ಗಳಿಸುವ ಮೂಲಕ ಈ ಮೇಲಿನ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾದೀತು. ಇದೇ ನಿಜವಾದ ಮುಕ್ತಿಗೆ ದಾರಿ. ಶೋ?ಣೆ ಮತ್ತು ಅಪಮಾನಗಳಿಂದ ಜನಸಾಮಾನ್ಯರಿಗೆ ಮುಕ್ತಿ ದೊರಕಿಸಲು ಯಾವುದೇ ರೀತಿಯ ಅನಿಶ್ಚಿತ ಸಾಮಾನ್ಯೀಕರಣದ ಉತ್ತರದಿಂದ ಸಾಧ್ಯವಿಲ್ಲ. ಸಮಾಜದಲ್ಲಿ ಇಂದು ಬಂಡವಾಳ ಪಡೆದುಕೊಂಡಂತಹ ಸ್ಥಾನವನ್ನು ಅವರು ಅಪೇಕ್ಷೆಪಡುವುದು ಸಹಜ. ಆದರೆ ಅದನ್ನು ಇಂದು ಹಿಂಸೆಯ ಮೂಲಕವೇ ಪಡೆಯಲು ಸಾಧ್ಯ. ಅವರು ಬಂಡವಾಳದ ನ್ಯೂನತೆಗಳನ್ನು ಸರಿಮಾಡುವ ಪ್ರಯತ್ನ ಮಾಡಿದರೆ, ಬಂಡವಾಳದ ಬಗ್ಗೆ ತಮ್ಮ ಕಲ್ಪನೆಗಳನ್ನು ಬದಲಾಯಿಸಲು ಸಿದ್ಧರಾದರೆ ಆಗ ಮಾತ್ರ ಶ್ರಮದಿಂದ ಉತ್ಪಾದನೆಗೊಂಡ ವಸ್ತುಗಳ ನ್ಯಾಯೋಚಿತ ವಿತರಣೆ ಆಗಬಹುದು. ಇದು ನಮ್ಮನ್ನು ತತ್ಕ್ಷಣ ಸಂತೃಪ್ತಿ ಮತ್ತು ಸರಳತೆಯ ಕಡೆಗೆ ಇಚ್ಛಾಪೂರ್ವಕವಾಗಿ ತೆಗೆದುಕೊಂಡು ಹೋದಂತೆ ಆಗುತ್ತದೆ. ಈ ಹೊಸ ದೃಷ್ಟಿಕೋನದಿಂದ ನೋಡಿದರೆ ಭೌತಿಕ ಆಸೆಗಳ ಆವರ್ತನೆ ಜೀವನದ ಬಹು ಮುಖ್ಯ ಗುರಿ ಆಗಿರುವುದಿಲ್ಲ. ಬದಲಿಗೆ ನಮ್ಮ ಜೀವನದಲ್ಲಿ ನಿರಂತರ ಸುಖ-ಸಾಧನಗಳ ಕಡಿತ ಮಾಡುವುದೇ ಆಗಿರುತ್ತದೆ. ಹೀಗಾಗಿ ಬೇರೆಯವರು ಏನನ್ನು ಪಡೆಯಲು ಸಾಧ್ಯವಿಲ್ಲವೋ ಅಂತದ್ದನ್ನು ನಾನು ಪಡೆಯಬೇಕು ಎನ್ನುವ ಚಿಂತನೆ ಬಿಡಬೇಕು. ಈ ರೀತಿಯ ಅರಿವಿಲ್ಲದ ಅಪಾರ ಆಧ್ಯಾತ್ಮಿಕ ಫಲಿತಾಂಶಗಳ ಬಗ್ಗೆ ಯೂರೋಪಿನ ಜನಸಾಮಾನ್ಯರಿಗೆ ಅರ್ಥಶಾಸ್ತ್ರದ ಮತ್ತು ಸಾಫಲ್ಯ ಪಡೆದ ಇನ್ನಿತರ ಪ್ರಯೋಗಗಳ ಮೂಲಕ ಕ?ದಾಯಕವಲ್ಲದ ಮನವಿಯನ್ನು ಮಾಡಬೇಕಾಗಿದೆ. ಆಧ್ಯಾತ್ಮಿಕ ನಿಯಮಗಳು ಹಾಗೂ ಮೌಲ್ಯಗಳು ತಮ್ಮ?ಕ್ಕೆ ತಾವೇ ಕಾರ್ಯಗತವಾಗುವುದಿಲ್ಲ. ಬದಲಿಗೆ ಅವು ಮನುಷ್ಯ ದಿನನಿತ್ಯದ ಇತರ ಚಟುವಟಿಕೆಗಳ ಮೂಲಕ ವ್ಯಕ್ತವಾಗುತ್ತವೆ. ಹೀಗೆ ಅವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತವೆ (M.K. Gandhi, Non-Violence in Peace and War, vol. I, p. 30).
ನಿಜ ನಾಗರಿಕತೆ
ಈ ಹಾದಿಯಲ್ಲಿ ನಡೆಯುವ ಅಭ್ಯಾಸ ಮಾಡುವವರು ನಿಜವಾದ ನಾಗರಿಕತೆಯನ್ನು ಮುಟ್ಟಲು ಸಾಧ್ಯವಾಗುತ್ತದೆ. ನಾಗರಿಕತೆ ಮನು?ನಿಗೆ ಸರಿಯಾದ ನಡವಳಿಕೆ ಯಾವುದು, ನಿಜವಾದ ಕರ್ತವ್ಯದ ದಾರಿ ಯಾವುದು ಎಂಬುದರ ಬಗ್ಗೆ ತಿಳಿವಳಿಕೆ ನೀಡುತ್ತದೆ. ಕರ್ತವ್ಯದ ನಿರ್ವಹಣೆ ಮತ್ತು ನೈತಿಕ ತತ್ತ್ವಗಳ ಅನು?ನ – ಈ ಎರಡೂ ಪದಗಳು ಒಂದಕ್ಕೊಂದು ಪರಿವರ್ತನಾತ್ಮಕ ನೈತಿಕತೆಯನ್ನು ಅನುಸರಿಸುವುದು ಎಂದರೆ ನಾವು ನಮ್ಮ ಮನಸ್ಸಿನ ಮೇಲೆ ಮತ್ತು ಭಾವನೆಗಳ ಮೇಲೆ ನಿಯಂತ್ರಣವನ್ನು ಪಡೆದಂತೆ (ಎಂ.ಕೆ. ಗಾಂಧಿ – ಹಿಂದೂ ಧರ್ಮ, ಪು. ೫೭).
ಭಾರತ ಏಕೆ ಕೈಗಾರಿಕೀಕರಣದ ಮಾರ್ಗ ಹುಡುಕಲಿಲ್ಲ
ಮೇಲೆ ವಿಶದಪಡಿಸಿದ ಎಲ್ಲ ಕಾರಣಗಳಿಂದಾಗಿ ನಮ್ಮ ಪೂರ್ವಜರು ಕೈಗಾರಿಕೀಕರಣ ಮತ್ತು ಯಾಂತ್ರಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆ ಮಾಡಲು ಹೋಗಲಿಲ್ಲ. ಇದರ ಅರ್ಥ ಅವರಿಗೆ ಆ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಲು ಗೊತ್ತಿಲ್ಲ ಅಥವಾ ಅಗತ್ಯ ಜ್ಞಾನವಿರಲಿಲ್ಲ ಎಂದು ಅಲ್ಲ. ಅದರ ಉದ್ದೇಶ ಎಲ್ಲ ರೀತಿಯ ಅರ್ಹತೆಯನ್ನು ಗಳಿಸಿದ ಭಾರತದೇಶ ಕುರುಡನಾಗದೆ ಪ್ರಪಂಚದ ಇತರ ದೇಶಗಳಿಗೆ ಬೆಳಕನ್ನು ಕೊಡುವಂತಾಗಬೇಕು ಎಂದು. ಗಮನಿಸಬೇಕಾದ ಸಂಗತಿ ಎಂದರೆ ಇಲ್ಲಿಯವರೆಗೆ ನಾವು ನಮ್ಮ ನೇಗಿಲಿನಲ್ಲಿ ಯಾವ ರೀತಿಯ ಪರಿವರ್ತನೆಯನ್ನೂ ಮಾಡದೆ ಸಾವಿರಾರು ವ?ಗಳಿಂದ ಭೂಮಿಯ ಉಳುಮೆ ಮಾಡುತ್ತಿದ್ದೇವೆ. ಅದೇ ಗೃಹ-ಕೈಗಾರಿಕೆಗಳನ್ನು ನಡೆಸಿಕೊಂಡು ಬಂದಿದ್ದೇವೆ. ದೇಶೀಯ ವಿದ್ಯಾಭ್ಯಾಸ ಪದ್ಧತಿಯನ್ನು ಮೊದಲಿನ ಹಾಗೆ ಉಳಿಸಿಕೊಂಡು ಬಂದಿದ್ದೇವೆ, ಸ್ಪರ್ಧಾತ್ಮಕ ಜೀವನ ನಡೆಸಲು ಯಾವ ಹೊಸ ವಿಧಾನಗಳನ್ನೂ ಬೆಳೆಸಲಿಲ್ಲ. ಪ್ರತಿಯೊಬ್ಬ ಭಾರತೀಯ ತನ್ನ ಕುಲಕಸುಬುಗಳನ್ನು ಹಾಗೂ ವ್ಯವಸಾಯವನ್ನು ಮುಂದುವರಿಸಿ ಕೂಲಿಹಣದ ಪ್ರಮಾಣವನ್ನು ನಿಯಂತ್ರಿಸಿದ್ದರು. ನಮಗೆ ಹೊಸ ಯಂತ್ರಗಳನ್ನಾಗಲಿ, ಬಗೆಬಗೆಯ ಸಾಧನ ಸಲಕರಣೆಗಳನ್ನಾಗಲಿ ಕಂಡುಹಿಡಿಯುವ ಶಕ್ತಿ ಮತ್ತು ಜ್ಞಾನ ಇರಲಿಲ್ಲ ಎಂದು ಇದರ ಅರ್ಥವಲ್ಲ. ಈ ರೀತಿಯ ಹೊಸಹೊಸ ನಾವಿನ್ಯಪೂರ್ಣ ಯಂತ್ರಗಳು ಮತ್ತು ಸಾಧನಸಲಕರಣೆಗಳ ಬಗ್ಗೆ ನಮ್ಮ ಮನಸ್ಸು ಮತ್ತು ಹೃದಯಗಳನ್ನು ತೆರೆದುಕೊಂಡರೆ ನಾವು ಅವುಗಳ ಗುಲಾಮರಾಗಿ ನಮ್ಮ ನೈತಿಕಶಕ್ತಿಯನ್ನು ಕಳೆದುಕೊಳುತ್ತೇವೆ ಎಂಬ ಅರಿವು ನಮ್ಮ ಪೂರ್ವಿಕರಿಗೆ ಇತ್ತು. ಆದ ಕಾರಣ ಅವರು ಕೂಲಂಕಷವಾಗಿ ವಿಚಾರವಿಮರ್ಶೆ ಮಾಡಿ ಯಾವ ಕೆಲಸಗಳನ್ನು ನಮ್ಮ ಕೈಕಾಲುಗಳ ಸಹಾಯದಿಂದ ಮಾಡಬಹುದೋ ಅಂತಹವುಗಳನ್ನು ನಾವೇ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದರು. ಅವರು ಕಂಡುಕೊಂಡ ಸತ್ಯವೆಂದರೆ ಮನುಷ್ಯನ ನಿಜವಾದ ಸಂತೋಷ ಮತ್ತು ಶಾರೀರಿಕ ಆರೋಗ್ಯ ಇರುವುದು ನಮ್ಮ ಕೈ ಮತ್ತು ಕಾಲುಗಳ ಉಪಯೋಗವನ್ನು ಸರಿಯಾಗಿ ಮಾಡಿದಾಗ ಮಾತ್ರ ಎಂದು.
ನಮ್ಮ ಪೂರ್ವಿಕರು ಈ ಕಾರಣದಿಂದ ದೊಡ್ಡದೊಡ್ಡ ನಗರಗಳ ಅಭಿವೃದ್ಧಿ ಉಪಯೋಗವಿಲ್ಲದೆ ಹೊರೆಯಾಗಿ ನಮ್ಮ ಕತ್ತಿಗೆ ಉರುಳಾಗಿ ಜನರು ಸಂತೋಷವಿಲ್ಲದೆ ಜೀವಿಸುವಂತಾಗುತ್ತದೆ ಎಂಬ ನಿರ್ಧಾರಕ್ಕೆ ಬಂದರು. ಜೊತೆಯಲ್ಲಿ ಆ ನಗರಗಳು ಕಳ್ಳಕಾಕರ, ಲೂಟಿ ಮಾಡುವವರ, ಹಾದರ ಮಾಡುವವರ ಮತ್ತು ಇತರ ದುಷ್ಕರ್ಮಿ ಗುಂಪುಗಳ ನಿರ್ಮಿತಿಯಿಂದ ಬಡಜನರು, ಅಶಕ್ತರು ಶ್ರೀಮಂತರಿಂದ ಸುಲಿಗೆಗೊಂಡು ಶೋಷಣೆಗೆ ಒಳಗಾಗುವ ಕೇಂದ್ರಗಳಾಗುತ್ತವೆ ಎಂಬ ನಿಷ್ಕರ್ಷೆಗೆ ಬಂದಿದ್ದರು. ಆದ್ದರಿಂದ ನಮ್ಮ ಹಿರಿಯರು ಸಣ್ಣಸಣ್ಣ ಹಳ್ಳಿಗಳ ಬೆಳವಣಿಗೆಯಲ್ಲೇ ಸಂತೋಷ ಕಂಡರು. ರಾಜಮಹಾರಾಜರು ಮತ್ತು ಅವರ ಖಡ್ಗಗಳ ಶಕ್ತಿ ನೈತಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಉಳ್ಳಂತಹ ನಮ್ಮ ಋಷಿಮುನಿಗಳಿಗಿಂತ ಮಹತ್ತ್ವದ್ದಲ್ಲ ಎಂಬ ಸಾರ್ವತ್ರಿಕ ಸತ್ಯದ ತೀರ್ಮಾನಕ್ಕೆ ಬಂದಿದ್ದರು. ಉದಾತ್ತ ಮನೋಭಾವನೆಯನ್ನು ಹೊಂದಿದ ಭಾರತದೇಶ ಇತರ ದೇಶಗಳಿಂದ ಕಲಿಯುವ ಬದಲು ಮಾರ್ಗದರ್ಶನ ಮಾಡಲು ಅತ್ಯಂತ ಅರ್ಹತೆ ಪಡೆದಿದೆ ಎಂಬ ನಂಬಿಕೆಯನ್ನು ಗಾಂಧಿಯವರು ವ್ಯಕ್ತಪಡಿಸಿದ್ದರು (ಎಂ. ಕೆ. ಗಾಂಧಿ, ಹಿಂದೂ ಧರ್ಮ, ಪು. ೫೮).
ಕೈಗಾರಿಕೀಕರಣದ ಭವಿಷ್ಯ
ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆಯ ಪ್ರೊ| ಹ್ಯಾರಿಸನ್ ಬ್ರೌನ್ರವರು “ಯಂತ್ರಗಳ ಆರ್ಥಿಕ ನಾಗರಿಕತೆ ಇಂದು ಏನು ಸಂಘಟಿತವಾಗಿದೆಯೋ ಅದು ಬರುವಂತಹ ದಿನಗಳಲ್ಲಿ ಕೃಷಿ-ಆಧಾರಿತ ಸಂಸ್ಕೃತಿಯಾಗಿ ಪೂರ್ವಸ್ಥಿತಿಗೆ ಮರಳುತ್ತದೆ” ಎಂಬ ಬಹುಮುಖ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅನೇಕ ಪಾಶ್ಚಾತ್ಯ ಲೇಖಕರು ಮತ್ತು ಚಿಂತಕರು ತಮ್ಮ ಸಮರ್ಥನೆಯನ್ನು ನೀಡಿದ್ದಾರೆ. ಇದು ಭವಿ?ದಲ್ಲಿ ಕೃಷಿಕೇಂದ್ರಿತ ಚಟುವಟಿಕೆಗಳು ಕೈಗಾರಿಕೀಕರಣ ಸ್ಥಾನವನ್ನು ಮತ್ತೊಮ್ಮೆ ತುಂಬಬಹುದೇ ಎಂಬ ಯೋಚನೆಯನ್ನು ಹುಟ್ಟುಹಾಕಿದೆ. ಜಾಗತಿಕ ದೃಷ್ಟಿಯಿಂದ ಇದು ಮನನೀಯ ಸಂಗತಿ.
(ಮುಂದುವರಿಯುವುದು)