ಛಾಯಾಗ್ರಹಣವನ್ನು ವಿಷಯವಾಗಿಟ್ಟುಕೊಂಡ ಪುಸ್ತಕ ಎಂದಾಕ್ಷಣ ಅದರ ಬರವಣಿಗೆಯಷ್ಟೇ ಮುದ್ರಣವೂ ಮುಖ್ಯವಾಗುತ್ತದೆ. ಸೋಮಶೇಖರ್ ಕ್ಲಿಕ್ಕಿಸಿದ ಛಾಯಾಚಿತ್ರಗಳು ಈ ಪುಸ್ತಕದಲ್ಲಿ ತಮ್ಮ ಆಕರ್ಷಣೆಯನ್ನು ಉಳಿಸಿಕೊಂಡು ಮುದ್ರಿತವಾಗಿರುವುದು ವಿಶೇಷ.
ಕೆ.ಜಿ. ಸೋಮಶೇಖರ್
‘ನನ್ನ ಬದುಕು, ನನ್ನ ಫೋಟೊಗ್ರಫಿ’
ನಿರೂಪಣೆ: ಬಿ.ಎಸ್. ಜಯಪ್ರಕಾಶ ನಾರಾಯಣ
ಪ್ರಕಾಶಕರು: ಆಕೃತಿ ಪುಸ್ತಕ, ೩೧/೧, ೧೨ನೇ ಮೆಯಿನ್,
೩ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು – ೫೬೦ ೦೧೦
ಪುಟಗಳು: vi+೨೧೨, ಬೆಲೆ: ರೂ. ೩೯೫
ನೋಡನೋಡುತ್ತಿದ್ದಂತೆಯೇ ಕಳೆದುಹೋಗುವ ಬದುಕಿನ ಕ್ಷಣಗಳನ್ನು ನಮಗಾಗಿ ಹಿಡಿದುಕೊಡುವುದು ಛಾಯಾಚಿತ್ರಗಳ ವೈಶಿಷ್ಟ್ಯ. ಹಾಗೆ ಹಿಡಿದುಕೊಡುವ ಕೆಲಸ ಬರಿಯ ಕ್ಯಾಮೆರಾ ಒಂದರಿಂದಲೇ ಆಗುವಂಥದ್ದಲ್ಲ; ಕ್ಯಾಮೆರಾ ಹಿಂದಿನ ಕಣ್ಣಿನ ಜೊತೆಗೆ ಆ ಕಣ್ಣಿನಿಂದ ನೋಡುವ ಕಲಾತ್ಮಕ ಮನಸ್ಸು ಸೇರಿದಾಗಲೇ ಛಾಯಾಚಿತ್ರಗಳು ಕಲಾಕೃತಿಗಳಾಗುವುದು ಸಾಧ್ಯ.
ಛಾಯಾಚಿತ್ರಗಳಿಗೆ ಹಾಗೊಂದು ಕಲಾಕೃತಿಯ ರೂಪಕೊಡುವ ಶಕ್ತಿ ಎಲ್ಲೋ ಕೆಲವರಿಗಷ್ಟೆ ಇರುತ್ತದೆ. ಸೃಜನಶೀಲತೆ ಹಾಗೂ ತಾಂತ್ರಿಕ ನೈಪುಣ್ಯಗಳೆರಡೂ ಒಟ್ಟುಸೇರಿದಾಗ ರೂಪುಗೊಳ್ಳುವ ಶಕ್ತಿ ಅದು.
ಅಂತಹ ಅಪರೂಪದ ಶಕ್ತಿ ಇರುವವರಲ್ಲಿ ಕೆ.ಜಿ. ಸೋಮಶೇಖರ್ ಒಬ್ಬರು. ಜೀವನದ ಬಹುಭಾಗದಲ್ಲಿ ಛಾಯಾಗ್ರಹಣ ಅವರ ಸಂಗಾತಿಯಾಗಿ ಬಂದಿದೆ. ಈ ಸಹಯಾನದ ಸಂದರ್ಭದ ಹಲವು ಘಟನೆಗಳನ್ನು, ಅನುಭವಗಳನ್ನು ನಮ್ಮೊಡನೆ ಹಂಚಿಕೊಳ್ಳುವ ಕೃತಿಯೇ ‘ನನ್ನ ಬದುಕು, ನನ್ನ ಫೊಟಾಗ್ರಫಿ’. ಪತ್ರಕರ್ತ ಬಿ.ಎಸ್. ಜಯಪ್ರಕಾಶ ನಾರಾಯಣ ನಿರೂಪಿಸಿರುವ ಈ ಕೃತಿಯನ್ನು ಬೆಂಗಳೂರಿನ ‘ಆಕೃತಿ ಪುಸ್ತಕ’ ಪ್ರಕಟಿಸಿದೆ.
ಹೈಲೈಟ್
ಸೋಮಶೇಖರರ ಪರಿಚಯ ಬಹಳ ಜನರಿಗೆ ಇರಲಿಕ್ಕಿಲ್ಲ. ಆದರೆ ಅವರು ಕ್ಲಿಕ್ಕಿಸಿದ ಛಾಯಾಚಿತ್ರಗಳನ್ನು ನೋಡದ ಕನ್ನಡಿಗರು ಅಪರೂಪ ಎನ್ನಬೇಕು. ಈ ಕೃತಿಯ ಮುನ್ನುಡಿಯಲ್ಲಿ ಡಾ. ಎಸ್.ಆರ್. ರಾಮಸ್ವಾಮಿಯವರು ಹೇಳಿರುವಂತೆ ಇಂದು ಯಾವುದೇ ಪತ್ರಿಕೆಯಲ್ಲಿಯೋ ಪ್ರಕಟಣೆಯಲ್ಲಿಯೋ ಸಭಾಗಾರದಲ್ಲಿಯೋ ವೇದಿಕೆಯಲ್ಲಿಯೋ ಡಿ.ವಿ.ಜಿ, ಕುವೆಂಪು, ಮಾಸ್ತಿ, ವಿ.ಸೀ., ಶಿವರಾಮ ಕಾರಂತ, ಜಿ.ಪಿ. ರಾಜರತ್ನಂ, ಗೋಪಾಲಕೃಷ್ಣ ಅಡಿಗ, ಮಲ್ಲಿಕಾರ್ಜುನ ಮನಸೂರ ಮೊದಲಾದವರ ಅತ್ಯಂತ ಚೇತೋಹಾರಿ ಚಿತ್ರಗಳು ಕಂಡವೆಂದರೆ ಅವು ಬಹುತೇಕ ಸೋಮಶೇಖರ್ ತೆಗೆದಿರುವವೇ ಆಗಿರುತ್ತವೆ.
ಇಷ್ಟೆಲ್ಲ ಚೆಂದದ ಚಿತ್ರಗಳನ್ನು ಸೆರೆಹಿಡಿದುಕೊಟ್ಟಿರುವ ಸೋಮಶೇಖರರ ಅನುಭವಗಳು ಈ ಕೃತಿಯಲ್ಲಿ ಮೂರು ಭಾಗಗಳಾಗಿ ನಮ್ಮೆದುರು ಬರುತ್ತವೆ. ಮೊದಲ ಭಾಗ ಅವರ ಬದುಕಿನ ಕುರಿತ ವಿವರಗಳಿಗೆ ಮೀಸಲಾಗಿದ್ದರೆ ಛಾಯಾಗ್ರಹಣದ ಸಂದರ್ಭದಲ್ಲಿ ಸೋಮಶೇಖರರಿಗೆ ಆದ ವಿಲಕ್ಷಣ ಅನುಭವಗಳು ಹಾಗೂ ಅವರ ಫೊಟಾಗ್ರಪಿ ಸೂತ್ರಗಳ ಪರಿಚಯ ಕೊನೆಯ ಭಾಗದಲ್ಲಿದೆ.
ನಡುವಿನ – ಅಂದರೆ ಎರಡನೆಯ ಭಾಗವೇ ಈ ಕೃತಿಯ ಹೈಲೈಟ್ ಎನ್ನಬಹುದು. ಕಪ್ಪುಬಿಳುಪಿನ ಫೋಟೋಗಳು ವ್ಯಕ್ತಿಗಳ ಆಕಾರದ ಜೊತೆಗೆ ಅವರ ವ್ಯಕ್ತಿತ್ವವನ್ನೂ ಚಿತ್ರಿಸುತ್ತವೆ ಎನ್ನುವುದೊಂದು ಮಾತಿದೆಯಲ್ಲ, ತಮ್ಮ ಛಾಯಾಚಿತ್ರಗಳ ಮೂಲಕ ಸೋಮಶೇಖರರು ಹಲವು ಅಪರೂಪದ ವ್ಯಕ್ತಿತ್ವಗಳನ್ನು ದಾಖಲಿಸಿದ ಘಟನೆಗಳ ಮೆಲುಕು ಈ ಭಾಗದಲ್ಲಿದೆ.
ಪ್ರೇರಣೆ
ಸೋಮಶೇಖರರ ಆಸಕ್ತಿಗಳು ಒಂದೆರಡಲ್ಲ. ಶಾಲಾದಿನಗಳಲ್ಲೇ ಅವರಿಗೆ ಸಿನೆಮಾ ನೋಡುವ ಹವ್ಯಾಸ ವಿಪರೀತವಾಗಿತ್ತಂತೆ. ಸಂಗೀತವೂ ಇಷ್ಟದ ವಿಷಯ. ಚಿತ್ರಕಲೆಯ ಕುರಿತೂ ಬಹಳ ಆಸಕ್ತಿ.
ಇಂಟರ್ಮೀಡಿಯೆಟ್ ವ್ಯಾಸಂಗಕ್ಕೆಂದು ಬೆಂಗಳೂರಿನ ವಿಜಯಾ ಕಾಲೇಜಿಗೆ ಸೇರಿದರೂ ಸರಿಯಾಗಿ ಕ್ಲಾಸಿಗೆ ಹೋಗದ ಈ ಶಿಷ್ಯನನ್ನು ಅಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಪ್ರೊ. ಜಿ.ವಿ. ಒಮ್ಮೆ ಕರೆದು ‘ಸುಮ್ಮನೆ ಕಾಲಕಳೆಯುವ ಬದಲು ಚಿತ್ರಕಲೆಯನ್ನಾದರೂ ಕಲಿ’ ಎಂದರಂತೆ. ಕಲಾರಂಗದಲ್ಲಿ ತಮ್ಮ ಬದುಕು ರೂಪಿಸಿಕೊಳ್ಳಲು ಸೋಮಶೇಖರರಿಗೆ ಪ್ರೇರಣೆಯಾದದ್ದು ಇದೇ ಮಾತು. ಮುಂದೆ ಬಹಳ ವರ್ಷಗಳ ನಂತರ ಚಿತ್ರಕಲೆಯನ್ನು ಬಿಟ್ಟು ಛಾಯಾಗ್ರಹಣದತ್ತ ಹೊರಳಿಕೊಳ್ಳಲು ಕಾರಣವಾದದ್ದು ಅವರ ಕಣ್ಣಿನ ಸಮಸ್ಯೆ ಎನ್ನುವುದಂತೂ ಇದಕ್ಕಿಂತ ಅಚ್ಚರಿಯ ವಿಷಯ. ಅನಿವಾರ್ಯತೆಯಿಂದ ಆಯ್ದುಕೊಂಡ ಕ್ಷೇತ್ರದಲ್ಲಿ ಇಷ್ಟರಮಟ್ಟಿಗೆ ಸಾಧನೆ ಮಾಡಿರುವವರು ಬಹಳ ಜನ ಇರಲಾರರೇನೋ.
ಮುಖಾಮುಖಿ ಅನುಭವ
ಕಾಲೇಜು ಬಿಟ್ಟ ನಂತರ ಸೋಮಶೇಖರರು ಕೆಲಸಗಳಿಗೆ ಪ್ರಯತ್ನಿಸಿದ್ದು, ಹವ್ಯಾಸಗಳ ಬೆನ್ನುಹತ್ತಿದ್ದನ್ನೆಲ್ಲ ಕುರಿತು ಓದುವಾಗ ಅವರು ಯಾರ ಬಲವಂತಕ್ಕೋ ಮಣಿದು ತಮಗೆ ಹಿಡಿಸದ ಯಾವ ಕೆಲಸವನ್ನೂ ಮಾಡದಿರುವುದು ಹಾಗೂ ತಮಗಿಷ್ಟವಾದ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಿರುವುದು ನಮ್ಮ ಗಮನಕ್ಕೆ ಬರುತ್ತದೆ. ಅವರ ವ್ಯಕ್ತಿತ್ವದ ಈ ಭಾಗ ಪ್ರಸ್ತುತ ಕೃತಿಯಲ್ಲಿ ಬಹಳ ಚೆನ್ನಾಗಿ ದಾಖಲಾಗಿದೆ.
ಸೋಮಶೇಖರರ ನೆನಪುಗಳು ನಿರೂಪಣೆಯ ಸಿದ್ಧಸೂತ್ರಗಳನ್ನೆಲ್ಲ ಮೀರಿ ನಮ್ಮೆದುರು ಬಂದಿರುವುದು, ಅವರೊಡನೆ ಮುಖಾಮುಖಿ ಮಾತನಾಡುವ ಅನುಭವ ಕಟ್ಟಿಕೊಡುವುದು ಈ ಕೃತಿಯ ವೈಶಿಷ್ಟ್ಯ. ಒಂದೆರಡು ಕಡೆ ಇದ್ದಕ್ಕಿದ್ದಂತೆ ವಿಷಯಾಂತರವಾಗುವ ಹಾಗೂ ಸಂಗತಿಗಳು ಪುನರಾವರ್ತನೆಯಾಗುವ ಸಂದರ್ಭಗಳಲ್ಲಿ ಇದೇ ವೈಶಿಷ್ಟ್ಯ ಒಂದು ದೌರ್ಬಲ್ಯದಂತೆಯೂ ಎನಿಸೀತೇನೋ.
ತಮ್ಮ ಬದುಕಿನ ಪಯಣದಲ್ಲಿ ಭೇಟಿಮಾಡಿದ ಹಲವು ರೀತಿಯ ವ್ಯಕ್ತಿಗಳನ್ನು ಸೋಮಶೇಖರ್ ಈ ಕೃತಿಯಲ್ಲಿ ನೆನಪಿಸಿಕೊಂಡಿದ್ದಾರೆ. ಮಾಡಿಸಿಕೊಂಡ ಕೆಲಸಕ್ಕೆ ದುಡ್ಡುಕೊಡದೆ ಆಕಾಶ ತೋರಿಸಿದವರಿಂದ ಹಿಡಿದು ಅವರ ಕೆಲಸ ಮೆಚ್ಚಿ ಅಮೆರಿಕ ಪ್ರವಾಸ ಮಾಡಿಸಿದವರವರೆಗೆ ಈ ಪಟ್ಟಿಯಲ್ಲಿ ಅನೇಕರಿದ್ದಾರೆ. ತಮಗೆ ನೆರವಾದವರಿರಲಿ ತೊಂದರೆಕೊಟ್ಟವರಿರಲಿ ಎಲ್ಲರ ಕುರಿತೂ ಒಂದು ಬಗೆಯ ನಿರ್ಲಿಪ್ತತೆಯಿಂದ ಹೇಳುತ್ತ ಹೋಗುವ ಅವರ ಧೋರಣೆ ಮೆಚ್ಚುವಂಥದ್ದು.
ವಿವಿಧ ಕ್ಷೇತ್ರಗಳ ಸಾಧಕರ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಅಭಿಯಾನ ಕೈಗೊಂಡು ಸೋಮಶೇಖರ್ ಮಾಡಿರುವ ಅಗಾಧ ಪ್ರಮಾಣದ ಕಾಯಕಕ್ಕಾಗಿ ‘ಅವರಿಗೆ ಲಭಿಸಿರುವ ಕ್ಯಾಶ್ ಮತ್ತು ಕ್ರೆಡಿಟ್ ಎರಡೂ ಅಲ್ಪವೇ’ ಎನ್ನುವುದು ಈ ಕೃತಿಯ ಮುನ್ನುಡಿಕಾರರು ಹೇಳಿರುವ ಮಾತು. ಕೆಲಸಕ್ಕೆ ತಕ್ಕ ಪ್ರತಿಫಲ ನೀಡದವರ ವಿವರಣೆ ಸೋಮಶೇಖರರ ಅನುಭವದಲ್ಲಿ ಅಲ್ಲಲ್ಲಿ ಪ್ರಸ್ತಾಪವಾಗುವಾಗ ಕೌಶಲ ಬೇಡುವ ಕೆಲಸಗಳ ಕುರಿತು ನಮ್ಮ ಸಮಾಜದಲ್ಲಿ ವ್ಯಾಪಕವಾಗಿರುವ ನಿರ್ಲಕ್ಷ್ಯದ ಅನಾವರಣವಾಗಿ ಮನಸ್ಸಿಗೆ ಬೇಸರವೆನಿಸುತ್ತದೆ.
ಹೊಸ ಪರಿ
ಕನ್ನಡದ ಹಿರಿಯ ಸಾಹಿತಿಗಳು ಅವರ ಕೃತಿಗಳ ಮೂಲಕ ನಮಗೆಲ್ಲ ಪರಿಚಿತರು. ಅಪರೂಪದ ಚಿತ್ರಗಳ ಹಾಗೂ ಆ ಚಿತ್ರಗಳನ್ನು ಸೆರೆಹಿಡಿದ ಸಂದರ್ಭದ ವಿವರಣೆಯ ಮೂಲಕ ಡಿ.ವಿ.ಜಿ, ಮಾಸ್ತಿ, ಕಾರಂತ, ಅಡಿಗರಂತಹ ಮಹನೀಯರನ್ನು ನಮಗೆ ಮತ್ತೊಮ್ಮೆ ಹೊಸರೀತಿಯಲ್ಲಿ ಪರಿಚಯಿಸಿರುವುದು ಈ ಪುಸ್ತಕದ ವೈಶಿಷ್ಟ್ಯ. ಮಾಸ್ತಿಯವರು ಮದುವೆಯ ಛತ್ರದಲ್ಲಿ ಸಿಕ್ಕಿದ್ದು, ಎಲ್ಲರೂ ಮರೆತುಬಿಟ್ಟಿದ್ದ ತಿರುಮಲಾಂಬಾ ಅವರನ್ನು ಚಿತ್ರದ ಮೂಲಕ ಮತ್ತೆ ಬೆಳಕಿಗೆ ತಂದದ್ದು ಮೊದಲಾದ ಸನ್ನಿವೇಶಗಳ ನಿರೂಪಣೆ ಆ ಸನ್ನಿವೇಶದಲ್ಲಿ ಸೆರೆಹಿಡಿದ ಛಾಯಾಚಿತ್ರಗಳಷ್ಟೇ ಪರಿಣಾಮಕಾರಿಯಾಗಿ ಮೂಡಿಬಂದಿದೆ.
ಸಾಹಿತ್ಯವಷ್ಟೇ ಅಲ್ಲದೆ ಇನ್ನೂ ಹಲವು ಕ್ಷೇತ್ರದ ಸಾಧಕರನ್ನು ಸೋಮಶೇಖರ್ ತಮ್ಮ ಕ್ಯಾಮೆರಾದಿಂದ ಚಿತ್ರಿಸಿದ್ದಾರೆ. ಚಿತ್ರನಟ ಅಶೋಕ್ ಕುಮಾರರ ಸರಳತೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಹಾಸ್ಯಪ್ರಜ್ಞೆಗಳೆಲ್ಲ ಚಿತ್ರದ ಜೊತೆಗೆ ಬರವಣಿಗೆಯ ಮೂಲಕವೂ ನಮ್ಮನ್ನು ಮುಟ್ಟುತ್ತವೆ.
ಇಷ್ಟೆಲ್ಲ ಚೆಂದದ ಛಾಯಾಚಿತ್ರಗಳನ್ನು ತೆಗೆಯಲು ಸೋಮಶೇಖರ್ ಅನುಸರಿಸುವ ನಿಯಮಗಳ ಪರಿಚಯ ಈ ಕೃತಿಯುದ್ದಕ್ಕೂ ಅಲ್ಲಲ್ಲಿ ಆಗುತ್ತದೆ. ಕೊನೆಯಲ್ಲಿ ಇದೇ ವಿಷಯ ಕುರಿತ ಪುಟ್ಟದೊಂದು ಅಧ್ಯಾಯವೂ ಇದೆ. ಈ ಭಾಗ ಇನ್ನೂ ಕೊಂಚ ವಿಸ್ತಾರವಾಗಿದ್ದರೆ ಛಾಯಾಗ್ರಹಣ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರಿಗೆ ಈ ಕೃತಿ ಇನ್ನೂ ಹೆಚ್ಚು ಸಹಾಯಕಾರಿಯಾಗಬಹುದಿತ್ತೇನೋ.
ಸಂತುಲಿತ ಕಾರ್ಯ
ವಿಭಿನ್ನ ಕ್ಷೇತ್ರವೊಂದರ ವಿಶಿಷ್ಟ ಸಾಧಕರೊಬ್ಬರನ್ನು ಪರಿಚಯಿಸುವುದೆಂದರೆ ಸುಲಭದ ಕೆಲಸವೇನಲ್ಲ. ಅದರಲ್ಲೂ ಛಾಯಾಗ್ರಹಣದಂತಹ ಕ್ಷೇತ್ರದ ಬಗ್ಗೆ ಬರೆಯಲು ಹೊರಟಾಗ ಚಿತ್ರಗಳ ಮುಂದೆ ಅಕ್ಷರಗಳು ದುರ್ಬಲವಾಗಿಬಿಡುವ ಸಾಧ್ಯತೆಯೇ ಹೆಚ್ಚು. ಆದರೆ ಈ ಪುಸ್ತಕದಲ್ಲಿ ಹಾಗೆ ಆಗಲು ಬಿಡದೆ ಜಯಪ್ರಕಾಶ ನಾರಾಯಣ ಅವರು ಒಂದು ಉತ್ತಮ ಕೃತಿಯನ್ನು ನಮಗೆ ತಲಪಿಸಿದ್ದಾರೆ. ಸೋಮಶೇಖರ್ ಮತ್ತು ಓದುಗರ ನಡುವೆ ನಿರೂಪಕ ಮಧ್ಯಪ್ರವೇಶಿಸದಂತೆ ಎಚ್ಚರವಹಿಸಿರುವುದು ಕೂಡ ಮೆಚ್ಚುವಂತಹ ವಿಷಯ.
ಛಾಯಾಗ್ರಹಣವನ್ನು ವಿಷಯವಾಗಿಟ್ಟುಕೊಂಡ ಪುಸ್ತಕ ಎಂದಾಕ್ಷಣ ಅದರ ಬರವಣಿಗೆಯಷ್ಟೇ ಮುದ್ರಣವೂ ಮುಖ್ಯ ವಾಗುತ್ತದೆ. ಸೋಮಶೇಖರ್ ಕ್ಲಿಕ್ಕಿಸಿದ ಛಾಯಾಚಿತ್ರಗಳು ಈ ಪುಸ್ತಕದಲ್ಲಿ ತಮ್ಮ ಆಕರ್ಷಣೆಯನ್ನು ಉಳಿಸಿಕೊಂಡು ಮುದ್ರಿತವಾಗಿರುವುದು ವಿಶೇಷ. ಇಡೀ ಪುಸ್ತಕವನ್ನು ದುಬಾರಿ ವೆಚ್ಚದ, ಉತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಿಸಿ ಓದುಗರಿಗೆ ತಲಪಿಸಿರುವ ಪ್ರಕಾಶಕರು ಖಂಡಿತಾ ಅಭಿನಂದನಾರ್ಹರು.