ನಮ್ಮ ಮಿತ್ರರು ಪಾಠಶಾಲೆಯೊಂದರಲ್ಲಿ ಅಧ್ಯಾಪಕರು. ಶ್ರಮದ ಅನುಭವ ಕಿಂಚಿತ್ತೂ ಇಲ್ಲದವರು. ಅವರ ಬದುಕಿನಲ್ಲಿ ಅದರ ಅಗತ್ಯ ಕಿಂಚಿತ್ತೂ ಉಂಟಾಗದೇ ಹೋಯಿತು. ರೊಕ್ಕದಿಂದ ನಮಗೆ ಬೇಕಾದ ಶ್ರಮವನ್ನು ಖರೀದಿಸುವ ಸನ್ನಿವೇಶ ಇರುವಾಗ ಇಂಥ ಅಗತ್ಯ ಉಂಟಾಗಲಾರದು ಕೂಡಾ. ಅವರ ಮನೆಯ ಕಟ್ಟಡನಿರ್ಮಾಣಕಾರ್ಯದಲ್ಲಿಯೂ ಇದೇ ಬಗೆಯಲ್ಲಿ ಶ್ರಮದ ಖರೀದಿ ನಡೆದೇ ಇದೆ. ಆದರೆ ನಿರ್ಮಾಣವಾಗುತ್ತಿರುವ ಆ ಮನೆ ತಮ್ಮ ಮನೆ ಎಂದೆನಿಸಬೇಕಿದ್ದರೆ ತಮ್ಮಿಂದ ಸಾಧ್ಯವಾಗಬಹುದಾದ ಶ್ರಮವನ್ನಾದರೂ ಖರೀದಿಸದೆ ತಾವೇ ಸ್ವತಃ ಹಾಕಬೇಕು ಎಂಬ ನಿಲವಿನಿಂದ ತೊಡಗಿದರು.
ಮಿತ್ರರೊಬ್ಬರು ಮನೆ ಕಟ್ಟಿಸುತ್ತಿದ್ದರು. ನಿಯಮಿತವಾಗಿ ಬರುವ ಅವರ ವೇತನಕ್ಕೆ ತಕ್ಕಂತೆ ಮನೆಯ ಕಟ್ಟಡನಿರ್ಮಾಣವೂ ನಿಧಾನಗತಿಯಲ್ಲಿ ಮುಂದುವರಿದಿತ್ತು. ಹೆಚ್ಚಿನ ಶ್ರಮವೆಲ್ಲ ಕಾರ್ಮಿಕರದ್ದೇ ಆಗಿದ್ದರೂ ತಮಗಾಗಿ ಕಟ್ಟುತ್ತಿರುವ ಆ ಮನೆಯ ಗೋಡೆಗಳಿಗೆ ಕೊಡದಲ್ಲಿ ಹೊತ್ತುತಂದು ನೀರು ಹಾಕುವುದು ಇತ್ಯಾದಿ ಹಲವು ಕೆಲಸಗಳನ್ನು ಕಷ್ಟಪಟ್ಟು ತಾವೇ ಮಾಡುತ್ತಿದ್ದರು. ಪತ್ನಿಯೂ ಸಾಥ್ ಕೊಡುತ್ತಿದ್ದರು.
ಮಾತನಾಡುತ್ತ ಅವರ ಈ ಕೆಲಸದ ಬಗೆಗೂ ಉಲ್ಲೇಖವಾಯಿತು. ಕಷ್ಟದ ಹಾಗೂ ದುಬಾರಿ ಎನಿಸುವ ಕೆಲಸಗಳನ್ನೆಲ್ಲ ಕಾರ್ಮಿಕರೇ ಮಾಡುತ್ತಿರುವಾಗ ನೀರು ಹಾಕುವಂಥ ಸಣ್ಣಪುಟ್ಟ ಕೆಲಸಗಳನ್ನೆಲ್ಲ ಶ್ರಮದ ಹಿನ್ನೆಲೆಯಿಲ್ಲದ ನೀವೇ ಮಾಡುತ್ತಿರುವುದಾದರೂ ಏಕೆ ಎಂದು ಕೇಳುವುದಾಯಿತು.
ಅದಕ್ಕೆ ಅವರ ಉತ್ತರ ಇಷ್ಟು: ‘ಮನೆಗೆ ನಾವು ಎಷ್ಟು ಶ್ರಮ ಹಾಕುವೆವೋ ಅಷ್ಟು ಅದು ನಮ್ಮದು ಅಂತನಿಸುತ್ತದೆ. ನಮ್ಮ ಶ್ರಮವನ್ನು ಸುರಿಯುವುದು ನಮ್ಮದೇ ಮನೆಗೆ. ಆದುದರಿಂದ ಅದು ಶ್ರಮ ಎಂದು ಅನಿಸುವುದೇ ಇಲ್ಲ.’
ಅವರು ಅನುಭವಿಸಿ ಹೇಳಿದ ಮಾತಿದು.
ಇದು ಹೊಸ ಮಾತಲ್ಲವಾದರೂ, ಎಲ್ಲರೂ ಹೇಳಬಹುದಾದ ಮಾತೇ ಆದರೂ ಅನುಭವಿಸಿ ಹೇಳುವ ಮಾತಿಗೆ ತೂಕ ಹೆಚ್ಚು.
ಆ ಮಿತ್ರರು ಪಾಠಶಾಲೆಯೊಂದರಲ್ಲಿ ಅಧ್ಯಾಪಕರು. ಶ್ರಮದ ಅನುಭವ ಕಿಂಚಿತ್ತೂ ಇಲ್ಲದವರು. ಅವರ ಬದುಕಿನಲ್ಲಿ ಅದರ ಅಗತ್ಯ ಕಿಂಚಿತ್ತೂ ಉಂಟಾಗದೇ ಹೋಯಿತು. ರೊಕ್ಕದಿಂದ ನಮಗೆ ಬೇಕಾದ ಶ್ರಮವನ್ನು ಖರೀದಿಸುವ ಸನ್ನಿವೇಶ ಇರುವಾಗ ಇಂಥ ಅಗತ್ಯ ಉಂಟಾಗಲಾರದು ಕೂಡಾ. ಅವರ ಮನೆಯ ಕಟ್ಟಡನಿರ್ಮಾಣಕಾರ್ಯದಲ್ಲಿಯೂ ಇದೇ ಬಗೆಯಲ್ಲಿ ಶ್ರಮದ ಖರೀದಿ ನಡೆದೇ ಇದೆ. ಆದರೆ ನಿರ್ಮಾಣವಾಗುತ್ತಿರುವ ಆ ಮನೆ ತಮ್ಮ ಮನೆ ಎಂದೆನಿಸಬೇಕಿದ್ದರೆ ತಮ್ಮಿಂದ ಸಾಧ್ಯವಾಗಬಹುದಾದ ಶ್ರಮವನ್ನಾದರೂ ಖರೀದಿಸದೆ ತಾವೇ ಸ್ವತಃ ಹಾಕಬೇಕು ಎಂಬ ನಿಲವಿನಿಂದ ತೊಡಗಿದರು.
ಖರೀದಿಯ ಸಾಮರ್ಥ್ಯವನ್ನು ಎಷ್ಟೇ ಮೆರೆದರೂ ಅದರಿಂದ ಸ್ವಂತಿಕೆಯನ್ನು ಉಪಸ್ಥಾಪಿಸಲಾಗದು. ವಸ್ತುವೊಂದು ನಮ್ಮದಾಗುವುದು ಅದರಲ್ಲಿ ನಮ್ಮ ಪಾತ್ರ ಗಾಢವಾಗಿದ್ದಾಗ. ಅದರ ಪ್ರಸ್ತುತ ಸ್ಥಿತಿಗೆ ನಮ್ಮ ಪರಿಶ್ರಮದ ಕೊಡುಗೆ ಇದ್ದಾಗ. ಅದರ ಉಳಿವು-ಬೆಳವಣಿಗೆಗಳಲ್ಲಿ ನಮ್ಮ ತ್ಯಾಗ-ಪ್ರಯತ್ನಗಳು ಇದ್ದಾಗ.
ಕಟ್ಟಡವು ಮನೆಯೆನಿಸುವುದು ಅದರೊಳಗೆ ಕುಟುಂಬವೊಂದು ಇದ್ದಾಗ. ಪರಸ್ಪರ ಸಂಬಂಧಗಳನ್ನುಳ್ಳ ಸಂಬಂಧಿಕರು ಕುಟುಂಬವಾಗುತ್ತಾರೆ. ಮನೆಯೊಂದು ಮನೆಯೆನಿಸಲು ಆ ಮನೆಗೆ ಸಂಬಂಧಿಸಿದ ಕುಟುಂಬದ ತ್ಯಾಗ-ಪರಿಶ್ರಮಗಳು ಇರಬೇಕು.
ಕಾರ್ಮಿಕರು ಪಡುವ ಶ್ರಮ ಕಡಮೆಯದಲ್ಲ. ಅವರಷ್ಟು ಶ್ರಮವನ್ನು ಮನೆಮಂದಿ ಪಡಲು ಸಾಧ್ಯವೂ ಇಲ್ಲ. ಹಾಗೆಂದು ಶ್ರಮಪಟ್ಟ ಒಂದೇ ಕಾರಣಕ್ಕೆ ಮನೆ ಕಾರ್ಮಿಕರದ್ದಾಗಿಬಿಡುವುದಿಲ್ಲ.
ಮನೆಯೊಂದಕ್ಕೆ ಮನೆಮಂದಿಗಿಂತ ಎಷ್ಟೋ ಪಟ್ಟು ಹೆಚ್ಚು ಸಲ್ಲಿಸುವ ಶ್ರಮವು ಕಾರ್ಮಿಕರಿಗೆ ಜೀವಿಕೆ; ಮನೆಮಂದಿಗೆ ಜೀವನ.
ಯಾವುದು ನಮಗೆ ಜೀವನವೋ ಅದು ನಮ್ಮದಾಗಲು ಸಾಧ್ಯ. ಜೀವಿಕೆಯ ಸಾಧನವು ನಮ್ಮದಾಗುವ ಸಂದರ್ಭ ಕಡಮೆ.
ಜೀವಿಕೆಯ ವ್ಯವಸ್ಥೆಯಿಂದ ನಮಗೆಷ್ಟು ಬರುತ್ತದೆಂಬ ಲೆಕ್ಕಾಚಾರ ಮುಖ್ಯವಾಗುತ್ತದೆ, ಅದಕ್ಕೆ ನಾವು ಕೊಡುತ್ತಲೇ ಇದ್ದರೂ. ಯಾವುದು ಜೀವನವೇ ಆಗುವುದೋ ಅದಕ್ಕೆ ನಾವು ಎಷ್ಟೆಷ್ಟು ಏನೇನು ಕೊಡುವೆವೆಂಬುದೇ ಮುಖ್ಯವಾಗುತ್ತದೆ, ಅದರಿಂದ ನಮಗೆ ಸಿಗುತ್ತಲೇ ಇದ್ದರೂ.
ಕೆಲವರಿಗೆ ಮನೆಯೇ ಬದುಕು, ಇಲ್ಲವೇ ಮನೆಮಂದಿಯೇ ಬದುಕು. ಕೆಲವರಿಗೆ ನಿರ್ದಿಷ್ಟ ಪ್ರಾಣಿಗಳು ಇಲ್ಲವೇ ಸಮಸ್ತ ಪ್ರಾಣಿಪ್ರಪಂಚವೇ ಬದುಕು. ಕೆಲವರಿಗೆ ತಮ್ಮ ಜಾತಿ-ಸಮುದಾಯವೇ ಬದುಕು. ಕೆಲವರಿಗೆ ಇಡಿಯ ಸಮಾಜವೇ ಬದುಕು. ಎಲ್ಲರಲ್ಲಿ ಎಲ್ಲದರಲ್ಲಿ ಎಲ್ಲೆಡೆ ಇರಬಹುದಾದ ಅವ್ಯಕ್ತವಸ್ತುವಿನವರೆಗೆ ಇದನ್ನು ಹೀಗೆಯೇ ವಿಸ್ತರಿಸಬಹುದೆನ್ನಿ.
ವಸ್ತುವೊಂದು ನಮ್ಮದಾಗುವ, ನಮ್ಮ ಬದುಕೇ ಆಗುವ ಈ ಪ್ರಕ್ರಿಯೆಯೇ ಬಲು ಸೋಜಿಗದಿಂದ ಕೂಡಿದ್ದು. ಲೆಕ್ಕಾಚಾರಕ್ಕೆ ಎಡೆಯಿಲ್ಲದ ಈ ಪ್ರಕ್ರಿಯೆಯ ಮೂಲಕ ಒದಗುವುದು ಲೆಕ್ಕಾಚಾರವನ್ನು ಮೀರಿದ್ದು.
ಲೆಕ್ಕಾಚಾರವನ್ನು ಮೀರಿದ ಆ ಸಂಗತಿಯನ್ನು ಆತ್ಮಸುಖವೆನ್ನಬಹುದೇನೋ!