ವ್ಯಕ್ತಿಗಿರುವಂತೆ ಕುಟುಂಬಕ್ಕೂ ಒಂದು ಅಭಿವ್ಯಕ್ತಿ ಇದೆ. ಅವುಗಳ ನಡುವೆ ಸಂಘರ್ಷ ಇರಬೇಕಿಲ್ಲ. ಒಂದೊಮ್ಮೆ ತಾಕಲಾಟ ಏರ್ಪಟ್ಟರೆ ವ್ಯಕ್ತಿಯ ಅಭಿವ್ಯಕ್ತಿಸ್ವಾತಂತ್ರ್ಯಕ್ಕಿಂತ ಕುಟುಂಬದ ಅಭಿವ್ಯಕ್ತಿಸ್ವಾತಂತ್ರ್ಯ ಮುಖ್ಯವಾಗಬೇಕು. ಕುಟುಂಬದ ಸದಸ್ಯರಾಗಿ ಇದನ್ನು ಪ್ರತಿಯೊಬ್ಬರೂ ಅರಿತಿರಬೇಕಾದುದು, ಪಾಲಿಸಬೇಕಾದುದು ಕರ್ತವ್ಯ.
ಶಿರಸಿ ತಾಲೂಕಿನ ಮೂಲೆಯಲ್ಲೊಂದು ಗ್ರಾಮ. ಅದರಲ್ಲಿ ಒಂದು ಮನೆಗೆ ಸಂಪರ್ಕಕ್ಕೆಂದು ಒಮ್ಮೆ ಹೋಗುವುದಾಯಿತು. ಅಕ್ಕಪಕ್ಕ ಕೂಗಳತೆಯ ದೂರದಲ್ಲಿ ಒಂದೇ ಒಂದು ಮನೆಯಿರದ ಅದೊಂದು ಒಂಟಿ ಮನೆ. ಒಟ್ಟಾರೆ ಆ ಜಿಲ್ಲೆಯಲ್ಲಿ ಒಂಟಿ ಮನೆಗಳೇ ಹೆಚ್ಚು. ಎರಡು ಮನೆಗಳು ಪರಸ್ಪರ ಕೂಗಳತೆ ದೂರದಲ್ಲಿ ಹತ್ತಿರವಿದ್ದರೆ ಅದೇ ವಿಶೇಷ. ಇದು ಅಂಥ ವಿಶೇಷವಲ್ಲದ ಒಂದು ಒಂಟಿ ಮನೆಯೇನೋ ಹೌದು. ಜೊತೆಗೆ, ಈ ದಿನಗಳಲ್ಲಿ ತೀರಾ ಅಪರೂಪವಾಗುತ್ತಿರುವ ಕೂಡುಕುಟುಂಬದ ಮನೆಯೂ ಹೌದು.
ಹೌದು, ಕೂಡುಕುಟುಂಬ ಅಪರೂಪ. ಹಾಗೆ ಎಲ್ಲರೂ ಒಟ್ಟಿಗೇ ಇರಲು ಸಾಧ್ಯವೇ ಎಂದು ಹುಬ್ಬೇರಿಸುವಷ್ಟು ಅಪರೂಪ.
ಹಾಗೆ ಹುಬ್ಬೇರಿಸಲು ಕಾರಣವಾಗಿರುವುದು, ಮನುಷ್ಯರ ನಡುವೆ ಸಹಜವಾಗಿ ಇರುವ ಅಭಿಪ್ರಾಯಭೇದವು ಪರಾಕಾಷ್ಠೆಯನ್ನು ತಲಪಿರುವುದು.
ಅಭಿಪ್ರಾಯಭೇದವು ಸಹಜ. ಆದರೆ ಅದರ ಪರಾಕಾಷ್ಠೆ ಅಲ್ಲ. ಈ ಪರಾಕಾಷ್ಠೆ ಎಲ್ಲಿಯವರೆಗೆ ಸಾಗಿದೆಯೆಂದರೆ; ಹೊಯ್ಕೊಯ್ ಹೊಡಿಬಡಿ ಎನ್ನುವವರೆಗೆ, ಅಪರಾಧ ಸುದ್ದಿಗಳ ಪುಟಗಳಲ್ಲಿ ದಾಖಲಾಗುವವರೆಗೆ. ಇಂಥ ಅಭಿಪ್ರಾಯಭೇದವು ಒಂದೇ ಸೂರಿನಡಿ ಬಿಡಿ, ದೂರದೂರದ ಸೂರುಗಳಡಿ ಕೂಡ ನೆಮ್ಮದಿಯ ಬದುಕನ್ನು ನೀಡಲಾರವು.
ಆಧುನಿಕದಲ್ಲಿ ಅಭಿಪ್ರಾಯಭೇದಕ್ಕೆ ತುಪ್ಪ ಸುರಿಯುತ್ತಿರುವುದು ವೈಯಕ್ತಿಕತೆ ಮತ್ತದರ ಬಾಲಂಗೋಚಿಯಾದ ವ್ಯಕ್ತಿ-ಅಭಿವ್ಯಕ್ತಿ-ಸ್ವಾತಂತ್ರ್ಯ!
ಅಭಿವ್ಯಕ್ತಿಸ್ವಾತಂತ್ರ್ಯವನ್ನು ಅಪರಾಧಿಯ ಜಾಗದಲ್ಲಿ ನಿಲ್ಲಿಸಿಬಿಟ್ಟರೆ ಮತ್ತೆ ಅಪರಾಧಪುಟವೇ ಗತಿಯಾದೀತು!
ಅಭಿವ್ಯಕ್ತಿಸ್ವಾತಂತ್ರ್ಯವು ತಪ್ಪಲ್ಲ ಬಿಡಿ. ಆದರೆ ಅದನ್ನು ವ್ಯಷ್ಟಿಗತ ನೆಲೆಯಲ್ಲಿ ಮಾತ್ರ ನೋಡುವುದು ಸರಿಯಾಗದು. ಅದರ ಇತಿಮಿತಿಗಳನ್ನು ಒಳಿತುಕೆಡುಕುಗಳನ್ನು ಪರಿಗಣಿಸದಿರೆ ಸರಿಹೋಗದು. ಹಾಗಾಗಿ ಸಮಸ್ಯೆಯಿರುವುದು ಅಭಿವ್ಯಕ್ತಿಸ್ವಾತಂತ್ರ್ಯದಲ್ಲಲ್ಲ, ಅದೀಗ ಅಭಿವ್ಯಕ್ತಿಗೊಂಡ ರೀತಿಯಲ್ಲಿ.
ಅದು ಅಭಿವ್ಯಕ್ತಿಗೊಳ್ಳುತ್ತಿರುವುದು ಪಶ್ಚಿಮದ ಧಾಟಿಯಲ್ಲಿ. ಅಲ್ಲಿ ಹುಟ್ಟಿಕೊಂಡ ಸಿದ್ಧಾಂತಗಳ ನೆಲೆ ವ್ಯಕ್ತಿ. ಮನೆಯನ್ನಾಗಲಿ ಸಮಾಜವನ್ನಾಗಲಿ ದೇಶವನ್ನಾಗಲಿ ಅಲ್ಲಿ ವ್ಯಕ್ತಿಗತ ನೆಲೆಯಲ್ಲಿ ನೋಡಲಾಗುತ್ತದೆ. ಅಲ್ಲಿ ವ್ಯಕ್ತಿಯು ಯಾವುದೇ ವ್ಯವಸ್ಥೆಯ ಮೂಲಭೂತ ಘಟಕ.
ಯಾವುದೇ ವ್ಯವಸ್ಥೆಯ ಮೂಲಭೂತ ಘಟಕ ಕುಟುಂಬ – ಇದು ಭಾರತೀಯ ದೃಷ್ಟಿ. ಹಾಗಾಗಿ ಇಲ್ಲಿ ಯಾವುದೂ ವ್ಯಕ್ತಿಕೇಂದ್ರಿತವಲ್ಲ, ಎಲ್ಲವೂ ಸಮಷ್ಟಿಕೇಂದ್ರಿತ. ಸಮಷ್ಟಿಯ ಪುಟ್ಟ ಸಂಕೇತ ಕುಟುಂಬ. ಮುಂದೆ ಸಮಾಜ, ರಾಷ್ಟç ಇತ್ಯಾದಿಗಳೂ ಬರುತ್ತವೆ. ಅದರ ಅಂತಿಮ ನೆಲೆ ಪರಮೇಷ್ಠಿ.
ಅಂದರೆ; ವ್ಯಕ್ತಿಯು ಕುಟುಂಬದ ಕೇಂದ್ರವಲ್ಲ, ಕುಟುಂಬವು ವ್ಯಕ್ತಿಯ ಕೇಂದ್ರ. ವ್ಯಕ್ತಿಗಾಗಿ ಕುಟುಂಬವಲ್ಲ, ಕುಟುಂಬಕ್ಕಾಗಿ ವ್ಯಕ್ತಿ. ತನ್ನ ರೀತಿರಿವಾಜುಗಳಂತೆ ಕುಟುಂಬವನ್ನು ಉಪಯೋಗಿಸುವುದಲ್ಲ, ಕುಟುಂಬದ ರೀತಿರಿವಾಜುಗಳಿಗೆ ತಕ್ಕಂತೆ ತನ್ನನ್ನು ಸಿದ್ಧಪಡಿಸಿ ಕುಟುಂಬಕ್ಕೆ ಶಕ್ತಿತುಂಬುವುದು ಆಗಬೇಕು. ವ್ಯಕ್ತಿಗಿರುವಂತೆ ಕುಟುಂಬಕ್ಕೂ ಒಂದು ಅಭಿವ್ಯಕ್ತಿ ಇದೆ. ಅವುಗಳ ನಡುವೆ ಸಂಘರ್ಷ ಇರಬೇಕಿಲ್ಲ. ಒಂದೊಮ್ಮೆ ತಾಕಲಾಟ ಏರ್ಪಟ್ಟರೆ ವ್ಯಕ್ತಿಯ ಅಭಿವ್ಯಕ್ತಿಸ್ವಾತಂತ್ರ್ಯಕ್ಕಿಂತ ಕುಟುಂಬದ ಅಭಿವ್ಯಕ್ತಿಸ್ವಾತಂತ್ರ್ಯ ಮುಖ್ಯವಾಗಬೇಕು. ಕುಟುಂಬದ ಸದಸ್ಯರಾಗಿ ಇದನ್ನು ಪ್ರತಿಯೊಬ್ಬರೂ ಅರಿತಿರಬೇಕಾದುದು ಪಾಲಿಸಬೇಕಾದುದು ಕರ್ತವ್ಯ.
ಮೇಲೆ ಉಲ್ಲೇಖಿಸಿದ ಮನೆಯನ್ನು ಒಮ್ಮೆ ಈ ಹಿನ್ನೆಲೆಯಲ್ಲಿ ನೋಡುವುದಾದರೆ;
ಆ ಮನೆಯ ಮೂವರು ಅಣ್ಣತಮ್ಮಂದಿರು ಮೂರು ಭಿನ್ನ ರಾಜಕೀಯ ಪಕ್ಷಗಳಿಗೆ ಸೇರಿದ ಕಾರ್ಯಕರ್ತರು. ಸಕ್ರಿಯರು ಕೂಡಾ. ಮೂರೂ ಪಕ್ಷಗಳದು ಪರಸ್ಪರ ವಿಭಿನ್ನ ರಾಜಕೀಯ ನಿಲವು. ತಮ್ಮ ಪಕ್ಷದ ನಿಲವುಗಳಿಗೆ ಆ ಮೂವರು ಸಹೋದರರೂ ಬದ್ಧರು. ಆದರೆ ಕುಟುಂಬದಲ್ಲಿ ಈ ನಿಟ್ಟಿನಲ್ಲಿ ಯಾವುದೇ ಒಡಕಿನ ಭಾವವಿಲ್ಲ. ಭಿನ್ನಾಭಿಪ್ರಾಯವೆಂಬುದೇ ಇಲ್ಲ. ಮೂರೂ ಪಕ್ಷಗಳ ಕಾರ್ಯಕರ್ತರು ಆ ಮನೆಗೆ ಬರುತ್ತಾ ಇರುತ್ತಾರೆ. ಹಾಗೆ ಬರುವ ಎಲ್ಲರಿಗೂ ಅಲ್ಲಿ ಯಾವುದೇ ಭೇದವಿಲ್ಲದೆ ಆತಿಥ್ಯ ಸಿಗುತ್ತದೆ.
ಕೃಷಿಪ್ರಧಾನ ಚಟುವಟಿಕೆಯ ಕುಟುಂಬವದು. ಯಥೇಚ್ಛ ಜಮೀನಿದೆ. ಹಾಗಾಗಿ ಶ್ರೀಮಂತಿಕೆಯೂ ಇದೆ. ಎರಡು ಚತುಶ್ಚಕ್ರ, ನಾಲ್ಕು ದ್ವಿಚಕ್ರ ವಾಹನಗಳಿವೆ. ಅಂದಹಾಗೆ ಅದಾವುವೂ ಆ ಮನೆಯ ಸದಸ್ಯರ ಪೈಕಿ ಯಾರದೇ ವೈಯಕ್ತಿಕ ವಾಹನಗಳಲ್ಲ, ಕುಟುಂಬದ ವಾಹನಗಳು. ಹಾಗಾಗಿ ಪಕ್ಷಸಂಬಂಧೀ ಕಾರ್ಯಕ್ಕೆ ಹೋಗುವಾಗ ಮನೆಯ ಯಾವುದೇ ವಾಹನ ಬಳಸುವುದಿಲ್ಲ. ಪಕ್ಷಕಾರ್ಯಕ್ಕಾಗಿ ಒಂದೊಮ್ಮೆ ವಾಹನ ಅನಿವಾರ್ಯವಾದಲ್ಲಿ ಬಾಡಿಗೆ ಪಡೆದೋ ಸ್ನೇಹಿತರಿಂದಲೋ ಅದನ್ನು ಪೂರೈಸಿಕೊಳ್ಳುತ್ತಾರೆ. ಆ ಮನೆಯ ಇಂಥ ನಿಯಮಗಳು ಎಲ್ಲರಿಗೂ ಗೊತ್ತಿರಲಾಗಿ ಯಾರೂ ಅನ್ಯಥಾ ತಿಳಿಯುವ ಸಾಧ್ಯತೆಯೂ ಇಲ್ಲ.
ಕುಟುಂಬವು ವೈಯಕ್ತಿಕವಲ್ಲ, ಸಮಷ್ಟಿಸ್ವರೂಪವುಳ್ಳದ್ದು. ಆದರೆ ಒಂದು ರಾಜಕೀಯ ಪಕ್ಷದ ಕಾರ್ಯ, ಅದರ ಸಿದ್ಧಾಂತ, ಅದರ ಕಾರ್ಯಕರ್ತ ಎಲ್ಲವೂ ವೈಯಕ್ತಿಕ. ವ್ಯಕ್ತಿಯಿರುವುದು ಕುಟುಂಬಕ್ಕಾಗಿ, ರಾಜಕೀಯ ಪಕ್ಷಕ್ಕಾಗಿ ಅಲ್ಲ. ರಾಜಕೀಯ ಪಕ್ಷವೇನೋ ರಾಷ್ಟ್ರಹಿತಕ್ಕಾಗಿಯೇ ಇರಬೇಕಾದುದು. ಆದರೆ ಅದನ್ನು ಎಲ್ಲ ಪಕ್ಷಗಳಿಂದಲೂ ನಿರೀಕ್ಷಿಸುವಂತಿಲ್ಲ. ಪರಕೀಯ ಮತ-ಸಿದ್ಧಾಂತಗಳ ಪ್ರಭಾವದಲ್ಲಿರುವ ಇಲ್ಲಿಯ ರಾಜಕಾರಣದ ಸಂದರ್ಭದಲ್ಲಿಯಂತೂ ಅದು ಗಗನಕುಸುಮವೇ ಸರಿ. ಇಂಥ ಸಂದರ್ಭದಲ್ಲಿ ಕುಟುಂಬವೊಂದು ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ನಿಷ್ಠೆ ತೋರಿದರೆ ಅದನ್ನು ರಾಷ್ಟ್ರನಿಷ್ಠೆಯ ನಡೆಯೆಂದು ಖಚಿತವಾಗಿ ಹೇಳಬರುವುದಿಲ್ಲ. ರಾಷ್ಟ್ರವೇ ಮುಖ್ಯವಾದ ಸಂಘಟನೆಗೆ ನಿಷ್ಠೆ ತೋರಿದಾಗ ಅದರಲ್ಲಿ ಒಂದೊಮ್ಮೆ ರಾಜಕೀಯದ ಒಂದು ಮುಖವಿದ್ದರೂ ಅದನ್ನು ರಾಷ್ಟ್ರನಿಷ್ಠನಡೆಯೆನ್ನಲು ಅಡ್ಡಿಯಾಗದು. ಏನಿದ್ದರೂ ಕುಟುಂಬವಿರಬೇಕಾದುದು ರಾಷ್ಟ್ರಕ್ಕಾಗಿಯೇ ತಾನೇ.
ಭಿನ್ನ ವೈಯಕ್ತಿಕ ನಿಲವುಗಳು ಇದ್ದಾಗ, ಅದು ಪ್ರಭಾವೀ ರಾಜಕೀಯ ನಿಲವುಗಳೇ ಆಗಿದ್ದರೂ ವೈಯಕ್ತಿಕ ಅಭಿವ್ಯಕ್ತಿಸ್ವಾತಂತ್ರ್ಯವನ್ನು ‘ಮನೆ’ತನಕ್ಕೆ ಇನಿತೂ ಧಕ್ಕೆಯಾಗದಂತೆ ಸರಿದೂಗಿಸಿಕೊಂಡು ಹೋಗಬಹುದಾದ ಒಂದು ದಾರಿಯನ್ನು ಈ ಮನೆ ಮಾದರಿಯಾಗಿ ತೋರಿಕೊಟ್ಟಿದೆ ಎನಿಸುತ್ತದೆ.