ಮಂತ್ರಾಕ್ಷತೆಯನ್ನು ಕೊಡುತ್ತಾ ಅದೊಂದು ಮನೆ ಹಿಂದುಗಳದ್ದಲ್ಲವೆಂದು ದಾಟಿ ಮುಂದೆ ಹೋದರು. ಕಾರ್ಯಕರ್ತರ ಈ ಗುಂಪು ಬರುವುದನ್ನೇ ಗಮನಿಸುತ್ತಿದ್ದ ಆ ಮನೆಯ ಒಡತಿ, ಮುಂದೆಹೋದ ಗುಂಪನ್ನು ಕರೆದರು! ಹಿಂದಿರುಗಿ ನೋಡುತ್ತಿದ್ದಂತೆ ಬುರ್ಖಾದಲ್ಲಿದ್ದ ಆ ಒಡತಿಯನ್ನು ನೋಡಿ ಅಚ್ಚರಿಯಾಯಿತು. ಕರೆದದ್ದು ತಮ್ಮನ್ನೋ ಇತರರನ್ನೋ ಎನ್ನುವ ಗೊಂದಲವುಂಟಾಯಿತು. ‘ನಿಮ್ಮನ್ನೇ ಕರೆಯುತ್ತಿರುವುದು, ಯಾಕೆ ಈ ಮನೆಯನ್ನು ಬಿಟ್ಟು ಹೋದಿರಿ?’ ಎಂಬ ಪ್ರಶ್ನೆ ಕಾರ್ಯಕರ್ತರಿಗೆದುರಾಯಿತು. ಉತ್ತರಿಸಲಾಗದೆ ಹತ್ತಿರ ಬಂದಾಗ ಮುಖಪರದೆಯನ್ನು ತೆರೆದುಕೊಂಡು ಆಕೆ ಹೇಳಿದ್ದಿಷ್ಟು: ‘ನಾನೂ ರಾಮಮಂದಿರಕ್ಕೆ ದೇಣಿಗೆಯನ್ನು ಕೊಟ್ಟಿದ್ದೇನೆ. ನನಗೂ ಮಂತ್ರಾಕ್ಷತೆ ಬೇಕು. ಕೊಡಿ.’ ಆ ತಾಯಿಯನ್ನು ನೋಡುತ್ತಿದ್ದಂತೆಯೇ ಕಾರ್ಯಕರ್ತರ ಗುಂಪಿನಲ್ಲೊಬ್ಬ ‘ಹೋ! ಇವರು ಐದು ಸಾವಿರ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ’ ಎಂದುಬಿಟ್ಟ. ಈ ಮಾತಿಗೆ ಆಕೆ ತಮ್ಮ ನಸುನಗುವಿನ ಮುಖದಲ್ಲಿ ತುಸು ಕೋಪವನ್ನೂ ವ್ಯಕ್ತಪಡಿಸುತ್ತ ‘ಅದು ನನಗೆ ಮತ್ತು ರಾಮನಿಗೆ ಮಾತ್ರ ಗೊತ್ತಿದ್ದರೆ ಸಾಕು’ ಎಂದರು.
ಈಚೆಗೆ ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಆಮಂತ್ರಿಸಲೆಂದು ಕಾರ್ಯಕರ್ತರು ಮನೆಮನೆಗೆ ಮಂತ್ರಾಕ್ಷತೆಯನ್ನು ನೀಡಹೋಗಿದ್ದರಷ್ಟೆ. ಶಿರಸಿಯಲ್ಲಿ ಒಂದೆಡೆ ಹಾಗೆ ಹೋಗಿದ್ದ ಕಾರ್ಯಕರ್ತ ದಂಪತಿಗಳಿಗೆ ಅವರಿಗಿಂತ ತೀರಾ ಹಿರಿಯರಾಗಿದ್ದ ಆ ಮನೆಯ ದಂಪತಿಗಳು ಕಾಲು ತೊಳೆದು ಆರತಿ ಮಾಡಿ ಮನೆಯೊಳಗೆ ಬರಮಾಡಿಕೊಂಡರು. ರಾಮನೇ ಬಂದೆನೇನೋ ಎಂಬಂತೆ! ಕಾರ್ಯಕರ್ತರಿಗದು ತೀರಾ ಅನಿರೀಕ್ಷಿತ, ಮುಜುಗರದ ಸಂಗತಿಯಾಯಿತು.
ಕಲಬುರಗಿಯ ಕಾರ್ಯಕರ್ತರ ಅನುಭವವು ಇದೇ ನಿಟ್ಟಿನಲ್ಲಿ ಇದಕ್ಕಿಂತ ತುಸು ಭಿನ್ನವಿದೆ. ಯಾರಿಗೂ ಅಹಿತವಾಗಕೂಡದೆಂಬ ಉದ್ದೇಶದಿಂದ ಅವರು ಹಿಂದುಗಳ ಮನೆಗಷ್ಟೆ ಹೋಗಬೇಕೆಂದು ತೊಡಗಿದ್ದರು. ಮಂತ್ರಾಕ್ಷತೆಯನ್ನು ಕೊಡುತ್ತಾ ಅದೊಂದು ಮನೆ ಹಿಂದುಗಳದ್ದಲ್ಲವೆಂದು ದಾಟಿ ಮುಂದೆ ಹೋದರು. ಕಾರ್ಯಕರ್ತರ ಈ ಗುಂಪು ಬರುವುದನ್ನೇ ಗಮನಿಸುತ್ತಿದ್ದ ಆ ಮನೆಯ ಒಡತಿ, ಮುಂದೆಹೋದ ಗುಂಪನ್ನು ಕರೆದರು! ಹಿಂದಿರುಗಿ ನೋಡುತ್ತಿದ್ದಂತೆ ಬುರ್ಖಾದಲ್ಲಿದ್ದ ಆ ಒಡತಿಯನ್ನು ನೋಡಿ ಅಚ್ಚರಿಯಾಯಿತು. ಕರೆದದ್ದು ತಮ್ಮನ್ನೋ ಇತರರನ್ನೋ ಎನ್ನುವ ಗೊಂದಲವುಂಟಾಯಿತು. ‘ನಿಮ್ಮನ್ನೇ ಕರೆಯುತ್ತಿರುವುದು, ಯಾಕೆ ಈ ಮನೆಯನ್ನು ಬಿಟ್ಟು ಹೋದಿರಿ?’ ಎಂಬ ಪ್ರಶ್ನೆ ಕಾರ್ಯಕರ್ತರಿಗೆದುರಾಯಿತು. ಉತ್ತರಿಸಲಾಗದೆ ಹತ್ತಿರ ಬಂದಾಗ ಮುಖಪರದೆಯನ್ನು ತೆರೆದುಕೊಂಡು ಆಕೆ ಹೇಳಿದ್ದಿಷ್ಟು: ‘ನಾನೂ ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದೇನೆ. ನನಗೂ ಮಂತ್ರಾಕ್ಷತೆ ಬೇಕು. ಕೊಡಿ.’ ಆ ತಾಯಿಯನ್ನು ನೋಡುತ್ತಿದ್ದಂತೆಯೇ ಕಾರ್ಯಕರ್ತರ ಗುಂಪಿನಲ್ಲೊಬ್ಬ ‘ಹೋ! ಇವರು ಐದು ಸಾವಿರ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ’ ಎಂದುಬಿಟ್ಟ. ಈ ಮಾತಿಗೆ ಆಕೆ ತಮ್ಮ ನಸುನಗುವಿನ ಮುಖದಲ್ಲಿ ತುಸು ಕೋಪವನ್ನೂ ವ್ಯಕ್ತಪಡಿಸುತ್ತ ‘ಅದು ನನಗೆ ಮತ್ತು ರಾಮನಿಗೆ ಮಾತ್ರ ಗೊತ್ತಿದ್ದರೆ ಸಾಕು’ ಎಂದರು.
ಇದಕ್ಕೆ ತೀರಾ ವ್ಯತಿರಿಕ್ತವಾದ ಅನುಭವಗಳೂ ಕೆಲವೆಡೆ ಆಗಿವೆಯೆನ್ನಿ. ಅದಿರಲಿ.
ರಾಮನ ವ್ಯಕ್ತಿತ್ವವು ದೇಶವನ್ನು ಪ್ರಭಾವಿಸಿದ ಬಗೆ ನಿಜಕ್ಕೂ ಕುತೂಹಲಕಾರಿ.
ಯಾರೋ ಬಂದಾಗ ರಾಮನೇ ಮನೆಗೆ ಬಂದ ಎಂದು ಅಭಿವ್ಯಕ್ತಿಗೊಳ್ಳುವ ಭಾವುಕ ಭಕ್ತಿಯ ವಿವರಗಳೂ ಇವೆ, ರಾಮನಂಥ ವ್ಯಕ್ತಿತ್ವಕ್ಕೆ ವಿರೋಧಿ ಪಾಳಯದವರೇ ಮನಸೋತ ವಿವರಗಳೂ ಇವೆ.
ಮಂಡೋದರಿ, ಕುಂಭಕರ್ಣ, ಅತಿಕಾಯ ಮುಂತಾದ ರಾವಣನಿಗೆ ಅತಿಹತ್ತಿರದ ವ್ಯಕ್ತಿತ್ವಗಳು ರಾಮನ ವ್ಯಕ್ತಿತ್ವವನ್ನು ಬೆರಗಿನಿಂದ ಆಪ್ತವಾಗಿ ನೋಡಿದವರೇ. ಅದೂ ಮೂರು ಲೋಕಗಳನ್ನು ಗೆದ್ದ ಪ್ರತಿಷ್ಠೆಯುಳ್ಳ ರಾವಣ ತಮ್ಮ ಯಜಮಾನನಾಗಿ ಹತ್ತಿರವೇ ಇದ್ದಾಗ!
ರಾವಣ ಕೆಟ್ಟವನೇ ಇದ್ದರೂ ಇವರಾರಿಗೂ ಆತನ ಬಗ್ಗೆ ಆಕ್ಷೇಪವಾಗಲೀ ಹೇವರಿಕೆಯಾಗಲೀ ಇಲ್ಲ. ಆದರೆ ರಾಮನ ಬಗ್ಗೆ ವಿಶೇಷ ಒಲವು!
ರಾಮನ ಕುರಿತ ಸೀತೆ, ಲಕ್ಷ್ಮಣ, ಹನುಮಂತ ಮುಂತಾದವರ ಒಲವು ಬೇರೆ; ಎಲ್ಲರಿಗೂ ಅರ್ಥವಾಗುತ್ತದದು. ಮಂಡೋದರಿ, ಕುಂಭಕರ್ಣ, ಅತಿಕಾಯ ಮುಂತಾದವರ ಒಲವು ಬೇರೆ; ಅರ್ಥೈಸಿಕೊಳ್ಳುವುದಕ್ಕದು ಸಂಕೀರ್ಣ.
ಸ್ವಕೀಯರನ್ನೂ ‘ಪರಕೀಯ’ರನ್ನೂ ಏಕಪ್ರಕಾರವಾಗಿ ಶ್ರದ್ಧೆ ಮೂಡುವಂತೆ ಪ್ರಭಾವಿಸಿದವ ರಾಮ. ರಾಮನ ದೃಷ್ಟಿಯಲ್ಲಿ ಯಾರೂ ಪರಕೀಯರಲ್ಲ ಎನ್ನಿ.
ರಾಮನನ್ನು ತುಂಬಾ ಹಚ್ಚಿಕೊಂಡಿದ್ದ ಕೈಕೇಯಿ ಯಾರದೋ ಮಾತುಕೇಳಿ ಅವಾಂತರ ಮಾಡಿದ್ದಿದೆ. ಕಾಡಿನ ಕಷ್ಟ ನಮಗೂ ಇರಲಿ ಎಂದು ರಾಮನ ಜತೆ ನಡೆದ ಅಯೋಧ್ಯೆಯ ಜನ ಮುಂದೆ ರಾಮಕಾರ್ಯಕ್ಕೆ ಒದಗಿದರೆಂದೇನಿಲ್ಲ. ರಾಮನ ಜತೆ ಏನೇನೂ ಸಂಬಂಧವಿಲ್ಲದ ಕಪಿಗಳಿಗೆ ರಾಮಕಾರ್ಯ ಬದುಕಿನ ಧ್ಯೇಯವೇ ಆಯಿತು. ‘ವಿರೋಧೀ’ಪಾಳಯದಲ್ಲಿದ್ದ ವಿಭೀಷಣನಿಗೂ ರಾಮನೇ ಸರ್ವಸ್ವವಾದ.
ರಾಮಭಕ್ತಿಯೇನೋ ಇದೆ, ಒಳ್ಳೆಯದು. ಅಂಥವರು ರಾಮಕಾರ್ಯಕ್ಕೂ ಒದಗಬೇಕಲ್ಲ. ರಾಮನ ವ್ಯಕ್ತಿತ್ವಕ್ಕೆ ಸೋಲುವುದೇನೋ ಸರಿ. ಅವರು ರಾಮಪಾಳಯದಲ್ಲಿ ಬಂದು ಸೇರಿಕೊಳ್ಳಬೇಕಲ್ಲ!
ಒಂದೆಡೆ ಒಡಹುಟ್ಟಿದ ಲಕ್ಷ್ಮಣ. ಇನ್ನೊಂದೆಡೆ ನಡುವೆ ಸೇರಿಕೊಂಡು ಸೇವಕನಾದ ಹನುಮಂತ. ಮತ್ತೊಂದೆಡೆ ವಿರೋಧಿಪಾಳಯದಿಂದ ಬಂದು ಸಹಾಯಕನಾದ ವಿಭೀಷಣ. ರಾಮನಿಂದ ಪ್ರಭಾವಿತರಾದ ಎಲ್ಲ ತರಹದವರೂ ಒಂದೆಡೆ ಇದ್ದು ತೊಡಗಿದಾಗ ರಾಮಕಾರ್ಯ, ರಾಮರಾಜ್ಯ.