ಕೃಷಿಭೂಮಿಯನ್ನು ಉಳ್ಳವರೇ ಕೃಷಿಕಾರ್ಯವನ್ನೂ ಮಾಡಬೇಕು. ಸ್ವಾವಲಂಬನೆಯ ಬದುಕನ್ನು ರೂಪಿಸುವ ಕೃಷಿಕಾರ್ಯವನ್ನು ಮಾಡಬೇಕು. ಕೃಷಿಕಾರ್ಯವನ್ನು ಸ್ವಾವಲಂಬಿಯಾಗಿ ಮಾಡಬೇಕು. ಮುಂಪೀಳಿಗೆಯಲ್ಲಿಯೂ ಸ್ವಾವಲಂಬನೆಯ ಸ್ವಾಭಿಮಾನವನ್ನು ಉದ್ದೀಪಿಸಬೇಕು. ಕೃಷಿವ್ಯವಸ್ಥೆಯೊಂದು ಸದೈವ ಸಂಗತಗೊಳ್ಳುವ ಬಗೆಯಿದು.
ಅದೊಂದು ಮಲೆನಾಡಿನ ಹಳ್ಳಿ. ಅಲ್ಲೊಬ್ಬರು ಹಿತೈಷಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಮಾತನಾಡುತ್ತಾ ಮಾತನಾಡುತ್ತ ಮಾತು ಮನೆಯ ಕಷ್ಟಗಳನ್ನು ಆವರಿಸಿಕೊಂಡು ಕ್ರಮೇಣ ಕೃಷಿಯತ್ತ ಹೊರಳಿತು. ಮನೆಯ ಎಲ್ಲಾ ಕಷ್ಟಸುಖಗಳಿಗೆ ದಂಪತಿಗಳಿಬ್ಬರೇ ಇರುವುದು. ಜತೆಗೆ ಮನೆಯ ಹೊರಗಿನ ಕೆಲಸಕ್ಕೆ ಯಾರೂ ಸಿಗ್ತಾ ಇಲ್ಲ ಎಂಬ ಆತಂಕ. ಮನೆಯ ಹೊರಗಿನ ಕೆಲಸಗಳಲ್ಲಿ ಅತಿಮುಖ್ಯವಾದುದು ಕೃಷಿ. ಅದಕ್ಕೂ ಜನ ಸಿಗ್ತಾ ಇಲ್ಲ.
ಅಂದರೆ; ಆ ಮನೆಯಲ್ಲಿ ಅವರ ಇಬ್ಬರು ಗಂಡುಮಕ್ಕಳೂ ಅವರದೇ ಅಪೇಕ್ಷೆಯಂತೆ ಆಗ್ರಹದಂತೆ ಚೆನ್ನಾಗಿ ಕಲಿತು ಇದೀಗ ಉದ್ಯೋಗಕ್ಕಾಗಿ ಬೆಂಗಳೂರು ಸೇರಿಕೊಂಡಿದ್ದಾರೆ. ಇಬ್ಬರು ಸೊಸೆಯಂದಿರೂ ಉದ್ಯೋಗಿಗಳೇ. ಪ್ರತಿಯೊಬ್ಬರೂ ತಿಂಗಳಿಗೆ ಲಕ್ಷಕ್ಕಿಂತ ಮೇಲೆ ಸಂಬಳ ಎಣಿಸುತ್ತಾರೆ. ಅವರು ಯಾರೂ ಉದ್ಯೋಗ ಬಿಟ್ಟು ಹಳ್ಳಿಗೆ ಬರಲಾರರು. ಹಬ್ಬಕ್ಕೆಂದು ವರ್ಷಕ್ಕೆರಡು ಬಾರಿ ಹಳ್ಳಿಗೆ ಬಂದು ಎರಡೆರಡು ದಿನ ಇದ್ದು ಹೋಗುತ್ತಾರೆ. ಒಂದು ಕಾಲದಲ್ಲಿ ಹತ್ತಾರು ಸಂಖ್ಯೆಯಲ್ಲಿ ಮನೆಸದಸ್ಯರಿಂದ ಗಿಜಿಗುಟ್ಟುತ್ತಿದ್ದ ಮನೆಯದು. ಸಹೋದರರು ಪಾಲು ಬೇಕೆಂದು ಬೇರೆಯಾಗಿದ್ದು, ಮಕ್ಕಳು ಉದ್ಯೋಗಕ್ಕಾಗಿ ಬೇರೆ ಊರಿಗೆ ಹೋಗಿದ್ದು – ಮನೆಯನ್ನು ಬಿಕೋ ಮಾಡಿಸಿದೆ. ಈಗ ಮನೆಯ ಕಷ್ಟದ ಕೆಲಸಗಳನ್ನು ಮಾಡಲೂ ಜನವಿಲ್ಲ, ಕಷ್ಟಸುಖಗಳನ್ನು ಹಂಚಿಕೊಳ್ಳಲೂ ಜನವಿಲ್ಲ.
ಜತೆಗೆ; ಮನೆಯ ಹೊರಗಿನ ಕೆಲಸಕ್ಕೆ ಬರುತ್ತಿದ್ದವರ, ಕೃಷಿ ಕೂಲಿಕಾರ್ಮಿಕರ ಮಕ್ಕಳೂ ಒಂದಷ್ಟು ಓದಿ, ಕೆಲವರು ಚೆನ್ನಾಗಿ ಓದಿ ಪೇಟೆ ಸೇರಿಕೊಂಡಿದ್ದಾರೆ. ಕೆಲವರು ಹಳ್ಳಿಯಲ್ಲಿ ಇದ್ದರೂ ವ್ಯಾಪಾರ ಇತ್ಯಾದಿ ಸ್ವದ್ಯೋಗದಲ್ಲಿ ತೊಡಗಿದವರಾಗಿ ಕೂಲಿಗೆಲಸ ಮಾಡುವುದಿಲ್ಲ.
ಮಲೆನಾಡಿನ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಅನ್ನುವುದು ಈಗ್ಗೆ ಹತ್ತಿಪ್ಪತ್ತು ವರ್ಷಗಳ ದೊಡ್ಡ ಕೂಗು. ಅದು ಏರುಗತಿಯಲ್ಲೇ ಸಾಗಿದೆ. ಜತೆಗೆ ಈಗ ಕೃಷಿ ಕೂಡಾ ಅತಿಕಷ್ಟದ ಸ್ಥಿತಿಯಲ್ಲಿದೆ. ಇದು ಈಚಿನ ಹತ್ತಾರು ವರ್ಷಗಳ ಆತಂಕ.
ಮನೆಯೊಳಗಿನ ಮತ್ತು ಹೊರಗಿನ ಈ ಸ್ಥಿತಿಗಳೆರಡೂ ಕೂಡಾ ಸವಾಲುಗಳೇ ಹೌದು. ಮತ್ತಿವು ಮಾನವನಿರ್ಮಿತ ಸವಾಲುಗಳೂ ಹೌದು.
ವ್ಯವಸ್ಥೆಯೊಂದು ಚೆನ್ನಾಗಿರುವುದೆಂದರೆ ವರ್ತಮಾನದಲ್ಲಾಗಲಿ ಭವಿಷ್ಯದಲ್ಲಾಗಲಿ ಯಾವುದೇ ಸವಾಲನ್ನು ಸೃಷ್ಟಿಸಿಕೊಳ್ಳದಿರುವಂತೆ ಇರುವುದಾಗಿದೆ. ಜತೆಗೆ ಎದುರಾಗಬಹುದಾದ ಯಾವುದೇ ಸವಾಲಿಗೆ ಉತ್ತರಿಸಿಕೊಳ್ಳುವ ಪರಿಹಾರದ ದ್ರವ್ಯವನ್ನು ಹೊತ್ತುಕೊಂಡಿರುವುದೂ ಆಗಿದೆ.
ಕೃಷಿಕರಿಗೆ ತಮ್ಮ ಕೃಷಿಭೂಮಿ ಬಂದಿರುವುದು ತಮ್ಮ ಪರಿಶ್ರಮದಿಂದಲ್ಲ, ಪೂರ್ವಜರ ಕೊಡುಗೆಯಾಗಿ. ಅದರಲ್ಲಿ ಅಲ್ಪಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡಿರಬಹುದು. ಇದನ್ನು ಕೂಡ ಮಾಡಬೇಕಿತ್ತೇ, ಹಾಗೆ ಬದಲಾಯಿಸುವ ಅಧಿಕಾರವಿದೆಯೇ ಎಂಬ ಪ್ರಶ್ನೆ ಇದ್ದೇ ಇದೆ. ಆಹಾರದ ಬೆಳೆಬೆಳೆವ ಹೊಲವನ್ನು ವಾಣಿಜ್ಯ ಬೆಳೆಬೆಳೆವ ಪ್ರದೇಶವಾಗಿಸುವುದು ಕೃಷಿಯ ಉದ್ದೇಶವನ್ನೇ ಅಣಕಿಸಿದಂತೆ. ಭತ್ತದ ಗದ್ದೆಯನ್ನು ಅಡಿಕೆತೋಟವಾಗಿಸಿದರೆ ಅಲ್ಲಿ ಭತ್ತಬೆಳೆವ ಸಾಧ್ಯತೆಯನ್ನೇ ಇಲ್ಲವಾಗಿಸಿದಂತೆ. ಹೀಗಾದಾಗ; ಭವಿಷ್ಯದಲ್ಲಿ ಯಾವುದೋ ಕಾರಣಕ್ಕೆ ಆಹಾರಧಾನ್ಯಗಳ ಪೂರೈಕೆಯಲ್ಲಿ ವ್ಯತ್ಯಯವುಂಟಾದರೆ ಹಾಹಾಕಾರವೊಂದೇ ಪರಿಹಾರ! ಮತ್ತೆ ಮರಳಲಾಗದಂತೆ ಸ್ವಾವಲಂಬನೆಯ ಕೃಷಿದಾರಿಯಿಂದ ದೂರ ಸರಿದಾಗಿರುತ್ತದೆ.
ಪರಾವಲಂಬನೆಯೇ ಸವಾಲನ್ನು ಮೈಮೇಲೆ ಎಳೆದುಕೊಳ್ಳುವ ಒಂದು ವ್ಯವಸ್ಥೆ. ಸ್ವಾವಲಂಬನೆಯನ್ನು ಒದ್ದು ಪರಾವಲಂಬನೆಯನ್ನು ಅಪ್ಪಿಕೊಂಡರೆ!
ಕೃಷಿಭೂಮಿಯು ಪೂರ್ವಜರ ಕೊಡುಗೆಯಾಗಿರುವಂತೆಯೇ ಭವಿಷ್ಯದ ಪೀಳಿಗೆಯ ಹಕ್ಕೂ ಹೌದು. ತಮ್ಮದೇ ಮುಂಪೀಳಿಗೆಯ ಹಕ್ಕನ್ನು ಕಿತ್ತುಕೊಳ್ಳುವ ಬಗೆಯ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಯಾರಿಗೂ ಅಧಿಕಾರವೂ ಇಲ್ಲ, ಅದು ಬುದ್ಧಿವಂತಿಕೆಯೂ ಅಲ್ಲ.
ಪರಾವಲಂಬನೆಯ ಕೃಷಿವಿನ್ಯಾಸವನ್ನು ಪುನಾರೂಪಿಸುವ, ಮುಂಪೀಳಿಗೆಯನ್ನು ಕೃಷಿಕಾರ್ಯದಿಂದ ದೂರವಿರುವಂತೆ ಶಿಕ್ಷಣ-ಉದ್ಯೋಗದಲ್ಲಿ ತೊಡಗಿಸುವ ಕ್ರಮವೇ ಮುಂಪೀಳಿಗೆಗೆ ಬಗೆವ ದ್ರೋಹವಾಗಿದೆ; ಅದೆಷ್ಟೇ ಮೋಹಕವಾಗಿ ಕಂಡರೂ, ಅದನ್ನೆಷ್ಟೇ ವೈಯಕ್ತಿಕ ಹಕ್ಕೆಂದು ಸಮರ್ಥಿಸಿದರೂ. ಅದು ಆತ್ಮಹತ್ಯೆಗೆ ಸಮನಾಗಿಯೂ ಇದೆ ಎಂಬುದು ಇದೀಗ ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳಿಂದ ಖಚಿತವಾಗುತ್ತಿದೆ.
ಅಸಲಿಗೆ ಕೃಷಿಕರು ಯಾರು ಎನ್ನುವುದೂ ಒಂದು ಮುಖ್ಯ ಪ್ರಶ್ನೆಯೇ ಅಲ್ಲವೇ? ಕೃಷಿ ಮಾಡುವವರೇ, ಮಾಡಿಸುವವರೇ?
ಹೆಚ್ಚಿನ ಜಮೀನುದಾರರು ಕೃಷಿ ಮಾಡಿಸುವವರು. ನಿಜ ಕೃಷಿಕರಲ್ಲ. ಕೃಷಿಕಾರ್ಯವನ್ನು ಮಾಡಲಾರರು.
ಅಲ್ಲಿ ಕೃಷಿಕಾರ್ಯದಲ್ಲಿ ತೊಡಗಿದವರು ಕೂಲಿಯಾಳುಗಳು. ಅವರಿಗೆ ಕೃಷಿಕ್ಷೇತ್ರದಲ್ಲಿ ಕೆಲಸಮಾಡಲು ಗೊತ್ತಿರಬಹುದು. ಆದರೆ ಸ್ವಂತ ಯೋಜನೆ, ನಿರ್ಣಯ ಮಾಡಲಾರರು. ಹಾಗಾಗಿ ಇವರೂ ನಿಜ ಕೃಷಿಕರಲ್ಲ. ಆದರೆ ಕೃಷಿಕರಾಗುವ ಸಾಧ್ಯತೆ ಉಳ್ಳವರು.
ಕೃಷಿಕಾರ್ಯವನ್ನು ಮಾಡಿಸುವವರು ಮತ್ತು ಮಾಡಿಸಿಕೊಳ್ಳುವವರ ಸಂಘಾತದಿಂದ ಕೃಷಿವ್ಯವಸ್ಥೆಯೊಂದು ರೂಪುಗೊಂಡರೆ ಅದು ಎಲ್ಲೆಲ್ಲಿಗೆಲ್ಲ ಸಾಗೀತು ಎನ್ನುವುದಕ್ಕೆ ಈಗಿನ ಸನ್ನಿವೇಶವೊಂದು ಕೈಗನ್ನಡಿಯಂತಿದೆ.
ಇದು ಪೂರ್ಣಚಿತ್ರಣವಲ್ಲ, ಇದೂ ಒಂದು ಚಿತ್ರಣ.
ಸಲ್ಲದ ಚಿತ್ರಣ.
ಕೃಷಿಕಾರ್ಯದಲ್ಲಿ ತೊಡಗಿಸುವವರೂ ತೊಡಗಿಸಿಕೊಳ್ಳುವವರೂ ಪೇಟೆಸೇರಿಕೊಂಡ ಚಿತ್ರಣ. ಒಂದು ಸಲ್ಲದ ಕಾರ್ಯದಿಂದ ಮತ್ತೊಂದು ಸಲ್ಲದ ಕಾರ್ಯಕ್ಕೆ ಸರಿದುಕೊಂಡ ಚಿತ್ರಣ.
ಕೃಷಿಭೂಮಿಯನ್ನು ಉಳ್ಳವರೇ ಕೃಷಿಕಾರ್ಯವನ್ನೂ ಮಾಡಬೇಕು. ಸ್ವಾವಲಂಬನೆಯ ಬದುಕನ್ನು ರೂಪಿಸುವ ಕೃಷಿಕಾರ್ಯವನ್ನು ಮಾಡಬೇಕು. ಕೃಷಿಕಾರ್ಯವನ್ನು ಸ್ವಾವಲಂಬಿಯಾಗಿ ಮಾಡಬೇಕು. ಮುಂಪೀಳಿಗೆಯಲ್ಲಿಯೂ ಸ್ವಾವಲಂಬನೆಯ ಸ್ವಾಭಿಮಾನವನ್ನು ಉದ್ದೀಪಿಸಬೇಕು. ಕೃಷಿವ್ಯವಸ್ಥೆಯೊಂದು ಸದೈವ ಸಂಗತಗೊಳ್ಳುವ ಬಗೆಯಿದು.
ಯಾವುದೇ ವ್ಯವಸ್ಥೆಯನ್ನು ಸದಾಕಾಲವೂ ಸಂಗತಗೊಳ್ಳುವಂತೆ ಮಾಡಬೇಕಾದುದು ಅವಶ್ಯವೂ ಹೌದು, ಕರ್ತವ್ಯವೂ ಹೌದು.