ಬದುಕನ್ನು ಪ್ರೀತಿಸುವವ ಮೊದಲು ಬಿಡಬೇಕಾದುದು ವ್ಯಾಮೋಹವನ್ನು. ಆಗ ತನ್ನನ್ನು ಪ್ರೀತಿಸುವವರನ್ನೂ ಪ್ರೀತಿಸುವುದಾಗುತ್ತದೆ, ತನ್ನನ್ನು ಅರ್ಥಮಾಡಿಕೊಳ್ಳುವವರನ್ನೂ ಅರ್ಥಮಾಡಿಕೊಳ್ಳುವುದಾಗುತ್ತದೆ. ಯಾರನ್ನೋ ದೂರವಿಡುವುದು, ಯಾರನ್ನೋ ಹತ್ತಿರವಿಟ್ಟುಕೊಳ್ಳುವುದು ಇತ್ಯಾದಿ ಅಪಸವ್ಯಗಳು ಇಲ್ಲವಾಗುತ್ತವೆ.
ಅದೊಂದು ಮಲೆನಾಡಿನ ಪುಟ್ಟ ಹಳ್ಳಿ. ಒಂಟಿ ಮನೆಗಳು. ಅವು ಪರಸ್ಪರ ಕಣ್ಣಳತೆಯಲ್ಲೂ ಇಲ್ಲ, ಕೂಗಳತೆಯಲ್ಲೂ ಇಲ್ಲ.
ಅದೊಂದು ಮನೆಯ ಯಜಮಾನರಿಗೆ ಇಬ್ಬರು ಮಕ್ಕಳು. ದೊಡ್ಡವ ತುಂಬ ಓದಿ ದೂರದ ಮಹಾನಗರದಲ್ಲಿ ಕೈತುಂಬಾ ಪಗಾರದ ನೌಕರಿ ಮಾಡಿಕೊಂಡಿದ್ದಾನೆ. ನಿವೃತ್ತಿ ತನಕವಂತೂ ಐಷಾರಾಮಿ ಬದುಕನ್ನು ಬಾಳಲು ಅಡ್ಡಿಯಿಲ್ಲ. ಅನಂತರವೂ ಬರುವ ರೊಕ್ಕವೂ ಕಡಮೆಯದೇನಲ್ಲ.
ಚಿಕ್ಕವ ಅಷ್ಟೇನೂ ಓದಹೋಗಲಿಲ್ಲ. ಹಾಗಾಗಿ ಊರು ಬಿಡಲಿಲ್ಲ! ಏಳೆಂಟು ಮೈಲಿ ದೂರದಲ್ಲಿರುವ ಪುಟ್ಟ ಪೇಟೆಯಲ್ಲಿ ಪುಟ್ಟ ಅಂಗಡಿಯ ಮೂಲಕ ತನ್ನ ಆರ್ಥಿಕ ಬದುಕಿಗೆ ಒಂದು ಅಡಿಪಾಯ ಹಾಕತೊಡಗಿದ. ಅಡಿಪಾಯ ಗಟ್ಟಿಯಾಗಿತ್ತು. ಅದರ ಮೇಲೆ ದೊಡ್ಡ ಕಟ್ಟೋಣವೇ ಎದ್ದುನಿಲ್ಲುವಂತಾಯಿತು. ಅಂಗಡಿ ಊರಿಗೇ ದೊಡ್ಡದೆನಿಸಿತು. ಅಂಗಡಿಯಷ್ಟೆ ಅಲ್ಲ, ಈತನೂ ಊರವರಿಗೆಲ್ಲ ಬೇಕಾದವನಾದ.
ಉತ್ತಮ ವ್ಯಾಪಾರದ ಮೂಲಕ ಅಂದರೆ ನ್ಯಾಯಯುತ ದಾರಿಯಿಂದಾಗಿ ಊರಿಗೆ ಬೇಕಾದವನಾದ. ಕಡಮೆ ಕಲಿತವನೆಂಬ ಕಾರಣಕ್ಕಾಗಿ ಮನೆಗೆ ಅಷ್ಟಕ್ಕಷ್ಟೆ ಎಂಬಂತಾದ. ಆದರೆ ಮನೆಗೆ ನಿತ್ಯ ಬಂದುಹೋಗಿಕೊಂಡು ತಾಯ್ತಂದೆಯರ ಸೇವೆಯನ್ನು ಅಷ್ಟಿಷ್ಟು ಮಾಡುವಂತಾದ. ಮನೆಗೆಲಸಕ್ಕೂ ಈತನೇ ಅನಿವಾರ್ಯವಾದ.
ಊರಿಗೆ ಬೇಕಾದವನಂತೆ ಬದುಕುವುದು ಸುಲಭ. ಮನೆಗೆ ಬೇಕಾದವನಂತೆ ಬದುಕುವುದು ಕಷ್ಟ.
ಯಜಮಾನರಿಗೆ ಎಕರೆಗಟ್ಟಲೆ ಜಮೀನಿದೆ. ಮಕ್ಕಳಿಬ್ಬರಿಗೆ ಕೈತುಂಬಾ ರೊಕ್ಕ ಸಂಪಾದನೆ ಇದೆ. ಇದ್ದ ಮನೆ ಹಳೆಯದೆನಿಸಿತು. ಹೊಸಮನೆಗೆ ಅಡಿಪಾಯ ಹಾಕೋಣವಾಯಿತು.
ಈಗ ಇಬ್ಬರು ಮಕ್ಕಳಲ್ಲಿ ಒಂದು ಅಭಿಪ್ರಾಯಭೇದ; ಮನೆಯ ವಿನ್ಯಾಸ ಹೀಗಿರಲಿ, ಹಾಗಿರಲಿ. ನಗರದಲ್ಲಿರುವವನಿಗೆ ಆಧುನಿಕ ವಿನ್ಯಾಸದ ವ್ಯಾಮೋಹ. ಹಳ್ಳಿಯಲ್ಲಿರುವವನಿಗೆ ತನ್ನ ಅಂಗಡಿ ಮತ್ತು ಕೃಷಿ ಬದುಕಿನ ಲೆಕ್ಕಾಚಾರ.
ನಿರ್ಣಯ ಯಜಮಾನರದ್ದಾಗಿತ್ತು. ಅವರು ತಮಗೆ ಅಧಿಕ ಪ್ರೀತಿಯಿದ್ದ ದೊಡ್ಡವನ ಅಭಿಪ್ರಾಯದಂತೆ ಮನೆಕಟ್ಟಿಸಿದರು. ಅದರಲ್ಲಿರಬೇಕಾದವ ಹಳ್ಳಿಯಲ್ಲಿರುವ ಚಿಕ್ಕವ.
ವಯಸ್ಸಿನಲ್ಲಿ ಸರಿ, ಆದರೆ ಎಲ್ಲದರಲ್ಲಿಯೂ ಹಳ್ಳಿಯವರು ಚಿಕ್ಕವರು ಎಂದು ಭಾವಿಸುವುದು ಸರಿಹೋಗದು.
ನಗರದವರದೇನೋ ಒಂದು ಪಾಡೆನ್ನೋಣ, ಹಳ್ಳಿಯವರೇ ಹಳ್ಳಿಯವರನ್ನು ಚಿಕ್ಕವರೆಂದುಕೊಂಡರೆ?
ಮನೆ ತಾನು ಮುಂದೆ ನಿರ್ವಹಿಸಬೇಕಾದ ಕೃಷಿಕಾರ್ಯಕ್ಕೂ ಅನುಕೂಲವಾಗಿಲ್ಲ, ತನ್ನ ಅಂಗಡಿಗಂತೂ ಏನೇನೂ ಅನುಕೂಲವಿದ್ದಂತಿಲ್ಲ, ದೂರ ಬೇರೆ ಎಂದು ಹಳ್ಳಿಯವ ಚಿಂತಿಸಿದ. ಕಾಲಕಳೆದಂತೆ, ಅಂಗಡಿ ಬದಿಯಲ್ಲೇ ಒಂದು ಮನೆಯನ್ನು ಹೊಂದುವುದು ಎಂಬ ಅನಿವಾರ್ಯ ನಿರ್ಣಯವನ್ನು ತಲಪಿದ. ಅದರಂತೆ ತನಗನುಕೂಲವಾಗುವಂತೆ ಒಂದು ಮನೆ ಕಟ್ಟಿಸಿದ.
ಅಂಗಡಿಪಕ್ಕವೇ ಮನೆ. ಅನುಕೂಲ. ಸಮಯವೂ ಸಾಕಷ್ಟು ಸಿಗುತ್ತದೆ ಎಂಬ ಲೆಕ್ಕಾಚಾರ ಇತ್ತು. ಏನಿದ್ದರೂ ಗಿರಾಕಿಗಳು ಬಂದಾಗ ಸಿದ್ಧವಿರಬೇಕಷ್ಟೆ. ಅವರು ಅದು ಬೇಕು ಇದು ಬೇಕೆಂದು ಬೆಳ್ಳಂಬೆಳಗ್ಗೆಯೇ ಮನೆಬಾಗಿಲು ತಟ್ಟತೊಡಗಿದರು. ಪಕ್ಕದಲ್ಲೇ ಇರುವುದರಿಂದ ಕೊಡುವುದು ಅನಿವಾರ್ಯವಾಯಿತು. ಬೆಳಗ್ಗೆ ಆರರಿಂದ ರಾತ್ರಿ ಎಂಟೊಂಬತ್ತರವರೆಗೆ ಬದುಕಿಗೆ ಅಂಗಡಿ ಅಂಟಿಕೊಂಡಿತು. ತಂದೆತಾಯಂದಿರ ಸಹಾಯಕ್ಕೆ ಹೋಗಲು ಸಮಯ ಇಲ್ಲವಾಯಿತು.
ಮನೆಕಡೆ ತಂದೆತಾಯಿಗಳಿಬ್ಬರೇ ಉಳಿಯುವಂತಾದರು. ಇಳಿವಯಸ್ಸಿನಲ್ಲಿಯೂ ಮಕ್ಕಳಿದ್ದೂ ಎಕರೆಗಟ್ಟಲೆ ತೋಟವನ್ನು ಅವರೇ ನಿರ್ವಹಿಸಬೇಕಾಯಿತು.
ದೂರದಲ್ಲಿರುವ ಮಗ ಬರುವುದಿಲ್ಲ, ಊರಲ್ಲಿರುವ ಮಗ ಸಿಗುವುದಿಲ್ಲ ಎಂಬ ಪರಿಸ್ಥಿತಿ ಈಗ ಯಜಮಾನರದು.
ಯಾಕೋ ದೂರದಲ್ಲಿರುವವರ ಮೇಲೆ ಪ್ರೀತಿ ಅಧಿಕ. ಹತ್ತಿರದಲ್ಲಿರುವವರು ಕಾಲಕಸದಂತೆ.
ಭಾರೀ ಓದಿ ತನಗರ್ಥವಾಗದಂತೆ ಮಾತನಾಡುವವನ ಮೇಲೆ ವಿಶೇಷ ಮೋಹ. ತನ್ನ ಕಷ್ಟವರಿತು ಸಹಕರಿಸುವವನ ಮೇಲೆ ಯಾಕೋ ಸದಾ ಆಕ್ಷೇಪದ ಧ್ವನಿ.
ತಾನು ‘ಪ್ರೀತಿ’ಸುವವ ತನ್ನನ್ನು ಪ್ರೀತಿಸುವುದಿಲ್ಲ, ತನ್ನನ್ನು ಪ್ರೀತಿಸುವವನನ್ನು ತಾನು ಪ್ರೀತಿಸುವುದಿಲ್ಲ ಎಂಬುದು ಬದುಕಿನ ಒಂದು ವಿಪರ್ಯಾಸ.
ಇದರಿಂದಾಗಿ; ತನ್ನ ಕಷ್ಟಕ್ಕೊದಗದ ದೂರದಲ್ಲಿರುವವನನ್ನು ಮಾನಸಿಕವಾಗಿ ಹತ್ತಿರವಿಟ್ಟುಕೊಂಡು ತನ್ನ ಕಷ್ಟಕ್ಕೊದಗುವ ಹತ್ತಿರದಲ್ಲಿರುವವನನ್ನು ದೂರಮಾಡುವ ಸ್ಥಿತಿ.
ವಿಪರ್ಯಾಸವು ವಿಪರ್ಯಾಸವನ್ನೇ ಹುಟ್ಟುಹಾಕುತ್ತದೆ.
ಇಲ್ಲಿ ಇಂಥ ವಿಪರ್ಯಾಸಕ್ಕೆ ವ್ಯಾಮೋಹವೇ ಕಾರಣ ತಾನೇ!
ಅಂದರೆ; ಯಜಮಾನರಿಗಿದ್ದದ್ದು ಪ್ರೀತಿಯಲ್ಲ, ವ್ಯಾಮೋಹ.
ಪ್ರೀತಿಗೆ ಆಯ್ಕೆಯಿಲ್ಲ, ವ್ಯಾಮೋಹಕ್ಕಿದೆ.
ಆಯ್ಕೆಯಿಲ್ಲದ ದಾರಿ ಯಾರಿಗೂ ಬೇಡ! ಆಯ್ಕೆಯ ದಾರಿಯಲ್ಲಿ ಕೊಚ್ಚಿಕೊಂಡು ಹೋಗುವುದರಲ್ಲಿಯೆ ಎಲ್ಲರಿಗೂ ಖುಷಿ. ಆದರೆ ಇದು ಕೊನೆಗೊಳ್ಳುವುದು ದುಃಖದಲ್ಲಿಯೇ.
ಆಯ್ಕೆಯ ವ್ಯಾಮೋಹಕ್ಕೆ ಅಂಟಿಕೊಂಡು ಆಯ್ಕೆಯಿಲ್ಲದ ಪ್ರೀತಿಯನ್ನು ಬದುಕುತ್ತಿದ್ದೇವೆ ಎಂದೇ ಅಂದುಕೊಳ್ಳುವುದು ಮನುಷ್ಯ ಪಾಡಿರಬೇಕು. ಪ್ರೀತಿ ಮತ್ತು ವ್ಯಾಮೋಹದ ನಡುವಿನ ಅಂತರ ತೀರಾ ತೆಳುವಾದುದಷ್ಟೆ.
ಬದುಕನ್ನು ಪ್ರೀತಿಸುವವ ಮೊದಲು ಬಿಡಬೇಕಾದುದು ವ್ಯಾಮೋಹವನ್ನು. ಆಗ ತನ್ನನ್ನು ಪ್ರೀತಿಸುವವರನ್ನೂ ಪ್ರೀತಿಸುವುದಾಗುತ್ತದೆ, ತನ್ನನ್ನು ಅರ್ಥಮಾಡಿಕೊಳ್ಳುವವರನ್ನೂ ಅರ್ಥಮಾಡಿಕೊಳ್ಳುವುದಾಗುತ್ತದೆ. ಯಾರನ್ನೋ ದೂರವಿಡುವುದು, ಯಾರನ್ನೋ ಹತ್ತಿರವಿಟ್ಟುಕೊಳ್ಳುವುದು ಇತ್ಯಾದಿ ಅಪಸವ್ಯಗಳು ಇಲ್ಲವಾಗುತ್ತವೆ.
ಬದುಕನ್ನು ಪ್ರೀತಿಸಿದವನನ್ನು ಬದುಕು ಪ್ರೀತಿಸುತ್ತದೆ. ಮೋಹಿಸಿದವನನ್ನು ತನ್ನ ಬಲೆಗೆ ಕೆಡಹಿಬಿಡುತ್ತದೆ.
ಆಯ್ಕೆಯ ವ್ಯಾಮೋಹದಿಂದ ಭೇದಬುದ್ಧಿ ನಿಶ್ಚಿತ. ಆಗ ಬದುಕಿನಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯವು ಸ್ವವಿರೋಧಿಯಾಗಿಯೂ ಪರಿಣಮಿಸಬಲ್ಲುದು. ಆಯ್ಕೆಯಿಲ್ಲದ ಪ್ರೀತಿ ಎಲ್ಲರ ಮೇಲೆ ಸಮನಾಗಿರುತ್ತದೆ. ಅಂಥ ಪ್ರೀತಿಯಿಂದ ಸ್ವೀಕರಿಸುವ ನಿರ್ಣಯವು ಸರ್ವಹಿತವನ್ನು ಸಾಧಿಸುವುದು ನಿಃಸಂಶಯ.
ಎಲ್ಲರನ್ನೂ ಪ್ರೀತಿಸಿದಾಗ ಬದುಕು ಹಸನಾಗುವುದೂ ಖಚಿತವೇ.