ಮೂಲವ್ಯಾಧಿ
`ಬಾಳು ನಶ್ವರ,
ಕೀರ್ತಿ ಅಮರ…..’
ಇತ್ಯಾದಿ, ಇತ್ಯಾದಿ
ನುಡಿಮುತ್ತುಗಳ
ಕೇಳಿ, ಓದಿ,
ಏನಾದರೂ ಸಾಧಿಸಲೇಬೇಕೆಂಬ
ನಿರ್ಧಾರ ಮೂಡಿ,
ಏನು ಮಾಡುವುದೆಂದು
ತೋಚದೆ ಒದ್ದಾಡಿ,
ಚಿಂತಿಸುತ್ತ ಕೂತ;
ಏನೇನೂ ಮಾಡದೆ
ಕೂತಲ್ಲೆ ಕೂತ.
ಹೀಗಾಗಿ,
ಈಗೀಗ
ವಿಪರೀತ
ತಲೆ ಸಿಡಿತ;
ನರ ಬಿಗಿತ;
ವಾತ, ಪಿತ್ಥ, ನಾತ.
ಡಾಕ್ಟರರು ಹೇಳಿದರು-
ಇದು ಮೂಲವ್ಯಾಧಿ.
ಮುಂದೆ ಸಾಗಲೇ ಇಲ್ಲ
ಸಾಧನೆಯ ಹಾದಿ!
– ಎಚ್. ಡುಂಡಿರಾಜ್
ಲೇಖಕರು ಪ್ರಸಿದ್ಧ ಕವಿಗಳು ಹಾಗೂ ಕಾರ್ಪೊರೇಶನ್ ಬ್ಯಾಂಕಿನಲ್ಲಿ ಹಿರಿಯ ಪ್ರಬಂಧಕರು
ಇಮೇಲ್: dundiraj@corp
ಎಂಥ ಚೆಂದ!
ಮುಖದ ಸುಕ್ಕು ಮಡಿಕೆಗಳ ಬಿಡಿಸಿ
ನಯವಾಗಿ ಸವರಿ
ಇಸ್ತ್ರಿ ಮಾಡಿ
ಗರಿ ಗರಿ ಮಾಡುವಂತಿದ್ದರೆಷ್ಟು ಚೆನ್ನ!
ಎದೆಯೊಳಗೆ ಮಡುಗಟ್ಟಿ ನಿಂತ
ಕಹಿ ನೆನಪುಗಳ ಮೀಟಿ
ಬೊಗಸೆಗಟ್ಟಲೆ ಸಿಹಿಗನಸ
ಸುರಿಯುವಂತಿದ್ದರೆಷ್ಟು ಚೆನ್ನ!
ಮೈ ತುಂಬಾ
ಕಲೆತು-ಕೊಳೆತಿರುವ
ನಂಜು ನರಕಗಳ
ಭಂಗು ಬರೆಗಳ
ರಬ್ಬರಿಂದಳಿಸಿ
ರಂಗೋಲೆ ಚಿತ್ತಾರ
ಬಿಡಿಸುವಂತಿದ್ದರೆಷ್ಟು ಚೆನ್ನ!
ಕಳೆದ ವರುಷಗಳ ಹೊಸಕಿ
ಹಗಲು ರಾತ್ರಿಗಳ ನಿಲಿಸಿ
ಬಿಸಿಲು-ಮಳೆಗಳ ಎತ್ತಂಗಡಿಸಿ
ನಿತ್ಯ ವಸಂತ
ಮಧುಮಾಸವಾಗಿದ್ದರೆಷ್ಟು ಚೆನ್ನ!
ಪ್ರೀತಿ ಯೌವನ ಶಿಲ್ಪ
ಗೊಮ್ಮಟ ಶಿಲೆಯಾಗಿ
ಅದರ ಹೊಕ್ಕಳ ಕಲೆಯಾಗಿ
ಕಾಲ ಕಾಲಕೂ
ಉಳಿಯುವಂತಿದ್ದರೆಷ್ಟು ಚೆನ್ನ!
ಕಾಲ ಸುತ್ತಿಕ್ಕುವ
ಸರಪಳಿಗಳ ಕಿತ್ತೊಗೆದು
ಬಾನ ಬಯಲಲಿ
ಯಾವ ತೊಂಗು ತೊಡಕಿಲ್ಲದೆ
ಹಂಗಿಲ್ಲದ ಹಾರುಹಕ್ಕಿಯಾಗಿ
ಹೊಳೆವ ಚಿಕ್ಕೆಯಾಗಿದ್ದರೆಷ್ಟು ಚೆನ್ನ!
ದುಃಖ-ದಾರಿದ್ರ್ಯ
ಕಷ್ಟ-ಕಾರ್ಪಣ್ಯ
ವಿರಹ-ವೇದನೆಗಳೆಂಬ
ಶಬ್ದಗಳ ಹೆಸರಳಿಸಿ
ನಿತ್ಯ ನೂತನ ಬಾಳು
ಚಿರಂಜೀವಿಯಾಗಿದ್ದರೆ
ಅದೆಷ್ಟು ಚೆನ್ನ!
– ವೈ.ಕೆ. ಸಂಧ್ಯಾಶರ್ಮ
ಲೇಖಕಿ ಪ್ರಸಿದ್ಧ ಬರಹಗಾರ್ತಿ ಹಾಗೂ ಗೃಹಿಣಿ
ಇಮೇಲ್: : [email protected]
ದೊಡ್ಡದು
ನಿನ್ನ ದೇಹ ದೊಡ್ಡದೊ,
ದೇಹದೊಳಗಿನ ಪ್ರಾಣ ದೊಡ್ಡದೊ?
ನಿನ್ನ ಮೋಹ ದೊಡ್ಡದೊ,
ಮರುಳಾಗಿಸುವ ರೂಪ ದೊಡ್ಡದೊ?
ನಿನ್ನ ಕಣ್ಣು ದೊಡ್ಡದೊ,
ಬೀಳುವ ಕನಸು ದೊಡ್ಡದೊ?
ನಿನ್ನ ಜೀವ ದೊಡ್ಡದೊ,
ಸಾಕುವ ಪಂಚಭೂತಗಳು ದೊಡ್ಡವೊ?
ನಿನ್ನ ಅರಿವು ದೊಡ್ಡದೊ,
ಅರಿವಿನ ಮಹಿಮೆ ದೊಡ್ಡದೊ?
ನಿನ್ನ ಆಸ್ತಿ ದೊಡ್ಡದೊ,
ಮಲಗುವ ಮಣ್ಣು ದೊಡ್ಡದೊ?
– ಜರಗನಹಳ್ಳಿ ಶಿವಶಂಕರ್
ಆಚಾರ
ಅಕ್ಷರಕ್ಕೆ:
ಆಡಳಿತ ಅಧಿಕಾರ
ಹಣಕ್ಕೆ:
ಸಿಂಹಾಸನ ರಾಜ್ಯಭಾರ
ದುಡಿತಕ್ಕೆ:
ಬೆವರಿನ ಸತ್ಕಾರ
ಇದು ಲೋಕದ
ಇಂದಿನ ಆಚಾರ!
– ಜರಗನಹಳ್ಳಿ ಶಿವಶಂಕರ್
ಬಲಾಢ್ಯ
ಹಾವಿನೊಳಗು ಜೀವವಿದೆ
ಮನುಷ್ಯನಲ್ಲೂ ಜೀವವಿದೆ
ಜೀವ ಜೀವಗಳ
ಕೊಲ್ಲಬಲ್ಲ ಶಕ್ತಿ
ವಿಷದೊಳಗಿದೆ!
– ಜರಗನಹಳ್ಳಿ ಶಿವಶಂಕರ್
ಹಿರಿಮೆ
ಮಾನವನು ಗುಣಗಳಿಂ ಮೇಲ್ಮೆಯನು ಪಡೆಯುವನು
ಎತ್ತರದ ಪದವಿಗಳು ಹಿರಿಮೆಯಲ್ಲ;
ಉಪ್ಪರಿಗೆಯ ತುದಿಯಲ್ಲಿ ಕಾಗೆ ಕುಳಿತಿದ್ದರೇಂ
ಅದಕೆ ಹೆಸರಿಸುವರೇ ಗಿಡುಗನೆಂದು?
-ಅಮ್ಮೆಂಬಳ ಶಂಕರನಾರಾಯಣ
ಕಂಡದ್ದು-ಕಾಣದ್ದು
ಪ್ರಸಿದ್ಧವಾಗಲಿ ಎಂದು
ಕಥೆ-ಕವನ ಬರೆದೆ,
ಪ್ರಕಟವಾಗಲೆ ಇಲ್ಲ;
ಹೊಗಳಿ ಗೌರವಿಸಲಿ ಎಂದು
ನಡೆಸಿದೆ ಜೀವನ,
ಯಾರೂ ಗಮನಿಸಲೆ ಇಲ್ಲ;
ಅಂದವಾಗುವೆ ಎಂದು
ಸಿಂಗರಿಸಿಕೊಂಡೆ,
ಯಾರೂ ನೋಡಲೇ ಇಲ್ಲ;
ಹರಿಯುವ ನದಿಗಳು
ಫಲಿಸುವ ಗಿಡ-ಮರಗಳು
ಕರೆಯುವ ಗೋವುಗಳು –
ಏಕೆ
ಕಾಣುವುದೆ ಇಲ್ಲ !
– ಕೇಬಿ
ಭ್ರಾಂತಿ
ಸಾರರಹಿತವಾದ ಜಗದಿ
ಸುಖದ ಭ್ರಾಂತಿ ಜನರಿಗೆ;
ಬೆರಳ ಸವಿದು ಜೊಲ್ಲು ರಸದಿ
ಮೊಲೆಯ ಭ್ರಮೆಯು ಮಗುವಿಗೆ.
-ಅಮ್ಮೆಂಬಳ ಶಂಕರನಾರಾಯಣ