‘ಬದುಕು-ಬೆಳಕು’ ಮಾಲಿಕೆಯ ವ್ಯಕ್ತಿಪರಿಚಯ ಪುಸ್ತಕಗಳ ರಚನೆಯಿಂದ ಕನ್ನಡ ಸಾರಸ್ವತಲೋಕಕ್ಕೆ ತಮ್ಮನ್ನು ಗುರುತಿಸಿಕೊಂಡಿರುವ ಮ.ಸು. ಮನ್ನಾರ್ ಕೃಷ್ಣರಾವ್ ಅವರು ‘ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ ಕೃತಿರಚನೆಯ ಮೂಲಕ ಮತ್ತೆ ನಮ್ಮ ಗಮನ ಸೆಳೆದಿದ್ದಾರೆ.
ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ (ಜೀವನ ಚರಿತ್ರೆ);
ಲೇಖಕರು : ಮ.ಸು. ಮನ್ನಾರ್ ಕೃಷ್ಣರಾವ್;
ಪ್ರಕಾಶನ : ವಿದ್ಯಾಶ್ರೀ ಪ್ರಕಾಶನ, ೯೮೪/೧, `ಮಾತೃಶ್ರೀ’, ೧೧ನೇ `ಎ’ ಮುಖ್ಯರಸ್ತೆ, ೩ನೇ ವಿಭಾಗ, ರಾಜಾಜಿನಗರ, ಬೆಂಗಳೂರು – ೫೬೦ ೦೧೦; ಮೊಬೈಲ್ : ೯೮೮೦೦ ೨೦೮೮೮
ಪುಟಗಳು : ೩೧೬; ಬೆಲೆ : ರೂ. ೨೨೦
ಮುನ್ನೂರು ಪುಟಗಳ ಈ ಹೊತ್ತಗೆ, ಘನಶ್ಯಾಂ ದಾಸ್ ಬಿರ್ಲಾ ಅವರ ಜೀವನಚರಿತ್ರೆಯನ್ನು ಮಾತ್ರ ಹೇಳುವುದಿಲ್ಲ. ಬಿರ್ಲಾ ಅವರನ್ನು ಪರಿಚಯಿಸುವುದರ ಜೊತೆಜೊತೆಗೇ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ಹಲವು ಪ್ರಮುಖ ಘಟನೆಗಳನ್ನು ದಾಖಲಿಸುತ್ತ ಹೋಗುತ್ತದೆ. ಬಿರ್ಲಾ ಅವರು ಭಾರತದ ಯಶಸ್ವಿ ಉದ್ಯಮಿ ಮಾತ್ರ ಎಂದು ಬಹುತೇಕರು ಭಾವಿಸಿದ್ದಾರೆ. ಅವರು ಸ್ವಸ್ಥಭಾರತದ ಕನಸು ಕಂಡಿದ್ದ ಒಬ್ಬ ಅಪ್ಪಟ ದೇಶಪ್ರೇಮಿಯೂ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಗಾಂಧಿಜೀ ಸೇರಿದಂತೆ ಹಲವು ರಾಷ್ಟ್ರನಾಯಕರಿಗೆ ಆರ್ಥಿಕ ಸಹಾಯವನ್ನು ಮಾಡಿದ್ದ ಮಹಾದಾನಿಯೂ, ಪರಸ್ಪರ ಸ್ನೇಹವೃದ್ಧಿಗಾಗಿ ದೇಶ-ದೇಶಗಳ ನಡುವೆ ಸಂಧಾನ ನಡೆಸಿ ಯಶಸ್ವಿಯಾದ ಉತ್ತಮ ಸಂಧಾನಕಾರನೂ ಆಗಿದ್ದರು ಎಂಬ ಕುತೂಹಲಕಾರಿ ಅಂಶಗಳನ್ನು ಲೇಖಕ ಕೃಷ್ಣರಾವ್ ಅವರು ಈ ಪುಸ್ತಕದಲ್ಲ್ಲಿ ವಿಶದವಾಗಿ ವಿವರಿಸಿದ್ದಾರೆ.
ಮಾರ್ವಾರಿ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿಯೊಬ್ಬನ ವಿಕಾಸ ಮತ್ತು ವಿವೇಕವು ಒಂದು ದೇಶದ ವಿಕಾಸಕ್ಕೆ ಹೇಗೆ ಕಾರಣವಾಗಬಲ್ಲದು ಎನ್ನುವುದನ್ನು ಪ್ರಸ್ತುತ ಕೃತಿ ಸಾದ್ಯಂತವಾಗಿ ವಿವರಿಸುತ್ತದೆ. ಬಿರ್ಲಾ ಅವರು ಕಟ್ಟಿದ ವಿಜ್ಞಾನಮಂದಿರಗಳು, ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ವ್ಯೆದ್ಯಕೀಯ ಸೌಲಭ್ಯಗಳು, ಯಾತ್ರಿಕರ ತಂಗುದಾಣಗಳು, ದೇವಸ್ಥಾನಗಳು ಮತ್ತು ಸುಧಾರಿತ ರಸ್ತೆಗಳೇ ಬಿರ್ಲಾ ಅವರಿಗಿದ್ದ ಸಾಮಾಜಿಕ ಪ್ರೀತಿ ಮತ್ತು ಬದ್ಧತೆಯನ್ನು ಪರಿಚಯಿಸುತ್ತವೆ. ಬಿರ್ಲಾ-ಚರ್ಚಿಲ್ ನಡುವೆ ನಡೆದ ಮಾತುಕತೆಯ ವಿವರ ದಾಖಲಿಸುವ ಮೂಲಕ ಭಾರತದ ಸ್ವಾತಂತ್ರ್ಯ ವಿಷಯವಾಗಿ ಚರ್ಚಿಲ್ ಅವರು ವಿರೋಧಿ ಮನಃಸ್ಥಿತಿ ಹೊಂದಿದ್ದರೆಂಬ ಅಪಪ್ರಚಾರ ತೊಡೆದುಹಾಕುವ ಪ್ರಯತ್ನವನ್ನು ಈ ಪುಸ್ತಕ ಮಾಡಿದೆ.
ತಮ್ಮ ವಿವೇಚನೆಗೆ ದಕ್ಕಿದ ವಿವರ ಮಾತ್ರ ಉಲ್ಲೇಖಿಸಲು ಹೋಗದ ಲೇಖಕರು, ಬಿರ್ಲಾ ಅವರನ್ನು ಪರಿಚಯಿಸುವ ಹಲವು ಆಕರಗ್ರಂಥಗಳ ನೆರವು ಪಡೆದು ಸದರಿ ಕೃತಿಯನ್ನು ಸಾಧ್ಯವಾದಷ್ಟು ಸಮಗ್ರ ಮತ್ತು ಸಂಗ್ರಹಯೋಗ್ಯವಾಗಿಸಿದ್ದಾರೆ. ಮೂಲ ಕೃತಿಕಾರರನ್ನು ತಮ್ಮ ನುಡಿಗಳಲ್ಲಿ ಸ್ಮರಿಸಿಕೊಂಡಿದ್ದಾರೆ. ಗಾಂಧಿಜೀ ಸೇರಿದಂತೆ ಜವಾಹರಲಾಲ್ ನೆಹರು, ಮದನ ಮೋಹನ ಮಾಳವೀಯ, ಲಾಲಾ ಲಜಪತರಾಯ್, ಬಾಬು ರಾಜೇಂದ್ರ ಪ್ರಸಾದ್, ಸರದಾರ ವಲ್ಲಭಭಾಯಿ ಪಟೇಲ್, ಸಿ. ರಾಜಗೋಪಾಲಚಾರಿ (ರಾಜಾಜಿ) ಮತ್ತು ಜಮನ್ಲಾಲ್ ಬಜಾಜ್ ಅವರೊಂದಿಗಿನ ಬಿರ್ಲಾ ಒಡನಾಟ ಹಾಗೂ ರಾಷ್ಟ್ರನಾಯಕರಿಗೆ ಬಿರ್ಲಾ, ಬಿರ್ಲಾ ಅವರಿಗೆ ರಾಷ್ಟ್ರನಾಯಕರು ಪರಸ್ಪರ ಬರೆದ ಅಪರೂಪದ ಪತ್ರಗಳನ್ನೂ ಈ ಕೃತಿಯಲ್ಲಿ ದಾಖಲಿಸಲಾಗಿದೆ. ಈ ಪತ್ರಗಳು ಕೇವಲ ಖಾಸಗಿ ಉಭಯಕುಶಲ ವಿಚಾರಿಸುವ ಪತ್ರಗಳಾಗಿರದೆ, ಭಾರತದ ಅಂದಿನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಯನ್ನು ಬಿಂಬಿಸುತ್ತವೆ. ಜೊತೆಗೆ, ಉದ್ಯಮಿಯೊಬ್ಬ ತನ್ನ ದೇಶದ ಸ್ವಾತಂತ್ರ್ಯಕ್ಕಾಗಿ ಹೇಗೆ ತುಡಿದ ಮತ್ತು ದುಡಿದ ಎಂಬುದನ್ನೂ ಸಾರುತ್ತವೆ.
ಐರೋಪ್ಯ ವರ್ತಕರ ಸರ್ವಸ್ವಾಮ್ಯವನ್ನು ತಹಬಂದಿಗೆ ತರಲು ಬಿರ್ಲಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಐರೋಪ್ಯ ಬಂಡವಾಳಶಾಹಿಗಳ ಹಿಡಿತದಲ್ಲಿದ್ದ ಕೆಲವು ಪತ್ರಿಕೆಗಳನ್ನು ಬಿರ್ಲಾ ಖರೀದಿಸಿ, ಅದೇ ಪತ್ರಿಕೆಗಳಲ್ಲಿ ಐರೋಪ್ಯ ವರ್ತಕರ ಪ್ರಭುತ್ವ-ದಬ್ಬಾಳಿಕೆಯನ್ನು ಪ್ರಶ್ನಿಸುವ, ಪ್ರತಿಭಟಿಸುವ ಧೈರ್ಯ ತೋರಿದರು. ಐರೋಪ್ಯ ಒಡೆತನದ ಪತ್ರಿಕೆ ಖರೀದಿಸುವುದೇ ಆ ದಿನಗಳಲ್ಲಿ ದೊಡ್ಡ ಸಾಹಸವಾಗಿತ್ತು. ಇನ್ನು, ಅವರ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿ ಬದುಕಿ ಉಳಿಯುವುದು ಅಸಾಧ್ಯವಾಗಿತ್ತು. ಈ ಎಲ್ಲ ಸವಾಲುಗಳನ್ನು ಬಿರ್ಲಾ ಅವರು ಎದುರಿಸಿ ಯಶಸ್ವಿಯಾಗಿದ್ದರು. ಬಿರ್ಲಾ ಅವರ ಬದುಕಿನ ಇನ್ನೂ ಹಲವು ರೋಚಕ ಸಂಗತಿಗಳನ್ನು ತಿಳಿಯಬೇಕಾದರೆ ‘ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ ಪುಸ್ತಕವನ್ನು ಓದಲೇಬೇಕು.
Comments are closed.