ಅಯ್ಯಾ
ಭಾರತದ ಜನಕೋಟಿಯ
ಶೇಕಡಾ ತೊಂಬತ್ತರಲ್ಲಿ ಒಬ್ಬನೇ,
ಕರಿಯನೇ, ಕ್ಯಾತನೇ ಅಥವಾ ಅರೆಹೊಟ್ಟೆ ಸುಬ್ಬನೇ,
ಭಾರತದ ಅಕ್ಷಿಯೇ,
ನಿರಕ್ಷರಕುಕ್ಷಿಯೇ,
ಇದು ನಿನಗಾಗಿ ಬರೆದ ಕವಿತೆ,
ನಿನ್ನ ಗುಣಗಾನ, ಉದ್ಧಾರಕ್ಕಾಗಿ. ತಿಳಿಯಿತೇ?
ತಿಳಿಯಲಿಲ್ಲವೇ? ಅಡ್ಡಿಯಿಲ್ಲ.
ಶತಶತಮಾನಗಳಿಂದ ಅಕ್ಷರ ಬಲ್ಲ
ನಮ್ಮಂಥವರ ಮಾತ ನಂಬುತ್ತಲೇ ಬಂದಿರುವೆಯಲ್ಲ,
ಈಗಲೂ ನಂಬು.
ನೀನೇ ನಮ್ಮ ತಂದೆ, ನಿನ್ನಿಂದಲೇ ನಾವು.
ನೀ ಕೊಟ್ಟ ವಿರಾಮದಿಂದಲೇ ಈ ಸಾಹಿತ್ಯ, ಸಂಗೀತ, ಸಂಸ್ಕೃತಿ ಇತ್ಯಾದಿ.
ನೀ ಕೊಟ್ಟ ವೋಟಿನಿಂದ ಈ ರಾಜಕಾರಣ, ಈ ವೈಭವ, ಈ ಗಾದಿ.
ನೀನೆ ಕಣಾ ನಮ್ಮ ದೇಶದ ಬೆನ್ನೆಲುಬು.
ಆದ್ದರಿಂದ ಎಲುಬಾಗಿಯೇ ಇರಬೇಕಾದ್ದು ನಿನ್ನ ಧರ್ಮ.
ಭಾರ ಹೊರಬೇಕಾದ್ದು ನಿನ್ನ ಕರ್ಮ.
ಉಪವಾಸವಾದರೂ,
ವನವಾಸವಾದರೂ,
ಕಾಯಕದಲ್ಲೇ ನಿನ್ನ ಕೈಲಾಸ.
ಇದು ಶ್ರೀಕೃಷ್ಣಪರಮಾತ್ಮ ಭಗವದ್ಗೀತೆಯಲ್ಲಿ ಬೋಧಿಸಿದಂಥ
ನಿಷ್ಕಾಮಕರ್ಮದ ಧರ್ಮಸೂಕ್ಷ್ಮ.
ಈ ಸೂಕ್ಷ್ಮಗಳೆಲ್ಲ ನಿನಗೆ ಅರ್ಥವಾಗುವುದಿಲ್ಲ, ಬಿಡು.
ಒಟ್ಟಿನಲ್ಲಿ,
ಬೆನ್ನೆಲುಬಿಗೇಕಯ್ಯ ಓದು, ಬರಾವು?
ಆ ಪರಿಶ್ರಮ, ಪರೀಕ್ಷೆ, ಆ ಸಾವು?
ಅದಕ್ಕಾಗಿಯೇ ಹುಟ್ಟಿಲ್ಲವೇ ಪಾಪಿಗಳು ನಾವು?
ನೀನು ನೋಡಿಕೊ, ಸಾಕು, ನಮ್ಮ ಎಮ್ಮೆ ಕರಾವು.
ಭೂಮಿಯನ್ನು ಉತ್ತು, ಬೀಜವನ್ನು ಬಿತ್ತು,
ಸಸಿಗಳನ್ನು ನೆಡು.
ಭಾರತವನ್ನು ಪ್ರಗತಿಯ ಪಥದಲ್ಲಿ
ಹೊತ್ತುಕೊಂಡು ಹೋಗಲು
ನಿನ್ನ ಬೆನ್ನು ಕೊಡು.
ನಿನ್ನ ಯೋಗಕ್ಷೇಮದ ವಿಚಾರ
ನಮಗೆ ಬಿಟ್ಟುಬಿಡು.