ಕಂಪ್ಯೂಟರ್ನ ಸ್ಕ್ರೀನ್ನಲ್ಲಿ ಗೋಚರಿಸುತ್ತಿದ್ದ ಸಣ್ಣ ತಟ್ಟೆಯಾಕಾರದ ಬೆಳಕಿನ ವಸ್ತುವನ್ನು ಭೂಮಿಯತ್ತ ತಿರುಗಿಸಿದ. ಅದು ಎಷ್ಟೋ ಕಿಲೋಮೀಟರ್ ವೇಗದಲ್ಲಿ ಹಾರಿ ಭೂಮಿಗೆ ಅಪ್ಪಳಿಸಿತು. ಆ ರಭಸಕ್ಕೆ ಭೂಮಿಯನ್ನು ಗುದ್ದಿ ‘ಫಾಲ್ಟ್ ಜೋನ್’ನಲ್ಲಿ ನಡೆದ ಘರ್ಷಣೆಯಂತೆ ಭೂಮಿಯ ಪದರಗಳು ಜಾರಿ ಭೂಕಂಪದಂತೆ ಭೂಮಿಯು ನಾಲ್ಕೈದು ಕಿಲೋಮೀಟರ್ಗಳಷ್ಟು ವ್ಯಾಪ್ತಿಯಲ್ಲಿ ಕಂಪಿಸಿತು. ತತ್ಕ್ಷಣವೇ ವಿದ್ಯುತ್ ಪ್ರವಾಹ ನಿಂತಿತು. ಸುತ್ತಲೂ ಗಾಢಾಂಧಕಾರ ವ್ಯಾಪಿಸಿತು. ಚಾಲನೆಗೆ ಬರಬೇಕಿದ್ದ ಜನರೇಟರ್ ಸ್ತಬ್ಧವಾಯಿತು. ನೆಲಕ್ಕೆ ಇಳಿದಿದ್ದ ತಟ್ಟೆಯ ಮುಚ್ಚಳ ತೆರೆದು, ಇಲಿ ಮೂತಿಯ ಐದಾರು ಮನುಷ್ಯರು ಇಳಿದು ಸರಸರನೆ ಸಂಶೋಧನ ಕೇಂದ್ರದ ಒಳಗೆ ನಡೆದರು.
ಇದ್ದಕ್ಕಿದ್ದಂತೆ ನಾಗಲ್ಪುರ ವೈದ್ಯಕೀಯ ಸಂಶೋಧನ ಕೇಂದ್ರದ ವಿದ್ಯುದ್ದೀಪಗಳೆಲ್ಲ ತಟ್ಟನೆ ಆರಿಹೋದವು. ಕ್ಷಣದಲ್ಲಿಯೇ ಹೊತ್ತಿ ಉರಿಯಬೇಕಿದ್ದ ದೀಪಗಳೆಲ್ಲವೂ ಕಾರ್ಯನಿರ್ವಹಿಸಬೇಕಾಗಿದ್ದ ಜನರೇಟರ್ ಸ್ತಬ್ಧವಾಗಿ ಬೆಳಗದೆ ಗಾಢಾಂಧಕಾರ ತುಂಬಿಕೊಂಡಿತು. ರಿಸರ್ಚ್ ಸೆಂಟರ್ನ ಮಹಾದ್ವಾರದ ನಡುವೆ ಸಣ್ಣ ದೀಪವೊಂದು ಮಿಣುಕುಹುಳದಂತೆ ಗೋಚರವಾಗಿ ಗಾಳಿಗೆ ಹಾರಿದ ಬೆಂಕಿಯ ಕಿಡಿಯಂತೆ ದೂರಕ್ಕೆ ಸಾಗಿ ಮರೆಯಾಯಿತು. ತತ್ಕ್ಷಣವೇ ರಿಸರ್ಚ್ ಸೆಂಟರ್ನ ಒಳಗಿನಿಂದ ವ್ಯಕ್ತಿಯೊಬ್ಬ ಚೀರಿದ ಕೂಗು ಕೇಳಿಸಿ, ಆ ಕೂಗು ಅಲೆಅಲೆಯಾಗಿ ಗಾಢಾಂಧಕಾರದಲ್ಲಿ ಮುಳುಗಿಹೋಯಿತು. ಆ ಸಮಯದಲ್ಲಿಯೇ ಪದ್ಮಿನಿ ಪ್ರೀಮಿಯರ್ ಕಾರೊಂದು ಯಂತ್ರವನ್ನು ಮೊರಗುಟ್ಟುತ್ತ ಸ್ವಲ್ಪ ದೂರಕ್ಕೆ ಚಲಿಸಿ ಹೆಡ್ಲೈಟ್ ಬೆಳಗಿಸಿತು. ಕತ್ತಲೆಯನ್ನು ಓಡಿಸುವಂತೆ ಕರೆಂಟ್ ಹೊತ್ತಿಕೊಂಡಿತು.
ರಿಸರ್ಚ್ ಸೆಂಟರ್ನ ಹದಿಮೂರನೆಯ ಬೆಡ್ನಲ್ಲಿ ಮಲಗಿದ್ದ ಪೇಷಂಟ್ ಒಮ್ಮೆಲೆ ನೆಗೆದು ಬಿದ್ದಂತೆ ಪ್ರಜ್ಞಾಹೀನನಾಗಿ ಕೆಳಗುರುಳಿದ. ಪಕ್ಕದ ವಾರ್ಡ್ನವರಿಗೂ ತಿಳಿಯದಂತೆ ಆ ಘಟನೆ ನಡೆದುಹೋಯಿತು. ಆತ ಸ್ಪೆಷಲ್ವಾರ್ಡ್ನ ಪೇಷಂಟ್. ಆ ವಾರ್ಡ್ನ ಮೇಲುಸ್ತುವಾರಿ ನಡೆಸುತ್ತಿದ್ದ ಸ್ಟಾಫ್ನರ್ಸ್ ಕೋಣೆಯನ್ನು ಸೇರಿಯಾಗಿತ್ತು. ಹದಿಮೂರನೆಯ ಸ್ಪೆಷಲ್ವಾರ್ಡ್ನಿಂದ ಬಂದ ಕೂಗು ಆಕೆಗೆ ಕೇಳಿಸಿರಲಿಲ್ಲ. ಆಕೆ ಮಲಗುವ ಸಿದ್ಧತೆಯಲ್ಲಿದ್ದಳು.
ನಾಗಲ್ಪುರ ವೈದ್ಯಕೀಯ ರಿಸರ್ಚ್ ಸೆಂಟರ್ ಜಗದ್ವಿಖ್ಯಾತವಾಗಲು ಅಲ್ಲಿಯ ಸಂಶೋಧನೆಗಳು ಕಾರಣವಾಗಿದ್ದವು. ಕೊರೋನಾದ ರೂಪಾಂತರ ತಳಿಗಳ ಆರ್ಭಟವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುವಲ್ಲಿ ಅಲ್ಲಿನ ವಿಜ್ಞಾನಿಗಳ ತಂಡ ಬಹಳವಾಗಿ ಶ್ರಮಿಸಿತ್ತು. ಕೊರೋನಾದ ಗಾಮಾ, ಬೀಟಾ, ಡೆಲ್ಟಾಗಳಂತಹ ತಳಿಯನ್ನು ಹಿಮ್ಮೆಟ್ಟಿಸುವಲ್ಲಿ ನಡೆದ ಸಂಶೋಧನೆಗಳು ಯಶಸ್ವಿಯಾಗಿ ಜಗತ್ತಿನಲ್ಲಿಯೇ ಪ್ರಸಿದ್ಧ ಸಂಶೋಧನ ಕೇಂದ್ರವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ದೇಶದ ಪ್ರಧಾನಮಂತ್ರಿಗಳೇ ಸ್ವತಃ ಸಂಶೋಧನ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ತಂಡವನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಮಾತ್ರವಲ್ಲ, ಅಲ್ಲಿಯ ಫಾರ್ಮಾಸ್ಯೂಟಿಕಲ್ ಕಂಪೆನಿಯಿಂದ ತಯಾರಾದ ಲಸಿಕೆಗಳನ್ನು ವಿಶ್ವದ ಇತರೆ ದೇಶಗಳಿಗೂ ಅತಿ ಕಡಮೆ ದರದಲ್ಲಿ ಪೂರೈಸಿ ಕೊರೋನಾ ಮಹಾಮಾರಿಯನ್ನು ನಿರ್ಮೂಲನಗೊಳಿಸುವ ಕೈಂಕರ್ಯ ಕೈಗೊಂಡಂತಾಗಿತ್ತು. ಇದರಿಂದ ಚೈನಾ ಕೂಡ ಭಾರತದತ್ತ ಅಸೂಯೆಯಿಂದ ನೋಡುವಂತಹ ಪರಿಸ್ಥಿತಿ ಎದುರಾಯಿತು.
ಹೊಸಹೊಸ ರೋಗಗಳನ್ನು ವಿಶ್ವಕ್ಕೆ ಪರಿಚಯಿಸಲೆಂದೇ ವಿಕೃತ ಸಂಶೋಧನೆಗಳನ್ನು ನಡೆಸುತ್ತಿದ್ದ ಚೀನಾ ಭಾರತವನ್ನೇ ಗುರಿಯಾಗಿಟ್ಟುಕೊಂಡು ಅದರ ಸಂಶೋಧನೆಗಳನ್ನು ಮಟ್ಟಹಾಕಲು ಯತ್ನಿಸುತ್ತಿತ್ತು. ಭಾರತೀಯರ ಬುದ್ಧಿಮತ್ತೆಯ ಮುಂದೆ ತನ್ನ ಆಟ ನಡೆಯಲಾರದೆಂದು ತಿಳಿದಿದ್ದರೂ ಕಾಲುಕೆರೆದು ತನ್ನ ವಿಕೃತಿಯನ್ನು ಮುಂದುವರಿಸಿತ್ತು. ತನ್ನ ದೇಶದಲ್ಲಿ ಬೀದಿಬೀದಿಯಲ್ಲಿ ನಡೆಯುತ್ತಿರುವಂತೆಯೆ ಜನರು ಕುಸಿದುಬಿದ್ದು ನರಳಿ ಸಾಯುವ ವಿಡಿಯೋ ಕ್ಲಿಪ್ಪಿಂಗ್ಗಳನ್ನು ಮಾಡಿ ಇಡೀ ಜಗತ್ತಿಗೆ ಭಯೋತ್ಪಾದನೆಯನ್ನು ಉಂಟುಮಾಡುತ್ತಿತ್ತು.
ಪ್ರಧಾನಮಂತ್ರಿಯವರು ವೈದ್ಯಕೀಯ ಸಂಶೋಧನಕೇಂದ್ರದ ಪ್ರತಿಯೊಬ್ಬ ವಿಜ್ಞಾನಿಯನ್ನೂ ಉತ್ತೇಜಿಸಿ ಮೆಡಿಕಲ್ ಚಾಲೆಂಜ್ಗಳ ವಿರುದ್ಧ ಸಮರ ಹೂಡುವಂತೆ ಪ್ರೋತ್ಸಾಹಿಸುತ್ತಿದ್ದರು. ಆದ್ದರಿಂದಲೇ ನಾಗಲ್ಪುರ ವೈದ್ಯಕೀಯ ಸಂಶೋಧನಕೇಂದ್ರ ಅವಿರತ ಪ್ರಯತ್ನದಿಂದ ಮನುಷ್ಯನ ದೇಹದ ಇಮ್ಯುನಿಟಿ ಕಡಮೆಯಾಗದಂತಹ ಔಷಧಿಯೊಂದನ್ನು ತಯಾರಿಸಲು ಯೋಜನೆಯೊಂದನ್ನು ಹಾಕಿಕೊಂಡಿತು. ಅದರ ಕಾರ್ಯಗಳು ಯಶಸ್ವಿಯಾಗಿ ನಡೆಯಲಾರಂಭಿಸಿದವು. ಆದರೆ ಎಂದೂ ಪವರ್ ಫೇಲ್ಯೂರ್ ಕಾಣದ ಆಸ್ಪತ್ರೆಯ ಕ್ಯಾಂಪಸ್ನಲ್ಲಿ ಇದ್ದಕ್ಕಿದ್ದಂತೆ ಕರೆಂಟ್ ಕೈಕೊಟ್ಟಿದ್ದು ಹೇಗೆ? ಜನರೇಟರ್ ಅಟೋ ಆನ್ ಆಗದೆ ಹೋದದ್ದೇಕೆ? ಸ್ಪೆಷಲ್ವಾರ್ಡ್ನಿಂದ ಕೇಳಿದ ಕೂಗಿಗೆ ಕಾರಣವೇನು? ನೋಡನೋಡುತ್ತಿದ್ದಂತೆಯೇ ಮಿಣುಕುಹುಳದಂತಹ ಕಿಡಿ ಹಾರಿದ್ದೇಕೆ? ಅದರ ಗಮ್ಯ ಯಾವುದು? ಅದು ನಂದಿಹೋಯಿತೇ ಅಥವಾ ದೂರಕ್ಕೆ ಹಾರಿ ಶೂನ್ಯವಾಯಿತೆ? ಇದು ಶತ್ರು ರಾಷ್ಟçದ ದುರ್ಮಾಂಗಿ ನಡೆಯೆ? ದೂರದಲ್ಲಿ ನಿಂತ ವ್ಯಕ್ತಿ ಇವನ್ನೆಲ್ಲ ಗಮನಿಸುತ್ತಿದ್ದ!
ವಿದ್ಯುತ್ ಬೆಳಗಿದಾಗ ಮತ್ತೆ ಆಸ್ಪತ್ರೆಯ ಕ್ಯಾಂಪಸ್ನಲ್ಲಿ ಲವಲವಿಕೆ ಕಾಣಿಸಿಕೊಂಡಿತು. ಅದು ಎಂದಿಗಿಂತಲೂ ಹೆಚ್ಚಾಗಿಯೇ ಇತ್ತು. ಒಂದೆಡೆ ಗಡಿಬಿಡಿಯ ವಾತಾವರಣ ಸೃಷ್ಟಿಯಾಯಿತು. ಆಸ್ಪತ್ರೆಯ ಸಿಬ್ಬಂದಿಗಳ ಓಡಾಟ ಹೆಚ್ಚಾಗಿತ್ತು. ಮಹಾವೈದ್ಯಾಧಿಕಾರಿಯವರ ಮುಖದಲ್ಲಿ ಅದೇನೋ ಆತಂಕ. ತತ್ಕ್ಷಣವೇ ಅವರು ಪಿಆರ್ಓ ಅವರನ್ನು ಕರೆದು ಎಲ್ಲ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸುವಂತೆ ಹೇಳಿದವರೇ ತಮ್ಮ ಕ್ಯಾಬಿನ್ ಸೇರಿ ಸ್ವಲ್ಪ ಹೊತ್ತು ಆರಾಮವಾಗಿ ಕುಳಿತುಕೊಳ್ಳಲೆಂದು ತಿರುಗು ಕುರ್ಚಿಯಲ್ಲಿ ಕುಳಿತರು. ಸೆಂಟ್ರಲ್ ಏಸಿ ಇದ್ದರೂ ಅವರು ಆರಾಮವಾಗಿ ಕೂರಲಾರದೆ ಚಡಪಡಿಸುತ್ತಲೇ ಮೈಯೆಲ್ಲ ಬೆವರತೊಡಗಿತು. ಇಂಟರ್ಕಾಮ್ ಮೊಳಗಿತು. ಎತ್ತಿಕೊಂಡರು ಪಿಆರ್ಓ ಲೈನ್ನಲ್ಲಿದ್ದರು.
“ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಸರ್” ಎಂದರೂ ಅವರಿಗೇಕೋ ಅನುಮಾನವಾಯಿತು. ಎಂದೂ ಕೈಕೊಡದ ವಿದ್ಯುತ್ ಏಕಾಏಕಿ ನಿಂತಿದ್ದೇಕೆ? ಏನೋ ಒಂದು ವಿಚಿತ್ರ ಘಟಿಸಿದಂತೆ ಅವರಿಗೆ ಕಂಡಿತು. ನಡೆದುದನ್ನು ನೆನಪಿಸಿಕೊಂಡರು.
ಮನೆಗೆ ಹೊರಡಬೇಕೆಂದಿದ್ದವರು ಹಿಂದಕ್ಕೆ ಬಂದು ಕಾರಿಡಾರ್ನಲ್ಲಿ ಹೆಜ್ಜೆ ಹಾಕುತ್ತಿರುವಂತೆ ಪಿಆರ್ಓ ಅವರನ್ನು ಅನುಸರಿಸಿ ನಡೆಯುತ್ತಿದ್ದರು. ತತ್ಕ್ಷಣವೇ ಕರೆಂಟ್ ಹೋಗಿ ಕತ್ತಲು ಆವರಿಸಿತ್ತು. ಹೆಜ್ಜೆ ಹೊರಳಿಸದೆ ತಟ್ಟನೆ ನಿಂತಿದ್ದರು. ಜನರೇಟರ್ನ ಸದ್ದು ಬರಲಿಲ್ಲ. ಕೂಡಲೆ ಟ್ರಿಪ್ಪ್ ಓವರ್ ಆಗಿ ಯಾಂತ್ರಿಕವಾಗಿ ಜನರೇಟರ್ ಚಾಲನೆಗೆ ಬಂದು ಕರೆಂಟು ಬರಬೇಕಿತ್ತು, ಬರಲಿಲ್ಲ. ಆಗಲೇ ಭೂಮಿಯನ್ನು ಗುದ್ದಿದಂತಹ ವಿಚಿತ್ರ ಸದ್ದು ಕೇಳಿಸಿದ್ದು! ಭೂಕಂಪಕ್ಕೂ ಮುನ್ನಿನ ಸದ್ದು ಅದು!
ಪಿಆರ್ಓ ತತ್ಕ್ಷಣವೇ ಮೈಂಟನೆನ್ಸ್ ಡಿಪಾರ್ಟ್ಮೆಂಟ್ಗೆ ಫೋನ್ ಮಾಡಿದಾಗ, ಅಲ್ಲಿನ ಸೂಪರ್ವೈಸರ್ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದರು. ಇಬ್ಬರೂ ಎಮರ್ಜೆನ್ಸಿ ಲೈಟ್ನ ಬೆಳಕಿನಲ್ಲಿ ಹಿಂತಿರುಗಬೇಕೆನ್ನುವಾಗ ಯಾರೋ ಗಟ್ಟಿಯಾಗಿ ಚೀರಿದ ಸದ್ದು. ಆ ಸದ್ದಿಗೆ ಇಬ್ಬರೂ ಸ್ತಬ್ಧ ಚಿತ್ರದಂತೆ ನಿಂತುಬಿಟ್ಟಿದ್ದರು. ಅದೇ ಸಮಯಕ್ಕೆ ಜನರೇಟರ್ ಆನ್ ಆಗುತ್ತಲೇ ಮಿಣುಕು ಬೆಳಕೊಂದು ದೂರಕ್ಕೆ ಚಲಿಸಿದಂತೆ ಕಂಡಿತ್ತು. ತತ್ಕ್ಷಣವೇ ಕರೆಂಟ್ ಕೂಡ ಬಂದಿತ್ತು.
ಮಹಾವೈದ್ಯಾಧಿಕಾರಿಯವರು ನೆನಪಿನಿಂದ ಹೊರಬಂದರು.
* * *
ಕೊರೋನಾ ಮಹಾಮಾರಿ ವಿಶ್ವವ್ಯಾಪಿಯಾದಾಗ ನಾಗಲ್ಪುರ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾಕ್ಟರ್ ಚೆಂಗಯ್ಯ ವಿಶೇಷ ಸಂಶೋಧನೆಯನ್ನು ಆರಂಭಿಸಿದರು. ವಿಶ್ವದ ಬೇರಾವುದೆ ಮೆಡಿಕಲ್ ಸಂಸ್ಥೆಗಳು ಊಹಿಸಲಾರದಂತಹ ಪ್ರಯೋಗಗಳನ್ನು ಮಾಡಿ ಯಶಸ್ಸಿನತ್ತ ಹೆಜ್ಜೆ ಹಾಕಿದವರೆ ಪತ್ರಿಕೆಯಲ್ಲಿ ಜಾಹೀರಾತೊಂದನ್ನು ಹರಿಯಬಿಟ್ಟರು.
ಅದು ಕಾನೂನು ರೀತ್ಯಾ ಮಾನ್ಯವಾಗುವಂತಹ ಒಂದು ಒಪ್ಪಂದ. ಇದಕ್ಕೆ ಬೇಕಾಗಿರುವಂತ ಅಭ್ಯರ್ಥಿಗಳು ಆರೋಗ್ಯವಂತರು. ಅಂದರೆ ಯಾವುದೇ ಸಣ್ಣಪುಟ್ಟ ಕಾಯಿಲೆಗಳೂ ಇರಬಾರದು, ಕಾಯಿಲೆಗಳಿಗೆ ತುತ್ತಾಗಿಯೂ ಇರದವರು. ದೇಶದ ಪ್ರಮುಖ ಪತ್ರಿಕೆಗಳು ಈ ಜಾಹೀರಾತನ್ನು ಪ್ರಕಟಿಸಿದವು. ಇನ್ನು ಕೆಲವೊಂದು ಪತ್ರಿಕೆಗಳು ಇದನ್ನು ಪ್ರಕಟಿಸಲು ನಿರಾಕರಿಸಿದವು. ಆಗ ಸ್ವತಃ ಡಾಕ್ಟರ್ ಚೆಂಗಯ್ಯರವರೇ ಪತ್ರಿಕೆಯ ಸಂಪಾದಕರುಗಳಿಗೆ ಒಂದು ಝೂಮ್ ಮೀಟಿಂಗ್ ನಡೆಸಿ ತಾವು ನೀಡಿರುವ ಜಾಹೀರಾತಿನ ಬಗ್ಗೆ ಸವಿವರವಾಗಿ ತಿಳಿಸಿದರು. ಪ್ರತಿಷ್ಠಿತ ಸಂಶೋಧನಾ ಕೇಂದ್ರ, ಜೊತೆಗೆ ಡಾಕ್ಟರ್ ಚೆಂಗಯ್ಯ, ವಿಶ್ವವಿಖ್ಯಾತ ವಿಜ್ಞಾನಿ. ಇನ್ನೇನು ಬೇಕು? ಉಳಿದ ಪತ್ರಿಕೆಗಳು, ಸ್ಥಳೀಯ ಪತ್ರಿಕೆಗಳೂ ಸೇರಿ ಜಾಹೀರಾತನ್ನು ಪ್ರಕಟಿಸಿದವು.
ಸಾಂಕ್ರಾಮಿಕ ರೋಗದ ಸ್ಫೋಟ!! ತಜ್ಞರ ಎಚ್ಚರಿಕೆ!
ಜಗತ್ತನ್ನೇ ತಲ್ಲಣಗೊಳಿಸಿದ ಕೊರೋನಾ ಮಹಾಮಾರಿಯಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿಯೇ ಯಾವುದೇ ಕ್ಷಣದಲ್ಲಿಯಾದರೂ ಮತ್ತೊಂದು ಸಾಂಕ್ರಾಮಿಕ ರೋಗ ಸ್ಫೋಟವಾಗುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ಪ್ರಾಣಿ, ಪಕ್ಷಿಗಳಿಂದ ಮನುಷ್ಯರಿಗೆ ಹರಡುವ ವೈರಸ್ ವಿಶ್ವದಲ್ಲಿಯೇ ಮತ್ತೊಂದು ಸಾಂಕ್ರಾಮಿಕ ರೋಗವಾಗಿ ಹರಡುವ ಸಾಧ್ಯತೆ ಇದ್ದು ಯಾವುದೇ ಸಮಯದಲ್ಲಾದರೂ ಸ್ಫೋಟವಾಗುವ ಅಪಾಯ ಎಂದು ನಾಗಲ್ಪುರ ಸಂಶೋಧನಾ ಕೇಂದ್ರದ ಸಂಶೋಧಕರು ಎಚ್ಚರಿಸಿದ್ದಾರೆ.
ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನ, ಅರಣ್ಯನಾಶ, ಹವಾಮಾನ ವೈಪರೀತ್ಯ, ಪರಿಸರದಲ್ಲಿಯ ಅಸಮತೋಲನದಿಂದ ವೈರಸ್ಗಳು ಸುಲಭವಾಗಿ ಪ್ರಾಣಿ, ಪಕ್ಷಿಗಳಿಂದ ಮನುಷ್ಯರಿಗೆ ಹರಡುವ ಅಪಾಯವಿದೆ. ಈ ಸೋಂಕು ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು. ಆದ್ದರಿಂದ ಮನುಕುಲಕ್ಕೆ ಕಂಟಕವಾದ ಕೊರೋನಾಕ್ಕಿಂತಲೂ ತೀವ್ರವಾದ ಪರಿಣಾಮ ಬೀರಲಿದೆ ಎನ್ನುವ ಬರೆಹ ಜಾಹೀರಾತಿನಲ್ಲಿತ್ತು.
ಜಾಹೀರಾತಿನ ಪ್ರಕಾರ ಮೂವತ್ತರ ಒಳಗಿನ ಆರೋಗ್ಯವಂತ ಅವಿವಾಹಿತರನ್ನು ಈ ಸಂಸ್ಥೆ ಗುತ್ತಿಗೆಯಾಧಾರದ ಮೇಲೆ ತೆಗೆದುಕೊಳ್ಳಬೇಕು. ಸಂಸ್ಥೆ ಹೇಳುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಜಾಹೀರಾತು ಪ್ರಕಟವಾದ ಮೊದಲ ದಿನ ನೀರಸ ಪ್ರತಿಕ್ರಿಯೆ. ಆದರೆ ಒಂದೆರಡು ದಿನ ಕಳೆಯುತ್ತಲೂ ನೂರಾರು ಅಪ್ಲಿಕೇಶನ್ಗಳು ಬರತೊಡಗಿದವು.
ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾದ ನಾಲ್ಕನೇ ಸುಧಾರಿತ ತಳಿ ಒಮಿಕ್ರಾನ್ ಹರಡುವ ಭೀತಿ ಜನರಲ್ಲಿ ಇನ್ನಷ್ಟು ಭಯವನ್ನು ಮೂಡಿಸಿತು. ಡಾಕ್ಟರ್ ಚೆಂಗಯ್ಯರವರ ತಂಡ ಒಮಿಕ್ರಾನ್ ಅನ್ನು ಸಂಶೋಧನೆ ನಡೆಸಿ ತಳದಿಂದಲೇ ಅದನ್ನು ಸಂಪೂರ್ಣ ನಿರ್ನಾಮ ಮಾಡುವುದಕ್ಕೆ ಕಟಿಬದ್ಧರಾದರು. ಇನ್ನು ಮುಂದೆ ಮನುಷ್ಯರಿಗೆ ಇಂತಹ ಮಹಾಮಾರಿ ರೋಗಗಳು ಬಾರದಂತೆ ಲಸಿಕೆಯನ್ನು ಕಂಡುಹುಡುಕುವುದೇ ಅವರ ತಂಡದ ಗುರಿಯಾಗಿತ್ತು. ಅವರ ತಂಡದಿಂದ ಕಂಡುಹಿಡಿಯಲ್ಪಟ್ಟ ಎರಡೂ ಲಸಿಕೆಗಳು ಯಶಸ್ವಿಯಾದರೂ, ಯುವಕರಲ್ಲಿ ಹೃದಯಾಘಾತದಂತಹ ಕಾಯಿಲೆ ಕಾಣಿಸಿಕೊಂಡು ಇದಕ್ಕೆ ಆ ಲಸಿಕೆಯೇ ಕಾರಣ ಎನ್ನುವ ತಪ್ಪು ಅಭಿಪ್ರಾಯ ಕಾಡ್ಗಿಚ್ಚಿನಂತೆ ಹರಿಯತೊಡಗಿತು.
ಅದಕ್ಕಾಗಿಯೇ ಕೊರೋನಾದ ಸುಧಾರಿತ ತಳಿ ಕಾಣಿಸಿಕೊಂಡ ಬೆನ್ನಹಿಂದೆಯೇ ಅದಕ್ಕೆ ಅಗತ್ಯವಾಗಿದ್ದ ಲಸಿಕೆಯನ್ನು ತಯಾರಿಸಿತು. ಆದರೆ ಅದರ ಪ್ರಯೋಗ ಸಂಪೂರ್ಣವಾಗದೆ ಮಾನ್ಯತೆ ಪಡೆಯುವಂತೆ ಇರಲಿಲ್ಲ. ಘನಸರ್ಕಾರಕ್ಕೆ ಅದನ್ನು ತಿಳಿಸುವ ಮೊದಲು ಪ್ರಯೋಗವನ್ನು ಮಾಡಿ ಅದರ ಪರಿಣಾಮವನ್ನು ದೃಢಪಡಿಸಲೇಬೇಕಿತ್ತು. ಆ ಲಸಿಕೆ ಕೊರೋನಾ ಮಾತ್ರವಲ್ಲ, ಮನುಷ್ಯನ ದೇಹದ ಇಮ್ಯುನಿಟಿಯನ್ನೂ ಹೆಚ್ಚಿಸಿ ಯಾವುದೇ ಕಾಯಿಲೆಗಳು ಬಾರದಂತೆ ತಡೆಯುವಂತದ್ದೂ ಆಗಿತ್ತು. ಹಾಗಾಗಿ ತ್ವರಿತವಾಗಿ ಜಾಹೀರಾತನ್ನು ನೀಡಿ ಆರೋಗ್ಯವಂತ ಯುವಕರನ್ನು ಕರೆಸಿಕೊಂಡಿತ್ತು ಸಂಸ್ಥೆ.
ಬಂದ ನೂರು ಮಂದಿಯೂ ಜಾಹೀರಾತನ್ನು ನೋಡಿಯೇ ಬಂದವರು. ಅವರ ನಡುವೆ ಒಪ್ಪಂದ ಅಗತ್ಯವಾಗಿತ್ತು. ಡಾಕ್ಟರ್ ಚೆಂಗಯ್ಯ, “ಇದೊಂದು ವಿಶೇಷ ಆಹ್ವಾನ. ಈ ಪ್ರಯೋಗಕ್ಕೊಳಗಾಗಲು ಇಚ್ಛಿಸುವವರು ಮಾತ್ರ ಮಧ್ಯಾಹ್ನದ ಸೆಶನ್ನಲ್ಲಿ ಭಾಗವಹಿಸತಕ್ಕದ್ದು” ಎಂದು ಸಂಕ್ಷಿಪ್ತವಾಗಿ ತಮ್ಮ ಪ್ರಯೋಗದ ಬಗ್ಗೆ ವಿವರಿಸಿದರು. ಕೆಲವರಲ್ಲೇನೋ ಹಿಂಜರಿಕೆ ಕಂಡಿತು. ಉಳಿದವರು ಗುಸುಗುಸು ಆರಂಭಿಸಿದರು. ಆದರೂ ಡಾಕ್ಟರ್ರ ಭರವಸೆ ಮಸುಕಾಗಲಿಲ್ಲ. ಹೆಚ್ಚಿನವರನ್ನು ಉತ್ತೇಜಿಸಿದರು. ಆದರೆ ಮಧ್ಯಾಹ್ನದ ಸೆಶನ್ಗೆ ಎಷ್ಟು ಮಂದಿ ಉಳಿದಿದ್ದಾರೆ ಎನ್ನುವುದು ಚಾಲೆಂಜ್ನ ವಿಷಯವಾಗಿತ್ತು.
ಮಧ್ಯಾಹ್ನದ ಹೊತ್ತು ಬಂದ ಎಲ್ಲ ಅರ್ಜಿದಾರರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೆಲವರು ಊಟ ಮುಗಿಸಿ ಹೊರಗೆ ಸುತ್ತಾಡಲು ಹೋದರೆ, ಉಳಿದವರು ಅಲ್ಲಲ್ಲಿ ಅಡ್ಡಾಡತೊಡಗಿದರು. ಸರಿಯಾಗಿ ಎರಡು ಗಂಟೆಗೆ ಮಧ್ಯಾಹ್ನದ ಸೆಶನ್ ಆರಂಭವಾಗುವುದಿತ್ತು. ಡಾಕ್ಟರ್ ತಮ್ಮ ಅಸಿಸ್ಟೆಂಟ್ ಮುತ್ತುವನ್ನು ಕರೆದು ಕಾನ್ಫರೆನ್ಸ್ ಹಾಲ್ನಲ್ಲಿ ಎಷ್ಟು ಮಂದಿ ಇದ್ದಾರೆ ಎನ್ನುವುದನ್ನು ಕೇಳಿದರು.
ಡಾಕ್ಟರ್ ಮುತ್ತು ಸರ್ವರ್ ರೂಂನ ಸಿಸ್ಟಮ್ ಅಡ್ಮಿನ್ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದ. ಅವರು ಕಾನ್ಫರೆನ್ಸ್ ರೂಂನ ಕ್ಯಾಮೆರಾವನ್ನು ಝೂಮ್ ಮಾಡಿ ತೋರಿಸಿದರು.
ಕೇವಲ ಒಬ್ಬನೇ ಒಬ್ಬ ವ್ಯಕ್ತಿ ಕುಳಿತಿದ್ದ. ಡಾಕ್ಟರ್ ಮುತ್ತುಗೆ ನಿರಾಶೆಯಾಯಿತು. ತನಗೇ ಇಷ್ಟು ನಿರಾಶೆಯಾಗಬೇಕಾದರೆ ಡಾಕ್ಟರ್ ಚೆಂಗಯ್ಯ ಅವರಿಗೆ ಹೇಗಾದೀತು? ತತ್ಕ್ಷಣವೇ ಅವರ ಛೇಂಬರ್ಗೆ ಬಂದು, “ಸರ್, ಪುವರ್ ರೆಸ್ಪಾನ್ಸ್” ಎಂದ.
ಆತ, “ಯಾಕೆ?” ಎಂದರು.
“ಒಬ್ಬನೇ ವ್ಯಕ್ತಿ ಅಲ್ಲಿರೋದು. ಬರ್ಯಾರೂ ಇಲ್ಲ”
ಡಾಕ್ಟರ್ ಚೆಂಗಯ್ಯ ಮುಗುಳ್ನಕ್ಕರು.
“ನಾವು ಬೆಳಗಿನ ಸೆಶನ್ನಲ್ಲಿಯೇ ಅವರಿಗೆ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದ್ದರೆ ಎಲ್ಲರೂ ಉಳಿದುಕೊಳ್ಳುತ್ತಿದ್ದರೇನೋ?”
ಈಗ ಡಾಕ್ಟರ್ ಮುತ್ತು ನಕ್ಕ.
“ಸರ್, ನಮಗೆ ಅಷ್ಟೊಂದು ಮಂದಿಯ ಆವಶ್ಯಕತೆಯಿದೆಯೇ?”
ಡಾಕ್ಟರ್ ಚೆಂಗಯ್ಯ ಗಂಭೀರರಾದರು.
“ಪ್ರಯೋಗ ಯಶಸ್ವಿಯಾಗಬೇಕಾದರೆ ಅಗತ್ಯವಿದೆ. ನಮ್ಮ ಲಸಿಕೆ ಯಾವ ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೆನ್ನುವುದು ಮುಖ್ಯ” ಎಂದರು.
ಅವರಿಬ್ಬರೂ ಈ ವಿಷಯವನ್ನು ಚರ್ಚಿಸುತ್ತಲೇ ಕಾನ್ಫರೆನ್ಸ್ ಹಾಲ್ಗೆ ನಡೆದರು.
ಅಲ್ಲಿ ಕುಳಿತಿದ್ದ ಒಬ್ಬನೇ ಅರ್ಜಿದಾರನನ್ನು ಪ್ರಶ್ನಿಸಿ ತಮ್ಮ ಸಂಸ್ಥೆಯ ನಿಯಮಗಳನ್ನು ತಿಳಿಸಿದರು. ಅವನು ತನ್ನ ಮನೆಯ ಆರ್ಥಿಕ ಪರಿಸ್ಥಿತಿಯನ್ನು ನೆನಪಿಸಿಕೊಂಡು ಡಾಕ್ಟರ್ ಹೇಳಿದ ಎಲ್ಲದಕ್ಕೂ ಒಪ್ಪಿಕೊಂಡಂತೆ ಕಾಂಟ್ರ್ಯಾಕ್ಟ್ ಪತ್ರಕ್ಕೆ ಸಹಿ ಹಾಕಿದ. ಮರುದಿನ ಇನ್ನಷ್ಟು ಮಂದಿ ಸೇರ್ಪಡೆಯಾದರು. ಅವರ ಮೇಲೆ ತಮ್ಮ ತಂಡ ಶೋಧಿಸಿದ ಲಸಿಕೆಯ ಪ್ರಯೋಗವಾಗುವುದಿತ್ತು. ಅವರು ಒಮ್ಮೆ ಪ್ರಯೋಗಕ್ಕೊಳಗಾದರೆ ಮುಂದೆ ಯಾರ ಜೊತೆಗೂ ಸಂಪರ್ಕ ಬೆಳೆಸುವಂತಿರಲಿಲ್ಲ. ಅವರ ಮನೆಯವರೊಂದಿಗೂ ಸಂಪರ್ಕ ಬೆಳೆಸುವಂತಿಲ್ಲ. ಅವರ ವ್ಯಾಲೆಟ್, ಮೊಬೈಲ್, ಬೆಲೆಬಾಳುವ ವಸ್ತುಗಳನ್ನು ಜಾಗರೂಕತೆಯಿಂದ ಎತ್ತಿಡಲಾಯಿತು. ಇವೆಲ್ಲವೂ ಅಲ್ಲಿಯ ನಿಯಮಾನುಸಾರವಾಗಿ.
ಎರಡು ದಿನ ಅವರನ್ನು ಸ್ವತಂತ್ರವಾಗಿ ಬಿಡಲಾಯಿತು. ಅಂದರೆ ಪ್ರಯೋಗಕ್ಕೊಳಗಾಗಲಿರುವವರು ಅಲ್ಲಿಂದ ಹೊರಗೆ ಹೋಗಲು ಅನುಮತಿಯಿಲ್ಲ. ಆದರೆ ಸಂಶೋಧನ ಕೇಂದ್ರದ ಒಳಗೆ ಎಲ್ಲಿ ಬೇಕಾದರೂ ಓಡಾಡುವ ಅನುಮತಿ ನೀಡಲಾಯಿತು. ಅಲ್ಲಿ ನೋಡುವಂತದ್ದೇನೂ ಇರದಿದ್ದರೂ ಅಲ್ಲಿನ ಸುವ್ಯವಸ್ಥಿತ ಲ್ಯಾಬ್ಗಳು, ಫಾರ್ಮಾಸ್ಯೂಟಿಕಲ್ ವಿಭಾಗ, ಕ್ಯಾಂಟೀನ್ ಮುಂತಾದವುಗಳನ್ನು ಸುತ್ತಾಡಿ, ಎಪ್ಪತ್ತೆರಡು ಇಂಚಿನ ಟಿವಿ ಮುಂದೆ ಕುಳಿತು ಪ್ರಸಾರವಾಗುತ್ತಿದ್ದ ಹಳೆಯ ಸಿನೆಮಾವನ್ನು ವೀಕ್ಷಿಸುತ್ತಿದ್ದರು. ಎರಡನೆ ದಿನಕ್ಕೆ ಅವರಿಗೆಲ್ಲ ಬೇಸರ ಮೂಡಿ, ಬೋರ್ ಎನಿಸತೊಡಗಿತು.
ಮೂರನೆ ದಿನದಿಂದ ಲಸಿಕೆಯ ಪ್ರಯೋಗ ಆರಂಭವಾಯಿತು. ಪ್ರಯೋಗಕ್ಕೊಳಪಡುವ ವ್ಯಕ್ತಿಗಳ ಮುಖದಲ್ಲಿದ್ದ ಲವಲವಿಕೆ ಮಾಯವಾಯಿತು!
* * *
ಪ್ರಯೋಗಾಲಯದಲ್ಲಿ ಎಲ್ಲವೂ ನಿಗೂಢವಾಗಿ ನಡೆಯುತ್ತಿರುವಂತೆ ಕಾರ್ಯಚಟುವಟಿಕೆಗಳು ಆಗುತ್ತಿದ್ದವು. ಡಾಕ್ಟರ್ ಚೆಂಗಯ್ಯನವರ ಮುಖದಲ್ಲಿ ಇನ್ನಷ್ಟು ಚೈತನ್ಯ ಮೂಡಿ ಲಸಿಕೆಯ ಪರಿಣಾಮದ ಬಗ್ಗೆ ಕುತೂಹಲ ಉಂಟಾಗಿ, ಪ್ರಯೋಗಕ್ಕೊಳಗಾದ ಒಬ್ಬ ವ್ಯಕ್ತಿಯ ಚಟುವಟಿಕೆಯನ್ನು ಗಮನಿಸುತ್ತಿದ್ದರು. ಆತ ತೀರಾ ಕುಗ್ಗಿ ಹೋದಂತೆ ಮುಖದ ಮೇಲಿನ ಕಳೆ ಮಾಯವಾದಂತ್ತಿತ್ತು. ಡಾಕ್ಟರ್ ಚೆಂಗಯ್ಯರಿಗೇನೋ ಅನುಮಾನ ಕಾಡಿತು. ಅವರು ಅಲ್ಲಿ ಕ್ಷಣ ಹೊತ್ತು ನಿಲ್ಲದೆ ನೇರವಾಗಿ ತಮ್ಮ ಛೇಬರ್ಗೆ ನಡೆದರು.
ಸ್ವಲ್ಪ ಹೊತ್ತಿನಲ್ಲಿಯೇ ನರ್ಸಿಂಗ್ ಸೂಪರಿಂಟೆಂಡೆಂಟ್ ಅವರನ್ನು ಹುಡುಕಿಕೊಂಡು ಬಂದವರು, “ಸರ್, ನಿಮ್ಮನ್ನು ಕೇಳಿಕೊಂಡು ಯಾರೋ ಒಬ್ಬ ಹುಡುಗಿ ಬಂದಿದ್ದಾಳೆ” ಎಂದಾಗ ಡಾಕ್ಟರ್ ಚೆಂಗಯ್ಯರವರ ಮುಖದಲ್ಲಿ ಅಚ್ಚರಿ ಮೂಡಿತು. ತನ್ನನ್ನು ಹುಡುಕಿಕೊಂಡು ಹುಡುಗಿ ಬಂದಿದ್ದಾಳೆಯೇ?
“ಸರಿ, ಒಳಗೆ ಕಳುಹಿಸಿ” ಎಂದರು. ಸಾಮಾನ್ಯವಾಗಿ ಸಂಶೋಧನ ಕೇಂದ್ರ ಒಳಗೆ ಯಾರನ್ನೂ ಬಿಡುವುದಿಲ್ಲ. ಆದರೆ ಆಕೆ ನರ್ಸಿಂಗ್ ಸೂಪರಿಂಟೆಂಡ್ ಅವರ ಮೂಲಕ ಬಂದಿರುವುದರಿಂದ ಒಳಗೆ ಪ್ರವೇಶ ಪಡೆದಿದ್ದಳು. ಅವಳನ್ನು ಒಳಗೆ ಕಳುಹಿಸುವ ಮುನ್ನ ಅವಳ ಬಳಿಯಿದ್ದ ಎಲ್ಲ ವಸ್ತುಗಳನ್ನು ತೆಗೆದಿರಿಸಿ ಬರಿಗೈಯಲ್ಲಿ ಕಳುಹಿಸಿದ್ದರು.
ಆ ಯುವತಿ ಛೇಂಬರನ್ನು ಪ್ರವೇಶಿಸುತ್ತಲೇ ಅವರ ಅನುಮತಿಗೂ ಕಾಯದೆ ಚೇರನ್ನು ಎಳೆದು ಕುಳಿತಳು. ಡಾಕ್ಟರ್ ಚೆಂಗಯ್ಯನವರಿಗೆ ಆಶ್ಚರ್ಯವಾಯಿತು.
“ನಾನು ಅಗತ್ಯವಾಗಿ ವೇಲಾಂಡಿ ಜೊತೆಗೆ ಮಾತಾಡಬೇಕಿದೆ” ನೇರವಾಗಿ ತಾನು ಬಂದ ಉದ್ದೇಶವನ್ನು ಹೇಳಿದಾಗ ಚೆಂಗಯ್ಯ ಅವರಿಗೆ ಮಿಂಚು ಹೊಡೆದಂತಾಯಿತು. ವೇಲಾಂಡಿ ಪ್ರಯೋಗಕ್ಕೊಳಪಡಲು ಬಂದಿದ್ದ ಮೊದಲ ಅಭ್ಯರ್ಥಿ.
“ನೀವು ಯಾರು? ನನ್ನನ್ನು ಕಾಣುವ ಉದ್ದೇಶವೇನು?” ಎಂದರು ಭಯಮಿಶ್ರಿತ ಧ್ವನಿಯಲ್ಲಿ. ತನ್ನನ್ನು ಭೇಟಿಯಾಗಲು ಬಂದ ಹುಡುಗಿ ಸಾಮಾನ್ಯಳಲ್ಲವೆನಿಸಿತು. ಕಣ್ಣಿನಲ್ಲಿಯೇ ಅವಳನ್ನು ಅಳೆದರು. ಸಾಮಾನ್ಯ ಸುಶಿಕ್ಷಿತ ಕುಟುಂಬದಿಂದ ಬಂದ ಹೆಣ್ಣುಮಗಳು. ಆದರೆ ಅವಳ ದಿಟವಾದ ನೇರ ಮಾತಿನಲ್ಲಿ ಸ್ತ್ರೀವಾದದ ನಿಲವಿತ್ತು. ನೇರವಾಗಿ ವೇಲಾಂಡಿ ಜೊತೆಗೆ ಮಾತಾಡಬೇಕೆಂದರೆ!
ವೇಲಾಂಡಿ ವಾರಗಳ ಹಿಂದೆಯಷ್ಟೆ ತಮ್ಮ ಪ್ರಯೋಗದ ಕಂಡೀಶನ್ಗಳನ್ನು ಒಪ್ಪಿಕೊಂಡು ಸಂಶೋಧನಾ ಕೇಂದ್ರಕ್ಕೆ ಸೇರಿದ ವ್ಯಕ್ತಿ. ಆರೋಗ್ಯವಂತ ಯುವಕ. ಇಪ್ಪತ್ತೈದು ವರ್ಷ ವಯಸ್ಸಿನವನು.
“ನಾನು ಐಷಾನಿ. ಲಾಯರ್” ಪರಿಚಯಿಸಿಕೊಂಡ ಆಕೆಯನ್ನು ನೋಡಿದರು. ಏನೋ ಅನುಮಾನ ಸುಳಿಯಿತು.
“ಸಾರಿ, ನೀವು ಕೇಳುತ್ತಿರುವ ವ್ಯಕ್ತಿ ಯಾರು? ಅಂತಹ ಹೆಸರಿನ ಯಾವ ವ್ಯಕ್ತಿಯೂ ಇಲ್ಲಿಲ್ಲ” ಸಹಜವಾಗೆಂಬಂತೆ ಎಂದರು. ಅವಳು ತಟ್ಟನೆ ಎದ್ದು ನಿಂತಳು. ಮತ್ತೇನೋ ಆಲೋಚಿಸಿದಂತೆಯೇ ಕುಳಿತಳು.
“ಆ ವ್ಯಕ್ತಿ ನಿಮ್ಮ ಸಂಶೋಧನಾ ಸಂಸ್ಥೆಯ ಜಾಹೀರಾತನ್ನು ನನಗೆ ತೋರಿಸಿದ್ದ. ಮಾತ್ರವಲ್ಲ, ನನ್ನ ಬಳಿ ಕಾನೂನಾತ್ಮಕವಾದ ವಿಷಯಗಳನ್ನು ಚರ್ಚಿಸಿದ್ದ. ಆ ಪೇಪರ್ ಕಟ್ಟಿಂಗ್ ನನ್ನ ಬಳಿ ಇದೆ. ಐ ಮೀನ್ ನನ್ನ ಬ್ಯಾಗ್ನಲ್ಲಿದೆ. ನನ್ನ ಎಲ್ಲ ವಸ್ತುಗಳನ್ನು ಸೆಕ್ಯುರಿಟಿ ಬಳಿ ತೆಗೆದಿರಿಸಿದ್ದಾರೆ” ಏನೋ ಉದ್ದೇಶವಿಟ್ಟುಕೊಂಡಂತೆ ಹೇಳಿದಳು.
“ಆದರೆ ನೀವು ಹೇಳಿದಂತಹ ವ್ಯಕ್ತಿ ಇಲ್ಲಿಗೆ ಯಾರೂ ಬಂದಿಲ್ಲ. ನೀವು ತಪ್ಪಾಗಿ ತಿಳಿದುಕೊಂಡಿದ್ದೀರಿ.”
ಆಕೆ ಸಂಶಯಾಸ್ಪದ ನೋಟ ಹರಿಸಿದಳು. ಛೇಂಬರ್ನಿಂದ ಹೊರಗೆ ನೋಡುವ ಪ್ರಯತ್ನ ಮಾಡಿದಳು. ಸೌಂಡ್ ಪ್ರೂಫ್ ಕೋಣೆಯೊಳಗೆ ಸಿಸಿ ಕ್ಯಾಮೆರಾವನ್ನೂ ಅಳವಡಿಸಲಾಗಿತ್ತು. ಮತ್ತೊಮ್ಮೆ ಸುತ್ತಲೂ ನೋಟಹರಿಸಿ ರಹಸ್ಯವಾದುದೇನಾದರೂ ಕಾಣುವುದೋ ಎಂದು ನೋಡಿದಳು. ಡಾಕ್ಟರ್ ಚೆಂಗಯ್ಯ ಅವಳ ಪತ್ತೇದಾರಿಕೆಯ ನೋಟವನ್ನು ಅನುಮಾನದಿಂದಲೇ ನೋಡಿದರು.
“ಮೇಡಂ, ದಯವಿಟ್ಟು ತಾವಿನ್ನು ಹೋಗಬಹುದು. ನನ್ನ ಸಮಯವನ್ನು ನೀವು ವ್ಯರ್ಥ ಹಾಳು ಮಾಡುತ್ತಿರುವಿರಿ” ನಿರ್ದಾಕ್ಷಿಣ್ಯವಾಗಿ ಹೇಳಿ ಅವಳನ್ನು ಹೋಗುವಂತೆ ಸೂಚಿಸಿದರು.
“ನಾನು ಹೋಗುವುದಕ್ಕೆ ಬಂದಿಲ್ಲ. ನಿಮ್ಮ ಜಾಹೀರಾತು ನೋಡಿ ನಾನೂ ಒಬ್ಬ ಅರ್ಜಿದಾರಳಾಗಿ ಬಂದಿರುವೆ” ಮುಲಾಜಿಲ್ಲದೆ ಮಾತುಗಳು ನಿರರ್ಗಳವಾಗಿ ಹೊರಗೆ ಬಂದವು.
“ಆ ಜಾಹೀರಾತು ಹುಡುಗಿಯರಿಗಲ್ಲ. ಕೇವಲ ಮೂವತ್ತರ ಒಳಗಿನ ಯುವಕರಿಗೆ” ಸ್ಪಷ್ಟಪಡಿಸಿದರು.
“ಹಾಗಂತ ನಿಮ್ಮ ಜಾಹೀರಾತಿನಲ್ಲಿ ಇಲ್ಲ.”
“ಹೌದೇ?” ಅವರಿಗೂ ಅನುಮಾನ. ಮುಂದುವರಿಸಿದರು, “ನೋಡಿ ಮೇಡಂ, ಅದು ಕೇವಲ ಯುವಕರಿಗೆ ಕೊಟ್ಟಿರೋ ಜಾಹೀರಾತು. ಇಷ್ಟಾಗಿ ಆ ಜಾಹೀರಾತಿನ ವಾಯಿದೆ ಮುಗಿದಿದೆ. ನೀವು ಈವಾಗ ಬಂದು ಕೇಳಿದರೆ ನಿಮಗೆ ಹೇಗೆ ಅವಕಾಶ ಕೊಡೋಕಾಗುತ್ತೆ ಹೇಳಿ?” ನಿರಾಕರಿಸಿದವರೆ ಎದ್ದು ನಿಂತರು. ಆಕೆ ಇನ್ನೂ ಕುಳಿತೇ ಇದ್ದಳು.
“ಡಾಕ್ಟರ್ ಚೆಂಗಯ್ಯ ಅವರೇ,” ಅವರ ಟೇಬಲ್ ಮೇಲಿದ್ದ ನೇಮ್ಪ್ಲೇಟ್ ನೋಡಿ ಅವರ ಹೆಸರು ಗುರುತಿಸಿಕೊಂಡು ಹೇಳಿದಳು, “ನೀವು ಜಾಹೀರಾತಿನಲ್ಲಿ ಅದು ಕೇವಲ ಯುವಕರಿಗೆ ಅನ್ನೋದನ್ನು ತಿಳಿಸಿಲ್ಲ. ಅದೊಂದು ಪಬ್ಲಿಕ್ ಆಫರ್ ಆಗಿರೋದ್ರಿಂದ ಯಾರೂ ಬೇಕಾದರೂ ಅದನ್ನು ಒಪ್ಪಿಕೊಳ್ಳಬಹುದು” ಲಾ ಪಾಯಿಂಟ್ ಎತ್ತಿ ಹಿಡಿದಳು. ಅವರು ಹಿಂದಕ್ಕೆ ತಿರುಗಿ ತಮ್ಮ ಪುಸ್ತಕ ರ್ಯಾಕ್ನಲ್ಲಿಟ್ಟಿದ್ದ ಹಳೇಯ ಪೇಪರ್ ಹೊರಗೆ ತೆಗೆದು ತಮ್ಮ ಸಂಸ್ಥೆಯ ಜಾಹೀರಾತನ್ನು ತೋರಿಸಿದರು. ಎಲ್ಲಿಯೂ ಯುವಕರಿಗೆ ಮಾತ್ರವೆಂದು ಬರೆದಿರಲಿಲ್ಲ! ಆದರೆ ಬಂದವರೆಲ್ಲರೂ ಯುವಕರೇ ಆಗಿದ್ದರು.
“ಸೀ, ಎಲ್ಲಿದೆ? ನಿಮಗೆ “ಕಾರ್ಲಿಲ್ ವರ್ಸಸ್ ಕಾರ್ಬೋಲಿಕ್ ಕಂಪೆನಿ”ಯ ಕೇಸ್ ತಿಳಿದಿರಬೇಕಲ್ಲವೇ?”
ಡಾಕ್ಟರ್ ಚೆಂಗಯ್ಯನವರಿಗೆ ಅಲ್ಪಸ್ವಲ್ಪ ಮೆಡಿಕಲ್ ಲೀಗಲ್ ಕೇಸ್ಗಳ ಬಗ್ಗೆ ತಿಳಿದಿರುವುದರಿಂದ ಕಾನೂನೇನು ಹೊಸತಲ್ಲ. ಕಾಂಟ್ರ್ಯಾಕ್ಟ್ ಆ್ಯಕ್ಟ್ ಪ್ರಕಾರ ಜನರಲ್ ಆಫರ್ ಇದ್ದಾಗ ಸಾರ್ವಜನಿಕರು ಯಾರು ಬೇಕಾದರೂ ಆ ಆಫರನ್ನು ಒಪ್ಪಿಕೊಂಡು ಅಕ್ಸೆಪ್ಟನ್ಸ್ ಕೊಡಬಹುದು. ಅದೇ ವಿಷಯವನ್ನು ಕೋರ್ಟ್ ಎತ್ತಿ ಹಿಡಿದು “ಕಾರ್ಲಿಲ್ ವರ್ಸಸ್ ಕಾರ್ಬೋಲಿಕ್ ಸ್ಮೋಕ್ ಬಾಲ್ ಕಂಪೆನಿ”ಯ ಕೇಸ್ನಲ್ಲಿ ಡಿಸಿಶನ್ ನೀಡಿತ್ತು. ಡಾಕ್ಟರ್ ಚೆಂಗಯ್ಯ ಅಡಕತ್ತರಿಯಲ್ಲಿ ಸಿಲುಕಿದಂತೆ ಚಡಪಡಿಸಿದರು. ಕಾಲಿಗೆ ತೊಡರಿದ ಬಳ್ಳಿಯನ್ನು ಬಿಡಿಸಿಕೊಳ್ಳುವುದು ಸುಲಭವಲ್ಲವೆನಿಸಿತು. ವಿಷಾದದ ಧ್ವನಿಯಲ್ಲಿ ನಿಟ್ಟುಸಿರಿಟ್ಟು ಕುಸಿದು ಕುಳಿತರು.
“ನೀವು ಏನೇ ಹೇಳಿ ಮೇಡಂ, ಈ ಜಾಹೀರಾತು ನೀಡಿರೋದು ಕೇವಲ ಯುವಕರಿಗೆ” ಅವಳನ್ನು ಕನ್ವಿನ್ಸ್ ಮಾಡುವಂತೆ ಹೇಳಿದರು. ಆಕೆ ಒಪ್ಪಿಕೊಳ್ಳುವಂತೆ ಕಾಣಿಸಲಿಲ್ಲ.
“ನೀವು ಏನೇ ಹೇಳಿ. ನಾನು ಆ ಜಾಹೀರಾತನ್ನು ನೋಡಿಯೇ ಬಂದವಳು. ನೀವು ನನಗೂ ಅನುಮತಿ ಕೊಡಬೇಕು” ಹಠ ಹಿಡಿದಂತೆ ಹೇಳಿದಾಗ ಡಾಕ್ಟರ್ ಬಝರ್ ಒತ್ತಿ ಅಟೆಂಡರ್ ಅನ್ನು ಕರೆದರು.
“ಮೇಡಂ, ದಯವಿಟ್ಟು ಹೊರಗೆ ನಡೆಯಿರಿ. ನನಗೆ ಬಹಳಷ್ಟು ಕೆಲಸಗಳಿವೆ” ಎಂದು ಎದ್ದು ಹೊರಗೆ ಬಂದು ಎದುರಿಗೆ ನಿಂತಿದ್ದ ಅಟೆಂಡರ್ಗೆ ಒಳಗೆ ಕುಳಿತ ಯುವತಿಯನ್ನು ಹೊರಗೆ ಕಳುಹಿಸುವಂತೆ ಹೇಳಿ, ಮೊಬೈಲ್ ತೆಗೆದು ನರ್ಸಿಂಗ್ ಸೂಪರಿಂಟೆಂಡೆಂಟ್ಗೆ ಕರೆ ಮಾಡಿದರು.
“ನೀವು ಅವಕಾಶ ನೀಡದಿದ್ದರೆ ನಾನು ಕೋರ್ಟ್ನ ಮೊರೆ ಹೋಗುತ್ತೇನೆ. ನೀವು ಕೊಟ್ಟಿರೋ ಜಾಹೀರಾತಿನಲ್ಲಿ ನೀವು ಹೇಳಿರೋ ಎರಡೂ ಕಂಡೀಶನ್ಗಳೂ ಇಲ್ಲ. ಅಲ್ಲಿ ಯುವಕರಿಗೆ ಮಾತ್ರ ಅನ್ನೋದು ಇಲ್ಲ, ಕೊನೆಯ ದಿನಾಂಕ ಯಾವುದು ಅನ್ನೋದು ತಿಳಿಸಿಲ್ಲ” ಅವರ ಹಿಂದೆಯೇ ಬರುತ್ತಾ ಹೇಳಿದಳು. ಅಷ್ಟರಲ್ಲಿಯೇ ನರ್ಸಿಂಗ್ ಸೂಪರಿಂಟೆಂಡೆಂಟ್ ಬರುತ್ತಿರುವುದು ಕಂಡಿತು.
* * *
ಆ ರೂಮ್ನ ಒಳಗೆ ಕುಳಿತ್ತಿದ್ದ ನಾಲ್ವರೂ ಏನನ್ನೋ ಗಹನವಾಗಿ ಚರ್ಚಿಸಿ ಕಂಪ್ಯೂಟರನ್ನೇ ತದೇಕಚಿತ್ತದಿಂದ ನೋಡುತ್ತಿದ್ದರು. ಅವರಲ್ಲಿ ಒಬ್ಬಾತ ಕಂಪ್ಯೂಟರ್ನ ಮೌಸನ್ನು ಆಡಿಸುತ್ತ ತಕ್ಷಣವೇ ಕಿರುಚಿದ.
“ಎಸ್, ಎಸ್, ಸರಿಯಾಗಿದೆ. ಅದೇ ಸ್ಥಳದಲ್ಲಿ ಅದನ್ನು ಕೆಳಗಿಳಿಸಬೇಕು. ಅದು ನೆಲಕ್ಕೆ ತಾಡಿಸುತ್ತಲೇ ವಿದ್ಯುತ್ ಆರಿ ಹೋಗಬೇಕು” ಕಂಪ್ಯೂಟರ್ನ ಸ್ಕ್ರೀನ್ನಲ್ಲಿ ಗೋಚರಿಸುತ್ತಿದ್ದ ಸಣ್ಣ ತಟ್ಟೆಯಾಕಾರದ ಬೆಳಕಿನ ವಸ್ತುವನ್ನು ಭೂಮಿಯತ್ತ ತಿರುಗಿಸಿದ. ಅದು ಎಷ್ಟೋ ಕಿಲೋಮೀಟರ್ ವೇಗದಲ್ಲಿ ಹಾರಿ ಭೂಮಿಗೆ ಅಪ್ಪಳಿಸಿತು. ಆ ರಭಸಕ್ಕೆ ಭೂಮಿಯನ್ನು ಗುದ್ದಿ “ಫಾಲ್ಟ್ ಜೋನ್”ನಲ್ಲಿ ನಡೆದ ಘರ್ಷಣೆಯಂತೆ ಭೂಮಿಯ ಪದರಗಳು ಜಾರಿ ಭೂಕಂಪದಂತೆ ಭೂಮಿಯು ನಾಲ್ಕೆöÊದು ಕಿಲೋಮೀಟರ್ಗಳಷ್ಟು ವ್ಯಾಪ್ತಿಯಲ್ಲಿ ಕಂಪಿಸಿತು. ತತ್ಕ್ಷಣವೇ ವಿದ್ಯುತ್ ಪ್ರವಾಹ ನಿಂತಿತು. ಸುತ್ತಲೂ ಗಾಢಾಂಧಕಾರ ವ್ಯಾಪಿಸಿತು. ಚಾಲನೆಗೆ ಬರಬೇಕಿದ್ದ ಜನರೇಟರ್ ಸ್ತಬ್ಧವಾಯಿತು. ನೆಲಕ್ಕೆ ಇಳಿದಿದ್ದ ತಟ್ಟೆಯ ಮುಚ್ಚಳ ತೆರೆದು, ಇಲಿ ಮೂತಿಯ ಐದಾರು ಮನುಷ್ಯರು ಇಳಿದು ಸರಸರನೆ ಸಂಶೋಧನಾ ಕೇಂದ್ರದ ಒಳಗೆ ನಡೆದರು. ಸೂಟ್ಕೇಸ್ನಂತಹ ಪೆಟ್ಟಿಗೆಯೊಳಗೆ ಸ್ಪೆಷಲ್ ವಾರ್ಡ್ನ ವ್ಯಕ್ತಿಯನ್ನು ಮಡಚಿ ತುರುಕಿಸಿ, ಅದನ್ನು ಇರುವೆ, ಎಣ್ಣೆ ತಿಂಡಿಯ ಚೂರನ್ನು ಎತ್ತಿಕೊಂಡು ಹೋಗುವಂತೆ ತಟ್ಟೆಯೊಳಗೆ ಹೋದರು. ತಟ್ಟೆಯ ಮುಚ್ಚಳ ಮುಚ್ಚಿತು. ಬೆಳಕಿನಂತಹ ಕಿಡಿಹಾರಿತು. ದೂರಕ್ಕೆ ಸಾಗಿತು. ಇದನ್ನೆಲ್ಲ ಒಬ್ಬ ವ್ಯಕ್ತಿ ಗಮನಿಸುತ್ತಿದ್ದ.
* * *
ಕಾನ್ಫರೆನ್ಸ್ ಹಾಲ್ನಲ್ಲಿ ಸಂಶೋಧನತಂಡದ ವಿಜ್ಞಾನಿಗಳೆಲ್ಲ ಕುಳಿತ್ತಿದ್ದರು. ಎಲ್ಲರ ಮುಖದಲ್ಲಿಯೂ ಆತಂಕದ ಸೆಲೆಯಿತ್ತು. ಬಹಳಷ್ಟು ಶ್ರಮವಹಿಸಿ ನಡೆಸಿದ ಸಂಶೋಧನೆಯ ಪ್ರಯೋಗವಾಗುತ್ತಲೇ, ಪ್ರಯೋಗಕ್ಕೆ ಗುರಿಯಾದ ವ್ಯಕ್ತಿ ವೇಲಾಂಡಿ ಖಿನ್ನತೆಗೊಳಗಾಗಿದ್ದ. ಅವನಲ್ಲಿ ಇಮ್ಯೂನಿಟಿ ಪವರ್ ಹೆಚ್ಚಾಗುವ ಲಕ್ಷಣಗಳು ಕಾಣಿಸಲಿಲ್ಲ. ಬದಲಾಗಿ ತಲೆಯಲ್ಲಿ ಒಂದು ರಂಧ್ರ ಕಾಣಿಸಿಕೊಂಡಿತು. ಡಾಕ್ಟರ್ ಚೆಂಗಯ್ಯ ಅದನ್ನು ಗಮನಿಸುತ್ತಲೇ ಚಿಂತೆಗೊಳಗಾದರು. ಆ ವ್ಯಕ್ತಿ ಸಂಪೂರ್ಣವಾಗಿ ಮಾತು ಬಿಟ್ಟಿದ್ದ. ಮನುಷ್ಯನ ಶಕ್ತಿಯನ್ನು ಹೆಚ್ಚಿಸಿ ಅದರಿಂದ ಉತ್ಪತ್ತಿಯಾಗುವ ರಾಸಾಯನಿಕದಿಂದ ಆತನಲ್ಲಿ ಲವಲವಿಕೆ ಹೆಚ್ಚಾಗಿ ಹೈಪರ್ ಆಕ್ಟೀವ್ ಆಗಬಹುದೆಂದು ನಿರೀಕ್ಷಿಸಿದ್ದು ಈಗ ಬುಡಮೇಲಾಗಿತ್ತು.
ಆತ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಆತನ ದೇಹದ ಸರ್ವ ಅಂಗಾಂಗಳ ಕಾರ್ಯವೈಖರಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಎಲ್ಲ ಅಂಗಾಂಗಗಳು ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿದ್ದವು. ಹಾಗಾದರೆ ಈಗ ಆತನ ಲವಲವಿಕೆ ಬತ್ತಿಹೋಗುವುದಕ್ಕೆ ಕಾರಣ ಆತನ ತಲೆಯಲ್ಲಿ ಉಂಟಾಗಿದ್ದ ಸಣ್ಣ ತೂತು?! ಡಾಕ್ಟರ್ ತಮ್ಮ ಸಂದೇಹವನ್ನು ಹೊರಗೆಡಹಿದರು. ಯಾರೊಬ್ಬರೂ ಮಾತಾಡುವಂತ್ತಿರಲಿಲ್ಲ. ಆ ರಂಧ್ರಕ್ಕೆ ಕಾರಣವೇನೆನ್ನುವುದನ್ನು ಆಲೋಚಿಸುತ್ತಿದ್ದರು.
“ಹೀಗಾಗೋದಿಕ್ಕೆ ಯಾವ ಕಾರಣವೂ ಇಲ್ಲ, ಡಾಕ್ಟರ್ ಚೆಂಗಯ್ಯ. ನಮ್ಮ ಹಿಂದಿನ ಎರಡೂ ಲಸಿಕೆಗಳು ಯಶಸ್ವಿಯಾಗಿದ್ದವು. ಅದರದ್ದೇ ಸುಧಾರಿತ ವರ್ಷನ್ ಈ ಲಸಿಕೆ. ಮುಂದೆ ಬರಬಹುದಾದ ಕೊರೋನಾದಂತಹ ಸಾಂಕ್ರಾಮಿಕವನ್ನು ತಡೆಗಟ್ಟುವ ಲಸಿಕೆ ಅದಲ್ಲವೇ? ಜನರಲ್ಲಿ ಕೊರೋನಾಕ್ಕೆ ತೆಗೆದುಕೊಂಡ ಲಸಿಕೆಯಿಂದಾಗಿ ಹೃದಯಾಘಾತದಂತಹ ಕಾಯಿಲೆಗಳು ಹೆಚ್ಚಾಗಿವೆ. ಅದರಲ್ಲೂ ಯುವಕರನ್ನೇ ಅದು ಆಕ್ರಮಿಸಿದೆ ಎನ್ನುವ ತಪ್ಪು ಕಲ್ಪನೆ ಇದೆ. ಅದನ್ನು ಸಂಪೂರ್ಣ ಅಲ್ಲಗಳೆಯುವಂತೆ ಸಂಶೋಧನೆಗಳು ನಡೆಯುತ್ತಿವೆ. ಜನರಿಗೆ ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿ ಪತ್ರಿಕೆಗಳು ಅವೆರ್ನಸ್ ಕ್ರಿಯೇಟ್ ಮಾಡುತ್ತಿವೆ. ಇದು ಒಳ್ಳೆಯ ಬೆಳವಣಿಗೆ. ಅದೇ ಹೊಸ ಲಸಿಕೆಯ ಬಗ್ಗೆಯೂ ಜನರಲ್ಲಿ ಅರಿವನ್ನು ಮೂಡಿಸುವ ಅಗತ್ಯವಿದೆ. ನಮ್ಮ ಹೊಸ ಲಸಿಕೆಯ ಬಗ್ಗೆ ಸಂಫೂರ್ಣ ಮಾಹಿತಿಯನ್ನು ನಾವು ಜನರಿಗೆ ತಿಳಿಸಬೇಕಿದೆ. ಆದರೆ ಆ ಲಸಿಕೆಯ ಪ್ರಯೋಗಕ್ಕೊಳಗಾದ ವ್ಯಕ್ತಿಯಲ್ಲಿ ತಲೆಯಲ್ಲಿ ರಂಧ್ರ ಕಾಣಿಸಿಕೊಂಡಿರುವುದು ಅಚ್ಚರಿ. ಮನುಷ್ಯನ ಇಮ್ಯುನಿಟಿ ಪವರ್ ಹೆಚ್ಚಾಗಬೇಕಿತ್ತೇ ಹೊರತು, ಅಡ್ಡಪರಿಣಾಮಗಳಾಗುವ ಸಾಧ್ಯತೆ ಇಲ್ಲ” ಚಿಂತಿತರಾಗಿ ಹೇಳಿದರು ಡಾಕ್ಟರ್ ಮುತ್ತು.
“ಹೌದು, ಒಂದು ವೇಳೆ ಇಮ್ಯುನಿಟಿ ಪವರ್ ಜಾಸ್ತಿಯಾದರೂ ಹೃದಯದ ಮೇಲೆ ಅಥವಾ ಕಿಡ್ನಿಯ ಮೇಲೆ ಪ್ರಭಾವ ಬೀರಬೇಕಿತ್ತೇ ಹೊರತು ಮೆದುಳಿನ ಮೇಲೆ ಅಲ್ಲ” ತಮ್ಮ ಅನುಭವದ ಮಾತನ್ನು ಹರಿಯಬಿಟ್ಟರು.
“ಹಾಗಾದರೆ ಆ ವ್ಯಕ್ತಿಯ ತಲೆಯಲ್ಲಿ ರಂಧ್ರವಾಗುವ ಪ್ರಕ್ರಿಯೆ ಮೊದಲೇ ಆರಂಭವಾಗಿತ್ತೆ…”
“ನೋ, ಡಾಕ್ಟರ್ ಮುತ್ತು. ಅದು ನಿಮಗೂ ಗೊತ್ತು. ನಾವು ಆಯ್ಕೆ ಮಾಡಿಕೊಂಡಿದ್ದು ಒಬ್ಬ ಆರೋಗ್ಯವಂತ ಯುವಕನನ್ನು. ಆತನಲ್ಲಿ ಯಾವುದೇ ರೋಗದ ಲಕ್ಷಣಗಳಿರಲಿಲ್ಲ. ಇದ್ದಕ್ಕಿದ್ದಂತೆ ಹೀಗಾಗಿದೆಯೆಂದರೆ ನಮ್ಮ ಲಸಿಕೆಯ ಅಡ್ಡ ಪರಿಣಾಮವೆನ್ನುವ ಹಾಗೂ ಇಲ್ಲ. ಯಾವುದಕ್ಕೂ ಆತನಿಗೆ ಒಂದು ಮೈನರ್ ಸರ್ಜರಿಯನ್ನು ಮಾಡಿ ನೋಡೋಣ” ಎಂದವರೇ ಸಂಜೆಯ ಹೊತ್ತಿಗೆ ವೇಲಾಂಡಿಗೆ ಸರ್ಜರಿ ನಡೆಸಲು ಬೇಕಾದ ವ್ಯವಸ್ಥೆಯನ್ನು ಮಾಡಲು ತಮ್ಮ ಅಸಿಸ್ಟೆಂಟ್ ಡಾಕ್ಟರ್ಗಳಿಗೆ ಸೂಚಿಸಿದರು.
ವೇಲಾಂಡಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಅಚ್ಚರಿಯೆಂಬಂತೆ ಆತನ ದೇಹದಲ್ಲಿ ಇಮ್ಯುನಿಟಿ ಪವರ್ ಹೆಚ್ಚಾಗಿ ತನಗೇನೂ ಆಗಿಲ್ಲವೆನ್ನುವಂತೆ ಎದ್ದು ತಿರುಗಾಡಲಾರಂಭಿಸಿದ. ಮೊದಲಿಗಿಂತಲೂ ಲವಲವಿಕೆ ಹೆಚ್ಚಾಯಿತು. ವಾರದಲ್ಲಿಯೇ ಆತ ಮೊದಲಿನಂತೆಯೇ ಆದ. ಆತನ ಮೆದುಳಿನ ಎಂ.ಆರ್.ಐ. ಮಾಡಲಾಯಿತು. ಅಚ್ಚರಿಯೆಂಬಂತೆ ರಂಧ್ರ ಮಾಯವಾಗಿತ್ತು.
ಇದಾಗಿ ಹತ್ತು ದಿವಸಕ್ಕೆ ವೇಲಾಂಡಿ ಕಣ್ಮರೆಯಾದ. ಸಂಜೆಯ ಹೊತ್ತು ಆತನ ಜೊತೆಗೆ ಡಾಕ್ಟರ್ ಚೆಂಗಯ್ಯ ಮಾತನಾಡಿದ್ದರು. ತಮ್ಮ ಪ್ರಯೋಗ ಯಶಸ್ವಿಯಾಗುವ ಲಕ್ಷಣಗಳು ಕಾಣಿಸಿಕೊಂಡವು. ಆದರೆ ಅದೇ ಸಂಜೆ ಪವರ್ ಫೇಲ್ಯೂರ್ ಆಗುವ ಹೊತ್ತಿಗೆ ಅವನ ಕೋಣೆಯಿಂದ ಕೂಗು ಕೇಳಿಸಿತ್ತು. ಏನಾಗಿದೆಯೆಂದು ತಿಳಿದುಕೊಳ್ಳುವಷ್ಟರಲ್ಲಿ ವೇಲಾಂಡಿ ಮಾಯವಾಗಿದ್ದ!
ದೇಶದ ಅತ್ಯುನ್ನತ ಬೇಹುಗಾರಿಕಾ ಸಂಸ್ಥೆ ಇದನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿತು. ಇದು ದೇಶದ ಆಂತರಿಕ ಭದ್ರತೆಯ ವಿಷಯ ಮಾತ್ರವಲ್ಲ, ಅಂತಾರಾಷ್ಟ್ರೀಯ ಸಮಸ್ಯೆಯೂ ಆಗುವ ಸಾಧ್ಯತೆಗಳಿದ್ದವು.
ಆ ದಿನ ರಾತ್ರಿ ಹೊತ್ತು ನಡೆದ ಘಟನೆಯನ್ನು ಬೇಹುಗಾರಿಕಾ ಸಂಸ್ಥೆಗೆ ತಮ್ಮ ವಿಶೇಷವಾದ ಕೋಣೆಯಲ್ಲಿ ಕುಳಿತು ಡಾಕ್ಟರ್ ಚೆಂಗಯ್ಯ ವಿವರಿಸುತ್ತಿದ್ದರು. ಅಲ್ಲಿಂದ ಯಾವುದೇ ವಿಷಯಗಳು ಸೋರಿ ಹೋಗದಂತೆ ಬಹಳ ಎಚ್ಚರಿಕೆಯಿಂದ ಮಾತುಕತೆಗಳು ನಡೆಯುತ್ತಿದ್ದವು. ಅವನ್ನೆಲ್ಲ ಸೂಕ್ಷ್ಮವಾಗಿ ತಿಳಿದುಕೊಂಡ ಬೇಹುಗಾರಿಕಾ ಸಂಸ್ಥೆ ತನ್ನ ಮೊದಲನೆಯ ಹೆಜ್ಜೆಯೆಂಬಂತೆ ಭೂಗರ್ಭಶಾಸ್ತ್ರ ವಿಜ್ಞಾನಿಗಳನ್ನು ಕರೆಯಿಸಿ ಸಂಶೋಧನಕೇಂದ್ರದ ಸುತ್ತಲೂ ಭೂಮಿಯ ಮೇಲೆ ಒತ್ತಡ ಬಿದ್ದಿರುವ ಯಾವುದಾದರೂ ಅವಘಡಗಳು ಸಂಭವಿಸಿರಬಹುದೇ? ಎಂದು ಪರಿಶೀಲನೆ ನಡೆಸುವಂತೆ ಸೂಚಿಸಿತು. ಭೂಗರ್ಭಶಾಸ್ತ್ರ ವಿಜ್ಞಾನಿಗಳ ತಂಡ ಅಹರ್ನಿಶಿ ಪ್ರಯತ್ನದಿಂದ ಒಂದೆಡೆ ಭೂಮಿ ಒಂದಷ್ಟು ಡಯಾಮೀಟರ್ನಲ್ಲಿ ಒತ್ತಡವೇರ್ಪಟ್ಟು ಒಳಗೆ ತಳ್ಳಿದಂತೆ ಇತ್ತು! ಎನ್ನುವುದನ್ನು ದೃಢಪಡಿಸಿತು. ತಂಡದ ಕಾರ್ಯ ಇನ್ನಷ್ಟು ಚುರುಕಾಯಿತು.
* * *
ಕಾನ್ಫರೆನ್ಸ್ ಹಾಲ್ನಲ್ಲಿ ಏಸಿಯ ಸದ್ದು ಕೂಡ ಕೇಳಿಸದಷ್ಟು ಮೌನ ನೆಲೆಸಿತ್ತು. ಡಾಕ್ಟರ್ ಮುತ್ತು ತೀರಾ ಬಳಲಿದಂತೆ ಕಾಣುತ್ತಿದ್ದ. ಆ ದಿನ ಬೆಳಗ್ಗೆ ಆತನಿಗೆ ಮಲೇಷಿಯಾದಿಂದ ಆತನ ಗೆಳೆಯ ಚಾನುದಾಯ್ ಕರೆ ಮಾಡಿ ಮಾತಾಡಿದ್ದ.
ಚಾನುದಾಯ್ ಮುತ್ತು ಜೊತೆಗೆ ಚೆನ್ನೈ ಮೆಡಿಕಲ್ ಕಾಲೇಜ್ನಲ್ಲಿ ಓದಿದವನು. ಭಾರತದ ಹೈಯರ್ ಸ್ಟಡೀಸ್ಗೆ ಮಾನ್ಯತೆಯಿಲ್ಲವೆಂದು ಮಲೇಷಿಯಾದ ಪ್ರಜೆಯಾದ ಆತ ಚೀನಾದಲ್ಲಿ ಎಂ.ಡಿ. ಮಾಡಲೆಂದು ಸೇರಿಕೊಂಡ. ಅವನು ಚೀನಾಕ್ಕೆ ತೆರಳಿದ ಮೇಲೂ ಇಬ್ಬರಲ್ಲಿಯೂ ಇನ್ನಷ್ಟು ಆತ್ಮೀಯತೆ ಬೆಳೆಯಿತು. ಮುತ್ತು ನಾಗಲ್ಪುರ ಸಂಶೋಧನಕೇಂದ್ರಕ್ಕೆ ಸೇರಿದ ಮೇಲೆ ಸಂಪರ್ಕ ಅಷ್ಟಕಷ್ಟೇ ಆದರೂ ಕೆಲವೊಮ್ಮೆ ಮಾತನಾಡುವಾಗ ತಾಸುಗಟ್ಟಲೆ ಹರಟುತ್ತಿದ್ದುದು ಸುಳ್ಳಲ್ಲ. ಯಾಕೋ ಆ ದಿನ ಇಬ್ಬರೂ ಯಾವುದೋ ಗಂಭೀರ ವಿಷಯದ ಬಗ್ಗೆ ಚರ್ಚಿಸಿ ಮನಸ್ತಾಪ ಬೆಳೆಯುವಂತಾಯಿತು. ಇದರಿಂದ ಡಾಕ್ಟರ್ ಮುತ್ತು ತೀರಾ ಕುಗ್ಗಿಹೋದ.
“ಡಾಕ್ಟರ್ ಮುತ್ತು, ನಾನು ಹೇಳುತ್ತಿರುವುದನ್ನು ನೀವು ಕೇಳಿಸಿಕೊಳ್ಳುತ್ತಿಲ್ಲ” ಡಾಕ್ಟರ್ ಚೆಂಗಯ್ಯ ಅವನ ಗಮನ ಸೆಳೆಯುವಂತೆ ಹೇಳಿದರು. ಮುತ್ತು ತಕ್ಷಣವೇ ಎಚ್ಚೆತ್ತುಕೊಂಡವರAತೆ “ಸರ್” ಎಂದ ಅನ್ಯಮನಸ್ಕತೆಯಿಂದ.
“ಭೂವಿಜ್ಞಾನಿಗಳ ತಂಡದ ಪರಿಶೀಲನೆಯಿಂದ ನಮ್ಮ ಕ್ಯಾಂಪಸ್ನ ಹಿಂಭಾಗದಲ್ಲಿ ಒತ್ತಡದಿಂದ ಭೂಮಿ ಸ್ವಲ್ಪ ಕುಗ್ಗಿಹೋದಂತೆ ಇದೆಯಂತೆ. ನನಗೂ ಅನುಮಾನವಿತ್ತು” ಎಂದು ಮಾತು ನಿಲ್ಲಿಸಿದರು.
“ಅನುಮಾನವೇ?”
“ಹೌದು, ಅನ್ಯಗ್ರಹದಿಂದ ಹಾರುತಟ್ಟೆ ಬಂದಿರುವ ಸಾಧ್ಯತೆ ಇದೆ.”
ಡಾಕ್ಟರ್ ಚೆಂಗಯ್ಯರ ಮಾತು ಕೇಳಿ ಹಿಂದೆ ಕುಳಿತ್ತಿದ್ದ ಯುವ ವಿಜ್ಞಾನಿಯೊಬ್ಬ ಕಿಸಕ್ಕನೆ ನಕ್ಕ. ಚೆಂಗಯ್ಯ ಗಂಭೀರರಾದರು.
“ಸಾಧ್ಯತೆಯನ್ನು ತಳ್ಳಿ ಹಾಕಲಾಗದು.”
“ನೋ, ಅಂತಹ ಸಾಧ್ಯತೆ ಇಲ್ಲ.”
“ಅದು ಹೇಗೆ ಹೇಳುವಿರಿ?”
“ನಿಮ್ಮ ಮಾತನ್ನೇ ಸ್ವಲ್ಪ ಅಡ್ವಾನ್ಸ್ ಆಗಿ ಆಲೋಚಿಸಿ ಹೇಳಿದರೆ ಸರಿಯಾದೀತು.”
“ಅದು ಹೇಗೆ? ನಿಮ್ಮ ಮಾತಿನ ಅರ್ಥವೇನು?”
“ಅದು ಅನ್ಯಗ್ರಹದ ಹಾರುತಟ್ಟೆ ಬಂದಿದ್ದಲ್ಲ. ಬದಲಾಗಿ ಮನುಷ್ಯ ಕುಳಿತು ಸಾಗಬಲ್ಲ ಡ್ರೋನ್ ಆಗಿರಬಹುದಲ್ಲ? ಅಲ್ಲಗಳೆಯುವಿರಾ?”
“ಅದು ಹೇಗೆ ಸಾಧ್ಯ?”
ಡ್ರೋನ್ಗೂ ವೇಲಾಂಡಿಯ ಕಣ್ಮರೆಗೂ ಸಂಬಂಧವಿದೆ. ಸಣ್ಣ ದೀಪ ಕಾಣಿಸಿಕೊಂಡಾಗಲೇ ವಿದ್ಯುತ್ ಕೈಕೊಟ್ಟಿದೆ. ಆ ಮಿಣುಕು ದೀಪ ಡ್ರೋನ್ನದ್ದೇ ಆಗಿರಬೇಕು”
“ಓಕೆ, ವೇಲಾಂಡಿಯನ್ನು ಆ ಡ್ರೋನ್ ಹೊತ್ತೊಯ್ದಿದೆಂತ ನೀವು ಹೇಳುತ್ತಿರುವುದೇ?”
ಇಡೀ ಕಾನ್ಫರೆನ್ಸ್ ಹಾಲ್ನಲ್ಲಿ ಪಿನ್ಡ್ರಾಪ್ ಸೈಲೆಂಟ್!
“ಬೇಹುಗಾರಿಕೆಯ ಸಂಸ್ಥೆಯ ತನಿಖೆಯ ಪ್ರಕಾರ ಹಾರುತಟ್ಟೆಯೇ ಕಾಣಿಸಿಕೊಂಡಿದೆ. ಆದರೆ ಅಲ್ಲೆಲ್ಲ ನಡೆದಾಡಿರುವ ಹೆಜ್ಜೆ ಗುರುತುಗಳು ಮನುಷ್ಯರದ್ದೇ. ಆದ್ದರಿಂದ ಅನ್ಯಗ್ರಹ ಜೀವಿ ಬಂದಿರುವ ಸಾಧ್ಯತೆ ಇಲ್ಲ. ಬದಲಾಗಿ ಇದು ಆಂತರಿಕ ಸಮಸ್ಯೆಯೇ ಹೊರತು ಬೇರೇನಲ್ಲ” ಡಾಕ್ಟರ್ ಚೆಂಗಯ್ಯ ಒಂದು ನಿರ್ಧಾರಕ್ಕೆ ಬಂದಂತೆ ನಿಟ್ಟುಸಿರಿಟ್ಟು ಮಾತು ನಿಲ್ಲಿಸಿದರು.
“ಅಲ್ಲಗಳೆಯುವಂತಿಲ್ಲ. ಹಾರುತಟ್ಟೆಯಲ್ಲವಾದರೂ ಭೂಮಿಯ ಮೇಲೆ ಒತ್ತಡ ಬಿದ್ದಿರುವಂತದ್ದು ಡ್ರೋನ್ನದ್ದೇ ಆಗಿರಬೇಕು.”
“ಅಷ್ಟೊಂದು ದೊಡ್ಡದೇ?”
“ಹೌದು, ಶತ್ರು ನಮ್ಮ ನಡೆಯನ್ನು ತಿಳಿದುಕೊಳ್ಳುವುದಕ್ಕೆ ಮನುಷ್ಯ ಕುಳಿತು ಚಲಾಯಿಸುವಂತಹ ಡ್ರೋನ್ ಅನ್ನು ಬಳಸಿರಬಹುದು. ಅಂದರೆ ಇಲೆಕ್ಟಿçಕ್ ಏರ್ ಟ್ಯಾಕ್ಸಿ. ನೋಡೋದಿಕ್ಕೆ ಡ್ರೋನ್ ರೀತಿಯಲ್ಲೇ ಇರುತ್ತೆ. ಮನುಷ್ಯ ಕುಳಿತುಕೊಂಡು ಹೋಗುವ ಹಾರು ಕಾರುಗಳು ಇವು. ಇಲೆಕ್ಟಿçಕ್ ಕಾರು, ಸ್ಕೂಟರ್ಗಳಂತೆ ಸದ್ದೇ ಇಲ್ಲದೆ ಒಂದು ನಿಮಿಷಕ್ಕೆ ಐದು ಕಿಲೋಮೀಟರ್ ಹಾರಬಲ್ಲದು.”
ಏರ್ ಟ್ಯಾಕ್ಸಿ!!
ಎಲ್ಲರಲ್ಲೂ ಅಚ್ಚರಿ ಮೂಡಿತು. ಇದು ಅಸಾಧ್ಯವೆನಿಸಿತು. ಮನುಷ್ಯ ಕುಳಿತು ಹಾರುವ ಡ್ರೋನ್ ಇರಲು ಸಾಧ್ಯವೇ?
* * *
“ಐಷಾನಿಯವರಿಂದಾಗಿ ನಮಗೆ ತುಂಬಾ ಅನುಕೂಲವಾಯಿತು” ಡಾಕ್ಟರ್ ಚೆಂಗಯ್ಯರವರ ನೋಟ ಡಾಕ್ಟರ್ ಮುತ್ತು ಕಡೆಗಿತ್ತು. ಮುತ್ತು ತಪ್ಪಿತಸ್ಥನಂತೆ ಕುಳಿತ್ತಿದ್ದ. ತನ್ನನ್ನು “ಲಾಯರ್” ಎಂದು ಪರಿಚಯಿಸಿಕೊಂಡು ಬಂದಿದ್ದ ಐಷಾನಿ ಸಂಶೋಧನ ಕೇಂದ್ರಕ್ಕೆ ಬಂದ ಉದ್ದೇಶವೇ ಬೇರೆಯಿತ್ತು. ಅದು ಚೆಂಗಯ್ಯನವರಿಗೂ ತಿಳಿದಿರಲಿಲ್ಲ. ವೇಲಾಂಡಿ ತನ್ನ ಪರಿಚಯಸ್ಥನೆಂದರೂ ಆಕೆ ಬೇರೇನೋ ಉದ್ದೇಶದಿಂದ ಬಂದಿದ್ದಳು. ಈಗ ಬೇಹುಗಾರಿಕೆ ಸಂಸ್ಥೆ ಜೊತೆಗೆ ಸೇರಿ ಸೋರಿಕೆಯಾಗುತ್ತಿರುವ ಸಂಶೋಧನಕೇಂದ್ರ ಕಂಡು ಹುಡುಕಿದ ಮಹತ್ತ್ವದ ಲಸಿಕೆಯ ಮಾಹಿತಿಯನ್ನು ಸಂಪೂರ್ಣ ಎಗರಿಸಲು ಸಜ್ಜಾದ ಅನೂಹ್ಯ ವ್ಯಕ್ತಿಗಳ ಕೈವಾಡವನ್ನು ಕಂಡುಹಿಡಿಯಲು ಬಂದಂತಿತ್ತು. ಸಣ್ಣಗಿನ ಬೆಳಕೊಂದು ಹಾರಿ ಹೋಗುವಾಗ ಅದನ್ನು ದೂರದಲ್ಲಿ ನಿಂತು ಗಮನಿಸುತ್ತಿದ್ದಳು ಐಷಾನಿಯೇ. ಸಂಶೋಧನಾ ಕೇಂದ್ರದ ಮಾಹಿತಿಗಳೆಲ್ಲವನ್ನೂ ಆಕೆ ತಿಳಿದುಕೊಳ್ಳುತ್ತಿದ್ದಳು.
ವೇಲಾಂಡಿಗೂ ಐಷಾನಿಗೂ ಸಂಬಂಧವಿಲ್ಲ. ಅವಳು ಸ್ಕಾಟ್ಲ್ಯಾಂಡಿನಲ್ಲಿ ತರಬೇತು ಪಡೆದ ಬೇಹುಗಾರಿಕಾ ಸಂಸ್ಥೆಯ ಅಧಿಕಾರಿಣಿ. ಆಕೆ ಕಾನೂನನ್ನು ಓದಿರುವುದು ಮತ್ತು ಕಾನೂನಾತ್ಮಕ ವಿಷಯಗಳನ್ನು ತಿಳಿದುಕೊಂಡಿರುವುದರಿಂದ ಲಾ ಪಾಯಿಂಟ್ಗಳನ್ನು ಎತ್ತಿಹಿಡಿದು ಸಮಸ್ಯೆಯ ಬುಡವನ್ನೇ ಶೋಧಿಸುವ ನೈಪುಣ್ಯತೆ ಗಳಿಸಿದ್ದಳು. ಅವಳ ಬಗ್ಗೆ ಮೆಚ್ಚುಗೆಯ ಮಾತಾಡುವಾಗಲೇ ಮುತ್ತುವಿಗೇಕೋ ಇರಿಸುಮುರಿಸಾಯಿತು.
ಅದೇ ದಿನ ರಾತ್ರಿ ಐಷಾನಿ ಡಾಕ್ಟರ್ ಚೆಂಗಯ್ಯ ಅವರನ್ನು ತನಿಖೆಗಾಗಿ ಭೇಟಿಯಾಗುವುದಿತ್ತು.
ಸದ್ದೇ ಇಲ್ಲದೆ ಮನುಷ್ಯರನ್ನು ಹೊತ್ತೊಯ್ಯುವ ಡ್ರೋನ್ ಬಂದಿರುವುದು ಅಚ್ಚರಿಯ ವಿಷಯ. ಆದರೆ ವೇಲಾಂಡಿಯ ಕಣ್ಮರೆಯ ಹಿಂದೆ ಡ್ರೋನ್ನ ಪಾತ್ರವಿದೆ! ಅಷ್ಟು ಹೊತ್ತು ವಿದ್ಯುತ್ ಕೈಕೊಡಲು ಕಾರಣ ಕೂಡ ಡ್ರೋನ್ನ ತಂತ್ರಜ್ಞಾನ. ಅದರ ಸೆನ್ಸಾರ್ ಬಟನ್ಗಳು ವಿದ್ಯುತ್ ಪ್ರವಾಹವನ್ನು ನಿಲ್ಲಿಸಲು ಸಮರ್ಥವಾಗಿದ್ದವು. ಅದು ಸದ್ದಿಲ್ಲದೆ ಕೆಳಗಿಳಿಯುತ್ತಲೇ ಭೂಸ್ಪರ್ಷ ಮಾಡಿದಾಗ ಉಂಟಾದ ಶಬ್ಧದ ತರಂಗಗಳು ವಿದ್ಯುತ್ ಪ್ರಸರಣವನ್ನು ನಿಲ್ಲಿಸಿದ್ದವು.
ಡಾಕ್ಟರ್ ಮುತ್ತು ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಮಲೇಷಿಯಾದ ವ್ಯಕ್ತಿ ಚಾನುದಾಯ್ ಇಂಗ್ಲಿಷ್ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ನಾಗಲ್ಪುರ ಸಂಸ್ಥೆಯ ಜಾಹೀರಾತು ನೋಡಿ ತನಗೆ ಪರಿಚಯವಿದ್ದ ವ್ಯಕ್ತಿಯ ಮೂಲಕ ವೇಲಾಂಡಿಯನ್ನು ಅಲ್ಲಿಗೆ ಸೇರುವಂತೆ ಕುತಂತ್ರ ನಡೆಸಿ ಕಳುಹಿಸಿದ್ದ. ಅವನ ತಲೆಯ ಬಳಿ ಸಣ್ಣ ರಂಧ್ರ ಕೊರೆದು ಸೂಕ್ಷ್ಮವಾದ “ಮೈಕ್ರೋ ಚಿಪ್” ಅನ್ನು ಸೇರಿಸಿ ಅದರಿಂದ ಬರುತ್ತಿದ್ದ ಮಾಹಿತಿಯನ್ನು ತನ್ನ ಗೆಳೆಯರ ಜೊತೆಗೆ ಸೇರಿ ಸಂಶೋಧನಕೇಂದ್ರದ ಕಂಪ್ಯೂಟರ್ನಲ್ಲಿ ನೋಡಿ ಡೌನ್ಲೋಡ್ ಮಾಡುತ್ತಿದ್ದ. ಮುಂದೆ ಚೀನಾ ಸರಕಾರಕ್ಕೆ ಆ ಮಾಹಿತಿಯನ್ನು ಮಾರಾಟ ಮಾಡುವ ಉದ್ದೇಶದಿಂದ.
ಐಷಾನಿ ಹೇಳಿದ ಸ್ಫೋಟಕ ವಿಷಯದಿಂದ ಡಾಕ್ಟರ್ ಚೆಂಗಯ್ಯ ಅವರ ತಂಡ ಎಚ್ಚೆತ್ತಿತ್ತು. ವೇಲಾಂಡಿಗೆ ಸರ್ಜರಿ ನಡೆಸಿದ ಮೇಲೆ ಆ ರಂಧ್ರ ಮುಚ್ಚಿಕೊಂಡಿದ್ದು ಅಚ್ಚರಿಯ ವಿಷಯವಾಗಿತ್ತು. ಅವನನ್ನು ಕರೆದುಕೊಂಡು ಹೋಗಲು ಬಂದಿರುವ ಹಾರುತಟ್ಟೆಯಾಗಲಿ, ಡ್ರೋನ್ ಆಗಲಿ ಪತ್ತೆಯಾಗಲಿಲ್ಲ. ಆದರೆ ವೇಲಾಂಡಿಯ ದೇಹ ಮಾತ್ರ ರಾಷ್ಟ್ರೀಯ ಹೆದ್ದಾರಿಯ ಪೊದೆಗಳ ನಡುವೆ ಬಿದ್ದಿತ್ತು.
ಇದಾಗಿ ಒಂದು ತಿಂಗಳೊಳಗೆ ಡಾಕ್ಟರ್ ಚೆಂಗಯ್ಯರವರ ತಂಡ ಸಂಶೋಧನೆ ನಡೆಸಿದ ಲಸಿಕೆಯ ರಿಪೋರ್ಟ್ ಅನ್ನು ಸರ್ಕಾರಕ್ಕೆ ಒಪ್ಪಿಸಿದರು.