ತನ್ನ ಪ್ಲಾನ್ ಯಶಸ್ವಿಯಾಯಿತೆಂದು ನೆಮ್ಮದಿಯಿಂದ ಸಿಳ್ಳೆಹೊಡೆಯುತ್ತಾ ಮನೆಗೆ ತೆರಳಿದ ನಾಣಿ.
ಮಾಧವರಾಯ ಈಗ ತನ್ನ ವಿಭಾಗದ ಕಲಾಸಿಪಾಳ್ಯದ ಠಾಣೆಗೆ ಎಸ್.ಐ. (ಕ್ರೈಮ್) ಆಗಿ ವರ್ಗಾವಣೆಯಾಗಿ ಬಂದ ಸಂಗತಿ ಎಲ್ಲರಿಗಿಂತ ಹೆಚ್ಚಾಗಿ ಖುಶಿ ತಂದಿದ್ದು ಆ ಸ್ಟೇಷನ್ನಿನ ದಫೇದಾರ ಸತ್ಯನಾರಾಯಣರಾವ್ಗೆ. ಅರ್ಥಾತ್ ಎಲ್ಲರೂ ಮೊಟಕಾಗಿ ಕರೆಯುವ `ನಾಣಿ’ಗೆ… ಈ ಗಿಡ್ಡ ಹೆಸರಿನ ಹಿಂದೆಯೂ ಒಂದು ವಿನೋದವಿದೆಯೆಂದು ಬಹಳ ಮಂದಿಗೆ ಗೊತ್ತಿಲ್ಲ.
ತನ್ನ ಹೆಸರನ್ನು ಎಲ್ಲರೂ ಕುಲಗೆಡಿಸಿ ಬಾಯಿಮಾತಿನಲ್ಲಿ `ಸತ್ತ’ ನಾರಾಯಣ ಅಂತಲೋ, `ಸತ್ತೂ’ `ಸತ್ತೀ’ ಎಂದೋ ಕರೆದಾಗ ಮೈಯುರಿದುಹೋಗಿ ಎಲ್ಲರಿಗೂ ತನ್ನನ್ನು ನಾರಾಯಣರಾವ್ ಇಲ್ಲವೇ ಚಿಕ್ಕದಾಗಿ ಬೇಕಾದರೆ `ನಾಣಿ’ ಎಂದೇ ಕರೆಯಬೇಕೆಂದು ಹುಕುಂ ಮಾಡಿದ್ದ. ಏಕೆಂದರೆ `ಸತ್ತ’ ಎಂಬ ಪದದಿಂದ ಸಾವಿನ ವಾಸನೆ ಬರುತ್ತಿದ್ದದ್ದು ಅವನಿಗೆ ಬಹಳ ಅಪ್ರಿಯವಾಗಿಬಿಟ್ಟಿತ್ತು. ಮೊದಲೇ ಪ್ರತಿದಿನ ಅಪರಾಧಿಗಳೊಂದಿಗೆ ಸಾವು ಬದುಕಿನ ಆಟ ಆಡುತ್ತಿದ್ದ.
ಪೊಲೀಸಿನವನಿಗೆ ತನ್ನ ಸಾವಿನ ಬಗ್ಗೆ ನೆನೆಸಿಕೊಂಡೇ ಮೈ ನಡುಗುತ್ತಿತ್ತು!
ಈ ಕೆಲಸಕ್ಕೆ ಸೇರಿದ ಮೇಲಂತೂ ಮೊದಲಿನಿಂದಲೂ `ಶೋಕಿಲಾಲ್’ ಜೀವನವನ್ನು ನಡೆಸುತ್ತಿದ್ದವನಿಗೆ ಕುದುರೆ ಜೂಜಿನ ಚಟವೂ ಅಂಟಿ, ಗೆಲ್ಲಲಾಗದೆ ಮೈಯೆಲ್ಲಾ ಸಾಲಸೋಲ ಮಾಡಿಕೊಂಡು ಒದ್ದಾಡಹತ್ತಿದ್ದ.
ಹಾಗಿರುವಾಗ ಇಡೀ ಡಿಪಾರ್ಟ್ಮೆಂಟೇ `ಎಮ್ಮೆ ತಮ್ಮಣ್ಣ’, `ಮೊದ್ದುರಾಯ’ ಎಂದೆಲ್ಲಾ ಗೇಲಿ ಮಾಡುತ್ತಿದ್ದ ಈ ಮಾಧವರಾಯ ತಮ್ಮ ಠಾಣೆಗೇ ವರ್ಗವಾಗಿ ಬಂದು ಸೇರಿದ ಮೇಲಂತೂ ಒಂದು ಮಾಸ್ಟರ್ಪ್ಲಾನ್ ನಾಣಿಯ ತಲೆಯಲ್ಲಿ ಮೊಳಕೆಯಾಡತೊಡಗಿತ್ತು.
ಮತ್ತೆ ಮತ್ತೆ ಯೋಚಿಸಿದರೂ “ಹೌದು, ಯಾಕಾಗಬಾರದು?” ಎಂದು ಯೋಜನೆಯ ಬಗ್ಗೆ ಅವನ ಸ್ವಾರ್ಥ ದುರಾಸೆ ತುಂಬಿದ ಮನ ತರ್ಕ ಮಾಡಿತು.
ಅವನ ಪ್ರಕಾರ ತನಗಿಂತ ಚತುರ ಪೊಲೀಸಿನವ ಆ ಠಾಣೆಯಲ್ಲೇ, ಏಕೆ ನಗರದಲ್ಲೇ ಯಾರೂ ಇಲ್ಲ!….. ತನಗೆ ತನಿಖೆಯಲ್ಲಿದ್ದ ಜಾಣ್ಮೆ, ತಾನೇ ಹುಟ್ಟುಹಾಕಿ ಬೆಳೆಸಿದ್ದ ಪೊಲೀಸ್ ಮಾಹಿತಿದಾರರ ಜಾಲ, ಪಾತಕಲೋಕದ ಬಗ್ಗೆ ತಿಳಿವಳಿಕೆ ಇನ್ಯಾರಿಗಿರಲು ಸಾಧ್ಯ? ಸಹೋದ್ಯೋಗಿಗಳೆಲ್ಲ ಅವನನ್ನು ಹೊಗಳುತ್ತಿದ್ದದ್ದು ಅವನ ಗರ್ವವನ್ನು ಬೆಳೆಸಿತ್ತು. ಭಂಡಧೈರ್ಯದಿಂದ ಎಂಥೆಂತಹ ಕೇಸುಗಳಲ್ಲಿ ಅಪರಾಧಿಗಳನ್ನು ತಾನು ಹಿಡಿದರೂ ತನ್ನ ಮೇಲಧಿಕಾರಿ ಇನ್ಸ್ಪೆಕ್ಟರ್, ಎಸ್.ಐ.ಗಳಿಗೇ ಕೀರ್ತಿ ಬರುವಂತೆ ನಡೆದುಕೊಂಡಿದ್ದ. ಆದರೆ ದುರದೃಷ್ಟವಶಾತ್ ನಾಣಿಯ ಪ್ರಕಾರ ಸ್ವಾರ್ಥಿ ಅಧಿಕಾರಿಗಳು ಇವನಿಗೆ ಯಾವುದೇ ಬೆಲೆ ಕೊಟ್ಟಿರಲಿಲ್ಲ, ವೃತ್ತಿಯಲ್ಲಿ ಬಡ್ತಿಯೂ ಸಿಕ್ಕಿರಲಿಲ್ಲ; ಹಾಗಾಗಿ ತಾನೆ `ತಾನು ಹಣದಾಸೆಯಿಂದ ಜೂಜಾಡಿ ಇಂದು ಈ ದುಃಸ್ಥಿತಿಗೆ ಬಂದಿದ್ದು?’ ಎಂದು ಅವನ ಮನಸ್ಸೇ ಅವನಿಗೆ ಚುಚ್ಚಿ ಹೇಳಿ ಸಮರ್ಥಿಸಿಕೊಳ್ಳುತ್ತಿತ್ತು. ವಿಧಿ ತನಗೆ ಬಗೆದ ಅನ್ಯಾಯವನ್ನು ಸರಿಪಡಿಸಿಕೊಂಡು, ಈ ಸಬ್ಇನ್ಸ್ಪೆಕ್ಟರನ ಪೆದ್ದುತನವನ್ನೇ ಬಳಸಿಕೊಂಡು ಲಾಭ ಮಾಡಿಕೊಂಡರೆ ತಪ್ಪೇನಿಲ್ಲ ಎಂದು ಅವನಿಗೆ ಬಲವಾಗಿ ನಂಬಿಕೆ ಬಂದುಬಿಟ್ಟಿತ್ತು. ಹಾಗಾಗಿ, ಇಡೀ ಇಪ್ಪತ್ತೈದು ವರ್ಷದ ಸರ್ವಿಸ್ನಲ್ಲಿ ಒಂದು ಕೊಲೆ ಅಷ್ಟೇಕೆ, ಕಳ್ಳತನ, ದರೋಡೆಯ ಕೇಸನ್ನೂ ಸರಿಯಾಗಿ ಬಗೆಹರಿಸದ `ಪೆದ್ದ, ದಡ್ದ’ ಎಂದೆಲ್ಲ ಇಲಾಖೆಯಲ್ಲಿ ಅಪಖ್ಯಾತಿ ಮಾತ್ರವೇ ಸಂಪಾದಿಸಿದ್ದ ಮಾಧವರಾಯನನ್ನು ತನ್ನ ವ್ಯಾಪ್ತಿಗೇ ವರ್ಗ ಮಾಡಿದ್ದಕ್ಕೆ ಪೊಲೀಸ್ ಕಮಿಶನರನ್ನೂ, ಮನೆದೇವರನ್ನೂ ಏಕಕಾಲಕ್ಕೆ ವಂದಿಸಿದ್ದ.
`ಸರಿ, ಇದಕ್ಕೊಂದು ಶಾಶ್ವತ ದಾರಿ ಮಾಡಿಬಿಡಲೇಬೇಕು!’ ಎಂದು ಮಾಧವರಾಯ ಠಾಣೆಯಲ್ಲಿ ಆಧಿಕಾರ ವಹಿಸಿದ ನಂತರ ನಾಲ್ಕೇ ದಿನಕ್ಕೆ ಅದನ್ನು ಕಾರ್ಯಗತ ಮಾಡಲು ಅಂತಿಮವಾಗಿ ತೀರ್ಮಾನಿಸಿಬಿಟ್ಟಿದ್ದ ನಾಣಿ.
ಅಂದು ಶನಿವಾರ ರಾತ್ರಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೇ ಆ ಏರಿಯಾದ ಜೂಜುಕೋರರ ಸರದಾರ ಎನಿಕೊಂಡಿದ್ದ ಮುಖ್ಯ ದಳ್ಳಾಳಿ ಪ್ರಭಾಕರನ `ಪ್ರಭಾಕರ್, ರಿಯಲ್ ಎಸ್ಟೇಟ್ ಏಜೆಂಟ್’ ಎಂಬ ನಾಮಫಲಕವಿದ್ದ ಕಲಾಸಿಪಾಳ್ಯದ ಅಂಗಡಿಗೆ ಕಾಲಿಟ್ಟ ನಾಣಿ. ಬೋರ್ಡ್ ಹೊರಗೆ ಏನೇ ಇದ್ದರೂ ಅದು ರಹಸ್ಯವಾದ ಜೂಜುಕೋರರ ಅಡ್ಡೆ ಎಂದು ಇತರರಂತೆ ನಾಣಿಗೂ ಚೆನ್ನಾಗಿಯೆ ಗೊತ್ತಿತ್ತು.
ಆ ಸಮಯದಲ್ಲಿ ಒಬ್ಬನೇ ಇದ್ದ ಪ್ರಭಾಕರ ಗಲ್ಲಾಪೆಟ್ಟಿಗೆ ಮುಚ್ಚಿ ಮನೆಗೆ ಹೊರಟವನು ನಾಣಿಯ ಚಿರಪರಿಚಿತ ಮುಖ ನೋಡಿ ಮತ್ತೆ ಕುಳಿತ.
“ಪ್ರಭಾಕರ, ಆ ಮೊದ್ದುರಾಯನನ್ನು ನಮ್ಮ ಠಾಣೆಗೇ ಸಬ್ಇನ್ಸ್ಪೆಕ್ಟರ್ ಕ್ರೈಮ್ ಆಗಿ ನೇಮಿಸಿದ್ದಾರೆ. ಗೊತ್ತಾಯ್ತಲ್ಲಾ?’ ಎಂದ ನಾಣಿ ಕೈಚಾಚುತ್ತಾ. ಎಂದಿನಂತೆ ಬಿಟ್ಟಿ ಸಿಗರೇಟ್ ಸೇದುವ ಅಭ್ಯಾಸವಿದ್ದ ನಾಣಿಗೆ ತನ್ನ ಪ್ಯಾಕೆಟ್ ಎಸೆದು ಹುಬ್ಬೇರಿಸಿದ ಪ್ರಭಾಕರ, “ಹೂಂ ಕಣೋ, ಹೇಳ್ತಿದ್ರು; ಈಗ ನೀನು ಹೇಳಿದ ಮೇಲೇ ನಂಬಿಕೆಯಾಗಿದ್ದು…. ಅಲ್ವೋ, ನಿಮ್ ಕಮಿಶನರ್ಗೇನಾದರೂ ತಲೆ-ಗಿಲೆ ಕೆಟ್ಟಿದೆಯೆ? ಸುಮ್ನೆ ಹೆಡ್ ಕ್ವಾರ್ಟರ್ಸ್ನಲ್ಲಿ ಪೇಪರ್ವರ್ಕ್ ಮಾಡ್ಕೊಂಡು ಕೂತಿದ್ದ, ಆ ದಡ್ಡ ಶಿಖಾಮಣಿನ ತಂದು ಈ ಏರಿಯಾಗೆ ಎಸ್.ಐ. ಅಗಿ ಹಾಕಿದ್ದಾರಲ್ಲಾ, ಏನು ಹೇಳೋಣ?” ಎಂದ.
“ಅದು ದೊಡ್ಡ-ದೊಡ್ಡ ಆಫೀಸರ್ಸ್ ಬ್ರೈನ್ ಕಣಯ್ಯಾ….. ನಿಮ್ಮಂಥ ನಾಗರಿಕರಿಗೆಲ್ಲ ಅರ್ಥವಾಗಲ್ಲ” ಎಂದು ವ್ಯಂಗ್ಯವಾಗಿ ನಕ್ಕು ಹೊಗೆಯ ಸುರುಳಿಯನ್ನು ತಾರಸಿಯತ್ತ ತೂರಿದ ನಾಣಿ.
ಪ್ರಭಾಕರ ತಲೆ ಅಡ್ಡ ಆಡಿಸಿ ಜ್ಞಾನಿಯಂತೆ ನುಡಿದ, “ಏನೇ ಹೇಳು, ಇನ್ನು ಕೊಲೆಗಳ ಕೇಸಸ್ ಇಲ್ಲಿ ಜಾಸ್ತಿಯಾಗುತ್ತೆ.”
ಅವನತ್ತ ಒಂದು ಹುಬ್ಬೇರಿಸಿ ಸೊಟ್ಟಗೆ ನಕ್ಕ ನಾಣಿ.
“ಹೌದು…. ಆಗೇ ಆಗುತ್ತೆ” ಎಂದು ರಾಗವೆತ್ತಿದ.
ಅವನ ಒಗಟಿನಂಥ ಮಾತು ಕೇಳಿ ಪ್ರಭಾಕರ ಸೀಟಿನಲ್ಲಿ ಮುಂದೆ ಜರುಗಿದ, “ಏನೋ ಹಾಗಂದ್ರೆ?”
ಅವನ ಮಾತೇ ಕೇಳಿಸಿಕೊಳ್ಳದವನಂತೆ ನಾಣಿ ಮುಂದುವರಿಸಿದ, “ನಿನಗೆ ಆ ಖದೀಮ ನರೇಂದ್ರ ರೈ ಗೊತ್ತಲ್ಲಾ…. ಅದೇ ನಿನ್ನ ಹತ್ರ ಬಂದು ಸಾಲದಲ್ಲಿ ಜೂಜಾಡುತ್ತಾನಲ್ಲಾ?”
ನರೇಂದ್ರ ರೈಯ ಹೆಸರು ಕೇಳಿ ಚೇರ್ನಲ್ಲಿ ಸೆಟೆದು ಕುಳಿತ ಪ್ರಭಾಕರ.
“ಮೊನ್ನೆ ಜೈಲಿಂದ ಹೊರಗೆ ಬಿಟ್ಟಿದ್ದಾರೆ, ನಿನ್ನೆ ಬಂದಿದ್ದ ನನ್ನ ಹತ್ರ, ಸ್ಟೇಷನ್ನಿನಲ್ಲಿ” ಎಂದು ಪ್ರಭಾಕರನನ್ನೇ ದಿಟ್ಟಿಸಿ ಪ್ರತಿಕ್ರಿಯೆಗಾಗಿ ನೋಡಿದ ನಾಣಿ.
ಪ್ರಭಾಕರನ ಮುಖ ಒಮ್ಮೆಲೆ ಗಡುಸಾಯಿತು…. ನರೇಂದ್ರ ರೈ ಪಾತಕಲೋಕದ ಹೆಸರಾಂತ ರೌಡಿ….
“ಆ ರ್ಯಾಸ್ಕಲ್!…. ಏನಿಲ್ಲ ಅಂದ್ರೂ ಇದುವರೆಗೂ ಅದು ಇದು ಹೇಳಿ ಐವತ್ತು ಸಾವಿರನಾದ್ರೂ ಕಿತ್ಕೊಂಡಿದ್ದಾನೆ…. ಕೇಳೋಕೆ ಹೋದಾಗಲೆಲ್ಲ ದೊಡ್ಡ ಚೂರಿ ತೆಗೆದು ಎದುರಿನ ಟೇಬಲ್ಲಿನ ಮೇಲೆ ನೆಡುತ್ತಾನೆ, ಆಯ್ಯಬ್ಬಾ!…. ಇನ್ನೂ ಹೆಚ್ಚು ಮಾತನಾಡಿಸಿದರೆ ಆಸಿಡ್ ಬಾಟಲ್ ಹೊರಗೆ ತೆಗೆದು ಅದರ ಪಕ್ಕ ಇಡುತ್ತಾನೆ. ಅವನ ಧಿಮಾಕು ನೋಡ್ಬೇಕು….” ಎಂದು ಕೋಪ ಬೆರೆಸಿ ನಿರಾಸೆಯಿಂದ ಗುಡುಗಿದ ನೊಂದ ಏಜೆಂಟ್ ಪ್ರಭಾಕರ.
“ಅವನನ್ನು ಮತ್ತೆ ದೊಡ್ಡ ಕೇಸಿನಲ್ಲಿ ಸಿಕ್ಕಿಹಾಕಿಸಿ ಒಳಗೆ ಹಾಕಿದರೆ ನಿನಗಂತೂ ದುಃಖವಾಗಲ್ಲ ಅನ್ನು” ಎಂದ ನಾಣಿ ಆ ಪ್ರಶ್ನೆಯ ಉತ್ತರ ಚೆನ್ನಾಗಿ ತಿಳಿದೂ.
“ಖಂಡಿತಾ ಆಗಲ್ಲ. ಆದರೆ ನಿನ್ನ ಮಾತಿನ ಅರ್ಥವೇನೋ?” ಎಂದು ಅಪ್ರತಿಭನಾಗಿ ನುಡಿದ ಪ್ರಭಾಕರ. ಅವನಿಗೆ ಇಂದು ನಾಣಿಯ ನಡೆನುಡಿಯೇ ವಿಚಿತ್ರ ಎನಿಸಿತು.
ಮತ್ತೆ ಇವನ ಪರಿವೆಯೇ ಇಲ್ಲದಂತೆ ಮುಂದುವರಿಸಿದ ನಾಣಿ: “ಆ ನರೇಂದ್ರ ರೈ ನಿನ್ನೆ ಬಂದಿದ್ದ ಅಂದೆನಲ್ಲಾ…. ಅದ್ಯಾವುದೋ ಹಳೇಕೇಸಿನ ವಿಷಯಕ್ಕೆ ಸಹಿ ಹಾಕಬೇಕಾಗಿತ್ತು ರಿಜಿಸ್ಟರ್ನಲ್ಲಿ…. ಬಂದವನು ಮರ್ಯಾದೆಯಿಂದ ಕುಳಿತುಕೊಳ್ಳಬಾರದಾ? ಕಾಲ ಮೇಲೆ ಕಾಲು ಹಾಕ್ಕೊಂಡು ಏನು ಇವನ ಮಾವನ ಮನೆಯ ತರಹ ಚುಟ್ಟಾ ಸೇದಿಕೊಂಡು, `ಕಾಫಿ ತರಿಸ್ರಿ, ಅಷ್ಟೂ ಗತಿ ಇಲ್ವಾ?’ ಅಂತಾ ನನಗೇ ರೋಫ್ ಹಾಕಿದ. ನನಗೆ ಮೈ ಉರಿದುಹೋಗಿ ಎದ್ದೇಳಯ್ಯಾ ಮೇಲಕ್ಕೆ ಅನ್ನೋ ಅಷ್ಟ್ರಲ್ಲಿ ಬಂದುಬಿಟ್ನಪ್ಪಾ, ನಮ್ಮ ಮಾಧವರಾಯ!…. ಈ ಮಂಕು ದಿಣ್ಣೆ ನನ್ಮಗ, `ಯಾಕಪ್ಪಾ, ನಾವು ಪಬ್ಲಿಕ್ ಸರ್ವೆಂಟ್ಸೂ, ಕಾಫಿ ತರಿಸಪ್ಪಾ ಏನೀಗ?….’ ಅಂತಾ ನನಗೇ ಬುದ್ಧಿ ಹೇಳಿ ಹಲ್ಕಿರಿದು ಹೊರಟುಹೋದ, ಗೊತ್ತಾ? ನನಗ್ಯಾಕೋ ರೇಗಿ ಹೋಯಿತು, ಆ ನರೇಂದ್ರನ ಮುಖದಲ್ಲಿ ವಿಜಯದ ನಗೆ ನೋಡಿ. ಆಮೇಲೆ ಅವನೇ `ನಾನು ಭಾನುವಾರ ಬೆಳಗ್ಗೆ ಟ್ರೈನಿನಲ್ಲಿ ಕುಕ್ಕೆಸುಬ್ರಮಣ್ಯಕ್ಕೆ ಹೋಗ್ತಾ ಇದೀನ್ರಿ; ಅಲ್ಲಿನ ಪೊಲೀಸಿನವರಿಗೆ ವಿಷಯ ತಿಳಿಸಿ. ಬೇಕಾದರೆ ಅಲ್ಲೇ ಹೋಗಿ ರಿಪೋರ್ಟ್ ಮಾಡ್ಕೊಳ್ತೀನಿ ಸುಮ್ನೆ ನನಗೆ ಇದಕ್ಕೆಲ್ಲಾ ಕಾಟ ಕೊಡ್ಬೇಡಿ’ ಅಂತ ಗದರಿಸಿ ಹೋದ.”
ಪ್ರಭಾಕರ ಗೋಣು ಆಡಿಸುತ್ತಾ ಒಪ್ಪಿದ: “ಕೊಬ್ಬು ಜಾಸ್ತಿ ಕಣೋ ಅವನಿಗೆ, ಈ ತರಹ ನಿಮ್ಮೋರೆಲ್ಲಾ ಅವನಿಗೆ ಲಿಫ್ಟ್ ಕೊಡ್ತೀರಲ್ಲಾ ಅದಕ್ಕೇ ತಾನೂ ಭಾರೀ ಕುಳ ಅನ್ಕೊಂಬಿಟ್ಟಿದ್ದಾನೆ.”
ನಾಣಿ ನೇರವಾಗಿ ಕುಳಿತು ಗೆಳೆಯನ ಮುಖವನ್ನು ಅರ್ಥಗರ್ಭಿತವಾಗಿ ನೋಡಿದ.
“ಕೊನೆಗೆ ಹೋಗ್ತಾ ಹೋಗ್ತಾ ನನ್ನ ಟೇಬಲ್ ಮೇಲೆ ತನ್ನ ಚಿನ್ನದ ಸಿಗರೇಟ್ ಲೈಟರ್ ಬಿಟ್ಟು ಹೋದ. ಅದರ ಮೇಲೆ ಎನ್.ಆರ್. ಎಂದು ಅವನ ಹೆಸರಿನ ಇನಿಶಿಯಲ್ಸ್ ಕೆತ್ತಿದೆ…. ಅದನ್ನು ನಾನೆತ್ತಿಟ್ಟುಕೊಂಡೆ…. ಜತೆಗೆ ಅವನ ಚುಟ್ಟಾದ ಒಂದು ಪೀಸ್ ಕೂಡಾ; ಇಲ್ಲಿ ನೋಡು ಎನ್ನುತ್ತಾ ತನ್ನ ಜೇಬಿನಿಂದ ತೆಗೆದ, ಜಾಗ್ರತೆಯಾಗಿ ಕರ್ಚೀಫಿನಲ್ಲಿ ಸುತ್ತಿದ್ದ ಚಿನ್ನದ ಸಿಗರೇಟ್ ಲೈಟರ್ ಮತ್ತು ಒಂದು ಸೇದಿ ಮುಗಿಸಿದ್ದ ಚುಟ್ಟಾದ ತುಂಡು. “ಇದನ್ನು ನಾನು ಹುಷಾರಾಗಿ ಕೈಯಲ್ಲಿ ಮುಟ್ಟದೇ ಬಟ್ಟೆಯಲ್ಲಿ ಹಾಗೇ ಇಟ್ಟುಕೊಂಡಿದ್ದೇನೆ. ಅವೆರಡರ ಮೇಲೂ ಅವನ ಕೈ ಬೆರಳಚ್ಚು ಇದ್ದೇ ಇದೆ ಗ್ಯಾರೆಂಟಿ!”
ಪ್ರಭಾಕರ ಅಚ್ಚರಿಯಿಂದ ಕಣ್ಣೆತ್ತಿದ, ಗಂಟಲು ಕಟ್ಟಿದವನಂತೆ. “ಇದನ್ನೆಲ್ಲಾ ಇಟ್ಕೊಂಡು ಏನ್ ಮಾಡಬೇಕೂಂತಾ?” ಎಂದ.
ಇನ್ನೊಂದು ಪುಗಸಟ್ಟೆ ಸಿಗರೇಟ್ ಹಚ್ಚುತ್ತಾ ದಿಟ್ಟ ದನಿಯಲ್ಲಿ ನುಡಿದ ನಾಣಿ: “ನಾನೊಂದು ಕೊಲೆ ಮಾಡ್ಬೇಕು ಅಂತಿದ್ದೀನಿ.”
ಪ್ರಭಾಕರ ತನ್ನ ಸೀಟಿನಲ್ಲೇ ಹೌಹಾರಿದ. “ಏಯ್! ಏನೋ ಇದು? ಅವನನ್ನ ಹೋಗಿ ಕೊಲೆ ಮಾಡ್ತೀನಿ ಅಂತೀಯಲ್ಲಾ…. ಅವನು ಎಂತಹ ಅಪಾಯಕಾರಿ ಗೊತ್ತಾ?”
ಪ್ರಭಾಕರನ ಏರಿದ ದನಿಗೆ ನಾಣಿ ಮಧ್ಯೆ ಕೈಯೆತ್ತಿ ತಡೆದ, ಮುಖ ಕಿವುಚಿದ: “ಅವಸರ ಜಾಸ್ತಿ ಕಣೋ ನಿನಗೆ…. ಅವನನ್ನ ಕೊಲ್ತೀನಿ ಅಂದೆನಾ? ಅವನನ್ನ ಒಂದು ಕೊಲೆಯಲ್ಲಿ ಸಿಕ್ಕಿಹಾಕಿಸ್ತೀನಿ….”
ಪ್ರಭಾಕರನ ಬಾಯಿ ಒಣಗಿದಂತಾಗಿ ಟೇಬಲ್ ಮೇಲಿದ್ದ ಅರ್ಧ ಬಾಟಲ್ ನೀರು ಸುರಿದುಕೊಂಡ; ನಾಣಿ ಪ್ರಭಾಕರನ ಚಕಿತ ಬೆದರಿದ ಮುಖವನ್ನೇ ದಿಟ್ಟಿಸಿ ನೋಡಿದ: “ಪ್ರಭಾಕರ, ಈ ತರಹ ಯೋಚಿಸಿ ನೋಡು. ಇವತ್ತು ಒಂದು ಕೊಲೆ ನಡೆಯುತ್ತದೆ. ಸತ್ತವನು ನರೇಂದ್ರನಿಗೆ ಆಗದವನು ಅಂತಿಟ್ಕೊಳ್ಳೋಣ…. ಕೊಲೆ ಮಾಡಿದವನು ನಾನು; ಆದರೆ ಈ ಸಿಗರೇಟ್ ಲೈಟರ್ ಮತ್ತು ಚುಟ್ಟಾ ತುಂಡನ್ನು ಮಾತ್ರ ಅಲ್ಲೇ ಬಿಸಾಕಿರುತ್ತೇನೆ ಆಗ?”
ಅವಸರಪಡುತ್ತಾ ಪ್ರಭಾಕರ, “ಅಷ್ಟು ಸಾಕಾಗುತ್ತಾ? ನರೇಂದ್ರ ಎಲ್ಲಿ ಅಂತಾ ಹುಡುಕಿದಾಗ ಅವನು ಮನೆಯಲ್ಲಿದ್ರೆ?” ಎಂದ.
ನಾಣಿ `ಒಪ್ಪಿದೆ ನಿನ್ನ ಜಾಣತನ’ ಎಂಬಂತೆ ತಲೆ ಕುಣಿಸಿದ: “ಸಾಕಾಗಲ್ಲ, ಅದಕ್ಕೇ ನನ್ನದು ಮಾಸ್ಟರ್ಪ್ಲಾನ್ ಅನ್ನೋದು, ಇಲ್ಲಿ ನೋಡು” ಎನ್ನುತ್ತಾ ಶರ್ಟ್ ಜೇಬಿನಿಂದ ಒಂದು ಕಾಗದದ ತುಂಡನ್ನು ಟೇಬಲ್ ಮೇಲೆ ಹರಡಿದ. ಅದು ಒಂದು ರೈಲಿನ ವೇಳಾಪಟ್ಟಿಯ ಪುಟದ ತುಂಡು.
ನಾಣಿ ವಿವರಿಸಿದ: “ಇಲ್ಲಿ ನೋಡು, ನಾಳೆ ಬೆಳಗ್ಗೆ ಯಶವಂತಪುರದಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ಹೋಗುವ ರೈಲಿನ ಸಮಯಕ್ಕೆ ನಾನು ಕೆಂಪು ಇಂಕ್ನಲ್ಲಿ ಗುಂಡಗೆ ಸುತ್ತಿದ್ದೇನೆ; ಅದನ್ನು ನೆನಪಿಟ್ಟುಕೊಳ್ಳುವಂತೆ. ಅದನ್ನು ಮುದುರಿ ಕೊಲೆಯಾದ ವ್ಯಕ್ತಿಯ ಪಕ್ಕದಲ್ಲೆಲ್ಲೋ ಎಸೆದಿರುತ್ತೇನೆ. ನಮ್ಮ ಮೊದ್ದು ಮಾಧವರಾಯ ಅಲ್ಲಿಗೆ ಬರುತ್ತಾನೆ, ತನಿಖೆಗೆ ಅಂತಹ ಮೂರು ಪುರಾವೆಗಳನ್ನು ನಾನು ನರೇಂದ್ರ ರೈಯತ್ತ ಕೈ ಬೊಟ್ಟು ಮಾಡುವಂತೆ ಬಿಟ್ಟಿರುತ್ತೇನಲ್ಲಾ…. ಇನ್ನೇನು ಬೇಕು? ನರೇಂದ್ರ ತಾನೇ ಸ್ಟೇಷನ್ನಿನಲ್ಲಿ ಹೇಳಿ ಹೋದ ಹಾಗೆ ಯಶವಂತಪುರದಲ್ಲಿ ರೈಲು ಹತ್ತುತ್ತಾನೆ ಅನ್ನೋದು ಕನ್ಫ಼ರ್ಮ್ ಆಗಿ, ಮಾಧವರಾಯ ತಾನು ಸ್ಟೇಷನಿಗೇ ಹೋಗಿ ಅವನನ್ನು ಅರೆಸ್ಟ್ ಮಾಡಿ ಒಳಗೆಹಾಕುತ್ತಾನೆ.”
ಪ್ರಭಾಕರ ಉತ್ಸಾಹದಿಂದ ಕೈಯುಜ್ಜಿಕೊಂಡ. “ಬಹಳ ಚೆನ್ನಾಗಿದೆ ಕಣೋ ಪ್ಲಾನು” ಎಂದವನು ಅರೆಕ್ಷಣ ತಡೆದು ಮತ್ತೇನೋ ಹೊಳೆದವನಂತೆ, “ಅರೆ, ಇದರಲ್ಲಿ ನಿನಗೇನೋ ಲಾಭ? ನರೇಂದ್ರ ಬಲಿಪಶು ಆಗಿ ಅವನು ಜೈಲಿಗೆ ಹೋಗ್ಬಹುದು ಅಷ್ಟೇ!”
ನಾಣಿ ಮುಖದಲ್ಲಿ ಅದೇನೋ ರಹಸ್ಯ ಬಚ್ಚಿಟ್ಟುಕೊಂಡವನ ನಗೆಯಿದೆ. “ಆದರೆ ಕೊಲೆಯಾದವನಿಂದ ನನಗೆ ಲಾಭವಿದೆಯಲ್ಲ!” ಎಂದಷ್ಟೆ ಹೇಳಿ ಸುಮ್ಮನಾದ.
“ಹೋಗ್ಲಿ, ಹೇಳೇ ಬಿಡೋ ಅದ್ಯಾರನ್ನ ಕೊಲೆ ಮಾಡ್ತೀಯಾ? ನನಗೂ ಗೊತ್ತಾಗಿಬಿಡ್ಲಿ!” ಎಂದು ಕುತೂಹಲ ಅದುಮಿಟ್ಟುಕೊಳ್ಳಲಾರದೆ ಕೀಚಲು ದನಿಯಲ್ಲಿ ಕೇಳಿದ ಪ್ರಭಾಕರ.
ನಾಣಿ ಏಕಾಏಕಿ ಎದ್ದುನಿಂತು ತನ್ನ ಪ್ಯಾಂಟಿನ ಜೇಬಿನಿಂದ ಒಂದು ಕಪ್ಪನೆ ಹೊಳೆಯುವ ಆಟೋಮ್ಯಾಟಿಕ್ ರಿವಾಲ್ವರನ್ನು ತೆಗೆದ.
“ನಿನ್ನನ್ನೆ ಕಣೋ ನಾನು ಕೊಲ್ಲುವುದು, ಫೂಲ್! ಮಾಧವರಾಯ ಪೆದ್ದ, ನರೇಂದ್ರ ನೀಚ ಆದರೆ ನೀನು ಈಡಿಯಟ್! ಇವತ್ತು ಶನಿವಾರದ ರೇಸಿನಲ್ಲಿ ನಿನಗೆ ಇಪ್ಪತ್ತು ಲಕ್ಷ ಪ್ರೈಜ್ ಬಂದಿದ್ದು ನನಗೆ ಗೊತ್ತಿಲ್ಲಾ ಅಂದುಕೊಂಡಿದ್ದೀಯಾ? ಇವತ್ತು ಅರ್ಧದಿನ ಬ್ಯಾಂಕು, ಸಂಜೆ ಹಣ ಸಿಕ್ಕಿದ್ದರಿಂದ ನಿನಗೆ ಹೋಗಲಿಕ್ಕಾಗಲಿಲ್ಲ, ಹಾಗಾಗಿ ನೀನು ತೆಗೆದುಕೊಂಡು ಬಂದ ಹಣವೆಲ್ಲ ಇನ್ನೂ ಬ್ಯಾಂಕಿಗೆ ಹಾಕಿಲ್ಲ, ನಿನ್ನ ಟೇಬಲ್ ಡ್ರಾಯರ್ನಲ್ಲಿಯೇ ಇದೆ. ನನ್ನ ಅರ್ಧಪ್ಲಾನ್ ನಿನಗೆ ಹೇಳಲೇ ಇಲ್ಲ…. ನಿನ್ನನ್ನು ಕೊಂದು, ಇಲ್ಲಿ ನರೇಂದ್ರನ ಪುರಾವೆಗಳನ್ನು ಬಿಟ್ಟು, ನಾನು ಸಿಟಿ ರೈಲು ನಿಲ್ದಾಣದಿಂದ ನಾಳೆ ಬೆಳಗ್ಗೆ ಚೆನ್ನೈಗೆ ಹೊರಡುತ್ತೇನೆ. ಅಂದರೆ ನರೇಂದ್ರ ರೈನ ರೈಲಿಗೆ ವಿರುದ್ಧ ದಿಕ್ಕಿನಲ್ಲಿ ಬೇರೆ ಸ್ಟೇಷನ್ನಿನಿಂದ, ನಿನ್ನ ಹಣದ ಜತೆಗೆ ಪರಾರಿ! ಗೊತ್ತಾಯಿತೆ?” ಎನ್ನುತ್ತಾ ಗಾಬರಿಯಿಂದ ಏಳಲೆತ್ನಿಸಿದ ಪ್ರಭಾಕರನನ್ನು ಒರಟಾಗಿ ಮತ್ತೆ ಛೇರಿಗೆ ತಳ್ಳಿದ ನಾಣಿ.
ಟ್ರಿಗ್ಗರ್ ಮೇಲಿದ್ದ ಬೆರಳು ಬಿಗಿಯಾಗಿ ಚಲಿಸಿತು! ಸೈಲೆನ್ಸರ್ ಸದ್ದು ಹೊರಗಿನ ಮಳೆ ಗುಡುಗಿನ ಸದ್ದಿನಲ್ಲಿ ಅಡಗಿಹೋಗಿತ್ತು. ಪ್ರಭಾಕರನಿಗೆ ಗಾಬರಿಯಾಗಿ ಓಡಲು ಸಮಯವೇ ಸಿಗದಂತೆ ಅವನ ಮೇಲೆ ಹಠಾತ್ತಾಗಿ ಗುಂಡು ಹಾರಿಸಿದ್ದ ನಾಣಿ. ಈ ಪಿಸ್ತೂಲನ್ನು ಚೆನ್ನಾಗಿ ಬಟ್ಟೆಯಲ್ಲಿ ಒರೆಸಿ ಎಲ್ಲಾದರೂ ಕಸದಬುಟ್ಟಿಗೆ ಎಸೆದರಾಯಿತು ಎಂದುಕೊಂಡು ಆತಂಕದಿಂದ ಧಡಗುಟ್ಟುವ ಎದೆಯನ್ನು ಒತ್ತಿಕೊಂಡ ನಾಣಿ. ಸಿಕ್ಕರೂ ನರೇಂದ್ರ ರೈ ಎಸೆದಿದ್ದಾನೆ ಎಂದುಕೊಳ್ಳುತ್ತಾನೆ ಮೂರ್ಖ ಮಾಧವರಾಯ! ಎಂದೆನಿಸಿ ಅದೇ ಕರ್ಚೀಫಿನಲ್ಲಿ ಮುಖ ಒರೆಸಿಕೊಂಡ.
ನೇರವಾಗಿ ಹಣೆಯಲ್ಲೊಂದು ರಂಧ್ರವಾಗಿ ಗುಂಡು ಒಳಹೊಕ್ಕು ಸತ್ತಿದ್ದ ಪ್ರಭಾಕರ. ತನ್ನ ಬಿಜ಼ಿ ಸರ್ವಿಸ್ನಲ್ಲಿ ಹಲವಾರು ಕೊಲೆ ಆತ್ಮಹತ್ಯೆ ಕೇಸುಗಳನ್ನು ಕಣ್ಣಾರೆ ಕಂಡಿದ್ದ ನಾಣಿಯ ಮಿದುಳು ಈಗಲೂ ತಣ್ಣಗೇ ಇತ್ತು. ಕುಕ್ಕೆಸುಬ್ರಹ್ಮಣ್ಯಕ್ಕೆ ಹೊರಡುವ ಯಶವಂತಪುರದ ರೈಲಿನ ವೇಳಾಪಟ್ಟಿಯ ಕೆಂಪು ಗುರುತು ಮಾಡಿದ್ದ ಪುಟವನ್ನು ಆ ಟೇಬಲ್ ಕೆಳಗೆ ಮುದುರಿ, ಕಾಣುವಂತೆ ಎಸೆದ. ನರೇಂದ್ರ ರೈಯ ಸಿಗರೇಟ್ ಲೈಟರನ್ನು ಹೆಣದ ಕಾಲಿನ ಬಳಿ ಬೀಳಿಸಿದ. ಯಾವುದನ್ನೂ ತನ್ನ ಕೈಯಲ್ಲಿ ಮುಟ್ಟಲಿಲ್ಲ. ತಾವು ಸೇದಿದ್ದ ಸಿಗರೇಟ್ ತುಂಡುಗಳನ್ನೆಲ್ಲಾ ಜೇಬಿನಲ್ಲಿ ಬಚ್ಚಿಟ್ಟುಕೊಂಡ. ಹಾಗೇ ಟೇಬಲ್ ಡ್ರಾಯರನ್ನು ಕರ್ಚೀಫ್ ಸುತ್ತಿದ ಕೈಯಲ್ಲಿ ತೆರೆದು ಹಣವನ್ನು ಪ್ಲಾಸ್ಟಿಕ್ ಬ್ಯಾಗಿನಲ್ಲಿ ತುಂಬಿಕೊಂಡ. ಬಾಗಿಲೆಳೆದುಕೊಂಡು ಹೊರಗೆ ಮೆತ್ತಗೆ ನಡೆದ, ಯಾರೂ ಕಾಣಲಿಲ್ಲ. ತನ್ನ ಮೋಟರ್ಸೈಕಲ್ ಏರಿ ಹೊರಟುಬಿಟ್ಟ. ಮನೆಗೆ ಬರುವ ರಸ್ತೆಯಲ್ಲಿ ಪಬ್ಲಿಕ್ ಫೋನ್ ಬೂತಿನಿಂದ ಅನಾಮಧೇಯವಾಗಿ, “ಪ್ರಭಾಕರನ ಆಫೀಸಿನಲ್ಲಿ ಗುಂಡು ಹೊಡೆದ ಸದ್ದು ಕೇಳಿಸಿತು” ಎಂದಷ್ಟೇ ಹೇಳಿ ಅಲ್ಲಿಂದ ಸರಸರನೆ ಹೊರಟು ಬಿಟ್ಟ. ಪ್ರಭಾಕರನ ಆಫೀಸೂ ತನ್ನ ಠಾಣೆಯ ವ್ಯಾಪ್ತಿಯಲ್ಲಿ ಬರುವುದು, ಆದ್ದರಿಂದ ಕೇಸಿನ ತನಿಖೆಗೆ ಮಾಧವರಾಯ ಬರುವುದು ನಿಶ್ಚಿತ. ಅಂದರೆ ನರೇಂದ್ರ ರೈ ಬೆಳಗ್ಗೆ ಸಿಕ್ಕಿಬೀಳುವುದೂ ನಿಶ್ಚಿತ!!
ತನ್ನ ಪ್ಲಾನ್ ಯಶಸ್ವಿಯಾಯಿತೆಂದು ನೆಮ್ಮದಿಯಿಂದ ಸಿಳ್ಳೆಹೊಡೆಯುತ್ತಾ ಮನೆಗೆ ತೆರಳಿದ ನಾಣಿ.
* * *
ಬೆಳಗ್ಗೆ ಆರರ ಸಮಯ. ಬೆಂಗಳೂರು ಸಿಟಿ ರೈಲು ನಿಲ್ದಾಣಕ್ಕೆ ಧೈರ್ಯವಾಗಿ ತನ್ನ ಸೂಟ್ ಕೇಸಿನಲ್ಲಿ ಹಿಂದಿನ ರಾತ್ರಿ ಕದ್ದಿದ್ದ ಇಪ್ಪತ್ತು ಲಕ್ಷ ಹಣವನ್ನೂ ಇಟ್ಟುಕೊಂಡು ತಲಪಿದ ನಾಣಿ. ಚೆನ್ನೈ ರೈಲು ಸಿದ್ಧವಾಗಿ ನಿಂತಿದೆ. ಇನ್ನೇನು ರೈಲು ಹತ್ತಿ ತನ್ನ ಸೀಟ್ ಹುಡುಕಬೇಕು, ಆಗ ಹಿಂದಿನಿಂದ ಒಂದು ಅಚ್ಚರಿಯ ದನಿ ಉದ್ಗರಿಸಿತ್ತು: “ಅಯ್ಯೋ, ನಾಣಿ, ಕೊನೆಗೂ ನೀನೇನಾ? ನಾನಂದುಕೊಂಡ ಹಾಗೇ….!!”ಎಂಬ ಪರಿಚಿತ ದನಿ ಕೇಳಿ ಸರ್ರನೆ ತಿರುಗಿ ನೋಡಿದ. ಅವನ ದುರದೃಷ್ಟಕ್ಕೆ ಅಲ್ಲಿ ಇವನತ್ತ ಬೆರಗುನೋಟ ಬೀರುತ್ತಿದ್ದವನು ತನ್ನ ಎಸ್.ಐ. ಮಾಧವರಾಯನೇ!
ಕೊನೆಯೆ ಕ್ಷಣಗಳಲ್ಲಿ ನಿನ್ನೆ ರಾತ್ರಿ ಪ್ರಭಾಕರನಿಗೇನೋ ಓಡಿಹೋಗಲು ಸಮಯ ಸಿಕ್ಕಿರಲಿಲ್ಲ, ಆದರೆ ಎದೆಯಲ್ಲಿ ಮಂಜುಗಡ್ಡೆಯಾಡಿದಂತಾಗಿ ತಲ್ಲಣಿಸಿದ ನಾಣಿಗೆ ಥರಗುಟ್ಟುವ ಕಾಲುಗಳಿಂದಲೇ ಪ್ಲಾಟ್ಫಾರಮ್ಮಿನಲ್ಲಿ ಓಡುವ ಅವಕಾಶವಿತ್ತು, ಓಡಿಯೇಬಿಟ್ಟ. “ನಿಲ್ಲು ನಿಲ್ಲು, ನಾಣಿ, ಓಡಬೇಡಾ!” ಎಂದು ಹಿಂದಿನಿಂದ ಮಾಧವರಾಯ ಕೂಗಿದರೂ ನಿಲ್ಲದೇ ಪ್ರಯಾಣಿಕರಿಗೆ ಯದ್ವಾತದ್ವಾ ಢಿಕ್ಕಿ ಹೊಡೆಯುತ್ತಾ ಓಡತೊಡಗಿದ, ಗೊತ್ತು ಗುರಿಯಿಲ್ಲದೇ.
ಢಂ!!…… ಮಾಧವರಾಯನ ಕೈಯಲ್ಲಿದ್ದ ಸರ್ವೀಸ್ ರಿವಾಲ್ವರ್ನಿಂದ ಹಾರಿದ ಗುಂಡು ನಾಣಿಯ ಬಲಗಾಲಿಗೆ ಬಡಿಯಿತು….
ಮರುಕ್ಷಣವೇ ಚೀರುತ್ತಾ ಕಾಂಕ್ರೀಟ್ ನೆಲದ ಮೇಲೆ ಆಯತಪ್ಪಿ ಬಿದ್ದ ನಾಣಿ. ಬಿದ್ದೇಟಿಗೆ ಅವನ ಸೂಟ್ಕೇಸ್ ತೆರೆದುಕೊಂಡು ಬಟ್ಟೆಯಲ್ಲಿ ಸುತ್ತಿದ್ದ ಹಣದ ಕಟ್ಟೆಲ್ಲ ನೆಲದ ಮೇಲೆ ಚೆಲ್ಲಾಪಿಲ್ಲಿಯಾಯಿತು. ಓಡೋಡಿ ಬಂದ ಮಾಧವರಾಯ, ಜನರನ್ನು ಚದರಿಸಿ ದಾರಿ ಮಾಡಿಕೊಂಡು ನಾಣಿಯತ್ತ ಕರುಣೆಯ ನೋಟ ಬೀರುತ್ತಾ ಕರ್ಚೀಫಿನಿಂದ ಕಾಲಿನ ಗಾಯಕ್ಕೆ ತಾತ್ಕಾಲಿಕ ಪಟ್ಟಿ ಕಟ್ಟಿದ…. ಪ್ಚ್…..ಪ್ಚ್ ಎಂದು ಕನಿಕರದಿಂದ ಲೊಚಗುಟ್ಟಿದ, ತಾನಿದನ್ನು ನಿರೀಕ್ಷಿಸಿದ್ದೆ ಅನ್ನುವಂತೆ. “ಯೂ ಫೂಲ್…. ನನ್ನನ್ನೇಕೆ ಹಿಡಿದೆ? ನೀನು ಇಲ್ಲಿಗೇಕೆ ಬಂದೆ?” ಎಂದು ಆತ ತನ್ನ ಆಫೀಸರ್ ಎಂಬುದನ್ನು ಮರೆತು ನಿರಾಸೆ ಮತ್ತು ನೋವು ಮಿಶ್ರಿತ ದನಿಯಲ್ಲಿ ಕೂಗಿದ ನಾಣಿ.
“ಡಾಕ್ಟರ್ ಬರುತ್ತಾರೆ, ನಿನಗೆ ಚಿಕಿತ್ಸೆ ಮಾಡಿಸುತ್ತೇನೆ. ತಾಳು ಅವಸರಪಡಬೇಡ!” ಎಂದು ಕುತೂಹಲ, ಶಾಕ್ ಎರಡರಿಂದ ತಬ್ಬಿಬ್ಬಾಗಿ ಕುಳಿತವನ ಭುಜ ಒತ್ತಿ ಶಾಂತಿಯಿಂದ ಸಂತೈಸಿದ ಮಾಧವರಾಯ!
“ಡಾಕ್ಟರ್ ಹಾಳಾಗಿ ಹೋಗ್ಲಿ! ನನಗೇಕೆ ಗುಂಡು ಹೊಡೆದೆ, ಇಲ್ಲೇಕೆ ಕಾಯುತ್ತಿದ್ದೆ….. ಹಾಂ?” ಎಂದು ಕುತೂಹಲ ಮತ್ತು ನಿರಾಸೆ ಬೆರೆತ ದನಿಯಲ್ಲಿ ಮುಖ ಕಿವಿಚಿದ ನಾಣಿ. ಮಾಧವರಾಯ ಜಾಣನಗೆ ಬೀರುತ್ತಾ, “ನೀನು ಯಾವಾಗಲೂ ಆ ಪ್ರಭಾಕರನ ಹತ್ರ ಜೂಜು ಆಡ್ತೀಯಾ ಅಂತ ಮಾತ್ರ ಗೊತ್ತಿತ್ತು….. ಆದರೆ ಅವನನ್ನೇ ನೀನು ಕೊಂದೆಯಲ್ಲಾ…. ನೀನು ಜಾಣನೇ…. ಅಲ್ಲಿ ಅಷ್ಟು ಪುರಾವೆ ನಿನ್ನ ಬಗ್ಗೆಯೇ ಬಿಟ್ಟು ಹೋದವನು!” ಎಂದು ಕೆಣಕಿದ.
ಧಿಗ್ಭ್ರಮೆಯಾದವನಂತೆ ನಾಣಿ ಮಾಧವರಾಯನ ಭುಜ ಅಲ್ಲಾಡಿಸಿದ, “ನನ್ನ ಬಗ್ಗೆ ಯಾವ ಪುರಾವೆ ಇತ್ತು…. ಏನು ಒದರುತ್ತಿದ್ದೀಯಾ ನೀನು?”
ಮಾಧವರಾಯ ಚಿನ್ನದ ಲೈಟರನ್ನು ಬರಿಗೈಯಲ್ಲಿಯೆ ಎತ್ತಿ ಹಿಡಿದು ತೋರಿಸಿದ. “ಅಯ್ಯೋ! ಅದರ ಮೇಲಿದ್ದ ನರೇಂದ್ರನ ಬೆರಳಚ್ಚು ಅಳಿಸಿ ಹೋಯಿತಲ್ಲ” ಎಂದು ನಾಣಿಗೆ ಗಾಬರಿಯಾಗುತ್ತಿದ್ದಂತೆಯೇ ಮಾಧವರಾಯ, “ನೋಡು ಇದರ ಮೇಲೆ ನಿನ್ನ ಇನಿಶಿಯಲ್ಸ್ ಎಷ್ಟು ಚೆನ್ನಾಗಿ ಬರೆಸಿದ್ದೀಯಾ! ಎನ್.ಆರ್. ಅಂತಾ….. ನಾಣಿ ಅಂತಾರೆ ನಿನ್ನ. ಆದರೆ ನಿನ್ನ ಪೂರ್ತಿ ಹೆಸರು ನಾರಾಯಣರಾವ್ ಅಂತ ನನಗೆ ಗೊತ್ತಿತ್ತು!… ಅದಕ್ಕೇ ಎನ್.ಆರ್. ಅಂದರೆ ನೀನೇ ಅಂತಾ ಹೊಳೆಯಿತು!”
ನಾಣಿ ಆ ನೋವಿನಲ್ಲೂ ತಲೆ ತಲೆ ಚಚ್ಚಿಕೊಂಡ. “ಅಯ್ಯೋ ಶತಮೂರ್ಖ! ನನ್ನ ಹೆಸರು ಸತ್ಯನಾರಾಯಣರಾವ್ ಅಂತ.. ನಾಣಿ ಅಂತ ಅಡ್ಡ ಹೆಸರು ಇಟ್ಕೊಂಡಿದ್ದೆ! ಲೈಟರ್ ನನ್ನದೇ ಆಗಿದ್ದರೂ ಸತ್ಯನಾರಾಯಣರಾವ್ ಅನ್ನೋದು ಸರಿಯಾದ ಇಂಗ್ಲಿಷ್ನಲ್ಲಿ ಎಸ್.ಆರ್. ಆಗುತ್ತಿತ್ತು. ಆದರೆ ಇದು ನರೇಂದ್ರ ರೈದು. ಎನ್.ಆರ್….. ನಿನಗೆ ನನ್ನ ಹೆಸರೂ ಸರಿಯಾಗಿ ತಿಳಿದಿಲ್ಲವೇ?….. ನೀನು ಸಿಂಪಲ್ ಹೆಸರಿನಲ್ಲೂ ಇಂತಹ ತಪ್ಪು ಮಾಡ್ತೀಯಾ ಅಂತ ನನಗೆ ಹೊಳೆಯಲಿಲ್ಲವಲ್ಲಾ?!” ಎಂದು ಪೇಚಾಡಿದ.
ಮಾಧವರಾಯ ಅಚ್ಚರಿಮಿಶ್ರಿತ ಕಂಗಳನ್ನು ಅರಳಿಸುತ್ತಾ, “ಆಹ್! ಹೌದಾ?… ಅದ್ಯಾಕೊ ಸತ್ತನಾರಾಯಣ ಅನ್ನೋ ಹೆಸರನ್ನು ನಾಣಿ ಅಂತ ಮಾಡ್ಕೊಂಡೆ?” ಎಂದು ಮುಗ್ದವಾಗಿ ಪ್ರಶ್ನಿಸಿದಾಗ, ಹಣೆ ಚಚ್ಚಿಕೊಂಡು ಹಲ್ಲುಮುಡಿ ಕಚ್ಚಿ ನಾಣಿ, “ಆಗ ನಾನು `ಸತ್ತ ನಾರಾಯಣ ಆಗಿರ್ಲಿಲ್ಲ, ಈಗ ಆದೆ” ಎಂದು ಮುಲುಗಿದ.
ಮಾಧವರಾಯ ನಿರಾಳವಾಗಿ ಪ್ಚ್….ಪ್ಚ್ ಎನ್ನುತ್ತ ತನ್ನ ವಿವರಣೆ ಮುಂದುವರಿಸಿದ: “ಇನ್ನು ಸ್ಪಾಟಿನಲ್ಲಿ ರೈಲಿನ ಟೈಮ್ಟೇಬಲ್ ಬೀಳಿಸಿ ಹೋಗುವುದೆ? ಆ ಟೈಮ್ಟೇಬಲ್ ಪುಟ ನನ್ನ ಕೈಗೆ ಸಿಕ್ಕಿತು…. ಅದರಿಂದ ನೀನು ಇವತ್ತು ಬೆಳಗ್ಗೆ ಈ ಟ್ರೈನಿನಲ್ಲಿ ಹೊರಡುವುದು ಗೊತ್ತಾಗಿ ಬಿಟ್ಟಿತು….. ಅದಕ್ಕೆ ಇಲ್ಲಿ ಬಂದು ಕಾಯುತ್ತಿದ್ದೆ.”
ಇನ್ನೊಮ್ಮೆ ಆಘಾತಕ್ಕೆ ಒಳಗಾದವನಂತೆ ನರಳಿದ ನಾಣಿ: “ಅದು ಹೇಗಯ್ಯಾ? ಅಲ್ಲಿ ಯಶವಂತಪುರದಿಂದ ಕುಕ್ಕೆಸುಬ್ರಹ್ಮಣ್ಯದ ರೈಲು ಅನ್ನುವ ಪೇಜ್ ತಾನೇ ಇದ್ದದ್ದು?”
“ಯಶವಂತಪುರಕ್ಕೆ ಈ ರೈಲು ಬರುವುದಕ್ಕೆ ಮೊದಲೇ ನಾನು ಸಿಟಿ ಸ್ಟೇಷನ್ನಿನಲ್ಲೆ ಕುಳಿತು ನಿನ್ನ ಹೊಂಚು ಹಾಕೋಣ ಎಂದು ಇಲ್ಲಿಗೇ ಬಂದು ಬಿಟ್ಟೆ. ಹೇಗಿದೆ ಮುಂದಾಲೋಚನೆ? ನೋಡು, ನಾನೆಷ್ಟು ಜಾಣ, ನೀನೆಷ್ಟು ದಡ್ದನಾದೆ!!” ಎಂದು ಪಕಪಕ ನಕ್ಕ ಮಾಧವರಾಯ.
ಮತ್ತೆ ಅವನ ದಡ್ಡತನ ಇದರಲ್ಲೂ ಗೆದ್ದಿದ್ದಕ್ಕೆ ತಲೆ ಚಚ್ಚಿಕೊಂಡ ನಾಣಿ. “ಅಯ್ಯೋ ಮಂಕೇ! ಯಶವಂತಪುರದ ರೈಲು ಅಲ್ಲಿಂದಲೇ ಹೊರಡುತ್ತದೆ ಕಣಯ್ಯಾ. ಸಿಟಿ ಸ್ಟೇಷನ್ನಿನಿಂದ ಅಲ್ಲಿಗೆ ಹೋಗುವುದಿಲ್ಲಾ. ಇದು ಬೇರೆಯೇ ರೂಟ್, ಚೆನ್ನೈಗೆ ಹೋಗುತ್ತೆ; ನಿನಗೆ ರೈಲ್ವೇ ರೂಟ್ ಕೂಡಾ ಸರಿಯಾಗಿ ಗೊತಿಲ್ಲ… ಇದರಲ್ಲೂ ತಪ್ಪು ಮಾಡಿಬಿಟ್ಟೆ!” ಎಂದು ದೂರಿದ, ಬಿದ್ದರೂ ಮೀಸೆ ಮಣ್ಣಾಗದ ನಾಣಿ.
ಮಾಧವರಾಯ ಇದು ಕೇವಲ ವಿಷಯವೆಂಬಂತೆ ತಳ್ಳಿಹಾಕಿ ನಗುತ್ತಾ, “ಈ ರೈಲು ನಿಲ್ದಾಣದ ಹೆಸರುಗಳು ನನಗೆ ಜ್ಞಾಪಕವಿರುವುದೇ ಇಲ್ಲ ಬಿಡಪ್ಪಾ. ನನ್ನ ಪ್ರಕಾರ ಇಲ್ಲಿಂದಲೇ ಎಲ್ಲ ಟ್ರೈನೂ ಹೊರಡುತ್ತದೆ ಅಂದ್ಕೊಂಡೆ. ಇದರಿಂದ ನನಗೆ ನಷ್ಟವೇನೂ ಆಗ್ಲಿಲ್ಲವಲ್ಲಾ?” ಎಂದು ನಿಲ್ಲಿಸಿದವನು ಮತ್ತೇನೋ ಹೊಳೆದವನಂತೆ, “ಅದೂ ಅಲ್ಲದೆ, ನೀನೇಕೆ ನಿನ್ನ ಚುಟ್ಟಾ ಅಲ್ಲಿ ಬೀಳಿಸಿದ್ದೆ? ಇದೂ ನಿನ್ನ ಜಾಣತನವೇ?” ಎಂದು ಚುಚ್ಚಿ ಮತ್ತೆ ನಾಣಿಯನ್ನು ಚಕಿತಗೊಳಿಸಿದ.
“ಅದು ನನ್ನ ಚುಟ್ಟಾ ಅಲ್ಲಯ್ಯಾ…. ನರೇಂದ್ರ ರೈದು ತಾನೇ?” ಎಂದು ನೋವಿನಿಂದ ಕ್ಷೀಣದನಿಯಲ್ಲಿ ವಾದಿಸಿದ ನಾಣಿ.
ಮಾಧವರಾಯ ಹೆ….ಹೆ….ಹೆ…. ಎಂದು ಅದನ್ನು ತಳ್ಳಿಹಾಕುತ್ತಾ, “ಮೊನ್ನೆ ನರೇಂದ್ರ ರೈ ಸ್ಟೇಷನ್ನಿನಲ್ಲಿ ನಿನ್ನ ಸೀಟ್ ಮುಂದೆ ಕೂತಿದ್ದಾಗ ನಿನ್ನ ಆಶ್ ಟ್ರೇಯಲ್ಲಿ ಚುಟ್ಟಾ ಇದ್ದದನ್ನು ನಾನೇ ನೋಡಿದ್ದೇನೆ…. ಇಡೀ ಸ್ಟೇಷನ್ನಿನಲ್ಲಿ ಅದರ ಗಬ್ಬುನಾತ ಹೊಡೀತಿತ್ತು. ಅದಲ್ಲದೆ ಪ್ರಭಾಕರನ ರೂಮಿನಲ್ಲಿ ಇದನ್ನು ಬಿಟ್ಟು ಬೇರೆ ಯಾವ ಸಿಗರೇಟೂ ಇರ್ಲಿಲ್ಲ. ಹಾಗಾಗಿ ನಿನ್ನದೇ ಈ ಚುಟ್ಟಾ ಅಂತಾ ಗ್ಯಾರೆಂಟಿಯಾಗೋಯ್ತು” ಎಂದ ಆ `ಚತುರ’ ಎಸ್.ಐ.
“ಅಯ್ಯೋ ಪೆದ್ದಪ್ಪಾ….. ಅದನ್ನೂ ಸರಿಯಾಗಿ ಗಮನಿಸಲಿಲ್ಲಾ ನೀನು. ಸ್ಟೇಷನ್ನಿನಲ್ಲಿ ಆ ನರೇಂದ್ರ ರೈ ಚುಟ್ಟಾ ಸೇದಿ ನನ್ನ ಆಶ್ಟ್ರೇಯಲ್ಲಿ ಅದುಮಿದ್ದ! ನೀನು ಆಗ ಬಂದೆ ಅನ್ಸುತ್ತೆ, ಅದನ್ನೂ ನಂದೇ ಅನ್ಕೊಂಡ್ ಬಿಟ್ಟೆ! ಅದೊಂದು ಮಾತ್ರ ಸ್ಪಾಟಿನಲ್ಲಿ ಇರಲಿ ಅಂತಾ ನಾನು ಪ್ರಭಾಕರ ಇಬ್ಬರೂ ಸೇದಿದ್ದ ಮಿಕ್ಕ ಸಿಗರೇಟ್ ತುಂಡನ್ನೆಲ್ಲಾ ಖಾಲಿ ಮಾಡಿಬಿಟ್ಟಿದ್ದೆನಲ್ಲಪ್ಪಾ….. ಎಲ್ಲಾ ನನ್ನ ಕರ್ಮ!” ಎಂದು ತನ್ನ ದುರ್ವಿಧಿಯನ್ನು ಹಳಿದುಕೊಂಡ ನಾಣಿ ಕೈಗೆ ಕೈ ಗುದ್ದಿಕೊಂಡ.
ಮಾಧವರಾಯ ಅವನಿಗೆ ತಿಳಿಹೇಳುವಂತೆ ವೇದಾಂತ ನುಡಿದ: “ಅದಕ್ಕೇಪ್ಪಾ ಹೇಳೋದು. ನೀರು ಕುಡಿದೋನು ಉಪ್ಪು ತಿಂದೇ ತಿಂತಾನೆ ಅಂತಾ….”
ಅವನ ತಪ್ಪು ಗಾದೆ ಕೇಳಿ ಮತ್ತೆ ಅಸಹನೆಯಿಂದ ತಲೆಯಾಡಿಸಿದ ನಾಣಿ: “ಅದೂ ತಪ್ಪು!… ಅಂತೂ ಬರೀ ತಪ್ಪು ತಪ್ಪು ಮಾಡಿಯೂ ನೀನು ನನ್ನ ಹಿಡಿದು ಬಿಟ್ಟೆ; ನಾನು ಎಲ್ಲ ಸರಿಯಾಗಿ ಮಾಡಿಯೂ ಸಿಕ್ಕಿಬಿದ್ದೆ!… ನಾನು ಮಾಡಿದ ತಪ್ಪೆಂದರೆ ನಿನ್ನನ್ನು ಸ್ವಲ್ಪ ಮಟ್ಟಿಗೆ ಜಾಣ ಅಂತ ಅಂದಾಜು ಮಾಡಿದ್ದು. ನೀನು ಮಹಾ ಮಂಕುದಿಣ್ಣೆ ಕಣಯ್ಯಾ” ಎಂದು ತನ್ನ ಜಾಣ್ಮೆಯ ಸೋಲನ್ನೂ, ಅವನ ಮೂರ್ಖತನದ ಗೆಲವನ್ನೂ ನೆನೆದು ಬಿಕ್ಕಿ ಬಿಕ್ಕಿ ಅಳತೊಡಗಿದ ನಾಣಿ.
ಮಾಧವರಾಯ ತಲೆಯೆತ್ತಿ ನೋಡಿ, “ಅಗೋ ಡಾಕ್ಟರ್ ಬರುತ್ತಿದ್ದಾರೆ ನೋಡು. ಏಳು, ಸ್ಟೇಷನ್ನಿಗೆ ಹೋಗೋಣಾ…. ಅಲ್ಲಿ ಅರೆಸ್ಟ್ ಆಗುವೆಯಂತೆ” ಎಂದು ಶಾಂತವಾಗಿ ನುಡಿದು ಎದ್ದ.
ಮಾತಿಲ್ಲದೇ ಪ್ಲಾಟ್ಫಾರ್ಮ್ ಮೇಲೆ ತನ್ನನ್ನೆ ದುರುಗುಟ್ಟಿ ನೋಡುತ್ತ ಕುಸಿದು ಕುಳಿತಿದ್ದ ನಾಣಿಗೆ ದೊಡ್ಡ ವೇದಾಂತಿಯಂತೆ ಬುದ್ಧಿ ಹೇಳಿದ ಮಾಧವರಾಯ: “ಅದಕ್ಕೆ ಕಣೋ ನಾಣಿ, ನಮ್ಮ ಪುರಂದರದಾಸರು ಹೇಳಿದ್ದಾರೆ, “ಕಳಬೇಡ ಕೊಲಬೇಡ….” ಎಂದು. ನೀನು ಅದೆರಡನ್ನೂ ಮಾಡ್ಬಿಟ್ಟೆ!!”
ಜೋರಾಗಿ ನೆಲಕ್ಕೆ ಕೈ ಬಡಿದು ಅಳುತ್ತ ನಾಣಿ, “ತಪ್ಪು….ತಪ್ಪೂ! ಅದನ್ನು ಹೇಳಿದ್ದು ಪುರಂದರದಾಸರಲ್ಲಯ್ಯಾ, ಬಸವಣ್ಣನವರು! ಎಲ್ಲದರಲ್ಲೂ ತಪ್ಪು ತಪ್ಪು ಮಾಡಲು ಹೇಗಯ್ಯಾ ನಿನಗೆ ಸಾಧ್ಯ?” ಎಂದು ಚುಚ್ಚಿ ಟೀಕಿಸಿದ.
“ಎಡವೋ ಕಾಲು ನಡೆಯತ್ತೆ ಅಂತಾ ಗಾದೆ ಇಲ್ವೆ? ಹಾಗೇ ನಾನೂ!” ಎಂದು ತನ್ನನ್ನು ಸಮರ್ಥಿಸಿಕೊಳ್ಳುತ್ತಾ ಹೊರಗೆ ನಿಲ್ಲಿಸಿದ್ದ ಜೀಪಿನತ್ತ ಹೊರಟ ಮಾಧವರಾಯ.
“ಅಯ್ಯೋ, ಅಲ್ಲಾ ಅದು `ನಡೆಯೋ ಕಾಲು’ ಅಂತಿರೋದು!” ಎಂದು ಗಾದೆ ಸರಿಪಡಿಸಹೊರಟ ನಾಣಿ.
ಚೆನ್ನೈ ರೈಲು ಸಿಟಿ ನಿಲ್ದಾಣ ಬಿಟ್ಟು ಕದಲಿತು. ಯಶವಂತಪುರದಲ್ಲೂ ಕುಕ್ಕೆಸುಬ್ರಹ್ಮಣ್ಯದ ರೈಲು ಆಗಲೇ ಹೊರಟಿತ್ತು…. ನಾಣಿ ಮಾತ್ರ ಬಂಧಿಯಾಗಿ ಕುಂಟುತ್ತಾ ಪೋಲಿಸ್ ಸ್ಟೇಷನ್ನಿನತ್ತ ಹೊರಟಿದ್ದ.
ಸರಿ ಹಳಿ ತಪ್ಪಿತ್ತು; ತಪ್ಪು ಸರಿದಾರಿ ತೋರಿತ್ತು!