ಅಬಿಗೇಲಳ ಎಡಗೈ ಕೋಟಿನ ಬೆಚ್ಚನೆಯ ಜೇಬಿನಿಂದ ಹೊರಬಂದಿತು. ಕುಳಿರ್ಗಾಳಿಗೆ ಒಡ್ಡಿದ ಕೈಯಲ್ಲಿ ಟೆಸ್ಲಾದ ಕೀ ಇತ್ತು. ಅದನ್ನು ಸಮುದ್ರಕ್ಕೆ ಎಸೆದುಬಿಟ್ಟರೆ ರಾಬರ್ಟನ ಕಡೆಯ ವಸ್ತುವೂ ತನ್ನಿಂದ ದೂರವಾದಂತೆ. ಅಂಗೈ ಸಡಿಲಿಸಿ ಇನ್ನೇನು ಕೀಯನ್ನು ಸದ್ದಾಗದಂತೆ ನೀರಿಗಿಳಿಬಿಡಬೇಕು, ಅಷ್ಟರಲ್ಲಿ ಗುಡ್ ಈವನಿಂಗ್ ಮೇಡಂ ಎಂಬ ಧ್ವನಿ ಕೇಳಿಸಿತು. ಎಡಗೈ ಮತ್ತೆ ಬೆಚ್ಚನೆಯ ಜೇಬನ್ನು ಸೇರಿತು.
ನಾನಿನ್ನು ಹೊರಡಲೆ ಅಬಿಗೇಲ್? ಇನ್ನೇನಾದರೂ ಕೆಲಸವಿದೆಯೆ? ಕೇಳಿದಳು ಆಪ್ತಸಹಾಯಕಿ ಅಮಂದಾ.
ಒಂದು ಸಣ್ಣ ಕೆಲಸ – ನಾಳೆ ಸಂಜೆ ರಾಬರ್ಟನಿಗೆ ಬರಹೇಳು.
ನಿನ್ನ ಸೋದರಳಿಯನಿಗೇನು?
ಹಾಗೆನ್ನಬೇಡ. ಸೋದರಸೊಸೆಯ ಗಂಡ ಎನ್ನು ಅಬಿಗೇಲಳ ಧ್ವನಿಯಲ್ಲಿ ಅಸಮಾಧಾನದ ಛಾಯೆ ಇತ್ತು.
ಸರಿ. ಕರೆ ಮಾಡಿ ಹೊರಡುತ್ತೇನೆ ಎನ್ನುತ್ತ ಅಮಂದಾ ಕೊಠಡಿಯಿಂದ ಹೊರನಡೆದಳು.
* * *
ನಿಮ್ಮ ವಾಕಿನ್ ಲಾಕರನ್ನೊಮ್ಮೆ ಪರಿಶೀಲಿಸಬೇಕಲ್ಲ ಎಂದ ಡಿಟೆಕ್ಟಿವ್ ಕೊಲಂಬೊ.
ಬೈ ಆಲ್ ಮೀನ್ಸ್ ಲೆಫ್ಟಿನೆಂಟ್ ಎಂದಳಾಕೆ. ಕೊಲಂಬೊ ಸೇನೆಯಲ್ಲಿ ಲೆಫ್ಟಿನೆಂಟ್ ಸ್ತರವನ್ನು ತಲಪಿ ನಿವೃತ್ತನಾಗಿ ಪೊಲೀಸ್ ದಳದಲ್ಲಿ ಪತ್ತೇದಾರನಾಗಿ ಸೇರಿದನೆಂದು ಸ್ವಯಂ ಪತ್ತೇದಾರಿ ಕಥೆಗಳ ಬರವಣಿಗೆಗೆ ಖ್ಯಾತಳಾದ ಇಳಿವಯದ ಪ್ರೌಢೆ ಅಬಿಗೇಲಳಿಗೆ ತಿಳಿದಿತ್ತು. ಇಬ್ಬರೂ ಲಾಕರಿನತ್ತ ನಡೆದರು.
ಕೊಲಂಬೊ ವಾಕಿನ್ ಲಾಕರಿನ ಹೊರಮೈಮೇಲೆ ಕೆಳಗಿನಿಂದ ಮೇಲಿನವರೆಗೆ ಆಮೆವೇಗದಲ್ಲಿ ತನ್ನ ಬೂದುಗಾಜನ್ನು ಆಡಿಸಿದ. ಆಶ್ಚರ್ಯ! ರಾಬರ್ಟನ ಬಟ್ಟೆಗಳ ಮೇಲೆ ಕಪ್ಪನೆಯ ಕಲೆಗಳಿದ್ದವು. ಈ ಲಾಕರಿನ ಒಳಮೈ ಹಸಿರು ಬಣ್ಣದ್ದಾಗಿದೆ. ಹೊರಮೈ ಕಪ್ಪಗಿದೆ. ಆದರೆ ಕಪ್ಪನೆಯ ಭಾಗದಲ್ಲಿ ಎಲ್ಲಿಯೂ ಕೊರೆ-ಗೆರೆಗಳಿಲ್ಲ ಮಂದ್ರಸ್ತರದಲ್ಲಿ, ವಿಳಂಬಕಾಲದಲ್ಲಿ ನುಡಿದ ಕೊಲಂಬೊ.
ಹೊರಗೆಲ್ಲೋ ಮೆತ್ತಿಕೊಂಡಿದ್ದನೇನೋ ಅಸಡ್ಡೆಯಿಂದ ನುಡಿದಳು ಅಬಿಗೇಲ್, ಹೇಳಿಕೇಳಿ ತಿರುಗಾಲ ತಿಪ್ಪ.
ನಿಮ್ಮ ವಾಕಿನ್ ಲಾಕರಿನಿಂದ ಅವನ ಶವವನ್ನು ಹೊರತೆಗೆದಾಗ ಅವನು ತೊಟ್ಟಿದ್ದ ಷೂಗಳ ಪಾಲಿಷ್ನಲ್ಲಿ ನನ್ನ ತಲೆ ಬಾಚಿಕೊಳ್ಳಬಹುದಿತ್ತು. ಸಾಕ್ಸ್ಗಳು ಶುಭ್ರವಾಗಿದ್ದವು. ಸ್ವಚ್ಛ ಬನಿಯನ್, ಸ್ವಚ್ಛ ಸಾಕ್ಸ್ ತೊಡುವ ವ್ಯಕ್ತಿ ಬಟ್ಟೆಗೆ ಕಲೆ ಮಾಡಿಕೊಂಡು ತಿರುಗುವುದಿಲ್ಲ ಅಲ್ಲವೇ ಮಿಸ್ ಅಬಿಗೇಲ್?
ಅಬಿಗೇಲ್ ನಾಲಿಗೆ ಕಚ್ಚಿಕೊಂಡಳು. ಸಾಕ್ಸ್ ಮತ್ತು ಬನಿಯನ್ ಸಂಬಂಧಿತ ಹೇಳಿಕೆ ಅವಳೇ ಬರೆದ ಪತ್ತೇದಾರಿ ಕಥೆಗಳಲ್ಲೊಂದರದಾಗಿತ್ತು.
ಅಂದು ನಡೆದದ್ದನ್ನು ಮತ್ತೊಮ್ಮೆ ಹೇಳುವಿರಾ? ಕೇಳಿದ ಕೊಲಂಬೊ.
ಅವರನ್ನೇಕೆ ಗೋಳುಹೊಯ್ದುಕೊಳ್ಳುವಿರಿ? ವಯಸ್ಸಾದ ಹೆಣ್ಣು; ಆತ್ಮೀಯನ ಸಾವಿನಿಂದ ಜರ್ಝರಿತಳಾದವಳು. ಅಂದು ಪಡೆದ ಹೇಳಿಕೆಯನ್ನೇ ಓದಿಕೊಳ್ಳಿ ಇಬ್ಬರಿಗೂ ತಿಳಿಯದಂತೆ ಹಿಂದೆ ಬಂದು ನಿಂತಿದ್ದ ಅಮಂದಾ ಹೂಂಕರಿಸಿದಳು.
ಅಮಂದಾ, ಅಂದಿನ ಹೇಳಿಕೆಗೂ, ಇಂದಿನ ಹೇಳಿಕೆಗೂ ವ್ಯತ್ಯಾಸ ಕಂಡುಬಂದರೆ ಪತ್ತೇದಾರರಿಗೆ ರಸದೌತಣ. ಆಗಲಿ ಲೆಫ್ಟಿನೆಂಟ್. ಇನ್ನೊಮ್ಮೆ ಹೇಳುತ್ತೇನೆ ಸುಸ್ತುಸ್ವರದಲ್ಲಿ ನುಡಿದಳು ಅಬಿಗೇಲ್. ಒಳಗಣ್ಣು ರಾಬರ್ಟ್ ಶವವಾಗಿ ದೊರಕಿದ ದಿನವನ್ನು ಮನದ ಪರದೆಯ ಮೇಲೆ ಮೂಡಿಸಿತು.
* * *
ಅಮಂದಾ ಫೋನ್ ಮಾಡಿದ್ದಳು. ಏನು ಸಮಾಚಾರ ಅಬಿಗೇಲ್? ಏರುದನಿಯಲ್ಲಿ ಮಾತನಾಡುತ್ತಲೇ ಪ್ರವೇಶಿಸಿದ ರಾಬರ್ಟ್.
ಅಬಿಗೇಲ್ ಅವನು ಸಮೀಪಿಸುವವರೆಗೆ ಕಾಯ್ದು, ಆಲಿಂಗಿಸಿ, ಹಣೆಯನ್ನು ಚುಂಬಿಸಿ, ನೋಡಬೇಕೆನಿಸಿತು. ಸದ್ಯ ಬಂದೆಯಲ್ಲ! ಮುಖ್ಯ ವಿಷಯವೊಂದನ್ನು ಪ್ರಸ್ತಾಪಿಸಬೇಕು ಎಂದಳು.
ಏನು ಅಂತಹ ತುರ್ತಿನ ವಿಷಯ? ಆರೋಗ್ಯದಲ್ಲೇನಾದರೂ ಏರುಪೇರು?
ಸಾರಿ ಟು ಡಿಸಪಾಯಿಂಟ್ ಯೂ, ಯಂಗ್ಮ್ಯಾನ್. ನನ್ನ ಆರೋಗ್ಯ ಚೆನ್ನಾಗಿಯೇ ಇದೆ ನಗುನಗುತ್ತ ನುಡಿದಳು ಅಬಿಗೇಲ್.
ಘಾಟಿ ಮುದುಕಿ ನೀನು. ಲವಲವಿಕೆಗೆ ಮತ್ತೊಂದು ಹೆಸರಾದ ನಿನ್ನನ್ನು ಬೈಚಾನ್ಸ್ ಹಿಡಿದರೆ ಮತ್ತೊಂದು ಪ್ರೇಮಪಾಶ ಹಿಡಿದೀತು; ಯಮಪಾಶ ನಿನ್ನಿಂದ ಸದ್ಯಕ್ಕಂತೂ ದೂರವೇ. ರಾಬರ್ಟನ ಮಾತುಗಳು ಇಬ್ಬರಲ್ಲೂ ನಗೆಯ ಅಲೆಯನ್ನು ಎಬ್ಬಿಸಿದವು.
ರಾಬರ್ಟ್, ಜೀವನ ನಶ್ವರ ಇದ್ದಕ್ಕಿದ್ದಂತೆ ಗಂಭೀರಳಾದಳು ಅಬಿಗೇಲ್, ಎಪ್ಪತ್ತರ ಆಸುಪಾಸಿನ ನನಗೆ ಮೇಲಿನವನ ಕರೆ ಎಂದಾದರೂ ಬಂದೀತು. ನನಗಿರುವವನು ನೀನೊಬ್ಬನೇ ಬಂಧು. ಆದ್ದರಿಂದ ನನ್ನ ಎಲ್ಲ ಆಸ್ತಿಯನ್ನು ನಿನ್ನ ಹೆಸರಿಗೆ ಮಾಡಿದ್ದೇನೆ. ಇನ್ನೇನು ವಕೀಲರು ಬರುವ ಹೊತ್ತಾಯಿತು. ನನ್ನ ಉಯಿಲಿಗೆ ಸಹಿ ಹಾಕಿ ನಿನಗೆ ನೀಡುತ್ತೇನೆ. ಅದಕ್ಕಾಗಿಯೇ ನಿನ್ನನ್ನು ಕರೆದದ್ದು.
ಆದರೆ… ಅಬಿಗೇಲ್, ನಿನ್ನ ಆರೋಗ್ಯವಷ್ಟೇ ನನಗೆ ಮುಖ್ಯ. ನಿನ್ನ ಆಸ್ತಿಯ ಬಿಡಿಗಾಸಿಗೂ ನಾನು ಆಸೆಪಟ್ಟವನಲ್ಲ. ನನಗೇನೂ ಬೇಡ ಪ್ರತಿಭಟಿಸಿದ ರಾಬರ್ಟ್.
ನಾನ್ಸೆನ್ಸ್. ಆಸ್ತಿ ಕೈಗೆ ಬಂದಮೇಲೆ ಇದೇ ಮಾತನ್ನು ಹೇಳು ನೋಡೋಣ! ಇರಲಿರಲಿ. ನಿನ್ನ ಹೊರತು ನನಗಾದರೂ ಯಾರಿದ್ದಾರೆ! ಅದೋ, ವಕೀಲರು ಬಂದರು ಎನಿಸುತ್ತದೆ ಎನ್ನುತ್ತ ಅಬಿಗೇಲ್ ದೃಷ್ಟಿಯನ್ನು ಬಾಗಿಲಿನತ್ತ ನೆಟ್ಟಳು.
ಅಬಿಗೇಲಳ ಅನಿಸಿಕೆ ನಿಜವಾಗಿತ್ತು. ಕೈಯಲ್ಲಿ ಎರಡು ಫೈಲುಗಳನ್ನು ಹೊತ್ತ ಬ್ಯಾರಿಸ್ಟರ್ ಬ್ರೂನೋ ಗುಡ್ ಈವನಿಂಗ್ ಅಬಿಗೇಲ್, ಗುಡ್ ಈವನಿಂಗ್ ರಾಬರ್ಟ್ ಎನ್ನುತ್ತ್ತ ಒಳಸರಿದರು. ಮೂವರೂ ಅಬಿಗೇಲಳ ಡ್ರಾಯಿಂಗ್ ರೂಮನ್ನು ಸೇರಿದಾಕ್ಷಣ ವಕೀಲರು ಎರಡೂ ಫೈಲುಗಳನ್ನು ಅಲ್ಲಿದ್ದ ಮೇಜಿನ ಮೇಲೆ ಹರಡಿದರು.
ಇದೇನು? ಉಯಿಲನ್ನೂ ದ್ವಿಪ್ರತಿಯಲ್ಲಿ ಮಾಡಿಸಿದೆಯೇನು? ಮೇಜಿನ ಮೇಲಿದ್ದ ಎರಡು ಫೈಲುಗಳನ್ನು ನೋಡುತ್ತಾ ಕೇಳಿದ ರಾಬರ್ಟ್.
ನೋ ಯಂಗ್ ಮ್ಯಾನ್. ಈ ಉಯಿಲು ಅಬಿಗೇಲ್ರದು. ಇದು ನಿಮ್ಮದು ಎಂದರು ವಕೀಲರು.
ನನ್ನದೆ? ಉಯಿಲೆ? ಆಶ್ಚರ್ಯಚಕಿತನಾದ ರಾಬರ್ಟ್.
ಹೌದು ರಾಬರ್ಟ್ ನಸುನಗುತ್ತ ನುಡಿದಳು ಅಬಿಗೇಲ್, ಯಮಸದನದ ದ್ವಾರದಲ್ಲಿ ಸರತಿಯ ಕ್ಯೂ ಇರುವುದಿಲ್ಲ. ಕೆಲವೊಮ್ಮೆ ಚಿಕ್ಕವರೇ ದೊಡ್ಡವರಿಗಿಂತ ಮೊದಲು ಒಳನುಗ್ಗುತ್ತಾರೆ. ಆದ್ದರಿಂದ ನಾನು ಹೋದರೆ ನಿನಗೆ, ನೀನು ಹೋದರೆ ನನಗೆ ಈ ಆಸ್ತಿ ಇರಲೆಂದು ಎರಡೂ ಉಯಿಲುಗಳನ್ನು ತಯಾರಿಸಲು ಹೇಳಿದ್ದೆ. ತಪ್ಪೇನು?
ಸಾವಿನ ಬಗ್ಗೆಯೇ ಕಥೆ ಬರೆಯುವವರಿಗೆ ಇದು ಸೂಕ್ತವಾದ ಆಲೋಚನೆಯೇ ಎಂದು ನಗುತ್ತ ರಾಬರ್ಟ್ ವಕೀಲರು ನೀಡಿದ ಪೆನ್ನಿನಿಂದ ಸೂಚಿತ ಸ್ಥಳಗಳಲ್ಲಿ ಸಹಿ ಹಾಕಿದ.
ನಡೆಯಿರಿ ವಕೀಲರೆ, ಒಂದಿಷ್ಟು ಜೇಬು ಭರ್ತಿ, ಬಾಯಿ ಸಿಹಿ ಮಾಡಿಕೊಳ್ಳುವಿರಂತೆ ಎಂದ ಅಬಿಗೇಲ್ ರಾಬರ್ಟನತ್ತ ತಿರುಗಿ ಬಾಬ್, ಇಂದು ಸಂಜೆ ನಾನು ವಿದೇಶಕ್ಕೆ ಹೊರಡುವವಳಿದ್ದೇನೆ. ತೊಗೊ, ಈ ಉಯಿಲುಗಳನ್ನು ವಾಕಿನ್ ಲಾಕರಿನಲ್ಲಿ ಇಟ್ಟುಬಿಡು. ಇದೋ ಆ ಲಾಕರಿನ ನಂಬರ್. ಅಮಂದಾ, ನೀನು ಬಾಬ್ಗೆ ಲಾಕರಿನಲ್ಲಿರುವ ವಸ್ತುಗಳನ್ನು ತೋರಿಸಿ, ಅದನ್ನು ಹಾಕುವ, ತೆಗೆಯುವ ಬಗೆಯನ್ನು ತೋರಿಸು ಎನ್ನುತ್ತ ವಕೀಲರೊಡನೆ ಡೈನಿಂಗ್ ಕೊಠಡಿಗೆ ನಡೆದಳು.
ವಕೀಲರು ಸಿಹಿಯುಣ್ಣುತ್ತ, ಅಬಿಗೇಲ್, ನಿಮ್ಮ ಇತ್ತೀಚಿನ ಪತ್ತೇದಾರಿ ಕಾದಂಬರಿಯಾದ ಹೌ ಐ ವಾಸ್ ಮರ್ಡರ್ಡ್ ಬಹಳ ರೋಚಕವಾಗಿದೆ. ಮೊದಲ ಪುಟದಿಂದ ಕೊನೆಯವರೆಗೂ ಕೌತುಕಮಯ ಎಂದರು.
ಮಾತು ಕಾದಂಬರಿಯ ವಸ್ತು, ವ್ಯಕ್ತಿಗಳ ಸುತ್ತಲೂ ಸುತ್ತುತ್ತಿದ್ದಂತೆಯೇ ರಾಬರ್ಟ್ ಹೊರಬಾಗಿಲಲ್ಲಿ ಕಾಣಿಸಿಕೊಂಡನು. ಅಮಂದಾ ಕೆಲವು ಮಾಹಿತಿಗಳನ್ನು ನೀಡಿದಳು ಎಂದು ರಾಬರ್ಟ್ ನುಡಿಯುತ್ತಿದ್ದಂತೆಯೇ ಅಬಿಗೇಲ್ ಅವನತ್ತ ಸಾಗಿ, ಹಣೆಯನ್ನು ಚುಂಬಿಸಿ, ಸೀ ಯೂ ಆನ್ ಮೈ ರಿಟರ್ನ್ ಫ್ರಂ ಅಬ್ರಾಡ್ ಎಂದಳು. ತುಸು ನಿಮಿಷಗಳಲ್ಲಿ ರಾಬರ್ಟ್ನ ಕಾರು ಹೊರಟ ಸದ್ದು ಕೇಳಿಬಂದಿತು. ರಾಬರ್ಟ್ ಅತ್ತ ಹೋದ ಕೆಲವು ನಿಮಿಷಗಳಲ್ಲಿ ಅಮಂದಾ ನನ್ನ ಕೆಲಸವಾಯ್ತು. ಹೊರಡಲೆ? ಎಂದು ಅನುಮತಿ ಪಡೆದು ತೆರಳಿದಳು.
* * *
ಅಂದು ನಡೆದುದನ್ನು ಚಾಚೂತಪ್ಪದೆ ವಿವರಿಸಿದ ಅಬಿಗೇಲ್ ಇಷ್ಟೇ ಲೆಫ್ಟಿನೆಂಟ್ ಅಂದು ನಡೆದದ್ದು. ಅಮಂದಾ, ರಾಬರ್ಟ್ ಹೊರಟ ನಂತರ ವಕೀಲರ ಬ್ರೂನೋ ಸಹ ನನ್ನಿಂದ ಬೀಳ್ಕೊಂಡರು. ಆರು ಗಂಟೆಗೆ ನಾನು ಏರ್ಪೋರ್ಟಿಗೆ ಹೊರಟೆ. ವಿಮಾನವನ್ನು ಏರಿದ ಮೇಲೆಯೇ ನನಗೆ ನನ್ನ ವಜ್ರದ ನೆಕ್ಲೇಸನ್ನು ಡ್ರೆಸಿಂಗ್ ಟೇಬಲ್ ಮೇಲೆ ಬಿಟ್ಟಿರುವುದು ನೆನಪಾದುದು. ಅಮಂದಾಳಿಗೆ ಫೋನ್ ಮಾಡಿ ಮರುದಿನ ಬೆಳಗ್ಗೆಯೇ ನೆಕ್ಲೇಸನ್ನು ಲಾಕರಿನಲ್ಲಿ ಇಡಲು ಹೇಳಿದೆ. ಮರುದಿನ ಬೆಳಗ್ಗೆ… ಓಹ್! ಎನ್ನುತ್ತ ಮತ್ತೊಮ್ಮೆ ಶೋಕಸಾಗರದಲ್ಲಿ ಮುಳುಗಿದಳು.
ಮರುದಿನ ಬೆಳಗ್ಗೆ ನಾನು ನೆಕ್ಲೇಸ್ ಇಡಲೆಂದು ಲಾಕರ್ ತೆಗೆದಾಗ ಅಲ್ಲಿ ರಾಬರ್ಟ್ ಇದ್ದ; ಅಲ್ಲಿದ್ದ ಸ್ಟೀಲ್ ಟ್ರೇಗಳ ಮುಂದೆ ಕುಸಿದು ಬಿದ್ದಿದ್ದ. ಉಸಿರಾಡುವುದನ್ನು ಮರೆತಿದ್ದ ನಿರ್ವಿಕಾರವಾಗಿ ನುಡಿದಳು ಅಮಂದಾ.
ಹಿಂದಿನ ದಿನವಷ್ಟೇ ಉಯಿಲಿಗೆ ಸಹಿ ಹಾಕಿದ್ದ. ಸಾವಿನರಮನೆಗೆ ಕ್ಯೂ ಜಂಪ್ ಮಾಡಿ ಪ್ರವೇಶಿಸಿಬಿಟ್ಟ ಕರ್ಚೀಫಿನಿಂದ ಕಣ್ಣೊರೆಸಿಕೊಂಡು ನುಡಿದಳು ಅಬಿಗೇಲ್, ನನ್ನ ಮುಂದೆಯೇ ಹೊರಹೋದವನು ಅದೇಕೆ ಹಿಂತಿರುಗಿದನೋ ತಿಳಿಯದಾಗಿದೆ.
ತಿಜೋರಿಯಲ್ಲಿ ಏನೇನಿದ್ದವು? ಕೇಳಿದ ಕೊಲಂಬೊ.
ಓಹ್! ಹೆಚ್ಚೇನಿರಲಿಲ್ಲ. ಸುಮಾರು ಹತ್ತು ಲಕ್ಷ ಡಾಲರ್ ಬೆಲೆಬಾಳುವ ಒಡವೆಗಳು, ಎರಡು ಲಕ್ಷ ಡಾಲರ್ ನಗದು. ಕೆಲವು ಷೇರ್ ಸರ್ಟಿಫಿಕೇಟುಗಳು ಅಷ್ಟೆ.
ಅವುಗಳನ್ನು ರಾಬರ್ಟ್ ನೋಡಿದ್ದನೇನು?
ಓಹ್! ನಗದನ್ನು ಕಂಡಾಕ್ಷಣ ಅವನ ಕಣ್ಣುಗಳು ಲಾರ್ಜ್ ಪಿಜ್ಜಾದಷ್ಟು ಅಗಲವಾಗಿದ್ದವು ತಾತ್ಸಾರದ ಧ್ವನಿಯಲ್ಲಿ ನುಡಿದಳು ಅಮಂದಾ.
ರಾಬರ್ಟ್ ಶೋಕಿವಾಲಾ. ನನ್ನ ಸೋದರಸೊಸೆ ಎಲಿಸಾ ಎಷ್ಟೇ ಹೇಳಿದರೂ ತನ್ನ ದುಂದುಗಾರಿಕೆಯನ್ನು ಬಿಡಲಿಲ್ಲ. ಬಡಪಾಯಿ ಎಲಿಸಾ ಸಮುದ್ರದಲ್ಲಿ ಅವನೊಡನೆ ಈಜಲು ಹೋಗಿ ಹೆಣವಾಗಿ ಮರಳುವ ಹೊತ್ತಿಗೆ ಅವಳಿಗೆಂದು ನಾನು ನೀಡಿದ್ದ ಮನೆಯ ಹೊರತಾಗಿ ಮಿಕ್ಕೆಲ್ಲವೂ ಉಡೀಸ್ ಆಗಿದ್ದವು. ಉಯಿಲಿನ ಪ್ರಕಾರ ನನ್ನ ಹಣವೆಲ್ಲ ಅವನಿಗೆ ಬರುವಾಗ ಕೊಂಚ ಹಣವನ್ನು ಅಡ್ವಾನ್ಸಾಗಿ ಒಯ್ಯಲು ಬಂದನೇನೋ! ಅಬಿಗೇಲಳ ಆರ್ದ್ರ ಕಣ್ಣುಗಳಲ್ಲಿ ಓದಲಾರದ ಭಾವ!
ಬಡಪಾಯಿ ಶೋಕಿವಾಲಾ! ನನಗೆ ಕೆಲವು ಸಂದೇಹವಳಿವೆ ಮಿಸ್ ಅಬಿಗೇಲ್. ನೀವು ವಿದೇಶಕ್ಕೆ ಹೋಗುವಿರೆಂದು ತಿಳಿದಿದ್ದ ರಾಬರ್ಟ್ ಮರುದಿನ ಬರಬಹುದಿತ್ತಲ್ಲ! ಅಂದೇ, ಕೊಂಚ ಸಮಯದಲ್ಲೇ ಹಿಂತಿರುಗಿದ್ದೇಕೆ? ಆ ಸಮಯದಲ್ಲಿ ನೀವು ಇನ್ನೂ ವಿಮಾನನಿಲ್ದಾಣಕ್ಕೆ ಹೊರಟಿರಲಿಲ್ಲ ಅಲ್ಲವೆ?
ಅಬಿಗೇಲ್ ಅಧೀರಳಾದಳು. ಕೆಲವು ಕ್ಷಣಗಳ ನಂತರ ಸಾವರಿಸಿಕೊಂಡು ತನ್ನ ಏರ್ ಟಿಕೆಟ್ಟನ್ನು ಕೊಲಂಬೊವಿನ ಮುಂದಿರಿಸಿದಳು. ನನ್ನ ಫ್ಲೈಟ್ ಇದ್ದದ್ದು ರಾತ್ರಿ ಹತ್ತಕ್ಕೆ. ಮೂರು ಗಂಟೆಗಳಷ್ಟು ಮುಂಚೆ ನಿಲ್ದಾಣದಲ್ಲಿರಬೇಕೆಂಬುದು ನಿಯಮ. ನಮ್ಮ ಮನೆಯಿಂದ ಏರ್ಪೋರ್ಟಿಗೆ ಹೋಗಲು ಒಂದು ತಾಸು ಬೇಕು. ಆದ್ದರಿಂದ ನಾನು ಮನೆಯನ್ನು ಆರು ಗಂಟೆಗೆ ಬಿಟ್ಟೆ. ಆಗಿನವರೆಗೆ ರಾಬರ್ಟ್ ಬಂದಿರಲಿಲ್ಲ ನುಡಿದಳು ಅಬಿಗೇಲ್.
ರಾಬರ್ಟ್ ಹೊರಟಾಗ ಹಣೆಯನ್ನು ಚುಂಬಿಸಲು ಅವನನ್ನು ಸಮೀಪಿಸಿದ ನೀವು ಅವನನ್ನು ಮತ್ತೆ ಬರಲು ಹೇಳಿರಬಹುದಲ್ಲ! ಕತ್ತಲೆಯಲ್ಲೊಂದು ಬಾಣವನ್ನು ತೂರಿದ ಕೊಲಂಬೊ.
ನಿಜ. ಆದರೆ ನಾಯಿಯ ಕಿವಿಯ ವಕೀಲನಿಗೆ ಅದು ಕೇಳಿಸಿಬಿಡುತ್ತಿತ್ತು. ಪತ್ತೇದಾರಿ ಕಥೆಗಾರಳಾದ ನಾನು ಅಂತಹ ಬಾಲಿಶ ತಪ್ಪು ಮಾಡುವೆನೇನು? ಸವಾಲೆಸೆದಳು ಅಬಿಗೇಲ್.
ನಿಮ್ಮ ಮಾತನ್ನು ನಂಬುತ್ತೇನೆ. ಆದರೆ, ಒಂದು ಸಂದೇಹ. ಬಂದವನು ತನ್ನ ಕಾರಿನ ಕೀಯನ್ನು ಎಲ್ಲಿ ಹಾಕಿದ? ಸತ್ತವನ ಜೇಬಿನಲ್ಲಿ ಕೀ ಇರಲಿಲ್ಲ!
ಅದು ತಿಳಿದಿದ್ದದ್ದು ರಾಬರ್ಟನಿಗೆ ಮಾತ್ರ ಲೆಫ್ಟಿನೆಂಟ್! ಬಿರುಧ್ವನಿಯಲ್ಲಿ ನುಡಿದಳು ಅಬಿಗೇಲ್.
ಓಕೆ ಓಕೆ. ನೋ ಹಾರ್ಡ್ ಫೀಲಿಂಗ್ಸ್. ಮತ್ತೊಮ್ಮೆ ತಮ್ಮನ್ನು ಕಾಣುತ್ತೇನೆ ಎನ್ನುತ್ತ ಆಲೋಚನಾಪರನಾದ ಪತ್ತೇದಾರ ಹೊರನಡೆದ.
* * *
ರಾಬರ್ಟನ ಟೆಸ್ಲಾದ ಕೀ ವರಾಂಡದಲ್ಲಿನ ಬಿಳಿಮರಳು ತುಂಬಿದ ಅಲಂಕಾರ ಸಾಮಗ್ರಿಯಲ್ಲಿ ದೊರಕಿತು ಮೇಡಮ್ ಬಿಳಿಯ ಗುಲಾಬಿಗಳನ್ನು ಗಿಡದಿಂದ ಹೆಕ್ಕುತ್ತಿದ್ದ ಅಬಿಗೇಲಳ ಪಕ್ಕಕ್ಕೇ ಬಂದು ನಿಂತ ಅಮಂದಾ ಪಿಸುನುಡಿಯಲ್ಲಿ ನುಡಿದಳು.
ಅಬಿಗೇಲ್ ಮರುನುಡಿಯದೆ ಅಮಂದಾಳ ಮುಂದಿನ ಮಾತುಗಳಿಗಾಗಿ ಕಾದಳು.
ನನಗೆ ಕೊಡುವ ಸಂಬಳ, ಸವಲತ್ತುಗಳನ್ನು ಏರಿಸುವುದರ ಬಗ್ಗೆ ಮಾತನಾಡಬೇಕಾಗಿತ್ತು ಮೇಡಮ್ ಎಂದಳು ಆಪ್ತಸೇವಕಿ. ಆಪ್ತಸೇವಕಿಯ ಧ್ವನಿಯಲ್ಲಿ ಆಪ್ತತೆ ಮಾಯವಾಗಿತ್ತು.
ಟೆಸ್ಲಾದ ಕೀಯನ್ನು ಅಬಿಗೇಲಳಿಗೆ ನೀಡಿದ ಅಮಂದಾ ತನ್ನ ಕೊಠಡಿಯತ್ತ ನಡೆದಳು.
* * *
ಅಬಿಗೇಲಳ ಎಡಗೈ ಕೋಟಿನ ಬೆಚ್ಚನೆಯ ಜೇಬಿನಿಂದ ಹೊರಬಂದಿತು. ಕುಳಿರ್ಗಾಳಿಗೆ ಒಡ್ಡಿದ ಕೈಯಲ್ಲಿ ಟೆಸ್ಲಾದ ಕೀ ಇತ್ತು. ಅದನ್ನು ಸಮುದ್ರಕ್ಕೆ ಎಸೆದುಬಿಟ್ಟರೆ ರಾಬರ್ಟನ ಕಡೆಯ ವಸ್ತುವೂ ತನ್ನಿಂದ ದೂರವಾದಂತೆ. ಅಂಗೈ ಸಡಿಲಿಸಿ ಇನ್ನೇನು ಕೀಯನ್ನು ಸದ್ದಾಗದಂತೆ ನೀರಿಗಿಳಿಬಿಡಬೇಕು, ಅಷ್ಟರಲ್ಲಿ ಗುಡ್ ಈವನಿಂಗ್ ಮೇಡಂ ಎಂಬ ಧ್ವನಿ ಕೇಳಿಸಿತು. ಎಡಗೈ ಮತ್ತೆ ಬೆಚ್ಚನೆಯ ಜೇಬನ್ನು ಸೇರಿತು.
ಏನು ಕೊಲಂಬೊ? ಇಲ್ಲೇನು ಮಾಡುತ್ತಿದ್ದೀರಿ?
ಆ ಟೆಸ್ಲಾದ ಕೀ ಸಿಗುವವರೆಗೆ ನಿಮಗೆ ನನ್ನಿಂದ ತೊಂದರೆ ತಪ್ಪಿದ್ದಲ್ಲ ಮೇಡಮ್. ನಿಮ್ಮದು ಕಾರ್ನರ್ ಮನೆ. ರಾಬರ್ಟ್ ಆರೂಕಾಲು ಗಂಟೆಗೆ ನಿಮ್ಮ ಮನೆಯ ಪಾರ್ಶ್ವದ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ, ಮನೆಯ ಕೆಲಸದವರು ಹೋಗಿಬರಲೆಂದಿರುವ ಸಣ್ಣ ಗೇಟಿನಿಂದ ನಿಮ್ಮ ಮನೆಯನ್ನು ಪ್ರವೇಶಿಸಿದ್ದಾನೆ ಎಂದು ಪ್ರತ್ಯಕ್ಷ ಸಾಕ್ಷಿಗಳು ಹೇಳಿದ್ದಾರೆ. ಒಳಬಂದವನು ಕೀ ಎಲ್ಲಿ ಇಟ್ಟಿರಬಹುದು ಅಥವಾ ಅದು ಎಲ್ಲಿ ಬಿದ್ದಿರಬಹುದು ಎಂದು ಪತ್ತೇದಾರಿ ಕಾದಂಬರಿಯ ಸಾರ್ವಭೌಮರಾದ ನೀವು ಊಹಿಸಬಲ್ಲಿರೆ?
ಕ್ಷಮಿಸಿ ಲೆಫ್ಟಿನೆಂಟ್. ಅವನ ಸಾವಿನ ಆಘಾತದಿಂದ ನನ್ನ ತಲೆ ಸರಿಯಾಗಿ ಕೆಲಸ ಮಾಡುತ್ತಿಲ್ಲ.
ಪತ್ತೇದಾರ ಮತ್ತೇನೂ ಹೇಳದೆ ಸ್ಥಳದಿಂದ ನಿರ್ಗಮಿಸಿದ.
* * *
ಕೊಂಚ ಮನೆಗೆ ಬರುವಿರಾ ಲೆಫ್ಟಿನೆಂಟ್? ಇಳಿವಯದವಳ ಧ್ವನಿ ಫೋನಿನಲ್ಲಿ ಮೊಳಗಿತು. ಅವಳ ಮನೆಗೆ ಹೋದವನಿಗೆ ಅಚ್ಚರಿ ಕಾದಿತ್ತು.
ನೀವು ಹುಡುಕುತ್ತಿದ್ದ ಕೀ ತೋಟಕ್ಕೆ ನೀರುಹಾಯಿಸುವ ಸ್ಪ್ರಿಂಕ್ಲರ್ನ ಪಕ್ಕದಲ್ಲಿಯೇ ಬಿದ್ದಿತ್ತು. ತರಾತುರಿಯಲ್ಲಿದ್ದ ರಾಬರ್ಟ್ ಅದನ್ನು ಗಮನಿಸಿಲ್ಲವೆನಿಸುತ್ತದೆ. ಆತುರದಿಂದ ಒಳನುಗ್ಗಿ, ತಿಜೋರಿಯನ್ನು ತೆಗೆದಿದ್ದಾನೆ. ಮೂರ್ಖನಿಗೆ ತಿಜೋರಿಯ ಬೀಗದ ಕಾಂಬಿನೇಷನ್ ಮರೆತುಹೋಯಿತು ಎನಿಸುತ್ತದೆ. ಒಳಗೆ ಸಿಕ್ಕಿ ಉಸಿರುಗಟ್ಟಿ ಸತ್ತಿದ್ದಾನೆ. ಅವನು ಸತ್ತು ನನಗೆ ನಿಮ್ಮ ಕಾಟವನ್ನು ಲಗತ್ತಿಸಿದ್ದಾನೆ ಅಷಡ್ಡಾಳ!
ನಿಜ ಮೇಡಂ. ಕೀ ಸಿಕ್ಕಿತಲ್ಲ. ಇನ್ನು ಹೆಚ್ಚಿನ ತನಿಖೆಯಿರಲಾರದು. ಒಂದೇ ಒಂದು ಸಂದೇಹ ಮೇಡಮ್ ಎನ್ನುತ್ತ ತನ್ನ ಬ್ರೀಫ್ಕೇಸಿನಿಂದ ಒಂದು ಪ್ಲಾಸ್ಟಿಕ್ ಚೀಲವನ್ನು ಹೊರತೆಗೆದ ಕೊಲಂಬೊ ಅದರಿಂದ ಹಾಳೆಯೊಂದರ ಎರಡು ಹರಿದ ಚೂರುಗಳನ್ನು ಒಂದರ ಬದಿಯಲ್ಲಿ ಒಂದನ್ನು ಇರಿಸುತ್ತ ಇವೆರಡೂ ಹೊಂದಾಣಿಕೆ ಆಗುವುದಿಲ್ಲ ಅಲ್ಲವೆ? ಎಂದ.
ಕಾಗದದ ತುಣುಕುಗಳನ್ನು ಪರೀಕ್ಷಿಸಿದ ಅಬಿಗೇಲ್ ಹೌದು. ಹೊಂದಾಣಿಕೆ ಆಗುವುದಿಲ್ಲ ಎಂದಳು.
ಕ್ಷಮಿಸಿ ಮೇಡಂ. ನಿಮ್ಮ ತಿಜೋರಿಯನ್ನು ಮತ್ತೆ ಪ್ರವೇಶಿಸಬಹುದೆ? ಜಸ್ಟ್ ಒನ್ ಫೈನಲ್ ಟೈಮ್?
ಶೂರ್! ವೈ ನಾಟ್ ಎನ್ನುತ್ತ ಮುನ್ನಡೆದಳು ಅಬಿಗೇಲ್.
ಕೊಲಂಬೊ ತಿಜೋರಿಯಲ್ಲಿದ್ದ ತಗಡಿನ ಖಾನೆಗಳನ್ನು ಒಂದೊಂದಾಗಿ ಹೊರತೆಗೆದು ಇವುಗಳ ಮೇಲೆ ಬೆಲ್ಟಿನ ಬಕಲ್ನಿಂದಾದ ಕೊರೆಗೆರೆಗಳಿವೆ (scratches) ನೋಡಿದಿರಾ? ಎಂದ.
ಅಬಿಗೇಲ್ ಗೊಂದಲಗೊಂಡಳು. ಬೆಲ್ಟಿನ ಬಕಲ್ಲೇ? ಅದರಿಂದೇಕೆ ಅವನು ಕೆರೆದ? ತಿಜೋರಿಯಲ್ಲಿ ಬಲ್ಬ್ ಇದ್ದಿತು. ಕೆಳಗಿನ ಖಾನೆಯಲ್ಲಿ ಪೆನ್, ಪೆನ್ಸಿಲ್ ಇದ್ದವು. ಬರೆಯಬೇಕೆಂದಿದ್ದರೆ ಅವುಗಳನ್ನು ಬಳಸಿ ಡಾಲರ್ ನೋಟುಗಳ ಮೇಲೆಯೇ ಬರೆಯಬಹುದಿತ್ತು ಎಂದಳು ಅಬಿಗೇಲ್.
ಆದರೆ ಬಲ್ಬ್ ಹೊತ್ತುವಂತಿರಲಿಲ್ಲ ಮೇಡಂ. ಅದು ಹೊತ್ತುವುದಿಲ್ಲವೆಂದು ಖಾತ್ರಿಪಡಿಸಿಕೊಂಡೇ ನೀವು ಅವನನ್ನು ಒಳಕ್ಕೆ ಕಳುಹಿಸಿದ್ದು ಆರೋಪವೆಸಗಿದ ಕೊಲಂಬೊ.
ಮಿಸ್ಟರ್ ಕೊಲಂಬೊ! ನಾಲಿಗೆಯ ಮೇಲೆ ಹಿಡಿತವಿರಲಿ!
ಸರಿ. ಒಂದು ಕಥೆ ಹೇಳುತ್ತೇನೆ ಕೇಳಿ. ನೀವು ಐದೂಮುಕ್ಕಾಲಿಗೆ ಹೊರಟಿರಿ ಎಂದಿರಿ. ಆದರೆ ನೀವು ಹೊರಟದ್ದು ಆರೂ ಇಪ್ಪತ್ತಕ್ಕೆ. ಅದಕ್ಕೆ ನನ್ನ ಬಳಿ ಪುರಾವೆ ಇದೆ. ನೀವು ಅವನನ್ನು ಕೊಂಚ ಸಮಯ ಬಿಟ್ಟು ಬರುವಂತೆಯೂ, ಮತ್ತಷ್ಟು ಆಸ್ತಿಗಳ ಮಾಹಿತಿಯನ್ನು ಕೊಡುವುದಾಗಿಯೂ ಹೇಳಿದ್ದಿರಿ ಎಂಬ ಸಂಶಯ ನನ್ನಲ್ಲಿ ಮನೆಮಾಡಿತು. ಅದನ್ನು ಈಗ ನೀವೇ ಬರೆಹರಿಸಬೇಕು. ರಾಬರ್ಟ್ ಆರೂಕಾಲಿಗೆ ಬಂದ. ಅದಕ್ಕೆ ಪಕ್ಕದ ರಸ್ತೆಯ ಮೂರನೆಯ ಮನೆಯ ಗೇಟಿನ ಕಾವಲುಗಾರನ ಸಾಕ್ಷಿಯಿದೆ. ರಾಬರ್ಟ್ ತಿಜೋರಿಯನ್ನು ಪ್ರವೇಶಿಸುವವರೆಗೆ ನೀವು ಸುಮ್ಮನಿದ್ದು ಅವನು ಒಳಹೋದ ಕೂಡಲೆ ತಿಜೋರಿಯ ಬಾಗಿಲನ್ನು ಮುಚ್ಚಿ, ತಕ್ಷಣ ನೀವು ಮನೆಯಿಂದ ಹೊರಟುಬಿಟ್ಟಿರಿ. ರಾಬರ್ಟ್ ಬರುವುದಕ್ಕೆ ಮುಂಚೆಯೇ ಲಾಕರಿನಲ್ಲಿನ ಉರಿಯುತ್ತಿದ್ದ ಬಲ್ಬನ್ನು ತೆಗೆದು ಬರ್ನ್ ಆಗಿದ್ದ ಬಲ್ಬನ್ನು ಸಿಕ್ಕಿಸಿದ್ದಿರಿ. ಮರುದಿನ ಅಮಂದಾ ಬರುವವೇಳೆಗೆ ತಿಜೋರಿಯಲ್ಲಿ ಆಕ್ಸಿಜನ್ ಕೊರತೆಯಿಂದ ರಾಬರ್ಟ್ ಅಸುನೀಗಿದ್ದ. ಹೇಗಿದೆ ಕಥೆ?
ಚೆನ್ನಾಗಿದೆ. ಇದಕ್ಕೆ ಪುರಾವೆ?
ಅಂದು ರಾಬರ್ಟ್ ಮರುದಿನ ಬರಬಹುದಿತ್ತಲ್ಲ, ಅಂದೇ ಏಕೆ ಬಂದ? ಎಂದಾಗ ನೀವು ಹೆದರಿದ್ದೇ ನನಗೆ ಸಿಕ್ಕ ಮೊದಲ ಕ್ಲೂ. ನೀವು ರಾಬರ್ಟನ ಹಣೆಯನ್ನು ಚುಂಬಿಸುವಾಗ ಅವನನ್ನು ಮತ್ತೆ ಬರಹೇಳಿರಬಹುದಲ್ಲ ಎಂದು ನಾನು ಕೇಳಿದಾಗ ಅಂತಹ ಕೆಲಸ ನಾನು ಮಾಡುವೆನೆ? ಅನ್ನದೆ ಅಂತಹ ತಪ್ಪು ಮಾಡುವೆನೆ? ಎಂದಿರಿ. ಪ್ರತಿ ಮಾತನ್ನೂ ತೂಕವಾಗಿ ಆಡುವ ನೀವು ಕೆಲಸ ಪದದ ಬದಲು ತಪ್ಪು ಪದ ಬಳಸಿದ್ದು ನನಗೆ ಅಚ್ಚರಿ ಮೂಡಿಸಿತು. ಅಮಂದಾಳ ಕೊರಳಲ್ಲಿನ ವಜ್ರದ ನೆಕ್ಲೆಸ್ ಅವಳ ಸಂಬಳಕ್ಕೆ ಮೀರಿದ್ದು. ಕುತೂಹಲದಿಂದ ತನಿಖೆ ನಡೆಸಿದಾಗ ರಾಬರ್ಟ್ ಸಹಿ ಮಾಡುವಾಗ ಟೇಬಲ್ಲಿನ ಮೇಲೆ ಇರಿಸಿದ್ದ ಕೀಯನ್ನು ನಿಮಗೆ ಕೊಟ್ಟಳೆಂದು ಬಾಯಿಬಿಟ್ಟಳು? ಅಲ್ಲ, ಬಿಡಿಸಿದೆವು. ನಂತರದ ಕ್ಲೂಗಳು ಖಾನೆಗಳ ಮೇಲಿನ ಕೊರೆಗೆರೆಗಳು! ಕೆಳಗಿನ ಸೆಳೆಖಾನೆಯಲ್ಲಿ ಬರೆಯುವ ಸಾಮಗ್ರಿ ಇರುವುದೆಂದು ರಾಬರ್ಟನಿಗೆ ತಿಳಿದಿರಲಿಲ್ಲ. ಸಾವಿನ ಸಮಯದಲ್ಲಿಯೂ ಕೊಲೆಗಾರನ ಸುಳಿವು ನೀಡಲೆಂದು ಅವನು ಖಾನೆಗಳ ಮೇಲೆ ತನ್ನ ಬೆಲ್ಟಿನ ಬಕಲ್ನಿಂದ ಗೆರೆಗಳನ್ನು ಕೊರೆದ. ಕೊರೆತವು ಬಾಣದಂತಿದ್ದು, ಬಾಣದ ತುದಿಯು ಮೇಲಿನ ಬಲ್ಬಿನತ್ತ ಮುಖ ಮಾಡಿತ್ತು. ನೀವಿಲ್ಲದ ಸಮಯದಲ್ಲಿ ನಾನು ನಿಮ್ಮ ಮನೆಯನ್ನು ಹೊಕ್ಕು, ತಿಜೋರಿಯನ್ನು ತೆರೆದು ಪರಿಶೀಲಿಸಿದುದರ ಪರಿಣಾಮವಿದು. ಮೃತನ ಬೆಲ್ಟಿನ ಬಕಲ್ನ ತುದಿಯಲ್ಲಿದ್ದ ಕಪ್ಪನೆಯ ಪುಡಿ ಖಾನೆಗಳ ಬಣ್ಣದ ಪುಡಿಯನ್ನು ಹೋಲುತ್ತದೆ.
ಗುಡ್ ಅಬ್ಸರ್ವೇಶನ್ ಕೊಲಂಬೊ. ಆದರೆ ಬಲ್ಬ್ ಕಡೆಗೆ ಮುಖ ಮಾಡಿದ ಬಾಣ ಸೂಚಿಸಿದ್ದಾದರೂ ಏನನ್ನು?
ಆ ವಿಷಯಕ್ಕೆ ಮತ್ತೆ ಬರುತ್ತೇನೆ. ಪೊಲೀಸರು ತನಿಖೆಗೆ ಬಂದಾಗ ಮನೆಯ ಸುತ್ತಮುತ್ತಲ ಪ್ರದೇಶದ ಫೋಟೋವನ್ನು ಇಂಚೂ ಬಿಡದೆ ತೆಗೆದಿರುತ್ತಾರೆ. ನೀವು ಹೇಳಿದ ಸ್ಪ್ರಿಂಕ್ಲರ್ ಬಳಿ ಕೀ ಬಿದ್ದಿರಲಿಲ್ಲ ಎನ್ನುವುದಕ್ಕೆ ಇದೋ ಈ ಫೋಟೋವನ್ನು ನೋಡಿರಿ ಎನ್ನುತ್ತ ಛಾಯಾಚಿತ್ರವೊಂದನ್ನು ಮುಂದಿರಿಸಿದ ಕೊಲಂಬೊ.
ನಾನು ಮುದುಕಿ. ಮರೆವು ಸಹಜ. ಎಲ್ಲೋ ಬಿದ್ದಿದ್ದನ್ನು ಇನ್ನೆಲ್ಲೋ ಬಿದ್ದಿತ್ತೆಂದು ಹೇಳಿರಬಹುದು ಅಲ್ಲವೆ? ಕೊಲಂಬಿವಿನತ್ತ ನನ್ನನ್ನು ಉಳಿಸಲಾರೆಯಾ? ಎಂಬ ನೋಟ ಬೀರುತ್ತಾ ಕೇಳಿದಳು ಅಬಿಗೇಲ್.
ಕೀ ಬಗ್ಗೆ ಮರೆವು ಸರಿ. ಆದರೆ ನಿಮ್ಮಿಂದ ಇನ್ನೊಂದು ತಪ್ಪಾಯಿತಲ್ಲ! ಎಂದ ಕೊಲಂಬೊ.
ಏನದು?
ರಾಬರ್ಟ್ ಸಿಗರೇಟ್ ಸೇದುತ್ತಾನೆಂದು ತಿಳಿಯದಿದ್ದದ್ದು.
ಅದರಿಂದೇನಾಯಿತು?
ಛಕ್ಕನೆ ಹೊತ್ತದ ಲೈಟರ್ಗಿಂತ ಗೀರಿದರೆ ಹೊತ್ತಿಕೊಳ್ಳುವ ಕಡ್ಡಿಪೆಟ್ಟಿಗೆಯನ್ನು ರಾಬರ್ಟ್ ತನ್ನ ಜೇಬಿನಲ್ಲಿರಿಸಿಕೊಂಡಿದ್ದ.
ಸರಿ. ಅದೇನೂ ಪ್ರಮಾದವಲ್ಲವಲ್ಲ!
ನಿಮ್ಮ ಪತ್ತೇದಾರಿ ಬುದ್ಧಿ ಎಲ್ಲಿ ಹೋಯಿತು ಮಿಸ್ ಅಬಿಗೇಲ್? ರಾಬರ್ಟ್ ಪ್ರತಿ ಕಡ್ಡಿಯನ್ನು ಗೀರಿದಾಗಲೂ ತಿಜೋರಿಯಲ್ಲಿನ ಆಕ್ಸಿಜನ್ ಕಡಮೆಯಾಯಿತು. ಸಾವಿನ ದವಡೆಯಿಂದ ಹೊರಬರಲಾರೆನೆಂದು ತಿಳಿದ ರಾಬರ್ಟ್ ತಾನು ಹೊತ್ತಿಸಿ ಆರಿಸಿದ ಕಡ್ಡಿಯಲ್ಲಿನ ಕಪ್ಪನೆಯ ಮಸಿಯನ್ನು ಬಳಸಿದ.
ಯಾವುದರ ಮೇಲೆ? ಅದೇ ಏನು ಅವನ ಬಟ್ಟೆಗಳ ಮೇಲೆ ಕಂಡ ಮಸಿ?
ಅಲ್ಲ. ಅದು ಖಾನೆಗಳನ್ನು ಬಕಲ್ನಿಂದ ಕೊರೆದಾಗ ಉದುರಿದ ಪುಡಿ. ರಾಬರ್ಟ್ ಕಡ್ಡಿ ಗೀರಿದ ಬೆಳಕಿನಲ್ಲಿ ನೀವು ಹರಳುಗಳನ್ನು ಇರಿಸಿದ್ದ ಕಾಗದದ ಮೇಲೆ ಇದ್ದ ಒಂದು ಪದಕ್ಕೆ ಆರಿಸಿದ್ದ ಕಡ್ಡಿಯಲ್ಲಿದ್ದ ಮಸಿಯಿಂದ ಉಜ್ಜಿದ.
ಯಾವ ಕಾಗದವಿತ್ತು ಅಲ್ಲಿ?
ನಿಮ್ಮ ನೂತನ ಕಾದಂಬರಿಯ ಮೊದಲ ಪುಟ – ಹೌ ಐ ವಾಸ್ ಮರ್ಡರ್ಡ್ ಬೈ ಅಬಿಗೇಲ್! ರಾಬರ್ಟ್ ಹೌ ಎಂಬ ಪದದ ಮೇಲೆ ಮಸಿ ಬಳೆದು ತಾನು ನಿಮ್ಮಿಂದ ಕೊಲೆಯಾದನೆಂದು ಸೂಚಿಸಿದ. ಮಸಿ ಬಳಿದ ಕಾಗದವು ನಿಮ್ಮ ಕೈಗೋ, ಅಮಂದಾಳ ಕೈಗೋ ಸಿಕ್ಕರೆ ಅದನ್ನು ನಾಶಪಡಿಸುವಿರೆಂದು ಅದನ್ನು ಬಲ್ಬಿಗೂ, ಹೋಲ್ಡರಿಗೂ ಮಧ್ಯೆ ಸಿಕ್ಕಿಸಿದ. ತನಿಖೆದಾರರ ಗಮನವನ್ನು ಸೆಳೆಯಲು ಬಾಣದ ಗುರುತನ್ನು ಬಲ್ಬಿನ ದಿಕ್ಕಿನತ್ತ ಇರುವಂತೆ ಕೊರೆದ. ಇದೋ ಅಲ್ಲಿ ಸಿಕ್ಕಿಸಿದ್ದ ಆ ಕಾಗದದ ತುಣುಕು, ಇದನ್ನು ಈ ತುಣುಕುಗಳ ಮಧ್ಯೆ ಸೇರಿಸಿದರೆ ನಿಮ್ಮ ಕಾದಂಬರಿಯ ಮೊದಲ ಪುಟವಾಗುತ್ತದೆ ಎನ್ನುತ್ತಾ ಮೂರೂ ತುಣುಕುಗಳನ್ನು ಜೋಡಿಸಿದ ಕೊಲಂಬೊ. ಹೌ ಎಂಬ ಪದಕ್ಕೆ ಮಸಿ ಬಳೆದುಕೊಂಡ ಐ ವಾಸ್ ಮರ್ಡರ್ಡ್ ಎಂಬ ಸಾಲು, ಅದರ ಕೆಳಗೆ ಬೈ, ಅದರ ಕೆಳಗೆ ಅಬಿಗೇಲ್ ಎಂಬುದು ಸ್ಪಷ್ಟವಾಗಿ ಗೋಚರಿಸಿತು.
ಕಾದಂಬರಿಯ ಮೊದಲ ಪುಟವೇ ನನ್ನ ಬದುಕಿನ ಕೊನೆಯ ಪುಟವಾಯಿತಲ್ಲ! ಕೊಲಂಬೊ, ನನ್ನ ಪ್ರೀತಿಯ ಎಲಿಸಾಳ ಕೊಲೆಯನ್ನು ಮಾಡಿದ ರಾಬರ್ಟ್ನ ಮೇಲೆ ಸೇಡು ತೀರಿಸಿಕೊಳ್ಳಲು ಇಷ್ಟೆಲ್ಲ ಮಾಡಿದೆ. ಕುಡಿದ ಮತ್ತಿನಲ್ಲಿ ರಾಬರ್ಟನೇ ಎಲಿಸಾಳನ್ನು ನೀರಿನಲ್ಲಿ ಮುಳುಗಿಸಿದ್ದೆಂದು ಒಮ್ಮೆ ಒದರಿದ್ದ. ಅಂದಿನಿಂದ ಅವನ ಮೇಲೆ ಇನ್ನಿಲ್ಲದ ಪ್ರೀತಿಯನ್ನು ತೋರ್ಪಡಿಸುತ್ತ ಸಂಚು ಹೂಡುತ್ತಿದ್ದೆ. ಛೆ! ಎಲಿಸಾಳ ಕೊಲೆಯಾದಾಗ ನಿಮ್ಮಂತಹ ಪತ್ತೇದಾರರು ಸಿಕ್ಕಿದ್ದಿದ್ದರೆ ಇವೆಲ್ಲವೂ ನಡೆಯುವ ಅಗತ್ಯವೇ ಇರಲಿಲ್ಲ ಎನ್ನುತ್ತ ತಲೆತಗ್ಗಿಸಿದಳು ಅಬಿಗೇಲ್.
ಮೊದಲ ಪುಟದ ಮೂರು ತುಣುಕುಗಳನ್ನು ಬ್ರೀಫ್ಕೇಸಿಗೇರಿಸಿಕೊಂಡ ಪತ್ತೇದಾರ ಬೆಸ್ಟ್ ವಿಷಸ್ ಫಾರ್ ಯುವರ್ ಫ್ಯೂಚರ್ ಎನ್ನುತ್ತ ಅಬಿಗೇಲಳ ಕೈ ಕುಲುಕಿ ಹೊರನಡೆದ.