“ಅನಂತ್, ನಿನ್ನನ್ನು ಒಂದು ಪ್ರಯೋಗಕ್ಕೆ ಒಳಪಡಿಸುತ್ತಿದ್ದೇವೆ. ಇದರಲ್ಲಿ ನಿನ್ನ ಮೊದಲ ಜೀವನದ ಮಾಸಿಹೋದ ನೆನಪಿನ ಬದಲಿಗೆ ಮೃತ ವ್ಯಕ್ತಿಯೊಬ್ಬನ ನೆನಪುಗಳನ್ನು ಪೂರ್ತಿಯಾಗಿ ವರ್ಗಾಯಿಸಿ ನಿನ್ನಲ್ಲಿ ಆ ಸ್ಮöÈತಿ ಗೋಚರವಾಗುವಂತೆ ಮಾಡಲಿದ್ದೇವೆ. ಅದು ಯಶಸ್ವಿಯಾದರೆ, ನೀನು ರಾ ಏಜೆಂಟ್ ಅಮರ್ ಆಗಿ ಬದಲಾಗುತ್ತೀಯೆ – ಬುದ್ಧಿಯಲ್ಲಿ, ವರ್ತನೆಯಲ್ಲಿ. ಆತ ಈಗ ಜೀವಶ್ಚವವಾಗಿದ್ದಾನೆ. ಅವನ ಮೆಮೊರೀಸ್ ನಿನಗೆ ಕೊಟ್ಟಾಗ ಅವನು ತನ್ನ ರಹಸ್ಯ ಮಿಷನ್ ಒಂದರಲ್ಲಿ ಮಾಡಿದ ಕೆಲಸಗಳ ನೆನಪು ಬಂದು ನೀನು ಅದರಂತೆ ಮಾಡಿದರೆ ನಮ್ಮ ದೇಶದ ಸುರಕ್ಷತೆ ಮತ್ತು ಭದ್ರತೆಗೆ ದೊಡ್ದ ಸಹಾಯವಾಗುವುದು, ಅದರ ನಂತರ ನೀನು ಸ್ವತಂತ್ರ. ಇದು ನಿನಗೊಪ್ಪಿಗೆಯೆ?”
೧
ಬೆಂಗಳೂರು ಹೊರವಲಯ,
೨೦೫೦ ಇಸವಿ ಮಾರ್ಚ್ ೧
ಅಮರ್ ದೇಸಾಯಿ ಒಮ್ಮೆ ನಿಟ್ಟುಸಿರಿಟ್ಟು ತನ್ನ ಖಾಲಿಯಾಗಿದ್ದ ರಿವಾಲ್ವರನ್ನು ಹತಾಶನಾಗಿ ನೆಲಕ್ಕೆಸೆದ. ಒಂದು ಬುಲೆಟ್ಟೂ ಮಿಕ್ಕಿಲ್ಲವೆಂದು ಎಲ್ಲ ಜೇಬುಗಳನ್ನು ಮತ್ತೆಮತ್ತೆ ಮುಟ್ಟಿ ಖಚಿತಪಡಿಸಿಕೊಂಡ. ಕನಿಷ್ಠ ಪಕ್ಷ ಆತ್ಮಹತ್ಯೆ ಮಾಡಿಕೊಳ್ಳಲೂ ಸಹ ಮಿಗಿಸಿಕೊಳ್ಳಲಿಲ್ಲ, ಈ ರಭಸದ ಹೋರಾಟದಲ್ಲಿ ಛೇ! ಅರ್ಧಗಂಟೆಗೂ ಹೆಚ್ಚು ಸಮಯ ಹೀಗೆ ಸತತವಾಗಿ ಶೂಟ್-ಔಟ್ ಮಾಡಿದರೆ ಗುಂಡುಗಳು ಮಿಕ್ಕಿರಲು ಸಾಧ್ಯವಾದರೂ ಹೇಗೆ?
ಶತ್ರುಗಳಿಗೆ ಶರಣಾಗತನಾಗುವ ತನ್ನ ತೀರ್ಮಾನ ಸರಿಯಾಗಿಯೇ ಇದೆ ಎಂದುಕೊಂಡ. ಹ್ಮ್! ಈಗೀಗ ಸನಿಹದಲ್ಲೇ ಕೇಳಿಬರುತ್ತಿರುವ ಉರ್ದು ಮಿಶ್ರಿತ ಭಾಷೆಯ ಧೂರ್ತರ ಉದ್ವೇಗದ “ಪಕಡೋ, ಚೋಡನಾ ನಹೀ, ಮಾರನಾ ನಹೀ” – ಉದ್ಗಾರಗಳನ್ನು ಕೇಳಿ ಒಮ್ಮೆ ಕಂಬದ ಮರೆಯಿಂದ ಇಣುಕಿ ವರ್ತಮಾನ ಸ್ಥಿತಿ ಅವಲೋಕಿಸಲು ಅತ್ತ ಕಣ್ಣು ಹಾಯಿಸಿದ. ಸುಮಾರು ಮೂವತ್ತು ಜನರಾದರೂ ತಮ್ಮ ಹತ್ತು ಎಸ್.ಯು.ವಿ. ವ್ಯಾನುಗಳಿಂದ ಇಳಿದು ಬಂದವರು ಎಚ್ಚರಿಕೆಯಿಂದ ಕಟ್ಟಡವನ್ನು ಸುತ್ತುವರಿದು ಇವನ ಎಲ್ಲ ಪರಾರಿಯಾಗುವ ಹಾದಿಗಳನ್ನು ಬಂದ್ ಮಾಡಿಯೇ ಮುನ್ನುಗ್ಗಿ ಬರುತ್ತಿದ್ದರು, ತಾನು ಹೊಡೆದು ಬೀಳಿಸಿದ ಅವರ ಸಂಗಾತಿಗಳ ಹೆಣಗಳನ್ನು ದಾಟಿಕೊಂಡು. ಅವರ ಕೈಗಳಲ್ಲಿ ಇದ್ದವು ಸಾಮಾನ್ಯ ರಿವಾಲ್ವರುಗಳಲ್ಲ, ಕಪ್ಪು ಸಬ್-ಮೆಶಿನ್ ಆಟೋಮ್ಯಾಟಿಕ್ ಗನ್ನುಗಳು. ಆ ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಮಿಂಚಿ ತನ್ನ ಸನ್ನಿಹಿತವಾದ ಮೃತ್ಯುವನ್ನು ಸಂಶಯವಿಲ್ಲದಂತೆ ಅವನಿಗೆ ಚುಚ್ಚಿ ತೋರಿದವು.
ಭಾರತ ಸರಕಾರದ ಗೂಡಚರ್ಯೆ ಸಂಸ್ಥೆ “ರಾ” ಸೇರಿ ಹಲವು ಮಿಷನ್ನುಗಳನ್ನು ಹತ್ತು ವರ್ಷದಿಂದ ಯಶಸ್ವಿಯಾಗಿ ಮಾಡಿದ ೩೫ ವರ್ಷದ ಆಜಾನುಬಾಹು ಅಮರನಿಗೆ ಜೀವಾಪಾಯ ಮತ್ತು ಸಾವಿನ ಜೊತೆ ಹೋರಾಟ ಎಂಬುದು ದೈನಂದಿನ ಕರ್ತವ್ಯವೇ ಆಗಿಹೋಗಿತ್ತು. ಆದರೆ ಈ ರೀತಿಯ ಖಚಿತ ಸೋಲು ಮತ್ತು ನಿರೀಕ್ಷಿತ ಚಿತ್ರಹಿಂಸೆಯ ಅಂತ್ಯ ಎದುರಾಗಿದ್ದು ಇಂದೇ.
ಕೊನೆಯ ಬಾರಿಗೆ ತನ್ನ ದುರ್ಬಲವಾಗುತ್ತಿದ್ದ ೧% ಚಾರ್ಜು ಮಿನುಗಿಸುತ್ತಿದ್ದ ಮೊಬೈಲನ್ನು ಕೈಗೆತ್ತಿಕೊಂಡನು, ಅಂತರ್ಜಾಲ ನೆಟ್ವರ್ಕ್ ಸಹ ಕಂಡೂ ಕಾಣದಂತಿದೆ. ಏನಾದರೂ ಆಗಲಿ ತನಗಿನ್ನು ಸಮಯ ಮಿಕ್ಕಿಲ್ಲ ಎಂದೆನಿಸಿ ವಿಡಿಯೋ ರೆಕಾರ್ಡ್ ಮಾಡಿ ಕೊನೆಯ ಸಂದೇಶ ಕೊಟ್ಟನು,
“ರೇವತಿ, ಪ್ರಜ್ಞಾ! ನಾನಿನ್ನು ಮನೆಗೆ ಬರಲಾರೆ, ಕ್ಷಮಿಸಿ ಬಿಡಿ, ಐ ಲವ್ ಯು ಬೋತ್… ಇಲ್ಲಿ ನೋಡು” ಎಂದು ಎಡಗೈ ಹೆಬ್ಬೆಟ್ಟಿನಿಂದ ತನ್ನ ಹೃದಯಭಾಗದ ಎದೆಯನ್ನು ಎರಡು ಸಲ ಚುಚ್ಚಿ ತೋರಿಸಿದನು. ಅದು ಅವನ ಮತ್ತು ಕುಟುಂಬದ ಖಾಸಗಿ ಚಿಹ್ನೆ. ಎರಡು ಸಲ ಹೃದಯ ಚುಚ್ಚಿ ‘ನೀವಿಬ್ಬರೂ ನನ್ನ ಹೃದಯದಲ್ಲೇ ಇದ್ದೀರಿ’ ಎನ್ನುವ ಪರಸ್ಪರ ಆಶ್ವಾಸನೆಯದು.
“ನನ್ನ ಆಫೀಸಿಗೆ ಹೇಳಿಬಿಡು… ನಾನು ಬಿಡದಿ ಆಚೆಯ ಕರೀಹಳ್ಳಿ ಓಲ್ಡ್ ಫಾರಂ ಕಟ್ಟಡದಲ್ಲಿ ಸಿಕ್ಕಿ ಬಿದ್ದಿದ್ದೇನೆ. ಅವರಿಗೆ ಸರೆಂಡರ್ ಆದರೂ ಆ ರಹಸ್ಯ ಮಾತ್ರ ಹೇಳುವುದಿಲ್ಲ, ಪ್ರಾಮಿಸ್!… ಮುಂದಿನ ಜನ್ಮದಲ್ಲಿ ಭೇಟಿಯಾಗುವೆ…” ಎಂದವನೇ ಅದನ್ನು ಕಳಿಸಿದ.
ಅದು ಸೇರಿತೋ ಇಲ್ಲವೋ ಎಂದು ಸಹ ಗೊತ್ತಾಗದಂತೆ ಮೊಬೈಲ್ ಪರದೆ ತಟ್ಟನೆ ಕತ್ತಲಾಯಿತು. ಇನ್ನು ತನ್ನ ಜೀವನವೂ ಕತ್ತಲೇ ಎಂದು ನಿರ್ಧರಿಸಿದವನೇ ಮೊಬೈಲನ್ನು ನೆಲಕ್ಕೆಸೆದು ಬೂಟುಕಾಲಿನಿಂದ ಹೊಸಕಿ ಒಡೆದುಹಾಕಿದನು.
ಮತ್ತೆ ಎರಡೂ ಕೈಯೆತ್ತಿ ಕಂಬದ ಮರೆಯಿಂದ ಕಾಣಿಸಿಕೊಂಡು ಭಾವರಹಿತನಾಗಿ ಶರಣಾಗತಿ ಭಂಗಿಯಲ್ಲಿ ತನ್ನ ಹಂತಕರತ್ತ ಮತ್ತು ಖಚಿತ ಕ್ರೂರ ಸಾವಿನತ್ತ ಒಂದೊಂದೇ ಹೆಜ್ಜೆಯಿಟ್ಟು ನಡೆದನು.
೨
ಬೆಂಗಳೂರು ಹೊರವಲಯ,
೨೦೫೦ ಮಾರ್ಚ್ ೨
ಬೆಂಗಳೂರಿನ ಹೊರವಲಯದಲ್ಲಿ ಕೇಂದ್ರಸರ್ಕಾರದ ವ್ಯಾಪ್ತಿಗೆ ಸೇರಿದ ಒಂದು ಅನಾಮಧೇಯ ಕಟ್ಟಡವಿದೆ. ಮೇಲ್ನೋಟಕ್ಕೆ ಅದರಲ್ಲಿ ಸಾಮಾನ್ಯ ಕಚೇರಿಯಂತೆ ಫೈಲುಗಳ ರಾಶಿ ಹಾಕಿಕೊಂಡು ಕೆಲವು ಕಾರಖೂನ ಸಿಬ್ಬಂದಿ ಅತ್ತಿಂದಿತ್ತ ಬೇಜವಾಬ್ದಾರಿಯಿಂದ ನಡೆದಾಡುವಂತೆ ಕಾಣುತ್ತದೆ, ಆದರೆ ಅದು ನೋಡಿದವರಿಗೆ ತಪ್ಪುಗ್ರಹಿಕೆ ಬರಲು ಮಾಡಿದ ತಂತ್ರ ಮಾತ್ರವೇ ಆಗಿತ್ತು. ಅದರ ನೆಲಮಾಳಿಗೆಗೆ ಮಾತ್ರ ನಿರ್ಬಂಧಿತ ಪ್ರವೇಶವಿತ್ತು ಮತ್ತು ಕೆಲವರಿಗೆ ಮಾತ್ರವೇ ತಮ್ಮ ರೆಟಿನಾ ಸ್ಕ್ಯಾನ್ ಪ್ರವೇಶ ಉಪಯೋಗಿಸಿದರೆ ಅಲ್ಲಿಂದ ಮುಂದೆ ಒಂದು ಸುವ್ಯವಸ್ಥಿತ ಹವಾನಿಯಂತ್ರಿತ ಮತ್ತು ಕ್ಲೀನ್-ರೂಂ ದರ್ಜೆಯ ಐಎಸ್ಓ-೨ ಮಟ್ಟದ ಪ್ರಯೋಗಶಾಲೆಯೊಂದಿದೆಯೆಂದು ತಿಳಿದಿತ್ತು. ಅವರು ಮಾತ್ರವೇ ಅಲ್ಲಿ ನಡೆಯುವ ಟಾಪ್ ಸೀಕ್ರೆಟ್ ದರ್ಜೆಯ ಜೈವಿಕ ಸಂಶೋಧನೆ ಮತ್ತು ಪ್ರಯೋಗಗಳಲ್ಲಿ ಭಾಗವಹಿಸುವರು. ಅವರೆಲ್ಲರೂ ಆ ಬಗ್ಗೆ ಒಂದು ಗೌಪ್ಯತಾ ಒಪ್ಪಂದಕ್ಕೆ ಬದ್ಧರು ಮತ್ತು ವಿಶ್ವಾಸಾರ್ಹರು ಆಗಿದ್ದುದೂ ರಾಷ್ಟ್ರೀಯ ಸುರಕ್ಷತೆಯಿಂದ ಅನಿವಾರ್ಯವೇ ಆಗಿತ್ತು.
ಅಂದು ಬೆಳಗ್ಗೆ ೧೧ಕ್ಕೆ ಅದರ ಮುಖ್ಯಸ್ಥರ ಕಚೇರಿಗೆ ಬಂದ ರಾ ಸಂಸ್ಥೆಯ ದಕ್ಷಿಣ ಪ್ರಾಂತದ ನಿರ್ದೇಶಕ ಮೋಹನ್ ಭಾಮ್ರ ಗಾಜಿನ ಬಾಗಿಲು ಸರಿಸಿ ತಮಗಾಗಿ ಕಾಯುತ್ತಿದ್ದ ಪ್ರಯೋಗಾಲಯದ ನಿರ್ದೇಶಕ ಡಾ. ಕೇಶವ ಆಚಾರ್ಯರನ್ನು ಕಂಡು ತಮ್ಮ ಬಿಗಿಯಾದ ಮುಖದಲ್ಲಿ ಮಂದಹಾಸ ತಂದುಕೊಂಡು, “ಗುಡ್ ಮಾರ್ನಿಂಗ್ ಡಾಕ್ಟರ್” ಎನ್ನುತ್ತ ಸೀದಾ ಬಂದು ಎದುರಿನ ಕುರ್ಚಿಯಲ್ಲಿ ಆಸೀನರಾದರು.
೫೩ ವರ್ಷ ವಯಸ್ಸಿನ ಡಾ. ಕೇಶವ ಆಚಾರ್ಯ ಇತ್ತೀಚೆಗೆ ಜನಪ್ರಿಯವಾಗುತ್ತಿದ್ದ ಬ್ರೈನ್ ಮತ್ತು ನ್ಯೂರೋಲಜಿ ವಿದ್ಯೆಯ ಆ ವಿಭಾಗದ ಮುಖ್ಯಸ್ಥರು ಮತ್ತು ದೇಶದ ಸಂಶೋಧಕ ವಿಜ್ಞಾನಿಗಳಿಗೆ ಮೀಸಲಿದ್ದ ಚಿನ್ನದ ಪದಕವನ್ನು ಗೆದ್ದು ಆ ವರ್ಷದ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಪಡೆದ ‘ಮ್ಯಾಜಿಕ್ ಮ್ಯಾನ್’ ಎಂಬ ಖ್ಯಾತಿಯುಳ್ಳ ವಿಜ್ಞಾನಿ.
ಅವರಿಗೂ ಮೋಹನ್ ಭಾಮ್ರರಿಗೂ ಸ್ನೇಹವಿದ್ದರೂ ತಂತಮ್ಮ ಕಾರ್ಯಕ್ಷೇತ್ರದ ಮಿತಿಗಳಲ್ಲಿ ಭಿನ್ನಾಭಿಪ್ರಾಯ ಬಂದು ಆಗುವ ಬಿಸಿಬಿಸಿ ವಾಗ್ವಾದಗಳೇ ಹೆಚ್ಚು. ಆದರೂ ಪರಸ್ಪರ ಗೌರವಕ್ಕೆ ಭಂಗತಾರದಂತೆ ದೇಶಸೇವೆಯಲ್ಲಿ ತೊಡಗಿದ್ದರು.
ಇಂದು ಭಾಮ್ರರಂತೂ ಅಂತಹ ವಾದಕ್ಕೆ ಸಿದ್ದರಾಗಿಯೇ ಬಂದಿದ್ದರು, ಯಾಕೆಂದರೆ ಅವರು ಪ್ರಸ್ತಾಪಿಸಬೇಕಾದ ವಿಷಯವೇ ಅಷ್ಟು ವಿವಾದಸ್ಪದವಾದದ್ದು. “ಹಲೋ ಡಾಕ್ಟರ್, ಹೇಗಿದ್ದೀರಿ?” ಎಂದರು ಪೀಠಿಕೆಯಂತೆ.
“ಫೈನ್! ಹಾ, ಗೊತ್ತಾಯಿತು ನೀವು ಒಳಗೆ ಬಂದ ವಿಷಯ. ನಿಮ್ಮ ಪೇಷೇಂಟ್ ಮಿದುಳು ಇನ್ನೂ ಜೀವಂತವಾಗಿದೆ… ಅದೇ ತಾನೆ ನಿಮಗೆ ಬೇಕಾದ್ದು?”
“ಅದು ಕೇವಲ ಆರಂಭ, ಡಾಕ್ಟರ್. ಅವನ ಬ್ರೈನನ್ನು ಇನ್ನೂ ಜೀವಂತವಾಗಿಟ್ಟಿದ್ದೀರಿ ಎಂಬುದರಲ್ಲಿ ನನಗೆಂತಾ ಸಂಶಯ? ಆದರೆ ಮುಖ್ಯ ವಿಷಯ ಬೇರೆಯೇ ಇದೆ. ವೆರಿ ಇಂಟರೆಸ್ಟಿಂಗ್!” ಎನ್ನುತ್ತ ಪ್ರಶ್ನಾರ್ಥಕ ನೋಟ ಬೀರಿ ಕಿರುನಗೆ ಸೂಸಿದರು ಮೋಹನ್ ಭಾಮ್ರ.
ಸಹಜವಾಗಿಯೆ ಹುಬ್ಬುಗಂಟಿಕ್ಕೆ, “ಏನದು ಸರ್?” ಎಂದರು ಡಾ. ಆಚಾರ್ಯ.
ಭಾಮ್ರಗೆ ಹಿಂದಿನ ದಿನ ನಡೆದ ಅಪೂರ್ವ ಸಾಹಸ ಚೆನ್ನಾಗಿ ನೆನೆಪಿದೆ. ಏಕೆಂದರೆ ಅವರೇ ಅದರ ಆಯೋಜಕರು ಸಹ.
ಅಮರ್ ದೇಸಾಯಿ ಕೊಟ್ಟಿದ್ದ ಕೊನೆಯ ಅಪಾಯಸೂಚಕ ವಿದಾಯ ಸಂದೇಶ ತಮ್ಮ ಮೊಬೈಲಿಗೆ ತಲಪಿದ ಕೂಡಲೇ ಅವನ ನ್ಯೂರೋ ವಿಜ್ಞಾನಿ ಪತ್ನಿ ರೇವತಿ ಸಹ ತನ್ನ ಬಾಸ್ ಡಾ. ದೇಸಾಯಿ ಮತ್ತು ಅಮರನ ಅಧಿಕಾರಿ ಭಾಮ್ರರಿಗೆ ತುರ್ತು ಸಂದೇಶ ಕಳಿಸಿದ್ದರಿಂದ ದಿಢೀರನೆ ಜಾಗೃತವಾದ ರಾ ಸಂಸ್ಥೆಯ ರ್ಯಾಪಿಡ್ ರೆಸ್ಕ್ಯೂಟೀಮು, ಅವನು ಕಳುಹಿಸಿದ್ದ ಸ್ಥಳೀಯ ಕೋ-ಆರ್ಡಿನೇಟ್ಸ್ ಹಿಡಿದು ಆ ನಿಗೂಢ ಉಗ್ರವಾದಿಗಳ ಅಡಗುತಾಣಕ್ಕೆ ಏಕಾಏಕಿ ದಾಳಿ ಮಾಡಿತ್ತು. ಒಬ್ಬರಿಗೆ ನಾಲ್ವರ ಲೆಕ್ಕದಲ್ಲಿ ಬೆಂಕಿಯುಗುಳುತ್ತಿದ್ದ ಆಟೋಮ್ಯಾಟಿಕ್ ಎಕೆ-೪೭ ಗನ್ಗಳನ್ನು ಹಿಡಿದು ನುಗ್ಗಿದ್ದ ಅವರ ಕಮಾಂಡೋಗಳ ದಾಳಿಗೆ ಉಗ್ರರ ಗುಂಪು ಹೈರಾಣರಾಗಿ ಪ್ರತಿದಾಳಿ ಮಾಡಿದರೂ ನಿಮಿಷಗಳಲ್ಲಿ ಅವರ ಪ್ರತಿರೋಧ ಉಸಿರೆಳೆದಿತ್ತು, ಹತರಾಗಿ ಬಿದ್ದಿದ್ದ. ಆ ಉಗ್ರರ ನಡುವೆ ಅವರ ಮುಖ್ಯಸ್ಥ ಎಂದು ರಾ ಗೆ ಚೆನ್ನಾಗಿ ಅರಿವಿದ್ದ ಶಮೀಮ್ ರಾಜಾ ಎಂಬ ಅವರ ಕುಖ್ಯಾತ ನಾಯಕ ಮಾತ್ರ ಹಿಂದಿನ ಬಾಗಿಲಿನಿಂದ ತನ್ನ ಹೆಲಿಕಾಪ್ಟರ್ ಏರಿ ಪರಾರಿಯಾಗಿದ್ದ. ಆದರೆ ಕಮಾಂಡೋಗಳ ಆದ್ಯತೆ ಮಾತ್ರ – ತೀವ್ರ ಗಾಯಗಳಿಂದ ಮಾರಣಾತ್ಮಕ ಚಿತ್ರಹಿಂಸೆ ಅನುಭವಿಸಿದ್ದ ತಮ್ಮ ಆಫೀಸರ್ ಅಮರ್ ದೇಸಾಯಿ. ಅವನಿಗೆ ಕುಟುಕು ಜೀವ ಇರುವಾಗ ರಕ್ಷಿಸಿದ್ದೇ ರಕ್ಷಾದಳದ ದೊಡ್ಡ ಯಶಸ್ಸಾಗಿತ್ತು.
ಅವರೂ ಸಹ ತಮ್ಮ ಏಕೈಕ ಹೆಲಿಕಾಪ್ಟರಿನಲ್ಲಿ ಅವನನ್ನು ಎತ್ತಿಕೊಂಡು ಸೀದಾ ಈ ಭವಿಷ್ಯ ತಂತ್ರಜ್ಞಾನ ಸಂಶೋಧನ ಪ್ರಯೋಗಶಾಲೆ ಎಫ್.ಟಿ.ಆರ್. ಲ್ಯಾಬ್ ಆವರಣಕ್ಕೆ ತಂದು ಇಳಿಸಿ ಇಲ್ಲಿನ ವಿಜ್ಞಾನಿಗಳು ಸುಪರ್ದಿಗೆ ಅವನನ್ನು ಒಪ್ಪಿಸಿದ್ದರು.
ಮಧ್ಯರಾತ್ರಿಯವರೆಗೆ ಇದೇ ಡಾ. ಕೇಶವ ಆಚಾರ್ಯ ತಂಡದ ವಿಜ್ಞಾನಿಗಳು ಸತತ ಪ್ರಯತ್ನ ಮಾಡಿ ಕೃತಕ ಬ್ರೈನ್ ರಿಕವರಿ ತಂತ್ರಜ್ಞಾನ ಉಪಯೋಗಿಸಿ ಅವನ ಆರ್.ಎನ್.ಎ. ಕಸಿ ಮಾಡುವ ವಿಧಾನದ ಯಂತ್ರದಿಂದ ಅವನ ಬ್ರೈನನ್ನು ಸಾಯುವ ಮೊದಲೇ ಕೃತಕ ಜೀವದಾನ ಮಾಡಿ ಇನ್ನೂ ವೈದ್ಯಕೀಯವಾಗಿ ಕಾಪಾಡಿದ್ದರು. ಅದೂ ಕೆಲವು ಘಂಟೆಗಳ ಅವಧಿ ಮಾತ್ರ. ಕೇವಲ ಪ್ರಾಯೋಗಿಕವಾಗಿ! ಅದರ ನಂತರ ಏನೇ ಆಗಲಿ, ಅಮರನ ಸಾವು ನಿಶ್ಚಿತ. ಇನ್ನು ಇಂತಹ ಸ್ಥಿತಿಯಲ್ಲಿ ಭಾಮ್ರ ಸಾಹೇಬರು ಹೇಳುವ ಆ ‘ಇಂಟರೆಸ್ಟಿಂಗ್ ಕೆಲಸ’ ಏನೆಂದು ಚಿಂತೆಯಾಗಿದ್ದು ಡಾ. ಆಚಾರ್ಯರಿಗೆ ಸಹಜವೆ.
ಭಾಮ್ರ ಉತ್ಸಾಹದಿಂದ ಸೀಟಿನಲ್ಲಿ ಮುಂದೆ ಜರುಗಿ ಕೇಳಿದರು, “ಇವನ ಬ್ರೈನನ್ನು ನಿಮ್ಮ ರಹಸ್ಯ ಪ್ರಾಜೆಕ್ಟ್ ಪ್ರತಿಸ್ಮೃತಿಯಲ್ಲಿ ಬಳಸಬಲ್ಲಿರಾ, ಡಾಕ್ಟರ್?”
ಡಾ. ಕೇಶವ ಆಚಾರ್ಯ ಇದನ್ನು ಅರ್ಧ ನಿರೀಕ್ಷಿಸಿದ್ದವರಂತೆ ಮುಖದಲ್ಲಿ ಸಪ್ಪೆ ನಗೆ ತಂದುಕೊಂಡಿದ್ದರು, “ನೋ, ಅದಿನ್ನೂ ಪ್ರಾಯೋಗಿಕ ಹಂತದಲ್ಲಿದೆ. ಅದನ್ನು ಇನ್ನೊಬ್ಬರಿಗೆ ಕಸಿ ಮಾಡಲು ಈಗಲೇ ಸುಸಮಯವಲ್ಲ! ಬಹಳ ಕೆಲಸ ಬಾಕಿ ಇದೆ!”
“ಬಹಳ ಸಮಯ ಎನ್ನುವುದು ನಮ್ಮ ಬಳಿ ಇಲ್ಲವಲ್ಲ ಡಾಕ್ಟರ್. ಕೆಲಸವನ್ನು ಈಗಲೇ ಶುರು ಮಾಡಬೇಕು, ರಾಷ್ಟ್ರೀಯ ಸುರಕ್ಷತೆ ದೃಷ್ಟಿಯಿಂದ!” ಕಠಿಣವಾಗಿ ಬಂದ ಈ ಮಾತನ್ನು ಕೇಳಿ ಡಾ. ಆಚಾರ್ಯ ಚಕಿತರಾದರು.
“ನೀವೇನು ಹೇಳುತ್ತಿದ್ದೀರಿ ಎಂಬ ಅರಿವು ನಿಮಗಿದೆಯೇ? ಈ ಮೆಮೋರಿಯನ್ನು ವರ್ಗಾಯಿಸಲು ಇನ್ನೊಬ್ಬ ವ್ಯಕ್ತಿ ಆದರೂ ಬೇಕು, ಅದಾದರೂ ಗೊತ್ತಲ್ಲವೇ?”
“ಅದಕ್ಕೆ ತಕ್ಕ ವ್ಯಕ್ತಿಯನ್ನು ನಾವು ಆಗಲೇ ಕರೆ ತಂದಿದ್ದೇವೆ…” ತಣ್ಣನೆಯ ಉತ್ತರ ಬಂತು.
“ವಾಟ್?” ಎಂದು ಹೌಹಾರಿದರು ಡಾ ಆಚಾರ್ಯ. “ನಮಗೆ ಮಿದುಳಿನ ಫ್ರಂಟ್ ಲೋಭ್ (ಮುಂಭಾಗ) ನಿಷ್ಕ್ರಿಯವಾಗಿರುವ ಭಾವರಹಿತ ಪುರುಷನ ವಿಶೇಷ ಆವಶ್ಯಕತೆ ಇದೆ, ಅದೆಲ್ಲ ಗೊತ್ತಲ್ಲವೆ?”
ಮೋಹನ್ ಭಾಮ್ರ ಅದಕ್ಕೂ ಶಾಂತವಾಗಿ ತಲೆಯಾಡಿಸಿದರು, “ಕಳೆದ ವಾರ ಸೆಮಿನಾರ್ನಲ್ಲಿ ನೀವೇ ಎಲ್ಲ್ಲ ವಿವರಿಸಿದ್ದು ನೆನಪಿದೆ, ಡಾಕ್ಟರ್. ಅದರಂತೆಯೇ ಪಾಲಿಸಿದ್ದೇವೆ.”
ಕಳೆದ ವಾರವಷ್ಟೆ ನವದೆಹಲಿಯ ಅಂತಾರಾಷ್ಟೀಯ ಸೆಮಿನಾರಿನಲ್ಲಿ ತಮ್ಮ ರಹಸ್ಯ ಪ್ರಾಜೆಕ್ಟ್ ಪ್ರತಿಸ್ಮೃತಿ ಬಗ್ಗೆ ಕೇಶವ ಆಚಾರ್ಯರು ಹೆಮ್ಮೆಯಿಂದ ವಿವರಿಸಿದ್ದರು:
“ಹಿಂದೆ ಮಹಾಭಾರತದಲ್ಲಿ ಅರ್ಜುನನಿಗೆ ಧರ್ಮರಾಯನ ಮೂಲಕ ವ್ಯಾಸರು ಪ್ರತಿಸ್ಮöÈತಿ ಎಂಬ ವಿಶೇಷ ಮಂತ್ರವನ್ನು ಉಪದೇಶಿಸಿ ಎಲ್ಲ ದೇವತೆಗಳ ಸ್ಮೃತಿಯನ್ನೂ ಅವನಿಗೆ ದಿವ್ಯದೃಷ್ಟಿಯಂತೆ ನೀಡಿ ಅದರಿಂದ ಅವನು ದಿವ್ಯಾಸ್ತçಗಳನ್ನು ಪಡೆದನಂತೆ. ಅದನ್ನು ಓದಿ ನನಗೆ ಅಷ್ಟು ಮಹತ್ತರ ಸಾಧನೆ ಆಗದಿದ್ದರೂ ಚಿಕ್ಕಮಟ್ಟದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ನೆನಪಿನ ವರ್ಗಾವಣೆ ಮಾಡಲು ಸಾಧ್ಯ ಎನಿಸಿ ಇದನ್ನು ಆರಂಭಿಸಿ ಅದೇ ಹೆಸರಿಟ್ಟೆ. ಮಾನವನ ನೆನಪುಗಳ ಪಟ್ಟಿಯನ್ನು ಒಬ್ಬನ ಮರಣದ ನಂತರವೂ ಕೆಲವು ಕಾಲ ಬದುಕಿ ಉಳಿದಿರುವ ಆ ಮಿದುಳಿನಿಂದ ಜೀವಂತವಾಗಿರಿಸಲು ಮತ್ತು ಇನ್ನೊಬ್ಬ ಸೂಕ್ತ ಸ್ವೀಕರಿಸಬಲ್ಲ ಫಲಾನುಭವಿಗೆ ವರ್ಗಾಯಿಸುವ ಆ ತಂತ್ರಜ್ಞಾನ ಇಂದು ನಮ್ಮದಾಗಿದೆ. ಆಗ ಆ ದಾನಿಯ ಕೊನೆಯ ದಿನದಲ್ಲಿ ನಡೆದ ಫ್ರೆಶ್ ಮೆಮೋರಿ, ಅಂದರೆ ತಾಜಾ ನೆನಪುಗಳನ್ನು ಸೇರಿದಂತೆ ಅವನ ವೈಯಕ್ತಿಕ ಸಂಬಂಧಗಳ ಮಾಹಿತಿಯನ್ನೂ ನಾವು ಹೊಸ ವ್ಯಕ್ತಿಯೊಳಕ್ಕೆ ಕಳಿಸಬಹುದು. ಆಗ ಆ ಜೀವಂತ ವ್ಯಕ್ತಿ ಈ ಮಿದುಳಿನ ಸಾರದ ಪ್ರಭಾವದಿಂದ ತನ್ನ ನಡವಳಿಕೆ, ಕರ್ತವ್ಯಗಳನ್ನು ಹಳೆಯ ವ್ಯಕ್ತಿಯನ್ನು ಹೋಲುವಂತೆ ಮಾಡಬಹುದು. ಇದೊಂದು ಪ್ರಯೋಗ ಮಾತ್ರ, ಕೆಲವು ಮಾನಸಿಕ ರೋಗಿಗಳಿಗೆ ಯಶಸ್ವಿಯಾಗಿ ಮಾಡಿದ್ದೇವೆ, ಆದರೆ ಜವಾಬ್ದಾರಿಯುತ ಮಿಷನ್ಗಳಿಗೆ ಉಪಯೋಗಿಸಿ ನೋಡಿಲ್ಲ, ಹಾಗಾಗಿ ಇದರ ಫಲಿತಾಂಶ ಇನ್ನೂ ಅಧ್ಯಯನದಲ್ಲಿದೆ” ಎಂದು ದೇಶ-ವಿದೇಶಗಳ ರಕ್ಷಣಾ ಮುಖ್ಯಸ್ಥರಿಗೆ ಉದ್ದೇಶಿಸಿ ಹೇಳಿದ್ದುಂಟು.
“ಆದರೆ ಈ ಮುಖ್ಯ ರಕ್ಷಣಾ ಮಿಷನ್ನಿಗೆ ಉಪಯೋಗಿಸುವಂತಿಲ್ಲ. ಸಿವಿಲ್ ಕೆಲಸವಾದರೆ ಮಾತ್ರ. ಪ್ರಾಣಾಪಾಯ ಇರುವ ಮಿಷನ್ನಿಗೆ ಆಗುವುದಿಲ್ಲ. ಆ ಹೊಸಬ ಕೊನೆಗೆ ಹೇಗೆ ವರ್ತಿಸುತ್ತಾನೋ, ಹುಚ್ಚನಾಗಿ ವಿರುದ್ಧವಾಗಿ ಮಾಡಿ ಫೇಲ್ ಆಗಿಬಿಟ್ಟರೆ ನನ್ನ ಪ್ರಾಜೆಕ್ಟನ್ನು ನೀವು ಹಳಿಯುವಂತಿಲ್ಲ” ಎಂದು ಎಚ್ಚರಿಸಿದರು ಡಾ. ಆಚಾರ್ಯ.
“ಸಿವಿಲ್ ಅಲ್ಲ, ಅಪಾಯಕಾರಿ ಮಿಷನ್ನಿಗೇ ಉಪಯೋಗಿಸುತ್ತೇವೆ, ಆದರೆ ಯಶಸ್ಸು ಸಿಕ್ಕೇ ಸಿಗುತ್ತದೆ. ಅವನಿಗೆ ಅಮರನ ನೆನಪುಗಳು ಬಂದು ಸರಿಯಾಗಿ ವೈರಿಯನ್ನು ಹಿಡಿಯುವ ಕಾರ್ಯ ಮುಗಿಸುತ್ತಾನೆ… ಓಕೆ, ನಿಮ್ಮನ್ನು ದೂಷಿಸುವುದಿಲ್ಲ, ಅಷ್ಟಕ್ಕೂ ಕೇಂದ್ರ ರಕ್ಷಣಾ ಸಚಿವರೇ ಅನುಮತಿ ನೀಡಿದ್ದಾರೆ, ಪ್ರಧಾನಿಯವರ ಒಪ್ಪಿಗೆಯೂ ಸಿಕ್ಕಿದೆ…” ಖಡಾಖಂಡಿತವಾಗಿ ನುಡಿದರು ಮೋಹನ್ ಭಾಮ್ರ.
“ಹಾಗಾದರೆ ಮಿಷನ್ ಏನು? ಈ ಹೊಸ ವ್ಯಕ್ತಿ ಬಂದಿರುವವನು ಯಾರು, ಅದನ್ನು ವಿವರಿಸಿ.”
೩
“ಅಮರ್ ದೇಸಾಯಿ ನಮ್ಮ ಪರವಾಗಿ ಒಬ್ಬ ಸೈಬರ್ ಎಕ್ಸ್ಫರ್ಟ್ ಮತ್ತು ವೈಟ್ ಕಾಲರ್ ಹ್ಯಾಕರ್ ರವಿ ಮಿತ್ರ ಎಂಬವನ ಹಿಂದೆ ಬಿದ್ದಿದ್ದ, ಅವನು ಅಪಾಯಕ್ಕೆ ಸಿಲುಕಿದ್ದ ಎಂಬ ಕಾರಣಕ್ಕೆ. ಯಾಕೆಂದರೆ ಅವನು ವರ್ಮ್ ಹೋಲ್ ಎಂಬ ಟೂಲ್ ಸಾಧನವನ್ನು ಕಂಡುಹಿಡಿದಿದ್ದ. ಅವನ ಈ ಅಪೂರ್ವ ಸಾಧನದಿಂದ ಜಗತ್ತಿನ ಯಾವುದೇ ನೆಟ್ವರ್ಕ್ ಅಥವಾ ಕಂಪ್ಯೂಟರಿನ ಸುರಕ್ಷಾ ಗೋಡೆ ಅಥವಾ ಫೈರ್-ವಾಲ್ ಬ್ರೇಕ್ ಮಾಡಿ ಒಳನುಗ್ಗುವಂತಾದ್ದಾಗಿತ್ತು. ಅವನ್ನು ಇದನ್ನು ಗುಪ್ತವಾಗಿಟ್ಟುಕೊಂಡು, ನಮ್ಮ ದೇಶದ ಸರ್ಕಾರಕ್ಕೆ ಮಾತ್ರ ಸೈಬರ್ ಅಪರಾಧಿಗಳನ್ನು ಹಿಡಿಯಲು, ಅವರ ಹ್ಯಾಕಿಂಗ್ ತಡೆಗಟ್ಟಲು ಉಪಯೋಗಿಸಲಿ ಎಂದು ನಮಗೆ ದಾನ ಕೊಡುವವನಿದ್ದ. ಆದರೆ ಇದು ಹೇಗೋ ಅಂತರರಾಷ್ಟ್ರೀಯ ಡಾನ್ ಶಮೀಮ್ ರಾಜಾನಿಗೆ ತಿಳಿದುಹೋಯಿತು. ಅವನು ಇದನ್ನು ಪಡೆದು ತಾನು ಇಡೀ ವಿಶ್ವದ ಎಲ್ಲ ಸರಕಾರಗಳನ್ನು ಅಂಗೈಯಲ್ಲಿಟ್ಟುಕೊಂಡು ಅವರನ್ನು ಬ್ಲಾಕ್ಮೇಲ್ ಮಾಡಿ ತನ್ನ ಭೂಗತಲೋಕದ ಕಾರ್ಯಾಚರಣೆಯನ್ನು ಲೀಲಾಜಾಲವಾಗಿ ಅಧಿಕೃತವಾಗಿ ಮಾಡಬಹುದೆಂದು ಆಸೆಪಟ್ಟನು.
ಅವನನ್ನು ನಮ್ಮ ಅಮರ್ ಎಲ್ಲಿಯೋ ನಮಗೆ ಯಾರಿಗೂ ಗೊತ್ತಿಲ್ಲದ ಸೇಫ್ ಹೌಸಿನಲ್ಲಿ ಅಡಗಿಸಿಟ್ಟ. ರವಿ ಮಿತ್ರ ಅಲ್ಲಿಂದ ಬಂದು ನಮಗೆ ಹೇಳುವ ದಾರಿಯಲ್ಲೇ ಅವನನ್ನು ಹಿಂಬಾಲಿಸುತ್ತಿದ್ದ ತೋಳಗಳಂತೆ ಶಮೀಮ್ ರಾಜಾನ ತಂಡ ಅವನನ್ನು ಬೆನ್ನಟ್ಟಿ ಹೋಯಿತು. ಅಲ್ಲಿನ ಹೊಡೆದಾಟದಲ್ಲಿ ಮದ್ದುಗುಂಡು ಖಾಲಿಯಾಯಿತು. ಸಿಕ್ಕಿಬಿದ್ದ ನಂತರ ಅಮಾನುಷ ಚಿತ್ರಹಿಂಸೆ ಅನುಭವಿಸಿದ. ಬಹುಶಃ ಅವನು ರಹಸ್ಯವನ್ನು ಬಾಯಿ ಬಿಡಲಿಲ್ಲ. ಆದರೆ ಈಗ ನಮಗೂ ಗೊತ್ತಿಲ್ಲ. ಈಗ ಆ ರವಿ ಮಿತ್ರ ಏನೋ ನಮ್ಮ ಸೇಫ್ ಕಸ್ಟಡಿಯಲ್ಲಿ ಭೂಗತನಾಗಿದ್ದಾನೆ. ಆದರೆ ಆ ಸಾಧನ ಮಾತ್ರ ಎಲ್ಲಿ ಅಡಗಿಸಿಟ್ಟಿದ್ದಾನೋ ಶಮೀಮ್ಗೆ ಸಿಗುವ ಮುನ್ನ ನಾವು ಟೂಲ್ ಪಡೆಯಲೇಬೇಕು. ಅದಕ್ಕಾಗಿ ಅವನ ಮೆಮೊರಿ ಉಳಿಸುವ ಸಾಹಸ ನೀವು ಮಾಡಿದಿರಿ, ಅವನ ಸ್ಮöÈತಿಯಲ್ಲಿ ಅಡಗಿದ್ದ ರಹಸ್ಯ ಜೀವಂತ ವ್ಯಕ್ತಿಗೆ ವರ್ಗಾಯಿಸುವುದೇ ಈಗ ಮುಂದಿನ ಹೆಜ್ಜೆ – ಅದನ್ನು ಬಳಸಿ ಗೆಲ್ಲುವ ಉಪಾಯ!”
“ಮತ್ತೆ ಈ ಹೊಸಬ?”
“ಅವನ ಹೆಸರು ಅನಂತ್ ಶೆಟ್ಟಿ… ಹಿಂದೆ ಅವನು ಕುಖ್ಯಾತ ಸುಪಾರಿ ಕಿಲ್ಲರ್ ಆಗಿದ್ದ, ಹಲವು ವರ್ಷಗಳ ಹಿಂದೆ ಪೊಲೀಸ್ ಜೊತೆ ಘರ್ಷಣೆಯಲ್ಲಿ ಗಾಯಗೊಂಡ. ಆಗ ಅವನ ಮಿದುಳಿನ ಮುಂಭಾಗದಲ್ಲಿ ಗಾಯವಾಗಿತ್ತು ಆನಂತರ ಈಗ ಏನೂ ತಿಳಿಯದವನಂತೆ ಸಪ್ಪೆಯಾಗಿ ಸದಾ ಅನ್ಯಮನಸ್ಕನಾಗಿ ಗಗನ ನೋಡುತ್ತ ಕುಳಿತಿರುತ್ತಾನೆ, ಅವನನ್ನು ಯಾರೂ ಹಳೆಯ ದ್ವೇಷದಿಂದ ಕೊಲ್ಲಬಾರದೆಂದು ಅವನನ್ನು ಮಾನಸಿಕ ಆಸ್ಪತ್ರೆಯಲ್ಲಿ ಸುರಕ್ಷತೆಗಾಗಿ ಇಟ್ಟಿದ್ದೆವು. ನೀವು ಹೇಳಿದ ಪ್ರಕಾರ ಅವನಲ್ಲಿ ಈಗ ಆ ಕೊಲ್ಲುವ ಗುಣ ಸುಪ್ತವಾಗಿದೆಯಾದರೂ ಆ ಕಲೆ ಸಮಯಕ್ಕೆ ಬೇಕಾದಾಗ ಹೊರಬರಬಹುದು. ಹಾಗಾಗಿ ಈ ಅಮರನ ಮೆಮೊರಿಯನ್ನು ಅವನಲ್ಲಿ ಬಿತ್ತಿದರೆ ಇವನಲ್ಲಿ ಮೊಳಕೆಯೊಡೆದು ಆ ವರ್ಮ್ ಹೋಲ್ ಬಚ್ಚಿಟ್ಟಿರುವ ತಾಣ ನೆನಪಾಗಿ ನಮಗೆ ಪತ್ತೆಹಚ್ಚಿ ಕೊಡಿಸಲೂಬಲ್ಲ. ಆದರೆ, ಡಾಕ್ಟರ್ ನಮಗೊಂದು ಸಂದೇಹ?”
“ಏನದು, ಹೇಳಿ.”
“ಈಗ ಶಮೀಮ್ ರಾಜನಂತಹ ದುಷ್ಟ ಸುಮ್ಮನೆ ಸೋಲೊಪ್ಪಲಾರ. ಅವನು ನಮ್ಮ ಹಿಂದೆಯೇ ಬಿದ್ದಿದ್ದಾನೆ. ಈಗ ನಾವು ಹೊಸ ಸ್ಮೃತಿಯುಳ್ಳ ಅನಂತನನ್ನು ಹೊರಗೆ ಕಳಿಸಿದರೆ ಅವನನ್ನೂ ಬೆನ್ನತ್ತಿ ಅವನ ಜೊತೆ ಹೋರಾಡುವನು. ಅವನ ಸುಪ್ತ ಸುಪಾರಿ ಕಿಲ್ಲರ್ ಹೊಡೆದಾಟದ ಗುಣಗಳು ಮುಂದೆ ಬಂದು ಅವನು ತನ್ನನ್ನು ರಕ್ಷಿಸಿಕೊಂಡು ಅವರನ್ನು ಎದುರಿಸಿ ಗೆಲ್ಲಬಲ್ಲನೆ?”
“ಯಾವುದೇ ಪ್ರಾಣಿಗೆ ಆತ್ಮರಕ್ಷಣೆಯ ಗುಣ ಇದ್ದೇ ಇರುತ್ತದೆ, ಸ್ಮೃತಿಗೂ ಅದಕ್ಕೂ ಸಂಬಂಧವಿಲ್ಲ. ಹಾಗೇ ಅನಂತನಿಗೆ ಅಮರನ ಸ್ಮೃತಿ ಬಂದು ಅವನಿಗೆ ಮಾನಸಿಕ ಗೊಂದಲವಾಗಬಹುದು, ಆದರೆ ಅವನ ಹೊಡೆದಾಟ ಮಾಡುವ, ಕೊಲ್ಲುವ ಕಲೆಯನ್ನು ಅಳಿಸಲಾಗದು… ಅದೇ ವಯಸ್ಸಿನವನು, ಮಿಕ್ಕ ದೈಹಿಕ ಗುಣಗಳೆಲ್ಲ ಸಮಾನವಾಗಿದ್ದರೆ. ಅವನು ಗೆಲ್ಲಬಹುದು…” ಡಾ. ಆಚಾರ್ಯ ಖಚಿತವಾಗಿ ನುಡಿದಿದ್ದರು.
೪
ಅನಂತ ಶೆಟ್ಟಿ ಒಬ್ಬ ೩೫ ವರ್ಷದ ಆಜಾನುಬಾಹು ಒರಟು ಮೈಕೈ ಇದ್ದ ಪುರುಷ. ಅವನ ಮಾಂಸಲ ಬಾಹುಗಳು ಸೊಂಟ, ಸ್ನಾಯುಗಳನ್ನು ನೋಡಿದರೆ ಸಾಮಾನ್ಯರು ಭಯಬೀಳಬೇಕು. ಆದರೀಗ ಅವನು ಆಚಾರ್ಯರ ಬಯೋಲ್ಯಾಬಿನ ಕೋಣೆಯಲ್ಲಿ ತಾನೇ ಗಾಬರಿಯಾದವನಂತೆ ಕಂಡುಬರುತ್ತಿದ್ದ. ‘ಎಲ್ಲಿಗೋ ಯಾಕೋ ಕರೆತಂದಿದ್ದಾರೆ, ತಾನು ದಿನಾ ಒಬ್ಬನೇ ಇರುತ್ತಿದ್ದ ಆಸ್ಪತ್ರೆ ವಾರ್ಡ್ ಅಂತೂ ಅಲ್ಲ.’ ಮುಂದೆ ಯೋಚಿಸಲು ಹೋದರೆ ತಲೆ ಸಿಡಿಯುವಂತಾಗಿ ಅವನು ತನ್ನ ತಲೆಯನ್ನು ಎರಡೂ ಕೈಯಿಂದ ಬಿಗಿಯಾಗಿ ಹಿಡಿದುಕೊಂಡ.
ಡಾ. ಆಚಾರ್ಯ ಬಂದು ಅವನ ಮುಂದೆ ಕುಳಿತು ವಿವರಿಸತೊಡಗಿದರು,
“ಅನಂತ್, ನಿನ್ನನ್ನು ಒಂದು ಪ್ರಯೋಗಕ್ಕೆ ಒಳಪಡಿಸುತ್ತಿದ್ದೇವೆ. ಇದರಲ್ಲಿ ನಿನ್ನ ಮೊದಲ ಜೀವನದ ಮಾಸಿಹೋದ ನೆನಪಿನ ಬದಲಿಗೆ ಒಬ್ಬ ಮೃತ ವ್ಯಕ್ತಿಯೊಬ್ಬನ ನೆನಪುಗಳನ್ನು ಪೂರ್ತಿಯಾಗಿ ವರ್ಗಾಯಿಸಿ ನಿಮ್ಮಲ್ಲಿ ಆ ಸ್ಮೃತಿ ಗೋಚರವಾಗುವಂತೆ ಮಾಡಲಿದ್ದೇವೆ. ಅದು ಯಶಸ್ವಿಯಾದರೆ, ನೀನು ರಾ ಏಜೆಂಟ್ ಅಮರ್ ಆಗಿ ಬದಲಾಗುತ್ತೀಯೆ – ಬುದ್ಧಿಯಲ್ಲಿ, ವರ್ತನೆಯಲ್ಲಿ. ಆತ ಈಗ ಜೀವಚ್ಛವವಾಗಿದ್ದಾನೆ. ಅವನ ಮೆಮೊರೀಸ್ ನಿನಗೆ ಕೊಟ್ಟಾಗ ಅವನು ತನ್ನ ರಹಸ್ಯ ಮಿಷನ್ ಒಂದರಲ್ಲಿ ಮಾಡಿದ ಕೆಲಸಗಳ ನೆನಪು ಬಂದು ನೀನು ಅದರಂತೆ ಮಾಡಿದರೆ ನಮ್ಮ ದೇಶದ ಸುರಕ್ಷತೆ ಮತ್ತು ಭದ್ರತೆಗೆ ದೊಡ್ದ ಸಹಾಯವಾಗುವುದು, ಅದರ ನಂತರ ನೀನು ಸ್ವತಂತ್ರ. ಇದು ನಿನಗೊಪ್ಪಿಗೆಯೆ?”
ಅನಂತ ಏನೂ ಅರ್ಥವಾಗದವನಂತೆ ಸಪ್ಪಗೆ ನಕ್ಕ, “ನನಗೆ ಏನೂ ನೆನಪಿಲ್ಲ… ಹೋಗಲಿ ಯಾವುದಾದರೂ ಒಬ್ಬನ ನೆನಪಾದಾರೂ ಬಂದರೆ ಸರಿ ಹೋದೇನು. ಆದರೆ, ಡಾಕ್ಟರ್ ನಾನೊಬ್ಬ ಕೆಟ್ಟ ಮನುಷ್ಯ ಅನಿಸುತ್ತೆ, ಗೊತ್ತಿಲ್ಲ ಏನೇನೋ ತಪ್ಪುಗಳನ್ನು ಮಾಡಿದ್ದೇನೆ, ಅದೇನೆಂದು ನೆನಪಿಲ್ಲ. ಆದರೆ ಅಪರಾಧಿ ಭಾವನೆಯಿದೆ. ಖಿನ್ನತೆಯಲ್ಲಿದ್ದೆ. ಇದೆಲ್ಲ ನಿಮಗೆ ಗೊತ್ತು ತಾನೆ?”
ಡಾಕ್ಟರ್ ತಲೆಯಾಡಿಸಿದರು, “ಗೊತ್ತು. ನೀನು ಯಾರೆಂದು ತಿಳಿಯುವ ಪ್ರಯತ್ನ ಸದ್ಯಕ್ಕೆ ಬಿಟ್ಟುಬಿಡು, ನಮ್ಮಲ್ಲೇ ರಹಸ್ಯವಾಗಿರಲಿ. ನೀನೀಗ ಮುಂದೇನಾಗುವೆ, ಏನು ಮಾಡುವೆ ಎಂಬುದು ಮಾತ್ರ ಚೆನ್ನಾಗಿ ಒಪ್ಪಿ ಮನದಟ್ಟು ಮಾಡಿಕೋ!”
ಮುಂದಿನ ನಾಲ್ಕು ಗಂಟೆಯಲ್ಲಿ ಡಾ. ಆಚಾರ್ಯ ತಂಡದವರು ಆ ದಶಕದ ಅತ್ಯಂತ ಪ್ರಮುಖ ಮತ್ತು ಅನನ್ಯ ವೈದ್ಯಕೀಯ ಪ್ರಯೋಗವನ್ನು ಮಾಡಿ ಮುಗಿಸಿದ್ದರು. ಅಕ್ಕಪಕ್ಕದ ಓ.ಟಿ.ಯಲ್ಲಿ ಮಲಗಿದ್ದ ಅಮರ್ ತಲೆಯಿಂದ ಹೊರಟ ಸಂಕೀರ್ಣ ವಯರುಗಳ ಟ್ಯೂಬುಗಳ ಜಾಲ ಅನಂತನ ತಲೆಯೊಳಕ್ಕೆ ಸೇರಿದೆ. RNA Technology ಮೂಲಕ ಸ್ಮೃತಿಯನ್ನು ಸಂಗ್ರಹ ಮಾಡುವ ಸೂಕ್ಷ್ಮಾಣುಗಳನ್ನು ವರ್ಗಾಯಿಸುವುದರ ಮೂಲಕ ಅಮರನ ನೆನಪುಗಳನ್ನು ಪ್ರಾಯೋಗಿಕವಾಗಿ ಅನಂತನಿಗೆ ಬಿತ್ತಿದಂತಾಯಿತೆಂದು ನಿಟ್ಟುಸಿರಿಟ್ಟರು ಡಾ. ಆಚಾರ್ಯ.
ಕೈ ತೊಳೆದುಕೊಂಡು ಹೊರಗೆ ಶತಪಥ ತುಳಿಯುತ್ತ ಆತಂಕದಿಂದಿದ್ದ ಭಾಮ್ರ ಅವರ ಬಳಿ ಬಂದರು.
“ನಾನು ಮಾಡಬೇಕಿದ್ದು ಮಾಡಿದ್ದೇನೆ, ಅವನಿಗೆ ಸಂಜೆಗೆ ಪ್ರಜ್ಞೆ ಬರಬಹುದು. ಆದರೆ ಅವನ ಮಿಷನ್ ಶುರುಮಾಡಲು ಒಂದು ದಿನ ಕಾಯಲು ಸಾಧ್ಯವಿಲ್ಲವೆ?” ಎಷ್ಟಾದರೂ ಅವರು ಡಾಕ್ಟರ್!
ಭಾಮ್ರ ಸುತರಾಂ ಇಲ್ಲವೆನ್ನುವಂತೆ ತಲೆಯಾಡಿಸಿದರು, “ಆಗಲೆ ತಡವಾಗಿದೆ, ಅವನಿಗೆ ಸ್ಮೃತಿ ಬಂದಿದೆಯೆಂದಾದರೆ ನಾನು ಅವನ ಜೊತೆ ಮಾತಾಡಿ ಎಲ್ಲ ಹೇಳಬೇಕಿದೆ, ಕಾಯಲು ಸಾಧ್ಯವಿಲ್ಲ.”
೫
೨೦೫೦ ಮಾರ್ಚ್ ೩-೪
ಮಾರ್ಚ್ ಮೂರರಂದು ಅಮರನ ಅಂತ್ಯಕ್ರಿಯೆಯೂ ಆಯಿತು, ಅಮರನ ಅಣ್ಣ ಅಂತ್ಯಕ್ರಿಯೆ ಮತ್ತು ವಿಧಿಗಳನ್ನು ವಹಿಸಿಕೊಂಡರು. ಆದರೆ ರೇವತಿಗೆ ಇನ್ನೂ ಸಂಕಷ್ಟದ ಕಾಲ ಎದುರಾಗಿತ್ತು, ಅನಂತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಅವಳ ಮನೆಗೇ ಕರೆತಂದಿದ್ದರು ರಾ ಅಧಿಕಾರಿ ಭಾಮ್ರರವರು. ಅಲ್ಲಿದ್ದರೆ ಆ ಮನೆಯಲ್ಲೆ ಅವನಿಗೆ ಅಮರನ ಎಲ್ಲ ನೆನಪುಗಳು ಪೂರ್ಣ ಪ್ರಮಾಣದಲ್ಲಿ ಮರುಕಳಿಸಲೆಂದು ಅವರ ಲೆಕ್ಕಾಚಾರ. ರೇವತಿ ಮತ್ತು ಮಗಳು ಪ್ರಜ್ಞಾರದು ಒಂದು ಬಗೆಯ ಮಾನಸಿಕ ದ್ವಂದ್ವವಾದರೆ ಅರೆ ಮರೆವು, ಅರೆ ನೆನಪು ಪಡೆದ ಅನಂತನದೇ ಬೇರೆ ಬಗೆಯ ಸಂಕಟ.
ಅನಂತನಿಗೆ ಅರಿವಿದೆ: ತಾನು ಬೇರೆ ವ್ಯಕ್ತಿ, ಅಮರ ಅಲ್ಲ, ಇವರಿಬ್ಬರೂ ಅಮರನ ಕುಟುಂಬ. ಆದರೆ ತಾಜಾ ನೆನಪುಗಳೆಲ್ಲ ಅವನೊಂದಿಗೆ ಸೆಣಸಾಡುತ್ತ ‘ಸದಾ ನೀನೇ ಅವನು’ ಎಂದು ಪ್ರತಿಪಾದಿಸುತ್ತಿದೆಯಲ್ಲ, ಅವನಿಗೆ ಕೆಲವೊಮ್ಮೆ ಅವರ ಮನೆಯಲ್ಲಿ ಏನು ಮಾತಾಡಬೇಕು, ಕನಿಷ್ಠ ಅವರನ್ನು ಹೇಗೆ ಕರೆಯಬೇಕೆಂಬುದೂ ತಿಳಿಯದೆ ಇಕ್ಕಟ್ಟಿಗೆ ಸಿಕ್ಕಿಸಿದೆ.
ಅವನು ಬಂದು ರೇವತಿಗೆ, “ರೇವೂ ನನಗೆ ಕಾಫಿ ಬೇಕು, ಸಕ್ಕರೆ ಕಡಮೆ.. ಊಟ ರೆಡಿ ಇದೆಯೆ?” ಎಂದೆಲ್ಲ ಎಂದಿನಂತೆ ಕೇಳಿದಾಗ ಇಬ್ಬರಿಗೂ ಒಮ್ಮೆಲೆ ಮುಜುಗುರವಾಗುವುದು. ಈ ಎಲ್ಲ ವರ್ತನೆ ಮತ್ತು ಸಂಭಾಷಣೆ ತನ್ನ ಮೃತ ಪತಿ ಅಮರನದೆ ಎಂದು ಅವಳಿಗೆ ಅರಿವಾಗಿ ಈ ಅಪರಿಚಿತ ಆಜಾನುಬಾಹುವನ್ನು ಆ ಸ್ಥಾನದಲ್ಲಿ ಹೇಗೆ ಒಪ್ಪಿಕೊಳ್ಳಬೇಕೆಂದು ತಿಳಿಯದೆ ಮಾನಸಿಕವಾಗಿ ತೊಳಲಾಡುವಳು. ಇದಕ್ಕಾಗಿಯೆ ‘ರಾ’ದವರೇ ಮೂವರಿಗೂ ಚಿಕಿತ್ಸೆ ಮತ್ತು ಸಲಹೆ ನೀಡಲು ಮನೋವೈದ್ಯರನ್ನೂ ಕಳಿಸಿ ದಿನಾಲೂ ಬೋಧಿಸುತ್ತಿರುತ್ತಾರೆ. ಆದರೂ?
೬
೨೦೫೦ ಮಾರ್ಚ್ ೫
ಅಂದು ಬೆಳಿಗ್ಗೆ ೮ರ ಸಮಯ.
ಭಾಮ್ರರವರು ಮೂವರನ್ನೂ ಕೂರಿಸಿಕೊಂಡು ಕೇಳುತ್ತಿದ್ದಾರೆ, “ಚೆನ್ನಾಗಿ ನೆನಪಿಸಿಕೋ, ಅನಂತ. ಅಮರ್ ಎಲ್ಲೆಲ್ಲಿಗೆ ಹೋಗಿದ್ದ, ಆ ವರ್ಮ್ಹೋಲ್ ಯಂತ್ರವನ್ನು ಯಾವ ಸ್ಥಳದಲ್ಲಿ ಬಚ್ಚಿಟ್ಟ? ನನಗೆ ಗೊತ್ತು ಸುಲಭವಲ್ಲ, ನಿನಗೆ ತಲೆ ಸಿಡಿದಂತಾಗುವುದು. ಆದರೆ ಈಗ ವಿಧಿಯಿಲ್ಲ, ಒಂದು ಕಡೆ ದೇಶದ ಸುರಕ್ಷತೆ, ಇನ್ನೊಂದು ಕಡೆ ನೀನೇ ವಾಸ್ತವವಾಗಿ ಅಮರ್ ಆಗಿದ್ದೀ. ಇನ್ನಾರೂ ಸಹಾಯ ಮಾಡಲಾರರು!”
ಅನಂತ ಸಪ್ಪಗೆ ತಲೆ ಆಡಿಸಿದ.
ರೇವತಿ ಉದ್ದಕ್ಕೂ ‘ನಮ್ಮ ಮನೆಯ ಗ್ಯಾರೇಜ್, ಮಗುವಿನ ಸ್ಕೂಲ್ ಬಸ್, ತಮ್ಮ ಫೇವರಿಟ್ ಚಿತ್ರಮಂದಿರ, ಶಾಪ್?’ ಎಂದೆಲ್ಲ ತನಗನಿಸಿದಂತೆ ಅಂದಾಜು ಮಾಡಿ ನೆನೆಪಿಸುತ್ತಲೇ ಇದ್ದಾಳೆ.
ಅನಂತನ ತಲೆ ಧಿಮ್ ಎನ್ನುತ್ತಿದೆ, ಅಸ್ಪಷ್ಟ ಚಿತ್ರಗಳು ಕನಸಿನಂತೆ ಮೂಡಿ ಮಾಯವಾಗುತ್ತಿವೆ. ಗೊತ್ತಾಗುತ್ತಿಲ್ಲ! ಹೇಗಪ್ಪ ಉತ್ತರ ಹೇಳಲಿ ಇವರಿಗೆ?
“… ೭ನೆ ನಂಬರ್ ಇರುವ ಸ್ಟೀಲ್ ಬಾಕ್ಸ್ ಎಲ್ಲಿದೆ?” ಇದ್ದಕ್ಕಿದಂತೆ ತೊದಲುತ್ತಾನೆ ಒಮ್ಮೆ.
“…ಇಲ್ಲ ಇಲ್ಲ, ಆ ಪಾರ್ಕ್ ಬಳಿ ಮಾರಮ್ಮನ ಗುಡಿ ಯಾಕೋ ನೆನಪಿಗೆ ಬಂತು” ಎನ್ನುತ್ತಾನೆ ಮತ್ತೊಮ್ಮೆ ತಲೆ ಬಿಗಿಯಾಗಿ ಹಿಡಿದುಕೊಂಡು.
“ಯಾವ ೭ನೆ ನಂಬರ್ ಪೆಟ್ಟಿಗೆ, ಯಾವ ಮಾರಮ್ಮನ ಗುಡಿ? ಎಲ್ಲಿಟ್ಟಿರಿ ಅದನ್ನು ಅನಂತ್?” ರೇವತಿ ಹತಾಶಳಾಗಿ ಅವನ ಹೆಸರಿನಲ್ಲಿ ಕರೆದು ಕೇಳುತ್ತಾಳೆ. ಹಾಗೆ ಇಟ್ಟಿದ್ದು ಅಮರ್, ಇವನಲ್ಲ ಎಂಬುದನ್ನು ಲೆಕ್ಕಿಸದೆ.
ಪ್ರಜ್ಞಾ ಪುಟ್ಟಿ ಸಹ ಇದೊಂದು ತರಹ ಕ್ವಿಜ್ ಎನ್ನುವಂತೆ ತಾನೂ ಆಸಕ್ತಿ ತೋರುತ್ತಿದ್ದಾಳೆ.
“ಅಂಕಲ್, ಆ ಬನ್ನೇರುಘಟ್ಟ ಪಾರ್ಕಾ? ನಾವು ಹೋಗ್ತಿರ್ತೇವಲ್ಲ? ಅಲ್ಲಿಗೆ ಹೋಗಿದ್ರಾ?” ಅಪ್ಪನ ಜೊತೆ ಆಗಾಗ ಹೋಗುತ್ತಿದ್ದುದನ್ನು ನೆನಪಿಸಿಕೊಂಡು ಕೇಳಿದಳು.
“ಯೆಸ್!” ಎಂದು ತಟ್ಟನೆ ಎದ್ದುನಿಂತ ಅನಂತ. “ಅಲ್ಲೇ ಅನಿಸುತ್ತದೆ, ನಾನು… ಅಲ್ಲಲ್ಲ ಅಮರ್ ಇಟ್ಟಿದ್ದು, ಸ್ವಲ್ಪ ಮಾತ್ರ ನೆನಪಿದೆ.”
ಭಾಮ್ರ ಅವನತ್ತ ದಿಟ್ಟಿಸಿ ನೋಡಿದರು, “ಅಲ್ಲಿ ಯಾವ ಮಾರಮ್ಮನ ಗುಡಿ ಇದೆ? ಅದು ಪಾರ್ಕ್ ಬಳಿ ಇದೆಯೆ, ಗೂಗಲ್ ಮ್ಯಾಪ್ ನೋಡಿ ಹೇಳುತ್ತೇನೆ ತಾಳು” ಎಂದು ಕಚೇರಿಗೆ ತಕ್ಷಣ ಅದರ ಪತ್ತೆ ಹಚ್ಚಲು ಸೂಚಿಸಿ ಹೊರಗೆ ಹೋದರು.
ಐದು ನಿಮಿಷದ ನಂತರ, ಭಾಮ್ರ ಹಿಂತಿರುಗಿ ಬಂದು ಹೇಳಿದರು, “ಹೌದು… ಕರೆಕ್ಟಾಗಿ ಪಾರ್ಕ್ ಬಳಿ ಮಾರಮ್ಮನ ಗುಡಿಯಿದೆ. ಅಲ್ಲಿಗೆ ಹೋಗೋಣ. ನೀವೆಲ್ಲ ಒಂದು ಕಾರಿನಲ್ಲಿ ಹೋಗಿ… ಫ್ಯಾಮಿಲಿ ಜೊತೆ ಇದ್ದರೆ ರೇವತಿಗೂ ಪ್ರಜ್ಞಾಗೂ ಏನಾದರೂ ಅಲ್ಲಿ ಸುಳಿವು ಸಿಕ್ಕಬಹುದು. ಮೂರು ಜನ ಒಟ್ಟಿಗೇ ಇರಿ. ಆದರೆ ನಾವು ಹಿಂದೆ ಸೆಕ್ಯುರಿಟಿಗಾಗಿ ಆಯುಧಧಾರಿ ಏಜೆಂಟ್ಸ್ ಜೊತೆಗೆ ನಿಮ್ಮ ಮೇಲೆ ನಿಗಾ ಇಟ್ಟು ಇನ್ನೊಂದು ವ್ಯಾನಿನಲ್ಲಿ ಹಿಂಬಾಲಿಸುತ್ತೇವೆ, ಹಾಗೇನಾದರೂ ಅಟ್ಯಾಕ್ ಆದರೆ ಅನಂತ, ನೀನು ಅವರನ್ನು ಸ್ವಲ್ಪ ಕಾಲ ದೂರವಿಡು, ನಾವು ನಿಮ್ಮ ಸಹಾಯಕ್ಕೆ ಬರುತ್ತೇವೆ. ನಿನಗೆ ಸ್ವಲ್ಪ ಗನ್ ಚಲಾಯಿಸುವುದು ನೆನಪಿದೆ ತಾನೆ?”
ಮೊದಲ ಬಾರಿಗೆ ಅನಂತ ಬಿಗಿಯಿಲ್ಲದೆ ನಕ್ಕ, “ಅದೊಂದನ್ನು ಮರೆಯಲು ಸಾಧ್ಯವೆ? ಒಂದು ಗನ್ ಕೊಡಿ ಸಾಕು, ಆ ಹತ್ತು ಜನರಿಗೂ ನಾನು ಭಾರಿಯಾಗಿ ಬಿಡುವೆ. ಅಮರ್ನನ್ನು ಕೊಂದವರು ನನ್ನನ್ನು ಮುಟ್ಟಲಾರರು!” ಆ ಮಾತಿನಲ್ಲಿದ್ದ ದಿವಂಗತ ಪತಿಯ ಬಗ್ಗೆ ಟೀಕೆ ರೇವತಿಗೇಕೋ ಇಷ್ಟವಾಗದಂತೆ ಅವಳು ಮಾತಿಲ್ಲದೆ ಕಾರು ತೆಗೆಯಲು ಹೊರನಡೆದಳು.
ಕಾರಿನಲ್ಲಿ ಕುಳಿತಾಗ, ಅನಂತ “ಡ್ರೆöÊವಿಂಗ್ ಮಾಡುತ್ತೇನೆ, ಕೊಡು, ರೇವೂ” ಎಂದು ಕೀಗೆ ಕೈ ಚಾಚಿದಾಗ, ರೇವತಿ ಮುಖ ಉಬ್ಬಿಸಿಕೊಂಡು, “ಏನೂ ಬೇಡ, ನಿಮ್ಮ ಒರಟು ಡ್ರೆöÊವಿಂಗ್ನಲ್ಲಿ ತಿಂದಿದ್ದೆಲ್ಲ ಬಾಯಿಗೆ ಬರುತ್ತದೆ” ಎಂದುಬಿಟ್ಟಳು. ತಕ್ಷಣ ಅವಳಿಗೆ ತನ್ನ ತಪ್ಪು ಹೊಳೆಯಿತು – ‘ಅದು ಅಮರ್ ಬಗ್ಗೆ ತಾನು ಮಾತಾಡಿದ್ದು, ಅನಂತ ಹೇಗೆ ಡ್ರೆöÊವ್ ಮಾಡುತ್ತಾನೋ, ತನಗೆ ಹೇಗೆ ಗೊತ್ತು? ಛೆ!’
“ಪರವಾಗಿಲ್ಲ, ನಾನು ಹಿಂದಿನ ಸೀಟಿನಲ್ಲಿದ್ದು ಅಟ್ಯಾಕ್ ಮಾಡುವವರ ಬಗ್ಗೆ ಕಣ್ಣಿಡುತ್ತೇನೆ” ಎಂದು ಅನಂತ ಅಲ್ಲಿಗೆ ಸರಿದ. ಪ್ರಜ್ಞಾ ತಾಯಿ ಪಕ್ಕವೇ ಕುಳಿತಳು.
ಅವರ ಕಪ್ಪು ಹೊಂಡಾ ಸಿಟಿ ಕಾರು ಅಲ್ಲಿಂದ ಹೊರಟಿತು. ಬೆಳಗ್ಗೆ ಟ್ರಾಫಿಕ್ ಶುರುವಾಗುವ ಮುಂಚೆಯೇ ಹೊರಟಿದ್ದರಿಂದ ರೇವತಿ ಲಯವಾಗಿ ಕಾರನ್ನು ಬನ್ನೇರುಘಟ್ಟ ರಸ್ತೆಗೆ ಇಳಿಸಿ ಸಾಗುತ್ತಿದ್ದಳು.
‘ರಾ’ ತನಗೆ ಇತ್ತ ಎಕೆ ೪೭ ಸಬ್ಮೆಶಿನ್ ಗನ್ನನ್ನು ತೊಡೆಯ ಮೇಲೆ ಮಗುವಿನಂತೆ ಮಲಗಿಸಿಕೊಂಡು ಹಿಂದಿನ ಗಾಜಿನ ಮೂಲಕ ಬರುತ್ತಿರುವ ಬಿಳಿ ಮಹೀಂದ್ರ ಎಸ್.ಯು.ವಿ ಸರಕಾರಿ ಏಜೆಂಟ್ಸ್ ಗಾಡಿಯನ್ನು ದಿಟ್ಟಿಸುತ್ತ, ಸುತ್ತಲೂ ಮೈಯೆಲ್ಲ ಕಣ್ಣಾಗಿ ಗಮನವಿಟ್ಟಿದ್ದಾನೆ ಅನಂತ. ಅವನಲ್ಲಿ ಮತ್ತೆ ಸುಪ್ತವಾಗಿದ್ದ ಯೋಧನ ಮತ್ತು ಹಂತಕನ ಸ್ವಭಾವ ಜಾಗೃತವಾಗಿದೆ.
ಅವರ ಅನುಮಾನದಂತೆಯೆ, ಶಮೀಮ್ ರಾಜ ಉಗ್ರರ ತಂಡ ಯಾವುದೋ ಅಡ್ಡರಸ್ತೆಯಿಂದ ರೇವತಿಯ ಹೋಂಡಾ ಕಾರಿಗೆ ದಿಢೀರೆಂದು ಎದುರಾಯಿತು. ದೈತ್ಯನಂತೆ ಎದುರಿಗೆ ಬಂದ ಆ ಕಪ್ಪು ಫಾರ್ಚೂನರ್ ಗಾಡಿ ಕಂಡು ಗಾಬರಿಯಿಂದ ಬ್ರೇಕ್ ಹಾಕಿ ನಿಲ್ಲಿಸಿದಳು ರೇವತಿ. ಮುಂದಿನ ಎರಡು ಕ್ಷಣಗಳಲ್ಲಿ ರಣರಂಗವೇ ಅಲ್ಲಿ ನಿರ್ಮಿತವಾಗಿಹೋಯಿತು. ತಟ್ಟನೆ ಎದುರಿನ ಕಾರಿನ ಕಿಟಕಿಯ ಹೊರಗೆ ಇಣುಕಿದ ಗನ್ನುಗಳಿಂದ ಹೊರಟ ಗುಂಡಿನ ಸುರಿಮಳೆಯಿಂದ ಹೋಂಡಾ ಕಾರಿನ ಗಾಜುಗಳು ಛಿದ್ರವಾದವು. ಕಿಟ್ಟನೆ ಚೀರಿದ ರೇವತಿ ಮಗು ಪ್ರಜ್ಞಾಳನ್ನು ಕವಚಿ ಅಪ್ಪಿಕೊಂಡು ಸೀಟಿನ ಮೇಲೆ ಬಗ್ಗಿದಳು. ತ್ವರಿತವಾಗಿ ಜಾಗೃತನಾದ ಅನಂತ ಕಾರಿನ ಬಾಗಿಲು ಒದ್ದು ಹೊರಬಿದ್ದು ರೇವತಿ ಮತ್ತು ಮಗಳ ನೆರವಿಗೆ ಧಾವಿಸಿದನು.
ರಟಟ್- ಟಟ್! ಎಂಬ ತನ್ನ ಮೆಶಿನ್ ಗನ್ನಿನ ಸತತ ಗುಂಡುಗಳ ಧಾರೆಯನ್ನೇ ದೈತ್ಯ ಗಾಡಿಯತ್ತ ತೂರಿದ ಅನಂತ ಅದರ ಆಶ್ರಯದಲ್ಲಿ ಕವರ್ ಕೊಟ್ಟು ರೇವತಿ ಮತ್ತು ಪ್ರಜ್ಞಾಳನ್ನು ಅಪ್ಪಿಕೊಂಡು ಸರಕ್ಕನೆ ರಸ್ತೆಯ ಬದಿಯ ಪೊದೆಗಳತ್ತ ಧಾವಿಸಿ ಅಲ್ಲಿ ಬಿದ್ದು ಅವರನ್ನು ಮರೆ ಮಾಡಿದ. “ಅವರಿಗೆ ನಾನು ಮಾತ್ರ ಬೇಕು, ಅಂದರೆ ನನ್ನ ತಲೆಯಲ್ಲಿರುವ ಅಮರನ ಸ್ಮೃತಿ ಮಾತ್ರ! ನೀವಲ್ಲ, ನೀವು ಹೊರಗೆ ಕಾಣಿಸಿದರೆ ಕೊಂದುಬಿಡುತ್ತಾರೆ, ಇಲ್ಲಿಂದ ಹಿಂದಕ್ಕೆ ಅಲ್ಲಿ ಕಾಣುವ ಮಾರಮ್ಮನ ಗುಡಿ ಇದೆಯಲ್ಲ ಅಲ್ಲಿಗೆ ಓಡಿ ಅವಿತುಕೊಳ್ಳಿ, ಅವರನ್ನು ನಾನು ಇಲ್ಲಿ ಎಂಗೇಜ್ ಮಾಡುತ್ತೇನೆ. ಕ್ವಿಕ್!” ಎಂದು ರೇವತಿಯನ್ನು ಎಚ್ಚರಿಸಿದ. ಅವರು ಮೂಕರಾಗಿ ಗಾಬರಿಯಿಂದ ತಲೆಯಾಡಿಸಿದರು. ತಾನು ಗನ್ ಎತ್ತಿಕೊಂಡು ಹೊರಬಂದು ಆ ಉಗ್ರರ ದಾಳಿಯನ್ನು ಎದುರಿಸಲು ಸಿದ್ಧನಾದ.
ಆದರೆ ಬೇಕಿರಲಿಲ್ಲ, ಆಗಲೇ ಅವರ ಹಿಂದಿದ್ದ ಸರ್ಕಾರೀ ಏಜೆಂಟ್ ಕಾರಿನ ಕಮಾಂಡೋಗಳು ಸರಿಯಾದ ಪೊಸಿಷನ್ನಿಗೆ ಬಂದಿದ್ದರು. ನೋಡುನೋಡುತ್ತಿರುವಂತೆ ಅವರಿಬ್ಬರ ಗನ್ ಕಾದಾಟ ಆ ಬೆಳಗಿನ ರಸ್ತೆಯಲ್ಲಿ ಮಾರ್ದನಿಸಿತು. ವಾಹನಗಳೆಲ್ಲ ಅಲ್ಲಲ್ಲೇ ನಿಲ್ಲಿಸಿ ಸಾರ್ವಜನಿಕರು ಚದುರಿಹೋದರು.
ಇನ್ನು ತಾನು ಅಲ್ಲಿ ಅವಶ್ಯವಿಲ್ಲವೆಂದು ಗ್ರಹಿಸಿದ ಅನಂತ ಅರೆಕ್ಷಣವೂ ತಡಮಾಡದೆ ಆಗಲೇ ಹಿಂದಕ್ಕೆ ರಸ್ತೆ ಪಕ್ಕದ ಗದ್ದೆ ದಾಟಿ ಮಾರಮ್ಮನ ಗುಡಿಯ ಬಳಿಗೆ ಓಡುತ್ತಿದ್ದ ರೇವತಿ ಮತ್ತು ಪ್ರಜ್ಞಾರ ಜೊತೆಯಾಗಲು ಓಡಹತ್ತಿದ. ಹಾಗೂ ಅವನ ಕಾಲಿನ ತೊಡೆಗೆ ಆ ಧೂರ್ತರ ಒಂದು ಗುಂಡು ತಗುಲಿಯೇ ಬಿಟ್ಟಿತು. ಹಾ! ಎಂದು ಚೀರಿದರೂ ಅಲ್ಲೇ ಮರೆಯಲ್ಲಿ ನಿಂತು ತೊಡೆಗೆ ದೊಡ್ಡ ಕರ್ಚೀಫ್ ಕಟ್ಟಿಕೊಂಡು ರಕ್ತಸ್ರಾವ ನಿಲ್ಲಿಸಿಬಿಟ್ಟು ಸುರಕ್ಷಿತನಾದ. ಇದೆಲ್ಲ ಯಾವುದೂ ನಾನು ಮರೆತಿಲ್ಲವಲ್ಲ ಎಂದು ಅವನಿಗೇ ಸೋಜಿಗವಾಯಿತು.
ಅನಂತ್ ಮತ್ತು ಅಮರರ ಕಸುಬು ಒಂದೇ ಆದರೂ ಕಾನೂನಿನ ವಿರುದ್ಧ ದಿಕ್ಕಿನಲ್ಲಿದ್ದವರು, ಆದರೆ ನಾನೀಗ ಅಮರ್ ಹೆಚ್ಚು, ಅನಂತ ಕಡಮೆ!
ಮಾರಮ್ಮನ ಗುಡಿ ಪಕ್ಕದಲ್ಲಿ ಏನಿದೆ? ಅವನ ತಲೆಯಲ್ಲಿ ಫೈಲುಗಳಂತೆ ಚಿತ್ರಗಳು ಮಸುಕಾಗಿ ನೆನಪಿಗೆ ಬರುತ್ತಿವೆ, ಅಲ್ಲಿ ನಿಲ್ಲಲೂ ಜಾಗವಿಲ್ಲ, ಬಯಲು! ತೊಡೆಗೆ ಏಟು ಮತ್ತು ಆಯಾಸದಿಂದ ಬಳಲಿದರೂ ವಿರಾಮವಿಲ್ಲ.
ಆಗಲೇ ಅವನಿಗೆ ನೆನಪಿಗೆ ಬಂದಿದ್ದು ಹಾ! ಪಕ್ಕದಲ್ಲಿ ಬೊಂಬೆ ಫ್ಯಾಕ್ಟರಿಯೊಂದರ ಶೆಡ್ ಇದೆ. ಆ ಉಗ್ರಾಣದಲ್ಲಿ ಒಂದು ಬಾಕ್ಸ್ ಇದೆ. ಅದೇ… ಅದೇ ೭ನೆ ನಂಬರಿನ ಬಾಕ್ಸ್!
ಸದ್ಯಕ್ಕೆ ರೇವತಿ ಮತ್ತು ಪ್ರಜ್ಞಾ ನೆರವಿಗೆ ಇಬ್ಬರು ಕಮಾಂಡೋಗಳು ಬಂದು ಅಪಾಯದಿಂದ ರಕ್ಷಿಸಿ ದೂರಕ್ಕೆ ಕರೆದೊಯ್ದರು.
ಅನಂತನ ಜೊತೆಗೆ ಒಬ್ಬರು ಕಮಾಂಡೋಗಳು ಅವನ ಜೊತೆಯಾಗಲೂ ಎಲ್ಲರೂ ಆ ಧೂರ್ತರು ಬರುವ ಮುನ್ನ ಅಲ್ಲಿಗೆ ತಲಪಬೇಕೆಂದು ಆಯಾಸ ಲೆಕ್ಕಿಸದೆ ಓಡುತ್ತಿದ್ದಾರೆ. ಅಲ್ಲಿದ್ದ ಒಬ್ಬನೇ ಸೆಕ್ಯುರಿಟಿ ಗಾರ್ಡ್ಗೆ ಕಮಾಂಡೋಗಳು ಪರಿಚಯ ಹೇಳಿ ಗೇಟ್ ಒಳಗೆ ನುಗ್ಗಿ ಶಟರ್ಸ್ ತೆರೆಸಿದರು.
“ಅವತ್ತು ರಾತ್ರಿ ಇವನೇ ಹೆಂಡ ಕುಡಿದು ಮಲಗಿದ್ದ, ನಾನು ಅದಕ್ಕೇ ಯಾರಿಗೂ ಗೊತ್ತಾಗದ ಹಾಗೆ ಒಳಬಂದೆ” ಎಂದು ನೆನಪಿಸಿಕೊಂಡು ತೊದಲಿದ ಅನಂತ್ ತನ್ನ ಸ್ಮöÈತಿಯಿಂದ.
ಎಲ್ಲರೂ ದಡಬಡಾಯಿಸಿಕೊಂಡು ಒಳಗೆ ಓಡೋಡಿ ಬಂದು ನೋಡಿದರೆ ಅಲ್ಲಿ ಈಗ ರಾಶಿರಾಶಿ ಬಾಕ್ಸುಗಳಿವೆ.
“ಮೈ ಗಾಡ್!” ಎಂದು ತಲೆ ಹಿಡಿದುಕೊಂಡು ಒತ್ತಿಕೊಂಡ ಅನಂತ. “ಅಂದು ನಾನು ರಾತ್ರಿ ಬಂದಾಗ ಕೊನೆ ಬಾಕ್ಸ್ ೭ನೆ ನಂಬರಿದಾಗಿತ್ತು, ಇವತ್ತು ನೋಡಿದರೆ ಸುಮಾರು ಐವತ್ತು ಬಾಕ್ಸುಗಳಿವೆ, ಹೇಗೆ?”
ಅಲ್ಲಿದ್ದ ಸೆಕ್ಯುರಿಟಿಯವನು ಮುಂದೆ ಬಂದ, “ಸರ್, ನಿನ್ನೆ ರಾತ್ರಿ ಬಂದ ಸ್ಟಾಕ್ ಇದು, ನಾಳೆ ಹೋಗುತ್ತದೆ, ಎಲ್ಲ ಬಾಕ್ಸಿನ ಮೇಲೂ ನಂಬರ್ ಇದೆ. ನಿಮ್ಮ ಬಾಕ್ಸ್ ಹುಡುಕಿಕೊಳ್ಳಿ”.
“ಸರಿ ಬನ್ನಿ” ಎನ್ನುತ್ತ ಆ ಇಬ್ಬರು ಕಮಾಂಡೋ ಸೇರಿದಂತೆ ನಾಲ್ವರೂ ಕೈ ಹಾಕಿ ಪೆಟ್ಟಿಗೆಗಳ ತಡಕಾಟ ಮಾಡಲು ಶುರುಮಾಡಿದರು. “ಎಲ್ಲವನ್ನೂ ೧-೧೦, ೧೧-೨೦ ಹೀಗೆ ಜೋಡಿಸೋಣ. ಒಂದರಿಂದ ೧೦ ಮುಗಿದರೆ ಸಾಕು, ಬೇರೆ ಹುಡುಕಬೇಕಿಲ್ಲ” ಎಂದು ಸೂಚಿಸಿದ ಅನಂತ.
ಎಲ್ಲ ಪೆಟ್ಟಿಗೆಗಳಲ್ಲಿಯೂ ಮಕ್ಕಳ ಆಟದ ಸಾಮಾನುಗಳೇ ಇರುವುದು – ಬೊಂಬೆ, ಬಸ್ಸು, ರೈಲು ಇತ್ಯಾದಿ. ಅವನ್ನು ಚೆಕ್ ಮಾಡಿ ಎಂದು ಹಾಗೆಯೆ ಬಿಟ್ಟರು.
೭ ನಂಬರಿನ ಬಾಕ್ಸ್ ಸಿಕ್ಕಿದಾಗ ಕಮಾಂಡೋ ಅನಂತನಿಗೆ ಕೊಟ್ಟು, ಮಿಕ್ಕವವರಿಗೆ “ಸ್ಟಾಪ್ ಇಟ್” ಎಂದ.
ಅದರ ಲಾಕನ್ನು ಶೂಟ್ ಮಾಡಿ ಓಪನ್ ಮಾಡಬೇಕಿರಲಿಲ್ಲ, ಆಗಲೇ ಅಮರ್ ಅದನ್ನು ತೆರೆದಿಟ್ಟಿದ್ದ. ಅದನ್ನು ಉತ್ಸಾಹದಿಂದ ಅನಂತ ತೆರೆದು ನೋಡಿದಾಗ ಕಪ್ಪನೆ ಚರ್ಮದ ಚೀಲದಲ್ಲಿ ಜಿಪ್ ತೆರೆದರೆ ಪ್ಲಾಸ್ಟಿಕ್ ಮೌಲ್ಡೆಡ್ ಬಾಡಿ ಇದ್ದ ಎಲೆಕ್ಟ್ರಾನಿಕ್ ಉಪಕರಣ – ಅದುವೇ ವರ್ಮ್ಹೋಲ್ – ಅಂತರ್ಜಾಲ ನಿಯಂತ್ರಕ ವ್ಯವಸ್ಥೆಯ ಹೊಸ ಆವಿಷ್ಕಾರ!
“ಸಿಕ್ಕಿತು!” ಅಮರನ ನೆನಪಿನ ಬಲದಿಂದ ಕೂಗಿ ಹೇಳಿದ ಅನಂತ, “ಇದೇ! ನೀವು ಇದನ್ನು ತೆಗೆದುಕೊಂಡು ಹೋಗಿ ಭಾಮ್ರ ಸಾಹೇಬರ ಕೈಗೆ ಕೊಡಿ, ಅದುವರೆಗೂ ಹುಷಾರು, ರಸ್ತೆಯಲ್ಲಿ ಇದು ನಿಮ್ಮ ಬಳಿಯಿದೆಯೆಂದರೆ ಮತ್ತೆ ಅವರು ದಾಳಿ ಮಾಡಬಹುದು.”
ಕಮಾಂಡೋ ಅದನ್ನು ಬ್ಯಾಗಿಗೆ ಸೇರಿಕೊಂಡ, “ನೀವೇನೂ ವರಿ…” ಎನ್ನುತ್ತಿದ್ದಂತೆ ಅಲ್ಲಿ ಹೊರಗೆ ಗನ್ ಫೈಟ್ ಶುರುವಾಗಿ ಬಿಟ್ಟಿತು. ಒಂದೆರಡು ಶಾಟುಗಳು ಒಳಗೂ ಅವರನ್ನು ಸುಂಯ್ ಎಂದು ಹಾದುಹೋದವು. ಒಬ್ಬ ಕಮಾಂಡೋ ಎಚ್ಚರಿಕೆಯಿಂದ ಆಗಲೇ ಗಾಯವಾಗಿದ್ದ ಅನಂತನನ್ನು ಹಿಂದಿನ ಬಾಗಿಲ ಕಡೆಗೆ ಎಳೆದೊಯ್ಯುತ್ತ ಕರೆದೊಯ್ದ.
“ಸರ್, ನಿಮಗೆ ಇಲ್ಲಿ ಜೀಪ್ ಇದೆ, ಇದನ್ನು ಓಡಿಸಿಕೊಂಡು ಹಿಂದಿನ ರಸ್ತೆಯಿಂದ ಹೋಗಿ. ಎಲ್ಲ ಕಡೆ ಪೊಲೀಸ್ ಇದ್ದಾರೆ. ನಿಮ್ಮ ಜೀಪ್ ತಡೆಯುವುದಿಲ್ಲ” ಎಂದು ಅವನೇ ಜೀಪ್ ಹತ್ತಿಸಿದ.
“ಮತ್ತೆ ರೇವತಿ, ಪ್ರಜ್ಞಾ?” ಎಂದ.
“ಅವರಾಗಲೇ ಪೊಲೀಸ್ ರಕ್ಷೆಯಲ್ಲಿ ನಮ್ಮ ರಾ ಕಚೇರಿ ಸೇರಿದ್ದಾರೆ, ಸೇಫ್ಟಿಗಾಗಿ! ಅಲ್ಲಿಂದ ಮೂವರೂ ಮನೆಗೆ ಹೋಗುವಿರಂತೆ.” ಕಮಾಂಡೋ ಹೇಳಿದ ರಸ್ತೆಯಲ್ಲಿ ಹೊರಟಾಗ ಅವನಿಗೆ ಎರಡು ಪೊಲೀಸ್ ಕಾರು ಬೆಂಗಾವಲಾಗಿ ರಾ ಆಫೀಸಿಗೆ ಕರೆದೊಯ್ಯಿತು.
ಅಲ್ಲಿ ತಲಪಿದಾಗ ಪ್ರಜ್ಞಾ ಓಡಿ ಬಂದು ಅಂಕಲ್! ಎಂದು ಮುದ್ದಿಸಿದಳು, “ನಿಮ್ಗೆ ಗಾಯ ಆಗಿದೆ, ಅಯ್ಯೋ!” ಎಂದಳು.
“ಚಿಕ್ಕದು ಮರಿ, ಇರುವೆ ಕಚ್ಚಿದಂಗೆ. ನೀ ಚೆನ್ನಾಗಿದೀಯ?”
“ಹೂಂ ಅಂಕಲ್, ಅಲ್ಲಿ ಒಳ್ಳೆ ವಿಡಿಯೋ ಗೇಮ್ ತರಹ ಇತ್ತು ಫೈಟಿಂಗ್ ಎಲ್ಲ! ಆದರೆ ಭಯ ಆಯ್ತು. ನಂಗಿಂತಾ ಜಾಸ್ತಿ ಮಮ್ಮಿಗೆ!” ಎಂದಳು ದೂರದಲ್ಲಿ ನಿಂತಿದ್ದ ರೇವತಿಯನ್ನು ತೋರಿಸುತ್ತ.
“ನಿಮಗೆ ಹೇಗೆ ಥ್ಯಾಂಕ್ಸ್ ಹೇಳುವುದೋ ಗೊತ್ತಿಲ್ಲ… ನಮ್ಮಿಂದ ಜೀವಾಪಾಯ ಎದುರಿಸಿದ್ರಿ, ಪಾಪ” ರೇವತಿ ತಲೆ ತಗ್ಗಿಸಿ ನುಡಿದಳು.
“ನಾನು ಓಕೆ. ಈಗ ಮನೆಗೆ ಹೋಗಿ ಪ್ಯಾಕ್ ಮಾಡಿಕೊಂಡು ಬೇರೆ ಕಡೆ ಶಿಫ್ಟ್ ಆಗಿಬಿಡ್ತೀನಿ, ಇನ್ನು ನಿಮಗೆ ತೊಂದರೆ ಕೊಡಲ್ಲ!” ಎಂದ ಅದೇ ಸರಿ ಎಂಬಂತೆ.
ರೇವತಿ ತಲೆಯೆತ್ತಿದಳು. ಕಂಗಳು ಮನಸ್ಸು ತುಂಬಿ ಬಂದಿತ್ತು.
“ಇನ್ನೂ ಸ್ವಲ್ಪ ಸಮಯ ನಮ್ಮ ಜೊತೆಯಲ್ಲೇ ಇರಿ, ಆಪರೇಶನ್, ಗಾಯ ಎಲ್ಲ ಆಗಿದೆ ನಿಮಗೂ.. ಪ್ರಜ್ಞಾ ನಿಮ್ಮನ್ನು ತುಂಬ ಹಚ್ಚಿಕೊಂಡು ಬಿಟ್ಟಿದ್ದಾಳೆ, ಅಮರ್ ಬೇರೆ ಇಲ್ಲ ನಮ್ಮ ಜೊತೆ” ಎಂದು ಬಿಕ್ಕಿದಳು.
ಪ್ರಜ್ಞಾ ಇದನ್ನು ಕದ್ದು ಕೇಳುತ್ತಿದ್ದವಳು ಅವನ ಕೈ ಹಿಡಿದೆಳೆದು, “ಅಪ್ಪ ಮಾಡ್ತಿದ್ದ ಆ ಸೀಕ್ರೆಟ್ ಸೈನ್ ಮಾಡಿ ತೋರಿಸು ನೋಡೋಣ” ಎನ್ನುವುದೆ?
ಅಮರನಂತೆಯೇ ಅನುಮಾನವಿಲ್ಲದಂತೆ ಎಡಭಾಗದ ಎದೆಗೆ ಬೆರಳು ಎರಡು ಸಲ ಚುಚ್ಚಿ ತೋರಿಸಿದ ಅನಂತ! ಅದುವೆ ‘ಐ ಲವ್ ಯು ಬೋತ್’ ಚಿಹ್ನೆ. ರೇವತಿ ನಾಚಿ ತಲೆ ತಗ್ಗಿಸಿದಳು. ಪ್ರಜ್ಞಾ ಹಿರಿಹಿರಿ ಹಿಗ್ಗಿ ಕುಣಿದಳು, “ಹಿ ಲವ್ಸ್ ಅಸ್!”
“ಇದೇ ನಮ್ಮ ಭವಿಷ್ಯ ಎನ್ನುವುದಾದರೆ ತಡೆಯಲು ನಾನಾರು? ನಮಗೆಲ್ಲರಿಗೂ ಇನ್ನೂ ಬಹಳ ಸಮಯ ಬೇಕು ಹೊಂದಾಣಿಕೆಗೆ… ಸದ್ಯಕ್ಕೆ ಬನ್ನಿ, ಮನೆಗೆ ಹೋಗುವಾ” – ದೃಢವಾದ ದನಿಯಿಂದ ನುಡಿದ ರೇವತಿ ಒಂದು ಕೈಯಲ್ಲಿ ಅವನ ಕೈ ಇನ್ನೊಂದರಲ್ಲಿ ಪ್ರಜ್ಞಾ ಕೈ ಹಿಡಿದು ಹೊರನಡೆದಳು.
ಇದನ್ನು ಅನತಿ ದೂರದಲ್ಲಿ ನೋಡುತ್ತಿದ್ದ ಭಾಮ್ರ ಡಾ. ಆಚಾರ್ಯ ಕಡೆಗೆ ತಿರುಗಿ ಹೇಳಿದರು,
“ಕಂಗ್ರಾಟ್ಸ್, ಡಾಕ್ಟರ್. ನಿಮ್ಮ ಪ್ರಾಜೆಕ್ಟ್ ಪ್ರತಿಸ್ಮೃತಿ ಮೊದಲ ಪ್ರಯೋಗವೇ ಸಕ್ಸಸ್… ವರ್ಮ್ಹೋಲ್ ಸಿಕ್ಕಿದೆ, ಸರಿಯಿದೆ!”
“ಅದು ಅನಂತನ ಸಕ್ಸಸ್ ಸಹ. ನೀವೇನು ಮಾಡುತ್ತೀರಿ ಮುಂದೆ?” ಎಂದರು ಆಚಾರ್ಯ.
“ಅಮರ ಅನಂತನಾದ. ಇನ್ನು ಅಮರನ ಫ್ಯಾಮಿಲಿಯೂ ಅನಂತನದಾಯಿತು ಅನಿಸುತ್ತದೆ, ಹಾಗಾದರೆ ಅಮರನ ಏಜೆನ್ಸಿ ಪೋಸ್ಟ್ ಕೂಡ ಏಕೆ ಅನಂತನದಾಗಬಾರದು ಎಂದು ಯೋಚಿಸುತ್ತಿದ್ದೇನೆ” ಎಂದರು ಖುಶಿಯಿಂದ ಭಾಮ್ರ.