(ಉತ್ತರಾರ್ಧ)
“ನಾನೇ ರಾಧಿಕಾ. ಆ ಪ್ರೊಫೆಸರ್ ನಾರಾಯಣ್ ಅವರ ಕೈಕೆಳಗೆ ಪಿಹೆಚ್.ಡಿ. ಮಾಡ್ತಾ ಇರೋದು. ನನ್ನನ್ನೇಕೆ ಕರೆಸಿದ್ದು?”
ಸುಮಾರು ಇಪ್ಪತ್ತೈದರ ಹರೆಯದ ಹುಡುಗಿಯೊಬ್ಬಳು ಬಂದು ತನ್ನ ಮುಂದೆ ಧೈರ್ಯವಾಗಿ ನಿಂತು ಮಾತಾಡುತ್ತಿರುವುದನ್ನು ಕಂಡು ಬೆರಗಾದ ಬಲರಾಮ್. ಪೆÇಲೀಸರು ಕರೆದರೆಂದರೆ ಭಯದಿಂದ ಹೆದರಿಕೊಂಡು ಬರುತ್ತಾರೆ ಎಂದು ಎಣಿಸಿದ್ದ. ಆದರೆ ಬಂದವಳು ಹಾಗಿರಲಿಲ್ಲ.
“ನಿಮಗೆ ಪ್ರೊಫೆಸರ್ ನಾರಾಯಣ್ ನಿಮ್ಮ ಗೈಡ್ ಆಗಿ ಮಾತ್ರ ಪರಿಚಯವಾ… ಅಥವಾ?”
“ಸರ್, ಪೀಠಿಕೆ ಎಲ್ಲ ಬೇಡ. ನನಗೂ ವಿಷಯ ತಿಳಿದಿದೆ. ಆ ಮನುಷ್ಯ ಯಾರ ಹಿಂದೆಯೋ ಓಡಿಹೋಗಿದ್ದಾನೆ. ಇನ್ನೂ ಮನೆಗೆ ಬಂದಿಲ್ಲ. ಅಷ್ಟೇ ತಾನೇ? ತನ್ನ ತೆವಲು ತೀರಿದಾಗ ವಾಪಸ್ ಬರ್ತಾನೆ ಬಿಡಿ.”
“ಅದೇನು ಅಷ್ಟು ದ್ವೇಷ ಅವರ ಮೇಲೆ? ಅದೂ ಕೊಲೆ ಮಾಡಿಸುವಷ್ಟು …?”
“ಓಹ್! ಸತ್ತನಾ? ಸದ್ಯ, ಒಂದಷ್ಟು ಹೆಣ್ಣುಮಕ್ಕಳ ಜೀವನ ಹಾಳಾಗುವುದು ತಪ್ಪಿತು.”
“ಸತ್ತಿದ್ದಾರೋ ಇಲ್ಲವೋ ಅಂತಾ ತಿಳಿಯುವುದಕ್ಕೆಯೇ ನಿಮ್ಮನ್ನು ಕರೆಸಿದ್ದು. ಕೇಳಿದ ಪ್ರಶ್ನೆಗೆ ಉತ್ತರ ಕೊಡಿ. ನಮ್ಮ ಬಳಿ ನಿಮ್ಮ ವಿರುದ್ಧ ಸಾಕ್ಷಿಗಳಿವೆ” ಬಲರಾಮ್ ವ್ಯಂಗ್ಯವಾಗಿ ನುಡಿದ.
“ಆರೋಪ ಏನು ಬೇಕಾದರೂ ಮಾಡಿ. ಅದರೆ ವಿಚಾರಣೆ ಮಾಡಬೇಕೆಂದರೆ ಕಾನೂನಿನ ಪರಿಧಿಯೊಳಗೆ ಮಾಡಿ.”
ತನ್ನ ಮಾತುಗಳಿಗೆ ಬಗ್ಗುವುದಿಲ್ಲ ಎಂದು ಅರಿತ ಬಲರಾಮ್ ಕೊಂಚ ಮೆತ್ತಗಾದ.
“ನಿಮಗೇಕೆ ಅವರ ಮೇಲೆ ದ್ವೇಷ?”
“ಸರ್ ಒಬ್ಬ ಮನುಷ್ಯ ತನಗಿರುವ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಅಬಲರನ್ನು ಶೋಷಣೆ ಮಾಡಿದರೆ ಅವರನ್ನು ಪೂಜಿಸಬೇಕಾ? ತನ್ನ ಕೈಕೆಳಗೆ ಇರುವ ಹೆಣ್ಣುಮಕ್ಕಳನ್ನು ಪೀಡಿಸಿ ಅವರನ್ನು ಉಪಯೋಗಿಸಿಕೊಳ್ಳಲು ಹೊಂಚುಹಾಕುವ ದಾನವನನ್ನು ದ್ವೇಷ ಮಾಡದೆ ಏನು ಮಾಡಬೇಕು ಹೇಳಿ?”
“ಹದಿನಾರನೇ ತಾರೀಖಿನಂದು ನೀವು ಅವರೊಡನೆ ಇದ್ದಿರಾ?”
“ಸರ್, ಇಂತಹ ಚಿಲ್ಲರೆ ಪ್ರಶ್ನೆ ಕೇಳುವ ಬದಲು ನನ್ನ ವಿರುದ್ಧ ಸಾಕ್ಷಿಗಳಿದ್ದರೆ ನನ್ನನ್ನು ಅರೆಸ್ಟ್ ಮಾಡಿ; ಇಲ್ಲದಿದ್ದರೆ ನನ್ನನ್ನು ಹೋಗಲು ಬಿಡಿ. ಆ ಕ್ರಿಮಿ ನಾರಾಯಣ್ ಬದುಕಿದ್ದಾನೋ ಸತ್ತಿದ್ದಾನೋ ನನಗೆ ತಿಳಿಯದು. ಅಕಸ್ಮಾತ್ ತಿರುಗಿ ಬಂದರೆ ತಿಳಿಸಿ. ನಾನೇ ಬಂದು ಕಂಪ್ಲೇಂಟ್ ಕೊಡುತ್ತೇನೆ” ಎನ್ನುತ್ತ ಕುರ್ಚಿಯಿಂದ ಎದ್ದಳು.
“ಸುರೇಶ ಮತ್ತು ವಿನಯ್ ನಿಮ್ಮ ಕ್ಲೋಸ್ ಫ್ರೆಂಡ್ಸ್. ಅದೂ…ಕಿಡ್ನ್ಯಾಪ್, ಕೊಲೆ ಮಾಡುವುದರಲ್ಲಿಯೂ ಸಹಾಯ ಮಾಡುವಷ್ಟು?!”
ವ್ಯಂಗ್ಯವಾಗಿ ಪ್ರಶ್ನಿಸಿದ ಬಲರಾಮ್.
ಆ ಪ್ರಶ್ನೆ ಕೇಳಿದೊಡನೆಯೇ ದಂಗಾದಳು ರಾಧಿಕಾ. ನಿಧಾನವಾಗಿ ಮತ್ತೆ ಕುಳಿತುಕೊಳ್ಳುತ್ತಾ,
“ಅವರಿಗೂ ಇದಕ್ಕೂ ಏನು ಸಂಬಂಧ?”
“ಸಂಬಂಧ ನೀವೇ ಹೇಳಿದರೆ ಉತ್ತಮ. ನಾವೇ ಜೋಡಿಸಿದರೆ ಮುಂದೆ ನಿಮಗೇ ಕಷ್ಟ.”
ರಾಧಿಕಾ ಮಾತಾಡಲಿಲ್ಲ.
“ನಾರಾಯಣ್ ಅವರು ನಿಮ್ಮ ಜೊತೆ ಟೂರ್ ಹೋಗುವ ಪ್ಲಾನ್ ಮಾಡಿದ್ದರು. ಅದರ ಬಗ್ಗೆ ತಮ್ಮ ಖಾಸಾ ಸ್ನೇಹಿತರಲ್ಲಿಯೂ ಹೇಳಿಕೊಂಡಿದ್ದರು. ನಾರಾಯಣ್ ಅವರು ತಮ್ಮ ಕಾರಿನಲ್ಲಿ ಹೊರಟು, ನಿಮ್ಮನ್ನು ಪಿಕಪ್ ಮಾಡಿಕೊಂಡು ಹೋಗಬೇಕಿತ್ತು. ನಿಮ್ಮ ಸ್ನೇಹಿತರೊಂದಿಗೆ ಸೇರಿ ಅವರನ್ನು ಅಲ್ಲಿಯೇ ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ಮಾಡಿ ಕೊಲ್ಲುವ ಪ್ಲಾನ್ ನಿಮ್ಮದಾಗಿತ್ತು. ಆದರೆ ಅವರ ಬದಲು ಬೇರೆ ಯಾರೋ
ಸಿಕ್ಕಿಹಾಕಿಕೊಂಡರು. ನೀವುಗಳು ಸೇರಿಕೊಂಡು ಅವರನ್ನೇ ಹಿಂಸಿಸಿ ಸಾಯಿಸಿದ್ದೀರಾ. ನಿಮ್ಮ ಕಾಲ್ ಡೀಟೈಲ್ಸ್, ನಿಮ್ಮ ಫೆÇೀನ್ ಲೋಕೇಶನ್ ಎಲ್ಲವೂ ನಮಗೆ ಸಿಕ್ಕಿದ ವ್ಯಕ್ತಿಯನ್ನು ಕೊಲೆ ಮಾಡಿದವರು ನೀವೇ ಎಂದು ನಿಮ್ಮಕಡೆಗೆ ಬೊಟ್ಟುಮಾಡಿ ತೋರಿಸುತ್ತಿದೆ. ಆ ವ್ಯಕ್ತಿ ಯಾರು? ಅವನನ್ನೇಕೆ ಕೊಂದಿರಿ? ಪೆÇ್ರಫೆಸರ್ ನಾರಾಯಣ್ ಎಲ್ಲಿ, ಅವರನ್ನೂ ಕೊಂದಿರಾ?”
ಕಡೆಯ ಸಾಲುಗಳನ್ನು ಜೋರಾದ ಧ್ವನಿಯಲ್ಲಿ ಅಬ್ಬರಿಸಿದ ಬಲರಾಮ್.
ಅಲ್ಲಿಯವರೆಗೂ ಸುಮ್ಮನಿದ್ದ ರಾಧಿಕಾ,
“ಸರ್, ನನಗೆ ದ್ವೇಷ ಇದ್ದದ್ದು ನಾರಾಯಣ್ ಮೇಲೆ. ಅದು ನಿಜ. ಸುರೇಶ್ ಮತ್ತು ವಿನಯ್ ನನ್ನ ಸ್ನೇಹಿತರು ನಿಜ. ಆದರೆ ನೀವು ಹೇಳುತ್ತಿದ್ದೀರಲ್ಲ, ನಾರಾಯಣ್ ಬದಲು ಇನ್ನಾರನ್ನೋ ಕೊಂದಿದ್ದೇನೆ. ಅವರ ಕೊಲೆಯಾದಾಗ ನಾನು ಮತ್ತು ನನ್ನ ಸ್ನೇಹಿತರು ಅಲ್ಲಿಯೇ ಇದ್ದೆವು ಎನ್ನುವುದು ಹಾಸ್ಯಾಸ್ಪದ. ಆ ವ್ಯಕ್ತಿ ಕೊಲೆಯಾದಾಗ ನಾನು ಅಲ್ಲಿಯೇ ಇದ್ದರೆ, ನಾರಾಯಣ್ ಬದಲು ಆ ಬೇರೆ ವ್ಯಕ್ತಿಯನ್ನು ಹೇಗೆ ಕೊಲ್ಲಲು ಸಾಧ್ಯ? ಮಿಸ್ಟೇಕನ್ ಐಡೆಂಟಿಟಿ ಹೇಗೆ ಸಾಧ್ಯ? ನನಗೆ ತಿಳಿಯದ ವ್ಯಕ್ತಿಯನ್ನು, ನಾನು ಯಾವ ಕಾರಣಕ್ಕಾಗಿ ಸಾಯಿಸಲಿ? ಒಂದು ಕೊಲೆ ಆಪಾದನೆ ಮಾಡಬೇಕಾದರೆ, ಇಂಥವರೇ ಕೊಲೆಗಾರರು ಎಂದು ಸಾಬೀತು ಮಾಡಬೇಕಾದರೆ, ಕೊಲೆಗಾರನಿಗೆ ಇರುವ ಮೋಟಿವ್, ಕೊಲೆಗೆ ಬಳಸಿದ ಆಯುಧ, ಆ ಕೊಲೆಯನ್ನು ಎಲ್ಲಿ, ಹೇಗೆ ಮಾಡಿದ ಎನ್ನುವ ವಿವರದೊಂದಿಗೆ ಮಾಡಬೇಕು. ಆ ಅನಾಮಿಕ ಯಾರು? ಅವನಿಗೂ ನನಗೂ ಇರುವ ಸಂಬಂಧವೇನು? ಆ ಅನಾಮಿಕನನ್ನು ಕೊಲ್ಲುವಂತಹ ಮೋಟಿವ್ ನನಗೇನಿತ್ತು? ಇದರಲ್ಲಿ ನನ್ನ ಸ್ನೇಹಿತರ ಪಾಲೇನು? ಎಲ್ಲ ವಿವರದೊಂದಿಗೆ ಬನ್ನಿ. ನಾನೇನೂ ಎಲ್ಲೂ ಓಡಿಹೋಗಲ್ಲ. ಬೇಕಾದರೆ ನನ್ನ ಹಿಂದೆ ಎರಡು ಕಾನ್ಸ್ಟೆಬಲ್ ಹಾಕಿ. ಅದನ್ನು ಬಿಟ್ಟು ಯಾವುದೊ ಥಿಯರಿಯನ್ನು ಹಿಡಿದು ನಾರಾಯಣ್ ಅವರ ಮೇಲಿನ ದ್ವೇಷವನ್ನು ಇನ್ನಾರ ಮೆಲೋ ತೀರಿಸಿಕೊಂಡೆ ಎನ್ನುವ ಆಪಾದನೆ ಮಾಡಿ ನನ್ನಿಂದ ತಪ್ಪೊಪ್ಪಿಗೆ ಪಡೆಯುವ ಯೋಚನೆ ಮಾಡಬೇಡಿ. ಅದು ಆಗದ ಮಾತು.”
ಎತ್ತರದ ಧ್ವನಿಯಲ್ಲಿಯೇ ಮಾತಾಡಿ ಅಲ್ಲಿಂದ ಎದ್ದು ಧಡಧಡನೆ ಹೊರಟಳು.
ಅವಳ ಮಾತುಗಳಿಂದ ಬಲರಾಮ್ ಶಾಕ್ ಆಗಿಬಿಟ್ಟ.
“ಸರ್, ಆ ಹುಡುಗಿ ಹೇಳುವುದರಲ್ಲಿಯೂ ಲಾಜಿಕ್ ಇದೆ ಅಲ್ಲವಾ? ನಮ್ಮ ಬಳಿ ಇರುವುದು ಕೇವಲ ಸಾಂದರ್ಭಿಕ ಸಾಕ್ಷ್ಯಗಳು ಮಾತ್ರ. ಅದರಿಂದ ಏನೂ ಮಾಡಲಾಗದು. ಆದರೆ ಉತ್ತರವಿಲ್ಲದ ಪ್ರಶ್ನೆ ಏನೆಂದರೆ, ನಾರಾಯಣ್ ಅವರನ್ನು ಈ ಹುಡುಗರೇ ಎಲ್ಲೋ ಕರೆದೊಯ್ದಿದ್ದರೆ ಯಾರೋ ಬೇರೆಯವರನ್ನು ಹೇಗೆ ಕೊಲ್ಲಲು ಸಾಧ್ಯ? ಅವರನ್ನೇ ಸಾಯಿಸಬೇಕಿತ್ತಲ್ಲವೆ?”
ರಾಜಪ್ಪ ಪ್ರಶ್ನಿಸಿದ, “ಹಾಗಾದರೆ ನಮಗೆ ಸಿಕ್ಕಿರುವ ಮನುಷ್ಯನನ್ನು ಕೊಲೆ ಮಾಡಿರುವವರು ಯಾರು?”
“ಅದಕ್ಕೂ ಮೊದಲು ಈ ಮನುಷ್ಯ ಯಾರು? ಇವನಿಗೂ ಪ್ರೊಫೆಸರ್ ನಾರಾಯಣ್ಗೂ ಏನು ಸಂಬಂಧ ಎಂದು ತಿಳಿಯಬೇಕಿದೆ ಸರ್.”
“ಒಂದು ಕ್ಷಣ ನಾನೆಂದುಕೊಂಡಂತೆಯೇ, ‘ಮಿಸ್ಟೇಕನ್ ಐಡೆಂಟಿಟಿ’ ಅಂತಾನೇ ನಂಬೋಣ. ಇವರು ಪ್ರೊಫೆಸರ್ ನಾರಾಯಣ್ ಅವರನ್ನು ಕೊಲೆ ಮಾಡಲಿಕ್ಕಾಗೆಯೇ ಇಂತಹದ್ದೊಂದು ಪ್ಲಾನಿಂಗ್ ಮಾಡಿದ್ದಾರೆ. ಅದು ಮಿಸ್ ಆಗಿದೆ. ಹಾಗಂತ ಅವರು ಅಲ್ಲಿಗೇ ಸುಮ್ಮನಾಗುವ ಸಾಧ್ಯತೆ ಬಹಳ ಕಡಮೆ. ಇದೇ ಪ್ಲಾನಿಂಗ್ ಅನ್ನು ಉಪಯೋಗಿಸಿ ಅವರನ್ನೂ ಕೊಲೆಮಾಡಿದ್ದು, ನಮಗೆ ಕನ್ಫ್ಯೂಸ್ ಮಾಡಲು ಈ ಅಜ್ಞಾತ ವ್ಯಕ್ತಿಯ ಶವ ಇಲ್ಲಿ ಹಾಕಿರಬಹುದಲ್ಲವೆ?”
“ಅಂದರೆ… ಪ್ರೊಫೆಸರ್ ನಾರಾಯಣ್ ಅವರ ಶವ ಎಲ್ಲೋ ಬೇರೆ ಕಡೆ ಬಿಸಾಕಿರಬೇಕು.”
ರಾಜಪ್ಪ ಒಂದೊಂದೇ ಶಬ್ದ ನುಡಿದ.
***
ಇನ್ಸಪೆಕ್ಟರ್ ರಾಜೇಶ್ನ ಬುದ್ಧಿ ಕೆಲಸ ಮಾಡದಂತಾಗಿತ್ತು. ಅವನ ಕಣ್ಮುಂದೆ ಮೂರುಜನ ಆರೋಪಿಗಳಿದ್ದರೂ, ಅವರ ನಡೆ-ನುಡಿ ಎಲ್ಲವೂ ಸಂಶಯಕ್ಕೆ ಎಡೆಮಾಡಿಕೊಡುವಂತಿದ್ದರೂ, ಅವರು ಮಾಡಿದ್ದಾರೆ ಎಂದು ತಿಳಿಯಲಾಗಿದ್ದ ಶವ ಅಭಿನವ್ನದ್ದು ಅಲ್ಲ.
‘ಅಂದರೆ ಇವರ ಟಾರ್ಗೆಟ್ ಅಭಿನವ್ ಆಗಿದ್ದು, ಅಕಸ್ಮಾತ್ ಮಿಸ್ ಆಗಿ ಬೇರೆ ವ್ಯಕ್ತಿಯ ಕೊಲೆಯಾಗಿದೆಯಾ? ಅಥವಾ ಯಾರಾದರೂ ಇವರನ್ನು ಸಿಕ್ಕಿಹಾಕಿಸಲು ಪ್ರಯತ್ನಿಸುತ್ತಿದ್ದಾರಾ? ಟಾರ್ಗೆಟ್ ಅಭಿನವ್ ಆಗಿರದೇ ಬೇರೆ ಯಾರಾದರೂ ಆಗಿದ್ದರೆ, ಇವರೊಂದಿಗೆ ಹೊರಟಿದ್ದ ಅಭಿನವ್ ಎಲ್ಲಿ ಹೋದ? ಅಕಸ್ಮಾತ್ ಇವರ ಕೈಯಲ್ಲಿ ಅಭಿನವ್ ಬದಲು ಬೇರೆ ಯಾರೋ ಕೊಲೆಯಾಗಿದ್ದಾನೆ ಎಂದು ನಂಬಿದರೂ… ಅಭಿನವ್ನಿಂದ ಮುಂದೆ ತೊಂದರೆ ಆಗಬಹುದೆಂದು ಅವನನ್ನೂ ಕೊಂದಿರುವ ಸಾಧ್ಯತೆ ಇದೆ ಅಲ್ಲವಾ? ಅಭಿನವ್ನ ತಂದೆ ಆ ದಿಕ್ಕಿನಲ್ಲಿ ತನಿಖೆ ಮಾಡಲು ಬಿಡುತ್ತಿಲ್ಲ. ಅವರಿಗೆ ತಮ್ಮ ಮಗ ಕಾಣೆಯಾಗಿದ್ದಾನೆ ಎನ್ನುವ ಸುದ್ದಿಯೇ ಹೊರಬಿಡಲು ಅಂಜಿಕೆ.’
ಅವನ ಆಲೋಚನೆಗಳನ್ನು ಮುರಿಯುಲೆಂದೇ ಕಾನ್ಸ್ಟೇಬಲ್ ಒಬ್ಬ ಒಳಬಂದು, ಅವನ ಕೈಯಲ್ಲಿದ್ದ ಒಂದು ಪೇಪರನ್ನು ಕೈಗಿಡುತ್ತಾ,
“ಸರ್, ಯಶವಂತನಗರ ಪೆÇಲೀಸ್ ಸ್ಟೇಶನ್ನಿಂದ ಒಂದು ಮೆಸೇಜ್ ಬಂದಿದೆ. ಅಲ್ಲಿ ಒಂದು ಗುರುತಿಸಲಾರದ ಸ್ಥಿತಿಯಲ್ಲಿರುವ ಒಂದು ಶವ
ಸಿಕ್ಕಿದೆಯಂತೆ. ಸೇಮ್ ಮೋಡಸ್ ಒಪೆರಂಡಿ, ಬೆತ್ತಲೆ ದೇಹ, ಟಾರ್ಚರ್ ಮಾಡಿ ಸಾಯಿಸಿರುವುದು.”
ರಾಜೇಶ್ ಧಡಕ್ಕನೆ ಎದ್ದ…!
‘ಅಂದರೆ ನನ್ನ ಥಿಯರಿ ಕರೆಕ್ಟ್! ಗುರಿ ಅಭಿನವ್ ಇತ್ತು. ಆದರೆ ಬಾಣ ಬೇರೆಯವರಿಗೆ ನೆಟ್ಟಿದೆ.
ಅದಕ್ಕೇ ಇನ್ನೊಮ್ಮೆ ಹೆದೆಯೇರಿಸಿದ್ದಾರೆ. ಅದು ಅಭಿನವ್ಗೆ ನಾಟಿದೆ. ಅವನ ಶವವನ್ನು ಬೇರೆಡೆಗೆ ಕೊಂಡೊಯ್ದು ಬಿಸಾಕಿದ್ದಾರೆ!’
“ಸರ್ ವಿಚಿತ್ರ ಅಂದರೆ, ಅವರೂ ಯಾರೋ
ಪೆÇ್ರಫೆಸರ್ ನಾರಾಯಣ್ ಎನ್ನುವವರನ್ನು ಹುಡುಕುತ್ತಿದ್ದಾರೆ. ಲೈಂಗಿಕ ಕಿರುಕುಳದ ಕೇಸ್ ಅದು. ಆದರೆ ಆ ಶವ ಅವರದ್ದಲ್ಲ. ಅದರಲ್ಲಿಯೂ ಒಂದು ಹುಡುಗಿ ಸಸ್ಪೆಕ್ಟ್.”
ರಾಜೇಶನಿಗೆ ಈಗ ಎಲ್ಲ ನಿಚ್ಚಳವಾಗತೊಡಗಿತು. ಅವನ ಮುಖದಲ್ಲೊಂದು ಅವ್ಯಕ್ತ ನಗು ತುಂಬಿತ್ತು. ಅದು ಎಲ್ಲ ಪೆÇಲೀಸರಿಗೂ ಕ್ರೈಂ ಸಾಲ್ವ್ ಆಗುತ್ತದೆ ಎನ್ನುವ ಸಮಯದಲ್ಲಿ ಅನುಭವಕ್ಕೆ ಬರುವ ಭಾವ. ಅದೊಂದು ರೀತಿಯ ಉದ್ದೀಪನಾಭಾವ, ಅಹಂ ತೃಪ್ತಿಯ ಅನುಭವ. ಕ್ರಿಮಿನಲ್ಗಳಿಗಿಂತ ನಾನು ಒಂದು ಹೆಜ್ಜೆ ಮುಂದಿದ್ದೇನೆ ಎನ್ನುವ ಸಮಾಧಾನ.
‘ಆ ಶವ ಅಭಿನವ್ದೇ ಆಗಿದ್ದರೆ? ಕೇಸ್ ಕ್ಲಿಯರ್…!’
ಅದೊಂದು ಯೋಚನೆ ರಾಜೇಶ್ನ ನರನಾಡಿಗಳಲ್ಲಿ ನವಚೈತನ್ಯ ತುಂಬಿತು.
***
“ಈಗ ನಮ್ಮ ಮುಂದೆ ಎರಡು ಕೊಲೆ ಕೇಸ್ ಇದೆ. ಒಂದು ಲಾಯರ್ ಅಭಿನವ್ ಅವರದ್ದು. ಇನ್ನೊಂದು ಪೆÇ್ರಫೆಸರ್ ನಾರಾಯಣ್ರದ್ದು. ಎರಡೂ ಕೇಸ್ನಲ್ಲಿ ಇಬ್ಬರು ಹುಡುಗಿಯರು ಆಪಾದಿತರು.”
ತಮ್ಮ ಮುಂದೆ ಕುಳಿತು ಎರಡೂ ಕೇಸ್ಗಳ ಬಗ್ಗೆ ಮಾಹಿತಿ ನೀಡಿದ ರಾಜೇಶ್ ಮತ್ತು ಬಲರಾಮ್ನನ್ನು ವಿಚಾರಿಸತೊಡಗಿದರು ಕಮಿಷನರ್.
“ಆ ಹುಡುಗಿ, ರಾಧಿಕಾಗೆ ಪೆÇ್ರಫೆಸರ್ ನಾರಾಯಣ್ ಅವರನ್ನು ಕೊಲ್ಲಲು ಮೋಟಿವ್ ಇದೆ. ಆದರೆ ಅವಳ ವಿರುದ್ಧ ನೀವು ಸಂಗ್ರಹಿಸಿರುವ ಸಾಕ್ಷ್ಯಗಳೆಲ್ಲಾ ಕೇವಲ ಸಾಂದರ್ಭಿಕ ಸಾಕ್ಷ್ಯ; ಅದೂ ಅಭಿನವ್ನ ಕೊಲೆಯತ್ತ ಬೊಟ್ಟು ತೋರುತ್ತದೆ. ತಮ್ಮ ಜೀವಮಾನದಲ್ಲಿಯೇ ನೋಡಿರದ ವ್ಯಕ್ತಿಯನ್ನು ಅವಳೇಕೆ ಕೊಲೆ ಮಾಡುತ್ತಾಳೆ?”
“ಇನ್ನು ಮನೀಷಾ; ಅವಳು, ಅಭಿನವ್ ಅವರ ಲಾ ಫರ್ಮ್ನಲ್ಲಿ ಕೇವಲ ಇಂಟರ್ನ್ ಆಗಿದ್ದಳು. ಅವಳನ್ನು ಅಭಿನವ್ ಜೊತೆ ಇದ್ದದ್ದು ಯಾರೂ ನೋಡಿಲ್ಲ. ಕೇವಲ ಕಾಲ್ ರೆಕಾರ್ಡ್ಗಳಿಂದ ಅಥವಾ ಮೊಬೈಲ್ ಲೋಕೇಶನ್ಗಳಿಂದ ಅವಳು ಮತ್ತು ಅವಳ ಸ್ನೇಹಿತರು ಕೊಲೆ ಮಾಡಿದ್ದಾರೆ ಎಂದು ಹೇಳಲು ಆಗುವುದಿಲ್ಲ. ಯಾಕೆಂದರೆ ಅವರ ವಿರುದ್ಧದ ಸಾಕ್ಷಿಗಳು ತೋರಿಸುತ್ತಿರುವುದು ಪೆÇ್ರಫೆಸರ್ ನಾರಾಯಣ್ ಅವರ ಕೊಲೆಯನ್ನು.”
“ಸರ್, ಒಂದೋ ಈ ಎರಡೂ ಕೊಲೆಗಳನ್ನು ಒಬ್ಬರೇ ಮಾಡಿರಬೇಕು, ಇಲ್ಲಾಂದ್ರೆ ಇಬ್ಬರೂ ಹುಡುಗಿಯರೂ ಸೇರಿ ಮಾಡಿರಬೇಕು.”
ಬಲರಾಮ್ ಕಮಿಷನರ್ ಆಫೀಸಿಗೆ ಬರುವ ಮೊದಲು ರಾಜಪ್ಪ ಎತ್ತಿದ ಸಂಶಯವನ್ನೇ ಅಲ್ಲಿ ಕುಳಿತಿದ್ದವರ ಮುಂದೆ ಎತ್ತಿದ.
ಲಾಯರ್ ರಾಜಾರಾಂ ಬಿಟ್ಟರೆ ಅಲ್ಲಿದ್ದವರೆಲ್ಲರೂ ಎಕ್ಸೈಟ್ ಆದರು.
“ಸರ್, ಎರಡೂ ಕೊಲೆಯ ಮೋಡಸ್ ಒಪೆರಾಂಡಿ ಒಂದೇ ತರಹ. ರಾಧಿಕಾಳ ದ್ವೇಷ ಕಂಡಿದೆ. ಆದರೆ
ಮೋನಿಷಾಳ ದ್ವೇಷ ಏನೆಂದು ತಿಳಿದಿಲ್ಲ ಅಷ್ಟೇ. ಮೋನಿಷಾಳಿಗೆ ಏನೋ ದ್ವೇಷ ಇರಬೇಕು ಎನ್ನುವ ಆಲೋಚನೆಯನ್ನು ಇಟ್ಟುಕೊಂಡು ಮುಂದುವರಿದರೆ, ಇವರಿಬ್ಬರೂ ತಮ್ಮ ತಮ್ಮ ಸ್ನೇಹಿತರೊಡಗೂಡಿ ಯಾಕೆ ಈ ಕೊಲೆಗಳನ್ನು ಮಾಡಿರಬಾರದು? ನಮಗೆ ಕನ್ಫ್ಯೂಸ್ ಮಾಡಲು ಅವರ ಪಾತ್ರಗಳನ್ನು ಅದಲು ಬದಲು ಮಾಡಿಕೊಂಡಿರಬಾರದು?”
ಅವನ ಮಾತುಗಳನ್ನು ಅಲ್ಲಿಯೇ ತಡೆಯುತ್ತಾ ಲಾಯರ್ ರಾಜಾರಾಂ,
“ನೀವೇನು ಪೆÇಲೀಸ್ನವರಾ ಅಥವಾ ಸಿನಿಮಾಗೆ ಕಥೆ ಬರೆಯುವವರಾ? ಮೊದಲನೆಯದಾಗಿ, ಅಭಿನವ್ ಮತ್ತು ಆ ನಾರಾಯಣ್ಗೆ ಯಾವರೀತಿಯ ಸಂಬಂಧವೂ ಇರಲಿಲ್ಲ. ಅದಲ್ಲದೇ ನೀವು ಕಲೆಕ್ಟ್ ಮಾಡಿರುವ ಫೆÇೀನ್ ಲೋಕೇಶನ್ ಮಾಹಿತಿಗಳು, ಕಾಲ್ ರೆಕಾರ್ಡ್ಗಳು ಕೇವಲ ಸಾಂದರ್ಭಿಕ ಸಾಕ್ಷಿಗಳು ಮಾತ್ರ. ಇದನ್ನು ಕೋರ್ಟ್ಗೆ ತೆಗೆದುಕೊಂಡುಹೋದರೆ ಕೇವಲ ಕಾಕತಾಳೀಯ ಎಂದು ಒಂದೇ ನಿಮಿಷದಲ್ಲಿ ನಿಮ್ಮ ಥಿಯರಿ ಡಿಸ್ಮಿಸ್ ಆಗುತ್ತದೆ. ಕೊಲೆಗಾರರು ಅವರೇ ಇರಬಹುದು, ಆದರೆ ಅವರೇ ಎನ್ನುವುದಕ್ಕೆ ಸಾಕ್ಷ್ಯ ಸಾಲದು. ಅದು ಅವರಿಗೂ ಗೊತ್ತಿದೆ. ನಿಮ್ಮ ತನಿಖಾ ಪೆÇ್ರಸೀಜರ್ ಚೆನ್ನಾಗಿ ಗೊತ್ತಿದೆ ಅವರಿಗೆ. ಇಷ್ಟು ಚಾಲಾಕಿತನದಿಂದ ಬಲೆ ಹೆಣೆದವರಿಗೆ, ನೀವು ಫೆÇೀನ್ ಲೋಕೇಶನ್, ರೆಕಾರ್ಡ್ ತೆಗೆಸುತ್ತಿರಾ ಎಂದು ಗೊತ್ತಿರುವುದಿಲ್ಲವೆ? ಅದೆಲ್ಲಾ ಬೇಕೆಂದೇ ಪ್ಲಾಂಟ್ ಮಾಡಿ, ಸಿಕ್ಕಿಹಾಕಿಕೊಂಡು…ನೀವು ಆತುರಾತುರವಾಗಿ ಕೇಸ್ ಕೋರ್ಟಿಗೆ ತೆಗೆದುಕೊಂಡುಹೋದರೆ, ಕೊಲೆಗೆ ಮೋಟಿವ್ ಇಲ್ಲ, ಅಪರಾಧಿ ಎಂದು ನಿರೂಪಿಸಲು ಬೇಕಾದ ಖಚಿತ ಪುರಾವೆ ಇಲ್ಲ ಎಂದು ಹೊರಬರುತ್ತಾರೆ.”
“ಅನುಮಾನದ ಮೇಲೆ ಅರೆಸ್ಟ್ ಮಾಡಿ ವಿಚಾರಣೆ ಮಾಡಬೇಕು ಅಷ್ಟೇ ಈಗ. ಇಬ್ಬರದ್ದೂ ಸೇರಿ ಒಂದು ಟೀಮ್ ಮಾಡಿಕೊಳ್ಳಿ. ಎರಡೂ ಒಂದೇ ಕೇಸ್ ಅಂತ ತನಿಖೆ ಮಾಡಿ” ಕಮಿಷನರ್ ರಾಜೇಶ್ ಮತ್ತು ಬಲರಾಮ್ ಕಡೆಗೆ ನೋಡಿ ಆಜ್ಞಾಪಿಸಿದರು.
“ಎಲ್ಲದಕ್ಕಿಂತ ಮೊದಲು ನೀವು ಮಾಡಬೇಕಾಗಿರುವ ಕೆಲಸ ರಾಧಿಕಾ ಮತ್ತು ಮೊನಿಷಾ ಮಧ್ಯೆ ಏನಾದರೂ ಸಂಬಂಧ ಇದೆಯಾ? ಅವರಿಬ್ಬರಿಗೂ ಇದ್ದ ಕಾಮನ್ ಮೋಟಿವ್ ಏನಿತ್ತು? ಅದು ತಿಳಿಯಿರಿ. ಇಂತಹ ದೊಡ್ಡ ಜಾಲವನ್ನು ಹೆಣೆದಿದ್ದಾರೆ ಅಂದರೆ, ಅವರಿಬ್ಬರ ಮಧ್ಯೆ ಮಾತುಕತೆ ನಡೆದಿರಲೇಬೇಕು. ಹಾಂ…ಕಾಲ್ರೆಕಾರ್ಡ್ ಇವೆಲ್ಲವನ್ನೂ ಬಿಟ್ಟು, ನಿಮ್ಮ ನಿಜವಾದ ಪೆÇಲೀಸಿಂಗ್ ಮಾಡಿ ಕಂಡುಹಿಡಿಯಿರಿ.”
ರಾಜೇಶ್ ಮತ್ತು ಬಲರಾಮ್ ಮೌನವಾದರು. ಅವರಲ್ಲಿದ್ದ ಉತ್ಸಾಹವೆಲ್ಲಾ ಒಂದೇಬಾರಿಗೆ ಇಳಿದುಹೋಯಿತು. ಅವರಿಬ್ಬರೂ ಆಗಲೇ ಆ ವಿಚಾರದಲ್ಲಿ ತನಿಖೆ ಮಾಡಿಯಾಗಿತ್ತು. ರಾಧಿಕಾ ಮತ್ತು ಮೊನಿಷಾ ಮಧ್ಯೆ ಅನುಮಾನ ಪಡುವಂತಹ ಯಾವ ಸಂಬಂಧ ಕೂಡಾ ಎಸ್ಟಾಬ್ಲಿಶ್ ಮಾಡಲು ಆಗಿರಲಿಲ್ಲ.
ಅವರ ಮುಖ ನೋಡಿಯೇ ಅದನ್ನು ಅರ್ಥಮಾಡಿಕೊಂಡ ರಾಜಾರಾಂ,
“ಗೊತ್ತಾಯಿತು…ಸರಿ, ಆ ಇಬ್ಬರೂ ಹುಡುಗಿಯರನ್ನು ಇಲ್ಲಿಗೆ ಕರೆಯಿಸಿ, ಅವರನ್ನು ನನ್ನ ಮುಂದೆಯೇ ವಿಚಾರಣೆ ಮಾಡಿ.”
“ಸರ್, ಅದು ಕಾನೂನಿಗೆ ವಿರುದ್ಧ. ಒಬ್ಬಳು ಮೊದಲೇ ಕಾನೂನಿನ ವಿದ್ಯಾರ್ಥಿ” ಕಮಿಷನರ್ ಕೊಂಚ ಅಸಮಾಧಾನ ತೋರಿಸಿದರು.
“ಇಲ್ಲಿ ನನ್ನ ಮಗನನ್ನು ದಾರುಣವಾಗಿ ಸಾಯಿಸಲಾಗಿದೆ. ಅವನ ಸಾವಿಗೆ ಕಾರಣರಾದವರು ನಮ್ಮ ಎದುರಿಗೇ ಇದ್ದರೂ ನಿಮಗೆ ಏನೂ ಮಾಡಲಾಗುತ್ತಿಲ್ಲ. ನನಗೆ ನ್ಯಾಯ ಬೇಕು. ಏನೂ ಅರಿಯದ ನನ್ನ ಮಗನನ್ನು ಸಾಯಿಸಲಾಗಿದೆ. ಸಾಕ್ಷಿಗಳು ಇಲ್ಲವೆಂದರೇನು, ಅವರ ತಪೆÇ್ಪಪ್ಪಿಗೆ ಪಡೆದರೆ ಸಾಕು. ಅವರನ್ನು ನೇಣುಗಂಬಕ್ಕೆ ಅಟ್ಟುತ್ತೇನೆ. ವಿಚಾರಣೆ ನನ್ನ ಮುಂದೆಯೇ ಆಗಬೇಕು, ಅಷ್ಟೇ.”
ರಾಜಾರಾಂರವರ ಅಬ್ಬರದ ಧ್ವನಿ ಕೇಳಿ ಮೂವರೂ ಬೆಚ್ಚಿದರು.
“ಅವರಿಬ್ಬರ ಮಧ್ಯೆ ಕಾಮನ್ಲಿಂಕ್ ಇದೆಯಾ ಮತ್ತೆ ನೋಡಿ, ಅದೆಷ್ಟೇ ಹಳೆಯದಾಗಿದ್ದರೂ ಪರವಾಗಿಲ್ಲ.”
ಆಗಲಿ ಎಂದು ತಲೆಯಾಡಿಸುತ್ತ ಬಲರಾಮ್ ಕೂಗಿದ
“ರಾಜಪ್ಪಾ…”
***
“ಮೊನಿಷಾ, ನಿಮಗೂ ಅಭಿನವ್ಗೂ ಎಷ್ಟು ದಿನದಿಂದ ಪರಿಚಯ?” ಲಾಯರ್ ರಾಜಾರಾಂ ಗಂಭೀರವಾಗಿ ಪ್ರಶ್ನಿಸಿದರು.
“ಪರಿಚಯ ಏನಿಲ್ಲ ಸರ್. ಅವರ ಆಫೀಸಿನಲ್ಲಿ ಇಂಟರ್ನ್ ಆಗಿದ್ದೆ. ಅದೂ ಆರು ತಿಂಗಳ ಹಿಂದೆ. ಒಬ್ಬ ಇಂಟರ್ನ್ಗೆ ಅಂತಹ ದೊಡ್ಡ ಸಂಸ್ಥೆಯ ಬಾಸ್ ಜೊತೆಗೆ ಸಲುಗೆ ಬೆಳೆಯಲು ಹೇಗೆ ಸಾಧ್ಯ ಸರ್? ನಮಗೇನಿದ್ದರೂ, ಸಣ್ಣಪುಟ್ಟ ವಕಾಲತ್ತು ಡ್ರಾಫ್ಟ್ ಮಾಡುವುದು, ಕೇಸ್ಶೀಟ್ಗಳನ್ನು ಓದಿ ಪಾಯಿಂಟ್ಗಳನ್ನು ಬರೆದುಕೊಟ್ಟು ಅದಕ್ಕೆ ತಕ್ಕ ಸೆಕ್ಷನ್ಗಳನ್ನೂ ಹುಡುಕಿಕೊಡುವುದು ಅಷ್ಟೇ ಕೆಲಸ.”
“ನಮ್ಮ ರೆಕಾರ್ಡ್ನಲ್ಲಿ, ನಿಮ್ಮ ಹೆಸರಿನಲ್ಲಿರುವ ಮೊಬೈಲ್ ನಂಬರ್ನಿಂದ ಅಭಿನವ್ಗೆ ಅನೇಕ ಕಾಲ್ಗಳೂ ಮೆಸೇಜ್ಗಳೂ ಹೋಗಿವೆ.” ರಾಜೇಶ್ ಹೆದರಿಸುವ ಧ್ವನಿಯಲ್ಲಿ ನುಡಿದ.
ಮೊನಿಷಾ ಅದಕ್ಕೆ ಯಾವ ಭಾವವನ್ನೂ ತೋರದೇ,
“ಸರ್, ನೀವು ನನ್ನ ಸಿಮ್ ಅನ್ನು ಕ್ಲೋನ್ ಮಾಡಿಕೊಟ್ಟ ಮೊಬೈಲ್ ಅಂಗಡಿಯವನನ್ನು ಭೇಟಿ ಮಾಡಿಯೇ ಇಲ್ಲ. ಯಾಕೆಂದರೆ ಅದರಿಂದ ನಿಮ್ಮ ಕೇಸ್ ವೀಕ್ ಆಗುತ್ತದೆ. ಆದರೆ ನಾನು ಹೋಗಿದ್ದೇನೆ. ಸಾವಿರ ರೂಪಾಯಿಗೆ ನನ್ನ ನಂಬರ್ ಬೇರೊಬ್ಬರಿಗೆ ಕ್ಲೋನಿಂಗ್ ಮಾಡಿ ಕೊಟ್ಟಿದ್ದಾನೆ. ಅವನ ಹೇಳಿಕೆಯ ವಿಡಿಯೋ ಇದೆ ನನ್ನ ಬಳಿ. ನೀವು ಕೇಸ್ ಹಾಕಿದರೆ ಕೋರ್ಟ್ನಲ್ಲಿ ಎವಿಡೆನ್ಸ್ ಅಂತಾ ತೋರಿಸುತ್ತೇನೆ.’’
“ಯಾರು ಆ ಕ್ಲೋನಿಂಗ್ ಮಾಡಿಸಿದ್ದು?”
ಇನ್ಸಪೆಕ್ಟರ್ ಬಲರಾಮ್ ಉತ್ಸಾಹದಲ್ಲಿ ಕೇಳಿದ. ಅದು ರಾಧಿಕಾ ಎಂದು ಗೊತ್ತಾದರೆ ಕೇಸ್ ಕ್ಲೋಸ್ ಎನ್ನುವ ಭಾವನೆಯಿತ್ತು ಆ ಮಾತಿನಲ್ಲಿ.
“ಅದು ಹುಡುಕುವುದು ನಿಮ್ಮ ಕೆಲಸ. ನನ್ನದಲ್ಲ.”
“ಅಭಿನವ್ ಕಾಣೆಯಾದ ದಿನದ ಸಿ.ಸಿ.ಟಿ.ವಿ. ದೃಶ್ಯದಲ್ಲಿ ನೀನು ಅವನೊಂದಿಗೆ ಹೋಗಿ ಕಾರ್ ಹತ್ತಿರುವುದು ಕಂಡಿದೆ. ಎಲ್ಲಿಗೆ ಹೋದಿರಿ, ಎಷ್ಟುಹೊತ್ತು ಜೊತೆಗಿದ್ದಿರಿ ನೀವಿಬ್ಬರೂ?” ರಾಜಾರಾಂ ಗುಡುಗಿದರು.
ಮೊದಲಿಗೆ ‘ನೀವು’ ಎಂದು ಮಾತಾಡಿಸಿದ್ದು, ಈಗ ಏಕವಚನಕ್ಕೆ ಇಳಿದಿದ್ದನ್ನು ಗಮನಿಸಿದ ಮೊನಿಷಾ ಒಂದೆರಡು ಕ್ಷಣ ಮೌನವಾದಳು.
“ನಿನ್ನ ಮೊಬೈಲ್ ಲೋಕೇಶನ್, ಅಭಿನವ್ನ ಮೊಬೈಲ್ ಲೋಕೇಶನ್ ಜೊತೆಗೆ ಮ್ಯಾಚ್ ಆಗುತ್ತಿದೆ. ನೀನು ಇಲ್ಲ ಎನ್ನಲು ಸಾಧ್ಯವಿಲ್ಲ.”
ಅವಳ ಮುಂದೆ ಅನೇಕ ಪೇಪರ್ಗಳನ್ನೂ, ಕೆಲವು ಫೋಟೋಗಳನ್ನೂ ತಳ್ಳಿದ ರಾಜೇಶ್.
ಅದರ ಕಡೆ ತಿರುಗಿಯೂ ನೋಡದೆ ಮೊನಿಷಾ ಜೋರಾಗಿ ನಗುತ್ತಾ,
“ನೀವು ಹೇಳಿರುವ ಸಮಯಕ್ಕೆ, ನಾನು ಅಲ್ಲಿ ಇರಲೇ ಇಲ್ಲ ಎನ್ನುವುದಕ್ಕೆ ನನ್ನ ಬಳಿ ಪ್ರೂಫ್ ಇದೆ. ನಿಮ್ಮ ಇಲಾಖೆಯ ಇನ್ನೊಂದು ಪೆÇಲೀಸ್ ಸ್ಟೇಶನ್ನಲ್ಲಿ ನಾನು ಅದೇ ಸಮಯಕ್ಕೆ ನನ್ನ ಸ್ಕೂಟಿ ಕಳೆದುಹೋಗಿದೆ ಎಂದು ಕಂಪ್ಲೇಂಟ್ ಕೊಡುತ್ತಿದ್ದೆ. ಬೇಕಾದರೆ ಆ ಸಾಕ್ಷಿ ಕೂಡಾ ತರಿಸಬಹುದು ನೀವು.”
ಎಲ್ಲರೂ ಒಮ್ಮೆ ವಿಚಲಿತರಾದರು. ಏನು ಹೇಳಬೇಕೆಂದು ಯಾರಿಗೂ ತಿಳಿಯಲಿಲ್ಲ.
“ಸರ್, ಹೀಗೆ ಆಗಿರಬಹುದಲ್ಲವೆ? ಯಾರೋ ಆ ಪ್ರೊಫೆಸರ್ ಅವರನ್ನು ಕೊಲೆ ಮಾಡಿ, ನಿಮಗೆಲ್ಲ ಕನ್ಫ್ಯೂಸ್ ಮಾಡಲು, ಹೀಗೇ ಯಾರೋ ರಾನ್ಡಂ ಆಗಿ ಹುಡುಕಿದಾಗ ನಾನು ಸಿಕ್ಕಿ, ನನ್ನನ್ನು ಸಿಗಿಸಿ ಅವರು ಬಚಾವ್ ಆಗಲು ಹೀಗೆ ಮಾಡಿರಬಹುದಲ್ಲವಾ?”
– ಮೊನಿಷಾ ಪ್ರಶ್ನಿಸಿದಳು. ಅವಳ ಪ್ರಶ್ನೆಯಲ್ಲಿ ಗೆದ್ದ ನಗೆಯಿತ್ತು. ತಾನು ತನ್ನ ಕೆಲಸದಲ್ಲಿ ಸಾಧಿಸಬೇಕಿದ್ದು ಸಾಧಿಸಿದೆ ಎನ್ನುವ ಹೆಮ್ಮೆಯಿತ್ತು.
ಅವಳ ಮಾತುಗಳಿಂದ ವಿಚಲಿತರಾದ ರಾಜಾರಾಂ, ಇನ್ಸಪೆಕ್ಟರ್ ಬಲರಾಮ್ನನ್ನು ಪಕ್ಕಕ್ಕೆ ಕರೆದು,
“ಈ ಹುಡುಗಿ ಲಾಯರ್, ಪೊಲೀಸ್ ತನಿಖೆಯ ಶೈಲಿ, ಕಾನೂನು ಎಲ್ಲ ಗೊತ್ತಿದೆ. ಇವಳಿಗೆ ಹೆಚ್ಚು ಒತ್ತಾಯ ಮಾಡಲು ಆಗದು. ಇವಳನ್ನು ಹೊರಗಡೆ ಕುಳ್ಳಿರಿಸಿ, ಇನ್ನೊಂದು ಹುಡುಗಿಯನ್ನು ಕರೆಯಿರಿ. ಅವಳಿಗೆ ಕೊಂಚ ಒತ್ತಡ ಹಾಕಿದರೆ ಬಾಯಿಬಿಡಿಸಬಹುದು.”
ಮೊನಿಷಾ ಚೇಂಬರ್ನಿಂದ ಹೊರಹೋಗುತ್ತಿರುವಂತೆಯೇ ರಾಧಿಕಾ ಒಳಗಡೆ ಪ್ರವೇಶಿಸಿದಳು.
“ಕುಳಿತುಕೊಳ್ಳಿ ಮಿಸ್ ರಾಧಿಕಾ. ನಿಮ್ಮ ಸ್ನೇಹಿತೆ ಮೊನಿಷಾ ನಮ್ಮ ಮುಂದೆ ಎಲ್ಲ ಒಪ್ಪಿಕೊಂಡಿದ್ದಾಳೆ. ಈಗ ನೀವೂ ಒಪ್ಪಿಕೊಂಡರೆ ಇಬ್ಬರಿಗೂ ಶಿಕ್ಷೆ ಕಡಮೆಯಾಗುತ್ತದೆ. ಅಕಸ್ಮಾತ್ ನೀವು ಒಪ್ಪದೇ ಹೋದರೆ, ನಿಮಗೆ ಶಿಕ್ಷೆ ಜಾಸ್ತಿ, ಅವಳಿಗೆ ಕಡಮೆಯಾಗುತ್ತದೆ. ಏನಂತಿರಾ?”
ಗೇಮ್ ಥಿಯರಿಯ ‘ಪ್ರಿಸನರ್ಸ್ ಡೈಲೆಮಾ’ ಎನ್ನುವ ಸ್ಟ್ರಾಟಜಿ ಉಪಯೋಗಿಸಿದರು ರಾಜಾರಾಂ.
ರಾಧಿಕಾ ಎಲ್ಲರ ಮುಖವನ್ನೊಮ್ಮೆ ನೋಡಿ,
“ಯಾರು? ಏನು ಒಪ್ಪಿಕೊಂಡಿದ್ದು? ಓಹ್! ಈಗ ಹೊರಗಡೆ ಹೋದಳಲ್ಲಾ ಅವಳೇನಾ ಪ್ರೊಫೆಸರ್ ನಾರಾಯಣ್ ಅವರನ್ನು ಕೊಂದಿದ್ದು?”
ಯಾವ ಭಾವನೆಗಳನ್ನೂ ಮುಖದಲ್ಲಿ ತೋರದೆ ನುಡಿದಳು ರಾಧಿಕಾ.
“ಹೌದು. ನೀವಿಬ್ಬರೂ ಸೇರಿ ಪ್ಲಾನ್ ಮಾಡಿ ಕೊಲೆಗಳನ್ನು ಮಾಡಿದಿರಿ. ಅವಳು ನಿನ್ನ ವೈರಿ ನಾರಾಯಣ್ನನ್ನು ಕೊಂದಿದ್ದಾಳೆ, ನೀನು ಅವಳ ವೈರಿ ಅಭಿನವ್ನನ್ನು ಕೊಂದಿರುವೆ ಎಂದು ಹೇಳಿಕೆ ಕೊಟ್ಟಿದ್ದಾಳೆ.”
ರಾಜಾರಾಂ ಒಂದೊಂದೇ ಶಬ್ದ ಬಿಡಿಸಿ ಬಿಡಿಸಿ ನುಡಿದರು.
ಆ ಮಾತಿಗೆ ರಾಧಿಕಾಳ ವರ್ತನೆ, ಅವಳು ಕೊಡುವ ಉತ್ತರದಮೇಲೆ ಕೇಸ್ ನಿಂತಿದೆ ಎನ್ನುವ ಅರಿವಿತ್ತು ಅವರಿಗೆ.
“ಅವಳು ಹಾಗೆ ಹೇಳಿದಳು ಅಂತಾ ನೀವು ನಂಬಿಬಿಟ್ಟಿರಾ? ಆ ಹೇಳಿಕೆ ನಿಮ್ಮ ಥಿಯರಿಗೆ ಸೂಟ್ ಆಗುತ್ತೆ ಎಂದು ಅದೇ ನಿಜ ಎಂದು ಒಪ್ಪಿದಿರಾ? ಹೀಗೆಯೇ ನಿಮ್ಮ ಇನ್ಸ್ಪೆಕ್ಟರ್ ಬಲರಾಮ್ ಕೂಡಾ ಹೆದರಿಸಿದ್ದರು. ಆಗಲೂ ಹೇಳಿದ್ದೆ, ಈಗಲೂ ಹೇಳುತ್ತೇನೆ, ಅದಾರೋ ಅಭಿನವ್ ಅಂದಿರಲ್ಲ, ಅವನ ಕೊಲೆಗೆ ಬೇಕಾದ ಮೋಟಿವ್ ತೋರಿಸಿ, ನನಗೆ ಮತ್ತು ಅವನಿಗಿದ್ದ ದ್ವೇಷ ಏನು ಅಂತಾ ಪ್ರೂವ್ ಮಾಡಿ; ಬೇಡ, ನನಗೂ ಅವನಿಗೂ ಪರಿಚಯ ಇತ್ತು ಎಂದಾದರೂ ಪ್ರೂವ್ ಮಾಡಿ ನೋಡೋಣ. ಅದಲ್ಲದೆ, ಯಾವಳೋ ಗೊತ್ತುಗುರಿ ಇಲ್ಲದ ಅಪರಿಚಿತಳಿಗೆ ನಾನು ಯಾಕೆ ಸಹಾಯ ಮಾಡಲಿ? ಅದೂ ಕೊಲೆಯಂತಹ ಅಮಾನುಷ ಕೃತ್ಯ ಎಸಗಿ. ಹಾಗೆ ಮಾಡುವುದಿದ್ದರೆ ಆ ನಾರಾಯಣ್ನನ್ನೇ ಕೊಲೆಮಾಡಿ ಸಂತೋಷದಿಂದ ಜೈಲಿಗೆ ಹೋಗುತ್ತಿದ್ದೆ.”
ಅವಳ ಧೈರ್ಯ ಮತ್ತು ತರ್ಕಬದ್ಧವಾದ ವಾದ ನೋಡಿ ರಾಜಾರಾಂ ಕೂಡಾ ದಂಗಾದರು.
“ಸ್ಟಾಪಿಟ್!…ನಿಮ್ಮಿಬ್ಬರ ನಾಟಕ ಮುಗಿಯಿತು. ನೀವಿಬ್ಬರೂ ಒಬ್ಬರಿಗೊಬ್ಬರು ಪರಿಚಿತರು ಎಂದು ನಮಗೆ ಗೊತ್ತಾಗಿದೆ. ನಿಮ್ಮ ಸ್ನೇಹಿತನೊಬ್ಬ ಅಪ್ರೂವರ್ ಆಗಿ ಬದಲಾಗಿದ್ದಾನೆ” ಇನ್ಸ್ಪೆಕ್ಟರ್ ಬಲರಾಮ್ ಗುಡುಗಿದ.
ರಾಧಿಕಾ ಒಂದೆರಡು ಕ್ಷಣ ಮೌನವಾದಳು. ಅವಳ ಮುಖದಲ್ಲಿ ಯಾವುದೇ ಭಾವನೆಗಳೂ ಇರಲಿಲ್ಲ.
“ನೀನೇ ಒಪ್ಪಿಕೊಳ್ಳುತ್ತೀಯೋ ಅಥವಾ ನಿಜವಾದ ಪೆÇಲೀಸರ ವಿಚಾರಣೆ ಹೇಗಿರುತ್ತದೆ ಎಂದು ತೋರಿಸಲಾ? ಇಬ್ಬರೂ ಸೇರಿ ನಮ್ಮನ್ನು ಚೆನ್ನಾಗಿ ಆಟ ಆಡಿಸಿದಿರಿ. ಇನ್ನು ನಡೆಯದು.”
ಇನ್ನೂ ಎತ್ತರದ ಧ್ವನಿಯಲ್ಲಿ ಅಬ್ಬರಿಸಿದ ಬಲರಾಮ್. ಅವನಿಗೆ ರಾಧಿಕಾಳ ಧೈರ್ಯ ಮುರಿಯಬೇಕಿತ್ತು. ಅವಳಿಗೊಂದು ಸಣ್ಣ ಶಾಕ್ ಕೊಡಬೇಕಿತ್ತು.
ಅವಳ ಒಂದೊಂದು ಕ್ಷಣದ ಮೌನವೂ ಕೇಸ್ ಸಾಲ್ವ್ ಆಗುವ ಹಂತದ ಹತ್ತಿರಕ್ಕೆ ಒಯ್ಯುತ್ತದೆ ಎಂದು ಅಲ್ಲಿದ್ದವರಿಗೆಲ್ಲ ಅನ್ನಿಸತೊಡಗಿತು.
“ಅವನ ಹೇಳಿಕೆಯ ಮೇಲೆ ನನ್ನನ್ನು ಅರೆಸ್ಟ್ ಮಾಡುತ್ತೀರಾ?”
ರಾಧಿಕಾಳ ಪ್ರಶ್ನೆ ಎಲ್ಲರ ಮುಖದಲ್ಲಿಯೂ ಸಣ್ಣ ನಗು ತಂದಿತು. ಅವರು ಬಿಟ್ಟ ಬಾಣ ಸರಿಯಾದ ಜಾಗಕ್ಕೆ ತಲಪಿದೆ ಎಂದು ಅಂದುಕೊಂಡರು. ಯಾರೂ ಉತ್ತರಿಸಲಿಲ್ಲ.
“ಅರೆಸ್ಟ್ ಮಾಡಿ, ಯಾರು ಬೇಡ ಅಂತಾರೆ.
ಆ ನಾರಾಯಣ್ ಕೊಲೆಯಾದ ಸಮಯದಲ್ಲಿ ನಾನು ಮತ್ತು ನನ್ನ ಸ್ನೇಹಿತರು ಅಲ್ಲಿ ಇರಲೇ ಇಲ್ಲ ಎನ್ನುವುದಕ್ಕೆ ನಾನು ಪ್ರೂಫ್ ಕೊಡ್ತೀನಿ. ನಾವು ಮೂವರೂ ಡಿಸ್ಕೋನಲ್ಲಿ ಇದ್ದೆವು ಎನ್ನುವುದಕ್ಕೆ ಅಲ್ಲಿನ ಕ್ಯಾಮರಾಗಳೇ ಸಾಕ್ಷಿ. ನಾನು ಅಲ್ಲಿ ಯಾರೋ
ನನಗೆ ಮೈಮುಟ್ಟಿದ ಎಂದು ಗಲಾಟೆಮಾಡಿದಾಗ ನಿಮ್ಮ ಇಲಾಖೆಯ ಪೆÇಲೀಸರೆ ಬಂದು, ಸಮಾಧಾನ ಮಾಡಿದ್ದು ಎಲ್ಲ ರೆಕಾರ್ಡ್ ಆಗಿದೆ. ಕೋರ್ಟ್ನಲ್ಲಿ ಎಲ್ಲ ತೋರಿಸಿ, ಸುಳ್ಳು ಸಾಕ್ಷಿ ಹೇಳಿದ ಎಂದು ಅವನನ್ನೇ ಜೈಲಿಗೆ ಕಳುಹಿಸುತ್ತೇನೆ. ಅಲ್ಲದೆ ನಿಮಗೂ ಸುಳ್ಳು ಸಾಕ್ಷಿ ಸೃಷ್ಟಿಸಿದ್ದೀರಿ ಎಂದು ಕೋರ್ಟ್ಲ್ಲಿ ಛೀಮಾರಿ ಹಾಕಿಸುತ್ತೇನೆ. ಬೇರೆ ಏನಾದರೂ ಇದ್ದರೆ ಕೇಳಿ ಇಲ್ಲಾಂದ್ರೆ ನಾನು ಹೊರಟೆ” ಎನ್ನುತ್ತಾ ಮೇಲೆದ್ದು ದಡದಡನೆ ಅಲ್ಲಿಂದ ಹೊರನಡೆದಳು.
“ನಾನ್ಸೆನ್ಸ್!”
ಅಬ್ಬರದ ಧ್ವನಿಯಲ್ಲಿ ಕೂಗುತ್ತಾ ಮೇಲೆದ್ದರು ಕಮಿಷನರ್. ಅಲ್ಲಿಯವರೆಗೂ ಎಲ್ಲ ಮಾತುಗಳನ್ನೂ ಕೇಳಿಸಿಕೊಂಡು ಸುಮ್ಮನೆ ಕುಳಿತಿದ್ದ ಅವರ ಸಹನೆಯ ಕಟ್ಟೆ ಒಡೆದಿತ್ತು.
“ನಮ್ಮ ಮುಂದೆ ಎರಡು ಹೈ-ಪ್ರೊಫೈಲ್ ಕೇಸ್ ಇದೆ. ನನ್ನ ಪ್ರಕಾರ ಇದೊಂದು ಪರ್ಫೆಕ್ಟ್ ಕ್ರೈಂ. ಅದನ್ನು ಇಂಥವರೇ ಮಾಡಿದ್ದಾರೆ ಎನ್ನುವ ಸಂಶಯ ಬಲವಾಗಿದೆ. ಆದರೆ ನೀವು ಸರಿಯಾದ ಸಾಕ್ಷಿಗಳನ್ನು ಕಲೆಹಾಕದೆ, ಅವರು ಹೆಣೆದ ಜಾಲದಲ್ಲಿ ಬಿದ್ದಿದ್ದೀರಿ. ಅದಲ್ಲದೇ ಅವರನ್ನು ಹೆದರಿಸಿ, ಬೆದರಿಸಿ, ತಪ್ಪೊಪ್ಪಿಗೆಯ ಹೇಳಿಕೆ ಪಡೆಯಲು ಯತ್ನಿಸಿದಿರಿ. ಅದೂ ಆಗಲಿಲ್ಲ. ಅವರು ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಈ ಕೊಲೆಗಳನ್ನು ಮಾಡಿದ್ದಾರೆ ಎನ್ನುವುದಕ್ಕೆ, ಕೊಲೆಯಾದ ಸಮಯದಲ್ಲಿ ಇನ್ನೊಬ್ಬರು ಆ ಲೋಕೇಶನ್ನಲ್ಲಿ ಇದ್ದರು ಎಂದು ಹೇಳುವ ಫೆÇೀನ್ ಲೊಕೇಶನ್ ಮಾತ್ರ. ಅದೂ ಕಾಕತಾಳೀಯ ಅಂತಾ ಹೇಳಬಹುದು. ಅದು ಅಲ್ಲ ಎಂದು ಪ್ರೂವ್ ಮಾಡಕ್ಕೆ, ಕನಿಷ್ಠ ಆ ಇಬ್ಬರ ಮಧ್ಯೆ ಒಂದು ಲಿಂಕ್ ಇದೆ ಎಂದು ಕೂಡಾ ನಿಮಗೆ ಪ್ರೂಫ್ ತರಲು ಆಗಲಿಲ್ಲ. ಶೇಮ್ ಆನ್ ಯು ಬೋಥ್” ಲಾಯರ್ ರಾಜಾರಾಂ ಏನೋ ಹೇಳ ಹೊರಟರು. ಅವರನ್ನು ಅಲ್ಲಿಯೇ ತಡೆಯುತ್ತಾ…
“ಸರ್, ನಿಮ್ಮ ವಾದಕ್ಕೆ ಒಪ್ಪಿ ನಿಮಗೆ ಸಹಾಯ ಮಾಡಿದೆ. ಈಗ ನಮ್ಮ ಪಾಡಿಗೆ ನಮ್ಮನ್ನು ಬಿಡಿ. ಎಲ್ಲಿಯ ತನಕ ಆ ಇಬ್ಬರು ಹುಡುಗಿಯರ ಮಧ್ಯೆ ಸಂಬಂಧ ಇದೆ ಎಂದು ಪ್ರೂವ್ ಆಗುವುದಿಲ್ಲವೋ ಅಲ್ಲಿಯ ತನಕ ಇದು ಎರಡು ಬೇರೆ ಬೇರೆ ಕೊಲೆ ಕೇಸ್. ಇನ್ನೂ ಸಾಲ್ವ್ ಆಗದ ಕೇಸ್. ಈಗಿರೋ ಸಾಕ್ಷಿಗಳಿಂದ ಏನು ಮಾಡಲಿಕ್ಕೂ ಆಗುವುದಿಲ್ಲ. ಹೊಸ ಸಾಕ್ಷಿ, ಹೊಸ ಆರೋಪಿ ಸಿಕ್ಕಾಗ ನಿಮ್ಮನ್ನೂ ಕರೆಸುತ್ತೇವೆ, ಆಗ ಮಾತಾಡೋಣ.”
ಅವರ ಧ್ವನಿ ಹೊರಗಿನವರೆಗೂ ಕೇಳುತ್ತಿತ್ತು. ಅದನ್ನು ಕೇಳಿಸಿಕೊಂಡ ರಾಧಿಕಾ ಮತ್ತು ಮೊನಿಷಾ ಅಲ್ಲಿಂದ ಹೊರಟರು. ಅವರ ಮುಖದಲ್ಲಿ ಯಾವ ಭಾವನೆಯೂ ಇರಲಿಲ್ಲ.
***
ಕಾಫೀಶಾಪ್ನ ಮೂಲೆಯ ಟೇಬಲ್ನಲ್ಲಿ ಕುಳಿತಿದ್ದ ರಾಧಿಕಾ ತನ್ನೆದುರಿಗಿದ್ದ ರಾಜಪ್ಪನನ್ನೇ
ದುರುಗುಟ್ಟಿಕೊಂಡು ನೋಡುತ್ತಿದ್ದಳು. ಅವಳ ಮುಖದಲ್ಲಿ ಸಿಟ್ಟಿದ್ದರೂ, ಒಳಗಡೆ ಭಯ ಕಾಡುತ್ತಿತ್ತು. ಹಿಂದಿನ ದಿನ ರಾಜಪ್ಪ ಫೆÇೀನಿನಲ್ಲಿ ಕೇಳಿದ ಪ್ರಶ್ನೆ ಅವಳ ಧೈರ್ಯವನ್ನೇ ಉಡುಗಿಸಿತ್ತು.
“ಹೇಳಿ, ಯಾರು ನೀವು? ಯಾಕೆ ಬರಹೇಳಿದ್ದು ಇಲ್ಲಿಗೆ?”
“ನಿನ್ನೆ ನಾನು ಫೆÇೀನಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಬೇಕಿತ್ತು.”
ರಾಧಿಕಾ ಮಾತಾಡಲಿಲ್ಲ.
“ಆರು ತಿಂಗಳ ಹಿಂದೆ ನೀವು ಆತ್ಮಹತ್ಯೆ ಪ್ರಯತ್ನ ಮಾಡಿದಾಗ ನಿಮ್ಮನ್ನು ಉಳಿಸಿದ್ದು ಯಾರು?”
ರಾಜಪ್ಪ ಉತ್ತರ ಗೊತ್ತಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ ಎಂದು ಅರಿವಾಗಿತ್ತು. ಅದೊಂದು ಪ್ರಶ್ನೆಯೇ ಅವಳ ರಹಸ್ಯವನ್ನೆಲ್ಲ ಹೊರಗೆಳೆಯಬಲ್ಲದು ಎಂದು ಅರಿವಾಗಿ ಮೌನವಾದಳು.
ಅದೇ ಸಮಯಕ್ಕೆ ನಾಲ್ಕು ಜನ ಹುಡುಗರೊಂದಿಗೆ ಮೊನಿಷಾ ಕಾಫೀಶಾಪ್ನ ಒಳಗಡೆ ನುಗ್ಗಿದಳು. ರಾಜಪ್ಪ ತಲೆಯೆತ್ತಿ ನೋಡಿದ. ಮೊನಿಷಾಳ ಇಬ್ಬರು ಸ್ನೇಹಿತರು ಮತ್ತು ರಾಧಿಕಾಳ ಇಬ್ಬರು ಸ್ನೇಹಿತರು ಅವನ ಅಕ್ಕಪಕ್ಕದಲ್ಲಿ ಕುಳಿತುಕೊಂಡರು.
“ನಿಮ್ಮಿಬ್ಬರಿಗೂ ಒಬ್ಬರಿಗೊಬ್ಬರ ಪರಿಚಯ ಇದೆ ಎಂದು ಈಗ ಪ್ರೂವ್ ಆಯಿತಲ್ಲ” ವ್ಯಂಗ್ಯವಾಗಿ ನುಡಿದ ರಾಜಪ್ಪ.
ಕಳೆದ ಎರಡು ತಿಂಗಳಿನಿಂದ ಬೆನ್ನುಹತ್ತಿದ ಬೇತಾಳನಂತೆ ರಾಧಿಕಾಳ ಹಿಂದೆ ಬಿದ್ದಿದ್ದ ರಾಜಪ್ಪ. ಅವನ ಪ್ರಕಾರ ಪರ್ಫೆಕ್ಟ್ ಕ್ರೈಂ ಎನ್ನುವುದು ಯಾವುದೂ ಇಲ್ಲ. ಸಾಕ್ಷಿಗಳು ಸಿಕ್ಕಿರಲ್ಲ, ತನಿಖೆ ಸರಿಯಾಗಿರಲ್ಲ ಅಷ್ಟೇ. ಬಲರಾಮ್ಗೆ ತಿಳಿಯದಂತೆ, ರಾಧಿಕಾ ಮತ್ತು ಮೊನಿಷಾಳ ಮಧ್ಯೆ ಏನಾದರೂ ಲಿಂಕ್ ಇದೆಯೇ ಎನ್ನುವ ಹುಡುಕಾಟದಲ್ಲಿ ರಾಧಿಕಾಳನ್ನು ನೆರಳಿನಂತೆ ಹಿಂಬಾಲಿಸಿದ್ದ.
“ಅಂದರೆ ನಿಮಗೆಲ್ಲ ಗೊತ್ತಾಗಿದೆಯಾ?”
ನಡುಗುವ ಧ್ವನಿಯಲ್ಲಿ ಕೇಳಿದಳು ರಾಧಿಕಾ. ಅವಳ ಧೈರ್ಯ ಉಡುಗಿತ್ತು. ಯಾವ ಸತ್ಯವನ್ನು ಅಡಗಿಸಿಟ್ಟುಕೊಂಡಿದ್ದಳೋ ಅದು ಹೊರಗೆ ಬಂದಾಗಿದೆ ಎನ್ನುವ ಭಯ ಮೂಡಿತ್ತು.
“ಬೇಡ ರಾಧೀ, ಏನೂ ಮಾತಾಡಬೇಡ. ಅವರಿಗೆ ಏನೂ ಪ್ರೂವ್ ಮಾಡಲು ಆಗುವುದಿಲ್ಲ…” ಧನುಶ್ ಕೂಗಿದ.
ರಾಜಪ್ಪನ ಮುಖದಲ್ಲಿ ಕಿರುನಗೆ ಮೂಡಿತು.
ಮೊನಿಷಾ ಕುಸಿದು ಕುಳಿತಳು. ಅವರೆಲ್ಲ ಸೇರಿ ಹೆಣೆದಿದ್ದ ವರ್ಣಜಾಲ ಮುರಿದುಬೀಳುವುದರಲ್ಲಿತ್ತು! ಅವಳ ತಾಳ್ಮೆಯ ಕಟ್ಟೆ ಒಡೆದಿತ್ತು. ಅಲ್ಲಿಯವರೆಗೂ
ತೋರುತ್ತಿದ್ದ ಧೈರ್ಯ ಉಡುಗಿತ್ತು.
“ಸರ್, ನಾನು ಮತ್ತು ರಾಧಿಕಾ ಒಂದೇ ದೋಣಿಯ ಪಯಣಿಗರು. ನಾರಾಯಣ್ನಿಂದ ರಾಧಿಕಾ ನೇರವಾಗಿ ಶೋಷಣೆಗೆ ಒಳಗಾಗಿದ್ದರೆ, ನಾನು ಆ ನೀಚ ಅಭಿನವ್ನಿಂದ. ಅಭಿನವ್ ಒಬ್ಬ ವಿಕೃತ ಮನುಷ್ಯ. ಮೇಲುನೋಟಕ್ಕೆ ಸಭ್ಯನ ವೇಷ ಹಾಕಿದ, ಆದರೆ ಒಳಗಿನಿಂದ ಕೀಚಕ ಬುದ್ಧಿಯವನು. ಅವನಿಗೆ ಸಹಕರಿಸದಿದ್ದರೆ ನನ್ನ ಇಡೀ ಕೆರಿಯರ್ ಹಾಳುಮಾಡುತ್ತೇನೆ ಎಂದು ಹೆದರಿಸಿದ್ದ, ಹಾಗೆ ಮಾಡಿಯೂ ಇದ್ದ. ಅವನ ಭಯಕ್ಕೆ ಯಾರೂ ಮಾತಾಡುತ್ತಿರಲಿಲ್ಲ.”
“ರಾಧಿಕಾ ನಿನಗೆ ಹೇಗೆ ಸಿಕ್ಕಿದಳು?”
“ನಾರಾಯಣ್ನ ಕಾಟ ತಡೆಯಲಾಗದಾಗ, ರಾಧಿಕಾ ಆತ್ಮಹತ್ಯೆಗೆ ಪ್ರಯತ್ನಿಸಿದಾಗ, ನನ್ನ ಸ್ನೇಹಿತರು ಅವಳನ್ನು ಬಚಾವ್ ಮಾಡಿದರು.”
“ನೀವು ಪೆÇಲೀಸರ ಬಳಿ ಹೋಗಬಹುದಿತ್ತಲ್ಲವೆ?”
ರಾಧಿಕಾ ಅಳಲು ಪ್ರಾರಂಭಿಸಿದಳು.
“ನೀವೂ ಪೆÇಲೀಸರೇ. ನಿಮಗೂ ತಿಳಿದಿದೆ, ಅಲ್ಲಿ ತಾಕತ್ತು, ಹಣ, ವಶೀಲಿ ಹೇಗೆ ಕೆಲಸ ಮಾಡುತ್ತದೆ ಎಂದು.”
ರಾಜಪ್ಪ ಗಂಭೀರನಾದ. ಎಲ್ಲ ಈಗ ನಿಚ್ಚಳ! ಎಲ್ಲರೂ ಸೇರಿ ಕೊಲೆ ಮಾಡಿದ್ದಾರೆ!
“ಇಬ್ಬರೂ ಸೇರಿ ಪ್ಲಾನ್ ಮಾಡಿ ಆವರಿಬ್ಬರನ್ನೂ ಮುಗಿಸಿದಿರಿ. ಅದಕ್ಕೆ ನಿಮ್ಮ ಸ್ನೇಹಿತರೂ ಸಹಾಯ ಮಾಡಿದ್ದಾರೆ.”
ಯಾರೂ ಮಾತಾಡಲಿಲ್ಲ…!
“ಸೊ, ಪರ್ಫೆಕ್ಟ್ ಪ್ಲಾನಿಂಗ್!” ತನ್ನ ಮುಂದಿದ್ದ ಟೇಬಲ್ ಗುದ್ದಿ ನುಡಿದ ರಾಜಪ್ಪ.
“ಮೊದಲು ಇಬ್ಬರೂ ಅವರವರ ಟಾರ್ಗೆಟ್ ಜೊತೆ ಓಡಾಡಿ, ಮಾತಾಡಿ, ಒಂದು ಡಿಜಿಟಲ್ ರೆಕಾರ್ಡ್ ಸೃಷ್ಟಿ ಮಾಡಿ, ಅವರನ್ನು ಎಲ್ಲೋ ಹೊರಗಡೆ ಹೋಗುವ ನೆಪದಲ್ಲಿ ಕರೆದೊಯ್ದಿರಿ. ಅವರೊಂದಿಗೆ ಹೋಗುವಾಗ ಅದಲು ಬದಲು ಆಗಿ ಒಬ್ಬರು ಇನ್ನೊಬ್ಬರ ಟಾರ್ಗೆಟ್ ಸಾಯಿಸುವುದು, ಅದೇ ಸಮಯಕ್ಕೆ ಇನ್ನೊಬ್ಬರು ಬೇರೆಲ್ಲೋ ಒಂದು ಸಾಕ್ಷ್ಯ ಸೃಷ್ಟಿಸಿಕೊಂಡು ಆಪಾದನೆ ತಮ್ಮ ಮೇಲೆ ಬರದಂತೆ ನೋಡಿಕೊಳ್ಳುವುದು. ಒಂದೇ ರೀತಿಯ ಕೊಲೆ, ಪೆÇಲೀಸರು ಇದನ್ನು ಯಾರಾದರೂ ಸೀರಿಯಲ್ ಕಿಲ್ಲರ್ ಮಾಡಿರಬಹುದೆ ಎಂದು ತಿಳಿದು ಕನ್ಫ್ಯೂಸ್ ಆಗಲಿ ಎಂದು ತಾನೇ? ಎಲ್ಲಿಯೂ ನೀವಿಬ್ಬರೂ ಪರಿಚಿತರು ಎನ್ನುವ ಸಂಶಯ ಬರದಂತೆ ನಡೆದುಕೊಂಡು, ಪೆÇಲೀಸರನ್ನು ಮತ್ತಷ್ಟು ಗೊಂದಲಕ್ಕೆ ಈಡುಮಾಡಿದಿರಿ. ಬಲರಾಮ್ ಮತ್ತು ರಾಜೇಶ್ ಇಬ್ಬರೂ ಆತುರದ ಬುದ್ಧಿಯವರು, ತಮಗೆ ಸಿಕ್ಕ ಸಣ್ಣಪುಟ್ಟ ಸಾಕ್ಷಿಗಳಿಂದಲೇ ಕೇಸ್ ಹಾಕಲು ಪ್ರಯತ್ನಿಸುತ್ತಾರೆ. ಆಗ ನೀವು ಸಲೀಸಾಗಿ ಹೊರಬರಬಹುದು ಎನ್ನುವ ಕಾರಣಕ್ಕೆ, ಶವವನ್ನು ದೂರದಲ್ಲೆಲ್ಲೋ ಬಿಸಾಡದೆ, ಇವರಿಬ್ಬರ ಸ್ಟೇಶನ್ ಪರಿಧಿಯಲ್ಲಿ ಬಿಸಾಡಿದಿರಿ. ಅದೂ ಹೈಸೊಸೈಟಿ ಎನ್ನುವುದು ನಿಮ್ಮ ಪ್ಲಾನ್ ಅಲ್ಲವೆ? ನೀವು ಮಾಡಿದ್ದು ಪರ್ಫೆಕ್ಟ್ ಕ್ರೈಂ ಎಂದುಕೊಂಡಿರಿ. ಆದರೆ ಹಾಗೆ ಯಾವುದೂ ಇಲ್ಲ ಎಂದು ತಿಳಿದಿರಲಿಲ್ಲ. ಸಿಕ್ಕಿಹಾಕಿಕೊಂಡಿರಿ” ವ್ಯಂಗ್ಯವಾಗಿ ನಕ್ಕ ರಾಜಪ್ಪ.
ರಾಧಿಕಾಳ ಕಣ್ಣಲ್ಲಿ ದಳದಳ ನೀರು ಸುರಿಯಲು ತೊಡಗಿತು.
“ಸರ್, ನಿಮಗೂ ಹೆಣ್ಣುಮಕ್ಕಳು ಇದ್ದರೆ, ಈ ರೀತಿಯ ಶೋಷಣೆಯಲ್ಲಿ ಅವರಿಗಾಗುವ ನೋವು, ಅವಮಾನ, ಭಯ ಎಲ್ಲವೂ ತಿಳಿಯುತ್ತಿತ್ತು. ನೀವು ಒಬ್ಬ ಪೆÇಲೀಸ್ ಆಗಿ ಯೋಚಿಸಿದರೆ ನಾವು ಮಾಡಿರುವುದು ತಪ್ಪು; ಆದರೆ ಒಬ್ಬ ತಂದೆಯಾಗಿಯೋ ಒಬ್ಬ ಅಣ್ಣನಾಗಿಯೋ ಅಥವಾ ಒಬ್ಬ ಸ್ನೇಹಿತನಾಗಿಯೋ ಯೋಚಿಸಿ. ಇಂತಹ ನರರಾಕ್ಷಸರಿಂದ, ಸ್ತ್ರೀ-ಪೀಡಕರಿಂದ ಹೇಗೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು? ತಾನು ಏನೋ ಸಾಧನೆ ಮಾಡುತ್ತೇನೆ ಎನ್ನುವ ಹುಮ್ಮಸ್ಸಿನಿಂದ ಬಂದ ಹುಡುಗಿಯರನ್ನು ತಮಗಿರುವ ಸ್ಥಾನ, ಶಕ್ತಿ, ಹಣ, ತೋಳ್ಬಲದಿಂದ ಕುಗ್ಗಿಸಿ, ಅವಳನ್ನು ತಮ್ಮ ತೆವಲಿಗೆ ಬಲಿಯಾಗಿಸಿಕೊಳ್ಳುತ್ತಾರಲ್ಲ, ಅವರಿಗೆ ಯಾವ ಶಿಕ್ಷೆ ಕೊಡಬೇಕು? ಕಾನೂನಿನಲ್ಲಿ ಅವರಿಗಿರುವ ಶಿಕ್ಷೆ ಮೂರು ವರ್ಷ! ಆದರೆ ಅವರಿತ್ತ ಜೀವಮಾನವೆಲ್ಲಾ ಮರೆಯಲಾರದ ನೋವು? ಅದಕ್ಕಾವ ಶಿಕ್ಷೆ?”
“ಸರ್, ಆ ಕ್ಷಣಕ್ಕೆ ನಮಗೆ ಸರಿ ಎನಿಸಿದ್ದು ನಾವು ಮಾಡಿದೆವು. ನಮ್ಮಿಂದ ಕಾನೂನಿನ ಪ್ರಕಾರ ಅಪರಾಧ ಆಗಿರುವುದು ನಿಜ. ಆದರೆ ಆ ಅಪರಾಧದಿಂದ ಮತ್ತಷ್ಟು ಹೆಣ್ಣುಮಕ್ಕಳ ಬಾಳು ಹಾಳಾಗುವುದನ್ನು ತಪ್ಪಿಸಿದ್ದೇವೆ ಎನ್ನುವ ತೃಪ್ತಿ ನಮಗಿದೆ. ಈ ಕೊಲೆಗಳನ್ನು ನೀವು ಹೇಳಿದಂತೆಯೇ ಮಾಡಿರುವುದು ಹೌದು. ನಮ್ಮ ಪ್ಲಾನಿಂಗ್ನಲ್ಲಿ ಎಲ್ಲಿಯೂ ಲೋಪವಿಲ್ಲ. ನೀವೇನೇ ಹುಡುಕಿದರೂ ನಮ್ಮ ವಿರುದ್ಧ ಯಾವ ಸಾಕ್ಷಿ ಕೂಡಾ ಸಿಗುವುದಿಲ್ಲ. ಅದೇನು ಮಾಡಿಕೊಳ್ಳುವಿರೋ ನೋಡೋಣ. ಮಿಕ್ಕಿದ್ದಕ್ಕೆ ಕೋರ್ಟ್ ಇದೆ.”
ತನ್ನ ಒಳಗಿದ್ದ ಉದ್ವೇಗ ತಡೆಯಲಾರದೆ ನುಡಿದಳು ಮೊನಿಷಾ.
ಅಲ್ಲಿಯವರೆಗೂ ತಡೆದಿದ್ದ ಅವಳ ದುಃಖ ಒತ್ತರಿಸಿಕೊಂಡು ಬಂದಿತು.
ರಾಜಪ್ಪನ ಮುಖದಲ್ಲಿ ಸಂತೃಪ್ತಿಯ ಕಿರುನಗೆ ಮೂಡಿತು. ಅವನ ಎರಡು ತಿಂಗಳ ಶ್ರಮ ಫಲ ಕೊಟ್ಟಿತು. ನಿಧಾನವಾಗಿ ತನ್ನ ಜೇಬಿನಲ್ಲಿದ್ದ ಪೆನ್ಕ್ಯಾಮರಾ ತೆಗೆದು ಟೇಬಲ್ ಮೇಲಿಟ್ಟ. ಅದನ್ನು ನೋಡಿ ಎಲ್ಲರೂ ದಂಗಾದರು. ಅವರಾಡಿದ್ದ ಎಲ್ಲ ಮಾತುಗಳೂ ರೆಕಾರ್ಡ್ ಆಗಿದ್ದವು!
“ನೀವು ತಪ್ಪು ಮಾಡಿದಿರಿ. ನೀವೇ ನಿಮ್ಮ ತಪ್ಪನ್ನು ಕ್ಯಾಮರಾ ಮುಂದೆ ಒಪ್ಪಿಕೊಂಡುಬಿಟ್ಟಿರಿ. ನಿಮಗಿದ್ದ ಮೋಟಿವ್, ನಿಮ್ಮಿಬ್ಬರಿಗಿದ್ದ ಸಂಬಂಧ, ನಿಮಗೆ ಸಹಾಯ ಮಾಡಿದ ನಿಮ್ಮ ಸ್ನೇಹಿತರು, ಅವರ ಪಾಲುದಾರಿಕೆ, ಪೆÇಲೀಸರಿಗೆ ಹೇಗೆ ಸಾಕ್ಷ್ಯ ಸೃಷ್ಟಿಸಿ ಕನ್ಫ್ಯೂಸ್ ಮಾಡಿದಿರಿ ಎನ್ನುವುದು ಈಗ ನಿಚ್ಚಳವಾಗಿದೆ. ನಿಮ್ಮ ಮೇಲೆ ನಮಗೆ ಅನುಮಾನವಿತ್ತು, ಆದರೆ ಸಾಕ್ಷಿ ಇರಲಿಲ್ಲ. ಈಗ ಈ ಎವಿಡೆನ್ಸ್ ಸಾಕು ನಿಮ್ಮನ್ನು ಅರೆಸ್ಟ್ ಮಾಡಲು.”
ತಮ್ಮಡಿಯ ನೆಲ ಬಿರಿದಂತೆ ಭಾಸವಾಯಿತು ಎಲ್ಲರಿಗೂ. ಅಷ್ಟು ಜತನದಿಂದ ಹೆಣೆದಿದ್ದ ವರ್ಣಜಾಲ ಅವರ ಎಮೋಷನಲ್ ಮಾತುಗಳಿಂದ ಬಿದ್ದುಹೋಗಿತ್ತು!
ಮೊನಿಷಾಳಿಗೆ ತಾವೆಂತಹ ಸ್ಥಿತಿಯಲ್ಲಿದ್ದೇವೆ ಎನ್ನುವುದು ಅರ್ಥವಾಗಿತ್ತು. ಇಬ್ಬರ ಮೇಲೆಯೂ, ಕೊಲೆ ಮತ್ತು ಸಾಕ್ಷಿನಾಶ, ಅಲ್ಲದೆ ಇನ್ನೊಂದು ಕೊಲೆಗೆ ಷಡ್ಯಂತ್ರ ರಚಿಸಿದ್ದು… ಎಲ್ಲ ಕೇಸ್ಗಳೂ ಬೀಳುತ್ತವೆ. ಕನಿಷ್ಠ ಜೀವಾವಧಿ ಶಿಕ್ಷೆ!
ಎಲ್ಲರೂ ಮೌನವಾದರು.
ರಾಜಪ್ಪ ಮೇಲೆದ್ದ. ಅವನ ಕೈಯಲ್ಲಿ ಆ ಪೆನ್ಕ್ಯಾಮರಾ ಇತ್ತು.
“ನಿಮ್ಮ ಪರಿಸ್ಥಿತಿಯ ಬಗ್ಗೆ ನನಗೆ ಸಹಾನುಭೂತಿಯಿದೆ. ನಿಮ್ಮ ಉದ್ದೇಶ ಸರಿಯಿದ್ದರೂ ಅದನ್ನು ಸಾಧಿಸಲು ಕಂಡುಕೊಂಡ ಮಾರ್ಗ ತಪ್ಪು! ನಾನು ನಿಜವಾದ ಪೊಲೀಸ್ ಆಗಿದ್ದರೆ, ನಿಮ್ಮನ್ನು ಈ ಕ್ಷಣದಲ್ಲಿಯೇ ಅರೆಸ್ಟ್ ಮಾಡಬೇಕಿತ್ತು. ಈವರೆಗೂ ಪೊಲೀಸರಿಗೆ ಈ ಕೇಸ್ ಹೇಗೆ ಸಾಲ್ವ್ ಮಾಡಬೇಕು ಎಂದು ತಿಳಿದಿಲ್ಲ. ಅದು ಕೇವಲ ನಿಮ್ಮ ತಪ್ಪೊಪ್ಪಿಗೆಯಿಂದ ಮಾತ್ರ ಸಾಧ್ಯ! ಈ ಕೇಸನ್ನು ನಾನೇ ಸಾಲ್ವ್ ಮಾಡಿ, ನನಗೆ ಅಂಟಿರುವ ಕಳಂಕ ತೊಳೆದುಕೊಳ್ಳಬಹುದು ಎಂದು ಯೋಚಿಸಿದೆ. ನಿಮ್ಮನ್ನು ಹಿಡಿದುಕೊಟ್ಟರೆ ನನ್ನ ಕಳಂಕ ತೊಳೆಯಬಹುದೇನೋ, ಆದರೆ ನನ್ನ ಜೀವನ ಸುಧಾರಿಸದು. ನಾನು ಸುಮ್ಮನಿದ್ದರೆ ನಿಮ್ಮಂತಹ ಅನೇಕರ ಜೀವನ ಹಾಳಾಗುವುದನ್ನು ತಪ್ಪಿಸಬಹುದು. ಈ ಕೊಲೆಗಳಿಂದ, ಹೆಣ್ಣುಮಕ್ಕಳ ಪೀಡಕರಿಗೆ ಕೊಂಚ ಭಯ ಬಂದಿದೆ. ನೀವು ಸಿಕ್ಕಿಹಾಕಿಕೊಂಡರೆ ಆ ಭಯ ಹೋಗುತ್ತದೆ. ಅದಾಗುವುದು ಬೇಡ. ಯಾರು ಸರಿ ಯಾರು ತಪ್ಪು ಎನ್ನುವುದಕ್ಕಿಂತ, ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ನಿರ್ಧರಿಸುವ ಕಾಲ ಇದು. ತೆಗೆದುಕೊಳ್ಳಿ ಈ ರೆಕಾರ್ಡ್. ಇನ್ನು ಮುಂದೆ ಯಾರ ಮುಂದೆಯೂ ಯಾವ ಕಾರಣಕ್ಕೂ ಬಾಯಿಬಿಡಬೇಡಿ. ನಿಮ್ಮ ಸತ್ಯ ನಿಮ್ಮಲ್ಲೇ ಸತ್ತುಹೋಗಲಿ. ನಿಮ್ಮ ಕೆಲಸ ಬೇರೆಯವರಿಗೆ ಮಾದರಿ ಆಗುವುದು ಬೇಡ” ಎನ್ನುತ್ತ ತನ್ನಲ್ಲಿದ್ದ ಪೆನ್ ಕ್ಯಾಮರಾವನ್ನು ಟೇಬಲ್ ಮೇಲಿಟ್ಟು ಸರಸರನೆ ಅಲ್ಲಿಂದ ಹೊರಟ ರಾಜಪ್ಪ. (ಮುಗಿಯಿತು)