ತನ್ನೆದುರು ಕುಳಿತಿದ್ದ ಮೂವರೂ ಹುಡುಗರನ್ನು ಎವೆಯಿಕ್ಕದೇ ದೃಷ್ಟಿಸುತ್ತಿದ್ದ ಇನ್ಸಪೆಕ್ಟರ್ ರಾಜೇಶ್. ಸುಮಾರು ಅರ್ಧಗಂಟೆಯಿಂದ ಅವರನ್ನು ಅಲ್ಲಿಯೇ ಕುಳ್ಳಿರಿಸಿ, ಅವರ ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡುವ ಗೋಜಿಗೂ ಹೋಗದೆ, ಅವರಲ್ಲಿ ಒಂದು ರೀತಿಯ ಅವ್ಯಕ್ತಭಯ ತುಂಬಿದ್ದ. ಆ ಮೂವರಲ್ಲಿ ಒಬ್ಬಳು ಮೊನಿಷಾ, ಅವಳಾಗಲೇ ಅನೇಕ ಬಾರಿ ಸಣ್ಣದಾಗಿ ಅತ್ತು, ರಾಜೇಶ್ನನ್ನು ಕೊಂಚ ಕರಗಿಸಲು ಪ್ರಯತ್ನಿಸಿದ್ದಳು. ಆದರೆ ಅವಳ ಅಳು ಅವನನ್ನು ಒಂದಿನಿತೂ ಕರಗಿಸಿರಲಿಲ್ಲ. ಅವನ ಸಿಟ್ಟಿಗೆ ಕಾರಣ ಕಳೆದ ಒಂದುವಾರದಿಂದ ಅವನು ಹುಡುಕುತ್ತಿದ್ದ ಲಾಯರ್ ಅಭಿನವ್.
ಒಂದುವಾರದಿಂದ ದಿನದಲ್ಲಿ ಹದಿನೆಂಟು ಗಂಟೆಗಳ ಕೆಲಸ, ನಿದ್ದೆಗೆಟ್ಟ ಓಡಾಟ, ಮೇಲಧಿಕಾರಿಗಳ ಬೈಗುಳ, ಎಲ್ಲದಕ್ಕಿಂತ ಹೆಚ್ಚಾಗಿ, ಒಂದು ಹೈ-ಪ್ರೊಫೈಲ್ ಮನುಷ್ಯ ಒಂದುವಾರದಿಂದ ಮಾಯವಾಗಿದ್ದಾನೆ, ಅವನ ಬಗ್ಗೆ ಯಾವ ಮಾಹಿತಿಗಳೂ ಹೊರಬರದಂತೆ ತನಿಖೆ ಮಾಡಬೇಕು ಎನ್ನುವ ಒತ್ತಡ; ಎಲ್ಲವೂ ಅವನನ್ನು ದಣಿಸಿದ್ದವು. ಅವನ ಎದುರಿನಲ್ಲಿ ಕುಳಿತಿದ್ದ ಆ ಮೂವರೂ ಆ ಕೇಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದರು.
“ಸರ್, ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ, ನಾವೆಲ್ಲ ಕಾನೂನಿನ ವಿದ್ಯಾರ್ಥಿಗಳು. ನಮಗೂ ಆ ಲಾಯರ್ ಅಭಿನವ್ ಅವರಿಗೂ ಯಾವ ಸಂಬಂಧವಿಲ್ಲ. ಅದಾವ ಆರೋಪದ ಮೇಲೆ ನಮ್ಮನ್ನು ಇಲ್ಲಿ ಕುಳ್ಳಿರಿಸಿದ್ದೀರಿ? ಕಾನೂನಿನ ಪ್ರಕಾರ ಇದು ತಪ್ಪು” ಆವೇಶದಲ್ಲಿ ಅಲ್ಲಿದ್ದ ಒಬ್ಬ ಹುಡುಗ ನುಡಿದ. ಅವನ ಹೆಸರು ಧನುಶ್. ಮೊನಿಷಾ ಜೊತೆ ಸಹಾಯಕ್ಕೆ ಬಂದಿದ್ದ.
“ನಿಮ್ಮ ಕಾನೂನು ಅತ್ತ ಇಡಪ್ಪ. ಹದಿನಾರನೇ ತಾರೀಖಿನಂದು ರವೀಂದ್ರನಗರದ ಆರನೇ ಕ್ರಾಸ್ನ ಕಾಫಿಶಾಪಿನ ಬಳಿ ಏನು ಮಾಡುತ್ತಿದ್ದಿರಿ ನೀವು ಮೂರೂ ಜನ?”
“ನಾವು ಅಲ್ಲಿಗೆ ಹೋಗಿಯೇ ಇಲ್ಲ. ಈಗ ಅದಕ್ಕೂ ನಮ್ಮನ್ನು ಇಲ್ಲಿ ಕುಳ್ಳಿರಿಸುವುದಕ್ಕೂ ಏನು ಸಂಬಂಧ?”
ರಾಜೇಶ್ ತನ್ನ ಮುಂದಿದ್ದ ಲ್ಯಾಪ್ಟಾಪನ್ನು ಅವರತ್ತ ತಿರುಗಿಸಿ, ಅದರಲ್ಲಿದ್ದ ಒಂದು ಸಿ.ಸಿ.ಟಿ.ವಿ. ಚಿತ್ರವನ್ನು ತೋರಿಸುತ್ತಾ,
“ಇದು ನೀವುಗಳೇ ತಾನೆ?” ಪ್ರಶ್ನಿಸಿದ.
ಅದರಲ್ಲಿ ಒಂದು ಹುಡುಗಿ ಲಾಯರ್ ಅಭಿನವ್ನೊಂದಿಗೆ ಕಾಫೀ ಶಾಪ್ನಿಂದ ಹೊರಬಂದು ಅವನೊಂದಿಗೆ ವಿನೋದವಾಗಿ ಮಾತಾಡುತ್ತಾ ಅಭಿನವ್ನ ಕಾರಿನೊಳಗೆ ಕುಳಿತುಕೊಳ್ಳುವುದೂ ಮತ್ತು ಆ ಕಾರಿನೊಳಗೆ ಇನ್ನಿಬ್ಬರು ಹುಡುಗರು ಹತ್ತಿದ ತಕ್ಷಣ ಕಾರು ಶರವೇಗದಲ್ಲಿ ಅಲ್ಲಿಂದ ಮಾಯವಾಗಿದ್ದು ಕಾಣಿಸುತ್ತಿತ್ತು.
ಮೂವರೂ ಒಬ್ಬರನ್ನೊಬ್ಬರು ನೋಡಿಕೊಂಡು,
“ಯಾರೋ ಅಭಿನವ್ ಅವರ ಕಾರಿನಲ್ಲಿ ಹೋದರು ಅಂದರೆ ನಮ್ಮನ್ನು ಯಾಕೆ ಇಲ್ಲಿ ತಂದು ಕೂರಿಸಿದ್ದೀರಿ?”
“ಲಾಯರ್ ಅಭಿನವ್ ನಿಮ್ಮ ಜೊತೆಯೇ ಕಡೆಯದಾಗಿ ಜೀವಂತವಾಗಿ ಕಾಣಿಸಿಕೊಂಡಿದ್ದು.”
ಆ ಮಾತುಗಳು ಕೇಳಿ ಮೂವರೂ ಬೆಚ್ಚಿಬಿದ್ದರು.
“ಅಂದರೆ …” ಧನುಶ್ ತೊದಲಿದ.
“ನೀವು ಕರೆದೊಯ್ದ ಲಾಯರ್ ಅಭಿನವ್ನ ಶವ ಇಂದು ಬೆಳಗ್ಗೆ ನಮಗೆ ದೊರಕಿದೆ. ಅದೂ ವಿಚಿತ್ರ ಸ್ಥಿತಿಯಲ್ಲಿ. ಇಡೀ ದೇಹದ ಮೇಲೆ ಒಂದಿನಿತೂ ಬಟ್ಟೆಯಿಲ್ಲ. ದೇಹದ ಅನೇಕ ಕಡೆ ಚುಚ್ಚಿ ಚುಚ್ಚಿ ಚಿತ್ರಹಿಂಸೆ ಮಾಡಲಾಗಿದೆ. ಅನೇಕ ಕಡೆಗಳ ಚರ್ಮ ಕೀಳಲಾಗಿದೆ. ಯಾರ ಶವ ಎಂದು ಗುರುತು ಸಿಗಬಾರದು ಎಂದು ಮುಖವನ್ನು ಜಜ್ಜಿ, ಹಲ್ಲುಗಳನ್ನೆಲ್ಲಾ ಮುರಿದು, ಮುಖವನ್ನು ವಿಕಾರವಾಗಿ ಮಾಡಲಾಗಿದೆ. ಅವರನ್ನು ಕಡೆಯಬಾರಿಗೆ ಜೀವಂತ ನೋಡಿರುವವರು ನೀವೇ. ಎಲ್ಲಿಗೆ ಹೋಗಿದ್ದಿರಿ, ಎಲ್ಲಿಗೆ ಕರೆದೊಯ್ದು ಟಾರ್ಚರ್ ಮಾಡಿದಿರಿ? ಏನು ಅಂತಹ ದ್ವೇಷ ಅವರ ಮೇಲೆ ನಿಮಗೆ? ನೀವೇ ಹೇಳುತ್ತಿರೋ ಅಥವಾ ಅರೆಸ್ಟ್ ಮಾಡಿದ ಮೇಲೆ ಹೇಳುತ್ತೀರೋ.”
ಮೂವರೂ ಮತ್ತೆ ಮುಖ ಮುಖ ನೋಡಿಕೊಂಡರು. ಅವರ ಮುಖಭಾವನೆಯಲ್ಲಿ ಅವರಿಗೆ ಏನೂ ಅರ್ಥವಾದಂತೆ ಕಾಣಲಿಲ್ಲ.
“ಕಾನೂನಿನ ಪ್ರಕಾರ…” ಧನುಶ್ ಏನೋ ಹೇಳ ಹೊರಟ. ಅವನ ಮಾತುಗಳನ್ನು ಅಲ್ಲಿಯೇ ತಡೆಯುತ್ತಾ ಮೊನಿಷಾ,
“ಸರ್, ನಾನು, ಲಾಯರ್ ಅಭಿನವ್ ಅವರ ಲಾ ಕಚೇರಿಯಲ್ಲಿ ಇಂಟರ್ನ್ ಆಗಿ ಮೂರು ತಿಂಗಳಿದ್ದೆ. ಆಗಲೂ ನನಗೂ, ಅಭಿನವ್ ಸರ್ಗೂ ಯಾವುದೇ ಕಾಂಟ್ಯಾಕ್ಟ್ ಇರಲಿಲ್ಲ. ಬೇಕಾದರೆ ಅಲ್ಲಿ ಯಾರನ್ನು ಬೇಕಾದರೂ ಕೇಳಿ. ಇನ್ನು ಅವರೊಂದಿಗೆ ನಾವು ಮೂವರು ಅಷ್ಟು ಸಲುಗೆಯಿಂದ ಹೋಗುವುದು, ಸಾಧ್ಯವೇ ಇಲ್ಲ ಬಿಡಿ.”
ಅವಳ ಮಾತುಗಳಿಂದ ವಿಚಲಿತನಾಗದ ಇನ್ಸಪೆಕ್ಟರ್ ರಾಜೇಶ್,
“ಈ ಮೊಬೈಲ್ ನಂಬರ್ ನಿಮ್ಮದು ತಾನೇ?”
ತನ್ನ ಮುಂದಿದ್ದ ಮೊಬೈಲ್ ಬಿಲ್ಲುಗಳನ್ನು ಅವಳ ಮುಂದೆ ದೂಡಿದ. ಅದನ್ನು ಆತುರಾತುರವಾಗಿ ಕೈಗೆತ್ತಿಕೊಂಡ ಧನುಶ್, ನಂಬರ್ ಚೆಕ್ ಮಾಡಿ, ಮೊನಿಷಾ ಕೈಗಿತ್ತ. ಅದನ್ನು ನೋಡಿದ ಮೋನಿಷಾಳ ಮುಖದಲ್ಲಿ ಭಯ ತುಂಬಿಕೊಂಡಿತು.
“ಸರ್, ಇದು ನನ್ನ ನಂಬರ್ ಹೌದು…ಆದರೆ ನಾನು ಅವರನ್ನು ಮಾತಾಡಿಸಿಯೇ ಇಲ್ಲ” ತೊದಲಿದಳು. ಅವಳ ಹಣೆಯಲ್ಲಿ ಭಯದ ಸೂಚಕವಾಗಿ ಬೆವರಸಾಲುಗಳು ಕಾಣಿಸಿಕೊಳ್ಳತೊಡಗಿತು.
ಅವಳ ಮಾತುಗಳಿಗೂ ತನಗೂ ಸಂಬಂಧವೇ ಇಲ್ಲವೇನೋ ಎಂಬಂತೆ,
“ನಮ್ಮ ಬಳಿ ಇರುವ ಎವಿಡೆನ್ಸ್ ಪ್ರಕಾರ, ನೀವು ಮತ್ತು ಅಭಿನವ್ ತುಂಬಾ ಕ್ಲೋಸ್. ಯಾವುದೋ ಕಾರಣಕ್ಕೆ ಅವರನ್ನು ಕರೆದೊಯ್ದು, ಅವರನ್ನು ಸಾಯಿಸಿ ಬಿಸಾಡಿದ್ದೀರಿ. ನಿಮ್ಮ ಕಾಲ್ ಡೀಟೈಲ್ಸ್, ನಿಮ್ಮ ಲೋಕೇಶನ್ ಎಲ್ಲವೂ ಅಭಿನವ್ ಅವರ ಮೊಬೈಲ್ ಲೋಕೇಶನ್ನಿನೊಂದಿಗೆ ಮ್ಯಾಚ್ ಆಗ್ತಾ ಇದೆ. ಅಭಿನವ್ ಅವರನ್ನು ಕಡೆಯದಾಗಿ ನೋಡಿದ್ದು, ಮಾತಾಡಿದ್ದು, ಅವರೊಂದಿಗೆ ಇದ್ದಿದ್ದು ನೀವೇ. ಎಲ್ಲ ಸತ್ಯ ಹೇಳಿದರೆ ಸರಿ. ಇಲ್ಲಾಂದ್ರೆ ಪೆÇಲೀಸರಿಗೆ ಸತ್ಯ ಹೇಳಿಸಲೂ ಬರುತ್ತದೆ ಮತ್ತು ಅದೇ ಸತ್ಯ ಎಂದು ಸಾಬೀತು ಮಾಡಲೂ ಬರುತ್ತದೆ.”
ರಾಜೇಶ್ನ ಕಡೆಯ ಮಾತುಗಳು, ಅದನ್ನು ಹೇಳಿದ ರೀತಿ ಕೇಳಿ ಹೆದರಿದ ಮೊನಿಷಾ ತನ್ನ ಕುರ್ಚಿಯಲ್ಲಿಯೇ ಮುದುಡಿದಳು.
***
ನೆರೆದಿದ್ದ ಜನಗಳನ್ನು ಸೀಳಿಕೊಂಡು ಒಳಗಡೆ ಬಂದ ಎಸಿಪಿ ಅರುಣ್ ಪಾಟೀಲ್ನನ್ನು ಕಂಡು ಕಾನ್ಸ್ಟೇಬಲ್ ಮತ್ತು ಇನ್ಸ್ಪೆಕ್ಟರ್ ಬಲರಾಮ್ ಸೆಲ್ಯೂಟ್ ಮಾಡಿದರು. ಅದನ್ನು ಗಮನಿಸದವನಂತೆ, ಪಾಟೀಲ್ ಅಲ್ಲಿ ಕಾಣುತ್ತಿದ್ದ ಇಡೀ ದೃಶ್ಯವನ್ನೊಮ್ಮೆ ಅವಲೋಕಿಸಿದ.
ರಾಮಪ್ರಿಯ ಹೌಸಿಂಗ್ ಸೊಸೈಟಿಯ ಮುಂಭಾಗದ ಗೇಟಿನ ಮುಂದೆ, ಸುಮಾರು ನಲವತ್ತು ವಯಸ್ಸಿನ ವ್ಯಕ್ತಿಯೊಬ್ಬನ ಶವ ಬಿದ್ದಿದೆ. ಶವದ ಮೈಮೇಲೆ ಒಂದು ನೂಲೆಳೆ ಬಟ್ಟೆಯಿಲ್ಲ. ಇಡೀ ದೇಹದ ಮೇಲೆ ಅಲ್ಲಲ್ಲಿ ಯಾವುದೊ ಒಂದು ಚೂಪಾದ ವಸ್ತುವಿನಿಂದ ಚುಚ್ಚಿ, ಚುಚ್ಚಿ ಹಿಂಸಿಸಿದ ಕುರುಹುಗಳಿವೆ. ಮುಖದ ಭಾಗ ತೀವ್ರವಾಗಿ ಜಜ್ಜಿ, ಮುಂಭಾಗದ ಹಲ್ಲುಗಳೆಲ್ಲಾ ಮುರಿದುಹೋಗಿವೆ. ಮೂಗಿನಿಂದ, ಬಾಯಿಂದ ಸುರಿದ ರಕ್ತ ವಾರದಿಂದ ಶೇವ್ ಮಾಡದೇ ಬೆಳೆದಿದ್ದ ಕಪ್ಪು ಬಿಳಿ ಬಣ್ಣದ ಕೂದಲೊಂದಿಗೆ ಬೆರೆತು, ಅಲ್ಲಿಯೇ ಹೆಪ್ಪುಗಟ್ಟಿ, ಆ ವ್ಯಕ್ತಿಯ ಮುಖಚರ್ಯೆಯೇ ಗುರುತಿಸದಾಗದಷ್ಟು ವಿಕಾರವಾಗಿದೆ. ತನ್ನ ಸರ್ವೀಸ್ನಲ್ಲಿ ಅನೇಕ ಕ್ರೈಂ ಸೀನ್ಗಳನ್ನೂ ನೋಡಿದ್ದ ಪಾಟೀಲ್ ಕೂಡಾ ಆ ದೃಶ್ಯ ನೋಡಲಾಗದೆ ತನ್ನ ಮುಖವನ್ನು ಬೇರೆಕಡೆಗೆ ತಿರುಗಿಸಿದ.
ಬೇರೆ ಬೇರೆ ಕೋನಗಳಿಂದ ಮೃತನ ಫೋಟೋ ತೆಗೆಯುತ್ತಿದ್ದವರನ್ನು ‘ಕೊಂಚ ನಿಲ್ಲಿಸಿ’ ಎಂದು ಸನ್ನೆ ಮಾಡಿ, ಬಲರಾಮ್ ಕಡೆ ತಿರುಗಿ,
“ಯಾರು ಈ ವ್ಯಕ್ತಿ, ಇದೇ ಕಾಲೋನಿಯವನಾ, ಯಾರಾದರೂ ಇವನನ್ನು ಗುರುತಿಸಿದರಾ, ಇದೆಲ್ಲಾ ಎಷ್ಟು ಹೊತ್ತಿಗೆ ಆಯಿತು?”
“ಸರ್, ಬೆಳಗ್ಗೆ ಸುಮಾರು ಐದರ ವೇಳೆಗೆ ವಾಚ್ಮನ್ ಈ ಗೇಟ್ ತೆರೆಯಲು ಪ್ರಯತ್ನ ಮಾಡಿದಾಗ ಈ ಶವವನ್ನು ನೋಡಿದ್ದಾನೆ. ಸೊಸೈಟಿಯ ಸೆಕ್ರೆಟರಿಗೆ ವಿಷಯ ತಿಳಿಸಿ ಅವರಿಂದ ನನಗೆ ಫೆÇೀನ್ ಮಾಡಿಸಿದ್ದಾನೆ.”
“ನೋಡಕ್ಕೆ ಭಿಕ್ಷುಕನಂತೆ ಕಾಣುತ್ತಾನೆ. ಇಲ್ಲಿ ಯಾರಾದರೂ ಇವನನ್ನು ಗುರುತು ಹಿಡಿದರಾ?”
“ಸರ್, ಶವದ ಪರಿಸ್ಥಿತಿ ಇಷ್ಟು ಭೀಕರವಾಗಿದೆ. ಹಾಗಾಗಿ ಯಾರೂ ನೋಡಲು ಮುಂದೆಬರುತ್ತಿಲ್ಲ. ಒಂದಿಬ್ಬರು ಧೈರ್ಯ ಮಾಡಿ ಮುಂದೆ ಬಂದರು. ಮುಖ ತೀವ್ರವಾಗಿ ಜಜ್ಜಿ ಹೋಗಿರುವುದರಿಂದ ಅವರಿಗೂ ಗುರುತುಸಿಗಲಿಲ್ಲ.”
ಪಾಟೀಲ್ ಮತ್ತೊಮ್ಮೆ ಶವದ ಕಡೆ ತಿರುಗಿದ. ಆ ಮೃತನ ಎಡತೋಳಿನ ಮೇಲೆ ಇದ್ದ ಚರ್ಮವನ್ನು ಕೀಳಲಾಗಿತ್ತು!
“ಸರ್, ಈ ವ್ಯಕ್ತಿಯ ಸಾವು ನೋಡಿದರೆ ಬೇರೆಕಡೆ ಸಾಯಿಸಿ ಇಲ್ಲಿ ತಂದು ಹಾಕಿದ್ದಾರೆ ಎಂದು ಅನಿಸುತ್ತಿದೆ. ರೈಗರ್ ಮಾರ್ಟಿಸ್ ಗಮನಿಸಿದರೆ ಈ ವ್ಯಕ್ತಿ ಸತ್ತು ಸುಮಾರು ನಾಲ್ಕು ಘಂಟೆಗಳಾಗಿರಬೇಕು. ಪ್ರತಿಷ್ಠಿತರಿರುವಂಥ ಈ ಕಾಲೋನಿಯ ಮುಂದೆ ತಂದು ಶವವನ್ನು ಬಿಸಾಡಿದ್ದಾರೆ ಎಂದರೆ, ಕೊಲೆಗಾರ ನಮಗೆ ಅಥವಾ ಈ ಕಾಲೋನಿಯಲ್ಲಿ ವಾಸ ಮಾಡುವ ಯಾರಿಗೋ ಒಂದು ಮೆಸೇಜ್ ಕೊಡಲೆಂದೇ ಇಲ್ಲಿ ಹಾಕಿದ್ದಾನೆ ಎಂದು ಅನಿಸುತ್ತಿದೆ.”
“ನೋಡು, ಈಗ ಮಾತಾಡಲು ಹೆದರುತ್ತಿರಬಹುದು. ಆಮೇಲೆ ನಿಧಾನಕ್ಕೆ ವಿಚಾರಿಸು. ಯಾರಿಗೆ ಗೊತ್ತು ಇವನನ್ನು ಕಚ್ಚಿದ ಅಥವಾ ಕಚ್ಚಿಸಿದ ಸರ್ಪ ಒಳಗೇ ಇರಬಹುದೇನೋ!” ಸಣ್ಣಗೆ ನಗುತ್ತಾ ನುಡಿದ ಪಾಟೀಲ್.
“ಆ ಸೆಕ್ಯುರಿಟಿಯವನನ್ನು ಕರೆಯಿರಿ” ಎಂದು ಬಲರಾಮ್ ಕೂಗುತ್ತಿದ್ದಂತೆಯೇ ಗುಂಪಿನೊಳಗಿನಿಂದ ಪ್ರೈವೇಟ್ ಸೆಕ್ಯೂರಿಟಿಯವರ ಡ್ರೆಸ್ ಹಾಕಿಕೊಂಡಿದ್ದ, ಸುಮಾರು ಐವತ್ತರ ಆಸುಪಾಸಿನ ವ್ಯಕ್ತಿಯೊಬ್ಬ ಮುಂದೆ ಬಂದು ಸೆಲ್ಯೂಟ್ ಹೊಡೆದು ನಿಂತ.
ಪಾಟೀಲ್ ಅವನ ಕಡೆ ತಿರುಗಿ,
“ಏನಾಯಿತು ಹೇಳು?”
“ಸರ್, ನನ್ನ ಹೆಸರು ರಾಜಪ್ಪ. ಎಂದಿನಂತೆ ಐದು ಗಂಟೆಗೆ ಎದ್ದು ಕಾಂಪೌಂಡ್ ಗೇಟನ್ನು ತೆರೆಯಲು ಬಂದೆ. ಚಿಲಕ ತೆರೆದು ಗೇಟ್ ಎಳೆದಾಗ ಸುಲಭವಾಗಿ ಬರಲಿಲ್ಲ. ಏನಾಗಿದೆ ಎಂದು ನೋಡಲು ಮೊಬೈಲ್ನ ಟಾರ್ಚ್ ಹಾಕಿ ನೋಡಿದಾಗ, ಒಬ್ಬ ವ್ಯಕ್ತಿ ಗೇಟ್ ಹಿಡಿದುಕೊಂಡು ಬಿದ್ದಿದ್ದ. ನೋಡಿದರೇ ಗೊತ್ತಾಗುತ್ತಿತ್ತು ಸತ್ತು ಹೋಗಿದ್ದಾನೆ ಎಂದು. ಏನಕ್ಕೂ ಇರಲಿ ಎಂದು ಒಂದು ಫೆÇೀಟೋ ತೆಗೆದುಕೊಂಡು, ಆಮೇಲೆ ಎಲ್ಲರಿಗೂ ಹೇಳಿದೆ ಸರ್.
ಎನ್ನುತ್ತಾ ತನ್ನ ಮೊಬೈಲಿನಲ್ಲಿದ್ದ ಫೋಟೋ ತೋರಿಸಿದ.
“ಒಹೋ ಎಲ್ಲಾ ಪ್ರೊಸೀಜರ್ಗಳು ತಿಳಿದಿರುವ ಹಾಗಿದೆ?” ವ್ಯಂಗ್ಯವಾಗಿ ಕೇಳಿದ ಬಲರಾಮ್.
“ನಾನೂ ಮೊದಲು ಪೆÇಲೀಸ್ ಕೆಲಸದಲ್ಲಿದ್ದೆ. ಯಾವುದೋ ಕೇಸ್ನಲ್ಲಿ ಸಿಕ್ಕಿಹಾಕಿಕೊಂಡು ಡಿಸ್ಮಿಸ್ ಆಗಿ, ಇಲ್ಲಿ ಕೆಲಸಕ್ಕೆ ಬಂದಿದ್ದೇನೆ.”
ಆ ಫೋಟೋವನ್ನು ಪಾಟೀಲ್ಗೆ ತೋರಿಸುತ್ತಾ,
“ಸರ್, ಈ ಫೋಟೋ ನೋಡಿದರೆ ಈ ವ್ಯಕ್ತಿ ಗೇಟ್ ತೆರೆಯಲು ಪ್ರಯತ್ನಿಸಿದ್ದಾನೆ ಎಂದು ಅನಿಸುತ್ತಿದೆ. ಅಂದರೆ ಈ ವ್ಯಕ್ತಿಯನ್ನು ಇಲ್ಲಿಗೆ ರಾತ್ರಿ, ಹನ್ನೆರಡರಿಂದ ಒಂದು ಗಂಟೆಯ ಒಳಗಡೆ ತಂದು ಹಾಕಿರಬೇಕು.”
“ಇಲ್ಲ ಸರ್, ಸುಮಾರು ಒಂದೂವರೆಗೆ ಕಡೆಯ ವ್ಯಕ್ತಿ ಕಾಲೋನಿ ಒಳಗಡೆ ಬಂದರು. ಅದೂ ಕಾರ್ನಲ್ಲಿ. ಆಗ ಏನೂ ಇರಲಿಲ್ಲ. ಆಗ ಲೈಟ್ ಇತ್ತು.”
“ಮತ್ತೆ ನೀನು ಮೊಬೈಲ್ ಲೈಟ್ನಲ್ಲಿ?” ಪಾಟೀಲ್ ಪ್ರಶ್ನಿಸಿದ.
“ಬೆಳಗ್ಗೆ ನಾನು ಏಳುವ ಹೊತ್ತಿಗೆ ಲೈಟ್ ಇರಲಿಲ್ಲ.”
ರಾಜಪ್ಪನ ಮಾತುಗಳನ್ನು ಅಷ್ಟೇನೂ ಸೀರಿಯಸ್ ಆಗಿ ತೆಗೆದುಕೊಳ್ಳದ ಪಾಟೀಲ್ ಸೀದಾ ತನ್ನ ಜೀಪ್ ಕಡೆ ನಡೆದ. ಅವನಿನ್ನೂ ಜೀಪ್ ಹತ್ತಿರಲಿಲ್ಲ. ರಾಜಪ್ಪ ಓಡೋಡಿ ಬಂದು,
“ಸರ್, ಇನ್ನೊಂದು ಹೇಳುವುದು ಮರೆತಿದ್ದೆ. ಕಳೆದ ಒಂದುವಾರದಿಂದ ದಿನಾಲೂ ಬೆಳಗಿನಜಾವದಲ್ಲಿ ಕರೆಂಟ್ ಇರುವುದಿಲ್ಲ. ಯಾರೋ ಕಿಡಿಗೇಡಿಗಳು ಟ್ರಾನ್ಸ್ಫಾರ್ಮರ್ ಆಫ್ ಮಾಡಿರುತ್ತಿದ್ದರು. ದಿನಾಲೂ ಕರೆಂಟ್ನವರಿಗೆ ಫೋನ್ ಮಾಡಿ ಕರೆಸಿ ಸರಿಮಾಡಿಸುತ್ತಿದ್ದೆವು.”
ಪಾಟೀಲ್ನ ಕಿವಿಗಳು ಚುರುಕಾದವು.
‘ಇವತ್ತು ಮಾಡಿದ ಕೃತ್ಯಕ್ಕೆ …ಕಳೆದ ಒಂದುವಾರದಿಂದ ಪ್ಲಾನಿಂಗ್!…’
***
ಇನ್ಸಪೆಕ್ಟರ್ ಬಲರಾಮ್ ತನ್ನ ಮುಂದಿದ್ದ ಪೋಸ್ಟ್ಮಾರ್ಟಂ ರಿಪೋರ್ಟ್ನ್ನು ಎರಡನೇ ಬಾರಿಗೆ ಓದುತ್ತಿದ್ದ. ಇಡೀ ಕೊಲೆಯನ್ನು ಬಹಳ ವ್ಯವಸ್ಥಿತ ರೀತಿಯಲ್ಲಿ ಮಾಡಲಾಗಿತ್ತು. ಕೊಲೆಯಾದವನ ಗುರುತು ಹತ್ತಬಾರದೆಂದು ಇಡೀ ಮೈಯಲ್ಲಿರುವ ಮಚ್ಚೆಗಳು, ಮಾರ್ಕ್ಗಳು ಇದ್ದ ಜಾಗದಲ್ಲೆಲ್ಲ ಚುಚ್ಚಿ ಮಾರ್ಕ್ ಮಾಡಲಾಗಿತ್ತು. ಕಂಪ್ಯೂಟರ್ ತಂತ್ರಜ್ಞಾನದಿಂದ ಮುಖಚರ್ಯೆಯನ್ನು ಡಿಜಿಟಲಿ ಸೃಷ್ಟಿಮಾಡಲು ಅಸಾಧ್ಯವಾಗುವಂತೆ ಮೂಗನ್ನು ಒಡೆದುಹಾಕಿ, ದವಡೆಯ ಹಲ್ಲನ್ನೂ ಮುರಿದುಹಾಕಲಾಗಿತ್ತು.
‘ಒಬ್ಬ ಭಿಕ್ಷುಕನನ್ನು ಕೊಲೆಮಾಡಲು ಇಷ್ಟೊಂದು ಪ್ಲಾನಿಂಗ್… ಅದರಲ್ಲಿಯೂ ಇಷ್ಟು ದಾರುಣವಾಗಿ ಕೊಲ್ಲುವುದು. ಕೊಲೆಗಾರ ಏನು ಮೆಸೇಜ್ ಕೊಡಲಿಕ್ಕೆ ಹೊರಟಿದ್ದಾನೆ? ಅದು ಅಲ್ಲಿರುವವರನ್ನು ಹೆದರಿಸುವ ಉದ್ದೇಶವೇ? ಅಥವಾ ಇನ್ನೇನಾದರೂನಾ …?’
“ಸರ್, ಆ ಸೆಕ್ಯುರಿಟಿಗಾರ್ಡ್ ಬಂದಿದ್ದಾನೆ” ಎನ್ನುವ ಮಾತುಗಳಿಂದ ಬಾಹ್ಯಪ್ರಪಂಚಕ್ಕೆ ಬಂದ.
ರಾಜಪ್ಪ ಅಪ್ಪಟ ಪೆÇಲೀಸ್ ಶೈಲಿಯಲ್ಲಿ ಸೆಲ್ಯೂಟ್ ಹೊಡೆದು ಕೇಳಿದ,
“ನನ್ನಿಂದ ಏನು ಆಗಬೇಕಿತ್ತು ಸರ್?”
“ನಿನ್ನ ಹೆಸರೇನು, ಮರೆತೇಬಿಟ್ಟೆ.”
“ನಾನು ನಿಮಗೆ ನನ್ನ ಹೆಸರು ಹೇಳಿಯೇ ಇಲ್ಲ ಸರ್. ನನ್ನ ಹೆಸರು ರಾಜಪ್ಪ.”
“ಹಾ…ಗೊತ್ತಾಯಿತು. ಡಿಸ್ಮಿಸ್ ಆಗಿರೋ ಪೆÇಲೀಸ್ ಅಲ್ಲವಾ?” ವ್ಯಂಗ್ಯವಾಗಿ ನುಡಿದ ಬಲರಾಮ್.
“ಈಗ ನನ್ನನ್ನು ಕರೆದಿರುವ ಉದ್ದೇಶ ನನಗೆ ಗೊತ್ತು. ಈ ಹಿಂದೆ ಹೇಳಿದ್ದಕ್ಕಿಂತ ಇನ್ನೂ ಹೆಚ್ಚಿನದ್ದು ಹೇಳುವುದು ಏನೂ ಇಲ್ಲ” ಗಂಭೀರನಾಗಿ ನುಡಿದ ರಾಜಪ್ಪ.
“ಕೇಳುವುದು ಬೇಕಾದಷ್ಟಿದೆ. ನಿಮ್ಮ ಕಾಲೋನಿಯವರು ಹೇಳದ್ದು, ನೀನು ಕಂಡಿದ್ದು ಬಹಳಷ್ಟಿದೆ.”
ರಾಜಪ್ಪ ಮಾತಾಡಲಿಲ್ಲ.
“ನಿಮ್ಮ ಕಾಲೋನಿಯಲ್ಲೆಲ್ಲಾ ಸಿ.ಸಿ.ಟಿ.ವಿ. ಕ್ಯಾಮರಾಗಳಿವೆ. ಆದರೆ ಗೇಟಿನ ಮುಂದೆ ಮಾತ್ರ ಯಾಕಿಲ್ಲ?”
“ಸರ್, ಅಲ್ಲಿರುವವರನ್ನು ಕೇಳಿದರೆ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ. ಆದರೆ ನಿಜ ಏನೆಂದರೆ, ಒಳಗಿರುವವರಿಗೆ ಒಬ್ಬೊಬ್ಬರಿಗೆ ಒಂದೊಂದು ವ್ಯವಹಾರ. ಯಾರೊಂದಿಗೆ ಬಂದೆವು, ಎಷ್ಟು ಹೊತ್ತಿಗೆ ಬಂದೆವು ಎನ್ನುವುದು ಯಾರಿಗೂ ಗೊತ್ತಾಗಬಾರದು ಎಂದು ಅಲ್ಲಿ ಹಾಕಿಸಿರಲಿಲ್ಲ.”
“ಕೊಲೆಯಾದ ಈ ಭಿಕ್ಷುಕನನ್ನು ಎಲ್ಲಿಯಾದರೂ ನೋಡಿದ್ದಿಯಾ?”
“ಇವರನ್ನು ನೋಡಿದರೆ ಭಿಕ್ಷುಕರಂತೆ ಕಾಣುವುದಿಲ್ಲ ಸರ್” ಅದೇ ಗಂಭೀರತೆಯಿಂದ ನುಡಿದ ರಾಜಪ್ಪ.
ಬಲರಾಮ್ ಆಶ್ಚರ್ಯದಿಂದ ತಲೆಯೆತ್ತಿ ನೋಡಿದ. ಅಲ್ಲಿಯವರೆಗೂ ಅವನು ಆ ದೃಷ್ಟಿಯಿಂದ ನೋಡಿರಲಿಲ್ಲ!
“ಸರ್, ಈ ವ್ಯಕ್ತಿಯ ದೇಹ ನೋಡಿ. ಚೆನ್ನಾಗಿ ತಿಂದುಂಡು ಜಿಮ್ನಲ್ಲಿ ಹುರಿಗಟ್ಟಿಸಿದ ದೇಹ ಇದ್ದ ಹಾಗಿದೆ. ಗಟ್ಟಿಯಾದ ಹೊಟ್ಟೆಯಭಾಗ, ಸ್ಟ್ರಾಂಗ್ ಆದ ಕಾಲುಗಳು, ತೊಲೆಯನ್ನು ಹೋಲುವ ನೀಳ ತೋಳುಗಳು…ಇವೆಲ್ಲಾ ತಿರುಪೆ ಎತ್ತಿ ತಿನ್ನುವ ಭಿಕ್ಷುಕನಿಗೆ ಇರಲು ಸಾಧ್ಯವಿಲ್ಲ. ಸತ್ತಿರುವವನ ನಿಜವಾದ ಗುರುತು ಮುಚ್ಚಿಡಲು ಮತ್ತು ನಮ್ಮ ತನಿಖೆಯನ್ನು ಬೇರೆ ದಿಕ್ಕಿಗೆ ತಿರುಗಿಸಲು ಈ ರೀತಿ ಪ್ಲಾನ್ ಮಾಡಲಾಗಿದೆ ಎಂದು ನನಗನಿಸುತ್ತಿದೆ.”
ಅವನ ಮಾತುಗಳಲ್ಲಿನ ‘ನಮ್ಮ’ ಎನ್ನುವ ಪದ ಬಲರಾಮ್ನನ್ನು ಸೆಳೆಯಿತು.
ಆ ಕ್ಷಣಕ್ಕೆ ರಾಜಪ್ಪ ಅಪ್ಪಟ ಪೆÇಲೀಸನಾಗಿದ್ದ!
ಇಪ್ಪತ್ತು ವರ್ಷಗಳ ಅವನ ಅನುಭವ ಮಾತಾಡಿತ್ತು!
“ನೀನು ಹೇಳುವುದು ಸರಿ ಎನ್ನುವುದಾದರೆ ಇದು ಯಾರೋ ಶ್ರೀಮಂತರ ಮನೆಯವನು; ಅವನಾರೆಂದು ತಿಳಿಯಬಾರದೆಂದು ಈ ರೀತಿ ಮಾಡಿದ್ದಾರೆ ಎನ್ನುತ್ತಿಯಾ?”
“ಇರಬಹುದು, ಇಲ್ಲದೆಯೂ ಇರಬಹುದು ಸರ್.”
ಅವನ ಮಾತುಗಳು ಅರ್ಥವಾಗದೇ ತಲೆಯೆತ್ತಿ ನೋಡಿದ ಬಲರಾಮ್.
“‘ಕೊಲೆಯಾದವನು ಯಾರು ಎಂದು ನಮಗೆ ತಿಳಿಯಬಾರದು ಅಂತ ಹೀಗೆ ಮಾಡಿದ್ದಾನೆ’ ಎಂದು ನಾವು ಯೋಚಿಸಲಿ ಎನ್ನುವುದೇ ಅವನ ಉದ್ದೇಶ ಇರಬಹುದಲ್ಲವೇ?”
ರಾಜಪ್ಪನ ಮಾತುಗಳು ನಿಜಕ್ಕೂ ಒಗಟಾಗಿದ್ದವು.
“ಸರ್, ಈಗ ನಮಗೆ ಕೊಲೆಯಾದವನು ಯಾರು ಎಂದು ತಿಳಿದಿಲ್ಲ. ನಮ್ಮ ಪೊಲೀಸ್ ಪ್ರೊಸೀಜರ್ ಪ್ರಕಾರ, ಕೊಲೆಯಾದವನು ಯಾರು ಅಂತ ಮೊದಲು ಹುಡುಕಲು ಪ್ರಯತ್ನ ಪಡುತ್ತೇವೆ. ನಮ್ಮ ಫೋಕಸ್ ಕೊಲೆಮಾಡಿದವನಿಗಿಂತ ಕೊಲೆಯಾದವನ ಮೇಲೆಯೇ ಇರುತ್ತದೆ. ಈ ಮಧ್ಯದಲ್ಲಿ ಕೊಲೆಗಾರ ತಾನು ಮಾಡಿದ ಕೊಲೆಯ ಸಾಕ್ಷಿಗಳನ್ನೆಲ್ಲ ನಾಶಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತಾನೆ. ಅಕಸ್ಮಾತ್ ಸಿಕ್ಕರೂ, ಸರಿಯಾದ ಸಾಕ್ಷಿಗಳಿಲ್ಲ ಎಂದು ಹೊರಗಡೆ ಬರುತ್ತಾನೆ. ಯಾವುದೇ ಕೊಲೆಯ ಇನ್ವೆಸ್ಟಿಗೇಶನ್ನಲ್ಲಿ ಮೊದಲ ಮೂವತ್ತಾರು ಗಂಟೆಗಳು ಅತ್ಯಂತ ಮುಖ್ಯ ಅನ್ನುವ ಪೊಲೀಸ್ ಸೂತ್ರ ಅವನಿಗೆ ಚೆನ್ನಾಗಿ ತಿಳಿದಿರುವ ಸಾಧ್ಯತೆ ಇದೆ. ಆ ಮೂವತ್ತಾರು ಗಂಟೆಗಳಲ್ಲಿ ನಾವು ಕೇವಲ, ಕೊಲೆಯಾದವನು ಯಾರು ಎಂದು ಹುಡುಕಾಡಲಿ ಎನ್ನುವುದು ಅವನ ಉದ್ದೇಶ ಆಗಿರಬಹುದು. ಇದು ಕೇವಲ ನನ್ನ ಗಟ್ಫೀಲಿಂಗ್ ಅಷ್ಟೇ ಸರ್.”
ಬಲರಾಮ್ ತಲೆಯೆತ್ತಿ ರಾಜಪ್ಪನ ಕಡೆ ನೋಡಿದ. ಒಬ್ಬ ಡಿಸ್ಮಿಸ್ ಆದ ಕಾನ್ಸ್ಟೇಬಲ್ ಅಪ್ಪಟ ಕ್ರಿಮಿನಲ್ ಸೈಕಾಲಜಿಸ್ಟ್ ತರಹ ಮಾತಾಡಿದ್ದ.
ಪೆÇಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ಗಳು ಹೇಳಿದ್ದು ಮಾಡುವುದಕ್ಕೆ ಎನ್ನುವ ಧೋರಣೆ ಬಲರಾಮ್ನಲ್ಲಿ ಇತ್ತು. ರಾಜಪ್ಪನ ಮಾತುಗಳು ಅವನ ಆ ಧೋರಣೆಯನ್ನು ಒಂದೇ ಕ್ಷಣದಲ್ಲಿ ಬದಲಾಯಿಸಿಬಿಟ್ಟಿತು.
“ಈಗಿರುವ ಕೆಲಸದಿಂದ ಕೆಲಕಾಲ ರಜೆ ಪಡೆದು, ನನ್ನ ಜೊತೆಗೆ ಈ ತನಿಖೆಯಲ್ಲಿ ಸಹಾಯ ಮಾಡುತ್ತೀಯಾ, ರಾಜಪ್ಪ?”
ಅವನ ಧ್ವನಿಯಲ್ಲಿ ಮೊದಲಿಗಿದ್ದ ಗತ್ತು ಮಾಯವಾಗಿ ಗೌರವ ತುಂಬಿತ್ತು.
ರಾಜಪ್ಪ ಮಾತಾಡಲಿಲ್ಲ. ಹಳೆಯದೆಲ್ಲ ನೆನಪಾಗಿ ಅವನ ಕಣ್ಣಾಲಿಗಳು ತುಂಬಿಕೊಂಡವು. ಕೇವಲ ಹಣದಾಸೆಗೆ ತನ್ನ ಇಡೀ ಪೆÇಲೀಸ್ ಜೀವನವನ್ನೇ ಪಣವಾಗಿ ಇಟ್ಟು, ಜೀವನವೆಲ್ಲ ಭರಿಸುವಷ್ಟು ಕಳಂಕ ಹೊತ್ತಿದ್ದು ನೆನಪಾಯಿತು.
“ಸರ್, ಇದು ನನ್ನ ಭಾಗ್ಯ ಎಂದು ಅಂದುಕೊಳ್ಳುವೆ.”
“ಆದರೆ ಒಂದೇ ತೊಂದರೆ. ನಮಗೆ ಸಿಗುವ ಯಾವುದೇ ವಿಜಯಕ್ಕೂ ನಿನಗೆ ಅಫಿಶಿಯಲ್ ಆಗಿ ಯಾವುದೇ ಕ್ರೆಡಿಟ್ ಕೊಡಲಾರೆ.”
“ಸರ್, ಮನಸ್ಸಿನ ತೃಪ್ತಿಯ ಮುಂದೆ ಅಧಿಕಾರ, ಹಣ, ಗೌರವ ಎಲ್ಲ ನಗಣ್ಯ. ಯಾವುದೋ ವಿಷಗಳಿಗೆಯಲ್ಲಿ ಮಾಡಿದ ತಪ್ಪು ನನ್ನನ್ನು ಇನ್ನೂ ಕಾಡುತ್ತಿದೆ. ನನಗೆ ಕೊಟ್ಟ ಇದೊಂದು ಅವಕಾಶದಿಂದ ನನ್ನ ಮನಸ್ಸಿನಲ್ಲಿರುವ ಆ ಗಿಲ್ಟ್ ಹೋಗಲಾಡಿಸಿಕೊಂಡು, ನನ್ನ ಮಕ್ಕಳ ಎದುರಿಗೆ ತಲೆ ಎತ್ತಿ ನಿಲ್ಲಲು ಸಹಾಯ ಆಗುತ್ತದೆ.”
ಬಲರಾಮ್ ಮುಖದಲ್ಲಿ ಸಂತೋಷ ತುಂಬಿತು. ಈ ಕೇಸ್ ಎರಡು ದೃಷ್ಟಿಕೋನದಿಂದ ತನಿಖೆಯಾಗಬೇಕು ಮತ್ತು ಆ ಎರಡೂ ತನಿಖೆ ಸಮಾನಾಂತರವಾಗಿ ಆಗಬೇಕು ಎಂದು ಅವನಿಗಾಗಲೇ ಅರಿವಾಗಿತ್ತು.
ಅದಕ್ಕೆ ಒಬ್ಬ ನಿಷ್ಠ, ಇಲಾಖೆಯಿಂದ ಹೊರಗಿದ್ದು ಕೆಲಸ ಮಾಡುವ ಸಹಾಯಕ ಬೇಕಿತ್ತು. ಅದು ಅವನಿಗೆ ರಾಜಪ್ಪನಲ್ಲಿ ಸಿಕ್ಕಿದ್ದ.
ಅದೂ ಒಬ್ಬ ಅಪ್ಪಟ ಪೆÇಲೀಸ್ ಬುದ್ಧಿಯವ!
****
ಅಭಿನವ್ ಬೆಂಗಳೂರಿನ ಹೆಸರಾಂತ ಕ್ರಿಮಿನಲ್ ಲಾಯರ್. ಸಣ್ಣವಯಸ್ಸಿನಲ್ಲಿಯೇ ತನ್ನ ತಂದೆ ಲಾಯರ್ ರಾಜಾರಾಂ ಅವರಿಂದ ಪಳಗಿ, ಅವರ ಇಡೀ ಆಫೀಸನ್ನು ತಾನೇ ನಡೆಸುವಷ್ಟು ದೊಡ್ಡವನಾಗಿ ಬೆಳೆದಿದ್ದ. ತನ್ನ ವೈಯಕ್ತಿಕ ಚಾರ್ಮ್ ಮತ್ತು ತಂದೆಗಿದ್ದ ಕಾಂಟ್ಯಾಕ್ಟ್ಗಳಿಂದ ಅದೆಷ್ಟೋ ಗೆಲ್ಲಲಾಗದ ಕೇಸ್ಗಳಲ್ಲಿ ಜಯಸಾಧಿಸಿದ್ದ. ಅವನಿಗಿದ್ದ ಸ್ಪೆಷಾಲಿಟಿ, ಸಾಕ್ಷಿಗಳನ್ನು ಸೃಷ್ಟಿಸುವುದು ಹಾಗೂ ಕಾನೂನಿನಲ್ಲಿರುವ ಸಣ್ಣ ಪುಟ್ಟ ದೋಷಗಳನ್ನೇ ದೊಡ್ಡದು ಮಾಡಿ ನ್ಯಾಯಾಧೀಶರಲ್ಲಿ ದ್ವಂದ್ವ ಹುಟ್ಟಿಸಿ, ತನ್ನ ಕಕ್ಷಿದಾರರಿಗೆ, ಅವರಿಗೆ ಬೇಕಾದ ನ್ಯಾಯ ಕೊಡಿಸುವುದು. ಅವನ ಕಕ್ಷಿದಾರರೆಲ್ಲಾ ಹಣವಂತರು ಹಾಗೂ ಕಾನೂನಿನ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವವರೇ.
‘ನಾನು ವಕೀಲನಾಗಿರುವುದು ಪರಿಪೂರ್ಣ ನ್ಯಾಯಕ್ಕಾಗಿ ಅಲ್ಲ. ನನ್ನ ಕಕ್ಷೀದಾರನಿಗೆ ನ್ಯಾಯ ಕೊಡಿಸುವುದೇ ನನ್ನ ಕೆಲಸ. ನ್ಯಾಯ ಎನ್ನುವುದು ಯಾರ ಕಡೆಯಿಂದ ನೋಡಿದರೆ ಅವರದೇ ಸರಿ ಎನ್ನುವಂತಹದ್ದು. ಹಾಗಾಗಿ ನಾನು ನನ್ನ ಕಕ್ಷಿದಾರನದ್ದೇ ಸರಿ, ಅವನಿಗೆ ಸಮಾಧಾನ ತರುವುದೇ ನ್ಯಾಯ ಎಂದು ನಂಬಿರುವವನು. ಎಲ್ಲ ವಕೀಲರೂ ಇದನ್ನೇ ನಂಬುವವರು. ಆದರೆ ನಾನು ಘಂಟಾಘೋಷವಾಗಿ ಹೇಳುತ್ತೇನೆ ಅಷ್ಟೇ’ ಎನ್ನುತ್ತಿದ್ದ.
ಏಳು ದಿನಗಳ ಹಿಂದೆ, ರಾತ್ರಿ ಸುಮಾರು ಎಂಟುಗಂಟೆಯ ವೇಳೆಗೆ ಯಾರೋ ಹುಡುಗಿಯ ಜೊತೆ ಕಾರಿನಲ್ಲಿ ಹೊರಟವನು ಮತ್ತೆ ಮನೆ ಸೇರಲಿಲ್ಲ. ಬೆಳಗಿನ ತನಕ ಮನೆ ಸೇರದ ಮಗನ ಬಗ್ಗೆ ಆತಂಕಪಟ್ಟ ಅಭಿನವ್ನ ತಂದೆ ರಾಜಾರಾಂ ಸೀದಾ ಕಮಿಷನರ್ ಬಳಿ ಹೋಗಿ ಕಂಪ್ಲೇಂಟ್ ಮಾಡಿದ್ದರು. ಅಭಿನವ್ ಕೈಗೆತ್ತಿಕೊಂಡಿದ್ದ ಹಲವು ಸೆನ್ಸಿಟಿವ್ ಕೇಸ್ಗಳೂ, ಅದರಲ್ಲಿ ಭಾಗಿಯಾಗಿದ್ದ ಹಲವು ಪ್ರಭಾವಿ ವ್ಯಕ್ತಿಗಳೂ ಇದರಿಂದ ಪ್ಯಾನಿಕ್ ಆಗಿಬಿಡುತ್ತಾರೆ ಹಾಗೂ ಅವರ ಕೇಸ್ಗಳ ಮೇಲೆ ಪರಿಣಾಮ ಬೀರಬಹುದು ಎನ್ನುವ ಉದ್ದೇಶದಿಂದ ಇಡೀ ಕೇಸನ್ನು ಗುಪ್ತವಾಗಿಟ್ಟು ವಿಚಾರಣೆ ಪ್ರಾರಂಭಿಸಲಾಗಿತ್ತು.
ಅದರ ವಿಚಾರಣೆ ಮಾಡುತ್ತಿದ್ದ ಇನ್ಸ್ಪೆಕ್ಟರ್ ರಾಜೇಶ್ಗೆ ಮೊಬೈಲ್ ರೆಕಾರ್ಡ್ಗಳನ್ನು ಶೋಧಿಸಿದಾಗ, ಮೊನಿಷಾ ಮತ್ತಿತರರ ಬಗ್ಗೆ ತಿಳಿದು, ಅಲ್ಲಿಂದ ಅವರ ಮತ್ತು ಅಭಿನವ್ನ ಸಂಬಂಧ ತಿಳಿದಿತ್ತು. ಅವರನ್ನು ಕರೆಯಿಸಿ ವಿಚಾರಿಸುವ ಮೊದಲೇ ಅವನಿಗೆ ರೀಗಲ್ ಹೌಸಿಂಗ್ ಸೊಸೈಟಿ ಮುಂದೆ ಒಂದು ಅನಾಥಶವ ಬಿದ್ದಿದೆ, ಅದು ಸರಿಸುಮಾರು ಅವನು ಹುಡುಕುತ್ತಿದ್ದ ಅಭಿನವ್ನ ಹೋಲಿಕೆಯೇ ಇದ್ದುದುದರಿಂದ ಅವನೇ ಎಂದು ಎಣಿಸಿ ತನಿಖೆ ಮುಂದುವರಿಸಿದ್ದ.
“ಸರ್, ಲಾಯರ್ ರಾಜಾರಾಂ ಬಂದಿದ್ದಾರೆ. ಅದೇ ಬಾಡಿ ಗುರುತಿಸಲು ಬರಹೇಳಿದ್ದಿರಿ.”
ರಾಜೇಶ್ ಎದ್ದು ನಿಂತ. ಲಾಯರ್ ರಾಜಾರಾಂ ತಮ್ಮ ಕಣ್ಣುಗಳಲ್ಲಿ ನೀರು ತುಂಬಿಕೊಂಡು ನಿಂತಿದ್ದರು. ವಾರದಿಂದ ಒಂದು ಸುದ್ದಿಯೂ ಇಲ್ಲದೆ ಕಾಣೆಯಾಗಿದ್ದ ಮಗನನ್ನು ನೆನೆದು ಕೊರಗಿಹೊಗಿದ್ದರು.
“ಅದು ಅಭಿನವ್ದೇ ಎಂದು ಗೊತ್ತಾಯಿತಾ?” ನಡುಗುವ ಧ್ವನಿಯಲ್ಲಿ ಕೇಳಿದರು.
“ಗೊತ್ತಿಲ್ಲ ಸರ್. ನೀವು ನೋಡಿದ ಮೇಲೆ ಹೌದೋ ಅಲ್ಲವೋ ಎಂದು ತಿಳಿಯುತ್ತದೆ. ಈಗಾಗಲೇ ಮೂರು ಜನ ಸಸ್ಪೆಕ್ಟ್ಗಳನ್ನು ಐಡೆಂಟಿಫೈ ಮಾಡಿದ್ದೇವೆ” ಶವದ ಮೇಲಿನ ಬಟ್ಟೆ ತೆಗೆಯುತ್ತಾ ನುಡಿದ ರಾಜೇಶ್.
ಆ ಶವವನ್ನು ಸೂಕ್ಷ್ಮವಾಗಿ, ಮೇಲಿನಿಂದ ಕೆಳಗಿನವರೆಗೂ ನೋಡಿ ರಾಜಾರಾಂ,
“ಇದು ನನ್ನ ಮಗ ಅಭಿನವ್ನ ಶವ ಅಲ್ಲ.”
ರಾಜೇಶ್ ದಂಗಾದ. ಅವನ ಇಡೀ ತನಿಖೆ ಸಂಪೂರ್ಣವಾಗಿ ತಲೆಕೆಳಗಾಗುವುದರಲ್ಲಿತ್ತು.
“ಸರ್, ಇನ್ನೊಮ್ಮೆ ನೋಡಿ.”
“ಇನ್ಸ್ಪೆಕ್ಟರ್, ನಾನು ಅವನ ತಂದೆ. ಅವನ ದೇಹದ ಪ್ರತಿಯೊಂದು ಭಾಗವೂ ನನಗೆ ಪರಿಚಿತ. ಇದು ನನ್ನ ಮಗ ಅಲ್ಲ. ನನ್ನ ಮಗ ಕಳೆದ ಹದಿನೈದು ವರ್ಷಗಳಿಂದ ಜಿಮ್ಗೆ ಹೋಗುತ್ತಿದ್ದು ಅವನ ದೇಹವನ್ನು ಮಟ್ಟಸವಾಗಿ ಇಟ್ಟುಕೊಂಡಿದ್ದಾನೆ. ಇವನ ಪಾದಗಳನ್ನು ನೋಡಿ, ವೆರಿಕೊಸ್ ವೆಯ್ನ್ಸ್ನ ಲಕ್ಷಣಗಳಿವೆ. ಈ ವ್ಯಕ್ತಿ ಬಹಳ ಹೊತ್ತು ನಿಂತು ಕೆಲಸ ಮಾಡುತ್ತಿರುವವನು. ಅವನ ಕೊಂಚ ಮುಂದೆ ಬಂದಿರುವ ಹೊಟ್ಟೆ ನೋಡಿದರೆ ಇವನು ಹೊತ್ತು ಹೊತ್ತಿಗೆ ಊಟ ಮಾಡದೆ ಹೊಟ್ಟೆ ಉಬ್ಬರದ ರೋಗ ಇರುವವನಂತೆ ಇದೆ. ಹಾಗಾಗಿ ಇದು ಅಭಿನವ್ನ ಶವ ಅಲ್ಲ!
ರಾಜೇಶ್ ಕಲ್ಲಾದ. ಅವನಿಗೆ ಸಿಕ್ಕಿದ್ದ ಎಲ್ಲಾ ಲೀಡ್ಗಳೂ ಮೊನಿಷಾ ಮತ್ತು ಅವಳ ಸ್ನೇಹಿತರು, ಲಾಯರ್ ಅಭಿನವನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಬಿಂಬಿಸುತ್ತಿದ್ದವು. ಈಗ ಸಿಕ್ಕಿದ್ದ ಶವ ಅಭಿನವ್ ಅವನದ್ದೇ ಆಗಿದ್ದರೆ… ಆ ಎಲ್ಲ ಕೊಂಡಿಗಳೂ ಕೂಡಿಕೊಂಡು… ಅವರೇ ಈ ಅಮಾನುಷ ಕೃತ್ಯ ಎಸಗಿರುವುದೆಂದು ಪ್ರೂವ್ ಆಗಿಬಿಡುತ್ತಿತ್ತು. ಆದರೆ ಆ ಶವ ಲಾಯರ್ ಅಭಿನವ್ದು ಆಗಿರದಿದ್ದುದು ಅವನ ಇಡೀ ಕೇಸ್ ತಿರುವುಮುರುವು ಆಗಿತ್ತು. ಆ ಕ್ಷಣಕ್ಕೆ ಅವನ ಮನಸ್ಸಿನಲ್ಲಿ ತುಂಬಿದ್ದ ಪ್ರಶ್ನೆ,
“ಇದು ಹೇಗೆ ಸಾಧ್ಯ?”
“ಇದು ಅಭಿನವ್ನ ಶವ ಅಲ್ಲ. ಹಾಗಾದರೆ ಆ ಮೂವರು ಹುಡುಗರು ಯಾರು? ಅವರನ್ನೇಕೆ ನೀವು ಸಿಗಿಸಿಹಾಕಿದಿರಿ? ಹೇಗೋ ಕೇಸ್ ಮುಚ್ಚಿಹಾಕೋಣ ಎಂದು ನಿಮ್ಮ ಯೋಜನೆಯಾ? ಶೇಮ್ ಆನ್ ಯು” ಎತ್ತರದ ಧ್ವನಿಯಲ್ಲಿ ಕೂಗಿದರು ಕಮಿಷನರ್.
ಅವರ ಮುಂದೆ ನಿಂತಿದ್ದ ರಾಜೇಶ್ ತಲೆತಗ್ಗಿಸಿದ್ದ. ತನ್ನ ತನಿಖೆಯಲ್ಲಿ ಎಲ್ಲಿ ತಪ್ಪು ನಡೆದಿದೆ ಎನ್ನುವುದು ಅವನ ಅರಿವಿಗೆ ಬರಲಿಲ್ಲ.
“ಅಕಸ್ಮಾತ್ ಆ ಹುಡುಗರಿಗೆ ನಮಗೆ ಸಿಕ್ಕಿರುವುದು ಅಭಿನವ್ ಅವರ ಶವ ಅಲ್ಲ ಎಂದು ತಿಳಿದರೆ ಇಡೀ ಇಲಾಖೆಗೇ ಕೆಟ್ಟ ಹೆಸರು ಗ್ಯಾರಂಟಿ” ಕಮಿಷನರ್ ಗೊಣಗಿದರು.
“ಸರ್, ನನ್ನ ತನಿಖೆಯಲ್ಲಿ ಎಲ್ಲೂ ಲೋಪವಾಗಿಲ್ಲ. ಲಾಯರ್ ಅಭಿನವ್ನ ಕಾಲ್ ರೆಕಾರ್ಡ್ ಜಾಲಾಡಿದಾಗ, ಸಂಶಯ ಪಡುವಂಥ ಒಂದೇ ನಂಬರ್ ಸಿಕ್ಕಿದ್ದು, ಅದು ಮೊನಿಷಾಳದ್ದು. ಅವಳ ನಂಬರ್ನಿಂದ ಅನೇಕ ಬಾರಿ ಅಭಿನವ್ಗೆ ಕಾಲ್ ಹೋಗಿದೆ. ಇವರಿಬ್ಬರ ಲೋಕೇಶನ್ ಕೂಡಾ ಅನೇಕ ಬಾರಿ ಒಂದೇ ಇದೆ. ಅಭಿನವ್ ಕಡೆಯದಾಗಿ ಕಂಡಿದ್ದ ಲೋಕೇಶನ್ನಲ್ಲಿಯೇ ಮೊನಿಷಾಳ ಫೋನ್ ಕೂಡಾ ಇದೆ ಹಾಗೂ ಅಲ್ಲಿಯೇ ಇದ್ದ ಸಿ.ಸಿ.ಟಿ.ವಿ. ಕ್ಯಾಮರಾದಲ್ಲಿ ಇದು ರೆಕಾರ್ಡ್ ಆಗಿದೆ. ಇದೆಲ್ಲಾ ಅವರ ಕಡೆಗೇ ಬೆಟ್ಟುಮಾಡಿ ತೋರುತ್ತಿತ್ತು ಸರ್.”
“ಈ ಶವ ಸಿಕ್ಕಾಗ ಅದು ಅಭಿನವ್ ಅವರದ್ದೇ ಅಂತ ತಿಳಿದು ಬ್ಯಾಕ್ವರ್ಡ್ ತನಿಖೆ ಪ್ರಾರಂಭಿಸಿದೆ. ಶವ ಬಿದ್ದಿದ್ದ ಜಾಗದ ಹತ್ತಿರದ ಟೈರ್ಮಾರ್ಕ್ ಒಂದು ಮಾರುತಿ ವ್ಯಾನ್ದು ಎಂದು ತಿಳಿದು, ಅಲ್ಲಿ ಸುತ್ತಮುತ್ತ ಇರುವ ಸಿ.ಸಿ.ಟಿ.ವಿ. ಕ್ಯಾಮರಾಗಳನ್ನೂ ಜಾಲಾಡಿದಾಗ, ಅದೇ ದಿನ ಬೆಳಗ್ಗೆ ನಾಲ್ಕು ಗಂಟೆಗೆ ಒಂದು ಮಾರುತಿ ವ್ಯಾನ್ ಹೋಗಿದ್ದು, ಅದರಲ್ಲಿ ಒಂದು ಹುಡುಗಿ ಮತ್ತು ಇಬ್ಬರು ಹುಡುಗರು ಇದ್ದಿದ್ದು, ಅದೇ ಸಮಯಕ್ಕೆ ಮೊನಿಷಾ ಮತ್ತು ಅವಳ ಸ್ನೇಹಿತರ ಲೋಕೇಶನ್ ಅದೇ ಏರಿಯಾದಲ್ಲಿ ಇದ್ದಿದ್ದು, ಎಲ್ಲವನ್ನೂ ಒಟ್ಟುಗೂಡಿಸಿದರೆ ಈ ಕೊಲೆ ಅವರೇ ಮಾಡಿದ್ದಾರೆ ಎನ್ನುವಂತಿದೆ. ಅದಕ್ಕೆ ಅವರನ್ನು ಅರೆಸ್ಟ್ ಮಾಡಿದೆ ಸರ್.
“ನಿಮ್ಮಲ್ಲಿರುವ ಸಾಕ್ಷ್ಯ ಅಭಿನವ್ನ ಕೊಲೆ ಮಾಡಿದ್ದಾರೆ ಎಂದು ಹೇಳಲು…ಆದರೆ ಈ ವ್ಯಕ್ತಿ ಅವನಲ್ಲ. ಸೊ …ಈಗ ಆ ಹುಡುಗರನ್ನು ಈ ಕೊಲೆ ಮಾಡಿದ್ದಾರೆ ಎಂದು ಸಂಶಯಪಟ್ಟರೆ? ನಿಮ್ಮ ಬಳಿ ಸಾಕ್ಷಿ ಇಲ್ಲ. ನಿಮ್ಮಲ್ಲಿರುವ ಸಾಕ್ಷಿಯಿಂದ ಅಭಿನವ್ ಬಗ್ಗೆ ತಿಳಿಯಲು ಯಾವ ಆಧಾರ ಕೂಡ ಇಲ್ಲ. ಏನಿದು?”
ರಾಜೇಶ್ ಬಳಿ ಉತ್ತರವಿರಲಿಲ್ಲ!
ತಾನೆಲ್ಲಿ ಎಡವಿದೆ ಎನ್ನುವುದೇ ಅವನಿಗೆ ಅರಿವಾಗಲಿಲ್ಲ!
ಅದೆಲ್ಲದಕ್ಕಿಂತ ಇನ್ನೊಂದು ದೊಡ್ಡ ತಲೆನೋವು ಅವನ ಮುಂದೆ ಬಂದು ಧುತ್ತನೆ ನಿಂತಿತ್ತು.
ತಮಗೆ ಸಿಕ್ಕಿರುವ ಶವ ಯಾರದ್ದು? ಅದಕ್ಕೂ ಆ ಮೂವರು ಹುಡುಗರಿಗೂ ನಿಜವಾಗಿಯೂ ಸಂಬಂಧ ಇದೆಯೆ? ಇಲ್ಲಾ, ಅವರನ್ನು ಯಾರಾದರೂ ಸಿಕ್ಕಿಹಾಕಿಸಲು ಪ್ರಯತ್ನಿಸುತ್ತಿದ್ದಾರೆಯೇ? ಅಥವಾ ಇದೆಲ್ಲಾ ದೊಡ್ಡದೊಂದು ಷಡ್ಯಂತ್ರದ ಭಾಗವೆ?
****
ಇನ್ಸಪೆಕ್ಟರ್ ಬಲರಾಮ್ ಸುತ್ತಮುತ್ತಲಿನ ಅನೇಕ ಸ್ಟೇಶನ್ಗಳಲ್ಲಿ ದಾಖಲಾಗಿದ್ದ ಕಂಪ್ಲೇಂಟ್ಗಳನ್ನೂ ತನ್ನ ಮುಂದೆ ಹರಡಿಕೊಂಡು ಕುಳಿತಿದ್ದ. ಅದರಲ್ಲಿದ್ದ ವಿವರಗಳಾವುವೂ ಅವನಿಗೆ ದೊರಕಿದ್ದ ಶವದ ಹೋಲಿಕೆಗೆ ಮ್ಯಾಚ್ ಆಗುತ್ತಿರಲಿಲ್ಲ.
ಅವನ ಮುಂದಿದ್ದದ್ದು ಒಂದೇ ಲೀಡ್!
ಶವವನ್ನು ಅಲ್ಲಿಗೆ ತಂದುಹಾಕುವ ಸುಮಾರು ಎರಡು ಮೂರು ಗಂಟೆಯ ಮೊದಲು ಆ ವ್ಯಕ್ತಿಯ ಸಾವಾಗಿದೆ. ಅವನನ್ನು ಅಷ್ಟು ಚಿತ್ರವಧೆ ಮಾಡಲು ಸಮಯ ಬೇಕು ಹಾಗೂ ಹಾಗೆ ಮಾಡುವಾಗ ಯಾರಿಗೂ ತಿಳಿಯಬಾರದು ಎಂದರೆ ಅವನನ್ನು ಯಾವುದಾದರೂ ನಿರ್ಜನ ಪ್ರದೇಶದಲ್ಲಿ ಇಟ್ಟಿರಬೇಕು ಎಂದೆಣಿಸಿ, ಸುತ್ತಮುತ್ತಲಿನ ಎಲ್ಲ ನಿರ್ಜನ ಪ್ರದೇಶವನ್ನು ಜಾಲಾಡಿದ್ದ. ಅಲ್ಲಿಯೂ ಅವನಿಗೆ ನಿರಾಶೆ ಕಾದಿತ್ತು.
ಅದೇ ಸಮಯಕ್ಕೆ ರಾಜಪ್ಪ ಆತುರಾತುರವಾಗಿ ಒಳಗಡೆ ಬಂದ.
“ಸರ್ ಒಂದು ವಿಚಿತ್ರ ಕಂಪ್ಲೇಂಟ್. ಯೂನಿವರ್ಸಿಟಿ ಪೊಲೀಸ್ ಸ್ಟೇಶನ್ನಲ್ಲಿ ರಿಜಿಸ್ಟರ್ ಆಗಿದೆ. ಅದೂ ಈವತ್ತು ಬೆಳಗ್ಗೆ.”
ಬಲರಾಮ್ನ ಕಿವಿ ಚುರುಕಾಯಿತು.
“ಯೂನಿವರ್ಸಿಟಿಯ ಪ್ರೊಫೆಸರ್ ನಾರಾಯಣ್ ಎಂಬವರ ಹೆಂಡತಿ, ತನ್ನ ಗಂಡ ಅವನ ಸ್ಟೂಡೆಂಟ್
ಜೊತೆ ಓಡಿಹೋಗಿದ್ದಾನೆ ಎಂದು ಕಂಪ್ಲೇಂಟ್ ಕೊಟ್ಟಿದ್ದಾರೆ. ಅವರು ಕೊಟ್ಟಿರುವ ವಿವರಗಳು ನಮಗೆ ಸಿಕ್ಕಿರುವ ಶವದ ವಿವರಕ್ಕೆ ಹೋಲುತ್ತದೆ.”
ಬಲರಾಮ್ನ ಕಣ್ಣುಗಳು ಮಿಂಚಿದವು.
ರಾಜಪ್ಪನನ್ನು ಇದೇ ಕಾರಣಕ್ಕೆ ನೇಮಿಸಿದ್ದ. ಅವನನ್ನು ತನ್ನ ಇನ್ಫಾರ್ಮರ್ ನೆಟ್ವರ್ಕ್ನೊಂದಿಗೆ ಬಿಟ್ಟಿದ್ದು, ರಾಜಪ್ಪನ ಮುಖ್ಯ ಕೆಲಸ ಪೆÇಲೀಸರಿಗೆ ವರದಿಯಾಗದ ಮಿಸ್ಸಿಂಗ್ ಕೇಸ್ ಬಗ್ಗೆ ಮಾಹಿತಿ ತೆಗೆಯುವುದು ಹಾಗೂ ಬೇರೆ ಕಡೆ ರಿಜಿಸ್ಟರ್ ಆಗಿದ್ದ ಮಿಸ್ಸಿಂಗ್ ಕೇಸ್ಗಳ ಬಗ್ಗೆ ವಿವರ ಸಂಗ್ರಹಿಸುವುದು. ಬಲರಾಮ್ ಬಿಟ್ಟ ಬಾಣ ಕೆಲಸ ಮಾಡಿತ್ತು!
ಯೂನಿವರ್ಸಿಟಿ ಸ್ಟೇಶನ್ನ ಇನ್ಸ್ಪೆಕ್ಟರ್ ಬಲರಾಮ್ ಮತ್ತು ರಾಜಪ್ಪನನ್ನು ಬರಮಾಡಿಕೊಂಡು ಆ ಮಹಿಳೆಯೊಂದಿಗೆ ಮಾತುಕತೆಗೆ ಬಿಟ್ಟರು. ಬೇರೆ ಏರಿಯಾ ಪೊಲೀಸರನ್ನು ಕಂಡು ಭಯದಿಂದ ಬೆದರಿದ ಅವಳೊಂದಿಗೆ ಮಾತಾಡಲು ರಾಜಪ್ಪನನ್ನೇ ಮುಂದೂಡಿದ ಬಲರಾಮ್.
“ಏನಮ್ಮಾ, ನಿಮ್ಮ ಮನೆಯವರು ಹೋಗಿ ಆರೇಳು ದಿನ ಆಗಿದೆ. ನೀವು ಈಗ ಬಂದು ಕಂಪ್ಲೇಂಟ್ ಕೊಡುತ್ತಿದ್ದೀರಲ್ಲ?”
“ಅವರು ಯಾವಾಗಲೂ ಹಾಗೆಯೇ. ಯಾರೊಂದಿಗೋ ವಾರಗಟ್ಟಲೇ ಹೋಗಿಬಿಡುತ್ತಾರೆ. ಎಲ್ಲಿಗೆ ಎಂದು ಹೇಳುವುದಿಲ್ಲ. ಈ ರೀತಿ ಅನೇಕಬಾರಿ ಆಗಿದೆ” ಕಣ್ಣೀರಿಡುತ್ತಾ ನುಡಿದಳು.
“ಅಂದರೆ?” ಪ್ರಶ್ನಿಸಿದ ಬಲರಾಮ್.
“ಸರ್ ಅವರು ಜೀವಶಾಸ್ತ್ರದ ಪ್ರೊಫೆಸರ್. ತಮ ಕೈಕೆಳಗೆ ಪಿಹೆಚ್.ಡಿ. ಮಾಡುವ ಅನೇಕ ಹೆಣ್ಣುಮಕ್ಕಳೊಂದಿಗೆ ತುಂಬಾ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ಸರ್ಕಾರದ ಲೆವೆಲ್ನಲ್ಲಿ ದೊಡ್ಡ ದೊಡ್ಡ ಕಾಂಟ್ಯಾಕ್ಟ್ ಇರುವುದರಿಂದ ಯಾರೂ ಅವರಿಗೆ ಏನೂ ಮಾಡಲಾಗುತ್ತಿಲ್ಲ. ಪಿಹೆಚ್.ಡಿ.ಬೇಕೆಂದರೆ ನನ್ನ ಜೊತೆ ಒಂದುವಾರ ಟೂರ್ ಬರಬೇಕು ಎಂದು ಕಂಡೀಶನ್ ಹಾಕಿ ಆ ಹುಡುಗಿಯರೊಂದಿಗೆ ಸುತ್ತಾಡಿ ವಾಪಸ್ ಬರುತ್ತಿದ್ದರು.”
“ಈ ಬಾರಿ ಅಂಥದ್ದೇನು ಆಯಿತು ಎಂದು ಕಂಪ್ಲೇಂಟ್ ಕೊಟ್ಟಿರಿ?”
“ಅವರೊಂದಿಗೆ ಹೋಗಬೇಕಿದ್ದ ಹುಡುಗಿ ಇಲ್ಲಿಯೇ ಇದ್ದಾಳೆ. ಅವರೊಂದಿಗೆ ಹೋಗಿಯೇ ಇಲ್ಲ!”
ಪರಿಸ್ಥಿತಿಯ ಸೂಕ್ಷ್ಮತೆ ಅರಿತ ರಾಜಪ್ಪ,
“ನೋಡಿ, ನಮಗೆ ಒಂದು ಶವ ಸಿಕ್ಕಿದೆ. ಅದು ಪೆÇ್ರಫೆಸರ್ ಅವರ ವಿವರಗಳಿಗೆ ಹೋಲುತ್ತದೆ. ನಮಗೆ ಕೇವಲ ಅನುಮಾನ ಅಷ್ಟೇ. ನೀವು ಬಂದು
ನೋಡಿದರೆ…
ಫ್ರೀಜರ್ ಬಾಕ್ಸ್ ತೆರೆಯುತ್ತಿದ್ದಂತೆಯೇ, ಆ ರೌದ್ರವನ್ನು ನೋಡಲಾಗದೇ ತನ್ನ ಮುಖವನ್ನು ಅತ್ತ ತಿರುಗಿಸಿದಳು.
“ಸ್ವಲ್ಪ ಧೈರ್ಯ ಮಾಡಿಕೊಂಡು ನೋಡಿ…”
ಒಂದೆರಡು ಕ್ಷಣಗಳು ಆ ಶವವನ್ನು ದಿಟ್ಟಿಸಿ ನೋಡಿ ಆ ಮಹಿಳೆ,
“ಇದು ಅವರಲ್ಲ” ಎಂದಳು.
“ಮುಖ ಗುರುತು ಹಿಡಿಯಲು ಆಗದು, ಒಪ್ಪುವೆ. ಆದರೆ ಅವರ ಬಲ ತೋಳಿನ ಮೇಲ್ಭಾಗದಲ್ಲಿ ದೊಡ್ಡದೊಂದು ಹಚ್ಚೆ ಹಾಕಿಸಿದ್ದಾರೆ. ಅದಿಲ್ಲ. ಆದರೆ ಅದೇ ಎಡತೋಳಿನ ಭಾಗದಲ್ಲಿ ಅಲ್ಲಿನ ಚರ್ಮ ಕಿತ್ತಿದ್ದಾರೆ. ಇದು ಅವರಾಗಿರಲು ಸಾಧ್ಯವೇ ಇಲ್ಲ.”
ಬಲರಾಮ್ ತಲೆಯಲ್ಲಿ ಮಿಂಚೊಂದು ಹೊಳೆಯಿತು. ಚರ್ಮ ಕಿತ್ತುಹಾಕಿದ ಮರ್ಮ ತಿಳಿಯಿತು!
“ರಾಜಪ್ಪ. ಇದೊಂದು ಮಿಸ್ಟೇಕನ್ ಐಡೆಂಟಿಟಿ ಕೇಸ್. ಯಾರೋ ಪ್ರೊಫೆಸರ್ ಅವರನ್ನು ಕೊಲೆಮಾಡಲು ಸುಪಾರಿ ಕೊಟ್ಟಿದ್ದಾರೆ. ಅವರಿಗೆ ಕೊಟ್ಟ ಮಾರ್ಕ್… ಬಲಭುಜದ ಮೇಲಿರುವ ಟ್ಯಾಟೂ… ಅದನ್ನು ಅವರು ತಪ್ಪಾಗಿ ತಿಳಿದು, ಇನ್ನಾರನ್ನೋ ಕೊಲೆ ಮಾಡಿದ್ದಾರೆ.”
ರಾಜಪ್ಪ ತಲೆದೂಗಿದ.
“ಅದಾರ ಜೊತೆ ನಿಮ್ಮ ಮನೆಯವರು ಹೋಗಬೇಕೆಂದಿದ್ದರು, ಆ ಹುಡುಗಿಯ ವಿವರ ಕೊಡಿ. ಮುಂದಿನದು ನಾವು ನೋಡಿಕೊಳ್ಳುತ್ತೇವೆ” ಬಲರಾಮ್ ನುಡಿದ.
ಅವನ ಮನಸ್ಸಿನಲ್ಲಾಗಲೇ ಪ್ಲ್ಯಾನ್ ರೆಡಿಯಾಗಿತ್ತು.
(ಮುಂದುವರಿಯುವುದು)