ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸೆಪ್ಟೆಂಬರ್ 2020 > ನಿಂತ ಗಡಿಯಾರ (ಪೂರ್ವಾರ್ಧ)

ನಿಂತ ಗಡಿಯಾರ (ಪೂರ್ವಾರ್ಧ)

ಕರಮಚಂದನಲ್ಲಿ ನಾನು ವಕೀಲಗಿರಿ ಮಾಡಲು ಸೇರಿಕೊಂಡ ಮೊದಲ ವರ್ಷದಲ್ಲೇ ನಡೆದ ಒಂದು ಪ್ರಕರಣ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಅಡ್ಡಂಡ ಕರಮಚಂದನ ಪತ್ತೆದಾರಿಕೆಯ ಕೌಶಲಕ್ಕೆ ಅದೊಂದು ಅಪೂರ್ವ ಉದಾಹರಣೆ ಎಂಬುದು ನನ್ನ ಭಾವನೆ. ವಕೀಲಗಿರಿಯ ಜೊತೆಗೆ ಪತ್ತೆದಾರಿಕೆ ಕರಮಚಂದನ ಹವ್ಯಾಸ.

ಅದು ಬಹುಶಃ ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳ ಆರಂಭದ ದಿನಗಳಲ್ಲಿ ನಡೆದ ಪ್ರಕರಣ. ಒಂದು ದಿನ ಸಂಜೆ ಐದರ ವೇಳೆಗೆ ಸುಮಾರು ಮೂವತ್ತರ ಹರೆಯದ ಮಹಿಳೆಯೊಬ್ಬಳು ನಮ್ಮನ್ನು ವಿಚಾರಿಸಿಕೊಂಡು ಆಗಮಿಸಿದಳು. ನಾಪೋಕ್ಲು ಸಮೀಪದ ಚೋನಾಕೆ ಗ್ರಾಮದ ನಿವಾಸಿಯಾದ ಕುಕ್ಕೇರ ರಾಬಿನ್ ಸುಬ್ಬಯ್ಯನ ಪತ್ನಿಯಾದ ಪತಿಷ್ಠಾ ಸುಬ್ಬಯ್ಯ ಎಂದು ತನ್ನನ್ನು ಪರಿಚಯಿಸಿಕೊಂಡಳು. ಆಕೆ ಹೇಳಿದ ವೃತ್ತಾಂತ ಕುತೂಹಲಕಾರಿಯಾಗಿತ್ತು.

“ಸಾರ್, ಸುಮಾರು ಒಂದು ತಿಂಗಳಿನಿಂದೀಚಿಗೆ ಈ ವಿಚಿತ್ರ ಪ್ರಕರಣ ಆರಂಭವಾಯಿತು. ಸುಬ್ಬಯ್ಯನ ಮೊಬೈಲಿಗೆ ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿತು. ‘ನಿಮ್ಮ ತಂದೆಯವರನ್ನು ಕೊಲೆ ಮಾಡಲಾಯಿತು ಎಂಬುದು ನಿಮಗೆ ತಿಳಿದಿದೆಯೇ?’ ಎಂದಷ್ಟೇ ಆ ಸಂದೇಶದಲ್ಲಿದ್ದುದು. ಅದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. ಸುಮಾರು ಹದಿನೈದು ವರ್ಷಗಳ ಹಿಂದೆಯೇ ಅವನ ತಂದೆ, ಅಂದ್ರೆ ನನ್ನ ಮಾವ,

ತೀರಿಕೊಂಡಿದ್ದರು. ಅದೊಂದು ಸಹಜವಾದ ಸಾವು ಎಂದು ಎಲ್ಲರೂ ಭಾವಿಸಿದ್ದರು. ಹಾಗಾಗಿ ಈ ಸಂದೇಶ ಬಂದಾಗ, ಸುಬ್ಬಯ್ಯ ತಲೆ ಕೆಡಿಸಿಕೊಳ್ಳಲಿಲ್ಲ.”

“ಸಂದೇಶ ಕಳಿಸಿದವನಿಗೆ ನೀವು ಕರೆ ಮಾಡಿ ಕೇಳಲಿಲ್ವೇ?” ನಾನು ಪ್ರಶ್ನೆ ಹಾಕಿದೆ.

“ಕರೆ ಮಾಡಲು ಸಾಧ್ಯವಿರುತ್ತಿದ್ದರೆ ನಾನಿಲ್ಲಿ ಬರುತ್ತಿದ್ದೆನೇ? ಆ ಸಂದೇಶವನ್ನು ಅಂತರ್ಜಾಲದ ಮೂಲಕ ಕಳಿಸಲಾಗಿತ್ತು.” ಆಕೆಯ ಉತ್ತರದಿಂದ ನನಗೆ ನಾಚಿಕೆಯಾಯಿತು, ಇಷ್ಟು ಸರಳವಾದುದನ್ನು ನಾನು ಯೋಚಿಸಲಿಲ್ಲವೆಂದು.

“ನನ್ನ ಮದುವೆಗೆ ಮುಂಚೇನೇ ನಮ್ಮ ಮಾವ, ಕುಕ್ಕೇರ ಪೂಣಚ್ಚರವರು ತೀರಿಕೊಂಡಿದ್ದರು. ಅವರು ಕಬ್ಬೆ ಹಿಲ್ಸ್, ಚಲವಾರ ಜಲಪಾತ ವೀಕ್ಷಣೆಗೆ ಹೋಗಿದ್ದಾಗ, ದುಸ್ಸಾಹಸ ಮಾಡಲು ಹೋಗಿ, ಜಾರಿ, ಕೆಳಕ್ಕೆ ಬಿದ್ದು ಮೃತರಾಗಿದ್ದರು. ಅದು ಹಳೆಯ ಕತೆ. ಅದನ್ನು ಕೊಲೆಯೆಂದು ಯಾರೂ ಹೇಳಿದ ನೆನಪಿಲ್ಲ. ಹಾಗಾಗಿ ಈ ವಿಚಿತ್ರವಾದ ಸಂದೇಶ ಬಂದಾಗ, ಸುಬ್ಬಯ್ಯನೂ ನಿರ್ಲಕ್ಷಿಸಿದ. ಆದರೆ ಮತ್ತೆ ಕೆಲವು ದಿನಗಳಲ್ಲೇ ಇನ್ನೊಂದು ಸಂದೇಶ ಬಂದಿತು. ‘ಪೂಣಚ್ಚನವರು ಪ್ರಪಾತಕ್ಕೆ ಜಾರಿ ಬಿದ್ದರು ಎನ್ನುವುದು ಸುಳ್ಳು ಅಂತ ನಿನಗೆ ಗೊತ್ತೇ?’ ಎಂಬ ವಾಕ್ಯ ಸುಬ್ಬಯ್ಯನ ಚಿತ್ತಶಾಂತಿಯನ್ನು ಕದಡಿತು. ಆಗ ಅವನ ತಲೆಯೊಳಗೆ ಸಣ್ಣಕೆ ಅನುಮಾನ ಹೆಡೆಯೆತ್ತತೊಡಗಿತು. ‘ತನ್ನ ತಂದೆಯದ್ದು ಆಕಸ್ಮಿಕ ಸಾವು ಅಲ್ಲವೇ?’ ಅಂತ ಅವನು ನನ್ನೊಡನೆ ಒಮ್ಮೆ ಚರ್ಚಿಸಿದ. ನನಗೆ ಅದೊಂದು ಕೀಳುಮಟ್ಟದ ಹಾಸ್ಯ ಅಂತ ಅನ್ನಿಸಿತ್ತು. ಹದಿನೈದು ವರ್ಷಗಳ ಹಿಂದಿನ ಕತೆಯನ್ನು ಈಗ ಕೆದಕಿ, ಸಾಧಿಸುವುದಾದರೂ ಏನು? ಎಂದುÀ ನಾನು ಹೇಳಿದೆ. ನನ್ನ ಉತ್ತರದಿಂದ ಅವನು ಸಂತೃಪ್ತನಾದವನಂತೆ ಕಂಡ.”

“ಮಧ್ಯೆ ಅಡಚಣೆ ಮಾಡಿದ್ದಕ್ಕೆ ಕ್ಷಮೆಯಿರಲಿ. ಕುಕ್ಕೇರ ಪೂಣಚ್ಚರ ಸಾವಿನ ಬಗ್ಗೆ ಒಂದಿಷ್ಟು ಮಾಹಿತಿ ನೀಡಬಹುದೇ?” ಕರಮಚಂದನ ಪ್ರಶ್ನೆ ಆಕೆಯ ಮಾತಿನ ಲಹರಿಯನ್ನು ತುಂಡರಿಸಿತು.

“ನನಗೆ ಪೂರ್ಣ ಮಾಹಿತಿ ಇಲ್ಲ. ಅವರು ತಮ್ಮ ಮಿತ್ರರೊಂದಿಗೆ ಮಳೆಗಾಲದಲ್ಲಿ ಚಲವಾರ ಜಲಪಾತ ವೀಕ್ಷಣೆಗೆ ಹೋಗಿದ್ದರಂತೆ. ಅಲ್ಲಿ ಅವರು ಕೆಲವು ಮಿತ್ರರ ಜೊತೆಗೂಡಿ, ಬೇಡವೆಂದರೂ ಕೇಳದೆ, ಜಲಪಾತದ ಮೇಲ್ಭಾಗದಿಂದ ನೋಡಲೆಂದು ಹೋದವರು, ಜಾರಿ ಕೆಳಗೆ ಬಿದ್ದು, ತೀರಿಕೊಂಡರಂತೆ. ಹಾಡುಹಗಲಲ್ಲಿ ಎಲ್ಲರ ಕಣ್ಣ ಮುಂದೆಯೇ ನಡೆದ ಘಟನೆ ಕೊಲೆ ಆಗಲು ಹೇಗೆ ಸಾಧ್ಯ? ಮತ್ತೆ ಒಂದು ವಾರ ಕಳೆಯಿತು. ಅವನು ಆ ವಿಷಯ ಮರೆತಿರಬೇಕು ಎನ್ನುವಾಗಲೇ, ಇನ್ನೊಂದು ಸಂದೇಶ ಬಂದಿತು. ಈ ಬಾರಿ ಅದು ಇನ್ನಷ್ಟು ನೇರವಾಗಿತ್ತು. ‘ಕುಕ್ಕೇರ ಪೂಣಚ್ಚರನ್ನು ಕೊಂದದ್ದು ಹೇಗೆ ಎಂಬ ವಿವರ ಬೇಕೇನು?’ ಎಂಬ ಪ್ರಶ್ನೆ ಸುಬ್ಬಯ್ಯನ ತಲೆಕೆಡಿಸಿದರೂ, ನಾನು ಅದಕ್ಕೆ ಕವಡೆ ಕಿಮ್ಮತ್ತೂ ಕೊಡಲಿಲ್ಲ. ಆ ಅನಾಮಿಕನ ಮುಂದಿನ ಸಂದೇಶ ಹೀಗಿರುತ್ತದೆ ಎಂದು ನಾನು ಹೇಳಿದೆ….. ‘ಕುಕ್ಕೇರ ಪೂಣಚ್ಚರವರನ್ನು ಕೆಳಗೆ ತಳ್ಳಿ ಕೊಲೆ ಮಾಡಲಾಯಿತು ಎಂಬುದು ಗೊತ್ತೇ?’ ನನ್ನ ಊಹೆ ಸುಳ್ಳಾಗಲಿಲ್ಲ. ಮತ್ತೆ ಒಂದು ವಾರದ ನಂತರ ಬಂದ ಸಂದೇಶ ಹೀಗಿತ್ತು – ‘ಕುಕ್ಕೇರ ಪೂಣಚ್ಚರವರನ್ನು ಕೆಳಕ್ಕೆ ತಳ್ಳಿ ಕೊಲೆ ಮಾಡಿದ್ದು ಯಾರು ಬಲ್ಲೆಯಾ?’ ನನಗೆ ಅದನ್ನು ಕಂಡು ನಗು ಬಂದಿತು. ಸುಬ್ಬಯ್ಯನಿಗೆ ಮಾತ್ರ ಒಂದಿಷ್ಟು ಚಿಂತೆಯಾಯಿತು. ಆ ಅನಾಮಿಕ ಹೇಳಿದ್ದು ನಿಜವಾಗಿರಬಹುದೇ? ಅನುಮಾನ ಅವನನ್ನು ಕಾಡತೊಡಗಿತು. ಕೊಲೆ ಮಾಡಿದ್ದು ಅಂತ ಗೊತ್ತಿದ್ದರೆ, ಆತನೇಕೆ ನೇರವಾಗಿ ಹೇಳ್ತಾ ಇಲ್ಲ. ಈ ಬಗ್ಗೆ ನಮ್ಮಿಬ್ಬರಲ್ಲಿ ಚರ್ಚೆಯಾಯಿತು. ‘ಅವನ ಉದ್ದೇಶ ಸ್ಪಷ್ಟ. ನಿನ್ನಲ್ಲಿ ಮೊದಲಿಗೆ ಕೊಲೆ ಎನ್ನುವ ಭ್ರಮೆ ಹುಟ್ಟಿಸುವುದು. ಆಮೇಲೆ ಕೊಲೆಗಾರನ ಹೆಸರು ಹೇಳಲು ಹಣದ ಬೇಡಿಕೆ ಇಡುವುದು’ ಅಂತ ನಾನು ವಾದಿಸಿದೆ. ಅದು ಸುಬ್ಬಯ್ಯನಿಗೂ ತರ್ಕಬದ್ಧವಾಗಿ ಕಾಣಿಸಿದರೂ, ಸಣ್ಣ ಮಟ್ಟಿನ ತನಿಖೆ ಮಾಡಲು ಆತ ನಿರ್ಧರಿಸಿದ. ಅದನ್ನು ಬಿಟ್ಟು ನಮಗೆ ಬೇರೇನೂ ಮಾಡಲೂ ಸಾಧ್ಯವಿರಲಿಲ್ಲ.”

ಆಕೆ ಒಮ್ಮೆ ತನ್ನ ವಿವರಣೆ ನಿಲ್ಲಿಸಿ, ಗಾಜಿನ ಲೋಟದಿಂದ ನೀರು ಗುಟುಕರಿಸಿ, ಮುಂದುವರಿಸಿದಳು,

“ನಿಮಗೆ ಸುಬ್ಬಯ್ಯನ ಕುಟುಂಬದ ಬಗ್ಗೆ ಒಂದಿಷ್ಟು ಹೇಳಬೇಕಾಗುತ್ತದೆ. ನಮ್ಮ ಮಾವನವರ ದಾಯಾದಿ ಕುಕ್ಕೇರ ತಿಮ್ಮಯ್ಯ ಎನ್ನುವಾತನೊಡನೆ, ನಮಗೆ ಬಹಳ ಕಾಲದಿಂದ ದಾರಿಗಾಗಿ ವ್ಯಾಜ್ಯವಿತ್ತು. ತಿಮ್ಮಯ್ಯ ಅದ್ಕೆ ಬೇಲಿ ಹಾಕಿ, ನಮಗೆ ಹೋಗದಂತೆ ತಡೆಯೊಡ್ಡಿದ್ದ. ಪೂಣಚ್ಚರು ಕೆಲವೊಮ್ಮೆ ಬೇಲಿ ಕಿತ್ತದ್ದೂ ಉಂಟು. ಆವಾಗೆಲ್ಲಾ ಮುಂಗೋಪಿಯಾದ ತಿಮ್ಮಯ್ಯ ನಮ್ಮ ಮಾವನೊಡನೆ ಜಗಳಕ್ಕೆ ಬಂದು, ಹಲ್ಲೆ ಮಾಡುತ್ತಿದ್ದ. ಕೆಲವು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಬೇಕಾಗಿ ಬಂದದ್ದೂ ಉಂಟು. ನಮ್ಮ ಮಾವನೂ ಹಠವಾದಿ. ನಿಜವಾಗಿ ಅದು ಜಗಳ ಮಾಡುವಷ್ಟು ಬೆಲೆಬಾಳುವ ಜಾಗವೇನೂ ಅಲ್ಲ. ದಾರಿಗಾಗಿ ಬಿಟ್ಟಿದ್ದ ಜಾಗದ ಮೌಲ್ಯ ಒಂದೆರಡು ಲಕ್ಷ ಮೀರದು. ಸುಬ್ಬಯ್ಯ ಆವಾಗ ಮೈಸೂರಲ್ಲಿ ಕಾಲೇಜು ಓದುತ್ತಿದ್ದ. ಅವನು ತಂದೆಗೆ ಅನೇಕ ಬಾರಿ ಆ ಜಾಗ ಬಿಟ್ಟು ಬಿಡುವಂತೆ ಹೇಳಿ, ಪರ್ಯಾಯ ರಸ್ತೆಯನ್ನೂ ಮಾಡಿಸಿದ್ದ. ನಮ್ಮ ಮಾವ ಕೋರ್ಟಿನ ಮೆಟ್ಟಿಲು ಹತ್ತಿದ್ದರು. ಆದರೆ ನಮ್ಮ ಮಾವನ ಸಾವಿನ ನಂತರ, ಸುಬ್ಬಯ್ಯ ಆ ವ್ಯಾಜ್ಯವನ್ನು ಮುಂದುವರಿಸಲು ಬಯಸದೆ, ಅದನ್ನು ಹಿಂದೆಗೆದುಕೊಂಡಿದ್ದ. ಆನಂತರ ತಿಮ್ಮಯ್ಯ ನಮ್ಮೊಡನೆ ಜಗಳಕ್ಕೆ ಬಂದುದಿಲ್ಲ. ಈ ಸಂದೇಶ ಬಂದಾಗ, ಸುಬ್ಬಯ್ಯನಿಗೆ ಅನುಮಾನ ಶುರುವಾಯಿತು….

“ತಿಮ್ಮಯ್ಯನೇ ಪೂಣಚ್ಚರನ್ನು ಕೆಳಕ್ಕೆ ತಳ್ಳಿರಬೇಕು ಎಂದು ಅಲ್ಲವೇ?” ನಾನು ಮಧ್ಯೆ ಬಾಯಿ ಹಾಕಿದೆ.

“ಸರಿಯಾಗಿ ಹೇಳಿದಿರಿ! ಏಕೆ ಎಂದರೆ ಆವತ್ತು ಚಲವಾರ ಜಲಪಾತ ವೀಕ್ಷಣೆಗೆ ಹೋದ ತಂಡದಲ್ಲಿ ತಿಮ್ಮಯ್ಯನೂ ಇದ್ದ. ಸ್ಥಳೀಯ ಕಾಫಿ ಪ್ಲಾಂಟರುಗಳ ಸಂಘದ ಸದಸ್ಯರೆಲ್ಲಾ ಸೇರಿ ಪ್ರವಾಸ ಹೋಗಿದ್ದರು. ಆ ದಿವಸ ಪಿಕ್ನಿಕ್ ಹೋದವರಲ್ಲಿ ಕೆಲವರಲ್ಲಿ ಸುಬ್ಬಯ್ಯ ವಿಚಾರಿಸಿದ. ಯಾರೂ ಕೂಡಾ ಅಂತಹ ಅನುಮಾನ ವ್ಯಕ್ತಪಡಿಸಲಿಲ್ಲ. ಆಗ ಸುಬ್ಬಯ್ಯನಿಗೆ ಸಮಾಧಾನವಾಯಿತು.”

“ಪೂಣಚ್ಚರವರು ಪ್ಲಾಂಟರ್ ಆಗಿದ್ದರೇ?”

“ಹೂಂ. ಜೊತೆಗೆ ಅವರು ಸರಕಾರಿ ಸಂಸ್ಥೆಯಾದ, ಭಾರತ್ ರಸಗೊಬ್ಬರ ಕಾರ್ಖಾನೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಹಾಂ, ಏನು ಹೇಳ್ತಾ ಇದ್ದೆ?…. ಆಮೇಲೆ ಸುಬ್ಬಯ್ಯನವರ ಅನುಮಾನ ನಿವಾರಣೆಯಾದರೂ, ಅದು ಹೆಚ್ಚು ಕಾಲ ಉಳಿಯಲಿಲ್ಲ. ಮೂರು ದಿನಗಳ ನಂತರ ಅವನಿಗೆ ಇನ್ನೊಂದು ಮೆಸೇಜು ಬಂದಿತು. ‘ಪೂಣಚ್ಚರವರನ್ನು ಪ್ರಪಾತಕ್ಕೆ ತಳ್ಳಿದ್ದು ಯಾರೆಂದು ನೋಡಲು ಆ ದಿವಸದ ವಿಡಿಯೋ ಬೇಕೇ?’ ಅದನ್ನು ನೋಡಿದಾಗ, ನನನಗೆ ಅದೊಂದು ಪಕ್ಕಾ ವಂಚನೆ ಎನ್ನುವುದು ಮನದಟ್ಟಾಯಿತು. ಆದರೆ ಸುಬ್ಬಯ್ಯ ಅರೆಮನಸ್ಸಿನಿಂದ ನನ್ನ ಮಾತನ್ನು ಒಪ್ಪಿಕೊಂಡ. ಬೆಂಕಿಯಿಲ್ಲದೆ ಹೊಗೆ ಬರೋಕೆ ಸಾಧ್ಯವೇ? ಎನ್ನುವುದು ಆತನ ವಾದ. ಏನೊಂದೂ ಸತ್ಯವಿಲ್ಲದೆ, ಆ ಅನಾಮಿಕ ಹಣ ಕೀಳುವ ಮಟ್ಟಕ್ಕೆ ಹೋಗಬಲ್ಲನೇ? ಆದರೆ ನಾನು ಆತನ ವಾದವನ್ನು ತಳ್ಳಿಹಾಕಿದೆ. ತಂತ್ರಾಂಶ ಬಳಸಿ, ನಕಲಿ ವಿಡಿಯೋ ಸೃಷ್ಟಿಸುವುದೀಗ ಬಹಳ ಸರಳ. ಹಾಗಾಗಿ ಇದೊಂದು ವ್ಯವಸ್ಥಿತ ಷಡ್ಯಂತ್ರ, ಹಣಮಾಡುವ ಹುನ್ನಾರ ಎಂದು ನಾನು ಹೇಳಿದೆ. ಮತ್ತೆರಡು ದಿನಗಳಲ್ಲಿ, ಬಂದ ಮೆಸೇಜು, ಕಂಡು ನಾನು ದಂಗಾದೆ. ‘ಆ ವೀಡಿಯೋ ಬೇಕಾದರೆ ಐದು ಲಕ್ಷ ಸಿದ್ಧ ಮಾಡಿಟ್ಟುಕೋ. ಎಲ್ಲಿಗೆ, ಯಾವಾಗ ಬರಬೇಕೆಂಬುದನ್ನು ನಿಧಾನವಾಗಿ ತಿಳಿಸ್ತೇನೆ.’ ಸುಬ್ಬಯ್ಯನೂ ಅದನ್ನು ಕಂಡು ಬೆರಗಾದ. ನಾವಿಬ್ಬರೂ ಅದನ್ನು ನಿರ್ಲಕ್ಷಿಸಲು ನಿಶ್ಚಯಿಸಿದೆವು. ಅಷ್ಟು ದೊಡ್ಡ ಮೊತ್ತ ಪಾವತಿಸುವುದೆಂದರೆ ಮೂರ್ಖತನವಷ್ಟೆ. ಪೊಲೀಸರಲ್ಲಿ ಹೋಗುವ ಯೋಚನೆ ಬಂದರೂ, ನಮ್ಮಲ್ಲಿ ಸಾಕ್ಷ್ಯಾಧಾರವೇನೂ ಇಲ್ಲದ್ದರಿಂದ, ಸುಮ್ಮನೆ ಇಲ್ಲದ ತಾಪತ್ರಯ ಮೈಮೇಲೆ ಎಳೆದುಕೊಳ್ಳುವುದೇಕೆ ಎಂದು ಸುಮ್ಮನಿದ್ದೆವು.”

ಆಕೆ ತನ್ನ ಕುತೂಹಲಕಾರಿ ವಿವರಣೆಯನ್ನು ಮತ್ತೊಮ್ಮೆ ನಿಲ್ಲಿಸಿ, ನೀರು ಕುಡಿದಳು.

“ಆಮೇಲೆ ಮತ್ತೆ ಕೆಲವು ದಿನಗಳ ಕಾಲ ಆ ಅನಾಮಿಕನಿಂದ ಯಾವುದೇ ಸೂಚನೆಗಳು ಬರಲಿಲ್ಲ. ಮೊನ್ನೆ ಬೆಳಗ್ಗೆ ನಾವು ಮೊದಲೇ ನಿಗದಿಪಡಿಸಿದಂತೆ, ಮಡಿಕೇರಿಯ ಕೂರ್ಗ್ ಕೌಂಟಿ ರೆಸಾರ್ಟಿಗೆ ಎರಡು ದಿನಗಳ ಪ್ರವಾಸಕ್ಕೆ ಹೊರಟೆವು. ಈ ಅನಾಮಿಕನ ಕಾಟವನ್ನು ಮರೆತ ಹಾಗೂ ಆಗುತ್ತದೆಂದು ಭಾವಿಸಿದ್ದೆವು. ಆದರೆ ನಿನ್ನೆ ಬೆಳಗ್ಗೆ ನಮಗೆ ಮತ್ತೊಮ್ಮೆ ಸಂದೇಶ ಬಂತು. ಹಣ ತೆಗೆದುಕೊಂಡು ಅದೇ ಸಂಜೆ ಎಂಟರ ಹೊತ್ತಿಗೆ ಬರಬೇಕಾದ ಜಾಗದ ವಿವರ ನೀಡಿದ್ದ! ನಾವು ಆವಾಗ ರಿಸಾರ್ಟಿನಲ್ಲಿದ್ದುದು ಒಳ್ಳೆಯದೇ ಆಯಿತು. ಹೋಗುವ ಪ್ರಶ್ನೆಯೇ ಇರಲಿಲ್ಲ. ಆದರೂ ನನಗೆ ಆ ಅನಾಮಿಕನ ಉದ್ಧಟತನ ಕಂಡು ಅಚ್ಚರಿಯಾಯಿತು. ಎಂತಹ ಅಹಂಕಾರ ಆತನಿಗೆ! ಸುಳ್ಳು ವಿಡಿಯೋ ಹಿಡಿದುಕೊಂಡು ಐದು ಲಕ್ಷ ಕೀಳುವ ಯೋಚನೆ ಮಾಡಿದ್ದಾನಲ್ಲ ಎಂದು. ಆದರೂ ಸುಬ್ಬಯ್ಯ ಮಂಕಾಗಿದ್ದುದನ್ನು ನಾನು ಗಮನಿಸಿದ್ದೆ. ರಾತ್ರಿಯಿಡೀ ಸುಬ್ಬಯ್ಯ ತಾನು ಆ ಜಾಗಕ್ಕೆ ಹೋಗಬೇಕಾಗಿತ್ತೇ, ಹೋಗಿದ್ದರೆ ಬ್ಲಾಕ್‍ಮೇಲರ್ ಸಿಕ್ಕಿ ಬೀಳುತ್ತಿದ್ದನೇನೋ ಎಂದೆಲ್ಲ ಯೋಚಿಸುತ್ತಿದ್ದ. ಅದರಿಂದ ಸುಮ್ಮನೆ ಅಪಾಯ ಎಂದು ನಾನು ಆತನಿಗೆ ಸಮಾಧಾನ ಹೇಳಿದೆ. ಆದರೆ ಈವತ್ತು ಬೆಳಗ್ಗೆ ಬಂದ ಮೆಸೇಜು ಮಾತ್ರ ನಮ್ಮಿಬ್ಬರ ಚಿತ್ತ ಕೆಡಿಸಿತು.  ಅದರಲ್ಲೇನಿತ್ತು ಗೊತ್ತೇ? ‘ಹಣ ನೀಡಿ, ವಿಡಿಯೋ ಒಯ್ದಿದ್ದಕ್ಕೆ ಧನ್ಯವಾದಗಳು’ ಎಂಬ ಮೆಸೇಜು ಬಂದಿತ್ತು, ಸರ್!”

ಅಷ್ಟು ಹೇಳಿ, ಆಕೆ ನಮ್ಮ ಪ್ರತಿಕ್ರಿಯೆಗಾಗಿ, ತನ್ನ ವರದಿವಾಚನಕ್ಕೆ ಅಲ್ಪವಿರಾಮ ಹಾಕಿದಳು.

“ಪ್ರಾಯಶಃ ಅದು ಸುಳ್ಳು ಸಂದೇಶವಾಗಿರಬೇಕು!” ನಾನು ಅನುಮಾನ ವ್ಯಕ್ತಪಡಿಸಿದೆ.

“ಹಾಂ, ನನಗೂ ಹಾಗೇ ಎನಿಸಿತು. ಆದರೆ ಸುಬ್ಬಯ್ಯ ಮಾತ್ರ ಅದನ್ನು ನಂಬುವುದಕ್ಕೆ ಸಿದ್ಧನಿಲ್ಲ. ಆತನ ತಲೆಯೊಳಗೆ ಹುಳು ಹೊಕ್ಕಿದೆ. ಅವನಿಗೆ ತಿಮ್ಮಯ್ಯನ ಮೇಲೆ ಅನುಮಾನ. ಆತನೇ ಕೊಲೆಗಾರ ಎಂದು. ಸುಬ್ಬಯ್ಯ ತುಂಬಾ ವಿಚಲಿತನಾಗಿದ್ದಾನೆ. ನನಗೂ ಇದೊಂದು ತರಹ ಒಗಟಿನಂತೆ ಅನಿಸಿತು. ಅದಕ್ಕೇ ನಿಮ್ಮ ಸಲಹೆ ಕೇಳೋಣ ಎಂದು ಬಂದೆ. ಸುಬ್ಬಯ್ಯನಿಗೂ ಸಮಾಧಾನ ಆಗಬೇಕಲ್ಲ.’’

“ಸುಬ್ಬಯ್ಯ ಯಾಕೆ ಬರಲಿಲ್ಲ? ಅಷ್ಟು ಮನಃಸ್ಥಿಮಿತ ಕಳಕೊಂಡಿದ್ದಾನೆಯೇ?”

“ಹಾಗೇನಿಲ್ಲ, ಸರ್. ತುಂಬಾ ಚಿಂತೆಗೊಳಗಾಗಿದ್ದಾನೆ, ನಿಜ. ಆದರೆ ಬರದೇ ಇರಲು ಅದು ಕಾರಣವಲ್ಲ. ನಮ್ಮ ಮನೆಯಲ್ಲಿ ಈವತ್ತು ಸುಣ್ಣ ಬಣ್ಣ ಬಳಿಯಲಿಕ್ಕೆ ಜನ ಬಂದಿದ್ದಾರೆ. ಕೆಲಸ ನಡೆಯುತ್ತಿದೆ. ಕೆಲಸಗಾರರು ಬರ್ತಾರೆಂದೇ ನಾವು ರಿಸಾರ್ಟಿನಿಂದ ಬೆಳಗ್ಗೆ ಬೇಗ ಬಂದೆವು.”

“ಕೆಲಸಗಾರರನ್ನು ಬರಲಿಕ್ಕೆ ಹೇಳಿ, ನೀವು ಏಕೆ ರಿಸಾರ್ಟಿಗೆ ಹೋದಿರಿ?” ನಾನು ಪ್ರಶ್ನೆಹಾಕಿದೆ.

“ಓಹ್! ನಮ್ಮ ಪ್ಲಾನ್ ಎಲ್ಲಾ ತಲೆಕೆಳಗಾಯ್ತು. ಪೈಂಟಿಂಗಿಗೆ ಜನ ಸಿಗುವುದಿಲ್ಲ ಎಂದು ಮೊದಲೇ ಮುಂಗಡ ನೀಡಿ, ಅವರನ್ನು ಬರಲಿಕ್ಕೆ ಹೇಳಿದ್ದೆವು. ಈ ಮಧ್ಯೆ ನನ್ನ ದೊಡ್ಡಪ್ಪ ಕುರುಂಬಯ್ಯನವರಿಗೆ ಯಾವುದೋ ಆನ್‍ಲೈನ್ ಖರೀದಿಯಲ್ಲಿ ಬಹುಮಾನವಾಗಿ ರೆಸಾರ್ಟಿನಲ್ಲಿ ಎರಡು ದಿನ ಉಚಿತವಾಗಿ ತಂಗುವ ಕೊಡುಗೆ ಬಂತು. ಅವರಿಗೆ ಎಪ್ಪತ್ತು ವರ್ಷ ಪ್ರಾಯ. ನಮ್ಮನೆಯಲ್ಲೇ ಅವರು ಇರುವುದು…. ಊಹುಂ…. ಅವರ ಮನೆಯಲ್ಲಿ ನಾವಿರುವುದು ಎಂದರೆ ಸರಿಯಾಗುತ್ತದೆ! ಅವರಿಗೆ ಮಕ್ಕಳಿಲ್ಲ. ಹಾಗಾಗಿ ಅವರ ಮನೆಯಲ್ಲೇ ನಮಗೆ ಇರುವುದಕ್ಕೆ ಹೇಳಿದರು. ಅವರಿಗೂ ಸಹಾಯ ಆಗುತ್ತದೆ ಎಂದು ನಾವು ಒಪ್ಪಿಕೊಂಡೆವು. ಹಾಂ…. ವಿಷಯ ಎಲ್ಲಿಗೋ ಹೋಯಿತು. ರೆಸಾರ್ಟ್ ಕೊಡುಗೆ ಬಿಡುವುದೇಕೆ ಎಂದು ನಾವು ಹೋದೆವು. ಈವತ್ತು ಸಂಜೆಯವರೆಗೂ ಅಲ್ಲಿ ಇರಬಹುದಿತ್ತು. ಅದು ವೇಸ್ಟ್ ಆಯ್ತು. ಸರ್, ನಿಮಗೇನಾದರೂ ಹೊಳೆಯುತ್ತಾ? ಆ ಅನಾಮಿಕನ ಉದ್ದೇಶ ಏನಿರಬಹುದು? ಸುಬ್ಬಯ್ಯ ತುಸು ಮುಂಗೋಪಿ. ಸುಮ್ಮನೆ ತಿಮ್ಯಯ್ಯನ ಜೊತೆ ಜಗಳ ಮಾಡಿದರೂ ಮಾಡಬಹುದು. ಅನುಮಾನ ಎನ್ನುವುದು ಬಹಳ ಅಪಾಯಕಾರಿ.”

ತನ್ನ ಕೈಗಳ ಮೇಲೆ ತಲೆಯಿರಿಸಿ, ಆಕೆಯ ವಿಚಿತ್ರ ಕಥನವನ್ನು ಆಲಿಸುತ್ತಿದ್ದ ಕರಮಚಂದ, ತುಟಿ ಎರಡು ಮಾಡಿದ,

“ನಿಮ್ಮ ಮನೆಗೆ ಇತ್ತೀಚಿಗೆ ಯಾರಾದರೂ ಅಪರಿಚಿತರು ಬಂದಿದ್ದರೇ? ಅಥವಾ ಯಾರಾದರೂ ನಿಮ್ಮನ್ನು ಹಿಂಬಾಲಿಸಿದ್ದು, ನಿಮ್ಮ ಮೇಲೆ ನಿಗಾ ಇಟ್ಟಿದ್ದನ್ನು ಗಮನಿಸಿರುವಿರಾ?”

“ಇಲ್ಲ, ಸರ್. ಅಂತಹದೇನೂ ನನ್ನ ಗಮನಕ್ಕೆ ಬಂದಿಲ್ಲ. ಸುಬ್ಬಯ್ಯನೂ ಹೇಳಿದಂತಿಲ್ಲ. ಬೇಕಾದರೆ ಆತನನ್ನು ವಿಚಾರಿಸಬೇಕು.”

“ಹಾಗಿದ್ರೆ ನಾವೀಗಲೇ ನಿಮ್ಮ ಮನೆಗೆ ಹೋಗೋಣವೇ? ಸುಬ್ಬಯ್ಯನನ್ನು ವಿಚಾರಿಸಿದ ಹಾಗೂ ಆಯ್ತು.”

ಕರಮಚಂದನ ಮಾತಿಗೆ ಆಕೆ ಹರ್ಷ ವ್ಯಕ್ತಪಡಿಸಿದಳು.

“ತುಂಬಾ ಧನ್ಯವಾದ, ಸರ್! ಸುಬ್ಬಯ್ಯನಿಗೆ ಖುಷಿಯಾಗುತ್ತದೆ.”

ನಾವು ಚೋನಾಕೆಯತ್ತ ಹೊರಡಲು ಅಣಿಯಾದೆವು.

****

ಮುಖ್ಯ ರಸ್ತೆಯಿಂದ ಸುಮಾರು ಅರ್ಧ ಕಿಲೋಮೀಟರ್ ಒಳಗಡೆಯಲ್ಲಿತ್ತು ಸುಬ್ಬಯ್ಯನ ನಿವಾಸ. ಒಂದು ಅಂತಸ್ತಿನ ಸೊಗಸಾದ ಮನೆ. ಎಡಗಡೆಯ ಇಳಿಜಾರಿನಲ್ಲಿ ಕಾಫಿ ತೋಟ. ಒಳಗಡೆಯಿಂದ ಗದ್ದಲ ಕೇಳಿಬಂತು. ಗೋಡೆಗೆ ಬಣ್ಣ ಬಳಿಯುವ ಕೆಲಸಗಾರರ ಸಂಭಾಷಣೆ.

ಆಳೊಬ್ಬ ಕದ ತೆರೆದ. ಹಜಾರದಲ್ಲಿ ಕೆಲಸಗಾರರಿಗೆ ಸೂಚನೆ ನೀಡುತ್ತಿದ್ದ ವ್ಯಕ್ತಿಯೇ ರಾಬಿನ್ ಸುಬ್ಬಯ್ಯ ಎಂದು ಊಹಿಸಿದೆ.

“ಸುಬ್ಬಯ್ಯ, ನಿನ್ನ ಸಮಸ್ಯೆಯನ್ನು ಪರಿಹರಿಸಲಿಕ್ಕೆ ಪತ್ತೆದಾರರು ಇಲ್ಲಿಗೇ ಬಂದಿದ್ದಾರೆ.” ಪತಿಷ್ಠಾ ಆತನನ್ನು ಉದ್ದೇಶಿಸಿ ಉಸುರಿದಳು.

“ಓಹ್! ಬನ್ನಿ, ಬನ್ನಿ…. ಸರ್! ಮನೆಯೊಳಗೆಲ್ಲ ಸ್ವಲ್ಪ ಅಸ್ತವ್ಯಸ್ತವಾಗಿದೆ. ತೊಂದರೆ ಇಲ್ಲಾ ತಾನೆ?…. ಕುಳಿತುಕೊಳ್ಳಿ.” ಕುರ್ಚಿ ಎಳೆದ ಸುಬ್ಬಯ್ಯ. ಪರಸ್ಪರರನ್ನು ಪರಿಚಯಿಸಿದಳು ಪತಿಷ್ಠಾ.

ಸಾಕಷ್ಟು ವಿಶಾಲವಾದ ಹಜಾರ. ಅದಕ್ಕೆ ಡಬಲ್ ಹೈಟ್ ಛಾವಣಿ ಇದ್ದು, ಆಕರ್ಷಕ ದೀಪವೊಂದನ್ನು ತೂಗುಹಾಕಲಾಗಿತ್ತು. ಹಜಾರಕ್ಕೆ ಚಾಚಿಕೊಂಡಂತಿರುವ, ಕಟಕಟೆ ಹೊಂದಿದ, ತೆರೆದಂತಹ ವಿನ್ಯಾಸದ ಮೊದಲ ಮಹಡಿ. ಅಲ್ಲಿ ಎಡಭಾಗದಲ್ಲಿ ಎರಡು ಕೋಣೆಗಳು, ಮೆಟ್ಟಿಲುಗಳು ಸೇರುವ ಜಾಗದಲ್ಲಿ ಪುಟ್ಟ ಹಜಾರ. ಮಹಡಿಗೆ ಹೋಗಲು ಬಲಭಾಗದಲ್ಲಿ ಮೆಟ್ಟಿಲು. ಅದರ ಕಟಕಟೆಯು ಮಹಡಿಯ ಹಜಾರ ದಾಟಿ, ಕೋಣೆಗಳನ್ನು ಹಾದು, ಎಡಭಾಗದ ಗೋಡೆಯನ್ನು ತಾಕಿತ್ತು. ಆ ಕೋಣೆ ಮತ್ತು ಕಟಕಟೆಯ ನಡುವೆ ಪುಟ್ಟ ಪ್ಯಾಸೇಜು. ಬೂದು ಬಣ್ಣದ ಗೋಡೆಯ ಮೇಲೆ ಕಂಗೊಳಿಸುವ ಹಳೆಯ ಕಾಲದ ಗಡಿಯಾರ….. ಆದರೆ ಅದು ತನ್ನ ಜೀವನದ ಅಂತ್ಯ ಕಂಡಿರಬೇಕು….. ಗಡಿಯಾರ ನಿಂತಿತ್ತು! ನಿಂತ ಗಡಿಯಾರ!! ನನಗೇಕೋ ಅದು ಅವಲಕ್ಷಣದಂತೆ ಗೋಚರಿಸಿತು.

“ಸರ್…. ನಿಮಗೆ ಈ ಮೆಸೇಜು ನೋಡಿದ್ರೆ ಏನನ್ನಿಸುತ್ತದೆ?…. ನನಗೆ ಏನೂ ಅರ್ಥವಾಗುತ್ತಾ ಇಲ್ಲ.” ಸುಬ್ಬಯ್ಯ ತನ್ನ ಚರವಾಣಿಯಲ್ಲಿದ್ದ ಸಂದೇಶಗಳನ್ನು ತೋರಿಸಿದ.

“ನಿಮಗೆ ಏನು ಅನ್ನಿಸಿತು?” ಪ್ರತಿಯಾಗಿ ಪ್ರಶ್ನೆ ಎಸೆದ ಕರಮಚಂದ.

“ಕೊಲೆಯಾಗಿದ್ದು ನಿಜವಿರಬೇಕು ಎಂದು ಅನ್ನಿಸುತ್ತದೆ. ನನಗೆ ನಂಬಿಕೆ ಹುಟ್ಟಿಸಲಿಕ್ಕೆ ಅನಾಮಿಕ ಸುಳ್ಳು ಸಂದೇಶ ಕಳಿಸಿದ್ದಾನೆಯೇ? ಹಣ ಕೊಟ್ಟದ್ದು ನಿಜವಿರಬಹುದೇ? ಯಾರು, ಯಾಕೆ ಹಣ ಕೊಟ್ಟರು? ಆ ವ್ಯಕ್ತಿಗೆ ನನ್ನನ್ನು ಬ್ಲಾಕ್‍ಮೇಲ್ ಮಾಡ್ತಾ ಇರುವುದು ತಿಳಿದದ್ದು ಹೇಗೆ? ಇದೆಲ್ಲಾ ಒಂದು ತಮಾಷೆ ಇರಬಹುದೇ? ನನ್ನ ತಲೆ ಚಿಟ್ಟುಹಿಡಿದು ಹೋಗಿದೆ. ಒಂದು ಪ್ರಶ್ನೆಗೂ ಉತ್ತರ ಗೊತ್ತಿಲ್ಲ.”

“ನಿಮ್ಮಲ್ಲಿ ಇತ್ತೀಚಿಗೆ ಅಪರಿಚಿತರು ಯಾರಾದರೂ ಬಂದಿದ್ದರೇ? ಅಥವಾ ನೀವು ಗಮನಿಸಿದ್ದೀರಾ?” ಕರಮಚಂದ ವಿಚಾರಿಸಿದ.

“ಯಾರೂ ಬಂದಂತಿಲ್ಲ. ಏಕೆ?”

“ಇಷ್ಟು ವರ್ಷ ನಿಮಗೆ ಈ ಬಗೆಗೆ ತಿಳಿಸದ ಅನಾಮಿಕ ಈಗ ಏಕಾಏಕಿ ಸಂದೇಶ ಕಳಿಸಲು ಕಾರಣವೇನು? ಪ್ರಾಯಶಃ ಆತನಿಗೆ ನಿಮ್ಮ ಇರವು ಗೊತ್ತಿರಲಿಲ್ಲ. ಅಕಸ್ಮಾತ್ ಆಗಿ ಆತ ನಿಮ್ಮನ್ನು ಭೇಟಿಯಾಗಿದ್ದಾನೆ. ಆಗ ಅವನಿಗೆ ನೀವು ಪೂಣಚ್ಚರ ಮಗ ಎಂದು ತಿಳಿದಿದೆ. ನಿಮ್ಮ ತಂದೆಯ ಸಾವಿನ ಬಗೆಗೆ ಆತನಿಗೆ ಏನೋ ವಿವರ ಗೊತ್ತಿತ್ತು. ಈಗ ಆತ ಅದನ್ನು ಹಣ ಮಾಡಲು ಬಳಸಿಕೊಂಡಿದ್ದಾನೆ, ಅಷ್ಟೆ. ಅದಕ್ಕೆ ಕೇಳಿದೆ, ಯಾರಾದರೂ ನಿಮ್ಮ ಮನೆಯ ಮೇಲೆ ನಿಗಾ ಇಟ್ಟದ್ದನ್ನು ಗಮನಿಸಿದ್ದೀರಾ? ಅಥವಾ ನೀವು ಇದುವರೆಗೂ ಭೇಟಿಯಾಗದ ಯಾರಾದರೂ ನಿಮ್ಮ ಸಂಪರ್ಕಕ್ಕೆ ಬಂದಿದ್ದಾರೆಯೆ?”

“ಓಹ್!…. ಸಿಸಿಟೀವಿ ಹಾಕಿಸಿದ್ದೀರಿ? ಯಾಕೆ? ಏನಾದರೂ ಅನುಮಾನ ಇತ್ತಾ?” ನಾನು ಕೇಳಿದೆ.

“ಸಿಸಿಟೀವಿನ ಹಾಕಿಸಿದ್ದು ಇವಳ ದೊಡ್ಡಪ್ಪ, ಕುರುಂಬಯ್ಯನವರು. ಎರಡು ವಾರ ಆಯ್ತಷ್ಟೇ. ಅವರಿಗೆ ಹೆದರಿಕೆ ಹೆಚ್ಚು. ನಾನು ಬೇಡ ಅಂದರೂ ಕೆಮರಾ ಹಾಕಿಸಿದ್ದಾರೆ. ನನಗೇನೂ ಅನುಮಾನ ಇರಲಿಲ್ಲ. ಮತ್ತೆ ಅಪರಿಚಿತರು ಇತ್ತೀಚಿಗೆ….”

“ಸುಬ್ಬಯ್ಯ…. ಪುತ್ತರಿರ ಚಿದ್ವಿಲಾಸ್ ನಮಗೆ ಹೊಸ ಪರಿಚಯ ಅಲ್ಲವೇ?” ಪತಿಷ್ಠಾ ಮಧ್ಯೆ ಬಾಯಿತೂರಿಸಿದಳು.

“ಅವನ ಪರಿಚಯವಾಗಿ ತಿಂಗಳು ಮೂರು ಕಳೆಯಿತು. ಅದು ಹೊಸತು ಆಗುವುದು ಹೇಗೆ?” ಸುಬ್ಬಯ್ಯ ಆಕ್ಷೇಪಿಸಿದ.

“ತಡೆಯಿರಿ ಸುಬ್ಬಯ್ಯ, ನಿಮ್ಮಾಕೆ ಹೇಳುವುದರಲ್ಲಿ ಅರ್ಥವಿದೆ. ಇತ್ತೀಚೆಗೆ ಅಂದರೆ ಈ ಪ್ರಕರಣ ಆರಂಭವಾಗುವ ಸಮಯದಲ್ಲಿ. ಹೇಳಿ, ಅವನು ಯಾರು?”

“ಅವನು ನಮಗಷ್ಟೇ ಹೊಸ ಪರಿಚಯ.  ಕುರುಂಬಯ್ಯನವರಿಗೆ ಹಳೆಯ ಪರಿಚಯ. ಅವರ ಮಿತ್ರ ಪುತ್ತರಿರ ನಂಜಪ್ಪನವರ ಮಗ. ಚೆಯ್ಯಂಡಾಣೆಯಲ್ಲಿ ಇರುವುದು. ಕುರುಂಬಯ್ಯನವರಿಗೆ ನಂಜಪ್ಪರ ಸಂಪರ್ಕ ಇಲ್ಲದೇ ಹತ್ತು ವರ್ಷದ ಮೇಲಾಗಿರಬಹುದು. ಇತ್ತೀಚಿಗೆ ಅವರು ತೀರಿಕೊಂಡರಂತೆ. ಆ ಸಮಯಕ್ಕೆ ಅವರು ಕುರುಂಬಯ್ಯನವರನ್ನು ಸ್ಮರಿಸಿಕೊಂಡರಂತೆ. ಕುರುಂಬಯ್ಯನವರಿಗೆ ಉಡುಗೊರೆಯೊಂದನ್ನು ಕೊಡಲು ಬಯಸಿದ್ದರಂತೆ. ಅದಕ್ಕೇ ಅವರನ್ನು ಹುಡುಕಿಕೊಂಡು, ಚಿದ್ವಿಲಾಸ್ ಇಲ್ಲಿಗೆ ಬಂದ. ಒಳ್ಳೆಯ ಮನುಷ್ಯ. ತಮಾಷೆಯ ಮಾತುಗಾರ. ನನಗೂ ಅವನ ಜೊತೆ ಖುಷಿಯಾಯ್ತು. ಆಮೇಲೆ ಒಂದೆರಡು ಬಾರಿ ಬಂದಿದ್ದ. ಅವನನ್ನು ಅಪರಿಚಿತ ಎನ್ನುವುದು ಹೇಗೆ?”

“ನೀವು ಹೇಳುವುದು ಸರಿ. ನಿಮ್ಮ ಮನೆಯ ಮೇಲೆ ಯಾರಾದರೂ ಗಮನ ಇಟ್ಟದ್ದನ್ನು ಕಂಡಿದ್ದೀರಾ? ಸಿಸಿಟೀವಿಲಿ ನೋಡಿದ್ದೀರಾ?”

ಅಷ್ಟರಲ್ಲಿ ಚಹಾ ಹಿಡಿದುಕೊಂಡು ಬಂದ ಆಳು ನಮ್ಮತ್ತ ಮತ್ತು ಸುಬ್ಬಯ್ಯನವರತ್ತ ಅನುಮಾನಸ್ಪದವಾಗಿ ದಿಟ್ಟಿಸಿದ. ಅವನ ಕಣ್ಣುಗಳು ಏನೋ ಹೇಳುವಂತಿತ್ತು.

“ಏನು ಮಾದಯ್ಯ? ಏನಾದರೂ ಹೇಳುವುದಿದೆಯೆ?” ಸುಬ್ಬಯ್ಯ ಅನುಮಾನ ವ್ಯಕ್ತಪಡಿಸಿದ.

“ಸರ್…. ಒಬ್ಬ ಮನುಷ್ಯ ಕೆಲವು ದಿವಸಗಳಿಂದ ನಮ್ಮ ಮನೆಯ ಮೇಲೆ ನಿಗಾ ಇಟ್ಟಹಾಗೆ ಇದೆ. ಬೌಲರ್ ಕ್ಯಾಪ್, ಕಪ್ಪು ಕನ್ನಡಕ ಹಾಕಿಕೊಂಡ ಆಸಾಮಿ.  ಕೆಲವೊಮ್ಮೆ ರಸ್ತೆಯ ಹತ್ತಿರ ಇರುವ ಕಟ್ಟೆಯಲ್ಲಿ ಸುಮ್ಮನೆ ಕುಳಿತು ನಮ್ಮ ರಸ್ತೆಯ ಕಡೆಗೆ ನೋಡುತ್ತಾ ಇರುವುದನ್ನು ಕಂಡಿದ್ದೇನೆ. ಒಂದೆರಡು ಸಲ ಮನೆಯ ಬಳಿಗೂ ಬಂದಿದ್ದ. ನಾನು ಆಗ ತಲೆಕೆಡಿಸಿಕೊಂಡಿರಲಿಲ್ಲ. ಈಗ ಇವರು ಕೇಳುವಾಗ ನನಗೆ ಯಾಕೋ ಅನುಮಾನ ಬರುತ್ತದೆ….”

“ಯಾರು ಅವನು? ಸಿಸಿಟೀವಿ ನೋಡಿದ್ರೆ ಗೊತ್ತಾಗಬಹುದೇ?” ಸುಬ್ಬಯ್ಯ ಉತ್ಸಾಹಗೊಂಡ.

“ಅಷ್ಟು ಸಮೀಪ ಬಂದಿಲ್ಲ ಅವನು. ಸಿಸಿಟೀವಿಲಿ ಕಾಣ್ಸಲ್ಲ. ನಿನ್ನೆಯಿಂದ ಕಟ್ಟೆಯಲ್ಲೂ ಕಾಣಿಸುತ್ತಿಲ್ಲ.”

“ಸುಬ್ಬಯ್ಯ, ಒಮ್ಮೆ ಸಿಸಿಟೀವಿಲಿ ಪರೀಕ್ಷಿಸಿ ನೋಡಿ. ನಾನೊಮ್ಮೆ ಮನೆಗೆ ಸುತ್ತುಹಾಕಿ ಬರ್ತೇನೆ.”

ವಿಶಾಲವಾದ ಕಾಂಪೌಂಡು. ಸೊಗಸಾದ ಕೈದೋಟ. ಕಿತ್ತಳೆಮರಗಳು. ಕರಮಚಂದ ಅತ್ತಿತ್ತ ದೃಷ್ಟಿ ಚಲಾಯಿಸುತ್ತಾ ಹೆಜ್ಜೆಹಾಕಿದ. ನನಗೆ ಕರಮಚಂದನ ನಡೆ ವಿಚಿತ್ರವಾಗಿ ಕಾಣಿಸಿತು. ಸಣ್ಣ ಪುಟ್ಟ ಸಂಗತಿಗಳಲ್ಲೇ ದೊಡ್ಡ ರಹಸ್ಯ ಹುದುಗಿರುವುದೆಂಬ ಕರಮಚಂದನ ತತ್ತ್ವ ನನಗೆ ಗೊತ್ತಿದ್ದರೂ, ಈ ಪ್ರಕರಣದಲ್ಲಿ ಈ ರೀತಿಯ ಹುಡುಕಾಟದ ಪ್ರಸ್ತುತತೆ ನನಗೆ ಅರ್ಥವಾಗಲಿಲ್ಲ. ನಾವು ಮನೆಯ ಬಲಪಾಶ್ರ್ವಕ್ಕೆ ಬಂದಿದ್ದೆವು. ಕಟ್ಟಡಕ್ಕೆ ಹೊಂದಿಕೊಂಡು ತುಸು ದೂರದವರೆಗೆ ಹಸಿರು ಹುಲ್ಲಿನ ಲಾನ್. ಅದರಲ್ಲಿ ಯಾವ ಹೆಜ್ಜೆ ಗುರುತೂ ಇರುವುದು ಅಸಾಧ್ಯ!

“ಬಿದ್ದಪ್ಪ, ಇಲ್ಲಿ ನೋಡಿದೆಯಾ, ಹಣ್ಣು ಕೀಳಲು ಬಳಸುವ ದೋಟಿ. ಕೊಕ್ಕೆಕೋಲು ಅಂತ ಕೂಡಾ ಹೇಳ್ತಾರೆ.” ನೆಲದಲ್ಲಿ ಬಿದ್ದಿದ್ದ ದೋಟಿಯೊಂದು ಕರಮಚಂದನನ್ನು ಆಕರ್ಷಿಸಿತ್ತು.

“ನನಗೆ ಇದರಲ್ಲಿರುವ ಕೊಕ್ಕೆ ಬಹಳ ಆಸಕ್ತಿಕರವಾಗಿ ತೋರುತ್ತಿದೆ. ಸಾಮಾನ್ಯ ದೋಟಿಗಳಲ್ಲಿ ಮೇಲಿನಿಂದ ಹಣ್ಣನ್ನು ಎಳೆಯಲು ಕೆಳಮುಖವಾಗಿರುವ ಕೊಕ್ಕೆ ಇರುತ್ತದೆ. ಇದರಲ್ಲಿ ಅದರ ಜೊತೆಗೆ ಮೇಲಕ್ಕೆ ತಳ್ಳುವಂತಹ ಕೊಕ್ಕೆಯೂ ಇದೆ…. ಅದು ಯಾಕಾಗಿ?….  ಓಹ್!….. ಯಾರಾದರೂ ಮರವೇರಿದ್ದರೆ, ಅವರಿಗೆ ಗೆಲ್ಲನ್ನು ಎತ್ತಿ ಕೊಡಲು ಇದು ಉಪಯೋಗಕಾರಿ! ಇಂತಹದನ್ನು ನಾನು ಇದುವರೆಗೆ ಕಂಡಿದ್ದಿಲ…. ಹ್ಹ….  ಹ್ಹಾ….!” ಹಾಗೆಂದು ದೋಟಿಯನ್ನು ಪಕ್ಕಕ್ಕೆ ಎಸೆದ ಕರಮಚಂದ.

ನಡೆದಾಡುತ್ತಾ, ನಾವು ಮನೆಯ ಹಿಂಭಾಗಕ್ಕೆ ಬಂದೆವು. ಅಲ್ಲಿಂದ ಇಳಿಜಾರಿನಲ್ಲಿದ್ದ ಕಾಫಿತೋಟ ರಮ್ಯವಾಗಿ ತೋರುತ್ತಿತ್ತು. ಅಲ್ಲಿಯೂ ಕೂಡಾ ಆಕರ್ಷಕ ಹೂವಿನ ಗಿಡಗಳಿದ್ದವು. ಮನೆಗೆ ಒತ್ತಿಕೊಂಡಿದ್ದ ಲಾನ್‍ನಲ್ಲಿ ಬೆಕ್ಕೊಂದು ದೋಸೆಯನ್ನು ತಿನ್ನುವುದರಲ್ಲಿ ಮಗ್ನವಾಗಿತ್ತು. ಕರಮಚಂದ ಮೆಲುವಾಗಿ ಅದರ ತಲೆ ಸವರಿದ. ಆತನಿಗೆ ಪ್ರಾಣಿಗಳ ಮೇಲೆ ಬಲು ಮಮತೆ.

“ಓಹ್! ಇವ್ನಿಗೆ ಮೂರು ದಿವಸಗಳಿಗೆ ಸಾಕಾಗುವಷ್ಟು ದೋಸೆಗಳಿವೆ ಇಲ್ಲಿ!…. ತಿನ್ನು…. ತಿನ್ನು!” ಎಂದು ಮತ್ತೊಮ್ಮೆ ಮೈಮೇಲೆ ಕೈಯಾಡಿಸಿದ. ಅದು ಮೆಲುವಾಗಿ ಒಮ್ಮೆ ‘ಮಿಯಾಂವ್’ ಎಂದು ಮತ್ತೆ ತಿನ್ನುವ ಕೆಲಸ ಮುಂದುವರಿಸಿತು.

ತುಸು ಹೊತ್ತಿನಲ್ಲಿ, ನಾವು ಮತ್ತೆ ಮನೆಯೊಳಗಿದ್ದೆವು. ಆವಾಗ ಸುಬ್ಬಯ್ಯ ಸಿಸಿಟೀವಿಯಲ್ಲಿ ಹುಡುಕುವ ಕೆಲಸ ಮುಗಿಸಿದ್ದ.

“ಅವನು ಕಾಣಿಸಲಿಲ್ಲ, ಸರ್. ಸುಮಾರು ಹತ್ತು ದಿವಸಗಳ ಡಾಟಾ ನೋಡಿದೆ. ಇನ್ನೂ ಹಿಂದಿನ ದಿನಗಳದ್ದು ಬೇಕಿದ್ದರೆ, ನಾಳೆ ನೋಡಿರ್ತೀನಿ…. ನಿಮಗೇನಾದರೂ ಸುಳಿವು ಸಿಕ್ತಾ?”

“ಇರಲಿ ಬಿಡಿ, ಸುಬ್ಬಯ್ಯ. ಹೇಳಿ, ನಿಮ್ಮ ಮನೆಯಲ್ಲಿ ಯಾರೆಲ್ಲಾ ಇದ್ದೀರಿ?”

“ನಾನು, ನನ್ನ ಹೆಂಡ್ತಿ ಪತಿಷ್ಠಾ ಮತ್ತು ಆಕೆಯ ದೊಡ್ಡಪ್ಪ ಕುರುಂಬಯ್ಯ. ಕೆಲಸದಾಳು ಮಾದಯ್ಯ ಬೆಳಗ್ಗೆ ಬಂದು, ಅಡುಗೆ ಮಾಡಿ, ಹೋಗ್ತಾನೆ. ಈವತ್ತು ಕೆಲಸಗಾರರು ಇದ್ದಾರೆಂದು ಅವನಿಗೆ ಸಂಜೆಯವರೆಗೆ ಇರಲಿಕ್ಕೆ ಹೇಳಿದ್ದೇನೆ.”

“ಕುರುಂಬಯ್ಯ ಎಲ್ಲಿದ್ದಾರೆ?”

“ಅವರು ಮಹಡಿಯಲ್ಲಿರೋ ಕೋಣೆಯಲ್ಲಿರೋದು. ಅವರು ಕೆಳಗಿಳಿದು ಬರೋದೇ ಕಡಮೆ. ಸ್ವಲ್ಪ ವಿಚಿತ್ರ ಆಸಾಮಿ. ಮಾತುಕತೆ ಕಡಮೆ. ಅವರಿಗೆ ಮಕ್ಕಳಿಲ್ಲ. ಮಿತ್ರರು ಎಂದು ಯಾರೂ ಇಲ್ಲ. ಅಧ್ಯಾತ್ಮದ ಹುಚ್ಚು. ಕೋಣೆಯಲ್ಲಿ ಧ್ಯಾನ ಮಾಡ್ತಾ ಇರುತ್ತಾರೆ. ಇಷ್ಟೇ ಹೊತ್ತಿಗೆ ಊಟ, ತಿಂಡಿ ಎಂದೇನಿಲ್ಲ. ನಾವು ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟ ಎಲ್ಲ ಮಹಡಿಯ ಹಜಾರದ ಮೇಜಿನಲ್ಲಿ ಇಟ್ಟರೆ ಮುಗಿಯಿತು. ಅವರಿಗೆ ಬೇಕಾದ ಹೊತ್ತಿಗೆ ತಿನ್ನುತ್ತಾರೆ. ರಾತ್ರಿ ಊಟ ಮಾಡೋಲ್ಲ. ಯಾರು ಹೇಳಿದರೂ ಕೇಳೋ ಜಾತಿ ಅಲ್ಲ. ಮೇಲಿನಿಂದ ಕೆಳಗಿಳಿದು ಬರೋದೇ ಕಮ್ಮಿ.”

“ಬಹಳ ಆಸಕ್ತಿ ಹುಟ್ಟಿಸುವಂತಹ ವ್ಯಕ್ತಿತ್ವ. ಈಗ ಕೋಣೆಯಲ್ಲಿದ್ದಾರೆಯೇ?”

“ಹೌದು, ಭೇಟಿಯಾಗಬೇಕೆ?”

“ಹೋಗುವ ಮೊದಲೊಮ್ಮೆ ಭೇಟಿಯಾಗೋಣ. ಚಿದ್ವಿಲಾಸ್ ಅಂತ ನೀವು ಹೇಳಿದಾತ ಕುರುಂಬಯ್ಯನವರ ಮಿತ್ರರ ಮಗ ಅಲ್ವೇ?”

“ಹೌದು. ಆದರೆ ಇವರು ಅವನ ಜೊತೆ ಮಾತನಾಡಿದ್ದೇ ಕಡಮೆ. ಬಂದ ಮೊದಲನೇ ಸಲ, ಸ್ವಲ್ಪ ಹೊತ್ತು, ಅವರ ಕೋಣೆಯಲ್ಲಿ ಮಾತಾಡ್ತಾ ಇದ್ದದ್ದನ್ನು ಕಂಡಿದ್ದೆ. ಆಮೇಲೆ ಅವನು ಬಂದಾಗಲೆಲ್ಲ, ನಮ್ಮ ಜೊತೆ ಮಾತಾಡ್ತಾ ಇರುತ್ತಿದ್ದ. ಮೇಲೆ ಹೋಗಿದ್ದೇ ಇಲ್ಲ. ಅವರಿಗೆ ಮನುಷ್ಯರು ಬೇಡ.”

“ಸುಬ್ಬಯ್ಯ, ಅದೇನು ಗಡಿಯಾರ ಹಾಳಾಗಿದೆಯೇ? ನಿಂತಹಾಗಿದೆ. ಅಂತಹ ಗ್ರಾಂಡ್ ಫಾದರ್ ಗಡಿಯಾರಗಳು ಈಗ ಅಪರೂಪ.” ಸುಬ್ಬಯ್ಯನ ಮಾತನ್ನು ತುಂಡರಿಸಿ, ಗಡಿಯಾರ ನೋಡುತ್ತಾ, ಕರಮಚಂದ ಉದ್ಗಾರ ತೆಗೆದ.

“ಓಹ್!….  ಬಹುಶಃ ಕುರುಂಬಯ್ಯನವರು ಕೀ ಕೊಡಲಿಕ್ಕೆ ಮರೆತಿರಬೇಕು. ಯಾವಾಗಲೂ ಸರಿಯಾಗಿ ರಾತ್ರಿ ಹತ್ತು ಗಂಟೆಗೆ ಅವರು ಕೀ ಕೊಡುವುದು. ಬಹಳ ಶಿಸ್ತು ಇದೆ ಅವರಿಗೆ ಆ ವಿಷಯದಲ್ಲಿ. ಅದರ ಮೇಲೆ ಅವರಿಗೆ ಬಹಳ ಅಭಿಮಾನ. ಅವರ ತಂದೆಯಿಂದ ಬಂದ ಗಡಿಯಾರವಂತೆ.”

ನಿಂತ ಗಡಿಯಾರ! ಅದು ಸಮಯ ನಾಲ್ಕೂವರೆ ತೋರುತ್ತಿತ್ತು!! ಆದರೆ ಸಮಯ ಸಂಜೆಯ ಆರೂವರೆ ಗಂಟೆ ದಾಟಿತ್ತು. ಕರಮಚಂದ ಅದನ್ನು ತುಸು ಹೊತ್ತು ಅವಲೋಕಿಸುತ್ತಿದ್ದ. ಅವನ ಮೊಗದಲ್ಲಿ ಕಿರು ನಗು ಮೂಡಿತು.

“ಸುಬ್ಬಯ್ಯ, ಬ್ಲಾಕ್‍ಮೇಲರ್ ನಿಮಗೆ ಹಣ ಹಿಡಿದುಕೊಂಡು ಎಲ್ಲಿಗೆ ಬರುವುದಕ್ಕೆ ಹೇಳಿದ್ದ?”

“ಅರಪಟ್ಟು ಭಗವತಿ ದೇವಳದ ಹತ್ತಿರದ ರಸ್ತೆಯಲ್ಲೆಲ್ಲೋ ಬರಲಿಕ್ಕೆ ಹೇಳಿದ್ದ. ನನ್ನ ತಂದೆಯನ್ನು ಕೊಲೆ ಮಾಡಿರಬೇಕು ಎಂದು ನನಗೀಗ ಅನ್ನಿಸಲಿಕ್ಕೆ ತೊಡಗಿದೆ. ಐದು ಲಕ್ಷ ಕೊಟ್ಟಾದರೂ, ಆ ವಿಡಿಯೋ ಪಡೆಯಬೇಕಿತ್ತು. ತಪ್ಪು ಮಾಡಿದೆ.”

“ಚಿದ್ವಿಲಾಸ್ ಇಲ್ಲಿಗೆ ಬಂದಿದ್ದೇಕೆ?”

“ಅವನ ತಂದೆ ನಂಜಪ್ಪನವರು ಕುರುಂಬಯ್ಯನವರಿಗೆ ಯಾವುದೋ ನೆನಪಿನ ಕಾಣಿಕೆ ಕೊಡಲಿಕ್ಕೆ ಹೇಳಿದ್ದರಂತೆ. ಅದನ್ನು ಕೊಡಲು ಬಂದಿದ್ದ.”

“ಅವನಿಗೆ ನೀವು ಈ ಅನಾಮಿಕನ ಸಂದೇಶಗಳ ಬಗ್ಗೆ ಹೇಳಿದ್ದೀರಾ?”

“ಹೂಂ. ಸೂಕ್ಷ್ಮವಾಗಿ ಮೆಸೇಜುಗಳ ಬಗ್ಗೆ ಹೇಳಿ, ನನ್ನ ತಂದೆಯ ಬಗ್ಗೆ ಆತನಿಗೇನಾದರೂ ಗೊತ್ತಾ ಎಂದು ಕೇಳಿದೆ. ಆದರೆ ಆತ ತನಗೇನೂ ಗೊತ್ತಿಲ್ಲ ಎಂದ.”

“ಓ.ಕೆ., ನೀವು ಈ ಬಗ್ಗೆ ಯಾರಲ್ಲೆಲ್ಲ ವಿಚಾರಿಸಿದ್ದೀರಿ?”

“ಇಬ್ಬರಲ್ಲಷ್ಟೇ ವಿಚಾರಿಸಿದ್ದು. ಒಬ್ಬರು, ನಿವೃತ್ತ ಕರ್ನಲ್ ಗಣಪತಿ. ಇನ್ನೊಬ್ಬರು, ಕಳ್ಳಿಚಂಡ ಧನು ಎಂದು; ಅವರು ಪ್ಲಾಂಟರು. ಇಬ್ಬರೂ ಆವತ್ತು ತಂದೆಯ ಜೊತೆಗೆ ಪಿಕ್ನಿಕ್ಕಿಗೆ ಹೋದವರು.”

“ನಿಮಗೆ ಮೆಸೇಜು ಬಂದ ಬಗೆಗೆ ಅವರಿಗೆ ಹೇಳಿದ್ದೀರ?”

“ಗಣಪತಿಯವರಿಗೆ ಹೇಳಿಲ್ಲ. ಆದರೆ ಧನು ಅವರಲ್ಲಿ ಹೇಳಬೇಕಾಯ್ತು. ಈಗ ಯಾಕೆ ಅನುಮಾನ? ಯಾರು ಹೇಳಿದರು? ಎಂದೆಲ್ಲ ಅವರು ಪ್ರಶ್ನೆ ಮಾಡಿದರು. ಆಗ ನಾನು ಹೇಳಬೇಕಾಯ್ತು. ಆದರೆ ಅವರೊಂದು ಉಪಯುಕ್ತ ಮಾಹಿತಿ ನೀಡಿದರು. ಆ ದಿವಸ ಜಲಪಾತ ವೀಕ್ಷಣೆಗೆ ಮೇಲ್ಭಾಗಕ್ಕೆ ಹೋದ ಕೆಲವೇ ಮಂದಿಯಲ್ಲಿ ತಿಮ್ಮಯ್ಯನವರೂ ಇದ್ದರು ಎಂದು ಹೇಳಿದರು.”

“ಓಹ್! ಅದು ಬಹಳ ಕುತೂಹಲಕಾರಿಯಾದ ವಿಷಯ…. ಇರಲಿ…. ಸಿಸಿಟೀವಿಯನ್ನು ಸರಿಯಾಗಿ ಪರಿಶೀಲಿಸಿದ್ದೀರ? ಆ ವ್ಯಕ್ತಿ ಕಾಣಿಸಲೇ ಇಲ್ವಾ? ನಿನ್ನೆ ನೀವು ಇಲ್ಲದೇ ಇದ್ದಾಗ ಯಾರೆಲ್ಲಾ ಬಂದಿದ್ದರು?”

“ಗಮನಿಸಿದೆ. ಯಾರೂ ಅಂಥವರು ಕಾಣಿಸಿಲ್ಲ. ನಿನ್ನೆ ಬೆಳಗ್ಗೆ ಮಾದಯ್ಯ ಬಂದು, ಹತ್ತೂವರೆಯ ಹೊತ್ತಿಗೆ ಹೋದ. ಆಮೇಲೆ ಯಾರೂ ಬಂದಿಲ್ಲ, ಯಾರೂ ಹೋಗಿಲ್ಲ.”

“ಎಲ್ಲೆಲ್ಲಾ ಕೆಮರಾ ಇದೆ?”

“ಮನೆಯ ಎದುರು ಒಂದು, ಹಿಂದೆ ಹಜಾರದಲ್ಲಿ ಒಂದಿದೆ.”

ಅಷ್ಟರಲ್ಲಿ ಮಾದಯ್ಯ ಮತ್ತೊಮ್ಮೆ ಕಾಫಿ ಹಿಡಿದುಕೊಂಡು ಬಂದ.

“ಮಾದಯ್ಯ, ನಿಮ್ಮ ಬೆಕ್ಕಿಗೆ ದೋಸೆ ಬಹಳ ಇಷ್ಟ ಅಲ್ವೇ? ಬೆಳಗ್ಗೆ ತಿಂಡಿಗೆ ದೋಸೆ ಮಾಡಿದ್ದೀರಿ ತಾನೇ?”

“ಹೌದು ಸರ್, ನಿಮಗೆ ಹೇಗೆ ಗೊತ್ತಾಯ್ತು?”

“ಮನೆ ಹಿಂದೆ ಬೆಕ್ಕು ದೋಸೆ ತಿನ್ನತ್ತಾ ಇತ್ತು!”

“ಬೆಳಗಿನಿಂದ ಬೆಕ್ಕುಗಳು ಕಾಣಿಸಲಿಲ್ಲ. ದೋಸೆ ಎತ್ತಿಟ್ಟಿದ್ದೆ. ಅಲ್ಲಿ ದೋಸೆ ಹೇಗೆ ಸಿಕ್ತು?…. ನೀವು ಹೇಳಿದ್ದು ಖರೆ. ಅದಕ್ಕೆ ದೋಸೆ ಅಂದರೆ ಪ್ರಾಣ. ಕರಿದ ತಿಂಡಿಗಳೂ ಇಷ್ಟ. ಕ್ಯಾರೆಟ್ ತಿನ್ನುವ ಬೆಕ್ಕನ್ನು ನೀವೆಲ್ಲಾದರೂ ನೋಡಿದ್ದೀರಾ?” ಮಾದಯ್ಯ ಹೆಮ್ಮೆಯಿಂದ ತನ್ನ ಬೆಕ್ಕಿನ ಬಗ್ಗೆ ಕೊಚ್ಚಿಕೊಂಡ.

ಆನಂತರ ನಾವು ಮಹಡಿ ಏರಿದೆವು. ವಿಶಾಲವಾದ ಹಜಾರ. ಅದಕ್ಕೆ ತೆರೆದುಕೊಂಡಂತೆ ಎರಡು ಕೋಣೆಗಳು. ಅಲ್ಲಿಂದ ನಿಂತರೆ, ಕೆಳಗೆ ನೆಲಅಂತಸ್ತಿನ ಹಜಾರ, ಅದಕ್ಕೆ ಚಾಚಿಕೊಂಡಿದ್ದ ಅಡುಗೆಕೋಣೆಯ ಪಾಶ್ರ್ವ ಕಾಣಿಸುತ್ತಿತ್ತು. ಹಜಾರದ ಆ ಕೊನೆಯಲ್ಲಿ ಒಂದು ಕುರ್ಚಿ ಮತ್ತು ಮೇಜು ಇದ್ದವು. ಅದರ ಮೇಲೆ ಯಾರೋ ಊಟ ಮಾಡಿ ಇರಿಸಿದ ತಟ್ಟೆಯಿತ್ತು.

“ನಮ್ ಮಾವನಿಗೆ ನಾವು ಇಲ್ಲೇ ಊಟ ಇಟ್ಟುಬಿಡೋದು. ತಮಗೆ ಇಷ್ಟ ಬಂದಷ್ಟು ಹೊತ್ತಿಗೆ ಬಂದು ತಿನ್ನುತ್ತಾರೆ. ಕೆಳಗೆ ಬನ್ನಿ, ಜೊತೆಯಾಗಿ ಊಟ ಮಾಡೋಣ ಅಂದರೆ ಕೇಳುವುದಿಲ್ಲ.”

“ಅವರು ಹೊರಗಡೆ ಎಲ್ಲೂ ಹೋಗೋದಿಲ್ಲವೇ?”

“ಬಹಳ ಅಪರೂಪ. ಇಲ್ವೇ ಇಲ್ಲ ಎಂದೇನಿಲ್ಲ. ಹೆಚ್ಚಾಗಿ, ಅವರಿಗೆ ಏನಾದರೂ ಬೇಕಿದ್ದರೆ, ನಾನೇ ತಂದು ಕೊಡುತ್ತೇನೆ.”

ಸುಬ್ಬಯ್ಯ ಮೆಲುವಾಗಿ ಒಂದು ಕೋಣೆಯ ಬಾಗಿಲು ಬಡಿದ. ಒಂದೆರಡು ಕ್ಷಣಗಳ ನಂತರ ಅಗಳಿ ತೆಗೆದ ಶಬ್ದ ಕೇಳಿಸಿತು. ಬಿಳುಪು ಪೊದೆ ಮೀಸೆಯ, ದೃಢಕಾಯದ ಆಸಾಮಿ ಕದ ತೆರೆದು, ನಮ್ಮತ್ತ ಅಚ್ಚರಿಯ ದಿಟ್ಟಿ ಬೀರಿದ.

“ಇವರು ಅಡ್ಡಂಡ ಕರಮಚಂದ ಅಂತ. ವಕೀಲರು. ಪತ್ತೆದಾರಿಯಲ್ಲಿ ಆಸಕ್ತಿ. ಇವರು ಅವರ ಸಹಾಯಕ, ಮಾಚಿಮಾಡ ಪ್ರಸಾದ್ ಬಿದ್ದಪ್ಪ.” ಸುಬ್ಬಯ್ಯ ನಮ್ಮನ್ನು ಪರಿಚಯಿಸಿದ.

“ಓಹ್! ಕರಮಚಂದ….! ನಿಮ್ಮ ಬಗ್ಗೆ ಕೇಳಿದ್ದೇನೆ. ಬನ್ನಿ…. ಸುಬ್ಬಯ್ಯ, ಇವರನ್ನು ಕರೆಸಿದ ಕಾರಣ?”

ಕುರುಂಬಯ್ಯ ಎರಡು ಕುರ್ಚಿ ಎಳೆದ. ಅಸ್ತವ್ಯಸ್ತವಾಗಿ ವಸ್ತುಗಳು ಹರಡಿದ್ದ ಕೋಣೆಯಲ್ಲಿ ಅಗರಬತ್ತಿಯ ಪರಿಮಳ ಹರಡಿತ್ತು.

“ಯಾವುದೋ ಜಾಗದ ವಿಚಾರ ಮಾತನಾಡುವುದಿತ್ತು. ನಾಪೋಕ್ಲುವಿಗೆ ಬಂದಿದ್ರು. ಇಲ್ಲಿಗೆ ಕರೆದುಕೊಂಡು ಬಂದೆ. ನಿಮ್ಮ ವಿಷಯ ಹೇಳಿದಾಗ, ಮಾತನಾಡಬೇಕು ಎಂದು ಅವರಿಗೆ ಮನಸ್ಸಾಯ್ತು.” ಸುಬ್ಬಯ್ಯ ಸುಳ್ಳು ಪೋಣಿಸಿದ.

“ಒಳ್ಳೆಯದಾಯ್ತು. ಇವರ ಬಗ್ಗೆ ತುಂಬಾ ಕೇಳಿದ್ದೆ. ಒಮ್ಮೆ ನೋಡಿದ ಹಾಗಾಯ್ತು. ಆದರೆ ಈ ಮುದುಕನಲ್ಲಿ ಮಾತಾಡುವುದೇನಿದೆ?” ಗಟ್ಟಿಯಾಗಿ ನಕ್ಕರು ಕುರುಂಬಯ್ಯ.

“ನೀವು ಬಹಳ ಶಿಸ್ತಿನ ಮನುಷ್ಯರು ಎಂದು ಸುಬ್ಬಯ್ಯ ಹೇಳಿದರು….’’

“ಮಾವ, ನೀವು ನಿನ್ನೆ ಗಡಿಯಾರಕ್ಕೆ ಕೀ ಕೊಡಲು ಮರೆತುಬಿಟ್ಟಿರೇನು? ಗಡಿಯಾರ ನಿಂತಿದೆ.” ಸುಬ್ಬಯ್ಯ ನಡುವೆ ಕೇಳಿದ. “ಹೌದೇ?…. ಅರೆ….  ಹೇಗೆ ಮರೆತೆ?….  ನಾನು ಇಷ್ಟವರೆಗೂ ಮರೆತದ್ದಿಲ್ಲ…. ನಿನ್ನೆ ತುಂಬಾ ತಲೆನೋವು ಇತ್ತು. ಸಂಜೆ ಏಳುಗಂಟೆಗೇ ಸುಮ್ಮನೆ ಹಾಸಿಗೆಯಲ್ಲಿ ಅಡ್ಡಾಗಿದ್ದೆ. ಬಹುಶಃ ಅಲ್ಲೇ ನಿದ್ದೆ ಬಂದಿರಬೇಕು…. ಅದು ನಮ್ಮ ತಂದೆಯ ಕಾಲದ ಗಡಿಯಾರ! ಈಗಲೂ ಸರಿಯಾಗಿಯೇ ಸಮಯ ತೋರಿಸುತ್ತದೆ!” ಮಾತಿನಲ್ಲಿ ಗರ್ವವಿತ್ತು.

“ನೀವು ಮಿಲಿಟರಿಯಲ್ಲಿ ಇದ್ರಾ?”

“ಸುಮಾರು ಹತ್ತು ವರ್ಷ ಸೇವೆ ಸಲ್ಲಿಸಿದೆ. ಆಮೇಲೆ ಕಂಪೆನಿಗಳಿಗೆ ಸೆಕ್ಯುರಿಟಿ ಸೇವೆ ನೀಡುವ ಸಂಸ್ಥೆ ಆರಂಭಿಸಿದೆ. ಈಗ ಅಧ್ಯಾತ್ಮದ ಹುಚ್ಚು! ಜೀವನ ಬಹಳ ವಿಚಿತ್ರ.” ಮತ್ತೊಮ್ಮೆ ಗಹಗಹಿಸಿದ ಕುರುಂಬಯ್ಯ.

“ನೀವು ಮಲಗಿಕೊಳ್ಳುವಾಗ ಸೊಳ್ಳೆಬಲೆ ಉಪಯೋಗಿಸ್ತೀರಲ್ಲವೇ?”

“ಹೌದು, ನಿಮಗೆ ಹೇಗೆ ಗೊತ್ತಾಯ್ತು?”

“ಓಹ್! ನೀವು ಮಂಚದ ಮೇಲೆ ಮಲಗುವುದನ್ನು ಇತ್ತೀಚಿಗೆ ಬಿಟ್ಟಂತೆ ಇದೆ!” ಕರಮಚಂದನ ಮಾತಿಗೆ ನಾನು ಬೆರಗಾದೆ. “ಅಲ್ಲಾ…. ಇದೆಲ್ಲಾ ನಿಮಗೆ ಹೇಗೆ ಗೊತ್ತಾಯ್ತು?”

“ನೋಡಿ, ಇಲ್ಲಿ ಹೊಸದಾಗಿ ಗೋಡೆಯಲ್ಲಿ, ಕಿಟಕಿಯ ಕೆಳಗೆ, ಫಿಕ್ಸ್ ಮಾಡಿದ ಕೊಕ್ಕೆಗಳು! ಅವು ಸೊಳ್ಳೆಪರದೆ ಕಟ್ಟಲು. ಅದರ ಸುತ್ತ ಹಚ್ಚಿದ ಬಿಳಿ ಸಿಮೆಂಟು ಇನ್ನೂ ಹೊಸದಾಗೆ ಕಾಣಿಸುತ್ತಿದೆ. ಬಣ್ಣ ಮಾಸಿಲ್ಲ. ಅರ್ಥಾತ್, ಇತ್ತೀಚೆಗಷ್ಟೇ ಅದನ್ನು ಸಿಕ್ಕಿಸಿರಬೇಕು. ಅವು ಬಹಳ ಕೆಳಮಟ್ಟದಲ್ಲಿವೆ. ಮಂಚದಲ್ಲಿ ಮಲಗಿದರೆ, ಅದಕ್ಕೆ ಸೊಳ್ಳೆಪರದೆ ಕಟ್ಟಲು ಸಾಧ್ಯವಿಲ್ಲ.”

“ಓಹ್! ನೀವು ಜೀನಿಯಸ್!….  ಮಂಚದಲ್ಲಿ ಮಲಗಿದ್ದಾಗ, ಒಂದೆರಡು ಬಾರಿ, ಉರುಳಿ ಕೆಳಗೆ ಬಿದ್ದೆ. ಈಗ ಕೆಳಗಡೆಯೇ ಮಲಗುವುದು. ಅದಕ್ಕಾಗಿ, ಕೊಕ್ಕೆ ಫಿಕ್ಸ್ ಮಾಡಿದೆ.”

“ಮಾವ, ಯಾರು ಫಿಕ್ಸ್ ಮಾಡಿದ್ದು? ಅದೇ ಮೊನ್ನೆ ರಾತ್ರಿ ಒಮ್ಮೆ ಡ್ರಿಲ್ ಮಾಡಿದ ಸದ್ದು ಕೇಳಿದಂತಾಯಿತು!”

“ಹೂಂ. ನಾನೇ. ನನಗೆ ಯಾರ ಹಂಗೂ ಬೇಡ. ಒಮ್ಮೆ ಮಾರ್ಕೆಟಿಗೆ ಹೋಗಿ ಡ್ರಿಲ್ಲಿಂಗ್ ಮೆಷಿನ್ ತಂದೆ. ಇಂತಹ ಸಣ್ಣಪುಟ್ಟ ವಿಷಯಗಳನ್ನು ನಾವೇ ಮಾಡಿಕೊಳ್ಳಬೇಕು. ನಾನೊಬ್ಬ ಸೈನಿಕ.” ಮತ್ತೊಮ್ಮೆ ನಕ್ಕರು ಕುರುಂಬಯ್ಯ.

“ಆದರೆ ಸಣ್ಣಪುಟ್ಟ ಕೆಲಸಕ್ಕೂ ನೀವು ನನ್ನನ್ನು ಕಳಿಸುತ್ತೀರಿ. ಬ್ಯಾಂಕಿಗೂ ನಾನೇ ಹೋಗಬೇಕು.” ಸುಬ್ಬಯ್ಯ ಅಣಕಿಸುವಂತೆ ಹೇಳಿ ನಕ್ಕ.

“ಸುಮ್ಮನೆ ಹೊರಗೆ ಹೋಗೋಣ ಅನ್ನಿಸಿತು. ಹಾಗೆ ಹೋದಾಗ ತಂದುಬಿಟ್ಟೆ. ಇನ್ನುಮೇಲೆ ನಿನ್ನ ಹತ್ತಿರವೇ ಹೇಳುತ್ತೇನೆ.” ಮತ್ತೆ ನಗು.

ಕರಮಚಂದ ಅಲ್ಲೇ ಮೇಜಿನ ಮೇಲಿದ್ದ ಚೆಕ್‍ಬುಕ್ಕನ್ನು ಕಂಡು, ಒಮ್ಮೆ ತೆರೆದು ನೋಡಿದ.

“ಅದರಲ್ಲೇನಿದೆ? ಬರೀ ಸೆಲ್ಫ್ ವಿದ್‍ಡ್ರಾ ಮಾತ್ರ…. ಪಿಂಚಣಿ ಹಣ ಬರುತ್ತದೆ.”

ಮೇಜಿನ ಮೇಲೆ ಕೆಲವು ಇಂಗ್ಲಿಷ್ ಕಾದಂಬರಿಗಳಿದ್ದವು. ಕರಮಚಂದ ಅವುಗಳನ್ನು ತೆರೆದು, ನೋಡತೊಡಗಿದ.

“ಅದು ಪುತ್ತರಿರ ನಂಜಪ್ಪ ಕೊಟ್ಟಿದ್ದು. ಅವನ ಮಗ ತಂದು ಕೊಟ್ಟ. ನನಗೆ ಇಂಗ್ಲಿಷ್ ಥ್ರಿಲ್ಲರ್‍ಗಳ ಹುಚ್ಚು ಇದೆ. ಅದಕ್ಕೆ ನನಗೆ ಕೊಡುವುದಕ್ಕೆ ಎಂದು ಆತ ತೆಗೆದಿಟ್ಟಿದ್ದನಂತೆ. ನನ್ನ ಒಳ್ಳೆಯ ಮಿತ್ರನಾತ.”

ನಾನು ಅದನ್ನು ತೆರೆದು ನೋಡಿದೆ. ಅಗಾಥಾ ಕ್ರಿಸ್ಟಿಯ ಪತ್ತೇದಾರಿ ಕಾದಂಬರಿಗಳವು.

ವಿಶಾಲವಾದ ಕಿಟಕಿಯ ಬಳಿ ನಿಂತು, ಹೊರಗಡೆ ನಿರುಕಿಸುತ್ತಾ ಕರಮಚಂದ ವಿಚಾರಿಸಿದ,

“ಕುರುಂಬಯ್ಯನವರೇ, ನೀವೇನಾದರೂ ಯಾರಾದರೂ ಅಪರಿಚಿತರು ನಿಮ್ಮ ಮನೆಯ ಮೇಲೆ ನಿಗಾ ಇರಿಸಿದ್ದನ್ನು ಕಂಡಿದ್ದೀರಾ?”

ಮುದುಕನ ಮೋರೆ ಒಮ್ಮೆಗೇ ಗಂಭೀರವಾಯಿತು. ಹಣೆಯಲ್ಲಿ ನೆರಿಗೆಗಳು ಮೂಡಿದವು.

“ನೀವು ಏನು ಹೇಳುತ್ತಾ ಇದ್ದೀರಿ? ಅವನು ನಮ್ಮ ಮನೆ ಮೇಲೆ ನಿಗಾ ಇಡುತ್ತಾ ಇದ್ದನೆ?” ಆತ ಪದ ಜೋಡಿಸಿದ.

“ನೀವು ಅವನನ್ನ ಕಂಡಿದ್ದೀರಾ? ಯಾರವನು? ಹೇಗಿದ್ದಾನೆ?” ಸುಬ್ಬಯ್ಯ ಆತುರದಿಂದ ಪ್ರಶ್ನಿಸಿದ.

“ನನಗೆ ಗೊತ್ತಿಲ್ಲ. ಆ ಕಪ್ಪು ಕನ್ನಡಕ ಧರಿಸಿ, ಕ್ಯಾಪ್ ಹಾಕಿಕೊಂಡವನು ನಮ್ಮ ಮನೆಯ ಮೇಲೆ ಕಣ್ಣಿಟ್ಟವನೇ? ಒಂದೆರಡು ಬಾರಿ ಕಂಡಿದ್ದೆ. ಅವನನ್ನು ಸುಟ್ಟುಬಿಡ್ತಾ ಇದ್ದೆ. ಯಾರವನು? ಯಾಕೆ ಗಮನ ಇಟ್ಟಿದ್ದಾನೆ? ಸುಬ್ಬಯ್ಯ, ಪತ್ತೆದಾರರು ಹೇಳ್ತಾ ಇರೋದು ಏನು?”

“ಅಂತಹದ್ದೇನಿಲ್ಲ, ಕುರುಂಬಯ್ಯನವರೇ. ನಿಮ್ಮ ಅಡುಗೆಯಾಳು, ಮಾದಯ್ಯ ಅವನನ್ನು ಕಂಡಿದ್ದನಂತೆ. ಅವನಿಗೆ ಭಯವಾಗಿದೆ. ಅದಕ್ಕೆ ನೀವೇನಾದ್ರೂ ನೋಡಿದಿರಾ ಎಂದು ಸುಮ್ಮನೆ ಕೇಳಿದೆ.”

ಆದರೆ ಕರಮಚಂದನ ಉತ್ತರದಿಂದ ಆತ ಸಂತೃಪ್ತನಾದವನಂತೆ ಕಾಣಲಿಲ್ಲ.

“ಅದಕ್ಕೇ ಸಿಸಿಟೀವಿ ಹಾಕಿಸಿದ್ದು ನಾನು. ಈಗ ಕಾಲ ಬಹಳ ಕೆಟ್ಟದ್ದು. ಸುಬ್ಬಯ್ಯ ಸಿಸಿಟೀವಿ ಯಾಕೆ

ಅಂತಂದ. ನೋಡಿ, ಈಗ ಎಷ್ಟು ಉಪಯೋಗಕ್ಕೆ ಬಂತು. ಸಿಸಿಟೀವಿನಲ್ಲಿ ನೋಡಿ. ಅವನ ಫೋಟೋ ಸಿಗಬಹುದು.”

“ಇಲ್ಲ, ಮಾವ. ಅದರಲ್ಲಿ ಅವನು ಕಾಣಿಸಲಿಲ್ಲ.” ಸುಬ್ಬಯ್ಯ ಉತ್ತರಿಸಿದ.

“ನಿಮಗೆ ಅಭಿನಂದನೆ ಹೇಳಬೇಕು, ಕುರುಂಬಯ್ಯನವರೇ. ಈ ವಯಸ್ಸಿನಲ್ಲೂ ನಿಮ್ಮ ಆರೋಗ್ಯ ಬಹಳ ಚೆನ್ನಾಗಿದೆ. ಜಿಮ್‍ಗೆ ಹೋದವರ ಹಾಗಿದ್ದೀರಿ.” ಕರಮಚಂದನ ಹೊಗಳಿಕೆಯ ನುಡಿ.

“ಕರಾಟೆಯಲ್ಲಿ ನಾನು ಬ್ಲ್ಯಾಕ್‍ಬೆಲ್ಟ್. ಮೇ ಗೇರಿ ಮತ್ತು ಮೇ ಹಿಜಾ ಗೇರಿ ಹೊಡೆತದಲ್ಲಿ ನಾನು ಪರಿಣತ. ಅದರಲ್ಲಿ ನನಗೆ ಸಾಟಿಯಿಲ್ಲ.” ಕುರುಂಬಯ್ಯ ಕೊಚ್ಚಿಕೊಂಡ.

“ಓಕೆ., ಸರ್. ನಿಮ್ಮ ಭೇಟಿಯಿಂದ ನನಗೆ ಸಂತೋಷವಾಯಿತು. ನಿಮ್ಮಲ್ಲಿ ಅಧ್ಯಾತ್ಮದ ಬಗೆಗೆ ಮಾತನಾಡಲು ಇನ್ನೊಮ್ಮೆ ಬರುತ್ತೇನೆ.”

ಮೆಟ್ಟಿಲಿಳಿಯುವಾಗ ಸುಬ್ಬಯ್ಯ ವಿಚಾರಿಸಿದ,

“ಸರ್, ನಿಮಗೆ ಏನಾದ್ರೂ ಹೊಳೆಯಿತಾ? ಈ ಮೆಸೇಜುಗಳ ಅರ್ಥವೇನು? ನನ್ನ ತಂದೆಯದು ಕೊಲೆಯೇ? ಅದು ಹೌದಾಗಿದ್ದರೆ, ಆ ಕೊಲೆಗಾರನನ್ನು ಜೀವಂತ ಬಿಡುವುದಿಲ್ಲ ನಾನು.” ಸುಬ್ಬಯ್ಯ ವ್ಯಗ್ರನಾಗಿದ್ದ.

“ಸುಬ್ಬಯ್ಯ, ನಿಮಗೆ ಬಂದಿರೋ ಎಲ್ಲಾ ಮೆಸೇಜುಗಳನ್ನೂ ನನ್ನ ಚರವಾಣಿಗೆ ವರ್ಗಾಯಿಸಿ. ಹಾಗೆಯೇ ನಿಮ್ಮ ಮನೆಯ ಎಲ್ಲರ ಚರವಾಣಿ ಸಂಖ್ಯೆಗಳನ್ನೂ ನೀಡಿ. ನಿಮ್ಮ ತಂದೆಯ ಬಗೆಗೆ ನಿಮ್ಮಲ್ಲಿರುವ ಮಾಹಿತಿ, ಮುಖ್ಯವಾಗಿ, ಅವರ ಚಲವಾರ ಜಲಪಾತ ಭೇಟಿಗೆ ಸಂಬಂಧಿಸಿದ್ದು, ಫೋಟೋಗಳು, ಅಥವಾ ಏನಾದರೂ ಸುಳಿವುಗಳು ಇದ್ದರೆ ನನಗೆ ನೀಡಿ.”

ಆಮೇಲೆ ನಾವು ಅಲ್ಲಿಂದ ಹೊರಬಿದ್ದೆವು.

(ಮುಂದುವರಿಯುವುದು)

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ