“ಪ್ರಾಕ್ಸಿಮಾ ಸೆಂಟಾರ್ ಭೂಮಿಗೆ ಹತ್ತಿರವಿರುವ ಗ್ರಹ. ಲ್ಯೂಟೆನ್ ಬಿ ಅದರ ಮೂರರಷ್ಟು ದೂರದಲ್ಲಿದೆ. ಸೌರವ್ಯೂಹವೂ ಒಂದು ಅಣುವಿನ ರೂಪದಲ್ಲಿಯೇ ಕೆಲಸ ಮಾಡುತ್ತದೆ. ಸೂರ್ಯನು ಪ್ರೋಟಾನ್ ಮತ್ತು ನ್ಯೂಟ್ರಾನ್ಗಳಂತಿದ್ದು ಸ್ಥಿರವಾಗಿದ್ದಾನೆ. ಪ್ಲೂಟೋ ಗ್ರಹವು ಎಲೆಕ್ಟ್ರಾನಿನಂತಿದ್ದು ಕೊಂಚ ಏರುಪೇರಾದರೂ ನಿಮ್ಮ ಸೌರಮಂಡಲದಿಂದ ಹೊರಹೋಗುತ್ತದೆ. ಅಂದರೆ ದೂರ ಇರುವುದು ಬೇಗ ಹೊರಹೋಗುತ್ತದೆ. ನಾವು ಪ್ರಾಕ್ಸಿಮಾಗಿಂತ ದೂರ ಇದ್ದೇವೆ. ನಮ್ಮ ಉಚ್ಚಾಟನೆ ಆದಕೂಡಲೆ ಡಿಸೋರಿಯೆಂಟಾ ಕ್ರಿಯೆಯನ್ನು ನಿಲ್ಲಿಸಿ ಪ್ರಾಕ್ಸಿಮಾ ಯಥಾಸ್ಥಿತಿಗೆ ಮರಳುತ್ತದೆ.”
ಕಿರಣ್ ಮತ್ತೆ ಕಣ್ಣುಜ್ಜಿಕೊಂಡ. ಮತ್ತೆ ದೃಷ್ಟಿಸಿದ.
“ಬಾಚಿ ತಬ್ಬಿಕೊಳ್ಳಬೇಕು ಎನ್ನಿಸುತ್ತಿದೆ ಅಲ್ಲವೆ?” ಕಿಲಕಿಲನೆ ನಕ್ಕಿತು ಎದುರಿನ ಆಕೃತಿ.
ಕಿರಣ್ ಅಚ್ಚರಿಯಿಂದ ಕಣ್ಣರಳಿಸಿದ. ಪುರಾಣದ ಅಪ್ಸರೆಯರನ್ನೆಲ್ಲ ಕರಗಿಸಿ ಅವರೆಲ್ಲರ ವೈಶಿಷ್ಟ್ಯಗಳ ಮಿಶ್ರಣವನ್ನು ಎರಕಕ್ಕೆ ಹೊಯ್ದು ತಯಾರಿಸಿದ ಸ್ತ್ರೀರೂಪ ಅವನ ಎದುರಿಗಿದ್ದಿತು. ಸೊಂಪಾದ ಕೇಶರಾಶಿಯು ಅವಳು ಮೆಟ್ಟಿಲುಗಳನ್ನು ಇಳಿಯುವಾಗ ಹಿಂದಿನ ಮೆಟ್ಟಿಲುಗಳನ್ನು ಗುಡಿಸುವಷ್ಟು ನೀಳವೂ, ದಟ್ಟವೂ ಆಗಿದ್ದಿತು. ಕಣ್ಣುಗಳು ಪಿಂಗಾಣಿಯ ಬಟ್ಟಲಲ್ಲಿನ ಕಾಲಾ ಜಾಮೂನಿನಂತೆ ಆಕರ್ಷಕವಾಗಿದ್ದವು. ಧ್ವನಿಯೋ ಟಿ.ಆರ್. ಮಹಾಲಿಂಗಂನ ಕೊಳಲೇ. ಇಂಗ್ಲಿಷ್ ೮ರ ಆಕಾರದ ದೇಹ; ಮೊಗದಲ್ಲಿ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಿದ ನಗೆ.
“ಯಾವುದೇ ತಪಸ್ಸು ಮಾಡದಿದ್ದರೂ ಈ ಅಪ್ರತಿಮ ಸುಂದರಿ ನನಗೆ ಹೇಗೆ ಒಲಿದು ಬಂದಳು ಅನ್ನೋದು ತಾನೇ ನಿನ್ನ ಈಗಿನ ಆಲೋಚನೆ? ಯಾರಿವಳು ಯಾರಿವಳು ಸುಂದರ ಆಕೃತಿಯವಳು ಎಂದು ಹಾಡಲಾರಂಭಿಸುವೆಯೇನು?”
“ನನ್ನೆಲ್ಲ ಭಾವನೆಗಳು ನಿನಗೆ ತಿಳಿಯುತ್ತವೆ ಎಂದಾಯಿತು. ಪ್ರಶ್ನೆ ಗೊತ್ತಿರುವವಳು ಉತ್ತರವನ್ನೂ ಕೊಟ್ಟುಬಿಡು” ನುಡಿದ ಕಿರಣ್.
“ವಿಜ್ಞಾನಿ ನೀನು. ಸಂಶೋಧನೆ ನಿನ್ನ ಕೆಲಸ. ನೀನೇ ಹೇಳು ನೋಡೋಣ”ಎನ್ನುತ್ತ ಆಕೃತಿ ಮಾಯವಾಯಿತು.
ಕಿರಣ್ ಮತ್ತೆ ಕಣ್ಣುಜ್ಜಿಕೊಂಡ. ಕಣ್ಣು ಉರಿದದ್ದಷ್ಟೇ ಲಾಭ. “ಛೆ! ಒಂದು ವಾರದಿಂದ ರಾತ್ರಿಯೆಲ್ಲ ಸಂಶೋಧನೆಯಲ್ಲಿ ತೊಡಗಿ ಕೆಲವೇ ಗಂಟೆಗಳ ನಿದ್ರೆಗೆ ಜಾರಿದರೆ ಎಂತಹ ಕನಸು! ಎಂತಹ ಹುಡುಗಿ!” ಎಂದುಕೊಳ್ಳುತ್ತ ತನ್ನ ಸಂಶೋಧನಾ ಸ್ಕ್ರೀನಿನತ್ತ ತಿರುಗಿದ.
“ಕನಸಲ್ಲವೋ, ಇಷ್ಟೆಯೇನು ನಿನ್ನ ವೈಜ್ಞಾನಿಕ ಒಲವು, ನಿಲವು?” ಮತ್ತೆ ನಗೆಯಲೆಯ ಮೇಲೆ ಸಾಗಿಬಂತು ನುಡಿದೋಣಿ.
ಕಿರಣ್ ಧ್ವನಿ ಬಂದತ್ತ ತಿರುಗಿದ. ಆಕೃತಿಯನ್ನೇ ಕೆಲವು ಕ್ಷಣಗಳು ದೃಷ್ಟಿಸಿದ. ಏನೋ ಹೊಳೆದಂತಾಯಿತು. ಕೂಡಲೆ ತನ್ನ ಬೆರಳಿನಲ್ಲಿರುವ ಉಂಗುರವನ್ನು ಆಕೃತಿಯ ದಿಕ್ಕಿನಲ್ಲಿ ಮುಂದಾಗಿಸಿದ.
ಆಕೃತಿ ಮಾಯವಾಯಿತು!
“ವೆಲ್ಕಮ್ ಮನೋನ್ಮಣಿ. ಅದು ನಿನ್ನ ಹೆಸರಲ್ಲ ಎಂದು ನನಗೆ ಗೊತ್ತು. ನನ್ನ ಮನಸ್ಸನ್ನು ಓದುವ ಸಾಮರ್ಥ್ಯವಿರುವುದರಿಂದ ನಿನ್ನನ್ನು ಹಾಗೆ ಕರೆಯುತ್ತೇನೆ. ನನ್ನ ಬೆರಳಿನಲ್ಲಿರುವುದು ಉಂಗುರವಲ್ಲ…”
“ಅದೊಂದು ಇಟಿಬಿ ಸ್ಕ್ಯಾನರ್ ಎಂದು ನನಗೆ ಹೇಳಿಕೊಡಬೇಕೇನು? ಎಕ್ಸ್ಟ್ರಾ ಟೆರೆಸ್ಟ್ರಿಯಲ್ ಬೀಯಿಂಗ್ಸ್ ಬಂದಾಗ ಅವರ ನೈಜತೆಯನ್ನು ಅರಿಯಲು ಬಳಸುವ ಫಿಂಗರ್ ಹೆಲ್ಡ್ ಸ್ಕ್ಯಾನರ್ ಅದು ಎಂದು ನನಗೆ ಗೊತ್ತು. ಸುಂದರಿಯ ಸಾಮೀಪ್ಯದಲ್ಲಿ ನಿನ್ನ ತಲೆ ವರ್ಕ್ ಆಗುವುದೋ ಇಲ್ಲವೋ ಎಂದು ಪರೀಕ್ಷಿಸಿದೆನಷ್ಟೆ” ನುಡಿ ತೇಲಿಬಂತು.
“ಇಟಿಬಿಯಲ್ಲಿ ಸ್ಕ್ಯಾನ್ ಮಾಡಿದರೂ ತಾಳಿಕೊಳ್ಳುವಷ್ಟು ಆಕೃತಿ ನಿನ್ನದಲ್ಲವೆಂದಮೇಲೆ ನೀನು ಕನಸಿನ ಕನ್ಯೆಯೇ ಸರಿ. ನಿನ್ನ ಭಾಷೆ ನಮ್ಮ ಭಾಷೆಯಲ್ಲ. ನನ್ನ ಮನೋತರಂಗಗಳಿಗೆ ಅರಿವಾಗುವ ಭಾಷೆಗೆ ನಿನ್ನ ಮನೋತರಂಗಗಳನ್ನು ಹೊಂದಿಸುವ ತಂತ್ರಜ್ಞಾನ ನಿನ್ನಲ್ಲಿದೆ. ಇಲ್ಲಿಗೆ ಬಂದ ಕಾರಣ ಹೇಳು.”
“ಆ ನಿನ್ನ ಹಾಳು ಉಂಗುರವನ್ನು ಜೇಬಿನಲ್ಲಿಟ್ಟುಕೊ. ಅಶರೀರವಾಣಿಯಾಗಿ ಮುಂದುವರಿಯಲು ನಾನು ರೇಡಿಯೋ ಅಲ್ಲ.”
“ಟಿವಿಯೂ ಅಲ್ಲ. ಆಗಲಿ. ಸುಂದರ ರೂಪಕ್ಕೆ ಮನಸೋಲದಷ್ಟು ಅರಸಿಕನಲ್ಲ ನಾನು” ಎನ್ನುತ್ತ ಉಂಗುರವನ್ನು ತೆಗೆದು ಜೇಬಿನಲ್ಲಿ ಇರಿಸಿಕೊಳ್ಳಲು ಮುಂದಾದ ಕಿರಣ್.
“ಸೌಂದರ್ಯದ ಪ್ರಭಾವವೇ ಹೀಗೆ. ತೆಗೆ ಆ ಉಂಗುರವನ್ನು. ಇಟಿಬಿಯ ಸ್ಕ್ಯಾನ್ ಆದ ಒಂದು ಗಂಟೆಯಷ್ಟು ಅವಧಿ ಅದನ್ನು ಚರ್ಮಕ್ಕೆ ತಾಗುವಂತೆ ಇಟ್ಟುಕೊಳ್ಳಬೇಡ. ಅದರಿಂದ ಹೊರಡುವ ಕ್ಷಕಿರಣಗಳು ನಿನ್ನ ದೇಹದ ಮೂಳೆಗಳನ್ನು ದುರ್ಬಲಗೊಳಿಸುತ್ತವೆ” ಎಂದಳು ಮನೋನ್ಮಣಿ.
“ಇದು ನಮ್ಮ ಸಂಶೋಧನೆಯಲ್ಲಿ ತಿಳಿದುಬಂದಿಲ್ಲ. ನಿನಗೆ ಹೇಗೆ ಗೊತ್ತು?”
ಮನೋನ್ಮಣಿ ಮೊದಲಿನ ರೂಪದಲ್ಲೇ ಪ್ರತ್ಯಕ್ಷಳಾಗುತ್ತಾ “ನಾನು ಲ್ಯೂಟೆನ್ ಬಿ ಗ್ರಹದವಳು. ನಿಮಗಿಂತ ಎಷ್ಟೋ ಶತಮಾನಗಳಷ್ಟು ಮುಂದಿರುವ ಗ್ರಹ ನಮ್ಮದು” ಎಂದಳು.
“ನಿನ್ನ ಹೆಸರೇನು?”
“ನಮ್ಮಲ್ಲಿ ನಿಮ್ಮಂತೆ ಹೆಸರುಗಳಿರುವುದಿಲ್ಲ. ಸೃಷ್ಟಿಸಂಖ್ಯೆಯ ಪ್ರಕಾರ ನಾನು ಎಲ್ಬಿ ೪೪ ಎಫ್ಜೆ ಎಕ್ಸ್ ೪೩೪೩. ಎಂದರೆ ಲ್ಯೂಟೆನ್ ಬಿ ಗ್ರಹದ ನಲವತ್ತನಾಲ್ಕನೆಯ ಶತಮಾನದ ಫ್ಯೂಚರ್ ಜನರೇಷನ್ ಎಕ್ಸ್ ಗುಂಪಿಗೆ ಸೇರಿರುವ ೪೩೪೩ನೆಯ ಪ್ರಾಡಕ್ಟ್. ನೀನು ಮಾಡಿದ ನಾಮಕರಣವಾದ ಮನೋನ್ಮಣಿಯೇ ಚೆನ್ನಾಗಿದೆ. ನೀನು ಹಾಗೆಯೇ ಕರೆಯಬಹುದು. ಸದ್ಯಕ್ಕೆ ನಿನ್ನ ಮನಸ್ಸನ್ನು ಓದುವ ಸ್ವಿಚ್ಚನ್ನು ಆಫ್ ಮಾಡಿ ಮಾಮೂಲಿ ನರಮನುಷ್ಯಳಂತೆ ಸಂವಾದಿಸುತ್ತೇನೆ” ಎಂದಳು.
“ಪಕ್ಕದ ಅಪಾರ್ಟ್ಮೆಂಟಿನ ಚೆಲುವೆಯೇ ನನ್ನತ್ತ ತಿರುಗಿ ನೋಡದಿರುವಾಗ ನಮ್ಮಿಂದ ಹನ್ನೆರಡು ಜ್ಯೋತಿವರ್ಷಗಳಷ್ಟು ದೂರವಿರುವ ನೀನು ನಾನಿರುವಲ್ಲಿಗೇ ಪ್ರತ್ಯಕ್ಷಳಾಗಲು ಕಾರಣವೇನು? ನನ್ನ ರೂಪಕ್ಕೆ ನಿಮ್ಮ ಗ್ರಹದಲ್ಲಿ ಅಷ್ಟೊಂದು ಬೇಡಿಕೆಯಿದೆಯೇನು?” ಛೇಡಿಸುವ ಧ್ವನಿಯಲ್ಲಿ ಕೇಳಿದ ಕಿರಣ್.
“ಶೂರ್ಪಣಖಿ ಗೊತ್ತಾ ನಿನಗೆ?”
“ಫೇಸ್ಬುಕ್ ಫ್ರೆಂಡ್ ಅಂತೂ ಅಲ್ಲ. ಪರ್ಸನಲ್ಲಾಗೂ ಗೊತ್ತಿಲ್ಲ” ತಡವರಿಸಿದ ಕಿರಣ್.
“ಬುಕ್ ವಮ್ಗಳಿಗೆ ಇತಿಹಾಸ, ಪುರಾಣ ಗೊತ್ತಿರಲ್ಲ ಅಲ್ವಾ…” ಕೊಳಲಿನಿಂದ ಮೋಹನರಾಗ ಹೊರಟಂತಿತ್ತು ನಗೆಯ ಅಲೆ.
“ಆ ಶೂರ್ಪಣಖೀನಾ? ಗೊತ್ತು.”
“ಅವಳು ಲಕ್ಷ್ಮಣನ ಮುಂದೆ ಬರುವುದಕ್ಕೆ ಮುಂಚೆ ಕುರೂಪಿ. ಮುಂದೆ ಬರುವಾಗ ಲೋಕಸುಂದರಿ. ನಮ್ಮ ಗ್ರಹದವರೂ ಹಾಗೆಯೇ – ಕಾಮರೂಪಿಗಳು.”
“ಹಾಗಾದರೆ ನೀನು ಇಷ್ಟು ಸುಂದರಿಯಲ್ಲವೆ?”
“ಸುಂದರಿಯ ಚಿತ್ರವನ್ನು ಬರೆ ಎಂದು ಕತ್ತೆಗೆ ಹೇಳಿದರೆ ಒಂದು ಸುಂದರವಾದ ಕತ್ತೆಯ ಚಿತ್ರವನ್ನೇ ಬರೆಯಿತಂತೆ! ನನ್ನ ಲೋಕದಲ್ಲಿ ನಾನು ಸುಂದರಿ.”
“ಈ ರೂಪ?”
“ನಿನ್ನ ಮನಸ್ಸು ಬಯಸುವ ರೂಪವಿದು. ನಿನ್ನ ನೆಚ್ಚಿನ ನಟಿ ಯಾರು?”
“ಮಲ್ಲಿಕಾ ಶೆರಾವತ್.”
“ಸರಿ. ಈಗ ನೋಡು” ಎನ್ನುತ್ತಾ ಮನೋನ್ಮಣಿ ಅವನ ಕಣ್ಮುಂದೆಯೇ ಬದಲಾಗತೊಡಗಿದಳು. ಕೆಲವೇ ಕ್ಷಣಗಳಲ್ಲಿ ‘ಹಿಸ್’ ಚಿತ್ರದ ಮಲ್ಲಿಕಾ ಶೆರಾವತ್ ಕಣ್ಣೆದುರು ಗೋಚರಿಸಿದಳು.
“Beauty is only skin deep ಎನ್ನುತ್ತಿದ್ದರು. ಈಗ beauty is only a projection of light particles arranged to suit our tastes. ನಾನು ಬಂದ ವಿಷಯಕ್ಕೆ ಬರುತ್ತೇನೆ. ದೆಹಲಿಯಲ್ಲಿ ೫೨ ಡಿಗ್ರಿ ಉಷ್ಣಾಂಶ ಕಂಡುಬಂದಿತಲ್ಲವೆ?”
“ಹೌದು. ಆ ಶಾಖದಿಂದ ಬಳಲಿದವರ ಕಣ್ಣು ತಂಪು ಮಾಡಲು ಈ ರೂಪ ಹೊತ್ತು ಬಂದಿರುವೆಯೇನು?”
“ಗಂಡಸರ ಬುದ್ಧಿ ಮೊಣಕಾಲ ಕೆಳಗೆ ಎನ್ನುವುದನ್ನು ಪದೇಪದೇ ತೋರಿಸುವ ಅಗತ್ಯವಿಲ್ಲ. ನಿಮ್ಮ ಭೂಮಿಯು ಅಪಾಯದಲ್ಲಿದೆ. ಅದನ್ನು ರಕ್ಷಿಸಲು ನನಗೆ ಬಾಹ್ಯಾಕಾಶ ವಿಜ್ಞಾನಿಗಳ ಸಹಾಯ ಬೇಕು.”
“ಯಾರಿಂದ ಅಪಾಯ?”
“ಪ್ರಾಕ್ಸಿಮಾ ಸೆಂಟಾರಿ ಬಿ ಇಂದ.”
“ನೀನು ಐಸಾಕ್ ಅಸಿಮೋವನ ತಂಗಿಯೇನು? ಪ್ರಾಕ್ಸಿಮಾ ಸೆಂಟಾರಿ ನಮ್ಮಿಂದ ನಾಲ್ಕು ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಅದರಿಂದ ನಮಗೇನು ತೊಂದರೆಯಾದೀತು? ಅಷ್ಟಕ್ಕೂ ನಮಗೆ ತೊಂದರೆ ಆಗಕೂಡದೆಂಬ ಕಾಳಜಿ ನಿನಗೇಕೆ?”
“ಮನು ಬರೆದಿರುವ ಮಹಾಸಂಪರ್ಕ ಓದಿದ್ದೀಯೇನು?”
“ಸ್ವಲ್ಪಮಟ್ಟಿಗೆ.”
“ಅದರಲ್ಲಿ ಅನ್ಯಗ್ರಹದಿಂದ ಬಂದ ಜೀವಿಗಳು ಇಲ್ಲಿನವರಿಗೆ ಜ್ಞಾನದಾನ ಮಾಡಿದರೆಂದಿದೆ. ಭೂಮಿಯಲ್ಲಿನ ಜೀವಿಗಳಿಗೆ ಜೀವನವಿಧಿ, ಸಂಸ್ಕಾರಗಳನ್ನು ಪರಿಚಯಿಸಿದವರೇ ನನ್ನ ಪೂರ್ವಜರು. ಭೂಮಿಯನ್ನು ಪ್ರೋಟೋಟೈಪ್ ಆಗಿಸಿಕೊಂಡು ಇನ್ನಷ್ಟು ಗ್ರಹಗಳಲ್ಲಿ ಜೀವಿಗಳನ್ನು ಇಳಿಸಿದೆವು. ಅವರೆಲ್ಲರೂ ನಿಮಗಿಂತ ಬಹಳ ಅಭಿವೃದ್ಧಿ ಹೊಂದಿದ್ದಾರೆ. ನಮ್ಮ ಮೊದಲ ಪ್ರಾಜೆಕ್ಟ್ ಆದ ಭೂಮಿ ಹಾಳಾಗುವುದು ನಮಗೆ ಇಷ್ಟವಿಲ್ಲ.”
“ಓಹೋ! ಮನುಷ್ಯನೇ ಅಭಿವೃದ್ಧಿ ಹೊಂದಿದಂತೆ ಮಾನವೀಯತೆಯನ್ನು ಮರೆಯುತ್ತಿದ್ದಾನೆ. ಹೀಗಿರುವಾಗ ನೀವು ನಮ್ಮ ಗ್ರಹದ ಮೇಲಿನ ಕಾಳಜಿ, ಅನುಕಂಪದಿಂದ ಇದನ್ನು ಉಳಿಸುತ್ತೇವೆನ್ನುವುದು ಒಪ್ಪಲಾರದ ಮಾತು” ಸೂಕ್ಷ್ಮಗ್ರಾಹಿ ಉತ್ತರಿಸಿದ.
ಮನೋನ್ಮಣಿ ಕೊಂಚ ಸಮಯ ಮೌನವಾದಳು. ನಂತರ, “ಹೇಳುತ್ತೇನೆ. ಗಮನವಿಟ್ಟು ಕೇಳು. ಪ್ರಾಕ್ಸಿಮಾ ಸೆಂಟಾರಿ ಒಂದು ದುಷ್ಟಜೀವಿಗಳ ಗ್ರಹ. ಅವರನ್ನು ನ್ಯಾರ್ಕಿ ಎಂದು ಕರೆಯುತ್ತೇವೆ. ಅವರ ಪೈಕಿ ಮ್ಯಾಟ್ರಿಕ್ಸ್ ಇಂಪೆಡಿಮೆಂಟೋ ಎಂಬ ವಿಜ್ಞಾನಿ ಇದ್ದಾನೆ. ಅವನು ಏಕ್ಸಿಸಾ ಡಿಸೋರಿಯೆಂಟಾ ಎಂಬ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾನೆ. ಆ ತಂತ್ರಜ್ಞಾನವನ್ನು ಅಳವಡಿಸಿ ಭೂಮಿಗೆ ಆಧಾರವಾಗಿರುವ ಟೆಕ್ಟಾನಿಕ್ ಪ್ಲೇಟ್ಗಳ ಚಲನೆಯನ್ನು ನಿಯಂತ್ರಿಸಬಹುದು.”
“ಎಂದರೆ ಬೇಕಾದ ಕಡೆ ಉತ್ಪಾತಗಳನ್ನು ಉಂಟುಮಾಡಬಹುದು!” ನಿಬ್ಬೆರಗಾದ ಕಿರಣ್.
“ಅಷ್ಟೇ ಅಲ್ಲ. ಸಮತಲ ಇರುವ ಕಡೆ ಇದ್ದಕ್ಕಿದ್ದಂತೆ ಬೆಟ್ಟವು ಉದ್ಭವಿಸಬಹುದು. ಸಮುದ್ರಗಳು ಬುಡಮೇಲಾಗಬಹುದು. ಇಂತಹ ದಿನ ಇಂತಹ ಸಮಯಕ್ಕೆ ಇಂತಹ ಸ್ಥಳದಲ್ಲಿ ಸುನಾಮಿ ಎಬ್ಬಿಸುತ್ತೇನೆಂದು ಕರಾರುವಾಕ್ಕಾಗಿ ಟೈಮ್ ಟೇಬಲ್ ನೀಡಬಹುದು!” ಮುಂದುವರಿಸಿದಳು ಮನೋನ್ಮಣಿ.
“ಅಂದರೆ ಮನುಕುಲದ ನಾಶ! ಭೂಗ್ರಹದ ಅಳಿವು!”
“ಆದರೆ ಅವರಿಗೆ ಬೇಕಾದ್ದು ಭೂಮಿಯ ಅಳಿವಲ್ಲ. ಅದರ ಮೇಲೆ ಹಿಡಿತ. ಏಕ್ಸಿಸಾ ಡಿಸೋರಿಯೆಂಟಾ ತಂತ್ರಜ್ಞಾನವನ್ನು ಬಳಸಿ ಅವರು ಭೂಮಿಯು ತನ್ನ ಸುತ್ತಲೂ ಸುತ್ತುವುದನ್ನು ಈಗಿನ ೨೭ ದಿನಗಳಿಗೆ ಬದಲಾಗಿ ಮೂವತ್ತೈದು ದಿನಗಳಿಗೆ ವಿಸ್ತರಿಸುತ್ತಾರೆ.”
ಕಿರಣ್ ಆಲೋಚನಾಪರನಾದ.
“ಅಂದರೆ ಮಾರ್ಚ್ನಿಂದ ಜೂನ್ವರೆಗಿನ ಅವಧಿಯಲ್ಲಿ ಭೂಮಿಯ ಶಾಖದ ಅವಧಿಯು ಮೂವತ್ತೆರಡು ದಿನಗಳಷ್ಟು ಹೆಚ್ಚುತ್ತದೆ. ಶಾಖದ ಪರಿಣಾಮವಾಗಿ ಅಂಟಾರ್ಟಿಕಾ ಕರಗಿ, ಸಮುದ್ರಗಳ ಮಟ್ಟ ಏರಿ, ಭೂಮಿಯ ಬಹುಭಾಗ ಮುಳುಗುತ್ತದೆ” ನಿಧಾನವಾಗಿ ನುಡಿದ ಕಿರಣ್.
“ಪ್ರಾಕ್ಸಿಮಾ ಪ್ರಾಯೋಗಿಕವಾಗಿ ಭೂಮಿಯ ತಾಪಮಾನವನ್ನು ಹೆಚ್ಚಿಸುತ್ತಿದೆ. ಅದರ ಪರಿಣಾಮವೇ ದೆಹಲಿಯ ತಾಪಮಾನ ಅರ್ಧ ಸೆಂಚುರಿಯನ್ನು ಮೀರಿದ್ದು.”
“ಅಂದರೆ ಭೂಮಿಯ ಅಕ್ಷದ ಸುತ್ತ ಸುತ್ತುವ ವೇಗದಲ್ಲಿ ವ್ಯತ್ಯಯವಾಗಿದೆಯೇನು?”
“ಹೌದು. ಒಂದು ತಿಂಗಳ ಕಾಲ ತಾತ್ಕಾಲಿಕವಾಗಿ ವೇಗವ್ಯತ್ಯಯ ಮಾಡಿದ್ದರ ಪರಿಣಾಮವಿದು. ಇವಿಷ್ಟು ನಿಮಗಾಗುವ ತೊಂದರೆಗಳು. ಭೂಮಿಯು ತನ್ನ ಅಕ್ಷದ ಸುತ್ತಲೂ ಸುತ್ತುವ ವೇಗವು ನಿಧಾನವಾದರೆ ಇಡೀ ಸೌರವ್ಯೂಹವು ಅಸ್ತವ್ಯಸ್ತಗೊಳ್ಳುತ್ತದೆ. ಸೂರ್ಯನ ಕರ್ಷಣ ಶಕ್ತಿಯು ಹೆಚ್ಚಿ ಭೂಮಿಯು ಸುತ್ತುವ ಕಕ್ಷೆಯು ಸೂರ್ಯನಿಗೆ ಸಮೀಪವಾಗುತ್ತದೆ. ಇದರಿಂದ ಇತರ ಗ್ರಹಗಳ ನಡುವೆ ಇರುವ ಸೆಂಟ್ರಿಪೀಟಲ್ ಮತ್ತು ಸೆಂಟ್ರಿಫ್ಯೂಗಲ್ ಒತ್ತಡಗಳಲ್ಲಿ ವ್ಯತ್ಯಾಸ ಉಂಟಾಗಿ ಇಡೀ ಸೌರವ್ಯೂಹವು ಚೆಲ್ಲಾಪಿಲ್ಲಿಯಾಗುತ್ತದೆ.”
“ಹಾಗಾದರೆ ಪ್ರಾಕ್ಸಿಮಾ ಸೆಂಟಾರಿಯೂ ನಾಶವಾಗುತ್ತದೆ. ಇದು ಭಸ್ಮಾಸುರನ ಕಥೆಯ ಭವಿಷ್ಯತ್ ರೂಪವಾಯಿತು” ಎಂದ ಕಿರಣ್.
“ಪ್ರಾಕ್ಸಿಮಾ ಸೆಂಟಾರ್ ಭೂಮಿಗೆ ಹತ್ತಿರವಿರುವ ಗ್ರಹ. ಲ್ಯೂಟೆನ್ ಬಿ ಅದರ ಮೂರರಷ್ಟು ದೂರದಲ್ಲಿದೆ. ಸೌರವ್ಯೂಹವೂ ಒಂದು ಅಣುವಿನ ರೂಪದಲ್ಲಿಯೇ ಕೆಲಸ ಮಾಡುತ್ತದೆ. ಸೂರ್ಯನು ಪ್ರೋಟಾನ್ ಮತ್ತು ನ್ಯೂಟ್ರಾನ್ಗಳಂತಿದ್ದು ಸ್ಥಿರವಾಗಿದ್ದಾನೆ. ಪ್ಲೂಟೋ ಗ್ರಹವು ಎಲೆಕ್ಟಾçನಿನಂತಿದ್ದು ಕೊಂಚ ಏರುಪೇರಾದರೂ ನಿಮ್ಮ ಸೌರಮಂಡಲದಿಂದ ಹೊರಹೋಗುತ್ತದೆ. ಅಂದರೆ ದೂರ ಇರುವುದು ಬೇಗ ಹೊರಹೋಗುತ್ತದೆ. ನಾವು ಪ್ರಾಕ್ಸಿಮಾಗಿಂತ ದೂರ ಇದ್ದೇವೆ. ನಮ್ಮ ಉಚ್ಚಾಟನೆ ಆದಕೂಡಲೆ ಡಿಸೋರಿಯೆಂಟಾ ಕ್ರಿಯೆಯನ್ನು ನಿಲ್ಲಿಸಿ ಪ್ರಾಕ್ಸಿಮಾ ಯಥಾಸ್ಥಿತಿಗೆ ಮರಳುತ್ತದೆ.”
“ಈಗ ನಾನೇನು ಮಾಡಬೇಕು?”
“ನಿಮ್ಮ ಸಂಸ್ಥೆಯ ಮುಖ್ಯಸ್ಥರೊಡನೆ ಚರ್ಚಿಸಬೇಕು. ನಮಗೂ ಈ ವಿಷಯವನ್ನು ಹೇಗೆ ನಿಭಾಯಿಸಬೇಕು ಎನ್ನುವುದರ ಬಗ್ಗೆ ಗೊಂದಲವಿದೆ.”
* * *
“ಯಾವುದೋ ಆಕೃತಿಯು ಕಣ್ಣಮುಂದೆ ಗೋಚರಿಸಿ ಏನೋ ಹೇಳಿತೆಂದಾಕ್ಷಣ ಅದನ್ನು ನಂಬಲು ಸಾಧ್ಯವಿಲ್ಲ” ಸೌರಕಾಯ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಸಿನ್ಹಾ ಹರಿಹಾಯ್ದರು.
“ಆದರೆ ವಿಶ್ವದ ಯಥಾಸ್ಥಿತಿಯನ್ನು ಕಾಪಾಡುವುದು…” ಆರಂಭಿಸಿದ ಕಿರಣ್.
“ಕೀಪ್ ಕ್ವೈಟ್. ನಿನ್ನ ತಲೆಯು ಯಥಾಸ್ಥಿತಿಯಲ್ಲಿರುವುದೇ ಅನುಮಾನವಾಗಿದೆ. ಯಾರೋ ಬಂದಳಂತೆ, ಪ್ರಾಕ್ಸಿಮಾ ಎಂದಳಂತೆ; ಡಿಸೋರಿಯೆಂಟಾ ಎಂದಳಂತೆ. ಒಳ್ಳೆಯ ಕಟ್ಟುಕಥೆ. ಬರೆದು ಪತ್ರಿಕೆಗೆ ಕಳುಹಿಸಿದರೆ ಒಂದಿಷ್ಟು ರಾಯಧನ ಬಂದೀತು. ಇದು ವಿಜ್ಞಾನಿಗಳ ಕೂಟ, ಅಡುಗೂಲಜ್ಜಿಯ ಸಭೆಯಲ್ಲ” ಸಿನ್ಹಾರ ಧ್ವನಿ ಮತ್ತಷ್ಟು ಏರಿತು.
ಕಿರಣ್ ತನ್ನ ಉಂಗುರವನ್ನು ಹೊರತೆಗೆದು ಕೈಯಲ್ಲಿ ಹಿಡಿದ.
“ಓಹೋ! ಈಗ ನಿನ್ನ ಎಂಗೇಜ್ಮೆಂಟ್ ರಿಂಗ್ ತೋರಿಸಲು ಹೊರಟೆಯೇನು?” ವ್ಯಂಗ್ಯವಾಡಿದರು ಸಿನ್ಹಾ.
“ಮೇಜರ್ ಸಿನ್ಹಾಜೀ, ನಿಮ್ಮ ವ್ಯಗ್ರತೆ ಅಕಾರಣವಾದುದು. ಕಿರಣ್ ನಮ್ಮ ಪ್ರಮುಖ ವಿಜ್ಞಾನಿಗಳಲ್ಲೊಬ್ಬರು. ಅವರೇ ಕಂಡುಹಿಡಿದ ಇಟಿಬಿಯಿಂದ ಪರೀಕ್ಷಿಸಿದ ನಂತರವೇ ಅವರು ಮನೋನ್ಮಣಿಯ ಅಸ್ತಿತ್ವವನ್ನು ಒಪ್ಪಿದ್ದು. ಭೂಮಿಯ ಚಲನೆಯ ವೇಗವು ಜನವರಿ ಮಾಸದಲ್ಲಿ ತಗ್ಗಿದ್ದನ್ನು ನಮ್ಮ ಕ್ಷಿತಿಜದ ಹೊರಭಾಗದ ವೇಗವನ್ನು ಅನುಕ್ಷಣವೂ ಗಮನಿಸಲೆಂದೇ ನಿಯೋಜಿತವಾಗಿರುವ ಲಿಥೋವೆಲಾಸಿಟಿ ಅಬ್ಸರ್ವರ್ ದೃಢಪಡಿಸಿದೆ” ದೃಢವಾಗಿ ನುಡಿದರು ಕಿರಣ್ನ ಬಾಸ್ ವಡಿವೇಲು.
ಕಿರಣ್ ಉಂಗುರದ ಪಾರ್ಶ್ವದಲ್ಲಿದ್ದ ಪುಟ್ಟ ಗುಂಡಿಯನ್ನು ಅದುಮಿದ. ಮನೋನ್ಮಣಿಯೊಡನೆ ಆಡಿದ ಮಾತುಗಳು ಅದರಲ್ಲಿ ರೆಕಾರ್ಡ್ ಆಗಿದ್ದವು. “ತಾನು ಲ್ಯೂಟೆನ್ ಬಿಯವಳೆನ್ನಲು ಈ ಗ್ಯಾಡ್ಜೆಟ್ಟನ್ನು ನೀಡಿದ್ದಾಳೆ. ನೀವೇ ಪರಿಶೀಲಿಸಿರಿ” ಎನ್ನುತ್ತ ಕಿರಣ್ ಸಮೋಸದ ಆಕಾರದ ವಸ್ತುವೊಂದನ್ನು ಸಿನ್ಹಾರಿಗೆ ನೀಡಿದ.
ಸಿನ್ಹಾ ಅದನ್ನು ಕೈಯಲ್ಲಿ ಹಿಡಿಯುತ್ತಿದ್ದಂತೆಯೇ ಅದರಲ್ಲಿ ಕಾಮನಬಿಲ್ಲನ್ನೂ ಮೀರಿಸಿದ ಬಣ್ಣಗಳು ಕುಣಿದಾಡಿದವು. ಸಮೋಸಾಕಾರದ ಮಧ್ಯವು ಮೇಲೆದ್ದು ಸ್ಕ್ರೀನಿನ ರೂಪ ತಾಳಿತು.
“ಮಿಸ್ಟರ್ ಸಿನ್ಹಾ, ಎರಡುಸಾವಿರದ ನಲವತ್ತೇಳರಲ್ಲಿ ನಿಮ್ಮ ಭೂಮಿ ಹೇಗಿರುತ್ತದೆಂದು ನೋಡಿರಿ” ಎಂಬ ಸಂದೇಶವು ಸ್ಕ್ರೀನಿನ ಮೇಲೆ ಮೂಡಿತು. ಪೃಥ್ವಿಯಲ್ಲಿ ಮೂರನೆಯ ಎರಡು ಭಾಗ ಇರುವ ನೀರು ಕೊತಕೊತನೆ ಕುದಿಯುತ್ತಿತ್ತು. “ಇದೋ ಇದು ಪೆಸಿಫಿಕ್ ಸಾಗರ. ಆ ಕಡೆಯದು ಹಿಂದೂ ಮಹಾಸಾಗರ. ನಿಮ್ಮೆಲ್ಲ ಸಾಗರಗಳೂ ಆ ಸಮಯಕ್ಕೆ ಬಿಸಿನೀರು ಹೊಂಡಗಳಾಗಿರುತ್ತವೆ…” ಹಿನ್ನೆಲೆಯಲ್ಲಿನ ಧ್ವನಿ ಸ್ಫುಟವಾಗಿತ್ತು.
ಇದ್ದಕ್ಕಿದ್ದಂತೆ ಸಮೋಸದ ಆಕಾರವು ಇದ್ದಲ್ಲೇ ಕರಗಲಾರಂಭಿಸಿತು. ಅದರ ಸ್ಥಳದಲ್ಲಿ ಬೆಳಕಿನ ಕೋಲೊಂದು ಕಂಡುಬಂದಿತು.
“ಭೂಗ್ರಹದ ಕುನ್ನಿಗಳೆ! ಸಾಯಲು ಸಿದ್ಧರಾಗಿ. ನಿಮ್ಮ ಲೆಕ್ಕದಲ್ಲಿ ಇನ್ನು ಮೂರು ತಿಂಗಳಲ್ಲಿ ನಮ್ಮಿಂದ ಹೊರಡುವ ಡೆತ್ ರೇ ಕಿರಣಗಳು ಅಲ್ಲೋಲಕಲ್ಲೋಲ ಉಂಟುಮಾಡುತ್ತವೆ. ಲ್ಯೂಟೆನ್ ಹೇಳಿದಂತೆ ಇನ್ನೂ ಇಪ್ಪತ್ಮೂರು ವರ್ಷಗಳನ್ನು ಕಾಯಲು ನಾವು ಸಿದ್ಧರಿಲ್ಲ” ಎಂಬ ಕೂಗಿನೊಂದಿಗೆ ಬೆಳಕು ಮಾಯವಾಯಿತು.
ಸಿನ್ಹಾಗೆ ಉದ್ವೇಗದಿಂದ ಮಾತೇ ಹೊರಡದಾಯಿತು. ವಡಿವೇಲು ಸ್ಥಳದಲ್ಲೇ ಮೂರ್ಛೆ ಬಿದ್ದರು.
ಕಿರಣ್ ತಡಮಾಡದೆ ತನ್ನ ಪ್ರಯೋಗಾಲಯಕ್ಕೆ ನಡೆದ.
“ಏನು ಮಾಡಬೇಕೆಂದಿದ್ದೀಯೆ?” ಪ್ರತ್ಯಕ್ಷಳಾದ ಮನೋನ್ಮಣಿ ಕೇಳಿದಳು.
“ನನ್ನ ಅಂದಾಜಿನ ಪ್ರಕಾರ ಲ್ಯೂಟೆನ್ ಆಗಲೇ ಆಕ್ರಾಮಕ ಕಿರಣಗಳನ್ನು ಭೂಮಿಯತ್ತ ಕಳುಹಿಸಿದೆ. ಅದು ಭೂಮಿಯನ್ನು ತಲಪಲು ಮೂರು ತಿಂಗಳು ಹಿಡಿಯುತ್ತದೆ. ಈಗಾಗಲೇ ಜುಲೈ ತಿಂಗಳ ಕೊನೆಯಲ್ಲಿದ್ದೇವೆ. ನಾವು ಆ ಕಿರಣಗಳನ್ನು ಎದುರಿಸಲು ತುರ್ತಾಗಿ ಸಿದ್ಧರಾಗಬೇಕು” ಎನ್ನುತ್ತ ಕಿರಣ್ ಕಾರ್ಯೋನ್ಮುಖನಾದ.
ಮೊದಲಿಗೆ ಅವನು ಕರೆ ನೀಡಿದ್ದು ತನ್ನ ಬಾಸ್ ಆದ ವಡಿವೇಲುವಿಗೆ. ಸಾಕಷ್ಟು ಚರ್ಚೆ ನಡೆದ ಬಳಿಕ “ಐ ಗಿವ್ ಯೂ ಎ ಫ್ರೀ ಹ್ಯಾಂಡ್. ಗೋ ಅಹೆಡ್” ಎಂದರು ಬಾಸ್.
* * *
“ವಡಿವೇಲು ಹೇಳಿದ್ದಾರೆ ಕಿರಣ್. ಏನಾಗಬೇಕು ಹೇಳಿ” ಎಂದರು ಆಸ್ಟ್ರೇಲಿಯನ್ ಸೈನ್ಸ್ & ಟೆಕ್ನಾಲಜಿಯ ಸಚಿವರಾದ ಫ್ರೆಡರಿಕ್ಸ್.
“ಅಂಟಾರ್ಟಿಕ್ ಪ್ರದೇಶದಲ್ಲಿ ಮೂರು ತಿಂಗಳವರೆಗೆ ವೈಜ್ಞಾನಿಕ ಪ್ರಯೋಗ ನಡೆಸಲು ಒಂದು ಬಂಗಲೆ ಬೇಕಾಗಿತ್ತು.”
“ಅದನ್ನು ಅಂಟಾರ್ಟಿಕ್ ಒಪ್ಪಂದದಲ್ಲಿ ಪಾಲ್ಗೊಂಡ ಸದಸ್ಯ ರಾಷ್ಟçಗಳು ಕೊಡಬಲ್ಲವು. ಪ್ರವಾಸಿಯಾಗಿ ಭೇಟಿ ನೀಡಲು ಅಡ್ಡಿಯಿಲ್ಲ. ಮೂರು ತಿಂಗಳು ಉಳಿಯಬೇಕೆಂದರೆ ವಿಶೇಷ ಅನುಮತಿ ಅವಶ್ಯ. ನಾನು ಇತರ ಸದಸ್ಯ ರಾಷ್ಟ್ರಗಳೊಡನೆ ಮಾತನಾಡುವೆ.”
* * *
“ಮೌಂಟ್ ಎವರೆಸ್ಟ್ ಮೇಲೆ ಮೂರು ತಿಂಗಳೆ? ಅದೂ ಸೆಪ್ಟೆಂಬರ್ನಿಂದ ನವೆಂಬರ್ವರೆಗೆ? ನಿಮಗೆ ಹುಚ್ಚು ಹಿಡಿದಿದೆಯೇನು?” ಕೆರಳಿದರು ಕಮಾಂಡರ್ ಥಾಪರ್.
“ಭೂಮಿಯ ಅಳಿವು-ಉಳಿವಿನ ಪ್ರಶ್ನೆ ಕಮಾಂಡರ್. ಅಲ್ಲಿ ಹೆಚ್ಚೆಂದರೆ ಮೂರು ಜನರು ಇರುತ್ತಾರೆ. ಅನುಮತಿ ಕೊಡುವುದು ಅನಿವಾರ್ಯ.”
ಸರ್ಕಾರದಿಂದ ಅನುಮತಿ ಪತ್ರವಿದ್ದರೂ, ಅಲ್ಲಿನ ಅಪಾಯಕಾರಿ ಸ್ಥಿತಿಯಲ್ಲಿ ವಿಜ್ಞಾನಿಗಳ ಜೀವವನ್ನು ಒತ್ತೆಯಿಡಲು ಸಮ್ಮತಿಸದ ಕಮಾಂಡರ್ ಅನಿವಾರ್ಯವಾಗಿ ಒಪ್ಪಬೇಕಾಯಿತು.
* * *
ಕಿರಣ್ ಮಾಡಿದ ಮೂರನೆಯ ಕರೆ ವಜ್ರದ ಗಣಿಗೆ. “ನನಗೆ ಇನ್ನು ಎರಡು ತಿಂಗಳೊಳಗೆ ಪಾಲಿಷ್ ಮಾಡಲ್ಪಟ್ಟ ವಜ್ರಗಳು ಬೇಕು” ಎಂದ ಕಿರಣ್.
“ಎಷ್ಟು?”
ಕಿರಣ್ ಹೇಳಿದ. “ಯಾರೋ ಹುಚ್ಚ ಇರಬೇಕು” ಎಂದುಕೊಳ್ಳುತ್ತ ಆ ಕಡೆಯವನು ಫೋನ್ ಡಿಸ್ಕನೆಕ್ಟ್ ಮಾಡಿದ.
ಕಿರಣ್ ಈ ವಿಷಯವನ್ನು ವಡಿವೇಲುವಿಗೆ ತಿಳಿಸಿ ತನ್ನ ಪ್ರಯೋಗಾಲಯದತ್ತ ದಾಪುಗಾಲು ಹಾಕಿದ.
* * *
ಅಕ್ಟೋಬರ್ ತಿಂಗಳ ಕೊನೆಯ ದಿನಗಳು. ಪ್ರಾಕ್ಸಿಮಾದ ಬೆದರಿಕೆಯ ಗಡುವು ಮುಗಿಯಲು ಇನ್ನೆರಡು ದಿನಗಳು ಮಾತ್ರ ಇದ್ದವು.
“ವಾಟ್ ಈಸ್ ಅವರ್ ಪೊಸಿಷನ್ ಕಿರಣ್?”
“ಪ್ರತಿಯೊಂದೂ ವ್ಯವಸ್ಥೆಯಾಗಿದೆ ಮಿಸ್ಟರ್ ಸಿನ್ಹಾ. ಪ್ರತಿಫಲಕ್ಕಾಗಿ ಕಾಯಬೇಕಷ್ಟೆ.”
“ಪ್ರತಿಫಲವೋ, ಪ್ರತಿಫಲನವೋ?”
“ಅದಕ್ಕೆ ಉತ್ತರ ಇನ್ನೆರಡು ದಿನಗಳಲ್ಲಿ ದೊರೆಯುತ್ತದೆ ಸರ್.”
* * *
ಸಿನ್ಹಾ, ವಡಿವೇಲು ಮತ್ತು ಕಿರಣ್ ತಮ್ಮ ವಿಜ್ಞಾನಿಗಳ ವೃಂದದೊಡನೆ ಬೃಹತ್ ಸ್ಕ್ರೀನಿನತ್ತ ನೋಡುತ್ತಾ ಕುಳಿತಿದ್ದರು. ಬಾಹ್ಯಾಕಾಶದ ಕ್ಷೀರಪಥದಲ್ಲಿ ಪ್ರಾಕ್ಸಿಮಾ ಸೆಂಟಾರಿಯ ಬಾಹ್ಯಾಕಾಶ ಸಂಸ್ಥೆಯ ದೃಶ್ಯಗಳನ್ನು ವೀಕ್ಷಿಸುತ್ತಿದ್ದರು. ಹಿಂದಿನ ದಿನವಷ್ಟೇ ಪ್ರತ್ಯಕ್ಷಳಾಗಿದ್ದ ಮನೋನ್ಮಣಿ ಈ ನೇರಪ್ರಸಾರಕ್ಕೆ ಅವಶ್ಯವಾದ ಗ್ಯಾಡ್ಜೆಟ್ಟೊಂದನ್ನು ನೀಡಿದ್ದಳು.
ಪ್ರಾಕ್ಸಿಮಾದ ಕಿರಣಗಳು ಭೂಮಿಯನ್ನಪ್ಪಳಿಸಲು ಕೆಲವೇ ನಿಮಿಷಗಳು ಉಳಿದಿದ್ದವು. ಭೂಮಿಯ ಅಳಿವು-ಉಳಿವಿನ ಪ್ರಶ್ನೆಗೆ ಉತ್ತರ ದೊರೆಯಲು ಕ್ಷಣಗಣನೆ ಆರಂಭವಾಗಿತ್ತು.
ಕಡೆಯ ಆರು ನಿಮಿಷಗಳು ಮಾತ್ರ ಉಳಿದಿದ್ದವು.
ಪ್ರಾಕ್ಸಿಮಾದ ವಿಜ್ಞಾನಿ ಇಂಪೆಂಡಿಮೆಂಟೋನ ಲೋಹದಂತಹ ಧ್ವನಿ ಭೂಮಿಯ ತರಂಗಗಳ ಮೇಲೆ ಹಾದು ಬಂದಿತು.
“ಕ್ಷುದ್ರರೇ, ಲ್ಯೂಟೆನ್ ಹೇಳಿದ ಮಾತನ್ನು ಕೇಳಿ ನಮ್ಮೊಡನೆ ಸೆಣಸಲು ಇಳಿದಿದ್ದೀರಿ. ಇದೋ ನಿಮ್ಮ ಕಾಲಗಣನೆಯ ಪ್ರಕಾರ ಇನ್ನು ಐದು ನಿಮಿಷಗಳಲ್ಲಿ ನಿಮ್ಮ ಹೆಮ್ಮೆಯ ಎವರೆಸ್ಟ್ ಪುಡಿಪುಡಿಯಾಗಲಿದೆ” ಎಂಬ ಕರ್ಣಕಠೋರ ಮಾತುಗಳು ಕೇಳಿಬಂದವು.
ಕಿರಣ್, ವಡಿವೇಲು ಮುಖಮುಖ ನೋಡಿಕೊಂಡರು. ಅವರ ದೃಷ್ಟಿ ಎದುರಿದ್ದ ಗಣೇಶನ ವಿಗ್ರಹದತ್ತ ಹರಿಯಿತು. ಅದೇ ಕ್ಷಣದಲ್ಲಿ ಸಿನ್ಹಾರ ಫೋನ್ ರಿಂಗಾಯಿತು.
“ಏನು? ಕಾಂಚನಗಂಗಾದಲ್ಲಿ ಕಂಪನವೆ? ಓಹ್! ಶತ್ರುಗಳು ಗೆಲ್ಲುತ್ತಿದ್ದಾರೆಂದಾಯಿತು. ಸರಿ. ಮುಂದಿನ ಬೆಳವಣಿಗೆಯನ್ನು ತಿಳಿಸುತ್ತಿರಿ” ಎನ್ನುತ್ತ ಫೋನ್ ಡಿಸ್ಕನೆಕ್ಟ್ ಮಾಡುತ್ತಿದ್ದಂತೆಯೇ ಅದು ಮತ್ತೆ ರಿಂಗ್ ಆಯಿತು.
“ಸರ್, ಅಂಟಾರ್ಟಿಕಾದಲ್ಲಿ ಕಂಪನ…”
ಅರ್ಧ ಸಂದೇಶವನ್ನು ಆಲಿಸಿಯೇ ಸಿಡಿಲು ಬಡಿದ ಮರದಂತೆ ಸಿನ್ಹಾ ತಮ್ಮ ಕುರ್ಚಿಯಲ್ಲಿ ಕುಸಿದರು.
ವಡಿವೇಲು ಚಿಂತಾಕ್ರಾಂತರಾದರು. ಕಿರಣ್ ಅವರತ್ತ ಅಸಹಾಯಕ ದೃಷ್ಟಿ ಬೀರಿದ.
“ನಾವೆಂದುಕೊಂಡಂತೆ ಆಗಲಿಲ್ಲ. ಆರ್ಕಿಮಿಡೀಸ್ ತಂತ್ರ ಇಲ್ಲಿ ಫಲಿಸಲಿಲ್ಲವೆನಿಸುತ್ತೆ. We are doomed” ಎಂದ ಕಿರಣ್.
ಕೊಠಡಿಯಲ್ಲಿ ಭೂತ ಸಂಚಾರವಾದಂತಾಯಿತು. “ಕಂಗ್ರಾಜುಲೇಷನ್ಸ್ ಕಿರಣ್” ಎಂಬ ಸಾಹಿತ್ಯವು ಮೋಹನರಾಗದಲ್ಲಿ ಕೊಳಲಿನಲ್ಲಿ ಮೂಡಿದಂತಾಯಿತು.
“ಮನೋನ್ಮಣಿ! ಸುದ್ದಿ ಕೇಳಲಿಲ್ಲವೆ? ಕಾಂಚನಗಂಗಾ ಕಂಪಿಸುತ್ತಿದೆ. ಅಂಟಾರ್ಟಿಕಾ ಅಲುಗಾಡುತ್ತಿದೆ. ಭೂಮಿಯ ಸೋಲನ್ನು ನೀನು ಸಂಭ್ರಮಿಸುವೆಯೇನು?” ಕಿರುಚಿದ ಕಿರಣ್.
“ಆತುರಗಾರನಿಗೆ ಬುದ್ಧಿ ಮಟ್ಟ ಕಡಮೆ. ನೀನು ಹಿಮಾಲಯದ ಮೇಲೆ ಮತ್ತು ಅಂಟಾರ್ಟಿಕಾದ ಓಝೋನ್ ರಂಧ್ರದ ಕೆಳಗೆ ಏನನ್ನು ಇರಿಸಿದ್ದೆ?”
“ಕನ್ನಡಿಯಷ್ಟೇ ಪ್ರಖರವಾಗಿ ಪ್ರತಿಫಲಿಸಬಲ್ಲ ಡೈಮಂಡ್ಗಳನ್ನು.”
“ಏಕೆ?”
“ಆರ್ಕಿಮಿಡಿಸ್ ಸೂರ್ಯನ ಬೆಳಕನ್ನು ಪ್ರತಿಫಲಿಸಿ ಒಂದು ಸೈನ್ಯವನ್ನೇ ಸೋಲಿಸಿದ್ದು ನಮಗೆ ಮಾರ್ಗದರ್ಶಿಯಾಯಿತು. ಸೆಂಟಾರಿ ಗ್ರಹದವರು ‘ಕಿರಣಗಳು ನಿಮ್ಮನ್ನು ಧ್ವಂಸ ಮಾಡುತ್ತವೆ’ ಎಂದು ಆಕ್ರಮಣದ ರೀತಿಯನ್ನು ಹೊರಗೆಡವಿದಾಗ ಆ ಕಿರಣಗಳನ್ನೇ…”
“ಸ್ಟಾಪ್ ಇಟ್ ಕಿರಣ್. ಲುಕ್ ಎಟ್ ದ ಪ್ರಾಕ್ಸಿಮಾ ಲ್ಯಾಬ್” ಅರಚಿದರು ಸಿನ್ಹಾ.
ಎಲ್ಲರೂ ಸ್ಕ್ರೀನಿನತ್ತ ತಿರುಗಿದರು. ಭೂಮಿಯಿಂದ ಪ್ರತಿಫಲನವಾದ ಅವರದೇ ಕಿರಣಗಳು ಅವರದೇ ಪ್ರಯೋಗಾಲಯದ ಮೇಲೆ ಮುಗಿಬಿದ್ದಿದ್ದವು. ನೋಡುನೋಡುತ್ತಿದ್ದಂತೆ ಪ್ರಯೋಗಾಲಯವು ಹನುಮನ ಅಗ್ನಿಸ್ಪರ್ಶಿತ ಬಾಲಕ್ಕೆ ಸಿಕ್ಕ ಲಂಕೆಯಾಯಿತು.
“ಪ್ರಾಕ್ಸಿಮಾದವರು ಓಝೋನ್ ರಂಧ್ರದ ಮೂಲಕ ಮಾತ್ರ ಭೂಮಿಯ ಮೇಲೆ ಆಕ್ರಮಣ ಮಾಡಬಹುದಾಗಿತ್ತು. ಅಂಟಾರ್ಟಿಕಾದಲ್ಲಿ ಓಝೋನ್ ಪದರವು ಛಿದ್ರವಾಗಿರುವ ಸ್ಥಳದ ಕೆಳಕ್ಕೆ ಸರಿಯಾಗಿ ರಿಫ್ಲೆಕ್ಟಿಂಗ್ ಡೈಮಂಡ್ಗಳನ್ನು ಇರಿಸಿದ್ದರಿಂದ ಅವರ ಕಿರಣಗಳು ಅವರತ್ತಲೇ ತಿರುಗಿದವು. ಪ್ರಾಕ್ಸಿಮಾ ಅಂಟಾರ್ಟಿಕಾ ಅಲ್ಲದೆ ಹಿಮಾಲಯವನ್ನು ಟಾರ್ಗೆಟ್ ಮಾಡುತ್ತದೆಂದು ನನಗೆ ಅನುಮಾನವಿತ್ತು. ಮಾನವನ ತಲೆ ತೆಗೆಯುವಂತೆಯೇ ಭೂಮಿಯ ತಲೆ ತೆಗೆಯುವ ನಿರ್ಧಾರ ಊಹೆಗೆ ನಿಲುಕುವಂತಹದ್ದೇ. ಆದ್ದರಿಂದ ಅಲ್ಲಿಯೂ ಇದೇ ರೀತಿ ಡೈಮಂಡ್ ಪದರವನ್ನು ಇರಿಸಿದ್ದೆವು.”
“ಎರಡೂ ಕಡೆಗಳಲ್ಲಿ ಹಿಮ ಸುರಿಯುತ್ತದೆ. ವಜ್ರಗಳು ಹಿಮದಲ್ಲಿ ಹೂತುಹೋಗಿದ್ದಿದ್ದರೆ ನಮ್ಮ ಕಥೆ ಮುಗಿಯುತ್ತಿತ್ತಲ್ಲವೆ?” ಕೇಳಿದರೊಬ್ಬ ಕಿರಿವಿಜ್ಞಾನಿ.
“ನಿಜ. ಆದ್ದರಿಂದಲೇ ಮೂರು ಹೆಲಿಕಾಪ್ಟರ್ಗಳಲ್ಲಿ ಉಪ್ಪನ್ನು ಬೆಟ್ಟಕ್ಕೂ, ಆರು ಹೆಲಿಕಾಪ್ಟರ್ಗಳಲ್ಲಿ ಉಪ್ಪನ್ನು ದ್ವೀಪಕ್ಕೂ ಒಯ್ದು ಹರಡಿದ್ದೆವು. ವಜ್ರಗಳ ಮಧ್ಯೆ ಮಧ್ಯೆ ಉಪ್ಪಿನ ಚೀಲಗಳನ್ನು ಇರಿಸಲಾಗಿತ್ತು.”
“ಹಾಗಾದರೆ ದ್ವೀಪ ಮತ್ತು ಕಾಂಚನಗಂಗಾದಲ್ಲಿ ಉಂಟಾದ ಕಂಪನಗಳ ಕಾರಣವೇನು?”
“ಬಾಹ್ಯಾಕಾಶದಿಂದ ಬಂದ ಕಿರಣಗಳಲ್ಲಿ ಸಾಮಾನ್ಯ ಕಲ್ಲನ್ನೂ ಒಡೆಯುವ ಸಾಮರ್ಥ್ಯವಿತ್ತು. ವಜ್ರವನ್ನು ಅದು ಒಡೆಯಲಾರದು ಎಂದುಕೊಂಡಿದ್ದೆವು. ನಮ್ಮ ಲೆಕ್ಕ ಸ್ವಲ್ಪ ತಪ್ಪಾಯಿತು. ಕೆಲವು ವಜ್ರಗಳು ಒಡೆದವು. ಒಡೆದ ರಭಸಕ್ಕೆ ರಿಕ್ಟರ್ ಮಾಪನದಲ್ಲಿ ಮೂರರಷ್ಟು ಕಂಪನವಾಯಿತು. ಕಾಂಚನಗಂಗಾದಲ್ಲಿ ಸಡಿಲವಾದ ಹಿಮರಾಶಿ ಇದ್ದುದರಿಂದ ಅಲ್ಲಿನವರಿಗೆ ಕಂಪನದ ತೀವ್ರತೆ ಹೆಚ್ಚೆಂದು ಭಾಸವಾಯಿತಷ್ಟೆ.”
* * *
ಮರುದಿನ ಜಗತ್ತಿನ ಎಲ್ಲ ಪತ್ರಿಕೆಗಳಲ್ಲಿಯೂ ಭೂಮಿಯು ಪ್ರಾಕ್ಸಿಮಾವನ್ನು ಗೆದ್ದ ಸುದ್ದಿಯು ಮುಖಪುಟದಲ್ಲಿ ರಾರಾಜಿಸಿತು. ವಾಹಿನಿಗಳು ಇದೇ ವಿಷಯವನ್ನು ವಾರಗಟ್ಟಲೆ ಕೊರೆದು ಲ್ಯೂಟೆನ್ ನಿವಾಸಿಗಳಿಗೂ ತಲೆನೋವು ತಂದರೆಂಬ ಸುದ್ದಿಯನ್ನು ಮನೋನ್ಮಣಿ ತಂದಳು.
“ನನ್ನಿಂದಲೇ ಇದು ಸಾಧ್ಯವಾಯಿತು” ಎಂದಿತು ಅಮೆರಿಕ.
“ಅಲ್ಲ. ನನ್ನಿಂದ” ಎಂದಿತು ಬ್ರಿಟನ್.
ಸದ್ಯದಲ್ಲಿ ಅವುಗಳ ವಾಕ್ಸಮರ ಮುಗಿಯುವ ಲಕ್ಷಣವಿಲ್ಲ.
* * *
“ನನ್ನನ್ನೇ ಈ ಸಾಹಸಕ್ಕೆ ಏಕೆ ಆರಿಸಿದೆ ಮನೋನ್ಮಣಿ?” ಕೇಳಿದ ಕಿರಣ್.
“ನಿನ್ನನ್ನು ಕಂಡಾಗ ಋಷ್ಯಶೃಂಗನನ್ನು ಕಂಡಂತಾಯಿತು. ಮೋಹಿನಿಯಂತೆ ಬಲೆ ಬೀಸಿದೆ” ಇನಿದನಿಯಲ್ಲಿ ನುಡಿದಳು ಮನೋನ್ಮಣಿ.
“ಒಮ್ಮೆ ನಿಜ ಹೇಳಿದರೆ ನಿನ್ನ ಗ್ರಹವೇನು ಕುಸಿಯುವುದಿಲ್ಲ.”
“ನಿನ್ನ ಉಂಗುರವೇ ಕಾರಣ. ಇಟಿಬಿ ಗುರುತಿಸಲು ವಿಶ್ವದಲ್ಲಿ ಇರುವ ಸಾಧನ ಅದೊಂದೇ.”
“ಅದನ್ನೇ ನಿನ್ನ ಬೆರಳಿಗೆ ತೊಡಿಸುತ್ತೇನೆ. ನನ್ನನ್ನು ವರಿಸುವೆಯಾ?”
“ಭೂಮಿಯ ಜನರದ್ದೆಲ್ಲಾ ಇಷ್ಟೇ ಆಯಿತು. ಹೋಗು, ಮತ್ತಷ್ಟು ಸಾಧನೆ ಮಾಡುವುದರತ್ತ ಗಮನ ಕೊಡು. ಪ್ರಾಕ್ಸಿಮಾ ಸೆಂಟಾರಿ ಸೇಡು ತೀರಿಸಿಕೊಳ್ಳದಂತೆ ನಿಮ್ಮ ಗ್ರಹಕ್ಕೊಂದು ದಿಗ್ಬಂಧನ ಮಾಡು. ಮೈ ತೋ ಏಕ್ ಖ್ವಾಬ್ ಹೂ; ಇಸ್ ಖ್ವಾಬ್ ಸೆ ತೂ ಪ್ಯಾರ್ ನ ಕರ್” ಎನ್ನುತ್ತ್ತ ಮನೋನ್ಮಣಿ ಪಿಕ್ಸೆಲ್ ಪಿಕ್ಸೆಲ್ಲಾಗಿ ಕರಗಿ ಅದೃಶ್ಯವಾದಳು.