ಮೊದಲ ನೋಟ ಹಾಗೂ ಸ್ಪರ್ಶಕ್ಕೇ ಆದಿತ್ಯನಿಗೆ ತಿಳಿದದ್ದು ಇಂದು ಎಲ್ಲರಿಗೂ ಪರಿಚಿತವೇ ಆಗಿರುವ ಶಿವಲಿಂಗದಂತಹದೇ ಆದ ಆ ಅರ್ಧ ಅಡಿಯ ಮರದ ವಸ್ತು ನೈಸರ್ಗಿಕವಲ್ಲದಷ್ಟು ನಯವಾಗಿದೆ ಎಂದು. ಅಂದರೆ ಇದು ಎಂದೋ ಯಾರಿಂದಲೋ ನಯಗೊಳಿಸಲ್ಪಟ್ಟಿದೆ! ಇದು ವಾಸ್ತವವಾಗಿಯೂ ತಾನು ಶೋಧಿಸಿರುವ ಪ್ರಾಚೀನ ನಗರದ್ದೇ ಅಥವಾ ಇತ್ತೀಚಿನ ದಿನಗಳಲ್ಲೇ ಗಂಗಾವಳಿ ನದಿಯ ಮೂಲಸ್ಥಾನದಿಂದ ಸಮುದ್ರದವರೆಗಿನ ಯಾವುದಾದರೂ ದೇವಾಲಯದಿಂದಲೋ ಮನೆಯಿಂದಲೋ ಯಾವ ಕಾರಣಕ್ಕೋ ಹೊರಬಿದ್ದು ಪ್ರವಾಹದಲ್ಲಿ ತೇಲಿಬಂದು ಹೇಗೋ ನೂರಿಪ್ಪತ್ತು ಅಡಿಗಳಳಾಕ್ಕೆ ಸೇರಿದ್ದೋ? ಯುವ ಪುರಾತತ್ತ್ವಶಾಸ್ತ್ರಜ್ಞ ಕಣ್ಣುಗಳನ್ನು ಕಿರಿದುಗೊಳಿಸಿಕೊಂಡ. ಇರಲಿ, ತನ್ನ ಪ್ರಶ್ನೆಗೆ ಉತ್ತರ ಲಖ್ನೋದ ಬೀರ್ಬಲ್ ಸಾಹ್ನಿ ಇನ್ಸ್ಟಿಟ್ಯೂಟ್ ಅಫ್ ಪ್ಯಾಲಿಯೋಬಾಟನಿಯಿಂದ ದೊರೆಯುತ್ತದೆ ಎಂದು ತನಗೇ ಹೇಳಿಕೊಂಡು ಸಹ–ಶೋಧಕಿಯತ್ತ ಸಮಾಧಾನದ ನೋಟ ಬೀರಿದ. ಮುಂದಿನ ಹತ್ತು ನಿಮಿಷಗಳಲ್ಲಿ ಮರದ ಶಿವಲಿಂಗದ ಫೋಟೋಗಳನ್ನು ತೆಗೆದು ಪ್ರೊ. ಹಿತೇಶ್ ರಾವತ್ ಅವರಿಗೆ ಇಮೇಲ್ ಮಾಡಿದ. ಈಗ ಪಾಕಿಸ್ತಾನದಲ್ಲಿರುವ ಅವರು ತನ್ನ ಇಮೇಲ್ ಅನ್ನು ಆದಷ್ಟು ಬೇಗ ನೋಡಲಿ ಎಂದು ಆಶಿಸಿದ. ತಡೆಯಲಾರದೆ ಅದನ್ನು ನೀಹಾರಿಗೂ ಹೇಳಿಕೊಂಡ. ಅವಳದೂ ಅದೇ ಆಶಾಭಾವನೆ.
ದಿಸ್ ಈಸ್ ಲಂಡನ್ ಕಾಲಿಂಗ್ ಏಷ್ಯಾ ಇನ್ ದ ಈಸ್ಟರ್ನ್ ಸರ್ವೀಸಸ್ ಆಫ್ ಬಿಬಿಸಿ. ಅವರ್ ನೆಕ್ಸ್ಟ್ ಪ್ರೋಗ್ರಾಮ್ ಈಸ್ ಇನ್ ಉರ್ದು…
ಸೌತ್ ಏಶಿಯಾ ಯೂನಿವರ್ಸಿಟಿ ಗೆಸ್ಟ್ಹೌಸ್ ಕೋಣೆಯ ಬಾಲ್ಕನಿಯಲ್ಲಿ ಕಣ್ಣುಮುಚ್ಚಿ ಕೂತು, ನನ್ನ ದಿತ್ತು ಪುಟಾಣಿಗೊಂದು ಪುಟಾಣಿ ಗಿಫ್ಟ್ ಎಂದು ಹೇಳಿ ನಾಲ್ಕು ವರ್ಷಗಳ ಹಿಂದೆ ಅಮ್ಮ ಕೊಟ್ಟಿದ್ದ ಸೋನಿ ಪುಟ್ಟಿ ಎಂದು ಆ ಕ್ಷಣವೇ ನಾಮಕರಣ ಮಾಡಿ ಅಪ್ಪಾಜಿ ಚಪ್ಪಾಳೆ ತಟ್ಟಿಕೊಂಡು ನಕ್ಕಿದ್ದ, ಎಂಟು ಬ್ಯಾಂಡ್ಗಳ ಪುಟ್ಟ ಸೋನಿ ಟ್ರಾನ್ಸಿಸ್ಟರ್ನಲ್ಲಿ ಆಕಾಶವಾಣಿಯ ಜೈಪುರ್ ಕೇಂದ್ರದಿಂದ ತೇಲಿಬರುತ್ತಿದ್ದ ನಿಶಾ ಗೀತ್ ಆಲಿಸಿ, ಅದು ಮುಗಿಯುತ್ತಿದ್ದಂತೆ ಮಮೂಲಿನ ಅಭ್ಯಾಸದಂತೆ ಬ್ಯಾಂಡ್ ಆಯ್ಕೆಯ ಉದ್ದನೆಯ ಪಟ್ಟಿಯನ್ನು ಪಟಪಟ ಎಡಕ್ಕೆ ಸರಿಸಿ ಶಾರ್ಟ್ವೇವ್ನ ಹತ್ತೊಂಬತ್ತನೇ ಮೀಟರ್ ಬ್ಯಾಂಡ್ಗೆ ತಂದು, ಟ್ಯೂನರ್ ವ್ಹೀಲ್ ಅನ್ನು ಕೆಳಕ್ಕೆ ತಿರುಗಿಸತೊಡಗಿದ ಆದಿತ್ಯ ವರ್ಷವರ್ಷಗಳಿಂದ ದಿನಕ್ಕೊಮ್ಮೆಯಾದರೂ ಕೇಳಿ ಕೇಳಿ ಪರಿಚಿತವಾಗಿಹೋಗಿದ್ದ ಘೋಷಣೆ ಕಿವಿಗೆ ಬೀಳುತ್ತಿದ್ದಂತೆ ಪುಟ್ಟದೊಂದು ಉಭಯಸಂಕಟಕ್ಕೊಳಗಾದ.
ನ್ಯೂಸ್ ಹೆಡ್ಲೈನ್ಸ್ ಕೇಳಿಸಿಕೊಳ್ಳುವುದೇ ಅಥವಾ ಸೋನಿ ಪುಟ್ಟಿಯ ಬಾಯಿ ಬಂದ್ ಮಾಡಿ ಹಾಸಿಗೆ ಸೇರುವುದೇ?
ಸಮಯ ಈಗ ಹತ್ತೂವರೆ. ಬೆಳಗ್ಗೆ ನಾಲ್ಕೂವರೆಗೆ ಏರ್ಪೋರ್ಟ್ ತಲಪಲೇಬೇಕಾಗಿದೆಯಲ್ಲ! ಕಳೆದ ಹತ್ತು ಸಾವಿರ ವರ್ಷಗಳಲ್ಲಿ ಭಾರತದ ಪಶ್ಚಿಮ ತೀರದಲ್ಲಿ ಸಾಗರದ ಮಟ್ಟದಲ್ಲಿ ಆಗುತ್ತ ಬಂದಿರುವ ಬದಲಾವಣೆಗಳ ಕುರಿತಾದ ಹೊಸ ಶೋಧಗಳ ಬಗ್ಗೆ ಸೌತ್ ಏಶಿಯಾ ಯೂನಿವರ್ಸಿಟಿಯಲ್ಲಿ ಆಯೋಜನೆಗೊಂಡ ಮೂರು ದಿನಗಳ ಇಂಟರ್ನ್ಯಾಷನಲ್ ಸೆಮಿನಾರ್ ಇಂದು ಮುಕ್ತಾಯಗೊಂಡಿದೆ. ಅದರೊಂದಿಗೆ ಸೆಮಿನಾರ್ನಲ್ಲಿ ಸಂಶೋಧನಾ ಪ್ರಬಂಧ ಮಂಡಿಸಲು ಸಿಕ್ಕಿದ್ದ ಆನ್ ಡ್ಯೂಟಿ ಲೀವ್ ಸಹ ಇಂದಿಗೆ ಮುಕ್ತಾಯವಾಗಿದೆ. ನಾಳೆ ಬೆಳಗ್ಗೆ ಒಂಬತ್ತೂವರೆಗೆ ಯೂನಿವರ್ಸಿಟಿಯಲ್ಲಿರಲೇಬೇಕು. ಹತ್ತೂವರೆಗೆ ಎಂ.ಎ. ಥರ್ಡ್ ಸೆಮಿಸ್ಟರ್ ವಿದ್ಯಾರ್ಥಿಗಳು ಮತ್ತು ಹನ್ನೆರಡೂವರೆಗೆ ಎಂ.ಎ. ಫಸ್ಟ್ ಸೆಮಿಸ್ಟರ್ ವಿದ್ಯಾರ್ಥಿಗಳು ತರಗತಿಗಳಲ್ಲಿ ಕಾಯುತ್ತಿರುತ್ತಾರೆ. ಅವರನ್ನು ನಿರಾಸೆಗೊಳಿಸಲಾಗದು. ಆ ಕ್ಲಾಸ್ಗಳನ್ನು ಮಿಸ್ ಮಾಡಿಕೊಂಡರೆ ಡೀನ್ರ ಕಿವಿಯೂದಲು ಎಚ್.ಓ.ಡಿ.ಗೆ ಇನ್ನೊಂದು ಕಾರಣ ಸಿಕ್ಕಿಬಿಡುತ್ತದೆ. ಅದರಿಂದಾಗಿ ಅಸಿಸ್ಟೆಂಟ್ನಿಂದ ಅಸೋಸಿಯೇಟ್ ಪೊಫೆಸರ್ ಹುದ್ದೆಗೇರುವ ನನ್ನ ಬಯಕೆಗೆ ಹೊಡೆತ ಬೀಳಲೂಬಹುದು! ಎಚ್.ಓ.ಡಿ.ಗೆ ನನಗರ್ಥವಾಗದ ಕಾರಣಗಳಿಗಾಗಿ ನನ್ನ ಮೇಲೆ ಈಗಾಗಲೇ ಇರಿಸುಮುರಿಸು. ಇನ್ನೆರಡು ದಿನಗಳಲ್ಲಿ ನಾನು ಇಂಟರ್ವ್ಯೂಗೆ ಹಾಜರಾದಾಗ ಅಲ್ಲೇ ಅವರು ನನ್ನ ಬಗ್ಗೆ ಕೆಟ್ಟ ಮಾತುಗಳನ್ನಾಡಬಹುದು. ನನ್ನೆಲ್ಲ ಸಂಶೋಧನೆಗಳನ್ನು ಕಡೆಗಣಿಸಿ ನನ್ನ ಬದಲು ತಮ್ಮದೇ ಹಳೆಯ ವಿದ್ಯಾರ್ಥಿನಿ ಚಂಪಕವಲ್ಲಿಯನ್ನು ಆಯ್ಕೆ ಮಾಡುವಂತೆ ಸೆಲೆಕ್ಷನ್ ಕಮಿಟಿಗೆ ಅವರು ಹೇಳಬಹುದು… ಯೋಚನೆ ಹೀಗೆ ಸಾಗಿದಂತೆ ಈಗ ಸೋನಿ ಪುಟ್ಟಿಯ ಕೊರಳು ಹಿಚುಕಿ ನಿದ್ದೆಹೋಗುವುದು ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದ ಯುವ ಉತ್ಸಾಹಿ ಅಧ್ಯಾಪಕ.
ವಾಲ್ಯೂಂ ನಾಬ್ ಅನ್ನು ಕೆಳಕ್ಕೆ ತಿರುಗಿಸಹೊರಟವನನ್ನು ತಡೆದದ್ದು ತನ್ನಿಷ್ಟದ ಕೆಲವೇ ಕೆಲವು ದನಿಗಳಲ್ಲೊಂದಾದ ಘಝಾಲಾ ಶಮೀಮ್ರ ರಾಗದ ಉಲಿತ. ವಾಲ್ಯೂಂ ನಾಬ್ ಮೇಲಿದ್ದ ಬೆರಳು ಪವರ್ ಆಫ್ ಆದಂತೆ ತಟಕ್ಕನೆ ನಿಲುಗಡೆಗೆ ಬಂತು. ಇವಳ ದನಿಯನ್ನಿಷ್ಟು ಕಿವಿಗೆ ತುಂಬಿಕೊಂಡು ಆಮೇಲೆ ಸೋನಿ ಪುಟ್ಟಿಯ ಕೊರಳು ತಿರುಗಿಸಿದರಾದೀತೆಂದುಕೊಳ್ಳುವ ಹೊತ್ತಿಗೆ ಘಝಾಲಾ ಶಮೀಮ್ ತನ್ನ ಮುದ್ದುಮುದ್ದು ಕಂಠದಲ್ಲಿ ಯಹ್ ಬಿಬಿಸಿ ಲಂದನ್ ಹೈ ಎಂದು ಅವನಿಗೆ ಗೊತ್ತಿದ್ದನ್ನೇ ಹೇಳಿದ್ದಲ್ಲದೆ, ಪಾಕಿಸ್ತಾನ, ಭಾರತ, ಬಂಗ್ಲಾದೇಶದ್ದರ ಜೊತೆಗೆ ತಾನಿರುವ ಲಂಡನ್ನ ಸಮಯವನ್ನೂ ಇನ್ನಷ್ಟು ರಾಗವಾಗಿ ಹೇಳಿ ಅನನನ್ನು ಆ ದಿನದ ಚೌತೀ ಔರ್ ಆಖ್ರೀ ಮಜ್ಲಿಸ್ಗೆ ಆಹ್ವಾನಿಸಿಯಾಗಿತ್ತು. ಇನ್ನವಳು ತನ್ನ ಮಾತು ಮುಗಿಸಿ ಖಬ್ರೇ ಓದಲು ತಾರಿಖ್ ಖೋಕರ್ನನ್ನೋ, ಮೆಹ್ನಾಜ್ ಬೇಗಂಳನ್ನೋ, ಫರ್ಜಾನಾ ವಾರ್ಸ್ನೀಯನ್ನೋ ಕರೆದು ಕೂರಿಸಿ ತಾನು ದೂರ ಸರಿಯುತ್ತಾಳೆ. ಈ ವಾರ್ತೆಗಳಲ್ಲಾದರೂ ಏನಿರುತ್ತದೆ? ಜುನೂಬಿ ಗಾಝಾ ಕೀ ರಫಾ ಶಹರ್ ಪರ್ ಇಸ್ರೇಲಿ ಫೌಜ್ ಕಾ ಬಡಾ ಹಮ್ಲಾ, ಭಾರತ್ ಮೆ ತೇಜ್ ಹೋ ರಹೀ ಇಂತಖಾಬಾದೀ ಸರ್ಗರ್ಮಿಯಾಂ. ಅದು ಬಿಟ್ಟರೆ ವಜ಼ೀರ್-ಎ-ಖಾರ್ಜಾ ಎಳಸು ಬಿಲಾವಲ್ ಭುಟ್ಟೋ ಜರ್ದಾರಿಯ ದಿನನಿತ್ಯದ ಮಸ್ಲಾ-ಎ-ಕಶ್ಮೀರ್ ಗೋಳಾಟ ಅಥವಾ ಸದ್ಯಕ್ಕೆ ಮುಗಿಯದ ಉಕ್ರೇನ್ ಕೆ ಖಿಲಾಫ್ ರೂಸ್ ಕಾ ಜಂಗ್ ಹೊರತಾಗಿ ಹೊಸದೇನಿರುತ್ತದೆ ಎಂದೆನಿಸಿ ಸೋನಿ ಪುಟ್ಟಿಯನ್ನು ಹಾಸಿಗೆಯ ಮೇಲೊಗೆದು ನೀರಿನ ಬಾಟಲಿನತ್ತ ಕೈ ಚಾಚಿದ.
ಚಾಚಿದ ಕೈ ಹಾಗೆಯೇ ನಿಂತಿತು.
ದಿಂಬಿಗೊರಗಿ ಅಂಗಲಾಚಿ ಮಲಗಿದ್ದ ಸೋನಿ ಪುಟ್ಟಿಯದೀಗ ಹೊಚ್ಚಹೊಸ ದನಿ!
ಎಂದು ಬಂದಳು ಈ ಹೊಸಬಿ? ಇವಳ ದನಿಯನ್ನೇ ಕೇಳಿರಲಿಲ್ಲವಲ್ಲ? ಈಗ ಹೆಸರೂ ಕೇಳಿಸಿಕೊಳ್ಳಲಿಲ್ಲವಲ್ಲ? ಸಣ್ಣಗೆ ಹಳಹಳಿಕೆಯೆನಿಸಿತು ಆದಿತ್ಯನಿಗೆ. ಮುಂದಿನ ಕ್ಷಣದಲ್ಲಿ ಸೋನಿ ಪುಟ್ಟಿಯಿಂದ ಹೊರಡುತ್ತಿದ್ದ ಇಂಪು ಅಷ್ಟೇ ಗಂಭೀರ ಕಂಠಕ್ಕಿಂತಲೂ ಅದು ಅರುಹತೊಡಗಿದ ಸುದ್ದಿಯೇ ಅವನನ್ನು ತನ್ನತ್ತ ಇಡಿಯಾಗಿ ಸೆಳೆದುಕೊಂಡಿತು. ಮೊದಲ ಹೆಡ್ಲೈನೇ ಅವನಲ್ಲುಕ್ಕಿಸಿದ್ದು ಅಚ್ಚರಿ, ಆಘಾತ, ದಿಗ್ಭ್ರಮೆ, ನಿರಾಸೆ ಮತ್ತು ಕೊನೆಯಲ್ಲಿ ಅಗಾಧ ಕೋಪ.
ವಾರ್ತೆಗಳ ಹೆಡ್ಲೈನ್ಸ್ ಮುಂದುವರಿದಂತೆ ಮಳೆಗಾಲದ ಸಂಜೆಗಳಲ್ಲಿ ಹುತ್ತದಿಂದ ಹೊರಬರುವ ಮಳೆಚಿಟ್ಟೆಗಳಂತೆ ಒಂದರ ಹಿಂದೊಂದರಂತೆ ಅನುಮಾನಗಳ ಸಾಲು… ಮೊದಲ ಹೆಡ್ಲೈನ್ ಅನ್ನು ಸರಿಯಾಗಿ ಕೇಳಿಸಿಕೊಂಡೆನೇ? ಏನನ್ನೋ ಇನ್ನೇನೋ ಅಂದುಕೊಂಡೆನೇ? ನಿಶಾ ಗೀತ್ನ ಮುಖೇಶ್ನ ದರ್ದ್ಭರೀ ನಗ್ಮಾಗಳ ಸುಳಿಯಿಂದ ನಾನಿನ್ನೂ ಹೊರಬಂದಿಲ್ಲವೆ? ಅಥವಾ ಎಲ್ಲವೂ ನನ್ನ ಭ್ರಮೆಯೆ?
ಈ ಮಹಾತಾಯಿ ಸುರ್ಕೀಗಳನ್ನು ಅದೆಷ್ಟು ಬೇಗ ಮುಗಿಸಿ ಮೊದಲ ವಿಷಯವನ್ನು ಯಾವಾಗ ವಿಸ್ತಾರವಾಗಿ ಹೇಳತೊಡಗುತ್ತಾಳೋ ಎಂದು ಕಾದ. ನೀರಿನ ಬಾಟಲ್ ಕೈಯಲ್ಲೇ ನಿಶ್ಚಲವಾಗಿ ನಿಂತಿತ್ತು.
ಹಾಗೆ ಕಾದವನಿಗಾದದ್ದು ನಿರಾಸೆ.
ಸೋನಿ ಪುಟ್ಟಿಯಿಂದ ಹೊರಹರಿದು ಬರುತ್ತಿದ್ದ ಹೊಸ ಕಂಠಸಿರಿ ನಿಧಾನವಾಗಿ ಇಳಿಯುತ್ತಹೋಗಿ ಅದರ ಜಾಗದಲ್ಲಿ ಯಾರೋ ತಿದಿ ಒತ್ತುತ್ತಿರುವಂತಹ ಸದ್ದು ಮೊಳಗತೊಡಗಿತು. ಥತ್, ಈ ಶಾರ್ಟ್ವೇವ್ ಹಣೆಬರಹವೇ ಇಷ್ಟು ಅಂದುಕೊಂಡು ಏರಿಯುಲ್ ಅನ್ನು ಆತುರಾತುರವಾಗಿ ಅತ್ತಇತ್ತ ಬಾಗಿಸಿದ, ಅದು ನಿಷ್ಪ್ರಯೋಜಕ ಎಂದು ಗೊತ್ತಿದ್ದರೂ ತಿದಿ ಸದ್ದು ಬಂದಂತೆಯೇ ನಿಧಾನವಾಗಿ ಇಳಿದು ಮತ್ತೆ ಹೊಸಬಿಯ ದನಿ ಸ್ಪಷ್ಟವಾಗತೊಡಗಿತು. ಅವಳು ಹೇಳುತ್ತಿದ್ದಳು: …ಭಾರತ್ ಕಾ ಜುನೂಬಿ ಸುಬಾ ಕರ್ನಾಟಕ್ ಕೆ ವಜೀರ್-ಎ-ರಿಯಾಸತ್ ಜನಾಬ್ ಮರುಳಪ್ಪ ಬೇವಿನಹುಂಡಿ ನೆ ಆಜ್ ಶಾಮ್ ಬಂಗ್ಲೋರ್ ಮೆ ಅಕ್ಬಾರೀ ನುಮಾಯಿಂದೋಂ ಕೆ ಸಾಥ್ ಏಕ್ ಮುಲಾಖಾತ್ ಮೆ ಯೆಹ್ ಬಾತ್ ದೊಹ್ರಾಯೀ ಹೈ ಕೀ ಇಸ್ತಾಂಬುಲ್ ಇನ್ಸ್ಟಿಟ್ಯೂಟ್ ಆಫ್ ಮರೀನ್ ಆರ್ಕಿಯಾಲಜಿ ಕಾ ರಿಪೋರ್ಟ್ ಕೆ ಮುತಾಬೆ ದರಿಯಾ-ಎ-ಗಂಗಾವಲಿ ಮೆ ಪಾಯಾ ಗಯಾ ಶಿವ್ಲಿಂಗ್ ಬಾರಾಹ್ ಸೌ ಸಾಲ್ ಪುರಾನಾ ಹೈ…
ಮುಂದಿನದನ್ನು ಕೇಳುವ ತಾಳ್ಮೆಯಿಲ್ಲದೆ ಟ್ರಾನ್ಸಿಸ್ಟರ್ ಅನ್ನು ಪಟಕ್ಕನೆ ಆಫ್ ಮಾಡಿ ತಲೆಗೆ ಕೈಹೊತ್ತು ಕೂತ ಕನಸುಗಣ್ಣಿನ ಯುವ ಪುರಾತತ್ತ್ವಶಾಸ್ತ್ರಜ್ಞ ಡಾ. ಆದಿತ್ಯ.
ಅದೆಷ್ಟೋ ಹೊತ್ತಿನ ಮೇಲೆ ತಲೆಯೆತ್ತಿದರೆ ಟೇಬಲ್ ಮೇಲಿದ್ದ, ಇಂದು ಬೆಳಗ್ಗೆಯಷ್ಟೇ ಮಂಡಿಸಿ, ಪ್ರಶ್ನೆಗಳಿಗೆಲ್ಲ ಸಮರ್ಪಕವಾಗಿ ಉತ್ತರಿಸಿ, ದಿಗ್ವಿಜಯ ಸಾಧಿಸಿದವನಂತೆ ಪೋಡಿಯಂನಿಂದ ಬಂದು, ಪ್ರೀತಿಯಿಂದ ಮತ್ತೆಮತ್ತೆ ಸವರಿ ಪೋಲ್ಡರ್ಗೆ ಸೇರಿಸಿದ್ದ ತನ್ನ ಸಂಶೋಧನ ಪ್ರಬಂಧ ಮತ್ತು ಪಿಪಿಟಿ ಇದ್ದ ಪೆನ್ಡ್ರೈವ್ ಅಣಕಿಸಿದವು.
ಅವುಗಳತ್ತ ನಿರಾಸೆಯ ನೋಟ ಹೂಡಿ ಕಣ್ಣು ಮುಚ್ಚಿದ. ಮಸ್ತಿಷ್ಕದಲ್ಲಿ ಪ್ರಶ್ನೆ – ನಾನು ಮತ್ತು ಡಾ. ನೀಹಾರಿಕಾ ಕಲ್ಯಾಣಪುರ ಊಟ ನಿದ್ದೆ ತೊರೆದು ಒಂದೂವರೆ ವರ್ಷದಿಂದ ನಡೆಸಿದ ಅತೀವ ಶ್ರಮದಾಯಕ ಸಂಶೋಧನೆ ಏಕಾಏಕಿ ಅರ್ಥ ಕಳೆದುಕೊಂಡಿತೇ? ನಮ್ಮಿಬ್ಬರ ಅಕಾಡೆಮಿಕ್ ಬದುಕಿನ ಒಂದೂವರೆ ವರ್ಷ ವ್ಯರ್ಥವಾಗಿ, ಅರಬ್ಬಿ ಸಮುದ್ರದ ತಳ ಸೇರಿತೇ? ತಪ್ಪಾದದ್ದೆಲ್ಲಿ?
ಮುಚ್ಚಿದ ರೆಪ್ಪೆಗಳ ಹಿಂದೆ ಕಳೆದ ಹದಿನೆಂಟು ತಿಂಗಳುಗಳು ಬಿಚ್ಚಿಕೊಳ್ಳತೊಡಗಿದವು.
* * *
ಎಲ್ಲ ಶುರುವಾದದ್ದು ಎರಡು ವರ್ಷಗಳಿಗೂ ಹಿಂದೆ, ತೀರಾ ಅಕಸ್ಮಿಕವಾಗಿ.
ಪ್ರಿ-ಕ್ರಿಶ್ಚಿಯನ್ ಯುಗದಲ್ಲಿ ಭಾರತದ ಪಶ್ಚಿಮ ತೀರ ಮತ್ತು ದಾಕ್ಷಿಣಾತ್ಯ ಆಫ್ರಿಕಾದ ಪೂರ್ವತೀರದ ಜನರ ನಡುವಿನ ಸಮುದ್ರ ಸಂಪರ್ಕದ ಕುರಿತಾಗಿ ದಕ್ಷಿಣ ಆಫ್ರಿಕಾದ ಡರ್ಬಾನ್ ಯೂನಿವರ್ಸಿಟಿ ಆಯೋಜಿಸಿದ ಅಂತರರಾಷ್ಟ್ರೀಯ ಸೆಮಿನಾರ್ನಲ್ಲಿ ಭಾಗವಹಿಸಿದ್ದ ಆದಿತ್ಯನಿಗೆ ಎದುರಾದವರು ಕನ್ನಡತಿ ಡಾ. ನೀಹಾರಿಕಾ ಕಲ್ಯಾಣಪುರ. ವರ್ಷದ ಹಿಂದಷ್ಟೇ ಪಿಹೆಚ್ಡಿ ಪದವಿ ಗಳಿಸಿ ಪುಣೆಯ ಡೆಕ್ಕನ್ ಕಾಲೇಜ್ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಆರಂಭಿಸಿದ್ದ ಮಗಳನ್ನು ಏಕಾಂಗಿಯಾಗಿ ಅಷ್ಟು ದೂರ ಕಳುಹಿಸಲು ಹಿಂಜರಿದ ತಂದೆ ನಾರಾಯಣ ಕಲ್ಯಾಣಪುರ ತಮ್ಮ ಖರ್ಚಿನಲ್ಲಿ ತಾವೂ ಅಲ್ಲಿದ್ದರು. ಎರಡಣೆಯ ಸಂಜೆ ಡರ್ಬಾನ್ ಪ್ರಾಂತ್ಯದ ಗವರ್ನರ್ ನೀಡಿದ ಔತಣಕೂಟದಲ್ಲಿ ಭಾಗವಹಿಸಿದ ನಂತರ ಹೊರಗೆ ಅಡ್ಡಾಡಲು ಹೊರಟ ಆದಿತ್ಯನಿಗೆ ತಂದೆ ಮಗಳು ಜೊತೆಯಾದರು. ಆಗ ಮಾತಿನ ನಡುವೆ ನಾರಾಯಣ ಕಲ್ಯಾಣಪುರ ಅವರು ಹೇಳಿದ ಒಂದು ವಿಷಯ ಆದಿತ್ಯನ ಕಿವಿಗಳನ್ನು ನೆಟ್ಟಗಾಗಿಸಿತು.
ಗಂಗಾವಳಿ ನದಿ ಸಮುದ್ರ ಸೇರುವೆಡೆ ನಾರಾಯಣರ ಒಂದು ರೆಸಾರ್ಟ್ ಸಮುದ್ರಗಂಗಾ ಅಂತ, ಅಲ್ಲೇ ಅವರ ಮನೆ ಸಹಾ. ಡಿಸೆಂಬರ್ ೨೦೦೪ರಲ್ಲಿ ಪೂರ್ವತೀರಕ್ಕೆ ಅಪ್ಪಳಿಸಿದ ಸುನಾಮಿಯ ಸ್ವಲ್ಪ ಪರಿಣಾಮ ಪಶ್ಚಿಮ ಕರಾವಳಿಯಲ್ಲೂ ಕಾಣಿಸಿಕೊಂಡಿತ್ತು. ನಾರಾಯಣರು ಆ ಬೆಳಗ್ಗೆ ಕಂಡದ್ದು ಸರ್ರನೆ ಹಿಂದೆ ಸರಿದೋಡಿದ ಅರಬ್ಬಿ ಸಮುದ್ರ ತೆರೆದಿಟ್ಟ ಅದ್ಭುತ ದೃಶ್ಯ. ತಟಕ್ಕೆ ಅನತಿ ದೂರದಲ್ಲಿ ಕಂಡದ್ದು ಇಂಗ್ಲಿಷ್ನ ಬೃಹದಾಕಾರದ ಯು ಅಕ್ಷರದಂತೆ ಕಾಣುವ ಒಂದು ರಚನೆ. ಹಾವಸೆಗಟ್ಟಿದ್ದು, ಚಿತ್ರವಿಚಿತ್ರ ಸಮುದ್ರ ಸಸ್ಯಗಳಿಂದ ಆವರಿಸಿಕೊಂಡಿದ್ದರೂ ಅದು ಕಲ್ಲಿನಲ್ಲಿ ನಿರ್ಮಾಣವಾದ ರಚನೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು – ಎನ್ನುವುದು ಅವರ ಹೇಳಿಕೆ. ಕೆಲವೇ ನಿಮಿಷಗಳಲ್ಲಿ ಉಕ್ಕಿಬಂದ ಸಮುದ್ರದ ನೀರಿನಲ್ಲಿ ಅದು ಮುಚ್ಚಿಹೋಯಿತು, ಅನಂತರದ ಅಲ್ಲೋಲಕಲ್ಲೋಲದಲ್ಲಿ ಅದು ಆಗ ಮತ್ತೆ ನೀರಿನಲ್ಲಿ ಮುಳುಗಿ ಮಾಯವಾದದ್ದಷ್ಟೇ ಅಲ್ಲ, ತಮ್ಮ ಮನಸ್ಸಿನಿಂದಲೂ ಮರೆಯಾಗಿಹೋಯಿತು ಎನ್ನುವುದು ಅವರ ಬೇಸರದ ಮಾತು. ಆಮೇಲೂ ಆ ವಿಷಯವನ್ನು ಹಂಚಿಕೊಳ್ಳಬಹುದಾದ ಜನ ತಮಗೆ ಸಿಗಲೇ ಇಲ್ಲ, ಹೀಗಾಗಿ ಮರೆತೇಹೋದ ಅದು ಮತ್ತೆ ನೆನಪಾದದ್ದು ಮಗಳು ನೀಹಾರಿಕಾ ಪಶ್ಚಿಮಘಟ್ಟಗಳ ಪಶ್ಚಿಮ ಇಳಿಜಾರಿನುದ್ದಕ್ಕೂ ಕಂಡುಬಂದಿರುವ ನವಶಿಲಾಯುಗದ ಮಾನವ ವಸತಿಗಳ ಕುರಿತಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಸಂಶೋಧನೆ ಆರಂಭಿಸಿದಾಗ. ಅಷ್ಟಾಗಿಯೂ ತಾವು ಕಂಡದ್ದನ್ನು ನಿಖರ ಪದಗಳಲ್ಲಿ ಮಗಳಿಗೆ ಹೇಳಲಾಗಲಿಲ್ಲವೆಂದೂ ಅವರು ಹಳಹಳಿಕೆ ವ್ಯಕ್ತಪಡಿಸಿದರು.
ಹಿರಿಯರ ಮಾತು, ಆದಿತ್ಯನ ಕುತೂಹಲದ ಪ್ರಶ್ನೆಗಳು, ತಂದೆ ಅರೆಗಣ್ಣಿನಲ್ಲಿ ನೆನಪಿಸಿಕೊಂಡು ಹೇಳುತ್ತಹೋದ ವಿವರಗಳು ನೀಹಾರಿಕಾಳಲ್ಲೂ ಆಸಕ್ತಿ ಮೂಡಿಸಿದವು. ಡರ್ವಾನ್ನಿಂದ ಹೊರಡುವ ಹೊತ್ತಿಗೆ, ಆ ವಿಷಯದಲ್ಲಿ ಸ್ವಲ್ಪ ಕೈಯಾಡಿಸಬೇಕೆಂದು ಇಬ್ಬರೂ ತೀರ್ಮಾನಿಸಿಯಾಗಿತ್ತು. ಆದರೆ ಆ ದಿಕ್ಕಿನಲ್ಲಿ ಸಾಗುವುದೇನೂ ಸುಲಭವಾಗಿರಲಿಲ್ಲ. ಮರೀನ್ ಆರ್ಕಿಯಾಲಜಿಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡಿದ್ದ ಆದಿತ್ಯನಿಗೆ ಸಮುದ್ರದಲ್ಲಿ ಮುಳುಗು ಹಾಕುವುದು, ಸಾಗರತಳದ ವೀಕ್ಷಣೆ, ನೀರಿನಾಳದ ಛಾಯಾಗ್ರಹಣದಲ್ಲಿ ತಕ್ಕಮಟ್ಟಿಗಿನ ಜ್ಞಾನವಿತ್ತು. ಆದರೆ ಜಗದಂಬಾ ಸೇರಿದಂತೆ ತಂಡದ ಇನ್ನಾರಿಗೂ ಈ ಬಗ್ಗೆ ಏನೂ ತಿಳಿದಿರಲಿಲ್ಲ. ಅವರದೇನಿದ್ದರೂ ನೆಲದ ಮೇಲೆ ಅಚ್ಚುಕಟ್ಟಾಗಿ ಉತ್ಖನನ ನಡೆಸುವುದಷ್ಟೇ. ಆದರೆ ಹಿಂದೆಗೆಯಲು ಆದಿತ್ಯ ತಯಾರಿರಲಿಲ್ಲ. ಜಗದಂಬಾ ತನ್ನ ಸಾಮರ್ಥ್ಯಕ್ಕೆ ತಕ್ಕ ಸಹಾಯಕ್ಕೆ ನಿಂತಳು.
ಅಲ್ಲೂ ಎದುರಾದದ್ದು ತೊಡಕೇ. ಗಂಗಾವಳಿ ನದಿ ಸಮುದ್ರ ಸೇರುವೆಡೆ ಸೃಷ್ಟಿಯಾಗಿರುವ ಅಳವೆಯಲ್ಲಿ ಸಮುದ್ರದ ನೀರು ಕಲಕಿದಂತಿದ್ದುದರಿಂದ ಹತ್ತು-ಹದಿನೈದು ಅಡಿಗಳಾಚೆ ಏನಿದೆಯೆಂದು ಕಾಣುತ್ತಲೇ ಇರಲಿಲ್ಲ. ಇಪ್ಪತ್ತು ಅಡಿಗಳ ಕೆಳಗೆ ಛಾಯಾಗ್ರಹಣ ಸಹ ಸಾಧ್ಯವಿರಲಿಲ್ಲ. ಇನ್ನು ಅಲ್ಲಿ ನಲವತ್ತು-ನಲವತ್ತೈದು ಅಡಿಗಳ ಆಳದಲ್ಲಿ ಏನಿದೆಯೆಂದು ತಿಳಿಯುವುದಾದರೂ ಹೇಗೆ?
ಆಗ ಸಹಾಯಕ್ಕೆ ಬಂದದ್ದು ಆದಿತ್ಯನ ಪಿಎಚ್.ಡಿ. ಗೈಡ್ ಆಗಿದ್ದ ಡೆಲ್ಲಿ ಯೂನಿವರ್ಸಿಟಿಯ ಪ್ರೊ. ಹಿತೇಶ್ ರಾವತ್. ಅವರ ಪ್ರಭಾವದಿಂದ ನಿಯೋಟ್ ಅಂದರೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ ಸಾಗರತಳದ ಸರ್ವೇಕ್ಷಣೆ ನಡೆಸುವ ಬಗ್ಗೆ ಆದಿತ್ಯನಿಗೆ ಎರಡು ವಾರಗಳ ತೀವ್ರ ತರಬೇತಿ ನೀಡಿತು. ಹಾಗೆಯೆ ಸೋನಾರ್ ಮತ್ತು ಸಬ್ ಬಾಟಂ ಪ್ರೊಫೈಲರ್ ಉಪಕರಣಗಳಿಂದ ಪಡೆದುಕೊಂಡ ಮಾಹಿತಿಗಳನ್ನು ಕಂಪ್ಯೂಟರ್ಗೆ ಫೀಡ್ ಮಾಡಿ ಸಾಗರದಾಳದ ೩ಡಿ ಇಮೇಜ್ಗಳನ್ನು ಪಡೆದುಕೊಳ್ಳುವ ವಿಧಾನವನ್ನು ಜಗದಂಬಾಗೆ ಕಲಿಸಿತು. ಅಷ್ಟೇ ಅಲ್ಲ, ಅಗತ್ಯ ಉಪಕರಣಗಳೊಂದಿಗೆ ತನ್ನ ಇಬ್ಬರು ಕಿರಿಯ ವಿಜ್ಞಾನಿಗಳು ಕೆಲವು ದಿನಗಳು ಇವರ ಸಹಕಾರಕ್ಕೆ ನಿಲ್ಲುವ ವ್ಯವಸ್ಥೆಯನ್ನೂ ಮಾಡಿತು. ಆಗ ಆದದ್ದು ಇತಿಹಾಸವನ್ನೇ ಬದಲಿಸುವ ಸಂಶೋಧನೆ. ಹಾಗಂತ ಆದಿತ್ಯ ಮತ್ತು ಜಗದಂಬಾ ಇಬ್ಬರೂ ಬಲವಾಗಿ ನಂಬಿದ್ದಾರೆ. ಅವರ ಒಂದೂವರೆ ವರ್ಷದ ಸಂಶೋಧನೆ ಆ ಗಟ್ಟಿ ವಿಶ್ವಾಸವನ್ನು ಅವರಲ್ಲಿ ಮೂಡಿಸಿದೆ.
ಆದಿತ್ಯನ ತಂಡ ನಾರಾಯಣ ಕಲ್ಯಾಣಪುರ ಅವರು ಕಂಡಿದ್ದ ರಚನೆಯನ್ನು ನಾಲ್ಕು ದಿನಗಳಲ್ಲಿ ಶೋಧಿಸಿತು. ಅದು ಪ್ರಾಕೃತಿಕವಲ್ಲದ, ಮನುಷ್ಯ ನಿರ್ಮಿತಿ ಎಂಬ ಸ್ಪಷ್ಟ ಕುರುಹುಗಳು ಕಂಡುಬಂದರೂ ಆ ಬಗ್ಗೆ ಹೆಚ್ಚಿನ ಮಾಹಿತಿ ದಕ್ಕಲಿಲ್ಲ. ಅದಕ್ಕೇ ಅಂಟಿಕೊಂಡಿದ್ದರೆ ದಕ್ಕುತ್ತಿತ್ತೋ ಏನೋ. ಆದರೆ ಆದಿತ್ಯನ ಗಮನಸೆಳೆದದ್ದು ಆ ರಚನೆಯಿಂದ ಇಳಿಯುತ್ತಹೋಗಿದ್ದ ಮೆಟ್ಟಿಲುಗಳು! ಅವು ಇಪ್ಪತ್ತನಾಲ್ಕಿದ್ದವು. ಮೆಟ್ಟಿಲ ಸರಣಿ ಕೊನೆಯಾಗುತ್ತಿದ್ದಂತೆ ಹನ್ನೆರಡು ಅಡಿ ಅಗಲದ ರಸ್ತೆಯಂತಹ ಸಪಾಟು ಆಳ ಸಮುದ್ರದತ್ತ ಸಾಗಿಹೋಗಿತ್ತು. ಆ ಕಡುಗತ್ತಲೆಯಲ್ಲಿ ಅದು ಎಷ್ಟು ದೂರಕ್ಕೆ ಎಲ್ಲಿಗೆ ಸಾಗುತ್ತದೆ ಎಂದು ತಿಳಿಯುವ ಹಾಗೇ ಇರಲಿಲ್ಲ. ಆಗ ಆದಿತ್ಯನ ತಂಡ ಮೊರೆಹೋದದ್ದು ನಿಯೋಟ್ ವಿಜ್ಞಾನಿಗಳಾದ ಕಿಶನ್ರೆಡ್ಡಿ ಮತ್ತು ಅಮಿತ್ ಮೌರ್ಯ ಅವರನ್ನು ಮತ್ತವರ ಉಪಕರಣಗಳನ್ನು. ಮುಂದಿನ ಒಂದು ವಾರದಲ್ಲಿ ಆದಿತ್ಯನ ತಂಡ ಸೈಡ್ಸ್ಕ್ಯಾನ್ ಸೋನಾರ್ ಮತ್ತು ಸಾಗರದ ತಳದಲ್ಲಿ ಹತ್ತು ಅಡಿಗಳಷ್ಟು ಆಳದ ನೆಲವನ್ನೂ ಎಕ್ಸ್ರೇ ಕಣ್ಣಿನಿಂದ ಪರಿಶೀಲಿಸಬಲ್ಲ ಸಬ್ ಬಾಟಂ ಪ್ರೊಫೈಲರ್ ಉಪಕರಣಗಳ ಮೂಲಕ ಸಾಗರತಳದ ಇಮೇಜ್ಗಳನ್ನು ಪಡೆದು ಕಂಪ್ಯೂಟರ್ನಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಿತು.
ಸೈಡ್ ಸ್ಕ್ಯಾನರ್ ಸೋನಾರ್ ಮೂಲಕ ಪಡೆದುಕೊಂಡ ಚಿತ್ರಗಳು ಸಾಗರದಾಳದ ಗಟ್ಟಿ ವಸ್ತುಗಳು ಗಾಢ ಬಣ್ಣದಲ್ಲೂ, ಮೃದುವಸ್ತುಗಳು ತೆಳುಬಣ್ಣದಲ್ಲೂ ಇರುವಂತೆ ಕಂಪ್ಯೂಟರ್ನಲ್ಲಿ ಮೂಡಿಸಿದ ಇಮೇಜ್ಗಳು ಆದಿತ್ಯನ ಕುತೂಹಲವನ್ನು ತಾರಾಮಾರು ಏರಿಸಿದವು. ಆದರೆ ಅನಿರ್ದಿಷ್ಟ ಕಾಲದವರೆಗೆ ತನ್ನ ವಿಜ್ಞಾನಿಗಳನ್ನೂ ಅವರ ಉಪಕರಣಗಳನ್ನೂ ಆದಿತ್ಯನ ತಂಡದ ಸಹಾಯಕ್ಕೆ ನೀಡುವುದು ನಿಯೋಟ್ ಸಂಸ್ಥೆಗೆ ಸಾಧ್ಯವಿರಲಿಲ್ಲ. ಹೀಗಾಗಿ ಒಂದೆರಡು ತಿಂಗಳುಗಳು ತಂಡದ ಸಂಶೋಧನ ಚಟುವಟಿಕೆಗಳು ನಿಲುಗಡೆಗೆ ಬರುವಂತಾಯಿತು. ಕೊನೆಗೆ ಅಗತ್ಯ ಉಪಕರಣಗಳನ್ನು ತಾನೇ ಖರೀದಿಸಿ ನಿರಂತರವಾಗಿ ಸಾಗರತಳದ ಇಮೇಜ್ಗಳನ್ನು ಪಡೆದು ಕ್ರಮಬದ್ಧವಾಗಿ ವಿಶ್ಲೇಷಿಸತೊಡಗಿದ ಆದಿತ್ಯ ಮತ್ತು ನೀಹಾರಿಕಾರ ಮುಂದೆ ಮುಂದಿನ ಒಂದು ವರ್ಷದಲ್ಲಿ ಅದ್ಭುತಗಳು ತೆರೆದುಕೊಳ್ಳತೊಡಗಿದವು.
ಅಷ್ಟರ ಹೊತ್ತಿಗೆ ಸಹೋದ್ಯೋಗಿಗಳಲ್ಲಿ ಟೀಮ್ ಎ ಅಂಡ್ ಎನ್ ಎಂದು ಹೆಸರು ಪಡೆದುಕೊಂಡಿದ್ದ ಆದಿತ್ಯ ಮತ್ತು ನೀಹಾರಿಕಾರ ತಂಡಕ್ಕೆ ಮೊದಲು ಗುರುತಿಗೆ ಸಿಕ್ಕಿದ್ದು ಸಾಗರತಳದಲ್ಲಿ ಎರಡಾಗಿ ಸೀಳಿ ಸಾಗಿದ್ದ ಪ್ರಾಚೀನ ನದಿಪಾತ್ರ. ಆ ನದಿ ಸೀಳುಗಳು ಇಂದಿನ ಗಂಗಾವಳಿ ನದಿಯ ಮುಂದುವರಿದ ಭಾಗಗಳಾಗಿರಬಹುದಾದ, ಅವು ಹಿಂದೊಮ್ಮೆ ನೆಲದ ಮೇಲೆ ಹರಿದಿದ್ದ ಸೂಚನೆಗಳಂತೂ ಸೈಡ್ಸ್ಕ್ಯಾನ್ ಸೋನಾರ್ ಇಮೇಜ್ಗಳಲ್ಲಿ ಕಣ್ಣಿಗೆ ಹೊಡೆಯುವಂತೆ ಕಾಣುತ್ತಿದ್ದವು. ಅದು ಯಾವಾಗ ಇದ್ದಿರಬಹುದು ಎನ್ನುವ ಪ್ರಶ್ನೆಗೆ ಉತ್ತರ ಆದಿತ್ಯನಿಗೆ ಸುಲಭವಾಗಿಯೇ ತಿಳಿಯುವಂತೆ ಇತ್ತು. ಭೂಮಿಯ ಇತಿಹಾಸದ ಕುರಿತು ಭೂವಿಜ್ಞಾನಿಗಳು ಮತ್ತು ಸಾಗರವಿಜ್ಞಾನಿಗಳು ಇದುವರೆಗೆ ಕಲೆಹಾಕಿರುವ ಮಾಹಿತಿಗಳ ಪ್ರಕಾರ, ಹಿಮಯುಗ ಅಂತ್ಯವಾಗಿ ಉಷ್ಣಯುಗ ಆರಂಭವಾಗುತ್ತಹೋದಂತೆ ಜಗತ್ತಿನೆಲ್ಲೆಡೆ ಸಾಗರಗಳ ಮಟ್ಟ ಏರುತ್ತಹೋದದ್ದು ಭಾರತೀಯ ಪರ್ಯಾಯದ್ವೀಪದ ಪಶ್ಚಿಮತೀರದಲ್ಲೂ ಘಟಿಸಿ ಇಂದು ನಾವು ಅರಬ್ಬಿಸಮುದ್ರ ಎಂದು ಕರೆಯುವ ಜಲಪ್ರದೇಶ ನೆಲದತ್ತ ಮುನ್ನುಗ್ಗುತ್ತ ಬಂದು ಸುಮಾರು ನೂರಾ ಇಪ್ಪತ್ತು ಅಡಿಗಳೆತ್ತರಕ್ಕೆ ಏರಿ ನಿಂತದ್ದು ಒಂಬತ್ತರಿಂದ ಹತ್ತು ಸಾವಿರ ವರ್ಷಗಳ ಹಿಂದೆ. ಅಂದರೆ ಗಂಗಾವಳಿ ನದಿಯ ಸೀಳುಗಳು ಸಮುದ್ರದ ನೀರಿನಲ್ಲಿ ಅಂತರ್ಧಾನವಾಗಿ ಅಷ್ಟು ಕಾಲವಾಗಿಹೋಗಿದೆ!
ಆಗ ಇಲ್ಲಿ ನಾಗರಿಕ ಮನುಷ್ಯನೇ ಇರಲಿಲ್ಲ, ಹೀಗಾಗಿ ಈ ಜಲಪ್ರಳಯದ ಅನಾಹುತ ಎಲ್ಲೂ ಯಾವ ಬಗೆಯಲ್ಲೂ ದಾಖಲಾಗಿಲ್ಲ ಎನ್ನುವುದು ಭೂವಿಜ್ಞಾನಿಗಳ, ಸಾಗರವಿಜ್ಞಾನಿಗಳ, ಪುರಾತತ್ತ್ವಶಾಸ್ತ್ರಜ್ಞರ, ಇತಿಹಾಸಕಾರರ ಒಟ್ಟಭಿಪ್ರಾಯ. ಆದಿತ್ಯನ ಮಸ್ತಿಷ್ಕದಲ್ಲಿ ಮಥನಗೊಳ್ಳುತ್ತಿದ್ದ ಈ ವಿಷಯವನ್ನೇ ನೀಹಾರಿಕಾ ಸಣ್ಣದನಿಯಲ್ಲಿ ಹೇಳಿದಾಗ ಆದಿತ್ಯ ಮೌನವಾಗಿ ನಗೆಯರಳಿಸಿದ್ದ. ಸೈಡ್ಸ್ಕ್ಯಾನ್ ಸೋನಾರ್ನಿಂದ ಪಡೆದುಕೊಂಡ ಚಿತ್ರಗಳನ್ನು ಅವಳೇ ಕಂಪ್ಯೂಟರ್ನಲ್ಲಿ ೩ಡಿ ಇಮೇಜ್ಗಳಾಗಿ ಮೂಡಿಸಿದ್ದನ್ನು ಹಿಗ್ಗಿಸಿ ಅವಳಿಗೇ ತೋರಿಸಿದ. ನೀಹಾರಿಕಾಳ ತೆರೆದ ಬಾಯಿ ಬಹಳ ಹೊತ್ತಿನವರೆಗೆ ಮುಚ್ಚಲೇ ಇಲ್ಲ.
ಕಂಪ್ಯೂಟರ್ ಪರದೆ ತೋರಿಸುತ್ತಿದ್ದುದು ಇಂದಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನಿಂದ ಪಶ್ಚಿಮಕ್ಕೆ ಇಪ್ಪತ್ತು ಕಿಲೋಮೀಟರ್ ದೂರದವರೆಗೆ ಸಾಗಿದ್ದ ಪ್ರಾಚೀನ ನದಿಪಾತ್ರಗಳೆರಡರ ನಡುವೆ ಒಂದು ನಗರದ ಅವಶೇಷಗಳು ಹರಡಿರುವುದನ್ನು. ಆ ನಗರದಲ್ಲಂತೂ ಆಯತಾಕಾರದ, ಚೌಕಾಕಾರದ ಕಟ್ಟಡಗಳ ಕುರುಹುಗಳು ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ನೇರವಾಗಿ, ಕ್ರಮಬದ್ಧವಾಗಿ ಸಾಗಿದವು. ಅವುಗಳ ನಡುವಿನ ಕಿರಿದಾದ, ನೀಳವಾದ ಹಾಗೂ ನೇರವಾದ ಖಾಲಿ ಸ್ಥಳಗಳು ರಸ್ತೆಗಳ ಕುರುಹೇ ಇರಬೇಕು. ಜಲಾಂತರ್ಗತ ನಗರದ ಅವಶೇಷಗಳು ಒಂಬತ್ತು ಕಿಲೋಮೀಟರ್ ಉದ್ದ ಹಾಗೂ ಎರಡೂವರೆಯಿಂದ ನಾಲ್ಕು ಕಿಲೋಮೀಟರ್ ಅಗಲದವರೆಗೆ ಹರಡಿಹೋಗಿತ್ತು. ಅಂದರೆ ಅದೊಂದು ಬೃಹತ್ ನಗರವೇ ಇರಬೇಕು.
ನಗರದ ಪೂರ್ವದಲ್ಲಿ ಕಂಡುಬರುತ್ತಿದ್ದ ವಾಸದ ಗೃಹಗಳ ಅಡಿಪಾಯಗಳಂತಿರುವ ರಚನೆಗಳದು ೧೫x೧೨ ಅಡಿಗಳ ಅಳತೆಯವಾಗಿದ್ದರೆ ಪಶ್ಚಿಮದಲ್ಲಿನ ಅಡಿಪಾಯಗಳು ೫೦x೪೫ ಅಡಿ ಅಳತೆಯವವಾಗಿದ್ದವು. ಅಲ್ಲದೆ ಪಶ್ಚಿಮದಲ್ಲಿ ಕೆಲವು ದೊಡ್ಡ ರಚನೆಗಳೂ ಕಾಣಬರುತ್ತಿದ್ದವು. ಪಶ್ಚಿಮದಂಚಿನಲ್ಲಿ ಕಂಡುಬಂದ, ಎಲ್ಲ ಕಡೆಗಳಿಂದಲೂ ಎತ್ತರದ ಗೋಡೆಗಳಿಂದ ಆವೃತವಾಗಿದ್ದ ಆಯತಾಕಾರದ ತಗ್ಗಿನ ರಚನೆಯೊಂದು ೧೨೦ ಅಡಿ ಉದ್ದ ಮತ್ತು ೭೫ ಅಡಿ ಅಗಲವಿತ್ತು. ಇದರ ಪೂರ್ವದ ಒಳಬದಿಯಲ್ಲಿ ಕೆಳಗೆ ಇಳಿದುಹೋಗಲು ಇಪ್ಪತ್ತೊಂದು ಮೆಟ್ಟಲುಗಳಿದ್ದವು. ರಚನೆಯ ಈಶಾನ್ಯದ ಕಡೆ ನೀರು ಒಳಹರಿದು ಬರಲು, ನೈರುತ್ಯದ ಕಡೆ ಹೊರಹರಿದುಹೋಗಲು ಅನುವಾಗುವಂತಹ ವ್ಯವಸ್ಥೆಗಳಿದ್ದಂತಿತ್ತು. ಜೊತೆಗೆ ಎಲ್ಲ ಕಡೆಯಿಂದಲೂ ಆವೃತವಾಗಬಲ್ಲ, ಕೋಣೆಯಂತಹ ರಚನೆಯೊಂದೂ ಕಂಡುಬರುತ್ತಿದ್ದವು.
ಕಂಪ್ಯೂಟರ್ ಪರದೆಯಲ್ಲಿ ಈ ರಚನೆಯ ಇಮೇಜ್ ಅನ್ನು ಹೀಗೆ ಇಡಿಯಾಗಿ ಕಂಡದ್ದೇ ಆದಿತ್ಯ ಸಖೇದಾಶ್ಚರ್ಯದಿಂದ ಕೂತುಬಿಟ್ಟ. ಅವನಿಂದ ಮಾತೇ ಹೊರಡಲಿಲ್ಲ. ಮಾತಾಡಲೂ ಆಗದ ಅವನ ಸ್ಥಿತಿ ನೀಹಾರಿಕಾಳಿಗೆ ಅರ್ಥವಾಗಿಬಿಟ್ಟಿತ್ತು. ಇದು? ಇದು? ಮೊಹೆಂಜೋದಾರೋನಲ್ಲಿರೋ ಸ್ನಾನಗೃಹದ ಪಡಿಯಚ್ಚು! ಕಂಪಿಸುವ ಸ್ವರದಲ್ಲಿ ಪಿಸುಗಿದಳು. ಯೆಸ್! ಎಂದು ಎದೆಯಾಳದಿಂದ ಉಸಿರು ತೆಗೆದ ಆದಿತ್ಯ ಮುಂದೆ ಹೇಳಲಾಗದೆ ಸುಮ್ಮನೆ ಅವಳ ಕೈಯನ್ನು ಹಿಡಿದು ನಿಂತುಬಿಟ್ಟ.
ನಗರದ ಇಮೇಜ್ಅನ್ನು ಇಡಿಯಾಗಿ ಕಂಪ್ಯೂಟರ್ ಪರದೆಯಲ್ಲಿ ಮೂಡಿಸಿ ನೋಡುತ್ತಹೋದಂತೆ ಅವರಿಬ್ಬರ ಅಚ್ಚರಿಯ ಮಟ್ಟ ತಾರಾಮಾರು ಏರುತ್ತಹೋಯಿತು. ನಗರದ ಪಶ್ಚಿಮದಲ್ಲೇ ಎತ್ತರದ ದಿನ್ನೆಯೊಂದರ ಮೇಲೆ ೬೦೦ ಅಡಿ ಉದ್ದ, ೧೫೦ ಅಡಿ ಅಗಲದ ರಚನೆಯೊಂದು, ಅದಕ್ಕೆ ಹತ್ತಿ ಹೋಗಲು ಬಲಗಡೆ ಮೆಟ್ಟಿಲುಗಳು. ರಚನೆಯ ಒಳಗೆ ೬೦ ಅಡಿ ಉದ್ದಗಲದ ಚೌಕಾಕಾರದ ಕೋಣೆಗಳಂತಹ ಹಲವಾರು ರಚನೆಗಳೂ ಕಂಡದ್ದೇ ಇದು ಮೊಹೆಂಜೋದಾರೋ, ಹರಪ್ಪಾ, ಕಾಲಿಬಂತಾನ್ನಲ್ಲೆಲ್ಲ ಸಿಕ್ಕಿರೋ ದುರ್ಗ! ಎಂದು ಕೂಗಿಬಿಟ್ಟ ಆದಿತ್ಯ. ಯೆಸ್! ಎಂದು ಉದ್ಗರಿಸಿ ಅವನ ಮಯಂಗೈ ಒತ್ತುವ ಸರದಿ ಈಗ ನೀಹಾರಿಕಾಳದು.
ಟೀಮ್ ಎ ಅಂಡ್ ಎನ್ಗೆ ಊಹಿಸಲಾಗದ ಬಗೆಯಲ್ಲಿ, ಊಹಿಸಲಸಾಧ್ಯವಾದ ಸ್ಥಳದಲ್ಲಿ ಸಿಕ್ಕಿದ್ದು ಸಿಂಧು-ಸರಸ್ವತಿ ನಾಗರಿಕತೆಗೆ ಸಂಬಂಧಿಸಿದ ನಗರವೊಂದರ ಪಡಿಯಚ್ಚು. ಅಂದರೆ ಆ ಮಹಾನ್ ನಾಗರಿತೆ ಇಷ್ಟು ದಕ್ಷಿಣಕ್ಕೂ ಹರಡಿತ್ತೇ? ಅಲ್ಲದೆ ಈ ನಗರ ಒಂಬತ್ತು ಸಾವಿರ ವರ್ಷಗಳ ಹಿಂದೆಯೇ ಅಂದರೆ ಮೊಹೆಂಜೋದಾರೋ ನಗರ ರೂಪುಗೊಳ್ಳುವುದಕ್ಕೂ ಕನಿಷ್ಟ ಮೂರೂವರೆ ಸಾವಿರ ವರ್ಷಗಳಿಗೂ ಮೊದಲೇ ಸಮುದ್ರದಲ್ಲಿ ಮುಳುಗಿಹೋಗಿದೆ! ಹಿಮಯುಗ ಕಳೆದು ಉಷ್ಣಯುಗ ಆರಂಭವಾಗತೊಡಗಿದಂತೆ ಜಗತ್ತಿನ ಸಾಗರಗಳೆಲ್ಲವುಗಳ ಮಟ್ಟ ಏರುತ್ತಹೋಗಿ ಭಾರತೀಯ ಪರ್ಯಾಯದ್ವೀಪದ ಪಶ್ಚಿಮತೀರದ ವಿಶಾಲ ನೆಲ ಸಮುದ್ರದ ಭಾಗವಾಗಲು ಏಳೆಂಟು ನೂರು ವರ್ಷಗಳು ಹಿಡಿದಿವೆ ಎನ್ನುವುದು ಸಾಗರ ವಿಜ್ಞಾನ ಗಂಟೆ ಹೊಡೆದ ಹಾಗೆ ಹೇಳುವ ಮಾತು. ಅಂದರೆ ಈಗ ನಮಗೆ ಸಿಕ್ಕಿರುವ ಈ ನಗರವನ್ನು ಸಮುದ್ರ ನಿಧಾನವಾಗಿ ನುಂಗತೊಡಗಿದಾಗ ಇಲ್ಲಿನ ಜನ ಇಲ್ಲಿಂದ ಉತ್ತರಕ್ಕೆ ಓಡಿಹೋಗಿ ತಮ್ಮ ನೆನಪಿನ ಆಧಾರದಿಂದ ಇಂತಹದೇ ನಗರಗಳನ್ನು ಕಟ್ಟಿದರೆ? ಸಿಂಧು-ಸರಸ್ವತಿ ನಾಗರಿಕತೆಯ ಉಗಮವಾದದ್ದೇ ನಮ್ಮ ಕರ್ನಾಟಕದ ತೀರದಲ್ಲೇ? ಸಿಂಧು-ಸರಸ್ವತಿ ನಾಗರಿಕತೆ ಬೇರೊಂದೆಡೆಯಿಂದ ಎತ್ತಿ ತಂದು ಸಿಂಧ್, ಪಂಜಾಬ್, ರಾಜಾಸ್ಥಾನ ಮತ್ತು ಗುಜರಾತ್ಗಳಲ್ಲಿ ನಾಟಿ ಹಾಕಿದಂತಿದೆ; ಪೂರ್ಣ ನಾಗರಿಕ ಜನಾಂಗವೊಂದು ಎಲ್ಲಿಂದಲೋ ಬಂದು ಅಲ್ಲಿ ಸುವ್ಯವಸ್ಥಿತ ನಗರವ್ಯವಸ್ಥೆಯನ್ನು ಸೃಷ್ಟಿಸಿದೆ ಎಂಬ ಪುರಾತತ್ತ್ವಶಾಸ್ತ್ರಜ್ಞರ ಮತ್ತು ಇತಿಹಾಸಕಾರರ ಅನುಮಾನಗಳಿಗೆ ಈಗ ನಿಖರ ಉತ್ತರ ಸಿಕ್ಕಿದಂತಾಗಿದೆಯೇ? ಈ ನಗರದ ಜನ ಉತ್ತರದತ್ತ ವಲಸೆ ಹೋಗುವಾಗ ದಾರಿಯಲ್ಲಿ ಗುಜರಾತ್ಗೂ ಕೆಳಗೆ ಅಂದರೆ ಮಹಾರಾಷ್ಟ್ರ, ಗೋವಾ, ಕರ್ನಾಟಕದ ತೀರಗಳಲ್ಲಿ ಅಥವಾ ಒಳನಾಡುಗಳಲ್ಲಿ ನಗರಗಳನ್ನು ನಿರ್ಮಿಸಿರಬಾರದೇಕೆ? ಅವೇಕೆ ಇದುವರೆಗೆ ಪತ್ತೆಯಾಗಿಲ್ಲ? ಆದಿತ್ಯ ಮತ್ತು ನೀಹಾರಿಕಾ ಒಬ್ಬರನ್ನೊಬ್ಬರು ಮತ್ತೆಮತ್ತೆ ಕೇಳಿಕೊಂಡ ಪ್ರಶ್ನೆಗಳಿವು. ಉತ್ತರಗಳಿಗಾಗಿ ತಮ್ಮ ಇಡೀ ಜೀವಮಾನವನ್ನು ಮುಡಿಪಾಗಿಡಬೇಕಾಗಬಹುದು ಎಂದವರು ಒಬ್ಬರಿಗೊಬ್ಬರು ಹೇಳಿಕೊಳ್ಳದೆ ಹೋದರೂ ಇಬ್ಬರ ಮನಸ್ಸಿನಲ್ಲೂ ಆ ವಿಷಯವೇ ಗಟ್ಟಿಯಾಗುತ್ತಹೋಯಿತು.
ಟೀಮ್ ಎ ಅಂಡ್ ಎನ್ನ ಸಂಶೋಧನೆಗಳ ವಿವರಗಳು ಮಾಧ್ಯಮಗಳಲ್ಲಿ ತುಣುಕುತುಣುಕಾಗಿ ಹೊರಬರತೊಡಗಿದಂತೆ ಮೆಚ್ಚುಗೆಗಿಂತಲೂ ಹೆಚ್ಚಾಗಿ ಬಂದದ್ದು ಅಪಸ್ವರಗಳೇ. ಇವರಿಬ್ಬರೂ ಕಂಪ್ಯೂಟರ್ ಪರದೆಯಲ್ಲಿ ತೋರಿಸುತ್ತಿರುವ ಸೈಡ್ಸ್ಕ್ಯಾನರ್ ಸೋನಾರ್ ಇಮೇಜ್ಗಳು ನಕಲಿ, ಕಂಪ್ಯೂಟರ್ ಮಾಡಿದ ಕಣ್ಕಟ್ಟು ಎಂದು ದೊಡ್ಡದೊಡ್ಡ ಪುರಾತತ್ತ್ವಶಾಸ್ತ್ರಜ್ಞರು ಹೇಳಿಕೆ ನೀಡತೊಡಗಿದರು. ಈ ಅಪಪ್ರಚಾರದಲ್ಲಿ ಕೆಲವರು ಸಹೋದ್ಯೋಗಿಗಳೂ ಸೇರಿದ್ದರು.
ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿ ವಿವರವಾದ ಉಪನ್ಯಾಸಕ್ಕಾಗಿ ಯೂನಿವರ್ಸಿಟಿಯ ವಿದ್ಯಾರ್ಥಿ ಸಂಘದಿಂದ ಬಂದ ಆಹ್ವಾನ ಆದಿತ್ಯ ಖುಷಿಗೊಂಡ. ಈ ಉಪನ್ಯಾಸವನ್ನು ತಮ್ಮ ಡಿಪಾರ್ಟ್ಮೆಂಟ್ ಆಯೋಜಿಸಿದ್ದರೆ ಚೆನ್ನಾಗಿತ್ತು ಅನಿಸಿದರೂ, ವಿದ್ಯಾರ್ಥಿ ಸಂಘವಾದರೂ ಆಯೋಜಿಸಿತಲ್ಲ, ಅಲ್ಲಿ ಎಳೆಯ ಮನಸ್ಸುಗಳೊಂದಿಗೆ ಹೊಸ ವಿಚಾರಗಳನ್ನು ಹಂಚಿಕೊಳ್ಳುವುದು ಒಳ್ಳೆಯದೆ ಎಂದು ನೀಹಾರಿಕಾ ಸಹ ಎರಡು ಸಲ ಫೋನ್ನಲ್ಲಿ ಹೇಳಿ ಆದಿತ್ಯನನ್ನು ಉತ್ತೇಜಿಸಿದ್ದಳು. ಆದರೆ ಅದರಲ್ಲಿ ತಾನು ಭಾಗಿಯಾಗಲಾಗದು ಎನ್ನುವುದು ಅವಳ ಹಳಹಳಿಕೆ. ಅವಳ ಯೂನಿವರ್ಸಿಟಿಗೆ ಮುಂದಿನ ತಿಂಗಳು ಭೇಟಿ ನೀಡಲಿರುವ ನ್ಯಾಕ್ ಕಮಿಟಿಗಾಗಿ ಡಿಪಾರ್ಟ್ಮೆಂಟ್ನ ಫ್ಯಾಕಲ್ಟಿ ಪ್ರೊಫೈಲ್ ಸಿದ್ಧಪಡಿಸುವ ಜವಾಬ್ದಾರಿಯನ್ನು ಎಚ್ಓಡಿ ಆಕೆಯ ಮೇಲೆ ಹಾಕಿದ್ದರು.
ಇತ್ತೀಚೆಗೆ ಯೂನಿವರ್ಸಿಟಿ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯವಾದಿ ಚಿಂತನೆಗಳಿಗೆ, ರಾಷ್ಟ್ರಪ್ರೇಮಕ್ಕೆ ಒತ್ತುನೀಡುವ ಸಿಎಂಐ ಅಂದರೆ ಚಿಲ್ಡ್ರನ್ ಆಫ್ ಮದರ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ಜನಪ್ರಿಯವಾಗುತ್ತಿದೆ. ಅದರ ಪರಿಣಾಮವಾಗಿಯೇ ಎರಡು ತಿಂಗಳ ಹಿಂದೆ ನಡೆದ ಸಂಘದ ಚುನಾವಣೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಗಳು ಸಿಎಂಐ ಸಂಘಟನೆಗೆ ದಕ್ಕಿದ್ದವು. ಪ್ರಧಾನ ಕಾರ್ಯದರ್ಶಿ ಸ್ಥಾನ ಮಾತ್ರ ಹಿಂದಿನಿಂದಲೂ ಪ್ರಭಾವಶಾಲಿಯಾಗಿದ್ದ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಸ್.ಎಸ್.ಐ. ಅಂದರೆ ಸೋಷಿಯಲಿಷ್ಟ್ ಸ್ಟೂಡೆಂಟ್ಸ್ ಆಫ್ ಇಂಡಿಯಾಗೆ ಹೋಗಿತ್ತು. ಹೀಗಾಗಿ ಈ ಸಲ ವಿದ್ಯಾರ್ಥಿ ಸಂಘ ಹಲವು ಬಗೆಯ ತಿಕ್ಕಾಟಗಳನ್ನು ಕಾಣತೊಡಗಿತ್ತು. ತೀವ್ರ ರಾಷ್ಟ್ರೀಯವಾದಿ ಮನೋಭಾವದ ಅಧ್ಯಕ್ಷೆ ಲತಾ ರೈ ಟೀಮ್ ಎ ಅಂಡ್ ಎನ್ನ ಶೋಧಗಳ ಬಗ್ಗೆ ಮತ್ತವುಗಳ ಬಗ್ಗೆ ನಡೆಯುತ್ತಿದ್ದ ಪರ-ವಿರೋಧ ಮಾತುಗಳ ಬಗ್ಗೆ ಆಸಕ್ತಿ ವಹಿಸಿ, ಆ ಕುರಿತಾಗಿ ವಿದ್ಯಾರ್ಥಿಗಳಿಗೆ ವಿವರವಾದ ಉಪನ್ಯಾಸ ನೀಡುವಂತೆ ಆದಿತ್ಯನನ್ನು ಆಹ್ವಾನಿಸಿದ್ದರು.
ತರಗತಿಗಳೆಲ್ಲ ಮುಕ್ತಾಯವಾದ ಮೇಲೆ ಸಂಜೆ ಐದೂವರೆಗೆ ಆಡಿಟೋರಿಯಂನಲ್ಲಿ ಆರಂಭವಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾರಂಭಿಕ ಔಪಚಾರಿಕ ಮಾತುಗಳ ನಂತರ ಅಧ್ಯಕ್ಷೆ ಲತಾ ರೈ ಹೇಳಿದ್ದು ಹೀಗೆ -ನಮ್ಮೆಲ್ಲರ ಪ್ರೀತಿಯ ಯುವ ವಿದ್ವಾಂಸ ಡಾ. ಆದಿತ್ಯ ಮತ್ತು ಡಾ. ನೀಹಾರಿಕಾ ಶೋಧಿಸಿರುವ ಪುರಾತನ ನಗರದ ಅವಶೇಷಗಳು ಇತಿಹಾಸದ ಬಗೆಗಿನ ನಮ್ಮ ಅರಿವಿನ ಪರಿಧಿಯನ್ನು ಅಗಾಧವಾಗಿ ವಿಸ್ತರಿಸಲಿವೆ ಎನ್ನುವುದು ನನ್ನ ದೃಢವಾದ ಅಭಿಪ್ರಾಯ. ಒಬ್ಬಳು ವಿಜ್ಞಾನದ ಸಂಶೋಧನಾ ವಿದ್ಯಾರ್ಥಿನಿಯಾಗಿ ನಾನು ಡಾ. ಆದಿತ್ಯರ ತಂಡ ತನ್ನ ಶೋಧನಾ ಕಾರ್ಯಯೋಜನೆಯಲ್ಲಿ ಬಳಸಿರುವ ವೈಜ್ಞಾನಿಕ ವಿಧಾನಗಳನ್ನು ಸಂಪೂರ್ಣವಾಗಿ ಒಪ್ಪುತ್ತೇನೆ, ಅವರ ವಸ್ತುನಿಷ್ಟ ಶೋಧನಾ ವಿಧಾನವನ್ನು ಗೌರವಿಸುತ್ತೇನೆ ಮತ್ತು ಇತಿಹಾಸ ಬದಲಿಸುವ ಮಹತ್ತರ ಶೋಧಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಇಂದು ಇತಿಹಾಸ ನಮಗೆ ಹೇಳುವುದು ಜಗತ್ತಿನಲ್ಲೇ ಮೊತ್ತಮೊದಲು ನಗರಗಳನ್ನು ನಿರ್ಮಿಸಹೊರಟವರು ಸುಮೇರಿಯನ್ನರು. ಸುಮಾರು ಐದು ಸಾವಿರ ವರ್ಷಗಳ ಹಿಂದೆ. ಆದರೆ ಗಂಗೊಳ್ಳಿ ಅಳವೆಯಲ್ಲಿನ ಪುರಾತನ ನಗರ ಕನಿಷ್ಠ ಒಂಬತ್ತು ಸಾವಿರ ವರ್ಷಗಳ ಹಿಂದೆ ಸಮುದ್ರದಲ್ಲಿ ಮುಳುಗಿಹೋಗಿರುವುದು ಸಾಗರವಿಜ್ಞಾನದ ಪ್ರಕಾರ ನಿರ್ವಿವಾದದ ವಿಷಯವಾಗಿರುವುದರಿಂದ ಜಗತ್ತಿನಲ್ಲಿ ಮಾನವ ಮೊತ್ತಮೊದಲಿಗೆ ನಗರನಿರ್ಮಾಣ ಕೈಗೊಂಡದ್ದು ನಮ್ಮ ನೆಲದಲ್ಲಿ ಎಂದು ನಾವು ಹೆಮ್ಮೆ ಪಡುವಂತಾಗಿದೆ. ಅಷ್ಟೇ ಅಲ್ಲ, ಮೆಹ್ರ್ಘರ್ ಶೋಧಗಳ ಆಧಾರದ ಮೇಲೆ ದಕ್ಷಿಣ ಏಶಿಯಾದಲ್ಲಿ ನಾಗರಿಕತೆ ಆರಂಭವಾದದ್ದೇ ತನ್ನಲ್ಲಿ, ಈ ವಲಯದಲ್ಲಿ ತಾನೇ ನಾಗರಿಕತೆಯ ತೊಟ್ಟಿಲು ಎಂದು ಬೀಗುತ್ತಿರುವ ಪಾಕಿಸ್ತಾನದ ಹಮ್ಮಿಗೆ ಸೂಜಿಯನ್ನೂ ಚುಚ್ಚಿದಂತಾಗಿದೆ. ಹೀಗಾಗಿ ಡಾ. ಆದಿತ್ಯ ಮತ್ತವರ ತಂಡದ ಪ್ರಯತ್ನಗಳ ಕುರಿತಾಗಿ ನಿಖರವಾದ ಮಾಹಿತಿಗಳನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳುವುದು ನಮಗೆ ಅಗತ್ಯವಾಗಿದೆ ಮತ್ತು ಇದು ನಮ್ಮ ಅದೃಷ್ಟ ಸಹ?
ಇತಿಹಾಸದ ವಿದ್ಯಾರ್ಥಿನಿಯಲ್ಲದ ಲತಾ ತನ್ನ ಶೋಧದ ಬಗ್ಗೆ ಈ ಬಗೆಯ ಆಸಕ್ತಿ ತಳೆದಿರುವುದು ನಾಗರಿಕತೆಯ ಆರಂಭದ ಕುರಿತಾಗಿ ಮುಖ್ಯ ವಿಷಯಗಳನ್ನೂ ಅರಿತುಕೊಂಡಿರುವುದು ಆದಿತ್ಯನಲ್ಲಿ ಮೆಚ್ಚುಗೆ ಮೂಡಿಸಿತು. ಲತಾಳ ರಾಷ್ಟ್ರಪ್ರೇಮವೇ ಇದಕ್ಕೆಲ್ಲ ಕಾರಣ ಎಂದೂ ಅವನು ಯೋಚಿಸಿದ. ಹೊಸ ಶೋಧಗಳನ್ನು, ವಿಚಾರಗಳನ್ನು ಸ್ವೀಕರಿಸಲು ಹಿರಿಯರು ನಿರಾಕರಿಸುತ್ತಿರುವಾಗ ಕಿರಿಯರು ಆಸಕ್ತಿ ತಳೆಯುತ್ತಿರುವುದು ಸಂತಸದ ವಿಷಯ. ಇದರಿಂದಾಗಿ ನಮ್ಮ ಭವಿಷ್ಯವನ್ನು ನಾವು ಆಶಾಭಾವನೆಯಿಂದ ನೋಡಬಹುದಾಗಿದೆ ಎಂದೂ ಅವನಿಗನಿಸಿತು. ಇದನ್ನೇ ಸಂಕ್ಷಿಪ್ತವಾಗಿ ಹೇಳಿ ನಂತರ ಇಡೀ ಒಂದೂವರೆ ತಾಸಿನವರೆಗೆ ತನ್ನ ತಂಡ ನಡೆಸಿದ ಶೋಧಗಳ ಬಗ್ಗೆ ವಿವರವಾಗಿ ಹೇಳಿದ, ಪವರ್ ಪಾಯಿಂಟ್ನಲ್ಲಿ ಚಿತ್ರಗಳನ್ನೂ ತೋರಿಸಿದ. ಮುಂದಿನ ಇಪ್ಪತ್ತು-ಮೂವತ್ತು ನಿಮಿಷಗಳು ಪ್ರಶ್ನೋತ್ತರದಲ್ಲಿ ಕಳೆಯಿತು. ಎಲ್ಲ ಪ್ರಶ್ನೆಗಳಿಗೂ ಆದಿತ್ಯ ಸಮಾಧಾನದಿಂದ ವಿವರವಾಗಿ ಉತ್ತರಿಸಿದ. ಇನ್ನೇನೂ ಪ್ರಶ್ನೆಗಳಿರಲಾರವು ಅಂದುಕೊಳ್ಳುತ್ತಿರುವಾಗ ಸಣ್ಣಗೆ ದನಿ ಎದ್ದದ್ದು ಮುಂದಿನ ಸಾಲಿನಿಂದಲೇ.
ತನ್ನದೇ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರ ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿ ಕೇಳಿದ ಪ್ರಶ್ನೆಯನ್ನು ಆದಿತ್ಯ ಗಮನವಿಟ್ಟೇ ಆಲಿಸಿದ. ಪ್ರಶ್ನೆಯೇನೂ ಹೊಸದಾಗಿರಲಿಲ್ಲ. ಸೈಡ್ಸ್ಕ್ಯಾನ್ ಸೋನಾರ್ ಉಪಕರಣದಿಂದ ಪಡೆದುಕೊಂಡ ಇಮೇಜ್ಗಳು ಸಾಗರದಾಳಲ್ಲೇನಿದೆ ಎನ್ನುದರ ನೈಜ ಚಿತ್ರಗಳಾಗಿರಲು ಸಾಧ್ಯವಿಲ್ಲ, ಅಲ್ಲೇನಿದೆ ಎನ್ನುವುದನ್ನು ಮುಳುಗುಹಾಕಿಯೇ ನೋಡಿ ತಿಳಿಯಬೇಕು ಎನ್ನುವ ಅದೇ ಹಳೆಯರಾಗ. ಆದರೂ ತಾನೀಗ ಉತ್ತರಿಸಬೇಕಾಗಿರುವುದು ಈ ವಿದ್ಯಾರ್ಥಿಗಳಿಗಲ್ಲ, ಅವನ ಹಿಂದಿರುವ ತನ್ನ ಹಿರಿಯ ಸಹೋದ್ಯೋಗಿಗೆ ಮತ್ತವರ ಎಡಪಂಥೀಯ ಇತಿಹಾಸಕಾರರ ಗುಂಪಿಗೆ ಎಂದು ಆದಿತ್ಯನಿಗೆ ಅರಿವಾಗಿಯೇ ಇತ್ತು.
ಗಂಗೊಳ್ಳಿ ಅಳವೆಯಲ್ಲಿ ಸಮುದ್ರದ ನೀರು ಗಾಢ ಬಣ್ಣದ್ದಾಗಿರುವುದರಿಂದ ಅಲ್ಲಿ ಮುಳುಗು ಹಾಕಿ ಸಾಗರತಳವನ್ನು ಪರಿಶೀಲಿಸುವುದಾಗಲಿ, ಅಂಡರ್ವಾಟರ್ ಫೋಟೋಗ್ರಫಿಯಾಗಲಿ ಸಾಧ್ಯವಿಲ್ಲ; ಇಂತಹ ಸನ್ನಿವೇಶದಲ್ಲಿ ನಾವು ಅವಲಂಬಿಸಬೇಕಾಗಿರುವುದು ವೈಜ್ಞಾನಿಕ ಉಪಕರಣಗಳನ್ನೇ. ಇದನ್ನು ಮೊದಲಿಗೆ ಮಾಡಿದ್ದು ತಾನೇನೂ ಅಲ್ಲ, ಜಪಾನ್ ಸಮುದ್ರ, ಕೆರಿಬಿಯನ್ ಸಮುದ್ರ, ಸರ್ಗಾಸ್ಸೋ ಸಮುದ್ರ ಮುಂತಾದ ಹಲವೆಡೆ ಸೈಡ್ಸ್ಕ್ಯಾನ್ ಸೋನಾರ್ ಉಪಕರಣಗಳ ಬಳಕೆ ಈಗಾಗಲೇ ವ್ಯಾಪಕವಾಗಿ ನಡೆದಿದೆ. ದೊರೆತ ಇಮೇಜ್ಗಳನ್ನು ವಿದ್ವಾಂಸರು ಮಾನ್ಯ ಮಾಡಿದ್ದಾರೆ ಎಂದು ತಾಳ್ಮೆಯಿಂದ ವಿವರವಾಗಿ ಉತ್ತರಿಸಿದ. ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತಲ್ಲವೇ? ಎನ್ನುವಂತೆ ವಿದ್ಯಾರ್ಥಿಯತ್ತ ಸಣ್ಣಗೆ ನಗೆಯರಳಿಸಿದ. ನನಗೆ ಇನ್ನೊಂದು ಸಂದೇಹ ಅತ್ತಲಿಂದ ಮಾತು ಬಂತ. ಆ ತೀರಪ್ರದೇಶ ಸಮುದ್ರದ ನೀರಿನಲ್ಲಿ ಮುಳುಗಿಹೋಗಿ ಒಂಬತ್ತು ಸಾವಿರ ವರ್ಷಗಳಾದವು ಅನ್ನೋದರ ಆಧಾರದ ಮೇಲೆ ಅಲ್ಲಿ ನೀವು ಪತ್ತೆ ಮಾಡಿದೀನಿ ಅಂತ ಹೇಳೋ ನಗರ ಅಷ್ಟು ಪುರಾತನ ಅಂತ ನೀವು ತೀರ್ಮಾನ ಮಾಡಿಬಿಟ್ರಿ. ಅದು ಹಾಗಿಲ್ಲದೆ, ಕೆಲವು ನೂರು ವರ್ಷಗಳ ಹಿಂದೆ ಈ ತೀರಪ್ರದೇಶದಲ್ಲಿ ದೊಡ್ಡ ಭೂಕಂಪವಾಗಿ ಇಲ್ಲಿದ್ದ ಒಂದು ನಗರ ಅನಾಮತ್ತಾಗಿ ಸಮುದ್ರದ ಆಳಕ್ಕೆ ಒಗೆಯಲ್ಪಟ್ಟಿರಬಹುದಲ್ಲ? ಆ ನಗರ ಕದಂಬರದ್ದೋ ಚಾಲುಕ್ಯರದ್ದೋ ಕಾಲದ ಬಂದರು ನಗರವಾಗಿದ್ದಿರಬಹುದಲ್ಲ? ನಾನು ಏನು ಹೇಳ್ತಾ ಇದೀನಿ ಅಂದ್ರೆ ಸಮುದ್ರದಾಳದಲ್ಲಿ ನೀವು ಪತ್ತೆ ಮಾಡಿರೋ ನಗರ ಸಾವಿರ, ಒಂದೂವರೆ ಸಾವಿರ ವರ್ಷದಷ್ಟು ಹೇಳೇದಾಗಿರಬೋದು ಅಷ್ಟೇ ಅಂತ.
ಆದಿತ್ಯ ಅಪ್ರತಿಭನಾದ. ವಿಷಯದ ಈ ಆಯಾಮದ ಬಗ್ಗೆ ಅವನು ಆಲೋಚಿಸಿರಲೇ ಇಲ್ಲ. ಕರ್ನಾಟಕದ ತೀರಪ್ರದೇಶ ಇತಿಹಾಸಕಾಲದಲ್ಲಿ ಎಂದಾದರೂ ಭೂಕಂಪಕ್ಕೆ ಒಳಗಾಗಿತ್ತೇ? ದಖನ್ ಪ್ರಸ್ಥಭೂಮಿ ಭೂಕಂಪ ವಲಯದಲ್ಲಿಲ್ಲ ಎನ್ನುವುದೇನೋ ಗೊತ್ತಿದೆ. ಆದರೆ ಈ ತೀರ್ಮಾನಕ್ಕೆ ಅಪವಾದವಿರಬಾರದೇಕೆ? ಇದನ್ನೇಕೆ ನಾನು ಯೋಚಿಸಲಿಲ್ಲ? ಈ ಪ್ರಶ್ನೆಗಳ ಹಿಂದೆಯೇ ಅವನಲ್ಲಿ ಎದ್ದ ದೊಡ್ಡ ಪ್ರಶ್ನೆಯೆಂದರೆ, ಈತ ಕೇಳುತ್ತಿರುವ ಈ ಪ್ರಶ್ನೆ ನಿಜವಾಗಿಯೂ ಇವನದ್ದೇ? ಇರಲಾರದು ಅನಿಸಿತು. ಆದರೆ ಆ ಕಾರಣದೊಂದಿಗೆ ನಾನೀಗ ಉತ್ತರ ನೀಡುವ ಪ್ರಯತ್ನ ಮಾಡದೆ ಇರಲಾಗದು ಎಂದೂ ಅನಿಸಿತು. ಒಮ್ಮೆ ಇಡೀ ಸಭಾಂಗಣವನ್ನು ಸೂಕ್ಷ್ಮವಾಗಿ ಅವಲೋಕಿಸಿದ. ಎದುರಿನ ವಿದ್ಯಾರ್ಥಿ ಸಮೂಹ ಅವನ ಮೇಲೇ ನೋಟ ಕೀಲಿಸಿತ್ತು. ಇಡೀ ಸಭಾಂಗಣ ಸಂಪೂರ್ಣ ಮೌನ. ಅವನಿಗೆ ಅಚ್ಚರಿಯಾಗುವಂತೆ ಅವನೊಳಗಿದ್ದ ವಿಶ್ಲೇಷಕ ತನ್ನ ತರ್ಕಸಾಮರ್ಥ್ಯದೊಂದಿಗೆ ಎಚ್ಚರಗೊಂಡು ನಿಂತ.
ಯೆಸ್, ತುಂಬಾ ಒಳ್ಳೆಯ ಪ್ರಶ್ನೆ ಇದು. ನಿಜಕ್ಕೂ ಅರ್ಥಪೂರ್ಣ ಅನುಮಾನ. ಐ ಅಪ್ರಿಷಿಯೇಟ್ ಇಟ್. ಒಮ್ಮೆ ಸಣ್ಣಗೆ ಕೆಮ್ಮಿ ಮುಂದುವರಿಸಿದ ಯುವ ವಿದ್ವಾಂಸ: ಭೂಕಂಪದ ಸಾಧ್ಯತೆಯನ್ನು ನಾವು ಗಂಭೀರವಾಗಿ ಪರಿಗಣಿಸಿಲ್ಲ. ಅದಕ್ಕೆ ಕಾರಣ ಇದೆ. ಒಂದುವೇಳೆ ನೀವು ಅನುಮಾನಿಸೋ ಹಾಗೆಯೆ ಆಗಿದ್ರೆ ಆಗ ಸೈಡ್ಸ್ಕ್ಯಾನ್ ಸೋನಾರ್ ಉಪಕರಣ ನಮಗೆ ತೋರಿಸಿದ ಇಮೇಜ್ ಸಂಪೂರ್ಣವಾಗಿ ಬೇರೆ ಆಗಿರ್ತಿತ್ತು. ಬಂದರು ನಗರ ಭೂಕಂಪದ ಪ್ರಭಾವದಿಂದಾಗಿ ಏಕಾಏಕಿ ನೂರಿಪ್ಪತ್ತು ಅಡಿಗಳ ಆಳದ ಸಾಗರತಳಕ್ಕೆ ಒಗೆಯಲ್ಪಟ್ಟಿತು ಅನ್ನೋದಾದ್ರೆ ಆಗ ಇಡೀ ನಗರ ಅಲುಗಾಡಿ ಹೋಗಿ ರಸ್ತೆಗಳೆಲ್ಲ ಹಿಗ್ಗಾಮುಗ್ಗಾ ತಿರುಚಿ ಹೋಗಿರ್ತಾ ಇದ್ವು. ಕಟ್ಟಡಗಳೆಲ್ಲಾ ಕುಸಿದುಹೋಗಿ ಸಾಗರತಳದ ಇಡೀ ಪ್ರದೇಶ ಅಡ್ಡಾದಿಡ್ಡಿ ಗುಪ್ಪೆಗಳ ಸಮೂಹದ ಹಾಗೆ ಕಾಣ್ತಿತ್ತು. ಅದೊಂದು ನಗರ ಅನ್ನೋ ಯಾವ ಕುರುಹೂ ಸೈಡ್ಸ್ಕ್ಯಾನ್ ಸೋನಾರ್ ಇಮೇಜ್ಗಳಿಂದ ನಮಗೆ ಸಿಗ್ತಾ ಇರ್ಲಿಲ್ಲ. ಆದ್ರೆ ನಮಗೆ ಕಾಣ್ತಿರೋದೇನು? ಕಟ್ಟಡಗಳಂಥಾ ರಚನೆಗಳು ನೇರ ಆಯಾತಾಕಾರವಾಗಿವೆ, ಚೌಕಾಕಾರವಾಗಿವೆ. ಸಬ್ ಬಾಟಂ ಪ್ರೊಫೈಲರ್ನಿಂದ ನಮಗೆ ಸಿಕ್ಕ ವಿವರಗಳು ಏನು ಹೇಳ್ತವೆ ಗೊತ್ತಾ? ಅದನ್ನು ನನ್ನ ಉಪನ್ಯಾಸದಲ್ಲಿ ಈಗಾಗಲೇ ಹೇಳಿದೀನಿ, ಚಿತ್ರಗಳನ್ನೂ ತೋರಿಸಿದೀನಿ. ನೀವು ಗಮನಿಸಿಲ್ಲ ಅಂದ್ರೆ ಮತ್ತೆ ಹೇಳ್ತೀನಿ. ಎಲ್ಲ ರಚನೆಗಳ ಅಡಿಪಾಯಗಳು ಸದೃಢವಾಗಿವೆ! ಮತ್ತೆ, ನಾವು ದುರ್ಗ ಅಂತ ಅನುಮಾನಿಸ್ತಾ ಇರೋ ರಚನೆಯ ಒಂದು ಮೂಲೇಲಿ ಸಂಪೂರ್ಣ ವೃತ್ತಾಕಾರದ ಒಂದು ಗುರುತು ಇದೆ. ಅದು ಬಾವಿ ಇರಬೋದು. ಇನ್ನು ರಸ್ತೆಗಳ ವಿಷಯ. ಅವೆಲ್ಲ ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ನೇರವಾಗಿವೆ, ನೆಲದ ಮೇಲಿರೋ ಮೊಹೆಂಜೋದಾರೋನಲ್ಲಿ ಉತ್ಖನನ ನಮಗೆ ತೋರಿಸಿದೋ ಹಾಗೇ. ಆದಿತ್ಯ ಕ್ಷಣಕಾಲ ಮಾತು ನಿಲ್ಲಿಸಿ ಎದುರಿನ ಶ್ರೋತೃಸಮೂಹದ ಮೇಲೆ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ನಿಧಾನವಾಗಿ ನೋಟಹರಿಸಿದ. ಮಂತ್ರಮುಗ್ಧರಾಗಿ ಕೇಳುತ್ತಿದ್ದ ವಿದ್ಯಾರ್ಥಿ ಸಮೂಹದತ್ತ ಮೆಚ್ಚುಗೆ ನಗೆ ಮಿನುಗಿಸಿ, ಬಣ್ಣಗೆಡುತ್ತಿದ್ದ ಪ್ರಶ್ನಕಾರನ ಮುಖದ ಮೇಲೆ ನೋಟ ಕೀಲಿಸಿ ಬಿಲ್ಲಿಗೆ ಬಾಣ ಹೂಡಿದ: ಆ ನಗರ ಭೂಕಂಪಕ್ಕೆ ಸಿಕ್ಕಿದ್ರೆ, ನೆಲದಿಂದ ಸಮುದ್ರಕ್ಕೆ ಎಸೆಯಲ್ಪಟ್ಟಿದ್ರೆ ನಮಗೆ ಅದರ ಕುರುಹೂ ಸಿಗ್ತಾ ಇರ್ಲಿಲ್ಲ, ನಾವು ಈ ಸಂಜೆಯನ್ನು ಅದರ ಕುರಿತಾಗಿನ ಚರ್ಚೆಯಲ್ಲಿ ಕಳೀತಾ ಇರ್ಲಿಲ್ಲ. ಈ ಬಗ್ಗೆ ಒಮ್ಮೆ ನಿಮ್ಮ ರೀಸರ್ಚ್ ಗೈಡ್ ಜೊತೆ ಮಾತಾಡಿ. ಅವ್ರು ಪಿಎಚ್ಡಿ ಮಾಡಿದ್ದು ಗುಜರಾತ್ನ ಬರೋಡಾದ ಎಂಎಸ್ ಯೂನಿವರ್ಸಿಟಿಯಲ್ಲಿ. ಇಪ್ಪತ್ತಮೂರು ವರ್ಷಗಳ ಹಿಂದೆ ಅದೇ ಗುಜರಾತ್ನ ಭುಜ್ನಲ್ಲಿ ಭೂಕಂಪ ಆದಾಗ ತಮ್ಮ ಪಿಎಚ್ಡಿ ಅಧ್ಯಯನದ ಸಲುವಾಗಿ ಏನೋ ಉತ್ಖನನದಲ್ಲಿ ಭಾಗಿಯಾಗಿ ಅವ್ರು ಅಲ್ಲೇ ಇದ್ರು. ಬಯಲಿನಲ್ಲಿ ಟೆಂಟ್ ಒಳಗೆ ಮಲಗಿದ್ರಿಂದ ನಾನು ಜೀವಂತ ಉಳಕೊಂಡೆ. ಇಲ್ಲಾಂದ್ರೆ ನನ್ನ ಮೈನ ಒಂದು ಮೂಳೇನೂ ಇಡಿಯಾಗಿ ಸಿಗ್ತಾ ಇರ್ಲಿಲ್ವೇನೋ. ಭುಜ್ ಪಟ್ಟಣದ ಕಟ್ಟಡಗಳು ಉರುಳಿ ಬಿದ್ದಿದ್ದ ಬಗೇನ ನೆನಪಿಸಿಕೊಂಡ್ರೆ ಈಗಲೂ ನನ್ನ ಶರೀರ ನಡುಗಿಬಿಡುತ್ತೆ ಅಂತ ಅವ್ರು ನಮಗೆಲ್ಲ ಒಂದಕ್ಕಿಂತ ಹೆಚ್ಚು ಸಲ ಹೇಳಿದಾರೆ. ಆ ಅನುಭವ ಇರೋ ಅವ್ರು ನೀವು ಲೆಕ್ಕ ಹಾಕೋ ಹಾಗೆ ನಮ್ಮ ಈ ಪ್ರಾಚೀನ ನಗರಕ್ಕೆ ಭೂಕಂಪ ಒಂಚೂರೂ ಹಾನಿ ಮಾಡದೆ, ಮೆಲ್ಲಗೆ ಎತ್ತಿ ಇನ್ನೂ ಮೆಲ್ಲಗೆ ನೀರಿನೊಳಕ್ಕೆ ಇಳಿಸಿಬಿಟ್ಟಿದೆ ಅನ್ನೋದನ್ನು ನಂಬೋದಿಲ್ಲ.
ಸಭಾಂಗಣ ಕಿವಿ ಗಡಚಿಕ್ಕುವ ಕರತಾಡನದಿಂದ ತುಂಬಿಹೋಯಿತು. ವಂದನಾರ್ಪಣೆಗೆ ಬಂದು ನಿಂತ ಜಂಟಿ ಕಾರ್ಯದರ್ಶಿಯ ಮುಖದ ತುಂಬಾ ನಗೆ. ಅಧ್ಯಕ್ಷೆಯತ್ತ ತಿರುಗಿದರೆ ಅಲ್ಲಿ ಮೆಚ್ಚುಗೆ, ಅಭಿಮಾನ, ಹೆಮ್ಮೆ.
ಆ ಕ್ಷಣದಲ್ಲಿ ತಾನು ಯಶಸ್ವಿಯಾದೆ ಎಂದು ಆದಿತ್ಯನಿಗೆ ಅನಿಸಿದರೂ ತನ್ನ ಮುಂದಿರುವ ಸವಾಲುಗಳು ಎಂಥವು ಎನ್ನುವುದರ ಕಲ್ಪನೆ ಇನ್ನಷ್ಟು ದೊಡ್ಡದಾಗಿ ಅವನ ಮುಂದೆ ನಿಂತಿತು. ತನ್ನ ಶೋಧದಲ್ಲಿ ತಾನು ಸಮುದ್ರದೊಂದಿಗಷ್ಟೇ ಸೆಣಸುವಂತಿಲ್ಲ, ಅದಕ್ಕೂ ದೊಡ್ಡದಾದ ಸೆಣಸಾಟ ಮನುಷ್ಯರೊಂದಿಗಿದೆ, ಸಮುದ್ರ ಒಂದು ಸಲ ಪೂರ್ಣವಾಗಿ ನನ್ನೆದುರು ತೆರೆದುಕೊಂಡರೆ ಅಲ್ಲಿಗೆ ಅದು ನನಗೆ ನಂಬಿಗಸ್ತ ಸಹಯೋಗಿಯಾದಂತೆ, ಆದರೆ ಮನುಷ್ಯರು ಹಾಗಲ್ಲ; ಹೊಸಹೊಸ ರೂಪದಲ್ಲಿ, ಹೊಸಹೊಸ ವೇಷದಲ್ಲಿ ಅವರು ನನ್ನ ಮುಂದೆ ಎದುರಾಗಿ ಸೆಣಸಾಟದ ಆಯಾಮಗಳನ್ನು ವಿಸ್ತರಿಸುತ್ತಲೇ ಹೋಗುತ್ತಾರೆ ಎಂದು ಚಿಂತಿಸಿದ. ಇದೆಲ್ಲದರಿಂದ ಸಹಜವಾಗಿಯೇ ವಿಚಲಿತಗೊಂಡ ಆದಿತ್ಯನನ್ನು ಸಮಾಧಾನಿಸಿದ್ದು ಅಮ್ಮ, ಅಪ್ಪಾಜಿ ಮತ್ತು ಪ್ರೊ. ಹಿತೇಶ್ ರಾವತ್. ಬ್ಯಾಂಕ್ ಉದ್ಯೋಗಿ ಅಮ್ಮನದು ಎಂದಿನಂತೆ ಸಮಾಧಾನದ ಮಾತುಗಳಾದರೆ, ಪತ್ರಕರ್ತ ಅಪ್ಪಾಜಿಯವರದು ಇನ್ನಷ್ಟು ಸಾಕ್ಷ್ಯಾಧಾರಗಳು ಸಿಗುವವರೆಗೆ ಈ ಶೋಧಗಳ ಕುರಿತಾಗಿ ಎಲ್ಲೂ ಏನೂ ಹೇಳಬಾರದೆಂಬ ಸಲಹೆ ಗುರು ಹಿತೇಶ್ ರಾವತ್ರದು. ಇವೆರಡರ ಮಿಶ್ರಣದ ಜತೆಗೆ ಶೋಧದಲ್ಲಿ ಸಹಕಾರ ಸಹ.
ಸಿಂಧು-ಸರಸ್ವತಿ ನಾಗರಿಕತೆಯ ಕುರಿತಾಗಿ ಜಗತ್ತಿನಲ್ಲೇ ಅಗ್ರಗಣ್ಯ ವಿದ್ವಾಂಸರೆಂದು ಗುರುತಿಸಲಾಗುವ ಪ್ರೊ. ರಾವತ್ ತಮ್ಮ ಶಿಷ್ಯನ ಶೋಧದಲ್ಲಿ ಸಹಜವಾಗಿಯೇ ಆಸಕ್ತಿ ತಳೆದಿದ್ದರು. ಆದಿತ್ಯ ಮತ್ತವನ ಶೋಧಗಳ ಬಗ್ಗೆ ಅವರಿಗೆ ವಿಶ್ವಾಸವೂ ಮೂಡಿಯಾಗಿತ್ತು.
ಈಗಾಗಲೇ ಅನುಭವಕ್ಕೆ ಬಂದಿದ್ದಂತೆ ಗಂಗೊಳ್ಳಿ ಅಳವೆಯಲ್ಲಿ ಮುಳುಗು ಹಾಕಿ ಸಾಗರತಳ ವೀಕ್ಷಣೆಯಾಗಲಿ, ಜಲಾಂತರ್ಗತ ವಿಡಿಯೋ ಚಿತ್ರೀಕರಣವಾಗಲಿ ಸಾಧ್ಯವಿಲ್ಲದ ಕಾರಣ ಅಲ್ಲಿ ಹೂಳೆತ್ತುವ ಮೂಲಕ ಸಾಗರತಳದ ವಸ್ತುಗಳನ್ನು ಮೇಲೆತ್ತಿ ತಂದು ಪರಿಶೀಲಿಸಲು ಪರವಾನಗಿಗಾಗಿ ಆದಿತ್ಯ ಮತ್ತು ನೀಹಾರಿಕಾ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಮಂತ್ರಾಲಯ ಅನು, ಪರಿಸರ ಮಂತ್ರಾಲಯ ಮತ್ತು ರಕ್ಷಣಾ ಮಂತ್ರಾಲಯಗಳಿಗೆ ಲಿಖಿತ ಮನವಿ ಮಾಡಿದರು. ಅವುಗಳಿಗೆ ಪ್ರೊ. ಹಿತೇಶ್ ರಾವತ್ಗೆ ರೆಕಮಂಡೇಶನ್ ಇದ್ದ ಕಾರಣ ಪರವಾನಗಿಗಳು ಹೆಚ್ಚು ವಿಳಂಬವಾಗದೆ ದೊರೆತವು. ಅದಕ್ಕನುಗುಣವಾಗಿ ಆರಂಭವಾದ ಆ ಬಗೆಯ ಶೋಧನೆ ಮೇಲೆ ತಂದ ಮಣ್ಣುಕೆಸರಿನಲ್ಲಿ ಅಚ್ಚರಿ ಹುಟ್ಟಿಸುವಂತಹ ನೂರಾರು ಪ್ರಾಚ್ಯವಸ್ತುಗಳು ಬೆಳಕು ಕಂಡವು. ಅಲಂಕೃತ ಮಡಕೆ ಚೂರುಗಳು, ಮಣಿಗಳು, ಕುಸುರಿ ಕೆತ್ತನೆಯ ಆಟದ ವಸ್ತುಗಳೆನ್ನಬಹುದಾದ ವಸ್ತುಗಳು, ಕಲ್ಲಿನ ಕಂಬಗಳ ತುಂಡುಗಳು, ಅರೆಯುವ ಹಾಗೂ ಕುಟ್ಟುವ ಕಲ್ಲುಗಳ ಜತೆಗೆ ಇನ್ನೂ ಏನೇನೋ ಉಕಕರಣಗಳು, ಸೂಕ್ಷ್ಮ ಕುಸುರಿ ಕಲೆಯ ಕಲ್ಲಿನ ಆಟಿಕೆಯೋ ಅಥವಾ ಬೇರಾವುದೋ ಉಪಯುಕ್ತ ವಸ್ತುಗಳು ಡಝನ್ಗಟ್ಟಲೆಯಲ್ಲಿ ದೊರೆತಾಗ. ಆದಿತ್ಯ ಮತ್ತು ನೀಹಾರಿಕಾರಿಗೆ ತಾವಿನ್ನು ಹಿಂದೆ ಸರಿಯುವ ಅಗತ್ಯವಿಲ್ಲ ಎಂದು ಮನದಟ್ಟಾಯಿತು. ಆ ನಿರ್ಧಾರ ವಾರದ ನಂತರದ ಒಂದು ಸಂಜೆ ಒಡೆಯಲಾಗದಷ್ಟು ದೃಢವಾಗಿಬಿಟ್ಟಿತು.
* * *
ಏಳನೆಯ ಬಾರಿಗೆ ಹೂಳೆತ್ತಿ ತಂದ ಮಣ್ಣು ಕೆಸರನ್ನು ಅಗಲ ಜಾಲರಿಯಲ್ಲಿ ಹಾಕಿ ನೀರು ಸೋಲೆಂದು ಬಿಟ್ಟು, ಹದಿನೈದು ನಿಮಿಷ ಶವರ್ ಕೆಳಗೆ ನಿಂತು, ಇಂದು ನಮ್ಮ ಮನೆದೇವರ ಹಬ್ಬ, ಹೀಗಾಗಿ ಹಬ್ಬದಡಿಗೆ ಎಂದು ಹೇಳಿ ನೀಹಾರಿಕಾಳ ತಾಯಿ ಪ್ರಮೀಳಾ ಕಲ್ಯಾಣಪುರ ಬಡಿಸಿದ ಪಾಯಸದೂಟವನ್ನು ಸವಿದ ಆದಿತ್ಯನಿಗೆ ಅರ್ಥವಾಗದ ನಿದ್ದೆಯ ಸೆಳೆತ. ಸೆಳೆತವನ್ನು ಗೆಲ್ಲುವ ಅತ್ಯುತ್ತಮ ವಿದಾನವೆಂದರೆ ಸೆಳೆತಕ್ಕೆ ಸೋಲುವುದು ಎಂಬ ಆಸ್ಕರ್ ವೈಲ್ಡ್ನ ಮಾತನ್ನು ನೆನಪಿಸಿಕೊಂಡು ಸಣ್ಣಗೆ ನಗುತ್ತಾ ನಾರಾಯಣ ಕಲ್ಯಾಣಪುರ ಅವರ ಮನೆಯ ಮಾಳಿಗೆಯ ತನ್ನ ತಾತ್ಕಾಲಿಕ ಗೂಡು ಸೇರಿದ.
ಎಚ್ಚರವಾದಾಗ ಮೈಮನಸ್ಸೆಲ್ಲ ಹಗುರವಾದಂತೆನಿಸುವಂತಹ ಭಾವ. ಬಹಳ ದಿನಗಳಾಗಿತ್ತು ಹೀಗೆನಿಸಿ. ಕಿಟಕಿಯಾಚೆ ಕಣ್ಣಾಡಿಸಿದರೆ ಮಳೆ ಬಿದ್ದು ನಿಂತ ಕುರುಹುಗಳು. ಮಳೆ ಸುರಿದದ್ದೂ ತಿಳಿಯದಷ್ಟು ನಿದ್ದೆ ನನಗೆ! ಜೋರಾಗಿಯೇ ಹೇಳಿಕೊಂಡ.
ಕೆಳಗಿಳಿದು ಬಂದಾಗ ಕಾಫಿ ಕಪ್ ಹಿಡಿದು ಕೂತ ನೀಹಾರಿಕಾಳ ಕಣ್ಣುಗಳಲ್ಲಿ ಎಂದಿಗಿಂತ ಹೆಚ್ಚಿನ ಹೊಳಪು ಕಂಡು ಕುತೂಹಲಗೊಂಡ ಆದಿತ್ಯ. ಅವಳೂ ನಿದ್ದೆ ಮಾಡಿ ಎದ್ದಿರಬಹುದೆ? ಎದ್ದ ಮೇಲೆ ತನಗಾಗುತ್ತಿರುವಷ್ಟೇ ಹಗುರ ಭಾವ ಅವಳಿಗೂ ಆಗುತ್ತಿರಬಹುದೆ! ತನ್ನೊಳಗೇ ಕೇಳಿಕೊಳ್ಳುತ್ತ, ಪ್ರಮೀಳಾ ಕಲ್ಯಾಣಪುರ ಅವರು ನಗುಮೊಗದೊಂದಿಗೆ ಮುಂದೆ ಹಿಡಿದ ಕಾಫಿ ಕಪ್ಗೆ ನಗುತ್ತಲೇ ಕೈಯೊಡ್ಡಿದ.
ಅವನ ಕಾಫಿ ಸೇವನೆಯೂ ಆಗುವುದನ್ನು ತಾಳ್ಮೆಯಿಂದ ಕಾದ ಉತ್ಸಾಹಿ ಯುವ ಪುರಾತತ್ತ್ವಶಾಸ್ತ್ರಜ್ಞೆ ಬನ್ನಿ, ನಿಮಗೊಂದು ಅದ್ಭುತ ತೋರಿಸ್ತೀನಿ ಎನ್ನುತ್ತ ನಿಧಾನವಾಗಿ ಅಂಗಳಕ್ಕಿಳಿದಳು. ಹೂಳೆತ್ತಿದ ಕೆಸರುಮಣ್ಣಿನ ಜಾಲರಿಯಿಂದ ಇನ್ನೊಂದು ದಿಕ್ಕಿಗೆ ತಿರುಗಿ, ತಾಯಿ ಬಟ್ಟೆ ಒಗೆಯುವ ಕಲ್ಲಿನತ್ತ ನಡೆದಳು.
ಅವಳು ಎರಡೂ ಕೈಗಳಲ್ಲಿ ಎತ್ತಿ ಮುಂದೆ ಹಿಡಿದ ಅರ್ಧ ಅಡಿ ಉದ್ದದ ಅಗಲ ತಳದ ಸಿಲಿಂಡರ್ನಾಕಾರದ ಕಪ್ಪು ವಸ್ತುವಿನ ಮೇಲೆ ಆದಿತ್ಯನ ಕುತೂಹಲದ ನೋಟ ನೆಟ್ಟಿತು. ಇದು ಶಿವಲಿಂಗ. ಬೇರಿನ್ನಾವುದೂ ಆಗಿರಲು ಸಾಧ್ಯ ಇಲ್ಲ! ಅಂದಳು ಅವಳು. ಮಾತಿಲ್ಲದೆ ಅದರತ್ತ ಎರಡೂ ಕೈಗಳನ್ನು ಒಡ್ಡಿದ ಆದಿತ್ಯ.
ಭಾರದ್ದನ್ನು ಹಿಡಿಯುತ್ತೇನೆ ಅಂದುಕೊಂಡು ಕೈಗಳ ಮಾಂಸಖಂಡಗಳನ್ನು ಬಿಗಿಗೊಳಿಸಿಕೊಂಡವನಿಗೆ, ಜೋಡಿಸಿದ ಅಂಗೈಗಳ ಮೇಲೆ ಕೂತ ಕಪ್ಪು ವಸ್ತು ಅಷ್ಟೇನೂ ಭಾರವಿಲ್ಲವೆನಿಸಿ, ಇದೆಂಥಾ ಕಲ್ಲು! ಅಂದುಕೊಂಡು ಕಣ್ಣರಳಿಸಿದ. ಮರದ್ದು ಎಂದು ಹೇಳಿ ಅವನ ಅಚ್ಚರಿಯನ್ನು ಶಮನಗೊಳಿಸಿದಳು, ನಮ್ಮ ಶೋಧಕ್ಕೆ ಅತ್ಯಂತ ಮಹತ್ತ್ವದ ಸಾಕ್ಷ್ಯ ಇದು! ಗಂಭೀರವಾಗಿ ಮಾತು ಮುಗಿಸಿದಳು ನೀಹಾರಿಕಾ. ಕಣ್ಣುಗಳು ಇನ್ನಷ್ಟು ಹೊಳಪಾದವು.
ಹೌದು ಅದು, ಅದು ಅತ್ಯಂತ ಮಹತ್ತ್ವದ ಸಾಕ್ಷ್ಯ.
ಇದುವರೆಗೆ ಸಿಕ್ಕಿರುವ ವಿವಿಧ ಬಗೆಯ ಕಲ್ಲಿನ ಅಥವಾ ಸುಟ್ಟ ಮಣ್ಣಿನ ವಸ್ತುಗಳು. ಅವುಗಳನ್ನು ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲಾಗದು. ಹೀಗಾಗಿ ಅವೆಷ್ಟು ಹಳೆಯವು ಎನ್ನುವುದು ಉತ್ತರ ಸಿಗದ ಪ್ರಶ್ನೆ. ಆ ಸಮಸ್ಯೆಗಳನ್ನೆಲ್ಲಾ ದೂರೀಕರಿಸುವುದು ಈ ಮರದ ಶಿವಲಿಂಗ. ಇದೆಷ್ಟು ಪ್ರಾಚೀನ ಎನ್ನುವುದನ್ನು ಕಾರ್ಬನ್ ಡೇಟಿಂಗ್ ಪರೀಕ್ಷೆಯ ಮೂಲಕ ನಿಖರವಾಗಿ ತಿಳಿದುಬಿಡಬಹುದು. ಅದರೊಂದಿಗೆ ಈಗ ಸಮುದ್ರದಾಳದಲ್ಲಿ ಪತ್ತೆಯಾಗಿರುವ ನಗರವೆಷ್ಟು ಪ್ರಾಚೀನ ಎನ್ನುವುದನ್ನೂ ಸಹ.
ಮೊದಲ ನೋಟ ಹಾಗೂ ಸ್ಪರ್ಶಕ್ಕೇ ಆದಿತ್ಯನಿಗೆ ತಿಳಿದದ್ದು ಇಂದು ಎಲ್ಲರಿಗೂ ಪರಿಚಿತವೇ ಆಗಿರುವ ಶಿವಲಿಂಗದಂತಹದೇ ಆದ ಆ ಅರ್ಧ ಅಡಿಯ ಮರದ ವಸ್ತು ನೈಸರ್ಗಿಕವಲ್ಲದಷ್ಟು ನಯವಾಗಿದೆ ಎಂದು. ಅಂದರೆ ಇದು ಎಂದೋ ಯಾರಿಂದಲೋ ನಯಗೊಳಿಸಲ್ಪಟ್ಟಿದೆ! ಇದು ವಾಸ್ತವವಾಗಿಯೂ ತಾನು ಶೋಧಿಸಿರುವ ಪ್ರಾಚೀನ ನಗರದ್ದೇ ಅಥವಾ ಇತ್ತೀಚಿನ ದಿನಗಳಲ್ಲೇ ಗಂಗಾವಳಿ ನದಿಯ ಮೂಲಸ್ಥಾನದಿಂದ ಸಮುದ್ರದವರೆಗಿನ ಯಾವುದಾದರೂ ದೇವಾಲಯದಿಂದಲೋ ಮನೆಯಿಂದಲೋ ಯಾವ ಕಾರಣಕ್ಕೋ ಹೊರಬಿದ್ದು ಪ್ರವಾಹದಲ್ಲಿ ತೇಲಿಬಂದು ಹೇಗೋ ನೂರಿಪ್ಪತ್ತು ಅಡಿಗಳ ಆಳಕ್ಕೆ ಸೇರಿದ್ದೋ? ಯುವ ಪುರಾತತ್ತ್ವಶಾಸ್ತ್ರಜ್ಞ ಕಣ್ಣುಗಳನ್ನು ಕಿರಿದುಗೊಳಿಸಿಕೊಂಡ. ಇರಲಿ, ತನ್ನ ಪ್ರಶ್ನೆಗೆ ಉತ್ತರ ಲಖ್ನೋದ ಬೀರ್ಬಲ್ ಸಾಹ್ನಿ ಇನ್ಸ್ಟಿಟ್ಯೂಟ್ ಅಫ್ ಪ್ಯಾಲಿಯೋಬಾಟನಿಯಿಂದ ದೊರೆಯುತ್ತದೆ ಎಂದು ತನಗೇ ಹೇಳಿಕೊಂಡು ಸಹ-ಶೋಧಕಿಯತ್ತ ಸಮಾಧಾನದ ನೋಟ ಬೀರಿದ. ಮುಂದಿನ ಹತ್ತು ನಿಮಿಷಗಳಲ್ಲಿ ಮರದ ಶಿವಲಿಂಗದ ಫೋಟೋಗಳನ್ನು ತೆಗೆದು ಪ್ರೊ. ಹಿತೇಶ್ ರಾವತ್ ಅವರಿಗೆ ಇಮೇಲ್ ಮಾಡಿದ. ಈಗ ಪಾಕಿಸ್ತಾನದಲ್ಲಿರುವ ಅವರು ತನ್ನ ಇಮೇಲ್ ಅನ್ನು ಆದಷ್ಟು ಬೇಗ ನೋಡಲಿ ಎಂದು ಆಶಿಸಿದ. ತಡೆಯಲಾರದೆ ಅದನ್ನು ನೀಹಾರಿಗೂ ಹೇಳಿಕೊಂಡ. ಅವಳದೂ ಅದೇ ಆಶಾಭಾವನೆ.
ಹಾಗೆ ನೋಡಿದರೆ ಪ್ರೊ. ರಾವತ್ ಪಾಕಿಸ್ತಾನಕ್ಕೆ ಹೋದದ್ದೇ ಅಚ್ಚರಿಯ ವಿಷಯ. ಅವರೇನೋ ಸಿಂಧು-ಸರಸ್ವತಿ ನಾಗರಿಕತೆಯ ಬಗ್ಗೆ ಜಗತ್ತಿನಲ್ಲೇ ಅತ್ಯಂತ ಗಣ್ಯ ವಿದ್ವಾಂಸರು, ನಿಜ. ಆದರೆ ಅವರ ಈ ಖ್ಯಾತಿಯೇ ಅವರನ್ನು ಪಾಕಿಸ್ತಾನದಿಂದ ದೂರವಿರಿಸಿತ್ತು. ಇಸ್ಲಾಮಿಕ್ ರಾಷ್ಟ್ರವಾಗಿ, ತನ್ನ ಇಸ್ಲಾಂಪೂರ್ವ ಇತಿಹಾಸದ ಬಗ್ಗೆ ಅತೀವ ಅನಾದರ, ಅವಜ್ಞೆ ಪ್ರದರ್ಶಿಸುವ ಪಾಕಿಸ್ತಾನದಲ್ಲಿ ೧೯೪೭ರ ನಂತರ ಸಿಂಧು ಕಣಿವೆಯ ಯಾವುದೇ ಪುರಾತತ್ತ್ವ ಸ್ಥಳದಲ್ಲಿ ಹೇಳಿಕೊಳ್ಳುವಂತಹ ಉತ್ಖನನ ನಡೆದೇ ಇಲ್ಲ. ನಡೆಯಬಾರದೆನ್ನುವುದು ಅಲ್ಲಿನ ಸರ್ಕಾರಗಳ ನೀತಿ. ಅದರ ಹಿಂದಿರುವುದು ಇಸ್ಲಾಮಿಕ್ ಮೂಲಭೂತವಾದಿಗಳು ಎನ್ನುವುದು ಬಹಿರಂಗ ರಹಸ್ಯ. ಹೀಗಾಗಿ ಆ ಸ್ಥಳಗಳಿಗೆ ಯಾರೇ ವಿದೇಶೀ ಮುಖ್ಯವಾಗಿ ಭಾರತೀಯ ಪುರಾತತ್ತ್ವಶಾಸ್ತ್ರಜ್ಞರ ಭೇಟಿಗೆ ಆ ದೇಶ ಅವಕಾಶ ನೀಡುವುದಿಲ್ಲ. ಅದರ ಪರ್ಸೊನಾ ನಾನ್ ಗ್ರಾಟಾ ಪಟ್ಟಿಯಲ್ಲಿ ಮೊದಲ ಹೆಸರೇ ಪ್ರೊ. ಹಿತೇಶ್ ರಾವತ್ ಅವರದು!
ಆದರೆ ಕಳೆದ ಎರಡು ತಿಂಗಳುಗಳಿಂದ ಅಸಾಮಾನ್ಯ ಬದಲಾವಣೆಗಳು ಕಾಣಬರುತ್ತಿವೆ.
ತುರ್ಕಿಯ ಅಂಕಾರಾದಲ್ಲಿ ಎರಡು ತಿಂಗಳ ಹಿಂದೆ ನಡೆದ ಪುರಾತತ್ತ್ವಶಾಸ್ತ್ರಜ್ಞರ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಪೊ. ರಾವತ್ ವಿಶೇಷ ಆಮಂತ್ರಿತರು. ಅಲ್ಲಿ ಹಾಜರಿದ್ದ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಪಾಕಿಸ್ತಾನ್ನ ನಿರ್ದೇಶಕ ಫಯಾಜ್ ಅಹ್ಮದ್ ರಿಜ್ವೀ ತಾವಾಗಿಯೇ ಹುಡುಕಿಕೊಂಡು ಬಂದು ಪ್ರೊ. ರಾವತ್ರನ್ನು ಆತ್ಮೀಯವಾಗಿ ಮಾತಾಡಿಸಿದ್ದರು. ತಮ್ಮ ದೇಶಕ್ಕೆ ಭೇಟಿ ನೀಡಬೇಕು ಎಂದೂ ಹೇಳಿದ್ದರು! ಅದೇ ಮಾತು ಸಿಂಧ್ನ ಖಾಯರ್ಪುರ್ ಯೂನಿವರ್ಸಿಟಿಯ ಇತಿಹಾಸಕಾರ ಜಾಫರ್ ಇಮಾಮ್ ಅವರಿಂದಲೂ ಬಂದಿತ್ತು.
ಅಂಕಾರಾದಿಂದ ಹಿಂತಿರುಗಿದ ಮೇಲೆ ಪ್ರೊ. ರಾವತ್ ಅದೆಲ್ಲವನ್ನೂ ಮರೆತುಬಿಟ್ಟರು. ಆದರೆ ಅವರಿಗೇ ಅಚ್ಚರಿಯಾಗುವಂತೆ ಒಂದೇ ವಾರದಲ್ಲಿ ಅವರಿಗೆ ಖಾಯರ್ಪುರ್ ಯೂನಿವರ್ಸಿಟಿಯಿಂದ ವಿಶೇಷ ಉಪನ್ಯಾಸ ಸರಣಿಗಾಗಿ ಆಹ್ವಾನ ಬಂತು. ನವದೆಹಲಿಯಲ್ಲಿನ ಪಾಕಿಸ್ತಾನ್ ಹೈಕಮಿಷನ್ ತಕ್ಷಣ ವೀಸಾ ನೀಡಿದ್ದೂ ಆಯಿತು. ಅದರೊಂದಿಗೆ ಪಾಕಿಸ್ತಾನದ ಯಾವುದೇ ಪುರಾತತ್ತ್ವ ಸ್ಥಳಕ್ಕೆ ರಾಷ್ಟ್ರೀಯ ಅಥವಾ ಪ್ರಾಂತೀಯ ಸರ್ಕಾರದ ಅನುಮತಿಯ ಆವಶ್ಯಕತೆ ಇಲ್ಲದೆ ಮುಕ್ತವಾಗಿ ಭೇಟಿ ನೀಡುವ ಅವಕಾಶ ಸಹ. ಭಾರತೀಯ ವಿದ್ವಾಂಸರೊಬ್ಬರಿಗೆ ಅತಿಯಾದ ಅದೃಷ್ಟವಿದ್ದರಷ್ಟೇ ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ಅವಕಾಶ! ಉತ್ಸಾಹಿ ಪುರಾತತ್ತ್ವಶಾಸ್ತ್ರಜ್ಞ ಪ್ರೊ. ಹಿತೇಶ್ ರಾವತ್ ಇದನ್ನು ಬಿಟ್ಟಾರೆಯೆ?
ಪಾಕಿಸ್ತಾನಕ್ಕೆ ತೆರಳಿದ ಅವರು ಮೊಹೆಂಜೋದಾರೋ ಮತ್ತು ಚಾನ್ಹುದಾರೋಗಳಲ್ಲಿ ಒಟ್ಟು ನಾಲ್ಕು ದಿನಗಳನ್ನು ಕಳೆದಿದ್ದರು. ಉಪನ್ಯಾಸ ಸರಣಿ ಆರಂಭವಾಗುವುದು ಶನಿವಾರದಿಂದ, ಅಂದರೆ ಶುಕ್ರವಾರದ ವಾರದ ರಜಾದಿನ ಕಳೆದು ಹೊಸ ವಾರ ಆರಂಭವಾದಾಗ ಎಂದು ಪ್ರೀತಿಯ ಶಿಷ್ಯನಿಗೆ ಎರಡು ಸಲ ವಾಟ್ಸ್ಆಪ್ ಮೆಸೇಜ್ ಮಾಡಿದ್ದರು. ಖಾಯರ್ಪುರ್ ಯೂನಿವರ್ಸಿಟಿಯ ಉಪನ್ಯಾಸ ಸರಣಿ ಆದ ನಂತರ ತಮ್ಮಲ್ಲಿಗೂ ಭೇಟಿ ನೀಡಲು ಲಾಹೋರ್ನ ಪಂಜಾಬ್ ಯೂನಿವರ್ಸಿಟಿ ಮತ್ತು ಇಸ್ಲಾಮಾಬಾದ್ನ ಕಾಯದ್-ಎ-ಆಜಂ ಯೂನಿವರ್ಸಿಟಿಗಳಿಂದಲೂ ಆಹ್ವಾನಗಳು ಬಂದಿವೆಯಂತೆ. ನನಗೆ ನಂಬಿಕೆಯೇ ಆಗುತ್ತಿಲ್ಲ ಎಂದೂ ಮೆಸೇಜ್ ಮಾಡಿದ್ದರು ಪ್ರೊ. ರಾವತ್. ಆ ದೇಶ ಬದಲಾಗುತ್ತಿದೆ, ಸಿಗುವ ಅವಕಾಶಗಳನ್ನು ಉಪಯೋಗಿಸಿಕೊಳ್ಳೋಣ ಬಿಡಿ ಎಂದು ಆದಿತ್ಯ ಪ್ರತಿಕ್ರಿಯಿಸಿದ್ದ.
ರಾತ್ರಿ ಎಂಟೂವರೆಯ ಹೊತ್ತಿಗೆ ಪ್ರೊ. ರಾವತ್ ಅವರಿಂದ ಕರೆ ಬಂತು. ಬಿಎಸ್ಎನ್ಎಲ್ ಇಂಟರ್ನ್ಯಾಷನಲ್ ಸಿಮ್ ಪಡೆದುಕೊಂಡು ಪಾಕಿಸ್ತಾನಕ್ಕೆ ತೆರಳಿದ್ದ ತಾವು ಅದನ್ನು ಬಳಸುತ್ತಿರುವುದು ಇದೇ ಮೊದಲು ಎಂದು ನಗುತ್ತ ಹೇಳಿಕೊಂಡು ಮಾತು ಆರಂಭಿಸಿದ್ದರು. ವಾರದಿಂದ ಅವರು ತಮ್ಮ ಪತ್ನಿ ಡಾ. ಸುಧೀರಾ ರಾವತ್ ಅವರ ಜೊತೆ ಮಾತಾಡಿಲ್ಲವೇ ಎಂದು ಆದಿತ್ಯ ಅಚ್ಚರಿಗೊಂಡ. ಆದರೆ ಮುಂದಿನ ಕ್ಷಣದಲ್ಲಿ ಪ್ರೊ. ರಾವತ್ ಎತ್ತಿದ ವಿಷಯದಿಂದ ಅವನ ಆ ಆಲೋಚನೆ ಅದೆತ್ತಲೋ ಹಾರಿಹೋಯಿತು.
ಬೇರೆಬೇರೆ ಕೋನಗಳಿಂದ ತೆಗೆದು ನೀನು ಕಳಿಸಿರೋ ಶಿವಲಿಂಗದ ಚಿತ್ರಗಳನ್ನೆಲ್ಲ ನಾನು ಕೂಲಂಕಷವಾಗಿ ಪರಿಶೀಲಿಸಿದ್ದೀನಿ. ಅದು ಆ ಸ್ಥಳದ್ದೇ ಅಂತ ನನಗೆ ಅನಿಸ್ತಾ ಇದೆ. ಆದರೂ ನಾವದನ್ನು ಲಕ್ನೋಗೆ ಕಳಿಸಿ ಸರಿಯಾದ ಮಾಹಿತಿ ಪಡಕೋಬೇಕು. ಇಂದು ಯಾರು ನಂಬಲಿ, ನಂಬದೇ ಇರಲಿ, ನೀನು ಶೋಧಿಸಿರೋ ಅವಶೇಷಗಳು ಒಂಬತ್ತು ಸಾವಿರ ವರ್ಷಗಳಿಗಿಂತ ಹಿಂದಿನವು, ಸಿಂಧು-ಸರಸ್ವತಿ ನಾಗರಿಕತೆಯ ನಗರನಿರ್ಮಾಣ ಕೌಶಲ ಆರಂಭವಾದದ್ದು ಅಲ್ಲಿಂದಲೇ ಅಂತ ನಮಗಂತೂ ಖಾತ್ರಿಯಾಗಿದೆ. ನಮಗೆ ಸಿಕ್ಕಿರೋ ಹೊಸ ಸಾಕ್ಷ್ಯಗಳನ್ನು ಸರಿಯಾದ ಬಗೆಯಲ್ಲಿ ಹೊರಗೆ ಹಾಕಿದ ಮೇಲೆ ಜಗತ್ತೂ ನಮ್ಮಂತೇ ತಿಳಿಯುತ್ತೆ. ಆ ಬಗ್ಗೆ ಚಿಂತೆ ಬೇಡ. ಅದರ ಜೊತೆ ಈ ಶಿವಲಿಂಗದ ಬಗ್ಗೆ ನಮ್ಮ ಲೆಕ್ಕಾಚಾರ ಸರಿಯೇ ಆಗಿದ್ರೆ ಅಂದರೆ ಅದು ಆ ಸ್ಥಳದ್ದೇ ಅನ್ನೋದು ವೈಜ್ಞಾನಿಕವಾಗಿ ತೀರ್ಮಾನ ಆಗಿಬಿಟ್ರೆ ಏನಾಗುತ್ತೆ ಗೊತ್ತಾ? ಪ್ರಶ್ನೆಯೊಂದಿಗೆ ಥಟಕ್ಕನೆ ಮಾತು ನಿಲ್ಲಿಸಿದ್ದರು ಆ ಹಿರಿಯ ವಿದ್ವಾಂಸ. ಗುರುಗಳು ಏನು ಹೇಳಹೊರಟಿದ್ದಾರೆ ಎಂದು ಆದಿತ್ಯನಿಗೆ ಹೊಳೆಯಲಿಲ್ಲ. ಅವರ ಮುಂದಿನ ಮಾತುಗಳಿಗಾಗಿ ತಾಳ್ಮೆಯಿಂದ ಕಾದ.
ಶಿವನ ಆರಾಧನೆ ಕನಿಷ್ಟ ಒಂಬತ್ತು ಸಾವಿರ ವರ್ಷದಿಂದಲೂ ಅನೂಚಾನವಾಗಿ ನಡೀತಾ ಬಂದಿದೆ ಅನ್ನೋದು ಸಾಬೀತಾಗುತ್ತೆ. ಇದು ಹಿಂದೂಧರ್ಮದ ಪ್ರಾಚೀನತೆಯನ್ನ ಜಗತ್ತಿಗೆ ಸಾರುತ್ತೆ. ಅದರ ಮುಂದೆ ಯೆಹೂದಿ, ಜೊರಾಸ್ಟ್ರಿಯನ್ ಧರ್ಮಗಳೆಲ್ಲ್ಲ ಕಾಲಮಾನದ ದೃಷ್ಟಿಯಿಂದ ಅದೆಷ್ಟು ಚಿಕ್ಕವು ಅನ್ನೋದನ್ನ ಜಗತ್ತು ಗುರುತಿಸಬಹುದು. ಅಷ್ಟೇ ಅಲ್ಲ, ಇಲ್ಲಿ ಇನ್ನೊಂದು ವಿಷಯ ಗಮನಿಸು. ಆ ನಿಮ್ಮ ಕಡೆಯ ಸದ್ಗುರು ಜಗ್ಗಿ ವಾಸುದೇವ್ ಹೇಳೋ ಪ್ರಕಾರ ಶಿವ ಸುಮಾರು ಹದಿನೈದು ಸಾವಿರ ವರ್ಷಗಳ ಹಿಂದೆ ಬೇರೆಲ್ಲಿಂದಲೋ ಈ ಭೂಮಿಗೆ ಬಂದ. ಇನ್ನು ಆ ಅಸಾಂಪ್ರದಾಯಿಕ ಪುರಾತತ್ತ್ವಶಾಸ್ತ್ರಜ್ಞ ಪ್ರವೀಣ್ ಮೋಹನ್ ಹೇಳೋದೇನು? ಶಿವಲಿಂಗ ಅಂದ್ರೆ ಶಿವನ ಜನನೇಂದ್ರಿಯ ಅಲ್ಲ. ಅದೊಂದು ಅಂತರಿಕ್ಷ ವಾಹನ. ಶಿವ ಅನ್ಯಲೋಕದ ಬುದ್ಧಿವಂತ ಜೀವಿ. ಆತ ಇಲ್ಲಿಗೆ ಯಾವ ಕಾರಣಕ್ಕೋ ತನ್ನ ಅಂತರಿಕ್ಷ ವಾಹನದಲ್ಲಿ ಕೂತು ಇಲ್ಲಿಗೆ ಬಂದ ಅಂತ ಪ್ರವೀಣ್ ಮೋಹನ್ ಲೇಪಾಕ್ಷಿ ಮುಂತಾದ ದಕ್ಷಿಣ ಭಾರತದ ಅತಿ ಪ್ರಾಚೀನ ದೇವಾಲಯಗಳಲ್ಲಿ ಸಿಗೋ ಆಧಾರಗಳನ್ನೇ ಉದಾಹರಿಸಿ ಹೇಳ್ತಾರೆ. ಆ ಅಂತರಿಕ್ಷ ವಾಹನದ ಆಕಾರದಲ್ಲೇ ಶಿವಲಿಂಗ ಅನ್ನೋ ಪೂಜಾರ್ಹ ವಸ್ತು ನಿರ್ಮಾಣ ಆಯ್ತು ಅನ್ನೋದು ಅವರ ವಾದ. ನಿನಗೆ ಸಿಕ್ಕಿರೋ ಶಿವಲಿಂಗದ ತಳಭಾಗವನ್ನು ನೋಡು. ನಮ್ಮ ಕಾಲದ ರಾಕೆಟ್ಗಳನ್ನು ಅದು ಹೋಲುತ್ತದೆ.
ಆದಿತ್ಯ ದಂಗಾಗಿ ಕೇಳುತ್ತಿದ್ದ.
ಅದನ್ನು ಜೋಪಾನವಾಗಿ ಇಡು. ನಾನು ಹಿಂದಕ್ಕೆ ಬಂದ ಕೂಡಲೇ ಲಕ್ನೋಗೆ ಖುದ್ದಾಗಿ ತಗೊಂಡು ಹೋಗಿ ಅದರ ಕಾಲನಿರ್ಣಯ ಮಾಡಿಸೋಣ. ನಾವು ಅಂದುಕೊಂಡಿರೋದನ್ನೆ ಸಾಹ್ನಿ ಇನ್ಸ್ಟಿಟ್ಯೂಟ್ ಸಹ ಹೇಳುತ್ತೆ. ಆದ್ರೆ ಆ ವೈಜ್ಞಾನಿಕ ಮುದ್ರೆ ನಮಗೆ ಬೇಕು ಅಷ್ಟೇ. ಅದು ಸಿಗುವವರೆಗೆ ಈ ಬಗ್ಗೆ ಎಲ್ಲೂ ಏನೂ ಮಾತಾಡೋದು ಬೇಡ. ಹಾಗಂತ ನಿನ್ನ ಜೊತೆ ಇರೋ ಆ ಹುಡುಗೀಗೂ ಹೇಳು. ಸಾಹ್ನಿ ಇನ್ಸ್ಟಿಟ್ಯೂಟ್ ರಿಪೋರ್ಟ್ಗಾಗಿ ತಾಳ್ಮೆಯಿಂದ ಕಾಯೋಣ. ಇದರೊಳಗೆ ನೀನು ನಿನ್ನ ಇಡೀ ಶೋಧದ ಬಗ್ಗೆ ವಿವರವಾದ ಪ್ರಬಂಧ ಸಿದ್ಧಪಡಿಸು. ಮುಂದಿನ ತಿಂಗಳು ಡೆಲ್ಲಿಯಲ್ಲಿ ನಡೆಯೋ ಸಮಾವೇಶ ಅದರ ಮಂಡನೆಗೆ ಸೂಕ್ತ ಸ್ಥಳ. ಪ್ರಬಂಧದ ನೂರೈವತ್ತು ಪದಗಳ ಹ್ರಸ್ವರೂಪವನ್ನು ಈಗಲೇ ಸಿದ್ಧಮಾಡಿ ನಮ್ಮ ಪ್ರೊ. ವಿಷ್ಣು ನಾರಂಗ್ ಅವರಿಗೆ ಮೇಲ್ ಮಾಡು. ನನಗೆ ಸಿಸಿ ಮಾಡು. ನಾನೂ ಅವರ ಜೊತೆ ಮಾತಾಡ್ತೀನಿ ಎಂದು ಪ್ರೊ. ರಾವತ್ ಮಾತು ಮುಗಿಸಿದರು.
ಆ ರಾತ್ರಿ ಆದಿತ್ಯ ಮತ್ತು ನೀಹಾರಿಕಾರ ಚರ್ಚೆಗೆ ಕೊನೆಯೇ ಇರಲಿಲ್ಲ.
ಆದರೆ ಮಾರನೆಯ ಸಂಜೆ ಬಂದ ಸುದ್ದಿ ಎಲ್ಲವನ್ನೂ ಬದಲಾಯಿಸಿಬಿಟ್ಟಿತು.
ಸಿಂಧ್ನ ಮಧ್ಯಯುಗದ ಬಂದರು ಥಟ್ಟಾದ ಅವಶೇಷಗಳನ್ನು ಸಂದರ್ಶಿಸಲು ಹೋದ ಪ್ರೊ. ರಾವತ್ ಕುಸಿದ ಕಲ್ಲುಚಪ್ಪಡಿಯೊಂದಿಗೆ ತಾವೂ ಅರವತ್ತು ಅಡಿಗಳ ಕೆಳಗೆ ಬಿದ್ದು ಮೃತರಾಗಿದ್ದರು. ದುರಂತದ ಸುದ್ದಿ ಅಧಿಕೃತವಾಗಿ ಪಾಕ್ ಹೈಕಮಿಷನ್ ಮೂಲಕ ಭಾರತ ಸರ್ಕಾರಕ್ಕೆ, ಡಾ. ಸುಧೀರಾ ರಾವತ್ ಅವರಿಗೆ ತಲಪಿತ್ತು
ಸಿದ್ಧಪಡಿಸತೊಡಗಿದ್ದ ಪ್ರಬಂಧವನ್ನು ಲ್ಯಾಪ್ಟಾಪ್ನಿಂದ ಅಳಿಸಿ ಮರೆತುಬಿಡಲು ಹೊರಟ ಆದಿತ್ಯನನ್ನು ತಡೆದದ್ದು ಪ್ರೊ. ವಿಷ್ಣು ನಾರಂಗ್. ಕಡಮೆ ಮಾತಿನ ಅವರು ಹೇಳಿದ್ದಿಷ್ಟೇ – ಯುವರ್ ರೀಸರ್ಚ್ ಪೇಪರ್ ಈಸ್ ಎ ಫಿಟ್ಟಿಂಗ್ ಟ್ರಿಬ್ಯೂಟ್ ಟು ಯುವರ್ ಗುರು.
* * *
ಆದರೆ ಇಂದು ಆಗಿರುವುದೇನು? ತಾನು ತನ್ನ ಪ್ರಬಂಧ ಮಂಡಿಸಿ ತನ್ನ ಶೋಧವನ್ನು ವೈದ್ವಾಂಸಿಕ ಜಗತ್ತಿಗೆ ಅಧಿಕೃತವಾಗಿ ಪರಿಚಯಿಸಿದ ಕೆಲವೇ ತಾಸುಗಳಲ್ಲಿ ತಾನೂ, ತನ್ನ ಮೃತ ಗುರುವೂ ಕನಿಷ್ಠ ಒಂಬತ್ತು ಸಾವಿರ ವರ್ಷ ಪ್ರಾಚೀನವೆಂದು ನಂಬಿದ್ದ ಶಿವಲಿಂಗ ಕೇವಲ ಒಂದು ಸಾವಿರದ ಇನ್ನೂರು ವರ್ಷಗಳಷ್ಟೇ ಹಳೆಯದು ಎಂದು ಜಾಗತಿಕವಾಗಿ ವಿಶ್ವಾಸಾರ್ಹ ಸಂಸ್ಥೆಯೊಂದು ಅಧಿಕೃತವಾಗಿ ಹೇಳಿಬಿಟ್ಟಿದೆ!
ನನ್ನ ಶೋಧವನ್ನು ಕಂಪ್ಯೂಟರ್ ಕಣ್ಕಟ್ಟು ಎಂದು ಈಗಾಗಲೇ ಹೀಗಳೆದ ವಿದ್ವಾಂಸರು, ಮಾಧ್ಯಮಗಳು ಇನ್ನು ನನ್ನನ್ನು ಹರಿದುಹಾಕುವುದರಲ್ಲಿ ಸಂದೇಹವಿಲ್ಲ. ನಾನು ಮತ್ತು ನನ್ನ ತಂಡ ಅತೀವ ಪರಿಶ್ರಮದಿಂದ ಎತ್ತಿತಂದು, ಅತಿ ಪ್ರಾಚೀನವೆಂದು ಜಗತ್ತಿನ ಮುಂದೆ ಇಡಹೊರಟ ವಸ್ತುಗಳೆಲ್ಲವೂ ಗಂಗಾವಳಿ ನದಿ ಮಳೆಗಾಲದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಸಮುದ್ರದಲ್ಲಿ ಸುರಿದಿರುವ ವಸ್ತುಗಳಷ್ಟೇ; ಅಲ್ಲಿ ಯಾವ ಪ್ರಾಚೀನ ನಗರವೂ ಇಲ್ಲ ಎಂದು ದೇಶದ ಪುರಾತತ್ತ್ವಶಾಸ್ತ್ರಜ್ಞರು ನಗುತ್ತಾರೆ, ಮಾಧ್ಯಮಗಳು ನನ್ನನ್ನು ಲೇವಡಿ ಮಾಡುತ್ತವೆ. ನನ್ನ ಪ್ರಬಂಧಮಂಡನೆಯ ಸುದ್ದಿಯನ್ನೂ, ಇಸ್ರಾಂಬುಲ್ ಇನ್ಸ್ಟಿಟ್ಯೂಟ್ ಆಫ್ ಮರೀನ್ ಆರ್ಕಿಯಾಲಜಿಯ ವರದಿಯನ್ನೂ ಒಟ್ಟೊಟ್ಟಿಗೆ ಓದಿದ ನನ್ನ ಮತ್ತು ನೀಹಾರಿಕಾರ ಸಹೋದ್ಯೋಗಿಗಳೆಲ್ಲರೂ ನಮ್ಮನ್ನು ಛೇಡಿಸುವುದು ಸದ್ಯಕ್ಕೆ ನಿಲ್ಲುವುದಿಲ್ಲ. ಈ ಸ್ಥಿತಿಯಲ್ಲಿ ನಾನು ಯಾವ ಮುಖ ಎತ್ತಿಕೊಂಡು ಅಸೋಸಿಯೇಟ್ ಪ್ರೊಫೆಸರ್ ಹುದ್ದೆಯ ಇಂಟರ್ವ್ಯೂಗೆ ಹೋಗಲಿ? ನನ್ನದಷ್ಟೇ ಅಲ್ಲ, ಈಗಷ್ಟೇ ಆರಂಭವಾಗಿರುವ ನೀಹಾರಿಕಾಳ ಪುರಾತತ್ತ್ವಶಾಸ್ತ್ರದ ಅಧ್ಯಾಪಕ ವೃತ್ತಿಗೆ ಅದೆಷ್ಟು ತೊಡಕುಗಳು ಉಂಟಾಗಬಹುದು? ನನ್ನ ಜೊತೆಗೆ ಅವಳದೂ ಇಷ್ಟು ದಿನಗಳ ಶ್ರಮ ಸಮುದ್ರದ ನೀರಿನಲ್ಲಿ ತೊಳೆದುಹೋಯಿತು. ನನ್ನ ಜೊತೆ ಅವಳೂ ತನ್ನ ಬದುಕಿನ ಒಂದೂವರೆ ವರ್ಷವನ್ನು ಕಳೆದುಕೊಳ್ಳುವಂತೆ ಮಾಡಿಬಿಟ್ಟೆನಲ್ಲ?
ಆದಿತ್ಯ ತಲೆಗೆ ಕೈ ಹೊತ್ತು ಕೂತ. ಹಾಗೇ ಕೂತೇ ಇದ್ದ ರಾತ್ರಿಯಿಡೀ. ಆದದ್ದಾಗಲಿ, ಹತ್ತೂವರೆಗೆ ತನಗಾಗಿ ಕಾಯುವ ವಿದ್ಯಾರ್ಥಿಗಳಿಗೆ ನಿರಾಸೆ ಉಂಟುಮಾಡಬಾರದು ಎಂದು ನೆಪಮಾತ್ರದ ಸ್ನಾನ ಮಾಡಿ, ಯೂನಿವರ್ಸಿಟಿ ಗೆಸ್ಟ್ಹೌಸ್ನಿಂದ ಚೆಕ್ಔಟ್ ಮಾಡಿ ಏರ್ಪೋರ್ಟ್ಗೆ ತಲಪಿದವನ ಕಣ್ಣುಗಳು ಕೆಂಪಗೆ ಊದಿಕೊಂಡಿದ್ದವು.
ಮನೆ ತಲಪಿ ಇಲ್ಲದ ಮನಸ್ಸಿನಿಂದಲೇ ಮೊಬೈಲ್ ಫೋನ್ ಆನ್ ಮಾಡಿದೊಡನೆ ಅದು ರಿಂಗಣಿಸತೊಡಗಿತು. ಅದು ಸೌತ್ ಏಶಿಯಾ ಯೂನಿವರ್ಸಿಟಿ ಗೆಸ್ಟ್ಹೌಸ್ನ ಕರೆ ಎಂದು ಟ್ರೂಕಾಲರ್ ಹೇಳಿತ್ತು, ಏನೂ ಅರ್ಥವಾಗದೆ ಕರೆ ಸ್ವೀಕರಿಸಿದ. ಅತ್ತಲಿಂದ ಬಂದದ್ದು ಆಕರ್ಷಕ ಗಂಡು ದನಿ: ನಿಮ್ಮದೊಂದು ವಸ್ತು ಕೋಣೆಯಲ್ಲಿ ಉಳಿದುಹೋಗಿದೆ. ಪುಟ್ಟ ಸೋನಿ ಟ್ರಾನ್ಸಿಸ್ಟರ್. ನಾವದನ್ನು ಈಗ ನಿಮಗೆ ಕೊರಿಯರ್ ಮಾಡಲಿದ್ದೇವೆ.
ಅಹ್! ಎಂಬ ಉದ್ಗಾರ ಆದಿತ್ಯನ ಗಂಟಲಿನಿಂದ ತಾನಾಗಿಯೇ ಹೊರಟಿತು. ಸೋನಿ ಪುಟ್ಟಿ ಅಲ್ಲೇ ಉಳಿದುಹೋಗಿದ್ದಾಳೆ! ನನಗವಳ ನೆನಪೇ ಇಲ್ಲ! ಸಾವರಿಸಿಕೊಂಡು ಧನ್ಯವಾದ ಹೇಳಿದ.
ಫೋನ್ ಕೆಳಗಿಡುತ್ತಿದ್ದಂತೆ ಅದು ಮತ್ತೆ ರಿಂಗಣಿಸಿತು. ಈಗ ಪ್ರೊ. ಸುಧೀರಾ ರಾವತ್ ಅವರ ಕರೆ. ಚಿಂತೆ ಬೇಡ. ನಮ್ಮ ಕೆರಿಯರ್ನಲ್ಲಿ ಅಷ್ಟೇಕೆ ಜೀವನದಲ್ಲಿ ಸಹ ಇಂಥವು ಸಹಜ. ಅವರದು ಸಮಾಧಾನಿಸುವ ದನಿ. ಆ ಇಸ್ತಾಂಬುಲ್ ಇನ್ಸ್ಟಿಟ್ಯೂಟ್ ಹೇಳೋದನ್ನ ನನಗ್ಯಾಕೋ ಒಪ್ಪೋದಿಕ್ಕೆ ಆಗ್ತಿಲ್ಲ. ಆದಿತ್ಯ ಸೋತ ದನಿ ಎಳೆದ.
ನಾವದನ್ನ ಒಪ್ಕೊಳ್ಲೇಬೇಕು. ಸುಧೀರಾ ರಾವತ್ ಅವರದು ಇನ್ನಷ್ಟು ಮೃದುವಾದ ದನಿ. ತಿಂಗಳ ಹಿಂದೆಯಷ್ಟೇ ಪತಿಯನ್ನು ಕಳೆದುಕೊಂಡ ಆ ಮಧ್ಯವಯಸ್ಕ ವಿದ್ವಾಂಸೆಯ ಮಾತನ್ನು ನಿರಾಕರಿಸಲು ಅವನಿಗೇಕೋ ಆಗಲಿಲ್ಲ.
ಪತಿಯ ದುರಂತ ಮರಣದಿಂದ ಕಂಗೆಟ್ಟ ಡಾ. ಸುಧೀರಾ ರಾವತ್ ತಮ್ಮ ನೋವನ್ನು ಪಕ್ಕಕ್ಕಿಟ್ಟು ಆದಿತ್ಯನ ನೆರವಿಗೆ ಬಂದಿದ್ದರು. ಅದರಿಂದ ತಮ್ಮ ಮೃತ ಪತಿಯ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎಂದವರ ಮಾತು. ಶಿವಲಿಂಗವನ್ನು ಪ್ರೊ. ರಾವತ್ ಹೇಳಿದಂತೆ ಲಕ್ನೋದ ಬೀರ್ಬಲ್ ಸಾಹ್ನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾಲಿಯೋಬಾಟನಿಗೂ ಕಳುಹಿಸುವುದು ಬೇಡ, ಅಪ್ಪಾಜಿ ಸೂಚಿಸಿದಂತೆ ಕೋಲಪನ್ ಹೇಗನ್ ಇನ್ಸ್ಟಿಟ್ಯೂಟ್ ಆಫ್ ಮರೀನ್ ಆರ್ಕಿಯಾಲಜಿಗೂ ಕಳಿಸುವುದು ಬೇಡ ಎಂದು ಆಸಕ್ತಿ ಕಳೆದುಕೊಂಡ ಆದಿತ್ಯನನ್ನು ಸಮಾಧಾನಿಸಿ ಧೈರ್ಯ ತುಂಬಿದ್ದೇ ಡಾ. ಸುಧೀರಾ ರಾವತ್. ತಾವೇ ಮುತುವರ್ಜಿ ವಹಿಸಿ, ತಮ್ಮ ಪರಿಚಯದ ವಿದ್ವಾಂಸರ ಸಹಕಾರದಿಂದ ಶಿವಲಿಂಗವನ್ನು ತುರ್ಕಿಯ ಇಸ್ತಾಂಬುಲ್ ಇನ್ಸ್ಟಿಟ್ಯೂಟ್ ಆಫ್ ಮರೀನ್ ಆರ್ಕಿಯಾಲಜಿಗೆ ಕಳುಹಿಸಿದ್ದರು. ಅದಕ್ಕಾಗಿ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದಿಂದ ಅಗತ್ಯ ಪರವಾನಗಿಯನ್ನೂ ಶ್ರಮವಹಿಸಿ ಪಡೆದುಕೊಂಡಿದ್ದರು. ಅಲ್ಲಿಂದ ಬಂದ ವರದಿ ಅವರಿಗೂ ಬೇಸರ ತಂದಿತ್ತು. ಪತಿಯ ಕನಸುಗಳೂ ಹೀಗೆ ಮಣ್ಣುಗೂಡಿದ್ದು ಅವರಿಗೆ ನಿರಾಸೆ ತಂದದ್ದು ಸಹಜವೇ. ಆದರೆ ಅದನ್ನು ತಾಳಿಕೊಳ್ಳಬಲ್ಲ ಪ್ರಬುದ್ಧೆ ಅವರು, ಉದಯೋನ್ಮುಖ ವಿದ್ವಾಂಸನನ್ನು ಸಮಾಧಾನಿಸುವ ತಾಯಿ ಹೃದಯ ಅವರದು.
* * *
ಆದಿತ್ಯನಿಗೆ ಅಚ್ಚರಿಯಾಗುವಂತೆ, ರಾಜ್ಯದ ಲಿಬರಲ್-ಪ್ರೋಗ್ರೆಸ್ಸಿವ್-ಸೆಕ್ಯೂಲರ್ ಮುಖ್ಯಮಂತ್ರಿ ಉತ್ಸಾಹದಿಂದ ಮಾಧ್ಯಮದೊಂದಿಗೆ ಹಂಚಿಕೊಂಡ, ಬಿಬಿಸಿ ತರಾತುರಿಯಲ್ಲಿ ಬಿತ್ತರಿಸಿದ ಸುದ್ದಿ ಸಹೋದ್ಯೋಗಿಗಳಾರಿಗೂ ಇನ್ನೂ ತಲಪಿರಲಿಲ್ಲ! ಅವನೂ ಬಾಯಿ ತೆರೆಯಲಿಲ್ಲ. ಅಂದಿನ ಎರಡೂ ತರಗತಿಗಳು ಸಹಜವಾಗಿಯೇ ಇರುವಂತೆ ಮಾಡಲು ಅವನು ತುಸು ಪ್ರಯಾಸ ಪಡಲೇಬೇಕಾಯಿತು. ನೀಹಾರಿಕಾಳಿಂದ ಯಾವುದೇ ಸುದ್ದಿ ಇಲ್ಲ. ಕರೆ ಮಾಡಬೇಕೆಂದು ಅವನಿಗೂ ಅನಿಸಲಿಲ್ಲ. ಶಿವಲಿಂಗದ ವಿಷಯವನ್ನು ಅವಳೊಂದಿಗೆ ಪ್ರಸ್ತಾಪಿಸುವ ಧೈರ್ಯ ಅವನಿಗಿರಲಿಲ್ಲ ಅಂದರೇ ಸರಿ.
ಮಧ್ಯಾಹ್ನ ಲಂಚ್ ಬೇಕೆನಿಸದೆ ಅನ್ಯಮನಸ್ಕನಾಗಿ ಛೇಂಬರ್ನಲ್ಲಿ ಕುಳಿತಿದ್ದಾಗ ಬಾಗಿಲು ನೂಕಿ ಒಳಗೆ ತಲೆ ಹಾಕಿದ ಎಚ್ಓಡಿ ಪ್ರೊ. ಡೇವಿಡ್ ಲಾಜರಸ್, ಓಹೋ, ಸೆಮಿನಾರ್ ಮುಗಿಸಿ ಬಂದಾಯ್ತಾ! ಎಂದು ಕೃತಕ ಅಚ್ಚರಿ ಪ್ರದರ್ಶಿಸಿ, ನಾಳೆ ಇಂಟರ್ವ್ಯೂ ಇದೆಯಲ್ಲ? ಅಟೆಂಡ್ ಮಾಡ್ತೀರಾ ಹೇಗೆ? ಎಂದು ಪ್ರಶ್ನಿಸಿದರು. ಪ್ರಶ್ನೆಯ ಧಾಟಿ ಯಾಕೆ ವ್ಯರ್ಥ ಶ್ರಮ ತಗೋತೀಯ? ಎನ್ನುವಂತಿತ್ತು. ಇಸ್ತಾಂಬುಲ್ನಿಂದ ಹೊರಟ ವರದಿ ತಡವಾಗಿಯಾದರೂ ಅವರಿಗೆ ತಲಪಿರುವುದು ಸ್ಪಷ್ಟವಾಗಿತ್ತು.
ಯಾಕೋ ಆ ಕ್ಷಣವೇ ನೀಹಾರಿಕಾಳ ಜೊತೆ ಮಾತಾಡಬೇಕು ಅನಿಸಿತು. ಅವಳಿಗಿನ್ನೂ ವಿಷಯ ತಲಪಿಲ್ಲವೆ? ತಲಪಿಲ್ಲ ಅಂದರೆ ತಿಳಿಸುವುದು ತನ್ನ ಜವಾಬ್ದಾರಿ ಎಂಬ ಅರಿಯೂ ಗಾಢವಾಗಿ ತಟ್ಟಿತು. ಕರೆ ಮಾಡಿದ. ಆದರೆ ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ಅಚ್ಚರಿಗೊಂಡು ಅರ್ಧ ಗಂಟೆಯ ನಂತರ ಮತ್ತೆ ಅವಳ ನಂಬರ್ ಒತ್ತಿದ. ಆಗಲೂ ಅದು ಸ್ವಿಚ್ ಆಗಿಯೇ ಇತ್ತು. ಅವನಿಗೆ ಗಾಬರಿ. ಅವಳು ಕ್ಷೇಮವಾಗಿದ್ದಾಳೆಯೆ?
ಅವಳ ಡಿಪಾರ್ಟ್ಮೆಂಟ್ ಆಫೀಸ್ಗೆ ಕರೆ ಮಾಡಿ, ಅವಳ ಛೇಂಬರ್ನ ಇಂಟರ್ಕಾಂಗೆ ಕನೆಕ್ಟ್ ಮಾಡಲು ಕೇಳಿಕೊಂಡ. ಆಗ ಬಂದ ಉತ್ತರ, ನೀಹಾರಿಕಾ ಎರಡು ದಿನಗಳು ಯೂನಿವರ್ಸಿಟಿಗೆ ರಜೆ ಹಾಕಿದ್ದಾಳೆ, ಬೆಳಗ್ಗೆ ತನ್ನೂರಿಗೆ ಹೊರಟಳು ಅಂತ.
ನೀಹಾರಿಕಾ ಎರಡು ದಿನಗಳು ರಜೆ ಹಾಕಿ ಮನೆಗೆ ಹೋಗಿದ್ದಾಳೆ, ಅವಳ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ! ಇದು ತೀರಾ ಅಸಹಜ.
ಆದಿತ್ಯನ ಆತಂಕ ಹೆಚ್ಚಿ, ತಾಳ್ಮೆ ಕುಗ್ಗಿತು. ನೇರ ನಾರಾಯಣ ಕಲ್ಯಾಣಪುರ ಅವರ ನಂಬರ್ ಅನ್ನೇ ಒತ್ತಿದ. ತಕ್ಷಣ ಉತ್ತರಿಸಿದ ಅವರು ಹೇಳಿದ್ದು ಮಗಳು ಮಧ್ಯಾಹ್ನವೇ ಊರಿಗೆ ಬಂದಳು, ಮುಂಬೈನಿಂದ ಬಂದಿರುವ ಯಾರೋ ಒಬ್ಬರ ಜೊತೆ ಈಗಷ್ಟೇ ತಮ್ಮ ರೆಸಾರ್ಟ್ನ ಡೈನಿಂಗ್ಹಾಲ್ನಲ್ಲೇ ಟೀ ಕುಡಿದು, ಏನೋ ಮುಖ್ಯವಾದದ್ದು ಮಾತಾಡುವುದಿದೆ ಎಂದು ಹೇಳಿ ಬೀಚ್ನತ್ತ ಹೋದಳು ಎಂದು. ಯಾರು ಅದು ಎಂಬ ಪ್ರಶ್ನೆಗೆ ಬಂದ ಉತ್ತರ – ಗೊತ್ತಿಲ್ಲಪ್ಪ. ಅವಳದೇ ವಯಸ್ಸಿನ ಯುವಕ. ಹಳೇ ಪರಿಚಯ ಅಂತಿದ್ಲು.
ಆದಿತ್ಯ ನಿದ್ದೆಯಿಲ್ಲದೇ ಕಳೆದ ಎರಡನೆಯ ರಾತ್ರಿ ಅದು.
ಬೆಳಗ್ಗೆ ಎದ್ದಾಗ ಏನು ಮಾಡಬೇಕೆಂದೇ ಅವನಿಗೆ ತೋಚಲಿಲ್ಲ. ಇಂಟರ್ವ್ಯೂಗೆ ಹೋಗಬಾರದು, ಎಚ್ಓಡಿಯಿಂದ ಎಲ್ಲರ ಮುಂದೆ ಅವಮಾನಿತನಾಗುವುದು ಬೇಡ ಎಂದು ನಿನ್ನೆಯೇ ನಿರ್ಧಾರ ತೆಗೆದುಕೊಂಡಾಗಿತ್ತು. ರಜಾ ಹಾಕಿ, ತನ್ನಿಷ್ಟದ ಫ್ಯಾಂಟಸಿ ಕಾದಂಬರಿಕಾರ ಬ್ರ್ಯಾಂಡೆನ್ ಸ್ಯಾಂಡರ್ಸನ್ನ ಹೊಸ ಪುಸ್ತಕವನ್ನು ಕಿಂಡಲ್ನಲ್ಲಿ ಖರೀದಿಸಿ ಓದಬೇಕೆಂದುಕೊಂಡ. ವಾಸ್ತವ ಹೀಗೆ ಎಲ್ಲ ಕಡೆಯಲ್ಲೂ ವಿರುದ್ಧವಾಗಿ ನಿಂತಾಗ ತನಗೆ ಸಾಂತ್ವನ ನೀಡುವುದು ಫ್ಯಾಂಟಸಿಯೇ ಎಂದುಕೊಂಡು ಶುಷ್ಕ ನಗೆ ನಕ್ಕ.
* * *
ಸ್ನಾನ ಮುಗಿಸಿ ಹೊರಬರುತ್ತಿದ್ದಂತೆ ಕರೆಗಂಟೆ ಬಾರಿಸಿತು. ಟವಲ್ ಸುತ್ತಿಕೊಂಡೇ ಹೋಗಿ ಬಾಗಿಲು ತೆರೆದರೆ ಕಂಡದ್ದು ನೀಹಾರಿಕಾ. ಜೊತೆಗೊಬ್ಬ ಸದೃಢ ದೇಹದ, ಆಕರ್ಷಕ ರೂಪಿನ ತರುಣ.
ಆದಿತ್ಯ ಕಣ್ಣರಳಿಸಿದ. ಮರುಕ್ಷಣ ವಾಸ್ತವ ಅರಿವಾಗಿ, ಒಳಬರಲು ಅವರಿಬ್ಬರಿಗೂ ಹೇಳಿ ಬೆಡ್ ರೂಂಗೆ ನಡೆದ.
ಅವನು ಉಡುಪು ಧರಿಸಿ ಹೊರಬಂದಾಗ ಅವರಿಬ್ಬರೂ ಸೋಫಾದಲ್ಲಿ ಕೂತು ಏನೋ ಮಾತಾಡಿಕೊಂಡು ನಗುತ್ತಿದ್ದರು. ತರುಣನ ತೊಡೆಯ ಮೇಲೆ ಅಂದಿನ ವಾರ್ತಾಪತ್ರಿಕೆ. ಅದು ಬೆಳಗ್ಗೆ ತಾನು ಎತ್ತಿಕೊಳ್ಳಲು ಮರೆತ ತನ್ನದೇ ಪತ್ರಿಕೆ ಎಂದು ಆದಿತ್ಯನಿಗೆ ಗುರುತಾಯಿತು. ಟೀ ಆಯಿತೇ ಸರ್? ಅಂದಳು ನೀಹಾರಿಕಾ ಸಹಜ ದನಿಯಲ್ಲಿ. ಹ್ಞಾ ಎಂದು ಸಣ್ಣಗೆ ಹೇಳಿ, ನಿಮ್ಮಿಬ್ಬರದು? ಅಂದ ಆದಿತ್ಯ. ನೀಹಾರಿಕಾ ನಕ್ಕಳು. ಇಂದು ಟೀ ಇರಲಿ, ಬ್ರೇಕ್ಫಾಸ್ಟ್ ಸಹ ಬೇಡ, ಏನೂ ಬೇಡ ಅನಿಸಿಬಿಟ್ಟಿದೆ ಸರ್. ಖುಷಿಯಿಂದ ಹೊಟ್ಟೆ ತುಂಬಿಹೋಗಿದೆ ಅಂದಳು. ಮುಖ ಕಾಂತಿಯಿಂದ ಹೊಳೆಯುತ್ತಿತ್ತು.
ಆದಿತ್ಯನಿಗೆ ಅಚ್ಚರಿ. ಅವಳನ್ನೇ ಬೆರಗಿನಿಂದ ನೋಡಿದ. ನಮ್ಮ ಶಿವಲಿಂಗದ ಕಥೆ? ಅವಳು ಆರಂಭಿಸಿ ನಿಲ್ಲಿಸಿದಳು. ಮುಖದಲ್ಲಿ ಇನ್ನಷ್ಟು ಅರಳಿದ ನಗೆ.
ಆ ಇಸ್…ಇಸ್ತಾಂಬುಲ್? ಆದಿತ್ಯನ ನಾಲಿಗೆ ತಡವರಿಸಿ ನಿಂತುಬಿಟ್ಟಿತು. ಆ ಇನ್ಸ್ಟಿಟ್ಯೂಟ್ ವಿಶ್ವಾಸಾರ್ಹ ಸಂಸ್ಥೆ. ಅದು ಸರಿಯಾಗಿಯೇ ಹೇಳಿದೆ. ನೀಹಾರಿಕಾಳದು ಈಗ ನಗೆ ನಿಂತ ಗಂಭೀರ ದನಿ.
ಅವಳೇನು ಹೇಳುತ್ತಿದ್ದಾಳೆ ಎಂದು ಆದಿತ್ಯನಿಗೆ ಅರ್ಥವಾಗಲಿಲ್ಲ. ಮನಸ್ಸು ಏಕಾಏಕಿ ವ್ಯಗ್ರಗೊಂಡಿತು. ಆ ವ್ಯಗ್ರತೆ ನಿನ್ನೆ ಮಧ್ಯಾಹ್ನ ಎಚ್ಓಡಿಯವರ ಬಗ್ಗೆ ಮೂಡಿದ್ದಕ್ಕಿಂತಲೂ ನೂರುಪಟ್ಟು ಅಧಿಕ.
ಅದಾವುದರತ್ತಲೂ ಗಮನವಿಲ್ಲದಂತೆ ನೀಹಾರಿಕಾ ಮಾತು ಹರಿಸಿದಳು: ತಮಗೆ ಸಿಕ್ಕಿದ್ದನ್ನ ಅಲ್ಲಿನ ವಿಜ್ಞಾನಿಗಳು ಸರಿಯಾಗಿಯೇ ಪರೀಕ್ಷೆ ಮಾಡಿದ್ದಾರೆ. ಫಲಿತಾಂಶವೂ ಸರಿಯಾಗೇ ಸಿಕ್ಕಿದೆ. ಯಾಕಂದ್ರೆ ನಾವು ಅಲ್ಲಿಗೆ ಕಳಿಸಿದ್ದೆ ಒಂದು ಸಾವಿರದ ಇನ್ನೂರು ವರ್ಷಗಳಷ್ಟೇ ಹಳೆಯದಾದ ಶಿವಲಿಂಗ, ಗುಜರಾತ್ನ ಸಮುದ್ರತೀರದಲ್ಲಿ ನಾಲ್ಕು ತಿಂಗಳ ಹಿಂದೆ ಸಿಕ್ಕಿದ್ದು.
ವ್ಹಾಟ್! ಅದಿತ್ಯ ಕಿರುಚಿಬಿಟ್ಟ. ನೀಹಾರಿಕಾ ಪಕ್ಕದಲ್ಲಿದ್ದ ತರುಣನತ್ತ ಮಾರ್ಮಿಕವಾಗಿ ನೋಡಿದಳು. ಅವನು ಒಮ್ಮೆ ಕೃತಕವಾಗಿ ಕೆಮ್ಮಿ ಆರಂಭಿಸಿದ:ನಾನು ಅನಿರುದ್ಧ ಗಂಗೊಳ್ಳಿ. ನೀಹಾರಿಕಾಳ ಕಾಲೇಜು ಸಹಪಾಠಿ. ಈಗ ರಾನಲ್ಲಿ, ಹಾಗಂದ್ರೆ ಗೊತ್ತಲ್ಲ, ರೀಸರ್ಚ್ ಅಂಡ್ ಅನ್ಯಾಲಿಸಿಸ್ ವಿಂಗ್, ಅದರಲ್ಲಿದ್ದೀನಿ. ನನ್ನ ಬಗ್ಗೆ ಇಷ್ಟು ಸಾಕು. ವಿಷಯಕ್ಕೆ ಬರ್ತೀನಿ. ಪ್ರೊ. ಹಿತೇಶ್ ರಾವತ್ ಅವರ ಮರಣ ಅಕಸ್ಮಿಕ ಅಲ್ಲ ಅಂತ ನಮಗೆ ಅನುಮಾನ ಬಂತು. ಶೋಧನೆಗೆ ಇಳಿದ್ವಿ. ಅವರು ಪಾಕಿಸ್ತಾನಕ್ಕೆ ಹೋಗೋದಕ್ಕೆ ವ್ಯವಸ್ಥೆ ಮಾಡಿದ ಆರ್ಕಿಯಾಲಜಿಸ್ಟ್ ಫಯಾಜ್ ಅಹ್ಮದ್ ರಿಜ್ವಿ ಅವರಿಂದ ಭಾರತದಲ್ಲಿ ಮೂವರಿಗೆ ಕಳೆದ ಆರೇಳು ತಿಂಗಳಿಂದ ನಿರಂತರವಾಗಿ ದೂರವಾಣಿ ಸಂಪರ್ಕ ನಡೀತಾ ಇರೋದು ನಮ್ಮ ಗಮನಕ್ಕೆ ಬಂತು. ಆ ಮೂವರಲ್ಲಿ ಇಬ್ಬರು ನಿಮಗೂ ಗೊತ್ತಿರೋರೆ. ನಮ್ಮದೇ ಖ್ಯಾತ ಪುರಾತತ್ತ್ವಶಾಸ್ತ್ರಜ್ಞ ಪ್ರೊ. ಇಷಾಕ್ ಹಬೀಬ್ ಅನ್ಸಾರಿ ಮತ್ತು ಸದಾ ದೊಡ್ಡದಾಗಿ ಸದ್ದುಮಾಡೋ ಪತ್ರಕರ್ತೆ ತೀಸ್ತಾ ಪಾಟಣಕರ್. ಇವರಿಬ್ರೂ ಈ ದೇಶದ ಅತಿ ದೊಡ್ಡ ಸೋ-ಕಾಲ್ಡ್ ಲಿಬರಲ್-ಪ್ರೋಗ್ರೆಸ್ಸಿವ್ ಧ್ವನಿಗಳು ಅನ್ನೋದು ನಿಮಗೆ ಗೊತ್ತೇ ಇದೆ. ಆ ಫೋನ್ ಕರೆಗಳ ಬಗ್ಗೆ ಶೋಧನೆ ಮಾಡಿದಾಗ ನಮಗೆ ತಿಳಿದದ್ದು ನೀವು ಗಂಗಾವಳಿ ಅಳಿವೆ ಹತ್ತಿರದ ಸಮುದ್ರಭಾಗದಲ್ಲಿ ನಡೆಸ್ತಾ ಇರೋ ಶೋಧ ಪಾಕಿಸ್ತಾನಿಗಳ ನಿದ್ದೆಗೆಡಿಸಿದೆ ಅನ್ನೋದು. ನೋಡಿ, ಆ ಹಾಳು ಪಾಕಿಸ್ತಾನಕ್ಕೆ ತನ್ನದು ಅಂತ ಯಾವ ಆಸ್ಮಿತೆಯೂ ಇಲ್ಲ. ಎಲ್ಲ ನಮ್ಮ ಭಾರತದಿಂದ ಅಥವಾ ಆಫಘಾನಿಸ್ತಾನದ ಇತಿಹಾಸ ಮತ್ತು ಸಂಸ್ಕೃತಿಗಳಿಂದ ಕದ್ದದ್ದೇ. ಮುಖ್ಯ ವಿಷಯ ಏನು ಅಂದ್ರೆ ಸಿಂಧೂ ಕಣಿವೆಯ ನಾಗರಿಕತೆಯ ಬಗ್ಗೆ ಅವರಿಗೆ ಯಾವ ಪ್ರೀತಿಯಾಗಲಿ ಅಭಿಮಾನವಾಗಲಿ ಇಲ್ಲ. ಅವರು ಅದನ್ನು ಉಪಯೋಗಿಸಿಕೊಳ್ಳೋದು ಜಗತ್ತಿನ ಅತಿ ಪುರಾತನ ನಾಗರಿಕತೆಯೊಂದರ ತೊಟ್ಟಿಲು ತಮ್ಮ ದೇಶ ಅಂತ ತೋರಿಸಿಕೊಳ್ಳೋಕೆ. ತಮ್ಮಲ್ಲಿ ಜನವಸತಿ, ನಗರನಿರ್ಮಾಣ ಭಾರತೀಯರಿಗಿಂತಲೂ ಪುರಾತನ, ಐತಿಹಾಸಿಕವಾಗಿ ತಮ್ಮ ದೇಶ ಭಾರತಕ್ಕಿಂತಲೂ ಪ್ರಾಚೀನ ಅಂತ ಹೇಳಿಕೊಳ್ಳೋಕೆ ಅಷ್ಟೇ. ಆದ್ರೆ ನಿಮ್ಮ ಸಂಶೋಧನೆ ಅದಕ್ಕೂ ಕಲ್ಲು ಹಾಕ್ತಿದೆ ಅಂತ ಅವರು ಕಂಗಾಲಾದ್ರು. ಅವರ ಸಿಂಧು ನಾಗರಿಕತೆಗೆ ಮೂಲ ನಮ್ಮ ಕರ್ನಾಟಕ. ಹೀಗಾಗಿ ಭಾರತ ಜಗತ್ತಿನ ಎಲ್ಲ ನಾಗರಿಕತೆಗಳಿಗಿಂತಲೂ ಪ್ರಾಚೀನವಾದ ದೇಶ ಅಂತ ಹೆಸರು ಗಳಿಸೋಕೆ ಹೆಚ್ಚು ಕಾಲ ಬೇಕಾಗಲ್ಲ ಅಂತ ಅವ್ರು ಹೆದರಿದ್ದು. ಇದನ್ನು ತಡೆಯೋದಕ್ಕೆ ಅವರು ಹೂಡಿದ ಹೂಟ ಎರಡು ಹಂತಗಳದ್ದು. ಮೊದಲನೇದು ಏನು ಅಂದ್ರೆ ಪ್ರೊ. ರಾವತ್ ಅವರನ್ನೇ ಇಲ್ಲವಾಗಿಸಿ ನಿಮ್ಮ ಸಂಶೋಧನೆಗಿದ್ದ ದೊಡ್ಡ ಆಧಾರಸ್ತಂಭವನ್ನೇ ಉರುಳಿಸಿ ನಿಮ್ಮ ಕೈಗಳನ್ನು ಕಟ್ಟಿಹಾಕೋದು. ಅದಕ್ಕೇ ಅವ್ರು ರಾವತ್ ಅವರ ಮೇಲೆ ಕಪಟ ಪ್ರೀತಿ ತೋರಿಸಿ ಅಲ್ಲಿಗೆ ಕರೆಸಿಕೊಂಡು ಕೊಂದುಬಿಟ್ರು. ಆದ್ರೆ ಅದೇ ಸಮಯದಲ್ಲಿ ನಿಮ್ಮ ಶಿವಲಿಂಗದ ವಿಷಯ ರಾವತ್ ಅವರ ಇಮೇಲ್ ಅನ್ನು ಹ್ಯಾಕ್ ಮಾಡ್ತಾನೇ ಇದ್ದ ಪಾಕಿಗಳ ಕಣ್ಣಿಗೆ ಬಿತ್ತು. ಆಗ ಅವರ ಸಂಚಿನ ಎರಡನೆ ಹಂತ ಆರಂಭ ಆಯ್ತು. ಅದೇನು ಅಂದ್ರೆ ನಿಮಗೆ ಸಿಕ್ಕಿದ ಶಿವಲಿಂಗ ಪ್ರಾಚೀನವೂ ಅಲ್ಲ, ಇಲ್ಲಿಯಾದೂ ಅಲ್ಲ ಅಂತ ಜಗತ್ತಿಗೆ ಸಾರಿಬಿರೋಡು. ಆ ಮೂಲಕ ನಿಮ್ಮ ಶೋಧವನ್ನು ಹಾಳುಗೆಡವಿ ನಿಲುಗಡೆಗೆ ತಂದುಬಿಡೋದು. ಅವರ ಕಮ್ಯೂನಿಕೇಷನ್ ವ್ಯವಸ್ಥೆಯೊಳಗೇ ನುಗ್ಗಿದ್ದ ನಮಗೆ ಇದು ಗೊತ್ತಾಯ್ತು. ಶಿವಲಿಂಗವನ್ನು ಲಕ್ನೋಗೆ ಕಳಿಸೋದರ ಬದಲು ತಮಗೆ ಅನುಕೂಲವಾದ ಬಗೇಲಿ ರಿಪೋರ್ಟ್ ಬರೆದು ಕೊಡಬಲ್ಲ ಇಸ್ತಾಂಬುಲ್ ಇನ್ಸ್ಟಿಟ್ಯೂಟ್ಗೆ ಕಳಿಸೋಕೆ ಆ ಖದೀಮರು ಪ್ಲಾನ್ ಮಾಡಿದ್ರು. ಪಾಕಿಸ್ತಾನ ಮತ್ತು ತುರ್ಕಿ ನಡುವೆ ರೋ ಘನಿಷ್ಟ ಸ್ನೇಹ, ಈಗಿನ ತುರ್ಕಿ ಅಧ್ಯಕ್ಷ ರೆಸೆಪ್ ತಯ್ಯಬ್ ಎರ್ದ್ವಾನ್ ಪಾಕಿಸ್ತಾನದ ಪರವಾಗಿ ಕೆಲಸ ಯಾವ ಅವಕಾಶವನ್ನೂ ಬಿಡೋದಿಲ್ಲ ಅಂತ ನಿಮಗೆ ಗೊತ್ತೇ ಇರಬೇಕಲ್ಲ. ಅದನ್ನವನು ಮಾಡ್ತಾ ಇರೋದು ಕಳೆದ ವರ್ಷ ತನ್ನ ದೇಶದ ಭಯಂಕರ ಭೂಕಂಪ ಮಾಡಿದ ಅನಾಹುತಕ್ಕೆ ಭಾರತವೇ ಮೊದಲು ಸ್ಪಂದಿಸಿ ಅಪಾರ ಸಹಕಾರ ನೀಡಿದ ಮೇಲೂ. ಇರಲಿ, ಆ ಜನರ ಜಾಯಮಾನವೇ ಅದು. ನಮ್ಮ ವಿಷಯಕ್ಕೆ ಬರೋಣ. ಶಿವಲಿಂಗವನ್ನು ಕಾಲನಿರ್ಣಯಕ್ಕಾಗಿ ಇಸ್ತಾಂಬುಲ್ಗೆ ಕಳಿಸೋದಕ್ಕೆ ನಿಮ್ಮನ್ನು ಒಪ್ಪಿಸಬೇಕಾಗಿತ್ತು. ಅದಕ್ಕಾಗಿ ಅವ್ರು ಹಿಡಿದದ್ದು ಯಾರನ್ನ ಗೊತ್ತಾ? ಡಾ. ಸುಧೀರಾ ರಾವತ್ ಅವರನ್ನೇ.
ಅಂ! ಆದಿತ್ಯ ಬೆಚ್ಚಿಬಿದ್ದ. ಅವನಿಂದ ಮಾತೇ ಹೊರಡಲಿಲ್ಲ. ಅನಿರುದ್ಧ ಅವನ ಮುಂಗೈ ತಟ್ಟಿದ. ಇದನ್ನು ನಂಬೋದು ನಿಮಗೆ ಕಷ್ಟ ಅಂತ ಗೊತ್ತು. ಆದ್ರೆ ನಡೆದದ್ದು ಇದೇ. ಪ್ರೊ. ಹಿತೇಶ್ ರಾವತ್ ವಸ್ತುನಿಷ್ಟ ವಿದ್ವಾಂಸ. ಜೊತೆಗೆ ರಾಷ್ಟ್ರೀಯವಾದಿ. ಆದ್ರೆ ಸುಧೀರಾ ರಾವತ್ರದು ಬೇರೆಯೇ ನಡವಳಿಕೆ. ಅವರ ಒಲವು ಎಡಪಂಥಕ್ಕೆ. ಆ ಜನ ತಮಗೇ ಒಂದು ಚಂದದ ಹಣೆಪಟ್ಟಿ ಹಚ್ಚೊಂಡ್ಕಿದಾರೆ, ಲಿಬರಲ್-ಪ್ರೋಗ್ರೆಸ್ಸಿವ್ ಅಂತ. ಹೀಗಾಗಿ ಸುಧೀರಾ ಅವರ ಸಂಪರ್ಕ, ಒಡನಾಟ ಸಹ ಆ ಸೋ-ಕಾಲ್ಡ್ ಲಿಬರಲ್-ಪ್ರೋಗ್ರೆಸ್ಸಿವ್ ಜನರ ಜೊತೆಯೇ. ಇದು ನಿಮ್ಮ ಪ್ರೊ. ಹಿತೇಶ್ ರಾವತ್ ಅವರಿಗೆ ಸಮ್ಮತ ಇರ್ಲಿಲ್ಲ. ಆದ್ರೆ ಅದನ್ನು ದೊಡ್ಡದು ಮಾಡಿ ಸಂಸಾರಾನ ಹಾಳು ಮಾಡಿಕೊಳ್ಳದಷ್ಟು ಪ್ರಬುದ್ಧರು ಅವ್ರು. ಸುಧೀರಾ ಅವರಿಗೂ ಪತಿಯ ಹೆಸರಿನ ಮಹತ್ತ್ವ ಗೊತ್ತಿತ್ತು. ಅದನ್ನ ಕಳಕೊಳ್ಳೋದಿಕ್ಕೆ ಅವ್ರೂ ಸಿದ್ಧ ಇರ್ಲಿಲ್ಲ.
ತರುಣ ಬೇಹುಗಾರಿಕಾ ಅಧಿಕಾರಿ ಒಮ್ಮೆ ಇಬ್ಬರತ್ತಲೂ ನೋಟ ಹೊರಳಾಡಿಸಿ ಮುಂದುವರಿಸಿದ, ಆದಿತ್ಯ ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದ. ದುರಂತ ಅಂದ್ರೆ ನಮ್ಮ ಅಕಾಡೆಮಿಕ್ ಫೀಲ್ಡ್ ಮತ್ತು ಮೀಡಿಯಾದಲ್ಲಿ ಅವರೇ ತುಂಬಿಕೊಂಡಿದ್ದಾರೆ. ಈ ಕ್ಷೇತ್ರಗಳು ಈಗಲೂ ಅವರ ಹಿಡಿತದಲ್ಲೇ ಇವೆ. ಇದೆಲ್ಲ ಪಾಕಿಗಳಿಗೆ, ಇಲ್ಲಿರೋ ಅವರ ಕೈಯಾಳುಗಳಿಗೆ ಚೆನ್ನಾಗೇ ಗೊತ್ತು. ಸುಧೀರಾ ಅವರಿಗೆ ಹಣ, ಜೊತೆಗೆ ವಿರೋಧಪಕ್ಷಗಳ ಅಧಿಕಾರ ಇರೋ ವೆಸ್ಟ್ ಬೆಂಗಾಲ್, ತೆಲಂಗಾಣ ಅಥವಾ ನಮ್ಮದೇ ಕರ್ನಾಟಕದ ಒಂದು ಪ್ರತಿಷ್ಠಿತ ಯೂನಿವರ್ಸಿಟೀಲಿ ಪ್ರೊಫೆಸರ್ ಹುದ್ದೆಯ ಆಮಿಷ ಒಡ್ಡಿದ್ದು. ಇದನ್ನು ಅವು ಮಾಡಿಸಿದ್ದು ಪ್ರೊ. ಇಷಾಕ್ ಹಬೀಬ್ ಅನ್ಸಾರಿ ಮತ್ತು ತೀಸ್ತಾ ಪಾಟಣಕರ್ ಮೂಲಕ. ಅವರ ಜತೆ ಸುಧೀರಾರಿಗೆ ಒಳ್ಳೇ ಸಂಪರ್ಕ ಮೊದಲಿನಿಂದ್ಲೇ ಇತ್ತು. ಅವರಿಗೆ ಅಮಿಷ ಒಡ್ಡಿ ಕೆಲಸ ಮಾಡಿಸಿಕೊಳ್ತಾನೇ ಆ ಖದೀಮರು ಅವರ ಪತಿಯ ಹತ್ಯೆಯಾಗಿದೆ ಅನ್ನೋದನ್ನು ಅವರಿಂದ ಮುಚ್ಚಿಟ್ರು. ಅದು ಆಕಸ್ಮಿಕ ಅಂತ ಇನ್ನಷ್ಟು ಬಲವಾಗಿ ನಂಬಿಸಿಬಿಟ್ರು.
ಆದಿತ್ಯನಿಗೆ ಈಗ ವಿಷಯದ ಚಿತ್ರ ಸಾಕಷ್ಟು ಸಿಕ್ಕಿತ್ತು. ತನ್ನ ಗುರುಗಳ ಬಗ್ಗೆ ಮರುಗಿದ. ಗುರು ಪತ್ನಿಯ ಬಗ್ಗೆ ಯಾವ ಅಭಿಪ್ರಾಯ ತಳೆಯಬೇಕು ಎನ್ನುವುದು ಅವನಿಗೆ ಆ ಕ್ಷಣದಲ್ಲಿ ಸಾಧ್ಯವಾಗಲಿಲ್ಲ. ಅದನ್ನು ಪಕ್ಕಕ್ಕಿರಿಸಿ ತನ್ನ ಇನ್ನೊಂದು ಅನುಮಾನವನ್ನು ಹೊರಹಾಕಿದ: ಆ ಜನರ ಈ ಸಂಚಿಗೆ, ಐ ಮೀನ್, ಸುಧೀರಾರಿಗೆ ಪ್ರೊಫೆಸರ್ ಹುದ್ದೆ ಕೊಡಿಸೋದು ಆ ಜನಕ್ಕೆ ಹೇಗೆ ಸಾಧ್ಯ? ನಮ್ಮ ಸರ್ಕಾರ ಇದಕ್ಕೆ ಅವಕಾಶ ಕೊಡುತ್ತಾ?
ಅನಿರುದ್ಧ ನಕ್ಕುಬಿಟ್ಟ. ಹಿಂದೆ ಆಗಿದ್ರೆ ಸುಧೀರಾರನ್ನ ಅನಾಮತ್ತಾಗಿ ಎತ್ತಿ ಡೆಲ್ಲೀನಲ್ಲೇ ಜೆಎನ್ಯನಂಥಾ ಸೆಂಟ್ರಲ್ ಯೂನಿವರ್ಸಿಟೀಲೇ ಕೂರಿಸಿಬಿಡ್ತಿದ್ರು. ಆದ್ರೆ ಈಗ ಸೆಂಟರ್ನಲ್ಲಿ ಅವರ ಸರ್ಕಾರ ಇಲ್ಲದ ಕಾರಣ ಅದು ಸಾಧ್ಯ ಇಲ್ಲ. ಅದಕ್ಕಾಗೇ ಅವ್ರ್ರು ತಮಗೆ ಅನುಕೂಲವಾದ ಸರ್ಕಾರಗಳಿರೋ ರಾಜ್ಯಗಳಲ್ಲಿರೋ ಸ್ಟೇಟ್ ಯೂನಿವರ್ಸಿಟಿಗಳನ್ನು ಆಶ್ರಯಿಸ್ತಾ ಇರೋದು. ಅವರ ಯೋಜನೆಗೆ ಆ ರಾಜ್ಯಸರ್ಕಾರಗಳು ಖುಷಿಯಿಂದ ಸಹಕಾರ ನೀಡುತ್ತವೆ. ಸುಧೀರಾ ಅವರನ್ನ ರಾಜ್ಯಸಭೆ ಮೆಂಬರ್ ಮಾಡೋ ಸಾಧ್ಯತೇನೂ ಇದೆ. ಮೀಡಿಯಾದ ಜನ, ಅವರ ಜತೆಗೆ ಸೋಷಿಯಲ್ ಸೈನ್ಸಸ್ ಹೂಮ್ಯಾನಿಟೀಸ್ ಫೀಲ್ಡ್ಗಳಲ್ಲಿರೋ ರಿಸರ್ಚ್ ಇನ್ಸ್ಟಿಟ್ಯೂಟ್ಗಳಂತೂ ಅವರ ಕಡೇನೇ ಇವೆ. ಸುಧೀರಾ ಅಷ್ಟೇ ಅಲ್ಲ, ತಮ್ಮ ಪರವಾದ ಯಾರನ್ನೇ ಆಗಲಿ, ಯಾವುದೇ ಸ್ಥಾನಕ್ಕೆ ಅತ್ಯಂತ ಸೂಕ್ತ ವ್ಯಕ್ತಿ ಅನ್ನೋ ಅಭಿಪ್ರಾಯಾನ ಎಲ್ಲ್ಲ ಕಡೆ ಸೃಷ್ಟಿಸೋದಕ್ಕೆ ಅವ್ರು ಪ್ರಯತ್ನಿಸ್ತಾರೆ, ಯಶಸ್ವೀನೂ ಆಗ್ತಾರೆ. ನಿಷ್ಠಾವಂತ ಯುವ ರಾ ಅಧಿಕಾರಿಯ ಮುಖದಲ್ಲಿ ವಿಷಾದದ ನಗೆ ಹರಡಿಕೊಂಡಿತು.
ಕಶ್ಮೀರ್ ಫೈಲ್ಸ್ ಫಿಲ್ಮ್ನ ಡೈಲಾಗ್ ಮರೆತುಬಿಟ್ರಾ ಸರ್ಕಾರ್ ಉನ್ಕೀ ಹೈ, ಮಗರ್ ಸಿಸ್ಟಂ ಹಮಾರಾ ಹೈ ಅಂತ! ಎಂದಳು ನೀಹಾರಿಕಾ.
ಆದಿತ್ಯ ಸೊಲ್ಲಡಗಿ ಕೂತ.
ಅನಿರುದ್ಧ ಮಾತು ಮುಂದುವರಿಸಿದ: ಪಾಕಿಗಳ ಮತ್ತವರ ಲೋಕಲ್ ಸಂಗಡಿಗ ದೇಶದ್ರೋಹಿಗಳ ಪ್ಲಾನ್ ತಿಳಿದದ್ದೇ ನಾವು ಒಂದು ಪ್ರತಿತಂತ್ರ ಮಾಡಿದ್ವಿ. ಪೂರ್ಣ ಫಲಿತಾಂಶ ಬರೋವರೆಗೆ ಸುದ್ದಿಯಾಗದ ಹಾಗೆ ನಡೆಯೋ ಪ್ಲಾನ್ ಅದು. ಅದಕ್ಕೆ ನೀಹಾರಿಕಾ ನನ್ನ ಹಳೇ ಕ್ಲಾಸ್ಮೇಟ್ ಆಗಿದ್ದು ಸಹಕಾರಿ ಆಯ್ತು. ಅಲ್ಲದೆ ಅವಳು ರಹಸ್ಯ ಕಾಪಾಡೋದ್ರಲ್ಲಿ ಎತ್ತಿದ ಕೈ. ನಿಮ್ಮಲ್ಲಿ ಆ ಗುಣ ಇಲ್ಲ ಅಂತ ಹೇಳಲ್ಲ ನಾನು. ಆದ್ರೆ ಈ ಸಂಶೋಧನ ತಂಡದ ಲೀಡರ್ ನೀವಾಗಿರೋದ್ರಿಂದ ಯಾರಾದ್ರೂ ಯಾವಾಗಲೂ ಇದರ ಬಗ್ಗೆ ನಿಮ್ಮನ್ನು ಕೇಳ್ತಾನೇ ಇರ್ತಾರೆ. ನೀವು ಬಾಯಿ ತಪ್ಪಿ ಏನಾದ್ರೂ ಹೇಳಿಬಿಡಬೋದು ಅನ್ನೋ ಹೆದರಿಕೆ ನಮಗಿತ್ತು. ನೀವಿದನ್ನು ತಪ್ಪಾಗಿ ತಿಳಿಯೋದಿಲ್ಲ ಅಂತ ನಮ್ಮ ನಂಬಿಕೆ. ಮತ್ತೆ, ನಿಮಗೆ ಒಂದು ಪ್ಲೆಸೆಂಟ್ ಸರ್ಪ್ರೈಸ್ ಕೊಡೋ ಪ್ಲಾನ್ ನೀಹಾರಿಕಾದ್ದು. ಅವನಿಗೇ ನಗೆ ತಡೆಯಲಾಗಲಿಲ್ಲ. ನೀಹಾರಿಕಾಳ ಮುಖದಲ್ಲಿ ತೆಳುವಾದ ತುಂಟ ನಗೆ. ಆದಿತ್ಯನ ತುಟಿಗಳೂ ತೆಳುನಗೆಯನ್ನು ಬೀರಿದವು. ಅನಿರುದ್ಧ ಮುಂದುವರಿಸಿದ: ಹೀಗಾಗಿ, ಶಿವಲಿಂಗವನ್ನು ಇಸ್ತಾಂಬುಲ್ಗೆ ಕಳಿಸೋಕೆ ಡಾ. ಸುಧೀರಾ ರಾವತ್ ಅವರು ನಿಮ್ಮನ್ನು ಒಪ್ಪಿಸಿದ ಕೂಡಲೇ ನಾವು ನೀಹಾರಿಕಾ ಜತೆ ಸೇರಿ ಬೇರೆ ಪ್ಲಾನ್ ಮಾಡಿದ್ವಿ. ನೀವು ಅದನ್ನ ಜೋಪಾನವಾಗಿರಲಿ ಅಂತ ನೀಹಾರಿಕಾ ಮನೇಲೇ ಬಿಟ್ಟು, ಸೆಮಿನಾರ್ಗೆ ಪೇಪರ್ ಸಿದ್ಧಪಡಿಸೋ ಆತುರದಲ್ಲಿ ಇಲ್ಲಿಗೆ ಹೊರಟುಬಂದು, ಆಮೇಲೆ ಸುಧೀರಾ ಅವರ ಮಾತಿನಂತೆ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ಸದರನ್ ಡಿವಿಜನ್ ಕಚೇರಿಗೆ ಕಳಿಸೋ ಜವಾಬ್ದಾರಿನೂ ಇವಳಿಗೇ ವಹಿಸಿದ್ದು ನಮಗೆ ಅನುಕೂಲ ಆಯ್ತು. ನಕ್ಕು ನೀಹಾರಿಕಾಳತ್ತ ನೋಡಿದ. ಅವಳು ನಗೆ ತಡೆಯುತ್ತ ದನಿ ತೆಗೆದಳು: ನಮ್ಮ ಶಿವಲಿಂಗಾನ ಲಕ್ನೋಗೂ ಕಳಿಸೋದು ಬೇಡ ಅನಿಸ್ತು. ಕೇಂದ್ರದಲ್ಲಿ ರಾಷ್ಟ್ರೀಯವಾದಿ ಸರ್ಕಾರ ಬಂದಾಗಿನಿಂದ ಪರಿಸ್ಥಿತಿ ಸುಧಾರಿಸ್ತಾ ಇದ್ರೂ ಸಹ ಸಿಸ್ಟಂ ಇನ್ನೂ ಸಾಕಷ್ಟು ಈ ದೇಶದ್ರೋಹಿಗಳದ್ದೇ. ಅವರ ಕೈ ಎಲ್ಲೆಲ್ಲಿಯವರೆಗೆ ಚಾಚಿದೆ ಅನ್ನೋ ಪೂರ್ಣ ಚಿತ್ರ ನಮಗಿನ್ನೂ ಸಿಕ್ಕಿಲ್ಲ. ಆ ಪ್ರಕಾರ ನಮ್ಮ ನಿಜವಾದ ಶಿವಲಿಂಗ ಅತಿ ರಹಸ್ಯವಾಗಿ ಕೋಪನ್ಹೇಗನ್ಗೆ ಹೋಯ್ತು, ಸಿಬಿಐ ಮೂಲಕಾನೇ. ಸೋಮನಾಥದ ಬಳಿ ಸಿಕ್ಕಿದ, ನಮ್ಮ ಕಥೇಲಿ ನಕಲಿ ಅನಿಸೋ ಶಿವಲಿಂಗ ಸುಧೀರಾ ಅವರ ಮೂಲಕ ಇಸ್ತಾಂಬುಲ್ಗೆ ಹೋಯ್ತು.
ಅನಿರುದ್ಧ ತೊಡೆಯ ಮೇಲಿದ್ದ ವಾರ್ತಾಪತ್ರಿಕೆ ಬಿಡಿಸಿದ: ಬೇಸರಕ್ಕೆ ಸಿಕ್ಕಿದ ನೀವು ನಿನ್ನೆಯಿಂದ ಈ ಪ್ರಪಂಚದಲ್ಲಿ ಏನೇನು ನಡೀತಾ ಇದೆ ಅನ್ನೋದನ್ನೇ ಗಮನಿಸಿಲ್ಲ. ಕೋಪನ್ಹೇಗನ್ ಇನ್ಸ್ಟಿಟ್ಯೂಟ್ ಆಫ್ ಮರೀನ್ ಆರ್ಕಿಯಾಲಜಿಯಿಂದ ನಿನ್ನೆ ಸಂಜೆ ರಿಪೋರ್ಟ್ ಬಂತು. ನಿಮ್ಮ ಶಿವಲಿಂಗ ಒಂಬತ್ತು ಸಾವಿರ ವರ್ಷ ಪ್ರಾಚೀನ, ಜಗತ್ತಿನಲ್ಲಿ ಇದುವರೆಗೆ ಸಿಕ್ಕಿರೋ ಶಿವಲಿಂಗಗಳಲ್ಲೆಲ್ಲ ಇದು ಅತ್ಯಂತ ಹಳೇದು. ವಿವರ ಈ ಪೇಪರ್ನಲ್ಲೇ ಇದೆ ನೋಡಿ.
ಆದಿತ್ಯ ಆತುರದಲ್ಲಿ ಪತ್ರಿಕೆಯನ್ನು ಸೆಳೆದುಕೊಂಡ. ಶಿವಲಿಂಗ ಸಾವಿರದ ಇನ್ನೂರು ವರ್ಷವಷ್ಟೇ ಹಳೇದು ಅಂತ ಮೊನ್ನೆ ಸಂಜೆ ತಾವೇ ಮುಂದಾಗಿ ಅನೌನ್ಸ್ ಮಾಡಿದ ನಮ್ಮ ಸೋ-ಕಾಲ್ಡ್ ಲಿಬರಲ್-ಪ್ರೋಗ್ರೆಸ್ಸಿವ್-ಸೆಕ್ಯೂಲರ್ ಮುಖ್ಯಮಂತ್ರಿ ನಿನ್ನೆ ಸಂಜೆಯಿಂದ ಮೌನ ಆಗ್ಬಿಟ್ಟಿದ್ದಾರೆ. ಇಷಾಕ್ ಹಬೀಬ್ ಅನ್ಸಾರಿ ಗ್ಯಾಂಗ್ನಲ್ಲೂ ಪಿನ್ಡ್ರಾಪ್ ಸೈಲೆನ್ಸ್! ಡಾ. ಸುಧೀರಾ ರಾವತ್ ಅವರ ಸ್ಥಿತಿ ಹೇಗಿದೆ ಗೊತ್ತಿಲ್ಲ. ಪ್ರೊ ಹಿತೇಶ್ ರಾವತ್ ಅವರ ಮರಣದ ಹಿಂದೆ ಇರೋ ಸಂಚಿನ ಬಗ್ಗೆ ನಮ್ಮ ವಿದೇಶಾಂಗ ಇಲಾಖೆಯ ವಕ್ತಾರ ನರೋತ್ತಂ ಕೌಶಲ್ ಈವತ್ತು ಸಂಜೆ ಪ್ರೆಸ್ ಸ್ಟೇಟ್ಮೆಂಟ್ ಕೊಡ್ತಾರೆ. ಆಮೇಲೆ ಎಲ್ಲೆಲ್ಲಿ ಏನೇನಾಗುತ್ತೋ! ತನ್ನ ಮಾತಿನತ್ತ ಆದಿತ್ಯನ ಗಮನ ಇಲ್ಲವೆನ್ನುವುದನ್ನು ಗಮನಿಸಿದ ಅನಿರುದ್ಧ ಮಾತು ನಿಲ್ಲಿಸಿದ.
ಅಸಲಿ ಶಿವಲಿಂಗದ ಬಗೆಗಿನ ವರದಿಯನ್ನು ಓದಿ ತಲೆಯೆತ್ತಿದ ಆದಿತ್ಯನ ಕಣ್ಣುಗಳಲ್ಲಿ ನೀರು. ಇದಕ್ಕೆ ನಮ್ಮ ಪ್ರೊಫೆಸರ್ ಬಲಿಯಾಗಿಹೋದ್ರಲ್ಲ! ಅದಕ್ಕೆ ನಾನೇ ಕಾರಣ ಆದೆ ಅನಿಸುತ್ತೆ. ಈ ಶೋಧ ಅವರನ್ನು ಬಲಿ ತೆಗೆದುಕೊಳ್ಳುತ್ತೆ ಅಂತ ನಾನು ತಿಳಿದಿರಲಿಲ್ಲ. ನೋವಿನ ದನಿ ಎಳೆದ.
ಮುಂದಿನ ಹಲವು ನಿಮಿಷಗಳವರೆಗೆ ಅಲ್ಲಿ ಮೌನವಿತ್ತು. ಅದನ್ನು ಭಂಗಿಸಿದ್ದು ಅನಿರುದ್ಧ: ಹೀಗಾಗಬಾರದಿತ್ತು. ಪ್ರೊಫೆಸರ್ ಸಾಹೇಬರು ಸ್ವಲ್ಪ ಎಚ್ಚರಿಕೆ ವಹಿಸಿದ್ರೆ ಸರಿಯಾಗ್ತಿತ್ತು. ಪಾಕಿಗಳಿಂದ ಏಕಾಏಕಿ ಈ ಬಗೆಯ ಉಪಚಾರ! ಇಲ್ಲೇನೋ ಇದೆ ಅಂತ ಅವರಿಗೆ ಯಾಕೆ ಅನಿಸಲಿಲ್ಲ ಅನ್ನೋದು ಆಶ್ಚರ್ಯ.
ಮತ್ತೆ ಕೆಲಕ್ಷಣಗಳ ಮೌನ. ಈಗ ಅದನ್ನು ಭಂಗಿಸಿದ್ದು ಆದಿತ್ಯ: ಆ ದುಷ್ಟರಿಗೆ ಶಿಕ್ಷೆ?
ತಲೆ ಒದರಿದ ರಾ ಅಧಿಕಾರಿ: ಅವರ ಹತ್ಯೆ ಆದದ್ದು ಪಾಕಿಸ್ತಾನಿ ನೆಲದಲ್ಲಿ, ಪಾಕಿಸ್ತಾನಿಗಳಿಂದ. ಈ ಬಗ್ಗೆ ನಾವು ಏನು ಮಾಡಿದ್ರೂ ಅವರ ಮೊಂಡಾಟದಿಂದಾಗಿ ಏನೂ ಪ್ರಯೋಜನ ಆಗಲ್ಲ. ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ನಲ್ಲಿ ನಾವು ಕೇಸ್ ಹಾಕಿದ್ರೂ ಪಾಕಿಗಳಂತೂ ಕೋ-ಆಪರೇಟ್ ಮಾಡಲ್ಲ. ಅದಕ್ಕೆ ನಾವು ಬೇರೆ ದಾರೀನೇ ಹಿಡೀಬೇಕು. ವರ್ಷದಿಂದೀಚೆಗೆ ಪಾಕಿಸ್ತಾನದಲ್ಲಿ ಅಡಗಿರೋ ಜಿಹಾದಿಗಳು, ಖಲಿಸ್ತಾನಿಗಳು ವಾರಕ್ಕೆ ಕನಿಷ್ಟ ಒಬ್ಬರ ಹಾಗೆ ಹರೋಹರಾ ಅಂತಿರೋದನ್ನು ನೀವು ಗಮನಿಸಿರಬೇಕು. ಅನಾಮಿಕ ಪಿಸ್ತೂಲುಧಾರಿಗಳ ಕರಾಮತ್ತು ಅದು. ಆ ಬಗ್ಗೆ ಪಾಕಿಗಳಿಗೆ ಏನೂ ಸುಳಿವು ಸಿಗ್ತಾ ಇಲ್ಲ. ಏನೂ ಮಾಡೋಕೆ ಆಗದೇ ಮೈ ಪರಚಿಕೊಳ್ತಿದಾರೆ. ನಿಲ್ಲಿಸಿದ. ಆದಿತ್ಯನತ್ತಲೇ ನೋಟ ಕೀಲಿಸಿ ನಿಧಾನ ಆದರೆ ಸ್ಪಷ್ಟ ದನಿ ಹೊರಡಿಸಿದ: ಈಗ ಆ ಅನ್ನೋನ್ ಗನ್ಮೆನ್ ಪಾಕಿಸ್ತಾನಿ ಸರ್ಕಾರೀ ಕೊಲೆಗಡುಕರ ಹಾಗೂ ಖದೀಮ ಪುರಾತತ್ತ್ವಶಾಸ್ತ್ರಜ್ಞರ ಕಡೆಗೂ ತಿರುಗಬೇಕಾದ ಸಮಯ ಬಂದಿದೆ. ಭಾರತ ಬದಲಾಗ್ತಿದೆ. ಅದು ತನ್ನ ವಿರುದ್ಧ ಕೈ ಎತ್ತಿದ ಯಾರನ್ನೇ ಆಗಲಿ ಸುಮ್ಮನೆ ಬಿಡೋದಿಲ್ಲ.
ಈಗ ಅಲ್ಲಿ ಮತ್ತೆ ಮೌನ.
ರಾಷ್ಟ್ರನಿಷ್ಟ ತರುಣ ಬೇಹುಗಾರಿಕಾ ಅಧಿಕಾರಿಯ ಆ ನಿರ್ಧಾರದ ಮಾತುಗಳನ್ನು ಆದಿತ್ಯ ಅರಗಿಸಿಕೊಂಡಿದ್ದಾನೆ ಎಂದು ತನಗೆ ನಂಬಿಕೆಯಾಗುವವರೆಗೆ ತಾಳ್ಮೆಯಿಂದ ಕಾದ ನೀಹಾರಿಕಾ ಮೃದುವಾಗಿ ದನಿ ತೆಗೆದಳು: ಈವತ್ತು ಹನ್ನೊಂದು ಗಂಟೆಗೆ ಇಂಟರ್ವ್ಯೂ ಇದೆ ಅಲ್ವಾ? ತಯಾರಾಗಿ ಮತ್ತೆ.
ಆದಿತ್ಯ ಅನುಮಾನದಲ್ಲಿ ಕಣ್ಣುಬಿಟ್ಟ. ಅನಿರುದ್ಧನ ನಗೆಮಿಶ್ರಿತ ಮಾತು ಬಂತು: ಧೈರ್ಯವಾಗಿ ಇಂಟರ್ವ್ಯೂಗೆ ಹೋಗಿ. ಈವತ್ತಿನ ಈ ಪೇಪರ್ ಫೈಲ್ನೊಳಗಿರಲಿ. ನಿಮ್ಮ ಹೆಸರು, ಫೋಟೋ ದೊಡ್ಡದಾಗಿ ಇರೋದ್ರಿಂದ ಅದು ನಿಮ್ಮ ಜೊತೆ ಇರಬೇಕು. ಮತ್ತೆ, ನಿಮ್ಮ ಎಚ್ಓಡಿ ಬಗ್ಗೆ ತಲೆ ಕೆಡಿಸ್ಕೋಬೇಕಾಗಿಲ್ಲ. ಸರ್ಕಾರ ಈಗ ನಮ್ಮದೇ. ಜೊತಗೆ ಸಿಸ್ಟಂ ಸಹ ನಿಧಾನವಾಗಿಯಾದ್ರೂ ನಮ್ಮದಾಗ್ತಾ ಇದೆ. ನಿಮ್ಮ ಎಚ್ಓಡಿ ಅವರ ತರಲೇನ ತಡೆಯೋಕೆ ವ್ಯವಸ್ಥೆ ಆಗಿದೆ. ಎಲ್ಲ ಶಿವಲಿಂಗದ ಪ್ರಭಾವ.
ಆದಿತ್ಯನಿಂದ ಮಾತು ಹೊರಡಲಿಲ್ಲ. ನೀಹಾರಿಕಾಳಿಂದ ಆಶ್ವಾಸನೆಯ ದನಿ ಹೊರಟಿತು: ನಮ್ಮ ಒಂದೂವರೆ ವರ್ಷದ ಶ್ರಮ ಈಗ ಫಲ ಕೊಡ್ತಿದೆ. ಇಂದು ಸಂಜೆಯ ಹೊತ್ತಿಗೆ ಇಡೀ ದೇಶಕ್ಕೆ ನಮ್ಮ ಶೋಧದ ಸುದ್ದಿ ಹರಡಿಹೋಗಿರುತ್ತೆ. ಇತಿಹಾಸ ಪರಿಷ್ಕರಣೆ ಆಗೋಕೆ ಶುರು ಆಗುತ್ತೆ. ಅನಿರುದ್ಧ ಹೇಳಿದ್ರಲ್ಲ, ಸಿಸ್ಟಂ ಸಹ ನಿಧಾನವಾಗಿ ನಮ್ಮದಾಗ್ತಾ ಇದೆ ಅಂತ. ಹೇಳುತ್ತ ಎದ್ದ ಆಕೆ ಗೋಡೆಯತ್ತ ನಡೆದಳು. ನಾಲ್ಕು ವರ್ಷಗಳ ಹಿಂದೆ ಅಮ್ಮ ತಂದು ತೂಗುಹಾಕಿದಾಗಿನಿಂದ ಅಲ್ಲಿದ್ದ ಶಿವಪಾರ್ವತಿಯರ ಪಟದ ಮುಂದೆ ಕೈಜೋಡಿಸಿ ತಲೆಬಾಗಿಸಿ, ಕಣ್ಣುಮುಚ್ಚಿ ನಿಂತಳು. ಓಂ ನಮಃ ಶಿವಾಯ ಮೃದು ದನಿಯ ಮೂರು ಪದಗಳು ಕಿರುಗಂಟೆಯ ನಿನಾದದಂತೆ ಅಲ್ಲಿ ಮೊಳಗಿದವು.
ಮಂತ್ರಮುಗ್ಧನಾಗಿ ಅತ್ತಲೇ ನೋಡುತ್ತಿದ್ದ ಆದಿತ್ಯನನ್ನು ಎಚ್ಚರಿಸಿದ್ದು ತರುಣ ರಾ ಅಧಿಕಾರಿಯ ದನಿ: ಹ್ಞುಂ, ಇದನ್ನೆಲ್ಲ ನಿಮಗೆ ತಿಳಿಸೋದು ನನ್ನ ಜವಾಬ್ದಾರಿ ಆಗಿತ್ತು. ಈಗ ಅದಾಯ್ತು. ನಾನು ಹೊರಡ್ತೀನಿ. ಇನ್ನೇನಿದ್ರೂ ನಿಮ್ಮ ನಿಮ್ಮ ಕೆಲಸಕಾರ್ಯಗಳು. ಇವಳೇನೋ ಶಿವಪಾರ್ವತಿಯರಿಗೆ ನಮಸ್ಕರಿಸಿದ್ಲು. ನೀವು ಎದ್ದು ಹೋಗಿ ಒಂದು ನಮಸ್ಕಾರ ಹಾಕಿಬಿಡಿ. ಸಾಷ್ಟಾಂಗ ನಮಸ್ಕಾರ ಹಾಕಿದ್ರೆ ಒಳ್ಳೇದೇ. ಇತಿಹಾಸವನ್ನೇ ಬದಲಿಸೋ ನಿಮ್ಮ ಶೋಧನೆಯನ್ನು ಜಗತ್ತು ಮಾನ್ಯ ಮಾಡಲಿ ಅನ್ನೋ ನಿಮ್ಮ ಆಸೆ ಪೂರ್ಣವಾಗೋದು ಗ್ಯಾರಂಟಿಯಾಯ್ತು ಬಿಡಿ. ಅದರ ಜೊತೆಗೆ ಈ ನೀಹಾರಿಕಾಳದ್ದು ಏನೋ ಪ್ರೈವೇಟ್ ಆಸೆ ಇರೋ ಹಾಗಿದೆ ನೋಡಿ. ಅದೇನು ಅಂತ ಕೇಳಿ ನೆರವೇರಿಸಿಬಿಡಿ. ಶಿವಪಾರ್ವತಿ ನಿಮಗಿಬ್ರಿಗೂ ಒಳ್ಳೆಯದು ಮಾಡಲಿ. ಎದ್ದು ನಿಂತು ಆದಿತ್ಯನ ಕೈ ಕುಲುಕಿದ, ನೀಹಾರಿಕಾಳತ್ತ ಕೈಯಾಡಿಸಿದ, ಬೈ ಎನ್ನುತ್ತ ಬಾಗಿಲಿನತ್ತ ತಿರುಗಿದ. ಒಂದ್ ಚಹಾ? ಆದಿತ್ಯನ ಮಾತನ್ನು ಅರ್ಧಕ್ಕೆ ಕತ್ತರಿಸಿದ: ನಾನೀಗ ಹೆಡ್ ಆಫೀಸ್ಗೆ ಹೊರಡಬೇಕು. ನನ್ನ ಫ್ಲೈಟ್ಗೆ ಸಮಯ ಆಗ್ತಾ ಇದೆ. ಇನ್ನೊಂದ್ಸಲ ಬಂದು ನೀಹಾರಿಕಾ ಮಾಡಿದ ಅಡಿಗೇನ ನಿಮ್ಮ ಜೊತೆ ಕೂತು ಬಾರಿಸಿಯೇ ಹೋಗ್ತೀನಿ. ಹೇಳುತ್ತ ಬಾಗಿಲು ತೆರೆದು ಬೆನ್ನಹಿಂದೆಯೆ ಅದನ್ನೆಳೆದುಕೊಂಡುಬಿಟ್ಟ. ಮುಂದಿನ ಕ್ಷಣದಲ್ಲಿ ಮೆಟ್ಟಿಲಸರಣಿಯಲ್ಲಿ ಕೆಳಗಿಯುತ್ತಹೋದ ಅವನ ಬೂಟುಗಾಲಿನ ಶಬ್ದಗಳು.
ಆದಿತ್ಯ ಕ್ಷಣಕಾಲ ಮಾತಿಲ್ಲದೆ ನಿಂತ. ಏಕಾಏಕಿ ನೀಹಾರಿಕಾಳ ನೆನಪಾಗಿ ಅತ್ತ ತಿರುಗಿದರೆ ಕಾಲಿಂಗ್ ಬೆಲ್ ಅವನ ನೋಟವನ್ನು ಮತ್ತೆ ಬಾಗಿಲತ್ತಲೇ ತಿರುಗಿಸಿತು. ಅನಿರುದ್ಧ ಹೇಳುವುದೇನಾದರೂ ಬಾಕಿ ಉಳಿದಿದೆಯೇ?
ಸರಸರನೆ ಹೆಜ್ಜೆ ಹಾಕಿ ಬಾಗಿಲು ತೆರೆದರೆ ಕಂಡದ್ದು ಪರಿಚಿತ ಕೊರಿಯರ್ ಯುವಕ. ನಗುತ್ತ ಪಾಕೆಟ್ ಮುಂದೆ ಹಿಡಿದ. ಅಚ್ಚರಿಯಿಂದ ಅದನ್ನು ತಿರುಗಿಸಿ ನೋಡಿದ ಆದಿತ್ಯನಿಗೆ ಸೆಂಡರ್ ಅಡ್ರೆಸ್ ಫಕ್ಕನೆ ಗುರುತಿಗೆ ಹತ್ತಿತು.
ಗಟ್ಟಿ ಪಾರ್ಸೆಲ್ ಒಳಗೆ ಬೆಚ್ಚಗೆ ಕುಳಿತಿರುವುದು ಸೋನಿ ಪುಟ್ಟಿ!
ಸೌತ್ ಏಶಿಯಾ ಯೂನಿವರ್ಸಿಟಿ ಗೆಸ್ಟ್ಹೌಸ್ನ ಜನಕ್ಕೆ ಮನದಲ್ಲೇ ವಂದನೆ ಹೇಳಿ, ಕೊರಿಯರ್ ಯುವಕನಿಗೆ ದನಿ ತೆಗೆದೇ ಧನ್ಯವಾದ ಹೇಳಿ ಆತ ಮುಂದೆ ಹಿಡಿದ ಬಿಳಿಯ ಹಾಳೆಗೆ ಕೈಯೊಡ್ಡಿದ. ಪೆನ್ ಹಿಡಿದ ನೀಹಾರಿಕಾಳ ಕೈ ಹಿಂದಿನಿಂದ ಮುಂದೆ ಬಂತು.
ಬಾಗಿಲು ಮುಚ್ಚಿ ಆತುರದಲ್ಲಿ ಪಾಕೆಟ್ ಬಿಡಿಸಿದ ಆದಿತ್ಯ. ಸೋನಿ ಪುಟ್ಟಿ ಕೈಗೆ ಬಂತು. ಸರಿಯಾಗಿದೆಯೇ ಎಂದು ತಿರುತಿರುಗಿಸಿ ನೋಡಿದ. ಯಾರೋ ಅದರ ಮೇಲೆ ಕೈ ಆಡಿಸಿದ್ದು ಮೊದಲ ನೋಟಕ್ಕೇ ಕಂಡಿತು. ಮೊನ್ನೆ ರಾತ್ರಿ ಶಾರ್ಟ್ವೇವ್ನಲ್ಲಿದ್ದ ಬ್ಯಾಂಡ್ ಸೆಲೆಕ್ಟರ್ ಈಗ ಬಲಕ್ಕೆ ಸರಿದು ಎಫ್ಎಂನಲ್ಲಿ ನಿಂತಿತ್ತು. ಮತ್ತೇನೂ ಆಗಿಲ್ಲ ತಾನೆ ಎಂದುಕೊಂಡು ಪವರ್ ಬಟನ್ ಅನ್ನು ಎಂದಿನಂತೆ ಹೆಬ್ಬೆರಳಿನಿಂದ ಮೇಲಕ್ಕೆ ಸರಿಸಿದ. ನಡುಬೆರಳು ತಾನಾಗಿಯೇ ವಾಲ್ಯೂಂ ನಾಬ್ನತ್ತ ಸರಿಯಿತು. ಮುಂದಿನ ಕ್ಷಣದಲ್ಲಿ ಸೋನಿ ಪುಟ್ಟಿ ಹಾಡತೊಡಗಿದಳು: ಆಪ್ ಯ್ಯೂಂ ಹೀ ಅಗರ್ ಹಮ್ಸೆ ಮಿಲ್ತೇ ರಹೇ, ದೇಖೀಯೇ ಏಕ್ ದಿನ್ ಪ್ಯಾರ್ ಹೋಜಾಯೇಗಾ? ತನ್ನ ಮೆಚ್ಚಿನ ಸೋನಿ ಪುಟ್ಟಿ, ತನಗೆ ಯಾವತ್ತೂ ಚಂದವೆನಿಸುವ ಮಹಮದ್ ರಫೀ ದನಿ, ವರ್ಷವರ್ಷಗಳಿಂದಲೂ ಎಂದೂ ಹಳತೆನಿಸದ ರೊಮ್ಯಾಂಟಿಕ್ ನಗ್ಮಾ… ಆದಿತ್ಯನ ಮುಖದಲ್ಲಿ ಕಿರುನಗು ತಾನಾಗಿಯೇ ಹರಡಿಕೊಂಡಿತು.
ಅಲ್ಲಿ ತಾನು ಒಂಟಿಯಲ್ಲ ಎನ್ನುವುದು ಥಟಕ್ಕನೆ ನೆನಪಾದಂತೆ ತಲೆಯೆತ್ತಿದ. ಮೂರು ಅಡಿಗಳ ಹತ್ತಿರದಲ್ಲಿದ್ದ ನೀಹಾರಿಕಾಳ ಮುಖದ ತುಂಬ ಸೌಮ್ಯ ನಗೆ. ಸೆಳೆತಕ್ಕೊಳಗಾದವನಂತೆ ಅತ್ತಲೇ ನೋಡಿದ ಆದಿತ್ಯನಿಗೆ ಅವಳ ಬಟ್ಟಲುಗಣ್ಣುಗಳೂ ಹಾಡುತ್ತಿರುವಂತೆನಿಸಿತು.