ಒಂಟಿ ಮ
ನಾನು ಒಬ್ಬಂಟಿ ಮರ
ಒಂದಿಷ್ಟು ಪ್ರೀತಿಯನು ಹನಿಸುವವರಿಲ್ಲ
ಚಿಗುರು ಚಿಮ್ಮಲಿ ಎಂದು ಹರಸುವವರಿಲ್ಲ
ಅಂತರಾಳದ ನುಡಿಗೆ ಕಿವಿಗೊಡುವ ಕೆಳೆ ಇಲ್ಲ
ಎಲ್ಲ ಕಾಟಾಚಾರ, ಬರಿಯ ವ್ಯವಹಾರ
ತೋರುಗಾಣಿಕೆ, ನಟನೆ, ಶುದ್ಧ ವ್ಯಾಪಾರ.
ಹಿಂದೊಂದು ಕಾಲದಲಿ ಏಸೊಂದು ಸಮೃದ್ಧಿ
ಕೊಂಬೆಕೊಂಬೆಗಳಲ್ಲಿ ಹಣ್ಣುಗಳು ಮಾಗಿ
ಬಂದ ಅತಿಥಿಗಳೆಲ್ಲ ತಿಂದುಂಡು ತೇಗಿ
ತಳ ಊರಿ ತಂತಮ್ಮ ಸಂಸಾರ ನಡೆಸಿದರು
ಮೊಟ್ಟೆ ಮರಿಯಾದಾಗ ಎಷ್ಟೊಂದು ಸಂಭ್ರಮವೊ
ಹೊಸ ಅಪ್ಪ, ಅಮ್ಮನಿಗೆ ಮೈಯೆಲ್ಲ ನವಿರು
ನನ್ನೊಳಗು ಯಾವುದೋ ಸಾರ್ಥಕತೆ, ಬೆರಗು
ನೆರಳು ನಿದ್ದೆಯ ತೂಗಿ, ಒಣರೆಂಬೆ ಉರಿಯಾಗಿ,
ಜೋಕಾಲಿ ಜೀಕಿ, ಮೊಳಗಿತ್ತು ಮಕ್ಕಳ ಕೇಕೆ
ನನಗೊರಗಿ ತಾಂಬೂಲ ವಿನಿಮಯ, ಪಡ್ಡೆಗಳ ಪ್ರಣಯ,
ಕೋತಿಯಾಟದ ಸೊಗಸು, ಈಗೆಲ್ಲ ಕನಸು.
ನಾನು ಒಬ್ಬಂಟಿ ಮರ
ಫಲ ಬಿಡುವ ಕಾಲ ಕಳೆದಿದೆ
ಕರಗಿಹೋಗಿದೆ ಜಾತ್ರೆ ಸದ್ದಿಲ್ಲದೆ
ಕೊಡಲಿ ಕಾವಿನ ಗುರಿಗೆ
ಕಾದು ನಿಂತಿದ್ದೇನೆ
ಹೇಳಕೇಳುವವರಾರು ಗತಿ ಇಲ್ಲದೆ
ಯಾರು ಯಾರಿಗು ಇಲ್ಲ, ನಮಗೆ ನಾವೇ ದಿಕ್ಕು
ಅವರವರ ಹೆಗಲಹೊರೆ ಅವರವರಿಗೆ
ನನ್ನೆದೆಯ ಒಂಟಿತನ ನನ್ನದೆಂಬುದೆ ಸತ್ಯ
ಬೇಡಿ ಪಡೆಯಲು ಬರದು ಪ್ರೀತಿ, ಸಾಂಗತ್ಯ.
ಬರಿದೆ ಕೊರಗುವುದಿಲ್ಲ, ಬುದ್ಧಿ ಬಂದಿದೆ ಈಗ
ಆಂತರ್ಯದಲಿ ಎಲ್ಲ ಒಬ್ಬಂಟಿ ಜೀವ
ಎಲ್ಲರನು ಕಾಡುವುದು ಅನಾಥಭಾವ
ಎಲ್ಲರನೂ ಕಾಡುವುದು ಈ ಅನಾಥಭಾವ.
— ವಸುಮತಿ ಉಡುಪ
ಲೇಖಕಿ ಪ್ರಸಿದ್ಧ ಮಹಿಳಾ ಕಥೆಗಾರ್ತಿ
ಶ್ರೇಷ್ಠತೆ
ಕ್ಷಮಿಸಿಬಿಡು
ಗಾಲಿಬ್
ನೀನು ಜಗತ್ತಿನ
ಅತಿ ಶ್ರೇಷ್ಠ
ಪ್ರೇಮ ಕವಿ
ಅನುಮಾನವಿಲ್ಲ
ಆದರೂ
ನಿನಗಿಂತಲೂ
ನಾನೇ
ಪ್ರೇಮದೊಳು ಶ್ರೇಷ್ಠಳು
ನಿನ್ನದು
ಸಾಹಿತ್ಯ ಸಂತತಿಯ
ಅಕ್ಷರ ಕಾವ್ಯ
ನನ್ನದು
ಜೀವ ಸಂತತಿಯ
ಕರುಳ ಕಾವ್ಯ!
– ಸುಮಾ ರಾಮಚಂದ್ರ
ಅಪ್ಪ
ಅಪ್ಪ ಎಂದರೆ –
ಶಿಖರಗಳ ಮೇಲೇರಲು ಏಣಿ
ಪ್ರೀತಿ ಸಂಬಂಧಗಳ ಜೋಡಿಸುವ ಸೇತುವೆ
ಹತಾಶನಾದಾಗ ಬೆನ್ನುಚಪ್ಪರಿಸುವ ಗೆಳೆಯ!
ಬಳಲಿದಾಗ ನೋವನಳಿಸುವ ಪಾನಕ!
ಅಪ್ಪ ಎಂದರೆ –
ಧುಮ್ಮಿಕ್ಕುವ ಜಲಪಾತ
ಉತ್ಸಾಹ ಉಲ್ಲಾಸಗಳ ದೈವ
ಬದುಕಿನ ಸರೋವರದಲ್ಲಿ ಮೇಲೇಳುವ ತರಂಗ!
ಪ್ರೇಮತತ್ವವೇ ರೂಪಾಂತ ಅನುರಾಗ ಗೋಪುರ!
ಅಪ್ಪ ಎಂದರೆ –
ಜಗವ ನೋಡಲು ದೊರೆತ ಕಂಗಳು
ವಿದ್ಯಾಬುದ್ಧಿಗಳ ಕಲಿಸುವ ಗುರುವು.
ಬದುಕನು ವಿವರಿಸುವ ವಿಶ್ವಕೋಶ!
ಬದುಕಿನ ರಣದಲ್ಲಿ ನಿತ್ಯಸ್ಫೂರ್ತಿಯ ಕಾರಂಜಿ!
— ಗುರುಮೂರ್ತಿ ಪೆಂಡಕೂರು
ಶಿವಮಾನಸಪೂಜಾ
ಮಾನಸರತ್ನಸಿಂಹಾಸನಂಗೊಟ್ಟು ಗಂಗಾಮಜ್ಜನಂ ಗೈಸಿ ಚೀನಾಂಬರಂ ನೀಡಿ
ಮಾಣಿಕಪಚ್ಚೆಹಾರಂಗಳಂ ಸೂಡಿ ಸತ್ಕಸ್ತೂರಿಯಂ ಪೂಸಿ ಸಚ್ಚಂದನಂ ಲೇಪಿ |
ಸಾನಿಸಿ ಬಿಲ್ವಪತ್ರಂ ಸುಸೇವಂತಿಜಾತೀಚಂಪಕಂ ಗೋಪುರಾರಾತ್ರಿಕಂ ಎತ್ತಿ
ಮಾನಿತ ಗುಗ್ಗುಳಂ ಧೂಪದೀಪಂಗಳಂ ಅರ್ಪಿಪ್ಪೆ ಸಂಕಲ್ಪದಿಂ ಕೊಳ್ಳಿರೈದೇವ ||೧||
ನವರತ್ನಸೌವರ್ಣಪಾತ್ರೆಯೊಳ್ತುಪ್ಪಮಂ ಭಕ್ಷ್ಯಂ ಭೋಜ್ಯಚೋಷ್ಯಲೇಹ್ಯವನುಂ
ವಿವಿಧಾನ್ನಪಲ್ಯಂಗಳಂ ದಧಿಕ್ಷೀರಮಂ ಮೇಣ್ಸೌಮ್ಯೋಷ್ಣಪಾಯಸಾದಿಗಳಂ |
ಸವಿಯಪ್ಪ ರಂಭಾಮ್ರಪಣ್ಗಳಂ ಪಾನಕಂ ಕರ್ಪೂರೇಲಮಿಶ್ರತಂಬುಲಮಂ
ತವೆಕಲ್ಪಿತಾರ್ಥಂಗಳಿಂತಿವಂ ನೀಳ್ಪೆ ಸ್ವೀಕಾರಂಗೈದು ತೋಷಗೊಳ್ಳೊ ಪ್ರಭೋ ||೨||
ಶ್ವೇತಛತ್ರಮಂ ಪಿಡಿದು ಸ್ವರ್ಣಚಾಮರವಿಕ್ಕಿ ವೈಡೂರ್ಯವ್ಯಜನಂ ಬೀಸಿ ಮೇ
ಣೋತು ಕಾಂಸದರ್ಪಣವ ತೋರಿ ವೀಣೆಮೃದಂಗತಾಳಂ ಬಾಜಿಸಿ ಸಂಗೀತಮಂ |
ಕೂರ್ತು ಪಾಡಿ ನರ್ತನವನಾಡಿ ಕಾಹಲಮೂದಿ ಸಾಷ್ಟಾಂಗಂ ಮಿಗೆಹಾಕುತ್ತೆ ನಾ
ನಾತೆರಂ ಸ್ತುತಂ ಪೊಗಳುತಿಂತಿವೆಲ್ಲವನರ್ಪಿಪೆಂ ಸಂಕಲ್ಪದೆ ಕೊಳ್ಳೈ ವಿಭೋ ||೩||
ನೀನಾತ್ಮವೈ ಗಿರಿಜೆಯೋ ಬುದ್ಧಿ ಪ್ರಣಂಗಳೊಡನಾಡಿಗಳ್ದೇಹಂ ಗೃಹಂ
ನಾನಾವಿಭೋಗವಿಷಯಂ ಪೂಜೆಯೈ ನಿದ್ರೆಯೆ ಸಮಾಧಿಯೈ ಸಂಚಾರಮೊ |
ಮೌನಪ್ರದಕ್ಷಿಣವದೈ ಸರ್ವವರ್ಣಂಗಳವು ಸ್ತೋತ್ರವೈ ಏನೆಲ್ಲಮಂ
ನಾನೋತು ಮಾಳ್ಪೆನನಿತುಂ ನಿನ್ನಯಾರಾಧನೆಯದೆಂದು ಭಾವಿಪ್ಪೆಂ ಪ್ರಭೋ ||೪||
ಕರಪಾದಂಗಳಿಂ ಮಾತು ಮೇಣ್ಮೈಗಳಿಂ ಕರ್ಮಂಗಳಿಂ
ಸ್ವರಕೇಳ್ವಾಂಗಕಣ್ಚಿತ್ತದೊಳ್ಜನ್ಮಿಕುಂ ತಪ್ಪೆಲ್ಲಮಂ |
ಸರಿಬರ್ಪಂಥದೋ ಬಾರದಿರ್ಪಂಥದೋ ಸರ್ವಸ್ವಮಂ
ಕರುಣಾಸಾಗರಂ ನೀಂ ಕ್ಷಮಂಗೈದು ಶಂಭೋ ಮನ್ನಿಸೈ ||೫||
— ಕುಮಾರನಿಜಗುಣ
ಲೇಖಕರು ಅಧ್ಯಾತ್ಮ ಸಾಧಕರು; ಕೊಳ್ಳೇಗಾಲ ಚಿಲುಕವಾಡಿಯ ನಿಜಗುಣ ಫೌಂಡೇಷನ್ಸ್ ಅಧ್ಯಕ್ಷರು ಹಾಗೂ ಕವಿಗಳು.