…ನಾನು ಕೀಚಕನ ಅಕ್ಕನಾಗಿ ಹೇಗೇ ವರ್ತಿಸಿರಲಿ,
ಒಬ್ಬಳು ಹೆಣ್ಣಾಗಿ ಸರಿಯಾದುದನ್ನೇ ಮಾಡಿದ್ದೇನೆ ಎಂಬ ಸಮಾಧಾನ ಅಂತರಂಗವನ್ನು ತುಂಬಿಕೊಳ್ಳತೊಡಗಿತು….
ಕೀಚಕನ ಹೆಣವನ್ನು ಅಂಗಳದಲ್ಲಿ ಮಲಗಿಸಿದ್ದರು. ಅಯ್ಯೋ! ಅದನ್ನು ಹೆಣವೆಂದಾದರೂ ಹೇಳಬಹುದೇ? ಅಷ್ಟು ದೂರಕ್ಕೇ ಭೀತಿ ಹುಟ್ಟಿಸುವಷ್ಟು ವಿಕಾರವಾಗಿತ್ತು. ಕೈ ಕಾಲುಗಳೆಲ್ಲಿವೆ ಎಂದೇ ತಿಳಿಯುತ್ತಿರಲಿಲ್ಲ. ತಲೆಯನ್ನು ಹೊಟ್ಟೆಯೊಳಕ್ಕೆ ತೂರಿಸಲಾಗಿತ್ತು. ಮಾಂಸದ ಮುದ್ದೆಯೊಂದನ್ನು ನೋಡಿದ ಹಾಗೆ ಕಾಣುತ್ತಿತ್ತು. ಇಡೀ ಕೆಂಪು ನೆತ್ತರು ಹರಿದು ತೊಯ್ದ ಮುದ್ದೆ. ಅಬ್ಬಾ ಎಷ್ಟು ಭೀಕರ! ನಾನು ನಿಂತಲ್ಲೇ ನಡುಗಿದೆ.
“ಹೇಗಾಯಿತು ಇದು?” ನನ್ನ ಗಂಡ ಕಾವಲಭಟರನ್ನು ಕೇಳುತ್ತಿದ್ದರು. “ಗೊತ್ತಿಲ್ಲ ಪ್ರಭೋ, ಸೇನಾಪತಿಗಳು ರಾತ್ರಿ ಭವನದಲ್ಲಿ ಇರಲಿಲ್ಲ. ಅವರು ನಾಟ್ಯಶಾಲೆಯ ಹೊರಾವರಣದಲ್ಲಿ ಬಿದ್ದಿರುವುದನ್ನು ಬೆಳಗಿನಹೊತ್ತು ನೋಡಿದವರು ತಿಳಿಸಿದಾಗಲೇ ನಮಗಿದು ತಿಳಿದದ್ದು?”
“ಅಂದರೆ ನೀವು ಅವರೊಂದಿಗೆ ಇರಲಿಲ್ಲವೇನು….” ಮಹಾರಾಜರ ವಿಚಾರಣೆ ಮುಂದುವರಿದಿತ್ತು. ಇದರಿಂದೇನಾದರೂ ಪ್ರಯೋಜನ ಲಭಿಸುವುದೆಂದು ನನಗನಿಸಲಿಲ್ಲ. ಕೀಚಕ ನನ್ನ ತಮ್ಮನಾದರೂ ಅವನನ್ನು ಅಂಕೆಯಲ್ಲಿಡುವುದು ನಮಗೇ ಸಾಧ್ಯವಿರಲಿಲ್ಲ. ಇನ್ನು ಬಡಪಾಯಿಗಳಾದ ರಕ್ಷಕಭಟರ ಪಾಡೇನು! ಅವನು ಹೋಗುವಲ್ಲಿಗೆಲ್ಲ ಭಟರು ಹೋಗುವುದು ಶಕ್ಯವೇ?
“ಮಹಾರಾಜ್ಞಿಯವರು ಸೇನಾಪತಿಗಳ ಕಳೇವರವನ್ನು ನೋಡುವುದಿದೆಯೆ?” ಬಳಿಯಲ್ಲಿದ್ದ ಪರಿಚಾರಿಕೆ ಕೇಳುತ್ತಿದ್ದಳು. ನಿಜ. ಅವನಿಗೆ ನನ್ನನ್ನು ಬಿಟ್ಟರೆ ಬೇರೆ ಬಂಧುಗಳಾದರೂ ಯಾರಿದ್ದಾರೆ? ಆದರೆ ಅಕ್ಕ-ತಮ್ಮ ಈ ಬಾಂಧವ್ಯ ನಮ್ಮ ನಡುವೆ ಉಂಟೇ? ಅವನಿಗೆ ಅಕ್ಕ ಬೇಕಾದದ್ದು ಅಂತಃಪುರದ ಸುಂದರ ದಾಸಿಯರಿಗಾಗಿ ಮಾತ್ರ. ಹೆಣ್ಣಿನೊಂದಿಗೆ ಕಾಮರಹಿತ ಸಂಬಂಧ ಸಾಧ್ಯವೆಂದು ಅವನಿಗೆ ಕಲ್ಪನೆಯೂ ಇರಲಿಲ್ಲ. ಅವನನ್ನು ತಮ್ಮ ಎಂಬ ಪ್ರೀತಿ, ವಿಶ್ವಾಸಗಳಿಂದ ಕಾಣುವುದಿರಲಿ, ಸಹಿಸಿಕೊಂಡಿದ್ದದ್ದೇ ಅವನ ಭಯದಿಂದ. ಅವನು ಬಲಾಢ್ಯನಲ್ಲದಿದ್ದರೆ ಮತ್ಸ್ಯದೇಶದಲ್ಲಿ ಅವನಿಗೆಲ್ಲಿ ಜಾಗವಿತ್ತು? ಅಬ್ಬಾ ಕೊನೆಗೂ ಎಲ್ಲ ಮುಗಿಯಿತಲ್ಲ!
ಒಂದು ನಿಟ್ಟುಸಿರು – ಅದೂ ಬಿಡುಗಡೆಯ ನಿಟ್ಟುಸಿರು. ಅರೆ! ಇದೆಂತಹ ವಿಚಿತ್ರ? ಅವನ ಸಾವು ನನಗೆ ನಿರಾಳತೆಯನ್ನು ತಂದಿದೆಯೆ? ಹೌದು ಅಂದಿತು ನನ್ನ ಅಂತರಂಗ. “ಮಹಾರಾಣಿ….” ಪರಿಚಾರಿಕೆ ತೊದಲಿದಳು. ನಾನು ಇಲ್ಲವೆಂಬಂತೆ ತಲೆಯಾಡಿಸಿದೆ. ಮತ್ತೊಮ್ಮೆ ಕೀಚಕನ ಶವದತ್ತ ಕಣ್ಣು ಹಾಯಿಸಿದೆ. ಮನಸ್ಸು ಆರ್ದ್ರವಾಗುವ ಬದಲು ಅದೇ ನಿರಾಳಭಾವವನ್ನು ಅನುಭವಿಸಿತು. ನಿಜ, ಯಾಕಾಗಿ ಅವನ ಕುರಿತು ನಾನು ದುಃಖಿಸಲಿ? ನನ್ನ ಬದುಕಿನ ದುಃಸ್ವಪ್ನ ಹರಿದು ಹೋಯಿತೆಂದು ನೆಮ್ಮದಿಯನ್ನು ಹೊಂದಬೇಕಾದ್ದೇ ಸರಿ. ಅಂತಃಪುರದ ಬಾಗಿಲ ಬಳಿ ಗುಂಪು ಸೇರಿದ್ದ ದಾಸೀಜನ ಒಳಗೊಳಗೆ ಉಕ್ಕುತ್ತಿದ್ದ ಹರ್ಷವನ್ನು ಮುಚ್ಚಿಡಲು ಗಾಂಭೀರ್ಯದ ಮುಖವಾಡ ಧರಿಸಿದ್ದು ಮೇಲ್ನೋಟಕ್ಕೇ ತಿಳಿಯುವಂತಿತ್ತು. ಹೌದು; ಅವರ ತಪ್ಪೇನು? ಕೀಚಕ ತನ್ನ ಕಾಮಲೋಲುಪತೆಯಿಂದ ಅವರೆಲ್ಲರ ಬದುಕನ್ನೂ ನರಕ ಮಾಡಿಬಿಟ್ಟಿದ್ದ. ನನ್ನ ಕಣ್ಣು ಅವರೆಲ್ಲರಿಂದ ಅನತಿ ದೂರದಲ್ಲಿ ನಿಂತಿದ್ದ `ಅವಳತ್ತ’ ಹರಿಯಿತು. ಯಾರಿವಳು? ಎಲ್ಲಿಂದ ಬಂದಳು? ನಿನ್ನೆಯಷ್ಟೇ ಕೀಚಕ ರಾಜಮಂದಿರದ ಬಳಿ ಅವಳನ್ನು ಎಳೆದಾಡಿದ್ದ. ಆಗ ಆ ಹೀನಕೃತ್ಯವನ್ನು ತಡೆಯುವುದಕ್ಕೆ ಯಾರೊಬ್ಬನೂ ಮುಂದಾಗಿರಲಿಲ್ಲವಂತೆ. ಸ್ವತಃ ಮಹಾರಾಜನೇ ಮೌನ ವಹಿಸಿದಾಗ ಇನ್ಯಾರು ಬಂದಾರು ರಕ್ಷಣೆಗೆ? ಗೋಳಿಟ್ಟು ತನ್ನ ಮಾನವುಳಿಸುವಂತೆ ಕಂಡಕಂಡವರಿಗೆ ಕೈ ಮುಗಿಯುತ್ತಿದ್ದ ಅವಳ ಸಹಾಯಕ್ಕೆ ಯಾರೂ ಒದಗದಿದ್ದಾಗ ಏನೋ ಪವಾಡ ನಡೆಯಿತಂತೆ. ಕವಚ, ಶಿರಸ್ತ್ರಾಣಗಳನ್ನು ಧರಿಸಿದ್ದ ಅಪರಿಚಿತ ಯೋಧನೊಬ್ಬ ಕೀಚಕನ ಮೇಲೆ ಆಕ್ರಮಣ ಮಾಡಿ ಅವಳನ್ನು ಪಾರು ಮಾಡಿದನಂತೆ. ಬಲಿಷ್ಠನಾದ ಕೀಚಕ ಪೆಟ್ಟುತಿಂದು ಬೀದಿಯ ಧೂಳಿನಲ್ಲಿ ಬಿದ್ದು ಹೊರಳಿದನಂತೆ. ಹಾಗೆಂದು ಆಮೇಲೆ ದಾಸಿಯೊಬ್ಬಳು ಹೇಳಿದಳು, ನಾನು ವಿವರ ತಿಳಿಯುವುದಕ್ಕೆ ಹೋಗಲಿಲ್ಲ. ನನ್ನ ಬಗ್ಗೆ ನನಗೇ ಅನುಕಂಪ ಮೂಡಿಬಿಟ್ಟಿತ್ತು. ಅವಳೂ ಆ ಕುರಿತು ಮತ್ತೇನೂ ಹೇಳಿರಲಿಲ್ಲ. ಇದನ್ನೆಲ್ಲ ನೆನೆಯುತ್ತ ನಾನು ಅಂತಃಪುರದ ಒಳಗೆ ನಡೆದೆ.
* * *
ಯಾಕೋ ಸೈರಂಧ್ರಿ ನನ್ನ ಕಣ್ಣು ತಪ್ಪಿಸಿ ಓಡಾಡುತ್ತಿದ್ದಾಳೆ ಅನಿಸಿತು. ಯಾಕೆ? ಆಗ ನೆನಪಾದದ್ದು ಮೊನ್ನೆಯ ಪ್ರಕರಣ. ನಾನು ಬೆಚ್ಚಿಬಿದ್ದೆ. ಧಿಗ್ಗನೆ ಹೊಳೆದ ಸತ್ಯ ನನ್ನನ್ನು ಕಂಗೆಡಿಸಿತು. ಆ ಪ್ರಕರಣಕ್ಕೂ ಕೀಚಕನ ಸಾವಿಗೂ ಸಂಬಂಧ ಇದ್ದೀತೆ? ಕುಳಿತಲ್ಲೇ ನಡುಗಿದೆ. ಹೆಚ್ಚು ಕಾಲವಾಗಲಿಲ್ಲ ಅವಳಿಲ್ಲಿಗೆ ಬಂದು. ಒಂದು ವರ್ಷಕ್ಕೆ ಸಮೀಪವಾಯಿತಷ್ಟೆ. ಇಷ್ಟರಲ್ಲೇ ಇಂತಹ ಒಂದು ಅನಾಹುತಕ್ಕೆ ಕಾರಣಳಾಗಿದ್ದಾಳೆ ಅಂದರೆ ಇವಳನ್ನು ಸಾಮಾನ್ಯ ದಾಸಿ ಎಂದು ಭಾವಿಸಬಹುದೆ?
“ಅಮ್ಮಾ, ನಾನು ಸೈರಂಧ್ರಿ. ರಾಣೀವಾಸದ ಸ್ತ್ರೀಯರ ಕೇಶಾಲಂಕಾರವನ್ನು ಚೆನ್ನಾಗಿ ಬಲ್ಲೆ. ಹಾಗೆಂದು ಕೇವಲ ಪರಿಚಾರಿಕೆಯಾಗಿ ನೋಡಬಾರದು. ಏನೋ ಜೀವನದಲ್ಲಿ ಒದಗಿದ ಸಂಕಷ್ಟದಿಂದಾಗಿ ಗಂಧರ್ವರಾದ ನನ್ನ ಐವರು ಗಂಡಂದಿರಿಂದ ದೂರವಿರಬೇಕಾಗಿ ಬಂದಿದೆ. ಒಂದು ವರ್ಷ ನಿಮ್ಮಲ್ಲಿ ಸೇವೆ ಮಾಡಿಕೊಂಡಿರುವ ಅವಕಾಶ ನೀಡಿದರೆ ಕೃತಜ್ಞಳಾಗಿರುತ್ತೇನೆ.” ಹೀಗೆಂದು ದೀನಳಾಗಿ ಯಾಚಿಸಿದ ಅವಳನ್ನು ಒಮ್ಮೆ ನಖಶಿಖಾಂತ ದಿಟ್ಟಿಸಿ ನೋಡಿದೆ. ಎಂತಹ ಆಕರ್ಷಣೆ! ಕೃಷ್ಣವರ್ಣೆ. ಆದರೆ ಕಪ್ಪೂ ಕೂಡ ಹೀಗೆ ಕಣ್ಮನಗಳನ್ನು ಸೆಳೆಯುವುದುಂಟೆ? ದೈವಿಕ ಲಾವಣ್ಯದಿಂದ ಕಂಗೊಳಿಸುತ್ತಿದ್ದ ಆಕೆಯನ್ನು ತಿರಸ್ಕರಿಸುವ ಮನಸ್ಸಾಗಲಿಲ್ಲ ನನಗೆ. ಹಾಗೆಂದು ಒಮ್ಮೆಲೇ ಒಪ್ಪಿಗೆ ಕೊಡುವುದೂ ಸಾಧ್ಯವಿರಲಿಲ್ಲ. ಅವಳೊಮ್ಮೆ ನನ್ನ ಅಂತಃಪುರ ಸೇರಿದರೆ ಮುಂದೇನಾದೀತು ಎಂಬ ಎಚ್ಚರವೂ ನನಗಿತ್ತು. ನನ್ನ ಗಂಡ ವಿರಾಟ ಭೂಪತಿ ಶ್ರೀರಾಮನೇನಲ್ಲ. ಇವಳನ್ನು ಕಂಡ ಮೇಲೂ ಮೋಹಿತನಾಗದಿರುವಷ್ಟು ಪತ್ನೀವ್ರತನೂ ಅಲ್ಲ. ಮಹಾರಾಜರ ರಾಣೀವಾಸಗಳಲ್ಲಿ ಏನೆಲ್ಲಾ ಸೇವೆಗಳನ್ನು ದಾಸಿಯರು ಮಾಡಬೇಕಾಗುತ್ತದೋ ಅದನ್ನೆಲ್ಲ ಇವಳಿಂದಲೂ ಬಯಸಿದರೆ? ಆದರೂ ಭೂಪತಿಯನ್ನು ಹದ್ದುಬಸ್ತಿನಲ್ಲಿಡುವುದು ನನಗೆ ಸಾಧ್ಯವಿತ್ತು. ನನ್ನ ಗಂಡ ಪುಕ್ಕಲ. ಇವಳ ಗಂಧರ್ವಪತಿಯರ ಭೀತಿ ಹುಟ್ಟಿಸಿದರೆ ಸಾಕಾದೀತು. ಆದರೆ?
ನಾನು ಚಿಂತಿತಳಾದ್ದು ಅದಕ್ಕಲ್ಲ. ಅಪಾಯ ಬೇರೆಯೇ ಇತ್ತು. ಇವಳ ಚೆಲುವನ್ನು ಕಂಡ ದಾಸಿಯರು ಪಿಸುಗುಡುತ್ತಿದ್ದುದು ನನ್ನ ಗಮನಕ್ಕೆ ಬಾರದಿರಲಿಲ್ಲ. ಅವರು ಪಿಸುಗುವುದೇನು ಅಂತ ನನಗರ್ಥವಾಗಿತ್ತು. ಆದ್ದರಿಂದಲೇ ನನಗೆ ಆತಂಕವಾದದ್ದು. ನನ್ನ ತಮ್ಮನಿದ್ದನಲ್ಲ ಕೀಚಕ. ನನ್ನ ಮದುವೆಯಾಗಿ ನಾನು ಮತ್ಸ್ಯಕ್ಕೆ ಬರುವಾಗ ನನ್ನೊಂದಿಗೆ ಬಂದವ. ಅವನ ಪ್ರತಾಪ ಗೊತ್ತಿದ್ದ ನನಗೆ ಅವನು ಬರುವುದು ಇಷ್ಟವಿರಲಿಲ್ಲ. ನನ್ನ ಇಷ್ಟಾನಿಷ್ಟಗಳನ್ನು ಕೇಳುವವರು ಯಾರಿದ್ದರು? ಅಂತೂ ಬಂದ. ದುರ್ಬಲ ಕ್ಷತ್ರಿಯನಾಗಿದ್ದ ನನ್ನ ಗಂಡನಿಗೆ ಕೀಚಕನಂತಹ ಬಲಾಢ್ಯ ಬೇಕಿತ್ತು. ಪರಿಣಾಮವಾಗಿ ಅವನ ಮೇಲಿನ ಅವಲಂಬನೆ ಹೆಚ್ಚಿತು. ಅವನೇ ಮತ್ಸ್ಯದ ಸೇನಾಪತಿಯಾದ. ಆಡಳಿತದಲ್ಲಿ ಕೀಚಕನಿಗೆ ಕಿಂಚಿತ್ತೂ ಆಸಕ್ತಿಯಿರಲಿಲ್ಲ. ಅವನಿಗೆ ಆಸಕ್ತಿ ಇದ್ದುದು ನನ್ನ ಅಂತಃಪುರದ ಸುಂದರಿಯರಾದ ದಾಸಿಯರ ಬಗ್ಗೆ ಮಾತ್ರ. ಮಹಾಕಾಮುಕ. ಅವನನ್ನು ನನ್ನ ತಮ್ಮ ಎಂದು ಇತರರು ಗುರುತಿಸುವುದೇ ಇಷ್ಟವಿರಲಿಲ್ಲ, ನನಗೆ.
ವಾರಕ್ಕೊಮ್ಮೆಯಾದರೂ ನನ್ನ ಬಳಿಗೆ ಬಂದೇ ಬರುತ್ತಿದ್ದ. ಅಕ್ಕ ಎಂಬ ಅಕ್ಕರೆಯಿಂದಲ್ಲ; ಹೊಸ ಪರಿಚಾರಿಕೆ ಬಂದಿದ್ದಾಳೆಯೇ ಎಂದು ತಿಳಿಯುವುದಕ್ಕೆ. ಅವನು ಬಂದನೆಂದರೆ ಸಾಕು; ದಾಸಿಯರೆಲ್ಲ ಗಡಗಡ ನಡುಗುತ್ತಿದ್ದರು. ಅವನಿಗೆ ಚಂದ ಕಂಡರೆ ಹರೆಯದವಳೋ, ಮುದುಕಿಯೋ ಎಂದು ಕೂಡ ನೋಡುತ್ತಿರಲಿಲ್ಲ. “ಇವತ್ತು ರಾತ್ರಿ ಮಂದಿರಕ್ಕೆ ಬಂದುಬಿಡು” ಎಂದು ಆಜ್ಞಾಪಿಸಿಬಿಡುತ್ತಿದ್ದ. ಅಸಹಾಯಕವಾದ ದಾಸೀವೃಂದ ಮೌನವಾಗಿ ಸಹಿಸಿಕೊಳ್ಳುತ್ತಿತ್ತು. ಸಹಿಸದೆ ಮತ್ತೇನು ತಾನೇ ಮಾಡುವುದು? ಮಹಾರಾಜರಲ್ಲಿ ದೂರುವುದಕ್ಕೆ ಧೈರ್ಯ ಸಾಲದು. ದೂರಿ ಪ್ರಯೋಜನವೂ ಇಲ್ಲ. ಪ್ರಾರಂಭಕ್ಕೆ ಒಂದಿಬ್ಬರು ನನ್ನಲ್ಲಿ ದೂರಿಕೊಂಡದ್ದುಂಟು. ನಾನೂ ಅವನನ್ನು ಕರೆದು ಆಕ್ಷೇಪಿಸಿದಾಗ, ಏನೇನೋ ಹೇಳಿ ತಪ್ಪಿಸಿಕೊಂಡ. ಆದರೆ ತನ್ನ ಚಾಳಿ ಬಿಡಲಿಲ್ಲ. ಗದರಿಸಿದರೆ ಎದುರು ತಿರುಗಿದ. ಮಹಾರಾಣಿಯಾದ ನಾನೇ ಅಸಹಾಯಳಾದೆ. ಅವನನ್ನು ಶಿಕ್ಷಿಸುವುದು ನನ್ನಿಂದ ಸಾಧ್ಯವಿರಲಿಲ್ಲ. ದಿನೇದಿನೇ ಅವನ ಉಪಟಳ ಹೆಚ್ಚುತ್ತ ಹೋಯಿತು. ಅರಮನೆಗೆ ಕೆಲಸಕ್ಕೆ ಬರಲು ಹೆಣ್ಣುಮಕ್ಕಳು ಅಂಜುವ ಸ್ಥಿತಿ ಉಂಟಾಯಿತು. ಬಲಿಷ್ಠನಾಗಿದ್ದ ಅವನು ನಮ್ಮ ಅಂಕೆ ಮೀರಿ ಬೆಳೆದುಬಿಟ್ಟ. ಮತ್ಸ್ಯದೇಶಕ್ಕೆ ಭದ್ರಕವಚವಾಗಿದ್ದ ಕೀಚಕನನ್ನು ಎದುರು ಹಾಕಿಕೊಳ್ಳುವುದು ಮಹಾರಾಜನಿಗೂ ಶಕ್ಯವಿರಲಿಲ್ಲ. ಉಪಾಯಾಂತರದಿಂದ ಅವನನ್ನು ತವರಿಗೆ ಕಳುಹಿಸುವ ನನ್ನ ಯತ್ನವೂ ಫಲಿಸಲಿಲ್ಲ. ಸೆರಗಿನ ಕೆಂಡವಾದ ಕೀಚಕ.
ಕೀಚಕನೆಂಬ ಈ ವಿಷವೃಕ್ಷ ಬೆಳೆಯುತ್ತಿದ್ದಂತೆ ನಾನು ಖಿನ್ನಳಾಗುತ್ತ ಹೋದೆ. ನನ್ನ ಮಗ ಉತ್ತರಕುಮಾರ ಅವನ ದೆಸೆಯಿಂದ ಭೀರುವಾಗಿ, ಬಡಾಯಿಕೋರನಾಗಿ ಹಾಸ್ಯದ ವಸ್ತುವಾದ. ಆದರೆ ಉತ್ತರ ಪುಕ್ಕಲನಾದರೂ ಕೀಚಕನಂತೆ ದುಷ್ಟನಾಗಿರಲಿಲ್ಲ. ಅದೇ ಕಾರಣಕ್ಕೆ ಅವನನ್ನು ನಾನು ತುಂಬ ವಾತ್ಸಲ್ಯದಿಂದ ಕಾಣುತ್ತಿದ್ದೆ. ಉತ್ತಮ ಕ್ಷತ್ರಿಯವೀರನೊಬ್ಬನ ಸಾಂಗತ್ಯ ಒದಗಿದರೆ ನನ್ನ ಮಗನೂ ಯೋಗ್ಯನಾದಾನು ಎಂಬ ಭರವಸೆ ಮನಸ್ಸಿನಲ್ಲಿತ್ತು. ಹೀಗೇ ದಿನಗಳು ಸವೆಯುತ್ತಿದ್ದವು. ನಮ್ಮ ರಾಜ್ಯಕ್ಕೆ ಬಾಹ್ಯ ಶತ್ರುಗಳ ಭಯವಿರಲಿಲ್ಲ. ಅದರೆ ಸ್ವಂತ ತಮ್ಮನೇ ನನ್ನ ಶತ್ರುವಾಗಿದ್ದ.
ಇಂತಹ ಸನ್ನಿವೇಶದಲ್ಲಿ ಅವಳ ಪ್ರವೇಶವಾದದ್ದು. ನಮ್ಮಲ್ಲಿ ಕೆಲಸ ಬೇಡಿ ಬಂದಿದ್ದಳು. ಅವಳ ವಿನಯ, ಸಂಸ್ಕಾರಗಳು ಯಾರೋ ಕುಲೀನಳೇ ಇರಬೇಕು ಎಂಬ ವಿಶ್ವಾಸ ಮೂಡುವಂತೆ ಮಾಡಿದವು. ಏನೋ ಆಪತ್ತಿಗೆ ಸಿಲುಕಿ ಹೀಗೆ ಬಂದಿದ್ದಾಳೆ ಅಂದುಕೊಂಡೆ. ಅಂತಃಪುರದಲ್ಲೇನೋ ಅವಳನ್ನಿಟ್ಟುಕೊಳ್ಳಬಹುದು. ಆದರೆ….. ಮತ್ತದೇ ಆತಂಕ; ಕೀಚಕನದು. ಆದರೂ ಏನೋ ವಿಚಿತ್ರ ಅನುಭೂತಿಗೆ ಒಳಗಾಗಿ ಸೈರಂಧ್ರಿಯನ್ನು ಸೇರಿಸಿಕೊಂಡೆ. ಕೀಚಕನೇನೋ ನನ್ನ ಅಂತಃಪುರಕ್ಕೆ ಆಗಾಗ ಬರುತ್ತಿದ್ದನಾದರೂ ಸೈರಂಧ್ರಿ ಅವನ ಕಣ್ಣಿಗೆ ಬೀಳದಂತೆ ತಪ್ಪಿಸುತ್ತಿದ್ದೆ. ಇತರ ದಾಸಿಯರಿಗೂ ಎಚ್ಚರಿಕೆ ಕೊಟ್ಟಿದ್ದೆ. ನನ್ನ ಈ ಆತಂಕವನ್ನು ಅವಳಿಗೆ ಹೇಳದಿದ್ದರೂ ಅರ್ಥಮಾಡಿಕೊಂಡಳು; ಜಾಣೆ. ಕೆಲವು ತಿಂಗಳುಗಳು ಕಳೆದವು. ಅಂತರ್ಮುಖಿಯಾಗಿಯೇ ಇರುತ್ತಿದ್ದ ಸೈರಂಧ್ರಿಯ ಹಿನ್ನೆಲೆಯನ್ನು ತಿಳಿಯಲು ನನ್ನಿಂದಾಗಲಿಲ್ಲ. ಅವಳಾಗಿ ಹೇಳಿದಾಗ ತಿಳಿಯುತ್ತದೆಂದು ಸುಮ್ಮನಿದ್ದೆ. ಅವಳ ವ್ಯಕ್ತಿತ್ವದ ವರ್ಚಸ್ಸು ನನ್ನಲ್ಲಿ ಅಂಜಿಕೆಯನ್ನು ಉಂಟುಮಾಡುತ್ತಿತ್ತೆಂದರೂ ಸರಿಯೇ. ಮಹಾರಾಣಿಯೊಬ್ಬಳು ದಾಸಿಯಲ್ಲಿ ವ್ಯವಹರಿಸುವಂತೆ ನಾನವಳಲ್ಲಿ ವರ್ತಿಸುತ್ತಿರಲಿಲ್ಲ. ಕಾಲಪ್ರವಾಹ ಪ್ರವಹಿಸುತ್ತಲೇ ಇತ್ತು.
* * *
ಸದ್ಯ, ಸೈರಂಧ್ರಿ ಕೀಚಕನ ಕಣ್ಣಿಗೆ ಬೀಳದೆ ಇದ್ದಾಳಲ್ಲ ಎಂಬ ಸಮಾಧಾನದ ನಿಟ್ಟುಸಿರು ಬಿಡುತ್ತಿರುವಾಗಲೇ ಬರಸಿಡಿಲು ಎರಗಿಯೇ ಬಿಟ್ಟಿತು. ಆ ದಿನ ನನ್ನ ಕೇಶಾಲಂಕಾರ ಮಾಡುತ್ತ ಸೈರಂಧ್ರಿ ಬಳಿಯಲ್ಲಿದ್ದಾಗಲೇ ಈ ಧೂರ್ತ ಒಳಗೆ ಬರಬೇಕೇ! ಯಾವಾಗಲೂ ತಿಳಿಸಿಯೇ ಬರುತ್ತಿದ್ದವ ಈ ದಿನ ಅನಿರೀಕ್ಷಿತವಾಗಿ ನನ್ನ ಅಂತಃಪುರಕ್ಕೆ ನುಗ್ಗಿದ್ದ. ದಿಗ್ಭ್ರಾಂತಳಾದ ನಾನು ಆಕ್ರೋಶದಿಂದ ಗದರಿದೆ, “ಏನೋ ಇದು? ಅನುಮತಿಯಿಲ್ಲದೆ ರಾಣೀವಾಸವನ್ನು ಹೊಗುವಷ್ಟು ಉದ್ಧಟನಾದೆಯ? ಸಂಸ್ಕಾರಹೀನನಂತೆ ನಡೆದುಕೊಳ್ಳಬೇಡ. ಹೊರಹೋಗು ಮೂರ್ಖ…” ನನ್ನ ನುಡಿಗಳನ್ನು ಉಪೇಕ್ಷಿಸುವವನಂತೆ ವಕ್ರನಗುವಿನೊಂದಿಗೆ ಹೇಳಿದನವ, “ಅಕ್ಕನ ಅಂತಃಪುರವಲ್ಲವೆ, ಬಂದರೇನಾಯಿತು? ನಾನು ಇವರಿಗೆ ಹೊಸಬನೇನು?” ಅವನ ಮಾತು ಮುಗಿವ ಮುನ್ನವೇ ನಾನು ಕಿರುಚಿದಂತೆ ಹೇಳಿದೆ, “ಅಕ್ಕನ ಅಂತಃಪುರವಾದರೇನು, ನಿನಗೆ ವಿವೇಚನೆ ಬೇಡವೆ?…..” ಇನ್ನೂ ಏನೇನೋ ಹೇಳುವವಳಿದ್ದೆ. ಆದರೆ ಕೀಚಕ ನನ್ನತ್ತ ಗಮನವೇ ಇಟ್ಟಿರಲಿಲ್ಲ. ಅವನ ಕಣ್ಣು ನೆಟ್ಟಿದ್ದುದು ಸೈರಂಧ್ರಿಯ ಮೇಲೆ.
“ಅಕ್ಕಾ, ಇವಳ್ಯಾರೆ? ಹೊಸ ದಾಸಿಯೆ ಈ ಸುಂದರಿ? ನಿನ್ನ ಅಂತಃಪುರದಲ್ಲಿ ಇಲ್ಲಿಯವರೆಗೆ ನೋಡಲೇ ಇಲ್ಲವಲ್ಲ! ನಿಜವಾದ ಚೆಲುವೆ. ಅಪ್ಸರೆ…. ಆಹಾ….” ಅವನು ಏನೇನೋ ಬಡಬಡಿಸತೊಡಗಿದ್ದ. ಬಹುಶಃ ಇತರರಿಂದ ಕೇಳಿರಬೇಕು; ಸೈರಂಧ್ರಿಗೂ ಬಂದವ ಕೀಚಕ ಅನ್ನುವುದು ಅರ್ಥವಾಗಿರಬಹುದು. ಕೊಂಚ ಆತಂಕದಿಂದಲೇ ನನ್ನನ್ನೊಮ್ಮೆ; ಅವನನ್ನೊಮ್ಮೆ ನೋಡತೊಡಗಿದಳು. ಕೀಚಕನನ್ನು ಅಂತಃಪುರದಿಂದ ಹೊರಡಿಸಬೇಕಾದರೆ ನನಗೆ ಸಾಕೋಸಾಕಾಯಿತು. ಆದರೇನು? ಮರುದಿನ ಮತ್ತೆ ಬಂದ. ಅದರ ಮರುದಿನವೂ…. ದಿನಾ ಬರತೊಡಗಿದ. ಬರುತ್ತಿದ್ದುದು ಅವಳಿಗಾಗಿಯೇ. ಅವನದೊಂದೇ ಬೇಡಿಕೆ, “ಅಕ್ಕಾ, ಆ ಸೈರಂಧ್ರಿಯ ಸಂಗವನ್ನೊಮ್ಮೆ ಒದಗಿಸಿಕೊಡು. ಅವಳಿಂದಾಗಿ ನಾನು ನಿತ್ಯ ಸಾಯುತ್ತಿದ್ದೇನೆ. ನನಗೆ ಬೇರೇನೂ ಬೇಡ” ಅವನ ಮನಸ್ಸನ್ನು ಅವಳಿಂದ ಸರಿಸಲು ಶತಪ್ರಯತ್ನ ಮಾಡಿದೆ. ನೀತಿ ಹೇಳಿದೆ; ಹೆದರಿಸಿದೆ; ಅಂಗಲಾಚಿದೆ; ಉಹೂಂ. ಏನು ಹೇಳಿದರೂ ಅವನ ವರಸೆ ಅದೇ. ನಾನು ಕೊನೆಯ ಬಾಣ ಬಿಟ್ಟೆ. “ತಮ್ಮಾ, ಅವಳ ಗೋಜು ನಿನಗೆ ಬೇಡ. ಅವಳಿಗೆ ಪರಾಕ್ರಮಶಾಲಿಗಳಾದ ಐವರು ಗಂಧರ್ವ ಪತಿಯರಿದ್ದಾರೆ. ಅವಳನ್ನು ನೀನು ಕೆಣಕಿದ್ದು ತಿಳಿದರೆ….”
“ಹ… ಹ್ಹಾ… ಹ…. ಹ್ಹ…. ಹ….” ನನ್ನ ಮಾತು ಮುಗಿಯುವ ಮುನ್ನವೇ ಅವನ ಅಬ್ಬರದ ನಗು ಮೊಳಗಿತು. “ಏನು, ಒಬ್ಬಳಿಗೆ ಐವರು….? ಅದಿನ್ನೂ ಒಳಿತೇ ಆಯಿತು. ನಾನೊಬ್ಬ ಹೆಚ್ಚಾಗಲಿಕ್ಕಿಲ್ಲ…. ನನ್ನ ಮಂದಿರಕ್ಕೆ ಅವಳನ್ನು ಕಳಿಸಿಕೊಡು.” ಅವನ ಶಾಸನಕ್ಕೆ ನಾನು ಮಾತಿಲ್ಲದೆ ಮರುಗಿದೆ. ಸೈರಂಧ್ರಿ ಆರ್ತಳಾಗಿದ್ದಳು; ಅಸಹಾಯಳಾಗಿದ್ದಳು. ಏನು ಮಾಡಲಿ, ನಾನೂ ಅದೇ ಆಗಿದ್ದೆನಷ್ಟೆ? ಅವಳ ಯಾವ ವಿನಂತಿಗೂ ಮನ್ನಣೆ ಕೊಡುವುದು ನನ್ನಿಂದ ಸಾಧ್ಯವಿರಲಿಲ್ಲ. ಅಶ್ರುಪೂರಿತ ನಯನಗಳೊಂದಿಗೆ ಅವಳಾಡಿದ ಕೊನೆಯ ಮಾತು, “ಮಹಾರಾಜ್ಞಿ, ದಯವಿಟ್ಟು ನನ್ನನ್ನು ಅಲ್ಲಿಗೆ ಕಳುಹಿಸಬೇಡಿ. ಇದೇನಾದರೂ ನನ್ನವರಿಗೆ ತಿಳಿದರೆ… ಅನಾಹುತವಾದೀತು. ನಾನು ನಿಮ್ಮ ಇತರ ದಾಸಿಯರಂತೆ ಅವನಿಗೆ ವಶಳಾಗತಕ್ಕವಳಲ್ಲ. ನನ್ನನ್ನವನು ಕೆಣಕಿದರೆ ಅದೇ ಅವನ ಮೃತ್ಯುವಿಗೆ ಆಹ್ವಾನ ನೀಡಿದಂತೆ. ಬೇಡ….”
ಅವಳಾಡಿದ ಕೊನೆಯ ಮಾತು ನನ್ನ ಯೋಚನೆಯ ಗತಿಯನ್ನೇ ಬದಲಿಸಿಬಿಟ್ಟಿತು. ಅಂದರೆ ಇವಳು ಕೀಚಕನಿಗೆ ಅಂಜುತ್ತಿಲ್ಲ. ತನ್ನನ್ನು ಕೆಣಕಿ ಅವನೇ ಉಳಿಯಲಾರ ಎಂಬ ಮಾತು ಒಣ ವಿಶ್ವಾಸವಲ್ಲ; ದೈವದ ಮೇಲೆ ಶ್ರದ್ಧೆಯಿಟ್ಟು ಆಡಿದ ನುಡಿಗಳೂ ಅಲ್ಲ. ತನ್ನ ಮಾತು ನಡೆದೇ ಸಿದ್ಧ ಎನ್ನುವಂತೆ ಸಹಜವಾಗಿ ಆಡಿಬಿಟ್ಟಿದ್ದಳು. ಓ…. ನನ್ನ ಇತರ ದಾಸಿಯರಂತೆ ಕರುಣೆಗೆ ಪಾತ್ರಳಾಗುವುದು ಇವಳ ಉದ್ದೇಶವಲ್ಲ. ಕೀಚಕನಿಗೇ ಮೃತ್ಯು ಬಂದೀತೆಂದರೆ? ನಮ್ಮ ಕ್ಷೇಮಕ್ಕಾಗಿ ನನ್ನನ್ನು ಎಚ್ಚರಿಸುತ್ತಿದ್ದಾಳೇನು? ಎಲಾ ಇವಳ ಆತ್ಮವಿಶ್ವಾಸವೇ! ಒಂದಷ್ಟು ಹೊತ್ತು ಮೌನವಾಗಿದ್ದ ನಾನು ಮಹಾರಾಣಿಯ ಗತ್ತಿನಿಂದ ಆಜ್ಞೆ ಮಾಡಿದೆ, “ಸೈರಂಧ್ರಿ, ಹೆಚ್ಚು ಮಾತು ಬೇಡ. ನಿನ್ನ ಪತಿಗಳ ಬೆದರಿಕೆ ನನಗಿಲ್ಲ. ಅವರೆಷ್ಟೇ ಬಲಿಷ್ಠರಾಗಿರಲಿ, ನನ್ನ ತಮ್ಮ ಅದನ್ನೆಲ್ಲ ಗಣಿಸುವವನಲ್ಲ. ನಿನ್ನನ್ನು ಉಳಿಸುವುದಕ್ಕೆ ಬರುವ ನಿನ್ನ ಗಂಧರ್ವಪತಿಗಳ ಆಯುಸ್ಸು ತೀರಿತೆಂದು ತಿಳಿ. ನಾಳೆ ಮಧುಪಾತ್ರೆಯನ್ನು ಒಯ್ದು ಕೀಚಕನ ಮಂದಿರದಿಂದ ಮಧುವನ್ನು ತರುವುದು ನಿನ್ನ ಹೊಣೆ. ತಿಳಿಯಿತೆ?”
ಅವಳೇನೆಂದುಕೊಂಡಳೊ, ನನ್ನ ಮುಖವನ್ನೇ ಕ್ಷಣಕಾಲ ದಿಟ್ಟಿಸಿದಳು. ನಾನು ನಿರ್ಧಾರದ ಕಠಿಣತೆಯನ್ನು ದೃಷ್ಟಿಯಲ್ಲಿ ತುಂಬಿದೆ. ತಲೆತಗ್ಗಿಸಿ ನಿಂತಳು. ಪರಿಚಾರಿಕೆಯರೆಲ್ಲ ನನ್ನ ಈ ಚರ್ಯೆಯಿಂದ ಬೆರಗುವಟ್ಟು ನಿಂತಿದ್ದರು. ಕೊನೆಗೆ ಸೈರಂಧ್ರಿ ಇಳಿದನಿಯಲ್ಲಿ ನುಡಿದಳು, “ಸರಿ ಮಹಾರಾಣಿ. ಹಾಗೆಯೇ ಆಗಲಿ.”
* * *
ಮುಂದಿನದೆಲ್ಲ ನಾನು ಊಹಿಸಿದಂತೆ ನಡೆಯಿತು. ತನ್ನ ಮಂದಿರಕ್ಕೆ ಬಂದ ಸೈರಂಧ್ರಿಯನ್ನು ಕೆಣಕುವುದಕ್ಕೆ ಹೋದ ಕೀಚಕ ಅಜ್ಞಾತ ವೀರನೊಬ್ಬನಿಂದ ಪೆಟ್ಟು ತಿಂದ. ಕೀಚಕನ ಮೇಲೆ ಕೈ ಮಾಡುವವರಿಲ್ಲ ಎಂಬ ಪ್ರತೀತಿ ಹುಸಿಯಾಗಿಹೋಯಿತು. ಆ ದಿನ ಸೈರಂಧ್ರಿ ನನ್ನಲ್ಲಿ ಮುನಿಸಿಕೊಂಡಿದ್ದಂತೆ ತೋರಿತು. ನಾನೂ ಮಾತನಾಡಿಸುವುದಕ್ಕೆ ಮುಂದಾಗಲಿಲ್ಲ. ಸಾಯಂಕಾಲದ ಹೊತ್ತಿಗೆ ಅರಮನೆಯ ಪಾಕಶಾಲೆಯ ಸಮೀಪ ಸುಳಿದಾಡುತ್ತಿದ್ದಳೆಂದು ಯಾರೋ ಸುದ್ದಿ ತಂದಿದ್ದರು. ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಮೌನವಹಿಸಿದೆ.
ನಾನು ಅವಳನ್ನು ರಕ್ಷಿಸುವ ಪ್ರಯತ್ನವನ್ನೇ ಮಾಡಲಿಲ್ಲವೆಂಬ ಮುನಿಸು ಅವಳಿಗಿದ್ದರೂ ಇದ್ದಿರಬಹುದು. ಅಥವಾ, ಬುದ್ಧಿವಂತೆಯಾದ ಅವಳಿಗೆ ನನ್ನ ಅಸಹಾಯಸ್ಥಿತಿ ಅರಿವಾಗಿರಲೂಬಹುದು. ಕೀಚಕ ಸತ್ತಮೇಲೆ ಅಡಗಿಸುವುದಕ್ಕೇನಿದೆ? ಇದೆಲ್ಲ ನನ್ನ ಯೋಜನೆಯೇ ಒಂದರ್ಥದಲ್ಲಿ. ಕೀಚಕನಿಂದ ಮುಕ್ತಿ ಪಡೆಯುವುದಕ್ಕೆ ನಾನೇ ಹುಡುಕಿಕೊಂಡ ದಾರಿಯದು. ಸೈರಂಧ್ರಿಯ ಮೇಲೆ ಕೀಚಕನ ದೃಷ್ಟಿ ಬಿದ್ದಾಗಲೇ ಪಥಕವೊಂದನ್ನು ಕಂಡುಕೊಂಡೆ. ಹೇಗೂ ತನ್ನನ್ನು ಕೆಣಕಿದವರನ್ನು ತನ್ನ ಗಂಧರ್ವ ಪತಿಗಳು ನಾಶಮಾಡುತ್ತಾರೆಂದು ಅವಳೇ ವಿಶ್ವಾಸ ಹೊಂದಿದ್ದಳಲ್ಲ; ಕೀಚಕನಿಂದ ಬಿಡುಗಡೆ ಹೊಂದಲು ನನಗಿದ್ದ ದಾರಿ ಅದೊಂದೇ ಆಗಿತ್ತು. ಅವಳನ್ನು ಕೀಚಕ ಬಲಾತ್ಕರಿಸುವ ಯತ್ನಕ್ಕೆ ಅನುಕೂಲ ಕಲ್ಪಿಸಿದೆ. ಸಹಜವಾಗಿಯೇ ಕುಪಿತರಾದ ಸೈರಂಧ್ರಿಯ ಗಂಡಂದಿರು ಅವನನ್ನು ಮುಗಿಸಿಬಿಡುತ್ತಾರೆಂದು ಊಹಿಸಿದ್ದೆ. ಎಲ್ಲವೂ ನಾನೆಣಿಸಿದಂತೆ ನಡೆಯಿತು. ಜೀವನದಲ್ಲಿ ಈಗ ಉಂಟಾದ ನಿರಾಳತೆಯನ್ನು ಇಲ್ಲಿಯವರೆಗೆ ಅನುಭವಿಸಿರಲಿಲ್ಲ ನಾನು.
ಆದರೂ? ಎಲ್ಲೋ ಮನಸ್ಸಿನ ಒಂದು ಮೂಲೆಯಲ್ಲಿ ಅಪರಾಧೀ ಭಾವ ಚುಚ್ಚಿದಂತಾಗುತ್ತಿದೆ. ಒಬ್ಬಳು ಸಹೋದರಿಯಾಗಿ ಸ್ವಂತ ತಮ್ಮನನ್ನೇ ಕೊಲ್ಲಿಸುವಷ್ಟು ಕಠಿಣ ಹೃದಯದವಳಾದೆನೆ? ಎಷ್ಟಾದರೂ ಅವನು ನನ್ನ ತಮ್ಮನಲ್ಲವೆ? ಸಾಹೋದರ್ಯದ ಮಾರ್ದವಭಾವವನ್ನು ಕಳೆದುಕೊಂಡು ಪಾಶವೀ ಪ್ರವೃತ್ತಿಯನ್ನು ತೋರಿದಂತಾಯಿತೆ ನಾನು? ಈ ತುಮುಲದೊಂದಿಗೆ ಸೈರಂಧ್ರಿಯ ಮುಖ ನೋಡಿದರೆ ಅವಳದು ಅದೇ ನಿರ್ಲಿಪ್ತ ಸ್ಥಿತಿ. ಯಾವ ವಿಕಾರವೂ ಇಲ್ಲದ ಶಾಂತಮುದ್ರೆ. ಉಳಿದ ದಾಸಿಯರನ್ನು ದಿಟ್ಟಿಸಿದರೆ….. ಹೊರಗೆ ಗಾಂಭೀರ್ಯದ ಮುಖವಾಡ ಧರಿಸಿ ಒಳಗಿಂದೊಳಗೆ ಬಿಡುಗಡೆಯ ಆನಂದವನ್ನು ಅನುಭವಿಸುತ್ತಿದ್ದಾರೆನ್ನಿಸಿತು. ಇವರನ್ನು ನಿತ್ಯ ಕಾಡುತ್ತಿದ್ದ ದುಃಸ್ವಪ್ನ ಶಾಶ್ವತವಾಗಿ ದೂರವಾಯಿತಲ್ಲ; ನಿಜಕ್ಕೂ ಅವರಿಗಿದು ಹಬ್ಬದ ದಿನ. ನಾನು ಕೀಚಕನ ಅಕ್ಕನಾಗಿ ಹೇಗೇ ವರ್ತಿಸಿರಲಿ, ಒಬ್ಬಳು ಹೆಣ್ಣಾಗಿ ಸರಿಯಾದುದನ್ನೇ ಮಾಡಿದ್ದೇನೆ ಎಂಬ ಸಮಾಧಾನ ಅಂತರಂಗವನ್ನು ತುಂಬಿಕೊಳ್ಳತೊಡಗಿತು. ಸಾಕು, ನನ್ನಂತಹ ನೂರಾರು ಸ್ತ್ರೀಯರ ಕಣ್ಣೀರನ್ನು ಒರೆಸುವ ಒಳ್ಳೆಯ ಕೆಲಸ ಮಾಡಿದೆನಲ್ಲ, ಸಾಕು. ನನ್ನೊಳಗಿನ ಮುದ ಮುಖದಲ್ಲಿ ಕಾಣಿಸಿರಬೇಕು. ಅದು ಅಲ್ಲಿದ್ದ ದಾಸಿಯರೆಲ್ಲರ ಮುಖಗಳಲ್ಲಿ ನಗುವಿನ ಬೆಳಕಾಗಿ ಪ್ರತಿಫಲಿಸತೊಡಗಿತು. ಅಂತಃಪುರದೊಳಗೆ ದೀಪ ಹಚ್ಚಿದಂತೆ ಸೈರಂಧ್ರಿಯೂ ನಗು ಬೀರಿದಳು.?