ಮನುಷ್ಯನಿಗೆ, ತನಗೆ ದುಃಖವಾಗಬಾರದು, ಕಾಯಿಲೆಯಾಗಬಾರದು ಎಂದು ಅನಿಸುತ್ತದೆ. ಆದರೆ ಅವನಿಗೆ ಕಾಯಿಲೆ ಹಾಗೂ ದುಃಖಗಳನ್ನು ನಿವಾರಿಸಲು ಶಕ್ಯವಾಗುವುದಿಲ್ಲ. ಅಂದರೆ `ನಾನು ಕರ್ತಾ’ ಎಂಬ ಭಾವನೆಯು ನಿಶ್ಚಿತವಾಗಿಯೂ ಮಿಥ್ಯೆ ಆಗಿರುತ್ತದೆ. ಒಡೆತನವು ಇಲ್ಲದೇ ಇದ್ದರೂ ಮನೆಯ ಒಡೆತನವನ್ನು ಮೆರೆಸುವ ಪ್ರಯತ್ನ ಮಾಡುವ ನಮಗೇನೆನ್ನಬೇಕು? ಆದ್ದರಿಂದ ಪ್ರಾಪಂಚಿಕರಿಗೂ ಸತ್ಪುರುಷರಿಗೂ ಇರುವ ವ್ಯತ್ಯಾಸವೇನೆಂದರೆ ಅವರು ಕರ್ತೃತ್ವವನ್ನು ಭಗವಂತನ ಕಡೆಗೆ ಕೊಡುತ್ತಾರೆ, ನಾವು ಅದನ್ನು ನಮ್ಮ ಕಡೆಗೆ ತೆಗೆದುಕೊಳ್ಳುತ್ತೇವೆ. ರಾಮನು ಕರ್ತಾ ಎಂದರೆ ಸುಖ, ಕಲ್ಯಾಣ ಎಲ್ಲವೂ ಬಂದಂತೆ. ಎಲ್ಲವನ್ನೂ ಅವನಿಗೆ ಒಪ್ಪಿಸಿ ಆನಂದದಲ್ಲಿ ಇರಬೇಕು. ಇದರಲ್ಲಿಯೇ ನಿಜವಾದ ಹಿತವಿರುತ್ತದೆ. ಸಿಹಿಪದಾರ್ಥಗಳನ್ನು ಅವನಿಗೆ ತಿನ್ನಲು ಕೊಡಬೇಡಿರೆಂದು ಡಾಕ್ಟರರು ಗಟ್ಟಿಯಾಗಿ ಹೇಳಿದ್ದರೂ ಕೂಡ, ರೋಗಿಯ ಇಚ್ಛೆಗನುಸಾರವಾಗಿ ಸಿಹಿಪದಾರ್ಥಗಳನ್ನು ಅವನಿಗೆ ತಿನ್ನಲು ಕೊಟ್ಟರೆ, ನಾವು ಅವನ ಅಹಿತ ಮಾಡಿದಂತೆ ಆಗುತ್ತದೆ. ಅದರಂತೆ ವಿಷಯದ ಆಶೆಯಿಂದ ವಿಷಯಕ್ಕೆ ಬಲಿಬಿದ್ದು ನಾವು ನಮ್ಮ ಅಹಿತವನ್ನು ಮಾಡಿಕೊಳ್ಳುತ್ತೇವೆ. ಕಾಯಿಲೆಯಾದ ಮನುಷ್ಯನಿಗೆ ಮೂರು ಕೆಲಸ ಮಾಡಬೇಕಾಗುತ್ತದೆ; ಒಂದು – ಕುಪಥ್ಯ ಬಿಡುವುದು; ಎರಡು – ಪಥ್ಯ ಪಾಲಿಸುವುದು; ಮೂರು – ಔಷಧ ತೆಗೆದುಕೊಳ್ಳುವುದು. ಅದರಂತೆಯೇ ಭವರೋಗಿಗೂ ಕೂಡ ಮೂರು ಕೆಲಸ ಮಾಡಬೇಕಾಗುತ್ತದೆ. ಒಂದು – ದುಸ್ಸಂಗತಿ, ಅನಾಚಾರ, ಮಿಥ್ಯಾಭಾಷಣ, ದ್ವೇಷ, ಮತ್ಸರ ಮುಂತಾದ ಅವಗುಣಗಳನ್ನು ತ್ಯಾಗ ಮಾಡುವುದು; ಎರಡು – ಸತ್ಸಂಗತಿ, ಸದ್ಗ್ರಂಥ ಸೇವನೆ, ಸದ್ವಿಚಾರ ಹಾಗೂ ಸದಾಚಾರ ಇವುಗಳನ್ನು ಪಾಲಿಸುವುದು; ಮೂರು – ಅತ್ಯಂತ ಮಹತ್ತ್ವದ ಕೆಲಸವೆಂದರೆ ನಾಮಸ್ಮರಣೆ ಮಾಡುವುದು. ಇದು ಔಷಧಸೇವನೆಯಾಗಿರುತ್ತದೆ.
ನಾವು ನಮ್ಮ ನಾಲಿಗೆಗೆ ನಾಮದ ಚಟವನ್ನೇ ಹಚ್ಚಬೇಕು. ಮೊದಮೊದಲು ಮರೆಯುತ್ತದೆ. ಅಭ್ಯಾಸದಿಂದ ತಾನಾಗಿಯೇ ನೆನಪಾಗುತ್ತದೆ. ಆಮೇಲೆ ನಿಧಾನವಾಗಿ ಭಗವಂತನ ಅಸ್ತಿತ್ವದ ಅರಿವು ಆಗತೊಡಗುತ್ತದೆ. ಸಾಧನೆಯಲ್ಲಿ ಸ್ವಲ್ಪ ಆಗ್ರಹವಿರಬೇಕು. ನಿಯಮವು ಸ್ವಲ್ಪ ಇರಬೇಕು, ಆದರೆ ಅದನ್ನು ಪ್ರಾಣಕ್ಕಿಂತ ಹೆಚ್ಚಿಗೆ ಜೋಪಾನ ಮಾಡಬೇಕು. ನಿಯಮವು ತುಂಬಾ ಹೆಚ್ಚಿದ್ದರೆ ಮನಸ್ಸು ಅದನ್ನು ತಪ್ಪಿಸುವ ಮಾರ್ಗ ಹುಡುಕುತ್ತದೆ. ನಾಮ ತೆಗೆದುಕೊಳ್ಳುವುದೆಂದರೆ, ಭಗವಂತನ ಕಡೆಗೆ ನಡೆಯುತ್ತಿರುವುದಾಗಿರುತ್ತದೆ. ಸಾಧನೆಯಲ್ಲಿ ಮುಂದುವರಿದ ನಾವು ಹಿಂದೆ ಹೋಗುತ್ತಿಲ್ಲವಲ್ಲ? – ಎಂಬುದರ ಕಡೆಗೆ ಲಕ್ಷ್ಯ ಕೊಡಬೇಕು. ನಾಮದ ವಿಷಯದಲ್ಲಿ ತಳಮಳವು ಕಡಮೆಯಾಗುತ್ತ ಹೋಗುವುದಕ್ಕೆ ಹೊರಗಿನ ಅನೇಕ ಕಾರಣಗಳಿರುತ್ತವೆ. ನಿತ್ಯದ ಪ್ರಪಂಚ, ವ್ಯವಹಾರ, ಹಿಂದಿನ ನೆನಪು, ಮುಂದಿನ ಚಿಂತೆ ಮುಂತಾದವುಗಳಲ್ಲಿ ನಮ್ಮ ನಾಮಸ್ಮರಣೆಯನ್ನು ಆಗ್ರಹಪೂರ್ವಕವಾಗಿ ನಡೆಸಬೇಕು. ನಾಮದಲ್ಲಿ ರುಚಿ ಉತ್ಪನ್ನವಾಗುವುದಕ್ಕಾಗಿ ನಾಮವನ್ನೇ ತೆಗೆದುಕೊಳ್ಳಬೇಕು. ಭಗವಂತನಿಗೆ ಅತ್ಯಂತ ಪ್ರಿಯವಾದದ್ದೆಂದರೆ ಅವನ ನಾಮವಾಗಿರುತ್ತದೆ. ಅದನ್ನು ತೆಗೆದುಕೊಳ್ಳುವುದರಿಂದ ಅವನು ನಮ್ಮವನಾಗುತ್ತಾನೆ. ಹಾಗೂ ನಮಗೆ ನಿಶ್ಚಿತವಾಗಿಯೂ ದರ್ಶನ ಕೊಡುತ್ತಾನೆ. ನೀರು ಹೆಪ್ಪುಗಟ್ಟುವುದರಿಂದ ಬರ್ಫ ಆಗುತ್ತದೆ. ಅದರಂತೆ ನಾಮ ತೆಗೆದುಕೊಳ್ಳುವುದರಿಂದ ಶ್ರದ್ಧೆಯು ಗಟ್ಟಿಯಾಗುತ್ತದೆ. ಆ ಶ್ರದ್ಧೆಗಾಗಿ ಭಗವಂತನು ನಿಮಗೆ ದರ್ಶನ ಕೊಡಲೇಬೇಕಾಗುತ್ತದೆ. ಭಗವಂತ, ಭಕ್ತ ಹಾಗೂ ನಾಮ – ಈ ಮೂರೂ ತ್ರಿವೇಣೀ ಸಂಗಮವಿದ್ದಂತೆ. ಎಲ್ಲಿ ಭಗವಂತನೋ ಅಲ್ಲಿ ಭಕ್ತ ಹಾಗೂ ನಾಮ ಇರುತ್ತವೆ. ಅದರಂತೆ ಎಲ್ಲಿ ಭಕ್ತನಿರುತ್ತಾನೋ ಅಲ್ಲಿ ನಾಮ ಹಾಗೂ ಭಗವಂತರಿರುತ್ತಾರೆ.?
ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
[ಮಹಾರಾಜರ ಪ್ರವಚನಗಳಿಂದ.
ಕೃಪೆ : ಚೈತನ್ಯಾಶ್ರಮ ಹೆಬ್ಬಳ್ಳಿ].