ಕಳೆದ ಸಂಚಿಕೆಯಲ್ಲಿ………
ಅತ್ತೆಯ ನಡವಳಿಕೆಯಿಂದ ಬೇಸತ್ತ ವೈದೇಹಿ ಗಂಡ, ಮಗಳೊಂದಿಗೆ ಬೆಂಗಳೂರಿನಲ್ಲಿ ಹೊಸಬದುಕು ಕಟ್ಟಿಕೊಳ್ಳಲು ನಿರ್ಧರಿಸುತ್ತಾಳೆ. ಮೊದಲು ಗಂಡ-ಹೆಂಡತಿ ಇಬ್ಬರೇ ಬೆಂಗಳೂರಿಗೆ ಬಂದು, ಗೆಳತಿ ಪ್ರೇಮಾ ಮತ್ತವಳ ಪತಿಯ ಸಹಕಾರದೊಂದಿಗೆ ಮಗುವಿನ ಶಾಲೆಗೆ ಹತ್ತಿರವಾಗಿರುವ ಒಂದು ಪುಟ್ಟ ಮನೆಯನ್ನು ಬಾಡಿಗೆಗೆ ಹಿಡಿಯುತ್ತಾರೆ. ಬೆಂಗಳೂರಿನಲ್ಲಿ ಅಡುಗೆ-ತಿಂಡಿ, ಚಕ್ಕುಲಿ-ಕೋಡುಬಳೆ ಮಾಡಿಕೊಡುವುದು, ಎಲ್ಲರ ಮನೆಯ ಬಟ್ಟೆಗಳನ್ನು ಇಸ್ತ್ರಿ ಮಾಡಿಕೊಡುವುದು, ಮುಂತಾದ ಕೆಲಸಗಳನ್ನು ಮಾಡಲು ಆರಂಭಿಸುತ್ತಾರೆ. ಇದಕ್ಕೆ ಅಗತ್ಯವಿರುವ ಕೆಲವು ಸಾಮಗ್ರಿಗಳನ್ನು ಅರ್ಧಬೆಲೆಗೆ ಕೊಂಡುಕೊಳ್ಳುತ್ತಾರೆ. ಬಾಳಬಂಡಿ ನಿಧಾನವಾಗಿ ಉರುಳತೊಡಗುತ್ತದೆ…….
ಚಿನ್ಮಯಿ ಹೈಸ್ಕೂಲಿಗೆ ಸೇರಿದಳು. ಅಬ್ಬ! ದಿನಗಳು ಎಷ್ಟು ಬೇಗ ಕಳೆಯುತ್ತಿವೆ. ವೈದೇಹಿ, ನಾವಿಲ್ಲಿಗೆ ಬಂದು ಆಗಲೇ ಮೂರು ವರುಷಗಳಾಯಿತು ಎಂದ ಶೇಖರ.
ಕಳೆದ ಇಷ್ಟು ದಿನಗಳಲ್ಲಿ ಅವರು ದಿನಕ್ಕೆ ಒಂದು ಸಲ ಊಟ ಮಾಡಿದ್ದೇ ಹೆಚ್ಚಾಗಿತ್ತು. ಆದರೂ ಎಲ್ಲರ ಮುಖದಲ್ಲಿ ಸಂತೋಷ ತುಂಬಿತ್ತು. ವಾರಕ್ಕೊಮ್ಮೆ ಮರೆಯದೇ ಊರಿಗೆ ಫೋನು ಮಾಡಿ ತಂದೆಯೊಡನೆ ಮಾತನಾಡುತ್ತಿದ್ದ. ಮನಸ್ಸು ತಡೆಯದೇ ರಂಗಣ್ಣನವರು ಎರಡು ಸಲ ಬಂದು ನೋಡಿಕೊಂಡು ಹೋಗಿದ್ದರು. ಮಕ್ಕಳು ಪಡುತ್ತಿದ್ದ ಕಷ್ಟ ನೋಡಿ ವ್ಯಥೆಯಾಗಿದ್ದರೂ ಅವರಲ್ಲಿದ್ದ ಛಲಕ್ಕೆ ಅವರು ತೃಪ್ತಿ ಪಟ್ಟಿದ್ದರು.
ಒಂದು ರಾತ್ರಿ ಊಟದ ಸಮಯದಲ್ಲಿ ಶೇಖರ, ಅಮ್ಮನನ್ನು ನೋಡಬೇಕೆಂದು ಹಂಬಲವಾಗುತ್ತಿದೆ. ಮನೆಗೆ ಫೋನು ಮಾಡಿ ಅವಳೊಡನೆ ಒಂದು ಸಲ ಮಾತನಾಡಲೇ? ಎಂದು ಮೆಲುವಾಗಿ ಕೇಳಿದ.
ಅವರಾಗಿಯೇ ಹೇಳುವ ತನಕ ಮನೆಗೆ ಮಾಡಬಾರದೆಂದು ಮಾವ ಹೇಳಿದ್ದಾರಲ್ಲ! ಎಂದಳು ಅನುಕಂಪದಿಂದ.
ಮನಸ್ಸು ತಡೆಯುತ್ತಿಲ್ಲ, ಅಪ್ಪ ಹೇಗಿದ್ದಾರೋ, ಅಮ್ಮ ಒಬ್ಬಳೇ….. ಎಂದ ಸಂಕಟದಿಂದ.
ವೈದೇಹಿ ಅವನ ಸನಿಹಕ್ಕೆ ಸರಿದು, ನೋಡಿ, ನಿಮ್ಮ ತಂದೆ ಕಾರಣವಿಲ್ಲದೇ ಹಾಗೆ ಹೇಳುವವರಲ್ಲ. ಅವರೊಡನೆ ಮಾತು ಆಡುತ್ತಿದ್ದೇವೆ, ಎಲ್ಲರ ಯೋಗಕ್ಷೇಮ ತಿಳಿಯುತ್ತಿದೆ. ಅಷ್ಟು ಸಾಕು! ಊರಿಗೆ ಹೋಗಲು ಇನ್ನೂ ಕಾಲ ಕೂಡಿಬಂದಿಲ್ಲ. ಈಗ ಬೇಡ. ಸಮಾಧಾನದಿಂದ ಇರಿ ಎಂದು ಪತಿಯನ್ನು ಮಮತೆಯಿಂದ ಸಂತೈಸಿದಳು. ಅವಳಿಗೂ ಮನಸ್ಸು ತುಡಿಯುತ್ತಿತ್ತು.
ಅವರ ಮನಸ್ಸಿನ ಕೂಗು ರಂಗಣ್ಣನವರಿಗೆ ಕೇಳಿಸಿತೋ ಎಂಬಂತೆ ಮಾರನೆಯ ದಿನ ಅವರೇ ಫೋನು ಮಾಡಿದರು. ಕ್ಷೇಮ ಸಮಾಚಾರ ವಿಚಾರಿಸಿ, ಚಿನ್ಮಯಿಯೊಡನೆ ಮಾತನಾಡಿದರು. ಶೇಖರನಿಗೆ ಸ್ವಲ್ಪ ಸಮಾಧಾನವಾಯಿತು.
ಅಪ್ಪ, ಅಮ್ಮ ಹೇಗಿದ್ದಾಳೆ? ಎಂದ, ಧ್ವನಿಯಲ್ಲಿ ನೋವೇ ತುಂಬಿತ್ತು.
ಅವಳು ಚೆನ್ನಾಗಿಯೇ ಇದ್ದಾಳೆ. ನೋಡು ಶೇಖರಾ, ಅಪ್ಪಿತಪ್ಪಿಯಾದರೂ ನಿನ್ನ ಇಬ್ಬರು ಅಣ್ಣಂದಿರ ಮನೆಗೆ ಕಾಲಿಡಬೇಡ. ನಿಮ್ಮಮ್ಮ ನೀವುಗಳು ಅಲ್ಲಿಗೆ ಹೋಗುತ್ತಿರುವಿರೆಂದು ಸದಾ ಕೂಗಾಡುತ್ತಿರುತ್ತಾಳೆ. ಉಪವಾಸವಿದ್ದರೂ ಚಿಂತೆಯಿಲ್ಲ. ಅವರುಗಳ ಮನೆಗೆ ಹೋಗಬೇಡಿ. ನಾನು ಹೇಳುವವರೆಗೆ ನಿಮ್ಮಮ್ಮನೊಡನೆ ಫೋನಿನಲ್ಲಿ ಮಾತನಾಡಲೂ ಬೇಡಿ, ಇಲ್ಲಿಗೆ ಬರಲೂಬೇಡಿ ಎಂದು ಎಚ್ಚರಿಸಿದರು.
* * *
ಹೈಸ್ಕೂಲಿನ ಎರಡನೆಯ ವರುಷ ಮುಗಿದು ರಜಾ ಬಂದಿತು. ಬಿಡುವಿನ ವೇಳೆ ಚಿನ್ಮಯಿ ಕೆಲಸ ಮಾಡುತ್ತಿದ್ದಳು. ಶೇಖರ ಯಾರದೋ ಮನೆಗೆ ಊಟ ಕೊಡಲು ಆಟೋದಲ್ಲಿ ಹೋಗಿದ್ದ. ಈಗ ನೀರಿನಲ್ಲಿಯ ಮೀನಿನಂತೆ ಅವನು ಬೆಂಗಳೂರಿಗೆ, ಅವನ ವೃತ್ತಿಗೆ ಹೊಂದಿಕೊಂಡಿದ್ದ. ಲೆಕ್ಕ ಅವನ ನಾಲಗೆಯ ತುದಿಯಲ್ಲಿಯೇ ಇರುತ್ತಿತ್ತು. ಗೆಳತಿಯ ಸಹಾಯವನ್ನು ವೈದೇಹಿ ಮರೆತಿರಲಿಲ್ಲ. ಕಷ್ಟದ ಸಮಯದಲ್ಲಿ ತಮ್ಮ ಶಕ್ತಿಮೀರಿ ಸಹಾಯಹಸ್ತವನ್ನು ಚಾಚಿದ್ದ ದಂಪತಿಗಳನ್ನು ವೈದೇಹಿ ಶೇಖರ ಪ್ರತಿದಿನವೂ ಜ್ಞಾಪಿಸಿಕೊಳ್ಳುತ್ತಿದ್ದರು.
ಚಿನ್ನೂ… ಮಗಳನ್ನು ಕೂಗಿದಳು.
ಏನಮ್ಮ? ರೂಮಿನಿಂದ ಬಂದು ಕೇಳಿದಳು.
ಬಾ ಇಲ್ಲಿ, ಈ ಚಕ್ಕುಲಿಯ ಹಿಟ್ಟನ್ನು ಕವರುಗಳಿಗೆ ತುಂಬಿ ತೂಕ ಮಾಡಿ ಸೀಲ್ ಮಾಡಿಡು. ಸಂಜೆ ಕಳಿಸಬೇಕು ಅರಳಿನ ಉಂಡೆ ಮಾಡಲು ಪಾಕಕ್ಕೆ ಇಟ್ಟಿದ್ದ ವೈದೇಹಿ ಹೇಳಿದಳು.
ಅಮ್ಮ ನನಗೆ ಗಟ್ಟಿಯಾದ ಪಾಕವನ್ನು ಕೊಡು ಆಸೆಯಿಂದ ಕೇಳಿದಳು.
ಬಿಸಿಬಿಸಿಯಾದ ಉಂಡೆಯನ್ನೂ ಸಹ ತಿನ್ನುವೆಯಂತೆ. ನಿಮ್ಮಪ್ಪ ಬರುವ ಹೊತ್ತಿಗೆ ಹಿಟ್ಟಿನ ಕೆಲಸವನ್ನು ಮುಗಿಸು ಎಂದಳು.
ಚಿನ್ಮಯಿ ಅರ್ಧ ಕೆಜಿ ಮತ್ತು ಒಂದು ಕೆಜಿಯ ಕವರುಗಳಿಗೆ ಹಿಟ್ಟನ್ನು ತುಂಬಿ ತೂಕಮಾಡಿ ಮೊಂಬತ್ತಿಯಲ್ಲಿ ಸೀಲ್ ಮಾಡಿದಳು. ಆಮೇಲೆ ಒಂದು ಕಡೆಯಿಂದ ತೂಕ ಮತ್ತು ದರವನ್ನು ಬರೆದಿದ್ದ ಚೀಟಿಯನ್ನು ಅಂಟಿಸಿದಳು. ಎಷ್ಟೇ ಜಾಗರೂಕತೆಯಿಂದ ಮಾಡಿದರೂ ಬಟ್ಟೆಗೆ ಹಿಟ್ಟಾಗಿತ್ತು. ಅದನ್ನು ಬದಲಾಯಿಸಿ ಬರುವಷ್ಟರಲ್ಲಿ ಶೇಖರ ಬಂದ.
ಯಾಕೆ ತಡವಾಯಿತು? ವೈದೇಹಿ ಕಾಳಜಿಯಿಂದ ಕೇಳಿದಳು.
ಬೇಡವೆಂದರೂ ಅಲ್ಲಿಯೇ ಊಟ ಮಾಡಲು ಬಲವಂತ ಮಾಡಿದರು. ಅದಕ್ಕೇ ತಡವಾಯಿತು. ಪಾತ್ರೆಗಳನ್ನು ತಂದಿದ್ದೇನೆ. ಮತ್ತೊಮ್ಮೆ ತೊಳೆಯಬೇಕು ಎಂದ.
ಕಾಫಿ ಬೇಕಾಗಿತ್ತಾ?
ಬೇಡ, ಮಾಡುತ್ತಿರುವ ಕೆಲಸ ಮುಗಿಯಲಿ, ಆಮೇಲೆ ಒಟ್ಟಿಗೆ ಕುಡಿದರಾಯ್ತು ಎಂದು ಕಾಲುಚಾಚಿ ಕುಳಿತುಕೊಂಡ.
ಚಿನ್ಮಯಿ ಒಳಗಿನಿಂದ ಪಾನಕವನ್ನು ಮಾಡಿತಂದು, ಅಪ್ಪಾ, ತಗೋ ಎಂದು ತಂದೆಗೆ ಕೊಟ್ಟು ತಾಯಿಗೂ ಕೊಟ್ಟಳು.
ಇನ್ನೂ ಸ್ವಲ್ಪ ಹಾಕಲೇ?
ಬೇಡ ಎಂದ ಶೇಖರ.
ಅಮ್ಮ, ಬಟ್ಟೆಗಳನ್ನು ಇಸ್ತ್ರಿ ಮಾಡಲೇ? ಚಿನ್ಮಯಿ ಕೇಳಿದಳು.
ಬೇಡ ಚಿನ್ನು. ಅಷ್ಟೂ ಸೀರೆಗಳು ಕಸೂತಿಯವು. ತುಂಬಾ ನಾಜೂಕಾಗಿ ಮಾಡಬೇಕು ಎಂದಳು.
ಸರಿ ಎಂದ ಚಿನ್ಮಯಿ ತಾಯಿ ಕೊಟ್ಟ ಉಂಡೆ ತಿಂದು, ಅಮ್ಮ, ಆರಿದ ಮೇಲೆ ನಾನೇ ಕವರಿಗೆ ಹಾಕ್ತೀನಿ ಎಂದಳು.
ವೈದೇಹಿಗೆ ತೃಪ್ತಿಯಾಯಿತು.
* * *
ಹೂವು ಹಣ್ಣಿನೊಡನೆ ವೈದೇಹಿ ಮಗಳೊಡನೆ ಗೆಳತಿಯ ಮನೆಗೆ ಹೋದಳು. ಮಗ ಪಿ.ಯು.ಸಿ. ಎರಡನೆಯ ವರ್ಷದಲ್ಲಿದ್ದುದರಿಂದ ಪ್ರೇಮ ಹೋಗುವುದು ಕಮ್ಮಿಯಾಗಿತ್ತು. ಆದರೆ ಆಗಾಗ್ಗೆ ಫೋನಿನಲ್ಲಿ ಮಾತಾಡುತ್ತಿದ್ದರು.
ಬಾರೇ, ಬಾ… ಆದರದಿಂದ ಸ್ವಾಗತಿಸಿ, ಅರೆ, ಚಿನ್ನು ಎಷ್ಟು ಬೆಳೆದಿದ್ದಾಳೆ! ಎಂದು ಆಶ್ಚರ್ಯದಿಂದ ಕೇಳಿದಳು ಪ್ರೇಮಾ.
ವೈದೇಹಿ ನಸುನಕ್ಕಳು.
ವೈದೇಹಿ, ಮನೆಯವರೂ ಬಂದಿದ್ದರೆ ಚೆನ್ನಾಗಿತ್ತು ಎಂದಳು.
ಪುಡಿ, ಹಿಟ್ಟು ಮಾಡಿಸಲು ಮಿಷನ್ನಿಗೆ ಹೋಗಿದ್ದಾರೆ. ಮತ್ತೊಮ್ಮೆ ಜೊತೆಯಲ್ಲಿಯೇ ಬರುತ್ತೇವೆ ಎಂದಳು ವೈದೇಹಿ.
ಆಂಟಿ, ದೀಪು ಎಲ್ಲಿ?
ಅವನು ಓದುತ್ತಿದ್ದಾನೆ ಅವಳ ಮಾತಿನ್ನೂ ಮುಗಿದಿರಲಿಲ್ಲ.
ಚಿನ್ನು ಬಾರೇ…. ರೂಮಿನಿಂದಲೇ ಪ್ರದೀಪ ಕೂಗಿದ. ಚಿನ್ಮಯಿ ಸಂಭ್ರಮದಿಂದ ರೂಮಿಗೆ ಹೋದಳು.
ವೈದೇಹಿ, ನೋಡಿದೆಯಾ? ತಿಂಡಿ, ಊಟಕ್ಕೆ ಕರೆದರೆ ‘ಡಿಸ್ಟರ್ಬ್ ಮಾಡಬೇಡ’ ಎಂದು ಹೇಳ್ತಾನೆ. ಈಗ ಅವನಿಗೆ ತೊಂದರೆ ಆಗಲಿಲ್ಲ ಗೆಳತಿಯ ಮುಂದೆ ಮಗನನ್ನು ದೂರಿದಳು.
ವೈದೇಹಿ ನಕ್ಕಳು ಮಾತ್ರ.
ಕೆಲಸ ಹೇಗೆ ಮುಂದುವರಿಯುತ್ತಿದೆ? ಬೇಡಿಕೆಗಳು ಬರುತ್ತಿವೆಯಾ? ಪ್ರೇಮ ಕಾಳಜಿಯಿಂದ ಕೇಳಿದಳು.
ವೈದೇಹಿ ಗೆಳತಿಯ ಕೈಗೆ ಹಣ್ಣಿನ ಕವರಿನ ಜೊತೆ ಹಣವನ್ನು ಇಟ್ಟಿದ್ದ ಕವರನ್ನು ಅವಳ ಕೈಗಿತ್ತು, ನಿನ್ನ ದಯದಿಂದ ಇಂದು ಎರಡು ಹೊತ್ತು ನೆಮ್ಮದಿಯಿಂದ ಊಟಮಾಡುತ್ತಿದ್ದೇವೆ ಎಂದಳು.
ಪ್ರೇಮಳ ಹುಬ್ಬು ಮೇಲೇರಿತು.
ಇದೇನೇ ವೈದೇಹಿ, ಇಷ್ಟು ಬೇಗ ಕೊಡ್ತಾ ಇದ್ದೀಯಾ…?
ಬೇಗ ಎಲ್ಲಿ? ನಾವು ಬೆಂಗಳೂರಿಗೆ ಬಂದು ಇನ್ನೇನು ಆರುವರುಷಗಳಾಗುತ್ತವೆ. ಅಂದು ನೀನು ನಮ್ಮ ಕೈಹಿಡಿಯದಿದ್ದರೆ ಊಹಿಸಲೂ ಸಾಧ್ಯವಿಲ್ಲ. ಮನೆಯವರಿಗೇ ಬೇಡವಾದವರು ನಾವು. ಕಾರು, ಬಂಗಲೆ ಹೊಂದಿರುವವರು ಮಾತ್ರ ಮನೆಯ ಮಕ್ಕಳು. ನಾವು…..? ಮುಂದಕ್ಕೆ ಮಾತು ಹೊರಡಲಿಲ್ಲ. ದುಃಖ ಮುನ್ನುಗ್ಗಿ ಬಂತು.
ಪ್ರೇಮ ಅವಳನ್ನು ಸಮಾಧಾನಮಾಡಿ, ಹಿಂದಿನದೆಲ್ಲವನ್ನೂ ಮರೆತುಬಿಡು ವೈದೇಹಿ. ನೀನು ಚಿಟ್ಟೆಯಂತಾಗಬೇಕು. ಅದು ಆ ಸ್ಥಿತಿಗೆ ಬರಲು ಎಷ್ಟೊಂದು ಹಂತಗಳನ್ನು ದಾಟಿ ಬರುತ್ತದೆ ಅಲ್ಲವೇ?
ಆದರೆ ಅದು ಚಿಟ್ಟೆಯಾದ ಮೇಲೆ ಅದಕ್ಕೆ ತನ್ನ ಹಿಂದಿನ ಜೀವಿತದ ಸ್ಮರಣೆಯೇ ಇರುವುದಿಲ್ಲ. ನೀನೂ ಸಹ ಹಾಗಿರಬೇಕು. ಇಂದು ನಿನ್ನ ಕಾಲಿನ ಮೇಲೆ ನೀನು ನಿಂತಿರುವೆ. ನೋಡುತ್ತಿರು, ಇನ್ನು ಕೆಲವೇ ವರುಷಗಳಲ್ಲಿ ನೀನೂ ಬಂಗಲೆಯಲ್ಲಿಯೇ ಇರುವೆ ಎಂದಳು ಪ್ರೀತಿಯಿಂದ.
ಪ್ರೇಮಾ, ನನಗೆ ವಿಶಾಲವಾದ ಮನೆ ಬೇಡ. ವಿಶಾಲವಾದ ಹೃದಯ ಹೊಂದಿದ್ದು ಅದು ಯಾವಾಗಲೂ ಬೇರೆಯವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರೆ ನನಗೆ ಅಷ್ಟೇ ಸಾಕು. ನಮ್ಮ ಮನೆಯವರನ್ನು ಮನೆಯ ಆಳಿನಂತೆ ನೋಡಿಕೊಳ್ಳುತ್ತಿದ್ದರು. ಅವರು ಸೌದೆ ಒಡೆಯುವುದನ್ನು ನೋಡಲಾಗುತ್ತಿರಲಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೂ ಮುಗಿಯದ ಕೆಲಸ. ಮಾವನವರು ಕೂಲಿಕೊಟ್ಟು ಕೆಲಸ ಮಾಡಿಸಲು ಮುಂದಾದರೆ ಅತ್ತೆ `ಬಿಟ್ಟಿ ಅನ್ನ ತಿನ್ನುವವರು ಇರುವಾಗ ಬೇರೆ ಆಳಿಗೆ ಯಾಕೆ ಹಣ ಕೊಡಬೇಕು?’ ಎಂದು ತಡೆಯುತ್ತಿದ್ದರು. ನಾವು ನಗುನಗುತ್ತಾ ಮಾತನಾಡುತ್ತಿದ್ದರೆ ಅತ್ತೆ ಸಹಿಸುತ್ತಿರಲಿಲ್ಲ. ಮನೆಯಲ್ಲಿ ಗಂಡನಿಗೆ ಗೌರವವಿದ್ದರೆ ಹೆಂಡತಿಗೂ ಸಹಜವಾಗಿಯೇ ಮರ್ಯಾದೆಯಿರುತ್ತದೆ. ಆದರೆ… ಪುನಃ ಅವಳ ಕಂಗಳಲ್ಲಿ ನೀರು ತುಂಬಿತು.
ನೋಡು ವೈದೇಹಿ, ಕಷ್ಟಪಟ್ಟು ನ್ಯಾಯವಾಗಿ ದುಡಿಯುತ್ತಿರುವಿರಿ. ನಿಮಗೆ ಫಲ ಖಂಡಿತವಾಗಿಯೂ ದೊರೆಯುತ್ತದೆ. ನಿಮ್ಮನ್ನು ತಿರಸ್ಕಾರದಿಂದ ಕಂಡವರೇ ನಿಮ್ಮ ಬಳಿಗೆ ಪ್ರೀತಿಯಿಂದ ಬರುತ್ತಾರೆ. ಆ ದಿನ ದೂರವಿಲ್ಲ ಎಂದು ಪ್ರೇಮ ಗೆಳತಿಯನ್ನು ಸಂತೈಸಿದಳು.
* * *
ಅಚ್ಚಮ್ಮ ತಮ್ಮ ಬಟ್ಟೆಗಳನ್ನು ಒಗೆಯುತ್ತಿದ್ದರು. ವಾರದಿಂದ ಸೊಂಟ ಹಿಡಿದು ಕೆಲಸ ಮಾಡಲು ಒದ್ದಾಡುತ್ತಿದ್ದರು. ವೈದೇಹಿ ಸೊಸೆಯಾಗಿ ಬಂದ ಮೇಲೆ ಅವರಿಗೆ ಕೆಲಸ ಮಾಡುವುದೇ ಮರೆತುಹೋಗಿತ್ತು. ಈಗ ಅಷ್ಟೂ ಕೆಲಸ ಅವರ ಮೇಲೆ ಬಿದ್ದಿತ್ತು. ನಿಮ್ಮ ಬಟ್ಟೆಗಳನ್ನು ನಾನು ಒಗೆಯುವುದಿಲ್ಲ ಎಂದು ಒಂದು ದಿನ ಗಂಡನೊಡನೆ ಜಗಳಮಾಡಿದಾಗ ರಂಗಣ್ಣ ಶಾಂತವಾಗಿಯೇ ನೀನು ಮುಟ್ಟಲೇಬೇಡ… ಎಂದು ಹೇಳಿ ಹೊಳೆಯ ಸ್ನಾನಕ್ಕೆ ಹೋಗಲು ಪ್ರಾರಂಭಿಸಿ, ಅಲ್ಲಿಯೇ ತಮ್ಮ ಬಟ್ಟೆಗಳನ್ನು ಒಗೆದುಕೊಂಡು ಬರುತ್ತಿದ್ದರು.
ರಜೆಬಂದಾಗ ಬೆಂಗಳೂರಿನ ಮಕ್ಕಳು ಊರಿಗೆ ಬಂದರೆ ಮನೆಯ ಕೆಲಸಕ್ಕೆ ಆಳು ಹಾಗೂ ಅಡಿಗೆಗೆ ಸರೋಜಮ್ಮನನ್ನು ಇಟ್ಟುಕೊಳ್ಳುತ್ತಿದ್ದರು. ವಾಪಸ್ಸು ಹೋಗುವಾಗ ಕೈತುಂಬಾ ಹಣ, ಬುಟ್ಟಿಗಳ ತುಂಬ ತಿಂಡಿ, ಚೀಲಗಳ ತುಂಬಾ ಕಾಯಿ, ಕೊಬ್ರಿಗಳು ಸಿದ್ಧವಾಗಿರುತ್ತಿತ್ತು.
ಶೇಖರ ಬೆಂಗಳೂರಿಗೆ ಹೋದ ಹೊಸದರಲ್ಲಿ ಜಗ್ಗು, ಕಿಟ್ಟು ಬಂದಿದ್ದರು. ಮಾತಿನ ನಡುವೆ ಜಗ್ಗು ಅಮ್ಮ, ಶೇಖರ ತರಕಾರಿಗಳನ್ನು ಮಾರುತ್ತಿದ್ದಾನಂತೆ. ನನ್ನ ಗುರುತಿನವರು ಹೇಳಿದರು. ದೋಸೆ, ಇಡ್ಲಿಗಳನ್ನು ಮಾಡಿಕೊಡುತ್ತಾನಂತೆ….
ಎಲ್ಲರೂ ನಕ್ಕಿದ್ದರು. ಆ ನಗುವಿನಲ್ಲಿ ತಿರಸ್ಕಾರವೇ ತುಂಬಿತ್ತು.
ಅನುಭವಿಸಲಿ ಎಂದು ಅಚ್ಚಮ್ಮ ಮೂದಲಿಸಿದ್ದರು.
ಆದರೆ ಈಗೀಗ ಅವರ ಮನಸ್ಸು ಅವರನ್ನು ಚುಚ್ಚಿ ಚುಚ್ಚಿ ಹಿಂಸಿಸುತ್ತಿತ್ತು. ಹಿರಿಯ ಮಕ್ಕಳು ಬಂದಾಗ ಕೆಲಸಕ್ಕೆ ಇಟ್ಟುಕೊಳ್ಳುವ ಹಾಗೆ ವೈದೇಹಿ ಇರುವಾಗಲೇ ಇಟ್ಟುಕೊಳ್ಳಬೇಕಾಗಿತ್ತು. ಅವಳನ್ನು ತೀರಾ ಕೆಲಸದವಳಂತೆ, ಮೂರನೆಯವಳಂತೆ ಕಂಡು ಅವಳನ್ನು ನೋಯಿಸಿದೆ ಎಂದು ಮರುಗುತ್ತಿದ್ದರು. ಸ್ತಬ್ಧವಾದ ನೀರು ಕೊಳೆಯಾಗಿದ್ದರೂ ತಾನೇ ತಿಳಿಯಾಗುವಂತೆ ಶಾಂತವಾದ ಮನಸ್ಸು ಕಲುಷಿತವಾಗಿದ್ದರೂ ಕ್ರಮೇಣ ಉಲ್ಲಾಸಗೊಳ್ಳುತ್ತದೆ. ಅಚ್ಚಮ್ಮನವರ ಮನಸ್ಸು ಅದೇ ರೀತಿಯಾಗಿ ಪರಿವರ್ತನೆಯಾಗಿತ್ತು.
ಪಾಪ, ಶೇಖರ ಎಷ್ಟು ಒಳ್ಳೆಯವನು! ತಮ್ಮನ್ನು ಎಷ್ಟೊಂದು ಗೌರವಿಸುತ್ತಿದ್ದ! ಪ್ರೀತಿಸುತ್ತಿದ್ದ! ಅವನನ್ನು ಕೇವಲ ಮನೆ ಆಳಿನಂತೆಯೇ ಕಂಡೆನೇ ವಿನಾ ಮನೆಮಗನಂತೆ ಕಾಣಲೇ ಇಲ್ಲ. ಛೇ! ನಾನೆಷ್ಟು ಕೆಟ್ಟವಳು? ಅವರಿಗೆ ಎಷ್ಟೊಂದು ನೋವು ಕೊಟ್ಟೆ! ಅಪಮಾನ ಮಾಡಿದೆ ಎಂದು ದಿನವೂ ಚಿಂತಿಸುತ್ತಿದ್ದರು. ಉಗುರು ತುದಿಯಲ್ಲಿ ಸೂಜಿ ಚುಚ್ಚಿದಂತೆ ಒದ್ದಾಡುತ್ತಿದ್ದರು. ಒಮ್ಮೆ ಹೋಗಿ ನೋಡಿಕೊಂಡು ಬರಲೇ…. ಎನ್ನುವಷ್ಟು ಬದಲಾಗುತ್ತಿದ್ದರು. ಆದರೆ ಸ್ವಾಭಿಮಾನ ಅವರನ್ನು ತಡೆಯುತ್ತಿತ್ತು. ಅಂದು ತಮಗೆ ಬೇಕಾಗಿರಲಿಲ್ಲ. ಆದರೆ ಇಂದು ಬೇಕಾಗಿದೆ ಎಂದು ಹಂಬಲಿಸುತ್ತಿದ್ದರು. ಗಂಡ ಶೇಖರನಿಗೆ ಫೋನು ಮಾಡುವುದು ಅವರಿಗೆ ತಿಳಿದೇ ಇರಲಿಲ್ಲ. ಈಗ ವರುಷದ ಹಿಂದೆ ಪರಿಚಯದವರು ನಿಜವನ್ನು ತಿಳಿಸಿದಾಗ ನಾಚಿಕೆಯಿಂದ ಕುಗ್ಗಿದ್ದರು.
ಶೇಖರನಿರುವಾಗ ಪ್ರತಿಯೊಂದು ಕೆಲಸವನ್ನೂ ಅವನೇ ಮಾಡುತ್ತಿದ್ದುದರಿಂದ ಯಾರಿಗೂ ತೊಂದರೆ ಕಂಡಿರಲಿಲ್ಲ. ರಂಗಣ್ಣನವರ ಬಲಭುಜದ ಮೇಲೆ ಮರದ ಮೇಲಿನ ಅಡಿಕೆಯ ಗೊನೆ ಬಿದ್ದು ಅವರಿಗೆ ಯಾವ ಕೆಲಸವನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಒಂದು ತೆಂಗಿನಕಾಯಿಯನ್ನೂ ಸಹ ಸುಲಿಯಲು ಅಶಕ್ತರಾಗಿದ್ದರು. ಶೇಖರನಿದ್ದುದರಿಂದ ಎಲ್ಲವೂ ಸುಸೂತ್ರವಾಗಿ ಸಾಗುತ್ತಿತ್ತು. ಆದರೆ ಈಗ ಕೊಬ್ಬರಿ ಒಡೆಯಲು, ಕಾಯಿ ಸುಲಿಯಲು, ಸೌದೆ ಸೀಳಲು ಪ್ರತಿಯೊಂದಕ್ಕೂ ಕೂಲಿ ಕೊಟ್ಟು ರಂಗಣ್ಣನವರು ಮಾಡಿಸುತ್ತಿದ್ದರು. ತೋಟವನ್ನು ನೋಡಿಕೊಳ್ಳಲು ಒಬ್ಬನನ್ನು ನೇಮಿಸಿಕೊಂಡರು. ಅಡಿಕೆಯ ಕೊಯ್ಲುಕಾಲದಲ್ಲಂತೂ ಎಷ್ಟು ಮಾಡಿದರೂ ಮುಗಿಯದ ಕೆಲಸ. ಒಂದು ಕಡೆ ಆಳುಗಳಿಗೆ ಹಣ ಕೊಡಬೇಕು. ಮತ್ತೊಂದೆಡೆ ಇಳುವರಿ ಕಡಮೆಯಾಗಿ ಕೈಗೆ ಬಂದ ಮೊತ್ತ ಕಡಮೆ. ವರುಷದಿಂದ ವರುಷಕ್ಕೆ ಇಳುವರಿ ಕಡಮೆಯಾಗುತ್ತಿತ್ತು.
ನಿನ್ನ ಮಕ್ಕಳು ಕೆಲಸಕ್ಕೆ ಬರುವುದಿಲ್ಲ. ಹಣಕ್ಕೆ ಮಾತ್ರ ಬರುತ್ತಾರೆ ಎಂದು ರಂಗಣ್ಣನವರು ಮೂದಲಿಸುತ್ತಿದ್ದರು. ಮೊದಲು ಅಚ್ಚಮ್ಮ ಈ ವಿಷಯಕ್ಕೆ ಕೂಗಾಡುತ್ತಿದ್ದರು. ಆದರೆ ಈಗೀಗ ಅವರಿಗೂ ಬೇಸರವಾಗುತ್ತಿತ್ತು.
ಅಡಿಕೆ ಕೊಯ್ಲಿನ ಸಮಯದಲ್ಲಿ ಇಬ್ಬರೂ ರಜ ಹಾಕಿ ಬನ್ನಿ. ಇಲ್ಲಿ ನಿಮ್ಮಪ್ಪ ಒಬ್ಬರೇ, ತುಂಬಾ ಕಷ್ಟವಾಗುತ್ತಿದೆ, ಆಳುಗಳು ಕೇಳಿದಷ್ಟು ಕೂಲಿ ಕೊಡಬೇಕು ಎಂದು ಮಕ್ಕಳು ಊರಿಗೆ ಬಂದಾಗ ಅಚ್ಚಮ್ಮ ಹೇಳಿದ್ದರು.
ಅಮ್ಮ, ನಮಗೆ ಮೊದಲಿನಂತೆ ರಜಾ ಕೊಡುವುದಿಲ್ಲ. ನಮ್ಮದು ಫಾರಿನ್ ಕಂಪೆನಿಯ ಕೆಲಸ. ಜೋರಾಗಿ ಮಾತಾಡುವ ಹಾಗಿಲ್ಲ. ಕೆಲಸದಿಂದ ಕಿತ್ತೆಸೆಯುತ್ತಾರೆ ಎಂದು ನುಣಿಚಿಕೊಂಡಿದ್ದರು.
ಆಗ ಅಚ್ಚಮ್ಮನವರಿಗೆ ಮೊದಲಬಾರಿಗೆ ಮಕ್ಕಳ ಮೇಲೆ ಬೇಸರವಾಗಿತ್ತು. ಬಾಣ ನೆಟ್ಟಗಿರುತ್ತದೆ, ಆದರೆ ಕ್ರಿಯೆಯಲ್ಲಿ ಅದು ಕ್ರೂರ. ನೋಡಲು ವಕ್ರವಾಗಿರುವ ವೀಣೆ ಶ್ರುತಿಗೆ ಸುಖಕರವಾದುದು. ಒಳ್ಳೆಯವರು, ವಂಚಕರನ್ನು ಅವರ ವರ್ತನೆಯಿಂದ ತಿಳಿಯಬೇಕು. ಜಗ್ಗು, ಕಿಟ್ಟು ಈಗ ಊರಿಗೆ ಬರಲು ಉತ್ಸಾಹ ತೋರಿಸುತ್ತಿರಲಿಲ್ಲ. ಯಾಕೆಂದರೆ ಅಚ್ಚಮ್ಮ ಕೊಡುವ ಹಣ ವರುಷದಿಂದ ವರುಷಕ್ಕೆ ಇಳಿಮುಖವಾಗುತ್ತಿತ್ತು. ಶೇಖರನಿಂದ ಕಂಗೊಳಿಸುತ್ತಿದ್ದ ತೋಟ ಈಗ ಅವನಿಲ್ಲದೇ ಸೊರಗಿಹೋಗಿತ್ತು. ಸೂರ್ಯನಿರುವ ಕಡೆ ಕತ್ತಲೆಗೆಲ್ಲಿ ಆಸ್ಪದ ಎನ್ನುವಂತೆ ಶೇಖರ, ವೈದೇಹಿ ಇದ್ದಾಗ ಇದ್ದ ಸುಸ್ಥಿತಿ ಈಗ ಅಧೋಗತಿಯಾಗಿತ್ತು.
ನಿಟ್ಟುಸಿರುಬಿಡುತ್ತಾ ಹಿತ್ತಲಿಗೆ ಬಂದರು ಅಚ್ಚಮ್ಮ. ಕಾಫಿಯ ಗಿಡಗಳು ಒಣಗಿದ್ದವು. ವೈದೇಹಿ ಪ್ರತಿಯೊಂದನ್ನೂ ನೋಡಿಕೊಳ್ಳುತ್ತಿದ್ದಳು. ಕಾಫಿಯ ಹಣ್ಣುಗಳನ್ನು ಕುಯ್ದು ಒಣಗಿಸುವುದು, ಪುಡಿಮಾಡಲು ಶಿವಮೊಗ್ಗಕ್ಕೆ ಕಳಿಸುವುದು, ಅವಳ ಕೆಲಸ ಪ್ರತಿಯೊಂದೂ ಅಚ್ಚುಕಟ್ಟು. ವಿಧವಿಧದ ಹೂವಿನ ಗಿಡಗಳನ್ನು ತಂದು ಹಾಕಿ ನಿತ್ಯವೂ ನೀರು ಬಿಟ್ಟು ತುಂಬಾ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಳು. ಅಗಲವಾದ ದಾಸವಾಳ ಹೂವುಗಳನ್ನು ನೋಡಲೇ ಸಂತೋಷವಾಗುತ್ತಿತ್ತು. ದುಂಡುಮಲ್ಲಿಗೆ, ಸೂಜಿಮಲ್ಲಿಗೆ, ಮರುಗ, ಒಂದೇ ಎರಡೇ ಹಿತ್ತಿಲತುಂಬ ಗಿಡಗಳು ಹಸುರಿನಿಂದ ಕಂಗೊಳಿಸುತ್ತಿದ್ದವು.
ಆದರೆ ಈಗ ಅವೆಲ್ಲವೂ ತಾಯಿಯಿಲ್ಲದ ಮಗುವಿನಂತೆ ಸೊರಗಿದ್ದವು. ಬೇಸರದಿಂದ ಅಲ್ಲಿಯೇ ಇದ್ದ ಕಟ್ಟೆಯ ಮೇಲೆ ಕುಳಿತರು. ರಂಗಣ್ಣನವರು ಒಂದು ಮದುವೆಗೋಸ್ಕರವಾಗಿ ಬೆಂಗಳೂರಿಗೆ ಹೋಗಿದ್ದರು. ಅವರಿಗೂ ಹೋಗಲು ಆಸೆ. ಹಾಗೆಯೇ ಹಿರಿಯ ಮಕ್ಕಳ ಮನೆಯಲ್ಲಿ ಕೆಲವು ದಿನಗಳು ಇದ್ದು ಬರುವೆನೆಂದುಕೊಂಡು ಆಸೆಯಿಂದ ಫೋನು ಮಾಡಿದಾಗ ಇಬ್ಬರೂ ಮಾತಾಡಿಕೊಂಡಂತೆ, ಅಯ್ಯೋ, ಅಮ್ಮ, ಈಗಬೇಡ. ಮಕ್ಕಳಿಗೆ ಪರೀಕ್ಷೆ ಹತ್ತಿರವಾಗಿದೆ. ಈಗ ನೀನು ಬಂದರೆ ಗಲಾಟೆಯಾಗುತ್ತದೆ. ಮಕ್ಕಳಿಗೆ ತೊಂದರೆಯಾಗುತ್ತದೆ ಎಂದಾಗ ಅವರು ಪೆಚ್ಚಾದರು. ಗಾಳಿ ಹೋದ ಬಲೂನಿನಂತಾದರು. ಕಂಗಳಲ್ಲಿ ನೀರು ತುಂಬಿದವು.
ಒಣಗಿದ ಹೂವಿನ ಗಿಡಗಳನ್ನು ನೋಡಲಾರದೇ ಒಳಗೆ ಬಂದು ಉಯ್ಯಾಲೆಯಲ್ಲಿ ಕುಳಿತರು. ಊಟ ಮಾಡಬೇಕು ಎಂದು ಅನ್ನಿಸಲಿಲ್ಲ. ಮದುವೆ ಮುಗಿದು ಎರಡು ದಿನಗಳಾದರೂ ರಂಗಣ್ಣ ಬಂದಿರಲಿಲ್ಲ. ಮಕ್ಕಳು ಬಲವಂತದಿಂದ ಉಳಿಸಿಕೊಂಡಿರಬೇಕೆಂದುಕೊಂಡರು. ಆದರೂ ಮನಸ್ಸಿಗೆ ಸಮಾಧಾನವಿಲ್ಲ. `ನನ್ನಿಂದಾಗಿಯೇ ಶೇಖರ, ವೈದೇಹಿ ಮನೆಬಿಟ್ಟು ಹೋದರು’ ಎಂದು ಈಗೀಗ ಕೊರಗುತ್ತಿದ್ದರು. ಶೇಖರನನ್ನು ನೋಡಲು ಮನಸ್ಸು ಹಂಬಲಿಸುತ್ತಿತ್ತು.
`ಚಿನ್ನು, ಚಿನ್ಮಯಿ ಈಗ ಹೇಗಿದ್ದಾಳೋ? ಎಷ್ಟು ಜಾಣೆ! ಅವಳನ್ನು ವೈದೇಹಿ ಎಷ್ಟು ಚೆನ್ನಾಗಿ ಬೆಳೆಸಿದ್ದಾಳೆ. ತಾಯಿಯೆಂದರೆ ವೈದೇಹಿಯ ಹಾಗಿರಬೇಕು. ಚಿನ್ನು ಭಗವದ್ಗೀತೆಯನ್ನು ಅದೆಷ್ಟು ಚೆನ್ನಾಗಿ ಹೇಳುತ್ತಿದ್ದಳು. ಆ ಸಣ್ಣ ವಯಸ್ಸಿನಲ್ಲಿಯೇ ತಾಯಿಗೆ ಸಹಾಯವಾಗುವುದೆಂದು ಕೆಲಸಗಳನ್ನು ಮಾಡುತ್ತಿದ್ದಳು. ನಡೆ ನುಡಿ ಪ್ರತಿಯೊಂದರಲ್ಲಿಯೂ ಅಮ್ಮನ ಪಡಿಯಚ್ಚು’ ಎಂದು ಈಗೀಗ ಶೇಖರನ ಬಗ್ಗೆ ಚಿಂತಿಸುತ್ತಿದ್ದರು.
* * *
ರಂಗಣ್ಣ ಬೆಂಗಳೂರಿನಿಂದ ಬಂದರು. ಗಂಡನ ಆಗಮನವನ್ನೇ ಕಾಯುತ್ತಿದ್ದ ಅಚ್ಚಮ್ಮ, ಮಕ್ಕಳು ಆರೋಗ್ಯದಿಂದ ಇದ್ದಾರೆಯೇ? ಎಂದು ಕೇಳಿದರು.
ಮೊದಲು ಒಂದು ಲೋಟ ಕಾಫಿ ಕೊಡ್ತೀಯಾ? ಅಸಹನೆಯಿಂದಲೇ ಕೇಳಿದರು.
ಅವರು ಮರುಮಾತಾಡದೇ ಕಾಫಿ ಮಾಡಿ ತಂದುಕೊಟ್ಟರು. ಗಂಡ ಕುಡಿದ ನಂತರ, ಮಕ್ಕಳ ಮನೆಗೆ ಹೋಗಿದ್ದಿರಾ? ಹೇಗಿದ್ದಾರೆ? ಎಂದು ಸ್ವಲ್ಪ ಮೃದುವಾಗಿಯೇ ಕೇಳಿದರು.
ಇಲ್ಲ….
ಅಷ್ಟು ದೂರ ಹೋದವರು ಮಕ್ಕಳನ್ನು ನೋಡದೆ ಬಂದಿದ್ದೀರಾ…? ಕಂಗಳಲ್ಲಿ ನೀರು ತುಂಬಿ ಬಂತು.
ಮನೆ ಎಲ್ಲಿದೆ ಎಂದು ನನಗೇನು ಗೊತ್ತು? ಹೇಗೆ ಹೋಗಲಿ? ಸ್ವಲ್ಪ ಬೇಸರದಿಂದಲೇ ಕೇಳಿದರು.
ಛತ್ರದಿಂದ ಫೋನು ಮಾಡಿ ತಿಳಿದಿದ್ದರೆ ಅವರೇ ಕಾರಿನಲ್ಲಿ ಬಂದು ಕರೆದುಕೊಂಡು ಹೋಗುತ್ತಿದ್ದರು. ನಿಮಗೇ ಇಷ್ಟವಿಲ್ಲ. ಅದಕ್ಕೇ….. ಮೂದಲಿಸಿ ಹೇಳಿದರು.
ಬ್ಯಾಗಿನಿಂದ ಬಟ್ಟೆಯನ್ನು ತೆಗೆಯುತ್ತಿದ್ದ ರಂಗಣ್ಣನವರು ಹೆಂಡತಿಯ ಮುಖವನ್ನೇ ನೋಡುತ್ತ, ನಾನು ಫೋನು ಮಾಡಿದಾಗ ನಿನ್ನ ಇಬ್ಬರು ಮಕ್ಕಳು ಏನು ಉತ್ತರವನ್ನು ಕೊಟ್ಟರು ಗೊತ್ತೇ? ‘ಅಣ್ಣಾ, ನಮಗೆ ಬೆಳಗ್ಗೆಯಿಂದ ರಾತ್ರಿಯವರೆಗೆ ಕೆಲಸ. ಛತ್ರಕ್ಕೆ ಬರಲು ಸಾಧ್ಯವಿಲ್ಲ. ಆದರೆ ನೀನೇ ಬಾ. ಆದರೆ ಎಂಟುಗಂಟೆಯ ಹೊತ್ತಿಗೆ ಬಾ’ ಎಂದರು. ಛತ್ರವನ್ನು ಐದುಗಂಟೆಗೆ ಖಾಲಿಮಾಡಬೇಕಾಗಿತ್ತು. ನಾನೇನು ಮಾಡಬೇಕಿತ್ತು ನೀನೇ ಹೇಳು. ಬಹುಶಃ ನಾನು ಹೋಗುವುದು ಅವರಿಗೆ ಇಷ್ಟವಿಲ್ಲವೆಂದು ಕಾಣುತ್ತದೆ ಅಥವಾ ನೀನೇ ತಿಳಿಸಿರಬೇಕು, ಈ ರೀತಿ ಮಾತನಾಡಲು ಎಂದರು ನಿಷ್ಠುರವಾಗಿ.
ಬದಲಾಗುತ್ತಿರುವ ಅಚ್ಚಮ್ಮನವರ ಕಣ್ಣುಗಳಿಂದ ನೀರು ಇಳಿಯಿತು.
ಏನು ನಿಮ್ಮನ್ನು ಕರೆಯಬಾರದೆಂದು ನಾನು ಹೇಳಿರುವೆನೇ? ಸಂಕಟದಿಂದ ಕೇಳಿದರು.
ಇರುವುದನ್ನೇ ಹೇಳುತ್ತಿದ್ದೇನೆ. ಚೇಳಿಗೆ ಕೊಂಡಿಯಲ್ಲಿ ವಿಷ, ನೊಣಕ್ಕೆ ತಲೆಯಲ್ಲಿ ವಿಷ, ಹಾವಿಗೆ ಹಲ್ಲಿನಲ್ಲಿ ವಿಷ. ಆದರೆ ದುರ್ಜನರಿಗೆ ಮೈಮನಸ್ಸುಗಳ ತುಂಬಾ ಕಾರ್ಕೋಟಕ ವಿಷವೇ ತುಂಬಿರುತ್ತದೆ. ನೀನೂ ನಿನ್ನ ಮಕ್ಕಳೂ ಆ ಗುಂಪಿಗೆ ಸೇರಿದವರು. ಶೇಖರನನ್ನು ಮನೆಗೆ ಕರೆಯಬಾರದೆಂದು ನಿನ್ನ ಮಕ್ಕಳಿಗೆ ಹೇಳಿಲ್ಲವೇ? ಶೇಖರನಿಗೂ ಬೈಯ್ದು ಹೇಳಿಲ್ಲವೇ, ಅಣ್ಣಂದಿರ ಮನೆಗೆ ಹೋಗದಿರಲು. ನಾನಂತೂ ಸುಳ್ಳು ಹೇಳುತ್ತಿಲ್ಲವಲ್ಲ – ಎಂದರು ಬೇಸರದಿಂದ.
ಕೆಲಸಮಯ ನೀರವತೆ ತನ್ನ ಹೊದ್ದಿಕೆಯನ್ನು ಹೊದಿಸಿತ್ತು.
ಕೊನೆಗೆ ಅಚ್ಚಮ್ಮ ಮೆಲ್ಲಗೆ, ಶೇಖರನ ಮನೆಗೆ ಹೋಗಿದ್ದಿರಾ? ಎಲ್ಲರೂ ಹೇಗಿದ್ದಾರೆ? ದಿನಕ್ಕೆ ಒಂದು ಹೊತ್ತಾದರೂ ತಿನ್ನುತ್ತಿದ್ದಾರೆ ತಾನೇ? ಆ ಮಾತನಾಡುವಾಗ ಗಂಟಲುಬ್ಬಿ ಬಂದು ಕಂಗಳಿಂದ ದಳದಳನೆ ನೀರು ಸುರಿಯಿತು.
ಹೂಂ, ಹೋಗಿದ್ದೆ. ಜಗ್ಗು, ಕಿಟ್ಟಿಗೆ ಮಾಡಿದ ಹಾಗೆ ಅವನಿಗೂ ಫೋನು ಮಾಡಿದೆ. ತಕ್ಷಣವೇ ಆಟೋದಲ್ಲಿ ಬಂದು ನನ್ನನ್ನು ಕರೆದುಕೊಂಡು ಹೋದ. ವೈದೇಹಿ, ಚಿನ್ಮಯಿ ಎಷ್ಟು ಸಂತೋಷಪಟ್ಟರು ಗೊತ್ತೇ? ಎಂದರು ಅಭಿಮಾನದಿಂದ.
ಅವರ ಜೀವನ ಹೇಗೆ ನಡೆಯುತ್ತಿದೆ? ಚಿನ್ನು ಹೇಗಿದ್ದಾಳೆ? ಸಂಕಟದಿಂದ ಕೇಳಿದರು.
ನಿನ್ನ ಮಕ್ಕಳು ಹೇಳುವ ಹಾಗೆ ತಲೆಯ ಮೇಲೆ ತಿಂಡಿಯ ಕುಕ್ಕೆಯನ್ನಿಟ್ಟುಕೊಂಡು ಬೀದಿಬೀದಿಯಲ್ಲಿ ಮಾರುತ್ತಿಲ್ಲ. ಕಷ್ಟಪಟ್ಟು ಗೌರವದಿಂದ ಜೀವನ ನಡೆಸುತ್ತಿದ್ದಾರೆ. ನಮ್ಮ ಚಿನ್ನು ಚೆನ್ನಾಗಿ ಓದುತ್ತಿದ್ದಾಳೆ, ಬೆಳೆದಿದ್ದಾಳೆ ಎಂದರು ಭಾರವಾದ ಹೃದಯದಿಂದ.
ಅಚ್ಚಮ್ಮನವರಿಗೆ ಶೇಖರನ ಬಗ್ಗೆ ಮತ್ತಷ್ಟು ಮಾತನಾಡುವ ತವಕ. ಆದರೆ ರಂಗಣ್ಣನವರು ಒಗೆಯುವ ತಮ್ಮ ಬಟ್ಟೆಗಳನ್ನು ಬಕೀಟಿಗೆ ತುಂಬಿಕೊಂಡು ಹೊಳೆಗೆ ಹೊರಟರು.
ಇಲ್ಲಿಡಿ, ನಾನೇ ಒಗೆಯುತ್ತೇನೆ ಎಂದು ಅವರು ಹೇಳುವಷ್ಟರಲ್ಲಿ ರಂಗಣ್ಣನವರು ಅಷ್ಟು ದೂರ ಹೋಗಿಯಾಗಿತ್ತು.
`ನಾಳೆಯಿಂದ ನಾನೇ ಒಗೆಯುತ್ತೇನೆ. ಥೂ, ನೋಡಿದವರು ಏನಂದುಕೊಳ್ತಾರೆ? ಇಷ್ಟು ದಿನಗಳು ನನ್ನ ಬುದ್ಧಿಗೆ ಮಂಕು ಬಡಿದಿತ್ತು. ಯಾಕೆ?’ ಎಂದು ಒದ್ದಾಡಿದರು. ಒಮ್ಮೆ ಶೇಖರನನ್ನು ಕಾಣಲು ಹಂಬಲಿಸುತ್ತಿದ್ದರು. ಚಿನ್ನೂ-ಚಿನ್ನೂ ಎಂದು ಜಪಿಸುತ್ತಿದ್ದರು.
ಹಿಂದೆ ಶೇಖರನೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಬೇಡಿ ಎಂದು ಹೇಳಿದ್ದ ಅವರೇ ಈಗ ಇಬ್ಬರು ಗಂಡುಮಕ್ಕಳಿಗೂ ಫೋನು ಮಾಡಿ, ತಮ್ಮನಿಗೆ ಕೈಲಾದ ನೆರವು ನೀಡಿ, ಆಗಿಂದಾಗ್ಗೆ ಅವನ ಮನೆಗೆ ಹೋಗುತ್ತಿರಿ. ಅವನ ವಿಳಾಸವನ್ನು ಅಪ್ಪನನ್ನು ಕೇಳಿ ತಿಳಿಸುತ್ತೇನೆ ಎಂದು ಒಮ್ಮೆ ಫೋನು ಮಾಡಿದ್ದರು. ತಾಯಿ ಹೃದಯದ ತುಡಿತ ಆ ರೀತಿ ಆಡಿಸಿತ್ತು.
ಆದರೆ ಅವರಿಬ್ಬರೂ, ಅಮ್ಮಾ, ನಾವು ಬೆಳಗ್ಗೆ ಮನೆ ಬಿಟ್ಟರೆ ಮತ್ತೆ ರಾತ್ರಿಯೇ ಬರುವುದು. ನಮಗೆ ಬಿಡುವು ಸಿಗುವುದೇ ಇಲ್ಲ ಎಂದಾಗ ಅವರಿಗೆ ಪೆಚ್ಚಾಗಿತ್ತು.
* * *
ಪ್ರೇಮಳ ಮಗ ಪ್ರದೀಪ ಬಿ.ಇ. ಕಾಲೇಜಿಗೆ ಸೇರಿಕೊಂಡ. ಚಿನ್ಮಯಿ ಪಿಯುಸಿ ಮೊದಲನೆಯ ವರ್ಷದಲ್ಲಿ ಓದುತ್ತಿದ್ದಳು. ವೈದೇಹಿ ಅವಳಿಗೆ ಕೆಲಸ ಮಾಡಲು ಬಿಡುತ್ತಿರಲಿಲ್ಲ.
ನೋಡು ಚಿನ್ನು, ನೀನು ಈಗಿನಿಂದಲೇ ಚೆನ್ನಾಗಿ ಓದು ಎಂದು ಹೇಳುತ್ತಿದ್ದಳು.
ಹೌದು ಚಿನ್ನು, ನೀನು ಚೆನ್ನಾಗಿ ಓದಬೇಕು. ಓದಿದವರಿಗೆ ಮಾತ್ರ ಗೌರವ, ಮರ್ಯಾದೆ ದೊರೆಯುತ್ತದೆ. ನಾನಂತೂ ಓದದೇ ಹೀಗಾದೆ….. ಎಂದು ಶೇಖರ ಆಗಾಗ್ಗೆ ಹೇಳುತ್ತಿದ್ದ.
ತಾಯಿತಂದೆಯರ ಬಗ್ಗೆ ಅಪಾರವಾದ ಗೌರವ, ಅಭಿಮಾನವನ್ನು ಇಟ್ಟುಕೊಂಡಿದ್ದಳು ಚಿನ್ಮಯಿ.
ಚಿನ್ನು, ನೀನು ಮುಂದೆ ಯಾವುದಕ್ಕೆ ಸೇರಬೇಕೆಂದು ತೀರ್ಮಾನಿಸಿರುವೆ? ವೈದೇಹಿ ಒಂದು ದಿನ ರಾತ್ರಿ ಸಮಯದಲ್ಲಿ ಕೇಳಿದಳು.
ವೈದೇಹಿ, ಅವಳು ಬಿ.ಇ. ಓದಲಿ. ನಮಗೆ ಎಷ್ಟೇ ಕಷ್ಟವಾದರೂ ಪರವಾಗಿಲ್ಲ, ಅವಳನ್ನು ಓದಿಸೋಣ ಎಂದ ಶೇಖರ.
ಚಿನ್ಮಯಿ ಉತ್ತರಿಸಲಿಲ್ಲ. ಬದಲಿಗೆ ತನ್ನಲ್ಲೇ ಚಿಂತಿಸುತ್ತಿದ್ದಳು. ಯಾವುದಾದರೂ ಡಿಗ್ರಿ ಮಾಡಿಕೊಂಡು ತಾಯಿ-ತಂದೆಯ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗಲು ಅವಳಿಗೆ ಆಸೆಯಿತ್ತು. ಜೊತೆಗೆ ವ್ಯಾಪಾರದ ಒಳ-ಹೊರಗು ಚೆನ್ನಾಗಿ ತಿಳಿದಿತ್ತು. ಈಗೀಗ ಗ್ರಾಹಕರ ಬೇಡಿಕೆಗಳು ಜಾಸ್ತಿಯಾಗಿತ್ತು. ಚಕ್ಕುಲಿ, ಕೋಡುಬಳೆಗಳನ್ನು ಕೊಳ್ಳುವವರು ಹೆಚ್ಚಾಗಿದ್ದರು. ಶುಚಿ, ರುಚಿಯಾದ ತಿಂಡಿಗಳಿಗೆ ಜನರು ಧಾವಿಸಿ ಬರುತ್ತಿದ್ದರು. ಜೊತೆಗೆ ಮಸಾಲೆ ಪುಡಿಗಳು. ಬೆಳಗ್ಗೆಯಿಂದ ರಾತ್ರಿಯವರೆಗೆ ಬಿಡುವಿಲ್ಲದ ಕೆಲಸ. ಚಿನ್ಮಯಿ ಇದರ ಬಗ್ಗೆ ಹಲವಾರು ದಿನಗಳು ಚಿಂತಿಸಿ ಕೊನೆಗೆ ‘ಇದನ್ನೇ ಮುಂದುವರಿಸಿಕೊಂಡು ಹೋಗುತ್ತೇನೆ’ ಎಂದು ನಿರ್ಧರಿಸಿದಳು.
ಪರೀಕ್ಷೆ ಮುಗಿದ ಮೇಲೆ ಚಿನ್ಮಯಿ ತನ್ನ ಮನಸ್ಸಿನ ಆಸೆಯನ್ನು ತಾಯಿಗೆ ಹೇಳಿದಳು. ವೈದೇಹಿ ಗಾಬರಿಯಿಂದ, ಬೇಡ ಚಿನ್ನು, ನನಗೆ ಇಷ್ಟವಿಲ್ಲ. ನೀನು ಬಿ.ಇ. ಓದಬೇಕೆಂದು ತುಂಬಾ ಆಸೆಯಿಂದ ಇದ್ದೇವೆ ಎಂದಳು.
ಚಿನ್ಮಯಿ ಸಮಾಧಾನವಾಗಿಯೇ ತಾಯಿಯ ಪಕ್ಕಕ್ಕೆ ಸರಿದು, ಅಮ್ಮ, ನೀನು ಮಾಡುತ್ತಿರುವ ಕೆಲಸದಲ್ಲಿ ನಿನಗೆ ಕೀಳರಿಮೆ ಕಾಣುತ್ತಿದೆಯೇ? ಎಂದು ಕೇಳಿದಳು.
ಖಂಡಿತಾ ಇಲ್ಲ ವೈದೇಹಿ ತಟ್ಟನೆ ಹೇಳಿದಳು.
ಹಾಗಾದರೆ ನನಗೂ ಅದೇ ಇಷ್ಟ ಎಂದಳು ದೃಢವಾಗಿ.
ಶೇಖರನಿಗೆ ನಿರಾಸೆಯಾಯಿತು. ಹೆಂಡತಿಯ ಮುಖವನ್ನು ನೋಡಿದ. ಯಾವ ಕ್ಷಣದಲ್ಲಾದರೂ ಕಣ್ಣಿನ ಕಟ್ಟೆ ಒಡೆಯುವ ಹಂತದಲ್ಲಿತ್ತು. ತಾನು ಓದದೇ ಮನೆಯಲ್ಲಿ ಉಳಿದದ್ದಕ್ಕೆ ಮನೆಯವರಿಂದಾದ ಅಪಮಾನ, ತಿರಸ್ಕಾರ ಕಣ್ಮುಂದೆ ಬಂತು.
ಚಿನ್ನು, ನನ್ನ ಮಾತು ಕೇಳುವೆಯಾ? ತುಂಬಾ ಮೃದುವಾಗಿ ಕೇಳಿದ ತಂದೆಯನ್ನೇ ಚಿನ್ಮಯಿ ಒಮ್ಮೆ ನೋಡಿದಳು. ತನ್ನ ಮೇಲೆ ಇಟ್ಟಿರುವ ಪ್ರೀತಿಯನ್ನು ಕಂಡು ಅವಳಿಗೆ ತೃಪ್ತಿಯಾಯಿತು. ಸಂತೋಷವಾಯಿತು. ಆದರೆ ಅವಳ ನಿರ್ಧಾರ ಅಚಲವಾಗಿತ್ತು.
ಅಪ್ಪಾ ಈ ಒಂದು ವಿಷಯದಲ್ಲಿ ನಾನು ನಿಮ್ಮ ಮಾತು ಕೇಳಲಾರೆ ಎಂದಳು.
`ಓದು ಜ್ಞಾನಕ್ಕಾಗಿ, ದುಡಿಮೆ ಹೊಟ್ಟೆ ತುಂಬಿಸಲಿಕ್ಕೆ’ ಎಂದವಳು ಅರಿತಿದ್ದಳು. ವೈದೇಹಿಗಾದ ನಿರಾಸೆ ಅಷ್ಟಿಷ್ಟಲ್ಲ. ಮನದ ನೋವನ್ನು ಗೆಳತಿಯ ಮುಂದೆ ಹೇಳಲು ಪ್ರೇಮಳ ಮನೆಗೆ ಹೋದಳು.
* * *
ಪ್ರೇಮ ಸ್ನೇಹದಿಂದ ಗೆಳತಿಯ ಬೇಸರವನ್ನು ಹೋಗಲಾಡಿಸಲು, ವೈದೇಹಿ, ಚಿನ್ನುಗೆ ಯಾವುದರಲ್ಲಿ ಆಸಕ್ತಿಯಿದೆಯೋ ಅದರಲ್ಲಿಯೇ ಮುಂದುವರಿಯಲಿ. ಅವಳ ಆಸೆಯನ್ನು ಚಿವುಟಬೇಡ. ನೀವು ಪ್ರಾರಂಭಿಸಿರುವ ಪ್ರಾಡಕ್ಟ್ ಏನೂ ಕಡಮೆಯದಲ್ಲ. ಇಂದು ಗಿಡವಾಗಿದೆ. ನಾಳೆ ಮರವಾಗುತ್ತದೆ. ಏನೂ ಯೋಚನೆ ಮಾಡಬೇಡ. ಚಿನ್ನು ತುಂಬಾ ಜಾಣೆ. ಜೊತೆಗೆ ಧೈರ್ಯಸ್ಥೆ. ಅವಳಿಗೆ ಮುನ್ನುಗ್ಗುವ ಛಾತಿ ಇದೆ, ಚಿಂತಿಸಬೇಡ ಎಂದು ಸಮಾಧಾನ ಮಾಡಿದಳು.
ವೈದೇಹಿಯ ಹೃದಯ ಹಗುರವಾಯಿತು. ಸಮಾಧಾನದಿಂದ ಮನೆಗೆ ಬಂದಳು.
(ಸಶೇಷ)