ಕೆಲವು ಸಾಧಕರಿಗೆ ಕೊಡುವ ಪ್ರಶಸ್ತಿ ಆ ಪ್ರಶಸ್ತಿಯ ಗೌರವ-ಹಿರಿಮೆಯನ್ನೇ ಹೆಚ್ಚಿಸುತ್ತದೆ. ಅಂತಹ ಒಂದು ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗುವ ಅವಕಾಶ ದೊರಕುವುದು – ಜನವರಿ ೨೬, ೨೦೧೫ ಗಣರಾಜ್ಯೋತ್ಸವದಿನದಂದು ನೀಡುವ ಎರಡು ‘ಭಾರತ ರತ್ನ’ ಪ್ರಶಸ್ತಿಗೆ. ಅಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ‘ಮಹಾಮನಾ’ ಪಂಡಿತ ಮದನಮೋಹನ ಮಾಲವೀಯ (ಮರಣೋತ್ತರವಾಗಿ) ಮತ್ತು ‘ಅಜಾತಶತ್ರು’ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ವನ್ನು ನೀಡಿ ಗೌರವಿಸುವರು. ಡಿಸೆಂಬರ್ ೨೫, ೨೦೧೪ರಂದೇ, ಈ ಇಬ್ಬರೂ ಗೌರವಾನ್ವಿತರ ಜನ್ಮದಿನದಂದೇ, ಭಾರತ ಸರ್ಕಾರ ಈ ಪ್ರಶಸ್ತಿಪ್ರದಾನದ ಘೋಷಣೆಯನ್ನು ಅಧಿಕೃತವಾಗಿ ಮಾಡಿತ್ತು.
‘ಹಿಂದಿನ ಯುಪಿಎ ಸರ್ಕಾರ ಈ ಕೆಲಸವನ್ನು ಮಾಡಿದ್ದರೆ ಅದರ, ವಿಶೇಷವಾಗಿ ಕಾಂಗ್ರೆಸ್ನ, ಮರ್ಯಾದೆ ಹಾಗೂ ಗೌರವ ಇನ್ನೂ ಹೆಚ್ಚುತ್ತಿತ್ತು’ – ಎಂದು ದೇಶದ ಕೆಲವು ಪತ್ರಿಕೆಗಳು ತಮ್ಮ ಅಭಿಪ್ರಾಯವನ್ನು ಇದೇ ಸಂದರ್ಭದಲ್ಲಿ ಬರೆದು, ಹೆಚ್ಚು ಮಹತ್ತ್ವ ಕೊಟ್ಟು ಪ್ರಕಟಿಸಿದವು.
ಪಂ. ಮದನಮೋಹನ ಮಾಲವೀಯರು ಬೌದ್ಧಿಕ ಶ್ರೀಮಂತಿಕೆಯ ವ್ಯಕ್ತಿ, ಮಹಾನ್ ಶಿಕ್ಷಣ ತಜ್ಞ ಹಾಗೂ ಅಪ್ರತಿಮ ಸ್ವಾತಂತ್ರ್ಯಹೋರಾಟಗಾರರಾಗಿದ್ದರು. ಅಟಲ್ಜೀ ಎಲ್ಲರಿಗೂ ಮಾರ್ಗದರ್ಶಕ ಸ್ಫೂರ್ತಿ; ದೇಶಕ್ಕೆ ಅವರು ಸಲ್ಲಿಸಿದ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ತಮ್ಮ ಮನದಾಳದ ಮಾತುಗಳನ್ನಾಡಿದರು.
ವಾಜಪೇಯಿ ಅವರಿಗೆ ಯುಪಿಎ ಸರ್ಕಾರದ ಅವಧಿಯಲ್ಲಿಯೇ ಈ ಪುರಸ್ಕಾರ ದೊರೆಯಬೇಕಿತ್ತು. ಅವರು ಕಾರ್ಗಿಲ್ ಯುದ್ಧದ ವೇಳೆ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಸಮ್ಮಿಶ್ರ ಸರ್ಕಾರದ ಯಶಸ್ವಿ ಪ್ರಯೋಗದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದು ಜೆಡಿಯು ಮುಖಂಡ ನಿತೀಶ್ಕುಮಾರ್ ಹೇಳಿದರು.
ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ. ನಾವೆಲ್ಲ ವಾಜಪೇಯಿಯವರನ್ನು ಗೌರವಿಸುತ್ತೇವೆ ಎಂದು ಪ್ರತಿಕ್ರಿಯಿಸಿದವರು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ವಾಜಪೇಯಿ ಕೂಡ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು. ದೇಶಕ್ಕೆ ಅನುಪಮ ಸೇವೆ ಸಲ್ಲಿಸಿದವರಿಗೆ, ವಿಶೇಷ ಸಾಧನೆ ಮಾಡಿದವರಿಗೆ ‘ಭಾರತರತ್ನ’ ನೀಡಲಾಗುತ್ತಿದೆ. ಅದೇ ಬಗೆಯಲ್ಲಿ ವಾಜಪೇಯಿಯವರಿಗೆ ನೀಡುತ್ತಿರುವುದು ಸ್ವಾಗತಾರ್ಹ ಎಂಬ ಹೇಳಿಕೆಯನ್ನು ನೀಡಿದ್ದಾರೆ. ‘ಮಹಾಮನಾ’ ಪಂಡಿತ ಮದನಮೋಹನ ಮಾಲವೀಯರನ್ನು ನೆನಪಿಸಿಕೊಂಡ ದೇಶದ ರಾಜಕಾರಣಿಗಳು ಮಾತ್ರ ತೀರ ವಿರಳ.
ಮಹಿಮಾನ್ವಿತ ‘ಮಹಾಮನಾ’
ವಿಶ್ವವಿಖ್ಯಾತ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದ ಸಂಸ್ಥಾಪಕರಾದ ಪಂಡಿತ ಮದನಮೋಹನ ಮಾಲವೀಯ (೨೫.೧೨.೧೮೬೧ – ೧೨.೧೧.೧೯೪೬)ರು ಅಗ್ರಶ್ರೇಣಿಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದವರು; ಭಾರತ ರಾಷ್ಟ್ರೀಯತ್ವಕ್ಕೆ ಇನ್ನೊಂದು ಹೆಸರಾಗಿದ್ದವರು. ಖ್ಯಾತ ಶಿಕ್ಷಣತಜ್ಞ ಮತ್ತು ರಾಜಕಾರಣಿಯಾಗಿದ್ದ ಇವರಿಗೆ ಖುದ್ದು ಗಾಂಧಿಯವರೇ ‘ಮಹಾಮನಾ’ ಎಂಬ ಬಿರುದನ್ನು ನೀಡಿದ್ದರು.
ಸಾತಂತ್ರ್ಯಾಂದೋಲನದ ತೀವ್ರವಾದಿ-ಸೌಮ್ಯವಾದಿ ಬಣ ಗಳ ನಡುವೆ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದ ಬಹುಮುಖ ವ್ಯಕ್ತಿತ್ವದ ಮುತ್ಸದ್ದಿಯಾಗಿದ್ದ ಮಾಲವೀಯರು ಸ್ವಾತಂತ್ರ್ಯಪೂರ್ವದ ಒಬ್ಬ ಉತ್ತಮ ಸಂಸದೀಯ ಪಟುವಾಗಿದ್ದರಲ್ಲದೆ, ಸಮಾಜಸುಧಾರಕರೂ ಆಗಿ ಜನಮನ್ನಣೆ ಗಳಿಸಿದ್ದರು. ಅವರು ಕಾಂಗ್ರೆಸ್ನಲ್ಲಿ ೫೦ ವರ್ಷಕ್ಕೂ ಹೆಚ್ಚು ಕಾಲ ಸೇವೆಸಲ್ಲಿಸಿದ್ದಾರೆ. ೧೯೦೯ರಿಂದ ೧೯೩೨ರ ಅವಧಿಯಲ್ಲಿ ನಾಲ್ಕು ಬಾರಿ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದರು. ೧೯೩೦ರಲ್ಲಿ ಗಾಂಧಿಯವರ ಉಪ್ಪಿನ ಸತ್ಯಾಗ್ರಹ ಹಾಗೂ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಜೈಲುಶಿಕ್ಷೆಗೂ ಗುರಿಯಾಗಿದ್ದರು.
ಸ್ವತಃ ಗಾಂಧಿಯವರಿಂದಲೇ ದೇಶಭಕ್ತಿಯಲ್ಲಿ ಮಾಲವೀಯರಿಗೆ ಸಮಗಟ್ಟುವವರು ಯಾರಿದ್ದಾರೆ? ಯೌವನಕಾಲದಿಂದ ಪ್ರೌಢದಶೆಯವರೆಗೆ ಅವರ ಭಕ್ತಿಪ್ರವಾಹ ಅವಿಚ್ಛಿನ್ನವಾಗಿ ಹರಿದುಬಂದಿದೆ. ಕಾಶಿ ವಿಶ್ವವಿದ್ಯಾಲಯ ಮಾಲವೀಯರ ಪ್ರಾಣ; ಮತ್ತು ಮಾಲವೀಯರ ಪ್ರಾಣ ಕಾಶಿ ವಿಶ್ವವಿದ್ಯಾಲಯ. ನಮಗಾಗಿ ಈ ಮಾನವವೀರ ದೀರ್ಘಾಯುವಾಗಲಿ ಎಂದು ಆಶಂಸನೆಯನ್ನು ಪಡೆದುಕೊಂಡವರು ಮಾಲವೀಯರು.
ರಾಷ್ಟ್ರಕವಿ ರವೀಂದ್ರನಾಥ ಠಾಕೂರ್ ಅವರು ಮಾಲವೀಯರೆಂದರೆ ಜಾಜ್ವಲ್ಯಮಾನ ಬುದ್ಧಿ, ಪರಮೌದಾರ ಹೃದಯ ಎಂದು ಪ್ರಶಂಸಿಸಿದ್ದಾರೆ. ಸಂಸ್ಕೃತ ಸಾಹಿತ್ಯದ ಪರಿಜ್ಞಾನ, ಆಂಗ್ಲ ಸಾಹಿತ್ಯದ ಮತ್ತು ಚರಿತ್ರೆಯ ಅರಿವು, ಸಾಮಾನ್ಯಜನರ ಸ್ಥಿತಿಗತಿಗಳ ಆಳವಾದ ಅಧ್ಯಯನ, ಆರ್ಥಿಕ-ವಾಣಿಜ್ಯ ವ್ಯವಹಾರಗಳ ಶೋಧಪೂರ್ಣ ವಿಶ್ಲೇಷಣೆ – ಇವೆಲ್ಲ ಮಾಲವೀಯರ ಭಾಷಣಗಳಿಗೆ ಮೆರಗನ್ನಿತ್ತಿದ್ದವು. ಕೇವಲ ರಾಜಕೀಯಕ್ಕೋ, ಶಿಕ್ಷಣಕ್ಕೋ ಸೀಮಿತವಾಗಿರದೆ ಮಾಲವೀಯರ ಆಸಕ್ತಿಕ್ಷೇತ್ರಗಳು ಇಡೀ ರಾಷ್ಟ್ರಜೀವನವನ್ನು ವ್ಯಾಪಿಸಿದ್ದವು ಎಂಬುದಾಗಿ ಸರ್ ಎಂ. ವಿಶ್ವೇಶ್ವರಯ್ಯನವರು ಮಾಲವೀಯರ ಕುರಿತಾಗಿ ನೆನಪಿಸಿಕೊಳ್ಳುತ್ತಿದ್ದರು.
ಮಾಲವೀಯರ ನಿಃಸ್ವಾರ್ಥ ಕಾರ್ಯ, ಜೀವನ ಸರಳತೆ, ಶಿಕ್ಷಣೋತ್ಸಾಹ, ಎಲ್ಲಕ್ಕಿಂತ ಮಿಗಿಲಾಗಿ ಅವರ ರಾಷ್ಟ್ರಪ್ರೇಮ – ಇವು ನನಗೆ ಸ್ಫೂರ್ತಿಯನ್ನಿತ್ತು ನನ್ನನ್ನು ಸಂಮೋಹನಗೊಳಿಸಿವೆ ಎಂದಿದ್ದವರು ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷ ಡಾ. ರಾಜೇಂದ್ರಪ್ರಸಾದ್. ವಿನಮ್ರತೆ, ಶುಚಿತೆ, ರಾಷ್ಟ್ರಪ್ರೇಮ, ಭಾರತೀಯ ಸಂಸ್ಕೃತಿಯ ಬಗೆಗೆ ನಿತಾಂತ ನಿಷ್ಠೆ – ಈ ಆದರ್ಶಗಳಿಗಾಗಿ ಮಾಲವೀಯರು ತಮ್ಮ ಅಖಂಡ ಜೀವನವನ್ನು ಸಮರ್ಪಿಸಿಕೊಂಡಿದ್ದರು. ಆ ಆದರ್ಶಪಾಲನೆ ನಮ್ಮೆಲ್ಲರ ಜೀವನದಲ್ಲಿ ಅನುಕರಣಾರ್ಹವಾಗಿದೆ ಎಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮಾಲವೀಯರ ಆದರ್ಶ ಜೀವನವನ್ನು ಕೊಂಡಾಡಿದ್ದಾರೆ. ಜಯಪ್ರಕಾಶ ನಾರಾಯಣ ರಂತೂ ಮಾಲವೀಯರ ಸಮೀಪದಲ್ಲಿ ಕುಳಿತುಕೊಂಡಾಗ ನನಗೆ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ ಬಂದ ರೀತಿಯ ಅನುಭವವಾಗುತ್ತಿತ್ತು ಎಂದು ನೆನಪಿಸಿಕೊಂಡಿದ್ದಿದೆ.
ಸಕ್ರಿಯ ನಾಯಕ
೨೦ನೇ ಶತಮಾನದ ಪೂರ್ವಾರ್ಧದಲ್ಲಿ ಇಡೀ ದೇಶದ ಅತ್ಯಂತ ಸಕ್ರಿಯ ನಾಯಕರಲ್ಲಿ ಒಬ್ಬರಾಗಿದ್ದವರು ಮಾಲವೀಯರು. ಅವರಿಲ್ಲದೆ ರಾಷ್ಟ್ರಮಟ್ಟದ ಯಾವ ಕಲಾಪವೂ ನಡೆಯುತ್ತಿರಲಿಲ್ಲ. ಕಾಂಗ್ರೆಸ್ ಸಭೆಗಳಾಗಲಿ, ಹಿಂದೂ ಮಹಾಸಭೆಯ ಸಮಾವೇಶಗಳಾಗಲಿ, ಶಿಕ್ಷಣ ಸಂಬಂಧಿ ಸಮ್ಮೇಳನಗಳಾಗಲಿ – ಎಲ್ಲದರಲ್ಲಿಯೂ ಅವರ ಸಹಭಾಗಿತ್ವ ಇದ್ದೇ ಇರುತ್ತಿತ್ತು. ಸನಾತನಧರ್ಮಪ್ರಚಾರ, ಗೋಸೇವೆ, ಅಸ್ಪೃಶ್ಯೋದ್ಧಾರ, ಸ್ವದೇಶೀ, ಹಿಂದೀ ಭಾಷೆಯ ಪ್ರಸಾರ, ಸಂಸ್ಕೃತಭಾಷೆಯ ಮತ್ತು ಸಾಹಿತ್ಯದ ಹಾಗೂ ಶಾಸ್ತ್ರಾಧ್ಯಯನದ ಪ್ರವರ್ತನೆ – ಈ ನಾಲ್ಕಾರು ಕ್ಷೇತ್ರಗಳಲ್ಲಿ ಮಾಲವೀಯರು ಸತತವಾಗಿ ಶ್ರಮಿಸಿದರು.
ಈ ಎಲ್ಲ ಪ್ರಯಾಸಗಳ ಪ್ರೇರಕಶಕ್ತಿಯಾಗಿದ್ದುದು ಅವರೊಳಗಿದ್ದ ಪ್ರಖರ ರಾಷ್ಟ್ರಪ್ರೇಮವೇ.
ನಿಷ್ಕಲ್ಮಶ ದೇಶಭಕ್ತಿ ಮತ್ತು ಈಶಭಕ್ತಿ – ಇವೆರಡೂ ಮಾಲವೀಯರ ದೃಷ್ಟಿಯಲ್ಲಿ ಅಭಿನ್ನವಾಗಿದ್ದವು.ಅದರಿಂದಾಗಿ ಅವರು ಕೈಗೊಳ್ಳುತ್ತಿದ್ದ ಕಾರ್ಯವೈವಿಧ್ಯವು ಯಶಕಾಣುತ್ತಿದ್ದವು. ಸನಾತನ ಧರ್ಮಕ್ಕೆ ವ್ಯಾವಹಾರಿಕ ಅನ್ವಯದ ರೂಪವನ್ನು ಕೊಟ್ಟದ್ದು ಅವರ ಅನನ್ಯತೆ. ಅವರ ಚಿಂತನೆಯ ಅಡಿಪಾಯವಾಗಿದ್ದುದು ಅಂಧಶ್ರದ್ಧೆಯಲ್ಲ, ಅನ್ಯಮತ ದ್ವೇಷವೂ ಅಲ್ಲ. ಸರ್ವಸಮುದಾಯಪ್ರೇಮವು ಅವರ ಮನೋರಚನೆಯಲ್ಲಿ ಹಾಸುಹೊಕ್ಕಾಗಿದ್ದಿತ್ತು.ಜಗತ್ತು ಮಾಲವೀಯರನ್ನು ಗುರುತಿಸುವುದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕರಾಗಿ. ಆನಿ ಬೆಸೆಂಟ್ರ ಜೊತೆ ಸೇರಿ, ೧೯೧೬ರಲ್ಲಿ ವಾರಾಣಸಿಯಲ್ಲಿ ತಾವೇ ಸ್ಥಾಪಿಸಿದ ವಿಶ್ವವಿದ್ಯಾಲಯದಲ್ಲಿ ಮಾಲವೀಯರು ಉಪಕುಲಪತಿಯಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ನಂತರ ತಮ್ಮ ಸ್ಥಾನವನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ರಿಗಾಗಿ ತೆರವುಮಾಡಿದರು. ಈ ಬೃಹತ್ ವಿಶ್ವವಿದ್ಯಾಲಯ ಇಂದು ಏಷ್ಯಾದ ಅತಿದೊಡ್ಡ ವಸತಿ-ವಿಶ್ವವಿದ್ಯಾಲಯವಾಗಿದೆ. ೧೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಉಜ್ಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ.
ಆದರ್ಶ ಪತ್ರಿಕೋದ್ಯಮಿ
ಜನಶಿಕ್ಷಣ ಕಾರ್ಯದಲ್ಲಿ ಪತ್ರಿಕೆಗಳ ಪಾತ್ರದ ಮಹತ್ತ್ವವನ್ನು ಗುರುತಿಸಿದ ಆದ್ಯರಲ್ಲಿ ಮಾಲವೀಯರು ಗಣ್ಯರು. ಸ್ವತಃ ಒಬ್ಬ ಆದರ್ಶ ಪತ್ರಿಕೋದ್ಯಮಿಯೂ ಆಗಿದ್ದರು. ಅವರ ಪತ್ರಿಕೋದ್ಯಮ ೧೮೮೦ರ ದಶಕದಿಂದಲೇ ಆರಂಭಗೊಂಡಿತ್ತು. ಪ್ರತಾಪಗಢದಿಂದ ಪ್ರಕಟಗೊಳ್ಳುತ್ತಿದ್ದ ‘ಹಿಂದುಸ್ಥಾನ’ ಪತ್ರಿಕೆ (೧೮೮೭-೮೯), ‘ಇಂಡಿಯನ್ ಒಪಿನಿಯನ್’ ಆಂಗ್ಲಪತ್ರಿಕೆ (೧೮೮೯) – ಇವುಗಳ ಸಂಪಾದಕರಾಗಿದ್ದರು. ಜನಸಂಘಟನೆಯಲ್ಲಿ ಪತ್ರಿಕೆಗಳ ಪಾತ್ರವನ್ನು ಸರಿಯಾಗಿ ಗುರುತಿಸಿದ್ದ ಅವರು ಮುಂದೆ ಪ್ರಯಾಗದಲ್ಲಿ ‘ಅಭ್ಯುದಯ’ (ಹಿಂದೀ ಸಾಪ್ತಾಹಿಕ, ೧೯೦೭), ‘ಲೀಡರ್’ (ಆಂಗ್ಲದೈನಿಕ, ೧೯೦೯), ‘ಮರ್ಯಾದಾ’ (ಹಿಂದೀ ಸಾಪ್ತಾಹಿಕ, ೧೯೧೦) ಪತ್ರಿಕೆಗಳನ್ನು ತಾವೇ ಸ್ವತಃ ಸ್ಥಾಪಿಸಿ ಅವನ್ನು ಪ್ರಭಾವೀ ಮಾಧ್ಯಮಗಳಾಗಿ ರೂಪಿಸಿದರು. ಪತ್ರಿಕೆಗಳಿಗೆ ಲೇಖನವನ್ನು ಬರೆದವರಿಗೆ ಸಂಭಾವನೆಯನ್ನು ಕೊಡುವ ಪದ್ಧತಿಯನ್ನು ಮೊದಲಬಾರಿಗೆ ಜಾರಿಗೆ ತಂದವರೇ ಮಾಲವೀಯರು. ‘ಅಭ್ಯುದಯ’ ಪತ್ರಿಕೆಯ ಲೇಖಕರಿಗೆ ಅವರು ಗೌರವ ಸಂಭಾವನೆಯನ್ನು ನೀಡುತ್ತಿದ್ದರು.
ಪತ್ರಿಕಾಧರ್ಮದ ಕುರಿತಾಗಿ ಮಾಲವೀಯರು ಮೂರು ಅಂಶಗಳಿಗೆ ಅಧಿಕ ಮಹತ್ತ್ವಕೊಟ್ಟು ಹೇಳಿದ್ದಾರೆ – ೧. ಸತ್ಯನಿಷ್ಠೆ, ೨. ರಾಷ್ಟ್ರದ ಏಕತೆ, ೩. ಒಳ್ಳೆಯ ಭಾವನೆಗಳ ಪ್ರಸಾರ. ಮೌಲ್ಯಗಳಲ್ಲಿ ಆಸಕ್ತಿಯೇ ಇಲ್ಲದೆ, ಕೇವಲ ವ್ಯಾಪಾರೀ ಪ್ರವೃತ್ತಿಯ ಮಾಧ್ಯಮಗಳು ವಿಜೃಂಭಿಸುತ್ತಿರುವ ಈ ದಿನಗಳಲ್ಲಿ, ಮೌಲ್ಯಪ್ರವರ್ತನೆಗಾಗಿಯೇ ಪತ್ರಿಕೆಗಳನ್ನು ನಡೆಸಿದ ಮಾಲವೀಯರು ೧೯೨೨ರಲ್ಲಿ ಲಾಹೋರಿನಲ್ಲಿ ಮಾಡಿದ ಭಾಷಣವೊಂದರಲ್ಲಿ ಹೇಳಿದ ಈ ಮಾತುಗಳು ಅಂಥವರ ಕಣ್ತೆರೆಸಬಲ್ಲವು: ಪತ್ರಿಕೆಗಳನ್ನು ನಡೆಸುವವರಲ್ಲಿ ನನ್ನ ಪ್ರಾರ್ಥನೆ ಇದು: ಜನರ ಮನಸ್ಸಿನಲ್ಲಿ ಕೆಟ್ಟ ಭಾವನೆಗಳನ್ನು ಹುಟ್ಟಿಸುವಂತಹ ಯಾವ ಸಂಗತಿಯೂ ಪತ್ರಿಕೆಗಳಲ್ಲಿ ಬಾರದಿರಲಿ. ಎಲ್ಲಿಯೂ ಅತ್ಯುಕ್ತಿ ನುಸುಳದಿರಲಿ. ಪ್ರಕಟಗೊಳ್ಳುವ ಎಲ್ಲವೂ ಸತ್ಯಾಧಾರಿತವಾಗಿರಲಿ. ದೇಶದ ಏಕತೆಗೆ ಪೋಷಕವಾಗುವ ರೀತಿಯ ವಿಷಯಗಳು ಪ್ರಕಾಶಗೊಳ್ಳಲಿ.
ಪೂರ್ಣಾವಧಿ ಸಾಮಾಜಿಕ ಕಾರ್ಯಕರ್ತ
೨೫.೧೨.೧೮೬೧ರಂದು ಪ್ರಯಾಗದಲ್ಲಿ, ಅತಿ ಸಾಮಾನ್ಯ ಮನೆ ತನದಲ್ಲಿ, ಆದರೆ ಸುಶಿಕ್ಷಿತ ಕುಟುಂಬದಲ್ಲಿ ಹುಟ್ಟಿದ (ತಂದೆ: ಬ್ರಜನಾಥ್ ವ್ಯಾಸ್; ತಾಯಿ: ಮೂನಾದೇವಿ) ಮಾಲವೀಯರು ಅಲಹಾಬಾದ್ ಜಿಲ್ಲಾ ಶಾಲೆಯಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ವೃತ್ತಿಯ ಜೊತೆಜೊತೆಗೇ ವ್ಯಾಸಂಗವನ್ನೂ ಮುಂದುವರಿಸಿ ಎಲ್ಎಲ್ಬಿ ಪದವಿಯನ್ನೂ ಪಡೆದರು. ಸ್ವಲ್ಪಕಾಲ ವಕೀಲಿ ವೃತ್ತಿಯನ್ನೂ ನಡೆಸಿದರು. ವೃತ್ತಿಯಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಯಿದ್ದಾಗಲೇ ಮಾಲವೀಯರು ಅದನ್ನು ಬಿಟ್ಟು ತಮ್ಮನ್ನು ತಾವು ಸಂಪೂರ್ಣವಾಗಿ ದೇಶಸೇವೆಯಲ್ಲಿ ತೊಡಗಿಸಿಕೊಂಡರು. ೧೯೩೭ರಲ್ಲಿ ಸಕ್ರಿಯ ರಾಜಕಾರಣ ತೊರೆದ ಅವರು ನಂತರ ತಮ್ಮನ್ನು ಸಂಪೂರ್ಣವಾಗಿ ಸಾಮಾಜಿಕ ಕಾರ್ಯಗಳಿಗಾಗಿ ಅರ್ಪಿಸಿಕೊಂಡರು. ಮಹಿಳೆಯರ ಶಿಕ್ಷಣ, ವಿಧವಾವಿವಾಹದ ಬೆಂಬಲಿಗರಾಗಿದ್ದ ಅವರು ಬಾಲ್ಯವಿವಾಹದ ವಿರೋಧಿಗಳಾಗಿದ್ದರು.
ಸದಾ ಹಣೆಯಲ್ಲಿ ತಿಲಕ ಹಾಗೂ ಶುಭ್ರ ಬಿಳೀ ಉಡುಪು ಧರಿಸುತ್ತಿದ್ದ ಮಾಲವೀಯರು ಎಂದೂ ತಮ್ಮ ಸಂಧ್ಯಾವಂದನೆ ತಪ್ಪಿಸಿಕೊಂಡವರಲ್ಲ ತಮ್ಮದೇ ಅನನ್ಯ ಜೀವನಸೈಲಿಯನ್ನು ಹೊಂದಿದ್ದ ಮಾಲವೀಯರು ಸಮಾಜಸುಧಾರಕರಾಗಿ ಸಲ್ಲಿಸಿದ ಸೇವೆಯೂ ವಿಶಿಷ್ಟ. ‘ಅಸ್ಪೃಷ್ಯ’ರಿಗೆ ವೇದೋಪನಿಷತ್ತಿನ ದೀಕ್ಷೆ ನೀಡಬೇಕೆಂದೂ, ಮಠ-ಮಂದಿರಗಳಲ್ಲಿ ಅವರಿಗೆ ಪ್ರವೇಶಾವಕಾಶವಿರಬೇಕೆಂದೂ ಅವರು ಅಭಿಯಾನವನ್ನೆ ನಡೆಸಿದ್ದರು. ೧೯೩೫ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಸಾವಿರಾರು ಮಂದಿ ದಲಿತರಿಗೆ ಅವರು ಸ್ವತಃ ಮುಂದೆನಿಂತು ವೇದೋಕ್ತವಾಗಿ ಪವಿತ್ರಸ್ನಾನ ಮಾಡಿಸಿದ್ದರು. ಒಟ್ಟಿನಲ್ಲಿ ಪಂಡಿತ ಮದನಮೋಹನ ಮಾಲವೀಯರು ರಾಷ್ಟ್ರೀಯತೆಯ ನೈಜ ಉಪಾಸಕರು, ಉಚ್ಚಸ್ತರದ ಪತ್ರಕರ್ತರು,ಸಮಾಜಸಂಘಟಕರು,ಶಿಕ್ಷಣವೇತ್ತರು, ಸುಧಾರಕರು – ಇಂತಹ ಹಲವಾರು ಗುಣಗಳ ಸಮುಚ್ಚಯವೇ ಆಗಿದ್ದರು. ವಕೀಲರಾಗೂ ಪ್ರಸಿದ್ಧಿಪಡೆದಿದ್ದರು. ಜೀವನಪೂರ್ತಿ (ನಿಧನ:೧೨.೧೧.೧೯೪೬) ಪೂರ್ಣಾವಧಿ ಸಾಮಾಜಿಕ ಕಾರ್ಯಕರ್ತರಾಗಿದ್ದರು.
‘ಅಜಾತ ಶತ್ರು’ ವಾಜಪೇಯಿ
ರಾಜಕೀಯವಲಯದಲ್ಲಿ ‘ಅಜಾತ ಶತ್ರು’ ಎಂದೇ ಖ್ಯಾತರಾಗಿರುವ ಅಟಲ್ ಬಿಹಾರಿ ವಾಜಪೇಯಿ (೨೫.೧೨.೧೯೨೪) ಅವರು ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲೊಬ್ಬರು. ಗಬ್ಬೆದ್ದು ನಾರುತ್ತಿರುವ ಇಂದಿನ ರಾಜಕಾರಣದಲ್ಲಿ ವಿಪಕ್ಷದವರನ್ನು ಬಿಡಿ, ಸ್ವಪಕ್ಷೀಯರೇ ಪರಸ್ಪರ ಗೌರವ ತೋರುವುದು ಕಮ್ಮಿಯಾಗುತ್ತಿದೆ. ಇಂಥ ಸೂಕ್ಷ್ಮ ಪರಿಸ್ಥಿತಿಯಲ್ಲೂ ಸ್ವಂತಿಕೆ, ಮುತ್ಸದ್ದಿತನಗಳನ್ನು ಬಿಡದೆ, ರಾಜಕೀಯ ಎದುರಾಳಿಗಳ ಕುರಿತು ಹದತಪ್ಪಿ ಮಾತನಾಡದೆ, ಟೀಕಿಸುವಾಗಲೂ ಸಂಯಮ ತೋರಿದ ವಾಜಪೇಯಿ ಈ ಕಾರಣಕ್ಕಾಗಿಯೇ ‘ಅಜಾತ ಶತ್ರು’ ಎನಿಸಿಕೊಂಡಿರುವುದು ಸರ್ವವೇದ್ಯ. ಕವಿಹೃದಯದ ವಾಜಪೇಯಿ ಪಕ್ಷದ ಚೌಕಟ್ಟು ಮೀರಿ ಬೆಳೆದು ಎಲ್ಲ ಪಕ್ಷದವರಿಂದಲೂ ಗೌರವಿಸಲ್ಪಡುವ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಸಮಕಾಲೀನ ರಾಜಕೀಯ ಇತಿಹಾಸದಲ್ಲಿ ಇದು ಅಪರೂಪದ್ದು. ಇದಕ್ಕೆ ಸಾಕ್ಷಿ ಅವರಿಗೆ ‘ಭಾರತ ರತ್ನ’ ಪುರಸ್ಕಾರ ಘೋಷಣೆಯಾಗುತ್ತಿದ್ದಂತೆ ನಾಯಕರು ಪಕ್ಷಭೇದ ಮರೆತು ಅವರನ್ನು ಅಭಿನಂದಿಸಿರುವುದು.
ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ವಾಜಪೇಯಿಯವರ ಮುತ್ಸದ್ದಿತನ ರಾಜಕೀಯದ ಘನತೆಯನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಾಜಪೇಯಿಯವರ ವ್ಯಕ್ತಿತ್ವ ಮತ್ತು ಎನ್ಡಿಎ ಸರ್ಕಾರದಲ್ಲಿದ್ದಾಗ ಕಲಿತ ಪಾಠಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿವೆ ಎಂದು ಜೆಡಿಯು ಮುಖಂಡ ನಿತೀಶ್ಕುಮಾರ್ ನೆನಪಿಸಿಕೊಳ್ಳುತ್ತಾರೆ.
ಅಟಲ್ ಬಿಹಾರಿ ವಾಜಪೇಯಿ ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯದ ನಾಯಕರಲ್ಲಿ ಅಗ್ರಗಣ್ಯರು. ವಿದೇಶಾಂಗ ಸಚಿವರಾಗಿ, ಅನಂತರ ಪ್ರಧಾನಿಯಾಗಿ ಹಲವು ಹೊಸ ಹೆಜ್ಜೆಗಳನ್ನಿರಿಸಿದ ಹೆಮ್ಮೆ ಅವರದು. ಅಸಾಧಾರಣ ವಾಕ್ಪಟುತ್ವ ಹೊಂದಿದ್ದ ವಾಜಪೇಯಿಯವರು ತಮ್ಮ ಆಡಳಿತಾವಧಿಯಲ್ಲಿ ತೆಗೆದುಕೊಂಡ ದಿಟ್ಟಕ್ರಮಗಳಿಂದಾಗಿ ‘ಮುತ್ಸದ್ದಿ ರಾಜಕಾರಣಿ’ ಎನಿಸಿಕೊಂಡರು.
ಭಾರತೀಯ ಜನಸಂಘದಲ್ಲಿ ರಾಜಕೀಯ ಪಯಣವನ್ನು ಆರಂಭಿಸಿ, ಅದು ಬಿಜೆಪಿಯಾಗಿ ಪರಿವರ್ತನೆಯಾದಾಗ ಅದನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದವರಲ್ಲಿ ವಾಜಪೇಯಿ ಮೊದಲಿಗರು. ಕಾಂಗ್ರೆಸ್ಸೇತರ ಪ್ರಧಾನಿಯಾಗಿ ದೀರ್ಘಕಾಲ ಸೇವೆಸಲ್ಲಿಸಿದ ವಾಜಪೇಯಿಯವರನ್ನು ಅವರ ಟೀಕಾಕಾರರು ಆರ್ಎಸ್ಎಸ್ ‘ಮುಖವಾಡ’ ಎಂದು ಜರಿಯುತ್ತಿದ್ದರು. ಕೆಲವರು ಅವರನ್ನು ಬಿಜೆಪಿಯ ಸೌಮ್ಯವಾದಿ ನಾಯಕ ಎಂದು ಪರಿಗಣಿಸಿದ್ದೂ ಇದೆ.
ವಾಜಪೇಯಿ ಒಂಬತ್ತು ಸಲ ಲೋಕಸಭೆ ಮತ್ತು ಎರಡು ಸಲ ರಾಜ್ಯಸಭೆ ಸದಸ್ಯರಾಗಿ ಸುಮಾರು ನಾಲ್ಕೂವರೆ ದಶಕಗಳ ಕಾಲ ಸಂಸತ್ತಿನಲ್ಲಿ ಸಕ್ರಿಯ ಸದಸ್ಯರಾಗಿದ್ದವರು. ವಾಜಪೇಯಿಯಂಥವರು ಸಂಸತ್ತಿನಲ್ಲಿ ಇರಬೇಕು ಎಂದು ನೆಹರು ಬಯಸಿದ್ದರು. ಅದಕ್ಕಾಗಿ ಅವರು ವಾಜಪೇಯಿ ಸ್ಪರ್ಧಿಸಿದ ಲೋಕಸಭಾ ಕ್ಷೇತ್ರಕ್ಕೆ ಪ್ರಚಾರಕ್ಕೇ ಹೋಗಿರಲಿಲ್ಲ. ಈತ ವಿರೋಧ ಪಕ್ಷದ ತರುಣ ನಾಯಕ. ನನ್ನನ್ನು ಯಾವತ್ತು ಟೀಕಿಸುವಾತ. ಆದರೆ ಅವನಲ್ಲಿ ನಾನೊಂದು ಉಜ್ಜ್ವಲ ಭವಿಷ್ಯವನ್ನು ಕಾಣುತ್ತಿದ್ದೇನೆ ಎಂದು ಭಾರತಕ್ಕೆ ಭೇಟಿನೀಡಿದ್ದ ಬ್ರಿಟಿಷ್ ಪ್ರಧಾನಿಗೆ ವಾಜಪೇಯಿಯವರನ್ನು ಪರಿಚಯಿಸುತ್ತ ಸ್ವತಃ ನೆಹರು ಅವರೆ ಹೇಳಿದ್ದಿದೆ.
೧೯೪೪ರಲ್ಲಿ ಗ್ವಾಲಿಯರ್ನಲ್ಲಿ, ಆರ್ಯ ಸಮಾಜದ ಯುವವಿಭಾಗ – ‘ಆರ್ಯ ಕುಮಾರ ಸಭಾ’ದ ಗ್ವಾಲಿಯರ್ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗುವ ಮೂಲಕ ವಾಜಪೇಯಿಯವರ ಸಾರ್ವಜನಿಕ ಜೀವನ ಆರಂಭವಾಯಿತು. ಅದಕ್ಕೂ ಮುಂಚೆ, ೧೯೩೯ರಲ್ಲಿ, ಅವರು ಬಾಬಾಸಾಹೇಬ ಆಪ್ಟೆಯವರ ಪ್ರಭಾವಕ್ಕೆ ಒಳಗಾಗಿ ರಾ.ಸ್ವ. ಸಂಘವನ್ನು ಸ್ವಯಂಸೇವಕರಾಗಿ ಸೇರಿಕೊಂಡಿದ್ದರು. ೧೯೪೦-೪೪ರಲ್ಲಿ ರಾ.ಸ್ವ. ಸಂಘದ ಶಿಕ್ಷಾವರ್ಗಗಳನ್ನು (ಓಟಿಸಿಯನ್ನು) ಪೂರೈಸಿ, ೧೯೪೭ರಿಂದ ಅದರ ಪೂರ್ಣಾವಧಿ ಕಾರ್ಯಕರ್ತರಾಗಿ, ‘ಪ್ರಚಾರಕ’ರಾದರು. ಮುಂದೆ ಅವರು ದೀನದಯಾಳ ಉಪಾಧ್ಯಾಯರ ಜೊತೆಗೆ, ‘ರಾಷ್ಟ್ರಧರ್ಮ’ (ಹಿಂದಿ ಮಾಸಿಕ), ‘ಪಾಂಚಜನ್ಯ’ (ಹಿಂದಿ ವಾರಪತ್ರಿಕೆ) ಮತ್ತು ದಿನಪತ್ರಿಕೆಗಳಾದ – ‘ಸ್ವದೇಶ್’ ಹಾಗೂ ‘ವೀರ್ ಅರ್ಜುನ್’ ಪತ್ರಿಕೆಗಳಲ್ಲಿ ಸಂಪಾದಕರಾಗಿದ್ದರು.
ವಾಜಪೇಯಿ ಮಹಾನ್ ವಾಗ್ಮಿ ಮತ್ತು ಕವಿ. ಹಿಂದಿ ಭಾಷೆಯಲ್ಲಿ ಅಪೂರ್ವ ಪಾಂಡಿತ್ಯ ಅವರದ್ದು. ಒಮ್ಮೆ ಒಂದು ಚುನಾವಣಾ ಸಭೆಯಲ್ಲಿ ಅವರಿಗೆ ಒಂದು ದೊಡ್ಡ ಹಾರವನ್ನು ಅರ್ಪಿಸಿದಾಗ ಅವರು ಪ್ರತಿಕ್ರಿಯಿಸಿದ್ದು ಹೀಗೆ: ಮೈ ಹಾರ್ ನಹೀ, ಜೀತ್ ಲೇನೇ ಆಯಾ ಹ್ಞೂಂ – ನಾನು ಸೋಲಲು (ಹಿಂದಿಯಲ್ಲಿ ‘ಹಾರ್’ ಎಂಬ ಶಬ್ದಕ್ಕೆ ಸೋಲು ಎಂಬ ಅರ್ಥವೂ ಇದೆ) ಅಲ್ಲ, ವಿಜಯ ಪಡೆಯಲು ಬಂದಿದ್ದೇನೆ. ಅವರ ಭಾಷಣಗಳು ರಾಜಕೀಯ ವಿರೋಧಿಗಳನ್ನೂ ಆಕರ್ಷಿಸುತ್ತಿದ್ದವು. ಭಾರತ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಅವರ ಕವಿತೆಗಳು ಜನಪ್ರಿಯವಾಗಿದ್ದವು. ‘ಇಕ್ಕೀಸ್ ಕವಿತಾಯೇಂ’, ‘ಕ್ಯಾ ಖೋಯಾ ಕ್ಯಾ ಪಾಯಾ?’, ‘ಮೇರೀ ಇಕ್ಯಾವನ್ ಕವಿತಾಯೇಂ’, ‘ಶ್ರೇಷ್ಠ ಕವಿತಾ’ ಹಾಗೂ ಜಗತ್ ಸಿಂಗ್ ಅವರ ಜೊತೆಗಿನ ಎರಡು ಆಲ್ಬಮ್ – ‘ನಯೀ ದಿಶಾ’, ‘ಸಂವೇದನಾ’ ಅವರ ಜನಪ್ರಿಯ ಕೃತಿಗಳು.
ವಾಜಪೇಯಿಯವರ ಜನಪ್ರಿಯ ಕವಿತೆಯೊಂದರ ಮೊದಲ ಸಾಲು ಹೀಗಿದೆ: ‘ಟೂಟ್ ಸಕ್ತೇ ಹೇ ಮಗರ್ ಹಮ್ ಝುಕ್ ನಹೀ ಸಕ್ತೇ’ – ಮುರಿಯಬಹುದು ಆದರೆ ನಾವು ಎಂದಿಗೂ ತಲೆಬಾಗುವುದಿಲ್ಲ. ಎಂತಹ ಅದ್ಭುತ ಸಾಲುಗಳು! ಪರಮ ದೇಶಭಕ್ತನೊಬ್ಬನಿಗೆ ಮಾತ್ರ ಇಂತಹ ಕವಿತೆಯನ್ನು ರಚಿಸಲು ಸಾಧ್ಯ.
ಈ ಎಲ್ಲ ದೃಷ್ಟಿಯಿಂದ ಈ ಬಾರಿಯ ‘ಭಾರತರತ್ನ’ ಇಬ್ಬರು ಸಾಧಕರಿಗೆ ಮಾತ್ರ ಸಂದಿಲ್ಲ; ಬದಲಿಗೆ, ಅದು ಭಾರತೀಯತೆಗೂ ರಾಷ್ಟ್ರೀಯ ಆತ್ಮಗೌರವಕ್ಕೂ ಸಂದ ಪ್ರಶಸ್ತಿಯಾಗಿದೆ.
ಧನ್ಯ ‘ಭಾರತ ರತ್ನ’!!?
`ಭಾರತರತ್ನ’ ಪದಕ ಅಶ್ವತ್ಥ ಎಲೆಯ ಆಕಾರದಲ್ಲಿ, ೫೯ ಮಿ.ಮೀ. ಉದ್ದ, ೪೮ ಮಿ.ಮೀ. ಅಗಲ ಮತ್ತು ೩.೨ ಮಿ.ಮೀ ದಪ್ಪವಾಗಿದೆ. ಇದರ ಸುತ್ತ ಪ್ಲಾಟಿನಂ ಆವರಣವಿದೆ. ಪದಕದ ಮುಂಭಾಗದಲ್ಲಿ ಪ್ಲಾಟಿನಂ ಲೋಹದಲ್ಲಿ ರಚಿಸಿದ ಸೂರ್ಯರಶ್ಮಿಗಳ ವಿನ್ಯಾಸವಿದೆ. ಅದರ ಕೆಳಗೆ ದೇವನಾಗರಿ ಲಪಿಯಲ್ಲಿ `ಭಾರತರತ್ನ’ ಎಂದು ಬರೆದಿದೆ. ಪದಕದ ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಲಾಂಛನ ಮತ್ತು ಅದರ ಕೆಳಗೆ ದೇವನಾಗರಿ ಲಿಪಿಯಲ್ಲಿ `ಸತ್ಯಮೇವ ಜಯತೇ’ ಎಂದು ಬರೆದಿದೆ. ಪದಕಕ್ಕೆ ಕುತ್ತಿಗೆಗೆ ತೊಡಿಸಲು ಅನುಕೂಲವಾಗುವಂತೆ ೫೧ ಮಿ.ಮೀ. ಅಗಲದ ಬಿಳಿ ರಿಬ್ಬನ್ ಜೋಡಿಸಿರುತ್ತದೆ. ಈ ಪ್ರಶಸ್ತಿಯ ಜೊತೆಗೆ ಯಾವುದೇ ನಗದು ಬಹುಮಾನವಿರುವುದಿಲ್ಲ; ಆದರೆ ಪ್ರಶಸ್ತಿ ವಿಜೇತರಿಗೆ ಭಾರತದ ಗಣ್ಯವ್ಯಕ್ತಿಗಳ ಯಾದಿಯಲ್ಲಿ ವಿಶಿಷ್ಟ ಸ್ಥಾನಮಾನವಿರುತ್ತದೆ. ಇದುವರೆಗೆ ಇದುವರೆಗೆ ಒಟ್ಟು ೪೩ ‘ಭಾರತರತ್ನ’ ಪ್ರಶಸ್ತಿಗಳನ್ನು ನೀಡಲಾಗಿದೆ. ಈಗ ಕೊಡಮಾಡುತ್ತಿರುವುದು ೪೪ ಮತ್ತು ೪೫ನೆಯವು.
ಭೂತಪೂರ್ವ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರಿಗೆ ‘ಭಾರತರತ್ನ’ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಅದನ್ನು ಸ್ವಾಗತಿಸುತ್ತ, ಪ್ರಸಿದ್ಧ ಇಸ್ಲಾಮೀ ಶಿಕ್ಷಣಸಂಸ್ಥೆ ‘ದಾರುಲ್ ಉಲೂಂ ವಕ್ಫ್ ದಿಯೊಬಂದ್’ನ ಹಿರಿಯ ಆಲಿಮ್ ಮೌಲಾನಾ ಅಬ್ದುಲ್ಲಾ ಜಾವೇದ್ ಪ್ರತಿಕ್ರಿಯಿಸಿದ್ದು ಹೀಗೆ: ವಾಜಪೇಯಿಯವರು ಜಗತ್ತಿನಲ್ಲಿ ಶಾಂತಿ ನೆಲೆಸಲು ಪ್ರಮುಖ ಪಾತ್ರ ವಹಿಸಿದ್ದರು. ಅವರು ತಮ್ಮದೇ ಸಿದ್ಧಾಂತಗಳನ್ನು ಅನುಸರಿಸುತ್ತಲೇ ಕಾಶ್ಮೀರಿ ಮುಸ್ಲಿಮರ ಮತ್ತು ಪಾಕಿಸ್ತಾನಿಗಳ ಮನವನ್ನು ಗೆದ್ದುಕೊಂಡರು. ದಾರುಲ್ ಉಲೂಮ್ ವಕ್ಫ್ನ ಮಾಜಿ ಶೇಕ್-ಉಲ್-ಹದೀಸ್ ದಿ. ಮೌಲಾನಾ ಅನ್ಝರ್ ಶಾ ಕಾಶ್ಮೀರಿ ಕೂಡ ವಾಜಪೇಯಿಯವರ ದೊಡ್ಡ ಅಭಿಮಾನಿಯಾಗಿದ್ದರು. ಅವರು ತಮ್ಮ ಭಾವನೆಗಳನ್ನು ಸಾರ್ವಜನಿಕವಾಗಿಯೇ ಪ್ರಕಟಿಸಿದ್ದರು, ಮಾತ್ರವಲ್ಲ ವಾಜಪೇಯಿ ಅವರ ಆರೋಗ್ಯ ಸುಧಾರಿಸಿ ಅವರು ದೀರ್ಘಕಾಲ ಬಾಳಲಿ ಎಂದು ಪ್ರಾರ್ಥಿಸಿದ್ದರೂ ಕೂಡ.
ಕಾಕುಂಜೆ ಕೇಶವ ಭಟ್ಟ