ಅಂತಕಃ ಪರ್ಯವಸ್ಥಾತಾ ಜನ್ಮಿನಃ ಸಂತತಾಪದಃ |
ಇತಿ ತ್ಯಾಜ್ಯೇ ಭವೇ ಭವ್ಯೋ ಮುಕ್ತಾವುತ್ತಿಷ್ಠತೇ ಜನಃ ||
“ಜಗತ್ತಿನಲ್ಲಿ ಜನಿಸಿದ ಪ್ರಾಣಿಗಳೆಲ್ಲವೂ ದುಃಖಕ್ಕೆ ಪಕ್ಕಾಗುವವೇ. ಆಪತ್ತುಗಳಿಂದ ಮುಕ್ತವಾದ ಜೀವನ ಇರದು. ಮೃತ್ಯುವಂತೂ ಸದಾ ಬಾಗಿಲನ್ನು ತಟ್ಟುತ್ತ ಕಾದಿರುತ್ತದೆ. ಈ ವಾಸ್ತವಗಳನ್ನು ಗ್ರಹಿಸಿದ ತತ್ತ್ವಾಭಿಮುಖ ಜನರು ಜಗತ್‌ಸ್ಥಿತಿಯಿಂದ ವಿಕ್ಷೇಪಗೊಳ್ಳದೆ ಮುಕ್ತಿಗಾಗಿ ಪ್ರಯತ್ನಿಸುತ್ತಿರುತ್ತಾರೆ.”
ಅಲ್ಪವಾದುದನ್ನು ಮಹತ್ತ್ವದ್ದೆಂದೂ ಕ್ಷಣಿಕವಾದುದನ್ನು ಶಾಶ್ವತವೆಂದೂ ಭ್ರಮಿಸುವುದರಿಂದಲೇ ಜನರಿಗೆ ಸಂತಾಪಗಳು ಉಂಟಾಗುವುದು. ಜಗತ್‌ಸ್ವಭಾವದ ಸರಿಯಾದ ಅರಿವು ಇದ್ದಲ್ಲಿ ಜನರ ಮನಸ್ಸುಗಳಿಗೆ ಸನ್ನಿವೇಶಗಳಿಂದುಂಟಾಗುವ ಆಘಾತಗಳ ತೀವ್ರತೆ ಕಡಮೆಯಾಗಿ ಪ್ರಶಾಂತಿಗೆ ದಾರಿಯಾಗಬಹುದು. ತನ್ನ ಮನಸ್ಸಿಗೆ ತೋರುವುದೇ ಪರಮಸತ್ಯವೆಂಬ ಅಹಮಿಕೆಯನ್ನು ತ್ಯಜಿಸುವುದು ಉತ್ಕರ್ಷದ ಮೊದಲ ಹೆಜ್ಜೆ.
ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಲಂಡನ್ ವಿಶ್ವವಿದ್ಯಾಲಯದ ಬರ್ಕ್‌ಬೆಕ್ ಕಾಲೇಜ್ ಎಂಬ ಪ್ರತಿಷ್ಠಿತ ವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ ಬೋಧಕನಾಗಿದ್ದು ಲೇಖಕನಾಗಿಯೂ ಪ್ರಸಿದ್ಧನಾಗಿದ್ದವನು ಸಿ.ಇ.ಎಂ. ಜೋಡ್. ಆತನಿಗೆ ಜಾರ್ಜ್ ಗುರ್ಡ್‌ಜಿಯೆಫ್ ಎಂಬ ರಷ್ಯಮೂಲದ ಅನುಭಾವಿಯ ಸಂಪರ್ಕ ಒದಗಿತು. ಈಜಿಪ್ಟಿನಿಂದ ಟಿಬೆಟ್‌ವರೆಗಿನ ಹಲವು ದೇಶಗಳ ಸಾಧಕರ ಅನುಚರಣೆ ಮಾಡಿ ಆಧ್ಯಾತ್ಮಿಕ ಪಕ್ವತೆ ಸಾಧಿಸಿದ್ದವನು ಗುರ್ಡ್‌ಜಿಯೆಫ್. ಆದರೆ ಆತ್ಮದ ಪಾರಲೌಕಿಕ ಬೋಧೆಗಳು ಬುದ್ಧಿಸಮ್ಮತವಲ್ಲವೆಂದು ಜೋಡ್ ನಿರಾಕರಿಸುತ್ತಿದ್ದ.
ದುರದೃಷ್ಟವಶಾತ್ ಜೋಡ್ ತೀವ್ರ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದ. ಆತ ಐದಾರು ವಾರಗಳಿಗಿಂತ ಹೆಚ್ಚುಕಾಲ ಉಳಿಯುವ ಸಂಭವವಿಲ್ಲವೆಂದು ತಜ್ಞ ವೈದ್ಯರು ಹೇಳಿದರು. ಹೀಗೆ ಮರಣಾಸನ್ನನಾಗಿದ್ದ ಸ್ಥಿತಿಯಲ್ಲಿ ಜೋಡ್‌ಗೆ ಅನ್ನಿಸತೊಡಗಿತು – ತಾನು ಗುರ್ಡ್‌ಜಿಯೆಫ್‌ನ ಅನುಭವೋಕ್ತಿಗಳನ್ನು ಸಾಕಷ್ಟು ವಿಚಾರ ಮಾಡದೆ ನಿರಾಕರಿಸಿದ್ದೇನೆ – ಎಂದು. ಸದಾ ಮನೋಬೌದ್ಧಿಕ ನೆಲೆಯಲ್ಲಿಯೆ ಯೋಚಿಸುವ ಅಭ್ಯಾಸ ಮಾಡಿಕೊಂಡಿದ್ದ ಜೋಡ್‌ಗೆ ಈಗ ಅನಿಸಿದುದು ಮನುಷ್ಯನ ಹುಟ್ಟು-ಸಾವುಗಳು ಕೇವಲ ಆಗಂತುಕಗಳಾಗಿರಲಾರವು ಎಂದು. ಇದಕ್ಕಿಂತ ಮಿಗಿಲಾಗಿ, ತಾನು ಗುರ್ಡ್‌ಜಿಯೆಫ್‌ನ ಬೋಧೆಗಳನ್ನು ಶಂಕಿಸಿ ಆತನಿಗೆ ಅಪಚಾರ ಎಸಗಿದೆನೇನೋ – ಎನಿಸಿತು. ಆತನಲ್ಲಿ ಇದಕ್ಕಾಗಿ ಕ್ಷಮೆಕೋರಬಯಸಿ, ಏಳಲಾರದ ಸ್ಥಿತಿಯಲ್ಲಿದ್ದ ತನ್ನನ್ನು ದಯವಿಟ್ಟು ಬಂದು ಕಾಣುವಂತೆ ಗುರ್ಡ್‌ಜಿಯೆಫ್‌ಗೆ ಮಿತ್ರರ ಮೂಲಕ ಹೇಳಿಕಳಿಸಿದ. ಗುರ್ಡ್‌ಜಿಯೆಫ್ ಒಡನೆಯೆ ಧಾವಿಸಿ ಬಂದು ಜೋಡ್‌ನಿಗೆ ಸಾಂತ್ವನ ನೀಡಿ ಹೇಳಿದ:
“ಹಿಂದಿನದನ್ನೆಲ್ಲ ಮರೆತುಬಿಡು. ಅಂತೂ ನಿನ್ನಲ್ಲಿಗೆ ನನ್ನನ್ನು ಮೃತ್ಯು ಬರಮಾಡಿತು. ಮನೋಬೌದ್ಧಿಕ ನೆಲೆಯ ಅನಿಸಿಕೆಗಳೇ ಸರ್ವಸ್ವವೆಂಬ ನಿನ್ನ ನಂಬಿಕೆಯನ್ನು ಮೃತ್ಯು ಅಲ್ಲಾಡಿಸಿದೆ. ಈಗಲೂ ಕಾಲ ಮಿಂಚಿಲ್ಲ. ಆತ್ಮಜಾಗೃತಿಗೆ ಆರು ವಾರಗಳೇಕೆ, ಆರು ಕ್ಷಣಗಳೂ ಸಾಕಾಗುತ್ತದೆ. ನೀನಂತೂ ಪ್ರಾಜ್ಞನೇ ಆಗಿರುವೆ, ನನ್ನ ಹೇಳಿಕೆಗಳನ್ನು ಗ್ರಹಿಸಲು ನಿನಗೆ ಕಷ್ಟವಾಗದು. ನಾನು ಇಲ್ಲಿಯೆ ಕುಳಿತಿರುತ್ತೇನೆ. ಕೆಲಕಾಲ ನೀನು ಕಣ್ಣುಮುಚ್ಚಿಕೊಂಡು ಒಳಗೆ ನಿನ್ನ ಮನಸ್ಸನ್ನೇ ಗಮನಿಸುತ್ತಿರು. ಇನ್ನೇನೂ ಮಾಡಬೇಕಾದ ಆವಶ್ಯಕತೆ ಇಲ್ಲ.”
ಜೋಡ್ ಅದರಂತೆ ಮಾಡಿದ. ಆಶ್ಚರ್ಯವೆಂದರೆ ಅವನು ತನ್ನ ಮನಸ್ಸನ್ನೇ ತ್ರಯಸ್ಥನಾಗಿ ಗಮನಿಸತೊಡಗಿದಾಗ ಅವನ ಯೋಚನೆಯ ಕಕ್ಷೆಯಿಂದ ಮರಣ, ಗುರ್ಡ್‌ಜಿಯೆಫ್, ಲೋಕಜೀವನ – ಎಲ್ಲವೂ ಹೇಳಹೆಸರಿಲ್ಲದೆ ಮರೆಯಾಗಿ ಹೋದವು.
ಮೂರು ತಾಸು ಕಳೆದ ಮೇಲೆ ಗುರ್ಡ್‌ಜಿಯೆಫ್ ಜೋಡ್‌ನನ್ನು ಸುಪ್ತಸ್ಥಿತಿಯಿಂದ ಎಬ್ಬಿಸಿ ಹೇಳಿದ:
“ನಿನ್ನ ಮುಖಚಹರೆಯನ್ನು ನೋಡುತ್ತ ನೀನು ಕ್ರಮೇಣ ನಿಶ್ಚಲತೆಯಲ್ಲಿ, ಮೌನದಲ್ಲಿ ಲೀನನಾದುದನ್ನು ಗಮನಿಸಿ ನನಗೆ ಆನಂದವಾಯಿತು. ನಿನ್ನ ಕಣ್ಣೆರಡೂ ನಿಷ್ಕಂಪವಾಗಿದ್ದವು. ಕನಸುಗಳ ಅವಾಂತರವೂ ಇಲ್ಲದೆ ನೀನು ಸಮಾಧಾನಚಿತ್ತನಾದೆ. ಮರಣದ ಚಿಂತೆಯಿಂದಲೂ ನೀನು ದೂರವಾಗಿದ್ದೆ. ಈ ಆರು ವಾರಗಳು ವಿಶ್ರಾಂತನಾಗಿ ನಿನ್ನ ಮನಸ್ಸನ್ನೇ ನೀನು ಗಮನಿಸುತ್ತ ಇದ್ದಲ್ಲಿ ನಿಶ್ಚಿತವಾಗಿ ಮೃತ್ಯುವಿನಿಂದ ಅತೀತವಾದ ಸ್ಥಿತಿಯನ್ನು ಪಡೆಯುವೆ.”
ಜೋಡ್ ಕೃತಜ್ಞತೆಯಿಂದ ಅಶ್ರುಪೂರ್ಣನಾದ. “ನಾನು ಯಾರನ್ನು ಅಗೌರವದಿಂದ ಕಂಡಿದ್ದೆನೋ ಅದೇ ಗುರ್ಡ್‌ಜಿಯೆಫ್ ನನ್ನನ್ನು ಮುಂದಿನ ಪಯಣಕ್ಕೆ ಸಜ್ಜುಗೊಳಿಸುವನೆಂದು ನಾನು ನಿರೀಕ್ಷಿಸಿರಲಿಲ್ಲ “ಎಂದು ಸಂಗಡಿಗರಿಗೆ ಹೇಳಿದ.
-ಭಾರವಿ: ಕಿರಾತಾರ್ಜುನೀಯ